ತಳಪಾಯ ಕಟ್ಟಬೇಕಿದೆ -ದೇವನೂರ ಮಹಾದೇವ
(1.11.2023ರ ಪ್ರಜಾವಾಣಿ ರಾಜ್ಯೋತ್ಸವ ವಿಶೇಷ “ಜಯಹೇ ಕರ್ನಾಟಕ ಮಾತೆ-೫೦” ರ ಪ್ರಯುಕ್ತ “ಮುಂದಿನ ೨೫ ವರ್ಷಗಳಲ್ಲಿ ಕರ್ನಾಟಕ ಹೇಗಿರಬೇಕು?” ಎಂದು ಕೇಳಿದ ಪ್ರಶ್ನೆಗೆ ದೇವನೂರ ಮಹಾದೇವ ಅವರ ಉತ್ತರ)
ಪ್ರಜಾವಾಣಿಯ ಈ ಪ್ರಶ್ನೆ ಕೇಳಿಯೇ ನನಗೆ ಗಾಬರಿಯಾಯ್ತು. ಭಾರತ ಅಂದರೆ ರಾಜ್ಯಗಳ ಒಕ್ಕೂಟ ಎಂಬ ವಿವೇಕದ ಸಂವಿಧಾನದ ಪರಿಕಲ್ಪನೆಯನ್ನೆ ಕಾಲುಕಸ ಮಾಡಿರುವ ಇಂದಿನ ‘ಬಲಿಷ್ಠ’ ಕೇಂದ್ರ ಸರ್ಕಾರವು ರಾಜ್ಯಗಳನ್ನು ದುರ್ಬಲಗೊಳಿಸುತ್ತ ಧಾವಿಸುತ್ತಿದೆ. ಜಿಎಸ್‌ಟಿ ತೆರಿಗೆ ಪದ್ಧತಿಯಿಂದಾಗಿ ರಾಜ್ಯಗಳು ತಮ್ಮ ಬಹುಪಾಲು ಸಂಪತ್ತನ್ನು ಬಲಿಷ್ಠ ಕೇಂದ್ರಕ್ಕೆ ಒಪ್ಪಿಸಿ ಯಾಚಿಸುವ ಭಿಕ್ಷುಕರಂತಾಗಿಬಿಟ್ಟಿವೆ. ಕಾರ್ಪೊರೇಟ್ ಸೆಕ್ಟರ್‌ನ ಶತಕೋಟ್ಯಾಧಿಪತಿಗಳ ಹಿಂತಿರುಗಿಸಲಾಗದ ಸಾಲವನ್ನು ಪಕ್ಕಕ್ಕಿಡುವ ‘ಘನ ಕಾರ್ಯ’ದಲ್ಲಿ ‘ಬಲಿಷ್ಠ’ ಕೇಂದ್ರ ಸರ್ಕಾರ ನಿರತವಾಗಿದೆ. ಜನರ ಸಂಪತ್ತು ಉಳ್ಳವರ ಪಾಲಾಗುತ್ತಿದೆ. ರಾಜ್ಯಗಳು ಉಸಿರೆತ್ತದಂತೆ ‘ಬಲಿಷ್ಠ’ ಕೇಂದ್ರವು ರಾಜ್ಯಗಳ ಕುತ್ತಿಗೆಗೆ ಕವೆಕೋಲು ಹಾಕಿ ಕೂರಿಸಿದೆ.
ಹೀಗಿರುವಾಗ, ಇಂದಿನ ವೇಗದ ಯುಗದಲ್ಲಿ ಇನ್ನು 25 ವರ್ಷಗಳ ತದನಂತರ ಕರ್ನಾಟಕ ಎಂಬ ರಾಜ್ಯ ಅದು ಒಂದು ರಾಜ್ಯವಾಗಿ ಉಳಿಯುತ್ತದೆಯೆ? ಅದರ ಸ್ವಾಯತ್ತತೆ, ಪ್ರಾದೇಶಿಕತೆ, ಭಾಷೆಗಳು, ಸಂಪತ್ತು ಉಳಿಯುತ್ತವೆಯೆ? ಈ ದಿಗಿಲು ನನಗೆ. ಕರ್ನಾಟಕವು ಒಂದು ಸ್ವಾಯತ್ತ ರಾಜ್ಯವಾಗಿ ಉಳಿಯಬೇಕಾದರೆ, ಕರ್ನಾಟಕದ ಬುಡ ಗಟ್ಟಿ ಮಾಡಬೇಕಿದೆ. ತಳಪಾಯ ಕಟ್ಟುವ ಕಾಯಕದಲ್ಲಿ ಮುಚ್ಚಲ್ಪಟ್ಟ ಸರ್ಕಾರಿ ಶಾಲೆಗಳನ್ನು ಮತ್ತೆ ತೆರೆಯುವುದು, ಉಚಿತ ಪ್ರಾಥಮಿಕ ಶಿಕ್ಷಣವನ್ನು ತಾಯಿನುಡಿಯಲ್ಲಿ ನೀಡುವುದು, ಸಮೀಪ ಶಾಲೆ ನೀತಿ ಜಾರಿಗೊಳಿಸುವುದು ಇತ್ಯಾದಿ. ಹೀಗೆಯೇ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೂಡ ಉನ್ನತೀಕರಿಸಬೇಕು.
ಅರಣ್ಯ ಸಂಪತ್ತು, ಜಲ ಸಂಪತ್ತು, ಗಣಿ ಸಂಪತ್ತು, ಭೂಸತ್ವ ಸಂಪತ್ತು ಕಾಪಾಡಿಕೊಳ್ಳಬೇಕು. ಇದನ್ನು ಜನಮಾನಸದಲ್ಲಿ ಜಾಗೃತಗೊಳಿಸಬೇಕು. ಎಲ್ಲಾ ಕೈಗಳಿಗೆ ಕೆಲಸ, ವಿದ್ಯೆ, ಆರೋಗ್ಯ ಇವು ಗುರಿಯಾಗಬೇಕು. ಕೃಷಿ ಕೇಂದ್ರಿತ ಆರ್ಥಿಕತೆ ರೂಪಿಸಬೇಕು. ಸ್ವಾವಲಂಬನೆಗೆ ಮಹತ್ವ ಕೊಡಬೇಕು. ಗೃಹ, ಸಣ್ಣ ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು. ಪಂಚಾಯ್ತಿರಾಜ್ ವ್ಯವಸ್ಥೆ ಪ್ರಬಲವಾಗಬೇಕು.
ಇಂತಹವುಗಳಿಂದ ನಮ್ಮ ನಾಡನ್ನು ಕಟ್ಟುವುದಾದರೆ 25 ವರ್ಷಗಳಾದ ಮೇಲೂ ಕರ್ನಾಟಕ ಉಳಿಯಬಹುದು. ಇಂತಹ ಧನ್ಯತೆಯ ಕೆಲಸಕ್ಕೆ ನಮ್ಮ ರಾಜ್ಯ ಸರ್ಕಾರವು ಇಚ್ಛಾಶಕ್ತಿ ಪ್ರದರ್ಶಿಸಲಿ ಎಂದು
ಆಶಿಸುವೆ.