ಖೆಡ್ಡಾಕ್ಕೆ ಬೀಳಬೇಡಿ, ನುಡಿ ನೋಡಬೇಡಿ- ನಡೆ ನೋಡಿ. -ದೇವನೂರ ಮಹಾದೇವ
[3.5.2023ರಂದು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರ ಮಾಡಿದ ದೇವನೂರ ಮಹಾದೇವ ಅವರು, ಸಭೆಯನ್ನು ಉದ್ದೇಶಿಸಿ ಆಡಿದ ಮಾತುಗಳ ಅಕ್ಷರ ರೂಪ]
ನಾನು ಚುನಾವಣಾ ಭಾಷಣ ಮಾಡ್ತ ಇಲ್ಲ. ಏನಿದು ಈ ಚುನಾವಣಾ ಗೋಲ್ಮಾಲ್ ಅಂತ ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡ್ತ ಇದ್ದೇನೆ. ನಮ್ಮ ಪ್ರಧಾನಿ ಮೋದಿಯವರ ಒಂದು ಉನ್ನತವಾದ ಮಾತನ್ನು ಉಲ್ಲೇಖಿಸಿ ನನ್ನ ಮಾತು ಆರಂಭಿಸುವೆ.
2023 ಏಪ್ರಿಲ್ 30ರಂದು ಮೋದಿಯವರು ಕೋಲಾರದ ಒಂದು ಬಹಿರಂಗ ಸಭೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಾ ಹೇಳುತ್ತಾರೆ- “ರಾಜಕೀಯ ಪಕ್ಷಗಳ ಪ್ರಣಾಳಿಕೆ ಅಂದರೆ, ಅದು ಜನತಾ ಜನಾರ್ಧನನಿಗೆ ನೀಡುವ ವಾಗ್ದಾನ. ಅದನ್ನು ಆ ಪಕ್ಷ ಈಡೇರಿಸದೇ ಇದ್ದರೆ ಅದು ಮಹಾಪಾಪ” ಅನ್ನುತ್ತಾರೆ. ತುಂಬಾ ಖಚಿತವಾಗಿ ತುಂಬಾ ಆತ್ಮವಿಶ್ವಾಸದಿಂದ ನುಡಿಯುತ್ತಾರೆ.
ಆಯ್ತು, ಸ್ವಲ್ಪ ಹಿಂದಕ್ಕೆ ಹೋಗೋಣ. ಇಸವಿ 2013-2014. ಆಗ ಮೋದಿಯವರು ಬಿಜೆಪಿ ಪಕ್ಷದ ಘಟಾನುಘಟಿ ನಾಯಕರುಗಳನ್ನೆಲ್ಲ ತುಳಿದು ತಾನೇ ಮುಂಚೂಣಿ ನಾಯಕರಾಗಿ ಹೊರಹೊಮ್ಮಿ 2014ರ ಪಾರ್ಲಿಮೆಂಟ್ ಚುನಾವಣೆಯ ಬಿಜೆಪಿ ಪಕ್ಷದ ಪ್ರಣಾಳಿಕೆ ಬಗ್ಗೆ ಮಾತಾಡುತ್ತ ಅಂತಾರೆ –“ನಾವು ಪ್ರಣಾಳಿಕೆಯಲ್ಲಿ ಹೇಳಿದ್ದೀವಿ. ಸಂಕಲ್ಪ ಮಾಡಿದ್ದೀವಿ. ರೈತರ ಫಸಲಿಗೆ ಖರ್ಚುವೆಚ್ಚ ಕೊಡಿಸಿ ಅದರ ಮೇಲೆ ಶೇಕಡ 50ರಷ್ಟು ಬೆಂಬಲ ಬೆಲೆ ನೀಡುತ್ತೇವೆ” ಎಂದು ಹೇಳಿದ್ದರು. ಆದರೆ ರೈತರ ಬೆಳೆಗಳಿಗೆ ಕಾಂಗ್ರೆಸ್ ಕಾಲದಲ್ಲಿ ಸಿಗುತ್ತಿದ್ದುದಕ್ಕಿಂತಲೂ ಮೋದಿಯವರ ಜಮಾನದಲ್ಲಿ ಕಮ್ಮಿಯೇ ಆಗಿ ಬಿಡ್ತು! ಈ ಬಗ್ಗೆ Eedina.comನಲ್ಲಿ ಬಿ.ಸಿ.ಬಸವರಾಜು ತುಂಬಾ ಚೆನ್ನಾಗಿ ಬಿಚ್ಚಿಟ್ಟಿದ್ದಾರೆ.
ಮೋದಿಯವರು ಆಡಿದ್ದ ಆ ಮಾತುಗಳನ್ನು ಮತದಾರರು ತುಂಬಾ ತುಂಬಾ ನಂಬಿದ್ದರು. ಬಹಳ ಬಹಳ ಬೆಲೆ ಕೊಟ್ಟಿದ್ದರು. ಈಗಲೂ ಒಂದಿಷ್ಟು ಜನ ನಂಬುತ್ತಿದ್ದಾರೆ. ಯಾಕೆಂದರೆ, ಮೋದಿಯವರ ಮಾತಿನ ವೈಖರಿ ಆ ರೀತಿ ಇದೆ. ಇಲ್ಲಿ ನನ್ನ ಪ್ರಶ್ನೆ ಇಷ್ಟೆ. ‘ಮೋದಿಯವರೇ ನಿಮ್ಮ ಮಾತಿಗೆ ನಮ್ಮ ಜನ ಇಷ್ಟೊಂದು ಬೆಲೆ ಕೊಟ್ಟಿದ್ದಾರೆ. ಇಷ್ಟೊಂದು ಗೌರವ ಕೊಟ್ಟಿದ್ದಾರೆ. ಇಷ್ಟೊಂದು ನಂಬಿದ್ದಾರೆ. ಹೀಗಿರುವಾಗ ನಿಮ್ಮ ಮಾತಿನ ಬಗ್ಗೆ ನಿಮಗೆ ಬೆಲೆ ಇಲ್ಲವೆ? ನಿಮ್ಮ ಮಾತನ್ನು ನೀವೇ ನಂಬೋದಿಲ್ಲವೆ?”
ಚುನಾವಣಾ ಪ್ರಣಾಳಿಕೆ ವಾಗ್ದಾನದ ಬಗ್ಗೆ ಗೃಹ ಸಚಿವ ಅಮಿತ್ ಷಾ ಅವರನ್ನು ಕೇಳಿದರೆ, ಅವರು ‘ಹೇ, ಅದೆಲ್ಲಾ ಚುನಾವಣಾ ಜುಮ್ಲಾ’ ಅಂತ ಹುಸಿನಕ್ಕು ಹೇಳುತ್ತಾರೆ. ಈ ಮಾತು ಕೇಳಿ ನಾನು ಬೆಚ್ಚಿ ಹೋದೆ. ಜುಮ್ಲಾ ಅಂದರೆ ಸುಳ್ಳು ಅಂತ ಅರ್ಥ! ಗೃಹ ಸಚಿವರ ಪ್ರಕಾರ ಜನತೆಗೆ ನೀಡುವ ವಾಗ್ದಾನ ಅಂದರೆ, ಅದು ಚುನಾವಣಾ ಸುಳ್ಳು! ಅಂದರೆ, ಅದು ಮತದಾರರನ್ನು ಗುಂಡಿಗೆ ಬೀಳಿಸುವ ಖೆಡ್ಡಾ, ಜನಸಾಗರಕ್ಕೆ ಬಲೆ ಹಾಕಿ ಜನರನ್ನು ಮೀನಿನಂತೆ ಹಿಡಿಯುವ ಬಲೆ. ಇವರದು ಜುಮ್ಲಾ ಪಕ್ಷ.
ಒಂದಂತೂ ನಿಜ. ಯಾವ ಆತ್ಮಸಾಕ್ಷಿ ಇರುವ ಮನುಷ್ಯನೂ ಇಂಥಹ ವಾಗ್ದಾನ ನೀಡಲಾರ! ಅಕಸ್ಮಾತ್ ವಾಗ್ದಾನ ನೀಡಿದ್ದು ಮಾತಿಗೆ ತಪ್ಪಿದರೆ, ಪಶ್ಚಾತ್ತಾಪ ಪಡುತ್ತಾನೆ. ಪಶ್ಚಾತ್ತಾಪದ ಲವಶೇಷವೂ ಮೋದಿಯವರಲ್ಲಿ ಕಂಡು ಬರುವುದಿಲ್ಲ. ಅದಕ್ಕೆ ಪ್ರಧಾನಿ ಮೋದಿಯವರ ಮಾತುಗಳು ಒಂದು ಯಂತ್ರದ ಮಾತಿನಂತಿವೆ. ಅದರಿಂದಲೇ ಅವರು ಈ ಹಿಂದೆ 2013-14ರ ಚುನಾವಣೆಯಲ್ಲಿ ಮಾತಾಡಿದ್ದನ್ನೇ ಯಥಾವತ್ತಾಗಿ ಈಗಿನ 2023ರ ಚುನಾವಣೆಯಲ್ಲೂ ಮಾತಾಡುತ್ತಾರೆ. ಟೇಪ್ ರೆಕಾರ್ಡ್ರನ್ನು ಆನ್ ಮಾಡಿದಂತೆ ಅವವೇ ಮಾತು, ಅದೇ ಶೈಲಿಯಲ್ಲಿ ನಾಟಕೀಯವಾಗಿ ಮಾತಾಡುತ್ತಾರೆ. ಕೇಳುತ್ತ ಕೆಲವರು ಆನಂದಿಸುತ್ತಲೂ ಇರಬಹುದು. ಇದು ನನಗೆ, ಭಾರತದ ದುರಂತ ಅಂತ ಕಾಣಿಸುತ್ತದೆ.
ಒಂದು ಮನವಿ ಮಾಡುತ್ತಿದ್ದೇನೆ… ದಯವಿಟ್ಟು ಖೆಡ್ಡಾಕ್ಕೆ ಬೀಳಬೇಡಿ. ಬಲೆಗೆ ಸಿಗಬೇಡಿ. ನುಡಿ ನೋಡಬೇಡಿ, ನಡೆ ನೋಡಿ. ಖೆಡ್ಡಾಕ್ಕೆ ಬಿದ್ದರೆ, ಬಲೆಗೆ ಸಿಕ್ಕಿ ಹಾಕಿಕೊಂಡರೆ, ಎಚ್ಚರ ತಪ್ಪಿ-ಮತ ನೀಡಿದರೆ ನಮ್ಮ ಬದುಕು ಇನ್ನೂ ಹೆಚ್ಚು ನರಕವಾಗುತ್ತದೆ. ಪೆಟ್ರೋಲ್, ಗ್ಯಾಸ್, ಕಾಳೂ, ಎಣ್ಣೆ, ಅದು ಇದು ಅನ್ನದೆ ಎಲ್ಲದರ ಬೆಲೆಯು ಇನ್ನೂ ಹೆಚ್ಚುತ್ತದೆ. ಈಗಾಗಲೇ ಮಹಿಳೆಯರು ಬೆಲೆ ಏರಿಕೆ ಬವಣೆಗೆ ಶಾಪ ಹಾಕ್ತಾ ಇದ್ದಾರೆ. 2014ರಲ್ಲಿ ವರ್ಷಕ್ಕೆ ಒಂದು ಕೋಟಿ ಉದ್ಯೋಗ ನೀಡ್ತೀನಿ ಎಂದ ಮೋದಿಯವರ ಮಾತನ್ನು ನಂಬಿ ಮತ ಕೊಟ್ಟು ಗೆಲ್ಲಿಸಿ ಇದ್ದಬದ್ದ ಉದ್ಯೋಗಾನೂ ಕಳ್ಕಂಡು ಕೂತಿದ್ದೀವಿ. ಉದ್ಯೋಗ ಸೃಷ್ಟಿಸುತ್ತಿದ್ದ ಸಣ್ಣ ಕೈಗಾರಿಕೆ, ಅತಿ ಸಣ್ಣ ಕೈಗಾರಿಕೆಗೆ ಉತ್ತೇಜನ ಕೊಡದೆ ಅವು ಲಕ್ಷಾಂತರ ಸಂಖ್ಯೆಯಲ್ಲಿ ಮುಚ್ಚಿಹೋಗಿವೆ. ಆದರೆ ಇನ್ನೊಂದು ಕಡೆಗೆ ಪ್ರಧಾನಿಯವರ ಪರಮಾಪ್ತ ಅದಾನಿ ಬಂಡವಾಳಶಾಹಿ ಸಂಪತ್ತು ಡಬಲ್ ಅಂದರೆ ದ್ವಿಗುಣ ಆಗಿದೆ. ನೋಡಿ, ಜನರು ಕರೋನಾದಲ್ಲಿ ಸಿಲುಕಿ ಆಕ್ರಂದನ ಮಾಡ್ತಾ ಇರುವಾಗಲೇ ಉಳ್ಳವರ ಸಂಪತ್ತು ಡಬಲ್ ಆಗಿದೆಯಲ್ಲಪ್ಪಾ! ಬಡವರ ಸಂಖ್ಯೆಯು ಹೆಚ್ಚುತ್ತಿದೆಯೆಲ್ಲಾ! ಮಧ್ಯಮ ವರ್ಗ, ಬಡತನ ರೇಖೆ ಕಡೆ ಚಲಿಸುತ್ತಿದೆಯಲ್ಲಾ! ಮೋದಿಯವರ ಇನ್ನೊಂದು ವಾಗ್ದಾನ – “ವಿದೇಶದಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ ತಂದು ಎಲ್ಲಾ ಭಾರತೀಯ ಪ್ರಜೆಗಳ ಅಕೌಂಟ್ಗೆ 15 ಲಕ್ಷ ಹಾಕುತ್ತೇನೆ” ಎಂದ ಈ ಮಾತನ್ನು ನಂಬಿಕೊಂಡು ನಮ್ಮ ಜನ, ಅಕೌಂಟ್ ಓಪನ್ ಮಾಡ್ಕೊಂಡು ಆಸೆಯಿಂದ ಕಾಯ್ತಾ ಕೂತಿದ್ದಾರೆ. ದಕ್ಷಿಣಕನ್ನಡದ ಜಿಲ್ಲೆಯಲ್ಲಿ – ‘ನಮ್ಮ ಅಕೌಂಟ್ಗೆ ಹಣ ಇನ್ನೂ ಬಂದಿಲ್ಲ’ ಎಂದು ಜನ ಪ್ರಶ್ನಿಸುತ್ತಿರುವುದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಹೀಗೆ ಎಲ್ಲರನ್ನೂ ಪ್ರಶ್ನಿಸುವ ಎಚ್ಚರದ ಪ್ರಜ್ಞೆ ಎಲ್ಲರಲ್ಲೂ ಬರಬೇಕಿದೆ. ಇದು ಇಂದಿನ ಅಗತ್ಯ.
ಇಂದಿನ ರಾಜಕಾರಣದ ಒಳಹೊಕ್ಕು ನೋಡುವುದಾದರೆ, ಬಿಜೆಪಿಯಲ್ಲಿದ್ದ ಬೃಹತ್ ವೃಕ್ಷ ಯಡ್ಯೂರಪ್ಪ ಎಂಬ ಮರಕ್ಕೆ ವಿಷದ ಇಂಜೆಕ್ಷನ್ ಚುಚ್ಚಿ ಅದು ತಾನೇ ಒಣಗುವಂತೆ ಮಾಡಲಾಗಿದೆ. ಇನ್ನೆರಡು ಬಲಿಷ್ಠ ವೃಕ್ಷಗಳಾದ ಜಗದೀಶ್ ಶೆಟ್ಟರ್ ಮತ್ತು ಲಕ್ಷಣ್ ಸವದಿಯವರನ್ನು ಬುಡಸಮೇತ ಕತ್ತರಿಸಿ ಎಸೆಯಲಾಗಿದೆ. ಇದ್ದುದರಲ್ಲಿ ಇದೂನು ಸ್ವಲ್ಪ ಗಟ್ಟಿಮರ ಅನ್ನಬಹುದಾದ ಸೋಮಣ್ಣನವರಿಗೆ ಪನಿಷ್ಮೆಂಟ್ ಟ್ರಾನ್ಸ್ಫರ್ ಮಾಡಿ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮಾಡಲಾಗಿದೆ. ಮತ್ತೂ ಒಂದು, ಮುಂದೆ ತುಂಬಾ ಚೆನ್ನಾಗಿ ಬೆಳೆದು ಬಿಡುತ್ತದೆ ಎಂದು ಭರವಸೆ ಹುಟ್ಟಿಸಿರುವ ಎಳೆ ಮರವನ್ನು ಸೋಲಿಸಲು ಬಿಜೆಪಿ ಪಕ್ಷದ ಗರ್ಭಗುಡಿಯವರೇ ಸಂಚು ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಇದುವರೆಗೆ ನಾನು ಉಲ್ಲೇಖಿಸಿದ ವ್ಯಕ್ತಿಗಳ ಬಗ್ಗೆ ನಮ್ಮ ಆಕ್ಷೇಪಣೆಗಳು ಏನೇ ಇರಲಿ. ನಾವು ಈ ವಿದ್ಯಮಾನದ ಮರ್ಮ ನೋಡಬೇಕಾಗಿದೆ.
ಈ ಬಗ್ಗೆ ನನಗೆ ಅನ್ನಿಸುವುದು ಇಷ್ಟೆ. ಆರ್.ಎಸ್.ಎಸ್. ಮತ್ತು ಬಿಜೆಪಿ ಪಕ್ಷಗಳಿಗೆ ರಾಜ್ಯದಲ್ಲಿ ಜನನಾಯಕರು, ಸಮುದಾಯ ನಾಯಕರು ಬೇಕಾಗಿಲ್ಲ. ಜೊತೆಗೆ ಬಿಜೆಪಿ ರಾಷ್ಟ್ರೀಯಪಕ್ಷ ಅಂತಾರಲ್ಲಾ, ಆ ಪಕ್ಷದಲ್ಲಿ ಇರುವವರು ಎಷ್ಟು ಜನ? ಮೂರು ಮತ್ತೊಂದು ಜನ ಮಾತ್ರ! ಒಬ್ಬರು ಮೋದಿ, ಇನ್ನೊಬ್ಬರು ಅಮಿತ್ ಷಾ, ಅರ್ಧಂಬರ್ಧ ಯೋಗಿ ಆದಿತ್ಯನಾಥ್, ಇನ್ನೊಬ್ಬರು ಅದಾನಿ ಹಾಗೇ ಇನ್ನರ್ಧ ಇನ್ಯಾರೋ. ಇಷ್ಟೇನೆ. ಇದನ್ನೇ ರಾಜ್ಯಗಳಲ್ಲೂ ಚಲಾವಣೆ ಮಾಡಲು ಹೊರಟಿದ್ದಾರೆ. ಈಗ ಲಿಂಗಾಯತರು ಆಯ್ತು, ಮುಂದೆ ಒಕ್ಕಲಿಗ ಜನನಾಯಕರಿಗೂ ಕಾದಿದೆ. ಒಟ್ಟಿನಲ್ಲಿ ಯಾವುದೇ ಜಾತಿಯ ಜನನಾಯಕರಿಗೂ ಕೂಡ ಇದು ಕಾದಿದೆ. ಕೊನೆಗೆ ಇಲ್ಲೂ ರಾಜ್ಯದಲ್ಲೂ ಪ್ರಹ್ಲಾದ್ ಜೋಷಿ, ಸಂತೋಷ್, ಮತ್ತೊಬ್ಬರಿಗಷ್ಟೆ ಅವಕಾಶ. ಇದು ಬಿಜೆಪಿಯ ಗರ್ಭಗುಡಿ ಆರ್.ಎಸ್.ಎಸ್.ನ ಫತ್ವಾ ಫರ್ಮಾನ್! ಇದು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಎಂದರೆ, ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಮತ್ತು ಇಟಲಿಯ ಫ್ಯಾಸಿಸ್ಟ್ ಮುಸಲೋನಿಯವರ ಮಿಶ್ರತಳಿ ಆಳ್ವಿಕೆ ಕಡೆಗೆ. ಇದು ಎಲ್ಲಕ್ಕಿಂತಾ ದೊಡ್ಡ ಅಪಾಯ, ಡೇಂಜರ್.
ಬಿಜೆಪಿಯವರು ತಮ್ಮದು ಕಾರ್ಯಕರ್ತರ ಪಕ್ಷ ಎನ್ನುತ್ತಾರೆ. ಅವರು ಹೇಳುವಂತೆ ಅದು ಕಾರ್ಯಕರ್ತರ ಪಕ್ಷವಲ್ಲ. ಅದು ಕಾಲಾಳುಗಳ ಪಕ್ಷ. ಹೀಗೆ ಯಾಕೆ ಮಾಡುತ್ತಾರೆಂದರೆ, ಕಾಲಾಳುಗಳ ಪಕ್ಷವಾದರೆ ಮಾತ್ರ ಅವರು ಸಂವಿಧಾನವನ್ನು ಬದಲಾಯಿಸಲು ಸಾಧ್ಯವಾಗುತ್ತದೆ. ಸಂವಿಧಾನ ಬದಲಾಯಿಸಿದರೆ ಮಾತ್ರ ಚಾತುರ್ವರ್ಣದ ಮನುಧರ್ಮ ಶಾಸ್ತ್ರವನ್ನು ಭಾರತದ ಸಂವಿಧಾನವನ್ನಾಗಿಸಬಹುದು. ಇದನ್ನೇ ಅವರು ಹಿಂದೂ ರಾಷ್ಟ್ರ ಎನ್ನುತ್ತಿರುವುದು. ಆರ್.ಎಸ್.ಎಸ್. ಸಂಘ ಪರಿವಾರ, ಬಿಜೆಪಿಗಳ ಆರಾಧ್ಯ ದೈವಗಳಾದ ಶ್ರೀ ಗೋಳ್ವಾಲ್ಕರ್, ಶ್ರೀ ಸಾವರ್ಕರ್ ಅವರ ಉತ್ಕಟ ಬಯಕೆ ಇದೇ ಆಗಿತ್ತು. ಅದನ್ನು ಈಡೇರಿಸಲು ಸಂಘಪರಿವಾರ ಬಿಜೆಪಿ ಪಣತೊಟ್ಟು ನಿಂತಿದೆ.
ಒಬ್ಬ ದಲಿತ ಹುಡುಗ ಹೇಳ್ದ: “ ನಮ್ಮ ಸಂವಿದಾನ ಬದಲಾಯಿಸಿ ಅವರ ಮನುಧರ್ಮ ಶಾಸ್ತ್ರದ ಸಂವಿಧಾನ ತರೋದ್ ಅಂದ್ರೆ ಏನು ಸಾರ್? ನಾವು ಊರಾಚೆ ಇದ್ದವರು ಅಷ್ಟೋ ಇಷ್ಟೋ ಮೇಲಕ್ಕೆ ಬರ್ತಾ ಇದ್ದೀವಿ. ಅದನ್ನು ತಡೆದು ನಮ್ಮನ್ನು ಮತ್ತೆ ಆಚೆ ಇಡೋದು ತಾನೆ? ಓದೋ ಮಕ್ಕಳ ಸ್ಕಾಲರ್ಷಿಪ್ ಹೆಂಗ್ ಮಾಡ್ಬಿಟ್ರು ನೋಡಿ, ಹಾಗೇನೆ ಒಕ್ಕಲಿಗರು ಲಿಂಗಾಯತರು ಹಿಂದೆ ಶೂದ್ರರಾಗಿದ್ದವರು ತಾನೆ? ಶೂದ್ರರು ಎಂದರೆ ಸೇವಕರು ತಾನೆ? ಸೇವಕರಾಗಿದ್ದ ಅವರು, ಸೇವಕ ಪಟ್ಟ ಕಳ್ಕೊಂಡು ಎಲ್ಲರ ಸಮಾನವಾಗಿ ಈಗ ಬದುಕ್ತಾ ಇದ್ದಾರೆ. ಅವರು ಮತ್ತೆ ಸೇವಕರಾಗಬೇಕಾ? ಇನ್ನೂ ಸಣ್ಣಪುಟ್ಟ ತಳಸಮುದಾಯಗಳ ಕತೆ ದೇವರಿಗೇ ಪ್ರೀತಿ” ಅಂದ. ಹಾಗೇ ಒಬ್ಬ ಬ್ರಾಹ್ಮಣ ಹುಡುಗ “ಅಂಬೇಡ್ಕರ್ ನಾಯಕತ್ವದಲ್ಲಿ ರಚಿತವಾದ ಸಂವಿಧಾನ ಬಾರದೇ ಇದ್ದರೆ ಬಹುತೇಕ ಬ್ರಾಹ್ಮಣರು ಮನುಷ್ಯರಾಗುತ್ತಿರಲಿಲ್ಲ” ಎಂದು ಹೇಳುತ್ತಾನೆ. ಈ ಮಾತುಗಳನ್ನು ನಾವು ಆಲಿಸಬೇಕಾಗಿದೆ. ಭಾರತದ ಸಂವಿಧಾನ ಕಾಪಾಡಬೇಕಾಗಿದೆ. ಮನುಧರ್ಮ ಶಾಸ್ತ್ರದ ತಾರತಮ್ಯದ ಅನಾಗರಿಕ ಆಲೋಚನೆಗಳ ಕಳೆಗಳನ್ನು ಬುಡಸಮೇತ ಕಿತ್ತೊಗೆಯಬೇಕಾಗಿದೆ. ಹಾಗಾಗಿಯೇ ಈಗ ಬಿಜೆಪಿಯನ್ನು ಸೋಲಿಸಬೇಕಾಗಿದೆ.
ಈಗ ನಡೆಯುತ್ತಿರುವ ಚುನಾವಣೆ ಹಾಗೂ ಮುಂಬರುವ ಪಾರ್ಲಿಮೆಂಟ್ ಚುನಾವಣೆಗಳಲ್ಲಿ ಸ್ಪರ್ಧೆ ಇರುವುದು- ಭಾರತದ ಹಾಲಿ ಸಂವಿಧಾನ ಹಾಗೂ ಭಾರತದ ಮಾಜಿ ಸಂವಿಧಾನವಾದ ಮನು ಧರ್ಮಶಾಸ್ತ್ರದ ನಡುವೆ. ನಾವು ಭಾರತದ ಹಾಲಿ ಸಂವಿಧಾನವನ್ನೂ ಕಾಪಾಡಿಕೊಳ್ಳಬೇಕಾಗಿದೆ. ಹಾಗೇ ಮಾಜಿ ಸಂವಿಧಾನವಾದ ಸಂಘ ಪರಿವಾರದ ಬಿಜೆಪಿಯನ್ನೂ ಸೋಲಿಸಬೇಕಾಗಿದೆ.
ನನ್ನ ಮಾತು ತುಂಬಾ ಜಾಸ್ತಿ ಆಯ್ತು, ಕ್ಷಮೆ ಇರಲಿ. ಮತ್ತೆ? ಹೇಗಿದೆ ಈ ಕಡೆ ಮಳೆಬೆಳೆ? … ನಾನು ಮಳೆಬೆಳೆ ಅಂದದ್ದು ಚುನಾವಣೆಯ ಹಣದ ಮಳೆಯ ಬಗ್ಗೆ. ಇತ್ತೀಚಿನ ಚುನಾವಣೆಗಳಲ್ಲಿ ಬೆಂಗಳೂರಿನ ವೃಷಭಾವತಿ ಕೊಳಚೆ ಕಪ್ಪುನೊರೆ ನೀರಿನಂತೆ, ಕಪ್ಪುಹಣ ರಾಜ್ಯದ ಉದ್ದಗಲಕ್ಕೂ ಹರಿದಾಡುತ್ತಿದೆ. ಈ ಬಗ್ಗೆ ಮೇಲುಕೋಟೆ ಕ್ಷೇತ್ರದಲ್ಲಿ ಒಬ್ಬರನ್ನು ಕೇಳಿದೆ. ಬಹುಶಃ ಅವರು ಲಿಂಗಾಯತರು ಇರಬೇಕು. ಅವರು ಹೇಳಿದರು: “ಅಲ್ಲಮಪ್ರಭುವಿನ ಒಂದು ವಚನವಿದೆ – ‘ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ!-ಅಂತ’ ನಮ್ಮ ಮತದಾರರ ಹಣೇಲಿ ದುಃಖ ಬರೆದಿರಬೇಕು. ಅದಕ್ಕೇ ಒಂದು ದಿನದ ಆಮಿಷಗಳಿಗೆ ಬಲಿಪಶುಗಳಾಗುತ್ತಿದ್ದಾರೆ” ಎಂದರು. ಇನ್ನೊಬ್ಬರು – “ಇವರು ಹಂಚ್ತಾ ಇರೋದು ಯಾರ ದುಡ್ಡು? ಅದು ಅವರ ಅಪ್ಪನ ಮನೇದಲ್ಲ, ಬೆವರು ಸುರಿಸಿ ದುಡಿದ ದುಡ್ಡಲ್ಲ. ಜನರ ತೆರಿಗೆ ದುಡ್ಡು. ಕಮಿಷನ್ ಪಡೆದ ದುಡ್ಡು. ಅದರಲ್ಲಿ ಒಂದಿಷ್ಟು ನಮಗೆ ಕೊಟ್ಟರೆ ಅದು ನಮ್ಮದೇ ಹಣವಾದ್ದರಿಂದ ನಾವು ಪ್ರತಿಜ್ಞೆ ಮಾಡಿ ಮತ ಕೊಡದಿದ್ದರೂ ಅದರಿಂದೇನೂ ಪಾಪ ಅಂಟಲ್ಲ” ಅಂದರು. ನೂರು ಜನ ಕೇಳಿದರೆ ನೂರು ತರಹ ಹೇಳ್ತಾರೆ. ಒಟ್ಟಿನಲ್ಲಿ ಮತದಾರರು ಪ್ರಶ್ನೆ ಮಾಡ್ತ ಇದ್ದಾರೆ. ಒಂದು ರೀತಿಯ ಜಾಗೃತಿಯೂ ಬಂದಿದೆ. ಈ ಚುನಾವಣೆಯಲ್ಲಿ ಹಣದ ಗರ್ವಭಂಗವಾಗುತ್ತದೆ ಅನ್ನಿಸುತ್ತಿದೆ.
ಕೊನೆಯದಾಗಿ ಒಂದೆರಡು ಕಿವಿಮಾತು; ಇಡೀ ವರುಣ ಕ್ಷೇತ್ರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಒಳಗೆ ಕಲ್ಲಿಟ್ಟು ಅದರ ಸುತ್ತ ಹೂ ಸುತ್ತಿ ಡಾ.ಜಿ.ಪರಮೇಶ್ವರ್ ಅವರ ತಲೆಗೆ ಎಸೆದು ರಕ್ತ ಬರಿಸಿದ್ದಾರಲ್ಲಾ ಅದು ಇಲ್ಲೂ ಆಗಬಹುದು. ಹೂ ಸುತ್ತಿ ಕಲ್ಲು ಹೊಡೆಯುವುದು ಸಂಘಪರಿವಾರದ ರಾಜಕಾರಣದ ವೈಖರಿ. ನೆನಪಿಡಿ, ಈ ಹಿಂದೆ ರಾಜ್ಯದ ಬಿಜೆಪಿಯ ನಾಯಕರೊಬ್ಬರು ‘ಕ್ಷೇತ್ರದಲ್ಲಿ ಒಂದು ಹೆಣ ಬೀಳಿಸಿದರೆ, ಎರಡು ಕ್ಷೇತ್ರದಲ್ಲಿ ಗೆದ್ದಂತೆ’ ಎಂದು ಹೇಳಿದ್ದು ಸುದ್ದಿಯಾಗಿತ್ತು! ಶ್ರೀ ಪ್ರಿಯಾಂಕ್ ಖರ್ಗೆ ವಿರುದ್ಧ ಗಡಿಪಾರು ಆಗಿದ್ದ ರೌಡಿ ಶೀಟರ್ ವ್ಯಕ್ತಿಯನ್ನು ಬಿಜೆಪಿ ನಿಲ್ಲಿಸಿದೆ. ಆತ ಪಿಸ್ತೂಲು ತಿರುಗಿಸ್ತಾ ಠೇಂಕಾರದ ಫೋಸ್ ಕೊಡುತ್ತಿದ್ದಾನೆ. ಇಂತಹ ಭೂಗತ ರಾಜಕಾರಣ ಇಂದು ನಡೆಯುತ್ತಿದೆ. ದಯವಿಟ್ಟು ಎಚ್ಚರವಿರಿ. ಹೊಡಿಬಡಿ ರಕ್ತಪಾತದ ರಾಜಕರಣ ಆಗದಂತೆ ಎಚ್ಚರ ವಹಿಸಬೇಕಾಗಿದೆ. ನಮ್ಮ ಪೊಲೀಸ್ ವ್ಯವಸ್ಥೆ, ಎಲ್ಲಾ ಸ್ಪರ್ಧಿಗಳು ಅದರಲ್ಲೂ ಮುಖ್ಯವಾಗಿ ಬಿಜೆಪಿಯ ಅಭ್ಯರ್ಥಿ ಸೋಮಣ್ಣನವರ ಮೇಲೆ ಜವಾಬ್ದಾರಿ ಹೆಚ್ಚಿದೆ ಅನ್ನಿಸುತ್ತಿದೆ. ಇದನ್ನು ಅವರಿಗೆಲ್ಲ ನೆನಪಿಸುತ್ತಿರುವೆ.