ಕೈಮಗ್ಗ ನೇಕಾರಿಕೆಯ ಪರವಾದ ಪತ್ರಿಕಾ ಹೇಳಿಕೆ

[2013ರಲ್ಲಿ ಪ್ರಸನ್ನ ಅವರು ಕೈಮಗ್ಗ ನೇಕಾರಿಕೆಯ ಪರವಾದ ಆಂದೋಲನ ಪ್ರಾರಂಭಿಸಿದ ಸಂದರ್ಭದಲ್ಲಿ ಮಹಾದೇವ ಅವರು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ]

 

ದೇವನೂರ ಮಹಾದೇವ
ಅಧ್ಯಕ್ಷರು, ಸರ್ವೋದಯ ಕರ್ನಾಟಕ ಪಕ್ಷ
ಅಭಿರುಚಿ ಗಣೇಶ್
ಯುವ ಅಧ್ಯಕ್ಷರು , ಸರ್ವೋದಯ ಕರ್ನಾಟಕ ಪಕ್ಷ

                                                                                 ಪತ್ರಿಕಾ ಹೇಳಿಕೆ

ನಮ್ಮ ದೇಶದ ಹತ್ತಿ ನೇಕಾರಿಕೆ, ಕಂಬಳಿ ನೇಕಾರಿಕೆ, ರೇಷ್ಮೆ ನೇಕಾರಿಕೆ ಇತ್ಯಾದಿ ಸಮೃದ್ಧವಾದ, ವಿಸ್ತಾರವಾದ ಹಾಗೂ ವೈವಿಧ್ಯಮಯವಾದ ನೇಕಾರಿಕೆಯ ಪರಂಪರೆಯು ಪ್ರಪಂಚದ ಮತ್ತಾವುದೇ ದೇಶಗಳಲ್ಲೂ ಇಲ್ಲ. ಜೊತೆಗೆ ಈ ಕ್ಷೇತ್ರಗಳಲ್ಲಿ ಶೇ. ಎಂಬತ್ತಕ್ಕಿಂತಲೂ ಹೆಚ್ಚಾಗಿ ಗ್ರಾಮೀಣ ಹೆಣ್ಣುಮಕ್ಕಳು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಹಾಗಾಗಿ ಈಗಲೂ ಮನಸ್ಸು ಮಾಡಿದರೆ ಕೈಮಗ್ಗ ನೇಕಾರಿಕೆಯನ್ನು ನಮ್ಮ ರಾಷ್ಟ್ರೀಯ ಸಂಪನ್ಮೂಲವಾಗಿ ಪರಿಗಣಿಸಿ ಆರ್ಥಿಕ ಪ್ರಗತಿಯನ್ನು ಸಾಧಿಸುವುದು ಅಂದರೆ, ಭಾರತದ ನಿರುದ್ಯೋಗ ಸಮಸ್ಯೆಯನ್ನು ನೇಕಾರಿಕೆಯೊಂದರಿಂದಲೇ ಬಗೆಹರಿಸಿಕೊಂಡು ಸ್ವಾವಲಂಬನೆ ಬದುಕನ್ನು ನಾವು ಕಟ್ಟಿಕೊಳ್ಳಬಹುದಾದ ಸಾಧ್ಯತೆ ಇದೆ. ಹಾಗೂ ಜಾಗತಿಕ ಮಟ್ಟದಲ್ಲಿ ರಫ್ತು ವ್ಯಾಪಾರವನ್ನು ವೃದ್ಧಿಸುವುದೂ ಸಾಧ್ಯವಿದೆ. ಆದರೆ ನಾವು ಹಾಗೆ ಮಾಡುತ್ತಿಲ್ಲ. ನಾವು ಯಂತ್ರನಾಗರೀಕತೆಗೆ ಶರಣುಹೋಗಿದ್ದೇವೆ. ಇದರಿಂದಾಗಿ ಇಂದು ನೇಕಾರಿಕೆಯು ದುಸ್ಥಿತಿಗೆ ತಲುಪಿ ನಮ್ಮ ದೇಶದ ನೇಕಾರರು, ಹತ್ತಿ ಬೆಳೆಗಾರರು, ಹಾಗೂ ಇತರೆ ಕುಶಲಕರ್ಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೃಹತ್ ಉದ್ದಿಮೆಗಳು, ಬಂಡವಾಳ ಶಾಹಿಗಳು ಹಾಗು ಜಾಗತಿಕ ಹಣಕಾಸಿನ ಕುಮ್ಮಕ್ಕಿನಿಂದಾಗಿ ನಮ್ಮ ಆಳುವ ಸರ್ಕಾರಗಳು ತಾನು ರೂಪಿಸಿದ ನೀತಿ ನಿಯಮ ಕಾನೂನು ಕಾಯಿದೆಗಳನ್ನು ತಾನೇ ಪಾಲಿಸದಿರುವುದು ಈ ಎಲ್ಲಾ ಸಂಕಷ್ಟಗಳಿಗೂ ಕಾರಣವಾಗಿದೆ. ಸಾರ್ವಜನಿಕರು ಸರ್ಕಾರ ರೂಪಿಸಿದ ಕಾನೂನು ಕಾಯಿದೆಗಳನ್ನು ಪಾಲಿಸದಿರುವುದು ಅಪರಾಧವಾಗುತ್ತದೆ, ನಿಜ. ಆದರೆ ಸರ್ಕಾರವೇ ತಾನು ರೂಪಿಸಿದ ನೀತಿ ನಿಯಮಗಳನ್ನು ತಾನೇ ಪಾಲಿಸಿದಿರುವುದು ಘೋರ ಅಪರಾಧವಾಗುತ್ತದೆÉ ಎಂಬ ಎಚ್ಚರ ಇಂದು ನಮಗೆ ತುರ್ತಾಗಿ ಬೇಕಾಗಿದೆ.

ಈಗ ಜನವರಿ ಮುವತ್ತರಿಂದ ಹೆಗ್ಗೋಡಿನಲ್ಲಿ ಪ್ರಸನ್ನ ಮತ್ತು ಮಿತ್ರರು ಉಪವಾಸ ಸತ್ಯಾಗ್ರಹ ಆರಂಭಿಸಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಸರ್ಕಾರವು- ತಕ್ಷಣವೇ ಕಾರ್ಯ ಪ್ರವೃತ್ತವಾಗಿ ಈ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸುತ್ತೇವೆ.

1. ಕೈಮಗ್ಗ ಮೀಸಲಾತಿಯ ಅಧಿನಿಯಮ-1985ರ ಅನ್ವಯ ಸೀರೆ ಧೋತಿ ಟವೆಲ್ ಇತ್ಯಾದಿ ಯಾವ್ಯಾವ ವಸ್ತ್ರ ವಸ್ತುಗಳನ್ನು ಕೈಮಗ್ಗದಿಂದ ಮಾತ್ರವೇ ಉತ್ಪನ್ನ ಮಾಡಬೇಕು ಅರ್ಥಾತ್ ಇಂಥವುಗಳನ್ನು ಯಂತ್ರ ಚಾಲಿತವಾಗಿ ಉತ್ಪನ್ನ ಮಾಡಬಾರದು ಎಂಬ ಯಾವ ಅಧಿನಿಯಮ ಕಾಯಿದೆ ಇದೆಯೋ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಹಾಗೂ ಹಾಲೀ ಇರುವ ಅಧಿನಿಯಮವನ್ನು ತಿದ್ದುಪಡಿ ಮಾಡಿ ದುರ್ಬಲಗೊಳಿಸಬಾರದು, ಅನಾಥ ಸ್ಥಿತಿಯಲ್ಲಿರುವವರನ್ನು ಆತ್ಮಹತ್ಯೆಗೆ ದೂಡಬಾರದು.
2. ಕೈಮಗ್ಗ ಕ್ಷೇತ್ರಕ್ಕೆ ಮೀಸಲಾದ ಹಣ ನೆರವು ಸವಲತ್ತುಗಳನ್ನು ಕೈಮಗ್ಗ ಕ್ಷೇತ್ರಕ್ಕೆ ಮಾತ್ರವೇ ಬಳಸಲ್ಪಡಬೇಕು. ಇದುವರೆಗೆ ಕೈಮಗ್ಗ ಕ್ಷೇತ್ರಕ್ಕೆ ಮೀಸಲಾಗಿದ್ದೂ ಅದನ್ನು ಕೈಮಗ್ಗೇತರಕ್ಕೆ ಬಳಸಲ್ಪಟ್ಟಿದ್ದಲ್ಲಿ, ಲ್ಯಾಪ್ಸ್ ಮಾಡಿದ್ದಲ್ಲಿ ಆ ನೆರವನ್ನೆಲ್ಲಾ ಕೂಡಿಸಿ ಕೈಮಗ್ಗ ನಿದಿ ಸ್ಥಾಪಿಸಬೇಕು
3. ಕೈಮಗ್ಗ ಕ್ಷೇತ್ರದಿಂದ ಆಯ್ಕೆಯಾಗಬೇಕಾದ ನಾಮನಿರ್ದೇಶಿತರಾಗಬೇಕಾದ ಸದಸ್ಯರು, ಕೈಮಗ್ಗ ಕ್ಷೇತ್ರದಿಂದಲೇ ಬಂದವರಾಗಿರಬೇಕು.
4. .ಕೈಮಗ್ಗ ಮೀಸಲಾತಿ ಅಧಿನಿಯಮಗಳ ಕಟ್ಟು ನಿಟ್ಟಿನ ಜಾರಿಯಿಂದಾಗಿ ಗ್ರಾಮೀಣ ಪ್ರದೇಶದ ವಿದ್ಯುತ್ ಮಗ್ಗಗಳ ಗ್ರಾಮೀಣ ಕಾರ್ಮಿಕರು ಅತಂತ್ರರಾಗದಂತೆ ವಿದ್ಯುತ್ ಮಗ್ಗಗಳ ಕಾರ್ಮಿಕರಿಗೆ ನೂಲನ್ನು ಒದಗಿಸಿ ಕೈಮಗ್ಗ ಮೀಸಲಾತಿ ಅಧಿನಿಯಮದಡಿ ಒಳಪಡದಿರುವ ಬಟ್ಟೆಗಳನ್ನು ನೇಯಿಸಿ, ಸರ್ಕಾರಿ ಶಾಲೆಗಳ ಸಮವಸ್ತ್ರ , ಸರ್ಕಾರಿ ಆಸ್ಪತ್ರೆಗಳ ಹಾಸಿಗೆಹೊದಿಕೆ, ರೈಲು ಬಸ್ಸು ಪ್ರಯಾಣಿಕರ ಹೊದಿಕೆ ಮುಂತಾದವನ್ನು ಕೊಂಡುಕೊಳ್ಳುವ ಮೂಲಕ ವಿದ್ಯುತ್ ಚಾಲಿತ ಮಗ್ಗಗಳ ಬಡಕಾರ್ಮಿಕರಿಗೂ ಸರ್ಕಾರ ಪರ್ಯಾಯ ಕಲ್ಪಿಸಿಕೊಡಬೇಕು.

ನಾವು ರೂಪಿಸಿದ ಕಾನೂನು ಕಾಯಿದೆಗಳನ್ನು ನಾವೇ ಪಾಲಿಸುವಂತಾಗಲು ಹೋರಾಡಬೇಕಾಗಿ ಬಂದಿರುವ ಈ ವಿಪರ್ಯಾಸದ ಪರಿಸ್ಥಿತಿಯನ್ನು ತಕ್ಷಣವೇ ಬಗೆಹರಿಸಿ ಎಂದು ಸರ್ಕಾರಕ್ಕೆ ಮತ್ತೊಮ್ಮೆ ಒತ್ತಾಯಿಸುತ್ತೇವೆ.