ದಲಿತ ಸಮಾಜ ತಬ್ಬಲಿ ಆಯ್ತು ಸಂದರ್ಶಕರು-ಸುದೇಶ ದೊಡ್ಡಪಾಳ್ಯ

(25.4.2010ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ಈ ಸಂದರ್ಶನವು ಇತ್ತೀಚೆಗೆ ಅಭಿರುಚಿ ಪ್ರಕಾಶನದಿಂದ ಪ್ರಕಟವಾಗಿರುವ “ದೇವನೂರ ಮಹಾದೇವ ಜೊತೆ ಮಾತುಕತೆ” ಆಯ್ದ ಸಂದರ್ಶನಗಳ ಸಂಕಲನದಲ್ಲಿ ದಾಖಲಾಗಿದೆ. ನಮ್ಮ ಓದಿಗಾಗಿ….)
[ದಲಿತರು ಮತ್ತು ಎಲ್ಲ ಶೋಷಿತ ವರ್ಗಗಳ ಧ್ವನಿಯಾಗಿ 1970ರ ದಶಕದಲ್ಲಿ ಹುಟ್ಟಿಕೊಂಡ ದಲಿತ ಸಂಘರ್ಷ ಸಮಿತಿಯು ಅಸಮಾನತೆ, ಅಸ್ಪೃಶ್ಯತೆ, ದಾರಿದ್ರ್ಯ, ಅಜ್ಞಾನಗಳ ವಿರುದ್ಧ ಹೋರಾಟ ಮಾಡುತ್ತಾ ದಲಿತರಲ್ಲಿ ಆತ್ಮಗೌರವ ಮತ್ತು ಸ್ವಾಭಿಮಾನದ ಬೆಳಕನ್ನು ಹಚ್ಚಿ, ಅವರ ಹಕ್ಕನ್ನು ಎತ್ತಿ ಹಿಡಿಯುತ್ತ ಬಂದಿದೆ. ಈ ಬೆಳಕು ಜಡ್ಡುಕಟ್ಟಿ ಕೊಳೆತು ನಾರುತ್ತಿದ್ದ ಸಮಾಜದ ಸ್ಥಿತಿಯನ್ನು ಬದಲಾಯಿಸುತ್ತಾ ಹೊಸ ದಿಕ್ಕು ಮತ್ತು ಹೊಸ ಆಲೋಚನೆ ಕಡೆಗೆ ನೋಡುವಂತೆ ಮಾಡಿದೆ. ದಶಕಗಳ ಕಾಲ ತನ್ನ ಹತ್ತು ಹಲವು ಹೋರಾಟಗಳ ಮೂಲಕ ಸರ್ಕಾರಗಳ ಕಣ್ಣು ತೆರೆಸಿದೆ. ಬಲಿಷ್ಠ ಸಂಘಟನೆಯಾಗಿದ್ದ ದಸಂಸ ಸೈದ್ಧಾಂತಿಕವಲ್ಲದ ಸಣ್ಣಪುಟ್ಟ ಕಾರಣಗಳಿಂದಾಗಿ ವಿಘಟನೆಯಾಗುತ್ತಲೇ ಇದೆ. ಈಗ ದಸಂಸ ಒಂದಾಗುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಈ ಸಂದರ್ಭದಲ್ಲಿ ಪ್ರಜಾವಾಣಿ ಕೇಳಿದ ಪ್ರಶ್ನೆಗಳಿಗೆ ದಸಂಸದ ಸಂಸ್ಥಾಪಕರಲ್ಲಿ ಒಬ್ಬರಾದ ಸಾಹಿತಿ ದೇವನೂರ ಮಹಾದೇವ ಉತ್ತರಿಸಿದ್ದಾರೆ. -ಸಂ]
ಪ್ರ: ದಲಿತ ಬಣಗಳನ್ನು ಒಂದಾಗಿಸಲು ಚಾಲನಾ ಸಮಿತಿ ಮುಂದಾಗಿದೆ. ದಲಿತರು ಎಡ, ಬಲವಾಗಿ ಛಿದ್ರವಾಗಿದ್ದಾರೆ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಿ?
• ಬಹಳ ಇಕ್ಕಟ್ಟಿನ ಸಮಸ್ಯೆ, ಮುಖಾಮುಖಿ ಆಗಬೇಕಿದೆ. ದಲಿತ ಸಂಘಟನೆ ಬಣಗಳಾಗಿ ಪ್ರತ್ಯೇಕವಾದರೆ ನಡೆಯುತ್ತಿದ್ದವನು ತೆವಳಬೇಕಾಗುತ್ತದೆ, ವ್ಯವಸ್ಥೆಯ ಅಸಮಾನತೆಯ ಕ್ರೌರ್ಯಕ್ಕೆ ಬಲಿಪಶು ಆಗಬೇಕಾಗುತ್ತದೆ. ಇದು ಈಗಾಗಲೇ ಆಗಿದೆ. ಅಸ್ಪೃಶ್ಯರು ಮತ್ತೂ ವಂಚಿತರಾಗಿ, ಆಚೆಗೆ ತಳ್ಳುವ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಉದಾಹರಣೆಗೆ ಅಸ್ಪೃಶ್ಯ ಶಾಸಕರು, ಸಂಸದರು ಸಂಖ್ಯೆಯಲ್ಲಿ ಕಮ್ಮಿ ಆಗ್ತಾ ಇದ್ದಾರೆ. ಇದು ಈ ಒಡಕಿನ ಪ್ರತಿಫಲ. ಹಾಗೆಯೇ ದಲಿತ ನೌಕರರೂ ಮೂಲೆಗುಂಪಾಗುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಎಲ್ಲರೂ ಒಂದಾಗಿ ಕ್ರಿಯಾಶೀಲರಾಗದಿದ್ದರೆ ಉಳಿಗಾಲವಿಲ್ಲ.
ಪ್ರ: ಎಡಗೈ, ಬಲಗೈ ಸಮಸ್ಯೆ ಹಾಗೆ ಉಳಿಯುತ್ತದಲ್ಲವೇ?
• ಬಹಳ ಹಿಂದೆ ಪ್ರಜಾವಾಣಿಯ ‘ವಾಚಕರ ವಾಣಿ’ಗೆ ನಾನು ಒಂದು ಪತ್ರ ಬರೆದಿದ್ದೆ. ಅದರ ಸಾರಾಂಶ ಹೀಗಿದೆ-
1) ಎಸ್ಸಿ/ಎಸ್ಟಿ ಉಪ ಪಂಗಡ ಜನಸಂಖ್ಯೆಯ ಗಣತಿಯಾಗಬೇಕು.
2) ಜನಗಣತಿ ಆಧರಿಸಿ ಉಪ ಪಂಗಡಗಳ ಪ್ರಮಾಣ ನಿಗದಿಯಾಗಬೇಕು. ಇದನ್ನು ಮಾಡದಿದ್ದರೆ ಭ್ರಮೆ ನೀಗುವುದಿಲ್ಲ.
3) ಎಸ್ಸಿ/ಎಸ್ಟಿ ಉಪ ಪಂಗಡಗಳ ನೌಕರರ (ದರ್ಜೆ ಪ್ರಕಾರ) ಪ್ರಮಾಣ ನಿಗದಿಯಾಗಬೇಕು
4) ಯಾವ ಉಪ ಪಂಗಡ ಅನ್ಯಾಯಕ್ಕೆ ಒಳಗಾಗಿರುತ್ತದೋ ಆ ಉಪ ಪಂಗಡವು ಸಮತೋಲನ ಸ್ಥಿತಿ ತಲುಪುವವರೆಗೂ ‘ಬ್ಯಾಕ್ಲಾಗ್’ ಮಾದರಿಯಲ್ಲಿ ಉದ್ಯೋಗ ನೀಡಿ ನ್ಯಾಯ ಸಿಗುವಂತೆ ಮಾಡಬೇಕು. ಇದರಿಂದ ದಲಿತ ಸಮೂಹ ಒಂದು ಘಟಕವಾಗಿ ಉಳಿದೂ ಅನ್ಯಾಯವನ್ನು ಸರಿಪಡಿಸಿಕೊಳ್ಳಬೇಕು. ಇದು ಸಂವಿಧಾನಾತ್ಮಕವಾಗಿ ಸಾಧ್ಯವೋ, ಏನೋ ನನಗೆ ಗೊತ್ತಿಲ್ಲ.
-ಆ ಪತ್ರದಲ್ಲಿ ಹೀಗೆ ಬರೆದಿದ್ದೆ.
ಈಗ ನಮ್ಮ ವಿವೇಕ ಕೆಲಸ ಮಾಡಬೇಕಾಗಿದೆ. ಉದಾಹರಣೆಗೆ ‘ಒಳಮೀಸಲಾತಿ’ ಬೇಕು ಎಂದು ಕೇಳುವವರಿಗೆ ಅದನ್ನು ಕೇಳುವ ಹಕ್ಕಿರುತ್ತದೆ. ಬೇಡ ಅನ್ನುವವರಿಗೆ ಅದನ್ನು ಬೇಡ ಎನ್ನುವ ಹಕ್ಕಿರುವುದಿಲ್ಲ. ಬೇಕು ಅನ್ನುವವರು ಸಂಸತ್ನಲ್ಲಿ ತಮ್ಮ ಬೇಡಿಕೆ ಈಡೇರಿಸಿಕೊಳ್ಳುವಂತಾಗಬೇಕು. ಬೇಡ ಅನ್ನುವವರು ಸುಮ್ಮನಾಗಬೇಕು. ಇದನ್ನು ಸಾಮಾಜಿಕ, ರಾಜಕೀಯ ಸಮಸ್ಯೆಯನ್ನಾಗಿಸದೆ ಪರಿಹರಿಸಿಕೊಳ್ಳಬೇಕು. ಇದು ನಿರ್ಧಾರವಾಗಬೇಕಾದದ್ದು ಸಂಸತ್ತಿನಲ್ಲಿ. ಅಥವಾ ಇಂದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹೆಚ್ಚು ಮುಂದುವರೆದ ಹಾಗೂ ಎಲ್ಲರಿಗಿಂತಲೂ ಅತಿ ಹೆಚ್ಚು ಪ್ರಾತಿನಿಧ್ಯ ಪಡೆದ ಸಮುದಾಯಗಳಿಗೆ ಸೇರಿದ EWS ಗೆ ನೀಡಿದಂತೆ- ಪ್ರಧಾನಿ ಮೋದಿ ಮನಸು ಮಾಡಿದರೆ, ಮೂರು ದಿನಗಳೂ ಬೇಕಾಗಿಲ್ಲ!
ಪ್ರ: ಎಡಗೈ, ಬಲಗೈ ಸಮಸ್ಯೆ ಬಗೆಹರಿಸುವುದರಲ್ಲಿ ನಿಮ್ಮ ಪ್ರಯತ್ನವೇನು?
• ‘ಎಲ್ಲರೂ ಒಂದಾಗಿ’ ಸಮಾವೇಶ ಮುಗಿದ ಮೇಲೆ ಹಿರಿಯ ರಾಜಕಾರಣಿ ವಿ.ಶ್ರೀನಿವಾಸ್ಪ್ರಸಾದ್, ಬಿ.ಎಚ್.ಅನಿಲ್ಕುಮಾರ್, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಬಾಬುರಾವ್ ಮುಡುಬಿ ಮತ್ತಿತರರೊಂದಿಗೆ ಈ ಕುರಿತು ಚರ್ಚಿಸಬೇಕೆಂದಿದ್ದೇನೆ. [ಡಾ.ಎಚ್.ಸಿ.ಮಹದೇವಪ್ಪ, ಎಲ್.ಹನುಮಂತಯ್ಯ, ಪ್ರೊ.ರವಿವರ್ಮಕುಮಾರ್ ಜತೆ ಮಾತಾಡಿದೆ. ಅದು ಮುಂದುವರಿಯಲಿಲ್ಲ.]
ಪ್ರ: ಎಡಗೈ, ಬಲಗೈ ಎಂಬುದು ಹುಟ್ಟಿದ್ದು ಯಾಕೆ?
• ಹಿಂದೆ ದ್ವಿಜರನ್ನು ಹೊರತುಪಡಿಸಿ ಸಮಾಜದ ಸಕಲ ಜಾತಿಗಳ ಒಳಗೂ ಎಡಗೈ, ಬಲಗೈ ಇತ್ತು. ಬೇರೆಯವರಲ್ಲಿ ಈ ಎಡಗೈ, ಬಲಗೈ ಭಾವನೆ ಕರಗಿ ಹೋಗಿ ಇಂದು ಒಂದೇ ಜಾತಿಯಾಗಿದೆ. ಆದರೆ ಅಸ್ಪøಶ್ಯರಲ್ಲಿ ಮಾತ್ರ ಈ ಎಡಗೈ, ಬಲಗೈ ಕರಗದೇ ಉಳಿದು ಇಂದಿನ ಸಮಸ್ಯೆಗಳಿಗೆ ಕಾರಣವಾಗಿದೆ. ಆಸ್ತಿ ಇಲ್ಲ ನೋಡಿ, ಅದಕ್ಕೇ ಇದನ್ನೇ ಆಸ್ತಿಯಾಗಿ ಉಳಿಸಿಕೊಂಡಿರಬೇಕು.
ಪ್ರ: ರಾಜ್ಯದಲ್ಲಿ ದಸಂಸದ ಎಷ್ಟು ಬಣಗಳಿವೆ?
• ದಲಿತ ಸಂಘರ್ಷ ಸಮಿತಿಯ ವಂಶವೃಕ್ಷವನ್ನು ಬರೆದು ಕೊಡಿ ಎಂದು ಕೋಲಾರದ ಎನ್.ವೆಂಕಟೇಶ್ಗೆ ತಿಳಿಸಿದ್ದೇನೆ. ದಲಿತ ಸಂಘರ್ಷ ಸಮಿತಿಯು ಬಿಎಸ್ಪಿಯನ್ನು ಬೆಂಬಲಿಸುತ್ತಿತ್ತು. ಯಾವಾಗ ಬಿಎಸ್ಪಿಯು ಬಿಜೆಪಿ ಜೊತೆ ಸೇರಿ ಅಧಿಕಾರ ಹಂಚಿಕೊಂಡಿತೋ, ಮೊದಲ ವಿಘಟನೆ ಆಯ್ತು. ಒಂದು ಸಲ ವಿಘಟನೆಯಾದರೆ ಅದೇ ಚಾಳಿಗೆ ಬಿದ್ದು ವಿಘಟನೆಯಾಗುತ್ತಲೇ ಇರುತ್ತದೆ. ಇದರಿಂದ ನಾವು ತಪ್ಪಿಸಿಕೊಳ್ಳಬೇಕಾಗಿದೆ.
ಪ್ರ: ವಿಘಟನೆಗೆ ನಾಯಕತ್ವದ ಹಪಾಹಪಿತನ ಕಾರಣವೇ?
• ಯಾವುದೇ ಬೇರೆ ಸಂಘಟನೆಗಳಿಗೆ ಹೋಲಿಕೆ ಮಾಡಿದರೆ ದಸಂಸದಲ್ಲಿ ನಾಯಕತ್ವ ಗುಣ ಇರುವವರು ಹೆಚ್ಚಾಗಿದ್ದಾರೆ. ಇದು ತುಂಬಾ ಗುಣಾತ್ಮಕ ಅಂಶ. ಆದರೆ ಈ ಎಲ್ಲ ನಾಯಕರ ಕಾರ್ಯಕ್ಷೇತ್ರ ಒಂದೇ ಆದ್ದರಿಂದ ಸ್ಪರ್ಧೆ ಸಮಸ್ಯೆ ಬಂದಿರಬಹುದು. ಇದರ ಬದಲು ಹಮಾಲಿ, ತರಕಾರಿ ಬೆಳೆಯುವವರು, ದಿನಗೂಲಿಗಳು, ಮಹಿಳಾ ಸಂಘ, ಸಾಂಸ್ಕೃತಿಕ ಕ್ಷೇತ್ರ, ವಿದ್ಯಾರ್ಥಿ, ಯುವಜನತೆ- ಹೀಗೆ ಹಲವು ಕ್ಷೇತ್ರಗಳನ್ನು ಗುರುತಿಸಿಕೊಂಡು ನಾಯಕತ್ವ ಹಂಚಿಕೊಂಡಿದ್ದರೆ, ಈ ಸ್ಪರ್ಧಾ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಈಗಲಾದರೂ ಈ ದಿಕ್ಕಿನಲ್ಲಿ ಯೋಚಿಸಬೇಕು. ಸ್ಪರ್ಧೆ ಇಲ್ಲದ ರೀತಿ ಮುಖಂಡರ ನಡುವೆ ಸಾಮರಸ್ಯ ಇರುವಂತೆ ನೋಡಿಕೊಳ್ಳಬೇಕು.
ಪ್ರ: ಮೂಲ ದಸಂಸ ವಿಘಟನೆಯಿಂದ ಯಾರಿಗೆ ಲಾಭವಾಯಿತು?
• ಲಾಭ ಯಾರಿಗೆ ಅನ್ನುವುದಕ್ಕಿಂತ ಮುಖ್ಯವಾಗಿ ದಲಿತ ಸಮಾಜ ತಬ್ಬಲಿ ಆಯ್ತು.
ಪ್ರ: ದಸಂಸ ಬಣಗಳ ಏಕತೆ ಹೇಗೆ ಸಾಧ್ಯ?
• ಈಗ ದಲಿತರು ಮಾತ್ರವಲ್ಲ ರೈತರು ಮತ್ತು ಎಲ್ಲ ದುಡಿಯುವ ವರ್ಗದಲ್ಲಿ ಅಸಹಾಯಕತೆ ಹೆಚ್ಚಿದೆ. ಬಲಿಷ್ಠ ಮಾತ್ರ ಬದುಕುತ್ತಾನೆ ಎಂಬುದು ಈ ಹೊತ್ತಿನ ಕ್ರೂರ ನಿಯಮ. ಈಗ ದುರ್ಬಲರು ಒಟ್ಟಾಗದಿದ್ದರೆ ಅವರಿಗೆ ಉಳಿಗಾಲವಿಲ್ಲ. ಅದಕ್ಕೆ ‘ಎಲ್ಲರೂ ಒಂದಾಗಿ’ ಕನಿಷ್ಠ ಪಕ್ಷ ಸಮಾಜಕ್ಕೆ ಅಗತ್ಯ ಇರುವ ಕೆಲವು ಕಾರ್ಯಕ್ರಮಗಳನ್ನಾದರೂ ಮಾಡದೇ ಇದ್ದರೆ ಅಸಹಾಯಕತೆ, ಅಸಮಾನತೆ ಹೆಚ್ಚಿ ದೌರ್ಜನ್ಯ ಜಾಸ್ತಿಯಾಗುತ್ತದೆ. ‘ಎಲ್ಲರೂ ಒಂದಾಗಿ’ ಎನ್ನುವುದು ನಮ್ಮ ಉಳಿವಿನ ಪ್ರಶ್ನೆಯಾಗಿದೆ.
ಪ್ರ: ಬಣಗಳ ಏಕತೆಗೆ ಚಾಲನೆ ಹೇಗೆ ಕೊಡುತ್ತೀರಿ?
• ಎಲ್ಲ ಬಣಗಳ ಸಂಚಾಲಕರು ಅವರವರ ಸಭೆಗಳಲ್ಲಿ ಒಬ್ಬೊಬ್ಬರೇ ‘ಒಟ್ಟಾಗಬೇಕು’ ಎಂದು ಕರೆ ಕೊಡುತ್ತಿದ್ದರು. ಈಗ ಸಮಯ, ಸಂದರ್ಭ ಕೂಡಿಬಂದಿದೆ. ಇದಕ್ಕಾಗಿ ರಾಜ್ಯ ಮಟ್ಟದ ಚಾಲನಾ ಸಮಿತಿ ರಚನೆ ಆಯ್ತು. ಸಮಿತಿಯಲ್ಲಿ ಎಚ್.ಎಂ.ರುದ್ರಸ್ವಾಮಿ, ಎಸ್.ಮರಿಸ್ವಾಮಿ, ಕೆ.ನಾರಾಯಣಸ್ವಾಮಿ, ಪ್ರೊ .ಕೆ.ದೊರೆರಾಜ್, ಪ್ರೊ .ರವಿವರ್ಮಕುಮಾರ್, ಕೆ.ಕಾಳಪ್ಪ, ಸಿ.ಚಂದ್ರಶೇಖರ್ ಇದ್ದಾರೆ. ಇವರೆಲ್ಲ ಎಲ್ಲ ಬಣಗಳ ಸಂಚಾಲಕರ ಜೊತೆ ಚರ್ಚೆ ಮಾಡುತ್ತಿದ್ದಾರೆ. ವರ್ಷದಲ್ಲಿ ಒಟ್ಟಾಗಿ ನಾಲ್ಕಾರು ಕಾರ್ಯಕ್ರಮ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಮೈಸೂರು ಜಿಲ್ಲೆಯ ಚಾಲನಾ ಸಮಿತಿ ಸಂಚಾಲಕರು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಇದ್ದಾರೆ. ಎಲ್ಲರೂ ಒಂದಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿದ್ದಾರೆ. ಇದು ಎಲ್ಲಾ ಜಿಲ್ಲೆಗಳ ಮೇಲೆ ಪರಿಣಾಮ ಬೀರುತಿದೆ. ಬೆಟ್ಟಯ್ಯ ಕೋಟೆ, ದೇವಗಳ್ಳಿ ಸೋಮಶೇಖರ್, ಕೆ.ಪಿ.ಮಹಾಲಿಂಗು, ಮಲ್ಲಾಡಿ ನಿಂಗರಾಜ್ ಈ ನಿರ್ಧಾರ ಕೈಗೊಂಡು ದಲಿತ ಸಮಾಜದ ಕೃತಜ್ಞತೆಗೆ ಪಾತ್ರರಾಗಿದ್ದಾರೆ.
[ಪ್ರಜಾವಾಣಿ, 25.4.2010]