ಡಾಂಬರು ಬಂದುದು – ದೇವನೂರ ಮಹಾದೇವ
(1972 ರಲ್ಲಿ ಬರೆದ ಕತೆ. “ದ್ಯಾವನೂರು” ಸಂಕಲನದಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ ಹಾಗೂ ಯೂಟ್ಯೂಬ್ ಸ್ಟೋರಿ ಟೆಲ್ಲರ್ಸ್ ಮೂಲಕ ನಮ್ಮ ಮರು ಆಲಿಸುವಿಕೆಗಾಗಿ… )
ಊರ ಮೇಲು ನೋಟ:
ಊರಿಂದ ಬಂಡಿ ಮಾತ್ರವೆ ಓಡಾಡಲು ಲಾಯಕ್ಕಾದ ಓಣಿ ಥರ ಹೊಂಟ ಹಾದಿ ಮೂರು ಮೈಲಿ ಹೋಗಿ ಬಸ್ಸು ಓಡಾಡುವ ದೊಡ್ಡರಸ್ತೆಗೆ ಸೇರಿಕೊಳ್ಳುತ್ತದೆ. ದೊಡ್ಡ ರಸ್ತೆಯಿಂದ ಅದೇ ಹಾದಿ ಹಿಡಿದು ಹಿಂದಕ್ಕೆ ಬಂದರೆ ಕಳ್ಳಿ ಕವುಚಿಕೊಂಡ ಅದು ಗವ್ವನೆ ಊರವರೆಗೂ ಬಂದು, ದೆವ್ವ ನಿಂತ ಅರಳಿ ಮರಗಳ ಬಳಸಿ ಮುಂದೆ ಮೂರು ಸೆಲೆಯಾಗಿ ಒಡೆದುಕೊಂಡು ಊರೊಳಕ್ಕೆ ಧಾವಿಸುತ್ತದೆ. ಹಿಂಗೆ ಸೆಲೆ ಹೊಂಟ ಬೀದಿಯ ಅಕ್ಕಪಕ್ಕ ಒತ್ತೊತ್ತು ಹಟ್ಟಿಗಳು ತೆಕ್ಕೈಸಿಕೊಂಡಿದ್ದು ಉಸಿರಾಡಲೂ ಅಡಚಣೆ ಮಾಡುವಂತೆ ಮೊದಲು ನೋಟಕ್ಕೆ ಗಕ್ಕ ಕಾಣಬರುತ್ತದೆ.
ಅದು ಯಾವುದಕ್ಕೂ ಹೇಳಿಕೊಳ್ಳುವಂಥ ಹಳ್ಳಿ ಅಲ್ಲ. ಎಣಿಸಿದರೆ ಹೆಚ್ಚೆಂದರೆ ಎಂಬತ್ತು ಮನೆಗಳು ಇದ್ದೀತು. ಎಲ್ಲ ಕಡೆ ಇರುವಂತೆ ಅಲ್ಲಿ ಒಂದು ತುಂಡು ಹೋಟೆಲ್ಲೂ ಇಲ್ಲ. ಇದ ಹಿಡಿದೇ ಊರ ಊಹಿಸಬಹುದು. ಮತ್ತು ಅಲ್ಲೆ ನಂಜನಗೂಡಲ್ಲೊ ಮೈಸೂರಲ್ಲೊ ಎಸ್ಸೆಲ್ಸಿ ಹತ್ತಿಬಂದ ನಾಕಾರೂ ಜನರೂ ಉಂಟು. ಲಕುಮ ರಾಜಪ್ಪ ಮಾದು ಶಂಭು ಇವು ಅವರ ಹೆಸರುಗಳು. ಈ ಹೆಸರುಗಳಿಗೂ ಪಟೇಲರಿಗೂ ಅಷ್ಟಕ್ಟಷ್ಟೆ. ಇಂದು ಹುಟ್ಟಿದ ಈ ತುಂಡುಗಳು ತಮ್ಮ ಎದುರಾ ತಲೆ ಎತ್ತಿ ತಿರುಗುವುದನ್ನು ಜನರು ಹೆಂಗೆ ಸಹಿಸುವರು? ತಾವು ಕಂಡ ಹಾಗೆ ತಮ್ಮ ಅಪ್ಪನ ಕಾಲದಿಂದಲೂ ಅಗಿದ್ದಿಲ್ಲ. ಆ ಮಕ್ಕಳು ಮೇಲುಜಾತಿ ಕೀಳುಜಾತಿ ಅನ್ನದೆ ಒಂದೇ ಹೊಟ್ಟೆಯಿಂದ ಬಿದ್ದಂತೆ ಹೊಲಾರ ಲಕುಮನೊಡನೆ ತಿರುಗುವುದ ಹಿಡಿದು ಅವರವರ ಅಪ್ಪಂದಿರ ಮೂಲಕ ಬೈಸಿದರು. ಅಪ್ಪಂದಿರ ಮಾತ ಕೇಳುತ್ತವೆಯೆ ಅವು? ಆ ಹೈಕಳು ಯಾವುದಾರು ಹೆಣ್ಣ ಕೆಣಕಿ ಸಿಕ್ಕರೆ ಚಾವಡಿಗೆ ಎಳಸಿ ಬರೀ ನಿಕ್ಕರು ಮಾಡಿ ಕಂಬಕ್ಕೆ ಕಟ್ಟಿಸಿ ಸೆಬ್ಬದಲ್ಲಿ ಸಮಾ ಬಡಿಯುವಂಥ ಟೇಮಿಗೆ ಕಾದಿದ್ದಾರೆ. ಕೆಣಕದೆ ಇರುತ್ತಾವೆಯೆ ಎಂಬ ನಂಬಿಕೆಯು ಇದೆ.
ರೋಡು ಮಾಡಲು ಆರ್ಡರು:
ಇಂಥ ಸಂದರ್ಭದಲ್ಲಿ ಊರ ರೋಡಿಗೆ ಮೇಲಿಂದ ಆರ್ಡರು ಬಂತು. ಪಟೇಲರ ಮಯ್ಯಿ ಇದ್ದಷ್ಟೂ ಹಿಗ್ಗಿತು. ಕಿಚ್ಚು ಹತ್ತಿಕೊಂಡಂತೆ ಊರಿಗೆ ಸುದ್ದಿ ಹಿಡಿಯಿತು. ಈ ಸಂದರ್ಭದಲ್ಲೆ ಏಳೆಂಟು ವರ್ಷಗಳ ಕೆಳಗೆ ಊರಿಗೆ
ಮಿನಿಷ್ಟರು ಬಂದಿದ್ದನ್ನೂ ಪಟೇಲರೇ ಕೈಗೆ ನಿಂಬೆಹಣ್ಣು ಕೊಟ್ಟು ಹಾರಹಾಕಿ ತಮ್ಮ ಊರು, ಒಂದು ಊರು ಅನ್ನಿಸಿಕೊಳ್ಳಬೇಕಾದರೆ ಒಂದು ರೋಡು ಅನ್ನುವುದಾದರೂ ಇರಬೇಕೆಂದೂ ಮಾಸ್ವಾಮಿಯವರು ಮನಸು ಮಾಡಬೇಕೆಂದೂ ಬಿನ್ನೈ ಸಿಕೊಂಡಿದ್ದನ್ನು ನೆನಸಿಕೊಳ್ಳಬಹುದು. ಇಂದೇ ಪಟೇಲರು ನಂಜನಗೂಡು ಹತ್ತಿ ಸಂಜೆ ಮಾಡಿಕೊಂಡು ಊರಿಗೆ ಬಂದರು. ಬರುತ್ತ ನಮ್ಮ ಪಟೇಲರೆ ರೋಡಿಗೆ ಕಂಟ್ರಾಕ್ಟರೆಂದೂ ಇನ್ನು ತಿಂಗಳಾನುಗಟ್ಟಲೆ ಯಾರೂ ಕೆಲ್ಸಕ್ಕೆ ಕಯ್ಯಿಬಾಯಿ ನೋಡುವಂತಿಲ್ಲವೆಂದೂ ಮತ್ತು ಸರ್ಕಾರಿ ದುಡ್ಡಲ್ಲಿ ಮಿಗಿಸಿ ದೇವಸ್ಥಾನ ಊರ್ಜಿತಗೊಳಿಸುವರೆಂದೂ ಯಾರ ಹಟ್ಟಿಬಾಗಿಲು ತೆಗೆದರೂ ಸುದ್ದಿ ಆಯ್ತು.
ಊರ ಮುಂದಲು:
ಅದೆಲ್ಲ ಆಗಿ ಈಗ್ಗೆ ಬಹಳ ದಿನಗಳು ತಿಳಿಯದಂತೆ ಕಳದಿವೆ. ಈಗ ಊರ ಮುಂದಲು ಒಂದು ರಣರಂಗವೆ. ಹಿಂದೆ ನೋಡಿದಷ್ಟೂ ಎತ್ತರಕ್ಕೆ ಹಬ್ಬುತ್ತಿದ್ದ ಅರಳಿಮರಗಳು ಈಗ ನೆಲ ಕಂಡವೆ. ಹಿಂದೆ ಸೆಟೆದು ನಿಂತ ಅರಳಿಮರಗಳ ಮರೆಯಲ್ಲಿ ಊರ ಕಂಡವರಿಗೆ ಈಗ ಊರು ಬಿಕೋ ಅನ್ನಿಸಲೇಬೇಕು. ಅವು ಇದ್ದವು ಅನ್ನುವುದಕ್ಕೆ ಎಲ್ಲೂ ಎಳ್ಳಷ್ಟೂ ಸುಳಿವು ಕಾಣದು. ಅವು ಇದ್ದಂಥ ಸ್ಥಳದಲ್ಲಿ ಈಗ ಮಿಷನ್ನು ಓಡಾಡುತ್ತಿವೆ. ಆಳೆತ್ತರದ ಕಲ್ಲುಚಕ್ರದ ಮಿಷನ್ನುಗಳು ಹೊಗೆಬಿಟ್ಟು ಓಡಾಡುವ ಚಂದಕ್ಕೆ ಪಳ್ಳಿ ಹೈಕಳೇನು ಗಂಡಸು ಯಮ್ಕ ಅನ್ನದೆ ನೋಡುತ್ತಾ ತಮ್ಮ ಮರೆಯುವುದೂ ಉಂಟು. ಅಲ್ಲಿ ಎದ್ದೇಳುವ ಸದ್ದು ಊರ ಮೀರಿ ಆಚೆಗೂ ಹೋಗುವುದು. ದೂರದಿಂದ ನೋಡಿದ ಯಾವ ಮಗನಿಗೂ ಅಲ್ಲೋಲ-ಕಲ್ಲೋಲ ಆಗುತ್ತಿರುವಂತೆ ಕಾಣಬೇಕು. ಹತ್ತಿರ ಬಂದರೆ ಅದೇ ಊರಿನ ಜನರು. ಅವರೇ ಮಾತಾಡಿಸಿದರೆ ಅವರೇ ಎಂದು ತಿಳಿಯಬಹುದು. ಹೊರತು ಗುರುತು ಹತ್ತದಷ್ಟು ಅವರ ಯಾಸ ವರಸೆ ಬದಲಿಸಿಬಿಟ್ಟಿದೆ- ನೆಲಕ್ಕಂಟಿಕೊಂಡು ಕಪ್ಪಾಗಿರುವ ಟಾರಿಗಂಟಿಕೊಂಡು ಅವರು ಮೂಡಿದಂತೆ ಚಲಿಸಿದಂತೆ.
ಒಕ್ಕಡೆ ಕುಂತು ಹತ್ತಾರು ಯಮ್ಕ ತಲೆಗೆ ಸೆರಗು ಸುತ್ತಿಕೊಂಡು ಜಲ್ಲಿ ಕಲ್ಲು ಚಚ್ಚುತ್ತಿರುವರು. ಗುಂಪಲ್ಲೆ ಒಬ್ಬಳು ಸಣ್ಣದನಿ ಎತ್ತರಿಸಿ ‘ಸುವ್ವಿ ಬಾ ಚನ್ನ ಬಸವಯ್ಯ’ ಮೊಳಗಿಸುತ್ತಿರುವಳು. ಉಳಿದವರ ಕುಮ್ಮಕ್ಕು ಕೊಡುವ ಸೊಲ್ಲು ಅದ ಮೀರಿಸಿಕೊಂಡು ದೂರದಲ್ಲಿ ಕೆಲಸ ಮಾಡುವವರ ಆಚೆಗೂ ಕೇಳಿಸುವಂತೆ. ಕೆಲಸ ಮಾಡುವವರು ಕೆಲಸ ಮಾಡುತ್ತಾ ಫರ್ಲಾಂಗು ಉದ್ದ ಲವಲವಿಕೆ ತುಂಬಿದೆ. ಅಳತೆ ಮಾಡುವುದು ಅದ ಅಗೆಯುವುದು ಅಗೆದು ಸಮಮಾಡುವುದು ಸಮಮಾಡಿ ನೀರು ಚಿಂಪರಿಸಿ ಹದ ಮಾಡಿದ ಜಲ್ಲಿಟಾರ ಕೈ ಬಂಡಿಯಿಂದ ಎಳೆದು ತಂದು ಸುರಿಯುವುದು, ಸುರಿದುದ ಹರಡುವುದು ಒಕ್ಕಡೆ. ಹಿಂದಕ್ಕೂ ಮುಂದಕ್ಕೂ ಹೋಗುವ ಬರುವ ಮಿಷನ್ನು. ಸಮಾ ಮಾಡುವ ದಗ್ ದಗ್ ಮಿಷನ್ನು, ಬೆಂಕಿ ಉಗುಳುತ್ತ ಜೆಲ್ಲಿ ಟಾರು-ಮರಳ ಒಕ್ಕೂಡಿಸುವ ಮಿಷನ್ನು. ಯಾವುಯಾವುದಕ್ಕೂ ಮಿಷನ್ನು. ಎಷ್ಟಂತ ಹೇಳುವುದು. ಎಲ್ಲವೂ ಕಪ್ಪುಕಪ್ಪಗೆ ಯಾಸ ತಾಳಿ ಮೇಲೇಳುತ್ತಿದೆ. ಅಳತೆ ಮಾಡುವಲ್ಲಿ ಪಟೇಲರು ಕೈಕಟ್ಟಿ ನಿಂತಿರುವರು.
ಕೈಯ್ಗೆ ಬಾಯ್ದೆ ಟಾರು:
ಹೈಕಳು ಅಂದರೆ ಎಲ್ಲ ಊರಿನವೂ ಒಂದೆ. ಪಳ್ಳಿ ಬಿಟ್ಟಮೇಲೆ ಅವು ಇಲ್ಲಿ ಜಮಾಯಿಸುತ್ತವೆ. ದೊಡ್ಡವರು ಗದರಿಸಿದಾಗ ದೂರ ಹೋಗುತ್ತವೆ ಅವರು ಎತ್ತಗೊ ತಿರುಗಿದಾಗ ಮತ್ತದೆ. ಒಟ್ಟಲ್ಲಿ ಹೈಕಳೆಲ್ಲ ಸಂಜೆ ಮಾಡುವುದು ಟಾರು ಕಾಯ್ಸುವಲ್ಲೆ. ಕತ್ತಲು ಇಳಿದು ಶಾಣೆ ಹೊತ್ತಾದರೂ ಹಟ್ಟಿ ಮುಟ್ಟವು. ದೊಡ್ಡವರೆ ಊರ ಮುಂದಲಿಗೆ ಬಂದು ಅವಕ್ಕೆ ನಾಕು ಬಡಿದಾರು ತಂತಮ್ಮ ಜತೆ ಕರಕೊಂಡು ಹೋಗಬೇಕು. ಬಂದವರೂ ರೋಡು ಆಗುವ ಅದ್ಭುತವ ಚಣೊತ್ತಾರು ನೋಡದೆ ಹೋಗರು. ಹಟ್ಟಿಕಡೆ ತಿರುಗಲು ಹೈಕಳ ಕೈ ಹಿಡಿದರೆ ಅವುಗಳ ಕೈ ಟಾರು ದೊಡ್ಡವರಿಗೂ ಮೆತ್ತಿಕೊಳ್ಳುವುದು. ರಂಗಪ್ಪ ಎಂಬಾತ ತನ್ನ ಮಗನ ಕರೆದೊಯ್ಯಲು ಬಂದಾಗಲೂ ಹಂಗೆ ಆಯ್ತು. ಅವ ರೇಗಿ ಮಗನಿಗೆ ಮೇಷ್ಟ್ರು ಕಲಿಸಿಕೊಡೋದು ಇದ? ಎಂದು ನಾಕು ಬಿಗಿದ. ಅದು ದೊಡ್ಡಗೆ ಬಾಯಿ ತೆಗೆದು ಅಳಲು ಸುರು ಮಾಡಿ ನಿಲ್ಲಿಸಲೇ ಇಲ್ಲ. ರಂಗಪ್ಪನಿಗೆ ಸಹನೆ ಮೀರಿ ಬಾಯಿಗೂ ಒಂದೇಟು ಕೊಟ್ಟಾಗ ಆ ಹೈದು ಅಳು ಜೋರು ಮಾಡುತ್ತ ತನ್ನ ಎರಡು ಕೈಯನ್ನೂ ಬಾಯಿಗೆ ತಂದುಕೊಂಡಿತು. ಕೈಯ್ಗಳ ಟಾರು ಬಾಯಿಗೆ ಬಂದು ಬಾಯಿ ಬಿಡದಂತಾಗಿ ಅಳು ನಿಂತಿತು. ಹೀಗೆ ಇಂಥವು, ಸಂಜೆ ಆಗುತ್ತ. ಮತ್ತೂ ಅಂದರೆ ಯಮ್ಕ ಕೆಲಸ ಬಿಟ್ಟು ಏಳುವಾಗ ಟಾರನ್ನು ಉಂಡೆ ಮಾಡಿ ಕೈಯ್ಗೆ ತಕ್ಕೊಳ್ಳುವುದು ರೂಢಿ. ಯಾರೋ ಒಬ್ಬಳು ತೂತುಮಡಕೆಗೆ ಟಾರುಮೆತ್ತಿ ಸುರಿಯುವುದು ಏಕ್ ದಂ ನಿಂತುಹೋಯ್ತಂತೆ. ಇದಾದ ಮೇಲೆ ಇಂಥದು ಊರ ಯಾವ ಮೂಲೇಲಿ ಆದರೂ ಅಲ್ಲಿಗೆ ಟಾರು ಹೋಗುತ್ತದೆ. ಅಥವಾ ತಂದಿಟ್ಟಿರುವ ಮನೆಯಿಂದ ಈಸಿಕೊಳ್ಳುವಷ್ಟು ಚಲಾವಣೆ ಇದೆ.
ಓದುಗರ ಓಲೆಗೊಂದೋಲೆ:
ದೊಡ್ಡ ಮಿಷನ್ನು ನಡೆಸುವ ಒಬ್ಬಾತ ಸೆಳಕಿನವನು ಅಲ್ಲುಂಟು. ಅವ ನಂಜನಗೂಡಿಂದ ದಿನಾ ಬಂದು ಹೋಗುವುದು ಮಾಡುತ್ತಾನೆ. ಅಂದು ಅವ ಕೈಲಿಡಿದು ಬಂದಿದ್ದ ಪೇಪರಲ್ಲಿ ತಮ್ಮ ಊರ ಸುದ್ದಿ ಬಂದಿದೆಯಂತೆ ನಿಜವೆ ಎಂದು ಗುಲ್ಲು ಎದ್ದು ಯಾರೂ ಯಾವ ಕೆಲಸಕ್ಕೂ ಕೈಹಾಕದೆ ಸೆಳಕಿನವನ ಸುತ್ತಲೂ ಗುಂಪುಗೂಡಿದರು. ಪಟೇಲರು ತುಂಬವೆ ಬಿಸಿ ಆಗಿದ್ದರು. ಬಂದಿದ್ದ ಊರಸುದ್ದಿ ಹಿಂಗಿತ್ತು:
ಸ್ವಾಮಿ, ನಮ್ಮೂರಿಗೆ ರೋಡು ಆಗಬೇಕೆಂದು ದೊಡ್ಡ ಮನಸು ಮಾಡಿ ಸರ್ಕಾರ ನಡೆಸಿಕೊಡುತ್ತಿರುವುದೂ ಈಗ ರೋಡು ಆಗುತ್ತಿರುವುದೂ ಸರಿಯಷ್ಟೆ. ಆದರೆ ಈ ರೋಡಿನ ಕಂಟ್ರಾಕ್ಟರಾದ ಪಟೇಲರು ಸರ್ಕಾರಿ ದುಡ್ಡಲ್ಲಿ ಮಿಗಿಸಿ ದೇವಸ್ಥಾನ ಊರ್ಜಿತಗೊಳಿಸುತ್ತಾರೆಂದು ತಿಳಿದುಬಂದಿದೆ. ಏನೇ ಆಗಲೀ, ಇದು ಸರ್ಕಾರಿ ಹಣದ ದುರುಪಯೋಗ. ಇಂಥಹದು ಆಗದಂತೆ ತಡೆಗಟ್ಟಬೇಕೆಂದು ನಾವು ಸಂಬಂಧಪಟ್ಟವರಲ್ಲಿ ಪ್ರಾರ್ಥಿಸುತ್ತೇವೆ- ನೊಂದವರು.
ನ್ಯಾಯಕ್ಕೆ ಹೇಳಿದರು:
ಅಂದು ರೋಡಿನ ಕೆಲಸ ನಡೆಯಿತು ಅಂತ, ನಡೆಯಲಿಲ್ಲ ಅಂತ ಏನು ಅಂತ ಕರಾರುವಾಕ್ಕು ಹೇಳಲು ಬರುವುದಿಲ್ಲ. ನಡೆದರೂ ನಡೆಯದಂತೆ ನಡೆಯಿತು ಅನ್ನಬಹುದೆ? ಎಂತೆಂತದೊ ಆಗಬೇಕಾದ್ದು ಎಂತೆಂತದೊ ಆಗತೊಡಗಿದೆ. ಏನಾಗುತ್ತೊ ಅಂತ ಊರ ಬೀದಿ ಒಳಗ ಭಯ ಹರಿದಾಡಿತು. ಸಂಜೆ ಆಗುತ್ತ ಆಗುತ್ತ ಅದು ಹೆಚ್ಚು ಹೆಚ್ಚು ದಪ್ಪ ಆಗುತ್ತಿತ್ತು. ನ್ಯಾಯಕ್ಕೆ ಮನೆಗೊಂದಾಳು ಛಾವಡಿಗೆ ಬರಬೇಕೆಂದು ಪಟೇಲರು ತಮ್ಮಟೆ ಬಡಿಸಿ ಸಾರಿಸಿದರು. ಈಗ ಈಗಷ್ಟೆ ಕತ್ತಲು ನಿಧಾನ ನೆಲಕ್ಕೆ ಇಳಿಯುತ್ತಿದ್ದುದು ಈಗತಾನೆ ಪೂರ್ತ ಅಗತುಕೊಂಡಿತು. ಹೊರಗ ನಡೆದಾಡಿದರ ಒಬ್ಬರ ಮೊಖ ಒಬ್ಬರಿಗೆ ಕಾಣದಷ್ಟು ಗವ್ವ. ಹಟ್ಟಿ ಕಿಂಡಿಗಳಿಂದ ಮಂಕು ದೀಪದ ಬೆಳಕು ಹೊರಕ್ಕೆ ನೆಸೆದು ಕತ್ತಲೊಳಗಾಗುತ್ತಿತ್ತು.
ಚಾವಡಿ:
ಚಾವಡಿ ಒಳಗ ಲಾಟೀನು ದೊಡ್ಡತಗೆ ಹೊಗೆ ಬೆಳಕು ಕಕ್ಕುತ್ತ ಅದೆ. ಆಗಲೇ ನಾಲ್ಕು ಉಂಡಾಡಿಗಳು ತಮಗೆ ಯಾವುದೂ ಸಂಬಂಧ ಇಲ್ಲದವರಂತೆ ಯಾಸ ಹಾಕಿ ಮಲಗಿಬಿಟ್ಟವರೆ. ಅಲ್ಲಿಗೆ ಒಬ್ಬರಾಗಿ ಒಬ್ಬರಾಗಿ ಜನ ಕೂಡಿಕೊಳ್ಳುತ್ತಿದೆ. ಹೆಚ್ಚು ಹೆಚ್ಚು ಕೂಡಿದಂತೆ ಗಲಗು ಗದ್ದಲ ಹೆಚ್ಚಾಗುತ್ತಿದೆ. ಚಣೊತ್ತು ಕಳೆದ ಮೇಲೆ ಅಲ್ಲಿಂದ ಹಾಹೋ ಹೊ ಹೊ ಎದ್ದು ಊರ ಮುಳುಗಿಸತೊಡಗಿತು. ಪಟೇಲರು ನಡುಮಧ್ಯೆ ಕುಂತವರೆ. ಲಾಟೀನು ಬೆಳಕು ನೇರ ಅವರ ಮೊಖಕ್ಕೆ ಬೀಳುತ್ತಿತ್ತು. ಅವರ ಮೊಖದಲ್ಲಿ ತೆಳ್ಳಗೆ ಬೆವರಾಡುವುದನ್ನೂ ಹಣೆಯ ನೆರಿಗೆ ಎದ್ದು ಮಾಯವಾಗಿ ಎದ್ದು ಹೋಗುವ ಬಗೆಯನ್ನೂ ಕಾಣಬಹುದು. ದೂರದ ಮೂಲೆಯಲ್ಲಿ ಕುಂತವರು ಯಾರಾರು ಅಂತ ಬೀಡಿ ಹಚ್ಚಿದಾಗ ಆ ಬೆಳಕಲ್ಲಿ ಗುರುತಿಸಬಹುದು. ಅಂಥ ಕಿಕ್ಕಿರಿದಷ್ಟು ಜನರು.
ಒಬ್ಬ: ಸುರು ಮಾಡ್ರಪ್ಪೋ.
ಇನ್ನೊಬ್ಬ: ಎಲ್ಲರ್ಗು ಗೊತ್ತಿರೋದೆ ಅದು. ಇನ್ನೇನ ಸುರುಮಾಡೋದು? ಪೂಜ ಮಾಡೋದ ಬಿಟ್ಟು.
ರಾಜಪ್ಪ: ಏನಣ್ಣ ಹಂಗಂದ್ರ ಅರ್ಥ.
ಮತ್ತೊಬ್ಬ: ಅರ್ಥಗಿರ್ಥ ನಿಮಗ್ತಾನಿಯಪ್ಪ ಗೊತ್ತು. ನಾವೇನ ಇಸ್ಕೊಲ್ಲೋಗಿ ಮಂಟಾಕಿದ್ದವ?
ಶಾನುಭೋಗರು: ವಸಿ ಸುಮ್ಕಿರಯ್ಯ. ಮಾತಾಡಿ ಪಟೇಲ್ರೆ ನೀವು.
ಪಟೇಲರು: ಮಾತಾಡೋದು ಏನಿದ್ದದು ಹೇಳಿ.
ಶಾನುಭೋಗರು: ಕಾಗ್ದ ಬರ್ದು ಊರ್ನ ಮಾನ ತೆಗೆದವರು ನೀವುಗಳೆ ಅಂತ ಎಲ್ಲರ್ಗೂ ಗೊತ್ತು. ಅದ ಒಪ್ಪೋ ಥರ ಅವ್ರಿ ತಾನೆ ನೀವುಗಳು. (ಲಕುಮ ರಾಜಪ್ಪ, ಶಂಭು, ಮಾದು ಕಡೆ ಶಾನುಭೋಗರು ನೋಡುವರು. ಹೌದು ಎಂಬಂತೆ ಅವರು ತಲೆ ಆಡಿಸುವರು. ಹೊರಗೆ ಇದ್ದವರ ಎದೆಗೆ ಗುದ್ದುವಂತೆ ಗದ್ದಲ ಎದ್ದು ಹೊರ ಬರುವುದು.)
ಪಟೇಲರು: ಅದ್ರಲ್ಲಿ ಏನಯ್ಯ ನೀವುಗಳು ಅನ್ಯಾಯ ಕಂಡದ್ದು?
(ಪಟೇಲರ ಮಾತುಗಳಷ್ಟೆ ಒಡೆದು ಕೇಳಿಸುವುದು. ಯಾರೂ ತುಟಿಪಿಟಕ್ಕೆನ್ನುವುದಿಲ್ಲ.)
ರಾಜಪ್ಪ: ಯಾವ ಹಣಾನೊ ಯಾವುದಕ್ಕೋ ಹಾಕದ್ರ ಇನ್ನೇನ ಆಗೋದು?
(ಸದ್ದು ಏಳುವುದು. ಶಾನುಭೋಗರು ಕೈಯಾಡಿಸುವರು. ಸದ್ದು ನಿಧಾನ ಕಮ್ಮಿಯಾಗುವುದು.)
ಪಟೇಲರು: ನಾಯಾನ ನನ್ನ ಇರೊ ಮಕ್ಕಳ್ಗಾಗಿ ಹಣ ತಿಂದ್ನೊ. ಊರ್ಗಾಗಿ ದೇವ್ರ ಕೆಲ್ಸಕ್ಕಾಗಿ ಹಂಗ ಮಾಡ್ದನೊ?
ಮಾದು: ನೀವು ಯಾಕಾರು ಮಾಡಿ ಸ್ವಾಮಿ. ಆದ್ರ ಮಾಡೊ ಅಂಥದಕ್ಕ ಮಾಡ್ನಿಲ್ಲ.
(ಸದ್ದು ಏಳುವುದು. ಮುನ್ನಿಗಿಂತ ಜೋರಾಗೆ. ಯಥಾಪ್ರಕಾರ ಶಾನುಭೋಗರು. ಈ ಸಲ ಒಂದಿಬ್ಬರು ಎದ್ದೂ ನಿಲ್ಲುವರು.)
ಒಬ್ಬ: ನಿಮ್ ದೇವ್ರು ದಿಂಡ್ರು ಹಿರೀಕರು ಅಂತ ಒಬ್ರೂ ಇಲ್ವಾ?
ಇನ್ನೊಬ್ಬ: ಇದ್ರ ಈ ಯಪಾರ ಮಾಡ್ತ ಇದ್ವ ಅವು?
ಮತ್ತೊಬ್ಬ: ಹಿಡ್ಕಂಡು ನಾಕ ಬಡೀರುಡ. ಸರಿಯಾಯ್ತದ. ಕೇಮಿಲ್ಲೆ ಮಾತಾಡಿ.
ರಾಜಪ್ಪ ಶಂಭು ಶಂಭುಅಪ್ಪ: ಯಾರಪ್ಪ ಅವ? ಬಡೀರಿ ಬನ್ನಿ ಮತ್ತ. ಅದ್ರೂ ನೋಡವು. ನಿಮ್ಮ ಮೂಗ್ನ ನ್ಯಾರಕ ನಿಮ್ಗ ಸರಿ.
ಪಟೇಲರು: (ದನಿ ಎತ್ತರಿಸಿ) ನೀವ್ಗಳು ಮಾಡಿದ್ದೇ ಬೋ ಸರಿ ಕಣ್ರಯ್ಯೋ.
ಶಂಭು: ನೀವು ಮಾಡಿದ್ದೆ ನಿಮ್ಮ ಸರಿ. ಅದ್ಯಾಕ ಮಾತು?
ಪಟೇಲರು: ಅದೇನ್ರಲ? ಅಷ್ಟೂ ಧಿಮಾಕ್ನ ಮಾತ ಆಡ್ತ ಅವ್ರಿ. ಅಷ್ಟು ಸದರ ಬಿದ್ದೋಗಿದ್ದನ, ನಾನು?
ಎಂದು ಪಟೇಲರು ಕೈ ಬಿಗಿ ಹಿಡಿದುಕೊಂಡು ತಟಕ್ಕ ಎದ್ದು ನಿಂತರು. ಆ ರಭಸಕ್ಕೆ ಲಾಟೀನಿಗೆ ತಲೆ ಬಡಿದು ಗಾಜು ಒಡೆದು ಟಳ ಟಳ ನೆಲಕ್ಕೆ ಉದುರಿತು. ಲಾಟೀನ ಬೆಳಕು ಹಾರಾಡಿ ಹಾರಾಡಿ ಕೊನೆಗೆ ಜೀವ ಹೋಗಿ ಕತ್ತಲು ಅಮರಿಕೊಂಡಿತು. ಆ ಕ್ಷಣವೆ ಹಾ ಹೊ ದಬ್ ದಬ್ ಬಯ್ಸಳು ತುಂಬಿಕೊಂಡವು. ಆದಷ್ಟು ಬೇಗ ಚಾವಡಿಯಿಂದ ಕಿತ್ತುಕೊಂಡು ಹೊರಕ್ಕೆ ಹೋಗಿಬಿಡಲು ಎಲ್ಲ ಹವಣಿಸಿದರು. ಹಿಂಗೆ ಚಣೊತ್ತು ನಡೆದು ಅಲ್ಲಿಂದ ಆಮೇಲೆ ಎಲ್ಲ ನಿಂತುಹೊಯ್ತು. ಊರ ಹಟ್ಟಿದಾರಂದಗಳು ಮುಚ್ಚಿಕೊಂಡು ಬಿಟ್ಟವು.
ಹೊಸೂರ ಹೊಸ ಮಾತು:
ಊರು ಇನ್ನೂ ಮಲಗೇ ಇದೆ ಅನ್ನಬಹುದು. ರಾತ್ರಿ ಆದದ್ದ ಕನಸ ಕಾಣುತ್ತ ಇರಬಹುದು. ಕನಸ ಕೆಡಿಸಲೊ ಎಂಬಂತೆ ಆಜುಬಾಜಿನ ಹೊಸೂರಿನವನೊಬ್ಬ ಊರ ಮೇಲೆ ಮೊಬ್ಬಿಗೇ ಹಾದು ಹೋದನು. ಅವ ಬಿಟ್ಟುಹೋದ ಮಾತುಗಳು ಊರ ಬೀದಿಗುಂಟ ತೆವಳತೊಡಗಿದವು: ಸ್ವಾಮಿ, ನಾನು ಹೊಸೂರಿನವನು. ನಮ್ಮೂರಲ್ಲಿ ಒಬ್ಬಳು ಕಲಕೆತ್ತಿ ಹೆಣ್ಣು ಇದ್ದಳು. ಅವಳು ತುಂಡು ಹೈಕಳ ಕೆಡಿಸುತ್ತಾ ಇದ್ದುದು ಹಿಂದಿನಿಂದಲೂ ನಡೀತಾ ಇದ್ದುದೆ. ಹೇಳುವವರು ಎಷ್ಟು ದಿನಾಂತ ಹೇಳುವರು? ಅವಳಿಗೆ ಅವಳದೆ. ಬಯ್ದು ಹೇಳಿ ನೋಡಿದರು. ಅವಳಿಗೆ ಅವಳದೆ. ಕೊನೆಗೆ ಮಾಡುವುದನ್ನೆ ಮಾಡಿದರು. ನ್ಯಾಯಕ್ಕೆ ಕೂಟ ಸೇರಿಸಿ ಅವಳ ಸೆಳತಂದರು. ಅಲ್ಲೂ ಅವಳು ಮೈತುಂಬ ರೋಪು ಮಾಡಿದಳು. ರೇಗು ಹತ್ತಿದವರು ಸುಮ್ಮನಿರಲಿಲ್ಲ. ಅವಳು ಹೊಟ್ಟೇಲಿ ಹುಟ್ಟಿದ ರೂಪ ಮಾಡಿ ಹುಣಿಸೆ ಸೆಬ್ಬದಲ್ಲಿ ಬಡಿದು ಅವಳಿಗೆ ಹುಟ್ಟಿದ ದಿನ ಕಾಣಿಸಿಬಿಟ್ಟರು.
ಅಷ್ಟಕ್ಕೂ ಅವಳು ಸುಮ್ಮನಿರಲಿಲ್ಲ. ಆ ಮೊಖ ಎತ್ತಿಕೊಂಡೆ ಪೋಲೀಸು ಸ್ಟೇಷನ್ನಿಗೆ ನಡೆದಳು. ಹಿಂಗಾಯ್ತು ಹಿಂಗಾಯ್ತು ಅಂತ ಎಲ್ಲ ಬಿಚ್ಚಿ ಹೇಳಿಕೊಂಡಳಂತೆ. ಆಮೇಲಿಂದ ಪೋಲಿಸ್ನೊರು ವ್ಯಾನಲ್ಲಿ ಬಂದು, ಇದ್ದ ಬದ್ದ ಯಜಮಾನರುಗಳ ಹಿಡಕಂಡುಹೋದರು. ಮುಂದ ಏನಾಯ್ತು ಎತ್ತ ಅಂತ ಯಾರ್ಗೂ ಗೊತ್ತಿಲ್ಲ. ರಾತ್ರಿ ಆದ ಗಲಭೆಗೆ ಹೊಸೂರ ಸುದ್ದಿ ಕೂಡಿಕೊಂಡು ಊರು ರಂಗಾಗಿ ಮೇಲೆದ್ದಿತು. ಆದುದಕ್ಕೆ ಅಂದುಕೊಂಡದ್ದು. ಪಟೇಲರು: ಆ್ಞ, ಶಾನುಭೋಗರು: ಓ್ಞ. ನಾಲ್ವರು: ಮಕ್ಕಳು ಪಾಳೆಗಾರಿಕೆ ಮಾಡ್ತ ಇದ್ವು, ಗತಿ ಕಂಡ್ವು. ಒಬ್ಬ: ಆಯ್ ಸಿವ್ನ. ಗುಂಡಿಗೆ ಟಾರು ರಾತ್ರೋ ರಾತ್ರಿ:
ಅಷ್ಟೆಲ್ಲ ಆದದ್ದು ಅಷ್ಟಕ್ಕೇ ನಿಲ್ಲಲಿಲ್ಲ. ಟಾರಿನ ಡ್ರಮ್ಮುಗಳನ್ನು ಕಾಯಿಸಿ ಊರ ಮುಂದಲು ಇಟ್ಟಿದ್ದು ಸರಿಯಷ್ಟೆ. ಬೆಳಿಗ್ಗೆ ನೋಡಲು ಅವಾವು ಒಂದೂ ಅಲ್ಲಿ ಇರಲಿಲ್ಲ. ಅವು ಹೋದ ದಿಕ್ಕು ಹಿಡಿದು ಹೋಗಿ ನೋಡಿದರೆ ಅವು ಊರಾಚೆಗಿನ ಒಂದು ಗುಂಡಿಯ ಸುತ್ತ, ಇರೋ ತಮ್ಮ ಬಾಯಿಯ ಇದ್ದಷ್ಟೂ ಅಗಲಿಸಿಕೊಂಡು ಒಳಗಿನ ಟಾರನ್ನು ಹಿಂಟುಹಿಂಟಾಗಿ ಕಪ್ಪಗೆ ಗುಂಡಿಗೆ ಕಕ್ಕುತ್ತಾ ಬಿದ್ದಿದ್ದವು. ಮೇಲಿಂದ ಬಿಸಿಲು ಏರುತ್ತ ಏರುತ್ತ ಗುಂಡಿಗೆ ಟಾರು ಇಳಿಯುತ್ತ ಇಳಿಯುತ್ತ ಸುತ್ತ ನೋಡುತ್ತ ನಿಂತವರು ನೋಡುತ್ತಲೇ ನಿಂತರು. ನೋಡದವರು ನೋಡಲು ಹಿಂಡು ಹಿಂಡು ಬಂದರು. ನೋಡಿ ನೋಡಿ ಕಣ್ಣಿಗೆ ಕಪ್ಪು ಹಿಡಿಯಲು ಕಾಲು ತೆಗೆಯುವರು. ಯಾರ ಬಾಯಲ್ಲು ಮಾತಿಲ್ಲ.
ಪಟೇಲರ ಬಾಯಲ್ಲು ಮಾತಿಲ್ಲ. ಒಬ್ಬ ಪಟೇಲರಿಗೆ ನೀವು ಹ್ಞೂ ಅನ್ನಬೇಕಿತ್ತು, ಮಕ್ಕಳಿಗೆ ರಾತ್ರೀನೆ ಹುಟ್ಟಿದ ದಿನ ಕಾಣಿಸಬಹುದಿತ್ತು ಅಂದನು. ಪಟೇಲರು ಅದಕ್ಕೂ ಅವುಡು ಕಚ್ಚಿದರು. ಮಾತಾಡಲಿಲ್ಲ. ಪೋಲೀಸು ಸ್ಟೇಷನ್ನಿಗೆ ಅಲ್ಲಿಂದಲೆ ಹಾಗೆ ಹೋದರು. ಬಂದದ್ದು ಸಂಜೆಯಲ್ಲೆ. ನಾಳೆ ಮೊಬ್ಬಿಗೆ ಪೋಲೀಸಿನವರು ಬಂದು ಮಹಜರು ಮಾಡಿಕೊಂಡು ಹೋಗುವರೆಂದೂ ಮುಂದಣ ಕತೆ ಹೆಂಗಾಗುವುದೆಂದು ಯಾರಿಗೂ ತಿಳಿಯದೆಂದೂ ತಿಳಿದುಬಂತು.
ಪಳ್ಳಿಗೆ ಹೋದವ ಬರಲಿಲ್ಲ:
ಹಿಂಗೆ ಒಂದರ ಮೇಲೊಂದು ಬಿದ್ದು ಕಪ್ಪಗೆ ಹಿಗ್ಗುತ್ತಾ ಹೋಗುತ್ತಿದ್ದ ಇಂಥದಕ್ಕೆ ಕೂಡಿಕೊಳ್ಳಲು ಊರಿಗೆ ಕತ್ತಲು ಹಿಡಿಯುವುದನ್ನೆ ಕಾಯುತ್ತ ಮತ್ತೊಂದು ಕಾದು ಕುಂತಿತ್ತು. ಮುಸ್ಸಂಜೆಗೆ ಎಲ್ಲರ ಹಟ್ಟಿದಾರಂದಗಳೂ ಮುಚ್ಚಿ ಬೀದಿ ಒಳಗ ನರಪಿಳ್ಳೆಯ ಸುಳಿವಿಲ್ಲದಿದ್ದರೂ ರಂಗಪ್ಪನ ಹೈದ ಮಾತ್ರ ಹಟ್ಟಿ ಕಂಡಿರಲಿಲ್ಲ. ಪಳ್ಳಿಗೆ ಮಧ್ಯಾಹ್ನ ಉಂಡುಹೋದುದಂತೆ. ಮೇಷ್ಟರನ್ನು ಕೇಳಿದರು. ಹಟ್ಟಿಕಡೆ ಹೊಂಟುದ ತಾವು ಖುದ್ದು ಕಂಡೆ ಅಂದರು. ಹೊಂಟ ಕಡೆಗೆ ಹೊಂಟೇಬಿಡುವ ಬೆಪ್ಪು ಹೈದ ಅದು. ಲಾಟೀನು ಈಸಿಕೊಂಡು ಹಟ್ಟಿ ಹಟ್ಟಿ ತಟ್ಟಿ ಬಂದು ಆಯ್ತು. ಅವ ಆಡುವ ಗೆಣಕಾರರ ಕೇಳಿ ಆಯ್ತು. ಎಲ್ಲರೂ ಕಂಡಿದ್ದೆವು ಅನ್ನುವವರೆ. ಯಾವ ಕೇರಿ ಯಾವ ಬೀದಿಯನ್ನೂ ಬಿಡಲಿಲ್ಲ. ಹಿಂಗೇ ಎಷ್ಟೊತ್ತು ಆಯ್ತೋ. ಆ ಹೈದನ ಅವ್ವನ ಅಳು ಸದ್ದಡಗಿದ ಊರಲ್ಲಿ ರಾಗವಾದ ಸದ್ದಾಗಿ ಸಮರಾತ್ರಿ ಮೀರಿಯೂ ಇತ್ತು.
ಮಹಜರು:
ಮೊಬ್ಬಿಗೇ ಪೋಲೀಸು ವ್ಯಾನು ಕಷ್ಟಪಟ್ಟುಕೊಂಡು ಊರಮುಂದು ಬಂದು ನಿಂತಿತು. ನೋಡಬಂದವನಿಗೆ ಪಟೇಲರ ಕರೆತರುವಂತೆ ಇನ್ಸ್ಪೆಕ್ಟರು ಕಳಿಸಿದರು. ಪಟೇಲರು ತಡಬಡಾಯಿಸಿಕೊಂಡು ಬಂದು ನಿಂತರು. ಎಲ್ಲರೂ ಊರಾಚೆಗಿನ ಟಾರು ಗುಂಡಿ ಹತ್ತಿರ ಬಂದು, ನೋಡಿ, ನೋಡಿದಾಕ್ಷಣ ಚಕ್ಕ ನಿಂತುಬಿಟ್ಟರು. ರಂಗಪ್ಪನ ಹೈದನ ಕಾಲುಗಳನ್ನು ಗುಂಡಿಗೆ ಇಳಿದಿದ್ದ ಟಾರು ಹಿಡಿದುಕೊಂಡಿತ್ತು. ಎರಡು ಕೈಗಳನ್ನು ಟಾರಿನ ಡ್ರಮ್ಮು ಕಚ್ಚಿಕೊಂಡಿತ್ತು. ಮಯ್ಯಿ ಕಯ್ಯಿ ಮೊಖ ಅನ್ನದೆ ಟಾರು ಟಾರಾಗಿತ್ತು. ಮತ್ತೂ ಹತ್ತಿರದಿಂದ ನೋಡಿದರೆ ಆ ಹೈದನ ಮಯ್ಯೊಳಗ ಇನ್ನೂ ಜೀವ ಆಡುತ್ತಿತ್ತು.