ಚುನಾವಣಾ ಅಖಾಡದಲ್ಲಿ ಒಂದಿಷ್ಟು ಮಾತು -ದೇವನೂರ ಮಹಾದೇವ

[ಮಂಡ್ಯದಲ್ಲಿ 21.4.2024ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳು 24.4.2024ರ  ವಾರ್ತಾಭಾರತಿಯಲ್ಲಿ ಲೇಖನದ ರೂಪದಲ್ಲಿ  ಪ್ರಕಟವಾಗಿದೆ]
ನಾನೀಗ ಹಿಂದಿನದು ಮಾತಾಡಲೋ ಅಥವಾ ಈಗಲದು ಮಾತಾಡಲೋ ಗೊಂದಲದಲ್ಲಿದ್ದೇನೆ. ಹಿಂದಿನದನ್ನು ಹೇಳದಿದ್ದರೆ ಈಗಲದು ಸ್ಪಷ್ಟವಾಗುವುದಿಲ್ಲ. ಹಾಗಾಗಿ 2006ನೆಯ ಇಸವಿಯಲ್ಲಿ ಕುಮಾರಸ್ವಾಮಿಯವರು ಕಾಂಗ್ರೆಸ್‌ನಿಂದ ಜೆಡಿಎಸ್ ಸಖ್ಯವನ್ನು ಮುರಿದು ಹಾಕಿ ಬಿಜೆಪಿ ಜೊತೆ ಸೇರಿ ಮುಖ್ಯಮಂತ್ರಿಯಾಗುತ್ತಾರಲ್ಲ ಆ ಸಂದರ್ಭ- ಅದೊಂದು ರೋಚಕ ಸಿನಿಮಾದಂತಿತ್ತು…
ನಾನೇನು ಈಗ ನಿಮಗೆ ಆ ಸಿನಿಮಾ ತೋರಿಸುವುದಿಲ್ಲ. ಈ ಬಗ್ಗೆ 2006ರಲ್ಲಿ ‘ಅಗ್ನಿ’ ಪತ್ರಿಕೆಯು ನನ್ನನ್ನು ಸಂದರ್ಶನ ಮಾಡಿತ್ತು. ಅದರ ತಲೆಬರಹ- ಅಪ್ಪಾಜಿ ದೇವೆಗೌಡ v/s ಅಧ್ಯಕ್ಷ ದೇವೇಗೌಡ! ಆಗ ದೇವೇಗೌಡರು, ತನ್ನ ಮಗ ಕೋಮುವಾದಿ ಪಕ್ಷ ಬಿಜೆಪಿ ಜೊತೆ ಸೇರಿ ಅಧಿಕಾರ ಹಂಚಿಕೊಳ್ಳುವುದನ್ನು ನೋಡಲಾರದೇ ತಳಮಳಿಸುತ್ತಿದ್ದರು. ಆ ದೃಶ್ಯ ಅಯ್ಯೋ ಅನ್ನಿಸುವಂತಿತ್ತು. ಆ ಸಂದರ್ಶನಕ್ಕೆ ಮೊದಲು ನಾನೊಂದು ಟಿಪ್ಪಣಿ ಬರೆದಿದ್ದೆ: ‘ಈ ರೀತಿ ತೊಳಲಾಟವಾಡುವುದರ ಬದಲು ಜೆಡಿಎಸ್‌ನ ರಾಷ್ಟ್ರಾ ಧ್ಯಕ್ಷರಾದ ದೇವೇಗೌಡರು, ತಾವೇ ನೇಮಿಸಿದ ರಾಜ್ಯಾಧ್ಯಕ್ಷ ತಿಪ್ಪಣ್ಣನವರನ್ನು ವಜಾ ಮಾಡಿದ್ದರೂ ಅಥವಾ ಕುಮಾರಸ್ವಾಮಿಯವರನ್ನು ಅಮಾನತ್ತಿನಲ್ಲಿಟ್ಟಿದ್ದರೂ ಈ ಬೆಳವಣಿಗೆ ಆಗ್ತಾ ಇರಲಿಲ್ಲ. ಅಥವಾ ಕುಮಾರಸ್ವಾಮಿ ಮತ್ತು ಅವರ ಬೆಂಬಲಿಗರಾದ 36 ಮಂದಿ ಶಾಸಕರ ನಡೆಗೆ ಮಾನ್ಯತೆ ನೀಡಬೇಡಿ ಎಂದು ದೇವೇಗೌಡರು ರಾಜ್ಯಪಾಲರಿಗೆ ವಿನಂತಿಸುವ ಬದಲು, ಸ್ಪೀಕರ್ ಕೃಷ್ಣ ಅವರಿಗೆ ಲಿಖಿತವಾಗಿ ನೀಡಿದ್ದರೆ ಅನಾಹುತ ತಪ್ಪಿಸಬಹುದಿತ್ತು. ಇದಾಗಲಿಲ್ಲ. ಒಟ್ಟಿನಲ್ಲಿ ಕುಮಾರಸ್ವಾಮಿ ಅಧಿಕಾರ ಹಿಡಿಯುವುದನ್ನು ತಪ್ಪಿಸದಂತೆ ದೊಡ್ಡಗೌಡರ ಚಹರೆ ಇತ್ತು! ಇದಕ್ಕೆ ಇಂಗ್ಲಿಷ್ ವಾರ್ತೆಯೊಂದರಲ್ಲಿ “ದೇವೇಗೌಡರು ಅಳುತ್ತಿದ್ದರೆ, ಜನ ನಗುತ್ತಿದ್ದಾರೆ” ಅಂತ ಬಂತು. ಈ ಸ್ಥಿತಿ ಯಾರಿಗೂ ಬರಬಾರದು.
ಆಗ ಕುಮಾರಸ್ವಾಮಿಯವರು ಸಮರ್ಥಿಸಿಕೊಳ್ಳುತ್ತಾ ಹೇಳ್ತಾರೆ- ‘ಕಾಂಗ್ರೆಸ್ ಅಪ್ಪನಿಗೆ ಅವಮಾನ ಮಾಡಿತು’ ಅಂತ. ಸಿದ್ದರಾಮಯ್ಯನವರು ದೇವೇಗೌಡರಿಗೆ ಘಾಸಿ ಮಾಡಿರಬಹುದು, ಕಾಂಗ್ರೆಸ್ ಅವಮಾನ ಮಾಡಿರಬಹುದು. ಆದರೆ ಕುಮಾರಸ್ವಾಮಿಯವರು ಮಾಡಿದ್ದೇನು?! ಕುಮಾರಸ್ವಾಮಿಯವರು ದೇವೇಗೌಡರ ವ್ಯಕ್ತಿತ್ವಕ್ಕೆ, ತಾತ್ವಿಕತೆಗೆ ಘಾಸಿ ಮಾಡಿದಂತೆ ಅಲ್ಲವೆ? ಕಾಂಗ್ರೆಸ್‌ನವರು ತನ್ನ ತಂದೆಯ ಟವಲ್ ಕಿತ್ತರು, ಸಿದ್ದರಾಮಯ್ಯ ತನ್ನ ತಂದೆಯ ರುಮಾಲ್ ಕಿತ್ತರು ಅಂತ ಕುಮಾರಸ್ವಾಮಿಯವರು ತನ್ನ ತಂದೆಯ ಅಂಗಿ ಲುಂಗಿಯನ್ನೇ ಕಿತ್ತು ಬೆತ್ತಲೆ ಮಾಡಿದಂತಲ್ಲವೆ? ಯಾರಿಂದ ಹೆಚ್ಚು ಅಪಮಾನ?’- ಹೀಗೆಲ್ಲಾ ಆ ಟಿಪ್ಪಣಿಯಲ್ಲಿ ಬರೆದಿದ್ದೆ.
ಈಗ ಆ ಸಂದರ್ಶನದ ಆಯ್ದ ಮೂರು ಪ್ರಶ್ನೋತ್ತರ ಹೀಗಿವೆ:
1. ಪ್ರ: ಬಿಜೆಪಿಗೆ ವಚನ ಕೊಟ್ಟುಬಿಟ್ಟಿದ್ದೆ. ವಚನ ಭ್ರಷ್ಟ ಆಗಲಾರೆ ಎಂದು ಕುಮಾರಸ್ವಾಮಿಯವರು ಗೋಳಾಡಿದ್ದಾರಲ್ಲ?
• ಕುಮಾರಸ್ವಾಮಿಯವರು ‘ಹತ್ತು ವರ್ಷ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ’ ಎಂದು ಐದು ಕೋಟಿ ಜನರಿಗೆ ಹೇಳಿದ್ದು ವಚನವಲ್ಲವೇ? ಇದು ವಚನ ಭ್ರಷ್ಟತೆ ಆಗಲಿಲ್ಲವೆ? ಇದಕ್ಕೆ ಯಾಕೆ ಗೋಳಾಡಲಿಲ್ಲ?
2. ಪ್ರ: ಹಾಗಾದರೆ ಇದೆಲ್ಲಾ ದೇವೇಗೌಡರ ಕೈವಾಡವೇ?
• ದೇವೇಗೌಡರು ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷರಾಗಿ ನಡೆದುಕೊಳ್ಳಲಿಲ್ಲ. ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಗೂ ಮತ್ತು ಕುಮಾರಸ್ವಾಮಿಯವರ ಅಪ್ಪಾಜಿ ದೇವೇಗೌಡರಿಗೂ ಯುದ್ಧ ನಡೆಯಿತು. ಇದರಲ್ಲಿ ಕುಮಾರಸ್ವಾಮಿಯವರ ಅಪ್ಪಾಜಿ ದೇವೇಗೌಡರು ಗೆದ್ದರು! ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಸೋತರು!!
3. ಏನೇ ಆಗಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಒಟ್ಟಾರೆ ಅವರ ಕುಟುಂಬಕ್ಕಾದ ಲಾಭವಲ್ಲವೆ?
• ಇದು ಹೇಗೆ ಕಾಣುತ್ತಿದೆಯೆಂದರೆ, ಜ್ಯೋತಿಷ್ಯದ ಪರಿಭಾಷೆಯಲ್ಲಿ ಹೇಳುವುದಾದರೆ- ‘ಕುಟುಂಬ ಕಲಹದ ನಡುವೆ ಕುಟುಂಬಕ್ಕೆ ಮುಖ್ಯಮಂತ್ರಿ ಲಾಭ. ಇದರಿಂದ ಮನೆತನಕ್ಕೆ ಅಪಕೀರ್ತಿ’
ಇಲ್ಲಿಗೆ 2006ರಲ್ಲಿ ಕರ್ನಾಟಕ ಜನತೆಗೆ ಜೆಡಿಎಸ್ ಉಣಬಡಿಸಿದ ಬೊಂಬಾಟ್ ಭೋಜನ ಸಾಕು.
ಈಗಲೂ ಕುಮಾರಸ್ವಾಮಿಯವರು ಅದೇ ಜೋಷ್‌ನಲ್ಲಿದ್ದಾರೆ. ಬಿಜೆಪಿ ಸಖ್ಯದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 2024ರ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಜಾತ್ರೆಯ ಗರದಿ ಗಮ್ಮತ್ತಿನ ಮ್ಯಾಜಿಕ್ ಡಬ್ಬದಲ್ಲಿ, “ಕುಮಾರಸ್ವಾಮಿ ಸೆಂಟ್ರಲ್ ಮಿನಿಷ್ಟರ್ ನೋಡು” ನೋಡುತ್ತಿದ್ದಾರೆ. ಆದರೆ 2006ರಲ್ಲಿದ್ದಂತೆ ದೇವೇಗೌಡರು ಈಗ ತಳಮಳಿಸುತ್ತಿಲ್ಲ. ಹಸನ್ಮುಖರಾಗಿ ಜೆಡಿಎಸ್‌ಗೂ ಬಿಜೆಪಿಗೂ ಕೂಡಾವಳಿ ಮಾಡಿಕೊಟ್ಟುಬಿಟ್ಟಿದ್ದಾರೆ!
ಈ ಹಿಂದೆ ಅವರು ಪ್ರಧಾನಿಯಾಗಿದ್ದಾಗ ಇಡೀ ದೇಶದ ಜನರು ತನ್ನ ಕುಟುಂಬವೇ ಎಂದು ಭಾವಿಸಿ, ಆಗ ದೇಶದಲ್ಲಿ ಪ್ರಕ್ಷುಬ್ಧವಾಗಿದ್ದ ಕಾಶ್ಮೀರ, ಈಶಾನ್ಯ ರಾಜ್ಯಗಳು, ಪಂಜಾಬ್ ಮುಂತಾದ ರಾಜ್ಯಗಳ ಪ್ರಜೆಗಳು ತನ್ನ ಬಂಧುಗಳು ಎಂಬಂತೆ ಧಾವಿಸುತ್ತಿದ್ದರು. ತಮ್ಮ ಸರಳ, ನೇರ ಹೃದಯವಂತಿಕೆಯಿಂದ ಅವರ ಕಷ್ಟಸುಖ ಆಲಿಸುತ್ತಿದ್ದರು. ಸಾಂತ್ವನ ಮಾಡುತ್ತಿದ್ದರು. ಹೀಗೆ ಕ್ರಿಯಾಶೀಲರಾದ ಪ್ರಧಾನಿಗಳು ವಿರಳ.
ಹೆಚ್.ಡಿ.ದೇವೇಗೌಡರು ತಮ್ಮ ಹತ್ತು ತಿಂಗಳ ಕಾಲಾವಧಿಯಲ್ಲಿ ಮಾಡಿದಷ್ಟು ಕಾರ್ಯಗಳನ್ನು, ಹತ್ತು ವರ್ಷ ಪ್ರಧಾನಿಯಾಗಿ ಕಾಲವ್ಯಯ ಮಾಡಿದ ಮೋದಿಯವರಿಗೆ ಸಾಧ್ಯವಾಗಲಿಲ್ಲ. ಮೋದಿಯವರು ಜನರ ಸಂಕಷ್ಟಗಳ ಕಡೆಗೆ ಕಣ್ಣೆತ್ತೂ ನೋಡಲಿಲ್ಲ. ಮೋದಿಯವರು ಮತ್ತು ದೇವೇಗೌಡರನ್ನು- ಪ್ರಧಾನಿಗಳಾಗಿ ಹೋಲಿಕೆ ಮಾಡಿದರೆ ಅಜಗಜಾಂತರ ವ್ಯತ್ಯಾಸ. ಹೀಗಿರುವಾಗ, ನಮ್ಮ ದೇವೇಗೌಡರು ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣನವರಿಗೆ ಪ್ರಚಾರ ಮಾಡುತ್ತಾ- ‘ವಿ.ಸೋಮಣ್ಣ ಸೋತರೆ ಮೋದಿಯವರಿಗೆ ನಾನು ಹೇಗೆ ಮುಖ ತೋರಿಸಲಿ?’ ಎಂದು ಗೋಳಾಡುತ್ತಾರೆ. ಇದೆಂತಹ ನಾಚಿಕೆಗೇಡು! ಹಾಗೆ ಇನ್ನೊಂದು ಹೇಳಿಕೆ ಕೊಡುತ್ತಾರೆ. ‘ಇಂಡಿಯಾ’ ಒಕ್ಕೂಟಕ್ಕೆ ಪ್ರಧಾನಮಂತ್ರಿ ಅಭ್ಯರ್ಥಿನೇ ಇಲ್ಲ ಅಂತ! ರಾಜಕೀಯ ಪಕ್ಷಗಳು ಚುನಾವಣಾ ಪೂರ್ವದಲ್ಲಿ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡುವುದರ ಬಗ್ಗೆ ಹಿರಿಯರಾದ ದೇವೇಗೌಡರು ಆ ರಾಜಕೀಯ ಪಕ್ಷಗಳ ಕಿವಿಹಿಂಡಿ- ‘ಮೂರ್ಖರಾ ಏನು ಮಾಡಲು ಹೊರಟಿದ್ದೀರಿ? ನಮ್ಮ ಚುನಾವಣಾ ಮಾದರಿಯು ಅಮೆರಿಕಾ ರೀತಿಯದ್ದಲ್ಲ. ನಮ್ಮ ಸಂವಿಧಾನದ ಪ್ರಕಾರ- ಸಂಸತ್ ಸದಸ್ಯರು ಆಯ್ಕೆಯಾದ ಮೇಲೆ, ಬಹುಮತ ಪಡೆದ ಪಕ್ಷದ ಸಂಸದರು ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ. ಹೀಗಿರುವಾಗ ಪ್ರಧಾನಿ ಅಭ್ಯರ್ಥಿಯನ್ನು ಚುನಾವಣೆಗೆ ಮೊದಲೇ ಘೋಷಣೆ ಮಾಡುವುದು ಸಂವಿಧಾನಕ್ಕೆ ಮಾಡುವ ಅಪಚಾರ. ನಮ್ಮ ಸಂವಿಧಾನವನ್ನು ದುರ್ಬಲ ಮಾಡಬೇಡಿ’ ಎಂದು ಗದರಿಸಬೇಕಿತ್ತು. ಆದರೆ ಅವರೇನೇ ‘ಇಂಡಿಯಾ ಒಕ್ಕೂಟಕ್ಕೆ ಪ್ರಧಾನಿ ಅಭ್ಯರ್ಥಿ ಇಲ್ಲ’ ಅಂತಾರಲ್ಲಪ್ಪ! ಜೊತೆಗೆ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಡಾ.ಸುಧಾಕರ್ ಅವರ ಪರವಾಗಿ ಪ್ರಚಾರ ಮಾಡುತ್ತಾ ‘ಮೋದಿಯವರು ಪ್ರಾಮಾಣಿಕರು’ ಅಂತಾನೂ ಹೇಳುತ್ತಾರೆ! ಅವರ ಮಾತುಗಳು ವ್ಯಂಗ್ಯವಾಗಿದ್ದರೆ ಚೆನ್ನಾಗಿತ್ತು.
ನಾನು ದೇವೇಗೌಡರಿಗೆ ಅರಳು-ಮರಳು ಅನ್ನುವುದಿಲ್ಲ. ಅವರಿಗೆ ಈ ವಯಸ್ಸಿನಲ್ಲೂ ನೆನಪಿನ ಶಕ್ತಿ ಅಗಾಧವಾಗಿದೆ. ಅವರು ಕಣ್ಣುಮುಚ್ಚಿ ಕುಳಿತುಕೊಂಡೂ ದೇಶದಲ್ಲಿ ನಡೆಯುವ ವಿದ್ಯಮಾನಗಳನ್ನು ನೋಡಬಲ್ಲರು, ಕೇಳಿಸಿಕೊಳ್ಳಬಲ್ಲರು. ಆ ಸಿದ್ಧಿ ಅವರಿಗಿದೆ. ಆದರೂ ಒಂದಿಷ್ಟು ಮೋದಿಯವರ ಮಾತುಗಳನ್ನು ದೇವೇಗೌಡರ ಮುಂದಿಡುತ್ತಿರುವೆ. ನೋಟ್‌ಬ್ಯಾನ್ ಮಾಡಿದ ಉದ್ವಿಗ್ನ ಸಂದರ್ಭದಲ್ಲಿ ಮೋದಿಯವರು ಉದುರಿಸಿದ ನುಡಿಮುತ್ತುಗಳು ಇವು: “ನಾನು ದೇಶದಿಂದ ಕೇವಲ 5೦ ದಿನಗಳನ್ನು ಮಾತ್ರ ಭಿಕ್ಷೆ ಬೇಡುತ್ತಿದ್ದೇನೆ. ನನ್ನದು ತಪ್ಪು ನಿರ್ಧಾರ ಎಂದು ಸಾಬೀತಾದರೆ, ನಾಕೂ ದಾರಿ ಸೇರುವ ಒಂದು ಸರ್ಕಲ್‌ನಲ್ಲಿ ನನ್ನನ್ನು ನಿಲ್ಲಿಸಿ, ನನಗೆ ಯಾವುದೇ ಶಿಕ್ಷೆ ವಿಧಿಸಿದರೂ ಆ ಶಿಕ್ಷೆ ಅನುಭವಿಸಲು ನಾನು ಸಿದ್ಧನಿದ್ದೇನೆ.”- ಇದು ದೇಶದ ಜನತೆಗೆ ಮೋದಿಯವರು ಕೊಟ್ಟ ವಚನ! ಆದರೆ ವಚನ ಪಾಲನೆ? ನಮೋ ನಮಃ!!! ಜನರು ಮೋದಿಯವರನ್ನು ನಂಬಿದಷ್ಟು ಬೇರೆ ಯಾರನ್ನೂ ನಂಬಲಿಲ್ಲ. ಆದರೆ ಮೋದಿಯವರಷ್ಟು ಜನರಿಗೆ ನಂಬಿಕೆ ದ್ರೋಹ ಮಾಡಿದವರು ಬೇರೆ ಯಾರೂ ಇಲ್ಲ. ಇಂತಹ ಮೋದಿಯವರು ಮೊನ್ನೆ ಮೈಸೂರು ಚುನಾವಣಾ ಪ್ರಚಾರ ಸಭೆಯಲ್ಲಿ- “ರಾಜ್ಯದ ಮನೆ ಮನೆಗೂ ಹೋಗಿ ನನ್ನ ಬಗ್ಗೆ ಹೇಳಿ” ಅಂತ ಕರೆ ಕೊಡುವ ಧೈರ್ಯ ಮಾಡುತ್ತಾರೆ! ಹೌದು, ವಚನ ಪಾಲನೆಯ ಪ್ರತೀಕ ರಾಮನನ್ನು ಈ ವಚನ ಭ್ರಷ್ಟರು ನೇಣಿಗೇರಿಸಿಬಿಟ್ಟರು ಎಂದು ಮನೆ ಮನೆಗೂ ಹೋಗಿ ಹೇಳಬೇಕಾಗಿದೆ. ಬಣ್ಣ ಬದಲಾಯಿಸುವ ಗೋಸುಂಬೆ ರಾಜಕಾರಣಕ್ಕೆ ನಾಚಿಕೆಯು ತಲೆತಗ್ಗಿಸಿ ನಿಂತಿದೆ!
ಆದರೆ ನಮ್ಮ ದೇವೇಗೌಡರಿಗೆ ತಿಳಿಯದೇ ಇರುವುದೇನಿದೆ? ಆದರೂ ಯಾಕೆ ಹೀಗೆಲ್ಲಾ ಮಾಡುತ್ತಿದ್ದಾರೆ? ಕಂಟ್ರೋಲ್ ತಪ್ಪಿದ ಮಗ ಎಲ್ಲಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾನೋ ಎಂಬ ಭೀತಿಯಿಂದ, ಇಳಿವಯಸ್ಸಿನಲ್ಲೂ ಮಗನ ಹಿಂದೆ ಧಾವಿಸುತ್ತಿರುವ ಅಸಹಾಯಕ ತಂದೆಯಂತೆ ಅವರು ಕಾಣಿಸುತ್ತಿದ್ದಾರೆ. ನಾನು ಈ ಮಾತನ್ನು ಸುಮ್ಮನೆ ಹೇಳುತ್ತಿಲ್ಲ. ಈ ಹಿಂದೆ 2006ರಲ್ಲಿ ಕುಮಾರಸ್ವಾಮಿಯವರು ಎಲ್ಲರನ್ನೂ ಧಿಕ್ಕರಿಸಿ ಬಿಜೆಪಿ ಜೊತೆ ಜೆಡಿಎಸ್ ಸೇರಿಕೊಂಡು ಮುಖ್ಯಮಂತ್ರಿಯಾದಾಗ, ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ದೇವೇಗೌಡರು ಕ್ರಮ ತೆಗೆದುಕೊಳ್ಳದ ಬಗ್ಗೆ ಅವರೊಡನೆ ಒಡನಾಟವಿದ್ದ ನನ್ನ ಪರಿಚಿತರೊಬ್ಬರು- ‘ಹೀಗೇಕೆ ಮಾಡಿಬಿಟ್ಟಿರಿ?’ ಎಂದು ಪ್ರಶ್ನಿಸಿದಾಗ ದೇವೇಗೌಡರು ನರಳುತ್ತಾ- “ನಾನೇನ್ ಮಾಡ್ಲಪ್ಪ, ಮಗ ನನ್ ಮಾತ್ ಕೇಳಲ್ಲ. ಎಲ್ಲಿ ಎಡವಟ್ಟು ಮಾಡಿಕೊಂಡು ಜೈಲು ಸೇರುತ್ತಾನೋ ಅಂತ ಆತಂಕ ನನಗೆ” ಎಂದು ಸಂಕಟಪಟ್ಟರಂತೆ. ಇದು ಸುಳ್ಳಾಗಿದ್ದರೆ ಅವರು ನನ್ನನ್ನು ಕ್ಷಮಿಸಲಿ!
ಕಳೆದ 2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನೂ ಸೇರಿಕೊಂಡಂತೆ ದಸಂಸ ಒಕ್ಕೂಟ, ರೈತಸಂಘ, ಎದ್ದೇಳು ಕರ್ನಾಟಕ… ಮುಂತಾದ ಹೋರಾಟದ ಸಂಘಟನೆಗಳೊಡನೆ ನಾಗರೀಕ ಸಮಾಜವೂ- ‘ಯಾರು ಬಿಜೆಪಿ ಸೋಲಿಸುತ್ತಾರೋ ಅವರಿಗೆ ಮತ ನೀಡಿ’ ಎಂದು ಕರೆ ನೀಡಿತ್ತು. ಆಗ ನಮ್ಮ ಬೆಂಬಲ ಕೆಲವು ಕಡೆ ಜೆಡಿಎಸ್‌ಗೂ ಇತ್ತು. ಆದರೀಗ… ಚುನಾವಣಾ ಪೂರ್ವದಲ್ಲೇ ಬಿಜೆಪಿ, ಜೆಡಿಎಸ್ ಕೂಡಾವಳಿಯಾದುದರಿಂದ ನಾವೀಗ ಬಿಜೆಪಿ ಜೊತೆಗೆ ಜೆಡಿಎಸ್‌ನ್ನು ಸೋಲಿಸಬೇಕಾಗಿದೆ. ಜೆಡಿಎಸ್‌ನಲ್ಲಿರುವ ಯುವಜನತೆಗೆ ಒಂದು ಮನವಿ- ನಿಮ್ಮ ಕೇಂದ್ರ ಕಚೇರಿಗೆ ಜೆಪಿ[ಜಯಪ್ರಕಾಶ್ ನಾರಾಯಣ್]ಭವನ ಎಂದು ಹೆಸರಿದೆ. ಸಾತ್ವಿಕರಾದ ಜೆಪಿಯವರು ತಮ್ಮ ಕೊನೆಗಾಲದಲ್ಲಿ- “ದ್ವಿಸದಸ್ಯತ್ವ ವಿಚಾರದಲ್ಲಿ ಆರ್‌ಎಸ್‌ಎಸ್, ಜನಸಂಘ[ಇಂದಿನ ಬಿಜೆಪಿ] ನನಗೆ ದ್ರೋಹ ಬಗೆದುಬಿಟ್ಟಿತು. ನಾನು ವಂಚನೆಗೆ ಒಳಗಾದೆ” ಎಂದು ಪರಿತಪಿಸುತ್ತಾರೆ. ನೀವಾದರೂ ಪರಿತಪಿಸುವಂತಾಗಬಾರದು. ಈಗಲೇ ಎಚ್ಚರವಹಿಸಿ ಎಂದು ವಿನಂತಿಸುವೆ.
ಜೆಡಿಎಸ್ ಎಂದಾಕ್ಷಣ ನನಗೆ ಆ ಪಕ್ಷದ ತೆನೆ ಇರುವ ಹೊರೆ ಹೊತ್ತ ಮಹಿಳೆ ಚಿಹ್ನೆ ಕಣ್ಮುಂದೆ ಬರುತ್ತದೆ. ಆ ಮಹಿಳೆಯ ಚಿತ್ರ ಘನತೆಯ ಕಾಯಕ ಜೀವಿ ಅನ್ನಿಸುವಂತಿದೆ. ಆದರೆ ಜೆಡಿಎಸ್, ಕೋಮುವಾದಿ ಬಿಜೆಪಿ ಜೊತೆ ಸೇರಿಕೊಂಡಾಕ್ಷಣವೇ ಅದರ ಹೆಸರಿಗೆ ಅಂಟಿಕೊAಡಿದ್ದ ಜಾತ್ಯಾತೀತ ಕಳಚಿ ಬಿತ್ತು! ಆ ಮಹಿಳೆಯು ಹೊತ್ತ ಹೊರೆಯಲ್ಲಿನ ತೆನೆಗಳನ್ನು ಬಿಜೆಪಿ ಕತ್ತರಿಸಿಕೊಳ್ಳುತ್ತದೆ- ಖಂಡಿತವಾಗಿ. ಆಗ ಈ ಮಹಿಳೆಯು ತೆನೆಯಿಲ್ಲದ ಖಾಲಿ ಹೊರೆ ಹೊತ್ತು ಘನತೆ ಇಲ್ಲದ ಸೇವಕಿಯಾಗಿ ದುಡಿಯುತ್ತಾಳೆ. ಮೋದಿಯವರು 2047ನೇ ಇಸವಿಗೆ ಕನಸು ಕಾಣುತ್ತಿರುವ ವಿಕಸಿತ ಭಾರತ ಅಥವಾ ಹಿಂದುತ್ವ ಭಾರತ ಇದೇನೇ! ಹಿಂದುತ್ವ ಅಂದರೆ- ಬಹುಸಂಖ್ಯಾತರಾದ ಮಾಜಿ ಶೂದ್ರರಾದ ಲಿಂಗಾಯಿತ, ಒಕ್ಕಲಿಗರಾದಿಯಾಗಿ ಉಳಿದೆಲ್ಲಾ ತಳಸಮುದಾಯಗಳನ್ನು ಮತ್ತೆ ಸೇವಕರನ್ನಾಗಿಸುವ ಹುನ್ನಾರ. ಇದು ಭಾರತಕ್ಕೆ ವಿಷವಿಕ್ಕಿದಂತೆ. ‘ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ… ಚಾತುರ್ವರ್ಣ ಸಮಾಜ ಉಂಟುಮಾಡುವುದೇ ದೇವರ ಸಾಕ್ಷಾತ್ಕಾರ’ ಎಂದು ಆರ್‌ಎಸ್‌ಎಸ್ ಗುರು ಗೋಲ್ವಾಲ್ಕರ್ ದಾಖಲು ಮಾಡಿದ್ದಾರೆ. 2047ರಲ್ಲಿ ಈ ದೇವರನ್ನು ಸಾಕ್ಷಾತ್ಕರಿಸಲು ಮೋದಿಯವರು 24×7 ಕಾರ್ಯತತ್ಪರರಾಗಿದ್ದಾರೆ. ಅವರ ವಿಕಸಿತ ಭಾರತಕ್ಕೆ ಅಡೆತಡೆ ಉಂಟುಮಾಡುವ ಸಂವಿಧಾನವನ್ನು ಬುಡಮೇಲು ಮಾಡಲು ಹೊರಟಿದ್ದಾರೆ. ಒಕ್ಕೂಟ ವ್ಯವಸ್ಥೆ, ಸ್ವಾಯತ್ತ ಸಂಸ್ಥೆಗಳನ್ನು ಹಾಳುಗೆಡವುತ್ತಿದ್ದಾರೆ. ಇಂತಹದಕ್ಕೆಲ್ಲಾ ಸಾಥ್ ಕೊಡಲು ಜೆಡಿಎಸ್ ಹೊರಟಿದೆ, ಜೊತೆಗೆ ಲಿಂಗಾಯತ, ಒಕ್ಕಲಿಗ, ತಳಸಮುದಾಯಗಳನ್ನು ಶೂದ್ರ ಸೇವಕರನ್ನಾಗಿಸಲು ಹೊರಟಿದೆ ಜೆಡಿಎಸ್! ಇದು ಕೂಡದು. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ+ಜೆಡಿಎಸ್ ಪಕ್ಷಗಳನ್ನು ರಾಜ್ಯದಲ್ಲಿ ಸೋಲಿಸಲೇಬೇಕಾಗಿದೆ. ಪ್ರಜೆಗಳು, ಪ್ರಜಾಪ್ರಭುತ್ವ, ಸಂವಿಧಾನ ಉಳಿಯಬೇಕಾದರೆ- ಬಿಜೆಪಿ+ಜೆಡಿಎಸ್ ಸೋಲಲೇಬೇಕಾಗಿದೆ. ಆಗ ಮಾತ್ರ ಬಹುತ್ವ ಭಾರತದ- ಸಹನೆ, ಸಹಬಾಳ್ವೆ, ನ್ಯಾಯ, ಸಮಾನತೆಯ ನಮ್ಮ ಪುರಾತನ ಧರ್ಮಗಳ ಸಂಸ್ಕೃತಿಯ ಉಳಿವು.
‎7 ಜನರು, ಡೈಸ್ ಮತ್ತು ‎ಪಠ್ಯ '‎ಕಾರ್ಯಣಿರದ ಕಾರಯ ಪತಕರ್ತರ មយ្ល حن ትዕጂ‎' ಹೇಳುತ್ತಿದೆ‎‎ ನ ಚಿತ್ರವಾಗಿರಬಹುದು