ದತ್ತ – ದೇವನೂರ ಮಹಾದೇವ
(1971 ರಲ್ಲಿ ಪ್ರಕಟವಾದ ಈ ಕತೆಯು “ದ್ಯಾವನೂರು” ಕಥಾ ಸಂಕಲನದಲ್ಲಿ ದಾಖಲಾಗಿದೆ.)
ಹಾದಿ ಎರಡು ದಿಕ್ಕೂ ಒಡೆದುಕೊಂಡು ಆನಂದುವಿಗೆ ಕೂರಿಸಿತು. ಯಾವ ಕಡೆ ನೋಡಿದರೂ ಒಂದು ನರಪಿಳ್ಳೆಯೂ ಕಂಡುಬರಲಿಲ್ಲ. ಹೊಸೂರಿಗೆ ದಾರಿ ಕೇಳಿದ್ದಕ್ಕೆ ಮೂಗಿನ ನೇರಕ್ಕೆ ಹೋಗಿ ಎಂದು ಯಾರೋ ಹೇಳಿದ್ದಕ್ಕೆ ಬಂದದ್ದು. ತಂದಿದ್ದ ಬ್ಯಾಗು ಒಂದು ಕೈಗೆ ಮೀರಿದ ಭಾರವಾಗಿತ್ತು. ಬಲಗೈ ಸಣ್ಣಕ್ಕೆ ನೋವು ತೋರುತ್ತಿತ್ತು. ಹಸಿರು ಹರಡಿದ ಕಡೆ ಹೋಗಿ ಸಾವರಿಸಿ ಕುಳಿತ. ಸಿಗರೇಟು ನೆನಪಿಗೆ ಬಂದು ಹಚ್ಚಿ ಸುತ್ತೂ ನೋಡಿದ. ಅಂದುಕೊಂಡಿದ್ದಕ್ಕೆ ತಾಳ ಬೀಳುತ್ತಿದೆ ಅಂದುಕೊಂಡ. ಅಡ್ಡಾದಿಡ್ಡಿ ಬೆಳೆದ ಮರಗಳ ನಡುವೆ ಹರಿದಿರುವ ಥರ ಹಾದಿ, ಎರಡು ದಿಕ್ಕಲ್ಲು ನಿಂತು ಚಾಚಿದ ಬೇಲಿ, ಹೊಸ ಬಗೆಯ ಆಕಾಶ, ಪಾಳುಬಿದ್ದ ಹೊಲ, ಮುಂಟಿ- ಎಲ್ಲ ಹೊಸದು. ಅಪ್ಪ ಅನ್ನಿಸಿಕೊಂಡವ ಬರೆದಿದ್ದುದೂ ಹೀಗೆ-ಹೊಸದಾಗಿ ಹುಟ್ಟಿದೆ ಅಂತ ತಿಳಿದುಕೊಂಡಾದರೂ ಊರಿಗೆ ಬಾ.
ಹೆತ್ತ ಸಂಬಂಧ ಅನ್ನುವುದಕ್ಕೆ ಅರ್ಥವೆ ಇಲ್ಲವೆ ಎಂದು ಮತ್ತೂ ಯೋಚನೆಗೆ ಬಂತು. ದತ್ತು ಕೊಡುವಾಗ ಏಳು ವರ್ಷದ ಹುಡುಗನಂತೆ. ಊರನ್ನು ನೆನಸಿಕೊಳ್ಳಲು ನೋಡಿದ್ದಕ್ಕೆ ಒಂದಿಷ್ಟು ಮುಖಗಳು ಮಾತಿಲ್ಲದೆ ಬಹಳ ದೂರದಲ್ಲಿ ನಿಂತ ಹಾಗೆ. ಮುಂದಕ್ಕೆ ಏನಂದರೂ ಬರುತ್ತಿರಲಿಲ್ಲ. ಅಪ್ಪನ ಪತ್ರದಿಂದ ಎಲ್ಲರನ್ನು ಮೂಡಿಸಲು ನೋಡಿದ. ಅವ್ವ, ಮಗ ಮಗ ಎಂದು ಹಲಬುತ್ತಿದ್ದಾಳೆ. ತಮ್ಮನ ಹೆಂಡತಿ ಹೆರಿಗೆಗೆ ತವರಿಗೆ ಹೋಗಿದ್ದಾಳೆ. ತಂಗಿ ಮೈನೆರೆದು ಮದುವೆಗೆ ಬಂದಿದ್ದಾಳೆ. ನಾಲ್ಕನೆ ಕ್ಲಾಸು ಓದುವ ತಮ್ಮ ಚೂಟಿ ಚೂಟಿ. ಅಪ್ಪನಿಗೆ ಸಾಲ ಸೋಲ. – ಹದಿನಾರು ವರ್ಷ ತನ್ನನ್ನು ಸತತ ಮರೆತ ಜನ ಹೀಗೆ ಅಳಲುವುದು ಅನುಮಾನ ನಿಲ್ಲಿಸಿತು. ಈಗ ಒಟ್ಟಿನಲ್ಲಿ ಎಲ್ಲ ಮರೆಯಬೇಕು. ಹೋಗಿ ಅಲ್ಲಿಯವನಾಗಿ ಹೊಂದಬೇಕು. ಊರು ಮುಂದಲು ತಲುಪುವುದಕ್ಕೆ ಮೊದಲು ತನ್ನ ಹಿಂದಿನದು ಇಲ್ಲವಾಗಬೇಕು. ಕಣ್ಣುಬಿಟ್ಟು ಅಪ್ಪ ಅವ್ವ ಅಂದುಕೊಂಡು ಬೆಳೆಯಬೇಕು
ಬೆಳೆಯಲೇಬೇಕು ಎಂದು ಆನಂದು ಉಸಿರು ಬಿಗಿದು ದೃಢವಾಗಿ ಅಂದುಕೊಂಡ. ಸಿಗರೇಟು ಎಸೆದು ಮುಂದೆ ಎರಡು ದಿಕ್ಕೂ ಹರಿದಿದ್ದ ಹಾದಿಯನ್ನು ಸೀಳಿ ನೋಡಿದ. ಎಡಗಡೆಯ ದೂರದಲ್ಲಿ ಒಂದು ಗಾಡಿ ತನ್ನತ್ತ ತೆವಳುತ್ತ ಗವಿಯೊಳಗಿಂದ ಬರುವ ಹಾಗೆ. ಆನಂದು ಗಾಡಿಯನ್ನು ಸೆಳೆದುಕೊಳ್ಳುವವನ ಥರ ದಿಟ್ಟಿಸುತ್ತಾ….ಗಾಡಿ ಹತ್ತಿರ ಬಂತು.
ಗಾಡಿ ಹೋದುದಕ್ಕೆ ಮೂಡುತ್ತ ನಡೆದ ಪಟ್ಟೆಯ ಗುರುತು ಹಿಡಿದು ಕೂತ ಆನಂದುವಿಗೆ “ನೋಡಿ, ಊರು ಕಾಣ್ತದೆ’ ಎಂದು ಗಾಡಿಯವ ಅಂದುದು ನಿಗರಿ ನೋಡುವಂತೆ ಮಾಡಿತು. ತುಂಬ ದೂರದಲ್ಲಿ ತಿರುವಿ ಹೋಗುವ ದಾರಿ, ಮೀರಿ ನಿಂತ ಅರಳಿಮರಗಳು, ಕಂಡೂ ಕಾಣದ ಹಾಗೆ ಒಂದಿಷ್ಟು ಮನೆಗಳು. ತುಂಬಿಕೊಳ್ಳುವವನ ಹಾಗೆ ನೋಡಿದರೂ ಕಂಡದ್ದು ಅಷ್ಟೆ. ಊರು ಸೇರಿದರೆ ಅಲ್ಲೊಂದು ಮಾರಿಗುಡಿ. ಪೂಜೆಯಾದ ಮೇಲೆ ತನ್ನ ಅಪ್ಪ ಅವ್ವ ತಂಗಿ ತಮ್ಮಂದಿರು ಅನ್ನಿಸಿಕೊಂಡವರ ಮುಖಗಳನ್ನು ಎಣ್ಣೆಯಲ್ಲಿ ಕಾಣುವುದು. ಇವೆಲ್ಲಕ್ಕೂ ಒಪ್ಪಿಸಿಕೊಳ್ಳಬೇಕಾಗುತ್ತೋ ಏನೊ ಎನಿಸಿತು. “ನನ್ನ ಕೈಲಿ ಇದೆಲ್ಲ ಆಗುವುದಿಲ್ಲ” ಎಂದುದಕ್ಕೆ ಅವ “ಎಲ್ಲಾರು ಉಂಟಾ ಸೋಮಿ. ಹನ್ನೇಡುವರ್ಸ ನೋಡದೆ ಇದ್ದವರು ಮೊದ್ಲು ಎಣ್ಣೇಲಿ ನೋಡಿ ತಾನೇ ಆಮೇಲೆ” ಎಂದುದು ಮುಂದಕ್ಕೆ ಮಾತಾಡಿಸಲಿಲ್ಲ. ಕಿತ್ತುಕೊಂಡು ಬರುವ ಯೋಚನೆಗಳಿಗೆ ತಲೆಯೊಡ್ಡಿ ಕೂತ…. ಮನೆ ತಲುಪಿದ್ದು ತಣ್ಣಗಿನ ರಾತ್ರಿ ಒಂದೂ ಒಂದೂವರೆಗೆ. ಕಣ್ಣೀರು ಹಿಂಗಿಸುತ್ತ ಕುಳಿತಿದ್ದ ಅಮ್ಮ ನನ್ನ ಕಂಡು ಚಂಡಿಯಾದಳು. ಕಷ್ಟ ಸುಖಕ್ಕೆ ಆಗದವನು ನೀನು. ಕುಡಿದು ಬೇರೆ. ನಾಚಿಕೆ ಗೆಟ್ಟವನು. ಹೀಗೆಲ್ಲ. ತಂದೆ ಸತ್ತುದಕ್ಕೊ ಏನೊ ಮಾತೂ ಬರಲಿಲ್ಲ. ಹದಿನೈದು ದಿನ ಮನೆ ಬಿಟ್ಟು ಮನೆಗೆ ಬಂದಾಗ ಎಲ್ಲವು ಹಿಡಿದು ಅಲ್ಲಾಡಿಸಿಬಿಟ್ಟಿತು. ಅಮ್ಮ ಇದ್ದಕ್ಕಿದ್ದಂತೆ ಮುಖದ ತುಂಬ ಸುಕ್ಕು ತುಂಬಿಕೊಂಡು ಅಳುತ್ತಾ ಮಾತಿಲ್ಲ, ಕಥಿಲ್ಲ. ಒಂದು ದಿನ “ಎಲ್ಲಕ್ಕು ಆಡ್ಗತಿ ಮಾಡ್ಡೆ. ಓದು ಬಿಟ್ಟು ಹೋಗ್ಲಿ ಅಂದ್ರೆ, ಎಲ್ಲಾ ಬಿಟ್ಟು ಕುಡಿಯೋದು. ಎಲ್ಲೆಲ್ಲೋ ಹೋಗೋದು, ತಂದೆ ತಿಥಿಗೆ ನೀನಿಲ್ಲ ಅಂದ್ರೆ….” ಅಂದು ಅಳುಕಚ್ಚಿಕೊಂಡಳು. ಅದರ ಮಾರನೆ ದಿನವೆ ಕುಡಿದ ಭಯ ಹಿಡಿದುಕೊಂಡೆ ಮನೆಗೆ ಬಂದದ್ದು. ಅಮ್ಮ ದಿನದ ಹಾಗೆ ಮಲಗಿದ್ದಳು. ಎಚ್ಚರಿಸಿದರೆ ಏಳಲಿಲ್ಲ. ಇದೆಲ್ಲ ಏನು ಅನ್ನಿಸಿತು. ಮಕ್ಕಳಿಲ್ಲದಕ್ಕೆ ಇವರು ಮಗ ಮಾಡಿಕೊಂಡದ್ದು. ಕೊಟ್ಟ ಅಪ್ಪ ಅವ್ವ ನನ್ನ ಹುಟ್ಟೆ ಇಲ್ಲ ಎಂದು ತಿಳಿದುಕೊಂಡು ಇದ್ದದ್ದು…
“ಇಳೀರಿ” ಎಂದುದು ಕೇಳಿದರೂ ಆನಂದು ಹೂತು ಹೋದವನ ಹಾಗೆ ಕೂತು ಬಿಟ್ಟಿದ್ದ. ಮೈತುಂಬ ದೊಳ ದೊಳ ಬೆವರಿಳಿಯುತ್ತಿತ್ತು. ದಿಗಲು ಬಿದ್ದವನಂತೆ ನೋಡಿದ್ದಕ್ಕೆ ದೆವ್ವದ ಹಾಗೆ ಅರಳಿ ಮರಗಳು ನಿಂತಿದ್ದವು. ಬಂದ ಹಾದಿ ಮತ್ತೆ ಅದೇ ಗವಿಯ ಥರ ಕಾಣಿಸಿತು. ಈ ಮರಗಳ ಹಿಡಿದುಕೊಂಡೇ ಊರು ಆದಂತೆ. ಮರದ ಬುಡದಿಂದ ನಡೆದ ಹಾದಿ ಊರೊಳಕ್ಕೆ ದಿಕ್ಕಾಪಾಲು ನುಗ್ಗಿ ಅದರ ಅಕ್ಕ ಪಕ್ಕ ಒತ್ತೊತ್ತಿಗೆ ಹಟ್ಟಿಗಳು. ಉಸಿರು ಹಿಡಿದುಕೊಂಡು ಆನಂದು ಕೆಳಗಿಳಿದುದು. ಅರಳಿ ಮರದ ನೆರಳಲ್ಲಿ ಕೂತ ಜನ ಹತ್ತಿರ ಬಂದು ಸುತ್ತಾ ನೆರೆದುದು ಉಸಿರು ಸಿಕ್ಕಿಸಿದ ಥರ ಆಯ್ತು. ಒಬ್ಬರು ರಟ್ಟೆ ಹಿಡಿದು ನಡೆಸಿ ಮಾರಿಗುಡಿಯ ಒಂದು ಕಡೆ ಕೂರಿಸಿದರು. ಮಾರಿಗುಡಿ ಗೋಡೆ ತುಂಬಾ ಕೆಂಪು ಕೆಂಪು ಪಟ್ಟೆಗಳು. ತಾರಿಸಿದ ಸಗಣಿಯ ಹಸಿ ಮೂಗಿಗೆ ಬಡಿಯುತ್ತಿತ್ತು. ಸುತ್ತ ಬೆವರಿಳಿಸುತ್ತಾ ನಿಂತ ಜನ. ಕವುಚಿದ ಬೀಡಿ ಊದುಬತ್ತಿ ಹೊಗೆ ಗುಸುಗಿಸು ಜೋರು ಮಾತುಗಳು, ಕೆಮ್ಮುಗಳು. ಗಂಟೆಯ ಸದ್ದು ಎದ್ದಿತು. ‘ಪೂಜ’ ಎಂದು ಪಕ್ಕದಲ್ಲಿ ಕೂತಿದ್ದವ ಅಂದ. ಆನಂದು ಬೆವರುತ್ತಲೆ ಇದ್ದ…. ಅಮ್ಮ ಸತ್ತಾಗ ಬಂದವರು ಅಕ್ಕಪಕ್ಕದ ನಾಲ್ಕಾರು ಜನ. ತಿಥಿ ಮಾಡಬೇಕು ಎಂದು ಪಟ್ಟು ಹಿಡಿದರು. ನನ್ನ ಕೈಲಿ ಅದೆಲ್ಲ ಆಗಲ್ಲ ಅಂತಲೆ ಮುಖ ತಿರುವಿಸಿ ಹೋದರು…. ತಲೆ ಕೊಡವಿ ಕೂತ ಆನಂದು ಎದುರು ನೋಡಿದ. ಕಚ್ಚೆ ಕಟ್ಟಿಕೊಂಡ ಕಪ್ಪಗಿನ ಒಬ್ಬ ಬಂದು ತೀರ್ಥ ಇಟ್ಟು ದಿಟ್ಟಿಸಿದ. ಮೈ ಸೆಟೆದುಕೊಂಡಿತು. ಒದರಿಕೊಂಡು ಮೊದಲಿನ ಹಾಗೆ ಕೂತ. ತಟ್ಟೆಯಲ್ಲಿ ಬೆಂಕಿ ಇಟ್ಟುಕೊಂಡು ಬಂದು ಮುಖದ ಹತ್ತಿರ ತಂದು ಹೂಕೊಟ್ಟು ಹಲ್ಲು ಕಿರಿದು ಅವ ಬೇರೆ ದಿಕ್ಕು ಚಲಿಸಿದ್ದು, ತಕ್ಷಣ ಆಕಡೆಗೊಬ್ಬ ಈಕಡೆಗೊಬ್ಬ ಪಂಚೆ ಹಿಡಿದು “ತೆರೆ ಆಯ್ತು” ಎಂದು ಕೂಗಿದರು. ಒಳಗೊಳಗೆ ದಿಗಿಲಾಡತೊಡಗಿತು. ತೆರೆ ನಡುವೆ ಎಣ್ಣೆ ತುಂಬಿದ ಪಾತ್ರೆಯೊಂದನ್ನು ತಂದಿರಿಸಿದರು. ಇಟ್ಟ ಬಿರುಸಿಗೆ ಎಣ್ಣೆ ತೊಳಕಾಡಿ ತೊಳಕಾಡಿ ನಿಧಾನ ತಿಳಿಯಾಯಿತು. ಸುತ್ತ ತಕೈಸಿದ್ದ ಜನರ ಉಸಿರಾಟ ಒತ್ತಿ ಒತ್ತಿ ಹೊಸ ಜನ್ಮ ಕಾಣಿಸುತ್ತಿತ್ತು. ಇದ್ದಕ್ಕಿದ್ದಂತೆ ಸದ್ದೆಲ್ಲ ಅಡಗಿ ದೂರದಿಂದ ಕೇಳಿಸುವ ಮಾತುಗಳು, ಆನಂದುವಿಗೆ ಉಸಿರಾಟದ ಏರಿಳಿತವಾಯಿತು. ಎಣ್ಣೆಯ ಒಳಗಿನಿಂದ ನಿಧಾನತೆಗೆ ಒಂದು ಮುಖದ ರೀತಿ ಮೂಡಿತು. “ನಿನ್ನ ಅಪ್ಪ” ಅಂದರು. ನನ್ನ ಅಪ್ಪ ಅಂದುಕೊಂಡ. “ನಿನ್ನ ಮುಖಾನೂ ತೋರು” ಎಂದುದು ಕೇಳಿಸಿತು. ಮುಂದಕ್ಕೆ ಮುಖ ಚಾಚಿ ತೆಗೆದುಕೊಂಡ. ಅದಾದಮೇಲೆ ಸೊರಕ್ ಸೊರಕ್ ಸದ್ದು ಬಂತು. ಎಣ್ಣೆಯೊಳಗೆ ಮುಖವಾದ ಮೇಲೆ “ನಿನ್ನ ಅವ್ವ” ಅಂದರು. ದಿಟ್ಟಿಸಿ ನನ್ನ ಅವ್ವ ಅಂದುಕೊಂಡ. ಅವ್ವನ ತಲೆ ತುಂಬ ಕೂದಲು ಹರಡಿಕೊಂಡಿರಬೇಕು. ಆಮೇಲೆ ಅದು ಹೋಗಿ ಇನ್ನೊಂದು. “ತಮ್ಮ” ಗುಂಡುಗುಂಡುತ ಮುಖದವ. ಸ್ವಲಹೊತ್ತು ಹೋಗಿಸಿ ಮತ್ತೊಂದು ಬಂದ ಮೇಲೆ “ತಂಗೀ” ಅಂದರು. ಕಾಣಿಸಿದ ಮುಖದ ತುಟಿ ಬಿರಿಯುವ ಹಾಗೆ. ಇನ್ನೊಂದು ಎಳಸುಮುಖ, “ತಮ್ಮ” ಎಂದರು. ಎಲ್ಲಕ್ಕೂ ಮುಖ ತೋರಿಸಿ ತೆಗೆದುಕೊಳ್ಳುವುದು. ಇಷ್ಟೆಲ್ಲ ಆಗಿ ಮುಗಿದ ಮೇಲೆ ತೆರೆ ಸರಿಯಿತು. ತೆರೆ ಸರಿದ ತಕ್ಷಣವೇ ಒಂದು ವಯಸ್ಸು ಮೀರಿದ ಹೆಂಗಸು ಕಣ್ಣೀರು ಸುರಿಸುತ್ತ ಇದ್ದವಳು, “ನನಕಂದಾ” ಎಂದು ಚೀರಿ ಧಾವಿಸಿ ಬಂದು ತಬ್ಬಿಕೊಂಡಾಗ ಉಸಿರು ಸಿಕ್ಕಿಕೊಂಡಿತು. ಅವ್ವ. ತಲೆ ಎತ್ತಿ ನೋಡಿದ. ಕಣ್ಣೀರು ಹರಿಯುವ ಕಣ್ಣಲ್ಲಿ ಕಾಣುತ್ತಾ ಒಕ್ಕಡೆ ಇದ್ದ ಅಪ್ಪ ತಂಗಿ ತಮ್ಮಂದಿರ ಗುರುತಿಸಬಹುದಿತ್ತು. ಸಣ್ಣ ತಮ್ಮ ಓಡೋಡಿ ಬಂತು. ಅವರು ಹತ್ತಿರ ಹತ್ತಿರ ಬರತೊಡಗಿದರು. “ಇನ್ನೇನ ಆಯ್ತಲ್ಲ. ಕರ್ಕಂಡು ನಡೀರಿ” ಎಂದು ದೊಡ್ಡಗೆ ಇದ್ದವರು ಅಂದರು. ಯಾವ ಕಡೆ ನೋಡಿದರೂ ಗಿಜಿಗಿಜಿ ಥರಾವರಿ ಸಣ್ಣ ದೊಡ್ಡ ಮುಖಗಳು. ಎಬ್ಬಿಸಿ ನಡೆಸಿಕೊಂಡು ನಡೆದರು. ಹಟ್ಟಿ ತಲುಪಿದಾಗ ಆರತಿ ಎತ್ತಿ ಹರಿಸಿನ ನೀರು ಹರಿಸಿ “ಬಲಗಾಲು ಹಾಕಿ ನಡಿ” ಅಂದರು. ನಡೆದಾದ ಮೇಲೆ ಎಲ್ಲವನ್ನು ಮೆಟ್ಟಿನಿಂತು ನಿದ್ದೆ ತಬ್ಬಿಕೊಂಡಿತು.
ನಿದ್ದೆ ತಿಳಿದೆದ್ದ ಮೇಲೆ ಆನಂದುವಿಗೆ ಆದುದೆಲ್ಲ ಮೋಡಿ ಹಾಕಿ ನಡೆದಂತೆ ಅನಿಸಿತು. ಸುಧಾರಿಸಿಕೊಂಡು ಬಹಳ ಹೊತ್ತಾದರೂ ಬಂದು ನಿಲ್ಲುವ ಮುಖಗಳು. ಕಿವಿಯೊಳಗೆ ಕೂತು ಸದ್ದು ಮಾಡುವ ದನಿಗಳು. ತಪ್ಪಿದರೆ ಅದಲು ಬದಲು ಆಗುತ್ತಾ ತೋರುವ ಬಣ್ಣ ಬಣ್ಣದ ಎಂಥದರಿಂದಲೋ ತಪ್ಪಿಸಿಕೊಳ್ಳಲು ಆಗಲಿಲ್ಲ. ಎಲ್ಲ ಕನಸಿನಲ್ಲಿ ಜರುಗಿದ ಥರ. ಏನೆಲ್ಲ ಆಗಿಬಿಟ್ಟಿತು ಎಂದುಕೊಂಡು ಸುತ್ತೂ ನೋಡಿದ. ಅಷ್ಟು ದೂರದಲ್ಲಿ ಸಣ್ಣ ತಮ್ಮ ಈ ಕಡೆಗೆ ಬೆನ್ನು ಹಾಕಿ ತನ್ನಷ್ಟಕ್ಕೆ ಆಡಿಕೊಳ್ಳುತ್ತಿತ್ತು. ಸಿಗರೇಟು ಅನಿಸಿತು. ಅಕ್ಕ ಪಕ್ಕ ಜೋಬು ತಡವಿ ಸಿಗಲಿಲ್ಲ. ಎಲ್ಲ ಎಲ್ಲೆಲ್ಲಿ ಏನೇನು ಆದವೊ ನಿಧಾನವಾಗಿ ನೆನಪಾಗ ತೊಡಗಿದವು. ತಮ್ಮನ ಕಡೆ ನೋಡಿ ಶ್ ಅಂದ. ತಮ್ಮ ಓಡೋಡಿ ಬಂದು ಅರಳುಗಣ್ಣು ಮಾಡಿ ನಿಂತಿತು. ಆನಂದು ಅವನ ತೋಳು ಸವರಿ “ಬ್ಯಾಗಲ್ಲಿ ಸಿಗರೇಟು ಪಟ್ಟಿಗೆ ಅದೆ. ತತ್ತಿಯ” ಎಂದುದಕ್ಕೆ ‘ಹೊ’ ಎಂದು ಹುಡುಗ ಓಡಿತು. ಕ್ಷಣದಲ್ಲೆ ಸಿಗರೇಟು ಬೆಂಕಿ ಪೆಟ್ಟಿ ಹಿಡಿದು ಬಂದು ಚಾಚಿತು. ಆನಂದು ಈಸಿಕೊಂಡು “ಹೊರಕ್ಕೆ ಒಂದಿಷ್ಟು ದೂರ ಹೋಗಿ ಬರುವ” ಎಂದು ಎದ್ದ. ಅಣ್ಣನ ಕೈ ಹಿಡಿದು ತಮ್ಮ ನಡೆದನು.
ಹಟ್ಟಿಗಳ ಕಿಂಡಿ ಕಿಂಡಿಗಳಿಂದೆಲ್ಲ ನೋಡುವ ಕಣ್ಣುಗಳು ಅನಿಸಿದವು. ಗುಂಪಿದ್ದ ಕಡೆ ಗುಸು ಗುಸು. ಒಂದೊಂದು ಸಲ ಒಟ್ಟೊಟ್ಟಿಗೆ ನೋಡುವುದು. ಆಗ ಆನಂದುವಿಗೆ ಸರಿಯಾಗಿ ನಡೆಯುವುದು ಕಷ್ಟವಾಗುತ್ತಿತ್ತು. ಊರ ಹೊರಬಂದು ದೊಡ್ಡಗೆ ಇದ್ದ ಕೆರೆಯೇರಿ ಮೇಲೆ ಕುಳಿತು ನಿಂಬಳವಾಗಿ ಉಸಿರು ಬಿಟ್ಟು ಸಿಗರೇಟು ಹಚ್ಚಿ ಒಂದು ಕಡೆಯಿಂದ ಎಲ್ಲವ ದಿಟ್ಟಿಸಿದ. ಏನೋ ಮರೆತು ಹೋದಂತೆ ತುಂಬ ಅನಿಸಿತು. ಹೊತ್ತಿನ ಕೆಂಪು ಕಿರಣ ಹೀರುತ್ತಿದ್ದ ತಮ್ಮನ ಎಳಸು ಮುಖ ಅದೇ ಮಣ್ಣಲ್ಲಿ ಆಗ ತಾನೇ ಮೂಡಿ ಬಂದಂತೆ ತೋರಿತು. ಆನಂದ ಇನ್ನೊಂದು ಸಿಗರೇಟಿಗೆ ಬೆಂಕಿ ಮುಟ್ಟಿಸಿ “ನೀ ಆಡ್ಕೊ ಹೋಗು” ಎಂದಾಗ ತಮ್ಮ ಬೇರೆ ದಿಕ್ಕು ಹಿಡಿಯಿತು. ಹೋಗುವ ತಮ್ಮನನ್ನೆ ನೋಡುತ್ತ ಒಂದು ಗಳಿಗೆ ಮಟ್ಟಿಗಾದರೂ ಹೀಗಿದ್ದರೆ ಎಂದು ಬಹಳವಾಗಿ ಅನಿಸಿತು. ತನ್ನೊಳಗೆ ಮುಳುಗಿ ಬಹಳ ಹೊತ್ತು. ತಮ್ಮ ಕೈ ಜಗ್ಗಿಸಿ “ಅವ್ವ ಕರೀತವ್ಳೆ” ಅಂದಾಗ ನೋಡಿದ. ಕತ್ತಲು ನೆಲಕ್ಕಿಳಿಯುತ್ತಿತ್ತು. ಅವ್ವ ದೂರದಲ್ಲಿ ಕೈಬೀಸುತ್ತಿದ್ದಳು. ಹತ್ತಿರ ಹೋದಾಗ “ಮುಸ್ಸಂಜೆ ಮಾಡ್ಕೊಂಡು ಹಟ್ಟಿಗೆ ಬರೋದ” ಎಂದು ನೋಡಿದಳು. ‘ನಡೀರಿ’ ಎಂದು ಹೇಳಿ ಹಿಂದೆ ಬಂದಳು.
ರಾತ್ರಿ ಮಲಗಿದರೆ ಸಮರಾತ್ರಿವರೆಗೂ ಆನಂದುವಿಗೆ ನಿದ್ದೆ ಬರಲಿಲ್ಲ. ಒದ್ದಾಡಿದ, ಸುಮಾರು ಸಿಗರೇಟು ಸೇದಿದ. ಗೋಡೆಯ ಆ ಕಡೆ ಈ ಕಡೆ ನೋಡಿದ ಕಡಲೆಲ್ಲ ಏನೇನೊ ಧಾವಿಸಿ ಬಂದಂತೆ ತಲೆಯನ್ನು ಎರಡು ಕೈಗಳಿಂದಲೂ ಅದುಮಿ ಹಾಸಿಗೆಗೆ ಹುದುಗಿ ಕವುಚಿ ಮಲಗಿದ. ….ಆಟ ಊಟ ಪಾಠ. ಬೆಳದದ್ದು ಒಟ್ಟೊಟ್ಟಿಗೆ ಹೋಟೆಲ್ಲಿಗೆ ನುಗ್ಗಿ ಒಂದು ಮೂಲೆಯಲ್ಲಿ ಕೂತೆವು. ಚಂದು ದುಮುಗುಡುತ್ತಿದ್ದ. “ನೀನು ಏನೇ ಹೇಳು. ನನಗಂತು ಸರಿಕಾಣ್ಸೊಲ್ಲ” ಅಂದುದು ಕೋಪ ಬರಿಸಿತು. ಸಿಗರೇಟು ಹಚ್ಚಿ ‘ಏನು’ ಅಂದೆ. ತಟ್ಟನೆ ‘ಏನು ಅಂದ್ರೆ?’ ಎಂದು ನೋಡಿ ‘ರೋಡು ಅಲೆಯೋದು- ಕುಡ್ದು’ ಅಂದು ಆಳೆಯುವವನ ಹಾಗೆ ನೋಡಿದ. ಸಲೀಸಾಗಿ ‘ಮತ್ತೆ?’ ಅಂದೆ. ವಿಚಿತ್ರವಾಗಿ ಕಣ್ಣು ಬಿಟ್ಟ. ‘ಇನ್ನೇನು? ಅಪ್ಪ ಸತ್ತ, ತಿಥಿಗಿಥಿ ನಿಂಗಾಗಾದಿಲ್ಲ. ಹೋಗ್ಲಿ. ಅಮ್ಮ ಏನೊ ಅಂದ್ಲು ಅಂತ ಮನೆ ಬಿಡೋದ? ಅವರ್ಗೆ ಮಾನ ಮರ್ಯಾದೆ ಪ್ರಶ್ನೆ. ಗಂಭೀರವಾಗಿ, ಒಂದು ಮದ್ವಯಾಗಿ ಮನೇಲಿರು. ಆದ್ರೆ ಓದು. ಇಲ್ಲ ಅದೂ ಬೇಡ’. ತುಂಬ ಬಿಸಿಬಿಸಿಯಾಗಿ ಬಿಟ್ಟ. ತಣ್ಣಗೆ ‘ನಿನ್ನ ಮಾತೂ ಬೇಡ’ ಅಂದೆ. ದುರುಗುಟ್ಟಿ ನೋಡಿ ಎದ್ದು ನಿಂತು ಮಾತಿಲ್ಲದೆ ದಪದಪ ಹೆಜ್ಜೆ ಹಾಕಿ ಹೋದ. ಅವ ಹೋದ ದಿಕ್ಕು ದಿಟ್ಟಿಸುತ್ತ ಕೂತವನಿಗೆ ಮತ್ತೆ ಕಾಣಿಸಿಕೊಂಡ. ಹತ್ತಿರ ಬಂದು ಟೇಬಲ್ಲಿಗೆ ಕೈ ಅದುಮಿ ‘ನಂಗ ಕೋಪಬಂದ್ರೂ ನಿನ್ನ ಒಳ್ಳೆದಕ್ಕೇನೆ. ಜನ ಏನಂದ್ಕೊತ್ತವರೆ ಗೊತ್ತೇನೊ’. ತುಂಬ ನೋವು ತಿನ್ನುವವನ ಥರ ಕಂಡ. ‘ಗೊತ್ತು….’ ಅಂದೆ. ‘ತಂದೆ ತಿಥಿ ಮಾಡ್ಲಿಲ್ಲ. ಹೇಳ್ದ ಮಾತು ಕೇಳಲ್ಲ. ಕುಡಿತಾನಂತೆ. ಸೂಳೆಮನೆ ಬೇರೆ. ಎಷ್ಟಾದರೂ ಸಾಕ್ದ ಮಗ. ಇಷ್ಟೆ ತಾನೆ?”…. ಚಂದು ತುಟಿ ಕಚ್ಚಿ ತಲೆ ತಗ್ಗಿಸಿ, ನೋಡಿ, ಮೊದಲಿನ ಹಾಗೆ ದಪದಪ ಹೋದ. ಮತ್ತೆ ಅವ ಬರುವವ ಎಂದು ಅನಿಸಲಿಲ್ಲ. ಸ್ಟ್ರಾಂಗ್ ಕಾಫಿಗೆ ಹೇಳಿ ಸಿಗರೇಟು ಹಚ್ಚಿ ಹೊರ ನೋಡಿದ. ಹರಿಯುವ ಬಸ್ಸು ಲಾರಿ ರಿಕ್ಷಾ ಜನ ಎಲ್ಲ ಚಲನೆ ಕಳೆದಕೊಂಡ ಥರ ಕಾಣಿಸಿದುವು.
ಮನೆಮಂದಿಯೆಲ್ಲ ಹಜಾರದಲ್ಲಿ ಚೆಲ್ಲಿಕೊಂಡು ಕೂತಿದ್ದರು. ತಮ್ಮ ಕೈಜಗ್ಗಿಸಿ ‘ಆಚೆಗೆ ಹೋಗುವ ಬಾ” ಅಂತು. ಮನಸ್ಸಾಗಲಿಲ್ಲ. ಇದುವರೆಗೆ ದೊಡ್ಡತಮ್ಮನ ಮಾತಾಡಿಸಿದ್ದು ಮೂರೊ ನಾಲ್ಕೋ ಸಲ. ಎಲ್ಲದಕ್ಕೂ ಆಊ ಮುಗೀತು. ಅವ್ವ ತನಗಾಗಿ ಹಲುಬಿದ್ದ ಪುರಾಣದಷ್ಟು ಹೇಳಿದಳು. “ನಿನ್ನ ಕೊಡುವಾಗ ಬೆಂಕಿ ಮುಂದ ಪ್ರಮಾಣ ಮಾಡಿಸಿದ್ರು. ಅವ್ರು ಸಾಯೋವರ್ಗೂ ನಿನ್ನ ನೋಡ್ಬಾರ್ದು ಅಂತ” ಬಹಳ ಹೇಳಿದಳು. ತಂಗಿ ಬಂದು, ಒಂದು ಭಂಗಿಯಲ್ಲಿ ಕೂತು ಅಲ್ಲಿ ಹೇಗೆ ಏನು ಎತ್ತ ಅಂತ ವಿಚಾರಿಸುತ್ತಿದ್ದುದು ಬಹಳವಾಗಿ ಹಿಡಿಸುತ್ತಿತ್ತು-ಅವಳ ರೀತಿ.
ಅಪ್ಪ ಅವ್ವ ಹಟ್ಟಿ ಎಲ್ಲ ಗೆಲುಗೆಲು. ಆನಂದುವಿಗೆ ದಿಗಿಲು. ತಂಗಿ ಒಳಗೊಳಗೆ ನಗುತ್ತಿದ್ದಳು. ಹತ್ತಿರ ಕರೆದು ಕೇಳಿದ್ದಕ್ಕೆ ಒಂದುಥರ ತುಟಿಮಾಡಿ ಹೋದಳು. ಆತ ಕರೆದಾಗ ಹೋಗಿ ಪಕ್ಕ ಕೂತ. “ದೇವ್ರ ದಯ. ನಾ ಅಂಡ್ಕೊಂಡಂಗೆ ಆಯ್ತು. ಈ ಕಾಡ್ಗೇ ಗಟ್ಟಿಕುಳ ಅವ್ರು. ಹೊಲ ಮನೆ ಅಂತ ವಿಪರೀತ. ಚಿನ್ನದಂಥ ಒಬ್ಳೇ ಮಗ್ಳು. ಏನೋ ದೊಡ್ಡ ಮನಸ್ಸು ಮಾಡಿ ನಿನ್ನ ಮನೆಯಾಳ್ತನಕ್ಕೆ ತಂದೊಳ್ಳಕ್ಕ ಒಪ್ಕಂಡ್ರು”. ಆನ೦ದುವಿಗೆ ಗೊಂದಲಿಸಿಕೊಂಡು ಮೈತುಂಬ ಸಿಡಿಮಿಡಿ ಎದ್ದಿತು. ಉಸಿರುಕಟ್ಟಿ, ಗಟ್ಟಿಯಾಗಿ “ಇದೆಲ್ಲ ಆಗೊಲ್ಲ” ಎಂದು ಎದ್ದು ನಿಂತ. ಅಪ್ಪ ಕೂತ್ಕೊ ಹೇಳಿದರೂ ಕೂರಲಿಲ್ಲ. ಆನಂದುವಿನ ರೀತಿ ಕಂಡು ಅಪ್ಪ “ನೀಯೇನೂ ಸಣ್ಣವ್ನಲ್ಲ. ಹಿರೀ ಮಗ. ನಿನಗಿಂತ ಸಣ್ಣವು ಮೂರು ಐಕಳು. ನೀನೇ ನೋಡು” ಎಂದು ಒಂದೆ ಉಸುರ ಅಂದನು. ಆನಂದುವಿಗೆ ಗೊಂದಲಿಸಿಕೊಂಡು ಮಾತಾಡಲೂ ಆಗದೆ ತಿರುಗಿ ನೋಡದೆ ಕಿರುಮನೆ ಕಡೆ ನಡೆದರೆ ಅವ್ವ ಹಿಂದೆಯೆ ಬಂದದು ರೇಗಿಸಿತು. ತಟ್ಟನೆ ಹಿಂದಕ್ಕೆ ತಿರುಗಿ “ನಿದ್ದೆ ಬತ್ತಾದೆ. ಹೋಗು” ಎಂದು ಜೋರು ಅಂದುದು. ಎಲ್ಲ ನಿಂತಿತು.
ಮಾರನೆಯ ದಿನ ಆನಂದ ಹೊರಕ್ಕೆ ಹೋಗಲೇ ಇಲ್ಲ. ತಂಗಿ ಏನಾಯಿತು ಯಾಕೆ ಎಂದೆಲ್ಲ ನೊಂದುಕೊಂಡು ವಿಚಾರಿಸಿದಳು. ಅಪ್ಪ ಮುಖ ಕಾಣಿಸಿಕೊಳ್ಳಲಿಲ್ಲ. ತಮ್ಮ ದೂರ ದೂರವೇ ಇತ್ತು. ಅವ್ವ ಬಂದ ಸಲವೆಲ್ಲ ದೆವ್ವದ ಥರದ ಮಾತನ್ನಗತು ಹೋಗುತ್ತಿದ್ದಳು. “ಸಾವ್ಕರ್ರ ತಲೆ ಇರೋವರ್ಗೆ ಅಲ್ಲಿರೋದು. ಆಮೇಲ ನಿನ್ನ ಇಷ್ಟ ಬಂದಂಗೆ.” ಬಹಳವಾಗಿ ಅಸಹನೆ, ಅಸಹನೆ, ತಲೆ ಚಚ್ಚಿಕೊಳ್ಳಬೇಕು ಎನ್ನುವಷ್ಟು. ಅವ್ವ ಬಂದು ಉದಕ್ಕೆ ನಿಂತು “ಹಿಂಗಾದ್ರ ಹೆಂಗಪ್ಪು ನಿನ್ನದು? ಒಂದು ಮಾತಿಲ್ಲ ಕಥಿಲ್ಲ. ನಾವೇನೂ ನಿನ್ನ ಕತ್ನ ಮ್ಯಾಲ ಕೂತಿಲ್ಲ.” ಸುಮ್ಮನೆ ನೋಡಿದ. ಮತ್ತೂ ಮಾತಿಗೆ ತೊಡಗಿದಳು. ಚಟ್ಟನೆ “ಸುಮ್ನ ಹೋಗವ್ವ” ಅಂದ. ಅವ್ವ ದುರುದುರು ನೋಡಿ ಹೋದಳು.
ಹೊರಕ್ಕೆ ಕಾಲಿಟ್ಟಾಗ ಅವ್ವ ಆಂತು ನೋಡಿ “ನೀ ಬಂದು ನಾಳ ಒಂಬತ್ತು ದಿನ” ಅಂದಳು. ಆನಂದುವಿಗೆ ಒಂಬತ್ತು ತಿಂಗಳು ಅನ್ನಲು ಬಾಯಿಗೆ ಬಂತು. ಹೊರ ಹೋಗುವುದು ಪಿಚ್ಚನೆ ತೋರಿತು. ಹಿಂದಲ ಬಾಗಿಲ ತೆಗೆದು ಹಿತ್ತಲಿಗೆ ಬಂದವನಿಗೆ ಕೆಂಪು ಸೀರೆ ಹುಟ್ಟಿದ್ದ ತಂಗಿ ಸಸಿಗಳಿಗೆ ನೀರು ಹಾಕುತ್ತಿದ್ದವಳು ನೋಡಿ ನಕ್ಕಳು. ನಗಲು ನೋಡಿದ. ನೆರಳಿದ್ದ ಕಡೆ ಹೋಗಿ ಕೂತು ಸಿಗರೇಟು. ತಂಗಿಥರ ಅಕ್ಕರೆ ತುಳುಕಿಸಿ ನಗಲು ಬರುವುದಿಲ್ಲ. ತಮ್ಮನ ಥರ ಈ ಮಣ್ಣಲ್ಲೆ ಮೂಡಿದಂತನಿಸುವುದಿಲ್ಲ. ಅಪ್ಪನ ವ್ಯವಾರ, ಗಪ್ಪಗಿರುವ ತಮ್ಮ, ಅವ್ವನ ಹದ್ದುಬಸ್ತು. ಯಾರಾಗೂ ಅನಿಸುವುದಿಲ್ಲ. ಯಾರು ಏನೂ ಅನಿಸುವುದಿಲ್ಲ. ಇವರೆಲ್ಲ ಈ ನೆಲಕ್ಕೆ ಮಾಡಿಸಿದವರು ಅನ್ನಿಸಿತು. ತಂಗಿ ಶ್ ಶ್ ಸದ್ದು ಮಾಡಿದಳು. ನೋಡಿದ್ದಕ್ಕೆ ಬಾಯಿ ಸನ್ನೆ ಮಾಡಿ ಹತ್ತಿರ ಕರೆದಳು. ಹತ್ತಿರ ಹೋದಾಗ ಕೈಚಾಚಿ ತೋರಿಸಿ “ನೋಡು” ಅಂದಳು. ಒಂದು ಹುಡುಗಿ ಚೆಂದವಾಗಿ ತಲೆ ಬಾಚಿದ್ದವಳು ನೀರು ಸೇದುತ್ತಿದ್ದಳು. ತಂಗಿ ಜೋರು ಕೀಟಲೆ ದನಿಯಲ್ಲಿ “ಇವ್ಳೇ ಇವ್ಳೇ” ಎಂದು ಕೂಗಿದಳು. ಅವಳು ಗಕ್ಕ ನೋಡಿ ಬೆದರಿ ತಲೆತಗ್ಗಿಸಿ ಸರಸರ ಹೋಗಿಬಿಟ್ಟಳು. “ಇವ್ಳೇನೆ ನಿಂಗೆ, ಚೆಂದಾಗಿಲ್ವ” ಎಂದು ದಿಟ್ಟಿಸಿದ್ದಕ್ಕೆ “ಚೆಂದಾಗವಳೆ”. ತುಟಿಕಚ್ಚಿ ನಕ್ಕು “ಮತ್ತೆ ಮದ್ವೆ ಆಗೋಲ್ಲ ಅಂತ ಮೂಲೆ ಹಿಡ್ದು ಕುಂತಿದ್ದಿ” ಅಂದಳು. “ಮದ್ವೆ ಆಗೋಲ್ಲ” ಎಂದು ಮುಂದೆ ಮಾತಾಡದೆ ಆನಂದು ಮೊದಲಿಗೆ ಹೋಗಿ ಕೂತದ್ದು. ತಂಗಿ ನೀರು ಹಾಕ ತೊಡಗಿದಳು. ಸ್ವಲ್ಪ ಹೊತ್ತು ಹೋದ ಮೇಲೆ ಶ್ ಶ್ ಮಾಡಿದಳು. ಏನು ಎಂದುದಕ್ಕೆ ಮತ್ತೆ ಬಂದವಳೆ ಅನ್ನುವ ಥರ ಮಾಡಿದಳು. ಕೂತಲ್ಲಿಂದಲೇ “ನೀನೇ ಬಾ ಇಲ್ಲಿ” ಅಂದ. ಹೆಜ್ಜೆ ಹೆಜ್ಜೆಗೂ ಹತ್ತಿರವಾದಳು. ಬಂದು ಕೂತು ಏನು ಎನ್ನುವ ರೀತಿ. ಹೇಗೆ ಹೇಳಬೇಕು ಎಂದು ಬಹಳ ಹೊತ್ತು.
“ಒಂದ್ಮಾತು ಕೇಳ್ತೀನಿ, ಏನೂ ತಿಳ್ಕೊಬೇಡ”
ಸುಮ್ಮನೆ ನೋಡಿದಳು.
“ನಾನು ನಿಂಗ ಅಣ್ಣ ಅನ್ನಿಸ್ತಾದ?”
“ನೀನು ನಂಗೆ ಅಣ್ಣಾನೆ ಅಲ್ವಾ?”
“ಅದ್ಸರಿ, ಅಣ್ಣ ಅಂತ ಅನ್ನಿಸ್ತಾದ ಅಂತ….”
ತಂಗಿ ತೊಡಕಾಡಿದಳು.
“ಎಂಥದಪ್ಪ, ನೀ ಕೇಳೋದೆ ಗೊತ್ತಾಗಲ್ಲ”
ಹಾಗೆ ಕುಳಿತಿದ್ದರು.
“ನಿನ್ನ ಜೊತೇಲಿ ಕುಂತ್ಕಂಡ್ರ ಕೆಲ್ಸ ಆಯ್ತದ”
ಎದ್ದು ನಿಂತು ನಗು ಚೆಲ್ಲಿ ಅಂದಳು.
ಹೊತ್ತಾರೆ ಎದ್ದು, ಅಣ್ಣನ ನೋಡಲು ಬಂದ ತಮ್ಮನಿಗೆ ಎದ್ದು ಕಾಣುವಂತೆ ನೆಲದಲ್ಲಿ ಹಾಸಿಕೊಂಡಿದ್ದ ಕಾಗದ ಕಾಣಿಸಿತು. ಹತ್ತಿರ ಹೋಗಿ ಅಚ್ಚರಿಯಿಂದ ಜೋರಾಗಿ ಓದಿದ. “ನಿಮ್ಮ ಮಗ ನಿಮ್ಮ ಪಾಲಿಗೆ ಇಲ್ಲ”. ಅಪ್ಪ ಓಡೋಡಿ ಬಂದ. ಅವ್ವ ಧಾವಿಸಿ ಬಂದಳು. ಹಾಸಿಗೆಯ ಸುತ್ತೆಲ್ಲ ಸಿಗರೇಟು ತುಂಡುಗಳು ಹೊಸಕಿ ಹರಡಿಕೊಂಡಿದ್ದವು. ಅಪ್ಪ, ಅವ್ವನ ಕಡೆ ನೋಡಿದ, ಅವ್ವ ಸರಕ್ಕ ನಡುಮನೆಗೆ ಓಡಿ ಬಂದು ಪೆಟ್ಟಿಗೆ ಬೀಗ ತೆಗೆದು ನೋಡಿ “ಹಣ ಮುಟ್ಟಿಲ್ಲ” ಎಂದು ಜೋರು ಕೂಗಿದಳು. ದೊಡ್ಡ ತಮ್ಮ ಬಂದು ಏನು ಏನು ಎಂದು ನಿಂತ. ಹಟ್ಟಿ ತುಂಬ ಒಂದು ರೀತಿಯ ಗದ್ದಲ ಎದ್ದಿತು. ತಂಗಿಗೆ ಇನ್ನೂ ನಿದ್ದೆ ತಿಳಿದಿರಲಿಲ್ಲ.