ಕುಸುಮಬಾಲೆಯಲ್ಲಿ ಜನ್ಮಾಂತರಗೊಳ್ಳುವ ಕನ್ನಡ ಸಾಹಿತ್ಯದ ಇತ್ತೀಚಿನ ಒಲವುಗಳು -ಡಿ. ಎಸ್. ನಾಗಭೂಷಣ
[ಡಿ. ಎಸ್. ನಾಗಭೂಷಣ ಅವರು 1991ರಲ್ಲಿ ಮಲ್ಲಾಡಿಹಳ್ಳಿ ಸ್ವಾಮೀಜಿಯವರ ಜನ್ಮಶತಾಬ್ಧಿ ಸಮಾರೋಪ ಸಮಾರಂಭದ ಅಂಗವಾಗಿ ನೆಡದ ಸಾಹಿತ್ಯ ಸಮ್ಮೇಳನದಲ್ಲಿ ಓದಲಾದ ಪ್ರಬಂಧದ ಪರಿಷ್ಕೃತ ರೂಪವನ್ನು 1991ರ ‘ಸಂವಾದ’ ಸಾಹಿತ್ಯ ಪತ್ರಿಕೆಯ 19ನೇ ಸಂಚಿಕೆಯಲ್ಲಿ ದಾಖಲಿಸಿದ್ದು ಅದರ ಮರು ಓದು ನಮಗಾಗಿ…]
ಸಾಹಿತ್ಯ ಆಂದೋಲನಗಳು ಸಕ್ರಿಯವಾಗಿದ್ದಾಗ ಸಾಹಿತ್ಯ ವಿಮರ್ಶೆ ಸುಲಭವೆನಿಸುತ್ತದೆ. ಆ ಆಂದೋಲನ ಒಪ್ಪಿಕೊಂಡಿರುವ ಸಾಹಿತ್ಯ ಮೌಲ್ಯಗಳ ಒಂದು ಚೌಕಟ್ಟು ನಿಮಗೆ ಲಭ್ಯವಿರುತ್ತದೆ. ಆ ಚೌಕಟ್ಟಿನಲ್ಲಿ ನೀವು ಮಾಡಬಹುದಾದ ಸ್ಥೂಲ ಟೀಕೆ, ಟಿಪ್ಪಣಿಗಳು ಆಂದೋಲನದ ಕಾವಿನಿಂದ ನಿರ್ದಿಷ್ಟ ಅರ್ಥಗಳ ಭ್ರಮೆಯನ್ನಾದರೂ ಹುಟ್ಟಿಸಬಲ್ಲವು. ಯಾಕೆಂದರೆ ಆಗ ನೀವು ಆಡುವ ಮಾತುಗಳಲ್ಲಿ ಅರ್ಧ ನಂಬಿಕೆ ಇದ್ದರೂ ಸಾಕು, ಆಂದೋಲನದ ಅಬ್ಬರ ಅದನ್ನು ಪೂರ್ಣಗೊಳಿಸುತ್ತದೆ. ಆಂದೋಲನಗಳ ಕಾಲದಲ್ಲಿ ನಂಬಿಕೆ ಆಳವಾಗಿ, ಸತ್ಯವಾಗಿ ಮಾರ್ಪಡುವ ವ್ಯವಧಾನವೇ ಇರುವುದಿಲ್ಲ. ಅನ್ನಿಸಿಕೆಗಳೇ ಆಂದೋಲನ ದಯಪಾಲಿಸುವ ಹುಚ್ಚು ಧೈರ್ಯದಿಂದಾಗಿ ಸತ್ಯಗಳಂತೆ ಮೆರೆಯುತ್ತವೆ. ಉದಾಹರಣೆಗೆ, ಮಾಸ್ತಿ ಕತೆಗಳೆಂದರೆ ಯಾವುದೇ ಬುಟ್ಟಿಯಲ್ಲಿ ಹಾಕಿಕೊಂಡು ಹೋಗಬಹುದಾದ ಸೌತೆಕಾಯಿ ತರಹ ಎಂಬ ಮಾತು ನವ್ಯ ಆಂದೋಲನದ ಕಾವಿನಲ್ಲೂ, ಅಡಿಗರ ಕವಿತೆ ಜೀವ ವಿರೋಧಿಯಾದದ್ದು ಎಂಬ ಬಂಡಾಯ ಸಾಹಿತ್ಯ ಆಂದೋಲನದ ಕಾವಿನಲ್ಲೂ ಆಯಾ ಆಂದೋಲನಗಳಲ್ಲಿದ್ದ ಬಹಳಷ್ಟು ಜನರಿಗೆ ಬಹು ಗಂಭೀರವಾದ ಸಾಹಿತ್ಯ ವಿಮರ್ಶೆಯ ಮಾತುಗಳೆನಿಸಿದ್ದವು.
ಇವೊತ್ತು ಸಾಹಿತ್ಯ ವಿಮರ್ಶೆಗೆ ಆ ಅನುಕೂಲವಿಲ್ಲ. ಆಂದೋಲನಗಳಿಲ್ಲದ ಕಾಲವಿದು. ಆದುದರಿಂದ ವಿಮರ್ಶಕ ತನ್ನ ನಂಬಿಕೆಯನ್ನೇ ನಂಬಿ ವಿಮರ್ಶೆಯ ಮಾತುಗಳನ್ನಾಡಬೇಕಾಗುತ್ತದೆ. ಕಳೆದ ಮೂವತ್ತು ವರ್ಷಗಳ ಕಾಲ ಆಂದೋಲನಗಳಿಗೆ ಒಗ್ಗಿ ಹೋದ ಕನ್ನಡ ವಿಮರ್ಶೆಯ ಮನಸ್ಸಿಗೆ ಇದು ಕಷ್ಟಕಾಲ. ವಿಮರ್ಶಕನ ನಿಜವಾದ ಸತ್ವಪರೀಕ್ಷೆಯ ಕಾಲ. ವಿಮರ್ಶೆಗೆ ಆಂದೋಲನಗಳು ಒದಗಿಸುತ್ತಿದ್ದ ಸಾಪೇಕ್ಷವಾದದ್ದಾದರೂ ಒಂದು ಚೌಕಟ್ಟಿಗೆ ಇಂದು ಆತ ತನ್ನದೇ ಆದ ಅಂದರೆ, ಸಾಹಿತ್ಯವೆಂದರೆ ಮೂಲತಃ ಏನು ಎಂಬ ತನ್ನ ಗ್ರಹಿಕೆಯನ್ನೇ ಆಧರಿಸಿದ ಒಂದು ಚೌಕಟ್ಟಿನಲ್ಲಿ ಸಾಹಿತ್ಯ ವಿಮರ್ಶೆ ಮಾಡಬೇಕಾಗಿದೆ. ಇದಕ್ಕೆ ಆತ ಪರಂಪರೆಯ ಹಾಗೂ ತನ್ನ ಹಿಂದಿನ ಆಂದೋಲನಗಳು ಕಲಿಸಿದ ಪಾಠಗಳ ನೆರವು ಪಡೆಯಲೂಬಹುದು. ಅಂದರೆ ವಸ್ತುತಃ ತನ್ನದೇ ಆದ ಸತ್ಯದ ಒಂದಂಶವನ್ನು ಸಾಧಿಸಿಕೊಂಡೇ, ಅದರಿಂದ ವಿಮರ್ಶೆಯ ಮಾತುಗಳನ್ನು ಹೊರಡಿಸಬೇಕಾಗಿದೆ.
ಇಂದಿನ ಸಾಹಿತ್ಯ ವಿಮರ್ಶೆ ಕುರಿತ ಈ ಮಾತುಗಳನ್ನೇ ಇಂದಿನ ಕೃತಿ ನಿರ್ಮಾಣದ ಕೆಲಸಕ್ಕೂ ಅನ್ವಯಿಸಬಹುದು. ಕೆಲವರಿಗೆ, ನಾನು ತಿರುಗು-ಮುರುಗಾಗಿ ಮಾತಾಡುತ್ತಿದ್ದೇನೆ ಎನ್ನಿಸಬಹುದು. ಕೃತಿ ಮತ್ತು ಕೃತಿ ವಿಮರ್ಶೆಗಳಲ್ಲಿ ಮೊದಲು-ನಂತರಗಳ ಕ್ರಮ ಇದೆಯೆಂದು ನಾನು ಭಾವಿಸುವುದಿಲ್ಲ-ಕೋಳಿ ಮತ್ತು ಕೋಳಿ ಮೊಟ್ಟೆಯಂತೆ. ಜೀವಂತ ಹಾಗೂ ನಿರಂತರವಾದ ಒಂದು ಸಾಹಿತ್ಯ ಪರಂಪರೆಯಲ್ಲಿ ಕೃತಿ ನಿರ್ಮಾಣ ಹಾಗೂ ವಿಮರ್ಶೆ ಬೇರೆಯಾಗಿರಲಾರದು. ಕೃತಿಕಾರನೇ ಅನುಶಂಗಿಕವಾಗಿ ವಿಮರ್ಶಕನೂ ಆಗಿರುವನಾದ್ದರಿಂದ ಕೃತಿ ನಿರ್ಮಾಣ ಹಾಗೂ ವಿಮರ್ಶೆ ಪರಸ್ಪರ ಮುಖಾಮುಖಿಯಾದ ಕ್ರಿಯೆಯೇ ಆಗಿರುತ್ತದೆ. ಹೀಗಾಗಿ ಇಂದಿನ ಕೃತಿಕಾರ ಕೂಡಾ ಚೌಕಟ್ಟಿಗೆ ಬೆಂಬಲಕ್ಕೆ ಇಲ್ಲದ ಆಂದೋಲನಗಳಿಗೆ ಹೊರತಾಗಿಯೇ, ಇಡಿಯಾಗಿ ಸ್ವತಃ ತನ್ನ ಸೃಜನಶಕ್ತಿಯನ್ನೇ ನಂಬಿಕೊಂಡು ಕೃತಿ ರಚನೆ ಮಾಡಬೇಕಾಗಿದೆ. ಇದಕ್ಕಾಗಿ ಆತ ಇಡಿಯಾಗಿ ತನ್ನ ಬದುಕು ಹಾಗೂ ಗ್ರಹಿಕೆಗಳನ್ನೇ ನಂಬಬೇಕು ಮತ್ತು ಈ ನಂಬಿಕೆ ಸಹಿತ ತನ್ನ ಪ್ರಾಮಾಣಿಕತೆಯ ಆಧಾರದ ಮೇಲೇ ಸತ್ಯವೆನ್ನಿಸುವಷ್ಟರ ಮಟ್ಟಿಗೆ ಆಳವಾಗಬೇಕು. ಇದಕ್ಕಾಗಿ ಆತ ಆದಷ್ಟೂ ಹೆಚ್ಚು ಇತರರ – ತನ್ನ ಸುತ್ತಮುತ್ತಲಿನವರ -ಬದುಕನ್ನೂ, ಅರಿತು ನೋಡುವ ಪ್ರೀತಿಯನ್ನೂ ವ್ಯವಧಾನವನ್ನೂ ಪಡೆದಿರಬೇಕು. ಹೀಗೆ ಪ್ರೀತಿ, ವ್ಯವಧಾನಗಳ ಮೂಲಕ ದಕ್ಕುವ, ಆದಷ್ಟೂ ಹೆಚ್ಚು ಜನರ ಬದುಕಿನ ಕಾವಿನಲ್ಲಿ ಮಾಗಿದ, ಸ್ವಂತ ಬದುಕನ್ನೇ ಇಂದಿನ ಕೃತಿ ನೆಚ್ಚಬೇಕಾಗಿದೆ. ಇದು, ತನ್ನನ್ನು ತಾನೇ ಪರರಲ್ಲಿ ಹುಡುಕಿಕೊಳ್ಳುವ ಕಲೆಗಾರಿಕೆ. ಯಾವುದನ್ನು ನಾವು ಎಲ್ಲ ಧರ್ಮಗಳ ಮೂಲ ಕೇಂದ್ರವೆನ್ನುತ್ತೇವೋ ಅಲ್ಲಿ ತನ್ನ ಬೇರುಗಳನ್ನು ಪಡೆದುಕೊಂಡಿರುವ ಈ ಕಲೆಗಾರಿಕೆ ತನ್ನನ್ನು ತನ್ನೊಳಗೇ ಹುಡುಕಿಕೊಳ್ಳುವ ನವ್ಯ ಅಥವಾ ತನ್ನನ್ನು ಪರರಲ್ಲಿ ಕಳೆದುಕೊಳ್ಳುವ ಬಂಡಾಯದ ಒಲವುಗಳಿಗಿಂತ ಭಿನ್ನವದದ್ದು.
ಇತ್ತೀಚಿನ ಕನ್ನಡ ಸಾಹಿತ್ಯದ ಒಲವುಗಳ ಚಾಲಕ ಶಕ್ತಿಯಾಗಿ ಗುರುತಿಸಬಹುದಾದದ್ದು ಲೋಕವ್ಯವಹಾರವನ್ನು ಮೀರಿ ನಿಂತು ಅದನ್ನು ಗಮನಿಸುವ ನಿರಹಂಕಾರಿಯಾದ ಈ ಲೋಕೋತ್ತರ ತುಡಿತವನ್ನೇ. ನಿಜ, ಎಲ್ಲ ಕಾಲದ ಶ್ರೇಷ್ಠ ಸಾಹಿತ್ಯವೂ ಒಂದಲ್ಲ ಒಂದು ರೂಪದಲ್ಲಿ ಈ ರೀತಿಯ ತುಡಿತವನ್ನು ಹೊಂದಿಯೇ ಇರುತ್ತದೆ. ಏಕೆಂದರೆ ಸಾಹಿತ್ಯದ ಮೂಲಶಕ್ತಿ ಸ್ರವಿಸುವುದೇ ಈ ತುಡಿತಗಳಿಂದ. ಆದರೆ, ಕಳೆದ ಮುವತ್ತು-ನಲವತ್ತು ವರ್ಷಗಳ ಕಾಲ ಕನ್ನಡ ಸಾಹಿತ್ಯದಲ್ಲಿ, ಬಹುಶಃ ಈ ತುಡಿತವನ್ನು ವಾಚ್ಯಮಾಡಿ ಸ್ಥೂಲಗೊಳಿಸಿದ ನವೋದಯದ ಕೊನೆಗಾಲದ ಅತಿಗಳಿಗೆ ಪ್ರತಿಕ್ರಿಯೆಯಾಗಿ, ಕಂತಿಹೋಗಿದ್ದ ಈ ತುಡಿತ ಕ್ರಮೇಣ ಈಗ ಹೊಸ ರೂಪ-ರಚನೆ-ಲಯಗಳೊಂದಿಗೆ ವ್ಯಕ್ತವಾಗತೊಡಗಿದೆ.
ತನ್ನ ಮತ್ತು ಇತರರ ಲೋಪದೋಷಗಳನ್ನು ಆ ಲೋಪದೋಷಗಳ ನೆಲೆಗಟ್ಟಿನಲ್ಲಷ್ಟೇ ನೋಡದೆ, ಅವು ಜೀವದ ಹುಟ್ಟು-ಸಾವುಗಳಷ್ಟೇ ಸಹಜವೆಂದು ಗ್ರಹಿಸಿ, ಅವುಗಳೊಂದಿಗೆ ಹೊಡೆದಾಡುವುದರಿಂದ ಹುಟ್ಟುವ ರೂಪಗಳಿಗಿಂತ ಅವುಗಳನ್ನು ಮೀರುವ ಪ್ರಯತ್ನದಲ್ಲಿ ಹುಟ್ಟುವ ರೂಪಗಳು ಸುಂದರವೂ, ಸತ್ಯವೂ, ಸಾಂತ್ವನಪೂರ್ಣವೂ ಆಗಿರುತ್ತದೆಂಬ ಅರಿವು ಕನ್ನಡದ ಇತ್ತೀಚಿನ ಅನೇಕ ಪ್ರಮುಖ ಕೃತಿಗಳ ರಚನೆಯ ಹಿಂದೆ ಕಾಣುತ್ತದೆ. ಅಂತಿಮವಾಗಿ, ಸಿನಿಕತೆಗೆ ಎಳೆದೊಯ್ಯುವ ನವ್ಯದ ವಿಷಾದದ ಒಳನೋಟ ಹಾಗೂ ವ್ಯಗ್ರತೆಗೆ ಎಳೆದೊಯ್ಯುವ ಬಂಡಾಯದ ಕ್ರೋಧದ ಹೊರನೋಟಗಳ ಆಯಾಸದಿಂದ ಹುಟ್ಟಿರಬಹುದಾದ ಈ ಹೊಸ ನೋಟವು, ಕ್ಷಣದಲ್ಲಿ ಅನಂತದ ವಿವರಗಳನ್ನು ಕಾಣುವ ಮತ್ತು ಅನಂತದಲ್ಲಿ ಕ್ಷಣದ ತೀವ್ರತೆಯನ್ನು ಗಮನಿಸುವ-ಬದುಕಿನ ಮಧ್ಯವೇ ಕಣ್ಣು ಮುಚ್ಚಿ ಕೂತ ಗಾಢ ಧ್ಯಾನದಿಂದ ಮಾತ್ರ ದಕ್ಕುವ – ವ್ಯವಧಾನ ಹಾಗೂ ಪ್ರೀತಿಗಳನ್ನು ತನ್ನ ಎರಡು ಕಣ್ಣುಗಳನ್ನಾಗಿ ಪಡೆದುಕೊಂಡಿರುವಂತೆ ತೋರುತ್ತಿದೆ. ಇದಕ್ಕೆ ತಕ್ಕುದಾಗಿಯೇ ಭಾಷೆ ನವ್ಯದ ಬಿಗಿಗಂಟುಗಳನ್ನೂ ಬಂಡಾಯದ ಏದುಸಿರುಗಳನ್ನೂ ಕಳೆದುಕೊಂಡು ಆರೋಗ್ಯವಂತ ಮನುಷ್ಯನ ಉಸಿರಾಟದ ಲಯಗಳಿಗನುಸಾರವಾಗಿ ಸಹಜ-ಸರಳ ನಡಿಗೆಯನ್ನು ಸಾಧಿಸಿಕೊಳ್ಳುತ್ತಿದೆ.
ಇದೆಲ್ಲದಕ್ಕೆ ನಾವು ಇಂದು ಅನೇಕ ಉದಾಹರಣೆಗಳನ್ನು ಕೊಡಬಹುದು. ಕಾವ್ಯವನ್ನೇ ತೆಗೆದುಕೊಂಡರೆ, ಮುಖ್ಯವಾಗಿ ಅಡಿಗರ ‘ಚಿಂತಾಮಣಿಯಲ್ಲಿ ಕಂಡ ಮುಖ’ ಹಾಗೂ ‘ಮೌನದ ಸುವರ್ಣ ಪುತ್ಥಳಿ’, ಕೆ.ವಿ.ತಿರುಮಲೇಶರ ‘ಅವಧ’ ಹಾಗೂ ‘ಪಾಪಿಯೂ’, ಹೆಚ್.ಎಸ್.ಶಿವಪ್ರಕಾಶರ ‘ಅಣುಕ್ಷಣ ಚರಿತೆ’. ಹೆಚ್.ಎಸ್.ವೆಂಕಟೇಶಮೂರ್ತಿಯವರ ‘ಅಗ್ನಿ ಸ್ತಂಭ’ ಹಾಗೂ ಸುಬ್ರಾಯ ಚೊಕ್ಕಾಡಿಯವರ ‘ಮೊನ್ನೆ ಸಿಕ್ಕವರು’ ಕವನ ಸಂಕಲನಗಳ ಹಲವಾರು ಪದ್ಯಗಳನ್ನು ಉದಾಹರಿಸಬಹುದು. ಈ ಎಲ್ಲ ಪದ್ಯಗಳಲ್ಲೂ ಹಕ್ಕಿಯೋ, ಮರವೋ, ಹೂವೋ, ಮನುಷ್ಯನೋ, ಪ್ರಾಣಿಯೋ ತನ್ನ ಇನ್ನೊಂದು ಭಾಗವಾಗಿ ಕಾಣುವ, ಕಾಡುವ ಹಾಗೂ ಕರಗುವ ವಿಸ್ಮಯವನ್ನು-ಪ್ರೀತಿಯ ತೀವ್ರತೆಯನ್ನು ವ್ಯವಧಾನದ ವಿವರಗಳಿಂದ temper ಮಾಡಿ -ಹೇಳುವ ಹೊಸ ಹದದ ಕಲೆಗಾರಿಕೆಯನ್ನು ನೋಡಬಹುದು:
ಚಿಂತಾಮಣಿಯ ಸಭಾಂಗಣದಲ್ಲಿ ಭಾಷಣ ಮಗ್ನ-
ಮನಸ್ಸು ಮನಸ್ಸಿನ ಶೇಕಡಾ ತೊಂಭತ್ತು ಪಾಲು; ಕಣ್ಣು
ಹಾಯುತ್ತಿತ್ತು ಮುಖದಿಂದ ಮುಖಕ್ಕೆ. ಹುಡುಕಿತ್ತಿತ್ತು
ರೇವುಳ್ಳ ನಡುಗಡ್ಡೆಯೊಂದ ತಂಗಲು ನಿಮಿಷ; ತಂಗಿ
ಅಂತರಂಗದ ಅನಂಗಭಂಗಿಗೆ ತಕ್ಕ ಭಂಗಿ, ದೃಷ್ಟಿಗೆ ದೃಷ್ಟಿ
ಬಡಿತಕ್ಕೆ ತಕ್ಕ ಪ್ರತಿಬಡಿತ ಕೊಡುವಿನ್ನೊಂದು
ಸಮ ಹೃದಯದ ನಿಗೂಢ ಸಹಜ ಕಂಪನದ ರೋಮಾಂಚ,
ಪ್ರತಿಫಲಿಸಬಲ್ಲೊಂದು ಮುಖವ, ಹಠಾತ್ತಾಗಿ
ಮೂಡಿತ್ತಲ್ಲ, ಅಗೋ ಸಭಾಮಧ್ಯದಲ್ಲಿ ಪರಮಾಪ್ತ ಮುಖ
ಮಾತಿನಾಚೆಯ ಸಹಸ್ಪಂದಿ; ಮಾತಿಲ್ಲದೆಯೆ
ಇಂಗಿತವನರಿತ ಸಹಭಾಗಿನಿಯ ಸಹಜಮುದ್ರೆ
ಯಾವ ಮುಖ ಅದು? ಎಲ್ಲಿ ಯಾವಾಗ ಯಾವ ಭವ-
ದಲ್ಲಿ. ಲೋಕದಲ್ಲಿ, ಸಂಭಾವ್ಯತೆಯ ಯಾವ ಆಕಸ್ಮಿಕದ
ಆತ್ಮೀಯತೆಯ ಅಪ್ಯಾಯಮಾನ ಕ್ಷಣದಲ್ಲಿ
ಕಂಡದ್ದು ಅದು?
….ಹೀಗೆ ಸಾಗುವ ಅಡಿಗರ ‘ಚಿಂತಾಮಣಿಯಲ್ಲಿ ಕಂಡ ಮುಖ’ ಪದ್ಯ, ಕಿರಿಯ ಕವಿಗಳ ಅನುಭೂತಿಯ ಆವರಣದಲ್ಲಿ ಅನುರಣಿಸುವುದು ಹೀಗೆ:
ಎಲ್ಲಿಂದ ಬಂದಿತೋ ಅಲ್ಲಿಗೇ ಈ ನೋಟ
ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವ ಹೂಟ
ಬದುಕಿನುದ್ದಕ್ಕೂ ಗಳಿಸಿದ್ದನ್ನು, ಮಣ್ಣಿಂದ
ಹೀರಿದ್ದನ್ನು, ಸಾಧ್ಯ ವಿಶಾಲ ಚಾಚುಗಳಿಂದ
ತನ್ನ ತೆಕ್ಕೆಗೆ ಒಗ್ಗಿದ್ದನ್ನು, ಪಂಚಭೂತಗಳೆದುರು
ತ್ರಿಕಾಲಗಳ ಬೆಸೆದ ಕಾಲಕ್ಕೆ ಮುಖಾಮುಖಿಯಾಗಿ
ಒಗ್ಗೂಡಿಸುವ ಯತ್ನದಲಿ
ಕಾಣ್ಕೆ-ಕಾಣ್ಕಟ್ಟುಗಳ ನಡುವೆ ತೆಳುಗೆರೆ ಹರಿದು
ಆಚೆಗೆ ಚಾಚಿಕೊಳ್ಳುವ ಸಿದ್ಧಿಯಾಕಾಂಕ್ಷೆಯಲಿ
ಎದುರು ನಿಂತಿದೆ ಇಲ್ಲಿ ತ್ರಿಭಂಗಿ ನಿಲುವಲ್ಲಿ ಧ್ಯಾನಸ್ಥ
ಆಕಾಶಕ್ಕೆ ಲಗ್ಗೆಯಿಟ್ಟಂಥ ಪಾರಿಜಾತ
ಇದು ಸುಬ್ರಾಯ ಚೊಕ್ಕಾಡಿಯವರ ‘ಧ್ಯಾನಸ್ಥ’ ಪದ್ಯದ ಕೊನೆಯ ಸಾಲುಗಳು. ಹೀಗೆ ನಾವು ಜಿ.ಎಸ್.ಶಿವರುದ್ರಪ್ಪನವರ ‘ಕಂಪಿನ ಕರೆ’, ತಿರುಮಲೇಶರ ‘ಚಖ್ಖುಪಾಲ ಮಹಾತೇರ’, ಶಿವಪ್ರಕಾಶರ ‘ನಾಗಾರ್ಜುನ’, ‘ಶಂಸ್ ತಬ್ರೀಜ್’, ವೆಂಕಟೇಶಮೂರ್ತಿಯವರ ‘ಕಾರಂಜಕೆ ಕೊಕ್ಕರೆ’ ಮುಂತಾದ ಕನ್ನಡದ ಇತ್ತೀಚಿನ ಬಹುಮುಖ್ಯ ಕವನಗಳಿಂದ ಸಾಲುಗಳನ್ನು ಉಲ್ಲೇಖಿಸುತ್ತಾ ಹೋಗಬಹುದು – ಈ ಲೋಕೋತ್ತರ ತುಡಿತ ಹೇಗೆ ಇತ್ತೀಚಿನ ಕನ್ನಡ ಕಾವ್ಯದ ಮೂಲಸೆಲೆಯಾಗಿ ಕಾಣಿಸಿಕೊಳ್ಳತೊಡಗಿದೆ ಎಂಬುದರ ಉದಾಹರಣೆಗಳಾಗಿ. ಅಷ್ಟೇ ಅಲ್ಲ, ಅನುಭಾವದ ಕಡೆಗೆ ಎನ್ನಬಹುದಾದ ಈ ತುಡಿತ ಸ್ವಲ್ಪ ಕಾಲ ಬಂಡಾಯದ ಬಣ್ಣ ಬಳಿದುಕೊಂಡು ಕುಣಿದ ಸಿದ್ಧಲಿಂಗಯ್ಯ, ಚಂದ್ರಶೇಖರ ತಾಳ್ಯ, ಶಂಕರ ಕಟಗಿ ಹಾಗೂ ಚೆನ್ನಣ್ಣವಾಲೀಕಾರರಂತಹ ಕವಿಗಳಲ್ಲೂ ಕಾಣತೊಡಗಿರುವುದು ಮತ್ತು ಅತಿ ಇತ್ತೀಚಿನ ಕವಿಗಳೆಂದು ಗುರುತಿಸಬಹುದಾದ ಕೆ.ಬಿ.ಸಿದ್ಧಯ್ಯ, ಎಸ್.ಮಂಜುನಾಥ್, ನಜೀರ ಚಂದಾವರ, ಸವಿತಾ ನಾಗಭೂಷಣ, ವೈದೇಹಿ ಮುಂತಾದವರಲ್ಲಿ ಪ್ರಧಾನ ಪ್ರೇರಣೆಯಾಗಿ ಹೊರ ಹೊಮ್ಮುತ್ತಿರುವುದುನ್ನು ನಾವು ಗಮನಿಸಬಹುದು.
ಗದ್ಯಕ್ಕೆ ಬಂದರೆ ಇದೇ ತೀವ್ರತೆ ಹಾಗೂ ವ್ಯವಧಾನಗಳನ್ನು ತೇಜಸ್ವಿ, ಜಯಂತ ಕಾಯ್ಕಿಣಿ, ರಾಘವೇಂದ್ರ ಪಾಟೀಲ ಹಾಗೂ ಆಶ್ಚರ್ಯವೆಂಬಂತೆ ಬೊಳುವಾರರ ಇತ್ತೀಚಿನ ಕಥೆಗಳಲ್ಲಿ ಮತ್ತು ಚಿತ್ತಾಲರ ‘ಪುರುಷೋತ್ತಮ’ ಹಾಗೂ ಮಹಾದೇವ ಅವರ ‘ಕುಸುಮಬಾಲೆ’ಯಲ್ಲಿ ನೋಡಬಹುದು. ತೇಜಸ್ವಿ, ಕಾರಂತರಂತೆ ವಿಚಾರವಾದೀ ನಿಲುವುಗಳ ಮೂಲಕವೇ ಆತ್ಯಂತಿಕವೆಂದು ಕರೆಯಲಾಗುವ ಸತ್ಯಗಳನ್ನು ಹಿಡಿಯಲೆಣಿಸುವ ಕಲೆಗಾರ. ಅವರ ‘ಕರ್ವಾಲೋ’ ಹಾಗೂ ‘ಚಿದಂಬರ ರಹಸ್ಯ’ಗಳಲ್ಲಿ ವಿಜ್ಞಾನ ಮತ್ತು ಧರ್ಮ ತಮ್ಮ ವಿವಿಧ ರೂಪಗಳಲ್ಲಿ ಮೂಖಾಮುಖಿಯಾಗಿ ನಿಂತು ಕಾದಂಬರಿಯ ‘ಕ್ರಿಯೆ’ಗಳಲ್ಲಿ ಬೆಂದು ಒಂದಾಗುವ ತಾರ್ಕಿಕ ರೂಪಗಳನ್ನು ನೋಡುತ್ತೇವೆ. ಬಹುಶಃ ಕಾದಂಬರಿಗಳ ಸ್ವರೂಪವೇ ಆಂತರಿಕವಾಗಿ ತಾರ್ಕಿಕವಾದದ್ದು. ಆದರೆ ಸಣ್ಣಕಥೆಗಳಲ್ಲಿ ಹಾಗಲ್ಲ. ಉದಾಗರಣೆಗೆ ಇವರ ‘ಮಾಯಾಮೃಗ’, ‘ಕೃಷ್ಣೇಗೌಡನ ಆನೆ’ ಹಾಗೂ ‘ನಾನು ಸೈಕಲ್ ಕಲಿತಿದ್ದು’ ಕಥೆಗಳು ವಾಸ್ತವವನ್ನು ಹೇಳುವ ಬೆರಗಿನಲ್ಲೇ ಆತ್ಯಂತಿಕ ಸತ್ಯದ ಬೆಡಗನ್ನು ಸಾಧಿಸಿಬಿಡುತ್ತವೆ. ಈ ಕಥೆಗಳಲ್ಲಿ ಒಂದು ನಾಯಿ, ಒಂದು ಸಾಕು ಆನೆ ಹಾಗೂ ಒಂದು ಸೈಕಲ್, ಲೋಕ ಲೋಕೋತ್ತರಗಳ ನಡುವಣ ಪಾರದರ್ಶಕ ಸೇತುವೆಗಳಂತೆ ಮೂಡಿ ನಿಲ್ಲುವುದು ತರ್ಕವನ್ನು ಮೀರಿದ ಇಂತಹ ತುಡಿತಗಳ ಮೂಲಕವೇ. ಕಾಯ್ಕಿಣಿಯವರ ‘ತನ್ಮಯಿಯ ಸೂಟ’, ‘ದಗಡೂಪರಬ…’ ಹಾಗೂ ‘ಉನ್ನಿಕೃಷ್ಣನ್…’, ರಾಘವೇಂದ್ರ ಪಾಟೀಲರ ‘ಕರಿ ಟೊಪಗಿ…’ ಹಾಗೂ ಬೊಳುವಾರರ ‘ಇಬಾದತ್’ ಇಂತಹುದೇ ಧ್ವನಿಗಳನ್ನು ಮಂದ್ರಸ್ವರದಲ್ಲಿ ಹೊರಡಿಸುವ ಪ್ರಯತ್ನಗಳು.
ಯಶವಂತ ಚಿತ್ತಾಲರ ‘ಪುರುಷೋತ್ತಮ’, ಕಾದಂಬರಿ ರೂಪದಲ್ಲೇ ಆನುಷಂಗಿಕವಾಗಿರುವ ತಾರ್ಕಿಕತೆಯನ್ನು ಪ್ರತಿತಾರ್ಕಿಕತೆಯ ಸಹಾಯದಿಂದ ಒಡೆಯುವ ಮೂಲಕ, ಆಧುನಿಕ ಮನುಷ್ಯ ‘ತ್ರಿಭಂಗಿ ನಿಲುವಲ್ಲಿ ಧ್ಯಾನಸ್ಥ-ಆಕಾಶಕ್ಕೆ ಲಗ್ಗೆಯಿಟ್ಟಂಥ ಪಾರಿಜಾತ’ವಾಗಲು ನಡೆಸುವ ಹೋರಾಟದ ವಿವರ ಹಾಗೂ ತೀವ್ರತೆಗಳೆರಡನ್ನೂ ಒಟ್ಟಿಗೆ ಬೆಸೆದುಕೊಂಡು, ಮೂಡಿನಿಂತ ಕೃತಿ. ಬದ್ಧನಾದ ಹಾಗೂ ಅದರಿಂದಾಗಿ ಅಶಾಂತನಾದ ಆಧುನಿಕ ಮನುಷ್ಯ ಬುದ್ಧನಾಗಿ ಶಾಂತನಾಗುವ ಮಹಾ ಹೋರಾಟದ ಹಾಗೂ ಮಹಾಪ್ರಯಾಣದ ಈ ಕಥೆ, ಈಚಿನ ಕನ್ನಡ ಸಾಹಿತ್ಯದ ಮಹಾಹೋರಾಟದ ಹಾಗೂ ಮಹಾಪ್ರಯಾಣದ ಕಥೆಯಂತೆಯೂ ಕಾಣುತ್ತದೆ! ಒಂದು ಚಲನಶೀಲ ಸಂಸ್ಕೃತಿ. ಇಲ್ಲಿ ಕೈಗಾರಿಕಾ ಹಾಗೂ ನಗರೀಕರಣ ಸಂಸ್ಕೃತಿ – ಇಡೀ ಬೀಸನ್ನು ಮನುಷ್ಯ ಜೀವ ಪ್ರಜ್ಞೆಯ ಅತ್ಯಂತ ಎತ್ತರಗಳಲ್ಲಿ ಕಂಡುಕೊಳ್ಳಬಹುದಾದ ಅತ್ಯಂತ ನಿರ್ಗುಣವಾದ ಮೌಲ್ಯಗಳಲ್ಲಿ ಲೀನಗೊಳಿಸಿಬಿಡುವ ಕಲಾವಂತಿಕೆ ಆ ಎತ್ತರಗಳು ಅನುಭಾವಿಕವಾದಾಗ ಮಾತ್ರ ಸಾಧ್ಯ-ಅಲ್ಲಮನ ವಚನಗಳಲ್ಲಾದಂತೆ. ಹೀಗಾಗಿ ಇಲ್ಲಿ ‘ಪುರುಷೋತ್ತಮ’ ಗದ್ಯದಲ್ಲಿ ಸಾಧಿಸಿರುವುದನ್ನು ಅಸಾಮಾನ್ಯವೆಂದೇ ಹೇಳಬೇಕು. ತೇಜಸ್ವಿ ತಮ್ಮ ‘ಚಿಂದಂಬರ ರಹಸ್ಯ’ದಲ್ಲಿ ಕಥೆಗಾರಿಕೆಯ ಧಾವಂತದಿಂದಾಗಿ ಸಾಧಿಸಲಾಗದೇ ಹೋದದ್ದನ್ನು ಚಿತ್ತಾಲರು ಇಲ್ಲಿ ಸಾವಧಾನದಿಂದ ಸಾಧಿಸಿದ್ದಾರೆ. ಬರವಣಿಗೆ ಧ್ಯಾನವನ್ನು ಸಮೀಪಿಸುವುದು ಹೀಗೆ.
ಸ್ಪ್ಲೆಂಜರ್ ಎಂಬ ಇತಿಹಾಸಜ್ಞನ ಪ್ರಕಾರ ಪ್ರತಿಯೊಂದು ಸಂಸ್ಕೃತಿಗೂ ಒಂದು ಆಯುಸ್ಸಿರುತ್ತದೆ. ಆ ಆಯುಸ್ಸು ಮುಗಿಯುವ ಸ್ವಲ್ಪ ಮುನ್ನ ‘ಸೆಕಂಡ್ ರಿಲಿಜಿಯಾಸಿಟಿ’ ಎಂಬುದೊಂದನ್ನು ಸಾಧಿಸಿಕೊಂಡು, ಅದರ ಒಡಲಿಂದ-ದೀಪ ಆರುವ ಮುನ್ನ ಚೆನ್ನಾಗಿ ಉರಿದು ಆರುವಂತೆ-ಒಂದು ನಾಗರೀಕತೆಯನ್ನು ಕಟ್ಟಿ ಕುಸಿದು ಬೀಳುತ್ತದಂತೆ. ಅದರ ಪಾಳಿನಲ್ಲಿ ಹೊಸದೊಂದು ಸಂಸ್ಕೃತಿಯ ಉದಯವಾಗಬೇಕು. ಆಧುನಿಕ ಕನ್ನಡ ಸಾಹಿತ್ಯದ ಪರಂಪರೆಯನ್ನು ಒಂದು ಸಂಸ್ಕೃತಿಯಾಗಿ ಪರಿಗಣಿಸಿದರೆ ಇದರ ‘ಸೆಕೆಂಡ್ ರಿಲಿಜಿಯಾಸಿಟಿ’ ಈಗ ವ್ಯಕ್ತವಾಗುತ್ತಿದ್ದಂತೆ ತೋರುತ್ತದೆ. ‘ಪುರುಷೋತ್ತಮ’ ಇದರ ನಾಗರೀಕತೆಯ ಒಂದು ರೂಪವಾಗಿರಬಹುದು. ಹಾಗಾದರೆ ಇದರ ಪಾಳಿನಲ್ಲಿ ಹುಟ್ಟುವ ಹೊಸ ಸಂಸ್ಕೃತಿ ಎಂತಹದಿರಬಹುದು?
ಈ ಪ್ರಶ್ನೆಗೆ ಉತ್ತರವನ್ನು ಊಹಿಸಿಕೊಂಡಾಗಲೆಲ್ಲಾ ನನಗೆ ‘ಕುಸುಮಬಾಲೆ’ ನೆನಪಿಗೆ ಬರುತ್ತದೆ. ಈಗಾಗಲೇ ಕನ್ನಡ ಓದುಗರನ್ನು ‘ಅರ್ಥವಾಗದ ಮಹಾಕೃತಿ’ಯಾಗಿ ಕಾಡಿರುವ ‘ಕುಸುಮ ಬಾಲೆ’ ಐದಾರು ಓದುಗಳ ನಂತರ ನನಗೆ ಬರವಣಿಗೆಯ ಹೊಸ ಸಂಸ್ಕೃತಿಯ ತೊದಲ್ನುಡಿಯಂತೆ ಕೇಳಿಸುತ್ತಿದೆ.
ಇದು ಮಾದರಿಗಳು, ಮೌಲ್ಯಗಳು ಹಾಗೂ ಮಾರ್ಗಗಳು ಪಲ್ಲಟಗೊಳ್ಳುತ್ತಿರುವ ಕಾಲ. ನಲ್ವತ್ತು ವರ್ಷಗಳ ಹಿಂದೆಯೂ-ಅಂದರೆ ನಮಗೆ ಸ್ವಾತಂತ್ರ್ಯ ಬಂದಾಗಲೂ ಹೀಗೇ ಆಗಿತ್ತು. ಜಾತಿ ಪದ್ಧತಿ, ಜಮೀನುದಾರಿಕೆ ಹಾಗೂ ಮಿತಿಗಳುಳ್ಳ ಬದುಕಿನ ಕ್ರಮವನ್ನು ಪ್ರಜಾಪ್ರಭುತ್ವ ಹುಟ್ಟು ಹಾಕಿದ ಕನಸುಗಳು ಅಲ್ಲಾಡಿಸಿದವು. ಈವರೆಗಿನ ಆಧುನಿಕ ಕನ್ನಡ ಸಾಹಿತ್ಯ ಹೊಡೆದಾಡಿರುವುದು ಈ ಕನಸುಗಳೊಂದಿಗೇ. ಇನ್ನಷ್ಟು ವಿವರವಾಗಿ ಹೇಳುವುದಾದರೆ, ಆಧುನಿಕ ಕನ್ನಡ ಸಾಹಿತ್ಯ ಭಾರತೀಯ ಪ್ರಜಾಪ್ರಭುತ್ವದ ಅಶೋತ್ತರಗಳನ್ನೇ ತನ್ನ ಕೇಂದ್ರ ಕಳಕಳಿಯನ್ನಾಗಿಟ್ಟುಕೊಂಡು, ಅದರ ಆದರ್ಶ ವಿರೋಧಭಾಸಗಳು ಹಾಗೂ ವೈಫಲ್ಯ-ಹತಾಶೆಗಳನ್ನೇ ತನ್ನ ವಿವಿಧ ಸ್ತರದ ಅನುಭವ ಹಾಗೂ ಗ್ರಹಿಕೆಗಳ ಮೂಲಕ ಪ್ರತಿಫಲಿಸುತ್ತಾ ಒಂದು ಸಾಹಿತ್ಯ ಸಂಸ್ಕೃತಿಯನ್ನು ನಿರ್ಮಿಸಿ, ಅದರ ವಿಮರ್ಶೆಗೆ ತಕ್ಕುದಾದ ಪರಿಕರಗಳನ್ನು ಆ ತನ್ನ ಒಡಲಿನಿಂದಲೇ ಪಡೆದುಕೊಂಡಿತ್ತು. ಅಂತರಂಗದ ಶೋಧನೆ, ಅನುಭವದ ಸಂಕೀರ್ಣತೆ, ಬಂಧದ ಸಾವಯವ ಸಮಗ್ರೀಕರಣ, ಸಾಮಾಜಿಕ ಕಳಕಳಿ, ಖಡ್ಗಕಾವ್ಯ –ಈ ಎಲ್ಲ ಪರಿಕಲ್ಪನೆಗಳೂ ಪ್ರಜಾಪ್ರಭುತ್ವ ದಯಪಾಲಿಸುವ ಅನೇಕ ಸ್ತರಗಳ ಸ್ವಾತಂತ್ರ್ಯದ ಹಾಗೂ ನಿಷೇಧದ ಅನ್ವೇಷಣಾ ಪರಿಕರಗಳಷ್ಟೇ. ಸಾಂಪ್ರದಾಯಿಕ ಅಥವಾ ಮಧ್ಯಕಾಲೀನ ನಂಬುಗೆಗಳನ್ನೇ ತನ್ನ ಅಂತರಂಗದಲ್ಲಿಟ್ಟುಕೊಂಡು ಬಹಿರಂಗವಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸ್ವೀಕರಿಸುವ ವಿರೋಧಾಭಾಸದ ಹಾಗೂ ಸಂಘರ್ಷದ ಸಂದರ್ಭದಲ್ಲಿ ಹುಟ್ಟಿದ ಈ ಗ್ರಹಿಕೆಗಳು ಸಂಕೀರ್ಣತೆ. ಒಳಶೋಧನೆ, ಸಮಗ್ರೀಕರಣ, ಸಾಮಾಜಿಕತೆಗಳ ಬಗ್ಗೆ ಎಷ್ಟೇ ಮಾತಾಡಿದರೂ ಅವಕ್ಕೆ ಈ ವಿರೋಧಾಭಾಸ ಹಾಗೂ ಸಂಘರ್ಷದ ಎಲ್ಲ ಪರಿಮಿತಿಗಳೂ ಇದ್ದವು ಎಂಬುದನ್ನು ನವ್ಯ-ಬಂಡಾಯಗಳ ಸೋಲು-ಗೆಲುವುಗಳ ನೆಲೆಗಳನ್ನು ಬಲ್ಲವರಿಗೆ ವಿವರಿಸಿ ಹೇಳಬೇಕಾಗಿಲ್ಲ. ಈವರೆಗಿನ ನಮ್ಮ ಸಾಮಾಜಿಕ – ರಾಜಕೀಯ ಪ್ರಕ್ರಿಯೆಗಳಂತೆಯೇ ಈ ಸಾಹಿತ್ಯಿಕ ಪರಿಕರಗಳು ಕೂಡಾ ಈ ವಿರೋಧಾಭಾಸ ಹಾಗೂ ಸಂಘರ್ಷಗಳನ್ನು ಮೀರಿ ಅಥವಾ ಸಂಪೂರ್ಣವಾಗಿ ಅರಗಿಸಿಕೊಂಡು ಶುಭದಾಯಕ ಎನ್ನಿಸುವ ಒಂದು ನೆಲೆಯನ್ನು ತಲುಪಲು ವಿಫಲವಾದವು. ಇದು ಒಂದು ಬರವಣಿಗೆ ಸಂಸ್ಕೃತಿ ಶಬ್ದ-ವ್ಯಾಕರಣಗಳೂ ಜಡತೆಯನ್ನು ಮುಟ್ಟಿದಂತಹ ಬಿಕ್ಕಟ್ಟು ಇದು. ಆದರೆ ‘ಕುಸುಮಬಾಲೆ’ ಈ ಬಿಕ್ಕಟ್ಟಿಗೆ ಒಂದು ಉತ್ತರವೆಂಬಂತೆ ನಮ್ಮ ಮುಂದೆ ನಿಂತಿದೆ. ನಾನು ಈ ಮೊದಲು ಪ್ರಸ್ತಾಪಿಸಿದ ಕನ್ನಡ ಸಾಹಿತ್ಯದ ಇತ್ತೀಚಿನ ಪ್ರಮುಖ ಕೃತಿಗಳ ಒಲವುಗಳು ಈ ಕೃತಿಯಲ್ಲಿ ಜನ್ಮಾಂತರಗೊಂಡಂತೆ ಹೊಚ್ಚ ಹೊಸ ರೂಪ-ಲಯಗಳೊಂದಿಗೆ ಮೈದಾಳಿವೆ. ಈ ಅರ್ಥದಲ್ಲಿ ಈ ಕೃತಿ ಬರವಣಿಗೆಯ ಹೊಸ ಸಂಸ್ಕೃತಿಯ ತೊದಲ್ನುಡಿ. ತೊದಲ್ನುಡಿ ಏಕೆಂದರೆ ಈ ಕೃತಿ ತನ್ನ ಸಂಪೂರ್ಣ ಅರ್ಥವನ್ನು ಇನ್ನೂ ಬಿಟ್ಟುಕೊಡಬೇಕಾಗಿದೆ- ಬಹುಶಃ ಇದೇ ಪರಂಪರೆಯಲ್ಲಿ ಬರಬಹುದಾದ ಇನ್ನಿತರ ಕೃತಿಗಳ ಮೂಲಕ.
ಮೂಲಭೂತವಾಗಿ ಯಾರ ಪುರುಷಾರ್ಥಕ್ಕಾಗಿ ಪ್ರಜಾಪ್ರಭುತ್ವ ಒಂದು ಮೌಲ್ಯವಾಗಿ ಪವಿತ್ರವೆನಿಸಿತೋ ಆ ದಲಿತರ ಒಂದು ಶ್ರೇಷ್ಠ ಸೃಜನಶೀಲ ಮನಸ್ಸೇ, ಪ್ರಜಾಪ್ರಭುತ್ವ ಪ್ರಯೋಗದಲ್ಲಿನ ಸಂಘರ್ಷ ವಿರೋಧಾಭಾಸಗಳನ್ನು ಗೆದ್ದುಕೊಳ್ಳುವ ಬಗೆಯೇ ಈ ಕೃತಿಯ ಒಂದು (ಸಾಹಿತ್ಯ ಇತಿಹಾಸದ) ಹಂತದ ಯಶಸ್ಸಾದರೆ, ಇದು ಕೇವಲ ದಲಿತರ ಕಥೆಯಾಗದೆ ದಲಿತರ ಮೂಲಕ ಕಂಡುಕೊಂಡ ಎಲ್ಲರ ಕತೆಯಾಗುವುದು ಇನ್ನೊಂದು ಹಂತದ ಯಶಸ್ಸು. ಬಸಪ್ಪಸೋಮಿ, ಸಿದ್ಧೂರರ ಮಧ್ಯ ಯುಗೀನತೆ, ಅಕ್ಕಮಾದೇವಮ್ಮನ ಯುಗಾತೀತ ತಾಯ್ತನ, ಯಾಡನ ಬೂದಿಮುಚ್ಚಿದ ಕೆಂಡದಂತಹ ಛಲ, ಅಮಾಸನ ನಿಗೂಢತೆ, ಸೋಮಪ್ಪನ ದಿಗ್ಭ್ರಮೆ, ಕುಸುಮಾಳ ವಿಷಾದ, ಮಧ್ವಾಚಾರ್ಯರ ಬಡ ಬಿಗುಮಾನ, ಗಾರೆ ಸಿದ್ಮಾವನ ಜೀವನ ಪ್ರೀತಿ, ಈರಿಯ ನೋವು, ಆಕೆಯ ಮಗನ ರೋಗ, ತೂರಮ್ಮನ ಮಂತ್ರ, ದಲಿತ ಸಂಘರ್ಷ ಸಮಿತಿಯ ಅರೆ ಗಂಭೀರ-ಅರೆ ತಮಾಷೆಯ ಮೆರವಣಿಗೆ – ಈ ಎಲ್ಲವೂ ಇಲ್ಲಿ ಒಂದಕ್ಕೊಂದು ಸಂಬಂಧ ಕಲ್ಪಸಿಕೊಳ್ಳುವುದು ದಲಿತ ಹುಡುಗ ಚೆನ್ನನು ತಾನು ಮಾಗದೆ, ಪ್ರಜಾಪ್ರಭುತ್ವದ ಮೂಲಕ ಮಾಗಿದ ಹಣ್ಣನ್ನು ಪಡೆಯಲು ಹೋಗಿ ತಾನೇ ಇಲ್ಲವಾದ ದುರಂತದಲ್ಲಿ. ಆದರೆ ಈ ಕೃತಿ ಇದನ್ನು ಬರೀ ದುರಂತವಾಗಿ ಗ್ರಹಿಸುವುದಿಲ್ಲ. ಆದರೆ ಅದನ್ನು ದುರಂತವಾಗಷ್ಟೇ ಕೊನೆಗಾಣಲು ಬಿಡುವುದಿಲ್ಲ. ಹೊಸ ಭರವಸೆಯಲ್ಲಿ ಈ ದುರಂತ ತನ್ನ ಅರ್ಥಪೂರ್ಣತೆಯನ್ನು ಕಂಡುಕೊಳ್ಳುತ್ತದೆ. ಚೆನ್ನನ ಬರುವಿಕೆಗಾಗಿ, ಬದುಕಿನಲ್ಲಿ ಗಾಢ ನಂಬಿಕೆಯಿಟ್ಟು ಕಾಯುತ್ತಲೇ ಇರುವ ಅವನ ತಂದೆ ತಾಯಿಗಳ ಈ ಸಂಭಾಷಣೆಯೊಂದಿಗೆ ಕಾದಂಬರಿಯ ನಾಟಕ ಮುಗಿಯುತ್ತದೆ:
“ನಮ್ಮ ಆ ಕ್ರಿಯಾ ಒಂದು ಸುದ್ದ ಇದ್ರ ಒಂದಲ್ಲ ಒಂಜಿನ ಅವ್ನೇ ಬತ್ತನ ಕನಾ, ಸಾಸ್ತ್ರ ಹೇಳವ್ನ ರೂಪ್ದಲಿ ಬರಬೌದು… ದಾಸಯ್ಯನ ರೂಪ್ದಲಿ ಬರಬೌದೂ… ಮಾಟ ಮಂತ್ರದವನ ರೂಪ್ದಲಿ ಬರಬೌದು,…”
“ಯಾವ ರೂಪ್ದಲಿ ಆಗ್ಲಿಕನಾ… ಯಾವತ್ತಾದರೂ ಬಂದಾನಾ…?”
“ಬರ್ದೆ ? ಸಂಬಂಜ ಅನ್ನೋದು ದೊಡ್ಡದು ಕನಾ…,”
ಕ್ರಿಯೆಯಲ್ಲಿ ಶುದ್ಧಿ ಹಾಗೂ ಸಂಬಂಧಗಳಲ್ಲಿ ನಂಬಿಕೆ – ಇವೆರಡೇ ಬದುಕಿನ ಎಲ್ಲ ಪ್ರಯತ್ನಗಳನ್ನೂ ಅರ್ಥಪೂರ್ಣಗೊಳಿಸುವ ಶಕ್ತಿಗಳು; ಇವುಗಳಾಚೆಗೆ ಎಲ್ಲವೂ ಮಂಜು ಎಂಬ ಸತ್ಯದ ಕಡೆ ತುಡಿಯುವ ಈ ಕೃತಿ, ಬದುಕಿನ ಈ ಎಲ್ಲ ಪ್ರಯತ್ನಗಳನ್ನೂ ಆಯಾ ಪ್ರಯತ್ನಗಳ ಭಾವ-ಬಣ್ಣಗಳೊಂದಿಗೇ ನಾಟ್ಯೀಕರಿಸಿದೆ.
ಆಧುನಿಕ ಜೀವನ ಹಾಗೂ ಆಧುನಿಕ ಕನ್ನಡ ಸಾಹಿತ್ಯ ನಂಬಿರುವ ಆಂತರಿಕ ತರ್ಕವನ್ನೇ ಮರೆತಂತೆ ತೋರುವ ಈ ಕೃತಿ ಸಹಜವಾಗಿಯೇ ಈ ತರ್ಕದ ಉತ್ಪನ್ನಗಳಂತಿರುವ ಸರಿ-ತಪ್ಪುಗಳ, ಇತಿಹಾಸ-ವರ್ತಮಾನಗಳ, ವಸ್ತು-ಶಕ್ತಿಗಳ, ಗದ್ಯ-ಪದ್ಯಗಳ, ಆಡುಮಾತು-ಗ್ರಂಥಮಾತುಗಳ, ಶಬ್ದ-ಮೌನಗಳ, ಜಾನಪದ-ಶಾಸ್ತ್ರೀಯ ಶೈಲಿಗಳ ಭೇದಗಳನ್ನೇ ಅಳಿಸಿಕೊಂಡು ಹೋಗುತ್ತಾ ಎಲ್ಲವನ್ನೂ ಒಂದಾಗಿ ಕಾಣುವ ತರ್ಕಾತೀತ ನೋಟದಲ್ಲಿ ನೆಲೆಗೊಳ್ಳುತ್ತದೆ. ಈವರೆಗಿನ ಆಧುನಿಕ ಕನ್ನಡ ಬರವಣಿಗೆಯ ಸಂಸ್ಕೃತಿಗೆ ಸಾರಾಸಗಟಾದ ಪ್ರತಿಕ್ರಿಯೆಯೆಂಬಂತೆ ಬರೆಯಲ್ಪಟ್ಟಿರುವ ಈ ಕೃತಿ ಆಧುನಿಕ ಜೀವನದ ತತ್ವಮೀಮಾಂಸೆ ಹಾಗೂ ಹೋರಾಟಗಳ ವ್ಯಾಕರಣದ ಅಸಂಗತತೆಯನ್ನು ತಮಾಷೆಯಾಗಿ ನೋಡುತ್ತಾ, ಮನುಷ್ಯ ಚೇತನ ಈ ತತ್ವ-ವ್ಯಾಕರಣಗಳನ್ನು ಮೀರಿದ ನೆಲೆಯಲ್ಲಿ ತನ್ನ ಸಾಂಗತ್ಯವನ್ನು ಪಡೆದುಕೊಂಡಿರುವ ಕಡೆ ಬೊಟ್ಟು ಮಾಡುತ್ತದೆ. ಇದಕ್ಕಾಗಿ ಕೃತಿ ಕನ್ನಡ ಜನಪದ ಪ್ರಜ್ಞೆಯ ಸುಪ್ತದಲ್ಲಿ ಮಲಗಿರುವ ಲಯಗಳನ್ನೂ ಮೌನಗಳನ್ನೂ ಎಬ್ಬಿಸುತ್ತದೆ. ಈ ಎಚ್ಚೆತ್ತ ಮೌನ-ಲಯಗಳ ಮೂಲಕ ಕಾಲದ ಕಳ್ಳ ಹೆಜ್ಜೆಗಳನ್ನು ಗುರುತಿಸುವ ಶಕ್ತಿ ಪಡೆದುಕೊಳ್ಳುತ್ತದೆ. ಲೋಕದ ಬಗೆಗಿನ ಅಮಿತವಾದ ಪ್ರೀತಿಯಿಂದ ಮಾತ್ರ ಹುಟ್ಟಬಹುದಾದ ಈ ಶಕ್ತಿ ತನ್ನ ಸಾವಧಾನ ಗತಿಯಲ್ಲಿ ಎಲ್ಲವನ್ನೂ ಮುಟ್ಟುತ್ತ ಸಾಯುತ್ತಿರುವ ಬದುಕಿಗೆ ಜೀವದಾನ ಮಾಡುತ್ತದೆ –ಇತಿಹಾಸ – ವರ್ತಮಾನಗಳ ಕಳ್ಳಗಂಟುಗಳು ತಂತಾನೇ ಬಿಚ್ಚಿಕೊಂಡು ಬದುಕು ಬಯಲಾಗುತ್ತದೆ; ಆಲಯವಾಗಲು ಹಂಬಲಿಸುತ್ತದೆ. ಲೋಕ ಬರೀ ‘ಲೋಕ’ದಲ್ಲಿಲ್ಲ ಎಂಬ ಅರಿವನ್ನು ಲೋಕವ್ಯವಹಾರಗಳ ಮೂಲಕವೇ ಮಂಡಿಸಲು ಯತ್ನಿಸುವ ಈ ಕೃತಿ, ಬದುಕಿನ ಜೀವಜಲಕ್ಕಾಗಿ ಮನುಷ್ಯ ಗಾಳಿಯಲ್ಲಿ ಸುರಿಯುವ ಸಕ್ಕರೆಗೆ ಸರಿಯಾಗಿ ಬಾಯೊಡ್ಡಿ ನಿಲ್ಲುವ ಹೊಲೆಗೇರಿಯ ಆ ಹೈಕಳಿನಂತೆ ಧ್ಯಾನಸ್ಥನಾಗಬೇಕು; ಲೋಕೋತ್ತರನಾಗಬೇಕು ಎಂದು ಧ್ವನಿಸುತ್ತದೆ. ಆದರೆ ಈ ಧ್ವನಿ ಅಪಾರ್ಥದಲ್ಲಿ, ಅಸ್ಪಷ್ಟ ತರಂಗಗಳಲ್ಲಿ ನಮ್ಮನ್ನು ಮುಟ್ಟುತ್ತಿರುವುದಕ್ಕೆ ಈ ಕೃತಿಯ ಕೃತಕ ಹೊರರೂಪವೇ ಕಾರಣವಿರಬಹುದು.
‘ಕುಸುಮಬಾಲೆ’ ಮೂಲತಃ ಒಂದು ಆಧುನಿಕ ತತ್ವಪದ. ತತ್ವಪದದಂತೆಯೇ ಅದನ್ನು ಆಲಿಸಬೇಕು. ಆಗ ಮಾತ್ರ ಅದರ ಅರ್ಥ ಮತ್ತು ಮಿತಿಗಳು ಹೊಳೆಯುತ್ತವೆ. ಕಾದಂಬರೀ ರೂಪವಾಗಿ ಈ ಕೃತಿ ಪ್ರಸ್ತುತಗೊಂಡಿರುವುದೇ ಇದು ‘ಅರ್ಥವಾಗದ ಮಹಾಕೃತಿ’ಯೆಂದು ಹೆಸರಾಗಲು ಕಾರಣವೆಂದು ತೋರುತ್ತದೆ. ಲಿಖಿತ ರೂಪಕ್ಕೆ ಒಗ್ಗದ, ಓದಿನ ತರ್ಕಕ್ಕೆ ಸಿಗದ ಈ ಕೃತಿ ಅಧ್ಯಾಯಗಳಲ್ಲಿ ಒಡೆದು ಕಾದಂಬರಿಯಾಗಲು ಹೆಣಗಿ ಸೋಲುತ್ತದೆ. ಇದರಿಂದಾಗಿ ಅದು ತತ್ವಪದವಾಗಿಯೂ ತನ್ನ ಪೂರ್ಣ ರೂಪ ಪಡೆಯದೆ, ತನ್ನ ಐಕ್ಯತೆಯನ್ನು ಕಳೆದುಕೊಂಡಿದೆ. ರೂಪದ ಈ ಬಿಕ್ಕಟ್ಟು ನಮ್ಮ ಸಮಕಾಲೀನ ಸಾಹಿತ್ಯ ಸಂದರ್ಭದ, ಹಾಗೇ ಸಮಕಾಲೀನ ಜೀವನದ ಬಿಕ್ಕಟ್ಟು ಕೂಡಾ ಹೌದು. ಪ್ರಜಾಪ್ರಭುತ್ವವನ್ನು ವಿಚಾರದಿಂದ ಅಧ್ಯಾತ್ಮಿಕಗೊಳಿಸುವ ಬಿಕ್ಕಟ್ಟು. ಪ್ರಜಾಪ್ರಭುತ್ವವನ್ನು ವಿರೋಧಾಭಾಸ ಹಾಗೂ ಸಂಘರ್ಷಗಳಿಂದ ಪಾರುಮಾಡುವ ಬಿಕ್ಕಟ್ಟು. ಈ ಬಿಕ್ಕಟ್ಟಿನಲ್ಲಿ ಹುಟ್ಟಿರುವ ‘ಕುಸುಮಬಾಲೆ’ ಏನನ್ನೋ ಹೊಸದಾಗಿ ಹೇಳಲು ಯತ್ನಿಸುತ್ತಿರುವಂತಿದೆ. ಅದರ ಈ ತೊದಲ್ನುಡಿಯನ್ನು ನಾವೆಲ್ಲಾ ಕೊಂಚ ಸಹನೆ-ಪ್ರೀತಿಗಳಿಂದ ಕೇಳೋಣ.
[ಟಿಪ್ಪಣಿ: ಕನ್ನಡ ಸಾಹಿತ್ಯದ ಇತ್ತೀಚಿನ ಒಲವುಗಳನ್ನು ಗುರುತಿಸುವ ಕೆಲಸವನ್ನಷ್ಟೇ ನಾನು ಇಲ್ಲಿ ಮಾಡಿರುವುದು. ಈ ಒಲವುಗಳನ್ನು ಪ್ರಕಟಪಡಿಸದೇ ಸಾಹಿತ್ಯ ಕೃತಿಯೊಂದು ಶ್ರೇಷ್ಠವೆನ್ನಿಸಿಕೊಳ್ಳಲಾರದೆಂಬ ಮೌಲ್ಯ ನಿರ್ಣಯದ ಕೆಲಸವನ್ನು ನಾನು ಮಾಡಿಲ್ಲ.]