ಕೆರೆ ಕಾಯಕ ಜೀವ ಜಲ ಸಂರಕ್ಷಣೆಗೆ ಜನಾಂದೋಲನ-ಶಿವಾನಂದ ಕಳವೆ

[ಕೆರೆಗಾಗಿ ಕರೆ – 9448023715]

 

ಕೆರೆ ಹೂಳು ತೆಗೆಯಬೇಕು, ಅಂತರ್ಜಲ ಹೆಚ್ಚಿಸಬೇಕೆಂದು ‘ಬರ’ ಎಲ್ಲರನ್ನೂ ಎಚ್ಚರಿಸಿದೆ. 1700 ವರ್ಷಗಳ ಕೆರೆ ನೀರಾವರಿಯ ಭವ್ಯ ಇತಿಹಾಸ ಹೊಂದಿದ ನಾಡು ನಮ್ಮದು. ರಾಜ ರಾಣಿಯರು, ದಂಡನಾಯಕರು, ಗ್ರಾಮಲೆಕ್ಕಿಗರು, ಕೃಷಿಕರು, ಸೂಳೆಯರು ಕೆರೆ ಕಟ್ಟಿಸಿದ ಉದಾಹರಣೆಗಳು ನಮ್ಮಲ್ಲಿವೆ. ಮಳೆ ನೀರನ್ನು ಭೂಮಿಗೆ ಇಂಗಿಸಲು, ಕೃಷಿ ನೀರಾವರಿಗೆ ಬಳಸಲು ರೂಪಿಸಿದ ಜಲಪಾತ್ರೆಗಳಿವು. ವಿಕೇಂದ್ರೀಕೃತ ನೀರಾವರಿಯ ಅತ್ಯುತ್ತಮ ವ್ಯವಸ್ಥೆಯಿದು. ನಿಶ್ಚಿತ ಜಲನಿಧಿಗಳಾಗಿ ಶತಮಾನಗಳಿಂದ ನೆರವಾದ ಜಲಮೂಲಗಳು ಸರಕಾರೀ ಕೆರೆಗಳಾಗಿ ಸಮುದಾಯದಿಂದ ದೂರಾಗಿವೆ. ಹಳ್ಳಿಗರೇ ನಿರ್ವಹಿಸುತ್ತಿದ್ದ ವ್ಯವಸ್ಥೆ ಇಂದು ನಿರ್ಲಕ್ಷ್ಯದಿಂದ ಹಾಳಾಗಿವೆ. ಬಡಾವಣೆ, ಬಸ್ ನಿಲ್ದಾಣ, ಉದ್ಯಾನಗಳಾಗಿ ಅತಿಕ್ರಮಣಕ್ಕೆ ಒಳಗಾಗಿವೆ. ತೀವ್ರ ಜಲಕ್ಷಾಮದಿಂದ ಈಗ ನಾವು ಪಾಠ ಕಲಿಯುತ್ತಿದ್ದೇವೆ. ಬೃಹತ್ ಅಣೆಕಟ್ಟು, ಆಳದ ಕೊಳವೆ ಬಾವಿ, ಎತ್ತರದ ಕಾಂಕ್ರೀಟ್ ಟ್ಯಾಂಕ್‍ಗಳು ನೀರು ನೀಡುವುದಿಲ್ಲವೆಂದು ಖಾತ್ರಿಯಾಗಿದೆ. ಇಸ್ರೋದ ನೆರವು ಪಡೆದು ಆಳ ನೀರಿನ ಶೋಧಕ್ಕೆ ಆಡಳಿತ ಆಸಕ್ತಿವಹಿಸಿದೆ. ಆದರೆ ನಮ್ಮ ಪಾರಂಪರಿಕ ನೀರಾವರಿ ವ್ಯವಸ್ಥೆಯ ಸಂರಕ್ಷಣೆಗೆ ಗಮನಹರಿಸಿದೇ ಆಳ ನೀರಿನ ಶೋಧಕ್ಕೆ ಹೋದಂತೆಲ್ಲ ಏನಾಗುತ್ತದೆಂದು ಕೋಲಾರ ಸೇರಿದಂತೆ ರಾಜ್ಯದ ಎಲ್ಲೆಡೆ ಪಾಠಗಳಿವೆ.
ರಾಜ್ಯದಲ್ಲಿ ಸರಾಸರಿ 500 ಮಿಲಿ ಮೀಟರ್ ಮಳೆ ಸುರಿದರೂ ಒಂದು ಚದರ್ ಮೀಟರ್ ಜಾಗದಲ್ಲಿ 500 ಲೀಟರ್ ನೀರು ಬೀಳುತ್ತದೆ. ಒಂದು ಎಕರೆಯಲ್ಲಿ 15-20 ಲಕ್ಷ ಲೀಟರ್ ಸುರಿಯುತ್ತದೆ. ಪ್ರವಾಹವಾಗಿ ಓಡುವ ಮಳೆ ನೀರನ್ನು ಕೆರೆ ಕಟ್ಟೆಗಳಲ್ಲಿ ಹಿಡಿಯುವ ಹಿರಿಯರ ಜಾಣ್ಮೆಯನ್ನು ನಾವು ಮರೆತಿದ್ದೇವೆ. ಭವಿಷ್ಯದಲ್ಲಿ ನಮ್ಮ ನೀರಿನ ಸಂಕಷ್ಟ ಇನ್ನೂ ಹೆಚ್ಚಲಿದೆ, ಅಳಿದುಳಿದ ಕೆರೆಗಳ ಸಂರಕ್ಷಣೆ, ಹೊಸ ಕೆರೆಗಳ ನಿರ್ಮಾಣದ ಮೂಲಕ ನೀರ ನೆಮ್ಮದಿ ಸಾಧಿಸುವ ಹೊಣೆ ನಮ್ಮ ಮೇಲಿದೆ. ಜಲಸಾಕ್ಷರತೆಯ ಮೂಲಕ ನಮ್ಮ ಹೆಜ್ಜೆ ಕೆರೆ ಸಂರಕ್ಷಣೆಯತ್ತ ಸಾಗಬೇಕಿದೆ.
ಕೆರೆಯ ಕೆಲಸ ಯಾರು ಮಾಡಬೇಕು?
‘ಒಂದು ಕ್ಷಣ ಸರಕಾರವನ್ನು ಮರೆಯೋಣ, ನಾವೇನು ಮಾಡಬಹುದೆಂದು ಚಿಂತಿಸಿ ಮುಂದುವರಿಯೋಣ’ ಗುಜರಾತಿನ ಹಿರಿಯ ಜಲಕಾರ್ಯಕರ್ತ ಶ್ಯಾಮ್ ಜಿ ಭಾಯ್ ಅಂಟಾಲಾ ಮಾತು ನಮಗೆ ಪ್ರೇರಣೆಯಾಗಿದೆ. ನಗರ ಹಾಗೂ ಹಳ್ಳಿಗಳ ಜಲಮೂಲ ಸಂರಕ್ಷಣೆಯನ್ನು ಜನಗಳೇ ಮುಂದಾಗಿ ಸಾಧ್ಯವಾದಷ್ಟು ಕಾರ್ಯ ಮಾಡಬೇಕೆಂಬ ಹಂಬಲ ನಮ್ಮದು ಸಂರಕ್ಷಣೆ ಪುಣ್ಯದ ಕೆಲಸ. ಧಾರ್ಮಿಕ ನಾಯಕರು, ದೇಗುಲಗಳು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ವ್ಯಾಪಾರಿಗಳು, ಆಟೋ ಚಾಲಕರು, ಕೃಷಿಕರು, ವಿದ್ಯಾರ್ಥಿಗಳು, ಸ್ವಸಹಾಯ ಸಂಘಗಳು, ಪತ್ರಕರ್ತರು, ಕಾರ್ಮಿಕರು ಹೀಗೆ ಸಮಾಜದ ಎಲ್ಲರೂ ಕಾರ್ಯಕ್ಕೆ ಕೈಜೋಡಿಸಬಹುದು.
ನೀರು ಎಲ್ಲರಿಗೂ ಬೇಕು, ನಮ್ಮ ಆರೋಗ್ಯ ನಮ್ಮ ಕೆರೆ ಹೇಗಿದೆಯೆಂಬುದನ್ನು ಅವಲಂಬಿಸಿದೆ. ಪ್ರತಿ ಮನೆಯವರೂ ಇದರಲ್ಲಿ ಭಾಗವಹಿಸಬೇಕು. ನಮ್ಮ ಕೈಲಾದ ಸಣ್ಣ ಸಣ್ಣ ಕೆಲಸ ಮಾಡುತ್ತ ಮುಂದುವರಿಯಬೇಕು.
ಈ ಕೆಳಗಿನ ಕಾರ್ಯಕ್ಕೆ ನೆರವಾಗಬಹುದು.
• ಕೆರೆ ಗುರುತಿಸಿ ಸುತ್ತಲಿನ ಸಮುದಾಯವನ್ನು ಸಂಘಟಿಸಿ ಹೂಳೆತ್ತುವ ಹೆಜ್ಜೆಯಿಡಬಹುದು,
• ಕೆರೆ ಪುನಶ್ಚೇತನ ಕಾರ್ಯಕ್ಕೆ ಆರ್ಥಿಕ ನೆರವು ನೀಡಬಹುದು
• ಕುಟುಂಬದ ಪ್ರತಿಯೊಬ್ಬರಿಗೆ ದಿನಕ್ಕೊಂದು ರೂಪಾಯಿಯಂತೆ ಜಲ ಕಾರ್ಯಕ್ಕೆ ನೀಡಿದರೂ ಹನಿ ಹನಿ ಕೂಡಿ ದೊಡ್ಡ ಕಾರ್ಯ ಮಾಡಬಹುದು
• ಜೆಸಿಬಿ/ಹಿಟ್ಯಾಚಿ/ಟಿಪ್ಪರ್/ಟ್ರ್ಯಾಕ್ಟರ್ ಹೂಳೆತ್ತಲು ಉಚಿತವಾಗಿ ಕಳಿಸಬಹುದು
• ಕೆರೆ ಕಾಯಕಕ್ಕೆ ಆರ್ಥಿಕ ನೆರವು ಸಂಗ್ರಹಿಸಲು ಮುಂದಾಗಬಹುದು
• ಕೆರೆ ಸುತ್ತಲಿನ ಪರಿಸರ ಸ್ವಚ್ಚತೆಯ ಶ್ರಮದಾನದಲ್ಲಿ ಭಾಗವಹಿಸಬಹುದು
• ಜಲ ಜಾಗೃತಿ ಪ್ರಕಟಣೆ/ ಪ್ರದರ್ಶನ ಫಲಕಕ್ಕೆ ಸಹಾಯ ನೀಡಬಹುದು
• ಕೆರೆ ಕಾಮಗಾರಿ ನಡೆಯುವ ಸ್ಥಳಕ್ಕೆ ಬಂದು ಕೆಲಸಗಾರರ/ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸಬಹುದು. ಆಹಾರ, ತಂಪುಪಾನೀಯ ವ್ಯವಸ್ಥೆ ಮಾಡಬಹುದು

ಜೀವ ಜಲ ಸಂರಕ್ಷಣೆಯಿಂದ ಎಲ್ಲರ ಬದುಕು ಹಸನಾಗುತ್ತದೆಂದು ನಂಬಿದ್ದೇವೆ. ಜನತೆ ಮನಸ್ಸು ಮಾಡಿದರೆ ಬಹುದೊಡ್ಡ ಪರಿವರ್ತನೆ ಮಾಡಬಹುದು. ನಾಡಿನ ನೀರಿನ ನೋವಿಗೆ ಸ್ಪಂದಿಸಲು ನಾವು ಮುಂದಾಗೋಣ. ಕೆರೆ ಕಾಯಕಕ್ಕೆ ಕೈಜೋಡಿಸೋಣ.ಒಂದು ಹೆಜ್ಜೆ ಜಲಸಾಕ್ಷರತೆಯ ಕಡೆಗೆ ಸಮುದಾಯವನ್ನು ಮುನ್ನೆಡೆಸೋಣ, ಜಲ ಜಾಗೃತ ಪಡೆ ಕಟ್ಟೋಣ, ಮನುಕುಲ-ಜೀವ ಸಂಕುಲ ಉಳಿಸೋಣ.

ಮಳೆ ಸುರಿಯದ ನೆಲೆಯಲ್ಲಿ ಕೆರೆಯಿಂದ ಪ್ರಯೋಜನವೇನು?
ಹವಾಮಾನ ಬದಲಾಗಿದೆ, ಮಳೆಗಾಲದಲ್ಲಿ ಮಳೆ ಸುರಿಯದಿದ್ದರೂ ಬೇಸಿಗೆಯಲ್ಲಿ ಅಕಾಲಿಕ ಮಳೆ ಜೋರಾಗಿ ಸುರಿಯುತ್ತಿದೆ. ಇತ್ತೀಚಿನ ಎರಡು ವರ್ಷಗಳಲ್ಲಿ ಮಲೆನಾಡಿಗಿಂತ ಬಯಲುಸೀಮೆಯ ಕೆಲವೆಡೆ ಹೆಚ್ಚು ಮಳೆ ಸುರಿದಿದೆ. ಕೋಲಾರದಲ್ಲಿ 740 ಮಿಲಿ ಮೀಟರ್ ಮಳೆ ಸುರಿಯುತ್ತಿತ್ತು, ಕಳೆದ ವರ್ಷ 1040 ಮಿಲಿ ಮೀಟರ್ ಬಂದಿದೆ. 600 ಮಿಲಿ ಮೀಟರ್ ಸುರಿಯುತ್ತಿದ್ದ ಕಲಬುರಗಿಯಲ್ಲಿ 2400 ಮಿಲಿ ಮೀಟರ್ ಬಂದಿದೆ. ಮಳೆ ಪ್ರಕೃತಿ ನಮಗೆ ನೀಡಿದ ಅಮೂಲ್ಯ ಸಂಪತ್ತು. ಅದು ಅಕಾಲಿಕವಾಗಿ ಸುರಿದರೂ ಸಂಗ್ರಹಿಸಿ ಬದುಕುವ ಜಾಣ್ಮೆ ನಮಗೆ ಬೇಕು. 500-600 ಮಿಲಿ ಮೀಟರ್ ಮಳೆ ಸುರಿಯುವ ಪ್ರದೇಶದಲ್ಲಿ ಎಕರೆಯಲ್ಲಿ 25-30 ಲಕ್ಷ ಲೀಟರ್ ಸುರಿಯುತ್ತದೆ. ಒಂದೊಂದು ಕೆರೆಯ ಜಲಾನಯನ ಕ್ಷೇತ್ರ ಸಾವಿರಾರು ಎಕರೆಯಿದೆ. ಕೋಟ್ಯಾಂತರ ಲೀಟರ್ ಮಳೆ ನೀರು ಹರಿದು ಓಡುವಾಗ ಅವನ್ನು ಕೆರೆಯಲ್ಲಿ ಸಂಗ್ರಹಿಸಬಹುದು. ಜಲಪಾತ್ರೆಗಳು ಬಾನಿಗೆ ತೆರೆದಿದ್ದರೆ ಸಹಜವಾಗಿ ನೀರು ನಿಲ್ಲುತ್ತದೆ.
ಒಮ್ಮೆಗೆ ಕೆರೆ ತುಂಬಿದರೆ ಐದಾರು ತಿಂಗಳು ಕೃಷಿ ಬದುಕು ಸಾಗುವುದನ್ನು ಬಯಲುನಾಡಿನಲ್ಲಿ ನೋಡುತ್ತೇವೆ. ಅದರಲ್ಲಿಯೂ ಎರೆ ಮಣ್ಣಿನ ಹೊಲಗಳಿಗೆ 400 ಮಿಲಿ ಮೀಟರ್ ಮಳೆ ಸುರಿದರೂ ಸುಗ್ಗಿ ಸಂಭ್ರಮ ಹೆಚ್ಚಿಸುವ ತಾಕತ್ತು ಪಡೆದಿವೆ. ಹೊಲ, ಗುಡ್ಡ, ರಸ್ತೆ ಹೀಗೆ ಎಲ್ಲೆಡೆಗಳಿಂದ ಹರಿಯುವ ನೀರನ್ನು ಊರಿನ ಕೆರೆಗಳಲ್ಲಿ ತುಂಬುವುದು ಪ್ರಮುಖ ಕಾರ್ಯವಾಗಿದೆ. ಹೀಗಾಗಿ ಕೆರೆ ಸಂರಕ್ಷಣೆಗೆ ನಾವು ಸದಾ ಜಾಗೃತರಾಗಿರಬೇಕು. ಈಗಾಗಲೇ ಕೆರೆ ನಿರ್ಮಿಸಿದ ರಾಯಚೂರಿನ ಮಾನ್ವಿ ತಾಲೂಕಿನ ಸಿಂಗಡದಿನ್ನಿ, ಬಸಾಪುರಗಳಲ್ಲಿ ಕೇವಲ 300 ಮಿಲಿ ಮೀಟರ್ ಮಳೆ ಸುರಿದಾಗ ಕೆರೆಯಲ್ಲಿ ನೀರು ಸಂಗ್ರಹಿಸಿದವರು ‘ನಮ್ಮೂರಿಗೆ ಬರವಿಲ್ಲ’ ಎಂದು ಕಳೆದ ವರ್ಷದ ಬರಗಾಲದಲ್ಲಿ ಹೇಳಿದ್ದಾರೆ. ನಾವು ನಮ್ಮ ಕೃಷಿ, ಅರಣ್ಯ ಭೂಮಿಯಲ್ಲಿ ಬಿದ್ದ ನೀರನ್ನು ಸಂಗ್ರಹಿಸಲು ಕೆರೆ ನಿರ್ಮಿಸುವ ತುರ್ತು ಅಗತ್ಯವಿದೆ.
ಹೂಳು ತೆಗೆಯುವ ಮುಂಚೆ ಕೆರೆಯ ದಂಡೆ ಗಮನಿಸಿರಿ
ಕೆರೆ ದಂಡೆಗಳು ಅರ್ಧವೃತ್ತಾಕಾರವಾಗಿರುತ್ತವೆ. ಕೆರೆಯಲ್ಲಿ ನೀರು ತುಂಬಿದ ಬಳಿಕ ಕೋಡಿಗಳ ಮೂಲಕ ಸರಾಗವಾಗಿ ನೀರು ಹೊರಕ್ಕೆ ಹರಿಯಬೇಕು. ಒಂದು ಕೆರೆ ತುಂಬಿದ ಬಳಿಕ ಕೆಳಗಡೆಯ ಇನ್ನೊಂದು ಕೆರೆಗೆ ಹರಿಯುವಂತೆ ಕಾಲುವೆಗಳನ್ನು ಮೈಸೂರು ಸೀಮೆಯಲ್ಲಿ ನೋಡಬಹುದು. ಒಂದು ಕೆರೆಯ ಹೂಳು ತೆಗೆಯುವ ಮುನ್ನ ಕೆರೆದಂಡೆಗಳು ಸುರಕ್ಷಿತವಾಗಿದೆಯೇ ಪರಿಶೀಲಿಸುವುದು ಮುಖ್ಯ ಕೆಲಸ. ನೀರು ಹೊರಹೋಗುವ ತೂಬಿನ ಸ್ಥಿತಿ ಗಮನಿಸಿ ಸರಿಪಡಿಸುವ ಅಗತ್ಯವಿದೆ. ಕೆರೆ ದಂಡೆ ರಸ್ತೆ ನಿರ್ಮಾಣದಿಂದ ಶಿಥಿಲವಾಗಿರಬಹುದು, ಮರಗಳ ಬೇರುಗಳಿಂದ ಬಿರುಕು ಮೂಡಿರಬಹುದು, ದಂಡೆಯಲ್ಲಿದ್ದ ಮರಗಳು ಸತ್ತ ಬಳಿಕ ಬೇರಿನ ಜಾಗದ ಭೂಮಿ ಪೊಳ್ಳಾಗಿರಬಹುದು. ದನಕರುಗಳ ಓಡಾಟ, ಮಳೆ ರಭಸದಿಂದ ಕುಸಿದಿರಬಹುದು. ಇವನ್ನು ಗಟ್ಟಿಮಣ್ಣಿನಿಂದ ಸರಿಪಡಿಸುವುದು ಮುಖ್ಯ. ಕೆರೆಯಲ್ಲಿ ನೀರು ತುಂಬಿದಾಗ ದಂಡೆಯಲ್ಲಿ ದೋಷವಿದ್ದರೆ ನೀರು ನಿಲ್ಲಿಸಲು ಸಾಧ್ಯವಿಲ್ಲ. ಒಂದು ಸುತ್ತು ದಂಡೆಯ ಮೇಲ್ಭಾಗ, ಒಳಪಾಶ್ರ್ವ ಹಾಗೂ ಹೊರಮೈ ಗಮನಿಸಿದರೆ ಪರಿಸ್ಥಿತಿ ಅರಿಯಬಹುದು.
ಕಳೆ ಗಿಡಗಳ ಅತಿಕ್ರಮಣ
ಜಾಲಿಯ ಕಂಟಿಗಳು ಕೆರೆ ಪಾತ್ರಗಳನ್ನು ಆವರಿಸಿದ್ದನ್ನು ಎಲ್ಲೆಡೆ ನೋಡುತ್ತೇವೆ. ಇವುಗಳನ್ನು ಬೇರು ಸಹಿತ ಕಿತ್ತು ನಾಶಪಡಿಸಿದರೆ ಮಾತ್ರ ಕೆರೆಯಲ್ಲಿ ನೀರು ಹೇಗೆ ನಿಲ್ಲಿಸಬಹುದೆಂದು ತಿಳಿಯುತ್ತದೆ. ನೀರಿನಲ್ಲಿ ತೇಲುವ ‘ಅಂತರಗಂಗೆ’ ಸೇರಿದಂತೆ ಇನ್ನೂ ಕೆಲವು ಕಳೆ ಗಿಡಗಳು ನೀರನ್ನೂ ಹಾಳು ಮಾಡುತ್ತವೆ. ಆಪು(ಬಾದೆ)ಹುಲ್ಲು ನೀರಿರುವ ನೆಲೆ ಆಕ್ರಮಿಸುತ್ತದೆ. ಕಳೆ ಗಿಡಗಳ ನಿಯಂತ್ರಣಕ್ಕೆ ಆಗಾಗ ಗಮನಹರಿಸಬೇಕು. ಕೆರೆಯ ಕಳೆಯ ನಿಯಂತ್ರಣಕ್ಕೆ ಸರಕಾರಕ್ಕೆ ಮೊರೆ ಹೋಗುವ ಬದಲು ಸಮುದಾಯ ನೇತೃತ್ವದಲ್ಲಿ ಕಾರ್ಯನಿರ್ವಹಿಸಬಹುದು.

ದಂಡೆಯಲ್ಲಿ ಯಾವ ಮರ ಬೆಳೆಸುತ್ತೀರಿ?
ಕೆರೆ ನಿರ್ಮಿಸಿದ ಬಳಿಕ ಕೆರೆ ದಂಡೆಯ ಸುತ್ತ ಓಡಾಟಕ್ಕೆ ಮಾರ್ಗ ರೂಪಿಸುವುದು ಎಲ್ಲರಿಗೂ ಖುಷಿಯ ಕೆಲಸ. ಕೆರೆಯ ಸುತ್ತ ಉದ್ಯಾನ ರೂಪಿಸುವ ಉತ್ಸಾಹ ಸಹಜವಾಗಿದೆ. ನಗರವನ್ನು ಸುಂದರವಾಗಿಸಲು ಹೂಳು ತೆಗೆಯುವ ಯೋಜನೆಯಲ್ಲಿಯೇ ಇದಕ್ಕೆ ಹಣ ನಿಗದಿಪಡಿಸಿರುತ್ತಾರೆ. ಕೆರೆ ಎಷ್ಟು ಗಾತ್ರವಿದೆ? ದಂಡೆ ಎಷ್ಟು ಅಗಲವಿದೆ? ಕೆರೆ ಎಲ್ಲಿದೆ? ಎಂಬುದರ ಆಧಾರದಲ್ಲಿ ದಂಡೆಯ ಮರಗಳ ಆಯ್ಕೆ ನಡೆಯಬೇಕು. ದಂಡೆಯ ಮಣ್ಣು ಕುಸಿಯದಂತೆ ಲಾವಂಚದ ಹುಲ್ಲು ಹಾಕಬಹುದು. 2004ರಲ್ಲಿ ಒಂದು ಕೆರೆ ನಿರ್ಮಿಸಿದಾಗ ದಂಡೆಗೆ ‘ಪ್ಯಾರಾಗ್ರಾಸ್’ ಹಾಕಲು ಒಬ್ಬರು ಸಲಹೆ ನೀಡಿದರು, ದನಕರುಗಳಿಗೂ ಉತ್ತಮ ಮೇವಾಯಿತೆಂದು ನಾಟಿ ಮಾಡಿದೆವು. ಈಗ ಈ ಹುಲ್ಲು ಕೆರೆಯಂಗಳಕ್ಕೆ ಜಿಗಿದು ಕೆರೆಯನ್ನು ಆವರಿಸಿದೆ! ಹೀಗಾಗಿ ಹೊಸ ಕೆರೆಯ ದಂಡೆಗೆ ಯಾವುದನ್ನು ನಾಟಿ ಮಾಡಬೇಕೆಂದು ಎಚ್ಚರಿಕೆಯಿಂದ ನಿರ್ಧರಿಸಬೇಕು. ದಂಡೆಯ ನೆರಳಿಗೆ ಅನುಕೂಲವೆಂದು ಮಾವು, ಹಲಸು, ಸುಬಾಬುಲ್, ಆಲ, ಮೇಪ್ಲವರ್ ಸಸ್ಯ ನಾಟಿ ಮಾಡಲಾಗುತ್ತದೆ. ಫಲವತ್ತಾದ ಮಣ್ಣಿನಲ್ಲಿ ಬಹುಬೇಗ ಮರಗಳು ಬೆಳೆಯುತ್ತವೆ. ಆದರೆ ದಂಡೆಯ ಆಳಕ್ಕೆ ಬೇರು ಇಳಿಸುವುದರಿಂದ ಮಣ್ಣು ಸಡಿಲವಾಗುತ್ತವೆ. ವಿವಿಧ ಜಾತಿಯ ಬಿದಿರನ್ನು ಬೆಳೆಸುವುದರಿಂದ ಮಣ್ಣಿನ ಸಂರಕ್ಷಣೆಯಾಗುತ್ತದೆ. ಬಗಿನೆ ಬೇರುಗಳು ಕೆರೆದಂಡೆಗೆ ಹಾನಿ ನೀಡುವುದಿಲ್ಲ, ನೆರಳಿಗಾಗಿ ಇಂಥ ಮರಗಳನ್ನು ಬೆಳೆಸಬಹುದು. ಮುರುಗಲು(ಕೋಕಂ), ಚೆರ್ರಿ, ಸೀತಾ ಅಶೋಕ, ದೇವಕಣಗಿಲೆ ಬೆಳೆಸಬಹುದು. ದಂಡೆಯಲ್ಲಿ ಮರ ಬೆಳೆಸುವ ವಿಚಾರದಲ್ಲಿ ಸ್ಥಳೀಯ ಹಿರಿಯರ/ ಅನುಭವಿಗಳ ಸಲಹೆ ಪಡೆಯುವುದು ಸೂಕ್ತವಿದೆ.
ಕೆರೆಯ ಫಲಾನುಭವಿಗಳು ಯಾರು?
ಕೃಷಿಕರಿಗೆ ಕೆರೆಯ ನೀರು ಬಳಕೆಯಾಗುತ್ತಿದ್ದರೆ ಎಷ್ಟು ಕ್ಷೇತ್ರಕ್ಕೆ ಯಾವ ಬೆಳೆಗೆ ಉಪಯೋಗವಾಗುತ್ತದೆಂದು ತಿಳಿಯಬೇಕು. ಕೆರೆಯ ನೀರನ್ನು ಯಾವ ಕಾಲದಲ್ಲಿ ನೀರಾವರಿಗೆ ಬಳಸಲಾಗುತ್ತದೆಂದು ಮಾಹಿತಿ ಸಂಗ್ರಹಿಸಬೇಕು. ಬೇಸಿಗೆಯಲ್ಲಿ ತೂಬಿನ ಮೂಲಕ ನೀರು ಹೋಗುವುದನ್ನು ತಡೆದರೆ ಸುತ್ತಲಿನ ಬಾವಿಗಳಲ್ಲಿ ಅಂತರ್ಜಲ ಉಳಿಯುತ್ತದೆ. ವಿವೇಚನೆಯಿಲ್ಲದೇ ಮಳೆ ಕೊರತೆಯ ದಿನಗಳಲ್ಲಿ ನೀರನ್ನು ಕಾಲುವೆ ಮೂಲಕ ಹರಿಸುವುದರಿಂದ ಜನ ಜಾನುವಾರುಗಳು ಜಲಕ್ಷಾಮದಿಂದ ಬಳಲುವುದನ್ನು ತಪ್ಪಿಸಬಹುದು. ಮನುಷ್ಯರ ಕುಡಿಯುವ ನೀರಿನ ಬಳಕೆಗಾಗಿ ಕೆರೆಯ ಜಾಗದಲ್ಲಿ ಪ್ರತ್ಯೇಕವಾಗಿ ಗೂಟಗಳನ್ನು ನಿಲ್ಲಿಸುವ ವ್ಯವಸ್ಥೆ ಶಿವಮೊಗ್ಗದ ಸೊರಬ ಪ್ರದೇಶದಲ್ಲಿದೆ. ಇಡೀ ಕೆರೆಗೆ ದನಕರುಗಳು ಇಳಿದು ರಾಡಿ ಮಾಡುವುದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆಂದು ಈ ವಿಧಾನ ಚಾಲ್ತಿಯಲ್ಲಿತ್ತು. ಒಂದು ಕೆರೆಯ ನೀರಿನ ಬಳಕೆ ವಿಚಾರದಲ್ಲಿ ಹೂಳೆತ್ತುವ ಮುನ್ನ ಅರಿಯಬೇಕು. ಕೆರೆಯ ಹೂಳೆತ್ತಿದ ವರ್ಷದಲ್ಲಿ ಭೂಮಿಗೆ ನೀರಿಂಗುವ ಅವಕಾಶ ಜಾಸ್ತಿಯಾಗಿ ಕೆಲವೊಮ್ಮೆ ತೂಬಿನಿಂದ ಮಳೆಗಾಲದಲ್ಲಿಯೂ ನೀರು ಹೊರ ಹರಿಯುವುದಿಲ್ಲ. ಕೆರೆ ಹೂಳೆತ್ತಿದ್ದರಿಂದ ನೀರು ಹೊರ ಬರುತ್ತಿಲ್ಲವೆಂದು ಜನ ಆಗ ಟೀಕಿಸುತ್ತಾರೆ. ಒಂದೆರಡು ವರ್ಷ ಈ ಸಮಸ್ಯೆ ಉದ್ಬವಿಸಬಹುದು. ಜನತೆಗೆ ಪರಿಸ್ಥಿತಿ ಮನದಟ್ಟು ಮಾಡಲು ನೀರು ಬಳಕೆಯ ಚರ್ಚೆ ಮಾಡುವುದು ಸೂಕ್ತ.
ಚಿತ್ರದುರ್ಗದ ಚಳ್ಳಕೆರೆಯ ವಿಡಪನಕುಂಟೆಯ ಸನಿಹದ ರಾಣಿಕೆರೆಯನ್ನು ದಶಕಗಳ ಪರಿಶ್ರಮದಿಂದ ರೂಪಿಸಲಾಗಿದೆ. ಆಗ ಕೋಣಗಳ ಗಾಡಿಯಲ್ಲಿ ಕೆರೆಯ ಮಣ್ಣು ಸಾಗಿಸಿದ್ದರೆಂದು ಹಳ್ಳಿ ಹಿರಿಯ ಹೊಸ್ಮನೆ ಹನುಂತಪ್ಪ (113) ಹೇಳಿದ್ದರು. ಹೇರೆತ್ತು, ಕೋಣ, ಮನುಷ್ಯರ ಪ್ರಯತ್ನದಿಂದ ಕೆರೆ ನಿರ್ಮಿಸುವ ಕಾಲ ಈಗ ಬದಲಾಗಿದೆ. ಜೆಸಿಬಿ, ಹಿಟ್ಯಾಚಿಗಳು ಮಣ್ಣು ಅಗೆಯಲು ಬಂದಿವೆ. ದೊಡ್ಡ ಕೆರೆಗಳ ಹೂಳು ತೆಗೆಯುವಾಗ ಹೆಚ್ಚು ಸಾಮಥ್ರ್ಯದ ಯಂತ್ರಗಳು ಅನುಕೂಲವಾಗುತ್ತವೆ. ಕೆರೆಯ ಹೂಳು ತೆಗೆದು ಮಳೆ ನೀರು ಶೇಖರಿಸುವುದು ನಮ್ಮ ಮುಖ್ಯ ಉದ್ದೇಶವಾದ್ದರಿಂದ ಯಂತ್ರ ಬಳಸಿದರೆ ಬೇಗ ಕೆಲಸ ಮುಗಿಸಬಹುದು. ಮನುಷ್ಯರನ್ನು ಬಳಸಿದರೆ ಬಡವರಿಗೆ ಕೆಲಸ ಸಿಗುತ್ತದೆ, ಕೆರೆ ನಿರ್ಮಾಣದ ಅನುಭವವೂ ಆಗುತ್ತದೆಂದು ಕೆಲವರು ಹೇಳಬಹುದು. ಆದರೆ ಈಗ ನಮ್ಮ ಕೆಲಸದ ಸಾಮಥ್ರ್ಯ ಕಡಿಮೆಯಾಗಿದೆ. ಅದರಲ್ಲಿಯೂ ಉರಿ ಬಿಸಿಲಿನ ಎಪ್ರಿಲ್-ಮೇ ತಿಂಗಳಿನಲ್ಲಿ ದುಡಿಯುವುದಕ್ಕೆ ಶ್ರಮದ ಅನುಭವ ಬೇಕು. ಒಂದು ತಾಸು ಜೆಸಿಬಿ 750-800 ರೂಪಾಯಿ ಖರ್ಚಾಗುತ್ತದೆ. ಅದು ಗಂಟೆಗೆ 28-30 ಕ್ಯುಬಿಕ್ ಮೀಟರ್ ಮಣ್ಣು ಅಗೆಯುತ್ತದೆ. ಒಂದು ಟ್ರ್ಯಾಕ್ಟರ್‍ನಲ್ಲಿ ಒಣ ಮಣ್ಣಾದರೆ 2.5 ಕ್ಯುಬಿಕ್ ಮೀಟರ್ ಸಾಗಿಸಬಹುದು. ಟಿಪ್ಪರ್‍ಗಳಲ್ಲಿ 3 ಕ್ಯುಬಿಕ್ ಮೀಟರ್ ಒಯ್ಯಬಹುದು. ದೊಡ್ಡ ಕೆರೆ ಹೂಳೆತ್ತಲು ಹಿಟ್ಯಾಚಿ, ಟಿಪ್ಪರ್‍ಗಳು ಸೂಕ್ತ. ಒಂದು ಕೆಲಸ ಆರಂಭಿಸಿ ಬೇಗ ಮುಗಿಸಿದರೆ ಹಣ, ಸಮಯದ ಉಳಿತಾಯವಾಗುತ್ತದೆ. ಕೆಲವೊಮ್ಮೆ ಬೇಸಿಗೆ ಮಳೆ ಸುರಿದರೆ ಹೂಳೆತ್ತಲಾಗದೇ ಕೆಲಸ ಕೈಬಿಡುವ ಪರಿಸ್ಥಿತಿ ಬರುತ್ತದೆ. ಈಗ ಕಾಲ ಬದಲಾಗಿದೆ. ಸಂಚಾರಕ್ಕೆ ಎತ್ತಿನಗಾಡಿ, ಕಾಲ್ನಡಿಗೆ ಮರೆತು ಬಸ್ಸು, ಕಾರುಗಳಲ್ಲಿ ನಾವು ಸಂಚರಿಸುತ್ತೇವೆ. ಹೇಗೆ ಸಂಚಾರ ಅನುಕೂಲತೆಗೆ ಯಂತ್ರ ಬಳಸುತ್ತೇವೆಯೋ ಹಾಗೇ ಜಲಸಂರಕ್ಷಣೆಯ ಪುಣ್ಯದ ಕೆಲಸ ತುರ್ತಾಗಿ ಮುಗಿಸಲು ಯಂತ್ರಗಳು ಸೂಕ್ತ.
ಮಣ್ಣು ಸಾಗಣೆ ಹತ್ತಿರವಿದ್ದಷ್ಟೂ ಅನುಕೂಲ
ಒಂದು ಕ್ಯುಬಿಕ್ ಮೀಟರ್ ಮಣ್ಣು ಅಗೆದು ಕಿಲೋ ಮೀಟರ್ ಸನಿಹದಲ್ಲಿ ಹಾಕಲು 140 ರೂಪಾಯಿ ಖರ್ಚಾಗುತ್ತದೆಂದು ಸರಕಾರಿ ದಾಖಲೆ ಹೇಳುತ್ತದೆ. ಶಿರಸಿಯ ಆನೆಹೊಂಡದ 8ಸಾವಿರ ಕ್ಯುಬಿಕ್ ಮೀಟರ್ ಮಣ್ಣು ಸಾಗಿಸಲು ಇತ್ತೀಚೆಗೆ ನಮಗೆ 10 ದಿನಗಳು ಬೇಕಾಯಿತು. ಕ್ಯುಬಿಕ್ ಮೀಟರ್ ಖರ್ಚು 80 ರೂಪಾಯಿ ಆಗಿದೆ. ಹೊಲ/ತೋಟಕ್ಕೆ ಕೆಲವರು ಕೆರೆಯ ಮಣ್ಣು ಒಯ್ಯುತ್ತಾರೆ. ನಮ್ಮ ಜೆಸಿಬಿಯಿಂದ ಅವರಿಗೆ ಮಣ್ಣು ತುಂಬಿಸಿದರೆ ಸಾಗಣೆ ವೆಚ್ಚ ಕಡಿಮೆಯಾಗುತ್ತದೆ. ಕೊಪ್ಪಳದ ಯಲಬುರ್ಗಾದ 96 ಎಕರೆಯ ತಲ್ಲೂರು ಕೆರೆಯ 4 ಲಕ್ಷ ಕ್ಯುಬಿಕ್ ಮೀಟರ್ ಮಣ್ಣು ತೆಗೆಯಲು ಇತ್ತೀಚೆಗೆ ಯೋಜನೆ ರೂಪಿಸಿದೆವು. ಖರ್ಚು 4 ಕೋಟಿಯಾಗಬಹುದೆಂದು ಅಂದಾಜಿಸಿದೆವು. ಈಗ ಸುಮಾರು 20 ಎಕರೆ ಕೆರೆಯ ಮಣ್ಣು ತೆಗೆದಿದ್ದೇವೆ. ಪ್ರತಿ ದಿನ 35-40 ಟ್ರ್ಯಾಕ್ಟರ್‍ಗಳನ್ನು ರೈತರು ಕೆರೆಯಂಗಳಕ್ಕೆ ತಂದು ಹೊಲಕ್ಕೆ ಮಣ್ಣು ಒಯ್ಯುತ್ತಿದ್ದಾರೆ. ಇದರಿಂದ ಹೂಳೆತ್ತುವ ವೆಚ್ಚ ಕಡಿಮೆಯಾಗುತ್ತಿದೆ. ಖ್ಯಾತ ಚಲನಚಿತ್ರ ನಟ ಯಶ್ ಈ ಕೆರೆಯ ಹೂಳು ತೆಗೆಸುತ್ತಿದ್ದಾರೆ. ಇತ್ತೀಚೆಗೆ ಕೆರೆ ಕಾಯಕದ ಚರ್ಚೆ ನಡೆಸುವಾಗ ನಾವು ಕೆರೆಯ ಹೂಳೆತ್ತಲು ಕಡಿಮೆ ಯಂತ್ರ ಇಡುವುದರಿಂದ ವೆಚ್ಚ ಕಡಿಮೆಯಾಗುತ್ತದೆ, ರೈತರು ಟ್ರ್ಯಾಕ್ಟರ್ ತರುವುದರಿಂದ ಅನುಕೂಲವಾಗುತ್ತದೆಂಬ ಪ್ರಶ್ನೆ ಎತ್ತಿದರು. ವಿಷಯ ಮೇಲ್ನೋಟಕ್ಕೆ ಸರಿಯೆನಿಸಬಹುದು. ಆದರೆ ಯಾವಾಗಲೂ ಕೆರೆಯ ಕೆಲಸ ಮೇ 15ರೊಳಗೆ ಮುಗಿಯಬೇಕು. ಮಳೆ ಸುರಿದರೆ ಕೆಲಸ ಅಸ್ತವ್ಯಸ್ಥವಾಗುತ್ತದೆ, ಮುಂದಿನ ವರ್ಷ ಕೆರೆ ಒಣಗುವುದನ್ನು ಕಾಯುತ್ತ ಕೂಡ್ರಬೇಕಾಗುತ್ತದೆ. ಕೆರೆ ಹೂಳೆತ್ತುವುದು ನಮ್ಮ ಮುಖ್ಯ ಕೆಲಸವೇ ಹೊರತೂ ರೈತರ ಹೊಲಕ್ಕೆ ಮಣ್ಣು ನೀಡುವುದಲ್ಲ. ಒಂದೆಡೆ ರೈತರಿಗೆ ಮಣ್ಣು ನೀಡಲು ವ್ಯವಸ್ಥೆ ಮುಂದುವರಿಸಿ ಹೆಚ್ಚುವರಿ ಟಿಪ್ಪರ್ ಅಳವಡಿಸಲು ನಿರ್ಧರಿಸಿದೆವು. ಈಗ ಕೆಲಸ ವೇಗವಾಗಿ ನಡೆಯುತ್ತಿದೆ. ರೈತರು ಟ್ರ್ಯಾಕ್ಟರ್‍ನಲ್ಲಿ ಮಣ್ಣು ಸಾಗಿಸುವ ದಿನಗಳಲ್ಲಿ ಹಬ್ಬ/ ಜಾತ್ರೆ ಬಂದರೆ ಕೆರೆಯ ಕೆಲಸ ನಿಧಾನವಾಗುತ್ತದೆ. ಹೀಗಾಗಿ ಪರಿಸರ ಪರಿಸ್ಥಿತಿ ಅರಿತು ಕಾರ್ಯ ವೇಗ ಪಡೆಯಲು ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ಮಣ್ಣು ಒಣಗಿದ್ದಾಗ ಖರ್ಚು ಕಡಿಮೆ
ಶಿರಸಿಯ ದೇವಿಕೆರೆಯ ಹೂಳೆತ್ತುವ ಕಾರ್ಯಕ್ಕೆ ಹಣ ಮಂಜೂರಿಯಾಗಿತ್ತು. ಆದರೆ ಕೆರೆಯ ಒಂದು ಪಾಶ್ರ್ವದಲ್ಲಿ ಎರಡು ಎಕರೆಯಲ್ಲಿ ನಾಲ್ಕಡಿ ನೀರಿತ್ತು. ಕೆರೆಯ ನೀರು ಒಣಗಿದರೆ ಮಾತ್ರ ಮಣ್ಣು ಸಾಗಣೆ ಸುಲಭವಾಗುತ್ತದೆ. ರಸ್ತೆಯಲ್ಲಿ ರಾಡಿ ಬೀಳುವುದರಿಂದ ಸಂಚಾರ ಕಷ್ಟವಾಗುತ್ತದೆ. ಹೀಗಾಗಿ ನೀರು ಒಣಗಲು ಏಪ್ರಿಲ್ ತಿಂಗಳವರೆಗೆ ಕಾಯಲಾಯಿತು. ನಂತರ ಸತತ ಐದು ದಿನ 40 ಅಶ್ವಶಕ್ತಿಯ ಪಂಪ್ ಮೂಲಕ ನೀರು ಹೊರ ಹಾಕಲಾಯ್ತು. ಆದರೂ ಕೆರೆ ಒಣಗುವುದು ಕಷ್ಟವೆಂದು ಅರಿವಿಗೆ ಬಂದಿತು. ಕೆರೆಯನ್ನು ಆವರಿಸಿದ ಕಳೆ ಗಿಡಗಳನ್ನು ಜೆಸಿಬಿ ಸಹಾಯದಿಂದ ಕಿತ್ತು ರಾಶಿ ಹಾಕಿದ ಬಳಿಕ ಮಣ್ಣು ಒಣಗಿತು. ಒದ್ದೆ ಮಣ್ಣು ಭಾರ ಜಾಸ್ತಿ, ಒಣ ಮಣ್ಣು ಹಗುರವಾಗಿದ್ದು ಸಾಗಣೆಗೆ ಅನುಕೂಲವಾಗುತ್ತದೆ. ಇದರಿಂದ ಕೆರೆ ಹೂಳೆತ್ತುವ ವೆಚ್ಚ ಕಡಿಮೆಯಾಗುತ್ತದೆ.

ಕೆರೆಯ ಗಾತ್ರ, ಹೂಳಿನ ಪ್ರಮಾಣ ಅರಿಯಿರಿ
ಕೆರೆಯಲ್ಲಿರುವ ಹೂಳಿನ ಪ್ರಮಾಣ ತಿಳಿಯುವುದು ಹೇಗೆ? ಪ್ರಶ್ನೆ ಹಲವರದು. ಕೆರೆಯಂಗಳದಲ್ಲಿ ಒಂದು ಜಾಗದಲ್ಲಿ ಜೆಸಿಬಿ ಸಹಾಯದಿಂದ ಹತ್ತಡಿ ಅಗೆದರೆ ಅಲ್ಲಿನ ಮಣ್ಣಿನ ಸ್ವರೂಪ ಗಮನಿಸಿ ಹೂಳು ಎಷ್ಟಿದೆಯೆಂದು ತಿಳಿಯಬಹುದು. ಇಲ್ಲವೇ ಬಿದಿರು ಕೋಲನ್ನು ಕೆರೆಯ ಕೆಸರಿನಲ್ಲಿ ಹುಗಿದರೂ ಹೂಳಿನ ಅಂದಾಜು ದೊರೆಯುತ್ತದೆ. ಒಂದು ಕ್ಯುಬಿಕ್ ಮೀಟರ್ ಮಣ್ಣು ತೆಗೆದ ಗುಂಡಿಯಲ್ಲಿ ಒಂದು ಸಾವಿರ ಲೀಟರ್ ನೀರು ಶೇಖರಿಸಬಹುದು. ಕೆರೆಯ ಪಾತ್ರದ ಎಷ್ಟು ಹೂಳು ತೆಗೆಯುತ್ತೀರಿ ಎಂಬ ಲೆಕ್ಕದಲ್ಲಿ ಕೆರೆಯ ನೀರು ಸಂಗ್ರಹಣಾ ಪ್ರಮಾಣ ಅರಿಯಬಹುದು. ಕೆರೆಯ ದಂಡೆ ಗಟ್ಟಿಯಾಗಿದ್ದಲ್ಲಿ ಎರಡು ಮೂರು ಅಡಿಯಷ್ಟು ನೀರನ್ನು ದಂಡೆಯೆತ್ತರ ಏರಿಸಬಹುದು.
ಕೆರೆ ಹೂಳು ತೆಗೆಯೋದು ಮುಖ್ಯ
ಕೆರೆ ಹೂಳು ತೆಗೆಯುವ ಸರಕಾರಿ ಯೋಜನೆಗಳಲ್ಲಿ ಹೂಳು ತೆಗೆಯುವುದಕ್ಕೆ ಕಡಿಮೆ ಹಣವಿರುತ್ತದೆ. ದಂಡೆಯ ಸುತ್ತ ಕಲ್ಲು ಕಟ್ಟುವುದು, ಪೈಪ್ ಅಳವಡಿಸುವುದು, ಕಾಂಕ್ರೀಟ್ ಕಾರ್ಯಗಳಿಗೆ ಹೆಚ್ಚು ಹಣ ವಿನಿಯೋಗವಾಗುತ್ತದೆ. ಕೆರೆ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನುಸರಿಸುವುದಾಗಿ ಇಂಜಿನಿಯರ್‍ಗಳು ಹೇಳುತ್ತಾರೆ. ಕೆರೆಯ ಪಾತ್ರವನ್ನು ಆಳ ಮಾಡಿದರೆ ಹೆಚ್ಚು ನೀರು ಸಂಗ್ರಹಿಸಬಹುದು. ದಂಡೆಗೆ ಪಿಚ್ಚಿಂಗ್ ಕಟ್ಟುವುದು ಈಗ ಮುಖ್ಯವಾಗಿ ನೀರು ನಿಲ್ಲಿಸುವ ಪ್ರಮಾಣ ಕಡಿಮೆಯಾಗಿದೆ. ಕೆರೆಯ ಅಲಂಕಾರವೇ ಹೆಚ್ಚಾಗಿ ಮೂಲ ಉದ್ದೇಶ ಮರೆಯಬಾರದು.
ಕೆರೆಯ ಆಳ ಜಾಸ್ತಿ ಮಾಡಬಹುದು
ಕೆರೆಯಲ್ಲಿ ನೀರು ವಿಶಾಲ ಪ್ರದೇಶದಲ್ಲಿ ನಿಂತಾಗ ಆವಿಯಾಗುವ ಪ್ರಮಾಣ ಜಾಸ್ತಿ. ಶತಮಾನಗಳ ಹಿಂದೆ ಕೆರೆ ಆಯ್ಕೆಗೆ ಜಾಗ ಗುರುತಿಸುವಾಗ ಭೂ ತಗ್ಗಿನ ನೈಸರ್ಗಿಕ ಅನುಕೂಲತೆ ಗಮನಿಸಿ ಕಣಿವೆಯಲ್ಲಿ ಕೆರೆ ನಿರ್ಮಿಸಿದ್ದರು. ನೀರು ಹೆಚ್ಚು ಸಂಗ್ರಹಿಸಲು ವಿಶಾಲ ಜಾಗದಲ್ಲಿ ದಂಡೆ ನಿರ್ಮಿಸಿದ್ದಾರೆ. ದನಕರು, ಜನತೆ ಕೆರೆಯಂಗಳಕ್ಕೆ ಇಳಿದರೆ ಅಪಾಯವಾಗಬಹುದೆಂದು ಆಳ ಕಡಿಮೆ ಮಾಡಿದ್ದಾರೆ. ಕೆರೆಯ ಮಧ್ಯ ಭಾಗದಲ್ಲಿ ಎರಡು ಮೂರು ಎಕರೆ 10-12 ಅಡಿ ಆಳ ಮಾಡಬಹುದು, ಇದು ಒಂದರ್ಥದಲ್ಲಿ ಡೆಡ್ ಸ್ಟೋರೇಜ್ ಜಾಗ, ಇಲ್ಲಿ ಜಲಚರಗಳು ಸಂರಕ್ಷಿತವಾಗುತ್ತವೆ. ಆಳದ ಪಾತ್ರದ ಮೈ ಇಳಿಜಾರಾಗಿರುವಂತೆ ರೂಪಿಸಿದರೆ ದನಕರುಗಳು ನೀರು ಕುಡಿದು ಸುರಕ್ಷಿತವಾಗಿ ಮೇಲೆರುತ್ತವೆ. ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹಿಸುವ ಅವಕಾಶ ದೊರೆಯುತ್ತದೆ. ಒಮ್ಮೆ ಕೆರೆ ದಂಡೆ ಒಡೆದರೂ ಒಂದಿಷ್ಟು ನೀರು ಉಳಿದು ಅಂತರ್ಜಲಕ್ಕೆ ಅನುಕೂಲವಾಗುತ್ತದೆ.
ದ್ವೀಪ ರೂಪಿಸಬಹುದು
ಕೆರೆಯ ನಡುವೆ ಒಂದು ಪುಟ್ಟ ದ್ವೀಪ ನಿರ್ಮಿಸಿ ಕೆಲವು ಮರಗಿಡ ಬೆಳೆಸಬಹುದು. ಪಕ್ಷಿಗಳಿಗೆ ಆವಾಸವಾಗಿ ಇವು ನೆರವಾಗುತ್ತವೆ. ಕೆರೆಯ ಸೌಂದರ್ಯವೂ ಹೆಚ್ಚುತ್ತದೆ.
ನೀರು ಒಳ ಬರುವ ಕಾಲುವೆ ಸರಿಪಡಿಸಿರಿ
ಕೆರೆಯಂಗಳಕ್ಕೆ ಮಳೆ ನೀರು ಒಳಬರುವ ಕಾಲುವೆಗಳು ಸರಿಯಿದ್ದರೆ ಮಾತ್ರ ಮಳೆ ನೀರು ಕೆರೆಗೆ ಬರುತ್ತದೆ. ಹೀಗಾಗಿ ಕೆರೆಯ ಹಿಂಭಾಗದ ಕಾಡು, ಹೊಲ, ತೋಟಗಳನ್ನು ಸುತ್ತಾಡಿ ನೀರು ಹರಿಯುವ ಸ್ವರೂಪ ಗಮನಿಸಬೇಕು. ಮಳೆ ಬಂದಾಗ ಅಲ್ಲಿನ ಪರಿಸರ ನೋಡಿದವರು ಇದನ್ನು ಸ್ಪಷ್ಟವಾಗಿ ಹೇಳಬಹುದು. ಕಾಲುವೆಯಲ್ಲಿನ ಮರ ಗಿಡ ತೆಗೆದು ಸರಾಗ ಹರಿದು ಬರಲು ವ್ಯವಸ್ಥೆ ಮಾಡಬೇಕು. ಮಳೆ ನೀರಿನ ಜೊತೆ ಅಪಾರ ಪ್ರಮಾಣದ ಹೂಳು ಬರುತ್ತದೆ. ಕಾಲುವೆಯಿಂದ ಕೆರೆಗೆ ನೀರು ಒಳಬರುವ ಜಾಗದಲ್ಲಿ ಹೂಳು ತಡೆಗುಂಡಿ ರೂಪಿಸಿದರೆ ಹೂಳಿನ ಸಮಸ್ಯೆ ಪರಿಹರಿಸಿ ಭವಿಷ್ಯದಲ್ಲಿ ಕೆರೆ ಚೆನ್ನಾಗಿರುವಂತೆ ರಕ್ಷಿಸಬಹುದು.
ಮಳೆ ಬಂದಾಗ ಕೆರೆಗೆ ಹೋಗಿರಿ
ಹೊಸ ಕೆರೆ ಆಥವಾ ಹಳೆಯ ಕೆರೆಯ ಹೂಳು ತೆಗೆದ ಬಳಿಕ ಮಳೆಗಾಲ ಆರಂಭವಾದಾಗ ಆಗಾಗ ಕೆರೆಯತ್ತ ಹೋಗಬೇಕು. ಕೆಲವೊಮ್ಮೆ ಮಳೆ ನೀರು ಕೆರೆಗೆ ಬರದೇ ಅಕ್ಕಪಕ್ಕ ಹರಿದು ಹೋಗುತ್ತಿದ್ದರೆ ಗಮನಿಸಿ ಕೆರೆಯತ್ತ ತಿರುಗಿಸಬಹುದು. ಹೊಸ ಮಣ್ಣು ಹಾಕಿ ದಂಡೆ ರೂಪಿಸಿದಾಗ ಮಳೆಯಲ್ಲಿ ಕುಸಿಯಬಹುದು. ಅದು ಕುಸಿಯದಂತೆ ಹುಲ್ಲು ನಾಟಿ ಮಾಡುವುದು, ಪ್ಲಾಸ್ಟಿಕ್ ಶೀಟು ಹೊದೆಸುವ ಕಾರ್ಯವನ್ನು ತುರ್ತಾಗಿ ಮಾಡುವುದರಿಂದ ನಾಶ ತಡೆಯಬಹುದು.
ಟೀಕೆಯ ಮಾತುಗಳಿಗೆ ಮಾದರಿಯ ಮೂಲಕ ಉತ್ತರಿಸಿರಿ
ಕೆರೆಗಳನ್ನು ಹೂಳು ತುಂಬಲು ಬಿಟ್ಟು ಆರೋಗ್ಯವಂತ ನಗರವನ್ನು ಯಾವತ್ತೂ ಕಟ್ಟಲಾಗುವುದಿಲ್ಲ. ಎಲ್ಲ ಕಾರ್ಯಗಳನ್ನು ಸರಕಾರವೇ ಮಾಡಬೇಕೆಂದು ಸುಶಿಕ್ಷಿತ ಸಮಾಜ ಕಣ್ಮುಚ್ಚಿ ಕೂಡ್ರಲಾಗುವುದಿಲ್ಲ. ವಿಶೇಷವೆಂದರೆ ಸಮುದಾಯದ ಯಾವ ಒಳ್ಳೆಯ ಕೆಲಸವೂ ಹಣಕಾಸಿನ ಕೊರತೆಯಿಂದ ಸ್ಥಗಿತವಾದ ಉದಾಹರಣೆಯಿಲ್ಲ! ಜಾಗೃತಿಯ ಮಾತಿನ ಹೊರತಾಗಿ ಒಂದು ಹೆಜ್ಜೆಯನ್ನು ರಚನಾತ್ಮಕ ಕಾರ್ಯಕ್ಕೆ ಇಡುವವರ ಕೊರತೆಯಿದೆ. ‘ಟೀಕಿಸುತ್ತಾರೆ, ಹಣ ಹೊಡೆಯುವ ಕೆಲಸವೆಂದು ಮಾತಾಡುತ್ತಾರೆ, ಕೆರೆಯಿಂದ ಪ್ರಯೋಜನವಿಲ್ಲವೆಂದು ಮೂದಲಿಸುತ್ತಾರೆ, ಮಾಡಲು ಬೇರೆ ಕೆಲಸವಿಲ್ಲವೆಂದು ನಗುತ್ತಾರೆ, ಹೂಳು ತೆಗೆಯುವಲ್ಲಿ ಮೋಸವಾಗಿದೆಯೆಂದು ಹೇಳಿಕೆ ನೀಡುತ್ತಾರೆ….’ ನೆನಪಿಡಿ ಸಾಮಾಜಿಕ ಕೆಲಸದ ನಿಜವಾದ ನೋವು, ಅನುಭವ ಇರುವ ಯಾರೂ ಇಂಥ ಮಾತಾಡುವುದಿಲ್ಲ. ಟೀಕೆ, ಮಾತುಗಳಿಂದ ಯಾವ ಕೆಲಸವಾಗುವುದಿಲ್ಲ. ಮುಂದೆ ಹೆಜ್ಜೆಯಿಟ್ಟಾಗ ಇಂಥ ಮಾತುಗಳು ಸಹಜವಾಗಿ ಬರುತ್ತವೆ. ಯಾವತ್ತೂ ನೀರಿಗೆ ಇಳಿದರಷ್ಟೇ ಆಳ ಅರ್ಥವಾಗುತ್ತದೆ. ಜಲಕ್ಷಾಮದ ಸಂಕಟದಲ್ಲಿ ಒಂದು ಉತ್ತಮ ಕೆಲಸ ಮಾಡುವ ಅವಕಾಶ ದೇವರು ನಮಗೆ ನೀಡಿದ್ದಾನೆಂಬ ಅರಿವಿನಲ್ಲಿ ಒಮ್ಮನಸ್ಸಿನಿಂದ ಮುಂದಾಗಬೇಕು. ಇಂದು ಧೈರ್ಯವಾಗಿಡುವ ಒಂದು ಹೆಜ್ಜೆ ನಾಳೆ ನಗರದ ಇನ್ನಷ್ಟು ಕೆರೆಗಳಿಗೆ ಮರುಜೀವ ನೀಡುವ ಪ್ರೇರಣೆಯಾಗಬಹುದು. ಕೆರೆ ಕಾಯಕದ ಹುಚ್ಚನ್ನು ಯುವತಲೆಮಾರಿಗೆ ಹಬ್ಬಿಸಬಹುದು.
ಕೆರೆ ಕಾಯಕ ಸಮುದಾಯದ ಉತ್ಸವವಾಗಲಿ
ಕೆರೆ ಕಾಯಕ ಹಲವರನ್ನು ಹತ್ತಿರ ಸೆಳೆಯುತ್ತದೆ. ಮಾತನಾಡುವವರು ಯಾರು? ನಿಜವಾಗಿ ಕೆಲಸ ಮಾಡುವವರು ಯಾರು? ಸಾಮಾಜಿಕ ಕಾರ್ಯಕ್ಕೆ ಹಣದ ನೆರವು ನೀಡುವವರು ಯಾರು? ಶ್ರಮಪಡುವ ಕಾರ್ಯಕರ್ತರು ಯಾರೆಂದು ತಿಳಿಯುತ್ತದೆ. ಜನರ ಜೊತೆ ಹೇಗೆ ಮಾತಾಡಬೇಕು, ಕೆರೆ ಕೆಲಸಕ್ಕೆ ಜನರನ್ನು ಹೇಗೆ ಜೋಡಿಸಬೇಕೆಂದು ಒಂದು ಕೆರೆ ಆರಂಭಿಸಿದರೆ ತಿಳಿಯುತ್ತದೆ. 2003ರಲ್ಲಿ ಒಂದು ಕೆರೆ ನಿರ್ಮಿಸಿದೆ, ಖರ್ಚು ಎಷ್ಟಾಗುತ್ತದೆಂದು ತಿಳಿಯಿತು. ಉತ್ತಮ ಕೆಲಸವನ್ನು ಎಲ್ಲರಿಗೆ ತೋರಿಸಿದಾಗ ಹಲವರು ಖಷಿ ಪಟ್ಟರು. ಅಲ್ಲಿಂದ 2008ರವರೆಗೆ ನಮ್ಮ ಊರಲ್ಲಿ 38 ಸಣ್ಣಪುಟ್ಟ ಕೆರೆ ರಚನೆಗಳಾಗಿವೆ. ಅಕ್ಕಪಕ್ಕದ ತಾಲೂಕುಗಳಲ್ಲಿ ಒಂದೇ ವರ್ಷ 60ಕ್ಕೂ ಹೆಚ್ಚು ಕೆರೆಗಳಿಗೆ ನಿರ್ಮಾಣ ಮಾರ್ಗದರ್ಶನ ನೀಡುತ್ತ ಅನುಭವ ದೊರೆಯಿತು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆರೆ ನೋಡುತ್ತ, ನಿರ್ಮಾಣಕ್ಕೆ ಮಾರ್ಗದರ್ಶನ ನೀಡುತ್ತ 14 ವರ್ಷಗಳ ಬಳಿಕ ಒಂದಿಷ್ಟು ಪಾಠಗಳು ಸಿಕ್ಕಿವೆ. ಒಂದು ವಿಷಯದ ಕುರಿತು ಆಳವಾಗಿ ಯೋಚಿಸುತ್ತ ಕಾರ್ಯ ಮಾಡುತ್ತ ಹೊರಟಾಗ ಅನುಭವ ಬೆಳೆಯುತ್ತದೆ. ಈಗ ಯಾರಾದರೂ ನೀರಿನ ಭಾಷಣಕ್ಕೆ ಕರೆದರೆ ಕೆರೆ ಹೂಳು ತೆಗೆಯುವದಾದರೆ ಬರುತ್ತೇನೆಂದು ನೇರ ಹೇಳುತ್ತೇನೆ. ಇದರಿಂದ ವಿವಿಧ ತಾಲೂಕುಗಳಲ್ಲಿ ಕೆರೆ ಕಾಯಕ ಪಡೆ ರಚನೆಯಾಗಿದೆ. ನಮ್ಮ ಶಿರಸಿಯಲ್ಲಿ 2002ರಿಂದ ನೀರಿನ ಪಾಠ ಮಾಡುತ್ತಿದ್ದ ನನಗೆ ಈಗ ಕೆರೆ ಕಾಯಕ ಪಡೆ ಸಿಕ್ಕಿದೆ! ಶಿರಸಿ ಜೀವ ಜಲ ಕಾರ್ಯಪಡೆ ಜನರ ಹಣದಿಂದಲೇ ಕೆರೆ ರೂಪಿಸುವ ಹೆಜ್ಜೆಯಿಡುತ್ತಿದೆ.
ಒಂದು ಕೆರೆ ನಿರ್ಮಿಸಿದ ಬಳಿಕ ಸುತ್ತಲಿನ ಜನರನ್ನು ಸೇರಿಸಿ ಕೆರೆಯನ್ನು ಸಮುದಾಯಕ್ಕೆ ಅರ್ಪಿಸುವ ಕಾರ್ಯಕ್ರಮ ಮಾಡಬೇಕು. ನೀರು ಹಾಳು ಮಾಡದಂತೆ, ಕಸ ಚೆಲ್ಲದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಕೆರೆ ನಿರ್ಮಾಣದ ಅನುಭವ ಹಂಚುತ್ತ ಹೊಸ ತಲೆಮಾರಿಗೆ ನೀರಿನ ಸಂರಕ್ಷಣೆಯ ಮಹತ್ವ ವಿವರಿಸಬೇಕು. ಇದರಿಂದ ನಮ್ಮ ಅಮೂಲ್ಯ ಜಲಮೂಲಗಳು ಉಳಿಯಬಹುದು.
( ವಿ.ಸೂಃ 14 ವರ್ಷಗಳ ಕೆರೆ ನಿರ್ಮಾಣದ ಅನುಭವಗಳ ಚಿತ್ರಕತೆಯ ಕರಡು ಪ್ರತಿ ಇದಾಗಿದೆ)
ಶಿವಾನಂದ ಕಳವೆ
ಅಂಚೆ : ಕಳವೆ
ತಾಲೂಕ್ : ಶಿರಸಿ 581402
ಉತ್ತರ ಕನ್ನಡ