ಗಾಂಧಿವಾದ, ಸ್ತ್ರೀವಾದ ಮತ್ತು ಹೊಸಗನ್ನಡ ಸಾಹಿತ್ಯದಲ್ಲಿ ಮಹಿಳಾ ವಸ್ತು ನಿರ್ವಹಣೆ – ಡಾ. ಪ್ರೀತಿ ಶುಭಚಂದ್ರ
1
ಗಾಂಧಿವಾದ ಮತ್ತು ಸ್ತ್ರೀವಾದ
ಜಾಗತಿಕ ಸ್ತ್ರೀವಾದಿ ಚರಿತ್ರೆಯಲ್ಲಿ ಭಾರತೀಯ ಸಂದರ್ಭದ ಸ್ತ್ರೀವಾದವನ್ನು ಖಚಿತವಾಗಿ ರೂಪಿಸಿ ಅದಕ್ಕೊಂದು ತಾತ್ವಿಕ ಆಕಾರವನ್ನು ವಿಶಿಷ್ಟ ಸ್ಥಾನವನ್ನು ಗಾಂಧಿವಾದ ಕಲ್ಪಿಸಿಕೊಟ್ಟಿದೆ. ಸ್ತ್ರೀವಾದದ ‘ಭಾರತೀಯ’ ವೈಶಿಷ್ಟ್ಯವನ್ನು ರೂಪಿಸುವಲ್ಲಿ ಗಾಂಧಿವಾದ ವಹಿಸಿದ ಪಾತ್ರವನ್ನು ವಿಶ್ಲೇಷಿಸುವುದು ನನ್ನ ಮುಖ್ಯ ಉದ್ದೇಶ. ಈ ಮೂಲಕ ನನ್ನ ಮಟ್ಟಿಗೆ ಎರಡು ಉದ್ದೇಶಗಳು ನೆರವೇರಿದಂತಾಗುವುದು. ಒಂದು; ಗಾಂಧಿವಾದದ ಮೂಲಕ ಸ್ತ್ರೀವಾದವನ್ನು ಅರ್ಥಮಾಡಿಕೊಳ್ಳುವುದು. ಎರಡನೆಯದು; ಸ್ತ್ರೀವಾದದ ಮೂಲಕ ಗಾಂಧಿವಾದವನ್ನು ಅರ್ಥಮಾಡಿಕೊಳ್ಳುವುದು. ಈ ಮಾರ್ಗವನ್ನು ಅನುಸರಿಸುವುದರಿಂದ ಏಕಕಾಲಕ್ಕೆ ಗಾಂಧಿವಾದ ಮತ್ತು ಸ್ತ್ರೀವಾದದ ಬಗೆಗಿನ ಪೂರ್ವಾಗ್ರಹಗಳನ್ನು ಕೈಬಿಟ್ಟು, ಅವುಗಳ ಇತಿಮಿತಿಗಳನ್ನು ವಸ್ತುನಿಷ್ಠವಾಗಿ ತಿಳಿದುಕೊಳ್ಳಲು ಸಹಾಯಕವಾದೀತು
.
ಮಹಿಳಾ ಸಮಸ್ಯೆಯನ್ನು ಸಮಗ್ರ ಮಾನವತೆಯ ಬಿಡುಗಡೆಯ ಒಂದು ಅಂಗವಾಗಿ ಮಾತ್ರ ಗಾಂಧಿ ಪರಿಗಣಿಸಲಿಲ್ಲ. ಅತ್ಯಂತ ಮೂಲಭೂತವಾದ, ಪರಿಹರಿಸಲೇಬೇಕಾದ ಪ್ರಾಥಮಿಕ ಸಾಮಾಜಿಕ ಅಗತ್ಯಗಳಾಗಿ ಅವು ಅವರಿಗೆ ಕಂಡವು. ಹೀಗಾಗಿ, ಮಹಿಳಾ ಬಿಡುಗಡೆಯಾಗಲೀ ಅಸ್ಪೃಶ್ಯ ಬಿಡುಗಡೆಯಾಗಲೀ ಕೇವಲ ಆಂಗಿಕ ಅಗತ್ಯ ಮಾತ್ರವಾಗದೆ ಸಮಗ್ರ ಮಾನವತೆಯ ಬಿಡುಗಡೆಗೆ ಮೂಲಮಾದರಿಯಾಗುವಂತೆ ಗಾಂಧಿ ತಮ್ಮ ತತ್ವ ಹಾಗೂ ಕಾರ್ಯಯೋಜನೆಯನ್ನು ರೂಪಿಸಿಕೊಂಡರು.
ಗಾಂಧಿವಾದವನ್ನು ಎರಡು ನೆಲೆಗಳಲ್ಲಿ ಕೆಲಸ ಮಾಡುವ ಒಂದು ಪ್ರಕ್ರಿಯೆಯಾಗಿ ನಾವು ಅರ್ಥಮಾಡಿಕೊಳ್ಳಬೇಕು. ಗಾಂಧಿಯವರ ಸಾಮಾಜಿಕ ಹಾಗೂ ರಾಜಕೀಯ ಚಿಂತನೆಗಳಿಗೆ ಸಂಬಂಧಿಸಿದಂತೆ ಎರಡು ಸ್ತರಗಳ ಸಂರಚನೆಯನ್ನು ಕಾಣಬಹುದು. ಮೊದಲನೆಯದು; ಅತೀತವಾಗುಳಿಯದ ಆತ್ಯಂತಿಕ ಆದರ್ಶಪರತೆ. ಎರಡನೆಯದು; ಈ ಅತೀತದ ಸಾಮೀಪ್ಯಕ್ಕೆ ಕ್ರಮೇಣ ಕೊಂಡೊಯ್ಯಬಲ್ಲ ಕ್ರಿಯಾಚರಣೆ.(approximation to the altimate ideal.)
ಅಹಿಂಸೆ, ಸತ್ಯ, ಸ್ವಾತಂತ್ರ್ಯ, ಸಮಾನತೆ, ತ್ಯಾಗ ಮೊದಲಾದ ಪರಮ ಮೌಲ್ಯಗಳ ಪರಿಪೂರ್ಣ ಅನುಷ್ಠಾನವನ್ನು ಸ್ವಕೇಂದ್ರದ ನೆಲೆಯಲ್ಲಿ ಮೊದಲನೆಯ ಸ್ತರದ ಚಿಂತನೆ ನಿಲ್ಲಿಸುತ್ತದೆ. ಈ ಚಿಂತನೆ ಯಾವುದೇ ರಾಜಕೀಯ ಅಧಿಕಾರ ವ್ಯವಸ್ಥೆಯನ್ನು ಅವಲಂಬಿಸದ ಶುದ್ಧ ಅರಾಜಕೀಯ ಆಧ್ಯಾತ್ಮಿಕ ಸ್ವರೂಪವುಳ್ಳದ್ದು. ಎರಡನೆಯ ಸ್ತರವು ಸ್ವಲ್ಪಮಟ್ಟಿಗೆ ಸಮಾಜವಾದಿ ಪ್ರಜಾಪ್ರಭುತ್ವ (democratic socialism)ದ ಸ್ವರೂಪವನ್ನು ಹೊಂದಿದ್ದು ಆದರ್ಶಗಳ ಅನುಷ್ಠಾನದ ವಿಷಯದಲ್ಲಿ ಸಾಪೇಕ್ಷವಾದ ಆದರೆ ಮೂರ್ತವಾದ ಕಾರ್ಯ ಚಟುವಟಿಕೆಗಳನ್ನುಳ್ಳದ್ದು. ಇವೆರಡೂ ಸ್ತರಗಳ ನಡುವಣ ದ್ವಂದ್ವಾತ್ಮಕ ಪ್ರಕ್ರಿಯೆಯನ್ನು ನಾವು ಗಾಂಧಿವಾದದಲ್ಲಿ ಗುರುತಿಸಬಹುದು. ಗಾಂಧಿವಾದದ ಈ ದ್ವಂದ್ವಾತ್ಮಕ ವೈಶಿಷ್ಟ್ಯವು ಮಹಿಳೆಯರ ಬಗೆಗಿನ ಅವರ ಚಿಂತನೆಗಳನ್ನು ಅರ್ಥೈಸಿಕೊಳ್ಳಲು ನಮಗೆ ಸೂಕ್ತ ಚೌಕಟ್ಟನ್ನು ಒದಗಿಸುತ್ತದೆ.
ವೈಯಕ್ತಿಕ ನೆಲೆಯ ‘ಆತ್ಮ’ದ ಪರಿಶುದ್ಧತೆಯ ಚಿಂತನೆಯನ್ನು ಗಂಡು-ಹೆಣ್ಣನ್ನೊಳಗೊಂಡ ಕೌಟುಂಬಿಕ ವಲಯದ ಆಚಾರ ಸಂಹಿತೆಯಾಗಿಸಿ, ಆನಂತರ ಸಾರ್ವಜನಿಕ ವಲಯದ ರಾಜಕೀಯ ನೈತಿಕತೆಯ ಮಟ್ಟಕ್ಕೆ ಕೊಂಡೊಯ್ದ ಸಾಧನೆ ಗಾಂಧಿಯದು. ಗಾಂಧಿಯ ಈ ಪ್ರಯತ್ನದ ಮೂಲವು ಭಾರತೀಯ ಆಧ್ಯಾತ್ಮಿಕ ಚಿಂತನ ಕ್ರಮಗಳದ್ದು. ಮಹಿಳೆಯ ಬಗೆಗಿನ ಅವರ ವಿಚಾರಗಳು ನೇರವಾಗಿ ಹಿಂದೂ ಧರ್ಮದ ‘ಪಾವಿತ್ರ್ಯ’ಕ್ಕೆ ಸಂಬಂಧಿಸಿದ ನಂಬಿಕೆಗಳಿಂದ ರೂಪಿತವಾಗಿವೆ. ಗಾಂಧಿಯವರಿಗೆ, ‘ಆತ್ಮ’ದ ಪರಿಕಲ್ಪನೆಯಂತೆಯೇ ಹಿಂದೂಧರ್ಮವೂ ಮೂಲತಃ ಪರಿಶುದ್ಧವಾದುದು. ಹಾಗೆಯೇ ಕುಟುಂಬದ ಕೇಂದ್ರವಾದ ಮಹಿಳೆಯೂ ಪವಿತ್ರಳು. ಆತ್ಮ ಹೇಗೆ ಸಹಜವಾಗಿ ಶುದ್ಧ ಸ್ವರೂಪದಲ್ಲಿದ್ದರೂ ಇಂದ್ರಿಯ ಮೂಲ ಶರೀರ ಸಂಪರ್ಕದಿಂದ ಕಲುಷಿತಗೊಳ್ಳುವುದೋ ಹಾಗೇ ಹಿಂದೂ ಧರ್ಮವೂ ಸ್ವಾರ್ಥಸಾಧಕ ವಿಷಯಲಂಪಟ ಅಧಿಕಾರದಾಹಿ ಜನರಿಂದ ಕಳಂಕಯುತವಾಗಿದೆ. ಮಹಿಳೆಯರ ಬಗೆಗಿನ ಕೀಳುಭಾವನೆಯಾಗಲಿ ಅಸ್ಪೃಶ್ಯರ ಬಗೆಗಿನ ತಿರಸ್ಕೃತ ಧೋರಣೆಯಾಗಲಿ ಹಿಂದೂ ಧರ್ಮದ ಕಳಂಕಯುಕ್ತ ಭಾಗಗಳು. ವೈಯಕ್ತಿಕ ಸಾಧನೆಯ ಮೂಲಕ ಹೇಗೆ ‘ಆತ್ಮ’ ತನ್ನ ಕಳಂಕವನ್ನು ಕಳೆದುಕೊಂಡು ಶುದ್ಧ ನಿರಂಜನ ಸ್ಥಿತಿಗೇರುತ್ತದೆಯೋ ಅಂತೆಯೇ ಸ್ತ್ರೀ ಹಾಗೂ ಅಸ್ಪೃಶ್ಯಶೋಷಣೆಯ ಕಳಂಕವನ್ನು ನೀಗಿಕೊಂಡು ಹಿಂದೂ ಧರ್ಮ ಶುದ್ಧವಾಗಬೇಕೆಂಬ ಆದರ್ಶವನ್ನು ಗಾಂಧಿ ನಮ್ಮ ಮುಂದಿಡುತ್ತಾರೆ. ಹೀಗೆ ಮಹಿಳಾ ಶೋಷಣೆಯ ಸ್ವರೂಪವನ್ನು ಧಾರ್ಮಿಕ ಶುದ್ಧೀಕರಣ ಕ್ರಿಯೆಯ ಚೌಕಟ್ಟಿನಲ್ಲಿ ಗಾಂಧಿ ವಿವೇಚಿಸುತ್ತಾರೆ.
ಗಾಂಧಿಯವರ ಅಹಿಂಸೆ ಹಾಗೂ ಸತ್ಯದ ವಿಚಾರಗಳು ಆದರ್ಶೀಕೃತ ಸ್ತರದಲ್ಲಿ ಮಂಡಿತವಾಗುವಾಗ ಸ್ತ್ರೀಯನ್ನು ಮೂಲ ಮಾದರಿಯಾಗಿ ಸ್ವೀಕರಿಸುತ್ತದೆ. ಅವರ ಪ್ರಕಾರ ಮಹಿಳೆ ಅಹಿಂಸೆಯ ಮೂರ್ತಿವೆತ್ತ ಸ್ವರೂಪ. ಅಹಿಂಸೆ ಎಂದರೆ, ಅಪರಿಮಿತ ಪ್ರೇಮ; ಅಪರಿಮಿತ ಸಹನಾಶಕ್ತಿ. ಈ ಗುಣಗಳು ಅವಳ ತಾಯ್ತನದ ಸಹಜ ಸತ್ವದಿಂದಾಗಿ ಮತ್ತೂ ಉಜ್ವಲವಾಗಿ ಅವಳಲ್ಲಿ ಬೆಳಗುತ್ತವೆ. ಮಹಿಳೆಯರು ಆತ್ಮತ್ಯಾಗದ ಮೂರ್ತರೂಪ. ಆದುದರಿಂದ ಸಹಜ ಸ್ವಭಾವವಾಗಿ ಕೌಟುಂಬಿಕ ವಲಯದಲ್ಲಿ ಪ್ರಕಟಗೊಳ್ಳುವ ಮಹಿಳೆಯ ಈ ಗುಣಗಳು ದೇಶ ಸೇವೆಗೆ, ಆ ಮೂಲಕ ಮಾನವತೆಯ ಸೇವೆಗೆ ವಿನಿಯೋಗವಾಗಬೇಕೆಂಬ ಆದರ್ಶವನ್ನು ಗಾಂಧಿ ರೂಪಿಸುತ್ತಾರೆ. ಏಕೆಂದರೆ, ಗಾಂಧಿಯ ಪ್ರಕಾರ ಸ್ತ್ರೀ ಪುರುಷರಲ್ಲಿ ಸ್ತ್ರೀಯೇ ಹೆಚ್ಚು ಘನತೆವೆತ್ತವಳು. ತ್ಯಾಗ, ಮೌನ, ವೇದನಾನುಭವ, ನಂಬಿಕೆ, ಜ್ಞಾನ, ಸಹನೆಗಳ ಸಾಕಾರ ರೂಪ ಆಕೆ. ಮಹಿಳೆಯ ಈ ಗುಣಗಳು ಅಹಿಂಸೆಯ ಮೂಲಕ ಸಡೆಸುವ ಸತ್ಯಾಗ್ರಹ ಹೋರಾಟಕ್ಕೆ ಅತ್ಯಗತ್ಯವಾಗಿರಲೇಬೇಕಾದ ಅರ್ಹತೆಗಳು. ಹೀಗಾಗಿ ಪುರುಷನಿಗೆ ಮಹಿಳೆ ಸರಿಸಮಾನಳೆನ್ನುವುದಕ್ಕಿಂತ ಆತನಿಗೆ ಆದರ್ಶದ ಕೇಂದ್ರವೂ ಆಗಿದ್ದಾಳೆ. ಅವರ ಮಾತುಗಳನ್ನೇ ನೋಡಿ: “ಸ್ತ್ರೀಯನ್ನು ಅಬಲೆ ಎನ್ನುವುದು ಒಂದು ಅಪಮಾನಕರ ಮಾತೇ ಸರಿ; ಅದು ಮಹಿಳೆಯರಿಗೆ ಪುರುಷ ಎಸಗಿರುವ ಒಂದು ಅನ್ಯಾಯ. ಶಕ್ತಿಯ ಅರ್ಥ ಕೇವಲ ಪಾಶವಿಕ ಶಕ್ತಿ ಎನ್ನುವುದಾದರೆ, ಆಗ ಸ್ತ್ರೀ ನಿಜವಾಗಿಯೂ ಪುರುಷನಷ್ಟು ಪಶುಪ್ರಾಯಳಲ್ಲ. ಆದರೆ ಶಕ್ತಿಯ ಅರ್ಥ ನೈತಿಕ ಶಕ್ತಿ ಎನ್ನುವುದಾದರೆ, ಆಗ ಸ್ತ್ರೀ ಪುರುಷನಿಗಿಂತ ಆಗಾಧ ಮೇಲ್ಮೆಯವಳೆನಿಸುತ್ತಾಳೆ.”
ಸ್ತ್ರೀಯನ್ನು ಹೀಗೆ ನೈತಿಕ ಹಾಗೂ ಆಧ್ಯಾತ್ಮಿಕ ಸಾಮರ್ಥ್ಯ ದ ಸಂಕೇತವಾಗಿ ಪುರುಷಪ್ರಧಾನ ಜಗತ್ತಿನದುರು ಗಾಂಧಿ ಇಡುತ್ತಾರೆ. ಪುರುಷ ಪ್ರಧಾನ ಜಗತ್ತಿನ ಸ್ತ್ರೀ ಶೋಷಣೆಯ ಸಂಕೇತವಾಗಿ ಇಂದಿನ ಸ್ತ್ರೀವಾದಿಗಳಿಂದ ಪರಿಭಾವಿಸಲ್ಪಡುವ ಸೀತೆ, ಸಾವಿತ್ರಿ, ದ್ರೌಪದಿ, ದಮಯಂತಿಯರು ಇತ್ಯಾತ್ಮಕ ಮೌಲ್ಯಗಳಾದ ಧೈರ್ಯ, ಸ್ಥೈರ್ಯ, ಪಾವಿತ್ರ್ಯದ ಸಂಕೇತಗಳಾಗಿ ಗಾಂಧಿಗೆ ಕಂಡಿದ್ದಾರೆ. ಇದರಿಂದ ಎರಡು ರೀತಿಯ ಪ್ರಯೋಜನಗಳನ್ನು ಗಾಂಧಿ ಪಡೆದುಕೊಳ್ಳುತ್ತಾರೆ. ಏಕಕಾಲಕ್ಕೆ ಸನಾತನಿಗಳನ್ನೂ ಸುಧಾರಣವಾದಿಗಳನ್ನೂ ಸೃಷ್ಟಿಸಿದಂತಹ ವಸಾಹತುಶಾಹಿ ಆಳ್ವಿಕೆಯಲ್ಲಿ ಯಾವುದೇ ನೇರ ಆಕ್ರಮಣಕ್ಕೆ ಗಾಂಧಿ ತೊಡಗುವಂತಿಲಿಲ್ಲ. ಸೀತೆ, ಸಾವಿತ್ರಿ, ದ್ರೌಪದಿಯರ ಸಾಂಪ್ರದಾಯಿಕ ಸಂಕೇತವನ್ನೇ ಬಳಸಿಯೂ ಉದಾತ್ತೀಕರಣದ ಸಂದರ್ಭದಲ್ಲಿ ಅದಕ್ಕೆ ಕೊಟ್ಟ ಆಯಾಮ ಮಾತ್ರ ಗಾಂಧಿಯವರ ಅದ್ಬುತವಾದ ವ್ಯಾವಹಾರಿಕ ಕೌಶಲ್ಯವನ್ನು ತೋರುತ್ತದೆ. ಸಾಂಪ್ರದಾಯಿಕರು ಹೇರುವ ಸ್ತ್ರೀಗುಣಗಳ ಅಪೇಕ್ಷೆಯ ಚೌಕಟ್ಟು ಪರುಷರ ಹಿತಾಸಕ್ತಿಗಳನ್ನೂ ಕಾಪಾಡುವಂತಹದ್ದು. ಗಾಂಧಿ ಬಳಸುವ ಸೀತೆ ಸಾವಿತ್ರಿಯರ ಸಂಕೇತವಾದರೋ ಮಹಿಳೆಯ ಮೇಲೆ ಹೇರಲ್ಪಡುವ ಪಾಕ್ಷಿಕ ಅಪೇಕ್ಷೆಯಾಗಿರದೆ ಪುರುಷನು ಭರಿಸಲೇಬೇಕಾದ ಗುಣಾವಳಿಗಳ ಆದರ್ಶೀಕೃತ ಸಂಕೇತವಾಗುತ್ತದೆ. ಇದಕ್ಕೆ ಅವರು ತಮ್ಮ ಅನುಭವಕ್ಕೆ ಬಂದ ಉದಾಹರಣೆಯನ್ನು ಕೊಡುತ್ತಾರೆ. ಸ್ತ್ರೀಗೆ ಸಹಜವಾಗಿ ನೋವನ್ನು ಸಹಿಸುವ, ಯಾತನೆಯನ್ನು ತಾನಾಗಿಯೇ ಆಹ್ವಾನಿಸುವ ಶಕ್ತಿ ಆಕೆಯಲ್ಲಿರುವ ಪ್ರೇಮಭಾವನೆಯಿಂದ ಒದಗುತ್ತದೆಂದೊ, ಅಹಿಂಸೆ ಎಂದರೆ, ಪ್ರೇಮವೆಂದೂ, ಪ್ರೇಮವೆಂದರೆ ಎಣೆಯಿಲ್ಲದ ನೋವನ್ನೂ ಸಹಿಸುವ ಶಕ್ತಿಯೆಂದೂ ಗಾಂಧಿ ಭಾವಿಸುತ್ತಾರೆ. ಗರ್ಭಸ್ಥ ಶಿಶುವಿಗೆ ಅಪಾಯವಾದೀತೆಂಬ ಮಮತೆಯಿಂದ ಅರಿವಳಿಕೆ ಇಲ್ಲದೆಯೇ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯ ಮನೋಸ್ಥೈರ್ಯವನ್ನು, ಅದ್ಭುತ ಸಹನಶಕ್ತಿಯನ್ನು ಗಾಂಧಿ ಉದಾಹರಿಸುತ್ತಾರೆ.
ಹೀಗೆ ವಿಚಾರಮೂಲವಾದಿ ನೆಲೆಯಿಂದ ಹೊರಡುವ ಗಾಂಧಿಯವರ ಚಿಂತನೆಗಳು ಮಹಿಳಾ ಬಿಡುಗಡೆಗೆ ಸಂಬಂಧಿಸಿದಂತೆ ಮೂರ್ತವಾದ ವಾಸ್ತವಿಕವಾದ ಪರಿಹಾರವನ್ನು ಸೂಚಿಸುವುದಿಲ್ಲವೆಂಬ ಮಿತಿಯನ್ನು ಗಾಂಧಿಯವರ ಸಮಕಾಲೀನರೇ ಗುರುತಿಸುತ್ತಾರೆ. ಸ್ತ್ರೀ ಶಿಕ್ಷಣದ ಬಗೆಗೆ, ವಿಧವಾ ಸಮಸ್ಯೆ, ವೇಶ್ಯಾ ಸಮಸ್ಯೆ, ಸ್ತ್ರೀಯರ ರಾಜಕೀಯ ಪ್ರವೇಶದ ಬಗೆಗಿನ ಅವರ ನಿಲುವುಗಳು ಆಧುನಿಕ ಸ್ತ್ರೀವಾದಿ ನೆಲೆಯಿಂದ ನೋಡಿದಾಗ ಪ್ರಗತಿ ವಿರೋಧಿ ಎನಿಸುತ್ತದೆ. ಪ್ರಗತಿ ವಿರೋಧಿ ಎನಿಸುವ ಅವರ ಬಹಳಷ್ಟು ಆಲೋಚನೆಗಳು ಮೊದಲು ಹೇಳಿದಂತಹ ಎರಡನೆಯ ಸ್ತರದ ಚಿಂತನೆಯಲ್ಲಿ ವ್ಯಕ್ತವಾಗುತ್ತದೆ. ನ್ಯಾಷನಲ್ ಕಾಂಗ್ರೆಸ್ ಪಕ್ಷದೊಂದಿಗಿನ ಗಾಂಧಿಯವರ ಸಂಬಂಧವು ಅತ್ಯಂತ ಸೂಕ್ಷ್ಮವೂ ಜಟಿಲವೂ ಆದುದಾಗಿತ್ತು. ಬಹುಸಂಖ್ಯಾತ ಜನವರ್ಗದ ಪ್ರತಿನಿಧಿ ಎನಿಸುವ ಪಕ್ಷದ ಸಂರಚನೆಯ ಇತಿಮಿತಿಗಳ ಪರಿಚಯ ಗಾಂಧಿಯವರ ಸೂಕ್ಷ್ಮ ದೃಷ್ಟಿಗೆ ಗಾಢವಾಗಿತ್ತು. ಹೋರಾಟಕ್ಕೆ ಒಂದು ವ್ಯವಸ್ಥಿತ ರೂಪವನ್ನು ಕೊಡುವಷ್ಟರ ಮಟ್ಟಿಗೆ ಗಾಂಧಿ ಪಕ್ಷದ ಪ್ರಾತಿನಿಧಿಕ ಸ್ವರೂಪವನ್ನು ಮಾನ್ಯ ಮಾಡಿದ್ದರು. ಗಾಂಧಿಯವರ ಚಿಂತನೆಗಳ ನೈಜ ಯಶಸ್ಸಿರುವುದೇ ಪಕ್ಷದ ಆಚೆ ನಿಂತು ನಿಷ್ಪಕ್ಷಪಾತವಾಗಿ ಪ್ರಾಮಾಣಿಕವಾಗಿ ತನ್ನನ್ನು ತೊಡಗಿಸಿಕೊಳ್ಳುವಲ್ಲಿ, ಪಕ್ಷದ ಆಚೆ ಉಳಿದೂ ಪಕ್ಷದ ನೈತಿಕ ಕೇಂದ್ರವನ್ನು ನಿಯಂತ್ರಿಸುವ ಪ್ರಯಾಸದ ಕಾರ್ಯವನ್ನು ಗಾಂಧಿ ನಿರ್ವಹಿಸಬೇಕಾಗಿತ್ತು. ಇಂಥ ಸಂದರ್ಭದಲ್ಲಿ ಬಹುಸಂಖ್ಯಾತ ಜನವರ್ಗದ ಮನೋಕೋಶದೊಳಗೆ ಈಗಾಗಲೇ ಸಿದ್ಧವಿರುವ ಎಲ್ಲ ಸಾಂಪ್ರದಾಯಿಕ ಎನಿಸಬಹುದಾದ ನಂಬಿಕೆಗಳ ವಲಯವನ್ನು ಪೂರ್ಣ ತಿರಸ್ಕರಿಸದೆ ಸಂಸ್ಕರಿಸಿ ಉತ್ತಮಗೊಳಿಸುವ ‘ಶುದ್ಧೀಕರಣ’ ಕ್ರಿಯೆಯಲ್ಲಿ ತೊಡಗಿದರು. ಹೊಸ ರೀತಿ ಶಿಕ್ಷಣ ವ್ಯವಸ್ಥೆ ಬಹುಸಂಖ್ಯಾತರನ್ನು ಮುಟ್ಟಿರದ ಸನ್ನಿವೇಶದಲ್ಲಿ ಗಾಂಧಿಯವರಿಗೆ ತಮ್ಮ ಪ್ರಯತ್ನಗಳ ಮಿತಿಯ ಅರಿವಿತ್ತು. ಸಾಮಾನ್ಯ ಜನವರ್ಗದ ಪ್ರಜ್ಞೆಯಲ್ಲೇ ಹೊಸ ಸ್ಥಿತ್ಯಂತವನ್ನುಂಟುಮಾಡುವುದು ವಾಸ್ತವವಾಗಿ ಅಸಾಧ್ಯವಾಗಿತ್ತು. ಅಂಥ ಸಂದರ್ಭದಲ್ಲಿ ಸಾಂಪ್ರದಾಯಿಕವೆನಿಸಬಹುದಾದ ಸಿದ್ಧ ಸಂಕೇತಗಳನ್ನು ಬಳಸಿಯೇ ಹೋರಾಟಕ್ಕೆ ಬೇಕಾದ ತಾತ್ವಿಕ ಚೌಕಟ್ಟನ್ನು ರೂಪಿಸಿಕೊಳ್ಳದೆ ಅವರಿಗೆ ವಿಧಿ ಇರಲಿಲ್ಲ. ಅಹಿಂಸಾತ್ಮಕ ಸತ್ಯಾಗ್ರಹ ಹೋರಾಟದಲ್ಲಿ ಸ್ತ್ರೀಯರೂ ಒಳಗೊಂಡಂತೆ ಹೆಚ್ಚು ಜನಸಮುದಾಯವು ಯಶಸ್ವಿಯಾಗಿ ತನ್ನನ್ನು ತೊಡಗಿಸಿಕೊಳ್ಳುವಂತೆ ಇದು ಮಾಡಿತು. ಗಾಂಧಿಯವರ ರಾಜಕೀಯ ಜೀವನದ ಚರಿತ್ರೆಯೇ ಸ್ವಂತ ಬದುಕನ್ನೂ ಜನತೆಯ ಎದುರು ತೆರೆದಿಟ್ಟುಕೊಂಡ ಪಾರದರ್ಶಕತೆಯಿಂದ ಕೂಡಿದುದಾಗಿದೆ. ಅಹಿಂಸಾತ್ಮಕ ಮಾರ್ಗದ ರಾಜಕೀಯ ಹೋರಾಟದ ಯಶಸ್ಸಿಗೆ ಬೇಕಾದ ನೈತಿಕತೆಯ ಮಾದರಿಯನ್ನು ನ್ಯಾಷನಲ್ ಕಾಂಗ್ರೆಸ್ ಪಕ್ಷ ಹೊರುವ ಧೈರ್ಯ ತೋರಲಿಲ್ಲ. ಹೀಗಾಗಿ ಆದರ್ಶದ ದೊಡ್ಡ ಮಾದರಿಯಾಗಬೇಕಾದ ಭಾರವನ್ನು ಗಾಂಧಿಯವರು ವೈಯಕ್ತಿಕ ಬದುಕಿನಲ್ಲಿ ಹೊರುವಂತಾಯಿತು.ಈ ಅತಿಭಾರ ಗಾಂಧಿಯವರ ಧೋರಣೆಗಳನ್ನು ಅನಗತ್ಯ ಎನಿಸುವಷ್ಟು ನಿಷ್ಠುರಗೊಳಿಸದವು.
ಒಳಿತವನ್ನು ಸಾಧಿಸಬೇಕಾದಾಗ ಕೂಡ ಪತ್ನಿಯ ಮೇಲೆ ಪತಿಯಾದವನು ತನ್ನ ಗಂಡಸುತನದ ಅಧಿಕಾರವನ್ನು ಹೇರಬಾರದು ಎಂದು ಹೇಳುವ ಗಾಂಧಿ ಕಸ್ತೂರಬಾರನ್ನು ನಡೆಸಿಕೊಂಡ ರೀತಿ ಹಲವರಿಗೆ ಅಮಾನವೀಯವೆನಿಸುತ್ತದೆ. ಆದರೆ ಈ ಅತಿನಿಷ್ಟುರತೆಯೇ ಗಾಂಧಿ ತನ್ನನ್ನು ಅಸಂಖ್ಯಾತ ಭಾರತೀಯರೊಂದಿಗೆ ಭಾವನಾತ್ಮಕ ಸಂಬಂಧ ಕಲ್ಪಿಸಿಕೊಳ್ಳಲು ಕಾರಣವಾಯಿತು. ಶುದ್ಧ ಜೀವನಸಂಹಿತೆಯನ್ನು ಅತಿನಿಷ್ಠುರವಾಗಿ ಪ್ರತಿಪಾದಿಸಬೇಕಾದ ಅನಿವಾರ್ಯತೆ ಗಾಂಧಿಗೆ ಒದಗುವುದಕ್ಕೆ ಪಕ್ಷ ರಾಜಕಾರಣವು ಅದನ್ನು ಪಾಲಿಸುವುದರ ಬಗೆಗಿನ ಅನುಮಾನವೇ ಕಾರಣ. ಗಂಡಸಿಗಿಂತ ಹೆಂಗಸು ಶ್ರೇಷ್ಠ ಎನ್ನುವ ಗಾಂಧಿ ಹೆಣ್ಣು ಪಾಲಿಸಬೇಕಾದ ಪುರುಷನಿರ್ಮಿತ ನಿಷ್ಠುರ ಸಂಹಿತೆಯೊಳಗಿನ ಸಂಕೇತವನ್ನು ಬಳಸಿಕೊಳ್ಳುತ್ತಾರೆ. ಈ ವೈರುಧ್ಯ ಮಹಿಳಾ ಸಮಸ್ಯೆಯ ಬಗೆಗಿನ ಅವರ ಬಹಳಷ್ಟು ಬಿಡಿ ಆಲೋಚನೆಗಳಲ್ಲಿ ದೊರೆಯುತ್ತವೆ. ಮತ್ತು ಅವೆಲ್ಲ ಪರಸ್ಪರ ಸಂಬಂಧಿತವಾದುವು.
ರಾಮ ಮತ್ತು ಸೀತೆಯರ ದಾಂಪತ್ಯದ ಆದರ್ಶವನ್ನು ನಮ್ಮ ಮುಂದೆ ಗಾಂಧಿ ಇಡುವ ರೀತಿ ಇದು:
ಸೀತೆ ಆದರ್ಶ ಪತ್ನಿಯಾಗೂ ರಾಮ ಆದರ್ಶ ಪತಿಯಾಗೂ ಇದ್ದ ಸಂಸಾರದಲ್ಲಿ ಸೀತೆ ಎಂದೂ ರಾಮನಿಗೆ ಗುಲಾಮಳಾಗಿರಲಿಲ್ಲ. ಇಲ್ಲವೆ ಇಬ್ಬರೂ ಪರಸ್ಪರ ಪ್ರೇಮ ಬಂಧನಕ್ಕೊಳಗಾಗಿದ್ದು ಒಬ್ಬರಿಗೊಬ್ಬರು ಗುಲಾಮರಾಗಿದ್ದರೆನ್ನಬಹುದು. ಪ್ರೇಮವಿಲ್ಲದಿದ್ದರೆ ಪತಿಪತ್ನಿ ಸಂಬಂಧವೇ ಅಸ್ತಿತ್ವದಲ್ಲಿ ಉಳಿಯುವುದಿಲ್ಲ. ಸ್ವತಃ ಬಾಲ್ಯವಿವಾಹದ ಕಹಿ ಅನುಭವವನ್ನುಂಡ ಗಾಂಧಿಗೆ ಪರಸ್ಪರರಲ್ಲಿ ಅರಳಬೇಕಾದ ಪ್ರೌಢಾವಸ್ಥೆಯ ‘ಪ್ರೇಮ’ ಒಂದು ಸಾಮಾಜಿಕ ಮೌಲ್ಯವಾಗಿ ಕೂಡ ಪರಿವರ್ತಿತವಾಗಬಲ್ಲ ಸಾಧ್ಯತೆಯುಳ್ಳದ್ದು ಎನಿಸಿತ್ತು. ಅವರಿಗೆ –ಜೀವನವೇ ಒಂದು ದೊಡ್ಡ ಕರ್ತವ್ಯ ಹಾಗೂ ಸೇವಾಕ್ಷೇತ್ರ. ಮದುವೆ ಎನ್ನುವುದು ಪರಸ್ಪರರಲ್ಲಿನ ಒಳಿತನ್ನು ವೃದ್ಧಿಪಡಿಸುವ, ಆ ಮೂಲಕ ಮಾನವತೆಯ ಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳುವ ಒಂದು ಅವಕಾಶ. ಹೀಗೆ ದೊಡ್ಡ ಕರ್ತವ್ಯವೊಂದಕ್ಕೆ ತಮ್ಮನ್ನು ಬದ್ಧವಾಗಿಸಿಕೊಳ್ಳುವ ದಾಂಪತ್ಯದ ಆದರ್ಶವು ಹೊಸದಾಗಿ ಏನನ್ನೂ ಹೇಳದಿದ್ದರೂ ಪರೋಕ್ಷವಾಗಿ ಮಹಿಳೆಗೆ ಬಿಡುಗಡೆಯ ಕೊಂಚ ಸಾಧ್ಯತೆಯನ್ನು ಒದಗಿಸಿತು. ಗಂಡಾಗಲೀ ಹೆಣ್ಣಾಗಲೀ ಈ ಕರ್ತವ್ಯ ಲೋಪಕ್ಕೆ ಒಳಗಾದರೆ ತಮ್ಮ ನಡುವಿನ ನೈತಿಕ ನೆಲೆಯ ಬಂಧವನ್ನು ಕಡಿದೊಗೆಯಬಲ್ಲ ಸ್ವಾತಂತ್ರ್ಯವಿದೆ. ಆದರೆ ಆಧುನಿಕ ಅರ್ಥದ ವಿಚ್ಛೇದನವನ್ನು ಗಾಂಧಿ ಒಪ್ಪುವುದಿಲ್ಲ. ಏಕೆಂದರೆ, ಗಂಡು ಹೆಣ್ಣುಗಳು ಮದುವೆಯ ಮೂಲಕ ಯಾವ ಉದಾತ್ತ ಸೇವಾ ಉದ್ದೇಶಕ್ಕೆ ಬದ್ದರಾಗಿದ್ದರೋ ಅದನ್ನು ಆಕಸ್ಮಾತ್ ತಮ್ಮ ನಡುವಿನ ಬಂಧ ಕಡಿದು ಹೋದರೂ ವೈಯಕ್ತಿಕವಾಗಿ ಮುಂದುವರೆಸಬೇಕಾಗುತ್ತದೆ. ಹಿಂದೂಧರ್ಮ ಈ ಉದಾತ್ತ ವೈವಾಹಿಕ ಆದರ್ಶವನ್ನು ಹೊಂದಿದ್ದು ನಂತರ ಸ್ತ್ರೀಯರ ಸ್ಥಾನವನ್ನು ಕೆಳಗಿಳಿಸುವಂತಹ ಅನಿಷ್ಟ ಆಚರಣೆಗಳು ಅದರಲ್ಲಿ ಸೇರಿಕೊಂಡಿವೆ ಎಂದೂ, ಅವುಗಳನ್ನು ಮುಕ್ತಗೊಳಿಸುವುದು ಧಾರ್ಮಿಕ ಶುದ್ಧೀಕರಣದ ಭಾಗ ಎಂದೂ ಗಾಂಧಿ ಭಾವಿಸುತ್ತಾರೆ. ಇದಕ್ಕೆ ಉದಾಹರಣೆಗಾಗಿ, ಮನುಸ್ಮೃತಿಯ ಕೆಲವು ಆಕ್ಷೇಪಾರ್ಹ ಭಾಗಗಳನ್ನು ತಿರಸ್ಕರಿಸಬೇಕೆನ್ನುತ್ತಾರೆ. ಪುರುಷನಿಂದ ದಮನಕ್ಕೊಳಗಾದ ಸ್ತ್ರೀಗೆ ಬಿಡುಗಡೆಯಾಗಿ ಒಂದು ಮಾರ್ಗವಿದೆ ಎನ್ನುತ್ತಾರೆ ಅವರು. ಅದು ಭಕ್ತ ಮೀರಾಳ ಮಾರ್ಗ. ಉದಾತ್ತ ಉದ್ದೇಶಕ್ಕೋಸ್ಕರ ತನಗೆ ಸರಿಕಂಡ ಮಾರ್ಗವನ್ನು ಆಯ್ಕೆಮಾಡಿಕೊಳ್ಳುವ ಹಕ್ಕು ಮಹಿಳೆಗೆ ಇದೆ ಎಂಬ ಅಭಿಪ್ರಾಯ ಅವರದು. ಸಮಕಾಲೀನ ಸಂದರ್ಭದ ‘ಜನಸೇವೆಯೇ ಜನಾರ್ದನ ಸೇವೆ’ ಎಂಬ ಮಾನವತಾವಾದಿ ಚೌಕಟ್ಟಿನಲ್ಲಿ ಗಾಂಧಿ ಮಹಿಳೆಯ ಈ ಬಿಡುಗಡೆಯ ಆಧ್ಯಾತ್ಮಿಕ, ನೈತಿಕ ಆಯಾಮವನ್ನು ಸಾಮಾಜೀಕರಣಗೊಳಿಸಿದರು. ಆಧ್ಯಾತ್ಮದ ಸಾಮಾಜೀಕರಣದ ಕಾರಣದಿಂದಾಗಿ, ಕುಟುಂಬದ ಭದ್ರಗೋಡೆಯೊಳಗಿನ ಮಹಿಳೆಯ ಬದುಕು ಹೊರಗಿನ ಬೆಳಕನ್ನು ಕಾಣುವಂತಾಯಿತು. ಹೆಚ್ಚು ಸಂಖ್ಯೆಯ ಸ್ತ್ರೀಯರು ಅಸಹಕಾರ ಆಂದೋಲನದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಇದರಿಂದ ಸಾಧ್ಯವಾಯಿತು. ದಕ್ಷಿಣ ಆಫ್ರಿಕೆಯ ಗಣಿಕಾರ್ಮಿಕರಿಗೆ ಮಹಿಳೆಯರ ಈ ಪಾಲ್ಗೊಳ್ಳುವಿಕೆ ದೊಡ್ಡ ಸ್ಫೂರ್ತಿಕೇಂದ್ರವಾಯಿತು. ಭಾರತದಲ್ಲೂ ಕೂಡ ಮದ್ಯಪಾನನಿರೋಧ, ಸ್ವದೇಶಿ ವಸ್ತ್ರ ಆಂದೋಲನ, ದಂಡಿಯಾತ್ರೆಯ ಸಂದರ್ಭಗಳಲ್ಲಿ ಮಹಿಳೆಯರು ತೋರಿಸಿದ ಕಾರ್ಯಕ್ಷಮತೆ ಅನನ್ಯವಾದುದು. ಪುರುಷರ ಚಳುವಳಿ ಹಿಂಸಾ ಮಾರ್ಗಕ್ಕಿಳಿಯಬಹುದಾದ ಸಾಧ್ಯತೆಯ ಬಗೆಗೆ ಗಾಂಧಿಯವರಿಗೆ ಆತಂಕವಿತ್ತು. ಚಳುವಳಿಗಳಲ್ಲಿನ ಮಹಿಳೆಯರ ಪ್ರವೇಶವು ಚಳುವಳಿಯು ಹಿಂಸಾತ್ಮಕ ಮಾರ್ಗಕ್ಕೆ ತಿರುಗದ ರೀತಿ ಇತ್ತು. ಜಾಗತಿಕ ಯುದ್ಧದಿಂದ ನೊಂದ ಜನರನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಭಾರತದ ಮಹಿಳೆಯರ ಸಾಧನೆಯನ್ನು ಜಗತ್ತಿನ ಸ್ತ್ರೀಯರಿಗೆಲ್ಲಾ ಮಾದರಿ ಎನಿಸುವಂತೆ ಅವರು ಎತ್ತಿ ಹಿಡಿಯುತ್ತಾರೆ. ಈ ಕಾರಣಕ್ಕಾಗಿ ಹಿಂಸಾತ್ಮಕ ಯುದ್ಧದಲ್ಲಿ ಸ್ತ್ರೀ ಸೈನ್ಯ ತುಕಡಿಗಳಿರುವುದರ ಬಗೆಗೆ ಗಾಂಧಿಯವರಿಗೆ ಅಸಮಾಧಾನವಿತ್ತು. ತಮ್ಮ ತಮ್ಮ ಮನೆಗಳ ಗಂಡಸರನ್ನು ಯುದ್ಧದಲ್ಲಿ ಪಾಲ್ಗೊಳ್ಳದಂತೆ ತಡೆಗಟ್ಟುವ ಮನೋಭಾವವನ್ನು ಮಹಿಳೆ ಬೆಳೆಸಿಕೊಂಡರೆ ಜಾಗತಿಕ ಶಾಂತಿ ಮೂಡೀತೆಂಬ ಆಸೆ ಅವರದು.
ವಿಜ್ಞಾನ ಪ್ರಚುರ ಯುಗದ ಯಂತ್ರ ನಾಗರಿಕತೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಗಾಂಧಿ ಆ ವಿರೋಧಕ್ಕೆ ಅನುಗುಣವಾಗಿ ಮಹಿಳಾ ಸಮಸ್ಯೆಯನ್ನು ವಿವೇಚಿಸುತ್ತಾರೆ. ಕೈಗಾರಿಕೀಕರಣ, ನಾಗರೀಕರಣಗಳು ಕುಟುಂಬದ ಹಂತದಿಂದ ಜಾಗತಿಕ ಹಂತದವರೆಗೂ ಬೀರಬಹುದಾದ ಪರಿಣಾಮಗಳ ಬಗೆಗೆ ಗಾಂಧಿಗೆ ಸ್ಪಷ್ಟ ಅರಿವಿತ್ತು. ಉಪಭೋಗವಾದವನ್ನು ಆಧುನಿಕ ಸಂದರ್ಭದಲ್ಲಿ ವ್ಯಕ್ತಿಗಳ ಮೇಲೆ ಹೇರುವ ಕೈಗಾರಿಕೀಕೃತ ನಾಗರಿಕತೆಯ ದಾಳಿಯಿಂದ ಕುಟುಂಬವನ್ನು ರಕ್ಷಿಸಲು ಅವರು ಸಾಂಪ್ರದಾಯಿಕ ರೀತಿಯನ್ನೇ ಅನುಮೋದಿಸುತ್ತಾರೆ. ಅದೆಂದರೆ, ಪಾವಿತ್ರ್ಯದ ಕಲ್ಪನೆಯನ್ನಾಧರಿಸಿದ ಬ್ರಹ್ಮಚರ್ಯಪಾಲನೆಯನ್ನು ಏಕಕಾಲಕ್ಕೆ ವಿವಾಹಿತರಿಗೂ ಅವಿವಾಹಿತರಿಗೂ, ವಿಧವೇ, ವೇಶ್ಯೆಯರಿಗೂ ಪಾಲಿಸುವಂತೆ ಕರೆ ಕೊಡುತ್ತಾರೆ. ಸಂತತಿಯ ಅಪೇಕ್ಷೆಯಿಂದ ಮಾತ್ರ ದಂಪತಿಗಳು ದೈಹಿಕ ಸಂಪರ್ಕಹೊಂದುವುದು ಧರ್ಮವೆಂದೂ ಮೊದಲ ಸಂತಾನವನ್ನು ಧರ್ಮಜವೆಂದೂ ನಂತರದ್ದು ಕಾಮಜವೆಂದೂ ಹೇಳುತ್ತಾರೆ. ಪಾಶ್ಚಾತ್ಯ ಸಂತಾನವಿರೋಧ ಪ್ರಚಾರವನ್ನು ಈ ಕಾರಣಕ್ಕಾಗಿಯೇ ಗಾಂಧಿ ನಿಷ್ಠುರವಾಗಿ ಖಂಡಿಸುತ್ತಾರೆ. ಉದ್ಯೋಗದ ಅವಕಾಶ ಹೆಚ್ಚಿರುವ ಪಾಶ್ಚಾತ್ಯ ಮಹಿಳೆಗೆ ಪಾಲನೆಯ ಜವಾಬ್ದಾರಿಯಿಂದ ಬಿಡುಗಡೆಯು ಸಂತಾನ ನಿರೋಧಕಗಳಿಂದ ದೊರೆಯುತ್ತದೆ ಎಂಬ ವಾದವನ್ನು ಒಪ್ಪಿದರೂ, ಅನೈತಿಕವೆಂದು ಅದನ್ನು ಖಂಡಿಸುತ್ತಾರೆ. ಏಕೆಂದರೆ ಮಾನವತೆಯ ಸೇವೆಗೆ ತಮ್ಮನ್ನು ಸಿದ್ಧಗೊಳಿಸಲು ಪೂರ್ವಭಾವಿಯಾಗಿ ರೂಪುಗೊಳ್ಳಬೇಕಾದ ‘ಪ್ರೇಮ’ದ ಬದಲಿಗೆ ‘ಕಾಮ’ ಮಾತ್ರ ದಂಪತಿಗಳ ನಡುವೆ ಸ್ಥಾನ ಪಡೆಯಲು ಈ ವಿಧಾನಗಳು ಸಹಾಯಕವಾಗುತ್ತವೆಂದು ಅವರ ಅನಿಸಿಕೆ. ಇದು ಮಹಿಳೆ ಹಾಗೂ ಪುರುಷರಿಬ್ಬರೂ ಸಾಂಸಾರಿಕ ಭದ್ರತೆ, ಭೋಗದಿಂದ ಮುಕ್ತರಾಗಿ, ಆಂದೋಲನದಲ್ಲಿ ಭಾಗವಹಿಸದೆ ಇರುವ ಹಾಗೆ ಮಾಡಬಲ್ಲದೆಂಬ ಆತಂಕ ಗಾಂಧಿಯವರದು.
ಅಂತೆಯೇ ಅವಿವಾಹಿತಳಾಗಿ ಉಳಿಯುವ ಸ್ತ್ರೀಯ ನಿರ್ಧಾರವನ್ನು ಗಾಂಧಿ ಮುಕ್ತವಾಗಿ ಸ್ವಾಗತಿಸಿದರು. ಅವಿವಾಹಿತಳಾಗಿ ಬ್ರಹ್ಮಚರ್ಯಪಾಲನೆ ಮಾಡುವ ಹೆಣ್ಣು ಶಿಕ್ಷಿತಳಾಗಿದ್ದರೆ ಆಕೆ ಸಮಾಜಕ್ಕೆ ಮತ್ತೂ ಉಪಯುಕ್ತಳೆಂದು ಅವರು ಭಾವಿಸುತ್ತಾರೆ. ಅದರಂತೆಯೇ ವಿಧವೆ ಕೂಡ. “ಹಿಂದೂ ಧರ್ಮ ಮಾನವತೆಗೆ ನೀಡಿದ ಕೊಡುಗೆ. ಈ ದೇಶ ನೂರಾರು ಹಿರಿಯ ಕಿರಿಯ ವಿಧವೆಯರ ಸೇವೆಯನ್ನು ಹೇಗೆ ಪಡೆದುಕೊಳ್ಳಲು ಸಾಧ್ಯವೆಂಬುದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು” ಎನ್ನುತ್ತಾರೆ. ವರದಕ್ಷಿಣೆಯ ಪೀಡೆಯಿಂದ ಮು ಕ್ತಿ ಹೊಂದುವ ಹಾದಿಯೆಂದರೆ, ಜೀವನಪರ್ಯಂತ ಅವಿವಾಹಿತೆಯಾಗಿಯೇ ಉಳಿಯುವುದು ಎಂದು ಅವರ ಅಭಿಪ್ರಾಯ. ವಿಚ್ಛೇದಿತ ಸ್ತ್ರೀಯರೂ ಕೂಡ “ಒಂದು ಕೆಟ್ಟ ಅನುಭವದ ಬಳಿಕ ಮತ್ತೊಮ್ಮೆ ಮದುವೆಯಾಗಲು ಬಯಸುವುದಿಲ್ಲ” ಎಂಬುದು ಗಾಂಧಿಯವರ ನಂಬಿಕೆ. ವೇಶ್ಯಾ ಸಮಸ್ಯೆಗೂ ಗಾಂಧಿಯವರು ಶುದ್ಧ ಜೀವನ ಸಂಹಿತೆಯನ್ನೇ ಪರಿಹಾರವಾಗಿ ಸೂಚಿಸುತ್ತಾರೆ. ಒಬ್ಬ ವೇಶ್ಯೆ ನೇರವಾಗಿ ಗಾಂಧಿಗೆ “ನಾವು ಅತ್ಯಲ್ಪ ಕಾಲದಲ್ಲಿ ಈ ವೃತ್ತಿಯಿಂದಾಗಿ 15, 20 ರೂ ಸಂಪಾದಿಸುತ್ತೇವೆ. ನಿಮ್ಮ ಚರಕ ನಮಗೇನು ಕೊಡುತ್ತದೆ” ಎಂಬ ಸವಾಲನ್ನು ಹಾಕಿದಳು. ಇದು ಗಾಂಧಿಯ ಮರ್ಮಕ್ಕೆ ತಾಗಿದ್ದ ಮಾತು. ಇಂಥ ಸ್ತ್ರೀಯರಿಗೆ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಗಾಂಧಿ ಮಹಿಳಾ ಸ್ವಯಂಸೇವಕಿಯರಿಗೆ ಒತ್ತಾಯಿಸಿದರು. ತನ್ನನ್ನು ತಾನು ಶುದ್ಧಿಗೊಳಿಸಿಕೊಳ್ಳದೆ ಪಕ್ಷ ರಾಜಕೀಯದ ಚಟುವಟಿಕೆಗಳಲ್ಲಿ ಈ ಮಹಿಳೆಯರು ತೊಡಗುವುದನ್ನು ಗಾಂಧಿ ತೀವ್ರವಾಗಿ ಖಂಡಿಸಿದರು. ಪಕ್ಷದ ಪುರುಷ ಕಾರ್ಯಕರ್ತರಿಗೆ ಈ ನಿಟ್ಟಿನಲ್ಲಿ ಕೆಲಸ ಮಾಡಲು ಅವರು ಪ್ರೋತ್ಸಾಹಿಸಲಿಲ್ಲ. ಏಕೆಂದರೆ,ಪುರುಷರೊಡಗೂಡಿ ಕೆಲಸ ಮಾಡಬೇಕಾದ ಅನಿವಾರ್ಯ ಸಂದರ್ಭದಲ್ಲಿ ಈ ಪತಿತರೆನಿಸಿಕೊಂಡವರು ಶುದ್ಧಾಂತಃಕರಣ ಹಾಗೂ ಶುದ್ಧ ಹಸ್ತವಿಲ್ಲದೆ ಸ್ವರಾಜ್ಯದ ವೇದಿಕೆ ಏರುವಂತಿಲ್ಲ. ಮಧು ಕೀಶ್ವಾರ್ ಗಾಂಧಿಯ ಈ ನಿಲುವನ್ನು ಪ್ರಶ್ನಿಸುತ್ತಾರೆ. ವೇಶ್ಯೆಯರನ್ನು ಗಾಂಧಿ ಕಳ್ಳರಿಗೆ ಹೋಲಿಸುತ್ತಾರೆ. ಗಾಂಧಿಯವರ ಈ ಸಾತ್ವಿಕ ಕ್ರೋಧ ಪಕ್ಷಪಾತದ್ದೆಂದು ಅವರ ನಿಲುವು : ಏಕೆಂದರೆ, ಅತ್ಯಂತ ಭ್ರಷ್ಟ ವ್ಯಾಪಾರಿಗಳಿಗೆ ಮತ್ತು ಕ್ರೂರ ಜಮೀನ್ದಾರರಿಗೆ ಕೂಡ ಕಾಂಗ್ರೆಸ್ಸಿನ ಬಾಗಿಲುಗಳು ಮುಚ್ಚಿರಲಿಲ್ಲ. ನನಗನಿಸುತ್ತದೆ, ಬಹುಶಃ ಇಂಥ ವ್ಯಕ್ತಿಗಳಿಂದ ತುಂಬಿದ ಪಕ್ಷದ ನೈತಿಕತೆ ಬಗ್ಗೆ ಗಾಂಧಿಗಿದ್ದ ಅಪನಂಬಿಕೆಯೇ ವೇಶ್ಯೆಯರ ರಾಜಕೀಯ ಪ್ರವೇಶವನ್ನು ತಡೆಗಟ್ಟಿತೆನಿಸುತ್ತದೆ. ಸಾಕಷ್ಟು ಆರ್ಥಿಕ ಭದ್ರತೆ ಇಲ್ಲದ ಅವರ ಸ್ಥಿತಿಯನ್ನು ಪುರುಷವರ್ಗ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಗಾಂಧಿಯ ನಿಷ್ಟುರತೆಗೆ ಇದು ಪೂರಕ ಸಮರ್ಥನೆಯನ್ನು ನೀಡದಿದ್ದರೂ ವೇಶ್ಯೆಯರ ಬಗೆಗೆ ಗಾಂಧಿಯವರಿಗಿದ್ದ ಮಾನವೀಯ ಅನುಕಂಪವನ್ನು ಮಾತ್ರ ಅಲ್ಲಗಳೆಯಲಾಗುವುದಿಲ್ಲ. ವೇಶ್ಯೆಯರ ಹಾಗೂ ದೇವದಾಸಿಯರ ಸಮಸ್ಯೆಗೆ ಗಾಂಧಿಯವರಲ್ಲಿ ತತ್‍ಕ್ಷಣದ ಪರಿಹಾರವಿರಲಿಲ್ಲ. ಸಮಾಜದ ಉನ್ನತ ಹಾಗೂ ಮಧ್ಯಮ ವರ್ಗ, ಜಾತಿಗಳಿಂದ ಬಂದ ವಿಧವೆ, ವಿವಾಹಿತೆ, ಅವಿವಾಹಿತೆಯರಿಗೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತಮ್ಮನ್ನು ತೊಡಗಿಸಲು ಸಾಧ್ಯವಾಯ್ತು. ಕೆಳಜಾತಿ, ವರ್ಗಗಳ ನೆಲೆಯಲ್ಲಿಯೇ ಉಳಿಯುವ ದೇವದಾಸಿ, ವೇಶ್ಯಾ ಸಮಸ್ಯೆಗಳ ಪರಿಹಾರವು ಬದುಕುವ ಪ್ರಾಥಮಿಕ ಅವಶ್ಯಕತೆಗಳಲ್ಲಿ ಸ್ವಾವಲಂಬಿಯಾಗುವುದನ್ನು ಅವಲಂಬಿಸಿವೆ ಎಂಬ ಅರಿವು ಗಾಂಧಿಗೆ ಇತ್ತು. ಈ ಕಾರಣಕ್ಕಾಗಿ ಗ್ರಾಮೀಣ ಬಡ ರೈತ ಹೆಂಗಳೆಯರ ಬದುಕು ಸ್ವಾವಲಂಬಿತವಾಗುವಂತೆ ‘ಖಾದಿ’ ಚಳುವಳಿಯನ್ನು ರೂಪಿಸಿದ ಗಾಂಧಿ ವೇಶ್ಯಾ ಸಮಸ್ಯೆಯ ಪರಿಹಾರಕ್ಕೂ ಸ್ವಾವಲಂಬಿ ಜೀವನವಿಧಾನದ ಮಾದರಿಯನ್ನೇ ಉತ್ತರವಾಗಿ ಇಟ್ಟರು.
ಗಾಂಧಿ ರೂಪಿಸಿದ ‘ಖಾದಿ’ ಚಳುವಳಿಯು ಹೀಗಾಗಿ ಕೇವಲ ಬ್ರಿಟಿಷರ ವಸ್ತುಗಳ ನಿರಾಕರಣೆಗೆ ಮಾತ್ರ ಸಂಬಂಧಿಸಿರಲಿಲ್ಲ. ಯಂತ್ರ ನಾಗರಿಕತೆ ಗ್ರಾಮಗಳ ಬದುಕನ್ನು ಇನ್ನಿಲ್ಲದ ರೀತಿಯಲ್ಲಿ ಬಡತನದ ಅಂಚಿಗೆ ದೂಡುತ್ತದೆಂಬ ಅರಿವು ಅವರಿಗಿತ್ತು. ಅವಕಾಶ ವಂಚಿತ ಜನಸಮುದಾಯಕ್ಕೆ ಸ್ವಯಂ ಉದ್ಯೋಗದ ಅವಕಾಶವನ್ನು ಆ ಸಂದರ್ಭದಲ್ಲಿ ‘ಖಾದಿ’ ಮಾತ್ರ ನೀಡಬಲ್ಲದೆಂದು ಗಾಂಧಿ ಭಾವಿಸಿದ್ದರು. ಇದು ಅವರ ಅರಿವಿನ ಮಿತಿ ಎಂದು ಹೇಳುವುದು ಸಾಧ್ಯ. ಆದರೆ ವ್ಯಾವಹಾರಿಕ ಜಗತ್ತಿಗೆದುರಾಗಿ ಸರಳ ಜೀವನ ಸಂಹಿತೆಯನ್ನು ಖಾದಿ ಧರಿಸುವವರಿಗೂ ಖಾದಿ ತಯಾರಕರಿಗೂ ಏಕಕಾಲಕ್ಕೆ ಗಾಂಧಿ ಬೋಧಿಸಿದರು. ಭೋಗಜೀವನದ ಆಕರ್ಷಣೆಯನ್ನು ಗೆಲ್ಲದೆ ಚರಕ ಯಜ್ಞ ಯಶಸ್ವಿಯಾಗುವುದಿಲ್ಲವೆಂಬ ನಂಬಿಕೆ ಅವರದು. ಈ ಸಂದರ್ಭದಲ್ಲಿ ಖಾದಿ ಅತ್ಯಲ್ಪ ಆದಾಯ ತರಬಲ್ಲುದಾದರೂ ಸ್ವಾವಲಂಬನೆಯೆಡೆಗೆ ಒಂದು ಹೆಜ್ಜೆ ಮುಂದಿಟ್ಟಂತೆ ಆಗುತ್ತದೆಂಬ ವಿಶ್ವಾಸವನ್ನು ಗಾಂಧಿ ಬಡ ಜನತೆಯಲ್ಲಿ ತುಂಬಿದರು. ಇದಕ್ಕಾಗಿ ಗ್ರಾಹಕ ವರ್ಗವನ್ನೂ ಕೂಡ ತ್ಯಾಗಪೂರ್ಣ ಸರಳಜೀವನದೆಡೆ ಬದಲಾಯಿಸಬೇಕಾಗಿತ್ತು. ಪುರುಷರೂ ಕೂಡ ಚರಕದಿದ ನೂಲುವುದನ್ನು ವಿಧಿಯಾಗಿ ಸ್ವೀಕರಿಸಬೇಕೆಂಬ ಗಾಂಧಿಯವರ ನಿಲುವು ಸ್ತ್ರೀ ಪರುಷ ಸಮಾನತೆಯ ಆಶಯಕ್ಕೆ ಪೂರಕವಾಗಿದೆ. ಏಕೆಂದರೆ, ನೂಲುವುದು ಸ್ತ್ರೀಯ ಪಾರಂಪರಿಕ ಸಾಂಪ್ರದಾಯಿಕ ಕ್ರಿಯೆಯೇ. ಆದರೆ ಹೊರಗಿನ ಕ್ಷೇತ್ರದಲ್ಲಿ ಯಶಸ್ವಿಯಾಗಿ ಬಳಕೆಗೊಳ್ಳಬೇಕಾದ ಪುರುಷಶಕ್ತಿಯ ಅಪವ್ಯಯವಲ್ಲವೇ ಆತನ ಮೇಲೆ ನೂಲುವುದನ್ನು ಹೇರುವುದು -ಎಂಬ ಆಕ್ಷೇಪಣೆಗಳು ಸಹಜವಾಗಿ ಗಾಂಧಿಯವರೆದುರು ಇದ್ದವು.
ಸಾಮಾಜಿಕ ಅಸಮಾನತೆಗೆ ಕಾರಣವಾಗುವ ಲಿಂಗ, ಜಾತಿ, ವೃತ್ತಿ, ವರ್ಗಮೂಲ ಅಹಂಕಾರವನ್ನು ಕ್ರಾಂತಿಯ ಕಠೋರತೆಯು ನಿರ್ಮೂಲನಗೊಳಿಸಿದರೂ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅದು ಮೂಲಭೂತ ಧಕ್ಕೆಯನ್ನೊದಗಿಸುತ್ತದೆ. ವ್ಯಕ್ತಿಯನ್ನು ಉಳಿಸಿ ಅವನ ಅಹಂಕಾರವನ್ನು ಮಾತ್ರ ಕೊಲ್ಲುವ ಉಪಾಯವನ್ನು ಗಾಂಧಿ ‘ಭಕ್ತಿ’ ಮಾರ್ಗದ ಮೂಲಕ ಕಂಡುಕೊಳ್ಳುತ್ತಾರೆ. ಹೀಗಾಗಿ ಕೌಟುಂಬಿಕ ನೆಲೆಯ ‘ಪರಮ ಪತಿವ್ರತೆಗೆ ಪತಿಯೊಬ್ಬನೇ ದೈವ’ ಎಂಬ ನಂಬಿಕೆಯನ್ನು ‘ಭಕ್ತನಿಗೆ ಇಷ್ಟದೈವವೊಂದೇ ಪರಮಲಕ್ಷ್ಯ’ ಎಂದು ಭಕ್ತನೊಬ್ಬ ವಿಸ್ತರಿಸಿಕೊಳ್ಳುವ ಪರಿಯನ್ನು ಗಾಂಧಿ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಬಳಕೆಗೆ ತರುವ ಪ್ರಯತ್ನ ಮಾಡಿದರು. ದೈವದ ಸ್ಥಾನದಲ್ಲಿ ರಾಷ್ಟ್ರ, ಸಮಗ್ರ ಮಾನವತೆಯ ಸ್ಥಾನವನ್ನು ಪಡೆದಾಗ ರಾಷ್ಟ್ರಸೇವೆ ಹಾಗೂ ಸಮಗ್ರ ಮಾನವತೆಯ ಸೇವೆಗಾಗಿ ತನ್ನನ್ನು ತಾನು ಭಕ್ತರಂತೆ ಪೂರ್ಣ ಸಮರ್ಪಣೆ ಮಾಡಿಕೊಳ್ಳುವ ಆದರ್ಶವನ್ನು ಗಾಂಧಿವಾದ ನಮ್ಮ ಮುಂದಿಡುತ್ತದೆ. ಇಂಥ ಸಂದರ್ಭದಲ್ಲಿ ಮಹಿಳೆ ನಿರ್ವಹಿಸುವ ಸಾಂಪ್ರದಾಯಿಕ ಕ್ರಿಯೆಯಾದ ನೂಲುವುದನ್ನು ಪುರುಷರೂ ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಕೈಗೊಳ್ಳುವುದು ಅತ್ಯಗತ್ಯವೆಂದು ಗಾಂಧಿ ನಿಷ್ಠುರರಾಗಿ ವಿಧಿಸುತ್ತಾರೆ. ಪುರುಷನ ಅಹಂ ನಿರಸನಕ್ಕೆ ಕಾರಣವಾಗುವ ಈ ಖಾದಿ, ಸ್ತ್ರೀ ಸ್ವಾವಲಂಬನೆಯ ಸಾಧನವಾಗಿಯೂ, ಶ್ರೀಮಂತ ವರ್ಗದ ಭೋಗಾಕಾಂಕ್ಷೆಯನ್ನು ತಗ್ಗಿಸುವ ಅಸ್ತ್ರವಾಗಿಯೂ, ವಿದೇಶಿ ಸ್ವಾಮ್ಯವನ್ನು ಒಡೆಯುವ ತಂತ್ರಯೋಜನೆಯಾಗಿಯೂ ಏಕಕಾಲಕ್ಕೆ ಬಳಕೆಯಾಗಬಲ್ಲ ಬಹುಮುಖಿ ಆಯಾಮಗಳನ್ನು ಹೊಂದಿತ್ತು.
ಭಾರತೀಯ ಆಧುನಿಕ ಸ್ತ್ರೀವಾದಕ್ಕೆ ಗಾಂಧಿಯವರ ಈ ವಿಚಾರಗಳು ಅತ್ಯಂತ ಉಪಯುಕ್ತವಾಗಿವೆ. ಮುಂದುವರೆದ ರಾಷ್ಟ್ರಗಳ ಸ್ತ್ರೀವಾದಿ ಚಿಂತನೆಗಳಿಗಿಂತ ಭಿನ್ನವಾಗಿ ತೃತೀಯ, ಅಭಿವೃದ್ಧಿಗೊಳ್ಳುತ್ತಿರುವ ಎಂಬ ಹಣೆಪಟ್ಟಿಯಂಟಿಸಿಕೊಂಡ ರಾಷ್ಟ್ರಗಳ ಸ್ತ್ರೀವಾದ ರೂಪುಗೊಳ್ಳುತ್ತದೆ. ಭಾರತದಂತಹ, ವಸಾಹತುಶಾಹಿ ಆಳ್ವಿಕೆಯ ಪಳೆಯುಳಿಕೆಗಳೇ ಇನ್ನೂ ಜೀವಂತವಾಗಿರುವ ರಾಷ್ಟ್ರಗಳಲ್ಲಿ ಜಾಗತೀಕರಣ ಪರಿಕಲ್ಪನೆಯ ಮೂಲಕ ಇನ್ನೂ ಉಗ್ರವಾಗಿ ಬಂಡವಾಳಶಾಹಿ ಆಳ್ವಿಕೆಯ ದುರಾಕ್ರಮಣ ಅನಿವಾರ್ಯವೆನಿಸುವ ಸಂದರ್ಭದಲ್ಲಿ ಮಹಿಳಾ ಸಮಸ್ಯೆಯು ಇನ್ನೂ ಜಟಿಲಗೊಳ್ಳುತ್ತದೆ. ಹೀಗಾಗಿ ಸ್ತ್ರೀವಾದವು ಆ ಸನ್ನಿವೇಶದ ಅಗತ್ಯಕ್ಕೆ ತಕ್ಕಂತೆ ತನ್ನ ಪ್ರತಿಕ್ರಿಯೆಯನ್ನು, ಪ್ರತಿಭಟನೆಯನ್ನು ತನ್ನ ಸೈದ್ಧಾಂತಿಕ ಚೌಕಟ್ಟಿನಲ್ಲಿ ರೂಪಿಸಿಕೊಳ್ಳಬೇಕಾಗುತ್ತದೆ. ಆಧುನಿಕ ಭಾರತೀಯ ಸ್ತ್ರೀವಾದವು ಜಾಗತೀಕರಣದ ಮೂಲಕ ಭಾರತೀಯ ಸ್ತ್ರೀವರ್ಗ ಎದುರಿಸಬೇಕಾದ ಸಮಸ್ಯೆಗಳ ಕೂಲಂಕಷ ವಿಶ್ಲೇಷಣೆ ಮಾಡುತ್ತದೆ. ಜಾಹಿರಾತುಗಳಂಥ ಪ್ರಬಲ ಮಾಧ್ಯಮಗಳು ಮಧ್ಯಮ ವರ್ಗದ ಸುರಕ್ಷಿತ ಮಹಿಳೆಯಲ್ಲಿ ಪ್ರಜ್ಞೆಯ ಹೊಸ ಎಚ್ಚರದ ಬದಲಾಗಿ ತನಗೆ ನೀಡಲಾದ ಸಾಂಪ್ರದಾಯಿಕ ಪಾತ್ರವನ್ನೇ ಹೊಸ ಹುಮ್ಮಸ್ಸಿನಿಂದ, ಪೊಳ್ಳು ಪ್ರತಿಷ್ಠೆಯನ್ನು ಬೆಳೆಸಿಕೊಳ್ಳಲು ಅನುವಾಗುವಂತೆ, ನಿರ್ವಹಿಸುವಂತೆ ಮಾಡುತ್ತವೆ. ಅದೇ ತನ್ನ ಸರಕುಗಳ ಮಾರುಕಟ್ಟೆಯ ವಿಸ್ತರಣೆಗಾಗಿ ಅತಿದೊಡ್ಡ ಯಂತ್ರಗಳನ್ನು ಬಳಸುವುದರಿಂದ ದುಡಿಮೆಯಿಂದಲೇ ಬದುಕಬೇಕಾದ ಗ್ರಾಮೀಣ ಜನತೆಯನ್ನು ಇದು ಅವಕಾಶವಂಚಿತರನ್ನಾಗಿಸುತ್ತದೆ. ಕೈಗಾರೀಕರಣದ ಈ ದುಷ್ಟರಿಣಾಮಗಳು ಗ್ರಾಮೀಣ ಹಾಗೂ ನಗರ ಮಹಿಳೆಯರಿಬ್ಬರನ್ನೂ ಏಕಕಾಲಕ್ಕೆ ಶೋಷಿಸುವಂತಹದು. ಗಾಂಧಿವಾದವು ಈ ವಿಷಯವನ್ನು ನಡೆಸಿದ ಚಿಂತನೆ ಅತ್ಯಂತ ಸ್ವೋಪಜ್ಞವಾದುದು. ಶೋಷಣೆಯ ಸ್ವರೂಪವನ್ನು ಗಾಂಧಿ ಅತ್ಯಂತ ಖಚಿತವಾಗಿ ನಮ್ಮ ಮುಂದಿಡುತ್ತಾರೆ. ಆರ್ಥಿಕ ಮೂಲದ ಜಾಗತೀಕರಣ ನೀತಿಯನ್ನು ವಿರೋಧಿಸುವಲ್ಲಿ ಆಧುನಿಕ ಸ್ತ್ರೀವಾದಿಗಳು ಈ ನಿಟ್ಟಿನ ಗಾಂಧಿ ಚಿಂತನೆಯಿಂದ ಪ್ರಭಾವಿತರಾಗಿದ್ದಾರೆ.
ಇಷ್ಟಾದರೂ ಆಧುನಿಕ ಸ್ತ್ರೀವಾದಕ್ಕೂ ಗಾಂಧಿವಾದಕ್ಕೂ ಬಹುದೊಡ್ಡ ಕಂದಕವಿದೆ. ಮಹಿಳಾ ವಿಮೋಚನೆಗೆ ಸಂಬಂಧಿಸಿದಂತೆ ಸಾಂಸ್ಕೃತಿಕ ಸ್ತ್ರೀವಾದದ ಮಿತಿಗಳೆಲ್ಲವನ್ನೂ ಗಾಂಧಿವಾದದಲ್ಲಿ ಕಾಣಬಹುದು. ಸಾಂಸ್ಕೃತಿಕ ಸ್ತ್ರೀವಾದವು ಹೆಣ್ಣಿನದೇ ಆದ ಪ್ರತ್ಯೇಕ ಸಂಸ್ಕೃತಿಯನ್ನು ಬೆಳೆಸಿ ಶೋಧಿಸಿ ರಕ್ಷಿಸುವುದೇ ಸ್ತ್ರೀವಿಮೋಚನೆ ಎಂಬ ಅಭಿಪ್ರಾಯವನ್ನಿಟ್ಟುಕೊಂಡಿದೆ. ಸ್ತ್ರೀಯ ವಿಶಿಷ್ಟಗುಣಗಳನ್ನು ವೈಭವೀಕರಿಸುವ ಪ್ರಯತ್ನ ಲಿಂಗತಾರತಮ್ಯದ ನಿವಾರಣೆಗಿಂತ ಅದನ್ನು ಉಳಿಸಿಡುವುದಕ್ಕೆ ಹೆಚ್ಚು ಬದ್ಧವಾಗಿರುತ್ತದೆ ಎಂದೆನಿಸುತ್ತದೆ. ಈ ಹೊತ್ತಿನ ಭಾರತೀಯ ಸ್ತ್ರೀವಾದವು ಜೈವಿಕ ಹಂತದ ಲಿಂಗಭೇದವನ್ನು ಒಪ್ಪಿಕೊಂಡರೂ ಅದೇ ಸಾಮಾಜಿಕ ಹಂತದಲ್ಲಿ ಸ್ತ್ರೀಪುರುಷ ತಾರತಮ್ಯ ಕಲ್ಪನೆಗೆ ಆಧಾರವಾಗಿ ನಿಲ್ಲುವುದನ್ನೂ ಒಪ್ಪುವುದಿಲ್ಲ. ಗಾಂಧಿಯಾದರೋ ಸ್ತ್ರೀ ಸಮಾನತೆಯ ಕಲ್ಪನೆಯನ್ನು ಸ್ತ್ರೀವಾದಿ ಧೋರಣೆಗಿಂತ ಭಿನ್ನವಾಗಿ ರೂಪಿಸಿಕೊಂಡವರು.
ಅವರ ಪ್ರಕಾರ ಸಮಾನತೆ ಎನ್ನುವುದ ಸಮಾನ ಹಕ್ಕುಗಳ ಪಡೆಯುವಿಕೆಯಿಂದುಂಟಾದ ಸ್ಥಿತಿಯಲ್ಲ. ವ್ಯಕ್ತಿ ತನ್ನ ಪಾಲಿನ ಸಾಮಾಜಿಕ ನೈತಿಕ ಕರ್ತವ್ಯಗಳನ್ನು ಪೂರ್ಣವಾಗಿ ಪಾಲಿಸುವುದರಿಂದುಂಟಾದ ಫಲಿತ. ಈ ತರ್ಕದ ಪ್ರಕಾರ ಅಸೀಮ ಸೇವಾ ಮನೋಭಾವವುಳ್ಳ ಸ್ತ್ರೀ ತನ್ನ ಪಾಲಿನ ಕರ್ತವ್ಯ ನಿರ್ವಹಣೆಯಲ್ಲಿ ಪುರುಷನಿಗಿಂತಲೂ ಶ್ರೇಷ್ಠಳು, ಅಧಿಕಳು ಎಂದಾಗುತ್ತದೆ. ಪುರುಷವರ್ಗಕ್ಕೆ ಇದು ಮಾದರಿಯೂ ಆಗುತ್ತದೆ. ಹೀಗೆ ಕರ್ತವ್ಯ ಎಂದಾಗುತ್ತದೆ. ಪುರುಷವರ್ಗಕ್ಕೆ ಇದು ಮಾದರಿಯೂ ಆಗುತ್ತದೆ. ಹೀಗೆ ಕರ್ತವ್ಯ ಮೂಲದ ಸಮಾನತೆಯ ಪರಿಕಲ್ಪನೆ ಗೀತೆಯ ಉಪದೇಶ ವಾಕ್ಯದಿಂದ ಪ್ರೇರಿತವಾದುದು.
ಪುರುಷಪ್ರಧಾನ ಸಮಾಜದಲ್ಲಿ ಸ್ತ್ರೀ ಎದುರಿಸುವ ಮಾನಸಿಕ ಹಾಗೂ ದೈಹಿಕ ಶೋಷಣೆಗಳಿಗೆ ಗಾಂಧಿವಾದ ನೀಡುವ ಪರಿಗಹಾರವೂ ಆಧುನಿಕ ಸ್ತ್ರೀವಾದಿಗಳಿಗೆ ಒಪ್ಪಿತವಾದುದಲ್ಲ. ಸಾಮಾಜಿಕ ‘ಕೆಡುಕಿ’ನ ಬಗೆಗಿನ ಪರಿಕಲ್ಪನೆಯು ಗಾಂಧಿ ಹಾಗೂ ರವೀಂದ್ರರ ಚಿಂತನೆಗಳಲ್ಲಿ ಬಹಳ ವಿಶಿಷ್ಟ ಸ್ವರೂಪವನ್ನು ಹೊಂದಿದೆ. ಜಗತ್ತಿನಲ್ಲಿ ಸೃಷ್ಟಿ ಹಾಗೂ ವಿನಾಶಕಾರಿಯಾದ ಕೆಡುಕು-ಎರಡೂ ದೊಡ್ಡ ಶಕ್ತಿಯೊಂದರ ಸಂಕಲ್ಪ-ಕಾರಣ ಅಸ್ತಿತ್ವದಲ್ಲಿದೆ ಎಂದು ಇಬ್ಬರೂ ನಂಬುತ್ತಾರೆ. ಸಾಮಾಜಿಕ ಕೆಡುಕು, ಅನಿಷ್ಟವನ್ನು ಇವರಿಬ್ಬರೂ ಒಂದು ಸಿದ್ಧ ಸ್ಥಿತಿಯಾಗಿ ಭಾವಿಸುತ್ತಾರೆ. ಆ ಸ್ಥಿತಿಯ ಹಿಂದಣ ಕಾರ್ಯ-ಕಾರಣ ಸಂಬಂಧಗಳ ಅನ್ವೇಷಣೆ ಗಾಂಧಿವಾದಕ್ಕೂ ರವೀಂದ್ರವಾದಕ್ಕೂ ಅಪ್ರಸ್ತುತ. ದೇವರು ಪ್ರಪಂಚದಲ್ಲಿ ಅನಿಷ್ಟ ನೆಲಸುವಂತೆ ಮಾಡಿರುವುದು ಜೀವಿಗಳನ್ನು ಹುರಿದು ತೇಗುವುದಕ್ಕಲ್ಲ. ಅದನ್ನು ಎದುರಿಸುವ ಛಲ ಅವರಿಗೆ ಬರಲಿ ಎಂದು ಮಾತ್ರ – ಎಂದು ಗಾಂಧಿ ಭಾವಿಸಿದ್ದರು. ಆದ ಕಾರಣ ಅತ್ಯಾಚಾರಕ್ಕೊಳಗಾಗುವ ಸಂದರ್ಭ ಬಂದಾಗಲೂ ಹೆಂಗಸು ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನವನ್ನು ದೈಹಿಕವಾಗಿ ಮಾಡಿಕೊಳ್ಳುವುದಕ್ಕಿಂತ ಮುಖ್ಯವಾಗಿ ನೈತಿಕ ಸ್ಥೈರ್ಯ ಧೈರ್ಯಗಳನ್ನು ಆಕೆ ಉದ್ದೀಪಿಸಿಕೊಳ್ಳಬೇಕೆಂದು ಗಾಂಧಿ ವಾದಿಸುತ್ತಾರೆ. ದೈಹಿಕವಾಗಿ ಆಕ್ರಮಣವನ್ನು ತಡೆಗಟ್ಟಲು ಅಸಾಧ್ಯವಾದಾಗ ಪ್ರಾಣಭಯವನ್ನು ತ್ಯಜಿಸಿ ತನ್ನನ್ನು ಕೊನೆಗಾಣಿಸಿಕೊಳ್ಳಬೇಕೆಂದು ಅವರ ಸಲಹೆ. ಆಧುನಿಕ ಸ್ತ್ರೀವಾದದ ದೃಷ್ಟಿಯಿಂದ ನೋಡಿದರಂತೂ ಈ ಸಲಹೆ ಅತ್ಯಂತ ಅಮಾನವೀಯವಾಗಿ ಕಾಣುತ್ತದೆ. ಸ್ತ್ರೀವಾದವು ಪರ್ಯಾಯ ಸಂಸ್ಕೃತಿ ನಿರ್ಮಾಣದ ಅವಿಭಾಜ್ಯ ಅಂಗವೆಂದು ತನ್ನನ್ನು ಗುರುತಿಸಿಕೊಂಡಿದೆ. ಸ್ತ್ರೀಗೆ ಸಂಬಂಧಿಸಿದಂತೆ ಇರುವ ಯಜಮಾನ ಸಂಸ್ಕೃತಿಯ ಮಾದರಿಗಳನ್ನು ಪ್ರಜ್ಞಾಪೂರ್ವಕವಾಗಿ ಒಡೆಯುವುದರ ಮೂಲಕ ಪರ್ಯಾಯ ಮಾದರಿಗಳನ್ನು ಸೃಷ್ಟಿಸುವ ಆಶಯವನ್ನು ಆಧುನಿಕ ಸ್ತ್ರೀವಾದ ಹೊಂದಿದೆ. ಹೀಗೆ ಒಡೆಯಬೇಕೆನ್ನುವ ಮಾದರಿಯಲ್ಲಿ ಹೆಣ್ಣಿನ ಬಗೆಗಿನ ‘ಪಾವಿತ್ರ್ಯ’ದ ಕಲ್ಪನೆಯು ಬಹುಮುಖ್ಯವಾದದು. ಸ್ತ್ರೀವಾದದ ಪಾವಿತ್ರ್ಯನಾಶ ಕಲ್ಪನೆಗೆ ವ್ಯತಿರಿಕ್ತವಾಗಿ ಗಾಂಧಿವಾದ ಪಾವಿತ್ರ್ಯರಕ್ಷಣೆಯನ್ನು ಹೆಣ್ಣಿನ ಆದ್ಯ ಕರ್ತವ್ಯವನ್ನಾಗಿಸುತ್ತದೆ. ಈ ನಿಟ್ಟಿನಲ್ಲಿ ಗಾಂಧಿವಾದವು ಸ್ಪಷ್ಟವಾಗಿ ಪಿತೃಪ್ರಧಾನ ಆಲೋಚನೆಗಳನ್ನುಳ್ಳದ್ದು.
ಗಾಂಧಿ ಪ್ರತಿಪಾದಿಸುವ ಸರ್ವೋದಯ ವ್ಯವಸ್ಥೆಯ ಕೇಂದ್ರಬಿಂದು ವ್ಯಕ್ತಿಸ್ವಾತಂತ್ರ. ಹೊರಗೆ ದುಡಿದು ಕುಟುಂಬವನ್ನು ರಕ್ಷಿಸುವುದು ಪುರುಷನ ಕರ್ತವ್ಯವೆಂದು ಗಾಂಧಿ ಹೇಳುತ್ತಾರೆ. ಪುರುಷನಿಗೆ ಸಿದ್ಧಪಡಿಸಿದ ಈ ಹೊರ ಜಗತ್ತಿನಲ್ಲಿ ಮಹಿಳೆಯ ಪ್ರವೇಶವನ್ನು ಗಾಂಧಿ ನಿರಾಕರಿಸುತ್ತಾರೆ. ಗಂಡಿನೊಡನೆ ತಾನೂ ಕುದುರೆ ಏರಲು ಹೆಣ್ಣು ಪ್ರಯತ್ನಿಸಿದರೂ ಆತನನ್ನು ಬೀಳಿಸಿ ತಾನೂ ಬೀಳುತ್ತಾಳೆ ಎಂಬ ಅಲೌಕಿಕ ಅಸಮಂಜಸ ಹೋಲಿಕೆಯನ್ನು ಗಾಂಧಿ ನೀಡುತ್ತಾರೆ. ಆಧುನಿಕ ಸ್ತ್ರೀವಾದವು ಗಾಂಧಿವಾದದ ಈ ವಿಚಾರವನ್ನು ಒಪ್ಪುವುದಿಲ್ಲ. ಪರಿಸರದಲ್ಲಿ ಕಲ್ಪಿತಗೊಳ್ಳುವ ಅವಕಾಶಗಳಿಗೆ ಅನುಗುಣವಾಗಿ ಹೆಣ್ಣು ಗಂಡುಗಳ ಕಾರ್ಯಕ್ಷಮತೆ ನಿರ್ಧರಿತವಾಗುತ್ತಾದ್ದರಿಂದ, ಪುರುಷನಿಗೆ ದಕ್ಕುವ ಹೊರಜಗದ ಅವಕಾಶಗಳ ವಿಸ್ತರಣೆ ಹೆಣ್ಣಿಗೂ ಅತ್ಯಗತ್ಯವಾಗಿ ಆಗಬೇಕಾದುದು ನ್ಯಾಯಯುತವೆಂದು ಸ್ತ್ರೀವಾದಿಗಳು ವಾದಿಸುತ್ತಾರೆ. ಆದರೆ ಗಾಂಧಿವಾದದ ನೈಜ ಯಶಸ್ಸಿರುವುದು, ನಾಗರಿಕ ಜಗದಲ್ಲಿನ, ಅವಕಾಶದ ಮೂಲಕ ದಕ್ಕುವ ಕೀರ್ತಿ, ಪ್ರತಿಷ್ಠೆ, ಹಣಗಳು ಹುಟ್ಟುಹಾಕುವ ಕ್ಷುದ್ರ ಆಮಿಷವನ್ನು ನಿರಾಕರಿಸುವುದರಿಂದ. ಆಧುನಿಕ ಸ್ತ್ರೀವಾದ ಗಾಂಧಿಯ ಈ ವಿಚಾರದಿಂದ ತಿಳಿದುಕೊಳ್ಳುವುದು ಬಹಳ ಇದೆ. ಕಲಿತ ಹೆಣ್ಣಿನ ಸಮಸ್ಯೆಯು ನಮ್ಮ ಅನೇಕ ಪ್ರಗತಿಪರ ಲೇಖಕಿಯರಲ್ಲಿ ಕಾಣಿಸುತ್ತದೆ. ತುಂಬಲಾರದ ಶೂನ್ಯತೆಯ ಸಮಸ್ಯೆ ಸಮಸ್ಯೆಯಾಗೇ ಪರಿಹಾರ ಕಾಣದೆ ಉಳಿದುಬಿಡುತ್ತದೆ.
ಆ ಶೂನ್ಯತೆಗೆ ಪರಿಹಾರವಾಗಿ ಮನುಷ್ಯ ಜೀವನಕ್ಕೆ ಘನತೆಯನ್ನು ಕೊಡಬಲ್ಲ ಸೇವಾಮನೋಭಾವನೆಯನ್ನು ಗಾಂಧಿವಾದ ವೈಭವೀಕರಿಸುತ್ತದೆ. ಏಕೆಂದರೆ, ‘ಹಕ್ಕ’ನ್ನು ಮಾತ್ರ ಸಮಾನ ನೆಲೆಯಲ್ಲಿ ಪಡೆಯುವ ಹೋರಾಟದಲ್ಲಿ ‘ಮಾರ್ಗ’ ಅಮುಖ್ಯವಾದಾಗ ಅದು ಕೊನೆಗಾಣದ ಹೋರಾಟವಾಗುತ್ತದೆ. ಗಾಂಧಿ ಹೇಳುವ ‘ಕರ್ತವ್ಯ’ ಪ್ರಜ್ಞೆಯ ನೆಲೆಯ ಸತ್ಯಾಗ್ರಹ ಹೋರಾಟವು ಅಧಿಕಾರದ ಎಲ್ಲ ಸ್ತರಗಳನ್ನು ನಿರಾಕರಿಸುತ್ತದೆ. ಹೀಗಾಗಿ ಮಾರ್ಕ್ಸ್ ವಾದದ ಮಿತಿಯನ್ನು ನೀಗಿಕೊಂಡ ಗಾಂಧಿಯ ಚಿಂತನೆ- ಸ್ತ್ರೀವಾದವನ್ನು ಹೆಚ್ಚು ಅರ್ಥಪೂರ್ಣವಾಗಿಸಿಕೊಳ್ಳಲು ಸಹಾಯಕವಾದೀತು.
ಗಾಂಧಿಯವರ ಉದಾರವಾದಿ ಮಾನವತಾವಾದವು ಅಸ್ಪೃಶ್ಯನೊಬ್ಬನ ವ್ಯಕ್ತಿತ್ವವು ಅವನ ಜನಾಂಗ ಪ್ರತಿನಿಧಿಸುವ ವಿಚಾರಧಾರೆ ಎಂದು ಗುರುತಿಸುವಲ್ಲಿ ಸೋಲುತ್ತದೆ. ಅಸ್ಪೃಶ್ಯ ವ್ಯಕ್ತಿಯೊಬ್ಬನ ಅನುಭವಲೋಕದೊಳಗೆ ಗಾಂಧಿಗೆ ವೈಯುಕ್ತಿಕವಾಗಿ ಪ್ರವೇಶ ಸಾಧ್ಯವಾಗಲಿಲ್ಲ. ಇಲ್ಲಿ ಸೋತ ಗಾಂಧಿ ಮಹಿಳೆಯೊಬ್ಬಳ ವ್ಯಕ್ತಿತ್ವವನ್ನು ಒಂದು ವಿಚಾರಧಾರೆಯ ಸಮಗ್ರ ಅಭಿವ್ಯಕ್ತಿಯಾಗಿ ಯಶಸ್ವಿಯಾಗಿ ಗುರುತಿಸುತ್ತಾರೆ. ತಮ್ಮ ಪತ್ನಿ, ತಾಯಿ, ಜೊತೆಯ ಕಾರ್ಯಕರ್ತೆಯರು, -ಇವರೊಡನಾಟವು ಗಾಂಧಿಗೆ ಈ ಸಾಮರ್ಥ್ಯವನ್ನು ದಕ್ಕಿಸಿತು. ಗಾಂಧೀ ಹೀಗಾಗಿ ಸುಲಭವಾಗಿ ತನ್ನನ್ನು ಹೆಣ್ಣಾಗಿಸಿಕೊಳ್ಳಬಲ್ಲಷ್ಟೇ ಸಲೀಸಾಗಿ ಅಸ್ಪೃಶ್ಯನ ನಿಜತ್ವವನ್ನು ಅನುಭವಿಸಲಾಗಲಿಲ್ಲ. ಸಾಮಾಜಿಕ ಶ್ರೇಣೀಕರಣದ ಬಗೆಗಿನ ಈ ಮಿತಿಯೊಂದಿಗೇ ಸ್ತ್ರೀಯ ವೈಯಕ್ತಿಕ ಸಂವೇದನೆಯ ಬಗೆಗಿನ ನಿರ್ಲಕ್ಷ್ಯವೂ ಗಾಂಧಿವಾದದ ಮಿತಿಯಾಗಿದೆ. ಹೀಗಾಗಿ ಸ್ವಾಯತ್ತ ಮಹಿಳಾ ವಿಮೋಚನಾ ಚಳುವಳಿಯ ಪರಿಕಲ್ಪನೆಗೆ ಗಾಂಧಿವಾದದಲ್ಲಿ ಸ್ಥಾನವಿಲ್ಲ. ಹೀಗಾಗಿ ಗಾಂಧಿಯ ವಿಚಾರಗಳು ಮಹಿಳೆಯ ವಿಷಯಕ್ಕೆ ಸಂಬಂಧಿಸಿದಂತೆ ಏಕಕಾಲಕ್ಕೆ ಪ್ರತಿಬಂಧಾತ್ಮಕವೂ ವಿಮೋಚನಾತ್ಮಕವೂ ಆಗಿದೆ.
2
ಹೊಸಗನ್ನಡ ಸಾಹಿತ್ಯದಲ್ಲಿ ಮಹಿಳಾ ವಸ್ತು ನಿರ್ವಹಣೆ
ತೊಂಬತ್ತರ ದಶಕದ ಮಧ್ಯಭಾಗದಲ್ಲಿ ನಿಂತು ಎಂಬತ್ತರ ದಶಕದೆಡೆ ಕಣ್ಣು ಹಾಯಿಸಿದಾಗ ಬಹಳ ವಿಶಿಷ್ಟವಾದ ಸಾಹಿತ್ಯಕ ಸಂದರ್ಭವೊಂದು ನಮ್ಮೆದುರು ನಿಲ್ಲುತ್ತದೆ. ನಡೆದು ಬಂದ ದಾರಿಯೆಡೆ ಕಣ್ಣ ತಿರುಗಿಸಬೇಡೆಂದು ಬೇರೆಡೆ ಹೊರಳಿಕೊಂಡ ನವ್ಯಕಾವ್ಯ ಒಂದೆಡೆ. ನವ್ಯಕಾವ್ಯದ ಅಕೆಡಮಿಕ್ ರೀತಿಗೂ ನವೋದಯದ ಆದರ್ಶವಾದಿ ಭಾವುಕತೆಗೂ ಭಿನ್ನವಾಗಿ ತನ್ನನ್ನು ಪ್ರತ್ಯೇಕವಾಗಿ ಗುರುತಿಸಿಕೊಂಡ ಬಂಡಾಯ ದಲಿತ ಸಾಹಿತ್ಯ ಮತ್ತೊಂದೆಡೆ. ಈ ಮೂರೂ ಸಾಹಿತ್ಯ ಪಂಥಗಳು ಮಹಿಳಾ ವಸ್ತುವನ್ನು ಸ್ವೀಕರಿಸಿ ನಿರ್ವಹಿಸಿರುವ ಕ್ರಮವು ಆಯಾ ಪಂಥಗಳ ತಾತ್ವಿಕತೆಗೆ ಬದ್ಧವಾಗುಳಿದಿರುವುದನ್ನು ನೋಡಬಹುದು.
ನವೋದಯ ಸಾಹಿತ್ಯದಲ್ಲಿನ ‘ಮಹಿಳೆ’ಯನ್ನು ಕುರಿತು ವಸ್ತುನಿರ್ವಹಣೆಯು ಗಾಂಧಿವಾದದ ವಿಚಾರಧಾರೆಯಿಂದ ಪ್ರಧಾನವಾಗಿ ಪ್ರೇರಿತವಾಗಿದೆ. ಸಾಮಾಜಿಕ ರಾಜಕೀಯ ಜೀವನದಲ್ಲಿ ಆತ್ಮ ಕೇಂದ್ರಿತ ನೈತಿಕ ಚೌಕಟ್ಟನ್ನು ಆದರ್ಶವಾಗಿ ರೂಪಿಸುವಲ್ಲಿ ಗಾಂಧಿವಾದವು ‘ಮಹಿಳೆ’ ವಸ್ತುವನ್ನು ಬಳಸಿಕೊಳ್ಳುತ್ತದೆ. ಕುಟುಂಬದ ಪಾಲನೆಯು ಹೆಣ್ಣಿನ ಬಹುಮುಖ್ಯ ಕರ್ತವ್ಯವೆಂದು ಅಪೇಕ್ಷಿಸುವ ಗಾಂಧಿ. ಗಂಡು ಹೊಂಚಿ ತಂದ ಆಹಾರವನ್ನು ಹಂಚುವ ಕಾಯಕದವಳೆಂಬ ಹೆಣ್ಣಿನ ಸಾಂಪ್ರದಾಯಿಕ ಚಿತ್ರಣವನ್ನು ಬಳಸಿಕೊಳ್ಳುತ್ತಾರೆ. ಮಹಿಳೆಯನ್ನು ಇಂಥ ಸೀಮಿತತೆಯಲ್ಲಿ ಇರಿಸುವ ಗಾಂಧಿ ಆ ಸೀಮಿತ ಕ್ಷೇತ್ರವನ್ನೇ ಮಹಿಳೆಯ ವಿಶೇಷ ಮೌಲ್ಯ ಪ್ರಕಟನೆಯ ಕಾರ್ಯಕ್ಷೇತ್ರವಾಗಿ ಕಂಡರು. ವಸಾಹತುಶಾಹಿ ನಾಗರಿಕತೆ, ಕೈಗಾರಿಕೀಕರಣ ಹುಟ್ಟುಹಾಕುವ ಅತಿ ಭೋಗಾಕಾಂಕ್ಷೆಯ ಅನಾರೋಗ್ಯಕಾರಿ ಸ್ಪರ್ಧಾತ್ಮಕ ಜಗತ್ತಿನೆದುರಿಗೆ ಉನ್ನತ ಮೌಲ್ಯಗಳಾಳುವ ಮಹಿಳೆಯ ಕೌಟುಂಬಿಕ ನೆಲೆಯನ್ನು ಗಾಂಧಿ ಇರಿಸುತ್ತಾರೆ. ಈ ಪ್ರಯತ್ನದಲ್ಲಿ, ಮಹಿಳೆಯ ಸ್ಥಾನವನ್ನು ಎತ್ತರಕ್ಕೇರಿಸುತ್ತ ಪುರುಷ ಪ್ರಧಾನ ಜಗತ್ತಿನ ಅಪಮೌಲ್ಯೀಕೃತ ವ್ಯವಸ್ಥೆಯನ್ನು ಅವರು ತಿರಸ್ಕರಿಸುತ್ತಾರೆ. ಯಾವುದೇ ಸಾಮಾಜಿಕ ಅನ್ಯಾಯದ ವಿರುದ್ಧದ ಸತ್ಯಾಗ್ರಹ ಹೋರಾಟಕ್ಕೆ ಮಾರ್ಗವಾಗಿ ಅಹಿಂಸೆಯನ್ನು ಗಾಂಧಿ ರೂಪಿಸಿಕೊಳ್ಳುವಲ್ಲಿ ಬಹಳ ಸೂಕ್ಷ್ಮವಾಗಿ ‘ಮಹಿಳೆ’ಯನ್ನು ಕುರಿತ ಅವರ ಪರಿಕಲ್ಪನೆಗಳು ಕೆಲಸಮಾಡಿವೆ. ಸತ್ಯಾಗ್ರಹದ ಮಾರ್ಗವಾದ ಅಹಿಂಸೆಯು ಮಹಿಳೆಯು ಸಹಜ ಗುಣವಾಗಿ ಹೊಂದಿರುವ ಅತೀವ ಶ್ರಮ, ಸಹನೆ, ತ್ಯಾಗ ಪ್ರೇಮಗಳನ್ನು ಒಳಗೊಳ್ಳುವ ವ್ಯಾಪ್ತಿಯುಳ್ಳದ್ದಾಗಿ ಗಾಂಧಿ ಭಾವಿಸುತ್ತಾರೆ.
ಹೀಗಾಗಿ ನವೋದಯ ಸಾಹಿತ್ಯದ ಬಹಳಷ್ಟು ಸ್ತ್ರೀಪಾತ್ರಗಳು ಗಾಂಧಿಯ ಸ್ತ್ರೀ ಪರಿಕಲ್ಪನೆಯ ಮೂಸೆಯೊಳಗಿನಿಂದ ಇಳಿದು ಬಂದ ಪಾತ್ರಗಳೇ ಆಗಿವೆ. ಕಾರಂತರ ಕಾದಂಬರಿಗಳ ಗ್ರಾಮೀಣ ಸ್ತ್ರೀಪಾತ್ರಗಳು, ರಾಜರತ್ನಂರವರ ಮಲ್ಲಿ, ಪುಟ್ನಂಜಿಯರು, ಬೇಂದ್ರೇಯವರ ಸಖೀಗೀತದ ಸಖಿ, ಕುವೆಂಪು ‘ರಾಮಾಯಣದರ್ಶನಂ’ನ ಸೀತೆ –ಎಲ್ಲರೂ ಶುದ್ಧ ಜೀವನ ಸಂಹಿತೆಯನ್ನು ಪ್ರತಿನಿಧಿಸುವವರು. ಗಾಂಧಿಯವರ ಮಹಿಳೆಯನ್ನು ಕುರಿತ ವಿಚಾರಗಳು ಸಾಂಪ್ರದಾಯಿಕ, ಅಮೂರ್ತವೆನಿಸಿದರೂ ಸಾಂದರ್ಭಿಕ ಒತ್ತಾಸೆಗಳ ಹಿನ್ನೆಲೆಯಲ್ಲಿ ನೋಡಿದರೆ ಅವರ ವಿಚಾರಗಳ ಪ್ರಾಮಾಣಿಕತೆ ಪ್ರಶ್ನಾತೀತವೆನಿಸುತ್ತದೆ. ಬದಲಾವಣೆ ತರಲಸಾಧ್ಯವಾದ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಪುರುಷ ನಿರ್ವಹಿಸುವ ಅಪಮೌಲ್ಯೀಕೃತ ಪಾತ್ರವನ್ನು ಗಮನದಲ್ಲಿಟುಕೊಂಡು, ಮಹಿಳೆಯ ಘನತೆಯನ್ನು ಎತ್ತಿ ಹಿಡಿವಲ್ಲಿ ಗಾಂಧಿ ವಿಚಾರಗಳ ಯಶಸ್ಸು ಇದೆ.
ಸಾಮರಸ್ಯವಿಲ್ಲದ ದಾಂಪತ್ಯ, ವೈಧವ್ಯ, ಅವಿವಾಹಿತ ಸ್ಥಿತಿ, ವೇಶ್ಯಾಸಮಸ್ಯೆ, ವರದಕ್ಷಿಣೆ ಸಮಸ್ಯೆಗಳಿಗೆ ಗಾಂಧಿಯವರಲ್ಲಿದ್ದ ಪರಿಹಾರ ಒಂದೇ -ಬ್ರಹ್ಮಚರ್ಯ. ಉತ್ತಮ ತ್ಯಾಗ, ಸಹನೆ, ಅಪರಿಗ್ರಹ, ಅಹಿಂಸೆಗಳನ್ನು ಬ್ರಹ್ಮಚರ್ಯದ ನಡಾವಳಿಗಳೊಳಗೆ ಸ್ಥಾಪಿಸುವ ಗಾಂಧಿಯವರ ವಿಚಾರಗಳು ಸಾಮಾಜಿಕ ಬದಲಾವಣೆಯನ್ನು ವಾಸ್ತವ್ಯದಲ್ಲಿ ಅಪೇಕ್ಷಿಸುವ ವಸ್ತುಮೂಲವಾದಿ ಧೋರಣೆಗಿಂತ ಭಿನ್ನವಾದುವು. ಹೀಗಾಗಿ ವಿಚಾರಮೂಲವಾದಿ ನೆಲೆಯಿಂದ ಹೊರಡುವ ನವೋದಯರ ‘ಮಹಿಳೆಯ ಬಿಡುಗಡೆ’ಯ ಆಶಯವು ಸಾಮಾಜಿಕ ಬದಲಾವಣೆಯ ತತ್‍ಕ್ಷಣದ ತುರ್ತಾಗಿ ಕೆಲಸ ಮಾಡಲಿಲ್ಲ. ಏಕೆಂದರೆ ವ್ಯಕ್ತಿತ್ವ ವಿಕಸನದ ನೆಲೆಯೇ ಪ್ರಧಾನವಾದಾಗ ಮಹಿಳೆಯ ಸಾಮಾಜಿಕ ಪಾತ್ರದ ವಿಸ್ತರಣೆ ಹಿನ್ನೆಲೆಗೆ ಸರಿಯುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಪುರುಷರಿಗೆ ಅತ್ಯುತ್ತಮ ನೈತಿಕ ಮಾದರಿಯಾಗಿ ನಿಲ್ಲಬಲ್ಲ ಕಾರಣಕ್ಕಾಗಿ ಮಹಿಳೆಯ ರಾಜಕೀಯ ಪ್ರವೇಶವನ್ನು ಗಾಂಧಿ ಮಾನ್ಯ ಮಾಡಿದ್ದರು. ಹೀಗೆ ಮಾನವ್ಯದ ಸೇವೆಯ ಅಂಗವಾದ ಮಹಿಳೆಯ ಸಾರ್ವಜನಿಕ ಕ್ಷೇತ್ರದ ಪ್ರವೇಶವನ್ನು ಪ್ರಧಾನ ಕಥಾವಸ್ತುವಾಗಿ ಕೂಡ ನವೋದಯದ ಪ್ರಮುಖ ಕಾದಂಬರಿಕಾರರು ಸ್ವೀಕರಿಸಲಿಲ್ಲ. ಇನ್ನು, ಜನಪ್ರಿಯ ಸಾಹಿತ್ಯವಾದರೋ ಮಹಿಳೆಯ ಬಂಧನದ ಮಾದರಿಯನ್ನೇ ಸ್ಥಿರೀಕರಿಸಿದ್ದು ವಿಷಾದಕರ. ವಸ್ತುಮೂಲವಾದಿ ಪ್ರಗತಿಶೀಲ ಸಾಹಿತ್ಯ ಚಳುವಳಿಯು ಸಮಸ್ತ ಶೋಷಿತರ ಬಿಡುಗಡೆಯೊಳಗೆ ಮಹಿಳೆಯ ವಿಮೋಚನೆಯನ್ನು ಪ್ರಧಾನ ಆಶಯವಾಗಿ ಸ್ವೀಕರಿಸಿದರೂ ಅದರ ಸಾಹಿತ್ಯಕ ನಿರ್ವಹಣೆಯಲ್ಲಿ ಯಶಸ್ವಿಯಾಗಲಿಲ್ಲ. ಈ ಸೋಲು ಕೇವಲ ಕಲಾತ್ಮಕತೆಯಲ್ಲಿನ ಸೋಲಲ್ಲ. ನಂಬಿದ ಆದರ್ಶಗಳ ನೈಜ ಬದುಕಿನ ಅನುಷ್ಠಾನವಾಗದ ಹೊರತು ಏನನ್ನೂ ಸಾಧಿಸಲಾಗುವುದಿಲ್ಲ. ಪ್ರಗತಿಶೀಲರ ಈ ಸೋಲಿನ ಎದುರು ಗಾಂಧಿವಾದದ ಯಶಸ್ಸು ಎದ್ದು ಕಾಣುವಂತಹದು. ಅತೀತದ ಆದರ್ಶವನ್ನು ಎದುರಿಗಿಟ್ಟುಕೊಂಡೇ ಅದನ್ನು ಸಾಧಿಸಲು ನಡೆಸುವ ಪ್ರಾಮಾಣಿಕ ಪ್ರಯತ್ನವು ಬದುಕನ್ನು ಕಲೆಯ ಹಂತಕ್ಕೇರಿಸುತ್ತದೆ. ಅದಿಲ್ಲದಿದ್ದಾಗ ಬಡತನ, ಅಸ್ಪೃಶ್ಯತೆಗಳ ಜೊತೆ ಮಹಿಳಾ ಸಮಸ್ಯೆಯೂ ಗಾಢ ತಲ್ಲಣಗಳನ್ನು ಉಂಟುಮಾಡದ ಅತಿರಂಜಿತ ನಿರೂಪಣೆಯಲ್ಲಿ ಕೊನೆಗೊಳ್ಳುತ್ತದೆ. ಸ್ತ್ರೀ ಶೋಷಣೆಯ ಸ್ವರೂಪವನ್ನು ವಸ್ತುವಾಗಿ ಎತ್ತಿಕೊಂಡಾಗಲೂ ನಿರೂಪಣೆಯಲ್ಲಿ ಸ್ತ್ರೀದೇಹದ ಭೌತಿಕ ಆಕರ್ಷಣೆಯನ್ನು ಮೀರಲಾಗದುದನ್ನು ಕೆಲವು ಪ್ರಗತಿಶೀಲ ಕಾದಂಬರಿಗಳಲ್ಲಿ ಕಾಣಬಹುದು.
ನವ್ಯ ಸಾಹಿತ್ಯ ಪಂಥವು ಅನುಭವದ ಶೋಧನೆಯನ್ನು ಭಾಷೆಯ ಮೂಲಕ ಕೈಗೊಳ್ಳುವ ಕಸಬುದಾರಿಕೆಗೆ ಪ್ರಾಧ್ಯಾನ್ಯ ನೀಡಿತು. ಸ್ತ್ರೀ-ಪುರುಷ ಸಂಬಂಧದ ನಿರ್ವಚನವನ್ನು ನವ್ಯ ಸಾಹಿತ್ಯ ಬಹಳ ವಿಲಕ್ಷಣ ರೀತಿಯಲ್ಲಿ ಮಾಡುತ್ತದೆ. ಅತ್ಯುತ್ತಮ ಗುಣಗಳ ಮೂರ್ತರೂಪವಾದ ಮಹಿಳೆಯು ಪುರುಷನ ವ್ಯಕ್ತಿತ್ವ ವಿಕಸನಕ್ಕೆ ಸ್ಪೂರ್ತ ಚೇತನಗಳ ಮಾದರಿಯೂ ಆಗಬಲ್ಲಳು, ಆಗಿದ್ದಾಳೆ, ಆಗಬೇಕು ಎಂಬುದು ಗಾಂಧಿಯ ಅಪೇಕ್ಷೆ ಹಾಗೂ ದೃಢ ನಂಬಿಕೆ. ಈ ಅಪೇಕ್ಷೆ ಹಾಗೂ ನಂಬಿಕೆಗಳ ತಿರುಗು ರೂಪದ ಮಾದರಿಯನ್ನು ನವ್ಯಸಾಹಿತ್ಯ ನಮ್ಮ ಮುಂದಿಡುತ್ತದೆ.
ಮನುಷ್ಯನ ಸಮಗ್ರ ವ್ಯಕ್ತಿತ್ವದ ಶೋಧನಾತ್ಮಕ ಅಭಿವ್ಯಕ್ತಿಯನ್ನು ನವ್ಯಸಾಹಿತ್ಯ ಪ್ರಧಾನ ಆಸಕ್ತಿಯಾಗಿಟ್ಟುಕೊಂಡಿತು. ಹಾಗಾಗಿ ಇದುವರೆಗೂ ಸಾಹಿತ್ಯ ಪರಂಪರೆಯಲ್ಲಿ ಅಲಕ್ಷಿತವಾಗಿದ್ದ, ಹಿನ್ನೆಲೆಗೆ ಸರಿದು ಹೋಗಿದ್ದ ಬದುಕಿನ ಅನುಭವಲೋಕವನ್ನು ವಸ್ತುನಿಷ್ಠವಾಗಿ ಅನಾವರಣಗೊಳಿಸುವ ಹುಮ್ಮಸ್ಸು ಕಂಡುಬಂತು. ಬಂಡವಾಳಶಾಹಿ ನಾಗರಿಕ ಸಮಾಜದ ಕತ್ತುಹಿಸುಕುವ ಕ್ರೌರ್ಯ ಹಾಗೂ ಮನುಷ್ಯನ ಮೂಲಭೂತ ಪ್ರವೃತ್ತಿಯಾದ ಕಾಮ-ಎರಡೂ ನವ್ಯಕಾವ್ಯ ಹಾಗೂ ಕಥಾಸಾಹಿತ್ಯದ ಪ್ರಧಾನ ವಸ್ತುಗಳಾದವು. ನವೋದಯದ ವ್ಯಕ್ತಿ ವಿಕಸನಕ್ಕೆ ಆದರ್ಶಕ್ಕೆ ಬದಲಾಗಿ ವ್ಯಕ್ತಿತ್ವ ವಿಘಟನೆಯ ದುರಂತವನ್ನು ಶೋಧಿಸುವ ಪ್ರಕ್ರಿಯೆ ಪ್ರಾಧಾನ್ಯವನ್ನು ಪಡೆಯಿತು. ಇಂಥ ಸಂದರ್ಭದಲ್ಲಿ ಸ್ತ್ರೀ-ಪುರುಷ ಸಂಬಂಧದ ನಿರ್ವಚನವು ಆಸ್ತಿತ್ವವಾದಿ ಚಿಂತನೆಯ ಗಾಢ ಪ್ರಭಾವದಿಂದ ರೂಪಿತಗೊಂಡಿತು.
ನವ್ಯರ ‘ಕಾಮ’ದ ಕಲ್ಪನೆ, ನವೋದಯರ ಚಿಂತನೆಯಂತೆ ಆಧ್ಯಾತ್ಮಿಕ ವಿಕಾಸದಲ್ಲಿ ಕೊನೆಗೊಳ್ಳುವಂತಹುದಲ್ಲ. ವ್ಯಕ್ತಿತ್ವದ ಶೋಧಕ್ಕೆ ‘ಕಾಮ’ ವಸ್ತುನಿರ್ವಹಣೆ ಬಳಕೆಗೊಳ್ಳುತ್ತದೆ. ಒಬ್ಬೊಬ್ಬ ಲೇಖಕರಲ್ಲಿ ಒಂದೊಂದು ಮಾದರಿಯಾಗಿ ಇದು ಪ್ರಕಟಗೊಂಡಿದೆ. ನಗರೀಕರಣದ ಪ್ರಕ್ರಿಯೆಯಲ್ಲಿ ವ್ಯಕ್ತಿ ಹೆಚ್ಚೆಚ್ಚು ‘ಅಸಾಮಾಜಿಕ’ನಾಗುತ್ತ ಹೋದಂತೆಲ್ಲ ಪುರುಷನಿಷ್ಠ ‘ಅಹಂ’ನ ಮೇಲಾಗುವ ಹೊಡೆತಗಳಿಂದ ಪಾರಾಗಲು ಬಳಕೆಯಾಗುವ ಆಮೆಯ ಚಿಪ್ಪಾಗಿ ‘ಕಾಮ’ ಬಳಕೆಯಾಗುತ್ತದೆ. ಅನಂತಮೂರ್ತಿಯವರ ಕಥೆ ಕಾದಂಬರಿಗಳಲ್ಲಿ, ‘ಕಾಮ’ ಸತ್ವದ ಮೂರ್ತ ರೂಪವಾದ ಸ್ತ್ರೀಯು ಪಾಲನೆಯ, ಆಸರೆಯ, ಜೀವದಾಯಕ ಕೇಂದ್ರವಾಗಿ ಕಂಡುಬರುತ್ತಾಳೆ. ಕಾಮದಂತಹ ಬದುಕಿನ ಅತ್ಯಂತ ಖಾಸಗಿ ಸಂದರ್ಭದಲ್ಲಿ ಮಾತ್ರ ಪುರುಷ ಹೊರಜಗತ್ತಿನ ನಿರ್ದಯಿ ಆಘಾತಗಳಿಂದ ಸಂರಕ್ಷಣೆ ಪಡೆಯಬಲ್ಲವನಾಗುತ್ತಾನೆ. ಇಂಥ ರಕ್ಷಣಾ ಕಾರ್ಯವನ್ನು ನಿರ್ವಹಿಸುವ ಚೇತನವಾಗಿ ಸ್ತ್ರೀ ನವ್ಯರಿಗೆ ಮುಖ್ಯಳಾಗುತ್ತಾಳೆ. ಅನಂತಮೂರ್ತಿ, ಆಲನಹಳ್ಳಿ ಕೃಷ್ಣ, ಚನ್ನಯ್ಯ ಎಚ್.ಎಂ.ಮುಂತಾದವರ ಸಾಹಿತ್ಯಕ ನಿರೂಪಣೆಯಲ್ಲಿ ‘ಕಾಮ’ದ ವಸ್ತುವು ವ್ಯಕ್ತಿಕೇಂದ್ರಿತವಾಗಿದ್ದು ಪಾಕ್ಷಿಕವಾಗಿದೆ. ಸ್ತ್ರೀ ಮನೋಲೋಕದ ಯಾವುದೇ ಒಳಹೊರಗಿನ ಅಗತ್ಯಗಳನ್ನು ನಿರ್ಲಕ್ಷಿಸುವ ಈ ರೀತಿ ನಿರೂಪಣೆಯು ‘ಕಾಮ’ ವಸ್ತುವಿನ ಶೋಧವನ್ನು ಅಪೂರ್ಣವಾಗಿಯೇ ಉಳಿಸುತ್ತದೆ.
ಇಷ್ಟಾದರೂ ‘ಕಾಮ’ದ ಬಗೆಗೆ ಮುಕ್ತವಾಗಿ ತೊಡಗಿಸಿಕೊಳ್ಳುವುದೇ ಹೆಣ್ಣಿನ ಬಹುದೊಡ್ಡ ಸವಾಲಾಗಿರುವ ಸಾಮಾಜಿಕ ಸಂದರ್ಭಗಳ ಶೋಧವನ್ನು ಕೈಗೊಂಡ ಪ್ರಯತ್ನಗಳು ಇಲ್ಲದಿಲ್ಲ. ಡಾ.ಶಾಂತಿನಾಥ ದೇಸಾಯಿಯವರ ಕತೆ, ‘ಕ್ಷಿತಿಜ’ದ ನಾಯಿಕೆ, ಯಶವಂತ ಚಿತ್ತಾಲರ ‘ಮೂರು ದಾರಿಗಳು’ ಕಾದಂಬರಿಯ ನಾಯಿಕೆ ಇಂಥ ಸವಾಲನ್ನು ಎದುರಿಸುವ ಸತ್ವಪೂರ್ಣ ಪಾತ್ರಗಳು. ಇದೇ ನಿಟ್ಟಿನಲ್ಲಿ ರಾಜಲಕ್ಷ್ಮಿ ಎನ್. ರಾವ್ ಹಾಗೂ ವೀಣಾ ಶಾಂತೇಶ್ವರರ ಕಥಾ ಸಾಹಿತ್ಯವು ಅಸ್ತಿತ್ವವಾದಿ ಹುಡುಕಾಟದ ನೆಲೆಯಲ್ಲಿ ಮಹಿಳೆಯ ಬಿಡುಗಡೆಯ ಆಶಯ ವಸ್ತುವನ್ನು ಹೊಸ ರೀತಿಯಲ್ಲಿ ಶೋಧಿಸುತ್ತದೆ. ಪುರುಷನಿರ್ಮಿತ ಮಾದರಿಯಾಚೆಗೆ ನಿಲ್ಲಬಲ್ಲ ಮಹಿಳಾ ಸಂವೇದನೆಯ ಪ್ರತ್ಯೇಕತೆಯನ್ನು ಇವರಿಬ್ಬರಲ್ಲಿ ನಾವು ಗುರುತಿಸಬಹುದು. ಏಕೆಂದರೆ, ನವ್ಯರ ‘ಕಾಮ’ದ ಪರಿಕಲ್ಪನೆಯು ಬದುಕಿನ ಸಹಜತೆ, ಸ್ವಚ್ಛಂದತೆ, ಲವಲವಿಕೆ, ಜೀವಂತಿಕೆಗಳ ಅಮೂರ್ತ ಸಂಕೇತವಾಗಿ ಪುರುಷ ಲೇಖಕರಲ್ಲಿ ಕಾಣಿಸಿಕೊಂಡಿದೆ. ಆದರೆ ‘ಕಾಮ’ವು ಸ್ತ್ರೀಯ ಸಾಮಾಜಿಕ ಬದುಕಿನ ವಾಸ್ತವ ಭೂಮಿಕೆಯಲ್ಲಿ ಪುರುಷ ಸಾಹಿತಿಗಳು ಸೃಷ್ಟಿಸಿಕೊಂಡ ಸಂಕೇತದ ವಿರುದ್ಧ ಸ್ಥಿತಿಯನ್ನು ಹೊಂದಿದೆ. ಶಾಂತಿನಾಥ ದೇಸಾಯಿ, ಚಿತ್ತಾಲರಂಥ ಲೇಖಕರು ಈ ವೈರುಧ್ಯವನ್ನು ಗಮನಿಸಿದರೂ ಬಹಳಷ್ಟು ನವ್ಯಸಾಹಿತ್ಯದಲ್ಲಿ ಸ್ತ್ರೀಕೇಂದ್ರದಿಂದ ಬದುಕನ್ನು ಗ್ರಹಿಸುವ ರೀತಿ ಯಶಸ್ವಿಯಾಗುವುದಿಲ್ಲ. ಉದಾಹರಣೆಗಾಗಿ, ಲಂಕೇಶರ ‘ಸಂಕ್ರಾತಿ’ ನಾಟಕದ ಮುಖ್ಯ ಪಾತ್ರವಾದ ಉಷಾ ಶೂದ್ರ ರುದ್ರನ ತಲೆದಂಡಕ್ಕೆ ಕಾರಣಳಾಗುವ ಸಂದರ್ಭವನ್ನು ನೋಡಬಹುದು.ಅನಿರ್ಬಂಧಿತ ಸ್ವಚ್ಛಂದ ಬದುಕಿನ ಜೀವ ಚೈತನ್ಯವನ್ನು ಸಂಕೇತಿಸುವ ಶೂದ್ರತ್ವದ ಸಂಸ್ಕೃತೀಕರಣ ಮಾಡುವ ಬಸವಣ್ಣನ ಪ್ರಯತ್ನವನ್ನು ಲಂಕೇಶರು ಬಿಜ್ಜಳ, ಉಜ್ಜ, ಹಾಗೂ ಉಷಾ ಪಾತ್ರದ ಮೂಲಕ ನಿರಾಕರಿಸುತ್ತಾರೆ. ಉಕ್ಕುವ ಜೀವಚೈತನ್ಯದ ಸೆಲೆಯನ್ನು ರುದ್ರನಲ್ಲಿ ಕಂಡುಕೊಂಡ ಉಷಾ ಅದಕ್ಕೆ ಕಾರಣವಾದ ‘ಶೂದ್ರ’ತ್ವದ ಮಣ್ಣಿನ ವಾಸನೆಗೆ ಮಾರುಹೋದವಳು. ಬಸವಣ್ಣನಿಂದ ಸಂಸ್ಕೃತೀಕರಣಗೊಳ್ಳುವ ರುದ್ರನನ್ನು ಈ ಕಾರಣಕ್ಕಾಗಿ ಲೈಂಗಿಕವಾಗಿ ಪ್ರಚೋದಿಸಿ ‘ಶೂದ್ರ ರುದ್ರ’ನನ್ನು ದಕ್ಕಿಸಿಕೊಳ್ಳುವಲ್ಲಿ ಆಕೆ ತಾತ್ಕಾಲಿಕ ಯಶ ಪಡೆಯುತ್ತಾಳೆ. ಅದೇ, ಬಸವಣ್ಣನಿಂದ ಪ್ರೇರಿತನಾಗಿ ತನ್ನ ಜನಾಂಗದ ಉಳಿದ ಜನರನ್ನು ಬಾಹ್ಯ ಆಚರಣೆಯ ಮೂಲಕ ಬದಲಾಯಿಸಲೆತ್ನಿಸುವ ಶರಣರುದ್ರನನ್ನು ಆಕೆ ತಿರಸ್ಕರಿಸುತ್ತಾಳೆ. ಹೀಗಾಗಿ ‘ಮಣ್ಣಿನ ವಾಸನೆ’ಯನ್ನು ಅಪೇಕ್ಷೆಯಾಗಿಟ್ಟುಕೊಂಡ ‘ಶೂದ್ರ ಪ್ರಜ್ಞೆ’ಯ ವೈಭವೀಕರಣದ ನೆಲೆಯಲ್ಲಿ ನವ್ಯ ಪಂಥದ ಲೇಖಕನೊಬ್ಬನ ಮುಖವಾಣಿಯಾಗಿ ಮಾತ್ರ ‘ಉಷಾ’ಳಂತಹ ಸ್ತ್ರೀಪಾತ್ರ ನಿರ್ಮಾಣಗೊಂಡಿದೆ. ಸಂಗಾತಿಯನ್ನು ಸ್ವೀಕರಿಸುವ ತಿರಸ್ಕರಿಸುವ ಲೆಕ್ಕಾಚಾರದ ಆಚೆಗೆ ಯಾವುದೇ ರೀತಿಯ ಸ್ತ್ರೀ ಪ್ರೇಮದ ಆಳ ಭಾವನಾನುಭವಗಳ ಪ್ರಕಟಣೆಗೆ ಇಲ್ಲಿ ಅವಕಾಶವಿಲ್ಲ.
ಹೀಗೆ ನಗರೀಕರಣ, ಯಂತ್ರ ನಾಗರಿಕತೆ ಹುಟ್ಟುಹಾಕುವ ಅತಿ ಬೌದ್ಧಿಕತೆಯ ನಿಮಿತ್ತದಿಂದುಂಟಾಗುವ ಬರಡುತನವನ್ನು ಪ್ರಜ್ಞಾಪೂರ್ವಕವಾಗಿ ನೀಗಿಕೊಳ್ಳುವ ಸಾಧನವಾಗಿ ‘ಶೂದ್ರಪ್ರಜ್ಞೆ’, ‘ಸ್ತ್ರೀದೇಹ’ದ ವೈಭವೀಕರಣ ನವ್ಯರಲ್ಲಿ ಕಂಡುಬರುತ್ತದೆ. ನವ್ಯರ ಈ ಮಿತಿಯನ್ನು ಮೀರುವ ಪ್ರಯತ್ನವಾಗಿ ಬಂಡಾಯ ಸಾಹಿತ್ಯ ಸಂಘಟನೆಯು ಬಹಳ ಸ್ಪಷ್ಟವಾಗಿ ಪರ್ಯಾಯ ಸಂಸ್ಕೃತಿ ನಿರ್ಮಾಣದ ಉದ್ದೇಶವನ್ನು ಹೊಂದಿತು. ಬಂಡವಾಳಶಾಹಿ ನಾಗರಿಕತೆಯ ನಿರ್ನಿಮಿತ್ತ ಕ್ರೌರ್ಯಕ್ಕೆ ‘ಶಿಕಾರಿ’ಯಾಗುವ ಆಧುನಿಕ ಮಾನವನ ದುರಂತವನ್ನು ನವ್ಯ ಸಾಹಿತ್ಯ ಪ್ರಧಾನವಾಗಿಟ್ಟುಕೊಂಡರೂ ಸಮಾಜದ ಎಲ್ಲ ಸ್ತರದ ಜನರ ಬದುಕನ್ನೂ ಒಳಗೊಳ್ಳುವಷ್ಟು ವಿಶಾಲವ್ಯಾಪ್ತಿ ಅದಕ್ಕೆ ಒದಗಲಿಲ್ಲ. ನವ್ಯ ಸಾಹಿತ್ಯಕ್ಕೆ ತಾತ್ವಿಕ ಪ್ರೇರಣೆಯನ್ನು ನೀಡಿದ ಫ್ರಾಯ್ಡ್, ಕಾನ್ರಾಡ್, ಸಾತ್ರ್ರ್, ಕಮೂರ ವಿಚಾರಗಳು ವ್ಯಕ್ತಿಯೊಬ್ಬನ ವ್ಯಕ್ತಿತ್ವದ ಮೂಲಭೂತ ಪ್ರವೃತ್ತಿಗಳನ್ನು ಪ್ರಧಾನವಾಗಿ ವಿಶ್ಲೇಷಿಸುತ್ತವೆ. ವ್ಯಕ್ತಿಯ ಮೂಲಭೂತ ಪ್ರವೃತ್ತಿಗಳ ಬಗೆಗಿನ ಈ ತತ್ವಗಳು ಯುದ್ಧ ನಾಗರಿಕತೆಯಿಂದ ತತ್ತರಿಸಿಹೋದ ಮನುಷ್ಯನನ್ನು ಕಾಡುವ ಅನಾಥ ಪ್ರಜ್ಞೆಯನ್ನು ಅರ್ಥೈಸಿಕೊಳ್ಳುವ ಪ್ರಯತ್ನಗಳಾಗಿ ಮೂಡಿದುವು.
ಭಾರತದಂತಹ ಸಂದರ್ಭದಲ್ಲಿ ನಗರೀಕರಣದಿಂದಾದ ಒಂಟಿತನದ ನೋವಿಗಿಂತ ಬದುಕುವ ಮೂಲಭೂತ ಅವಶ್ಯಕತೆಗಳಿಂದ ವಂಚಿತವಾಗಿರುವ ದಲಿತ ಹಾಗೂ ಸ್ತ್ರೀವರ್ಗದ ಶೋಷಣೆ ಹೆಚ್ಚು ಭಯಾನಕವಾದರೂ ಸತ್ಯ. ಹೀಗಾಗಿ ನವ್ಯರ ಸಾಹಿತ್ಯದಲ್ಲಿನ ಹತಾಶೆ, ನೋವುಗಳು ಶೋಷಣೆಯ ತುದಿ ಮುಟ್ಟಿದ ವ್ಯಕ್ತಿಗಳನ್ನು ಗಮನದಲ್ಲಿಟ್ಟುಕೊಂಡಾಗ ‘ಆತ್ಮರತಿ’ ಎನಿಸದಿರದು. ನವ್ಯರ ಈ ‘ನಾನು’ ಕೇಂದ್ರವನ್ನು ಕೈಬಿಟ್ಟು ವ್ಯಕ್ತಿಗತ ದುರಂತವನ್ನು ಇಡೀ ಸಮುದಾಯದ ಶೋಷಣೆಯ ಭಾಗವಾಗಿ ಸ್ವೀಕರಿಸಿ, ಅರ್ಥೈಸಿಕೊಳ್ಳುವ ಕ್ರಮ ಬಂಡಾಯ ಹಾಗೂ ದಲಿತ ಸಾಹಿತ್ಯದಲ್ಲಿ ಕಂಡುಬರುತ್ತದೆ. 70-80ರ ದಶಕದ ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ಶೋಷಿತ ವರ್ಗದ ದನಿಗೆ ಪ್ರಾಧಾನ್ಯ ಕೊಡಲಾಯ್ತು. ಶೂದ್ರ ಹಾಗೂ ದಲಿತ ವರ್ಗದೊಂದಿಗೆ ಸ್ತ್ರೀವರ್ಗವೂ ಶೋಷಿತವೆಂದು ಪರಿಗಣಿತವಾಯಿತು. ಹೀಗಾಗಿ ಸಹಜವಾಗಿಯೇ ಮಹಿಳಾ ಅಭಿವ್ಯಕ್ತಿಗೂ ಆ ಪಂಥದಲ್ಲಿ ವಿಶಿಷ್ಟ ಸ್ಥಾನವನ್ನು ಕಲ್ಪಿಸಿಕೊಡಲಾಯಿತು.
ಮಹಿಳಾ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಒಂದು ಅಂಶವನ್ನು ಗಮನಿಸಬೇಕು. ಆ ದಶಕದಲ್ಲಿ ಬರೆಯಲಾರಂಭಿಸಿದ ಸಮಕಾಲೀನ ಮಹಿಳಾ ಕವಿಗಳನ್ನು ಬಂಡಾಯದ ಪ್ರವಾಹದಲ್ಲಿ ಗುರುತಿಸಲಾಯ್ತು. ಶೋಷಣೆಯ ವಿರುದ್ಧದ ನೇರ ಕೂಗಾಗಿ ನಿಲ್ಲುವ ದಲಿತ ಹಾಗೂ ಮಹಿಳಾ ಅಭಿವ್ಯಕ್ತಿಗೆ ಹೀಗಾಗಿ ಚಾರಿತ್ರಿಕ ಮಹತ್ವವಿದೆ. ಆದರೆ ಹೊಸಗನ್ನಡ ಮಹಿಳಾ ಸಾಹಿತ್ಯ ಪರಂಪರೆಯ ಆದ್ಯ ಪ್ರವರ್ತಕಿಯರಾದ ತಿರುಮಲೆ ರಾಜಮ್ಮ, ಆರ್.ಕಲ್ಯಾಣಮ್ಮ, ಬೆಳಗರೆ ಜಾನಕಮ್ಮ, ಸರಸ್ವತಿಬಾಯಿ ರಾಜವಾಡೆ ಮುಂತಾದವರ ಸಾಹಿತ್ಯಕ ಸಾಧನೆಯ ಬಗೆಗೆ ಮೌನ ಕಂಡುಬರುತ್ತದೆ. ಆದರೂ ಮಹಿಳಾ ವಸ್ತು ನಿರ್ವಹಣೆಯು ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ಹೊಸ ರೀತಿಯ ತಿರುವನ್ನು ಪಡೆದುಕೊಂಡಿತು. ಯಾವುದೇ ಪೂರ್ವಗ್ರಹಗಳಿಲ್ಲದ, ಶೋಷಣೆಯ ಬೇರುಗಳ ಸಂಕೀರ್ಣ ಲೋಕವನ್ನು ಓದುಗರೆದುರು ಇಡುವಲ್ಲಿ ಬಂಡಾಯ ಸಾಹಿತ್ಯ ಯಶಸ್ವಿಯಾಯಿತೆನ್ನಬಹುದು.
ಸ್ತ್ರೀ ಶೋಷಣೆಯ ವಸ್ತುವನ್ನು ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ಮನಜ, ಚದುರಂಗ ಮುಂತಾದವರ ಕಾದಂಬರಿಗಳು ಅತ್ಯಂತ ವಸ್ತುನಿಷ್ಠವಾಗಿ ನಿರ್ವಹಿಸುತ್ತವೆ. ಸ್ತ್ರೀ ಶೋಷಣೆಯ ಸಮಸ್ಯೆಯನ್ನೇ ಕೇಂದ್ರವಾಗಿಟ್ಟುಕೊಂಡು ಅದರ ಸುತ್ತ ದಲಿತ ಹಾಗೂ ಶೂದ್ರವರ್ಗದ ಪುರುಷ ಜಗತ್ತಿನ ಶೋಷಣೆಯ ಸ್ವರೂಪವನ್ನು ಚಿತ್ರಿಸುವುದು ಒಂದು ಸಾಹಿತ್ಯದ ತಂತ್ರವಾಗಿ ಕೂಡ ಕಂಡು ಬರುತ್ತದೆ. ಏಕೆಂದರೆ ಕೆಳಜಾತಿ ವರ್ಗಗಳ ಕೌಟುಂಬಿಕ ವಲಯದಲ್ಲಿ ದುಡಿಮೆಯ ಮೂಲಕ ಹೆಣ್ಣು ಪ್ರಧಾನಪಾತ್ರ ವಹಿಸುತ್ತಾಳೆ. ಇಂಥ ಸಂದರ್ಭದಲ್ಲಿ ಪುರುಷನೊಡನೆಯ ಸಮಾನ ಸ್ಥಾನಮಾನದ ಪ್ರಶ್ನೆ ಗೌಣವಾಗಿ ಬದುಕುವ ಮೂಲಭೂತ ಹೋರಾಟದಲ್ಲಿ ತನ್ನನ್ನು ತೊಟಗಿಸಿಕೊಳ್ಳುವುದೇ ಶೋಷಿತ ಸ್ತ್ರೀಗೆ ಮುಖ್ಯವಾಗುತ್ತದೆ. ದೇವನೂರ ಮಹಾದೇವರ ‘ಒಡಲಾಳ’ದ ಸಾಕವ್ವನ ಆಲೋಚನೆ ಹಾಗೂ ಚಟುವಟಿಕೆಗಳು ಬದುಕಿನ ಹೋರಾಟದಲ್ಲಿ ತನ್ನನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವ ಶೋಷಿತಸ್ತರದ ಜೀವಂತಿಕೆಯನ್ನು ಪ್ರತಿನಿಧಿಸುತ್ತವೆ. ಶೋಷಣೆಯ ಹಿಂದಿರುವ ಸಾಮಾಜಿಕ ಕಾರಣಗಳನ್ನು ವ್ಯಕ್ತಿಗತ ದುರಂತವಾಗಿ ಕಾಣದೆ ಸಾಮಾಜಿಕ ಅವನತಿಯ ಸಂಕೇತವಾಗಿ ಸ್ವೀಕರಿಸಿದಾಗ ನವ್ಯರ ‘ಆತ್ಮರತಿ’ಯು ನವೋದಯರ ‘ಆದರ್ಶಪರತೆ’ಯು ನಿರೂಪಣೆಯಲ್ಲಿ ಇಲ್ಲವಾಗುತ್ತದೆ.
ಮಹಾದೇವರ ‘ಡಾಂಬರು ಬಂದುದು’ ಕತೆಯ ‘ಹೊಸೂರ ಹೊಸ ಮಾತು’ ಭಾಗ ಬಹಳ ಸೂಕ್ಷ್ಮವಾಗಿ ಶೋಷಣೆಯ ವಿರುದ್ಧ ಅಸ್ತ್ರವಾಗಿ ಹೆಣ್ಣಿನ ಅಂತಸ್ಸತ್ವವನ್ನು ಸ್ಪೂರ್ತಿಕೇಂದ್ರವಾಗಿ ಬಳಸಿಕೊಳ್ಳಬಹುದಾದ ಸಾಧ್ಯತೆಯನ್ನು ಸೂಚಿಸುತ್ತದೆ. ನಗರೀಕರಣದ ಪ್ರಕ್ರಿಯೆಗೆ ಒಳಗಾಗುವ ಗ್ರಾಮಸಮುದಾಯದ ದುಡಿವವರ್ಗದ ಪ್ರತಿಭಟನೆ ಮೂರ್ತರೂಪವನ್ನು ಪಡೆವ ಪ್ರಕ್ರಿಯೆ ಈ ಕತೆಯಲ್ಲಿ ವಿಶಿಷ್ಟವಾಗಿದೆ. ‘ತುಂಡು ಹೈಕಳ ಕೆಡಿಸುವ’ ಹೂಸೂರ ಹೆಣ್ಣು ಪಂಚಾಯಿತಿ ಕಟ್ಟೆಯ ತೀರ್ಮಾನದಂತೆ ಹುಟ್ಟುಡುಗೆಯಲ್ಲಿ ಹುಣಸೆ ಬರಲಿನ ಏಟು ತಿನ್ನುತ್ತಾಳೆ. ಆದರೆ ಆಕೆ ಅಷ್ಟಕ್ಕೆ ಸುಮ್ಮನಿರದೆ ಪೋಲೀಸರಲ್ಲಿ ದೂರ ನೀಡುತ್ತಾಳೆ. ಆ ವ್ಯವಸ್ಥೆ ಕೂಡ ಆಕೆಯ ಪರವಾಗಿ ಸಹಾನುಭೂತಿಯುಳ್ಳದ್ದಾಗೇನೂ ಇರುವುದಿಲ್ಲ. ಅಲ್ಲಿ ಆಕೆ ‘ಬಿಚ್ಚಿ ಬಿಚ್ಚಿ’ ಹೇಳಿಕೊಳ್ಳುತ್ತಾಳೆ. ತನ್ನ ಹೆಣ್ತನದ ಪ್ರಯೋಜನ ಪಡೆದುಕೊಂಡೇ ಹಟ್ಟಿಯ ಯಜಮಾನರನ್ನು ಕೂಡ ಬಂಧಿಸುವಲ್ಲಿ ಯಶಸ್ವಿಯಾಗುತ್ತಾಳೆ. ಅರ್ಧರಾತ್ರಿಯ ಹೊತ್ತಲ್ಲಿ ಹಟ್ಟಿಯ ಬಾಗಿಲು ಬಡಿದು ಹೋದ ಈ ಸುದ್ದಿಯು ಅನಿರೀಕ್ಷಿತ ಪರಿಣಾಮವನ್ನು ಆ ಗ್ರಾಮದಲ್ಲಿ ಬೀರುತ್ತದೆ. ರಸ್ತೆಗೆ ಡಾಂಬರು ಮಾಡಿಸುವ ಕಂಟ್ರಾಕ್ಟ್ ಹಿಡಿದ ಪಟೇಲನ ವಿರುದ್ಧ ನೇರ ಪ್ರತಿಭಟನೆಯ ಸಂಕೇತವಾಗಿ ಡ್ರಮ್ಮಿನ ಡಾಂಬರನ್ನೆಲ್ಲ ಗುಂಡಿಗೆ ಉರುಳಿಸಲಾಗುತ್ತದೆ. ಶೋಷಣೆಯ ಅತ್ಯಂತ ಅಧಿಕ ಸ್ತರದಲ್ಲಿರುವ ಹೆಣ್ಣಿಗೇ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಕೆಚ್ಚು ಇರುವುದಾದಲ್ಲಿ ಅದರ ನಂತರದ ಶೋಷಣೆಯ ಸ್ತರದಲ್ಲಿರುವ ಪುರುಷ ವರ್ಗ ಮೂರ್ತ ಹೋರಾಟದಲ್ಲಿ ತನ್ನನ್ನು ತೊಡಗಿಸಿಕೊಳ್ಳದೆ ವಿಧಿಯೇ ಇಲ್ಲವಾಗುತ್ತದೆ. ಏಕೆಂದರೆ, ಶೋಷಣೆಯ ಅತ್ಯಂತ ಎತ್ತರದ ನೆಲೆಯ ವ್ಯಕ್ತಿಗಳಿಗೆ, ತತ್‍ಕ್ಷಣದ ಕ್ರಿಯೆಯಲ್ಲಿ ತೊಡಗಿದರೆ ಮಾತ್ರ ಜೀವದಿಂದಿರುವ ಏಕಮಾತ್ರ ಅವಕಾಶವಿರುತ್ತದೆ. ಅದಕ್ಕೆ ಹೊರತಾಗಿ ಯಾವುದೇ ರೀತಿಯ ರಾಜಿಗಳನ್ನು ಮಾಡಿಕೊಳ್ಳಬಲ್ಲ ಅವಕಾಶಗಳ ಸಾಧ್ಯತೆಗಳೇ ಅವರಿಗಿಲ್ಲವಾಗುತ್ತದೆ. ಆ ಅವಕಾಶ ರಾಹಿತ್ಯತೆಯೇ ಹೋರಾಟದ ಸಾಧನವೂ ಆಗುತ್ತದೆ. ಸಾವಿನ ಹಂಗು ತೊರೆದಾಗ ವಾಸ್ತವ ಸನ್ನಿವೇಶದಲ್ಲಿ ಯಾವುದೇ ರೀತಿಯ ವ್ಯವಸ್ಥೆಯ ಅಧಿಕಾರ ಶಕ್ತಿಗಳನ್ನು ಎದುರಿಸುವ ಧೈರ್ಯ ಒದಗುತ್ತದೆ. ಕುಂ.ವೀರಭದ್ರಪ್ಪನವರ ‘ದೇವರ ಹೆಣ’ ಕತೆಯ ಠೊಣ್ಣಿಯ ಪಾತ್ರ ವ್ಯಕ್ತಪಡಿಸುವ ಧೈರ್ಯ ಇಂಥದ್ದು. ಹೀಗಾಗಿ ಸ್ತ್ರೀ ಶೋಷಣೆ ಅಥವಾ ದಲಿತ ಪುರುಷ ಶೋಷಣೆಯ ನಿರೂಪಣೆಯ ನವ್ಯರ ಅಸ್ತಿತ್ವವಾಗಿ ಹುಡುಕಾಟದ ದುರಂತತೆಯನ್ನು ವ್ಯಕ್ತಪಡಿಸುವುದಿಲ್ಲ. ಅದಕ್ಕೆ ಬದಲಾಗಿ ವೈನೋದಿಕ ಅಣಕು ಶೈಲಿಯನ್ನು ಹೊಂದಿದೆ. ವೈದೇಹಿಯವರ ‘ಅಕ್ಕು’ ಕತೆಯ ನಾಯಕಿಯ ಹುಚ್ಚು ಕೂಡ ಇದೇ ನೆಲೆಯದು. ಅನ್ಯಾಯದ ವಿರುದ್ದದ ಹೋರಾಟಕ್ಕೆ ಅಹಿಂಸೆಯನ್ನು ಸಾಧನವಾಗಿ ಬಳಸಿಕೊಳ್ಳುವ ಗಾಂಧಿವಾದದ ಮಿತಿಯನ್ನು ಮೀರುವ ಪ್ರಯತ್ನವನ್ನು ದಲಿತ ಬಂಡಾಯ ಸಾಹಿತ್ಯದಲ್ಲಿ ಕಾಣುತ್ತೇವೆ. ಏಕೆಂದರೆ ಹೋರಾಟದ ಅಸ್ತ್ರವನ್ನು ‘ಸಾಧನೆ’ಯ ಮೂಲಕ ರೂಪಿಸಿಕೊಳ್ಳಬೇಕಾದ ಪ್ರಯತ್ನದ ಅವಶ್ಯಕತೆ ಶೋಷಿತ ಸ್ತ್ರೀ ಪರುಷರಿಗೆ ಒದಗುವುದಿಲ್ಲ. ಬದುಕಿನ ಚರಿತ್ರಿಕ ಗತಿತಾರ್ಕಿಕತೆಯೇ ಹೋರಾಟಕ್ಕೆ ಅತ್ಯಗತ್ಯವಾದ ಧೈರ್ಯವನ್ನು ಸಹಜವಾಗಿ ಪ್ರಕಟಪಡಿಸುವ ಪರಿಯನ್ನು ನಾವು ಕಾಣುತ್ತೇವೆ. ಮಹಿಳಾ ಬಿಡುಗಡೆಯನ್ನು ಅಧಿಕಾರ ಕೇಂದ್ರದ ನೆಲೆಯ ಕಾನೂನಿನ ವ್ಯಾಪ್ತಿಯಲ್ಲಿ ತರುವ ಪ್ರಯತ್ನಗಳ ಇತಿ-ಮಿತಿಗಳೇನೇ ಇರಲಿ. ನಿತ್ಯ ದೈನಿಕದಲ್ಲಿ ಮಹಿಳೆ ತನ್ನನ್ನು ತೊಡಗಿಸಿಕೊಳ್ಳುವ ಕ್ರಮದ ಅರ್ಥಪೂರ್ಣ ಎಚ್ಚರವೇ ಶೋಷಣೆಯಿಂದ ವಿಮೋಚನೆಯೆಡೆಗೆ ಕೊಂಡೊಯ್ಯಬಲ್ಲ ಶಕ್ತಿಯಾಗಿ ಗುರುತಿಸಲ್ಪಟ್ಟಿದೆ.