ಗ್ರೀಸ್‍ನ ಜನರ ಸಂಕಟ- ಜಿ.ಎನ್.ನಾಗರಾಜ್

                                                                         ಗ್ರೀಸ್‍ನ ಜನರ ಸಂಕಟ

greece
 ಜಿ.ಎನ್.ನಾಗರಾಜ್

ಕುರುಡು ಕಾಂಚಾಣ ಕುಣಿಯುತಲಿತ್ತಾ,
ಕಾಲಿಗೆ ಬಿದ್ದವರ ತುಳಿಯುತಲಿತ್ತಾ

ನಮ್ಮ ನಾಡಿನಲ್ಲಿ ರೈತ ಹತ್ಯೆಗಳ ಸಾಲು ಸಾಲು ಮೆರವಣಿಗೆ ಹೊರಟಿದೆ. ದಿನ ದಿನವೂ ಮೃತ್ಯುವಿನ ಕರಾಳ ನರ್ತನ ರಾಜ್ಯದ ಜನರಲ್ಲಿ ಎದೆಯಲ್ಲಿ ತಳಮಳವನ್ನುಂಟು ಮಾಡುತ್ತಿದೆ. ಅದೇ ಸಮಯದಲ್ಲಿ ದೂರದ ಯೂರೋಪಿನ ಗ್ರೀಸ್ ದೇಶದಲ್ಲಿಯೂ ಕೂಡ ಆತ್ಮಹತ್ಯೆಗಳು, ಅದಕ್ಕಿಂತ ಪೂರ್ವದ ಮಾನಸಿಕ ಆತಂಕಗಳ ಕಾರ್ಮೋಡ. ‘ಸಾವು ತನ್ನ ಹಸಿವ ಕಳೆಯೆ ಆಸೆಯಿಂದ ತೆರೆದ’ ಬಾಯೊಳಕ್ಕೆ ನಿತ್ಯ ಧುಮುಕುತ್ತಿದ್ದಾರೆ ‘ಗೆದ್ದನು ಸತ್ತಾವ, ಸತ್ತಾನ ಇದ್ದಾವ’ ಎಂಬುದು ನೋವಿನ ಭಾವ.
ಕನ್ನಡದ ಮೆಚ್ಚಿನ ಕವಿ ಬೇಂದ್ರೆಯವರು ಬರೆದ ಈ ಮೇಲಿನ ಕವನದ ಸಾಲುಗಳು ಅವರು ಎಂದೂ ಬಯಸದ ರೀತಿಯಲ್ಲಿ ಇಂದು ನಮ್ಮದೇ ನಾಡಿನಲ್ಲೂ ಮತ್ತು ದೂರದ ಗ್ರೀಸ್ ದೇಶದಲ್ಲೂ ನಿಜವಾಗುತ್ತಿದೆ. ಯೂರೋಪಿನಲ್ಲಿ ಕುರುಡು ಕಾಂಚಾಣದ ರುದ್ರ ನರ್ತನ ನಡೆದಿದೆ. ಈಗ್ಗೆ ಐದು ವರ್ಷದಿಂದ ಗ್ರೀಸ್ ದೇಶವನ್ನು ತನ್ನ ಕಾಲ ಕೆಳಗೆ ಹಾಕಿ ತೊತ್ತಳದುಳಿಯುತ್ತಿದೆ. ಅಲ್ಲಿಯ ಜನ ನರಳಿ ನರಳಿ ಸಾಕಾಗಿ ಈ ವರ್ಷ ಸಿಡಿದೆದ್ದರು. ಅಂದಿನಿಂದ ವಿಶ್ವವೇ ಕಣ್ಣಾಗಿ ಗ್ರೀಸ್ ದೇಶದ ಕಡೆ ನೋಡುತ್ತಿತ್ತು. ಜಗತ್ತಿನ ಹಲವು ದೇಶಗಳ ಸಾಮಾನ್ಯ ಜನರನ್ನು ಸಂಕಟದ ದವಡೆಗೆ ದೂಡುತ್ತಿರುವ ಈ ಜಾಗತಿಕ ಕಾರ್ಪೋರೇಟ್ ದೊರೆಗಳ ಅಟ್ಟಹಾಸಕ್ಕೆ ಕೊನೆಗಾಲ ಆರಂಭವಾಯಿತು. ಜಗತ್ತಿಗೇ ಪ್ರಜಾಪ್ರಭುತ್ವದ ಕೆಲ ಮೂಲ ಪಾಠಗಳನ್ನು ಕಲಿಸಿದ ಸಂಸ್ಕøತಿ, ತತ್ವಶಾಸ್ತ್ರ, ವಿಜ್ಞಾನಗಳ ತವರುಮನೆಯೂ ಆಗಿದ್ದ ಗ್ರೀಸ್ ಮತ್ತೊಮ್ಮೆ ಜಗತ್ತಿಗೆ ಹೊಸ ದಾರಿಯನ್ನು ತೋರಿಸಲಿದೆ ಎಂಬ ಆಶಾಭಾವನೆ ಮೂಡಿತ್ತು. ಆದರೆ ಇತ್ತೀಚೆಗೆ ಮತ್ತೆ ಯೂರೋಪಿನ ಕಾಂಚಾಣದ ದೊರೆಗಳ ಅಬ್ಬರಕ್ಕೆ ಮತ್ತೆ ಗ್ರೀಸ್ ಸರ್ಕಾರ ತಲೆಬಾಗಿದೆ. ಮತ್ತೆ ಕಾಂಚಾಣದ ಕುಣಿದಾಟ ಆರಂಭವಾಗಲಿದೆ ಎಂಬ ಸುದ್ದಿ ಜಗತ್ತಿನ ಜನರಿಗೆ ಕಳವಳವನ್ನುಂಟು ಮಾಡಿದೆ. ಇದೇನು ನಡೆಯುತ್ತಿದೆ ಎಂದು ಜನಸಾಮಾನ್ಯರು ಗೊಂದಲಗೊಂಡಿದ್ದಾರೆ. ಸಕ್ಕರೆ ನಾಡು ಮಂಡ್ಯದಲ್ಲಿ ರೈತರ ಅಂತಿಮ ಪಯಣದ ಹಲಗೆಗಳ ಧ್ವನಿಯ ಆರ್ಭಟದ ನಡುವೆಯೇ ಗ್ರೀಸ್‍ನ ಜನರ ಸಂಕಟದ ಬಗ್ಗೆ ತಿಳಿಯುವ ತವಕ.

ಯೂರೋಪ್ ಮತ್ತು ಅಮೆರಿಕಗಳ ನಡುವೆ ತೀವ್ರ ಪೈಪೋಟಿ

ಗ್ರೀಸ್ ಎಂಬುದು ದಕ್ಷಿಣ ಯೂರೋಪಿನಲ್ಲಿರುವ ಒಂದು ಅಭಿವೃದ್ಧಿ ಹೊಂದಿದ ದೇಶ. ಜಗತ್ತಿನಲ್ಲಿಯೇ ಅತ್ಯಂತ ಉದ್ದದ ಸಮುದ್ರ ತೀರವಿರುವ ದೇಶವಾದ್ದರಿಂದ ಜಗತ್ತಿನಲ್ಲಿಯೇ ಅಮೇರಿಕದಂತಹ ಒಂದೆರಡು ದೇಶಗಳನ್ನು ಬಿಟ್ಟರೆ ಅತಿ ದೊಡ್ಡ ಹಡಗು ಸಾರಿಗೆಯಿರುವ ದೇಶಗಳಲ್ಲೊಂದು. ಹೀಗಾಗಿ ಜಗತ್ತಿನ ಅನೇಕ ದೇಶಗಳಿಗೆ ಪೆಟ್ರೋಲು, ಖನಿಜಗಳು, ಆಹಾರ ವಸ್ತುಗಳನ್ನು ಸಾಗಿಸಿಕೊಡುವ ದೊಡ್ಡ ದೊಡ್ಡ ಹಡಗು ಕಂಪನಿಗಳನ್ನು ಹೊಂದಿರುವ ದೇಶ.
ಕೈಗಾರಿಕಾ ಕ್ರಾಂತಿಯ ಮತ್ತು ನಂತರ ಹಲವು ಕಾಲ ಜಗತ್ತಿನ ಅತ್ಯಂತ ಶಕ್ತಿಶಾಲಿ ಮತ್ತು ಶ್ರೀಮಂತ ದೇಶಗಳು ಯೂರೋಪಿನ ದೇಶಗಳು. ಜಗತ್ತಿನ ಬೇರೆಲ್ಲ ಖಂಡಗಳನ್ನು ಆಕ್ರಮಿಸಿ ವಸಾಹತುಗಳನ್ನಾಗಿ ಮಾಡಿಕೊಂಡು ಆಳಿದ, ಭಾರತವೂ ಸೇರಿದಂತೆ ಈ ದೇಶಗಳನ್ನು ಹಿಂಡಿ ಸಂಪತ್ತನ್ನು ದೋಚಿ ತಮ್ಮ ದೇಶಕ್ಕೆ ಸಾಗಿಸಿದವು ಈ ಸಾಮ್ರಾಜ್ಯಶಾಹೀ ದೇಶಗಳು. ಈ ಶ್ರೀಮಂತ ಸಾಮ್ರಾಜ್ಯಶಾಹೀ ದೇಶÀಗಳು ವಸಾಹತುಗಳನ್ನು ಪರಸ್ಪರರ ಕೈಯಿಂದ ಕಿತ್ತುಕೊಳ್ಳುವುದಕ್ಕಾಗಿ ಎರಡನೇ ಮಹಾಯುದ್ಧವನ್ನು ಆರಂಭಿಸಿ ಕಾದಾಡಿ ತಮ್ಮ ಆರ್ಥಿಕ ಮತ್ತು ಮಿಲಿಟರಿ ಸಾಮಥ್ರ್ಯವನ್ನು ಕಳೆದುಕೊಂಡವು. ಈ ಯುದ್ಧ ಪ್ರದೇಶದಿಂದ ದೂರವಿದ್ದ ಮತ್ತು ಯುದ್ಧದ ಕೊನೆಗೆ ಇದರಲ್ಲಿ ಪ್ರವೇಶಿಸಿದ ಅಮೇರಿಕ ಈ ಯುದ್ಧದ ಮೂಲಕ ಬಲಗೊಂಡಿತು. ಜಗತ್ತಿನ ಅನೇಕ ದೇಶಗಳ ಮೇಲೆ ತನ್ನ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ಹಿಡಿತ ಸಾಧಿಸಿತು. ಮತ್ತಷ್ಟು ಶ್ರೀಮಂತವಾಯಿತು.
ಯುದ್ಧಾನಂತರದ ನಾಲ್ಕಾರು ದಶÀಕಗಳ ಕಾಲದಲ್ಲಿ ಅಮೇರಿಕ ಮತ್ತು ಯೂರೋಪಿನ ದೇಶಗಳ ದೊಡ್ಡ ಏಕಸ್ವಾಮ್ಯ ಕಂಪನಿಗಳ ನಡುವೆ ತೀವ್ರ ಆರ್ಥಿಕ ಸ್ಪರ್ಧೆ ಏರ್ಪಟ್ಟಿತು. ಈ ಸ್ಪರ್ಧೆಯನ್ನು ಎದುರಿಸಲು ಯೂರೋಪಿನ ದೇಶಗಳ ಬೃಹತ್ ಕಾಪೋರೇಟ್ ದೊರೆಗಳು ತಮ್ಮ ದೇಶಗಳೆಲ್ಲಾ ಒಂದು ಆರ್ಥಿಕ ಒಕ್ಕೂಟವನ್ನು ರಚಿಸಿಕೊಳ್ಳುವ ಯೋಜನೆಯನ್ನು ತಮ್ಮ ದೇಶಗಳ ಸರ್ಕಾರದ ಮುಂದಿಟ್ಟರು. ಅಮೆರಿಕದಿಂದ ಮತ್ತು ಇತರ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ ತಮ್ಮ ತಮ್ಮ ದೇಶಗಳಲ್ಲಿ ತಯಾರಾಗುವುದನ್ನು ತಮ್ಮೊಳಗೇ ವಿನಿಮಯ ಮಾಡಿಕೊಂಡರೆ ತಾವು ಬಲಶಾಲಿಯಾಗುತ್ತೇವೆ ಮತ್ತು ಇತರ ದೇಶಗಳಲ್ಲಿ ಅಮೇರಿಕದ ಪ್ರಾಬಲ್ಯವನ್ನು ಎದುರಿಸಲು ಶಕ್ತವಾಗುತ್ತೇವೆ ಎಂಬುದು ಅವರ ಯೋಚನೆ.
ಈ ಬೃಹತ್ ಕಾರ್ಪೋರೇಟ್ ದೊರೆಗಳು ತಮ್ಮ ದೇಶಗಳ ಸರ್ಕಾರಗಳು ಮತ್ತು ರಾಜಕೀಯದ ಮೇಲೆ ಹೊಂದಿದ್ದ ಹಿಡಿತವನ್ನು ಉಪಯೋಗಿಸಿ 1957ರಲ್ಲಿ ಆರು ದೇಶಗಳಿಂದ ಆರಂಭಿಸಿ ಈಗ 28 ದೇಶಗಳ ಯೂರೋಪಿಯನ್ ಒಕ್ಕೂಟ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಮೆರಿಕವನ್ನೆದುರಿಸಲು ಈ ಕ್ರಮ ಸಾಲದಾಗಿ 1992ರಲ್ಲಿ ಮತ್ತೊಂದು ಒಪ್ಪಂದ ಮಾಡಿಕೊಂಡು ಯೂರೋ ಎಂಬ ಒಂದೇ ಹಣ ವ್ಯವಸ್ಥೆಯನ್ನು ರೂಪಿಸಿಕೊಂಡವು. ಅದರಲ್ಲಿ ಈಗ 19 ದೇಶಗಳಿವೆ. ಈ ಕೂಟದ ಒಟ್ಟು ಆರ್ಥಿಕ ಶಕ್ತಿಯನ್ನು ಅಮೆರಿಕದೊಂದಿಗೆ ಹೋಲಿಸಿದರೆ ಗೊತ್ತಾಗುತ್ತದೆ ಕಾರ್ಪೋರೆಟ್‍ವಲಯ ಯೂರೋಪಿಯನ್ ಒಕ್ಕೂಟದ ರಚನೆಗೆ ಏಕೆ ಅಷ್ಟೊಂದು ಆತುರಪಟ್ಟಿತು ಎಂಬುದು. ಜಗತ್ತಿನ ಒಟ್ಟು ಆರ್ಥಿಕ ಉತ್ಪನ್ನದಲ್ಲಿ ಅಮೇರಿಕದ ಭಾಗ ಶೇ.20 ಆದರೆ 28 ದೇಶಗಳ ಯುರೋಪಿಯನ್ ಒಕ್ಕೂಟದ್ದು ಶೇ.21, ಯೂರೋ ಹಣ ಕೂಟದ್ದು ಶೇ14. ಹೀಗೆ ಆರ್ಥಿಕ ಸ್ಫರ್ಧೆಯನ್ನು ಎದುರಿಸಲು ಸಜ್ಜು ಮಾಡಿಕೊಂಡವು ಯೂರೋಪಿಯನ್ ಕಾರ್ಪೋರೇಟ್ ಶಕ್ತಿಗಳು.
ಆದರೆ ಈ ಯೂರೋ ಹಣ ಕೂಟವನ್ನು ಸೇರಬೇಕಾದರೆ ಈ ದೇಶಗಳು ತಾವು ಬಹು ಕಾಲದಿಂದ ಉಪಯೋಗಿಸುತ್ತಿದ್ದ ಹಣ ವ್ಯವಸ್ಥೆಯನ್ನು ಕೈ ಬಿಡಬೇಕಾಯಿತು. ಯೂರೋ ನಾಣ್ಯವನ್ನು ಅಪ್ಪಿಕೊಳ್ಳಲು 1992ರ ಒಪ್ಪಂದದ ಶರತ್ತುಗಳನ್ನು ಒಪ್ಪಿಕೊಳ್ಳಬೇಕಾಯಿತು. ಈ ಶರತ್ತುಗಳಲ್ಲಿ ಒಂದು ತಮ್ಮ ಬಜೆಟ್‍ಗಳಲ್ಲಿ ಶೇ3ಕ್ಕಿಂತ ಹೆಚ್ಚು ಬಜೆಟ್ ಕೊರತೆ ಮೀರಬಾರದು. ಅದಕ್ಕಾಗಿ ಸರ್ಕಾರೀ ವೆಚ್ಚಗಳನ್ನು, ಸರ್ಕಾರ ಒದಗಿಸುವ ಸೇವೆಗಳನ್ನು ಕಿತ್ತುಹಾಕಬೇಕು. ಮತ್ತೊಂದು ಹಣದುಬ್ಬರ ಶೇ.1.5ಕ್ಕಿಂತ ಹೆಚ್ಚಿರಬಾರದು. ತಮ್ಮದೇ ಹಣ ವ್ಯವಸ್ಥೆಯನ್ನು ಕೈ ಬಿಟ್ಟದ್ದು ಮತ್ತು ಈ ಶರತ್ತುಗಳನ್ನು ಒಪ್ಪಿಕೊಂಡದ್ದು ಆ ದೇಶಗಳ ಸಾರ್ವಭೌಮತ್ವದ ಹಲವು ಅಂಶಗಳನ್ನು ಯೂರೋ ಕೂಟಕ್ಕೆ ಒಪ್ಪಿಸಿಬಿಟ್ಟಂತಾಯಿತು. ತಮ್ಮದೇ ಆದ ಆರ್ಥಿಕ ಮತ್ತು ಸಾಮಾಜಿಕ ನೀತಿಗಳನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯವನ್ನು ಕಳೆದುಕೊಂಡವು.
ಈ ಕಾರಣಗಳಿಗಾಗಿ ಯೂರೋ ಹಣ ಕೂಟವನ್ನು ರಚಿಸುವಾಗ ಅನೇಕ ದೇಶಗಳಲ್ಲಿ ವಿರೋಧ ಎದ್ದು ಬಂದಿತು. ಕೆಲವು ದೇಶಗಳಲ್ಲಿ ಸರ್ಕಾರಗಳು ಇದೊಂದೇ ವಿಷಯದ ಮೇಲೆ ಜನಮತ ಸಂಗ್ರಹ ಮಾಡುವ ಅನಿವಾರ್ಯತೆ ಉಂಟಾಯಿತು. ಫ್ರಾನ್ಸ್ ಮತ್ತು ಡೆನ್ಮಾರ್ಕ್ ದೇಶಗಳಲ್ಲಿ ಪ್ರಬಲ ವಿರೋಧ, ಸುಮಾರು ಅರ್ಧದಷ್ಟು ಜನರು ಈ ಕೂಟಕ್ಕೆ ತಮ್ಮ ದೇಶಗಳನ್ನು ಒಡ್ಡುವುದರ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದರು. ಕಾರ್ಪೋರೇಟ್ ಲಾಭಕ್ಕಾಗಿಯೇ ಈ ಎಲ್ಲಾ ಕೂಟಗಳು ರಚನೆಯಾಗುತ್ತಿವೆ, ಈ ಯೂರೋ ಕೂಟ ರಚನೆಯಿಂದ ಜನರ ಮೇಲಾಗುವ ಪರಿಣಾಮ, ಅವರಿಗೆ ಒದಗಿಸಲಾಗುತ್ತಿರುವ ಸರ್ಕಾರದ ಸೇವೆಗಳು, ಉದ್ಯೋಗಗಳು ಇವುಗಳ ಪರಿಸ್ಥಿತಿಯ ಬಗ್ಗೆ ಪರಿಗಣಿಸಲಾಗಿಲ್ಲವೆಂದು ಯೂರೋಪಿನ ಜನರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಕಮ್ಯೂನಿಸ್ಟ್ ಪಕ್ಷಗಳು ಪ್ರತಿಭಟಿಸಿದವು.
ಹೀಗೆ ರಚನೆಯಾದ ಯೂರೋ ಕೂಟದಲ್ಲಿ ಎಲ್ಲ ದೇಶಗಳೂ ಒಂದೇಮಟ್ಟದಲ್ಲಿ ಅಭಿವೃದ್ಧಿಯಾಗಿರಲಿಲ್ಲ. ಜರ್ಮನಿ ವಿಶ್ವಮಟ್ಟದಲ್ಲಿ ಅಮೇರಿಕ ಜಪಾನುಗಳಿಗೆ ಸ್ಪರ್ಧೆ ಕೊಡುತ್ತಿದ್ದ ದೇಶವಾಗಿದ್ದರೆ ಫ್ರಾನ್ಸ್, ಇಟಲಿ, ನೆದರ್‍ಲ್ಯಾಂಡ್ಸ್ ಮೊದಲಾದ ಹೆಚ್ಚು ಅಭಿವೃದ್ಧಿ ಹೊಂದಿದ ದೇಶಗಳೂ ಇದ್ದಂತೆ ಗ್ರೀಸ್, ಸ್ಪೇನ್, ಪೋರ್ಚುಗಲ್, ಐರ್‍ಲ್ಯಾಂಡ್ ಮೊದಲಾದ ಯೂರೋಪಿನ ಬಡ ದೇಶಗಳೂ ಇದ್ದವು. ಬಹು ದೊಡ್ಡ ಕಾರ್ಪೋರೇಟ್ ಲಾಭಕೋರರ ನೆಲೆಯಾದ ಜರ್ಮನಿ, ಫ್ರಾನ್ಸ್‍ಗಳಿಗೆ ದೊಡ್ಡ ಪ್ರಯೋಜನವಾದರೆ ಗ್ರೀಸ್, ಪೋರ್ಚುಗಲ್ ನಂತಹ ದೇಶಗಳ ಕೆಲವೇ ದೊಡ್ಡ ಕಂಪನಿಗಳ ಮಾಲಕರಿಗೆ ಮಾತ್ರ ಹೆಚ್ಚು ಪ್ರಯೋಜನವಾಯಿತು.

ತನ್ನ ಹಣ ವ್ಯವಸ್ಥೆಯನ್ನು ಕಳೆದುಕೊಂಡ ಗ್ರೀಸ್ ದೇಶ

ಸ್ವತಂತ್ರ ಸಾರ್ವಭೌಮ ದೇಶವಾಗಿದ್ದ ಗ್ರೀಸ್ ಈ ಎರಡೂ ಕೂಟಗಳನ್ನು ಸೇರಿಕೊಳ್ಳಲು ಅಲ್ಲಿನ ಕಾರ್ಪೋರೆಟ್ ಶಕ್ತಿಗಳು ಮತ್ತು ಅವರ ಮುಖವಾಡಗಳಾಗಿದ್ದ ಅಲ್ಲಿಯ ಎರಡು ಮುಖ್ಯ ಪಕ್ಷಗಳು ವಿಧವಿಧವಾದ ಪ್ರಯತ್ನ ಪಟ್ಟವು. ಅಲ್ಲಿಯ ಸಾಮಾನ್ಯ ಜನರ ವಿರೋಧದ ನಡುವೆಯೂ ಈ ಕೂಟವನ್ನು ಸೇರಿದರು. ಸರ್ಕಾರದ ಹಣ ಸ್ಥಿತಿಯನ್ನು ಮುಚ್ಚಿಟ್ಟು ಯೂರೋ ಶರತ್ತುಗಳನ್ನು ಪೂರೈಸಿದ್ದೇವೆಂದು ಸುಳ್ಳು ದಾಖಲೆಗಳನ್ನು ತೋರಿಸಿ, ಗ್ರೀಸನ್ನು ಯೂರೋದ ಭಾಗವಾಗಿಸಿಬಿಟ್ಟವು. ಗ್ರೀಸ್‍ನ ಹಡಗು ಉದ್ಯಮದ ತಿಮಿಂಗಲಗಳು ಇಡೀ ಯುರೋಪಿನ ಸಾಗರ ಸಾರಿಗೆಯ ದೊಡ್ಡ ಭಾಗ ತಮಗೆ ಸಿಗುತ್ತದೆಂಬ ಲಾಭದಾಸೆಯಿಂದ ಈ ಜನದ್ರೋಹಕ್ಕೆ ಕೈ ಹಾಕಿದವು.
ಈ ಕೃತ್ಯದ ಪರಿಣಾಮವಾಗಿ ಗ್ರೀಸಿನ ಒಳಕ್ಕೆ ಜರ್ಮನಿ, ಫ್ರಾನ್ಸ್ ಮೊದಲಾದ ದೇಶಗಳ ಉತ್ಪಾದನೆಗಳು ನುಗ್ಗಿ ಬಂದವು. ಅದೇ ಸಮಯದಲ್ಲಿ ಗ್ರೀಸ್‍ನ ಉತ್ಪಾದನೆಗಳಿಗೇನೂ ಮಾರುಕಟ್ಟೆ ಬಹಳ ಹೆಚ್ಚಾಗಲಿಲ್ಲ. ಇದರಿಂದ ಆಮದು ಬಹಳ ಏರಿತು. ಗ್ರೀಸ್‍ನ ಉದ್ಯೋಗಗಳು ನಷ್ಟವಾದವು. ಜೊತೆಗೆ ಜರ್ಮನಿ, ಫ್ರಾನ್ಸ್‍ಗಳ ಬೃಹತ್ ಬ್ಯಾಂಕುಗಳು ಈ ದೇಶಗಳ ಒಳಗೆ ನುಗ್ಗಿದವು. ತಮ್ಮಲ್ಲಿದ್ದ ಅಪಾರ ಬಂಡವಾಳವನ್ನು ಹೂಡಿ ಲಾಭ ಪಡೆಯಲು ಅಲ್ಲಿಯ ಜನಕ್ಕೆ ಸಾಲ ಕೊಡಲಾರಂಭಿಸಿದವು. ಒಟ್ಟಿನಲ್ಲಿ ಯೂರೋಪಿನ ಬೃಹತ್ ಕಂಪನಿಗಳ, ಬ್ಯಾಂಕುಗಳ ಬಂಡವಾಳದ ಹರಿವು ಗ್ರೀಸನ್ನು ಪ್ರವೇಶಿಸಿತು. ಇದೇ ಮುಂದೆ ಗ್ರೀಸಿಗೆ ಮುಳುವಾದ ಮುಖ್ಯ ಕಾರಣಗಳಲ್ಲೊಂದಾಯಿತು. ಇಂತಹ ಕ್ರಿಯೆಗಳ ತೊಡಕುಗಳನ್ನು ನಿವಾರಿಸಿಕೊಳ್ಳಲು ಸಾಮಾನ್ಯವಾಗಿ ಸಾರ್ವಭೌಮ ದೇಶಗಳು ತಮ್ಮ ಹಣ ವ್ಯವಸ್ಥೆಯನ್ನು ಒಂದು ಸಾಧನವಾಗಿ ಬಳಸಿಕೊಳ್ಳುತ್ತವೆ. ತಮ್ಮ ನಾಣ್ಯದ ಬೆಲೆಯನ್ನು, ಬಡ್ಡಿ ದರವನ್ನು ಏರಿಳಿಸುತ್ತವೆ. ಜೊತೆಗೆ ಆಮದು ತೆರಿಗೆ ಏರಿಸುತ್ತವೆ. ಆಮದುಗಳ ಮೇಲೆ ನಿರ್ಬಂಧ ಹೇರುತ್ತವೆÀ. ಆದರೆ ಗ್ರೀಸ್ ಸರ್ಕಾರ ಇವೆಲ್ಲವನ್ನೂ ಯೂರೋ ಕೂಟದ ಕೈಗೆ ಒಪ್ಪಿಸಿಬಿಟ್ಟಿತ್ತು. ತಾನೇ ಹಗ್ಗ ಕೊಟ್ಟು ತಾನೇ ಕೈ ಕಟ್ಟಿಸಿಕೊಂಡಿತ್ತು. ಆದ್ದರಿಂದ ಗ್ರೀಸ್ ದೇಶದ ವಿದೇಶೀ ವಿನಿಮಯದ ಅಗತ್ಯ ಬೆಳೆಯಲಾರಂಭಿಸಿತು. ಇಂತಹುದೇ ಪ್ರಕ್ರಿಯೆಗಳು ಪೋರ್ಚುಗಲ್, ಸ್ಪೇನ್, ಐರ್‍ಲ್ಯಾಂಡ್ ದೇಶಗಳಲ್ಲೂ ನಡೆದಿವೆ, ನಡೆಯುತ್ತಿವೆ.
ಬಜೆಟ್ ವೆಚ್ಚ ಮಿತಿ ಹೇರಿಕೆ, ಹಣದುಬ್ಬರ ಮಿತಿ ಮೊದಲಾದ ಇಂತಹುದೇ ನೀತಿಗಳನ್ನು ವಿಶ್ವ ಬ್ಯಾಂಕ್, ಐಎಂಎಫ್‍ಗಳು, ವಿಶ್ವ ವ್ಯಾಪಾರ ಸಂಸ್ಥೆ ಮತ್ತು ಅಮೇರಿಕ ಮೊದಲಾದ ಸರ್ಕಾರಗಳು ವಿಶ್ವದ ಬಡ ದೇಶಗಳ ಮೇಲೆ ಮೂರು ದಶಕಗಳಿಂದಲೂ ಹೇರುತ್ತಿವೆ. ಇದೇ ಶರತ್ತುಗಳ ಪರಿಣಾಮಗಳನ್ನು ಭಾರತವೂ ಅನುಭವಿಸುತ್ತಿದೆ. ಅದರ ಪರಿಣಾಮವೇ ರೈತ ಆತ್ಮಹತ್ಯೆಗಳು, ಉದ್ಯೋಗ ಖಾತರಿ ಮತ್ತು ಪಡಿತರ ಪದ್ಧತಿ ನಾಶ ಮೊದಲಾದ ಕ್ರಮಗಳು. ಹೀಗೆ ಗ್ರೀಸ್ ಜನರ ಸಂಕಟದಲ್ಲಿ ನಮ್ಮ ಸಂಕಟವೂ ಬೆರೆತಿದೆ.

ಬ್ಯಾಂಕುಗಳ ಜೂಜಾಟ , ಜನರಿಗೆ ಪ್ರಾಣಸಂಕಟ

ಗ್ರೀಸ್ ದೇಶಕ್ಕೆ ಮತ್ತು ಯೂರೋಪಿನ ಬಡ ದೇಶಗಳಿಗೆ ನಿರ್ದಿಷ್ಠವಾದ ಈ ಬೆಳವಣಿಗೆಗಳು ಸಂಭವಿಸುತ್ತಿರುವಾಗಲೇ ಒಂದು ವಿಶ್ವವ್ಯಾಪಿ ಸಾಂಕ್ರಾಮಿಕ ರೋಗವೊಂದು ಹಬ್ಬಿತು. ಅದೇ 2008ರ ಬ್ಯಾಂಕ್ ದಿವಾಳಿ ಎಂಬ ಮಹಾವ್ಯಾಧಿ. ಇದು ಕೇವಲ ಬ್ಯಾಂಕಿನ ರಂಗಕ್ಕೆ ಮಾತ್ರ ಸೀಮಿತಗೊಳ್ಳದೆ ಅಂದಿನಿಂದ ಇಂದಿನವರೆಗೂ ವಿಶ್ವವನ್ನು ಮಹಾ ಮುಗ್ಗಟ್ಟಿಗೊಡ್ಡಿರುವ ಮಹಾ ಸಾಂಕ್ರಾಮಿಕ. ಮುಖ್ಯವಾಗಿ ಅಮೇರಿಕ ಮತ್ತು ಯೂರೋಪಿನ ಬ್ಯಾಂಕುಗಳು ವಿಶ್ವದ ವಿವಿಧ ದೇಶಗಳನ್ನು ದೋಚಿದ ಹಣ, ಪೆಟ್ರೋಲು ವ್ಯವಹಾರದ ದೇಶಗಳು ಮತ್ತು ಕಂಪನಿಗಳು ಇವುಗಳಲ್ಲಿ ಇಟ್ಟ ಹಣದಿಂದ ತುಂಬಿ ತುಳುಕುತ್ತಿದ್ದವು. ಆದರೆ ಬ್ಯಾಂಕುಗಳಲ್ಲಿ ಶೇಖರವಾದ ಹಣ ಅಲ್ಲಿಯೇ ಉಳಿದರೆ ಬ್ಯಾಂಕುಗಳ ವೆಚ್ಚ ಹೆಚ್ಚುತ್ತದೆಯೆ ಹೊರತು ಅವುಗಳಿಗೆ ಲಾಭ ಬರುವುದಿಲ್ಲ. ಅದನ್ನು ಸಾಲವಾಗಿ ಕೊಡಬೇಕು, ಬಡ್ಡಿ ಸಂಗ್ರಹಿಸಬೇಕು ಆಗಲೇ ಲಾಭ. ಅದಕ್ಕೆ ಬ್ಯಾಂಕುಗಳವರು ತಮ್ಮ ದೇಶಗಳ ಜನರಿಗೆ ಹೇರಳವಾಗಿ ಸಾಲ ನೀಡಿದರು. ಬ್ಯಾಂಕುಗಳಿಗೆ ಒತ್ತೆಯಿಟ್ಟ ಆಸ್ತಿಗಿಂತ ಹೆಚ್ಚಾಗಿ ಸಾಲ ಕೊಟ್ಟರು. ಇದರಿಂದ ಈ ದೇಶಗಳಲ್ಲಿ ಜನ ಹೆಚ್ಚು ಹೆಚ್ಚು ವಸ್ತುಗಳನ್ನು ಕೊಳ್ಳಲಾರಂಭಿಸಿದರು. ಇದರಿಂದ ಈ ದೇಶಗಳಲ್ಲಿ ಆರ್ಥಿಕ ಬೆಳವಣಿಗೆ ಕಾಣತೊಡಗಿತು. ಆದರೆ ಈ ಸಾಲಗಳ ಆಧಾರಗಳು ಸಂಶಯಪೂರಿತವಾಗಿದ್ದುದರಿಂದ ಅದರಿಂದ ತಪ್ಪಿಸಿಕೊಳ್ಳಲು ಈ ಸಾಲಗಳನ್ನೇ ಇತರ ಬ್ಯಾಂಕುಗಳಿಗೆ ದುಬಾರಿ ಬಡ್ಡಿಗಳಿಗೆ ಮಾರತೊಡಗಿದರು. ಮತ್ತೂ ಇನ್ನೂ ಅನೇಕ ತೆರನ ಜೂಜುಕೋರ ವ್ಯವಹಾರಗಳಲ್ಲಿ ತೊಡಗಿದರು. ಇದಕ್ಕೆ ಡಿರಿವೇಟಿವ್ಸ್ ಎಂದು ಕರೆಯುತ್ತಾರೆ. ಇಂತಹ ಜೂಜುಕೋರ ವ್ಯವಹಾರಗಳು ಬ್ಯಾಂಕಿಂಗ್ ಕ್ಷೇತ್ರದ ನೈಜ ವ್ಯವಹಾರಗಳಿಗಿಂತ ಹಲವು ಪಟ್ಟು ಹೆಚ್ಚಾದವು.
ಆದರೆ ಎಂದಾದರೊಂದು ದಿನ ಈ ಮರಳಿನ ಮನೆ ಕುಸಿಯಲೇ ಬೇಕಾಗಿತ್ತು. ಕುಸಿಯಿತು. ಅದರಿಂದಾಗಿ ಮೊದಲು ಅಮೆರಿಕದ ಬ್ಯಾಂಕುಗಳು ಕುಸಿದವು. ಅವುಗಳೊಡನೆ ಯೂರೋಪಿನ ಬ್ಯಾಂಕ್ ವ್ಯವಹಾರಗಳೂ ಹೆಣೆದುಕೊಂಡಿದ್ದವು. ಮತ್ತು ಯೂರೋಪಿನ ಬೃಹತ್ ಬ್ಯಾಂಕುಗಳೂ ಕೂಡ ಇದೇ ರೀತಿಯ ವ್ಯವಹಾರಗಳಲ್ಲಿ ತೊಡಗಿದ್ದುದರಿಂದಲೂ ಈ ಬ್ಯಾಂಕುಗಳೂ ಕೂಡ ಸಂಕಟಕ್ಕೆ ಸಿಲುಕಿದವು. ಈ ಬ್ಯಾಂಕುಗಳೆಲ್ಲ ನಮ್ಮ ದೇಶದಂತೆ ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲ, ಖಾಸಗಿ ಬ್ಯಾಂಕುಗಳು ಎಂಬುದನ್ನು ಗಮನಿಸಬೇಕು. ಈ ಬ್ಯಾಂಕುಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಯಿತು. ಇದರಿಂದಾಗಿ ಮುಖ್ಯವಾಗಿ ಅಮೇರಿಕದ ಮತ್ತು ಯೂರೋಪಿನ ಆರ್ಥಿಕತೆಯೇ ಸಂಕಟಕ್ಕೆ ಸಿಲುಕಿತು.
ಈ ಬ್ಯಾಂಕುಗಳನ್ನು ಉಳಿಸಲು ಅಮೆರಿಕ ಮತ್ತು ಯೂರೋಪಿನ ದೇಶಗಳು, ಸರ್ಕಾರದ ಅಂದರೆ ಜನರ ಹಣದಿಂದ ಈ ಬ್ಯಾಂಕುಗಳಿಗೆ ಬಂಡವಾಳವನ್ನೊದಗಿಸಿದುವು. ಆಗ ಈ ಖಾಸಗಿ ಬ್ಯಾಂಕುಗಳ ಬೃಹತ್ ಸಾಲ ಸರ್ಕಾರದ ಸಾಲವಾಯಿತು. ಸರ್ಕಾರಗಳು ಸಾಲದ ಬಲೆಯಲ್ಲಿ ಸಿಲುಕಿದವು. ಅಮೇರಿಕದ ಸರ್ಕಾರೀ ಸಾಲವೂ ಕೂಡ ಮುಗಿಲು ಮುಟ್ಟಿತು. ಅದು ಡಾಲರುಗಳನ್ನು ಹೆಚ್ಚು ಹೆಚ್ಚು ಮುದ್ರಿಸುವುದರಿಂದ, ಹೆಚ್ಚು ಸರ್ಕಾರೀ ಬಾಂಡ್‍ಗಳನ್ನು ಮಾರುವುದರಿಂದ ಈ ಸಾಲದ ಹೊರೆಯನ್ನು ನಿವಾರಿಸಿಕೊಳ್ಳಲೆತ್ನಿಸುತ್ತಿದೆ. ಡಾಲರುಗಳು ಇಂದು ವಿಶ್ವದಲ್ಲಿ ಹೆಚ್ಚು ಚಲಾವಣೆಯ ನಾಣ್ಯವಾದುದರಿಂದ ಅಮೇರಿಕಕ್ಕೆ ಇದರ ದುಷ್ಪರಿಣಾಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ಹೇಗೆಂದರೆ ವಿಶ್ವದಲ್ಲಿ ಡಾಲರುಗಳ ಹೊಳೆಯೇ ಹರಿದುದರಿಂದ ಅದರ ಮೌಲ್ಯ ಕುಗ್ಗುವ ಅಪಾಯವೊದಗಿತು. ವಿಶ್ವದ ಆರ್ಥಿಕತೆಯ ಮೇಲೆ ಅದರ ತೀವ್ರ ಪರಿಣಾಮವನ್ನೆದುರಿಸಲು, ತಮ್ಮ ತಮ್ಮ ದೇಶಗಳ ರೂಪಾಯಿಗಳ ಮೌಲ್ಯದ ಮೇಲೆ ಆಗುವ ಪರಿಣಾಮವನ್ನು ತಪ್ಪಿಸಲು ಭಾರತವೂ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಡಾಲರುಗಳನ್ನು, ಅಮೇರಿಕ ಸರ್ಕಾರದ ಬಾಂಡ್‍ಗಳನ್ನು ಕೊಂಡು ಅದರ ಬೆಲೆಯನ್ನು ರಕ್ಷಿಸಿವೆ. ಹೀಗೆ ಅಮೆರಿಕ ಪ್ರಪಂಚದ ಜನತೆಯ ಮೇಲೆ ತಮ್ಮ ಸಾಲದ, ಅಂದರೆ ಅಲ್ಲಿಯ ಬ್ಯಾಂಕುಗಳ ದುರ್ಲಾಭಕೋರತನದ, ಹೊಣೆಗೇಡಿತನದ ಹೊರೆಯನ್ನು ಹೊರೆಸಿದೆ.
ಆದರೆ ಈ ಲಕ್ಷರಿ ಅಥವಾ ಹೊಣೆಗೇಡಿತನ ಎಲ್ಲರಿಗೂ ಸಾಧ್ಯವೇ?
ಜಗತ್ತಿನ ಶ್ರೀಮಂತ ದೇಶಗಳು, ದೊಡ್ಡ ಆರ್ಥಿಕತೆಗಳಿಗೆ ಈ ಸರ್ಕಾರೀ ಸಾಲದ ಹೊರೆಯನ್ನು, ದುಷ್ಪರಿಣಾಮಗಳನ್ನು ಜನರ ಮೇಲೆ ಹೇರಿ ನಿವಾರಿಸಿಕೊಳ್ಳಬಹುದು. ಆದರೆ ಗ್ರೀಸ್‍ನಂತಹ ದೇಶಕ್ಕೆ ?
ಗ್ರೀಸ್ ದೇಶದಲ್ಲಿ 2008ರ ಬ್ಯಾಂಕ್ ದಿವಾಳಿಯ ಬಿಕ್ಕಟ್ಟಿಗೆ ಮೊದಲು ಗ್ರೀಸ್ ಸರ್ಕಾರದ ಸಾಲ ಏರುತ್ತಿತ್ತು ನಿಜ. ಅದೂ ಕೂಡ ಯೂರೋ ಹಣ ವ್ಯವಸ್ಥೆಯ ಒತ್ತಡದಿಂದಲೇ ಹೆಚ್ಚು. ಆಮದು ವಿಪರೀತ ಹೆಚ್ಚಿದ ಮತ್ತು ಗ್ರೀಸ್ ದೇಶದ ಹೊರಗಿನ ಬ್ಯಾಂಕುಗಳೂ ಸೇರಿ ನೀಡಿದ ಸಾಲಗಳ ಕಾರಣದಿಂದ. ಆದರೆ ನಿಯಂತ್ರಣದಲ್ಲಿಡಬಹುದಾದ ಪ್ರಮಾಣದಲ್ಲಿ, ಗ್ರೀಕ್ ಆಂತರಿಕ ಉತ್ಪನ್ನದ ಶೇ.80ರಷ್ಟಿತ್ತು. ಆದರೆ ಬ್ಯಾಂಕ್ ದಿವಾಳಿಯ ನಂತರ ನೂರರ ಪ್ರಮಾಣವನ್ನು ಮೀರಿತು ಮತ್ತು ಬೆಳೆಯುತ್ತಾ ಹೋಯಿತು. ಅಂದರೆ ಇಡೀ ಗ್ರೀಸ್ ದೇಶದ ಒಂದು ವರ್ಷದ ಒಟ್ಟು ಉತ್ಪನ್ನಕ್ಕಿಂತ ಹೆಚ್ಚಾಯಿತು.
ಖಾಸಗಿ ಬ್ಯಾಂಕುಗಳನ್ನು ಉಳಿಸಲು ಗ್ರೀಸ್ ಸರ್ಕಾರ ಮಾಡಿದ ಸಾಲದ ಕಂತುಗಳನ್ನು ಕಟ್ಟಲಾಗಲಿಲ್ಲ. ಅದಕ್ಕೆ ಬೇಕಾದಷ್ಟು ಪ್ರಮಾಣದ ತೆರಿಗೆಗಳನ್ನು ಅಲ್ಲಿಯ ಕಾರ್ಪೋರೇಟ್ ದೊರೆಗಳಿಂದ ವಸೂಲಿ ಮಾಡÀಲಿಲ್ಲ. ಈ ದೊರೆಗಳು ತಮ್ಮ ಬಂಡವಾಳವನ್ನು ದೇಶದ ಹೊರಕ್ಕೆ ಸಾಗಿಸಿದರು. ತೆರಿಗೆ ಸ್ವರ್ಗಗಳೆಂದು ಕರೆಯುವ ಕೆಲ ದ್ವೀಪ ರಾಷ್ಟ್ರಗಳಿಗೆ ಸಾಗಿಸಿದರು. ತಮ್ಮ ಹಡಗುಗಳ ಮೇಲಿನ ಗ್ರೀಸ್ ದೇಶದ ಧ್ವಜವನ್ನು ಕಿತ್ತು ಹಾಕಿದರು. ಇದರಿಂದ ತೆರಿಗೆ ಸಂಗ್ರಹ ಮತ್ತು ಸರ್ಕಾರದ ಆದಾಯ ಕುಗ್ಗಿತು. ಅದಕ್ಕೆ ಪರಿಹಾರ ಏನು? ಯಾವ ಬ್ಯಾಂಕಿಂಗ್ ಕ್ಷೇತ್ರವನ್ನು ಉಳಿಸಲು ಈ ಸಾಲವನ್ನು ಮಾಡಲಾಗಿತ್ತೋ ಅದೇ ಬ್ಯಾಂಕುಗಳು ಈ ಸಾಲದ ಪ್ರಮಾಣವನ್ನು ತಗ್ಗಿಸುವುದು, ಬಡ್ಡಿ ವಿನಾಯತಿ ನೀಡುವುದು ಇತ್ಯಾದಿಗಳನ್ನು ಯೋಚಿಸಬೇಕಾಗಿತ್ತು. ಆದರೆ ಮಾಡಿದ್ದೇನೆಂದರೆ ಸಾಲ ತೀರಿಸಲು ಮತ್ತಷ್ಟು ಸಾಲ ನೀಡಿದ್ದು ಮತ್ತಷ್ಟು ಬಡ್ಡಿಯ ಹೊರೆ ಹೊರಿಸಿದ್ದು. ಇದೇ ಈ ಬ್ಯಾಂಕುಗಳು ಮಾಡಿದ ಉಪಕಾರ. ಆದ್ದರಿಂದ 2010ರಲ್ಲಿ ಮೊದಲ ಬಾರಿ ಐಎಂಎಫ್ ಮತ್ತು ಯೂರೋಪಿಯನ್ ಸೆಂಟ್ರಲ್ ಬ್ಯಾಂಕುಗಳು ನೀಡಿದ ಸಾಲ ತೀರಿಸಲು, ನೀಡಿದ ಸಾಲದಿಂದ ಅದು ಮತ್ತಷ್ಟು ಏರಿತು. ಅದನ್ನು ತೀರಿಸಲು ಏನೇನೋ ಶರತ್ತುಗಳನ್ನು ಹಾಕಿ ಜನರ ಮೇಲೆ ತೆರಿಗೆ ಹೇರಿ, ಇತರ ಅನೇಕ ರೀತಿಯ ಸಂಕಷ್ಟಗಳನ್ನು ಹೇರಿದರೂ ಈ ಸಾಲದ ಕಂತುಗಳನ್ನು ಕಟ್ಟುವಷ್ಟು ಹಣ ಗ್ರೀಸ್ ಸರ್ಕಾರದ ಬಳಿ ಶೇಖರವಾಗಲಿಲ್ಲ ಆಗ ಮತ್ತೆ 2012 ರಲ್ಲಿ ಮತೊಂದು ಬಾರಿ ಈ ಸಂಸ್ಥೆಗಳು ಸಾಲ ತೀರಿಸಲು ಸಾಲ (ಇಂಗ್ಲಿಷಿನಲ್ಲಿ ಇದನ್ನು ಬೇಲ್ ಔಟ್ ಎಂದು ಕರೆಯಲಾಗುತ್ತದೆ) ಪಡೆಯಲಾಯಿತು.
ಆದರೆ ತಮಾಷೆಯೆಂದರೆ ಈ ಸಾಲಗಳ ಮೂಲಕ ಗ್ರೀಸ್ ದೇಶಕ್ಕೆ ದೊರಕಿದ ಹಣವನ್ನು ಯಾರಿಗೆ, ಹೇಗೆ ವಿನಿಯೋಗ ಮಾಡಬೇಕೆನ್ನುವ ಅಧಿಕಾರ ಸಾಲ ಪಡೆದ ಗ್ರೀಸ್ ಸರಕಾರಕ್ಕೆ ಇರಲಿಲ್ಲ. ಅದನ್ನು ಪೂರ್ಣವಾಗಿ ಸಾಲ ನೀಡಿದ ಸಂಸ್ಥೆಗಳೇ ನಿರ್ವಹಿಸಿದವು. ಈ ಸಾಲದಲ್ಲಿ ಸರ್ಕಾರ ಜನರ ಸಲುವಾಗಿ ವೆಚ್ಚ ಮಾಡಿದ್ದು ಕೇವಲ ಶೇಕಡ ಹತ್ತರಷ್ಟು ಮಾತ್ರ. ಉಳಿದುದೆಲ್ಲಾ ಸಾಲ ನೀಡಿದವರಿಗೇ ಮತ್ತು ಇತರ ಬ್ಯಾಂಕುಗಳಿಗೆ ಮರಳಿ ಸೇರಿತು. ಆದರೆ ಗ್ರೀಸ್ ಸರ್ಕಾರದ ಲೆಕ್ಕದಲ್ಲಿ! ಹೇಗಿದೆ ಈ ಅರಣ್ಯ ನ್ಯಾಯ! ಈ ಸಾಲಕ್ಕೆ ಎಷ್ಟು ಮಾತ್ರಕ್ಕೂ ಕಾರಣರಾಗದ ಗ್ರೀಸ್ ಜನತೆಗೆ ಈ ಸಾಲವನ್ನು ತೀರಿಸುವ ಶಿಕ್ಷೆ. ಮತ್ತು ಬ್ಯಾಂಕಿನ ಹಣವನ್ನು ಜೂಜಾಟಕ್ಕಿಟ್ಟ ಮತ್ತು ಹೊಣೆಗೇಡಿ ಸಾಲಗಳನ್ನು ನೀಡಿದ ಬ್ಯಾಂಕುಗಳಿಗೆ, ಅದರ ಮುಖ್ಯ ಅಧಿಕಾರಿಗಳಿಗೆ ಯಾವ ಶಿಕ್ಷೆಯೂ ಇಲ್ಲ! ಮಾತ್ರವಲ್ಲ, ಆ ಬ್ಯಾಂಕುಗಳಿಗೆ ಮತ್ತೆ ಸಹಾಯಧನ ನೀಡಿಕೆ.
ಹೀಗೆ ಎರಡು ಬಾರಿ ಗ್ರೀಸ್ ಸರ್ಕಾರಕ್ಕೆ ನೀಡಿದ ಸಾಲದ ಶರತ್ತುಗಳಂತೂ ಘನಘೋರ. ಈಗ್ಗೆ ಐದು ವರ್ಷಗಳಿಂದ ಗ್ರೀಸ್ ಜನತೆಯನ್ನು ಹಲವು ರೀತಿಯ ಸಂಕಟಗಳ ಕೂಪಕ್ಕೆ ತಳ್ಳಿ ಬಿಟ್ಟವು ಈ ಶರತ್ತುಗಳು.

ಗ್ರೀಕ್ ಜನರ ಸಂಕಟಗಳಿಗೆ ಎಣೆಯುಂಟೇ !

ಒಂದು ಕಡೆ ಯೂರೋ ಹಣ ವ್ಯವಸ್ಥೆಯ ಶರತ್ತುಗಳು ಮತ್ತೊಂದು ಕಡೆ ಸಾಲ ತೀರಿಸಲು ಅಂತರ ರಾಷ್ಟ್ರೀಯ ಹಣಕಾಸು ನಿಧಿಯೆಂಬ ವಿಶ್ವದ ನೂರಾರು ದೇಶÀಗಳನ್ನು ಹಿಂಡಿದ ಮಹಾ “ಕೀರ್ತಿ” ಪಡೆದ ಐಎಂಎಫ್, ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್ ಮತ್ತು ಇತರ ಖಾಸಗಿ ಬ್ಯಾಂಕುಗಳು ಹಾಕಿದ ಸಾಲದ ಶರತ್ತುಗಳು ಗ್ರೀಕ್ ದೇಶದ ಜನತೆಯನ್ನು ವಿವಿಧ ರೀತಿಯ ಸಂಕಟಕ್ಕೆ ದೂಡಿದವು. ಒಂದು ಅಭಿವೃದ್ಧಿ ಹೊಂದಿದ ದೇಶವೆಂಬ ಹೆಮ್ಮೆ ಹೊಂದಿದ್ದ ಗ್ರೀಸಿನ ಜನತೆಯ ಬಡತನ ಕೇವಲ ಐದು ವರ್ಷಗಳಲ್ಲಿ ದುಪ್ಪಟ್ಟಾಯಿತು. ಇದರಿಂದ ಶೇ.34ರಷ್ಟು ಮಕ್ಕಳು ಬಡತನ ಬೇಗೆಗೆ ಸಿಲುಕಿದರು. ಬಡತನಕ್ಕೆ ಶೇ.64ರಷ್ಟು ಕಾರಣ ಈ ಸಾಲದ ಶರತ್ತುಗಳು. ಶಿಕ್ಷಣ, ಆರೋಗ್ಯ ವ್ಯವಸ್ಥೆ, ಉದ್ಯೋಗ ಲಭ್ಯತೆ ಮತ್ತು ಭದ್ರತೆ, ಸರ್ಕಾರಿ ನೌಕರರ ವೇತನ, ಕಾರ್ಮಿಕರ ಜೀವನ ಮತ್ತು ಕೆಲಸದ ಪರಿಸ್ಥಿತಿಗಳು, ನಿವೃತ್ತಿ ವೇತನದಾರರ ಜೀವನ ಮತ್ತು ವೇತನ, ಇತರ ಸಾಮಾಜಿಕ ಭದ್ರತೆ, ವಸತಿರಾಹಿತ್ಯ, ನ್ಯಾಯಾಂಗ ವ್ಯವಸ್ಥೆ, ಪೋಲೀಸು ವ್ಯವಸ್ಥೆ, ಪ್ರತಿಭಟನೆಯ ಹಕ್ಕುಗಳು, ಪ್ರಜಾಪ್ರಭುತ್ವ, ಪತ್ರಿಕಾ ಸ್ವಾತಂತ್ರ್ಯ, ಹೀಗೆ ಜೀವನದ ಪ್ರತಿಯೊಂದು ಆಯಾಮವನ್ನೂ ಈ ಶರತ್ತುಗಳು ಸುಟ್ಟುರುಬಿದವು.

3000 ಶಾಲೆಗಳನ್ನು ಮುಚ್ಚಿದ ಮುಂದುವರೆದ ದೇಶ

ಸರ್ಕಾರೀ ವೆಚ್ಚವನ್ನು ತೀಕ್ಷ್ಣವಾಗಿ ಕಡಿಮೆ ಮಾಡಬೇಕೆಂಬ ಶರತ್ತಿನ ಫಲವಾಗಿ ಶಿಕ್ಷಣ ವ್ಯವಸ್ಥೆ ಹದಗೆಟ್ಟಿತು. 3000ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲಾಯಿತು. ಸಂಪೂರ್ಣ ಸಾಕ್ಷರತೆಯುಳ್ಳ, ಅಷ್ಟು ಮಾತ್ರವಲ್ಲ ಎಲ್ಲರೂ 9 ವರ್ಷಗಳ ಪ್ರಾಥಮಿಕ ಶಿಕ್ಷಣ ಪೂರೈಸುವ ಒಂದು ಮುಂದುವರೆದ ದೇಶದಲ್ಲಿ ಇದು ಬಹಳ ಅಪರೂಪದ ವಿದ್ಯಮಾನ. ಕೇವಲ ಒಂದು ಕೋಟಿ ಜನರ ದೇಶವಾದ ಗ್ರೀಸ್‍ನಲ್ಲಿ 3000 ಶಾಲೆಗಳು ಮುಚ್ಚುವುದೆಂದರೆ ಎಷ್ಟು ಹಾನಿಯುಂಟಾಗಬಹುದೆಂದು ಊಹಿಸಿಕೊಳ್ಳಬಹುದು. ಅದರ ಜೊತೆಗೆ ಬಸ್ ಪಾಸ್ ಮೊದಲಾದ ಶಾಲೆಗೆ ಸಾರಿಗೆ ವ್ಯವಸ್ಥೆ ಕುಂಠಿತವಾಯಿತು. ಶೇ.80ರಷ್ಟು ಪ್ರದೇಶ ಪರ್ವತಮಯವಾದ ಗ್ರೀಸಿನಲ್ಲಿ ದೂರದ ಪ್ರದೇಶಗಳ ಮಕ್ಕಳು, ಅಂಗವಿಕಲ ಮಕ್ಕಳು ಶಾಲೆ, ಕಾಲೇಜುಗಳಿಗೆ ಹೋಗುವುದಕ್ಕೆ ಅಡ್ಡಿಯಾಯಿತು. ಮತ್ತೊಂದು ಊಹಿಸಿಕೊಳ್ಳಲಾಗದ ವಿಷಯವೆಂದರೆ ಶಿಕ್ಷಕರ ವೇತನದಲ್ಲಿ ಶೇ.40ರಷ್ಟು ಕಡಿತವಾಯಿತು. ಗ್ರೀಸಿನ ನೆರೆಯ ದೇಶಗಳ ಶಿಕ್ಷಕರ ವೇತನದ ಕೇವಲ ಶೇ.60ರಷ್ಟು ಮಾತ್ರ ಇವರ ವೇತನವಾಯಿತು. ಹಾಗಾದರೆ ಶಾಲೆಗಳ ಪುಸ್ತಕಾಲಯ, ಪ್ರಯೋಗಶಾಲೆಗಳಂತಹ ಇನ್ನುಳಿದ ಅನುಕೂಲಗಳ ಪರಿಸ್ಥಿತಿ ಏನಾಗಿರಬಹುದು?

ಆರೋಗ್ಯ ವ್ಯವಸ್ಥೆ:

ಆರೋಗ್ಯಕ್ಕೆ ಮೀಸಲಾದ ಬಜೆಟ್ ವಿಚ್ಚ ವಿಪರೀತವಾಗಿ ಕಡಿತವಾಯಿತು. ಅನೇಕ ಆಸ್ಪತ್ರೆಗಳನ್ನು ಮುಚ್ಚಲಾಯಿತು. ಇದು ಭಾರತದಂತಹ ಹಿಂದುಳಿದ ದೇಶಗಳಲ್ಲಿಯೂ ಕೂಡ ಅಪರೂಪದ ಘಟನೆ. ಔóಷಧಿಗಳ ವೆಚ್ಚವನ್ನು ಅರ್ಧದಷ್ಟು ತೀವ್ರವಾಗಿ ಕಡಿತ ಮಾಡಲಾಯಿತು. ಆಸ್ಪತ್ರೆಗಳ ನಿರ್ವಹಣಾ ವೆಚ್ಚವನ್ನೂ ಶೇಕಡ ಹತ್ತರಷ್ಟು ಕಡಿತ ಮಾಡಲಾಯಿತು. ಇವೆಲ್ಲವನ್ನೂ ಕೇವಲ ಒಂದೆರಡೇ ವರ್ಷಗಳ ಅಲ್ಪಾವಧಿಯಲ್ಲಿ ತಕ್ಷಣವೇ ಮಾಡಲಾಯಿತು. ಸಾಲದ ಮುಂದಿನ ಕಂತು ಬಿಡುಗಡೆಯಾಗಬೇಕಾದರೆ ಇಂತಿಂತಹ ಕ್ರಮಗಳನ್ನು ಕೈಗೊಂಡಿರಲೇ ಬೇಕೆಂಬ ತುರ್ತಿನಲ್ಲಿ ಆತುರಾತುರದಿಂದ ಮಾಡಿದ ಈ ಕಡಿತಗಳು ಜನಗಳ ಆರೋಗ್ಯ ಸ್ಥಿತಿಯ ಮೇಲೆ ಗಂಭೀರವಾದ ಪರಿಣಾಮವನ್ನುಂಟು ಮಾಡಿದವು ಈ ಬಿಕ್ಕಟ್ಟುಗಳು ಆರಂಭವಾಗುವ ಮೊದಲು ಶೇ85 ರಷ್ಟು ಜನತೆಗೆ ಆರೋಗ್ಯ ವಿಮೆಯ ರಕ್ಷಣೆ ದೊರಕಿದ್ದರೆ ಅದರಲ್ಲಿಯೂ ತೀವ್ರವಾದ ಕಡಿತವಾಯಿತು. ಇವೆಲ್ಲ ಕ್ರಮಗಳಿಂದ ಬಡವರ, ನಿರುದ್ಯೋಗಿಗಳ ಆರೋಗ್ಯಕ್ಕೆ ರಕ್ಷಣೆಯ ದಾರಿಗಳೇ ಮುಚ್ಚಿದವು. ಹಿಂದುಳಿದ ದೇಶಗಳ ಕಾಯಿಲೆಗಳೆಂದು ಹೆಸರು ಪಡೆದಿರುವ ಮಲೇರಿಯಾ, ಕ್ಷಯ, ಏಡ್ಸ್ ಗಳು ಉಲ್ಬಣಿಸಿದುವು.

ಉದ್ಯೋಗ ಮತ್ತು ಉದ್ಯೋಗ ಪರಿಸ್ಥಿತಿ:

ಸರ್ಕಾರೀ ಉದ್ಯೋಗಳನ್ನು ಕಡಿತ ಮಾಡಿ ಮನೆಗಟ್ಟಲಾಯಿತು. ಕೇವಲ ಒಂದು ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಮೂರು ಲಕ್ಷದಷ್ಟು ಸರ್ಕಾರಿ ಉದ್ಯೋಗಗಳು ದಿಢೀರನೆ ಕಡಿತಗೊಂಡವು. ಅನೇಕ ಕೈಗಾರಿಕೆಗಳು ಮುಚ್ಚಲ್ಪಟ್ಟವು. ಆದ್ದರಿಂದ ನಿರುದ್ಯೋಗವೂ ಸರಕ್ಕನೆ ಏರಿತು. ಯುವಜನರಲ್ಲಿ ಮೂರು ಜನ ಯುವಜನರಿಗೆ ಇಬ್ಬರು ನಿರುದ್ಯೋಗಿಗಳೆಂಬ ಪರಿಸ್ಥಿತಿ. ಇಡೀ ದೇಶದಲ್ಲಿ ಶೇ.7.3ರಷ್ಟಿದ್ದ ನಿರುದ್ಯೋಗ ಸುಮಾರು ನಾಲ್ಕು ಪಟ್ಟು ಏರಿ 27.9 ರಷ್ಟಾಯಿತು. ಸರ್ಕಾರಿ ಉದ್ಯೋಗಿಗಳ ಸಂಬಳವನ್ನು ಕಡಿತ ಮಾಡಿದರೆ ಮಾತ್ರ ಮುಂದಿನ ಸಾಲದ ಕಂತು ಬಿಡುಗಡೆ ಎಂಬ ಕತ್ತಿ ನೆತ್ತಿಯ ಮೇಲೆ ನೇತಾಡುತ್ತಿದ್ದ ಹಿನ್ನೆಲೆಯಲ್ಲಿ ಶೇ.25 ರಷ್ಟು ವೇತನ ಕಡಿತವಾಯಿತು. ಇದರ ಫಲವಾಗಿ ಮೊದಲೇ ವೇತನ ಕಡಿಮೆಯಿದ್ದ ಖಾಸಗಿ ರಂಗದಲ್ಲಿ ವೇತನಗಳು ಶೆ.15ರಷ್ಟು ಕಡಿತಗೊಂಡವು. ಮಹಿಳೆಯರು ಮತ್ತು ವಲಸೆಗಾರರನ್ನಂತೂ ಇನ್ನೂ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗ ಮತ್ತು ಕಡಿಮೆ ಸಂಬಳ ಕಾಡಿತು. ಗರ್ಭಿಣಿಯೆಂದು ತಿಳಿದರೆ ಸಾಕು ಕೆಲಸದಿಂದ ಕಿತ್ತೊಗೆಯುವುದು ದಿನನಿತ್ಯದ ವಿಷಯವಾಯಿತು. ಮಹಿಳೆಯರನ್ನು ಹೆಚ್ಚು ಹೆಚ್ಚು ಅಲ್ಪಕಾಲಾವಧಿಯ ಅಂದರೆ ಪಾರ್ಟ್ ಟೈಮ್ ಕೆಲಸಗಳಿಗೆ ಸೀಮಿತಗೊಳಿಸಲಾಯಿತು.
ಕನಿಷ್ಠ ವೇತನದ ಕಾಯಿದೆಗನುಗುಣವಾಗಿ ನಿಗದಿ ಮಾಡುವ ವೇತನವನ್ನು ಬಡತನ ರೇಖೆಗಿಂತ ಕೆಳಗಿಳಿಸಲಾಯಿತು. ಕಾರ್ಮಿಕ ಸಂಘಗಳ ಜೊತೆಗೆ ಮಾತುಕತೆ ನಡೆಸಿ ವೇತನ ನಿಗದಿ ಮಾಡುವ ಸಾಮೂಹಿಕ ಚೌಕಾಸಿಯ ಹಕ್ಕನ್ನೆ ಕಿತ್ತುಕೊಳ್ಳಲಾಯಿತು. ಎಲ್ಲೆಲ್ಲೂ ಯಾವಾಗೆಂದರೆ ಆಗ ಕಿತ್ತು ಹಾಕಬಹುದಾದ ಅಭದ್ರ ಉದ್ಯೋಗಗಳು ಮೆರೆದವು.
ವೃದ್ಧರನ್ನೂ ಬಿಡಲಿಲ್ಲ ಈ ಶರತ್ತುಗಳು. ನಿವೃತ್ತಿ ವೇತನ ನಿಧಿಯನ್ನು ಶೇರು ಮಾರುಕಟ್ಟೆಯಲ್ಲಿ ತೊಡಗಿಸಿದುದರ ಫಲವಾಗಿ ನೂರಾರು ಕೋಟಿ ಹಣವನ್ನು ಕಳೆದುಕೊಂಡಿತು. ಇದು ಅನೇಕ ಸೌಲಭ್ಯಗಳನ್ನು ಮತ್ತು ನಿವೃತ್ತಿ ವೇತನವನ್ನು ಕಡಿತಗೊಳಿಸಲು ಕಾರಣವಾಯಿತು. ನಿವೃತ್ತಿ ವೇತನ ಶೇ.40ರಷ್ಟು ಕಡಿತಗೊಂಡಿತು. ಇದರಿಂದಾಗಿ ನಿವೃತ್ತಿ ವೇತನದಾರರಲ್ಲಿ ಶೇ.45ರಷ್ಟು ಜನರು ದಿಢೀರನೆ ಬಡತನ ರೇಖೆಯ ಕೆಳಗೆ ದೂಡಲ್ಪಟ್ಟರು. ಕಡಿಮೆ ಆದಾಯದವರಿಗೆಂದು ಇದ್ದ ಗೃಹ ಯೋಜನೆಗಳನ್ನು ಪೂರ್ತಿ ನಿಲ್ಲಿಸಲಾಯಿತು. ಮನೆಗಳಲ್ಲಿ ಜನಸಾಂದ್ರತೆ ವಿಪರೀತ ಹೆಚ್ಚಿತು. ತೀವ್ರ ಚಳಿಯ ಆ ದೇಶದಲ್ಲಿ ಮನೆಗಳನ್ನು ಬೆಚ್ಚಗಿಡುವÀ ಹೀಟಿಂಗ್ ವ್ಯವಸ್ಥೆ ಬಹಳಷ್ಟು ಬಡವರ ಮನೆಗಳಿಗೆ ಇಲ್ಲದಂತಾಯಿತು. ಈ ಜನರು ಚಳಿಯಲ್ಲಿ ಗಡಗಡನೆ ನಡುಗುತ್ತಾ ನರಳುವಂತಾಯಿತು.
ತೆರಿಗೆಗಳ, ವಿದ್ಯುತ್, ನೀರಿನ ಸಾರಿಗೆ ದರಗಳ ಏರಿಕೆಗಳಂತೂ ಅವ್ಯಾಹತವಾಗಿ ಸಾಗಿತು. ಸರ್ಕಾರದ ಒಡೆತನದ ಅನೇಕ ಕಂಪನಿಗಳು ಹಾಗೂ ಆಸ್ತಿಗಳನ್ನು ಅದಕ್ಕಾಗಿಯೇ ಒಂದು ನಿಗಮ ರಚಿಸಿ ತೀವ್ರ ಖಾಸಗೀಕರಣಕ್ಕೊಳಪಡಿಸಲಾಯಿತು. ಅದೇ ಸಮಯದಲ್ಲಿ ಗ್ರೀಸ್‍ನ ಶ್ರೀಮಂತರು ತಮ್ಮ ಶತಕೋಟಿಗಟ್ಟಲೆ ತಮ್ಮ ಸಂಪತ್ತನ್ನು ದೇಶದ ಹೊರಗೆ ಸಾಗಿಸಿದರು. ಬೃಹತ್ ಹಡಗು ಕಂಪನಿಗಳ ಮಾಲೀಕರು ತಮ್ಮ ನೂರಾರು ಹಡಗುಗಳನ್ನು ತೆರಿಗೆ ಸ್ವರ್ಗಗಳೆಂದು ಕರೆಯಲ್ಪಡುವ ಕೆಲ ದ್ವೀಪ ರಾಷ್ಟ್ರಗಳಲ್ಲಿ ನೋಂದಾಯಿಸಿದರು. ಇದರಿಂದಾಗಿ ಸರ್ಕಾರಕ್ಕೆ ನೀಡಬೇಕಾದ ಲಕ್ಷ ಕೋಟಿಗಟ್ಟಲೆ ತೆರಿಗೆಗಳನ್ನು ವಂಚಿಸಿದರು.

ಪ್ರಜಾಪ್ರಭುತ್ವ ಹಕ್ಕುಗಳು :

ದಿಢೀರನೆ ಬಂದೆರಗಿದ ಈ ಪರಿಸ್ಥಿತಿಯ ವಿರುದ್ದ ಎದ್ದ ಪ್ರತಿಭಟನೆಗಳನ್ನು ನಿರ್ದಯವಾಗಿ ಹತ್ತಿಕ್ಕಲಾಯಿತು. ಸಾಲ ಶರತ್ತುಗಳ ವಿರೋಧಿ ಪ್ರತಿಭಟನೆ ಎಂದರೆ ಸಾಕು ಅನುಮತಿ ನಿರಾಕರಣೆ ಎಂಬ ಪರಿಸ್ಥಿತಿ. ಅಶ್ರುವಾಯು, ರಬ್ಬರ್ ಗುಂಡಿನ ಸುರಿಮಳೇ, ಜಲಫಿರಂಗಿಗಳ ಹೊಡೆತ ಸಾಮಾನ್ಯವಾಯಿತು. ಆದರೆ ಅದೇ ಸಮಯದಲ್ಲಿ ‘ಸುವರ್ಣೋದಯ’ (ಗೋಲ್ಡನ್ ಡಾನ್) ಎಂಬ ಫ್ಯಾಸಿಸ್ಟ್ ಗುಂಪಿನ ಹಿಂಸಾತ್ಮಕ ಚಟುವಟಿಕೆಗಳು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಬೆಳೆಯಲು ಬಿಡಲಾಯಿತು. ವಲಸೆಗಾರರ ವಿರುದ್ಧ ದ್ವೇಷವನ್ನು ಬೆಳೆಸಲಾಯಿತು. ಪತ್ರಿಕಾ ಸ್ವಾತಂತ್ರ್ಯವನ್ನು ಕೂಡ ಎಷ್ಟು ಮೊಟಕುಗೊಳಿಸಲಾಯಿತೆಂದರೆ ಅದಕ್ಕೆ ಸಂಬಂಧಪಟ್ಟ ಸೂಚ್ಯಾಂಕವೊಂದರಲ್ಲಿ ಗ್ರೀಸ್ ದೇಶದ ಸ್ಥಾನ 35ರಿಂದ ಜರ್ರನೆ 91ಕ್ಕಿಳಿಯಿತು.
ಒಟ್ಟಿನಲ್ಲಿ ದಿಢೀರನೆ ಬಡವರಾದ, ಮನೆಗಳನ್ನು ಕಳೆದುಕೊಂಡ, ವೇತನ ಕಡಿತಕ್ಕೊಳಗಾದ, ಶಿಕ್ಷಣ, ಆರೋಗ್ಯ ಸೌಲಭ್ಯಗಳು ಕುಂಠಿತವಾದ ಗ್ರೀಕ್ ಜನ ಸಮುದಾಯದ ಸ್ಥಿತಿ ಚಿಂತಾಜನಕವಾಯಿತು. ಜನರ ಆತ್ಮಹತ್ಯೆಗಳು ಹೆಚ್ಚಿದವು. ಮಾನಸಿಕ ರೋಗಗಳು ಉಂಟಾದವು. ಇವೆಲ್ಲವೂ ಬೇಂದ್ರೆಯವರ ಕವನದ ಈ ಸಾಲುಗಳನ್ನು ಮತ್ತೆ ನೆನಪಿಸಿತು.

ಕೂಲಿ ಕುಂಬಳಿಯವರ ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತಾ
ಬಡವರ ಒಡಲಿನ ಬಡಬಾನಲದಲ್ಲಿ
ಸುಡು ಸುಡು ಪಂಜು ಕೈಯೊಳಗಿತ್ತಾ.
ಬರುತಿಹೆವು ನಾವು ಬರುತಿಹೆವು ಎಂದರು ಜನತೆ.