ಕೇಂದ್ರ ಸರ್ಕಾರ ಖದೀಮ ಶ್ರೀಮಂತರ ಪರ ನಿಂತಿದೆ:
[ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಕಾರ್ಮಿಕರ ನೆರವಿಗೆ ನಿಲ್ಲಬೇಕಾಗಿದ್ದ ಸರ್ಕಾರ ಖದೀಮರಾದ ಶ್ರೀಮಂತರ 68,607 ಕೋಟಿಯಷ್ಟು ಹಣವನ್ನು ಮನ್ನಾ ಮಾಡಿ ನಿರ್ಲಜ್ಜತೆ ಮೆರೆದಿದೆ ಎಂದು ಹೆಚ್.ಎಸ್.ದೊರೆಸ್ವಾಮಿ, ದೇವನೂರ ಮಹಾದೇವ ಮುಂತಾದ ಹೋರಾಟಗಾರರು ರಾಷ್ಟ್ರಪತಿಗೆ 2020 ಮೇ 1ರ ಕಾರ್ಮಿಕ ದಿನದಂದು ಬರೆದ ಪತ್ರ .]
-ಕಾರ್ಮಿಕ ದಿನದಂದು ರಾಷ್ಟ್ರಪತಿಗೆ ಪತ್ರ ಬರೆದ ಹೋರಾಟಗಾರರು
ಕೊರೊನಾದಿಂದ ಕಷ್ಟಪಡುತ್ತಿರುವ ಕಾರ್ಮಿಕ ಹಾಗೂ ರೈತರ ಸಂಕಷ್ಟಗಳಿಗೆ ನೆರವಾಗದೆ ಶ್ರೀಮಂತರ ಹಿತಾಸಕ್ತಿ ಕಾಪಾಡುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಕಾರ್ಮಿಕರ ದಿನದಂದು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ನೇತೃತ್ವದಲ್ಲಿ ಸಾಮಾಜಿಕ ಹೋರಾಟಗಾರರು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಹೋರಾಟಗಾರರು ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಕಾರ್ಮಿಕರ ನೆರವಿಗೆ ನಿಲ್ಲಬೇಕಾಗಿದ್ದ ಸರ್ಕಾರ ಖದೀಮರಾದ ಶ್ರೀಮಂತರ 68,607 ಕೋಟಿಯಷ್ಟು ಹಣವನ್ನು ಮನ್ನಾ ಮಾಡಿ ನಿರ್ಲಜ್ಜತೆ ಮೆರೆದಿದೆ ಎಂದು ಹೇಳಿದ್ದಾರೆ.
“ಕೊರೊನಾದ ಸಂಕಟಮಯ ಸಂದರ್ಭದಲ್ಲಿಯೂ ಕಾರ್ಮಿಕರ ದಿನವನ್ನು ಆಚರಿಸುವುದು ಹಿಂದೆಂಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ದೇಶದಲ್ಲಿ ಕೋಟ್ಯಾಂತರ ಕಾರ್ಮಿಕರು ಅಕ್ಷರಶಃ ತುತ್ತು ಅನ್ನವಿಲ್ಲದೆ ಬೀದಿಗೆ ಎಸೆಯಲ್ಪಟ್ಟಿದ್ದಾರೆ. ಲಾಕ್ ಡೌನ್ ಕಾರ್ಮಿಕರನ್ನು ನಿರ್ಗತಿಕರನ್ನಾಗಿಸಿದೆ. ಇಂತಹ ಪರಿಸ್ಥಿತಿಯಲ್ಲಿ ದುಡಿಯುವ ಜನತೆಯ ಸಂಕಷ್ಟಕ್ಕೆ ಸರಕಾರ ನೆರವಾಗಬೇಕಿತ್ತು. ಆದರೆ ಖದೀಮರಾದ ಉದ್ದಿಮೆದಾರರ ಹಿತಾಸಕ್ತಿ ಕಾಪಾಡುತ್ತಿರುವುದು ಅಕ್ಷಮ್ಯ. ರೈತರ ಸಾಲದಲ್ಲಿ ನಯಾಪೈಸೆಯೂ ಮನ್ನಾ ಮಾಡದ ಸರಕಾರ ಕೋಟ್ಯಾಂತರ ಸಾಲ ಮುಳುಗಿಸಿ ದೇಶ ಬಿಟ್ಟು ಕಳ್ಳತನದಿಂದ ಓಡಿಹೋದ ಮೆಹುಲ್ ಚೋಕ್ಸಿ, ನೀರವ ಮೋದಿ, ವಿಜಯ ಮಲ್ಯ ಮುಂತಾದವರಲ್ಲದೆ ರಾಮದೇವ ಬಾಬಾದಂಥ 50 ಕ್ಕೂ ಹೆಚ್ಚು ಉದ್ಯಮಿಗಳ ಸುಮಾರು 68,607 ಕೋಟಿ ಸಾಲವನ್ನು ಮನ್ನಾ ಮಾಡಿ ನಿರ್ಲಜ್ಜತೆ ಮೆರೆಯುತ್ತಿದೆ” ಎಂದು ಪತ್ರದಲ್ಲಿ ಬರೆಯಲಾಗಿದೆ.
“ಅರ್ಥಿಕ ಸಂಕಷ್ಟವಿದೆ ಎಂಬ ನೆಪವೊಡ್ಡಿ ನೌಕರರ ತುಟ್ಟಭತ್ಯೆ ಕಡಿತ ಮಾಡುವ ಸರಕಾರ ಆಗರ್ಭ ಶ್ರೀಮಂತ ಕಳ್ಳರ ಸಾಲ ಮಾಫ್ ಮಾಡುತ್ತದೆ. ಇನ್ನೊಂದೆಡೆ ಖಾಸಗಿ ಉದ್ದಿಮೆದಾರರು ಲಾಕ್ ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗೆ ಸಂಬಳ ನೀಡಲೇಬೇಕೆಂದು ಒತ್ತಾಯಿಸಲಾಗದೆಂದು ಕಾರ್ಮಿಕ ಸಚಿವಾಲಯದ ಸಂಸದೀಯ ಸಮಿತಿ ಕೈ ಬಿಟ್ಟಿದೆ. ಇದು ತೀರಾ ನಾಚಿಕೆಗೇಡು ನಿರ್ಧಾರವಲ್ಲವೆ?. ಪ್ರಾಕೃತಿಕ ವಿಕೋಪ, ಉಗ್ರವಾದ ಜನವಿರೋಧಿ ಸರಕಾರ, ರೈತರ ಸರಣಿ ಆತ್ಮಹತ್ಯೆಗಳು, ಕಾರ್ಮಿಕರ ದಾರುಣ ಸಾವು, ಮಧ್ಯಮ ವರ್ಗದವರ ಅತಂತ್ರ ಸ್ಥಿತಿ ಮಾನವ ಸಮುದಾಯನ್ನು ವಿನಾಶಗೈಯಲು ಶಪಥ ಮಾಡಿವೆ” ಎಂದು ಪತ್ರದಲ್ಲಿ ಹೇಳಲಾಗಿದೆ.
“ಸರಕಾರದ ಬಂದವಾಳಶಾಹಿ ಪರ ನೀತಿಯನ್ನು ಅಂಬೇಡ್ಕರ್ ಮತ್ತು ಗಾಂಧೀಜಿಯ ಭಾವಚಿತ್ರವನ್ನಿಟ್ಟು ನಮನ ಸಲ್ಲಿಸುವ ಮೂಲಕ ಕಾರ್ಮಿಕರ ದಿನವಾದ ಇಂದು ಸಮಸ್ತ ಜನತೆ ಖಂಡಿಸುತ್ತದೆ, ಜನತೆಯಿಂದ ಆಯ್ಕೆಯಾದ ಸರಕಾರ ಸಮಸ್ತ ಜನತೆಯ ಹಿತಾಸಕ್ತಿ ಕಾಪಾಡುವುದು ಬಿಟ್ಟು ಕೆಲವೇ ಶ್ರೀಮಂತರ ಪರ ನಿಲ್ಲುತ್ತಿರುವುದು ವರ್ತಮಾನದ ಬಹು ದೊಡ್ಡ ದುರಂತ.”ಇನ್ನಾದರೂ ಬಂಡವಾಳಿಗರ ಪರ ವಹಿಸುವುದು ಬಿಟ್ಟು ದುಡಿಯುವವರ ಹೊಟ್ಟೆಗೆ ಕನಿಷ್ಟ ಅನ್ನ ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ, ಅಲ್ಲದೆ ಹಸಿವಿನ ಬೆಂಕಿ ಆಳುವ ಸರಕಾರಗಳನ್ನು ಆಪೋಷನ ತೆಗೆದುಕೊಳ್ಳದೆ ಇರದು ಎಂಬ ಎಚ್ಚರಿಕೆಯನ್ನು ಪತ್ರ ನೀಡಿದೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ಜೊತೆಗೆ ಹಿರಿಯ ಸಾಹಿತಿ ದೇವನೂರ ಮಹಾದೇವ, ಭಾಷಾ ತಜ್ಞರಾದ ಪದ್ಮಶ್ರೀ ಗಣೇಶ ದೇವಿ, ಮಾಜಿ ಸಚಿವರಾದ ಡಾ. ಶರಣ ಪ್ರಕಾಶ ಪಾಟಿಲ, ಮಾಜಿ ಶಾಸಕರಾದ ಬಿ.ಆರ್. ಪಾಟಿಲ್, ಜನವಾದಿ ಮಹಿಳಾ ಸಂಘಟನೆಯ ಕೆ. ನೀಲಾ, ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು, ಹಿರಿಯ ಸಾಹಿತಿಗಳಾದ ಪ್ರೊ.ಆರ್.ಕೆ.ಹುಡಗಿ, ವಿಚಾರವಾದಿಗಳಾದ ಡಾ.ಸಿದ್ದನಗೌಡ ಪಾಟಿಲ, ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ಮಾಜಿ ಶಾಸಕರಾದ ಮೈಕಲ್ ಫರ್ನಾಂಡಿಸ್, ಮಾಜಿ ಶಾಸಕರಾದ ಡಾ. ಸುನೀಲಂ, ಸಾಮಾಜಿಕ ಮುಖಂಡರಾದ ಸಿ.ಬಿ. ಪಾಟೀಲ, ಕೃಷಿ ಆಯೋಗದ ಮಾಜಿ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿ, ಸಾಹಿತಿಗಳಾದ ಡಾ. ಕಾಶೀನಾಥ ಅಂಬಲಗೆ, ಸಾಮಾಜಿಕ ಮುಖಂಡರಾದ ಮಾರುತಿ ಗೋಖಲೆ, ಸಾಹಿತಿಗಳಾದ ಡಾ. ಪ್ರಭು ಖಾನಪೂರೆ, ಸಾಮಾಜಿಕ ಮುಖಂಡರುಗಳಾದ ದತ್ತಾತ್ರಯ ಇಕ್ಕಳಕಿ, ಅಬ್ದುಲ್ ಹಮೀದ್, ಮೆಹರಾಜ್ ಪಟೇಲ ಸೇರಿದಂತೆ ಹಲವಾರು ಜನರು ಸಹಮತಿ ಸೂಚಿಸಿ ಪತ್ರಕ್ಕೆ ತಮ್ಮ ಸಹಿ ಹಾಕಿದ್ದಾರೆ.