ಚೀನೀ ಮಹಿಳೆಯರ ಒಳ ದನಿ ”ನುಶು”-ಮಾಲತಿ ಪಟ್ಟಣಶೆಟ್ಟಿ
ಪುರುಷರ ವ್ಯಾವಹಾರಿಕ ಜಗತ್ತಿಗೆ ಪ್ರವೇಶವಿಲ್ಲದೆ ಕೆಳಸ್ತರಕ್ಕೆ ತಳ್ಳಿಸಿಕೊಂಡು ಹಲವು ಬಗೆಯ ಶೋಷಣೆಗಳಿಗೆ ಬಲಿಯಾದ ಅಂದಿನ ನಿರಕ್ಷರಿ ಬಡ ಗ್ರಾಮೀಣ ಮಹಿಳೆಯರು ತಮ್ಮ ಒಡಲುರಿಯನ್ನು ಅಭಿವ್ಯಕ್ತಿಸಲು ಬಳಸಿಕೊಂಡ ಈ ಭಾಷೆಯ ಹುಟ್ಟು ಆ ದಿನಮಾನದಲ್ಲಿ ಅನಿವಾರ್ಯವಾಗಿತ್ತು.ಸುಮಾರು ಐದುನೂರು ವರ್ಷಗಳಷ್ಟು ಹಿಂದೆಯೆ ಚೀನಾದ ಝಿಯಾವೊ ಮತ್ತು ಯಾಂಗಮಿಂಗ ನದಿಗಳಿರುವ ಝಿಯಾಂಗಯೊಂಗದ ಉತ್ತರ ಭಾಗದಲ್ಲಿನ ಹುನಾನದ ಗ್ರಾಮೀಣ ಪ್ರದೇಶಗಳಲ್ಲಿದ್ದ ಮಹಿಳೆಯರ ಕಲ್ಪನೆಯ ಕೂಸಾಗಿ ರೂಪಿತಗೊಂಡು ಬರೆಯಲಾದ ಭಾಷೆ ‘ನುಶು’. ಮಹಿಳೆಯರ ನಡುವೆ ತಮ್ಮ ತಮ್ಮೊಳಗಿನ ಸಂಪರ್ಕದ ಭಾಷೆಯಾಗಿ, ರಹಸ್ಯವಾಗಿ ಪ್ರಯೋಗಕ್ಕೆ ಒಳಗಾದ ವಿಶಿಷ್ಟ ಭಾಷೆ ಇದು.
‘ಪುರುಷ ಮನೆಯೊಡೆಯ, ಕುಟುಂಬಕ್ಕಾಗಿ ಹೊರಗೆ ದುಡಿಯುವವ, ವಂಶಪಾರಂಪರ್ಯವಾಗಿ ಕುಟುಂಬವನ್ನು ಮುನ್ನಡೆಸಿಕೊಂಡು ಕಾಪಾಡುವ ಉತ್ತರಾಧಿಕಾರಿ. ಆದ್ದರಿಂದ ವ್ಯವಹಾರ ನಡೆಸಲು ಅವನಿಗೆ ವಿದ್ಯೆ, ಶಿಕ್ಷಣದ ಅಗತ್ಯವಿದೆ. ಹೊರಗೆ ದುಡಿಯದ, ಕೇವಲ ಮನೆಗೆಲಸಗಳನ್ನು ಮಾಡಿಕೊಂಡಿರಬೇಕಾದ ಮಹಿಳೆಗೆ ವಿದ್ಯೆಯ ಅಗತ್ಯವಿಲ್ಲ. ಹಾಗೆ ವಿದ್ಯೆ ಕೊಡಲು ಮುಂದಾದರೆ ಅಂಥ ಪಾಲಕರ ಸಮಯ, ದುಡ್ಡಿನ ಅಪವ್ಯಯವಾಗುತ್ತದೆ. ಏನಿದ್ದರೂ ಅವಳ ಬದುಕು ಮುಚ್ಚಿದ ಬಾಗಿಲ ಹಿಂದಿನ ಗೌರವದ ಬದುಕು. ಆಕೆ ವಿಧೇಯಳಾಗಿ, ಮೌನವಾಗಿ, ಮಕ್ಕಳ ಪಾಲನೆ ಪೋಷಣೆ ಮಾಡಿಕೊಂಡಿದ್ದರೆ ಸಾಕು’- ಎಂದು ಆ ಕಾಲದ ಪುರುಷ ಪ್ರಧಾನ ಚೀನೀ ಸಮಾಜವು ತನ್ನ ಅನುಕೂಲಗಳಿಗೆ ಅನುಸಾರವಾಗಿ ನೀತಿ ಸಂಹಿತೆಯನ್ನು ರೂಪಿಸಿತ್ತು.
ಸೌಂದರ್ಯದ ನೆಪದಲ್ಲಿ ಪಾದಗಳನ್ನು ಕಿರಿದಾಗಿಸಿಕೊಳ್ಳಲು ಪಾದಗಳಿಗೆ ಚೀನೀ ಯುವತಿಯರು ಬಿಗಿ ಬಟ್ಟೆ ಸುತ್ತಿಟ್ಟುಕೊಳ್ಳಬೇಕೆಂಬ ಸಂಪ್ರದಾಯವೂ ಆಗ ಜಾರಿಯಲ್ಲಿತ್ತು. ಅದರ ಒಳಾರ್ಥ ಮನೆಯಿಂದ ಆಕೆ ಹೋಗಬಾರದು ಎಂದಾಗಿದ್ದು, ಪಂಜರದಲ್ಲಿಟ್ಟ ಗಿಳಿಯಂತೆ ನಿಸರ್ಗ ಹಾಗೂ ಮನುಷ್ಯ ಪ್ರಪಂಚದ ಎಲ್ಲ ಸಂಪರ್ಕಗಳಿಂದ ಆಕೆಯನ್ನು ದೂರ ಇಡಲಾಯಿತು. ಹೀಗೆ ಗೃಹಬಂಧನದಲ್ಲಿಡಲಾದ ಚೀನೀ ಮಹಿಳಾ ಲೋಕವು ಅಂತರಂಗದಲ್ಲಿ ಅದುಮಿಟ್ಟ ಅನುಭವಗಳ, ಭಾವಗಳ, ಪ್ರತೀಕಾರಗಳ ಅಭಿವ್ಯಕ್ತಿಗಾಗಿ ತನ್ನದೇ ಒಂದು ಭಾಷೆಯನ್ನು ಸೃಷ್ಟಿಸಿತು. ಇದು ಮಹಿಳೆಯರಿಂದ ಮಹಿಳೆಯರಿಗಾಗಿಯೇ ರೂಪಿಸಲಾದ ಹೃದಯದ ಭಾಷೆ. ಅಂತಹ ಭಾಷೆಯಾದ ‘ನುಶು’ ಪ್ರಪಂಚದ ಇತಿಹಾಸದಲ್ಲಿ ಹಿಂದೆಂದೂ ಕಾಣಸಿಗದ ಭಾಷೆಯಾಗಿ ಇಂದು ಅನೇಕರಲ್ಲಿ ರೋಮಾಂಚನವನ್ನುಂಟು ಮಾಡಿದೆ!
‘ನುಶು’ ಭಾಷೆಯ ಹುಟ್ಟಿನ ಸಮಯದ ಬಗ್ಗೆ ಖಚಿತ ಮಾಹಿತಿ ಸಿಗುವುದಿಲ್ಲ. ಸಿಕ್ಕ ಕೆಲವೇ ಕೆಲವು ವಸ್ತುಗಳು, ಸಾಕ್ಷ್ಯಾಧಾರಗಳು ಹಾಗೂ ಸಂಶೋಧನೆಗಳಿಂದ ಇದು ಚೀನೀ ಭಾಷೆಗೆ ಬಹಳ ಹತ್ತಿರವಾದದ್ದು ಎಂಬುದು ತಿಳಿದುಬಂದಿದೆ. ಇದರಲ್ಲಿ ಬಳಸಲಾದ ಮೂಲಾಕ್ಷರಗಳ ಸಂಖ್ಯೆ ಸುಮಾರು 2000, ಇದನ್ನು ಮೇಲಿನಿಂದ ಕೆಳಗೆ ಹಾಗೂ ಬಲದಿಂದ ಎಡಕ್ಕೆ ಬರೆಯುವ ಪದ್ಧತಿ ಇತ್ತು ಎಂಬುದೂ ತಿಳಿದುಬಂದಿದೆ. ದುಡಿಯುವ ಪುರುಷ ದುಡಿಮೆಗಾಗಿ ದಿನವಿಡೀ ಹೊರಗೆ ಹೋದ ಮೇಲೆ ಮನೆಗೆಲಸಗಳ ಏಕತಾನತೆಯಿಂದಾಗಿ ಬರಡಾಗಿ ಉಳಿದ ಬದುಕನ್ನು ನಾಲ್ಕು ಗೋಡೆಗಳ ನಡುವೆ ಕಳೆಯಬೇಕಾದದ್ದು ಮಹಿಳೆಗೆ ಒಂದು ಕ್ರೂರ ಶಿಕ್ಷೆಯಾಗಿತ್ತು. ಮಹಿಳೆಗೂ ಪ್ರೀತಿ ಬೇಡವೇ? ಸ್ನೇಹ ಬೇಡವೇ? ತನ್ನ ನೋವು ನಲಿವುಗಳನ್ನು ಹಂಚಿಕೊಳ್ಳಲು ಸಹಭಾಗಿಗಳು ಬೇಕಲ್ಲವೇ? ಒಳಗೊಳಗೇ ಒತ್ತಿಟ್ಟುಕೊಂಡ ಭಾವಗಳಿಗೆ ಅಭಿವ್ಯಕ್ತಿ ಬೇಡವೇ? ಆಕೆ ತನ್ನ ಈ ಎಲ್ಲ ಪ್ರಶ್ನೆಗಳಿಗೆ ತಾನೇ ಉತ್ತರ ಹುಡುಕಿಕೊಂಡಳು.
ವಿದ್ಯೆಯಿಲ್ಲ, ಭಾಷಾ ಜ್ಞಾನವಿಲ್ಲ ಮತ್ತು ತನ್ನ ರಹಸ್ಯದ ಭಾವಗಳು, ಅನುಭವಗಳು ಪುರುಷರಿಗೆ ತಿಳಿಯಬಾರದು ಎಂಬಂತಹ ವಿಚಾರಗಳೆಲ್ಲ ಅಂದಿನ ಮಹಿಳೆಯರ ತಳಮಳಗಳಾಗಿದ್ದವು. ಹಾಗಾಗಿ ತನ್ನ ಕೂಡು ಕುಟುಂಬದ ಎಲ್ಲ ಸದಸ್ಯರನ್ನೂ ಪ್ರೀತಿಯಿಂದ ಕರೆದಳು. ನೆರೆಹೊರೆಯ ಮಹಿಳೆಯರನ್ನೂ ಕೂಡಿಸಿಕೊಂಡಳು. ತನಗಾಗಿ ಒಂದು ಅಭಿವ್ಯಕ್ತಿಯ ಭಾಷೆ ರೂಪಿಸಿದಳು. ಆ ಭಾಷೆಯಲ್ಲಿ ಅಂತರಂಗದಲ್ಲಿ ಪಿಸುನುಡಿಯುವ ಮಾತಿಗೆ ಧ್ವನಿ ಕೊಟ್ಟಳು. ತನ್ನ ಮನರಂಜನೆಗಾಗಿ ಹಾಡು ಕಟ್ಟಿದಳು, ಕತೆ ಹೇಳಿದಳು. ಆತ್ಮೀಯಳಿಗೆ ಪತ್ರ ಬರೆದಳು. ಕೌತುಕದ ವಿಷಯವೆಂದರೆ ಈ ಮಹಿಳೆಯರೆಲ್ಲ ದೇವರ ಮುಂದೆ ನಿಂತು ಆಣೆ ಇಟ್ಟರು, ಪ್ರಮಾಣ ಮಾಡಿದರು. ‘ದೇವರೆ ನಾವು ಬದುಕಿನುದ್ದಕ್ಕೂ ಅಕ್ಕ ತಂಗಿಯರಂತೆ ಅನ್ಯೋನ್ಯವಾಗಿದ್ದು ರಹಸ್ಯವಾಗಿ ನಮ್ಮ ಸಂಕಷ್ಟಗಳನ್ನು ಹಂಚಿಕೊಂಡು ಹಗುರಾಗುತ್ತೇವೆ. ನಮ್ಮನ್ನು ನಾವೇ ರಮಿಸಿಕೊಳ್ಳುತ್ತೇವೆ. ಬೇಸರಕ್ಕೆ ಕೂಡಿ ಹಾಡಿಕೊಳ್ಳುತ್ತೇವೆ.
ಎಲ್ಲ ಮರೆತು ನಗುತ್ತೇವೆ, ಕುಣಿಯುತ್ತೇವೆ. ದೇವರೆ ಆಣೆ ಮಾಡುತ್ತೇವೆ, ನಾವೆಲ್ಲರೂ ಒಂದಾಗಿರುತ್ತೇವೆ’- ಹೀಗೆ ಆಣೆ ಇಡುವ ಸೋದರಿಯರ ಸಮೂಹಗಳ ಪರಂಪರೆ ಪ್ರಾರಂಭಗೊಂಡಿತು. ಈ ಕೂಟಗಳಿಗೆ ‘ಆಣೆ ಇಟ್ಟ ಅಕ್ಕ ತಂಗಿಯರು’ (sworn sisters) ಎಂದೇ ಕರೆಯುತ್ತಿದ್ದರು. ಈ ಮಹಿಳೆಯರ ಬರಹಗಳಲ್ಲಿ ತಮ್ಮ ಪಾಡನ್ನು ತೋಡಿಕೊಳ್ಳುವ ದೈನ್ಯತೆ ಅಷ್ಟೇ ಅಲ್ಲ, ಪುರುಷ ಪ್ರಧಾನ ಸಮಾಜದ ಅನ್ಯಾಯದ ವಿರುದ್ಧ ಪ್ರತಿಭಟನೆಯ ಅನೇಕ ಧ್ವನಿಗಳಿವೆ. ಆ ಕಾಲದ ರಾಜಕೀಯ ಸಾಮಾಜಿಕ ಸ್ಥಿತ್ಯಂತರಗಳಿಗೆ ಆ ಮಹಿಳೆಯರ ಪ್ರತಿಕ್ರಿಯೆಗಳಿವೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನಿನ ಆಕ್ರಮಣದ ವಿರುದ್ಧ ತೀವ್ರ ನಿಂದನೆಗಳೂ ‘ನುಶು’ ಭಾಷೆಯಲ್ಲಿ ದಾಖಲಾಗಿವೆ. ಇವರಿಗೆ ಗುರುಗಳಿಲ್ಲ, ಹೋಗಬೇಕಾದ ಶಾಲೆಗಳಿಲ್ಲ. ಕಲಿಸಬೇಕೆಂಬ ಮಾತಾಪಿತರ ವಾತ್ಸಲ್ಯವಿಲ್ಲ… ಈ ಎಲ್ಲ ‘ಇಲ್ಲ’ಗಳ ನಡುವೆ ಎಲ್ಲವನ್ನೂ ಪಡೆಯಲು ಬಿತ್ತಿ ಬೆಳೆದುಕೊಂಡ ಫಸಲು ನುಶು ಭಾಷೆ ಹಾಗೂ ಅದರಲ್ಲಿ ಬರೆದಿಟ್ಟ ಸಾಹಿತ್ಯ. ನುಶುವಿನಲ್ಲಿ ಈ ಮಹಿಳೆಯರು ತಮ್ಮ ಅಂತರಂಗದ ಲೋಕವನ್ನು ತೆರೆದಿಟ್ಟಿದ್ದಾರಷ್ಟೇ ಅಲ್ಲ, ಆ ಕಾಲದ ಗ್ರಾಮೀಣರ ಬದುಕಿನ ಗ್ರಾಮಾಯಣವನ್ನೇ ಬರೆದಿಟ್ಟಿದ್ದಾರೆ.
‘ನುಶು’ ಭಾಷಾ ಸಂಸ್ಕೃತಿಯಿಂದ ಸಿಕ್ಕ ಕೆಲವು ಬಳುವಳಿಗಳಲ್ಲಿ ಕುತೂಹಲ ಹುಟ್ಟಿಸುವ ಸಂಗತಿಯೆಂದರೆ ತಾವೇ ನೇಯ್ದ ಬಟ್ಟೆ, ಉಡುಗೆ, ಹೊದಿಕೆ, ಕೌದಿಗಳ ಮೇಲೆ ನುಶುವಿನಲ್ಲಿ ತಮ್ಮ ಅಭಿವ್ಯಕ್ತಿಗೆ ಅವರು ಎಡೆ ಮಾಡಿಕೊಟ್ಟಿರುವುದು. ಇದಕ್ಕೆ ಸಂಬಂಧಪಟ್ಟಂತೆ ಸಾಂಚೋಶು (Sanchaashu) ಎಂಬುದು ಬಟ್ಟೆಗಳ ಪುಟಗಳುಳ್ಳ ಬರಹಗಳ ಪುಟ್ಟ ಪುಸ್ತಕ. ಇದಕ್ಕೆ ‘Third Day Massive’ ಎಂದೂ ಹೆಸರಿದೆ. ಆ ಕಾಲದಲ್ಲಿ ಮನೆಯಲ್ಲಿ ಮದುವೆಯಾದ ಮೂರನೇ ದಿನ ಅತ್ತೆಯ ಮನೆಗೆ ಹೊರಟ ಮದುಮಗಳಿಗೆ ಸಾಂಚೋಶು ಪುಸ್ತಕವನ್ನು ಕೊಡುಗೆಯಾಗಿ ಕೊಡುವ ಪದ್ಧತಿ ಇತ್ತು. ಅದರಲ್ಲಿ ಇದ್ದದ್ದೇನು? ಗಂಡನಿಗೆ, ಗಂಡನ ಸಮಸ್ತ ಬಳಗಕ್ಕೆ ಹೇಗೆ ತಗ್ಗಿ ಬಗ್ಗಿ ನಡೆಯಬೇಕೆಂಬ ನೀತಿ ನಿಯಮಾವಳಿಯ ಪಟ್ಟಿ! ವಿಷಾದದ ಸಂಗತಿಯೆಂದರೆ, ಕಾಲಾಂತರದಲ್ಲಿ ಝಿಯಾಂಗಯೊಂಗ ಪ್ರದೇಶದ ನುಶು ಭಾಷೆ ಸಾವಕಾಶವಾಗಿ ಅಳಿವಿನತ್ತ ಸಾಗಿದೆ.
ಈಗ ಇದು ತನ್ನ ಮಹತ್ವ ಕಳೆದುಕೊಂಡಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ಇಪ್ಪತ್ತನೇ ಶತಮಾನದ ಲಿಂಗ ತಾರತಮ್ಯವಿಲ್ಲದ ಸರ್ವ ಸಮಾನ ಶಿಕ್ಷಣ ಪದ್ಧತಿಯ ಅನುಷ್ಠಾನ. ಈ ಬೆಳವಣಿಗೆಯು ಕಾಲಾನುಸಾರ ಸ್ವಾಗತಾರ್ಹ ಸಂಗತಿಯೇ. ಕಳೆದ ಒಂದು ಶತಮಾನದಲ್ಲಿ ಅನೇಕ ವಿದ್ಯಾಲಯಗಳಲ್ಲಿ ಮಹಿಳೆಯರು ವಿದ್ಯೆ ಪಡೆದು ಎಲ್ಲ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಚೀನಾದ ಸಾಂಸ್ಕೃತಿಕ ಕ್ರಾಂತಿಯ (1966ರಿಂದ 1976) ದಶಕದಲ್ಲಿ ನುಶು ಬರಹಗಳನ್ನು ಧ್ವಂಸ ಮಾಡಲಾಯಿತು. ನುಶು ಭಾಷಿಕ ಮಹಿಳೆಯರನ್ನು ಶಿಕ್ಷಿಸಿ ಅವಮಾನಿಸಲಾಯಿತು. ಇದೇ ಸಮಯದ ಆಸುಪಾಸಿನಲ್ಲಿ ಆಣೆಯಿಟ್ಟ ಅಕ್ಕತಂಗಿಯರ ಪರಂಪರೆಯಲ್ಲಿದ್ದ ಕೊನೆಯ ಹಿರಿಯ ಪೀಳಿಗೆಯ ಮಹಿಳೆಯರು ವಿಧಿವಶರಾದರು. ಹುನಾನದ ‘ನುಶು ಗಾರ್ಡನ್ ಸ್ಕೂಲ್’ನ ಕೊನೆಯ ಶಿಕ್ಷಕಿ ಯಾಂಗಹೌನಿ 2004ರಲ್ಲಿ ತೀರಿಕೊಂಡಳು.
ಹೀಗೆ ನುಶು ಪರಂಪರೆಯ ಅವಸಾನವಾಯಿತು! ಆದರೆ ಫೋರ್ಡ್ ಫೌಂಡೇಷನ್‌ನಂತಹ ಅಂತರರಾಷ್ಟ್ರೀಯ ಸಂಸ್ಥೆಯು ನುಶು ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಸಂಶೋಧನೆಗಾಗಿ ಮತ್ತು ವಸ್ತುಸಂಗ್ರಹಕ್ಕಾಗಿ ಯೋಜನೆಗಳನ್ನು ಹಾಕಿಕೊಂಡಿತ್ತು. ಆದರೆ ಈ ಯೋಜನೆಗಳನ್ನೂ ನಿಷೇಧಿಸಲಾಯಿತು. ಈ ಬೆಳವಣಿಗೆಗಳ ನಡುವೆಯೂ ಚೀನಾ ದೇಶದ ಸುಪ್ರಸಿದ್ಧ ಸಂಗೀತಜ್ಞ ಟಾನ್ ಡುನ್ ಅವರು ನುಶು ಭಾಷೆಗಾಗಿ, ನುಶು ಭಾಷಿಕ ಆ ಮಹಿಳಾ ಸಮೂಹದ ಸ್ಮರಣೆಗಾಗಿ ‘Nu Su- The Secret Songs of Woman’ (ಮಹಿಳೆಯರ ಅಂತರಂಗದ ಗೀತೆಗಳು) ಎಂಬ ಹೆಸರಿನ ಸಂಗೀತ ಸಂಯೋಜನೆಯನ್ನು ದಾಖಲಿಸಿದ್ದಲ್ಲದೆ, ಒಂದು ಚಲನಚಿತ್ರವನ್ನೂ ರೂಪಿಸಿದ್ದಾರೆ. ಇದಕ್ಕಾಗಿ ಟಾನ್ ಡುನ್ ಐದು ವರ್ಷಗಳ ಕಾಲ ಹಗಲಿರುಳೂ ತಿರುಗಾಡಿ ಸಂಶೋಧನೆ ಮಾಡಿದ್ದಾರೆ.
ಹೀಗೆ ಒಂದು ಅಪರೂಪದ ಚರಿತ್ರೆಯುಳ್ಳ ನುಶು ಭಾಷೆಯ ಸಾಹಿತ್ಯ, ಸಂಸ್ಕೃತಿಗೆ ಜಗತ್ತಿನ ಇತಿಹಾಸದಲ್ಲಿ ಒಂದು ಸ್ಥಾನಮಾನವಿದೆ. ಐದು ನೂರು ವರ್ಷಗಳ ಹಿಂದೆಯೇ ನುಶು ಸಾಹಿತ್ಯ ಹಾಗೂ ಸಂಸ್ಕೃತಿಯಲ್ಲಿ ಸ್ತ್ರೀ ಸಂವೇದನೆಯ, ಮಹಿಳೆಯರ ಸ್ವಾತಂತ್ರ್ಯಕ್ಕಾಗಿದ್ದ ಕೂಗಿನ ಸ್ತ್ರೀವಾದಿ ಚಿಂತನೆಗಳ ಕುಡಿಯೊಡೆದಿತ್ತು ಎಂಬುದು ವಿಶೇಷ. ಬಳಿಕ ಎಚ್ಚೆತ್ತುಕೊಂಡ ದೇಶ ವಿದೇಶಗಳ ಮಹಿಳೆಯರ ಚಿಂತನೆಗಳು, ಚಳವಳಿಗಳು ಹಾಗೂ ಪ್ರಪಂಚದಾದ್ಯಂತ ಒಂದು ಕ್ರಾಂತಿಯನ್ನು ತಂದ ಸ್ತ್ರೀವಾದವು ಇಂದಿನ ಮಹಿಳೆಯರಿಗಾಗಿ ಪ್ರಶಸ್ತವಾದ ಜಗತ್ತನ್ನು ರೂಪಿಸಿವೆ.
ಆದರೆ ಸ್ತ್ರೀ ಸಂವೇದನೆಯ ಚರಿತ್ರೆಯಲ್ಲಿ ನುಶು ಭಾಷಿಕ ಮಹಿಳೆಯರ ಚರಿತ್ರೆ ಕುತೂಹಲಕಾರಿ ಆಗಿದೆಯಾದ್ದರಿಂದ ಈ ಕುರಿತು ಸಂಶೋಧನೆಗಳು ಆಗಬೇಕಿವೆ. ಮರೆವಿನ ಮರೆಗೆ ಸಾಗಿ ಹೋದ ಈ ಭಾಷೆಯಲ್ಲಿ ದಾಖಲಾದ ಅನುಪಮ ಸ್ತ್ರೀ ಸಂವೇದನೆಯನ್ನು ನಮ್ಮ ಪೀಳಿಗೆಯ ಯುವಜನರು ಅಧ್ಯಯನ ಮಾಡಿ, ಅಂದಿನ ಆ ಮಹಿಳಾ ಲೋಕವನ್ನು ನೆನೆಯಬೇಕಾದುದು ಅಪೇಕ್ಷಣೀಯವೆಂದು ಮಾತ್ರ ನಾನಿಲ್ಲಿ ಹೇಳಬಯಸುತ್ತೇನೆ.