ಕೈ ಹತ್ತದ ಬಿ ಟಿ ಹತ್ತಿ, ಸರಕಾರದ ಜುಜುಬಿ ಪರಿಹಾರ – ಕೆ.ಪಿ. ಸುರೇಶ
ಭೀಕರ ಸೆಕೆಗಾಲ ರಾಜ್ಯವನ್ನು ಹುರಿದು ಮುಕ್ಕುತ್ತಿದೆ. ನೀರಿನ ಮೂಲಗಳೆಲ್ಲಾ ಆರಿ ಹಾಹಾಕಾರ ಎದ್ದಿದೆ. ಆದರೆ ಮುಂದಿನ ಹಂಗಾಮಿನಲ್ಲಿ ಒಳ್ಳೆಯ ಮಳೆಯಾಗುತ್ತದೆ ಎಂಬ ಭವಿಷ್ಯವಾಣಿ ಹವಾಮಾನ ಇಲಾಖೆಯಿಂದ ಬಂದಿದೆ. ರೋಹಿಣಿ ಮಳೆ ವೇಳೆಗೆ ರೈತರು ಎಷ್ಟೇ ಚಿಂದಿಯಾಗಿದ್ದರೂ ಮತ್ತೆ ಆಶಾಭಾವನೆಯಿಂದ ಹೊಲಕ್ಕಿಳಿಯುತ್ತಾರೆ. ಇದೊಂತರ ಮಾತೃಸಹಜ ಪ್ರವೃತ್ತಿ. ಆರಂಬವೆಂದರೆ ಮತ್ತೆ ಮತ್ತೆ ಅದೇ ಮಣ್ಣಿಗೆ ಮರಳುವುದು. ಎಷ್ಟೋ ಬಾರಿ ಅದೇ ಬೆಳೆಗಳನ್ನು ಪುನರಾವರ್ತಿಸುವುದು. ವರ್ಷದ ಹಿಂದೆ ಮಾಡಿದ್ದ ಅಷ್ಟೂ ಕೈಂಕರ್ಯಗಳನ್ನು ಮತ್ತೆ ಅದೇ ಧ್ಯಾಸದಲ್ಲಿ ಮಾಡುವುದು. ಇತ್ತ ರೈತರ ಮನೋಸ್ಥೈರ್ಯ ಹೆಚ್ಚಿಸಲು ಸರ್ಕಾರವೂ ತಾನು ರೈತರ ಅಗತ್ಯಕ್ಕೆ ಸಜ್ಜಾಗಿದ್ದೇನೆ ಎನ್ನುತ್ತಿದೆ. ಕೃಷಿ ಹಂಗಾಮಿಗೆ ಸಜ್ಜಾಗುವುದು ಎಂದರೇನು? ಸರ್ಕಾರ ಸನ್ನದ್ಧವಾಗುವುದು ಎಂದರೇನು?
ಕಳೆದ ಸಾಲಿನ ರಾಯಚೂರಿನ ಹತ್ತಿ ರೈತರ ದುರಂತ ಸರ್ಕಾರದ ಈ ಔಪಚಾರಿಕ ಮಾತುಗಳ ಬಗ್ಗೆ ಬೆಳಕು ಚೆಲ್ಲೀತು ಈ ರಾಯಚೂರು ಜಿಲ್ಲೆಯ ಇಕ್ಕೆಲಗಳಲ್ಲಿ ತುಂಗೆ ಕೃಷ್ಣೆ ಹರಿಯತ್ತಿದ್ದಾರೆ. ಈ ಜಿಲ್ಲೆಯನ್ನು ನಂದನವನವಾಗಿಸಲು ಇವೆರಡು ನದಿಗಳು ಸಾಕು. ಆದರೂ ಸಮುದ್ರದ ನೆಂಟಸ್ತನ ಉಪ್ಪಿಗೆ ತತ್ವಾರ ಎಂಬಂಥಾ ಸ್ಥಿತಿ. ಸಿಂಧನೂರು, ಮಾನ್ವಿಯಂಥಾ ಪ್ರದೇಶ ಬಿಟ್ಟರೆ ಉಳಿದ ಭಾಗ ಮಳೆ ಆಶ್ರಿತವೇ. ಆದರೂ ಈ ರೈತರು ಆರ್ಥಿಕವಾಗಿ ಶಕ್ತಿತುಂಬುವ ಬೆಳೆ ನೆಚ್ಚಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಪಾರಂಪರಿಕವಾಗಿ ಸೂರ್ಯಕಾಂತಿ, ತೊಗರಿ ಬೆಳೆಯುತ್ತಿದ್ದ ಈ ರೈತರು ಕಳೆದ ಕೆಲವು ವರ್ಷಗಳಿಂದ ಹತ್ತಿ ಬೆಳೆಯುತ್ತಿದ್ದಾರೆ. ಬಿಟಿ ಹತ್ತಿಯ ಗರಿಮೆಗೆ ಮಾರುಹೋದ ಈ ರೈತರು ಕಳೆದ ಸಾಲಿನಲ್ಲಿ ಸುಮಾರು 1.5 ಲಕ್ಷ ಎಕರೆಗಳಲ್ಲಿ ಹತ್ತಿ ಬೆಳೆದಿದ್ದರು. ಬಿಟಿ ಹತ್ತಿಯ ಎರಡನೇ ತಲೆಮಾರಿನ ಬೋಲ್ ಗಾರ್ಡ್-2 ಹತ್ತಿಗೆ ಪಿಂಕ್ ಕಾಯಿಕೊರಕ ಹುಳುವಿನ ನಿರೋಧಕತೆ ಇದೆ ಎಂಬುದು ಪ್ರಮುಖ ಕಾರಣ. ಈ ಹತ್ತಿಯಲ್ಲಿ ಅರ್ಧ ನೀರಾವರಿ; ಉಳಿದದ್ದು ಮಳೆ ಆಶ್ರಿತ. ರೋಹಿಣಿ ಮಳೆಯ ಭರವಸೆಯಲ್ಲಿ ಬಿತ್ತನೆ ಮಾಡಿದ್ದೂ ಆಯಿತು. ಆದರೆ ಮಳೆ ಬಾರದೇ ಈ ಬೀಜಗಳು ಸುಟ್ಟು ಹೋದವು.. ಮತ್ತೆ ಬಿತ್ತನೆ. ಮರು ಬಿತ್ತನೆಯ ಈ ತುರ್ತಿಗೆ ಬೀಜ? ಬಿಟಿ ಲೇಬಲ್ ಇದ್ದ ಹತ್ತಿ ತಂದು ಹಾಕಿದ್ದೂ ಆಯಿತು. ಎಷ್ಟೋ ರೈತರು ಮೂರು ಬಾರಿ ಬಿತ್ತಿದ್ದೂ ಇದೆ. ಆ ವೇಳೆಗೆ ಜೂನ್ ದಾಟಿ ಜುಲೈ ಕಾಲಿಟ್ಟಿದ್ದೂ ಆಯಿತು. “ಕಣ್ಣು ಕೋರೈಸುವಂತೆ ಕಾಯಿ ಕಚ್ಚಿತ್ತು ಸಾರ್.. ಯಾರಿಗೂ ಸಂಶಯವೇ ಬರಲಿಲ್ಲ. ಹೊಲದೊಳಗಿನ ಕಾಯಿ ಒಡೆದರೆ ಹಲ್ಲು ಕಿರಿವ ಪಿಂಕ್ ಕಾಯಿಕೊರಕ ಹುಳ.”
ದಿಗ್ಭ್ರಾಂತರಾದ ರೈತರು ಇಲಾಖೆ, ಕೃಷಿ ವಿಜ್ಞಾನಿಗಳಿಗೆ ಈ ಬಗ್ಗೆ ಗೋಳು ತೋಡಿಕೊಂಡದ್ದಾಯಿತು. ಅಲ್ಲಿಂದ ಯಾವ ಬೆಂಬಲವೂ ಸಿಗದೇ ಕಂಡ ಕಂಡ ಕೀಟನಾಶಕ ಹೊಡೆಯತೊಡಗಿದರು. ಬೆಂಗಳೂರಿನ SOIL ಸಂಸ್ಥೆಯ ಶ್ರೀನಿವಾಸ್ ವಾಸು, ಮಂಜುನಾಥ್ ಹೊಳಲು ಮತ್ತು ರಾಯಚೂರಿನ ರೈತ ಕಾಳಜಿಯ ಷಫೀಯುಲ್ಲಾ ಅವರು ಇದನ್ನು ಸರ್ಕಾರದ ಗಮನಕ್ಕೆ ತರುವಲ್ಲಿವರೆಗೆ ಕೃಷಿ ಇಲಾಖೆಯಾಗಲೀ ಕೃಷಿ ವಿಜ್ಞಾನಿಗಳಾಗಲೀ ಯಾವ ಹೆಜ್ಜೆಯನ್ನೂ ಇಡಲಿಲ್ಲ. ಹಿಂದೂ ಪತ್ರಿಕೆಯ ವರದಿಯಿಂದ ಎಚ್ಚೆತ್ತ ಸರ್ಕಾರ ವಿಜ್ಞಾನಿಗಳ ತಂಡವನ್ನು ಕಳಿಸಿತು. ಆಗಲೇ ಮಳೆ ಆಶ್ರಿತ ಪ್ರದೇಶದಲ್ಲಿ ಶೇ. 80, ನೀರಾವರೀ ಪ್ರದೇಶದಲ್ಲಿ ಶೇ. 60ರಷ್ಟು ಹತ್ತಿ ನಾಶವಾಗಿತ್ತು. ಅಲ್ಲಿಗೆ ಹಂಗಾಮಿನ ಹತ್ತಿ ಕಥೆ ಮುಗಿದಿತ್ತು. ಕಥೆ ಆರಂಭವಾಗುವುದು ಇಲ್ಲಿಂದ.
ವಿಜ್ಞಾನಿಗಳ ತಂಡ ಕೇವಲ ಒಂದೂವರೆ ಪುಟದ ವರದಿ ನೀಡಿ “ ಈ ಬಗ್ಗೆ ವಿಸ್ತೃತ ವಿವರ ಸಂಗ್ರಹಿಸಬೇಕು” ಎಂದು ಶರಾ ಬರೆದು ಕೂತಿತು. ಬಿಟಿ ಹತ್ತಿ ಗುಲಾಬಿ ಕಾಯಿಕೊರಕದ ವಿರುದ್ಧ ನಿರೋಧಕತೆ ಕಳೆದುಕೊಂಡಿದೆ ಎಂಬುದು ವಿಜ್ಞಾನಿಗಳಿಗೂ ಮನವರಿಕೆ ಆಗಿದೆ. ಮುಂದೇನು? ಬಿಟಿ ಬೋಲ್ ಗಾರ್ಡ್-2 ಹತ್ತಿಯ ಪಾಕೀಟುಗಳಲ್ಲಿ ಕಾಯಿಕೊರಕ ವಿರುದ್ಧ ನಿರೋಧಕತೆ ಇದೆ ಎಂದು ಸ್ಪಷ್ಠವಾಗಿ ಜಾಹೀರು ಮಾಡಲಾಗಿದೆ. ಬಿಟಿ ಹತ್ತಿ ಅಂದರೆ ಕಾಯಿಕೊರಕದ ವಿರುದ್ಧ ತನ್ನೊಳಗೇ ವಿಷ ತುಂಬಿಕೊಂಡಿರುವ ಕುಲಾಂತರಿ ಅಲ್ಲವೇ. ಕಾಯಿಕೊರಕ ನಿರಾಮಯವಾಗಿ ಮುಕ್ಕಿ ತಿಂದಿದೆ ಅಂದರೆ ಏನರ್ಥ?
ಇಲಾಖೆಯವರಲ್ಲಿ ವಿಚಾರಿಸಿದರೆ, ಬೀಗರೆದುರು ಪೋಲಿ ಮಗನನ್ನು ಬಿಟ್ಟುಕೊಡದ ಹೆತ್ತವರಂತೆ, “ ನೋಡಿ, ರೈತರು ಬಿತ್ತನೆ ಮಾಡಿದ್ದು ತಡವಾಗಿದೆ; ಬಿಟಿ ಹತ್ತಿಯ ಪ್ರೋಟೀನ್ ಬೆಳವಣಿಗೆ ಕುಂಠಿತವಾಗಿದೆ..”ಎನ್ನುತ್ತಿದ್ದಾರೆ. ರೈತರ ಪ್ರಶ್ನೆ ಎಂದರೆ “ಹಾಗಿದ್ದರೆ ಕರಾರುವಾಕ್ಕಾಗಿ ಬಿಟಿ ಬೆಳೆದ ನೀರಾವರೀ ರೈತರ ಹತ್ತಿಗೇಕೆ ಕಾಯಿಕೊರಕ ಬಂತು?” ಮೂಲ ಪ್ರಶ್ನೆಯಾದ ಬಿಟಿ ಹತ್ತಿ ನಿರೋಧಕತೆ ಕಳೆದುಕೊಂಡಿದೆಯಾ ಎಂಬ ಪ್ರಶ್ನೆಗೆ ಉತ್ತರಿಸದ ಇಲಾಖೆ ಮತ್ತು ವಿಜ್ಞಾನಿಗಳು ಎಂದಿನಂತೆ “ ಹತ್ತಿ ಬೆಳೆಯುವ ರೈತರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು” ಎಂದು ಪೋಸ್ಟರ್ ಅಂಟಿಸುತ್ತಾ ಕೂತಿದ್ದಾರೆ. ಬೆಳೆ ಸಂಪೂರ್ಣ ನಷ್ಟವಾದ ರೈತರಿಗೆ ಪರಿಹಾರ ಕೊಡಿ ಎಂದು ರಾಜ್ಯ ರೈತ ಸಂಘದ ಚಾಮರಸ ಮಾಲಿ ಮತ್ತಿತರ ರೈತ ಮುಖಂಡರು ಸರ್ಕಾರಕ್ಕೆ ದಬಾಯಿಸಿದ್ದಾರೆ. ಜೊತೆಗೆ ಕಳಪೆ/ ವಿಶ್ವಾಸಾರ್ಹತೆ ಕಳೆದುಕೊಂಡಿರುವ ಬೀಜ ಕಂಪೆನಿಗಳ ಮೇಲೆ ಕ್ರಮ ಕೈಗೊಂಡು ಅವರಿಂದ ಪರಿಹಾರ ಕೊಡಿಸಿ ಎಂದು ಬೇಡಿಕೆ ಇಟ್ಟಿದ್ದಾರೆ. ಇದಾಗಿ ಆಗಲೇ 6 ತಿಂಗಳಾಯಿತು. ಸರ್ಕಾರದ ಮುಂದಿರುವ ಸವಾಲು ಮೂರು 1. ಬಿಟಿ ಹತ್ತಿ ನಿರೋಧಕತೆ ಕಳೆದುಕೊಂಡಿದೆ ಎಂದಾದರೆ ಮುಂದಿನ ಹಂಗಾಮಿನಲ್ಲಿ ಅದನ್ನು ನಿಷೇದಿಸಬೇಕು. ಯಾಕೆಂದರೆ ನಿರೋಧಕತೆ ಕಳೆದುಕೊಂಡ ಗುಮಾನಿ ಇರುವ ತಳಿಯನ್ನು ರೈತರಿಗೆ ಶಿಫಾರಸು ಮಾಡುವುದು ದ್ರೋಹದ ಕೆಲಸ. 2. ಈ ಕಂಪೆನಿಗಳಿಂದ ಪರಿಹಾರ ದೊರಕಿಸಿ ಕೊಡುವುದು. 3. ತಾನೇ ಈ ಬೆಳೆ ವೈಫಲ್ಯಕ್ಕೆ ಪರಿಹಾರ ನೀಡುವುದು.
ಪಂಜಾಬಿನಲ್ಲಿ ಸುಮಾರು 5 ಲಕ್ಷ ಎಕರೆಯಲ್ಲಿ ಹತ್ತಿ ಬೆಳೆದ ರೈತರು ಬಿಳಿ ಹೇನು ಬಾದೆಯಿಂದ ಬೆಳೆ ಕಳೆದುಕೊಂಡಾಗ ಪಂಜಾಬ್ ಸರ್ಕಾರ ತಕ್ಷಣ 600 ಕೋಟಿ ರೂ. ಪರಿಹಾರ ನೀಡಿ, ಇನ್ನೂ ಹೆಚ್ಚಿನ ಪರಿಹಾರ ನೀಡುವುದಾಗಿ ಭರವಸೆ ಕೊಟ್ಟು ಪಾರಾಗಿದೆ. ನಮ್ಮಲ್ಲಿ? ನಮ್ಮ ಕೃಷಿ ಸಚಿವರು ಕಳಪೆ ಬೀಜ ಕಂಪೆನಿಯ ಮೇಲೆ ಕೇಸು ದಾಖಲಿಸಿದ್ದೇವೆ ಎಂದು ಘೋಷಿಸಿದರು. ಇದರ ಸತ್ಯಾಸತ್ಯತೆ ವಿಚಾರಿಸಿದರೆ, ರೈತರ ಅಹವಾಲನ್ನು ಲಗತ್ತಿಸಿ ಮೊಕದ್ದಮೆ ಹೂಡಬಹುದೇ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ಫೈಲ್ ಕಳಿಸಲಾಗಿದೆ ಅಷ್ಟೇ. ಅಷ್ಟಕ್ಕೂ ಸ್ವತಃ ಜಂಟಿ ಕೃಷಿ ನಿರ್ದೇಶಕರೇ ಹೇಳಿದ ಹಾಗೆ ಬೀಜ ಕಾಯಿದೆಯ ಪ್ರಕಾರ ಮೊಕದ್ದಮೆ ಹೂಡಿದರೂ ಅದರಲ್ಲಿ ನೀಡಲಾಗುವ ದಂಡ / ಶಿಕ್ಷೆ ಅತ್ಯಲ್ಪ. ಜೂಜುಕೋರರಿಗೇ ಅದಕ್ಕಿಂತ ಹೆಚ್ಚು ಶಿಕ್ಷೆ ಇದೆ! ಅರ್ಥಾತ್ ಈ ಮೊಕದ್ದಮೆ ಎನ್ನುವುದು ಕಣ್ಣೊರೆಸುವ ಉಪಾಯ. ಇನ್ನೊಂದೆಡೆ ಬಿಟಿ ತನ್ನ ಭರವಸೆ ಕಳೆದುಕೊಂಡಿದೆಯಾ ಎಂದು ತನಿಖೆ/ ಪರೀಕ್ಷೆ ಮಾಡಿ ಅದನ್ನು ನಿಷೇಧಿಸುವ ಬಗ್ಗೆ ಸರ್ಕಾರ ಮೌನ ತಳೆದಿದೆ. ವಿಜ್ಞಾನಿಗಳು ಆಫ್ ದಿ ರೆಕಾರ್ಡ್ ಬಿಟಿಯನ್ನು ಇನ್ನು ನೆಚ್ಚಿಕೊಳ್ಳುವಂತಿಲ್ಲ ಅಂದರೂ, ‘ಅಧಿಕೃತವಾಗಿ ಹೇಳಲು ವಿಸ್ತೃತ ಪರೀಕ್ಷೆ ಬೇಕು ಇಲ್ಲದಿದ್ದರೆ ನಾವು ಸಿಕ್ಕಿ ಹಾಕಿಕೊಳ್ಳುತ್ತೇವೆ’ ಎನ್ನುತ್ತಾರೆ. ಇತ್ತ ರೈತರು ಉರಿದು ಬಿದ್ದು ಈ ಇಲಾಖೆ- ವಿಜ್ಞಾನಿಗಳೆಲ್ಲಾ ಕಂಪೆನಿಯ ಗುಲಾಮರು ಎಂದು ಜರೆಯುತ್ತಿದ್ದಾರೆ.
ಸರ್ಕಾರ ಪ್ರತಿಬಂಧಿಸಲಿ ಬಿಡಲಿ, ನಷ್ಟ ಅನುಭವಿಸಿ ಏಟು ತಿಂದಿರುವ ರೈತರು ಈ ಬಾರಿ ಬಿಟಿ ಹತ್ತಿಗೆ ವಿದಾಯ ಹೇಳಿ ತೊಗರಿ ಬೆಳೆಯುವ ನಿರ್ಧಾರ ಮಾಡಿದ್ದಾರೆ. ಈ ಬದಲಾವಣೆಯ ಸೂಚನೆ ಕೃಷಿ ಇಲಾಖೆಗೂ ಇದೆ. ಸಾಕಷ್ಟು ತೊಗರಿ ಬಿತ್ತನೆ ಬೀಜ ಲಭ್ಯವಾಗುವಂತೆ ಇಲಾಖೆ ಕ್ರಮ ಕೈಗೊಂಡಿದೆ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕರು. ಅದು ಸರಿ, ಆದರೆ ಈ ಬಿಟಿ ದುರಂತದ ಬಗ್ಗೆ?
ಕಳೆದ ಸಾಲಿನಲ್ಲಿ ಹತ್ತಿಯ ಆದಾಯ ನಂಬಿ ಬೀದಿಗೆ ಬಂದಿರುವ ಸಾವಿರಾರು ರೈತರು ದುಗುಡದಲ್ಲಿದ್ದಾರೆ. ಸರ್ಕಾರ ಪರಿಹಾರ ನೀಡೀತು ಎಂಬ ನಿರೀಕ್ಷೆಯಲ್ಲಿದ್ದಾರೆ. ಇದರ ಬೆನ್ನು ಹತ್ತಿ ಹೋದರೆ, ಹೌದು ಸರ್ಕಾರ ಹತ್ತಿ ಬೆಳೆ ವೈಫಲ್ಯಕ್ಕೆ ಪರಿಹಾರ ಅನುದಾನ ಬಿಡುಗಡೆ ಮಾಡಿದೆ.. ಎಷ್ಟು ಗೊತ್ತೇ? 33 ಕೋಟಿ ರೂಪಾಯಿ. ಅದೂ ಯಾವ ಖಾತೆಯಿಂದ? ಪ್ರಾಕೃತಿಕ ವಿಕೋಪ ನಿಧಿಯಿಂದ. ಪಂಜಾಬಿನ 600 ಕೋಟಿ ಎಲ್ಲಿ? ನಮ್ಮ ಸರ್ಕಾರದ ಜುಜುಬಿ 33 ಕೋಟಿ ಎಲ್ಲಿ? ಇದರ ಜಾಣತನ ಇನ್ನೊಂದಿದೆ. ಬೀಜ/ತಳಿ ವೈಫಲ್ಯದಿಂದ ಹೀಗಾಗಿದೆ ಎಂದು ಸರ್ಕಾರ ಎಲ್ಲೂ ಹೇಳುತ್ತಿಲ್ಲ. ಇದು ಪ್ರಾಕೃತಿಕ ವಿಕೋಪದ ಕಾರಣದಿಂದ ಎಂದು ದಾಖಲಿಸಲು ನೋಡುತ್ತಿದೆ. ಪರಿಹಾರ ಯಾವ ಮೂಲದಿಂದ ಬಂತು ಎಂದು ರೈತರು ಬಿಡಿ ನಮ್ಮ ನಾಯಕರೂ ಗಮನಿಸುವುದಿಲ್ಲ.
ಮುಂದಿನ ಹಂಗಾಮಿನಲ್ಲಿ ಈ ಸಂಶಯಾಸ್ಪದ ತಂತ್ರಜ್ಞಾನದ ಬೀಜ ಮತ್ತೆ ರೈತರ ಮುಂದೆ ಕುಣಿಯಬಾರದು. ಈ ಬೀಜದ ವೈಫಲ್ಯ ಎಂಬ ಬಗ್ಗೆ ಸಾಕ್ಷ್ಯಾಧಾರ ವಿಫುಲವಾಗಿದ್ದಾಗಲೂ ಸರ್ಕಾರ ಜಾಣತನ ತೋರುತ್ತಿದೆ. ಪರಿಹಾರದ ಮೂಲ ಇದರ ಗುರಾಣಿ. ಅಷ್ಟಕ್ಕೂ ಇನ್ನೊಂದು ಪುಟ್ಟ ಜಾಣತನ ಬೇರೆ. ಈ ಪ್ರಕೃತಿ ವಿಕೋಪ ನಿಧಿ ಕೇಂದ್ರ ನೀಡುವ ಅನುದಾನ. ರಾಜ್ಯಸರ್ಕಾರ ಕಾಸು ಬಿಚ್ಚುವ ಪ್ರಮೇಯ ಇಲ್ಲಿಲ್ಲ. .
ಇದು ಬಿಟಿ ಹತ್ತಿಯಲ್ಲಷ್ಟೇ ಅಲ್ಲ ಬಹುತೇಕ ಬೆಳೆಗಳ ವೈಫಲ್ಯದ ಸಂದರ್ಭದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ. ಕಳೆದ ಹಂಗಾಮಿನ ಬೆಳೆಯಿಂದ ಕಾಸು ಕೈಗೆ ಹತ್ತಿದರೆ ತಾನೆ ಈ ಹಂಗಾಮಿನಲ್ಲಿ ರೈತನ ಬಳಿ ಬಂಡವಾಳ ಇರಲು ಸಾಧ್ಯ?.
ಒಂದು ಕಾಲದಲ್ಲಿ ಯಾವ ರಿಸ್ಕೂ ತೆಗೆದುಕೊಳ್ಳದೇ ಏನೋ ಬೆಳೆದುಕೊಂಡಿರುತ್ತಿದ್ದ ರೈತನಿಗೆ ವ್ಯಾಪಾರಿ ಬೆಳೆಗಳ ಅಮಲು ಹತ್ತಿಸಿದ ಸರ್ಕಾರ ಅದಕ್ಕೆ ಬೇಕಾದ ಸಂರಚನೆಗಳ ಬಗ್ಗೆ ದಕ್ಷತೆ ತೋರಲೇ ಇಲ್ಲ. ಈಗ ರೈತರು ಒಂದಂಕಿ ಲಾಟರಿ ತರ ಹತ್ತಿ ತೊಗರಿಯಲ್ಲಿ ಎಷ್ಟು ಬಂದೀತು, ಸೂರ್ಯಕಾಂತಿ, ಆಲೂಗೆಡ್ಡೆಯಲ್ಲಿ ಎಷ್ಟು ಬಂದೀತು ಎಂಬ ಜೂಜಿನ ಅಂದಾಜಿನಲ್ಲಿ ಬೆಳೆ ಬೆಳೆಯುತ್ತಿದ್ದಾರೆ ವಿನಃ ಇಷ್ಟು ಹಾಕಿದ್ದಕ್ಕೆ ಇಷ್ಟು ಬಂದೀತು ಎಂಬ ನಿಶ್ಚಿಂತೆಯಲ್ಲಿ ಅಲ್ಲ. ನಾನು ಮಾತಾಡಿಸಿದ ಯಾವ ರೈತರೂ ಸಾಂಸ್ಥಿಕ ಸಾಲ ಪಡೆದಿಲ್ಲ. ಮಂಡಿ, ಗೊಬ್ಬರದ ಅಂಗಡಿಗಳಲ್ಲೇ ಇವರ ಕೊಡು-ಕೊಳು. ಸಾಲ ತಂದ ಮೇಲೆ ಅಲ್ಲಿಗೇ ಮಾರಬೇಕು. ಈ ಚಕ್ರ ಮುಂದುವರಿಯುತ್ತಲೇ ಇದೆ.
ಈ ಬಾರಿ..?
ಸರ್ಕಾರ ತಾನು ಸನ್ನದ್ಧ ಎನ್ನುತ್ತಿದೆ. ಈ ಸರ್ಕಾರ ನಂಬಿಕೊಂಡಿರುವ ಕೃಷಿ ವಿಜ್ಞಾನಿಗಳೂ; ಕೃಷಿ ಅಧಿಕಾರಿಗಳು ತಾಂತ್ರಿಕ ಮಾಹಿತಿಯನ್ನು ಪಠಿಸುತ್ತಾ ಕೂತಿದ್ದಾರೆ. ಜನಪ್ರತಿನಿಧಿಗಳು? ರಾಯಚೂರು ಜಿಲ್ಲೆಯ ಸಮಸ್ಯೆ ಬಗ್ಗೆ ಆವಾಜ್ ಹಾಕಿದ ಒಬ್ಬನ ಹೆಸರು ಹೇಳಿ ನೋಡೋಣ.
ಪರಿಸ್ಥಿತಿಯ ದಾರುಣ ವ್ಯಂಗ್ಯ ಅರ್ಥವಾಗಲು ವಾಯುವ್ಯ ಸಾರಿಗೆ ಸಂಸ್ಥೆಯ ಪ್ಯಾಕೇಜು ನೋಡಬೇಕು. ಹೈದರಾಬಾದ್ ಕರ್ನಾಟಕದ ಯಾವುದೇ ಹಳ್ಳಿಯಿಂದ ಹತ್ತು ಮಂದಿ ಬೆಂಗಳೂರಿಗೆ ಬರುವುದಾದರೆ ಸಾರಿಗೆ ಸಂಸ್ಥೆಯ ಬಸ್ಸು ಆ ಹಳ್ಳಿಗೇ ಹೋಗಿ ಅವರನ್ನು ಹತ್ತಿಸಿಕೊಂಡು ಬರುತ್ತದೆ. ಅವರ ಲಗೇಜಿಗೆ ಚಾರ್ಜು ಇಲ್ಲವಂತೆ..!! ಬೆಂಗಳೂರು ಹೈದರಾಬಾದ್, ಮುಂಬೈಗೆ ಹೋಗುವ ರೈಲು ತುಂಬಾ ವಯಸ್ಕರು. ಹಳ್ಳಿ ತುಂಬಾ ಪಿಳಿಪಿಳಿ ಕಣ್ಣು ಬಿಡುತ್ತಾ ಕೂತಿರುವ ವೃದ್ಧರು. ಮುಂದಿನ ಹಂಗಾಮಿಗೆ ಜನ ತಯಾರಾಗಿರುವ ರೀತಿ ಇದು. ಉದ್ಯೋಗ ಖಾತರಿ? ಜಿಲ್ಲೆಯ ಎಲ್ಲೂ ಮಂದಿ ಇದರ ಬಗ್ಗೆ ವಿಶ್ವಾಸ ಕಳಕೊಂಡು ತಿಂಗಳುಗಳೇ ಆದವು.
ಬಿರುಬೇಸಿಗೆ ಬಗ್ಗೆ ಬಿಡಿ; ಉತ್ತಮ ಮಳೆಯ ಭವಿಷ್ಯಕ್ಕೂ ನಮ್ಮ ಸರ್ಕಾರ ಸನ್ನದ್ಧವಾಗಿಲ್ಲ. ನಾಡಿನ ಋತುಚಕ್ರ ಮಳೆ-ಬೆಳೆಯ ಮುನ್ನೋಟದ ಅಭಾವ ಸರ್ಕಾರದ ಪ್ರತೀ ಹೆಜ್ಜೆಯಲ್ಲೂ ಕಾಣುತ್ತಿದೆ. ಈ ಮೆದುಳು-ಹೃದಯ ನಿಷ್ಕ್ರಿಯವಾಗುವ ಆಡಳಿತ ಪ್ರಕೃತಿ ವಿಕೋಪವನ್ನೂ ದಾರುಣವಾಗಿಸುತ್ತದೆ.