ಗ್ರಸ್ತರು -ದೇವನೂರ ಮಹಾದೇವ

[1970ರಲ್ಲಿ ದೇವನೂರ ಮಹಾದೇವ  ಬರೆದ ಕತೆ. ʼದ್ಯಾವನೂರುʼ ಕಥಾ ಸಂಕಲನದಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ]
ಹೀಗೇ ಯೋಚಿಸುತ್ತಾ ಕುಳಿತುಬಿಟ್ಟರೆ ನೆಲಕ್ಕೆ ಹೂತುಹೋಗುವಷ್ಟು ಭಾರ ಬಂದು ಬಿಡುವ ಭಯ ಬಂತು. ಹಿಂದುಮುಂದು ನೋಡದೆ ಮೇಲಕ್ಕೆ ನಿಂತು ಮಾಡುವುದು ಏನೂ ಕಾಣಲಿಲ್ಲ. ಅಲ್ಲೇ ನೀಟಾಗಿ ಹೆಜ್ಜೆ ಹಾಕುವಾಗ ಲಾಟೀನು ಬೆಳಕಿಗೆ ನೆರಳು ಹಿಗ್ಗುತ್ತ ಕುಗ್ಗುತ್ತ ಇಲ್ಲವಾಗುತ್ತ ತುಂಬ ಕಸಿವಿಸಿ ಹೆಚ್ಚಿತು. ಸುತ್ತ ಕಣ್ಣಾಡಿಸಲು ಎದುರು ಗೋಡೆಯಲ್ಲಿ ಬಸವಣ್ಣ, ತಪಸ್ಸು ಮಾಡುತ್ತಿರುವ ಶಿವ, ದೊಡ್ಡದು ಮಾಡಿಸಿರುವ ಅಪ್ಪನ ಫೋಟೊ ದೃಷ್ಟಿಗೆ ಬಂದವು. ಮುಂದಿನ ಕಿರುಮನೆ ದಾಟಿ ಕಣ್ಣು ಹೋಗಲಿಲ್ಲ. ಅವ್ವ ಕಣ್ಣು ಮುಚ್ಚಿರಬೇಕು. ಇಲ್ಲದಿದ್ದರೆ ಗೌಡರ ಮನೆಗೆ ಹೋಗಲೇ ಇಲ್ಲವಾ ಎಂದು ಕೇಳುತ್ತಿದ್ದಳು. ಕಿರುಮನೆ ಹೊಸ್ತಿಲ ಬಳಿ ಹೋಗಿ ನಿಂತೆ. ಕುತ್ತಿಗೆವರೆಗೆ ದುಪ್ಪಟಿ ಹೊದ್ದು ಗೋಡೆ ಕಡೆ ತಿರುಗಿ ಅವ್ವ ಮಲಗಿದ್ದಳು. ಲಾಟೀನು ಬೆಳಕು ಕಿರುಮನೆಗೆ ನುಗ್ಗಿ ಆದಷ್ಟು ಸ್ಪಷ್ಟ ಮಾಡಲು ನೋಡುತ್ತಿತ್ತು.
ಅವ್ವ ಎದ್ದು ಓಡಾಡಿದ್ದು ಮರೆತು ಹೋಗುವಷ್ಟು ದಿನಗಳಾದವು. ಜಡ್ಡು ಬಿದ್ದ ಹಟ್ಟಿಗೆ ಅವ್ವನ ಎದೆ ಬಡಿತ ಒಗ್ಗಿಬಿಟ್ಟಿದೆ. ನೆನೆಸಿಕೊಳ್ಳುವುದಕ್ಕೆ ಅಸಹನೀಯವಾಗಿ ತೋರಿತು. ಗೌಡರು ಬಂದು ಕಿರುಮನೆ ಮುಂದು ನಿಂತು ಠೀವಿಯ ಮಾತು ಒಗೆಯತೊಡಗಿದಾಗ ಅವ್ವನ ಜೀವ ಏಳುವುದಕ್ಕಾಗದೆ ಕೂರುವುದಕ್ಕಾಗದೆ ಒದ್ದಾಡಿ ಹೋಗಿರಬೇಕು. ಬಂದ ತಕ್ಷಣವೆ ಅಳು ಕಚ್ಚಿಕೊಂಡು ಹೇಳಿದಳು: ‘ಗೌಡರು ಚಾರಮಾರ ಅಂದರು. ನೀನು ಎದುರು ನಡೆಯುವುದು ಎಂದರೇನು? ಎಷ್ಟಾದರೂ ಅವರು ದೊಡ್ಡರು.’ ಅವ್ವನ ಮಾತುಗಳಿಂದ ಗೌಡರು ಮೂಡಿಬಂದರು. ಒಂದು ಕೈಲಿ ಉರಿಯುವ ಸಿಗರೇಟು, ಇನ್ನೊಂದು ಕೈ ಅಲ್ಲಾಡಿಸುತ್ತ ‘ಹುಡ್ಗ ಯೋಗ್ಯ ಅಂತ ಸಾವಿರ್ದವರ್ಗೂ ಸಾಲ ಕೊಟ್ಟೆ. ಸ್ವಾಮಿಗಳ ಕಾಲ್ಗೆ ಬಿದ್ದು ಕೆಲ್ಸ ಕೊಡ್ಸದವ ನಾನು ಇವ್ಳೆ. ಈಗ ಎಷ್ಟರವನು ಅಂತ ಗೊತ್ತಾಯ್ತು ತಕ್ಕೊ. ನಾ ಹೇಳೋದು ಇಷ್ಟೆ. ಅಸ್ಸು ಬಡ್ಡಿ ಜೊತ್ಕಾಡ್ಕೊಂಡು ಹಟ್ಟಿ ಬಾಗ್ಲು ಮೆಟ್ಟೋದಕ್ಕೆ ಹೇಳು. ಇಲ್ಲ, ನೀನೆ ಕಂಡಿದ್ದಿ. ಹೊಲ ಅಂಗೈಯಗ್ಲ ಉಳಿಯಾಕಿಲ್ಲ.’ ಇದಕೇಳಿ ಅವ್ವಗೆ ಮಾತು ನಿಂತುಹೋಗಿ ಗೌಡರು ಗತ್ತಿನಿಂದ ಹೆಜ್ಜೆ ಹಾಕಿ ಹೋಗಿರಬೇಕು. ಕಲ್ಲಿನಂತೆ ಒಂದೆ ಸಮ ನಿಂತಿರುವುದಕ್ಕೆ ಅಗಲಿಲ್ಲ. ಅವ್ವಾ ಎಂದರೆ ಕಣ್ಣು ತೆರೆಯಬಹುದು. ಕಣ್ಣಲ್ಲೆ ಜೀವ ತುಂಬಿಕೊಂಡು ಇಡೀ ನನ್ನನ್ನು ನೋಡಬಹುದು. ನಿಲ್ಲಲು ಆಗಲಿಲ್ಲ. ಬಾಗಿಲು ತೆರೆದುಕೊಂಡು ದೊಡ್ಡವ್ವ ಒಳಬಂದಳು. ಇಷ್ಟೊತ್ತಿಗೇನೆ ಎಷ್ಟೊಂದು ಕತ್ತಲು ನೋಡು ಅಂದಳು. ದೊಡ್ಡವ್ವನ ದಿಟ್ಟಿಸಿದೆ. ನೋಡುವುದಕ್ಕಾಗದಷ್ಟು ಕಂಗೆಟ್ಟಿದ್ದಳು. ದುಡಿದುಡಿದೂ ಹಗಲೂ ರಾತ್ರಿ ಮಾಡುವುದು. ಯಾತಕ್ಕಾಗಿ ಇದು ಅನಿಸಿತು. ಟೀ ಬೇಕಾದರೆ ಇಡ್ತೀನಿ ಅಂದಾಗ ʼಹ್ಞೂʼ ಅಂದೆ. ಏನಾದರೂ ಮಾತಾಡಬಹುದು ಅನಿಸಿ ಕೋಣೆಗೆ ಬಂದು ಮಣೆ ಹಾಕಿ ಕುಳಿತುಕೊಂಡೆ. ದೊಡ್ಡವ್ವ ಬೆಂಕಿ ಹಾಕಿ ನಿಮಿಷಕ್ಕೆ ದಗ ದಗ ಒಲೆ ಉರಿಸತೊಡಗಿದಳು. ಬೆಂಕಿ ಉರಿಯಿಂದ ಮೊಖ ತೆಗೆದು ‘ನೀನು ಮದ್ವಯಾಗ್ದೆ ದಿನಾ ನಂಗೆ ಈ ಕಷ್ಟ ಕೊಡ್ತಿ ನೋಡು. ಎರು ದಿಕ್ಲ ಕೆಲ್ಸ’ ಅಂದಳು. ‘ಏನು ದೊಡ್ಡವ್ವ’ ಅಂದೆ. ‘ನೀ ಇನ್ನೂ ಕೂಸು’ ಅಂದುದು ಬಾಳ ಅಕ್ಕರೆ ಅನ್ನಿಸಿತು. ದೊಡ್ಡವ್ವ ಕರಗುವ ಹಾಗೆ ಬೆಂಕಿಗೆ ಮೈಕೊಟ್ಟು ಕುಳಿತಿದ್ದಳು. ಬಹಳ ಹೊತ್ತು ಬಿಟ್ಟು ‘ಮದ್ವೆ ಅಂದ್ರೆ ನಿಂಗ್ಯಾಕಪ್ಪ ಮಾತೇ ಬರಲ್ಲ’ ಅಂದಳು. ಚಿಗುರು ಮೇಯುವ ಜಿಂಕೆ ಥರ ಅವಳ ನೆನೆಪು ಒಡೆದುಕೊಂಡು ಬಂತು. ದೊಡ್ಡ ದೊಡ್ಡ ಎರಡು ಕಣ್ಣು. ದೊಡ್ಡ ಹಣೆ, ದೊಡ್ಡ ಹೃದಯ. ಅಲ್ಲೆ ತಾನು ಮಲಗುವಷ್ಟು ತಾವು. ಅಲ್ಲಿ ರಾತ್ರಿಯೆಲ್ಲ ಸಿಗರೇಟು ಸೇದಿ, ಬೆಳಗ್ಗೆ ಹೊತ್ತಾಗಿ ಎದ್ದು ಅವಳ ಕೈಲಿ ಬೈಗಳು-ಬಹಳ ಗೆಲುಗೆಲು ಅನಿಸಿತು. ನಗು ತಡೆಹಿಡಿದುಕೊಂಡು ದೊಡ್ಡವ್ವನ ಕಡೆ ನೋಡಿದೆ. ದೊಡ್ಡವ್ವ ನಕ್ಕು ಏನು ಅಂತ ಕೇಳಿದಳು. ಏನೋ ನೆನಪು ಬಂತು ಅಂದೆ. ಹೊಡೆದ ಹಾಗೆ ‘ನಂಗೊತ್ತು. ಆಗದಿದ್ದನ್ನೆಲ್ಲ ಕಟ್ಕೊಂಡು ಕೊರಗ್ತಿಯಾ’ ಎಂದು ಟೀ ಬಸಿದು ಲೋಟದೊಡನೆ ನಡುಮನೆಯಲ್ಲಿರಿಸಿ ಬಂದು ಅಲ್ಲೆ ಕುಳಿತಳು. ನಡುಮನೆಗೆ ಬಂದು ಟೀ ಕಚ್ಚಿ ದೊಡ್ಡವ್ವನ ಕಡೆ ನೋಡಿದೆ. ಉರಿಯುವ ಬೆಂಕಿಯಲೆ ದೊಡ್ಡವ್ವನ ಮುಖಕ್ಕೆ ರಾಚುತ್ತಿತ್ತು… ಎದ್ದು ಗೌಡರ ನೋಡಿ ಬರುವೆ ಹೇಳಿ ಹೊರಬಂದೆ. ಬಹಳ ಹೊತ್ತಾಗಿ ರಾತ್ರಿ ಹೆಚ್ಚು ಕತ್ತಲು ಕೂಡಿ ಹಾಕಿತ್ತು.
ಅವ್ವ, ದೊಡ್ಡವ್ವರ ಬಿಳುಚಿಕೊಂಡ ಮುಖಗಳು ಬೆನ್ನ ಹಿಂದೆ ಬರುತ್ತಿರುವ ಹಾಗೆ ಅನ್ನಿಸಿ ಹಿಂದಕ್ಕೆ ನೋಡಬೇಕು ಎನ್ನುವಷ್ಟು ಅನುಮಾನ – ಬಹಳ ಸಲ ಹೀಗೆ. ಗೆದ್ದಲು ತಿನ್ನುತ್ತ ನಿಂತ ಹಟ್ಟಿಯ ಥರ ಅವ್ವ ತೋರಿದಳು. ಅಲ್ಲಾಡದೆ ಮಲಗಿ ಕಣ್ಣು ತೆರೆದಿದ್ದರೆ ಕಿರುಮನೆಯಲ್ಲಿ ಸುತ್ತುವರೆದುದ ನೋಡುವುದು. ಅದು ಮುಗಿದರೆ ನನ್ನ ನೆನೆಸಿಕೊಂಡು ಮನೆ ದೇವರ ನೆನೆಯುವುದು. ಆ ಹಟ್ಟಿ ಕೆಲ್ಸ ಮುಗಿಸಿ ದೊಡ್ಡವ್ವ ಬಂದು ಕುಂತರೆ ‘ಕಾಗ್ದ ಏನಾದ್ರು ಬರ್ದಿದ್ನಾ, ಎಂದು ಬತ್ತಾನಂತೆ’ ಎಂದು ಕೇಳುವುದು- ಇಲ್ಲಿಗೆ ಮುಗಿಯುತ್ತದೆ. ಇನ್ನು ದೊಡ್ಡವ್ವನದು – ಹೊಲಮನೆ ಕೆಲಸಕ್ಕೆ ದೇಹ ತೇಯುವುದು. ಅವ್ವಗೆ ಎರಡು ಹೊತ್ತು ಗಂಜಿ ಕುಡಿಸಿ ನಿಂಬಳ ಕಾಣುವುದು. ನನ್ನನ್ನು ಯಾರಾದರೂ ಹಾಗೆ ಹೀಗೆ ಎಂದರೆ ರೇಗುವುದು. ಇವರ ಇದು ತನ್ನನ್ನು ಇಲ್ಲವಾಗಿಸುತ್ತದೆ ಎನ್ನಿಸಿ ಚಿಟ್ಟಾಯಿತು. ಅವ್ವನ ಲಕ್ವ ಹೊಡೆದ ಬಿಳುಪು ದೇಹ ಊರ ತುಂಬ ಓಡಾಡಿದ ಹಾಗೆ ಕಲ್ಪಿಸಿಕೊಂಡೆ. ಕತ್ತಲಿಗೆ ಊರ ಮುಂದಲಿನ ಅರಳಿ ಮರಗಳು ಗವ್ವ ನಿಂತಿದ್ದವು. ಹಟ್ಟಿಗಳ ಕಿಂಡಿಗಳಿಂದ ನೆಸೆಯುವ ಬೆಳಕುಗಳು ಹೊರ ಬಂದು ಕರಗಿಹೋಗುತ್ತಿದ್ದವು. ರೋಡಿನ ದಿಕ್ಕಿಗೆ ಮೊಖ ಹಾಕಿ ನಿಂತ ಗೌಡರ ಹಟ್ಟಿಯ ದೊಡ್ಡ ನಿಲುವು ಕತ್ತಲಿಗೆ ಮುಚ್ಚಿಹೋಗಿತ್ತು.
ಎರಡು ಸಲ ದಾರಂದ ಕುಟ್ಟಿದ ಮೇಲೆ ತೆರೆದುಕೊಂಡು ನಾಗವ್ವ ಕಾಣಿಸಿ ಎಂದು ಬಂದುದು ಕೇಳಿ ಒಳಹೋದರು. ಗೌಡರು ಹಜಾರಕ್ಕೆ ಸೇರಿದ ಮಂಚದ ಮೇಲೆ ಮುಂದಕ್ಕೇ ಲಾಟೀನು ಇರಿಸಿ ಕಾಗದ ಪತ್ರ ಹರಡಿ ನಡುವೆ ಗುಂಡತಗೆ ಕುಳಿತಿದ್ದರು. ಆಂತು ಕತ್ತು ಎತ್ತಿ ಕುಣಿಸಿ ‘ಬಾ ಇವನೆ’ ಅಂದರು. ಹೋಗಿ ಸಾವರಿಸಿಕೊಂಡು ಮುಂಡಿಗೆಗೆ ಒರಗಿ ಕೂತು ಕೊಟ್ಟಿಗೆಯಲ್ಲಿ ಸಾಲಾಗಿ ಉದ್ದಕ್ಕೆ ಕಟ್ಟಿದ್ದ ದನಕರುಗಳ ನೋಡಿದೆ. ಯಾರಾರ ಹಟ್ಟಿಯವು ಯಾವಾವು ಎಂದು ನೋಡಿದ್ದಕ್ಕೆ ಗುರುತಾಗಲಿಲ್ಲ. ಗೌಡರು ‘ಇವಳೇ ಟೀ ಕಾಯ್ಸು’ ಅಂದುದು ನಾಗವ್ವ ‘ಆಯ್ತು’ ಅಂದುದು ನಾನು ‘ಏನು ಬೇಡಿ’ ಅಂದೆ. ಗೌಡರು ‘ಪರವಾಗಿಲ್ಲ’ ಹೇಳಿ ಕಾಗದ ನೋಡಿ ತಲೆ ಎತ್ತಿ ‘ನಿನ್ನದನ್ನೇ ನೋಡುತ್ತಿದ್ದೆ’ ಅಂದರು. ಮಾತಾಡುವುದಕ್ಕೆ ತೊಡಕಾಗಿ ಉಗುಳು ನುಂಗಿ ‘ನಿಧಾನಿಸಿದರೆ ಆಗುತ್ತಿತ್ತು’ ಅಂದೆ. ಸಿಗರೇಟು ಹಚ್ಚಿ ಹೊಗೆ ಬಿಟ್ಟು ಮೇಲಕ್ಕೆ ನೋಡಿ ‘ಹೇಗಾಗುತ್ತೆ ಹೇಳು’ ಅಂದು ಬಹಳ ಹೊತ್ತು ನನ್ನ ಕಡೆ ನೋಡಲೆ ಇಲ್ಲ. ನಾಗವ್ವ ಟೀ ತಂದು ಮುಂದೆ ಇರಿಸಿ ಒಳ ಹೋದರು. ‘ಈಗೆಲ್ಲಿಂದ ತರ್ಲಿ ಹೇಳಿ. ಕೆಲ್ಸ ಬಿಟ್ಟು ಬಂದುದು ಗೊತ್ತೆ ಇದೆ.’ ಗೌಡರು ಗುರುಗಾಯಿಸುವ ಥರ ನೋಡಿದರು. ಆಡುವ ಮಾತುಗಳಿಗೆ ಭಾರ ಹಾಕುತ್ತ ‘ಸರಿಯಪ್ಪ, ನೀಯೇನೋ ಕೆಲ್ಸ ಬಿಟ್ಟೆ. ಕೆಲ್ಸ ಕೊಡ್ಸಿದವ್ರ ಮಾನ ಏನಾಗಬೇಕು’ ಎಂದು ಅವರದೇ ನಗು ತಂದುಕೊಂಡಾಗ ಹೇಗೆ ಹೇಳಬೇಕೊ ಗೊಂದಲಿಸಿಕೊಂಡಿತು. ‘ಹಾಗಲ್ಲ. ಅದು ನಿಮಗೆ ಗೊತ್ತಾಗಲ್ಲ’ ಅಂದೆ. ತಗುಲಿದ ಹಾಗೆ ಎಗರಿ ಕುಳಿತರು. ‘ಏನಂದೆ?’ ಎಂದು ಜೋರಾಗಿ ಅಂದು ದನಿ ಏರಿಸಿ ‘ನಂಗೆಲ್ಲಯ್ಯ ಗೊತ್ತಾಗುತ್ತೆ? ಸ್ವಾಮಿಗಳ ಮುಂದೆ ಎಷ್ಟರವ್ನು ನೀನು? ಸ್ವಾಮಿಗಳೆಲ್ಲ ಹಾಗೆ ಹೀಗೆ ಅಂಥ ಭಾಷಣ ಬೇರೆ ನಿಂಗೆ. ಈಗ್ಯಾಕೆ ಪಂಚಾಯ್ತಿ. ನಂದೂ ನಿಂದೂ ವ್ಯವಹಾರ ಮುಗೀತು. ಅಸ್ಲು ಬಡ್ಡಿ ತಂದೊಪ್ಪಿಸು. ಮುಂದಕ್ಕೆ ನೀನು ನಿನ್ನ ಹಾದಿ’ ದುಮುಗುಡುತ್ತ ಕುಳಿತುಬಿಟ್ಟರು. ಸುಮ್ಮನೆ ಕೂರಲು ಆಗಲಿಲ್ಲ. ‘ಹಾಗಲ್ಲ ಗೌಡರೆ’ ಅಂದೆ. ನೋಡಿದರು. ‘ಹೇಳಿದರೆ ನಿಮ್ಗೆ ಗೊತ್ತಾಗಲ್ಲ’ ಎಂದು ಮುಂದೆ ಹೇಳಹೊರಟೆ. ಗೌಡರು ಕತ್ತರಿಸಿದ ಹಾಗೆ ‘ಈಗ ಗೊತ್ತಾಗುತ್ತೆ ತಕ್ಕೊ’ ಎಂದು ಸೀಳುವ ಥರ ನೋಡಿದರು. ಚಡಪಡಿಸಿ ಮೇಲಕ್ಕೆ ಎದ್ದು ‘ಸರಿ ಬರ್ತೀನಿ’ ಎಂದು ತಿರುಗಿ ನೋಡದೆ ಹೊರಬಂದೆ. ನಿಂತ ಕತ್ತಲೊಳಗೆ ಹಾದಿ ಸಿಕ್ಕದ ಥರ ಆಯಿತು.
ದೊಡ್ಡವ್ವ ಬಾಗಿಲು ತೆರೆದುಕೊಂಡು ನಿಂತಿದ್ದಳು. ಕಂಡವಳೆ ‘ಯಾಕಿಷ್ಟೊತ್ತು ಮಾಡ್ಡೆ’ ಎಂದು ನೋಡಿದಳು. ‘ಇಷ್ಟೊತ್ತಾಯ್ತು’ ಅಂದೆ. “ನಿನ್ನೊಂದ್ಗ ಎಷ್ಟು ಮಾತಾಡುದ್ರೂ ಅಷ್ಟೇನೆ’ ಎಂದಳು. ನಗಲು ನೋಡಿದೆ. ತಟ್ಟನೆ ‘ಬಾಳನೆ ಹೊತ್ತಾಯ್ತು. ಆ ಹಟ್ಟೀಲು ಏನಾರು ಮಾಡ್ಬೇಕಲ್ಲ ಹೊಯ್ತಿನಿ’ ಅಂದಳು. ಒಂದೆರಡು ಹೆಜ್ಜೆ ಹಾಕಿ ತಿರುಗಿ ‘ಅವ್ವಗೂ ನೀನೆ ಗಂಜಿ ಕೊಡು’ ಎಂದು ಸರಸರ ನಡೆದಳು. ತೆರಕೊಂಡ ಬಾಗಿಲಿನಿಂದ ಬೆಳಕು ಚಾಚಿದ್ದವರೆಗೂ ದೊಡ್ಡವ್ವ ಕಾಣುತ್ತಿದ್ದು, ಆಮೇಲೆ ಕಾಣಲಿಲ್ಲ. ಸುಮಾರು ಹೊತ್ತು ಅಲ್ಲೇ ನಿಂತೆ. ಗಾಳಿ ಜೋರು ಬೀಸಿ ಅಲ್ಲೊಂದು ಇಲ್ಲೊಂದು ಮಳೆಹನಿ ಉದುರತೊಡಗಿದಾಗ ಒಳಕ್ಕೆ ಬಂದುದು.
ಊಟ ಒಗ್ಗಲಿಲ್ಲ. ‘ಉಣ್ಣಾಕೆ ತರಲವ್ವ’ ಎಂದು ಕೇಳಿದೆ. ಕಿರುಮನೆಯಿಂದ ‘ಎರ್ಡು ದಿಕ್ಲ ರೈಲು ಹೊಯ್ತಾ’ ಎಂದುದು ಕೇಳಿಸಿತು. ‘ಹೋಗಿರಬೇಕು, ಇನ್ನೂ ಇದ್ದದಾ’ ಅಂದೆ. ಇನ್ನೊಸಿ ಹೊತ್ತೋಗ್ಲಿ ಎಂದ ಅವ್ವನ ದನಿ ಜೊತೆ ಸೊಯ್ಯ ಬೀಸಿದ ಗಾಳಿಯ ಸದ್ದು ಅಲೆಯಿತು. ಸ್ವಲ್ಪ ಹೊತ್ತು ಬಿಟ್ಟು ‘ಮಳೆ ಬಂದದಾ’ ಎಂದು ಕೇಳಿದಳು. ಬರಬಹುದು ಅಂದೆ. ‘ನಾನು ಬಡ್ಕೊಂಡೆ. ಬೇಸಿಗೇಲೆ ಹಂಚು ಕೈಯಾಡ್ಸು ಅಂತ. ಈಗ ಹಟ್ಟಿ ತುಂಬ ಸೋರ್ತಾದೆ’ ಅವ್ವ ದನಿ ಜೋರು ಮಾಡಿ ಅಂದುದು ಚಿಟ್ಟು ಹಿಡಿಸಿತು. ದಿಕ್ಕಾಪಾಲು ಹಂಚಿಹೋದಂತೆನಿಸಿ ಸರಿಯಾಗಿ ಕುಳಿತೆ. ಸಿಗರೇಟು ಹಚ್ಚಿ ಬಲವಾಗಿ ಹೊಗೆ ಎಳೆದು ಹೊಗೆಯೊಡನೆ ಅವಳ ನೆನಪು ಕೂಡಿಸಲು ನೋಡಿದೆ. ನಡುಗುವ ಚಳಿಯಲ್ಲಿ ಕುಳಿತು ‘ನನಗೂ ಮದುವೆಗೂ ದೂರ’ ಅಂದಳು. ‘ಎಷ್ಟು ದೂರ’ ಎಂದು ಕೇಳಲು ಅನಿಸಿ ಆಗದೆ ಅವಳ ತುಂಬಿಕೊಳ್ಳುತ್ತ ಕುಳಿತೆ. ತುಂಬ ಕ್ಲಿಷ್ಟವಾಗಿ ಕಂಡಳು. ಯಾಕೊ ಗೊತ್ತಿಲ್ಲ. ನನಗೆ ದುಃಖವಾದಾಗಲೆಲ್ಲ ನೀನು ಬೇಕು ಅನಿಸುತ್ತೆ ಎಂದು ಹೇಳುವುದು ಹುಚ್ಚಾಗಿ ತೋರಿತು. ಹೇಳಿದರೆ ಮಾತಾಗಿ ಬಿಡುತ್ತವೆ. ಅನ್ನಿಸುತ್ತಿದ್ದುದನ್ನೆಲ್ಲ ಒಟ್ಟಾಗಿಸಿ ನೋಡಿದೆ. ನನಗೆ ನಿಜವಾಗಿ ಯಾರೂ ಇಲ್ಲ ಅನಿಸುತ್ತೆ. ಇರೊದೆಲ್ಲ ಸುಳ್ಳು ಅನಿಸುತ್ತೆ. ನೀನು ಎಲ್ಲ ಅನಿಸುತ್ತಿ. ಅವ್ವ ಅಕ್ಕ ತಂಗಿ ಮಗು ಗೆಳತಿ ಹೆಂಡತಿ ಎಲ್ಲ. ತುಂಬ ಅಸಹಜವಾಗಿ ಕಂಡವು. ಅವಳಿಗೆ ಏನು ಅನಿಸಬಹುದು ಅಂತ ಅನುಮಾನ ಬಂತು. ‘ಹೀಗೆ ಪದೇ ಪದೇ ನೋಡುವುದು ಬೇಡಿ. ಗುಲ್ಲಾಗುತ್ತೆ’ ಅಂದಳು. ಬಾರದ ನಗುವನ್ನಾದರೂ ಬರಿಸಿಕೊಂಡು ನಗಬೇಕು. ಅವಳು, ಅವಳ ಅಪ್ಪ, ಅಮ್ಮ, ಕತ್ತರಿಸಿ ಇಟ್ಟಿರುವ ಜಾತಿ, ಬಂಧು ಬಳಗ, ಇವುಗಳ ನಡುವೆ ನಾನು ಅವಳು ಹದ್ದುಗಳಿಗೆ ಎಸೆದ ಹೆಣಗಳ ಹಾಗೆ ಎದ್ದು ನಿಂತು ‘ಹೋಗಲಾ’ ಅಂದೆ.
ಬಲವಾಗಿ ಬೀಸಿದ ಗಾಳಿಗೆ ದಾರಂದ ಅರೆತೆರೆದು ಮುಚ್ಚಿ, ತುಂಬಿ ಮಿಗುವಷ್ಟು ಗಾಳಿ ಒಳಕ್ಕೆ ಬಂದು ಲಾಟೀನು ಬೆಳಕು ಕತ್ತು ಹಿಚುಕಿಸಿಕೊಂಡ ಥರ ಆಡಿತು. ಅವ್ವ ಜ್ಞಾಪಿಸಿಕೊಂಡು ‘ಗೌಡರ ಹಟ್ಟಿಗೆ ಹೋಗಿದ್ಯಾ’ ಎಂದು ಕೇಳಿದಳು. ನಿಧಾನಿಸಿಯೆ ‘ಹೋಗಿದ್ದೆ’ ಎಂದೆ. ಏನಂದರು ಅಂದುದಕ್ಕೆ ಏನು ಹೇಳಬೇಕು ಕಾಣಲಿಲ್ಲ. ಅವ್ವ ಮತ್ತೆ ಅದೇ ಕೇಳಿದಾಗ ‘ಇನ್ನೇನಂತಾರೆ ಅದೇ’ ಅಂದೆ. ಅವ್ವ ಸಿಡುಕಿ ‘ಅದೇ ಅಂದ್ರ ಏನ?’ ಅಂದಳು. ಎಂಥದು ಮಾತಾಡಲು ಆಗದೆ ಸಹಿಸುವುದಕ್ಕಾಗದಂತೆ ತೋರಿತು. ‘ಸುಮ್ಮನೆ ಮಲಿಕವ್ವ’ ಅಂದೆ. ಉಸಿರು ಹಿಡಿದುಕೊಂಡೆ ‘ನನ್ಮಾತು ಅಂದ್ರ ನಿಂಗ್ಯಾಕ ಹಿಂಗ ಹೇಳು’ ಜೋರು ಅಂದಳು. ಮಾತು ಹಟ್ಟಿ ತುಂಬೆಲ್ಲ ತುಂಬಿ ದಿಕ್ಕು ದಿಕ್ಕು ಅಲೆಯಿತು. ರೋಸಿ ಎದ್ದು ಹೋಗಿ ಕಿರುಮನೆ ಬಾಗಿಲಿಗೆ ನಿಂತು ‘ಏನು ಕೇಳು’ ಅಂದೆ. ಹಾಗೆ ಮಲಗಿದಳು. ದಿನಕ್ಕಿಂತ ಹೆಚ್ಚು ಬಿಳಿಚಿಕೊಂಡ ಥರ ತೋರಿತು. ಮೊಖದ ತುಂಬ ದಿನಾ ಬೆಳೆಯುತ್ತಿದ್ದ ಸುಕ್ಕುಗಳು ದಿಗಿಲು ಬೀಳುವಷ್ಟು ಹೆಚ್ಚಾಗಿಬಿಟ್ಟಿದ್ದುವು. ಕಣ್ಣುಗಳು ತೆರೆದುಕೊಂಡು ನೋಡುತ್ತಿದ್ದವು. ಎದೆ ಏರಿಳಿತಕ್ಕೆ ಹೊದುಪು ನಿಧಾನ ಮೇಲು ಕೆಳಗಾಗುತ್ತಿತ್ತು. ‘ಬಾ ಕೂತುಕೊ’ ಅಂದಳು. ಹೋಗಿ ಹಾಸಿಗೆಯ ಪಕ್ಕ ಕುಳಿತು ಹೇಗೆ ಹೇಳಬೇಕು ಎಂದು ತೊಡಕಾಡಿದೆ. ‘ಹೇಳು’ ಅಂದು ನೋಡಿದಳು. ಎಷ್ಟೋ ಹೊತ್ತು ಸುಮ್ಮನಿದ್ದು ಹಾಗೂ ಇರಲು ಆಗದೆ ‘ನಂಗ ಸರಿ ಕಾಣ್ತು. ಧರ್ಮ ಕರ್ಮ ಮಠ ಸ್ವಾಮಿಗಳೆಲ್ಲ ಸೋಗು ಅಂತ ಹೇಳೆ.’ ಅವ್ವ ದುರುದುರು ನೋಡತೊಡಗಿದಳು. ‘ಯಾವುದೂ ಬೇಡ. ಹೊಲ ಮನೆ ಅಂತ ಇರೋದು ಅಂತ ಬಂದ್ರೆ, ಈ ಗೌಡ್ರಿಗೆ ಚುಚ್ಕೊಟ್ಟವರೆ…’ ಎಂದು ಅಂದು ನೋಡಿದೆ. ತುಂಬ ನೋವು ತಿನ್ನುತ್ತಿದ್ದಳು. ಸುಮ್ಮನೆ ನೋಡಿದೆ. ಅವ್ವ ಜೋರು ಉಸಿರು ತೆಗೆದುಕೊಂಡು ಹಣೆ ಚಚ್ಚಿಕೊಂಡಳು. ಬಹಳ ಕಷ್ಟಪಟ್ಟು ಕಣ್ಣು ತೆಗೆದು ಸೂರಿಗೆ ನೆಟ್ಟು ಆಗದೆ ಮತ್ತೆ ನೋಡಿದಾಗ ಬಿರಿಯುವ ತುಟಿಗಳು, ಕಣ್ಣಿಂದ ದೊಳ ದೊಳ ನೀರು. ದಿಮುಗುಡುತ್ತಿದ್ದ ಅವ್ವ ಕೆಟ್ಟ ದನಿಯಲ್ಲಿ ‘ಈಗ್ಲೆ ಹೋಗಿ ತಪ್ಪಾಯ್ತು ಅಂತ ಕೇಳ್ಕೊ. ದೇವ್ರಂಥವರತ್ರ ನಿಂದು ನಿಷ್ಠುರ. ಇಷ್ಟಕ್ಕೂ ನಾ ಮಾಡ್ಡ ಕರ್ಮ. ಈಗ್ಲೆ ಹೋಗು.’ ತವಕಿಸತೊಡಗಿದಳು. ‘ಆಗೋದಿಲ್ಲ’ ಅಂದೆ. ತಕ್ಷಣ ‘ನಾನೇ ಕೇಳ್ತಿನಿ’ ಎಂದುದಕ್ಕೆ ‘ಯಾರೂ ಕೇಳೋದು ಬೇಕಾಗಿಲ್ಲ’ ಎಂದು ಎರಡು ಕೈಗಳಿಂದಲೂ ತಲೆ ಅದುಮಿ ಸಮನಾಗಲು ನೋಡಿದೆ. ಸೊರಕಿನೊಡನೆ ಕಳೆಯುತ್ತಿದ್ದ ಕೆಟ್ಟ ಮೌನ ನಿಂತು ಅವ್ವ ‘ಹೀಗಂದ್ರ ನಾವು ಬದ್ಕೋದು’ ಅವ್ವ ಚೀರಿದ್ದು ಕೇಳಲಾಗಲಿಲ್ಲ. ಚೂಪಾಗಿ ನೋಡಿ ‘ಈಗ ನಾವು ಬದ್ಕಿದ್ದೀವಾ’ ಅಂದೆ. ಅವ್ವನ ಕತ್ತಿನ ನರಗಳು ಬಿಗಿದುಕೊಂಡು ಉಬ್ಬಿದುವು. ಎದ್ದು ದಪ ದಪ ಹೆಜ್ಜೆ ಹಾಕಿ ದಾರಂದ ತೆಗೆದು ಹೊರಬಂದು ಕತ್ತಲಲ್ಲೆ ತಡವರಿಸಿ ಜಗುಲಿಯ ಮುಂಡಿಗೆ ಹಿಡಿದು ಕುಸಿದು ನಿಂತೆ, ಬಹಳ ಹೊತ್ತು.