ಚಳವಳಿಗಾರರಿಗೆ ಅರ್ಥವಾಗದ ರಾಜಕೀಯ ಹದ-ಸಾಹಿತಿ ದೇವನೂರ ಮಹಾದೇವ ವಿಶ್ಲೇಷಣೆ
ಶಿವಮೊಗ್ಗ: ‘ಚಳವಳಿಗಾರರಿಗೆ ರಾಜಕೀಯದ ಹದ ಬೇಗ ಅರ್ಥವಾಗು ವುದಿಲ್ಲ. ಹಾಗಾಗಿ ಚುನಾವಣೆಗಳಲ್ಲಿ ಠೇವಣಿ ಕಳೆದುಕೊಳ್ಳುತ್ತಾರೆ. ರಾಜಕಾರಣದ ತಳಪಾಯವನ್ನು ಗಟ್ಟಿ ಮಾಡಿಕೊಂಡರೆ ಗೆಲುವು ನಿಶ್ಚಿತ’ ಎಂದು ಸಾಹಿತಿ ದೇವನೂರ ಮಹಾದೇವ ಪ್ರತಿಪಾದಿಸಿದರು.
ಪ್ರೆಸ್ ಟ್ರಸ್ಟ್ ಸಂಸ್ಥೆಯು ಶಿವಮೊಗ್ಗದಲ್ಲಿ ಭಾನುವಾರ ಹಮ್ಮಿ ಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ರೈತ ಸಂಘ, ದಲಿತ ಸಂಘಟನೆಗಳು ರಾಜ್ಯದಲ್ಲಿ ಸಾಕಷ್ಟು ಜನಪರ ಚಳವಳಿಗಳನ್ನು ರೂಪಿಸಿದ್ದರೂ ರಾಜಕೀಯ ಲಾಭ ಪಡೆಯಲು ಸಾಧ್ಯ ವಾಗಲಿಲ್ಲ. ಸರ್ವೋದಯ ಪಕ್ಷವೂ ಚುನಾವಣೆ ಎದುರಿಸಲು ವಿಫಲ ವಾಯಿತು. ಈ ಕುರಿತು ಆತ್ಮಾವಲೋಕನ ಮಾಡಿಕೊಂಡಿದ್ದೇವೆ’ ಎಂದರು.
‘ನಮ್ಮ ದೃಷ್ಟಿಕೋನಗಳು ಶಾಸನಸಭೆ, ಸಂಸತ್ ಕೇಂದ್ರೀಕೃತ ವಾಗಿದ್ದವು. ತಳಪಾಯ ರಾಜಕಾರಣದ ಮಹತ್ವ ಅರ್ಥಮಾಡಿಕೊಳ್ಳದ ಪರಿಣಾಮ ಸೋಲು ಅನುಭವಿಸ ಬೇಕಾಯಿತು’ ಎಂದು ವಿಶ್ಲೇಷಿಸಿದರು.
‘ಭ್ರಷ್ಟಾಚಾರ ಸಾಂಸ್ಥೀಕರಣ ಗೊಂಡಿರುವ ಈ ಸಮಯದಲ್ಲಿ ಯಾರೇ ಅಧಿಕಾರ ಪಡೆದರೂ ವ್ಯವಸ್ಥೆಯ ಕೊಳಕು ನಿರ್ಮೂಲನೆಗೆ ಸಾಕಷ್ಟು ಶ್ರಮ ಹಾಕಲೇಬೇಕು. ಹಳೆಯ ವಿಚಾರ ಗಳನ್ನೆಲ್ಲಾ ಮರೆತು ಹೊಸತನದ ರಾಜಕಾರಣಕ್ಕೆ ತಳಪಾಯ ಹಾಕಬೇಕು. ಅದಕ್ಕಾಗಿ ಎಲ್ಲರೂ ಗ್ರಾಮಗಳತ್ತ ಚಿತ್ತ ಹರಿಸಬೇಕು’ ಎಂದರು.
‘ಪ್ರತಿ ಗ್ರಾಮದ ಇರುವ ಮೂಲಸೌಕರ್ಯ, ಪ್ರಾಥಮಿಕ ಶಿಕ್ಷಣ, ಆರೋಗ್ಯ ಸೇವೆ, ಉದ್ಯೋಗ ಖಾತ್ರಿ ಅನುಷ್ಠಾನದತ್ತ ಗಮನಹರಿಸಬೇಕು. ವಿದ್ಯಾವಂತ ಕಾರ್ಯಕರ್ತರು ಮಕ್ಕಳಿಗೆ ರಾತ್ರಿ ಪಾಠ ಮಾಡಬೇಕು. ಜಾನುವಾರಿಗೆ ಬೇಕಾದ ಮೇವು ಅಲ್ಲಿಯೇ ದೊರೆಯಬೇಕು. ನೈಸರ್ಗಿಕ ಕೃಷಿ ಉತ್ತೇಜಿಸಬೇಕು. ಲೇವಾದೇವಿ ಸಂಘ ಗಳಾಗಿರುವ ಮಹಿಳಾ ಸ್ವಸಹಾಯ ಸಂಘಗಳನ್ನು ಪುನಶ್ಚೇತನಗೊಳಿ ಸಬೇಕು’ ಎಂದು ಸಲಹೆ ನೀಡಿದರು.
‘ಗ್ರಾಮಗಳ ಮಟ್ಟದಲ್ಲಿ ಹೊಸ ಜನಾಂದೋಲನ ರೂಪುಗೊಳ್ಳಬೇಕು. ಆ ಮೂಲಕ ತಳಪಾಯ ರಾಜಕಾರಣಕ್ಕೆ ಮುನ್ನುಡಿ ಬರೆಯಬೇಕು’ ಎಂದರು.
‘ಬಂಡವಾಳಶಾಹಿಗಳು ಇಂದು ಶಿಕ್ಷಣ ನೀತಿ ರೂಪಿಸುತ್ತಿದ್ದಾರೆ. ಆರೋಗ್ಯ, ಶಿಕ್ಷಣ ಕ್ಷೇತ್ರ ಖಾಸಗಿ ಪಾಲಾಗುತ್ತಿದೆ. ಸರ್ಕಾರಗಳು ಇಂತಹ ಮೂಲಸೌಕರ್ಯ ನಿರ್ವಹಣೆ ಮಾಡುತ್ತಿಲ್ಲ. ಮಾಧ್ಯಮ ಕ್ಷೇತ್ರವೂ ಉದ್ಯಮವಾಗಿ ಬೆಳೆದಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಉತ್ತರ ಪ್ರದೇಶದಲ್ಲಿನ ಬಿಜೆಪಿ ಗೆಲುವು ಎಲ್ಲರಿಗೂ ಪಾಠ ಆಡಳಿತ ವಿರೋಧಿ ಅಲೆ ಆ ಪಕ್ಷಕ್ಕೆ ವರವಾಗಿದೆ ಎಂದು ಚರ್ಚೆಯಾಗುತ್ತಿದೆ. ಆದರೆ, ಫ್ಯಾಸಿಸಂ, ಮೂಲಭೂತವಾದ ಎಲ್ಲ ಬದಿಗಿಟ್ಟು ನೋಡಿದರೂ ಅದರ ಹಿಂದೆ ಬಿಜೆಪಿ ತಳಪಾಯ ರಾಜಕಾರಣದ ಶ್ರಮ ಅರ್ಥವಾಗುತ್ತದೆ.
ಬಿಹಾರದಲ್ಲಿ ಸೋಲು ಕಂಡ ಮರುದಿನವೇ ಉತ್ತರ ಪ್ರದೇಶದ ಪ್ರತಿ ಬೂತ್ ಮಟ್ಟದಲ್ಲೂ ತಳಪಾಯ ರಾಜಕಾರಣಕ್ಕೆ ಒತ್ತು ನೀಡಲಾಗಿದೆ. ಆ ಶ್ರಮ ಫಲಿತಾಂಶದ ಮೂಲಕ ಹೊರಬಂದಿದೆ’ ಎಂದು ವಿಶ್ಲೇಷಿಸಿದರು.
‘ದಕ್ಷಿಣಾಯನದ ಮೂಲಕ ಭಾರತದ ಸಾಂಸ್ಕೃತಿಕ ಪ್ರಜ್ಞೆ, ವಿವೇಕ ಜಾಗೃತಗೊಳಿಸುವ ಕೆಲಸ ನಡೆಯುತ್ತಿದೆ. ಜನರಿಗೆ ಹೊಸ ದಿಕ್ಕು ತೋರುತ್ತಿದೆ. ಮುಂದೆ ಸಹನೆ, ಪ್ರೀತಿಗೂ ದಾರಿ ಮಾಡಿ ಕೊಡುತ್ತದೆ’ ಎಂದು ಭವಿಷ್ಯ ನುಡಿದರು.
‘ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್, ಯೋಗೇಂದ್ರ ಯಾದವ್ ಬಣ ಒಟ್ಟಿಗೆ ಇದ್ದಿದ್ದರೆ ಸದ್ಯದ ರಾಜಕಾರಣದ ಚಿತ್ರ ಇನ್ನಷ್ಟು ಬದಲಾಗುತ್ತಿತ್ತು. ಈಗ ಸ್ವರಾಜ್ ಇಂಡಿಯಾ ಸಂಘಟನೆ ಹೊಸ ರಾಜಕೀಯ ಭಾಷ್ಯಕ್ಕೆ ಮುನ್ನುಡಿ ಬರೆಯುತ್ತಿದೆ’ ಎಂದು ಹೇಳಿದರು.
‘ತಳಪಾಯ ರಾಜಕಾರಣದತ್ತ ದೃಷ್ಟಿ ಹರಿಸಿದೆ. ಹೊಸಮುಖಗಳಿಗೆ ಮನ್ನಣೆ ನೀಡುತ್ತಿದೆ. ಇಲ್ಲಿ ಗುರುತಿಸಿಕೊಂಡವರು ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆಯುವ ಭರವಸೆ ಮೂಡಿಸಿದರೂ ಜನರು ಗೆಲುವಿನ ದಡ ಸೇರಿಸುತ್ತಾರೆ’ ಎಂದು ಭರವಸೆ ವ್ಯಕ್ತಪಡಿಸಿದರು. ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ಶಿ.ವಿ.ಸಿದ್ದಪ್ಪ ಉಪಸ್ಥಿತರಿದ್ದರು.