ಜಪದ ಕಟ್ಟೆ- ಎಸ್.ಮಂಜುನಾಥ್
ಒಡೆದ ಮಣಿಗಳು ಇಡಿಯಾಗುವುವು
ಈ ತಾಣದಲ್ಲಿ….
1
ಬೆಟ್ಟ ಬಳಿಗೆ ಬಂದಂತಿದೆ
ಹೊಳೆ ಸಾಗಿ ಅದನು ಮುಟ್ಟಿದಂತಿದೆ
ಕಟ್ಟೆಯ ಬಂಡೆಗಳು ಆ ಹರಿವ ತಡೆತಡೆದು ಹೊರಡಿಸುತಿವೆ
ಜುಳುಜುಳುಜುಳು ಹೆಸರ
ಮಣಿಯನೆಣಿಸುತಿವೆ ಎಲ್ಲ ಪೊದೆಗಳು
ಮುಸಿಗಳಾಗಿವೆ ತೋಪಿನ ಮರಗಳು
2
ಕಾಲವೇ ಸ್ತಬ್ಧ ಅದು ಮೌನ
ಮತ್ತೆಲ್ಲ, ತರಗು ಗಿರುಕೆಂದ ಹಕ್ಕಿ ರೆಕ್ಕೆಯ ಬಡಿದ
ನಮ್ಮ ನುಡಿ ಜೀರುಂಡೆ ಝೀಗುಡುವ ಸದ್ದೂ
ಅದರ ಪರಿಧಿಯಿಂದೊಡಲೊಳಗೆ ಉದುರುವುವು ಎಲೆಯಂತೆ
ಇಲ್ಲಿ ಬೆಳಕು, ಅಲ್ಲಿ ದೃಶ್ಯಗಳು
ಸುರಿದಿವೆ ವೇದಿಕೆಗೆ
3
ಎಲ್ಲಿ ಮುನಿಗಳು ನಾವು ಬಂದದ್ದೇ ಮಾಯವಾದರೊ
ನಾವು ನಡೆದಾಡಿದಂತೆಲ್ಲ ನಮ್ಮ ಕಣ್ತಪ್ಪಿಸುತಿರುವರೊ
ಈ ದೊಡ್ಡ ಅರಳಿಯ ಕಟ್ಟೆಯ ಮೇಲೆ ಗುಡಿಗೆ ಮುಖ ಮಾಡಿ
ಕುಳಿತಿರುವರೊ ಹಿರಿಯಮುನಿ ಅದೃಶ್ಯರಾಗಿ ತಪದಲ್ಲಿ
ಆದರೆ ಗೋಚರಿಸುವಂತಿದೆ ತಪಸ್ಸು……ಅದೆ ಕಟೆದು ಮೂಡಿಸಿದ
ಅಖಂಡಮಣಿ ಇದರ ಸ್ಪರ್ಶದಲ್ಲಿ
ಒಡೆದ ಮಣಿಗಳು ಇಡಿಯಾಗುವಂತಿವೆ.