ಕರ್ನಾಟಕ ಚಿನ್ನದ ಹೊಳಪು: ದಲಿತ, ರೈತ ಚಳವಳಿ ಸೃಷ್ಟಿಸಿದ ಹೊಸ ಕರ್ನಾಟಕ – ನಟರಾಜ್ ಹುಳಿಯಾರ್
(27.11.2024 ಪ್ರಜಾವಾಣಿ ಪತ್ರಿಕೆಯಲ್ಲಿ ನಟರಾಜ ಹುಳಿಯಾರ್ ಅವರ ಬರಹ ಹಾಗೂ ದೇವನೂರರನ್ನು ಕುರಿತು ಪ್ರಜಾವಾಣಿ ಕಿರು ಟಿಪ್ಪಣಿ )
ಕನ್ನಡದ ಹೆಮ್ಮೆ
ದೇವನೂರ ಮಹಾದೇವ
(ಜನನ: ಜೂನ್, 10, 1948)
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದೇವನೂರ ಮಹಾದೇವ, ಒಂದು ವಿಶಿಷ್ಟ ಪ್ರತಿಭೆ. ಅವರು ನವ್ಯೋತ್ತರ ಕಾಲಘಟ್ಟದಲ್ಲಿ ಬರವಣಿಗೆ ಆರಂಭಿಸಿ ದಲಿತ ಬಂಡಾಯ ಪಂಥದ ಪ್ರಮುಖ ಲೇಖಕರೆನಿಸಿಕೊಂಡವರು; ದಲಿತ ಲೋಕದ ಕಥೆಗಳನ್ನು ಅತ್ಯಂತ ಖಚಿತವಾಗಿ ಕಂಡರಿಸಿದ ಹಿರಿಮೆ ಅವರದ್ದು. ಅವರು ಅನುಸರಿಸಿದ ಅಭಿವ್ಯಕ್ತಿ ಕ್ರಮ ಮತ್ತು ಭಾಷೆ ಅತ್ಯಂತ ಸ್ವೋಪಜ್ಞವಾದವು.
‘ದ್ಯಾವನೂರು’ ಕಥಾ ಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ದಿಕ್ಕು ತೋರಿದವರು ಮಹಾದೇವ. ನಂತರ ಅವರು ಬರೆದ ‘ಒಡಲಾಳ’, ‘ಕುಸುಮಬಾಲೆ’ ಕನ್ನಡ ಸಾಹಿತ್ಯದ ಪ್ರಮುಖ ಕೃತಿಗಳೆಂದು ಪರಿಗಣಿತವಾದವು.
ಕನ್ನಡ ಅಧ್ಯಾಪಕರಾಗಿ ಒಂದಷ್ಟು ಕಾಲ ಕೆಲಸ ಮಾಡಿ ನಂತರ ಪೂರ್ಣಾವಧಿ ಬೇಸಾಯಗಾರರಾದ ಮಹಾದೇವ, ಸಾಹಿತ್ಯ ರಚನೆ, ದಲಿತ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಲೋಹಿಯಾ ಸಮಾಜವಾದದಿಂದ ಪ್ರಭಾವಿತರಾಗಿದ್ದ ಮಹಾದೇವ, ನಂತರ ಅಂಬೇಡ್ಕರ್ ಚಿಂತನೆಯನ್ನೇ ತಮ್ಮ ಬದುಕು ಮತ್ತು ಸಾಹಿತ್ಯದ ಮೂಲ ದ್ರವ್ಯವನ್ನಾಗಿಸಿಕೊಂಡರು. ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಯ ಆರಂಭಕ್ಕೆ ಒತ್ತಾಸೆಯಾಗಿ, ಅದರ ಬೌದ್ಧಿಕ ಶಕ್ತಿಯಾದರು. ನಮ್ಮ ಕಾಲದ ಬಹು ಮುಖ್ಯ ಸಾಮಾಜಿಕ, ರಾಜಕೀಯ ವಾಗ್ವಾದಗಳಿಗೆ ಪ್ರತಿಕ್ರಿಯಿಸುತ್ತಾ, ನಾಡಿನ ಸಾಕ್ಷಿಪ್ರಜ್ಞೆ ಎನ್ನಿಸಿಕೊಂಡರು.
ಮಹಾದೇವ ಅವರು ಸೃಷ್ಟಿಸಿರುವ ಅಮಾಸ, ಸಾಕವ್ವ, ಕುಸಮಬಾಲೆಯಂಥ ಪಾತ್ರಗಳು, ದಟ್ಟ ಪ್ರಾದೇಶಿಕತೆಯ ಭಾಷೆ, ಕಾವ್ಯಾತ್ಮಕ ಶೈಲಿ ಬೆರೆತ ಕಥನ ಕ್ರಮದ ಜತೆಗೆ ಅವರ ವಿಶಿಷ್ಟ ಕಾಣ್ಕೆಯೂ ಸೇರಿ ಅವರನ್ನು ಕನ್ನಡ ಸಂಸ್ಕೃತಿಯ ಅಪೂರ್ವ ಬರಹಗಾರರನ್ನಾಗಿಸಿವೆ.
***********
ಕರ್ನಾಟಕದ ದಲಿತ ಚಳವಳಿ ಹಾಗೂ ರೈತ ಚಳವಳಿ ಸುದೀರ್ಘ ಹೋರಾಟಗಳನ್ನು ಕಟ್ಟಬಲ್ಲ ಕರ್ನಾಟಕವನ್ನು ಸೃಷ್ಟಿಸಲು ಶುರುಮಾಡಿ ಐವತ್ತು ವರ್ಷಗಳಾಗುತ್ತಾ ಬಂದಿದೆ. ಇವೆರಡೂ ಚಳವಳಿಗಳು ಕನ್ನಡ ಭಾಷೆಗೆ ಹೊಸ ನ್ಯಾಯದ ಪರಿಭಾಷೆಗಳನ್ನು ಬೆಸೆದು, ಕರ್ನಾಟಕದ ಚರಿತ್ರೆಯ ದಿಕ್ಕನ್ನು ಬದಲಿಸಿದವು.
ದಲಿತ ಚಳವಳಿಯ ಆರಂಭದಿಂದಲೂ ದಲಿತರ ಹಕ್ಕುಗಳ ಹೋರಾಟದ ಜೊತೆಗೆ ವೈಚಾರಿಕ ಕರ್ನಾಟಕವನ್ನು ಕಟ್ಟಬೇಕೆಂಬ ಹಂಬಲವೂ ಬೆರೆತಿತ್ತು. ಇದಕ್ಕಿಂತ ಮೊದಲು ಎಪ್ಪತ್ತರ ದಶಕದ ಶುರುವಿನಲ್ಲಿ ಪ್ರಜ್ಞಾವಂತ ವ್ಯಕ್ತಿಗಳ ಮೂಲಕ ವೈಚಾರಿಕ ಸಂಘರ್ಷ ಆರಂಭಿಸಲೆತ್ನಿಸಿದ ಎಂ.ಡಿ.ನಂಜುಂಡಸ್ವಾಮಿ ವಿಚಾರವಂತ ತರುಣರ ಜೊತೆಗೂಡಿ ‘ಸಮಾಜವಾದಿ ಯುವಜನ ಸಭಾ’ ಆರಂಭಿಸಿದರು. ಅಷ್ಟೊತ್ತಿಗಾಗಲೇ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ನೋಟವನ್ನು ರಾಜಕಾರಣದ ಜೊತೆಗೆ ಬೆಸೆದಿದ್ದರು. ಇದು ಲೋಹಿಯಾವಾದವನ್ನು ಕನ್ನಡಕ್ಕೆ ಒಗ್ಗಿಸಿದ ಕಾಲ. ಮುಂದೆ ದಲಿತ ಚಳವಳಿ ಕಟ್ಟಿದ ಬಿ.ಕೃಷ್ಣಪ್ಪ, ದೇವನೂರ ಮಹಾದೇವ, ಗೋವಿಂದಯ್ಯ, ಶ್ರೀಧರ ಕಲಿವೀರ ಮೊದಲಾದವರು ಸಮಾಜವಾದಿ ಯುವಜನ ಸಭಾದ ಜೊತೆಗಿದ್ದರು. ಕವಿ ಸಿದ್ಧಲಿಂಗಯ್ಯ ಮಾರ್ಕ್ಸ್‌ವಾದದ ಸಂಘರ್ಷದ ಭಾಷೆಯನ್ನು ಬಳಸುತ್ತಿದ್ದರು. ಪೆರಿಯಾರ್ ಚಿಂತನೆಯನ್ನೂ ವೈಚಾರಿಕ ಕರ್ನಾಟಕ ಸ್ವೀಕರಿಸಿತು. ಪ್ರಗತಿಶೀಲ ಸಾಹಿತ್ಯವೂ ಸೇರಿದಂತೆ ಹಲ ಬಗೆಯ ಸಾಂಸ್ಕೃತಿಕ ಬೆಳವಣಿಗೆಗಳು ಏಕೀಕರಣದ ನಂತರದ ವೈಚಾರಿಕ ಕರ್ನಾಟಕವನ್ನು, ಪ್ರಗತಿಪರ ಪರಿಭಾಷೆಯ ಕನ್ನಡವನ್ನು, ವೈಚಾರಿಕ ನೋಟದ ಹೊಸ ಕನ್ನಡಿಗರನ್ನು ಸೃಷ್ಟಿಸಿದವು.
ಬೂಸಾ ಪ್ರಕರಣ, ದಲೇಕಸಂ, ದಲಿತ ಸಂಘರ್ಷ ಸಮಿತಿಗಳ ಘಟ್ಟದಲ್ಲಿ ದಲಿತ ಚಳವಳಿಯ ಹೋರಾಟ, ಕರಪತ್ರ, ಭಾಷಣಗಳು, ಅಂಬೇಡ್ಕರ್ ರೂಪಿಸಿದ ಸಮಾನತೆ, ಜಾತಿವಿನಾಶ, ಸಾಮಾಜಿಕ ನ್ಯಾಯದ ಪರಿಕಲ್ಪನೆಗಳನ್ನು ಹಬ್ಬಿಸತೊಡಗಿದವು. ದಲಿತ ಕಮ್ಮಟಗಳಲ್ಲಿ ಜಿ.ರಾಮಕೃಷ್ಣ, ಒ.ಶ್ರೀಧರನ್ ಮೊದಲಾದವರಿಂದ ಮಾರ್ಕ್ಸಿಸ್ಟ್ ನೋಟ ಕ್ರಮವೂ ಚಳವಳಿಗೆ ಸೇರಿಕೊಂಡಿತು. ಕೋಲಾರ ವಲಯದಲ್ಲಿ ಗದ್ದರ್ ಕ್ರಾಂತಿಕಾರಿ ಹಾಡುಗಳ ವರ್ಗಸಂಘರ್ಷವೂ ಬೆರೆಯಿತು. ನಂತರದ ದಲಿತ ಚಳವಳಿ ಅಂಬೇಡ್ಕರ್ ಚಿಂತನೆ-ಮಾರ್ಗಗಳನ್ನು ಹೆಚ್ಚು ಬಳಸತೊಡಗಿತು. ಆದರೂ, ದಲಿತ ಚಳವಳಿಯ ಮೂರನೆಯ ತಲೆಮಾರಿನ ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ ನಾಗವಾರರವರೆಗೂ ಅಂಬೇಡ್ಕರ್- ಪೆರಿಯಾರ್-ಸಮಾಜವಾದಿ ವೈಚಾರಿಕ ಭಾಷೆ ಮುಂದುವರಿದಿದೆ. ಇದೆಲ್ಲದರ ಫಲವಾಗಿ ಕರ್ನಾಟಕದ ದಲಿತ ಚಳವಳಿಯ ಭಾಷೆ, ಧೋರಣೆಗಳು ಭಾರತದ ಇತರ ರಾಜ್ಯಗಳಿಗಿಂತ ಭಿನ್ನವಾಗಿವೆ.
ದಲಿತ ಚಳವಳಿಯ ಗುರಿಗಳಲ್ಲಿ ಜಾತ್ಯತೀತ ಕರ್ನಾಟಕದ ಸೃಷ್ಟಿಯೂ ಇದ್ದುದರಿಂದ ದಲಿತ ಚಳವಳಿ ಕರ್ನಾಟಕದ ಹಲವು ಪ್ರಗತಿಪರ ಚಳವಳಿಗಳ ಜೊತೆ ಕೈ ಜೋಡಿಸುತ್ತಾ ಬಂದಿದೆ. ದಲಿತ ಚಳವಳಿಯ ಭಾಷೆ ಇತರ ಪ್ರಗತಿಪರ ಸಂಘಟನೆಗಳ ಭಾಷೆಯ ಜೊತೆ ಬೆರೆತಿದೆ. ನಂತರ ಬಂದ ಬಂಡಾಯ ಸಾಹಿತ್ಯ ಚಳವಳಿಯ ಲೇಖಕ, ಲೇಖಕಿಯರು ದಲಿತ ಚಳವಳಿಯ ಭಾಷೆ, ಧೋರಣೆಗಳನ್ನು ಬಹುತೇಕ ಒಪ್ಪಿದವರಾಗಿದ್ದರು. ಬಂಡಾಯ ಚಳವಳಿ ಸೃಷ್ಟಿಸಿದ ವೈಚಾರಿಕ ಕರ್ನಾಟಕವು ದಲಿತ ಚಳವಳಿಯ ಮತ್ತೊಂದು ಬಗೆಯ ಮುಂದುವರಿಕೆಯಾಯಿತು. ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯಗಳು ಮೂರು ತಲೆಮಾರುಗಳ ಬೃಹತ್ ವೈಚಾರಿಕ ಓದುಗ, ಲೇಖಕ ಸಮುದಾಯವನ್ನು ಸೃಷ್ಟಿಸಿವೆ. ಈ ವೈಚಾರಿಕ ಭಾಷೆ ಕೋಮುವಾದ ವಿರೋಧಿ ಚಳವಳಿ, ಕಮ್ಯುನಿಸ್ಟ್ ಚಳವಳಿ ಮುಂತಾಗಿ ಹಲವೆಡೆ ಬೆಸೆದುಕೊಂಡಿದೆ.
ಪ್ರಜ್ಞಾವಂತ ವ್ಯಕ್ತಿಯೊಬ್ಬ ಏಕಾಂಗಿಯಾಗಿಯೇ ವ್ಯವಸ್ಥೆಯನ್ನು ಎದುರಿಸಬಹುದು ಎಂಬುದನ್ನು ಕಲಿಸಿದ್ದ ಗಾಂಧೀವಾದ, ಸಮಾಜವಾದಗಳಿಂದ ಎಂ.ಡಿ.ನಂಜುಂಡಸ್ವಾಮಿ (ಎಂ.ಡಿ.ಎನ್) ಪ್ರೇರಣೆ ಪಡೆದಿದ್ದರು. ರೈತರು ಬೆಳೆದ ಬೆಳೆಯ ಒಂದು ಭಾಗವನ್ನು ಲೆವಿ ರೂಪದಲ್ಲಿ ಸರ್ಕಾರಕ್ಕೆ ಕೊಡಬೇಕೆಂಬ ಕಾನೂನನ್ನು ವಿರೋಧಿಸಿ ಎಂ.ಡಿ.ಎನ್. ಏಕವ್ಯಕ್ತಿ ಚಳವಳಿ ಆರಂಭಿಸಿದರು. ಇದು ‘ಕರಿಯರನ್ನು ಅಸಮಾನವಾಗಿ ಕಾಣುವ ಭ್ರಷ್ಟ ಅಮೆರಿಕ ಸರ್ಕಾರಕ್ಕೆ ತೆರಿಗೆ ಕೊಡುವುದಿಲ್ಲ’ ಎಂದು ಸವಾಲೆಸೆದು ಕಾಡಿಗೆ ಹೋದ ಲೇಖಕ ಹೆನ್ರಿ ಡೇವಿಡ್ ಥೋರೊ ಮಾದರಿಯ ‘ನಾಗರಿಕ ಅವಿಧೇಯತೆ’ಯ ಕರ್ನಾಟಕದ ರೂಪದಂತಿತ್ತು. ಎನ್.ಡಿ.ಸುಂದರೇಶ್, ಪೂರ್ಣಚಂದ್ರ ತೇಜಸ್ವಿ ಕೂಡ ಏಕವ್ಯಕ್ತಿ ಚಳವಳಿ ಶುರು ಮಾಡಿದರು. ನಂತರ ‘ಕಬ್ಬು ಬೆಳೆಗಾರರ ಸಂಘ’ ಹುಟ್ಟಿತು. 1980ರಲ್ಲಿ ನರಗುಂದ, ನವಲಗುಂದದಲ್ಲಿ ಚಳವಳಿ ನಿರತ ರೈತರ ಮೇಲೆ ಗೋಲಿಬಾರ್ ನಡೆದ ನಂತರ ‘ಕರ್ನಾಟಕ ರಾಜ್ಯ ರೈತ ಸಂಘ’ ಅಸ್ತಿತ್ವಕ್ಕೆ ಬಂತು.
ಅಂದು ರೈತ ಚಳವಳಿಯ ಮುಖ್ಯ ಭಾಷಣಕಾರರಾಗಿದ್ದ ಎಂ.ಡಿ.ಎನ್, ಸುಂದರೇಶ್, ಕಡಿದಾಳು ಶಾಮಣ್ಣ ಲೋಹಿಯಾವಾದಿ ಗಳಾಗಿದ್ದರು. ಎಂ.ಡಿ.ಎನ್-ತೇಜಸ್ವಿ ಸೇರಿ ಲೋಹಿಯಾ ಚಿಂತನೆಗಳ ‘ಕೆಂಪು ಪುಸ್ತಕ’ ಪ್ರಕಟಿಸಿ ಸಮಾಜವಾದವನ್ನು ಹೊಸ ತಲೆಮಾರಿಗೆ ಪರಿಚಯಿಸಿದರು. ಈ ತಲೆಮಾರಿನ ವಿಚಾರವಾದಿಗಳು ಸಣ್ಣಪುಟ್ಟ ತಂಡಗಳಲ್ಲಿ ಜಾತಿವಿನಾಶ ಚಳವಳಿ, ವಿಚಾರವಾದಿ ಸಂಘಟನೆಗಳು, ದಲಿತ ಚಳವಳಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮುಂದೆ ಈ ವಲಯ ರೈತ ಚಳವಳಿಯತ್ತಲೂ ಹೊರಳಿತು. ಈ ಚಳವಳಿಗಳ ಸಭೆಗಳಲ್ಲಿ ಭಾಗಿಯಾಗುತ್ತಿದ್ದ ವಿಚಾರವಂತರಲ್ಲಿ ಎರಡೂ ಚಳವಳಿಗಳು ಬೆರೆಯತೊಡಗಿದ್ದವು. ಈ ಚಳವಳಿಗಳನ್ನು ಬೆಂಬಲಿಸಿಯೂ, ಅವುಗಳ ವಿಮರ್ಶಕರಾಗಿದ್ದ ಕೆ.ರಾಮದಾಸ್, ಡಿ.ಆರ್.ನಾಗರಾಜ್, ಲಂಕೇಶ್ ಥರದವರೂ ಇದ್ದರು.
ದಲಿತ ಚಳವಳಿಯ ಸಾಮಾಜಿಕ ನ್ಯಾಯದ ಪರಿಭಾಷೆ ಹಾಗೂ ರೈತ ಚಳವಳಿಯ ಗ್ರಾಮಪರ-ರೈತಪರ ನಿಲುವಿನ ಪರಿಭಾಷೆಗಳು ಕನ್ನಡ ಸಂಸ್ಕೃತಿಯ ಭಾಗವಾಗತೊಡಗಿದವು. ಆರ್ಥಿಕ, ಸಾಮಾಜಿಕ ಚಳವಳಿಗಳಾಗಿದ್ದ ಈ ಚಳವಳಿಗಳು ಕರ್ನಾಟಕದ ಸಾಂಸ್ಕೃತಿಕ ಚಳವಳಿಗಳಾದವು. ಈ ಚಳವಳಿಗಳಲ್ಲಿ ಮೈದಾಳಿದ ಸ್ಫೂರ್ತಿದಾಯಕ ಹಾಡುಗಳು ಜನ್ನಿ, ಪಿಚ್ಚಳ್ಳಿ ಶ್ರೀನಿವಾಸ್, ಯುವರಾಜರಂಥ ಹಾಡುಗಾರರ ಕಂಠದಲ್ಲಿ ಕನ್ನಡ ಹೋರಾಟದ ಹಾಡುಗಳ ಹೊಸ ಪರಂಪರೆಯನ್ನೇ ಸೃಷ್ಟಿಸಿದವು. ಈ ಹಾಡುಗಳು ಇವತ್ತಿಗೂ ದಲಿತ, ರೈತ ಸಭೆಗಳಲ್ಲಿ ಪ್ರತಿಧ್ವನಿಸುತ್ತಿವೆ.
ಈ ಚಳವಳಿಗಳು ಹೊರ ತಂದ ಕರಪತ್ರಗಳ ಭಾಷೆ ಕನ್ನಡ ಭಾಷೆಗೆ ಹೊಸ ನುಡಿಗಟ್ಟುಗಳನ್ನು ಕೊಟ್ಟಿತು. ದಲಿತ ಚಳವಳಿಯ ಆರಂಭದಲ್ಲಿ ದೇವನೂರ ಬರೆದ ಕರಪತ್ರಗಳು; ರೈತಸಂಘದ ಸಮಾವೇಶಗಳಿಗಾಗಿ ಎಂ.ಡಿ.ಎನ್. ಬರೆದ ಖಚಿತ ಅಂಕಿಅಂಶಗಳುಳ್ಳ ಕರಪತ್ರಗಳು- ಇವೆರಡೂ ಕನ್ನಡ ಕರಪತ್ರ ಬರವಣಿಗೆಯ ಮುಖ್ಯ ಮಾದರಿಗಳಾಗಿವೆ. ಇವು ಊರೂರುಗಳಲ್ಲಿ ಮುದ್ರಣಗೊಂಡು ಮರುಹುಟ್ಟು ಪಡೆಯುತ್ತಾ, ಚಳವಳಿಯ ಅನುಯಾಯಿಗಳು ಹಾಗೂ ಚಳವಳಿಯ ‘ಅನುಮಾನಿ’ಗಳು ಇಬ್ಬರಿಗೂ ಶಿಕ್ಷಣ ನೀಡಲೆತ್ನಿಸಿವೆ.
ಬಿ.ಕೃಷ್ಣಪ್ಪ, ಸಿದ್ಧಲಿಂಗಯ್ಯ, ದೇವನೂರ ಮಹಾದೇವ ಚಳವಳಿಯ ಒಡನಾಟದಲ್ಲೇ ರೂಪಿಸಿಕೊಂಡ ಭಾಷಣದ ಮೂರು ಮಾದರಿಗಳೂ ದಲಿತ ಚಳವಳಿ ಬೇರೂರಲು ನೆರವಾಗಿವೆ. ಬಿ.ಕೃಷ್ಣಪ್ಪ ದಲಿತರ ಜೀವನ್ಮರಣದ ಸಮಸ್ಯೆಗಳನ್ನು, ಅಂಬೇಡ್ಕರ್ ಚಿಂತನೆಗಳನ್ನು ಸಭೆಯಲ್ಲಿದ್ದ ಅನಕ್ಷರಸ್ಥರಿಗೂ ಅರ್ಥ ಮಾಡಿಸುತ್ತಿದ್ದರು. ಸಿದ್ಧಲಿಂಗಯ್ಯ ಸ್ಫೋಟಕವಾಗಿ ಮಾತಾಡಿ ದಲಿತರನ್ನೂ, ದಲಿತೇತರರನ್ನೂ ಚಳವಳಿಯೆಡೆಗೆ ಸೆಳೆಯುತ್ತಿದ್ದರು. ಇವೆರಡೂ ಮಾದರಿಗಳನ್ನು ದಲಿತ ಚಳವಳಿಯ ಹೊಸ ತಲೆಮಾರುಗಳೂ ಮುಂದುವರಿಸುತ್ತಿವೆ. ದೇವನೂರರ ಮಾತುಗಳು ಶೋಷಕ-ಶೋಷಿತರಿಬ್ಬರೂ ಆತ್ಮಪರೀಕ್ಷೆ ಮಾಡಿಕೊಳ್ಳಬಲ್ಲ ಗಾಂಧೀ ಭಾಷೆಯನ್ನು ಅಂಬೇಡ್ಕರ್ ಪರಿಭಾಷೆಯೊಂದಿಗೆ ಬೆಸೆಯುತ್ತಿದ್ದವು; ಜಾತಿವಾದಿ ದಲಿತೇತರರನ್ನೂ ಬದಲಿಸಲೆತ್ನಿಸುತ್ತಿದ್ದವು. ದಲಿತ ಚಳವಳಿಯ ಪ್ರಭಾವದಿಂದಾಗಿ ಸಿದ್ಧಲಿಂಗಯ್ಯ ಹಾಗೂ ಎಲ್.ಹನುಮಂತಯ್ಯ ವಿಧಾನ ಪರಿಷತ್ ಸದಸ್ಯರಾದರು. ಹಲವು ದಲಿತ, ದಲಿತೇತರ ರಾಜಕಾರಣಿಗಳು ದಲಿತ ಚಳವಳಿಯ ಬೆಂಬಲದಿಂದಲೂ ಶಾಸಕರಾದರು.
ರೈತರ ಬೃಹತ್ ಸಭೆಗಳಲ್ಲಿ ಸಿಟ್ಟು, ವ್ಯಂಗ್ಯ, ಗಾಂಭೀರ್ಯ ಬೆರೆತ ಎಂ.ಡಿ.ಎನ್. ಭಾಷಣಗಳು ರೈತರ ದಮನ ಮಾಡುತ್ತಿದ್ದ ಸ್ಥಳೀಯ, ಜಾಗತಿಕ ವಿದ್ಯಮಾನಗಳ ಬಗೆಗಿನ ಆಳವಾದ ತಿಳಿವಳಿಕೆ ನೀಡುತ್ತಿದ್ದವು. ಎನ್.ಡಿ. ಸುಂದರೇಶ್, ಪುಟ್ಟಣ್ಣಯ್ಯನವರ ಸ್ಫೋಟಕ ಭಾಷಣಗಳ ಜೊತೆಗೆ, ರವಿವರ್ಮಕುಮಾರ್ ಅವರ ಕಾನೂನಿನ ನೋಟಗಳೂ ಇರುತ್ತಿದ್ದವು. ಮಹೇಂದ್ರ ಟಿಕಾಯತ್ ಥರದ ಭಾರತೀಯ ರೈತ ನಾಯಕರೂ ರೈತ ಸಭೆಗಳಲ್ಲಿ ಭಾಗಿಯಾಗುತ್ತಿದ್ದರು. ದೇಶಿ ಬೀಜಗಳ ರಕ್ಷಣೆಗಾಗಿ ಬೀಜ ಸತ್ಯಾಗ್ರಹದ ಮಾದರಿಗಳನ್ನು ರೂಪಿಸಿದ ರೈತಸಂಘ, ‘ಡೈರೆಕ್ಟ್ ಆ್ಯಕ್ಷನ್’ನ ನೇರ ದಾಳಿಯನ್ನೂ ಹಮ್ಮಿಕೊಂಡಿತ್ತು. ರೈತ ಚಳವಳಿಯ ಬಾಬಾಗೌಡ ಪಾಟೀಲ, ಎಂ.ಡಿ. ನಂಜುಂಡಸ್ವಾಮಿ, ಪುಟ್ಟಣ್ಣಯ್ಯ ವಿಧಾನಸಭೆಯಲ್ಲಿ ರೈತದನಿಯನ್ನು ಮೊಳಗಿಸಿದರು. ಸರ್ಕಾರಗಳು ರೈತಪರವಾಗಲೇಬೇಕಾದ ಕಾಲ ಬಂತು.
ಕಳೆದ ಐವತ್ತು ವರ್ಷಗಳಲ್ಲಿ ದಲಿತ ಚಳವಳಿ ಬಳಸುತ್ತಾ ಬಂದಿರುವ ನೀಲಿ ಬಾವುಟ, ರೈತ ಚಳವಳಿಯ ಹಸಿರು ಟವಲ್ ಕರ್ನಾಟಕದ ಚಿರಪರಿಚಿತ ಸಂಕೇತಗಳಾಗಿವೆ. ಕನ್ನಡ ಭಾಷೆಗೆ ಹೊಸ ನುಡಿಗಟ್ಟುಗಳನ್ನು ಕೊಡುತ್ತಲೇ ಹೊಸ ಕನ್ನಡ ಸಂಸ್ಕೃತಿಯನ್ನು ರೂಪಿಸಿದ ಈ ಚಳವಳಿಗಳು ಕರ್ನಾಟಕದಲ್ಲಿ ಬೇರೆ ಬೇರೆ ರೀತಿಯಲ್ಲಿ ಮುಂದುವರಿಯುತ್ತಲೇ ಇವೆ. ದಲಿತ ಸ್ವಾಭಿಮಾನ, ರೈತ ಸ್ವಾಭಿಮಾನಗಳು ಕರ್ನಾಟಕದಲ್ಲಿ ಗಟ್ಟಿಯಾಗಿ ನೆಲೆಗೊಂಡಿವೆ.
ಈ ಕಾಲದಲ್ಲಿ ನಾನಾ ಕಾರಣಗಳಿಂದ ಒಡೆದುಹೋಗಿರುವ ಈ ಚಳವಳಿಗಳ ಬಣಗಳು ಆಗಾಗ್ಗೆ ಒಂದಾಗಲೆತ್ನಿಸಿವೆ. ‘ಚಳವಳಿಗಳು ಕಾವು ಕಳೆದುಕೊಂಡಿವೆ’ ಎನ್ನುವವರಿಗೆ ಎಂ.ಡಿ.ನಂಜುಂಡಸ್ವಾಮಿಯವರೇ ಒಮ್ಮೆ ಉತ್ತರ ಕೊಟ್ಟಿದ್ದರು: ‘ರೈತ ಚಳವಳಿ ತನ್ನ ಕಾವು ಕಳೆದುಕೊಂಡಿದೆ ಎನ್ನುವವರು ತಂತಮ್ಮ ಕಾವನ್ನು ಪರೀಕ್ಷಿಸಿಕೊಳ್ಳುವುದು ಉತ್ತಮ.’
ಈ ಮಾತು ಎರಡೂ ಚಳವಳಿಗಳ ಹೊರ ಟೀಕಾಕಾರರನ್ನು ಆತ್ಮಪರೀಕ್ಷೆಗೆ ಒಡ್ಡುವಂತಿದೆ. ದಲಿತ ಚಳವಳಿ, ರೈತ ಚಳವಳಿಗಳು ನಾಯಕರ, ಕಾರ್ಯಕರ್ತ, ಕಾರ್ಯಕರ್ತೆಯರ ತ್ಯಾಗ, ಬದ್ಧತೆಗಳಿಂದ ಬೆಳೆದಿವೆ; ಚಳವಳಿಗಳ ಬಗ್ಗೆ ಸಹಾನುಭೂತಿಯುಳ್ಳವರು, ಮಾಧ್ಯಮಗಳು ಹಾಗೂ ಹಲಬಗೆಯ ಸಹಾಯ ಹಸ್ತಗಳಿಂದಲೂ ಬೆಳೆದಿವೆ. ದಲಿತರ ಜನಸಂಖ್ಯೆಗನುಗುಣವಾಗಿ ಬಜೆಟ್ ಮೀಸಲಿಡಬೇಕಾದ ಸರ್ಕಾರಿ ಯೋಜನೆಗಳವರೆಗೂ ದಲಿತ ಚಳವಳಿಯ ಪ್ರಬಲ ಪ್ರಭಾವವಿದೆ. 21ನೇ ಶತಮಾನದ ಅತಿವ್ಯಕ್ತಿ ಕೇಂದ್ರಿತತೆಯ ಫಲವಾಗಿ, ಒಡಕಿನ ನಡೆ ನುಡಿಗಳಿಂದಾಗಿ, ಸಿದ್ಧಾಂತಗಳ ತಿಳಿವಳಿಕೆಯ ಕೊರತೆಯಿಂದಾಗಿಯೂ ಚಳವಳಿಗಳ ಬೆಂಬಲಿಗರು ಕಡಿಮೆಯಾಗತೊಡಗಿದ್ದಾರೆ. ಚಳವಳಿಗಳ ಬಗ್ಗೆ ಕ್ಷುಲ್ಲಕ ಪ್ರಶ್ನೆಗಳನ್ನೆತ್ತುವ ಬೇಜವಾಬ್ದಾರಿ ಗುಂಪುಗಳಿವೆ. ಚಳವಳಿಗಳನ್ನು ಬೆಂಬಲಿಸುವ ಸೋಷಿಯಲ್ ಮೀಡಿಯಾ ಗುಂಪುಗಳೂ ಇವೆ. ದಲಿತ ಚಳವಳಿಯಲ್ಲಿ ಹೊಸ ಹಾಡುಗಾರರು, ಲೇಖಕ, ಲೇಖಕಿಯರು ರೂಪುಗೊಂಡಿದ್ದಾರೆ. ಕ್ಷಿಪ್ರವಾಗಿ ಬದಲಾಗುವ ‘ಟ್ರೆಂಡ್’ಗಳ ಈ ಕಾಲದಲ್ಲಿ ಕರ್ನಾಟಕದ ದಲಿತ, ರೈತ ಚಳವಳಿಗಳಿಗೆ ಹೊಸ ಪರಿಭಾಷೆ, ಹೊಸ ಸಂಘಟನಾಕ್ರಮ, ಅಂಬೇಡ್ಕರ್‌ವಾದ, ಸಮಾಜವಾದಗಳ ಮರುಅಧ್ಯಯನ, ಇನ್ನಿತರ ಸಿದ್ಧಾಂತಗಳ ಜೊತೆಗಿನ ಅರ್ಥಪೂರ್ಣ ಒಡನಾಟ ಹಾಗೂ ಹೊಸ ಸಾಂಸ್ಕೃತಿಕ ಚೌಕಟ್ಟುಗಳನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಇಂದು ಹಿಂದಿಗಿಂತ ಹೆಚ್ಚಾಗಿದೆ.
***************
ಮಾಧ್ಯಮಗಳ ಕೊಡುಗೆ
ದಲಿತ ರೈತ ಚಳವಳಿಗಳ ಹಕ್ಕೊತ್ತಾಯಗಳು ಆಶಯಗಳನ್ನು ಜನಪ್ರಿಯಗೊಳಿಸಿ ಅವುಗಳ ನ್ಯಾಯಬದ್ಧತೆಯನ್ನು ಬೆಂಬಲಿಸಿದ ಕನ್ನಡ ಪತ್ರಿಕೆಗಳ ಕೊಡುಗೆಯೂ ಮಹತ್ವದ್ದಾಗಿದೆ. ಎಂಬತ್ತರ ದಶಕದಲ್ಲಿ ‘ಪ್ರಜಾವಾಣಿ’ ಹಾಗೂ ಖಾದ್ರಿ ಶಾಮಣ್ಣನವರ ಸಂಪಾದಕತ್ವದ ‘ಕನ್ನಡಪ್ರಭ’ ಅನಂತರ ರಾಜಶೇಖರ ಕೋಟಿಯವರ ‘ಆಂದೋಲನ’ ಥರದ ಹಲವು ಪತ್ರಿಕೆಗಳು ದಲಿತ ರೈತ ಚಳವಳಿಯ ಚಿಂತನೆ ಪರಿಕಲ್ಪನೆಗಳನ್ನು ಲಕ್ಷಾಂತರ ಓದುಗರಿಗೆ ಮುಟ್ಟಿಸುತ್ತಿದ್ದವು.
ದಸಂಸದ ‘ಪಂಚಮ’ ರೈತ ಸಂಘದ ‘ನಮ್ಮ ನಾಡು’ ಪತ್ರಿಕೆಗಳು ಚಳವಳಿಯ ವೇದಿಕೆಗಳಾಗಿದ್ದವು. ದಲಿತ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದ ಇಂದೂಧರ ಹೊನ್ನಾಪುರ ರಾಮದೇವ ರಾಕೆ ಶಿವಾಜಿ ಗಣೇಶನ್ ಮೊದಲಾದವರು ‘ಪ್ರಜಾವಾಣಿ’ಯ ವರದಿಗಾರರಾಗಿದ್ದರು. ಕೆಲ ಕಾಲ ದಲಿತ ಚಳವಳಿ ರೈತ ಚಳವಳಿಗಳನ್ನು ಬೆಂಬಲಿಸಿದ ‘ಲಂಕೇಶ್ ಪತ್ರಿಕೆ’ ಈ ಚಳವಳಿಗಳ ವರದಿ ವಿಶ್ಲೇಷಣೆ ವಿಮರ್ಶೆಗಳನ್ನು ಪ್ರಕಟಿಸುತ್ತಿತ್ತು. ‘ಸುದ್ದಿ ಸಂಗಾತಿ’ಯೂ ಈ ಕೆಲಸ ಮಾಡಿತು. ಇಂಥ ಪತ್ರಿಕೆಗಳ ಹೊಣೆಗಾರಿಕೆ ಕಾಳಜಿಗಳಿಂದಾಗಿ ದೂರದೂರದ ಊರುಗಳ ದಲಿತ ರೈತ ಕುಟುಂಬಗಳ ಹೊಸ ತಲೆಮಾರಿನ ತರುಣರು ಚಳವಳಿಗಳ ಬಗ್ಗೆ ಒಲವು ಬೆಳೆಸಿಕೊಂಡು ತಂತಮ್ಮ ಊರುಗಳಲ್ಲೂ ಸಂಘಟನೆಗಳನ್ನು ಶುರು ಮಾಡಿದರು. ಲಕ್ಷಾಂತರ ಕಾಯಕರ್ತರು ಕಾರ್ಯಕರ್ತೆಯರು ಸಂಘಟನೆಗಳ ಬೆನ್ನೆಲುಬಾಗಿ ದುಡಿದು ಅಹಿಂಸಾತ್ಮಕ ಪ್ರಜಾಪ್ರಭುತ್ವವಾದಿ ಮಾರ್ಗದಲ್ಲಿ ಚಳವಳಿಗಳನ್ನು ಬೆಳೆಸಿದರು.