ಗಾಂಧಿ ಕಥನ: ಜೈ ಶ್ರೀ ರಾಂ vs ಹೇ ರಾಂ-ದೇವನೂರ ಮಹಾದೇವ
[29.9.2019 ರಂದು ಬೆಂಗಳೂರಿನಲ್ಲಿ ಬಿಡುಗಡೆಯಾದ ಶ್ರೀ ಡಿ.ಎಸ್.ನಾಗಭೂಷಣ ಅವರ “ಗಾಂಧಿ ಕಥನ” [ಮಹಾತ್ಮಾ ಗಾಂಧಿ ಅವರ ಬದುಕಿನ ಸಮಗ್ರ ಚಿತ್ರಣ] ಕೃತಿ ಬಿಡುಗಡೆ ಮಾಡಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಅಕ್ಷರ ರೂಪ ಹಾಗೂ ಕಿರು ವಿಡಿಯೋ]
ಡಿ.ಎಸ್. ನಾಗಭೂಷಣ್ ಬರೆದ ‘ಗಾಂಧಿಕಥನ’ ಪುಸ್ತಕ ಬಿಡುಗಡೆ ಮಾಡ್ತಾ ಇದ್ದೇನೆ. ಕ್ಷಮೆ ಇರಲಿ, ನನಗೆ ಓದಲಾಗಲಿಲ್ಲ. ಬಹಳ ಹಿಂದೊಮ್ಮೆ ಡಿ.ಎಸ್.ನಾಗಭೂಷಣ್‍ಗೆ ಛೇಡಿಸಿದ್ದೆ. ‘ನಿನ್ನ ಕಾರ್ಯಕ್ಷೇತ್ರವು ಗಾಂಧಿ ಲೋಹಿಯಾಗೆ ಮಾತ್ರ ಮೀಸಲಿರಲಿ, ಇತರ ವಿಷಯಗಳಿಗೆ ಹಸ್ತಕ್ಷೇಪ ಮಾಡಬೇಡ’ ಅಂತ. ಈ ಛೇಡಿಸುವಿಕೆಯಲ್ಲಿ ಮೆಚ್ಚಿಗೆಯೂ ಇತ್ತು. ಗಾಂಧಿ ಲೋಹಿಯಾರ ವಿಷಯದಲ್ಲಿ ಡಿ.ಎಸ್.ನಾಗಭೂಷಣ್ ತನ್ನ ತನು ಮನ ಧನದ ಜೊತೆಗೆ ಆತ್ಮವನ್ನೂ ಕೂಡಿಸಿ ತನ್ನನ್ನು ಅರ್ಪಿಸಿಕೊಂಡು ಅಭಿವ್ಯಕ್ತಿಗೊಳ್ಳುತ್ತಾನೆ. ಹಾಗಾಗಿ ‘ಗಾಂಧಿಕಥನ’ ಬೆಲೆ ಉಳ್ಳದ್ದು ಎಂಬ ನಂಬಿಕೆ ನನಗಿದೆ.
ಇಂದು ‘ಜೈ ಶ್ರೀರಾಂ’ ಎಂಬ ಹಿಂಸೆಯು ‘ಹೇ ರಾಂ’ ಎಂಬ ಅಹಿಂಸೆಯನ್ನು ಭಾರತದಿಂದ ಹೊರಹಾಕಲು ಟೊಂಕಕಟ್ಟಿ ನಿಂತಿದೆ. ಬುದ್ಧನಿಗೆ ಗತಿ ಕಾಣಿಸಿದಂತೆ. ಆದರೆ ಒಂದು ಚೋದ್ಯ ಗೊತ್ತೆ? ಉದಾ: ಗೋಡ್ಸೆ ಪ್ರೇತ ಫಾರಿನ್‍ಗೆ ವಿಸಿಟ್ ಮಾಡ್ತು ಎಂದಿಟ್ಟುಕೊಳ್ಳೋಣ. ಫಾರಿನ್‍ನಲ್ಲಿ ಅದು ತಾನು ಎಲ್ಲಿಂದ ಬಂದೆ ಎಂದು ಹೇಳಿಕೊಳ್ಳಬಹುದು? ಗತ್ಯಂತರವೇ ಇಲ್ಲ. ಅದು ತಾನು ಬುದ್ಧನ ನಾಡಿನಿಂದ ಬಂದೆ ಅಂತಲೋ ಅಥವಾ ಗಾಂಧಿ ನಾಡಿನಿಂದ ಬಂದೆ ಅಂತಲೋ ಅಥವಾ ಅಂಬೇಡ್ಕರ್‍ರ ನಾಡಿನಿಂದ ಬಂದೆ ಅಂತ ಹೇಳಿಕೊಳ್ಳಬೇಕಾಗುತ್ತದೆ. ಗತ್ಯಂತರವೇ ಇಲ್ಲ. ಇಂದು ವರ್ತಮಾನದಲ್ಲೂ ಕೂಡ ಗೋಡ್ಸೆ ವಿಚಾರಧಾರೆಯ ಸಂತಾನದವರು ವಿದೇಶಕ್ಕೆ ಹೋದರೆ ಹೇಳುತ್ತಿರುವುದೆಲ್ಲಾ ಇದನ್ನೇ ತಾನೆ?
ಭಾರತವು ಇಂದು ವಾರಣಾಸಿಯ ಹದಿನಾರು ವರ್ಷದ ಬಾಲಕ ಆಯುಷ್‍ನ ಮಾತನ್ನು ಆಲಿಸಬೇಕಾಗಿದೆ. ಭಾರತಕ್ಕೆ ಆಯುಷ್ಯ ಬೇಕು ಅಂದರೆ ಆಯುಷ್‍ನ ಮಾತನ್ನು ಆಲಿಸಲೇಬೇಕಾಗಿದೆ. ‘ಗೋಡ್ಸೆಯ ಕಾಲ ನಡೆಯುವಾಗ ನಾನು ಗಾಂಧಿ ಪರ ನಿಲ್ಲುತ್ತೇನೆ’ ಎಂಬ ಕವಿವಾಣಿಯನ್ನು ಉಲ್ಲೇಖಿಸಿ ಆತ ಹೇಳುತ್ತಾನೆ: ‘ವರ್ಣಭೇದ ನೀತಿಯ ದಕ್ಷಿಣಾ ಆಫ್ರಿಕಾದಲ್ಲಿ ಗಾಂಧೀಜಿ ಫಸ್ಟ್ ಕ್ಲಾಸ್ ಬೋಗಿಯಲ್ಲಿ ಪಯಣಿಸುತ್ತಿದ್ದಾಗ ಅಲ್ಲಿದ್ದ ಬ್ರಿಟಿಷ್ ಪ್ರಯಾಣಿಕನೊಬ್ಬ ಗಾಂಧಿಯನ್ನು ಟ್ರೇನಿನಿಂದಲೇ ಹೊರದಬ್ಬುತ್ತಾನೆ. ಇದರಿಂದ ಗಾಂಧಿಗೆ ಒಂದು ಅಸ್ತ್ರ ಸಿಕ್ಕಿತು; ಅದೇ ಅಸಹಕಾರ ಚಳವಳಿ. ದುಷ್ಟರು ಹೇಳುವುದನ್ನು ಮಾಡದೇ ಇರುವುದೇ ಅಸಹಕಾರ ಚಳವಳಿ ಹಾಗೂ ಇದರಿಂದಲೇ ಒಂದು ಇತಿಹಾಸ ಪ್ರಾರಂಭವಾಯಿತು” ಎನ್ನುತ್ತಾನೆ. ಮುಂದೆ ‘ರೈಲಿನಿಂದ ಗಾಂಧೀಜಿಯನ್ನು ಹೊರದಬ್ಬಿದ ಬ್ರಿಟಿಷ್ ವ್ಯಕ್ತಿಗೆ ತಾನು ಹೊರದಬ್ಬಿದ ವ್ಯಕ್ತಿಯೇ ಒಂದು ದಿನ ಬ್ರಿಟಿಷ್ ಆಳ್ವಿಕೆಯನ್ನೇ ಹೊರದಬ್ಬುವ ವ್ಯಕ್ತಿಯಾಗುತ್ತಾನೆ ಎಂಬುದು ಮೊದಲೇ ತಿಳಿದಿದ್ದರೆ ಆ ಬ್ರಿಟಿಷ್ ವ್ಯಕ್ತಿ ಹಾಗೆ ಮಾಡುತ್ತಿರಲಿಲ್ಲವೇನೋ’ ಎಂಬ ಲೂಯಿ ಫಿಷರ್ ಮಾತನ್ನು ಉಲ್ಲೇಖಿಸುತ್ತಾನೆ. ಗೋಡ್ಸೆಗೆ ದೇವಸ್ಥಾನ ಕಟ್ಟಿ ಗಾಂಧಿಯನ್ನು ಹೊರದಬ್ಬುತ್ತಿರುವ ವಿಚಾರಧಾರೆಯನ್ನು ಹೊರದಬ್ಬಬೇಕಾಗಿದೆ. ಹೊರದಬ್ಬುತ್ತಿರುವವರನ್ನೂ ಮನುಷ್ಯರನ್ನಾಗಿಸಬೇಕಾಗಿದೆ.
ಇರಲಿ, ಬಹಳ ಹಿಂದೆ ಗಾಂಧಿ ನೆನಪಿನ ಕಾರ್ಯಕ್ರಮವೊಂದರಲ್ಲಿ ಗಾಂಧಿ ರೈಲಿನಿಂದ ಹೊರದಬ್ಬಿಸಿಕೊಳ್ಳುವ ಪ್ರಸಂಗಕ್ಕೆ ನಾನು ಒಂದು ಟಾಂಗ್ ಕೊಟ್ಟಿದ್ದೆ. ಏನೆಂದರೆ- ‘ಗಾಂಧಿ ವರ್ಣಭೇದ ಆಚರಣೆಗೆ ಒಳಗಾಗಿ ಯಾವಾಗ ರೈಲಿನಿಂದ ಹೊರ ದಬ್ಬಿಸಿಕೊಂಡು ಆಚೆ ಬಿದ್ದು ಅಸ್ಪೃಶ್ಯವಾದನೋ ಆ ಗಳಿಗೆಯಲ್ಲಿ ಗಾಂಧಿ ಎಂಬ ಈ ವ್ಯಕ್ತಿ ಆತ್ಮಕ್ಕೆ, ನೊಂದು ಬೆಂದ ಅಸ್ಪೃಶ್ಯ ಆತ್ಮಗಳು ಸೇರಿಕೊಂಡವು ಎಂದು ಕಾಣುತ್ತದೆ, ಆಗ ಗಾಂಧಿ ಮಹಾತ್ಮನಾದ’ ಎಂದು ಹೇಳಿದ್ದೆ.
ಇದೂ ಇರಲಿ, ನಮ್ಮ ಮುಂದಿರುವ ಸವಾಲು ಎಂದರೆ- ಕಟ್ಟ ಕಡೆಯವನ ಕಡೆಗೆ ನಡೆಯುತ್ತಿರುವ ಗಾಂಧಿ ಹಾಗೂ ಕಟ್ಟ ಕಡೆಯವನ ಪ್ರತಿನಿಧಿಯಾದ ಅಂಬೇಡ್ಕರ್‍ರವರ ನಡುವಿನ ಕಗ್ಗಂಟನ್ನು ಬಿಡಿಸಿಕೊಳ್ಳಬೇಕಾಗಿದೆ. ಇದನ್ನು ಭಾರತ ಬಿಡಿಸಿಕೊಳ್ಳದಿದ್ದರೆ ಅದು ಒಂಟಿ ಕಾಲಿನ ಕುಂಟು ನಡಿಗೆಯಾಗುತ್ತದೆ.
ಬೆಟ್ಟದ ಮೇಲೊಂದು ಸಹನೆ, ಪ್ರೀತಿ, ಸಹಬಾಳ್ವೆ, ಸಮಾನತೆಯ ಗುಡಿಯೊಂದು ಇದೆ. ಉತ್ತರದ ಕಡೆಯಿಂದ ಗಾಂಧೀಜಿ ಬೆಟ್ಟ ಹತ್ತುತ್ತಾರೆ. ದಕ್ಷಿಣದ ಕಡೆಯಿಂದ ಅಂಬೇಡ್ಕರ್ ಬೆಟ್ಟ ಹತ್ತುತ್ತಾರೆ. ಆರಂಭದಲ್ಲಿ ಅವರುಗಳ ಮೊದಲ ಹೆಜ್ಜೆಗಳ ದೂರ ಅಳತೆ ಮಾಡಿದರೆ ಹೌದು ಅವು ಪರಸ್ಪರ ಬಲು ದೂರವೆ. ನಾವು ಏನು ಮಾಡುತ್ತಿದ್ದೇವೆಂದರೆ, ಅವರು ಇಡುವ ಹೆಜ್ಜೆಗಳನ್ನು ಕಟ್ಟು ಗಾಜು ಹಾಕಿಸಿ ಗೋಡೆಗೆ ನೇತಾಕುತ್ತಿದ್ದೇವೆ. ಚಲನೆಯನ್ನು ಗಮನಿಸುತ್ತಿಲ್ಲ; ನಡಿಗೆಯ ದಿಕ್ಕನ್ನು ಗಮನಿಸುತ್ತಿಲ್ಲ. ಹೇಳಿ, ಜಾತಿವರ್ಣಗಳನ್ನು ಎತ್ತಿ ಹಿಡಿಯುತ್ತಿದ್ದ ಗಾಂಧಿ ಕೊನೆಕೊನೆಗೆ ‘ತಾನು ಸವರ್ಣಿಯ ಮತ್ತು ಅಸ್ಪೃಶ್ಯರ ನಡುವಿನ ಮದುವೆಗೆ ಮಾತ್ರ ಭಾಗವಹಿಸುವೆ’ ಎಂಬ ನಿಲುವಿಗೆ ತಲುಪಲು ಎಷ್ಟೊಂದು ಎದ್ದುಬಿದ್ದು ಉರುಳು ಸೇವೆ ಮಾಡಿರಬಹುದು? ಜೊತೆಗೆ ಜಾತಿ, ವರ್ಣಗಳನ್ನೇ ತನ್ನ ಧರ್ಮ ಎಂದು ನಂಬಿ ತೆವಳುವ ಸಮುದಾಯವನ್ನು ಮೇಲೆತ್ತಿ ಜೊತೆಜೊತೆಗೆ ಹೆಜ್ಜೆ ಹಾಕಬೇಕಿತ್ತು. ಗಾಂಧಿ ಒಂದೇ ಜನ್ಮದಲ್ಲಿ ಹತ್ತಾರು ಜನ್ಮಗಳಷ್ಟು ದೂರ ಕ್ರಮಿಸುತ್ತಾರೆ.ಇದಕ್ಕೆ ಅಂಬೇಡ್ಕರ್ ಎದುರಿಗಿಡುತ್ತಿದ್ದ ಅಗ್ನಿಪರೀಕ್ಷೆಗಳೂ ಕಾರಣವಾಗಿರಬಹುದಲ್ಲವೆ? ಹಾಗೇನೇ ಜಾತಿ ವರ್ಣವನ್ನೆ ಧರ್ಮ ಎಂದುಕೊಂಡಿದ್ದ ಆ ಕಾಲದಲ್ಲಿ ಅಂಬೇಡ್ಕರ್ ರ ಪ್ರಖರತೆಯನ್ನು ಸಹಿಸಿಕೊಂಡಿದ್ದರಲ್ಲಿ ಗಾಂಧಿ ಪ್ರಭಾವದಿಂದಾಗಿ ಜಾತಿ ಧರ್ಮದ ಸಮಾಜದಲ್ಲಿ ಉಂಟಾಗಿದ್ದ ಉದಾರವಾದಿ ವಾತಾವರಣವೂ ಕಾರಣವಾಗಿರಬಹುದಲ್ಲವೆ? ನಮ್ಮೊಳಗೆ ನಾವು ಮೌನವಾಗಿ ಕಾಣಬೇಕಾಗಿದೆ.
ಇಂದು ನಾವು ಮಾತಾಡಲೇಬೇಕಿದೆ. So called ಅಭಿವೃದ್ಧಿಯ ಅವಾಂತರದಲ್ಲಿ ಜಗತ್ತಿನ ಆರ್ಥಿಕತೆ ಜೂಜಾಗಿದೆ. ಇಂದಿನ ಆರ್ಥಿಕತೆ ಎಂದರೆ ಪಿರಮಿಡ್ಡಿನ ತುದಿಗೆ ಸಂಪತ್ತನ್ನು ಸುರಿದು ಅದು ಹರಿದು ಇಳಿದು ಬುಡ ತಲುಪುವುದಕ್ಕಾಗಿ ಕಾಯ್ದು ಕುಳಿತಿರುವ ಆರ್ಥಿಕತೆಯಾಗಿದೆ. ಅದು ಬುಡ ತಲುಪದೆ ಆರ್ಥಿಕತೆಯೇ ಕುಸಿದು ಬೀಳುತ್ತಿದೆ. ಕೈಗೆ ಕೆಲಸ, ಸ್ವಾವಲಂಬನೆ, ವಿಕೇಂದ್ರೀಕರಣ ಇತ್ಯಾದಿಗಳ ಗಾಂಧಿ ಅನಿವಾರ್ಯವಾಗುತ್ತಿದ್ದಾನೆ. ಇಂದು ಗಾಂಧಿ ಆರ್ಥಿಕತೆಯ ಬಿತ್ತನೆ ಬೀಜಗಳನ್ನು ಹುರಿದು (ಪ್ರೈ) ಮಾಡಿ ಕೆಡದಂತೆ ಇಟ್ಟುಕೊಂಡಿದ್ದಾರೆಯೇ ಹೊರತು ಅವುಗಳನ್ನು ಬಿತ್ತಿ ಬೆಳೆದಿಲ್ಲ. ಆ ಚಿಂತನೆಗಳನ್ನು ಇಂದಿನ ಪರಿಸ್ಥಿತಿಗೆ ಬಿತ್ತಿ ಬೆಳೆದು ಆಧುನಿಕತೆ ಸ್ಪರ್ಶ ಕೊಟ್ಟು ಸುಧಾರಿತ ತಳಿ ಮಾಡಬೇಕಾಗಿದೆ. ಇ.ಎಫ್.ಶುಮಾಕರ್ ನ ‘ಸ್ಮಾಲ್ ಈಸ್ ಬ್ಯೂಟಿಫುಲ್’ ಅನ್ನು ಮುಂದುವರೆಸಬೇಕಾಗಿದೆ. ಗಾಂಧಿಯನ್ನು ಗಾಂಧಿಯಲ್ಲಿಯೇ ನೋಡಬಾರದು. ಗಾಂಧಿಯನ್ನು ಚಿಗುರಿಸಿದ ಕಡೆ ಗಾಂಧಿಯನ್ನು ಕಾಣಬೇಕು.
ಉದಾಹರಣೆಗೆ ಎತ್ತುಗಳ ಕತ್ತಿಗೆ ನೋವಾಗದಂತೆ ಎತ್ತಿನ ಬಂಡಿ ರೂಪಿಸಿದ ಅಮೂಲ್ಯ ರೆಡ್ಡಿಯವರ ಕಾಣ್ಕೆಯಲ್ಲಿ ಗಾಂಧಿ ಇದ್ದಾನೆ. ಹಾಗೇ ಕರ್ನಾಟಕದ ರಾಣಿಬೆನ್ನೂರು ತಾಲ್ಲೂಕಿನ ಮೆಡ್ಲೇರಿಯಲ್ಲಿ ಹೆಂಗಸರೂ ಸರಾಗವಾಗಿ ನೂಲುವಂತೆ ಎಸ್.ಆರ್.ಹಿರೇಮಠ ಮತ್ತು ಶ್ಯಾಮಲಾ ಬಳಗದವರ ಐಡಿಎಸ್ ಸಂಸ್ಥೆ ರೂಪಿಸಿದ ಮೆಡ್ಲೇರಿ ಚರಕಾದಲ್ಲೂ ಗಾಂಧಿ ಇದ್ದಾನೆ. ಜೊತೆಗೆ ವಾರಣಾಸಿಯ ಬಾಲಕ ಆಯುಷ್ ಹಾಗೂ ಭೂಮಿಯ ಧಗೆಗೆ ಬೇಯುತ್ತ ಮಾತಾಡುವ ಹದಿನಾರು ವರ್ಷದ ಸ್ವೀಡನ್ ಬಾಲಕಿ ಗ್ರೇಟಾ ತನ್ಬರ್ಗ್‍ಳಲ್ಲೂ ಗಾಂಧಿ ಇದ್ದಾನೆ.
ಕೊನೆಯದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್‍ಖಾನ್‍ರಿಗೆ ಒಂದು ಸ್ಪರ್ಧೆಯ ಸವಾಲು. ಭಾರತದಲ್ಲಿ ಉದ್ಯೋಗವು ಕುಸಿಯುತ್ತಿದೆ. ಪಾಕಿಸ್ತಾನದಲ್ಲಿ ಇನ್ನೂ ಹೆಚ್ಚು ಕುಸಿಯುತ್ತಿರಬಹುದು. ಮೋದಿ ಮತ್ತು ಖಾನ್ ಅವರು ಪರಸ್ಪರ ಸ್ಪರ್ಧೆ ಮಾಡಿ, ಯಾರು ತನ್ನ ದೇಶವಾಸಿಗಳಿಗೆಲ್ಲಾ ಮೊದಲು ಗೌರವಯುತ ಉದ್ಯೋಗ ನೀಡುತ್ತಾರೊ ಅವರು ಗೆದ್ದಂತೆ. ಇಲ್ಲದಿದ್ದರೆ ಇಬ್ಬರದೂ ದಯಾನೀಯ ಸೋಲು. ಮೋದಿ ಮತ್ತು ಖಾನ್ ಸ್ಪರ್ಧೆಗಿಳಿಯುವ ಮೊದಲು ಅವರವರ ಫ್ಯಾನ್ಸಿ ಡ್ರೆಸ್‍ನ್ನು ಕಳಚಿ ಸ್ಪರ್ಧೆಗೆ ಇಳಿಯಬೇಕು ಎಂಬ ಕರಾರು ಇದೆ”.
ಈ ಸವಾಲು ನನ್ನದಲ್ಲ, ಬಹುಶಃ ಗಾಂಧಿಯದು!