ಚಳವಳಿಗಳು ಪ್ರಗತಿಯ ಚಾಲಕ ಶಕ್ತಿಯಾಗಲಿ -ವಿ. ನಟರಾಜು
ಕರ್ನಾಟಕದ ಮಟ್ಟಿಗೆ ಹಲವು ದಶಕಗಳ ನಂತರ ಮತ್ತೆ ದಲಿತರ, ದಮನಿತರ ಹೋರಾಟ ಮುಂಚೂಣಿಗೆ ಬಂದಿದೆ. ಗುಜರಾತ್ ನ ಊನಾದಲ್ಲಿ ಗೋವಿನ ಕಳೇವರ ಸಾಗಿಸುತ್ತಿದ್ದ ದಲಿತರ ಮೇಲೆ ನಡೆದ ಹಲ್ಲೆ ಹಾಗೂ ಗೋರಕ್ಷಣೆಯ ಹೆಸರಲ್ಲಿ ದೇಶದೆಲ್ಲೆಡೆ ದಲಿತರು ಹಾಗೂ ಮುಸಲ್ಮಾನರ ಮೇಲೆ ಮತೀಯಶಕ್ತಿಗಳು ಎಸಗುತ್ತಿರುವ ದೌರ್ಜನ್ಯಗಳಿಗೆ ಪ್ರತ್ಯುತ್ತರವೆನ್ನುವಂತೆ ಪ್ರಗತಿಪರ ಹೋರಾಟಗಾರ ಜಿಗ್ನೇಶ್ ಮೇವಾನಿ ಗುಜರಾತ್ ನಲ್ಲಿ ಆರಂಭಿಸಿದ ಊನಾ ಚಲೋ ಚಳವಳಿ ಈಗ ದೇಶದೆಲ್ಲೆಡೆ ಹಲವು ದನಿಗಳನ್ನು ಕಂಡುಕೊಳ್ಳುತ್ತಿದೆ, ಲಕ್ಷಾಂತರ ಸಂಖ್ಯೆಯಲ್ಲಿ ಪ್ರಗತಿಪರ ಮನಸ್ಸುಗಳನ್ನು ತಾಕುತ್ತಿದೆ. ಭಾನುವಾರ ಉಡುಪಿಯಲ್ಲಿ ಪ್ರಗತಿಪರ, ಜೀವಪರ ಮನಸ್ಸುಗಳು ನಡೆಸಿದ ಸ್ವಾಭಿಮಾನಿ ಸಮಾವೇಶ ಕೂಡ ಇಂಥದ್ದೊಂದು ಪ್ರತಿಧ್ವನಿಯೇ. ಹಾಗೆ ನೋಡಿದರೆ ಗೋವನ್ನು ಮುಂದೆ ಮಾಡುತ್ತ ದಲಿತರು, ಮುಸಲ್ಮಾನರು, ಕ್ರಿಶ್ಚಿಯನ್ನರು ಹಾಗೂ ಆನೇಕ ಆದಿವಾಸಿ ಸಮುದಾಯಗಳನ್ನು ಪರೋಕ್ಷವಾಗಿ ಅಂಚಿಗೆ ತಳ್ಳುವ, ಅವರ ಆಚಾರ ವಿಚಾರಗಳನ್ನು ತುಚ್ಛೀಕರಿಸುತ್ತ ಉಳಿದ ಸಮುದಾಯಗಳನ್ನು ಒಗ್ಗೂಡಿಸುವ ಪ್ರಯತ್ನ ಬಹಳ ಹಿಂದಿನಿಂದಲೂ ಈ ದೇಶದಲ್ಲಿ ನಡೆಯುತ್ತಲೇ ಬಂದಿದೆ. ವರ್ಣವ್ಯವಸ್ಥೆಯನ್ನು ಬಹಿರಂಗವಾಗಿ, ಗುಪ್ತವಾಗಿ ಪ್ರತಿಪಾದಿಸುವ ಈ ದೇಶದ ವೈದಿಕ ಶಕ್ತಿಗಳು ತಮ್ಮ ಚಿಂತನೆಗಳಿಗೆ ಬಲವನ್ನು ತುಂಬುವ ಜರೂರತ್ತು ಬಿದ್ದಾಗಲೆಲ್ಲ ಲಾಂಛನಗಳನ್ನು ಹುಡುಕಿಕೊಂಡಿವೆ. ಇಂಥದ್ದೇ ಕೆಲಸವನ್ನು ಎಲ್ಲ ಧರ್ಮಗಳ ಮೂಲಭೂತವಾದಿಗಳೂ ಕಾಲದಿಂದ ಕಾಲಕ್ಕೆ ಮಾಡುತ್ತಲೇ ಬಂದಿದ್ದಾರೆ. ಯಾವಾಗ ಯಾವುದೇ ಧರ್ಮದ ಮೂಲಭೂತವಾದಿಗಳಿಗೆ ತಮ್ಮೆದುರಿನ ರಕ್ತಮಾಂಸಗಳಿಂದ ತುಂಬಿದ ಮನುಷ್ಯರೊಡನೆ ಸಂವಾದಿಸುವುದು ಕಷ್ಟವಾಗುತ್ತದೋ, ಅವರು ಎತ್ತುವ ಪ್ರಶ್ನೆಗಳಿಗೆ ಉತ್ತರಿಸುವುದು ಅಸಹನೀಯವಾಗುತ್ತದೋ ಆಗೆಲ್ಲ ಅವರನ್ನು ಹತ್ತಿಕ್ಕಲು ಲಾಂಛನಗಳ ಅಗತ್ಯ ಬೀಳುತ್ತದೆ. ಗೋವನ್ನು ಅಂಥ ಒಂದು ಲಾಂಛನವಾಗಿ ಪರಿವರ್ತಿಸಿಕೊಳ್ಳುವಲ್ಲಿ ಈ ಶಕ್ತಿಗಳು ತಕ್ಕಮಟ್ಟಿಗೆ ಯಶಸ್ವಿಯಾಗಿವೆ. ಪಾವಿತ್ರ್ಯದ ಕಲ್ಪನೆ, ಶ್ರೇಷ್ಠತೆಯ ವ್ಯಸನ, ಮೇಲುಕೀಳಿನ ಮನೋಭಾವ ಇಂಥವುಗಳ ಹಿಂದೆ ಅಭಿಮಾನಕ್ಕಿಂತ ಹೆಚ್ಚಾಗಿ ಕುತ್ಸಿತ ಮನೋಭಾವವೇ ಹೆಚ್ಚು ಕೆಲಸ ಮಾಡಿರುತ್ತದೆ. ಇಡೀ ಜಗತ್ತು ಇಂದು ಅಸಹನೆಯ ಮೊಟ್ಟೆಯಾಗಿರುವುದರ ಹಿಂದೆ ಎಲ್ಲ ಧರ್ಮಗಳಲ್ಲಿ ವ್ಯಾಪಕವಾಗಿ ಹಬ್ಬಿನಿಂತಿರುವ ಮೂಲಭೂತವಾದಿ ಚಿಂತನಾಕ್ರಮಗಳ ಕಾವಿದೆ.
ದಿನನಿತ್ಯ ಗೋವಿನ ಸೆಗಣಿ, ಗಂಜಲ ಬಳಿಯುತ್ತ ತಮ್ಮ ಹೊಲಮನೆಗಳಲ್ಲಿ ಅವುಗಳೊಂದಿಗೆ ಒಡನಾಡುವ, ದುಡಿಸಿಕೊಳ್ಳುವ ಈ ದೇಶದ ಕೃಷಿಕರಿಗೆ, ಅವು ಸತ್ತಾಗ ಒಯ್ಯುತ್ತಿದ್ದ ದಲಿತರಿಗೆ, ಅನುತ್ಪಾದಕವಾದಾಗ ಕೊಂಡು ಸಾಗುವ ಕಸಾಯಿಗೆ ಹೀಗೆ ಇವರಿಗೆಲ್ಲ ಗೋವು ಇದ್ದಾಗಲೂ, ಸತ್ತಾಗಲೂ ಮನುಷ್ಯನನ್ನು ಪೋಷಿಸುತ್ತಲೇ ಇರುವ ಜೀವವಾಗಿ ಕಾಣುತ್ತಿತ್ತೇ ಹೊರತು ಮನುಷ್ಯ ಮನುಷ್ಯರನ್ನು ಕತ್ತರಿಸುವ ಲಾಂಛನವಾಗಿ ಕಂಡಿರಲಿಲ್ಲ. ಅದೆಲ್ಲ ಕಾಣುವುದು ವಿಭಜಿಸುವ ಶಕ್ತಿಗಳಿಗೆ ಮಾತ್ರ. ಗೋವನ್ನು ಬಳಸಿಕೊಂಡು ಭೂಮಿಯಲ್ಲಿ ಬೆಳೆ ತೆಗೆಯುವ ಮಣ್ಣಿನ ಮಕ್ಕಳು ಒಂದೆಡೆಯಾದರೆ ಅದೇ ಗೋವನ್ನು ಬಳಸಿಕೊಂಡು ಮತೀಯ ರಾಜಕಾರಣದ ಬೆಳೆ ತೆಗೆಯುವ ಶಕ್ತಿಗಳು ಇನ್ನೊಂದೆಡೆ. ಸಾಮಾನ್ಯವಾಗಿ ಅಧಿಕಾರ ರಾಜಕಾರಣದಲ್ಲಿ ಎರಡು ಬಗೆಯ ದಾರಿಗಳು ಫಲನೀಡುತ್ತವೆ. ಒಂದು ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನಾಭಿಪ್ರಾಯವನ್ನು ರೂಪಿಸುವುದು ಮತ್ತೊಂದು ಭಾವೋದ್ರೇಕಗಳ ಮೂಲಕ ಜನರನ್ನು ಸೆಳೆದಿಟ್ಟುಕೊಳ್ಳುವುದು. ಮೊದಲನೆಯ ವಿಧಾನ ವೈಚಾರಿಕವೂ, ಜನಪರವೂ ಆದಂಥದ್ದು. ಹೆಚ್ಚು ಶ್ರಮ, ಸಮಯ ಹಾಗೂ ಬದ್ಧತೆಯನ್ನು ಬೇಡುವಂಥದ್ದು. ಆದರೆ ಎರಡನೆಯದು ಶುದ್ಧ ನಾಟಕೀಯ ಹಾಗೂ ಢೋಂಗಿತನದಿಂದ ಕೂಡಿದ ಜೀವವಿರೋಧಿ ಹಾದಿ. ಇದಕ್ಕಾಗಿ ಮನಸ್ಸುಗಳಲ್ಲಿ ವಿಷದ ಬೀಜಗಳನ್ನು ನೆಟ್ಟರಾಯಿತು. ಇತ್ತೀಚಿನ ವರ್ಷಗಳಲ್ಲಿ ನಮ್ಮ ಬಹುತೇಕ ರಾಜಕೀಯ ಪಕ್ಷಗಳು ಮೊದಲನೆಯ ಹಾದಿ ಹಿಡಿದದ್ದಕ್ಕಿಂತ ಎರಡನೆಯ ಹಾದಿಯಲ್ಲಿ ಹೆಜ್ಜೆ ಹಾಕಿದ್ದೇ ಹೆಚ್ಚು. ಜಗತ್ತಿನೆಲ್ಲೆಡೆ ಬಲಪಂಥೀಯ ಶಕ್ತಿಗಳಿಗೆ ಪ್ರಿಯವಾದ ಹಾದಿ ಕೂಡ ಇದೇ ಆಗಿದೆ. ದ್ವೇಷಿಸದೆ ಗೆಲ್ಲಲಾಗದು, ಭೀತಿ ಹುಟ್ಟಿಸದೆ ಬದುಕಲಾಗದು ಎನ್ನುವುದು ಇವುಗಳ ಮಂತ್ರ. ಹಾಗಾಗಿಯೇ ಯಾವುದೇ ಸಮಾಜದ ಒಳಗಣ್ಣು ತೆರೆಯದಂತೆ ತಡೆಯುವುದು ಇವುಗಳ ಮೊದಲ ಕೆಲಸ. ಇದಕ್ಕಾಗಿ ಈ ಶಕ್ತಿಗಳು ಸ್ವವಿಮರ್ಶೆಯ ಜಾಗದಲ್ಲಿ ಸ್ವಮರುಕವನ್ನು, ಸ್ವಾಭಿಮಾನದ ಜಾಗದಲ್ಲಿ ನಿಷ್ಠೆಯನ್ನು ಹುಟ್ಟಿಹಾಕಲು ಸದಾ ವ್ಯಸ್ತವಾಗಿರುತ್ತವೆ. ಈ ಶಕ್ತಿಗಳಿಗೆ ಆಲೋಚಿಸುವ ಮನುಷ್ಯರೆಂದರೆ ಸೇರದು, ಬದಲಿಗೆ ಅಂಧಾನುಕರಿಸುವ ಪರಾವಲಂಬಿ ಮನಸ್ಸುಗಳೆಂದರೆ ಪ್ರಿಯ.
ಕೃಷಿಕರ ಕೊಟ್ಟಿಗೆಯಲ್ಲೋ, ಹೊಲಗಳಲ್ಲಿಯೋ ಇದ್ದುಕೊಂಡು ಈ ದೇಶದ ಗ್ರಾಮೀಣ ಆರ್ಥಿಕತೆಯನ್ನು ನಿರ್ವಹಿಸುತ್ತಿರುವ ಗೋವನ್ನು ವಿಚಾರಹೀನ ಉಢಾಳರು ಮಾತ್ರ ಮತೀಯ ರಾಜಕಾರಣಕ್ಕೆ ಎಳೆತಂದು ಲಾಂಛನ ಮಾಡಿಕೊಳ್ಳುವ ಲಾಭಕೋರತನ ಪ್ರದರ್ಶಿಸಬಲ್ಲರು. ಬಹುಶಃ ಇಂಥ ಅತಿಗಳಿಂದಾಗಿಯೇ ಇಂದು ದಲಿತರು, ‘ಗೋವಿನ ಬಾಲವನ್ನು ನೀವೇ ಇಟ್ಟುಕೊಳ್ಳಿ ನಮಗೆ ಉಳಲು ಭೂಮಿ ಕೊಡಿ’ ಎಂದು ದಿಟ್ಟವಾಗಿ ತಿರುಗಿಬಿದ್ದಿರುವುದು. ಇದೆಲ್ಲ ಅನೇಕ ದಶಕಗಳ ಹಿಂದೆಯೇ ಘಟಿಸಬೇಕಿತ್ತು. ಈ ದೇಶದ ಸ್ವಾಸ್ಥ್ಯದ ದೃಷ್ಟಿಯಿಂದ ನೋಡುವುದಾದರೆ ಮೊದಲು ಮತೀಯಶಕ್ತಿಗಳು ರಾಜಕಾರಣದ ಪಡಸಾಲೆಯಿಂದ ಗೋವನ್ನು ಹೊರತಂದು ಕೃಷಿಕರ ಕೊಟ್ಟಿಗೆಯಲ್ಲಿ ಕಟ್ಟುವುದು ಒಳಿತು. ಅದೇರೀತಿ ಅದರ ದೇಖಾರೇಖಿಯ ಹೊಣೆಯನ್ನು ಎಂದಿನಂತೆ ಕೃಷಿಕನಿಗೆ ಒಪ್ಪಿಸುವುದೇ ಕ್ಷೇಮ. ಅದರ ಒಡನಾಟ, ಬಳಕೆ, ವಿಲೇವಾರಿ ಇದೆಲ್ಲದರ ಬಗ್ಗೆ ನಿರ್ಧಾರ ಕೈಗೊಳ್ಳಲು ಅವನಿಗಿಂತ ಅರ್ಹರಿಲ್ಲ. ಅದಕ್ಕೆಂದೇ ಗ್ರಾಮೀಣ ವ್ಯವಸ್ಥೆಯಲ್ಲಿ ಹಲವಾರು ದಾರಿಗಳಿವೆ. ಗೋರಕ್ಷಣೆಯ ಹೆಸರಿನಲ್ಲಿ ದಲಿತರು, ಮುಸ್ಲಿಮರು, ಆದಿವಾಸಿಗಳು, ಕ್ರಿಶ್ಚಿಯನ್ನರ ವಿರುದ್ಧ ವ್ಯಾಪಕವಾಗಿ ದ್ವೇಷವನ್ನು ಬೆಳೆಸುವ, ಆ ಮೂಲಕ ಸಂವಿಧಾನ ವಿರೋಧಿ ಪ್ರಭುತ್ವವನ್ನು ನಿರ್ಮಿಸಲು ಅಡಿಪಾಯ ಹಾಕುವ ಕೆಲಸ ಗಂಭೀರವಾದ ಸಂಘರ್ಷಗಳಿಗಷ್ಟೇ ಕಾರಣವಾಗುತ್ತದೆ. ದೇಶದ ನಾಗರಿಕರ ನಡುವೆ ದ್ವೇಷವನ್ನು ಬಿತ್ತುವ ಈ ಹೀನ ಕೆಲಸ ಅಕ್ಷರಶಃ ದೇಶದ್ರೋಹಿ ಕೆಲಸ. ಎಡ, ಬಲ ಯಾವುದೇ ಚಿಂತನೆಯ ರಾಜಕೀಯ ಪಕ್ಷಗಳೂ ಇಂಥದ್ದಕ್ಕೆಲ್ಲ ಕುಮ್ಮಕ್ಕು ನೀಡಬಾರದು. ಅವರವರ ಆಯ್ಕೆಯ ಆಹಾರ ಅವರವರ ತೆಟ್ಟೆಯಲ್ಲಿ, ಹೊಟ್ಟೆಯಲ್ಲಿ ಇರಲಿ. ಇನ್ನೊಬ್ಬರ ತೆಟ್ಟೆಯಲ್ಲಿ ಇಣುಕುತ್ತ ದ್ವೇಷವನ್ನು ಕೆದಕುವ ಕುತ್ಸಿತ ಮನಸ್ಸುಗಳಿಗೆ ಉಚಿತವಾಗಿ ಮಾನಸಿಕ ಚಿಕಿತ್ಸೆ ಸಿಗಲಿ. ಈ ಮಾತು ಹೇಳಿದೊಡನೆಯೇ ನರಭಕ್ಷಣೆ ಮಾಡುವವರನ್ನು ಏನು ಮಾಡಬೇಕು ಎಂದೆಲ್ಲ ವಿತಂಡವಾದ ಹೂಡುವವರಿದ್ದಾರೆ. ಮನುಷ್ಯರನ್ನು ತಿನ್ನುವವರು ನರಭಕ್ಷಕರಾದರೆ, ಆಹಾರದ ಹೆಸರಿನಲ್ಲಿ ಹಿಂಸೆಗೆ ಪ್ರೋತ್ಸಾಹಿಸುವವರು, ಜೀವಗಳಿಗೆ ಎರವಾಗುವವರು ನರಹಂತಕರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಮೇಲಿನ ವಿಚಾರಗಳೆಲ್ಲ ಒಂದೆಡೆಯಾದರೆ, ದಲಿತರು, ದಮನಿತರು, ಪ್ರಗತಿಪರರು ಗಂಭೀರವಾಗಿ ಚಿಂತಿಸಬೇಕಾದ, ಸಂಘಟನಾತ್ಮಕವಾಗಿ ಹೆಚ್ಚು ರಚನಾತ್ಮಕ ಹಾಗೂ ಕ್ರಿಯಾಶೀಲ ಹಾದಿಗಳನ್ನು ಹುಡುಕಿಕೊಳ್ಳಬೇಕಾದ ಸವಾಲು ಮತ್ತೊಂದೆಡೆ ಇದೆ. ಕನ್ಹಯ್ಯ ಕುಮಾರ್, ಜಿಗ್ನೇಶ್ ಮೆವಾನಿಯಂಥ ಹೊಸ ಪೀಳಿಗೆಯ ಪ್ರಗತಿಪರ ಮನಸ್ಸುಗಳು ಇಂದು ಪ್ರಗತಿಪರ ಹೋರಾಟಗಳಿಗೆ ಸಂಘಟನಾತ್ಮಕ ಪ್ರಸ್ತುತತೆಯನ್ನು ನೀಡಿದ್ದಾರೆ, ಬಹುಮುಖ್ಯವಾಗಿ ಜನರನ್ನು ತಲುಪಬಲ್ಲ ಭಾಷೆಯನ್ನು ನೀಡಿದ್ದಾರೆ. ಈ ಹಾದಿಯನ್ನು ವಿಸ್ತರಿಸುತ್ತ ಸ್ಥಳೀಯ ನೆಲಮೂಲಗಳಿಂದ ಜೀವಪರ ಸೆಲೆಗಳನ್ನು ಹೆಕ್ಕುವ ಸವಾಲು ಪ್ರಗತಿಪರ ಸಂಘಟನೆಗಳ ಮುಂದಿದೆ. ಚಲೋ ಉಡುಪಿ ಜಾಥಾ ಹಾಗೂ ಆನಂತರದ ಸಮಾವೇಶ ಒಂದು ಉತ್ತಮ ಪ್ರಯತ್ನ. ಸಾವಿರಾರು ಸಂಖ್ಯೆಯಲ್ಲಿ ನಾಡಿನ ಯುವ ಕ್ರಿಯಾಶೀಲ ಮನಸ್ಸುಗಳು ಇಂಥದ್ದೊಂದು ಜಾಥಾ ಹಾಗೂ ಸಮಾವೇಶವನ್ನು ಸಂಘಟಿಸಲು ಸ್ವಯಂಪ್ರೇರಿತವಾಗಿ ಮುಂದಾದ ಪರಿ ಉತ್ತಮ ಮಾದರಿ ಕೂಡ. ನೈಜ ಕಾಳಜಿ, ತುಡಿತಗಳುಳ್ಳ ಸಾಮಾಜಿಕ, ಸಾಂಸ್ಕೃತಿಕ ವ್ಯಕ್ತಿಗಳನ್ನು ಕೇಂದ್ರದಲ್ಲಿರಿಸಿಕೊಂಡು, ವಿಚಾರಶೀಲತೆಯನ್ನು ಹದವಾಗಿ ಬೆರೆಸಿಕೊಂಡು ಸ್ವಸ್ಥ ಚಿಂತನೆಗಳ ಬೇರುಗಳನ್ನು ಆಳವಾಗಿಸಲು ಮಾಡುವ ಇಂಥ ಪ್ರಯತ್ನಗಳು ದೊಡ್ಡ ಭರವಸೆಯನ್ನು ಮೂಡಿಸುತ್ತವೆ. ಹಾಗೆ ನೋಡಿದರೆ ಇತ್ತೀಚಿನ ವರ್ಷಗಳಲ್ಲಿ ಅನೇಕ ದಲಿತಪರ ಸಂಘಟನೆಗಳು ಹಾಳೆಗಳ ಮೇಲೆ, ಪತ್ರಿಕಾ ಹೇಳಿಕೆಗಳಲ್ಲಿ ಮಾತ್ರವೇ ಉಳಿದಿದ್ದವು. ಅತಿಯಾದ ಅಧಿಕಾರ ವ್ಯಾಮೋಹವನ್ನು ಬಳಸಿಕೊಂಡಿದ್ದ ಇಂಥ ಕೆಲ ಸಂಘಟನೆಗಳ ನಾಯಕರು ವಿಚಾರಹೀನವಾಗಿ ವರ್ತಿಸುತ್ತ ದಲಿತರ, ದಮನಿತರ ಚಳವಳಿಯ ಆಶಯಗಳೇ ಮುಕ್ಕಾಗುವಂತೆ ಮಾಡಿದ್ದರು. ಸಂವಿಧಾನಕರ್ತೃವಿನ ಹೆಸರಿನಲ್ಲಿ ಪ್ರಶಸ್ತಿಗಳನ್ನು ಸ್ಥಾಪಿಸಿ ಸಂವಿಧಾನ ವಿರೋಧಿ ಚಿಂತನೆಗಳಿಗೆ ಇಂಬು ನೀಡುವಂಥವರಿಗೆಲ್ಲ ಅಂಥ ಪ್ರಶಸ್ತಿಗಳನ್ನು ನೀಡುತ್ತ, ದಲಿತೋದ್ಧಾರಕರು ಎನ್ನುವ ಬಿರುದುಬಾವಲಿಗಳನ್ನು ಕೊಡಮಾಡುತ್ತ, ಅಧಿಕಾರದಲ್ಲಿರುವವರನ್ನು ಓಲೈಸುವಂಥ ಅಭಾಸಗಳು ಇಂಥವರಿಂದ ಸಾಮಾನ್ಯವಾಗಿದ್ದವು. ನೈಜ ಕಾಳಜಿಯುಳ್ಳವರು ಕ್ರಮೇಣ ಹೋರಾಟಗಳಿಂದ ದೂರಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಹುಮುಖ್ಯವಾಗಿ ದಮನಿತ ವರ್ಗಗಳಿಂದ ಬರುವ ವಿಚಾರಶೀಲ ಯುವಪೀಳಿಗೆಗೆ ತಮ್ಮ ಕಾಲಮಾನದ ತುರ್ತುಗಳಿಗೆ ಸ್ಪಂದಿಸುವ, ಪ್ರತಿಕ್ರಿಯಿಸುವ ಅವಕಾಶಗಳನ್ನೆಲ್ಲ ಇಂಥ ವೈಯಕ್ತಿಕ ಹಿತಾಸಕ್ತಿಗೆ ಸೀಮಿತಗೊಂಡಿದ್ದ ಸಂಘಟನೆಗಳು ತುಳಿದುಹಾಕಿದ್ದವು, ಪ್ರಗತಿಪರ ಹೋರಾಟಗಳಿಗೆ ಬೆನ್ನುಹಾಕಿದ್ದವು. ಇದಕ್ಕೆಲ್ಲ ಉತ್ತರವೆನ್ನುವಂತೆ, ತಳಸಮುದಾಯಗಳು ಹಾಗೂ ಪ್ರಗತಿಪರಧಾರೆಯಿಂದ ಮೂಡಿದ ವಿಚಾರಶೀಲ ಯುವಪೀಳಿಗೆ ರೂಪಿಸಿದ ‘ಉಡುಪಿ ಚಲೋ’ ಹೋರಾಟ ಹೊಸ ಪಲ್ಲಟವೊಂದಕ್ಕೆ ನಾಂದಿಯಾಗುವ ಸೂಚನೆ ನೀಡಿದೆ.
ಆಧುನಿಕ ಜಾಗತಿಕ ಸನ್ನಿವೇಶದಲ್ಲಿ ಶೋಷಿತ ವರ್ಗಗಳು ಕೇವಲ ವಿಚಾರಗಳು, ಒಗ್ಗಟ್ಟನ್ನು ಮಾತ್ರವೇ ನೆಚ್ಚಿ ಕೂತರೆ ಸಾಲುವುದಿಲ್ಲ. ಬದಲಿಗೆ ತೀವ್ರ ಆರ್ಥಿಕ ಅಸಮಾನತೆಗೆ ತುತ್ತಾಗುತ್ತಿರುವ ತಳ ಸಮುದಾಯಗಳ ಬದುಕನ್ನು ಹೇಗೆ ಹಸನು ಮಾಡುವುದು ಎನ್ನುವುದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಸರ್ಕಾರದ ಸಹಾಯವನ್ನು ಮಾತ್ರವೇ ನೆಚ್ಚಿಕೊಳ್ಳದೆ ಅದರಾಚೆಗೂ ಸಬಲರಾಗಲು ಇರುವ ಮಾರ್ಗಗಳತ್ತ ಗಮನಹರಿಸಬೇಕಿದೆ. ಪಾರಂಪರಿಕವಾಗಿ ತಮಗೆ ಒದಗಿ ಬಂದಿರುವ ಕೌಶಲ, ಕ್ರಿಯಾಶೀಲತೆಯನ್ನು ಆಧುನಿಕ ಜಗತ್ತಿನಲ್ಲಿ ಉದ್ಯಮಶೀಲತೆಯಾಗಿ ಪರಿವರ್ತಿಸುವ ಸಾಧ್ಯತೆಗಳ ಬಗ್ಗೆ ಗಂಭೀರ ಪ್ರಯತ್ನಗಳಿಗೆ ಮುಂದಾಗಬೇಕಿದೆ. ಸಾಮಾಜಿಕ, ಆರ್ಥಿಕ ಬದಲಾವಣೆಗಳಿಗೆ ಕಾರಣವಾಗುವಂಥ ನವೋದ್ಯಮಗಳನ್ನು ಆರಂಭಿಸುವ ಮೂಲಕ ತಮ್ಮ ಸಮುದಾಯಗಳ ಆರ್ಥಿಕ ಶಕ್ತಿಯನ್ನು ವೃದ್ಧಿಸಬೇಕಿದೆ. ಯಾವ ತಂತ್ರಜ್ಞಾನ, ಭಾಷೆಯನ್ನು ಈವರೆಗೆ ಅಪಾರ ಅರ್ಥಿಕ ಕಂದರ ಸೃಷ್ಟಿಸಲು ಮೇಲ್ವರ್ಗಗಳು, ಬಂಡವಾಳಶಾಹಿಶಕ್ತಿಗಳು ಬಳಸುತ್ತಿದ್ದವೋ ಅದೇ ತಂತ್ರಜ್ಞಾನ, ಭಾಷಾ ಚತುರತೆಯನ್ನು ಪಳಗಿಸಿಕೊಳ್ಳುವ ಮೂಲಕ ಸಮಸಮಾಜದ ಆಶಯಗಳ ಈಡೇರಿಕೆಗೆ ಮುಂದಾಗಬೇಕಿದೆ. ಇಂಥ ವಾಸ್ತವದ ಸವಾಲುಗಳನ್ನು ಎದುರುಗೊಳ್ಳುವುದು ಈ ನವೀನ ಮಾದರಿಯ ಸಂಘಟನೆಗಳ ಹಿಂದಿನ ಚಾಲಕಶಕ್ತಿಯಾಗಲಿ.