ಜಗತ್ತಿನ ಬೆಳಕು ನೆಲ್ಸನ್ ಮಂಡೆಲಾ

[ನೆಲ್ಸನ್ ಮಂಡೇಲಾ ಅವರು 6.12.2013ರಂದು ತೀರಿಕೊಂಡ ಸಂದರ್ಭದಲ್ಲಿ ‘ವಿಜಯ ಕರ್ನಾಟಕ’ ಪತ್ರಿಕೆಗಾಗಿ ದೇವನೂರ ಮಹಾದೇವ ಅವರು ಬರೆದ ಟಿಪ್ಪಣಿ.]

ಡಿಸೆಂಬರ್ 6 ರಂದೇ ನೆಲ್ಸನ್ ಮಂಡೇಲಾ ಕಾಲದೊಂದಿಗೆ ಸೇರಿಬಿಟ್ಟರು. ಮಂಡೇಲಾರ ಮುಖ ಕಣ್ಮುಂದೆ ಬಂದಾಗಲೆಲ್ಲಾ, ಈ ವ್ಯಕ್ತಿ 27 ವರ್ಷಗಳ ಕಾಲ ಜೈಲಿನಲ್ಲಿದ್ದು ಹೊರಬಂದಾಗ ಜೈಲಲ್ಲಿ ಇದ್ದ ಯಾವ ಲಕ್ಷಣಗಳೂ ಆ ಜೀವದಲ್ಲಿ ಕಾಣುತ್ತಿಲ್ಲವಲ್ಲಾ ಮಂಡೇಲಾರ ಮಹಿಮೆ ಏನು ಎಂಬುದೇ ನನ್ನ ಮನಸ್ಸಿಗೆ ಬರುತ್ತಿತ್ತು. ಮುಂದೆ ಇದಕ್ಕೊಂದು ಜಾನಪದ ಕತೆಯ ರೀತಿಯ ಉತ್ತರವೂ ಸಿಕ್ಕಿತು. ಅದು ನಿಜವೋ ಸುಳ್ಳೋ ತಿಳಿಯದು- ಮಂಡೇಲಾ ಸ್ಥಳೀಯ ರಾಜನೊಬ್ಬನ ಮಗನಂತೆ. ಮಹಾ ಸೋಮಾರಿಯಂತೆ. ಹೆಚ್ಚು ನಿದ್ದೆ ಮಾಡುತ್ತಿದ್ದನಂತೆ. ಹಾಗಾಗಿ ಅವರಿಗೆ ಜೈಲಿನ ಜಗತ್ತಿಗೂ ಹೊರಗಿನ ಜಗತ್ತಿಗೂ ಅಂಥ ವ್ಯತ್ಯಾಸವೆ ತಿಳಿಯುತ್ತಿರಲಿಲ್ಲವಂತೆ – ಇದು ಕತೆ.

ಇದರ ಅರ್ಥ- ಮಂಡೇಲಾ ಇದ್ದರು. ಕೇಡಿನ ಸೋಂಕಿಲ್ಲದ ಒಳ್ಳೆತನದ ಅವರ ಇರುವಿಕೆಯೇ ಬುದ್ಧ ಕ್ರೈಸ್ತರ ಇರುವಿಕೆಯಂತೆ ಸುತ್ತಲನ್ನೂ ಆವರಿಸಿಕೊಳ್ಳುತ್ತಿತ್ತೇನೋ. ಅವರ ಇಡೀ ದೇಹವೇ ಬಹುಶಃ, ಹೃದಯ ಮಾತ್ರವಾಗಿತ್ತು ಕಾಣುತ್ತದೆ. ಆ ಹೃದಯದ ಬಡಿತಗಳು ಆ ದೇಹದ ಉಸಿರಾಟಗಳು ಮನುಷ್ಯ ಎಂಬ ಹೆಸರಲ್ಲಿ ಹುಟ್ಟಿದ ಮನುಷ್ಯನನ್ನು ಮಾನವೀಯನಾಗು ಅಂತಿತ್ತು. ಹಾಗಾಗೇ ದಕ್ಷಿಣ ಆಫ್ರಿಕಾ ಸ್ವತಂತ್ರ್ಯ ಪಡೆದ ಮೇಲೆ ಮಂಡೇಲಾರ ಇರುವಿಕೆಯ ಕಾರಣವಾಗೇ ’ಟ್ರೂತ್ ಅಂಡ್ ರಿಕನ್ಸಿಲಿಯೇಷನ್’ (ನಿಜ ಒಪ್ಪಿಕೊಂಡು ಮತ್ತೆ ಒಂದಾಗುವ ಪ್ರಕ್ರಿಯೆ) ಆಯೋಗ ರಚನೆಯಾಗುವುದು ಸಾಧ್ಯವಾಯಿತು. ಮಂಡೇಲಾ ಕರಿಯ-ಬಿಳಿಯರೆನ್ನದೆ ಆ ಮನುಷ್ಯರನ್ನೆಲ್ಲಾ ವಿಮೋಚನೆಗೊಳಿಸುವತ್ತ ಹೆಜ್ಜೆಯಿಟ್ಟರು. ಜಗತ್ತಿನ ಬೆಳಕಾದರು.

ಈ ಜಗತ್ತಿನ ಬೆಳಕು ಡಿಸೆಂಬರ್ ಆರರಂದು ಡಿಸೆಂಬರ್ ಆರರಂದೇ ಕಾಲವಶವಾದ ಇನ್ನೊಂದು ಜಗತ್ತಿನ ಬೆಳಕು ಡಾ.ಅಂಬೇಡ್ಕರ್‌ರ ಜತೆ ಈಗ ಕೂಡಿಕೊಂಡಿದೆ. ಅವಮಾನ ತಾರತಮ್ಯ ಬಡತನ ಸುಲಿಗೆಗೆ ತುತ್ತಾಗಿ ಹೊರಕ್ಕೆಸೆಯಲ್ಪಟ್ಟು ಜರ್ಜರಿತವಾದ ಮಾನವ ಕೋಟಿಗೆ ಬೆಳಕಾದ ಇವರು ಕಾಲವಶವಾದ ಈ ಒಂದೇ ದಿನವನ್ನು ಭೂಮಿಯ ಮೇಲೆ ಮನುಷ್ಯರೆಂಬ ಹೆಸರಿನಲ್ಲಿ ಹುಟ್ಟಿದ ನಾವು ಮಾನವೀಯ ಗೊಳ್ಳುವ ದಿನವಾಗಿ ಅಂದರೆ ಅವಮಾನ ತಾರತಮ್ಯ ಹಸಿವು ಸುಲಿಗೆ ಇಲ್ಲದ ಸಮಾನತೆಯ ಆಶಯದ ದಿನವನ್ನಾಗಿ ಆಚರಿಸಬೇಕಾಗಿದೆ.

ಈ ಇಬ್ಬರು ಕಾಲವಶವಾದ ದಿನವನ್ನು- ಈ ಜಗತ್ತು ಅಸಮಾನತೆಯ ’ಗ್ಲೋಬಲ್ ವಿಲೇಜ್’ ಕಡೆಗಲ್ಲ, ಸಮಾನತೆಯ ’ವಿಶ್ವಕುಟುಂಬ’ದ ಕಡೆಗೆ ಹೆಜ್ಜೆ ಹಾಕುವ ಕನಸಿನ ದಿನವನ್ನಾಗಿಸಬೇಕಾಗಿದೆ.

-ದೇವನೂರ ಮಹಾದೇವ