“ಪಂಕ್ತಿಭೇದ ಶಿಕ್ಷಣದಿಂದ ಐಕ್ಯ ಭಾರತಕ್ಕೆ ಅಡ್ಡಿ….” -ಟೈಮ್ಸ್ ಸಾಹಿತ್ಯೋತ್ಸವದಲ್ಲಿ ಸಾಹಿತಿ ದೇವನೂರು ವಿಷಾದ
(ಬೆಂಗಳೂರಿನಲ್ಲಿ 1.2.2015ರಂದು ನಡೆದ ಟೈಮ್ಸ್ ಸಾಹಿತ್ಯೋತ್ಸವದಲ್ಲಿ ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಇಂಗ್ಲಿಷ್ ಅನುವಾದ ಕೃತಿ ಬಿಡುಗಡೆಗೊಂಡಿತು. ಅನುವಾದಕಿ ಸೂಸನ್ ಡೇನಿಯಲ್ ಉಪಸ್ಥಿತರಿದ್ದರು. ಇದರೊಂದಿಗೆ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಸುಗತ ಶ್ರೀನಿವಾಸರಾಜು ಅವರು ಮಹಾದೇವ ಅವರೊಂದಿಗೆ “ಬದುಕು,ಸಾಹಿತ್ಯ ಹಾಗೂ ರಾಜಕೀಯ” ವಿಷಯ ಕುರಿತು ಸಂವಾದ ನಡೆಸಿಕೊಟ್ಟರು. ಆ ಸಂದರ್ಭದ ವಿಜಯಕರ್ನಾಟಕ ವರದಿ ನಮ್ಮ ಮರು ಓದಿಗಾಗಿ ಇಲ್ಲಿದೇ….)
ನಮ್ಮಲ್ಲಿನ ಪಂಕ್ತಿ ಭೇದ ಶಿಕ್ಷಣ ಪದ್ಧತಿಯಿಂದ ಐಕ್ಯ ಭಾರತ ನಿರ್ಮಾಣಕ್ಕೆ ಅಡ್ಡಿಯಾಗಿದೆ. ಇದರಿಂದ ನಮ್ಮನ್ನು ಇನ್ನೂ ಗುಲಾಮಗಿರಿಯ ಕರಿನೆರಳು ಆವರಿ ಸಿದಂತೆ ಕಾಡುತ್ತಿದೆ ಎಂದು ಸಾಹಿತಿ ದೇವನೂರು ಮಹಾದೇವ ವಿಷಾದಿಸಿದರು.
ನಗರದ ಜಯಮಹಲ್ ಪ್ಯಾಲೇಸ್ ಹೋಟೆಲ್ ಆವರಣದಲ್ಲಿ ಭಾನುವಾರ ನಡೆದ ಟೈಮ್ಸ್ ಸಾಹಿತ್ಯೋತ್ಸವದಲ್ಲಿ ‘ವಿಜಯ ಕರ್ನಾಟಕ’ ಪತ್ರಿಕೆಯ ಸಂಪಾದಕರಾದ ಸುಗತ ಶ್ರೀನಿವಾಸರಾಜು ಅವರೊಂದಿಗೆ ‘ಬದುಕು, ಸಾಹಿತ್ಯ ಹಾಗೂ ರಾಜಕೀಯ’ ವಿಷಯ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಅನ್ಯ ಭಾಷೆ, ಸಂಸ್ಕೃತಿಯ ವಿರುದ್ಧದ ಹೋರಾಟಕ್ಕೆ ಸೈ ಎನ್ನುವ ನಾವು, ಮಾತೃಭಾಷೆ ಕಲಿಕೆಗಾಗಿ ಚಳವಳಿ ನಡೆಸುವಂತಹ ಪ್ರಸಂಗ ಬಂದಾಗ ಮೌನ ವಹಿಸುತ್ತೇವೆ. ಇದು ದೊಡ್ಡ ದುರಂತ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಮಾತೃಭಾಷೆ ಸಾರ್ವಭೌಮತ್ವ ಪಡೆದಿದೆ. ಆದರೆ, ನಮ್ಮ ದೇಶದಲ್ಲಿ ಮಾತ್ರ ಪಂಕ್ತಿಭೇದ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿದೆ. ಎಲ್ಲ ಧರ್ಮ ಜಾತಿಯ ಮಕ್ಕಳು ಒಂದೆಡೆ ಬೆರೆತು ಅಕ್ಷರ ಕಲಿಯದಿದ್ದಲ್ಲಿ ಹೇಗೆ ಐಕ್ಯ ಭಾರತ ನಿರ್ಮಾಣ ಮಾಡಲು ಸಾಧ್ಯ?” ಎಂದು ಅವರು ಪ್ರಶ್ನಿಸಿದರು.
ಸರಕಾರದ ಮೇಲೆ ಒತ್ತಡ ಹೇರಲು ಸಮ್ಮೇಳನಾಧ್ಯಕ್ಷತೆ ತಿರಸ್ಕಾರ:
”ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಗೆ ಆದ್ಯತೆ ನೀಡಲು ಸರಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ನಾನು 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ ಅಲಂಕರಿಸಲು ವಿರೋಧ ವ್ಯಕ್ತಪಡಿಸಿದೆ. ಕಸಾಪ ಅಧ್ಯಕ್ಷರು ನನಗೆ ಸಮ್ಮೇಳನಾಧ್ಯಕ್ಷಸ್ಥಾನ ವಹಿಸಿಕೊಳ್ಳುವಂತೆ ಪ್ರಸ್ತಾವ ಮುಂದಿಟ್ಟಿದ್ದರು. ಅದು ಅಧಿಕೃತ ಆಹ್ವಾನವಾಗಿರಲಿಲ್ಲ. ಇದನ್ನೇ ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿದವು, ಆನಂತರ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರಿಗೆ ಪತ್ರ ಬರೆದು ನ್ಯಾಯಾಂಗದ ರೀತಿ ರಿವಾಜು ಹಾಗೂ ಮಾತೃಭಾಷೆಯ ದುಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದೆ” ಎಂದು ಹೇಳಿ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ವಿರೋಧಿಸಿದಕ್ಕೆ ವಿವರಣೆ ನೀಡಿದರು.
ಸಮ್ಮೇಳನಕ್ಕೆ ಹೋಗಲಿಲ್ಲ:
”ಇದೇ ಕಾರಣಕ್ಕಾಗಿ ನಾನು ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಲಿಲ್ಲ. ಇದು ಸ್ವಲ್ಪ ಸಂಕೋಚದ ವಿಷಯ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಕಡ್ಡಾಯಗೊಳಿಸಲು ಸರಕಾರಕ್ಕೂ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ಮುಂದಾಗಿದೆ. ಸರಕಾರದ ಮೇಲೂ ಒತ್ತಡ ಇದೆ. ಈ ವಿಷಯವನ್ನೇ ಮುಂದಿಟ್ಟುಕೊಂಡು ಮಾಧ್ಯಮಗಳು ನನ್ನನ್ನು ಹೀರೋ ಮಾಡಲು ಸಾಧ್ಯವಿಲ್ಲ” ಎಂದು ಪ್ರತಿಕ್ರಿಯಿಸಿದರು.
ಮರ್ಯಾದೆ, ನೈತಿಕತೆ ಇದೆಯಾ? :
”ಪರಸ್ಪರ ಪ್ರೀತಿಸಿದವರನ್ನು ಮರ್ಯಾದೆ ಹತ್ಯೆ ಮಾಡುವಂತೆ ಹೇಳುವವರಿಗೆ ಮಾನ ಮರ್ಯಾದೆ ಇದೆಯಾ? ಗೂಂಡಾಗಿರಿ ಮೂಲಕ ನೈತಿಕ ಪೊಲೀಸ್ ಗಿರಿ ನಡೆಸು ವವರಿಗೆ ನೈತಿಕತೆ ಇದೆಯಾ?,” ಎಂದು ದೇವನೂರು ಖಾರವಾಗಿ ಪ್ರಶ್ನಿಸಿದರು. ”ಮರು ಮತಾಂತರಗೊಳ್ಳುವಂತೆ ಹೇಳುವವರನ್ನು ನಾವು ಪ್ರಶ್ನೆ ಮಾಡುವುದಿಲ್ಲ, ಹೀಗೆ ಹೇಳುವವರು ಹೊಟ್ಟೆಗೆ ಏನು ತಿಂತಾರೆ? ನಾವು ಪ್ರಶ್ನೆ ಮಾಡೋಲ್ಲ, ನಗರ ಪ್ರದೇಶಗಳಲ್ಲಿ ಜಾತಿ ಟೌನ್ ಶಿಪ್ಗಳು ಹೆಚ್ಚುತ್ತಿರುವುದು ಕೂಡ ಬೆಚ್ಚಿ ಬೀಳಿಸುವಂಥದ್ದು. ಹೀಗೆ ಇನ್ನೂ ಸೋಸಿದರೆ ಅಪಾಯಕಾರಿ ಅಂಶಗಳು ಬಯಲಿಗೆ ಬರುತ್ತವೆ. ಆದರೆ, ನಾವು ಇವ್ಯಾವುದನ್ನೂ ಪ್ರಶ್ನಿಸದಿರುವುದು ವಿಪರ್ಯಾಸದ ನಂಗತಿ,” ಎಂದು ವಿಷಾದಿಸಿದರು.
ಭೂಸ್ವಾಧೀನ ಕಾಯ್ದೆ ಜಾರಿಯ ಸುಗ್ರೀವಾಜ್ಞೆಗೆ ಖಂಡನೆ:
ಭೂಸ್ವಾಧೀನ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ ಕೇಂದ್ರ ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ ದೇವನೂರು, ”ಮೋದಿ ಸರಕಾರ ಜನರನ್ನು ಜಾನುವಾರುಗಳಂತೆ ಪರಿಗಣಿಸುತ್ತಿದೆ” ಎಂದು ಟೀಕಿಸಿದರು. “
”ಬ್ರಿಟಿಷರ ಆಡಳಿತಾವಧಿಯಲ್ಲೂ ಭೂಸ್ವಾಧೀನ ಪ್ರಶ್ನೆ ಬಂದಾಗ ರೈತರ ಒಪ್ಪಿಗೆ ಪಡೆಯಲಾಗುತ್ತಿತ್ತು. ಆದರೆ, ಕೇಂದ್ರ ಸರಕಾರದ ಧೋರಣೆ ನೋಡಿದರೆ ಜನರ ಅಭಿಪ್ರಾಯವನ್ನೇ ಕೇಳಬೇಕಾದ ಅಗತ್ಯವಿಲ್ಲ ಎಂದು ಭಾವಿಸಿದಂತಿದೆ. ಮುಂಬಯಿನಲ್ಲಿ ಉದ್ಯಮಿ ಅಂಬಾನಿ ನಿರ್ಮಿಸುವ ಆಕಾಶದೆತ್ತರದ ಭವ್ಯ ಬಂಗಲೆಯ ಸುತ್ತಲೂ ಕೊಳೆಗೇರಿ ಜನ ದುಸ್ತರ ಬದುಕು ಸಾಗಿಸಿದರೆ ಅಂತಹ ಸಮಾಜಕ್ಕೆ ಬೆಲೆ ಉಂಟೆ? ಬಡವ-ಬಲ್ಲಿದರ ನಡುವಿನ ಅಂತರ ಹೆಚ್ಚಾಗುವುದರಿಂದ ಸಮಾಜದ ಸ್ವಾಸ್ಥ್ಯ ಮತ್ತಷ್ಟು ಹದಗೆಡಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಗಣರಾಜ್ಯೋತ್ಸವದ ಜಾಹೀರಾತಿನಲ್ಲಿ ಜಾತ್ಯತೀತ ಹಾಗೂ ಸಮಾಜವಾದಿ ಪದಗಳನ್ನು ಕೇಂದ್ರ ಸರಕಾರ ಕೈಬಿಟ್ಟ ಬಗ್ಗೆ ಪ್ರಸ್ತಾಪಿಸಿದ ಅವರು, ”ಇದರಿಂದ ಭಾರತದ ಜಾತ್ಯತೀತ ಹಾಗೂ ಸಮಾಜವಾದಿ ವ್ಯವಸ್ಥೆಯೇ ಕೈತಪ್ಪಿಹೋಗುವ ಲಕ್ಷಣ ಕಂಡು ಬರುತ್ತಿದೆ,” ಎಂದು ಕಳವಳ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸೂಸನ್ ಡೇನಿಯಲ್ ಅವರು ಇಂಗ್ಲಿಷ್ಗೆ ಅನುವಾದಿಸಿದ ದೇವನೂರು ಮಹಾದೇವ ಅವರ ‘ಕುಸುಮ ಬಾಲೆ’ ಕಾದಂಬರಿಯನ್ನು ಬಿಡುಗಡೆ ಮಾಡಲಾಯಿತು.
“ರಾಷ್ಟ್ರಕವಿ ಕುವೆಂಪು, ವರಕವಿ ಬೇಂದ್ರೆ ಹುಟ್ಟಿದ್ದೇ ಬರೆಯುವುದಕ್ಕಾಗಿ. ಹಾಗಾಗಿ, ಅವರಿಗೆ ಹೆಚ್ಚಿನ ಸಾಹಿತ್ಯ ಕೃಷಿ ಮಾಡಲು ಸಾಧ್ಯವಾಯಿತು. ಆದರೆ, ನನಗೇಕೆ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ನನ್ನನ್ನು ನಾನೇ ಹಲವು ಬಾರಿ ಪ್ರಶ್ನೆ ಮಾಡಿಕೊಂಡಿದ್ದೇನೆ. ನನ್ನೊಳಗೆ ವಚನಕಾರರು ತುಂಬಿದ್ದಾರೆ. ಹೀಗಾಗಿ, ಬರೆಯಬೇಕು ಎಂದೆನಿಸಿದರೆ ಬರೆಯುತ್ತೇನೆ. ಒತ್ತಡಕ್ಕಾಗಿ ಸಾಹಿತ್ಯ ರಚಿಸುವುದಿಲ್ಲ. ಸಾಹಿತ್ಯ ರಚನೆಯಲ್ಲಿ ಮಗ್ನನಾದರೆ ನನಗೆ ಸ್ಥಳ ಮುಖ್ಯವಾಗುವುದಿಲ್ಲ. ಕ್ಯಾಂಟೀನ್ ನಲ್ಲೂ ಬರೆಯುತ್ತೇನೆ ಬರೆಯುವಾಗ ಅಪನಂಬಿಕೆಯ ಪ್ರಶ್ನೆ ಕಾಡುವುದಿಲ್ಲ ತೋಚಿದ್ದನ್ನು ಬರೆಯುತ್ತೇನೆ.”
– ದೇವನೂರು ಮಹಾದೇವ