ಕುವೆಂಪು ಎಂದರೆ ಹೀಗೆ….

1931 ರಲ್ಲಿ ಕುವೆಂಪುರವರು ಶ್ರೀರಂಗಪಟ್ಟಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿಚಾರ ಕ್ರಾಂತಿಗೆ ಆಹ್ವಾನ ಎಂಬ ಉಪನ್ಯಾನ ನೀಡಿದ್ದರು. ಈ ಉಪನ್ಯಾಸ ಕುರಿತು ದೇವುಡು ನರಸಿಂಹಶಾಸ್ತ್ರಿಗಳು ಸರ್ಕಾರಕ್ಕೆ ದೂರು ಸಲ್ಲಿಸಿದರು. ಕುವೆಂಪು ಒಬ್ಬ ಸರ್ಕಾರಿ ನೌಕರನಾಗಿದ್ದು ( ಆವಾಗ ಕುವೆಂಪು ಉಪನ್ಯಾಸಕರಾಗಿದ್ದರು) ಯುವಜನತೆಯನ್ನು ಧರ್ಮದ ವಿಷಯದಲ್ಲಿ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂಬುದು ದೇವುಡು ಆರೋಪವಾಗಿತ್ತು. ಇಂತಹ ಅವಕಾಶಕ್ಕೆ ಕಾಯುತ್ತಿದ್ದ ಅನೇಕರು “ ಗರಿಕೆ ಹುಲ್ಲುಗಳು ಗೂಟವಾದವು” ಎಂಬಂತೆ ಕುವೆಂಪು ಮೇಲೆ ತಿರುಗಿಬಿದ್ದರು. ಆದರೆ, ಕುವೆಂಪುರವರು  ತಮ್ಮ ವಿರುದ್ಧ ಕೇಳಿ ಬಂದ ಯಾವ ಆರೋಪ, ಟೀಕೆ ಟಿಪ್ಪಣಿ ಮತ್ತು  ಬೈಗುಳಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಂತಿಮವಾಗಿ ಸರ್ಕಾರವು ಟಿ.ಎಸ್.ವೆಂಕಣ್ಣಯವರನ್ನು ಈ ವಿಷಯ ಕುರಿತಂತೆ ತನಿಖೆಗೆ ನೇಮಕ ಮಾಡಿ, ವರದಿ ಸಲ್ಲಿಸುವಂತೆ ಸೂಚಿಸಿತು. ಸರ್ಕಾರಕ್ಕೆ ಕುವೆಂಪು ಮಾಡಿದ್ದ ಉಪನ್ಯಾಸ ಕುರಿತು ಒಂದು ಸಾಲಿನ ಅಥವಾ ಒಂದು ವಾಕ್ಯದ ವರದಿಯನ್ನು ವೆಂಕಣ್ಣಯ್ಯ ಸಲ್ಲಿಸಿದರು. ಅವರ ವರದಿಯ ಸಾರಾಂಶ ಹೀಗಿತ್ತು. “ ನಾನು ನನ್ನ ಮಗನಿಗೆ ಇದಕ್ಕಿಂತ ಒಳ್ಳೆಯ ಉಪದೇಶ ನೀಡಲಾರೆ”!

ನಂತರ ಗಲಾಟೆ ತಣ್ಣಗಾಯಿತು.

ವಿವಾದವೆಲ್ಲವೂ ಮುಗಿದ ನಂತರ ಕುವೆಂಪು ಶಿಷ್ಯರು ಒಮ್ಮೆ ಕುವೆಂಪು ರವರನ್ನು ಕೇಳಿದರು. “ ಸಾರ್ ನೀವು ಇಷ್ಟೆಲ್ಲಾ ಗಲಾಟೆಯಾದರೂ ಸಹ ಏಕೆ ಮೌನವಾಗಿದ್ದಿರಿ?” ಇದಕ್ಕೆ ಕುವೆಂಪು ನೀಡಿದ ಉತ್ತರ ಹೀಗಿತ್ತು.

“ ನೋಡ್ರಯ್ಯಾ, ನನ್ನ ವಿರುದ್ಧ ಸೆಣಸಾಡಲಿಕ್ಕೆ ಅಥವಾ ಕುಸ್ತಿಯಾಡಲಿಕ್ಕೆ ಬರುವ ವ್ಯಕ್ತಿ ಯಾವ ಜಾತಿಯವನು, ಅವನ ವಯಸ್ಸೆಷ್ಟು, ಅವನು ಪಂಡಿತನೆ?. ಪುರುಷೋತ್ತಮನೆ? ಇವು ನನಗೆ ಮುಖ್ಯವಲ್ಲ, ನಾನು ಅಖಾಡಕ್ಕೆ ಇಳಿಯಬೇಕಾದರೆ, ನನ್ನ ಎದುರಾಳಿಗೆ ಕನಿಷ್ಟ ಸೊಂಟದ ಮೇಲೆ ಒಂದು ಲಂಗೋಟಿ ಇರಬೇಕು. ಅದೇ ಇಲ್ಲದೆ ಬೆತ್ತಲೆ ನಿಂತು ಕುಸ್ತಿಗೆ ಕರೆಯುವನ ಜೊತೆ ನಾನು ಹೋರಾಡಲಾರೆ”!

ಅಂದು ಕುವೆಂಪು ನೀಡಿದ್ದ ಹೇಳಿಕೆಯಲ್ಲಿ ಅಂತಹ ಘನತೆಯಿತ್ತು. ಕುವೆಂಪುರವರ ಪ್ರಖರ ವೈಚಾರಿಕತೆಯ ಜೊತೆಗೆ ಇಂತಹ ವಿವೇಕ ಮತ್ತು ತಾಳ್ಮೆ ಮನನೀಯ.