ಜನಾಂದೋಲನಗಳ ಮಹಾಮೈತ್ರಿ ಜನಜಾಗೃತಿ ಜಾಥಾ-ಕರಪತ್ರ[ದೇವನೂರ ಮಹಾದೇವ]
[1 ಮಾರ್ಚ್ 2022 ರಿಂದ ಮಾರ್ಚ್ 15ರವರೆಗೆ ಹಮ್ಮಿಕೊಳ್ಳಲಾದ ಜನಾಂದೋಲನಗಳ ಮಹಾಮೈತ್ರಿ ಜನಜಾಗೃತಿ ಜಾಥಾದ -ಕರಪತ್ರ ದೇವನೂರ ಮಹಾದೇವ ಅವರು ರಚಿಸಿದ್ದು ನಮ್ಮ ಓದಿಗಾಗಿ ಇಲ್ಲಿದೆ. ]
ಜನಾಂದೋಲನಗಳ ಮಹಾಮೈತ್ರಿ ಕರ್ನಾಟಕ
ಜನಜಾಗೃತಿ ಜಾಥಾ
ಬಂಧುಗಳೇ, ನಾವು ನಿಮ್ಮಲ್ಲಿಗೆ ಬಂದಿದ್ದೇವೆ. ನಿಮ್ಮೊಡನೆ ಮಾತಾಡಲು ಬಂದಿದ್ದೇವೆ. ಕಷ್ಟ ಸುಖ ಮಾತಾಡಲು ಬಂದಿದ್ದೇವೆ. ದೇಶದ ಆಗುಹೋಗುಗಳನ್ನು ಚರ್ಚಿಸಲು ಬಂದಿದ್ದೇವೆ.
ಹೆಸರೇ ಹೇಳುವಂತೆ ಜನಾಂದೋಲನಗಳ ಮಹಾಮೈತ್ರಿಯು ಒಂದು ಸಂಘಟನೆಯಲ್ಲ. ಬದಲಾಗಿ ಜನಪರ ಹೋರಾಟದ ಸಂಘಟನೆಗಳ ಒಂದು ಒಕ್ಕೂಟ. ಜನ ಸಮುದಾಯದ ದುಃಖ ದುಮ್ಮಾನಗಳಿಗೆ ಸ್ಪಂದಿಸುವ ಒಂದು ವೇದಿಕೆ. ಪ್ರೀತಿ, ಸಹನೆ, ಸಹಬಾಳ್ವೆ, ಸಮಾನತೆ, ನ್ಯಾಯಕ್ಕಾಗಿ ತುಡಿಯುವ ಯಾರೇ ಜನಾಂದೋಲನ ಮಹಾಮೈತ್ರಿಯಲ್ಲಿ ಸಹಭಾಗಿಗಳಾಗಬಹುದು. ನಿಮ್ಮ ಸಮಸ್ಯೆಗೆ ಬೇರೆಯವರೂ, ಬೇರೆಯವರ ಸಮಸ್ಯೆಗೆ ನೀವೂ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಇದು. ಜೊತೆಗೂಡಿ ನಡೆಯುವ ನಡೆ ಇದು.
ಬನ್ನಿ, ಈಗಾಗಲೇ ಜನಾಂದೋಲನ ಮಹಾಮೈತ್ರಿಯಲ್ಲಿ ರೈತ ಸಂಘಟನೆಗಳು, ಜನ ಸಂಗ್ರಾಮ ಪರಿಷತ್, ದಲಿತ ಸಂಘಟನೆಗಳು, ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವ ಸಂಘಟನೆ [AIDYO] ಘಟಕಗಳು, ಗ್ರಾಮೀಣ ಕೂಲಿಕಾರರ ಸಂಘ, ಕರ್ನಾಟಕ ಜನಶಕ್ತಿ, ಗ್ರಾಮ ಸ್ವರಾಜ್ ಅಭಿಯಾನ, ಮಾನವ ಬಂಧುತ್ವ ವೇದಿಕೆ, ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ, ನೌಕರ ಸಂಘಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು ಹಾಗೂ ಪ್ರಗತಿಪರ ಹೋರಾಟಗಾರರು ಜೊತೆಗೂಡಿದ್ದಾರೆ. ಬನ್ನಿ, ನೀವೂ ಜೊತೆಗೂಡಿ, ಒಟ್ಟಾಗಿ ಹೆಜ್ಜೆ ಹಾಕೋಣ. ‘ಕಡ್ಡಿಯನ್ನು ಮುರಿಯಬಹುದು; ಕಟ್ಟನ್ನಲ್ಲ’ ಎಂಬ ಗಾದೆಯಂತೆ ಒಗ್ಗಟ್ಟು ಇಂದು ಎಂದಿಗಿಂತ ಹೆಚ್ಚು ಅಗತ್ಯವಿದೆ.
ನಿಜ, ಒಗ್ಗಟ್ಟು ಇಂದು ಎಂದಿಗಿಂತ ಹೆಚ್ಚು ಅಗತ್ಯವಿದೆ. ತುಂಬಾನೆ ಅಗತ್ಯವಿದೆ. ಯಾಕೆಂದರೆ, ಇಂದು ದುಡಿದು ತಿನ್ನುವವರ ಬದುಕು ದಿಕ್ಕೆಟ್ಟು ಹೋಗಿದೆ. ದೇಶದಲ್ಲಿ ನಿರುದ್ಯೋಗದ ಪ್ರಮಾಣ ರಣಭೀಕರವಾಗಿದೆ. ಕೇವಲ ಒಂದು ವರ್ಷದಲ್ಲೆ 2021ರಲ್ಲಿ ಮೂರು ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಸುದ್ಧಿ ಇದೆ. ಇಂತಹ ಭೀಕರ ನಿರುದ್ಯೋಗವು ಕಳೆದ 50 ವರ್ಷಗಳಿಂದಂತೂ ಇರಲಿಲ್ಲ. ಯಾಕೆ ಹೀಗೆ? ಇದಕ್ಕೆಲ್ಲ ಆಳುವ ಸರ್ಕಾರದ ನೀತಿ ನಿಯಮ ಆದ್ಯತೆಗಳೇ ಕಾರಣ ಎನ್ನಲಾಗಿದೆ. ಯಾಕೆಂದರೆ ಹೆಚ್ಚು ಉದ್ಯೋಗ ಸೃಷ್ಟಿಸುತ್ತಿದ್ದ ಗುಡಿ ಕೈಗಾರಿಕೆಗಳು, ಸಣ್ಣ ಮಧ್ಯಮ ಕೈಗಾರಿಕೆಗಳು ಸರ್ಕಾರದ ಉತ್ತೇಜನವಿಲ್ಲದೆ ಮುಚ್ಚಿ ಹೋಗುತ್ತಿವೆ. ಅಂದಂದಿಗೆ ದುಡಿದು ತಿನ್ನುವ ಜನರ ಬದುಕಿಗೆ ಆಸರೆಯಾದ ನರೇಗಾ ಯೋಜನೆಗೆ ಹಣ ಹಂಚಿಕೆಯನ್ನು ಈ ಸಲದ ಬಜೆಟ್‍ನಲ್ಲಿ 98 ಸಾವಿರ ಕೋಟಿ ರೂಪಾಯಿಗಳಿಂದ 73 ಸಾವಿರ ಕೋಟಿ ರೂಪಾಯಿಗಳಿಗೆ ಇಳಿಸಲಾಗಿದೆ. ಸರ್ಕಾರವು ದುಡಿದು ತಿನ್ನುವ ಜನರ ಹೊಟ್ಟೆಗೂ ಮಣ್ಣು ಹಾಕಿದೆ. ಬದಲಾಗಿ ಇಂದು ಆಳ್ವಿಕೆ ನಡೆಸುತ್ತಿರುವ ಸರ್ಕಾರವು ಶತಕೋಟಿ ಸಂಪತ್ತಿನವರ ಸೇವೆಗೆ ಟೊಂಕಕಟ್ಟಿ ನಿಂತಿದೆ. ಸರ್ಕಾರ ಇರುವುದು ಜನರಿಗಾಗಿ ಅಲ್ಲ; ಬದಲಾಗಿ ಅಂಬಾನಿ ಅದಾನಿ ಮುಂತಾದ ಬಂಡವಾಳಶಾಹಿ ಶತಕೋಟಿ ಸಂಪತ್ತು ಉಳ್ಳವರಿಗಾಗಿ ಎಂಬಂತಾಗಿ ಬಿಟ್ಟಿದೆ. ಇಲ್ಲದಿದ್ದರೆ, ಕೊರೋನಾ ದುರಂತ ಕಾಲದಲ್ಲಿ ಭಾರತದಲ್ಲಿ ಬಹುಜನರು ಜೀವ ಉಳಿಸಿಕೊಳ್ಳಲು ಆದಾಯವಿಲ್ಲದೆ ಒದ್ದಾಡುತ್ತ ಜನರ ಬದುಕು ಹೈರಾಣವಾಗಿ ಸಂಕಷ್ಟದಲ್ಲಿರುವ ಸಂದರ್ಭದಲ್ಲೆ ಕಾರ್ಪೊರೇಟ್ ಬಂಡವಾಳಶಾಹಿ ಕಂಪನಿಗಳ ಆದಾಯ ಹೆಚ್ಚಾಗಲು ಹೇಗೆ ಸಾಧ್ಯ? ಆದರೆ ಸಾಧ್ಯವಾಗಿದೆ.
ಯಾಕೆಂದರೆ, ಕೇಂದ್ರ ಸರ್ಕಾರವು ಸಾರ್ವಜನಿಕ ಸಂಪತ್ತುಗಳಲ್ಲಿ ನವರತ್ನ ಕಂಪನಿಗಳೆಸಿನಿಕೊಂಡ ಬಿ.ಇ.ಎಂ.ಎಲ್.(BEML), ಬಿ.ಇ.ಎಲ್. (BEL), , ಬಿ.ಹೆಚ್.ಇ.ಎಲ್. (BHEL), ಜೀವ ವಿಮಾ (LIC) ಮುಂತಾದ ಪೂರ್ವಿಕರು ಮಾಡಿಟ್ಟಿದ್ದ, ಸಾರ್ವಜನಿಕ ಸಂಪತ್ತನ್ನೂ ಕೂಡ ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿಕೊಡುತ್ತಾ ಅಥವಾ ನಗಣ್ಯ ಬೆಲೆಗೆ ಮಾರುತ್ತ ಭಾರತವನ್ನು ದಿವಾಳಿ ಎಬ್ಬಿಸುತ್ತಿದೆ. “ಜವರಾಯ ಬಂದಾರೆ ಬರಗೈಲಿ ಬರಲಿಲ್ಲಾ, ಕುಡುಗೋಲು ಕೈಲಿ ಹಿಡಿದು ಬಂದ, ಒಳ್ಳೊಳ್ಳೆ ಮರವ ಕಡಿಯೂತ ಬಂದಾ” ಎಂಬಂತೆ ರೈಲ್ವೆ, ಬಂದರು, ವಿಮಾನ ಯಾನ, ವಿಶಾಖಪಟ್ಟಣಂ ಸ್ಟೀಲ್ ಹೀಗೆ ಪಟ್ಟಿಮಾಡಿಕೊಂಡು ಒಂದೊಂದಾಗಿ ಒಂದೊಂದಾಗಿ ಒಳ್ಳೊಳ್ಳೆ ಸಾರ್ವಜನಿಕ ಸಂಪತ್ತಿನ ಕ್ಷೇತ್ರಗಳನ್ನು ಕಾರ್ಪೊರೇಟ್ ಕಂಪನಿಗಳ ವಶಕ್ಕೆ ನೀಡುತ್ತಾ, ಸಾರ್ವಜನಿಕ ಸಂಪತ್ತಿನ ಪ್ರಾಣ ತೆಗೆಯುತ್ತಿದೆ. ಸರ್ಕಾರವು ಕಾರ್ಪೊರೇಟ್ ಕಂಪನಿಗಳಿಗೆ ಭೂಮಿ, ಜಲ, ವಿದ್ಯುತ್‍ನಲ್ಲೂ ರಿಯಾಯಿತಿ ನೀಡುತ್ತಲಿದೆ. ಇದಲ್ಲದೆ ಕಾರ್ಪೊರೇಟ್ ಕಂಪನಿಗಳಿಗೆ ವಿವೇಚನಾ ರಹಿತವಾಗಿ ಲಕ್ಷಾಂತರ ಕೋಟಿ ಬ್ಯಾಂಕ್ ಸಾಲ ನೀಡಿ, ಅವರು ಹಿಂತಿರುಗಿಸಲಾಗದ ಸಾಲವನ್ನು ಎನ್.ಪಿ.ಎ. (ಚಾಲ್ತಿಯಲ್ಲಿ ಇಲ್ಲದ ಸಂಪತ್ತು) ಎಂದು ಪರಿಗಣಿಸಿ ಬ್ಯಾಂಕ್ ವ್ಯವಹಾರದ ಲೆಕ್ಕಾಚಾರದಿಂದಲೇ ಅದನ್ನು ಪ್ರತ್ಯೇಕವಾಗಿಟ್ಟು ಇದನ್ನು ಮುಂದೊಂದು ದಿನ ‘ವಸೂಲಿಯಾಗಬೇಕಾದ ಸಾಲ’ ಎಂದು ಹೇಳಲಾಗುತ್ತಿದೆ. ಉದಾಹರಣೆಗೆ, ಪ್ರಧಾನಿ ಮೋದಿಯವರು ತಮ್ಮ ಆಳ್ವಿಕೆ ಕಾಲಾವಧಿಯಲ್ಲೇ ಶತಕೋಟಿ ಸಂಪತ್ತಿನ ಕಂಪನಿಗಳಿಗೆ 10 ಲಕ್ಷ ಕೋಟಿಗೂ ಹೆಚ್ಚು Write-off ಮಾಡಿ ದಾಖಲೆ ನಿರ್ಮಿಸಿದ್ದಾರೆ. ಮುಂದೆ ವಸೂಲಿಯಾಗಬೇಕೆನ್ನುವ ಈ ಸಾಲ ಯಾವಾಗ ಹಿಂದಿರುಗಿ ಬರುತ್ತದೆ? ಆ ದೇವರಿಗೇ ಗೊತ್ತು!
ಈ ಮೇಲ್ಕಂಡ ವ್ಯವಹಾರದಲ್ಲಿ Transperency (ಪಾರದರ್ಶಕತೆ) ಮತ್ತು Accountability (ಲೆಕ್ಕದ ಹೊಣೆಗಾರಿಕೆ) ಎರಡೂ ಇಲ್ಲ. ಜನ ಸಾಮಾನ್ಯರ ಠೇವಣಿ ಇಟ್ಟ ಹಣದಲ್ಲೆ, ನಡೆಯುವ ಈ ಸಾಲದ ವ್ಯವಹಾರವನ್ನು ಜನರಿಂದ ಮುಚ್ಚಿಡಲಾಗಿದೆ. ಕಾರ್ಪೊರೇಟ್ ಕಂಪನಿಗಳು, ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ, ಈ ದೇಶದ ಚುಕ್ಕಾಣಿ ಹಿಡಿದವರು ಕೂಡಿಕೊಂಡು ಇದನ್ನೊಂದು ಭೂಗತ ಲೋಕದ ಚಟುವಟಿಕೆಯಂತೆ ನಡೆಸುತ್ತಿದ್ದಾರೆ. ಹೀಗೆಲ್ಲಾ Write off ಮಾಡಿದ ಸಾಲದ ಹಣದಲ್ಲಿ ಕಾಲುಭಾಗವಾದರೂ ಕಂಪನಿಗಳಿಂದ ವಸೂಲಿಯಾದ ಉದಾಹರಣೆ ಇಲ್ಲ. ಕಾನೂನಿನ ಅಡಿಯಲ್ಲೇ ಎಲ್ಲವೂ ಗೋಲ್‍ಮಾಲ್ ಆಗುತ್ತಿದೆ. ಇದರ ರಹಸ್ಯ ಭೇದಿಸಬೇಕಾಗಿದೆ. ಕಾರ್ಪೊರೇಟ್ ಕಂಪನಿಗಳು ವಿದೇಶಗಳಲ್ಲಿರುವ ತಮ್ಮದೇ ಬೇನಾಮಿ ಕಂಪನಿಗಳಿಗೆ ಈ ಹಣವನ್ನು ವರ್ಗಾಯಿಸಿಕೊಂಡು ಜನರನ್ನು, ದೇಶವನ್ನು ವಂಚಿಸುತ್ತಿದೆ. ಇದಲ್ಲವೆ ದೇಶದ್ರೋಹ? ಸಾಮಾನ್ಯ ಜನತೆಗೂ ಈ ಭೂಗತ ಲೋಕದ ಲೆಕ್ಕಾಚಾರ ತಿಳಿಯಬೇಕಾಗಿದೆ. ತಿಳಿಯಬೇಕಾದ ಹಕ್ಕೂ ಕೂಡ ಇದೆ. ಹಾಗೆ ನೋಡಿ, ಶತಕೋಟಿ ಬಂಡವಾಳಶಾಹಿ ಸಂಪತ್ತು ಉಳ್ಳವರಿಗೆ ಕೇವಲ ಶೇಕಡ 2ರಷ್ಟು ಹೆಚ್ಚು ತೆರಿಗೆ ಹಾಕಿದರೂ ಅದರಲ್ಲೆ ಭಾರತದ ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಸುಧಾರಿಸಬಹುದೆಂದು ತಿಳಿದವರು ಅಭಿಪ್ರಾಯ ಪಡುತ್ತಾರೆ. ಆದರೆ ಈ ಸಲದ ಬಜೆಟ್‍ನಲ್ಲಿ ಕಾರ್ಪೊರೇಟ್ ಸರ್ಚ್‍ಚಾರ್ಜ್ ತೆರಿಗೆಯನ್ನು ಶೇ. 12 ರಿಂದ ಶೇ. 7ಕ್ಕೆ ಇಳಿಸಲಾಗಿದೆ. ಹೀಗೆಲ್ಲಾ ಜರುಗುತ್ತಿರುವಾಗ ಬಂಡವಾಳಶಾಹಿ ಸಂಪತ್ತು ಹೆಚ್ಚದೆ ಇನ್ನೇನು ಆಗುತ್ತದೆ? ಇಂದು ಹುಚ್ಚರ ಸಂತೆಯಲ್ಲಿ ಉಂಡವನೇ ಜಾಣ ಎಂಬಂತಾಗಿದೆ.
ಈ ವಿನಾಶಕಾರಿ ಸರ್ಕಾರವು ವಿವೇಚನೆ ಇಲ್ಲದೆ ನೋಟ್ ಬ್ಯಾನ್ ಅವಾಂತರ ಮಾಡಿ ಆಮೇಲೆ ಅವಿವೇಕದ ಜಿಎಸ್‍ಟಿ ತಂದು ಜನಜೀವನವನ್ನು ದಿಕ್ಕೆಡಿಸಿ ರಾಜ್ಯ ಸರ್ಕಾರಗಳನ್ನೂ ದೈನೇಸಿ ಮಾಡಿದೆ. ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಕಿತ್ತುಕೊಂಡು ಹೋಗುತ್ತಿದೆ. ಇμÉ್ಟಲ್ಲಾ ಆಗುತ್ತ ಹೀಗೆಲ್ಲಾ ಆಗುತ್ತ ಭಾರತ ಎತ್ತ ಸಾಗುತ್ತಿದೆ? ಭಾರತದ ಮಧ್ಯಮ ವರ್ಗವು ಬಡವರಾಗುತ್ತಿದ್ದಾರೆ. ಇನ್ನು ಬಡವರು? ಬಡವರು ಹಸಿವಿನ ದವಡೆಗೆ ನೂಕಲ್ಪಡುತ್ತಿದ್ದಾರೆ. ಭಾರತಮಾತೆಯ ಹೊಟ್ಟೆಗೆ ಹಿಟ್ಟಿಲ್ಲ; ಜುಟ್ಟಿಗೆ ಮಲ್ಲಿಗೆ ಹೂ- ಇದು ಇಂದಿನ ಭಾರತದ ಧಾರುಣ ಚಿತ್ರ ಇದು. ಹೇಳಿ, ಈಗ ನಾವು ಏನು ಮಾಡಬೇಕು? ಮೊದಲು ಎಲ್ಲರೂ ಜೊತೆಯಾಗಬೇಕು. ಕೂಡಿ ಎಲ್ಲರೂ ಗಟ್ಟಿಧ್ವನಿಯಲ್ಲಿ ಒಟ್ಟಾಗಿ ಹೇಳಬೇಕು- ‘ಇಷ್ಟು ಸಾಕು, ಇದಾಗಬಾರದು, ಇದಾಗಬಾರದು’.
ಈಗ
ಈಗ, ಮೊದಲನೆಯ ಹೆಜ್ಜೆಯಾಗಿ ನಾವೆಲ್ಲರೂ ಸೇರಿ ಕಿತ್ತು ತಿನ್ನುತ್ತಿರುವ ಸಮಸ್ಯೆಯೊಂದನ್ನು ಕೈಗೆತ್ತಿಕೊಳ್ಳೋಣ. ಅದೇ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಮೂರು ಕರಾಳ ಕಾಯಿದೆಗಳು. ಆ ಕಾಯಿದೆಗಳು ಏನು? ಅದರಲ್ಲಿ ಏನಿದೆ? ಅದರಿಂದ ಏನೇನಾಗುತ್ತದೆ? ಒಂದೊಂದಾಗಿ ನೋಡೋಣ.
ಮೊದಲನೆಯದಾಗಿ
ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಕಾಯಿದೆ 2020.
ಈ ಹಿಂದೆ ಇದ್ದ ಭೂ ಸುಧಾರಣಾ ಕಾಯಿದೆಯಲ್ಲಿ ಕೃಷಿಕರು ಮಾತ್ರ ಕೃಷಿ ಭೂಮಿ ಕೊಂಡುಕೊಳ್ಳಬಹುದು ಎಂದಿತ್ತು. ಈಗ ಈ ಹೊಸ 2020ರ ಕಾಯಿದೆ ಪ್ರಕಾರ ಕೃಷಿ ಭೂಮಿಯನ್ನು ಯಾರೇ ಕೊಂಡುಕೊಳ್ಳಬಹುದು. ಇದರೊಡನೆ ಕೃಷಿ ಭೂಮಿಯನ್ನು ಕೊಳ್ಳಲು ಇದ್ದ ಎಲ್ಲಾ ರೈತಪರ ನಿಬಂಧನೆಗಳನ್ನು 2020ರ ಹೊಸ ಕಾಯ್ದೆ ಧ್ವಂಸ ಮಾಡಿದೆ. ಇದರಿಂದ ಏನಾಗುತ್ತದೆ? ಕಪ್ಪು ಹಣದ ಪಿಶಾಚಿಯು ಕೃಷಿ ಭೂಮಿಯನ್ನು ಕಬಳಿಸಲು ತೊಡಗುತ್ತದೆ. ಕೃಷಿ ಭೂಮಿಯಿಂದಲೇ ಕೃಷಿ ಕಣ್ಮರೆಯಾಗುತ್ತದೆ. ದಿನ ಕಳೆದಂತೆ ‘ಉಳ್ಳವರಿಗೆ ಎಲ್ಲಾ ಭೂಮಿ’ ಎಂಬಂತಾಗುತ್ತದೆ. ಈ 2020ರ ಕಾಯಿದೆಯಿಂದ ಭೂಗಳ್ಳ ಮಾಫಿಯಾ ಹೆಚ್ಚುತ್ತದೆ. ರಿಯಲ್ ಎಸ್ಟೇಟ್ ದಂಧೆ ಮಿತಿ ಮೀರುತ್ತದೆ. ಇತ್ತ, ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು ತಂತಮ್ಮ ಅಲ್ಪಸ್ವಲ್ಪ ಭೂಮಿಯನ್ನೂ ಮಾರಿಕೊಂಡು ಕೃಷಿಯಿಂದಲೇ ಎತ್ತಂಗಡಿಯಾಗುತ್ತಾರೆ. ಹೀಗೆ ನಿರ್ಗತಿಕರಾದ ರೈತರು ಅವರ ಭೂಮಿಯಲ್ಲೆ ಕೂಲಿಕಾರರಾಗಿ ಅಥವಾ ನಗರ ಪ್ರದೇಶಗಳಿಗೆ ಗುಳೆ ಹೋಗಿ ಕೊಳಚೆ ಪ್ರದೇಶದಲ್ಲಿ ಹೊಟ್ಟೆ ತುಂಬಿಸಿಕೊಳ್ಳಬೇಕಾಗುತ್ತದೆ. ನಮ್ಮ ಸುತ್ತಮುತ್ತ ಈ ರೀತಿ ಆಗುತ್ತಿರುವುದನ್ನು ನಾವು ಈಗಾಗಲೇ ನೋಡುತ್ತಿದ್ದೇವೆ. ಇದೇನು ಭೂ ಸುಧಾರಣಾ ಕಾಯ್ದೆಯೇ? ಅಥವಾ?
ಇನ್ನು ಮುಂದೆ ನಾವು ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ. ಈಗಲೇ ಕೇಳಬೇಕು, ಎಲ್ಲರೂ ಒಟ್ಟಾಗಿ. ‘ಇದು ಭೂ ಸುಧಾರಣಾ ಕಾನೂನು ಅಲ್ಲ; ಭೂವಿಧ್ವಂಸಕ ಕಾನೂನು, ಇದನ್ನು ಕರ್ನಾಟಕ ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು’
ಎರಡನೆಯದಾಗಿ
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆ 2020
ಈ ಕಾಯಿದೆ ಏನು ಹೇಳುತ್ತದೆ? ಕೃಷಿ ಉತ್ಪನ್ನಗಳನ್ನು ಯಾರು ಬೇಕಾದರೂ ಕೊಳ್ಳಬಹುದು, ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದಿದೆ. ಮುಕ್ತ ಮಾರುಕಟ್ಟೆಗೆ ಅವಕಾಶ ನೀಡಿದೆ. ಈ ಹಿಂದೆ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಇತ್ತು. ಈ ಮಾರುಕಟ್ಟೆ ಮುಖಾಂತರ ಕೃಷಿ ಉತ್ಪನ್ನಗಳ ಮಾರಾಟ ವ್ಯವಹಾರ ನಡೆಯುತ್ತಿತ್ತು. ಎಪಿಎಂಸಿಗೆ ಆಯ್ಕೆಯಾದ ಆಡಳಿತ ಮಂಡಳಿಯೂ ಇದ್ದು ಅವು ನಿರ್ವಹಣೆ ಮಾಡುತ್ತಿದ್ದವು. ಈ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ಲೋಪದೋಷಗಳಿದ್ದರೂ ರೈತಾಪಿಗೆ ಆಸರೆಯಾಗಿತ್ತು. ಬೆಳೆಗೆ ಒಂದಿಷ್ಟು ಗ್ಯಾರಂಟಿ ಬೆಲೆ ಸಿಗುತ್ತಿತ್ತು. ನಿಯಂತ್ರಣ ಇತ್ತು, ಅನ್ಯಾಯ ಪ್ರಶ್ನಿಸುವ ಹಕ್ಕಿತ್ತು. ಆದರೆ ಯಾವಾಗ ಈ 2020ರ ಈ ಹೊಸ ಕಾಯ್ದೆ ಬಂತೋ ಮುಕ್ತ ಮಾರುಕಟ್ಟೆ ಛಾಲೂ ಆಯ್ತೋ ಆವಾಗಲಿಂದ ಕೃಷಿ ಉತ್ಪನ್ನಗಳ ಮಾರಾಟ ವ್ಯವಹಾರ ನಿಯಂತ್ರಣ ಕಳೆದುಕೊಂಡಿತು. ಜೊತೆಗೆ ಬೆಳೆ ಬೆಳೆದವರು ಪ್ರಶ್ನಿಸುವ ಹಕ್ಕನ್ನು ಕಳೆದುಕೊಂಡರು. ಈಗ ಈ ಹೊಸ 2020ರ ಕಾಯಿದೆ ದೆಸೆಯಿಂದಾಗಿ ಲಾಭದಲ್ಲಿದ್ದ ಕೃಷಿ ಉತ್ಪನ್ನ ಮಾರುಕಟ್ಟೆಗಳು ಈಗ ನಷ್ಟ ಅನುಭವಿಸುತ್ತಿವೆ. ಕೆಲವು ಮುಚ್ಚುವ ಸ್ಥಿತಿಗೂ ಬಂದಿವೆ. ಈ ಹೊಸ ಕಾಯ್ದೆಯಿಂದಾಗಿ ಹಣ ಉಳ್ಳವರ ಜಾಲವು ರೈತರ ಕೃಷಿ ಮಾರುಕಟ್ಟೆಗೆ ಧಾಳಿ ಇಡುತ್ತಿದೆ. ಈ ಧಾಳಿಗೆ ಸಿಲುಕಿ ರೈತರು ಕಣ್ಣು ಬಾಯಿ ಬಿಡುವಂತಾಗುತ್ತಿದೆ.
2020ರ ಹೊಸ ಕಾಯ್ದೆಯು ಹೀಗಿರುವಾಗ ಇದು ನಿಯಂತ್ರಣವೊ ಅಥವಾ ಇದ್ದ ನಿಯಂತ್ರಣದ ಕಟ್ಟುಪಾಡುಗಳನ್ನು ಕತ್ತರಿಸಿ ಹಾಕಿ ಲೂಟಿಗೆ ದಿಡ್ಡಿ ಬಾಗಿಲು ತೆರೆದ ಕಾಯಿದೆಯೋ? ನಾವು ಯೋಚಿಸಬೇಕು ಈಗ. ಎಲ್ಲರೂ ಕೂಡಿ ಹೇಳಬೇಕು- ಈ ಲೂಟಿ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕು.
ಮೂರನೆಯದಾಗಿ
ಕರ್ನಾಟಕ ಜಾನುವಾರು ಹತ್ಯಾ (ನಿಷೇಧ ಮತ್ತು ಸಂರಕ್ಷಣೆ) ಕಾಯಿದೆ 2020
ಇದೊಂದು ಇಬ್ಬಂದಿ ನೀತಿ ಕಾಯ್ದೆ. ಭಾರತವು ಮಹಿಷ (ಎಮ್ಮೆ, ಕೋಣ) ಮತ್ತು ಗೋವು (ಹಸು, ಎತ್ತು) ಎರಡನ್ನೂ ಪ್ರತ್ಯೇಕವಾಗಿ ನೋಡಿಲ್ಲ. ಮಹಿಷವು ಭಾರತದ ಉದ್ದಗಲಕ್ಕೂ ಅನೇಕಾನೇಕ ಸಮುದಾಯಗಳ ಕುಲಚಿಹ್ನೆಯಾಗಿ ಗೌರವಿಸಲ್ಪಡುತ್ತಿದೆ. ಗೋವು ಕೂಡ ಗೌರವಿಸಲ್ಪಡುತ್ತಿದೆ. ಎರಡರ ಮಾಂಸವನ್ನೂ ಬೀಫ್ ಎಂದೇ ಕರೆಯುತ್ತಾರೆ. ಆದರೆ, ವಿಪರ್ಯಾಸ ನೋಡಿ – ಭಾರತ ಸರ್ಕಾರವು ಮಹಿಷ (ಎಮ್ಮೆ, ಕೋಣ) ಮಾಂಸವನ್ನು ರಫ್ತು ಮಾಡಲು ಪರವಾನಗಿ ನೀಡಿದೆ. ಆದರೆ, ಗೋವು (ಹಸು, ಕರು, ಎತ್ತು, ಗೂಳಿ) ಗಳ ಮಾಂಸವನ್ನು ರಫ್ತು ಮಾಡಲು ನಿಷೇಧಿಸಿದೆ. ಈ ನಿಷೇಧ ಕಾಯ್ದೆಯಿಂದಾಗಿ ಉದಾಹರಣೆಗೆ ಉತ್ತರಪ್ರದೇಶ ಒಂದರಿಂದಲೇ ದಿನಕ್ಕೆ ನೂರಾರು ಟ್ರಕ್‍ಗಳಲ್ಲಿ ಗೋವುಗಳು ಮೊದಲು ಬಿಹಾರಕ್ಕೆ, ತದನಂತರ ಪಶ್ಚಿಮ ಬಂಗಾಳಕ್ಕೆ ಕಳ್ಳ ಸಾಗಾಣಿಕೆಯಾಗಿ ಇಲ್ಲೆಲ್ಲಾ ಕಳಪೆ ಮಟ್ಟದ ಗೋವುಗಳು ಕಸಾಯಿಖಾನೆಗೆ ವಿಲೇವಾರಿಯಾಗಿ ಉಳಿದ ಉತ್ತಮಮಟ್ಟದ ಗೋವುಗಳು ಗಡಿಯನ್ನೂ ದಾಟಿ ಬಾಂಗ್ಲಾದೇಶ ಕಸಾಯಿಖಾನೆಗಳಿಗೆ ಕಳ್ಳಸಾಗಾಣಿಕೆಯಾಗುತ್ತಿದೆ. ಬಾಂಗ್ಲಾದೇಶದಿಂದ ಗೋಮಾಂಸವು ವಿದೇಶಗಳಿಗೆ ರಫ್ತು ಆಗುತ್ತದೆ. ಈ ರಫ್ತು ಕಂಪನಿಗಳಲ್ಲಿ ಭಾರತ ಮೂಲದ ಬಂಡವಾಳಶಾಹಿಗಳೂ ಇದ್ದಾರೆ. ಅಂದರೆ ಇದು ಭಾರತ ಮೂಲದ ಪರೋಕ್ಷ ರಫ್ತು ವ್ಯವಹಾರವಲ್ಲದೆ ಮತ್ತೇನು?
ಹೀಗೆ ಕಸಾಯಿಖಾನೆಗಳಿಗೆ ಗೋ ಸಾಗಾಣಿಕೆಯಲ್ಲಿನ ಈ ಪಯಣದಲ್ಲಿ ಪೊಲೀಸರು, ರಾಜಕಾರಣಿಗಳು, ಭಾರತದ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಎಲ್ಲರೂ ಶಾಮೀಲಾಗಿದ್ದಾರೆ. ರೋಚಕವೆಂದರೆ, ಗೋವು ಕಳ್ಳಸಾಗಾಣಿಕೆಯ ಟ್ರಕ್ ಮೇಲೆ ಕೇಸರಿ ಭಗವಾಧ್ವಜವನ್ನು ಅಲ್ಲಲ್ಲಿ ಕಾಣಬಹುದು! ಬ್ರಾಹ್ಮಣರಾದಿಯಾಗಿ ಎಲ್ಲಾ ಜಾತಿಗಳ “ಬಹುಸಂಖ್ಯಾತರು” ಗೋವು ಕಳ್ಳಸಾಗಾಣಿಕೆಯಲ್ಲಿ ಭಾಗಿಗಳಾಗಿದ್ದಾರೆ. ಆದರೆ ಗೋವು ಕಳ್ಳಸಾಗಾಣಿಕೆಯಲ್ಲಿ ಶೇಕಡ 10 ರಷ್ಟು ಕೂಡಾ ಮುಸ್ಲಿಮರಿಲ್ಲ ಎಂದು ವರದಿಗಳು ಹೇಳುತ್ತದೆ. ಇನ್ನೂ ರೋಚಕವೆಂದರೆ ಉತ್ತರ ಪ್ರದೇಶದ ಕಳ್ಳಸಾಗಾಣಿಕೆಯಲ್ಲಿ ಬಿಜೆಪಿ ನಾಯಕರು, ಭಜರಂಗದಳದ ಕಾರ್ಯಕರ್ತರು ಅಲ್ಲಲ್ಲಿ ಯೋಗಿ ಆದಿತ್ಯನಾಥ್ ಸ್ಥಾಪಿಸಿದ ಹಿಂದೂ ಸೇನೆ ಕಾರ್ಯಕರ್ತರೂ ಇದ್ದಾರೆ. “ಗೋ ರಕ್ಷಣಾ ಸಮಿತಿಯೇ ಗೋವುಗಳ ಕಳ್ಳಸಾಗಾಣಿಕೆಯ ಪ್ರಮುಖ ಪಾತ್ರ ವಹಿಸಿದೆ” ಎಂದು ವರದಿಗಳಿವೆ. ಈ ವರದಿಗಳು “ಕಾರವಾನ್” ಪತ್ರಿಕೆಯ ಪ್ರತ್ಯಕ್ಷ ತನಿಖಾ ವರದಿಯಲ್ಲಿ ವಿಸ್ತೃತವಾಗಿ ಲಭಿಸುತ್ತದೆ. ಹೀಗಿದೆ ಗೋರಕ್ಷಣೆಯ ವ್ಯಾಪಾರ! ವ್ಯವಹಾರ!! ದೇಶಪ್ರೇಮ!!!
ಹಾಗೇ ಇದೇ ಕಾಯ್ದೆಯಲ್ಲಿ ರೈತರು, ಹಾಲು ಉತ್ಪಾದಕರು, ಗೋಪಾಲಕರು ತಮ್ಮ ಕೃಷಿಗೆ ಹಾಗೂ ಉಪಯೋಗಕ್ಕೆ ಬಾರದ ವಯಸ್ಸಾದ ಜಾನುವಾರುಗಳನ್ನು ಮಾರಾಟ ಮಾಡಬಾರದಂತೆ, ಅವರೇ ಸಾಕಬೇಕಂತೆ. ಇದೂ ಈ ಕಾಯ್ದೆಯಲ್ಲಿದೆ! ಗ್ರಾಮೀಣ ಜನ ಸಮುದಾಯಕ್ಕೆ ಇಂದಿನ ವ್ಯವಸ್ಥೆಯಲ್ಲಿ ಅವರನ್ನು ಅವರೇ ಸಾಕಿಕೊಳ್ಳಲು ಕಷ್ಟವಾಗಿದೆ. ಇಂತಹದರಲ್ಲಿ ಈ ನಿತ್ರಾಣಗೊಂಡ ಜನರ ಬೆನ್ನಿನ ಮೇಲೆ ಈ ಕಾಯ್ದೆ ಭಾರವೂ ಈಗ ಆತುಕೊಂಡಿದೆ! ರೈತರು, ಹಾಲು ಉತ್ಪಾದಕರು ಸಾಕಲಾಗದ ಜಾನುವಾರುಗಳನ್ನು ಸರ್ಕಾರವೇ ಕೊಂಡುಕೊಂಡು ತಾನೇ ಸಾಕುವಂತಾಗಲಿ. ಬೇಡ ಎಂದವರಾರು? ಇದನ್ನು ನಾವು ಮಾತಾಡಬೇಕಿದೆ. ಆಹಾರದ ಹಕ್ಕನ್ನು ಕಿತ್ತುಕೊಂಡು ಸಮಾಜದಲ್ಲಿ ದ್ವೇಷ ಪಸರಿಸಿ ಕೊಲೆ, ಹೊಡೆದಾಟ, ಬಡಿದಾಟ ಹೆಚ್ಚಲು ಈ ಕಾಯಿದೆ ನೇರ ಹೊಣೆಗಾರ ಆಗಿದೆ. ಇದನ್ನೂ ಮಾತಾಡಬೇಕಾಗಿದೆ. ಹಾಗೂ ಕಷ್ಟಪಟ್ಟು ತಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಿದ್ದ ಜನರ ಮೇಲೂ ಪ್ರಹಾರ ಮಾಡಿದಂತಾಗಿದೆ. ಇದನ್ನೂ ಮಾತಾಡಬೇಕಾಗಿದೆ. ಇದಕ್ಕೆಲ್ಲಾ ಸರ್ಕಾರದ ನೀತಿ ನಿಲುವುಗಳೇ ಕಾರಣವಾಗಿದೆ. ಇದು ಸರ್ಕಾರದ ಒಡೆದಾಳುವ ನೀತಿ ಮತ್ತು ಇದು ಅವಿವೇಕದ ನೀತಿ. ಇದನ್ನು ಪ್ರತಿಭಟಿಸಬೇಕು.
ಈಗ ನಮ್ಮ ಮುಂದಿದೆ
ಈಗ ನಮ್ಮ ಮುಂದೆ ಮೇಲ್ಕಂಡ ಮೂರೂ ಕರಾಳ ವಿಧ್ವಂಸಕ ಕಾಯಿದೆಗಳು ಇವೆ. ಈ ಕಾಯಿದೆಗಳು ಅಸಂಖ್ಯ ಅನಾಹುತಗಳನ್ನು ಈಗಾಗಲೇ ಮಾಡಿಬಿಟ್ಟಿದೆ. ಕೃಷಿ ಭೂಮಿಯು ಭೂ ಮಾಫಿಯಾ ದವಡೆಗೆ ಸಿಕ್ಕಿ ಛಿದ್ರವಾಗುತ್ತಿದೆ. ಜನರ ಬದುಕೂ ಛಿದ್ರವಾಗುತ್ತಿದೆ. ರಾಜ್ಯದಲ್ಲಿ ಕೃಷಿ ಕ್ಷೇತ್ರವು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕೋಟಿಗಟ್ಟಲೆ ಜನರಿಗೆ ಉದ್ಯೋಗ ನೀಡುತ್ತಲಿತ್ತು. ಈ 2020ರ ಕಾಯಿದೆಯಿಂದಾಗಿ ನಿರುದ್ಯೋಗ ಮತ್ತೂ ಹೆಚ್ಚಾಗುತ್ತಿದೆ. ಕಾನೂನುಬಾಹಿರವಾದ ಆಸ್ತಿಯನ್ನು ಕಾನೂನುಬದ್ಧಗೊಳಿಸಲೋಸುಗ ಈ ಕಾಯಿದೆಯನ್ನು ಜಾರಿಗೊಳಿಸಿರುವುದು ಎಂಬ ಮಾತಿದೆ. ಇದರಲ್ಲೇ 50 ಸಾವಿರ ಕೋಟಿ ರೂಪಾಯಿಗಳಷ್ಟು ಗೋಲ್‍ಮಾಲ್ ನಡೆದಿದೆ ಎಂಬ ಸುದ್ದಿಯೂ ಇದೆ. ಒಟ್ಟಿನಲ್ಲಿ ಈಗ ಇರುವ ಸರ್ಕಾರ ಜನರ ಪ್ರತಿನಿಧಿ ಸರ್ಕಾರ ಅಲ್ಲ, ಬದಲಿಗೆ ಹಣ ಪ್ರತಿನಿಧಿ ಸರ್ಕಾರ. ಇಂದಿನ ರಾಜಕಾರಣ ಅಂದರೆ- “ಹಣ ಮಾಡುವುದಕ್ಕಾಗಿ ರಾಜಕಾರಣ, ಆ ಮಾಡಿಟ್ಟ ಹಣವನ್ನು ಕಾಯ್ದುಕೊಳ್ಳುವುದಕ್ಕಾಗಿ ಇರುವ ರಾಜಕಾರಣ” ಎಂಬಂತಾಗಿದೆ. ಇದನ್ನೆಲ್ಲಾ ನೋಡಿಕೊಂಡು ನಾವು ಸುಮ್ಮನೆ ಕೂರಬೇಕೆ?
ಸುಮ್ಮನೆ ಕೂತಿಲ್ಲ…
ಹೌದು, ಸುಮ್ಮನೆ ಕೂತಿಲ್ಲ. ಕರ್ನಾಟಕ ರಾಜ್ಯದಲ್ಲಿ ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಮತ್ತು ವಿದ್ಯಾರ್ಥಿ, ಯುವಜನ ಸಂಘಟನೆಗಳು ಜೊತೆಗೆ ನಾಡಿನ ಪ್ರಗತಿಪರರು ಎಲ್ಲ ಜೊತೆಗೂಡಿ ಸಂಯುಕ್ತ ಹೋರಾಟ, ಕರ್ನಾಟಕ ಎಂಬ ಐಕ್ಯತಾ ಒಕ್ಕೂಟ ವೇದಿಕೆ ರೂಪಿಸಿ ನಾಡಿನಾದ್ಯಂತ ಈ ಕರಾಳ ಮೂರು ಕಾಯ್ದೆಗಳನ್ನು ವಿರೋಧಿಸಿ ಅವಿರತ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಉದಾಹರಣೆಗೆ 2021, ಜನವರಿ 26 ರಂದು ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ನಡೆಯಿತು. ಎಲ್ಲಾ ದಿಕ್ಕುಗಳಿಂದಲೂ ರಾಜಧಾನಿಗೆ ಜನ ಬಂದರು. ಅಪಾರ ಸಂಖ್ಯೆಯ ಟ್ರ್ಯಾಕ್ಟರ್‍ಗಳು ರಾಜಧಾನಿಗೆ ಬಂದರೂ ಸರ್ಕಾರ ತಡೆದು ದಮನ ಮಾಡಿತು. ಇದಾದ ಮೇಲೆ 2021, ಮಾರ್ಚ್ 22 ರಂದು ರಾಜಧಾನಿಯಲ್ಲಿ ನಡೆದ ಬೃಹತ್ ರ್ಯಾಲಿ ಮತ್ತು ಸಮಾವೇಶಕ್ಕೆ ಉತ್ತರ ಪ್ರದೇಶದಿಂದ ರಾಕೇಶ್ ಟಿಕಾಯತ್ ಹಾಗೂ ಪಂಜಾಬ್‍ನಿಂದ ದರ್ಶನ್‍ಪಾಲ್ ಬಂದಿದ್ದರು. ಹೀಗೆ ಭಾರತದ ಇತರ ರಾಜ್ಯಗಳ ಎಚ್ಚೆತ್ತ ನಾಯಕತ್ವ ಕರ್ನಾಟಕದ ಸಂಯುಕ್ತ ಹೋರಾಟದಲ್ಲಿ ಭಾಗವಹಿಸಿದೆ. ಇಷ್ಟು ಮಾತ್ರವಲ್ಲ, ಯೋಗೇಂದ್ರ ಯಾದವ್ ಅವರು ಈ ಮೊದಲೇ ಕರ್ನಾಟಕ ರಾಜ್ಯಕ್ಕೆ ಅನೇಕ ಸಲ ಬಂದು ರಾಜ್ಯದ ವಿವಿಧ ಸಂಘಟನೆಗಳ ಜೊತೆ ಒಡನಾಡಿ ಹೋರಾಟಕ್ಕೆ ತಳಪಾಯ ಕಟ್ಟುವಲ್ಲಿ ಕೈ ಜೋಡಿಸಿದ್ದಾರೆ. ಇಷ್ಟು ಮಾತ್ರವಲ್ಲ, ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು, ಹೋಬಳಿ ಮಟ್ಟದಲ್ಲೂ ಈ ಮೂರು ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಚಳವಳಿ ನಡೆಯುತ್ತಲೇ ಬರುತ್ತಿದೆ- ನಿರಂತರವಾಗಿ.
ಆದರೆ ಸರ್ಕಾರಕ್ಕೆ ಜನರ ಕೂಗು ಕೇಳಿಸುತ್ತಿಲ್ಲ. ಅದರ ಕಣ್ಣು ಕುರುಡಾಗಿದೆ. ಅಥವಾ ಬೇಕಂತಲೇ ಕುರುಡು ಎಂಬಂತೆ ನಟಿಸುತ್ತಿದೆ. ಸರ್ಕಾರಕ್ಕೆ ಕಿವಿಗಳೂ ಕೇಳಿಸುತ್ತಿಲ್ಲ. ಅದರ ಕಿವಿ ಕಿವುಡಾಗಿದೆ ಅಥವಾ ಬೇಕಂತಲೇ ಕಿವುಡು ನಟಿಸುತ್ತಿದೆ. ಸರ್ಕಾರಕ್ಕೆ ಮೊದಲೇ ಹೃದಯವಿಲ್ಲ. ಕುತಂತ್ರವನ್ನೆ ಚಾಣಾಕ್ಷತನ ಅಂದುಕೊಂಡಿದೆ. ಅಂತಃಕರಣ ಪೈಸೆಯಷ್ಟೂ ಇಲ್ಲ. ಇದಕ್ಕಾಗೇ ಸರ್ಕಾರಕ್ಕೆ ಜನರ ಕೂಗು ಕೇಳುತ್ತಿಲ್ಲ.
ಇಂತಹ ಸಂವೇದನಾಹೀನ ಪರಿಸ್ಥಿತಿ ಇರುವುದರಿಂದಲೇ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಇದೇ 2022 ಮಾರ್ಚ್ ತಿಂಗಳ ಅಸೆಂಬ್ಲಿ ಅಧಿವೇಶನ ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಸಂದರ್ಭದಲ್ಲಿ 3 ಕರಾಳ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಪರ್ಯಾಯ ಜನಾಧಿವೇಶನ ಆಯೋಜಿಸಿದೆ. ಒಂದು ವಾರ ನಿರಂತರ ಧರಣಿ ಸತ್ಯಾಗ್ರಹ ರೂಪಿಸಿದೆ. ಇಂತಹ ಹೋರಾಟಗಳಲ್ಲಿ ನಾಡಿನ ಮೂಲೆ ಮೂಲೆಗಳಿಂದಲೂ ಜನಸಾಗರ ಕೂಡಿಕೊಳ್ಳಬೇಕು ಎಂದು ವಿನಂತಿಸಲು ಈ ಜನಾಂದೋಲನಗಳ ಮಹಾಮೈತ್ರಿಯ ಜನಜಾಗೃತಿ ಜಾಥಾ. ಎಲ್ಲರನ್ನೂ ಒಳಗೊಂಡು ಮುನ್ನಡೆಯಲು.
ನೆನಪಿಸಿಕೊಳ್ಳೋಣ
ನಮ್ಮ ಜೀವಿತಾವಧಿಯಲ್ಲೆ ಒಂದು ಅವಿಸ್ಮರಣೀಯ ಹೋರಾಟ ನಡೆಯಿತು. ಕರ್ನಾಟಕ ರಾಜ್ಯದಲ್ಲಿ ಹಾಲಿ ಇರುವ ಕೃಷಿ ಕಾಯಿದೆಯಂಥವುಗಳನ್ನು ಬಹಳ ಹಿಂದೆಯೇ ಕೇಂದ್ರ ಸರ್ಕಾರವೂ ಜಾರಿಗೆ ತರಲು ಹವಣಿಸಿತ್ತು. ಇದನ್ನು ಪ್ರತಿಭಟಿಸಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ಕೃಷಿ ಕಾರ್ಮಿಕರು ಹೀಗೆ ಹೀಗೆ ಎಲ್ಲಾ ಸಮುದಾಯದ ಜನವರ್ಗಗಳ ಬೆಂಬಲದೊಡನೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್.ಕೆ.ಎಂ.) ನೇತೃತ್ವದಲ್ಲಿ ಲಕ್ಷ ಲಕ್ಷ ಜನರು ಭಾರತದ ರಾಜಧಾನಿ ದೆಹಲಿಯ ನಾಕೂ ಮೂಲೆಗಳಲ್ಲಿ ದಂಡುಕಟ್ಟಿಕೊಂಡು ಲಗ್ಗೆ ಇಟ್ಟರು. ಅಲ್ಲಲ್ಲೇ ಟೆಂಟು ಹಾಕಿ ಜಗ್ಗದೆ ಕೂತರು. ಹಗಲು ರಾತ್ರಿ ಎನ್ನದೆ. ಒಂದು ದಿನವಲ್ಲ ಎರಡು ದಿನಗಳೂ ಅಲ್ಲ, ವರ್ಷಾನುಗಟ್ಟಲೆ. ಕರೋನ ಸಾಂಕ್ರಾಮಿಕ ಅಬ್ಬರಿಸುತ್ತಿದ್ದರೂ ಆ ದೆಹಲಿಯ ಕೊರೆಯುವ ಚಳಿಯಲ್ಲಿ, ಆ ದೆಹಲಿಯ ಕ್ರೂರ ಬಿಸಿಲಿನಲ್ಲಿ, ಆ ವೈಪರಿತ್ಯದ ಗಾಳಿಯಲ್ಲಿ, ಮಳೆಯಲ್ಲೂ ಕೂಡ ಅಲುಗಾಡದೆ ಕುಳಿತರು, ಲಕ್ಷ ಲಕ್ಷ ಜನರು. ಅಹಿಂಸಾತ್ಮಕವಾಗಿ.
ಈ ಐತಿಹಾಸಿಕ 2021ರ ಆಂದೋಲನವನ್ನು ಇಡೀ ಜಗತ್ತೇ ನಿಬ್ಬೆರಗಾಗಿ ನೋಡಿತು. ಈ ಆಂದೋಲನದ ಸತ್ವಕ್ಕೆ ಜಗತ್ತು ಸ್ಪಂದಿಸಿತು. ಆದರೆ ಕೇಂದ್ರ ಸರ್ಕಾರ ಕಣ್ಣೆತ್ತೂ ನೋಡಲಿಲ್ಲ. ಕೇಂದ್ರ ಸರ್ಕಾರವು ಸಂಚು-ವಂಚನೆ ಮಾಡುತ್ತಲೇ ಬಂತು. ಅಷ್ಟೇ ಅಲ್ಲ, ಕೊಡಬಾರದ ಕಷ್ಟ ಕೋಟಲೆ ಕೊಟ್ಟಿತು. ರಸ್ತೆಗಳಿಗೆ ಮೊಳೆ ಹೊಡೆದರು. ಸಿಮೆಂಟ್ ಗೋಡೆ ಕಟ್ಟಿ ಬಂದ್ ಮಾಡಿದರು. ಚಳವಳಿಗಾರರ ಮೇಲೆ ಜಲ ಪಿರಂಗಿ ಬಳಸಿದರು. ಟೆಂಟೊಳಗೆ ಅನಾಮಧೇಯರನ್ನು ನುಗ್ಗಿಸಿ ದಾಂಧಲೆ ಎಬ್ಬಿಸಿದರು. ವಿದ್ಯುತ್, ನೀರು, ಇಂಟರ್‍ನೆಟ್‍ಗಳನ್ನೂ ಕಡಿತಗೊಳಿಸಲಾಯಿತು! ಒಂದೆರಡಲ್ಲ, ಇದೆಲ್ಲಾವನ್ನು ನೋಡಿದರೆ, ಕೇಂದ್ರ ಸರ್ಕಾರ ಭೀತಿಗೊಂಡು ದೆಹಲಿಯನ್ನೇ ಸ್ವಯಂ ಬಂದ್ ಮಾಡಿಕೊಂಡಿದಿಯೇನೋ ಎಂಬಂತೆ ಗೋಚರಿಸುತ್ತಿತ್ತು.
ಸಂಯುಕ್ತ ಕಿಸಾನ್ ಮೋರ್ಚಾದ ಈ ವೀರೋಚಿತ ಅಹಿಂಸಾತ್ಮಕ ಜನಸಾಗರದ ಆಂದೋಲನವನ್ನು ನೋಡಿದರೂ ಪ್ರಧಾನಿ ಹಾಗೂ ಗೃಹಸಚಿವ ಅಮಿತ್ ಷಾ ಅವರು ತುಟಿಪಿಟಿಕ್ಕೆನ್ನದೆ ತಂತ್ರ ಕುತಂತ್ರದಲ್ಲೆ ನಿರತರಾಗಿದ್ದರು. ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಪ್ರಧಾನಿ ಮೋದಿಯವರಿಗೆ ‘ಒಂದು ನಾಯಿ ಸತ್ತರೂ ನೀವು ಸಂತಾಪ ಸೂಚಿಸುತ್ತೀರಿ, ಕೃಷಿ ಹೋರಾಟದಲ್ಲಿ ಭಾಗವಹಿಸಿದ್ದ ನೂರಾರು ಜನ ಸಾವನ್ನಪ್ಪಿದ್ದಾರೆ. ಈ ಕಾನೂನು ಹಿಂದಕ್ಕೆ ತೆಗೆದುಕೊಳ್ಳಿ’ ಎಂದು ವಿನಂತಿಸಿದ್ದಕ್ಕೆ, ಪ್ರಧಾನಿ ಮೋದಿಯವರು ‘ಆ ರೈತರೇನು ನನಗಾಗಿ ಸತ್ತಿದ್ದಾರೆಯೇ?’ ಎಂದು ಕೇಳುತ್ತಾರೆ! ಅಷ್ಟೊಂದು ನಿರ್ದಯತೆ! ಇದು ಯಾಕೋ ಮನುಷ್ಯರು ಆಳ್ವಿಕೆ ಮಾಡುತ್ತಿರುವ ಸರ್ಕಾರ ಅಲ್ಲ ಎಂದು ಅಸಹಾಯಕ ಜನಸ್ತೋಮ ಮಾತಾಡಿಕೊಳ್ಳುವಂತಾಯ್ತು. ಜನರ ಆಕ್ರೋಶ ದ್ವಿಗುಣಗೊಂಡಿತು.
ಕೊನೆಗೆ? ಕ್ರೂರ ಸರ್ವಾಧಿಕಾರಿಗಳೂ ಜನರ ಆಕ್ರೋಶಕ್ಕೆ ತಲೆ ಬಾಗಿಸಲೇ ಬೇಕಾಗುತ್ತದೆ ಎಂದು ಇತಿಹಾಸ ಹೇಳುತ್ತದೆ. ಕೊನೆಗೆ ಇಲ್ಲೂ ಅದೇ ಆಯ್ತು. ಪ್ರಧಾನಿ ಮೋದಿ, ಅಮಿತ್ಷಾ ಅವರು ಜಾರಿಗೊಳಿಸಲು ಹವಣಿಸಿದ್ದ ಆ ಮೂರು ಕಾಯಿದೆಗಳನ್ನು ಹಿಂತೆಗೆದುಕೊಳ್ಳಬೇಕಾಯ್ತು. ಆ ಕಾಯಿದೆಗಳನ್ನು ಹಿಂತೆಗೆದುಕೊಂಡರು.
ಆದರೆ ಕರ್ನಾಟಕದಲ್ಲಿ?
ಕೇಂದ್ರ ಸರ್ಕಾರವು ತರಲು ಹವಣಿಸಿದ್ದ ಅಂಥವೇ ಕಾಯಿದೆಗಳನ್ನು ಕರ್ನಾಟಕ ಸರ್ಕಾರ ಈಗಾಗಲೆ ಜಾರಿಗೊಳಿಸಿಬಿಟ್ಟಿದೆ! ಈ ಕಾನೂನುಗಳ ವಿರುದ್ಧ ಕರ್ನಾಟಕದ ನೆಲ ಈಗ ಒಂದು ನಿರ್ಣಾಯಕ ಹೋರಾಟವನ್ನು ಕೇಳುತ್ತಿದೆ.
ಅದಕ್ಕಾಗೇ ಜನಾಂದೋಲನ ಮಹಾಮೈತ್ರಿಯು ನಿಮ್ಮಲ್ಲಿಗೆ ಬಂದಿದೆ. ನಾವು ನಿಮ್ಮೊಳಗೆ ಬೆರೆತು ಒಂದಾಗಿ ಹೆಜ್ಜೆ ಇಡಲೋಸುಗ.
ಮತ್ತೆ ಮತ್ತೆ ನೆನಪಿಸಿಕೊಳ್ಳೋಣ
ಕರ್ನಾಟಕದ ಮಣ್ಣು ಇದೆಯಲ್ಲಾ ಇದು ಅನೇಕಾನೇಕ ಹೋರಾಟಗಳನ್ನು ನಡೆಸಿ ಹದಗೊಂಡ ಮಣ್ಣು ಇದು. ಈ ಮಣ್ಣಲ್ಲಿ ಆ ಹೋರಾಟಗಳ ಕಂಪನಗಳು ಇನ್ನೂ ಇದೆ. 12ನೇ ಶತಮಾನದಲ್ಲಿ ಈ ನೆಲದಲ್ಲಿ ವಚನಕಾರರು ನಡೆದಾಡಿದ್ದಾರೆ. ಅವರ ಹೆಜ್ಜೆ ಗುರುತುಗಳು ಬೆಳಕಾಗಿ ಈಗಲೂ ಕಾಣಿಸುತ್ತಿವೆ. ದುಡಿಯುವ ವರ್ಗ, ಯಾವುದೇ ಕಾಯಕವಾಗಿರಲಿ ಮೇಲು ಕೀಳೆನ್ನದೆ ಸಮಾನರಾಗಿ ಈ ಐಹಿಕ ಬದುಕಲ್ಲೆ ಮಹೋನ್ನತ ಆಧ್ಯಾತ್ಮಿಕ ಸ್ತರ ತಲುಪಿದ ವಚನ ಕಾಲಮಾನದ ಈ ಉದಾಹರಣೆ ಭೂಮಿ ಮೇಲೆ ಬಹುಶಃ ಎಲ್ಲೂ ಇರಲಾರದು. ಈ ಬೆಳಕು ನಮ್ಮ ಮುಂದಿದೆ. ಜೊತೆಗೆ ಕರ್ನಾಟಕದ ಈ ಮಣ್ಣಲ್ಲಿ ಅನೇಕಾನೇಕ ಸಾಧು ಸಂತರು, ತಪಸ್ವಿಗಳು, ಸೂಫಿ ಸಂತರು, ತತ್ವಪದಕಾರರು ಈ ಕರ್ನಾಟಕದ ನೆಲವನ್ನು ಉಳುಮೆ ಮಾಡಿದ್ದಾರೆ. ‘ಮನುಷ್ಯಜಾತಿ ತಾನೊಂದೇ ವಲಂ’ ಎಂದ ಪಂಪ, ‘ಸರ್ವಜನಾಂಗದ ಶಾಂತಿಯ ತೋಟ’ ಎಂದ ಕುವೆಂಪು ಅವರ ನುಡಿಗಳು ಇಲ್ಲಿ ಅನುರಣಿಸುತ್ತಿವೆ. ಕರ್ನಾಟಕ ಚರಿತ್ರೆಯು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಾರುತ್ತಲಿದೆ. ಇದನ್ನೆಲ್ಲಾ ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳೋಣ. ಈ ಬೆಳಕಲ್ಲಿ, ಕಟ್ಟೋಣ ನಾವು ಹೊಸ ನಾಡೊಂದನು. ಇದಕ್ಕಾಗೇ ಜನಾಂದೋಲನಗಳ ಮಹಾಮೈತ್ರಿ ಜಾಥಾ.
ಈಗ
ಎಲ್ಲರೂ ಜೊತೆಗೂಡಿ, ಒಟ್ಟಾಗಿ ಹೆಜ್ಜೆ ಹಾಕೋಣ. ಈಗ ಜನಾಂದೋಲನಗಳ ಮಹಾಮೈತ್ರಿ ನಡಿಗೆಯನ್ನು ನೀವು ನಾವು ಎಲ್ಲರೂ ಸೇರಿ ಮುನ್ನಡೆಸೋಣ…. ಹೀಗೆ ಜನಸಮುದಾಯವೇ ಜನಾಂದೋಲನ ಮಹಾಮೈತ್ರಿಯನ್ನು ಮುನ್ನಡೆಸಿದರೆ, ಆಗ, ಈ ನೆಲದಲ್ಲಿ ಸಾಂಘಿಕ ಶಕ್ತಿ ಹೊಮ್ಮುತ್ತದೆ. ಆಗ, ಸಮುದಾಯದ ಮಾತುಗಳು ಶಾಸನವಾಗುತ್ತದೆ. ದುಡಿಯುವ ವರ್ಗ ಉಸಿರಾಡುವಂತಾಗುತ್ತದೆ. ಈ ಹಿಂದೆ ಕಾರ್ಮಿಕ ಪರವಾಗಿದ್ದ 44 ಕಾಯಿದೆಗಳನ್ನು ಈಗ ಕೇಂದ್ರ ಸರ್ಕಾರವು ‘ಮಾಲೀಕ ಸ್ನೇಹಿ’ 4 ಕೋಡ್‍ಗಳನ್ನಾಗಿಸಿ ಎಲ್ಲೆಲ್ಲಿ ಜಾರಿ ಮಾಡಲಾಗಿದೆಯೋ, ಅಲ್ಲೆಲ್ಲಾ ಕಾರ್ಮಿಕರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಈ ನಡುವೆ ಬೆಲೆ ಏರಿಕೆ ಅದರಲ್ಲೂ ಪೆಟ್ರೋಲ್, ಗ್ಯಾಸ್, ಅಡುಗೆ ಎಣ್ಣೆ, ಕಾಳು-ಕಡ್ಡಿ ಮುಂತಾದ ಜನಜೀವನದ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ತಪ್ಪಿದಂತೆ ಏರುತ್ತಾ, ದಿನನಿತ್ಯದ ಜನಜೀವನವನ್ನು ಬೇಯಿಸುತ್ತಿದೆ. ಇಂತಹ ಎಲ್ಲಾ ಸಮಸ್ಯೆಗಳಿಗೂ ಉಳಿದಿರಬಹುದಾದ ಪರಿಹಾರವೆಂದರೆ ನಾವೆಲ್ಲರೂ ಒಗ್ಗೂಡಿ ಸಾಂಘಿಕ ಶಕ್ತಿಯಾಗಿ ಹೊಮ್ಮಬೇಕು. ಇದಾದರೆ ಇಂತಹ ಎಲ್ಲಾ ಸಮಸ್ಯೆಗಳೂ ಆ ಸಾಂಘಿಕ ಶಕ್ತಿಯ ಪ್ರಭಾವಳಿಯಲ್ಲಿ ಬಗೆಹರಿಯುವುದು ಕಷ್ಟ ಆಗುವುದಿಲ್ಲ. ಹಾಗೇ ಇಂದಿನ ಗುತ್ತಿಗೆ ಪದ್ಧತಿ ಕೂಡ ಬದಲಾಗುತ್ತದೆ. ಗುತ್ತಿಗೆ ಅಂದರೆ – ಅದು ಗ್ಯಾರಂಟಿ ಇಲ್ಲದ ಕೆಲಸ, ಅದು ಗ್ಯಾರಂಟಿ ಇಲ್ಲದ ಬದುಕು. ಬೇಕಾದಾಗ ಬಳಸಿ ಬೇಡವಾದಾಗ ಎಸೆಯುವ ಸಂಸ್ಕøತಿ. ಈ ಸಂಸ್ಕøತಿಯೂ ತೊಲಗುತ್ತದೆ. ಹಾಗೇ ಹಾಗೆ, ಆರೋಗ್ಯ, ಶಿಕ್ಷಣ ಎಲ್ಲವೂ ಎಲ್ಲವೂ ಸಮುದಾಯದ ಸಾಂಘಿಕ ಶಕ್ತಿಯ ಪ್ರಭಾವಳಿಯಲ್ಲಿ ಜೀವ ಪಡೆಯುತ್ತವೆ, ಅದಕ್ಕಾಗಿ, ಎಲ್ಲರೂ ಜೊತೆಗೂಡಿ, ಒಟ್ಟಾಗಿ ಹೆಜ್ಜೆ ಹಾಕೋಣ. ಈಗ, ಜನಾಂದೋಲನಗಳ ಮಹಾಮೈತ್ರಿ ನಡಿಗೆಯನ್ನು ನೀವು ನಾವು ಎಲ್ಲರೂ ಸೇರಿ ಮುನ್ನಡೆಸೋಣ….