ಕರ್ನಾಟಕದ ಪುಕಾವೋಕೊ ಡಾ.ಸಂಜೀವ ಕುಲಕರ್ಣಿ ಜೊತೆ ಒಂದಿಷ್ಟು ಮಾತು -ಜಗದೀಶ್ ಕೊಪ್ಪ
ಭೂಮಿಗೀತ
ಡಾ. ಸಂಜೀವ ಕುಲಕರ್ಣಿ ಕುರಿತು ಒಂದೇ ಶಬ್ದದಲ್ಲಿ ಬಣ್ಣಿಸುವುದಾದರೆ, ಇವರೊಬ್ಬ ಅಶಾಂತ ಸಂತನ ಪ್ರತಿರೂಪ. ಧಾರವಾಡ ನಗರದ ಪ್ರಸಿದ್ಧ ಪ್ರಸೂತಿ ತಜ್ಞ ವೈದ್ಯರು, ಅಪ್ಪಟ ಗಾಂಧಿವಾದಿಗಳು, ಶೂನ್ಯ ಕೃಷಿಯ ಪ್ರಯೋಗದಲ್ಲಿ ತೊಡಗಿಸಿಕೊಂಡ ಕೃಷಿಕರು, ಶಿಕ್ಷಣ ತಜ್ಞರು ಜೊತೆಗೆ ನಮ್ಮ ನಡುವಿನ ಸಂಸ್ಕೃತಿ ಚಿಂತಕ ಡಾ. ರಹಮತ್ ತರೀಕರೆ ಜೊತೆ ನಾಡು ಮತ್ತು ಕಾಡು ತಿರುಗುವವರು. ಇವರ ಜೊತೆ ಮಾತಿಗೆ ಕುಳಿತರೆ, ಅದೊಂದು ವಿಶಿಷ್ಟ ಅನುಭವ, ಮಾತಿಗಿಂತ ಕೃತಿ ಮುಖ್ಯ ಎಂದು ನಂಬಿ ಬದುಕುತ್ತಿರುವ ಡಾಕ್ಟರ್ ಸಂಜೀವ್ ಕುಲಕರ್ಣಿ ಭೂಮಿಗೀತ ಬಳಗದ ಜೊತೆ ತಮ್ಮ ಜೀವನದ ಪಯಣವನ್ನು ಇಲ್ಲಿ ತೆರೆದಿಟ್ಟಿದ್ದಾರೆ.
ಸರ್, ಧಾರವಾಡ ಮತ್ತು ನಿಮ್ಮ ನಡುವಿನ ಸಂಬಂಧದ ಬಗ್ಗೆ ಹೇಳಿ
ನನ್ನದು ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಸತ್ತಿ ಎಂಬ ಗ್ರಾಮ. ನನ್ನ ತಂದೆ, ತಾತ ಎಲ್ಲರೂ ಕೃಷಿಯನ್ನು ವೃತ್ತಿಯನ್ನಾಗಿಸಿಕೊಂಡಿದ್ದರು. ನನ್ನ ಬಾಲ್ಯದಲ್ಲಿ ಅಂದರೆ, 1960 ರ ದಶಕದಲ್ಲಿ ನನ್ನ ತಂದೆಯವರು ಹುಬ್ಬಳ್ಳಿ ನಗರಕ್ಕೆ ಬಂದು ಇಂಜಿನ್ ಆಯಿಲ್ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಆ ಕಾಲಕ್ಕೆ ನಮ್ಮದು ಹುಬ್ಬಳ್ಳಿ ನಗರದ ಪ್ರತಿಷ್ಟಿತ ಕುಟುಂಬವಾಗಿತ್ತು. ನಮ್ಮ ಮನೆಯಲ್ಲಿ ಎರಡು ಕಾರುಗಳು, ನಾಲ್ಕಾರು ಬೈಕ್ ಗಳಿದ್ದವು. ಇದ್ದಕ್ಕಿದ್ದಂತೆ ವ್ಯಾಪಾರದಲ್ಲಿ ನಷ್ಟವುಂಟಾಗಿ ನನ್ನ ಕುಟುಂಬವು ದಿವಾಳಿ ಎದ್ದು ಹೋಯಿತು. ನನ್ನ ತಂದೆ, ತಾಯಿ ನಮ್ಮೆಲ್ಲರನ್ನು ಕರೆದುಕೊಂಡು ಮತ್ತೆ ಅಥಣಿ ಪಟ್ಟಣ ಸೇರಿದರು. ನಮ್ಮ ವಿದ್ಯಾಭ್ಯಾಸಕ್ಕೂ ಅವರ ಬಳಿ ಹಣವಿರಲಿಲ್ಲ. ಅಂತಹ ಬಡತನ ನನ್ನ ಕುಟುಂಬವನ್ನು ಆವರಿಸಿಕೊಂಡಿತ್ತು. ಮಕ್ಕಳನ್ನು ತಲಾ ಇಬ್ಬರಂತೆ ಅಜ್ಜಂದಿರ ಮನೆಗೆ ಕಳಿಸಿಕೊಟ್ಟಿದ್ದರು. ಇಂತಹ ಸ್ಥಿತಿಯಲ್ಲಿ ನಾನು ಮತ್ತು ನನ್ನಣ್ಣ ಸುಧೀಂದ್ರ ಕುಲಕರ್ಣಿ ಅಜ್ಜಿ-ತಾತ ಇವರುಗಳ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡಿದೆವು.
ನೀವೊಬ್ಬ ವಿಜ್ಞಾನದ ವಿದ್ಯಾರ್ಥಿ. ನಿಮಗೆ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಒಲವು ಹೇಗೆ ಮೂಡಿತು?
ನಾನು ಪಿ.ಯು.ಸಿ. ಮುಗಿಸಿದ ನಂತರ ವೈದ್ಯಕೀಯ ಶಿಕ್ಷಣಕ್ಕಾಗಿ ಹುಬ್ಬಳ್ಳಿ ನಗರಕ್ಕೆ ಬಂದೆ. ನನ್ನ ಬಡತನ ಯಥಾ ಸ್ಥಿತಿ ಹಾಗೆಯೇ ಮುಂದುವರಿದಿತ್ತು. ವರ್ಷ ಪೂರ್ತಿ ಅವರಿವರ ಬಳಿ ಸಾಲ ಪಡೆಯುತ್ತಿದ್ದೆ. ವರ್ಷಾಂತ್ಯದಲ್ಲಿ ನನಗೆ ಬರುತ್ತಿದ್ದ ವಿದ್ಯಾರ್ಥಿ ವೇತನದ ಹಣದಲ್ಲಿ ಸಾಲ ತೀರಿಸುತ್ತಿದ್ದೆ. ಪಠ್ಯ ಪುಸ್ತಕಗಳನ್ನು ಕೊಂಡುಕೊಳ್ಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಹಾಗಾಗಿ ಮುಂದಿನ ತರಗತಿಗೆ ಪಾಸಾಗಿ ಹೋಗುವ ನನ್ನ ಸೀನಿಯರ್ಸ್ ಬಳಿ ಪುಸ್ತಕಗಳನ್ನು ಪಡೆಯುತ್ತಿದ್ದೆ. ಬಿಡುವಿನ ವೇಳೆ ಲೈಬ್ರರಿಗೆ ಹೋಗಿ ಅನೇಕ ಕೃತಿಗಳನ್ನು ಓದುತ್ತಿದ್ದೆ. ಈ ವೇಳೆಯಲ್ಲಿ ನನಗೆ ಶಿವರಾಮ ಕಾರಂತರ ಕಾದಂಬರಿಗಳು, ಮತ್ತು ಗಾಂಧಿ ವಿಚಾರಧಾರೆಗಳು ಪರಿಚಯವಾದವು. ಎಲ್ಲರಂತೆ ಬದುಕುವುದಕ್ಕಿಂತ ವಿಭಿನ್ನವಾಗಿ, ಸರಳವಾಗಿ ಏಕೆ ಬದುಕ ಬಾರದು? ಎಂಬ ಆಲೋಚನೆ ಹೊಳೆಯತೊಡಗಿದವು. ಗಾಂಧೀಜಿಯವರು ಸತ್ಯ ಮತ್ತು ನ್ಯಾಯಕ್ಕಾಗಿ ಅವರು ತಳೆಯುತ್ತಿದ್ದ ನಿಲುವುಗಳು ನನಗೆ ಆಪ್ತವಾಗತೊಡಗಿದವು. ಹಾಗಾಗಿ ನಾನು ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗಲೆ ಖಾದಿ ವಸ್ತ್ರಗಳನ್ನು ಧರಿಸತೊಡಗಿದೆ. ಜೊತೆಗೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಸರ್ಕಾರದ ವಿರುದ್ಧ ಮೂರು ತಿಂಗಳ ಕಾಲ ಮುಷ್ಕರವನ್ನು ಸಂಘಟಿಸಿದ್ದೆ.
ಸರ್ ಸ್ವಲ್ಪ ವಿವರವಾಗಿ ಹೇಳಿ
ಆ ಕಾಲದಲ್ಲಿ ಕರ್ನಾಟಕದಲ್ಲಿ ಇದ್ದದ್ದು ಕೇವಲ ನಾಲ್ಕೈದು ಸರ್ಕಾರಿ ಮೆಡಿಕಲ್ ಕಾಲೇಜುಗಳು. ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತು ಬಳ್ಳಾರಿ. ಹೀಗೆ ಇವುಗಳ ಜೊತೆಗೆ ನಾಲ್ಕು ಖಾಸಾಗಿ ಮೆಡಿಕಲ್ ಕಾಲೇಜುಗಳು ಇದ್ದವು. ಸರ್ಕಾರ ಒಮ್ಮೆಲೆ ಐದು ಖಾಸಾಗಿ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡಿದ್ದನ್ನು ನಾವು ಪ್ರತಿಭಟಿಸಿದೆವು. ಏಕೆಂದರೆ, ದುಬಾರಿ ಡೊನೆಷನ್ ಮತ್ತು ಶುಲ್ಕದ ಮೂಲಕ ವೈದ್ಯಕೀಯ ಪದವಿ ಪಡೆಯುವ ವೈದ್ಯರಿಗೆ ಜನರ ಸೇವೆಗಿಂತ ಶಿಕ್ಷಣಕ್ಕಾಗಿ ವಿನಿಯೋಗಿಸಿದ ಹಣ ವಾಪಸ್ ಪಡೆಯುವುದು ಮುಖ್ಯವಾಗುತ್ತದೆ. ಹಾಗಾಗಿ ರೋಗಿಗಳನ್ನು ಸುಲಿಯುವ ಕ್ರಿಯೆ ಆರಂಭವಾಗುತ್ತದೆ ಎಂಬ ಆತಂಕ ನನ್ನದು ಮತ್ತು ಗೆಳೆಯರದಾಗಿತ್ತು. ಸರ್ಕಾರದ ಎಲ್ಲಾ ಅಡೆತಡೆಗಳನ್ನು ವಿರೋಧಿಸಿ, ಮುಷ್ಕರ ನಿರತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಾನು ಮೊದಲ ಬಾರಿಗೆ ಭಾಷಣ ಮಾಡಿದ್ದೆ. ಆ ಭಾಷಣ ನನ್ನ ಸಾರ್ವಜನಿಕ ಬದುಕಿಗೆ ಮೊದಲ ಹೆಜ್ಜೆಯಾಯಿತು.
ನೀವು ವೈದ್ಯಕೀಯ ವೃತ್ತಿಗಾಗಿ ಧಾರವಾಡವನ್ನು ಏಕೆ ಆಯ್ಕೆ ಮಾಡಿಕೊಂಡಿರಿ?
ನಾನು ವೈದ್ಯಕೀಯ ಪದವಿ ಪಡೆದ ನಂತರ ಅಥಣಿ ಪಟ್ಟಣದಲ್ಲಿ ಸೇವೆ ಮಾಡಬೇಕೆಂಬ ಆಸೆಯಿತ್ತು. ಆದರೆ, ಅಂತಹ ಸಣ್ಣ ಪಟ್ಟಣದಲ್ಲಿ ತುರ್ತು ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಅನೆಸ್ಥೆಷಿಯ ನೀಡುವ ವ್ಯವಸ್ಥೆ ಇರಲಿಲ್ಲ. ನನ್ನ ಸಂಬಂಧಿಕರು ಮೀರಜ್ ನಗರಕ್ಕೆ ಹೋಗು ಎಂದು ಒತ್ತಾಯಿಸಿದರು. ಆ ಕಾಲಕ್ಕೆ ಮೀರಜ್ ನಗರ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಭಾಗದ ಜಿಲ್ಲೆಗಳ ಪ್ರಮುಖ ವೈದ್ಯಕೀಯ ಸೇವೆಗಳ ಕೇಂದ್ರವಾಗಿತ್ತು. ಆದರೆ, ಅಲ್ಲಿ ಸೇವೆಗಿಂತ ಹಣ ಮಾಡುವ ದಂಧೆ ವೈದ್ಯರ ಮೊದಲ ಆದ್ಯತೆಯಾಗಿತ್ತು. ಈ ಕಾರಣಕ್ಕಾಗಿ ಸಾಹಿತ್ಯ ಮತ್ತು ಸಂಸ್ಕೃತಿಯಾಗಿದ್ದ ಧಾರವಾಡ ನಗರವನ್ನು ನಾನು ಆಯ್ಕೆ ಮಾಡಿಕೊಂಡೆ. ನನ್ನ ಬಳಿ ನರ್ಸಿಂಗ್ ಹೊಂ ತೆರೆಯುವಷ್ಟು ಹಣ ಅಥವಾ ಇತರೆ ಸೌಲಭ್ಯಗಳು ಇರಲಿಲ್ಲ. ಒಂದು ಸಣ್ಣ ಕ್ಲೀನಿಕ್ ಇಟ್ಟುಕೊಂಡು ಸೇವೆ ಮಾಡುತ್ತಾ, ನರ್ಸಿಂಗ್ ಹೊಂ ಗಳಿಗೆ ಹೋಗಿ ಹೆರಿಗೆ ಮಾಡಿಸಿ ಬರುತ್ತಿದ್ದೆ. ಅದೇ ವೇಳೆಗೆ ನನ್ನ ಇನ್ನೊಬ್ಬ ಸಹಪಾಠಿ ಧಾರವಾಡಕ್ಕೆ ಬಂದು ನನ್ನ ಜೊತೆ ಸೇರಿಕೊಂಡ. ಇಬ್ಬರೂ ಆಸ್ಪತ್ರೆ ತೆರೆಯುವ ಆಲೋಚನೆಯಲ್ಲಿ ಇದ್ದಾಗ ಡಾ. ತಾವರಗೇರಿಯವರು ನಮ್ಮನ್ನು ತಮ್ಮ ಆಸ್ಪತ್ರೆಗೆ ಆಹ್ವಾನಿಸಿದರು. ನಂತರ ನಾವು ಆಸ್ಪತ್ರೆ ತೆರೆಯುವ ಯೋಚನೆಯನ್ನು ಕೈ ಬಿಟ್ಟು, ಧಾರವಾಡದಲ್ಲಿ ಪ್ರಸಿದ್ಧಿಯಾಗಿದ್ದ ತಾವರಗೇರಿ ನರ್ಸಿಂಗ್ ಹೊಂ ನ ಪಾಲುದಾರರಾಗಿ ಸೇರಿಕೊಂಡವು. ಜೊತೆಗೆ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರಾಗಿದ್ದ ಪ್ರೊ. ರಿತ್ತಿಯವರ ಪುತ್ರಿ ಪ್ರತಿಭಾಳನ್ನು ನಾನು ವಿವಾಹವಾದ ನಂತರ ಧಾರವಾಡದ ನಂಟು ಇನ್ನಷ್ಟು ಹತ್ತಿರವಾಯಿತು.
ಸರ್ , ನನಗೆ ಈಗಲೂ ಕುತೂಹಲವಿರುವುದು ನೀವು ಬಾಲ ಬಳಗ ಎಂಬ ಶಿಕ್ಷಣ ಸಂಸ್ಥೆಯ ಬಗ್ಗೆ. ಅಲ್ಲಿ ವಿಭಿನ್ನವಾಗಿ ಹಾಗೂ ನೆಲದ ಸಂಸ್ಕೃತಿಗೆ ಹತ್ತಿರವಾಗಿ ಮಕ್ಕಳಿಗೆ ಬೋಧನೆ ಮಾಡುತ್ತಿರುವುದು. ಜೊತೆಗೆ ಏಳನೆಯ ತರಗತಿವರೆಗೆ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಿರುವುದು. ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ಅಂತರಾಷ್ಟ್ರೀಯ ಗುಣಮಟ್ಟದ ನರ್ಸರಿ ಶಾಲೆಗಳು ಎಂಬ ಹೆಸರಿಟ್ಟು ನಗರಗಳಲ್ಲಿ ಪೋಷಕರಿಂದ ಹಣ ಸುಲಿಯುವ ದಂಧೆ ಜಾರಿಯಲ್ಲಿರುವಾಗ, ನೀವು ಈ ಬಗ್ಗೆ ಹೇಗೆ ಯೋಚಿಸಿದರಿ? ಹಾಲು ಎಲ್ಲಿಂದ ಬರುತ್ತದೆ? ಎಂದು ಕೇಳಿದರೆ, ನಂದಿನಿ ಪಾಕೇಟ್ ನಿಂದ ಬರುತ್ತದೆ ಎಂಬ ಉತ್ತರ ಹೇಳುವ ಈ ಶಾಲೆಯ ಮಕ್ಕಳಿಗೂ ಮತ್ತು ಹಸು, ಎಮ್ಮೆಗಳಿಂದ ದೊರೆಯುತ್ತದೆ ಎನ್ನುವ ನಿಮ್ಮ ಶಾಲೆಯ ಮಕ್ಕಳಿಗೂ ಅಜಗಜಾಂತರ ವ್ಯತ್ಯಾಸವಿದೆಯಲ್ಲಾ?
ನಾನು ಈಗಾಗಲೆ ನಿಮಗೆ ತಿಳಿಸಿದಂತೆ ಬಾಲ್ಯದಿಂದಲೂ ನನ್ನ ಬದುಕಿನಲ್ಲಿ ಹಲವು ಪ್ರಶ್ನೆಗಳನ್ನು ಹಾಕಿಕೊಂಡು ವಿಭಿನ್ನವಾಗಿ ಚಿಂತಿಸಿದವನು ಮತ್ತು ಬದುಕಿದವನು. ನನ್ನ ಮಗ ಬೆಳೆಯುತ್ತಿದ್ದಂತೆ ಸಿದ್ಧ ಮಾದರಿಯ ನರ್ಸರಿ ಶಾಲೆಗಳಿಗೆ ಸೇರಿಸಲು ಇಷ್ಟವಿರಲಿಲ್ಲ. ಹಾಗಾಗಿ ಇದೇ ಮನೆಯ ಪುಟ್ಟ ಕೊಠಡಿಯೊಂದರಲ್ಲಿ ನನ್ನ ಮಗ ಸೇರಿದಂತೆ ನಾಲ್ಕು ಮಕ್ಕಳಿಗೆ ಪಾಠ ಹೇಳಲು ಆರಂಭಿಸಿದೆ. ಅವರು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳುವಂತೆ ಮಾಡಿದೆ. ಪಠ್ಯ ಪುಸ್ತಕಗಳ ಕಾಗದದ ಮೇಲಿನ ಹಾವು, ಕಪ್ಪೆ, ಚಿಟ್ಟೆ, ಗಿಡ ಮರಗಳ ಬದಲಿಗೆ ಜೀವಂತ ಹಾವು, ಕಪ್ಪೆ, ಚಿಟ್ಟೆಗಳನ್ನು ಶಾಲೆಗೆ ತರಿಸಿ, ಅವುಗಳ ಜೀವನ ಕ್ರಮವನ್ನು ವಿವರಿಸುವಂತೆ ಮಾಡಿದೆ. ಅವುಗಳನ್ನು ಮಕ್ಕಳಿಂದ ಮುಟ್ಟಿಸುವುದರ ಮೂಲಕ ಅವರ ಭಯವನ್ನು ಹೋಗಲಾಡಿಸುವುದರ ಜೊತೆಗೆ ಕುತೂಹಲ ತಣಿಯುವಂತೆ ಮಾಡಿದೆ. ಮಣ್ಣಿನಲ್ಲಿ ಮಕ್ಕಳು ಆಡುವುದು ಮಹಾ ಅಪರಾಧ ಎಂದು ತಂದೆ ತಾಯಿಗಳು ಭಾವಿಸಿದ್ದಾರೆ. ಶಾಲೆಗೆ ಲೋಡುಗಟ್ಟಲೆ ಮರಳು ತರಿಸಿ, ಮಕ್ಕಳು ಕಪ್ಪೆ ಗೂಡು ಕಟ್ಟಿಕೊಂಡು ಕುಣಿದು ಕುಪ್ಪಳಿಸಲು ಅವಕಾಶ ಕಲ್ಪಿಸಿದೆ. ಮರಗಳನ್ನು ಹತ್ತಿ ಮರಕೋತಿ ಆಟ ಆಡಲು ಸ್ವಾತಂತ್ರ್ಯ ನೀಡಿದೆ. ಶಾಲೆಯ ಸುತ್ತ ಮುತ್ತ ಇರುವ ಗಿಡ ಮರಗಳ ಬಳಿ ಕರೆದೊಯ್ದು ಎಲ್ಲಾ ವಿಧವಾದ ಹಕ್ಕಿಗಳು, ಪ್ರಾಣಿಗಳನ್ನು ಪರಿಚಯಿಸಲು ಪ್ರಾರಂಭಿಸಿದೆ. ನನ್ನ ಶಾಲೆಯ ಮಕ್ಕಳು ಇತರೆ ಶಾಲೆಯ ಮಕ್ಕಳಿಗಿಂತ ನಿಸರ್ಗಕ್ಕೆ ತೀರಾ ಹತ್ತಿರವಾಗಿ ಬದುಕುತ್ತಿದ್ದಾರೆ. ಈಗಾಗಲೇ ಎಂಟು ಬ್ಯಾಚಿನ ಮಕ್ಕಳು ಎಸ್.ಎಸ್.ಎಲ್.ಸಿ. ಮುಗಿಸಿ ಶಾಲೆಯಿಂದ ಹೊರ ಹೋಗಿದ್ದಾರೆ. 300 ಮಕ್ಕಳು ಇರುವ ಬಾಲಬಳಗದಲ್ಲಿ ಇಪ್ಪತ್ತು ಮಂದಿ ಶಿಕ್ಷಕ, ಶಿಕ್ಷಕಿಯರು ಇದ್ದು ಮಕ್ಕಳನ್ನು ತಯಾರು ಮಾಡುತ್ತಿದ್ದಾರೆ. ದಿನ ನಿತ್ಯ ಹಲವಾರು ಮಂದಿ ದೂರದ ಊರುಗಳಿಂದ ನನ್ನ ಶಾಲೆಯನ್ನು ನೋಡಲು ಬರುತ್ತಿದ್ದಾರೆ. ಇತ್ತೀಚೆಗೆ ಶಿಕ್ಷಣ ಇಲಾಖೆಯು ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ನನ್ನಿಂದ ಉಪನ್ಯಾಸ ಕೊಡಿಸಲು ಆರಂಭಿಸಿದೆ.
ನೀವು ಇತ್ತೀಚೆಗೆ ಕೃಷಿ ಚಟುವಟಿಕೆಗೆ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕಾಗಿ ವೈದ್ಯಕೀಯ ವೃತ್ತಿ ತೊರೆದು ಸಂಪೂರ್ಣವಾಗಿ ನಿಮ್ಮ ತೋಟದಲ್ಲಿ ಶೂನ್ಯ ಬೇಸಾಯ ಪದ್ಧತಿಯಲ್ಲಿ ಲೀನವಾಗಿದ್ದೀರಿ. ಈ ಬಗ್ಗೆ ಹೇಳಿ.
ನಿಮಗೆ ಗೊತ್ತಿರುವಂತೆ ನಾನು ಮೂಲತಃ ಕೃಷಿ ಕುಟುಂಬದಿಂದ ಬಂದವನಾಗಿದ್ದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಸೆಯಿತ್ತು. ಹಾಗಾಗಿ ಧಾರವಾಡದ ಸುತ್ತ ಮುತ್ತು ಒಂದಿಷ್ಟು ಪಾಳು ಬಿದ್ದ ಗುಡ್ಡ ಗಾಡಿನಂತಹ ಭೂಮಿಗಾಗಿ ಹುಡುಕಾಟ ನಡೆಸಿದ್ದೆ. ಗೋವಾ ರಸ್ತೆಯ ಕಮಲಾಪುರ ದೊಡ್ಡಿ ಎಂಬ ಹಳ್ಳಿಯ ಸಮೀಪವಿದ್ದ ಹದಿನೆಂಟು ಎಕರೆ ಬಂಜರು ಭೂಮಿಯನ್ನು 1996 ರಲ್ಲಿ ಖರೀದಿಸಿದೆ. ಉಳಿದವರಂತೆ ಭೂಮಿಯ ಸುತ್ತಾ ಬೇಲಿ ಹಾಕಿಸಿ ಫಾರಂ ಹೌಸ್, ಮಾಡಿ, ತರಾವರಿ ಬೆಳೆಗಳನ್ನು ಬೆಳಯ ಬೇಕೆಂದು ಕನಸು ಕಂಡವನಲ್ಲ. ಇಡೀ ಭೂಮಿಗೆ ಹಲವಾರು ಬಗೆಯ ಸಸಿಗಳನ್ನು ನಡಸಿದೆ. ಅವೆಲ್ಲವೂ ಈಗ ಮರವಾಗಿ ಬೆಳದಿವೆ. ಅತಿ ಹೆಚ್ಚು ಹಣ್ಣಿನ ಮರಗಳಿವೆ. ಬಂಜರು ನೆಲವು ತೋಟವಾಗಿ ಪರಿವರ್ತನೆಯಾಗುತ್ತಿದ್ದಂತೆ, ಮೊಲ, ಕಾಡು ಬೆಕ್ಕು, ತೋಳ, ನವಿಲು, ಇಪ್ಪತ್ತೈದು ಬಗೆಯ ಪತಂಗಗಳು, ಹಾವುಗಳು ಈಗ ನನ್ನ ತೊಟವನ್ನು ತಮ್ಮ ತಾಣವನ್ನಾಗಿ ಮಾಡಿಕೊಂಡಿವೆ. ಇತ್ತೀಚೆಗೆ ಜಿಂಕೆಗಳು ಸಹ ತೊಟದಲ್ಲಿ ಕಾಣಿಸಿಕೊಳ್ಳತೊಡಗಿವೆ. ಭೂಮಿಯ ಮೇಲೆ ಬಿದ್ದ ಮಳೆಯ ನೀರು ಹರಿದು ಹೋಗದಂತೆ ಸುಮಾರು ಏಳು ಒಡ್ಡುಗಳನ್ನು ನಿರ್ಮಿಸಿದ್ದೀನಿ. ಈಗ ತೊಟದಲ್ಲಿನ ಭೂಮಿಯ ಅಂತರ್ಜಲ ಹೆಚ್ಚಾಗಿದೆ. ನೀವೂ ಸಹ ತೊಟವನ್ನು ನೋಡಿದ್ದೀರಿ. ಅಲ್ಲಿ ಧಾರವಾಡ ನಗರಕ್ಕಿಂತ ಶುದ್ಧ ಗಾಳಿ ದೊರಕುತ್ತಿದೆ. ಇದಲ್ಲದೆ ನಗರದ ಉಷ್ಣಾಂಶಕ್ಕಿಂತ ಮೂರು ಅಥವಾ ನಾಲ್ಕು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ನನ್ನ ತೋಟದಲ್ಲಿ ಕಡಿಮೆ ಇರುತ್ತದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ನಿಮ್ಮ ಹಿರಿಯ ಸಹೋದರ ಸುಧೀಂದ್ರ ಕುಲಕರ್ಣಿ ಸಲಹೆಗಾರರಾಗಿದ್ದವರು. ಅದಕ್ಕೂ ಮುನ್ನ ಅವರು ಎಡಪಂಥಿಯ ಚಿಂತನೆಗಳ ಪ್ರಬಲ ಪ್ರತಿಪಾದಕರಾಗಿದ್ದವರು. ಅವರ ಬಗ್ಗೆ ಒಂದಿಷ್ಟು ವಿವರಿಸಿ.
ಸುಧೀಂದ್ರ ನನ್ನ ಹಿರಿಯಣ್ಣ. ಅವರು ಮುಂಬೈ ನಗರದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರು. ಕಮ್ಯೂನಿಸ್ಟ್ ಪಕ್ಷವಾದ ಸಿ.ಪಿ.ಐ.( ಎಂ) ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಸೈನ್ಸ್ ಮತ್ತು ಕರಂಜಿಯರವರ ಬ್ಲಿಟ್ಜ್ ಪತ್ರಿಕೆಗೆ ನಿರಂತರ ಲೇಖನಗಳನ್ನು ಬರೆಯುತ್ತಿದ್ದರು. ನಂತರ ಕಮ್ಯೂನಿಷ್ಟ್ ಸಿದ್ಧಾಂತಗಳಿಂದ ಭ್ರಮನಿರಸನಗೊಂಡು, ಬಲ ಪಂಥಿಯ ಸಂಘಟನೆಗಳ ಜೊತೆ ಗುರುತಿಸಿಕೊಂಡು ವಾಜಪೇಯಿ ಮತ್ತು ಎಲ್.ಕೆ.ಆಧ್ವಾನಿಯವರಿಗೆ ಹತ್ತಿರವಾದರು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾದಾಗ ಅವರಿಗೆ ಸಲಹೆಗಾರರಾಗಿ ದುಡಿದರು. ಇತ್ತೀಚೆಗಿನ ದಿನಗಳಲ್ಲಿ ಬಲಪಂಥಿಯ ಸಂಘಟನೆಗಳಲ್ಲಿ ತಾಂಡವಾಡುತ್ತಿರುವ ಉಗ್ರವಾದದಿಂದ ಬೇಸತ್ತು ಅಲ್ಲಿಂದ ಹೊರ ಬಂದಿದ್ದಾರೆ. ನಾನು ಮತ್ತು ಅವರು ಆರು ತಿಂಗಳಿಗೆ ಅಥವಾ ವರ್ಷಕ್ಕೊಮ್ಮೆ ಕುಟುಂಬದ ಖಾಸಗಿ ಕಾರ್ಯಕ್ರಮಗಳ ನಿಮಿತ್ತ ಬೇಟಿಯಾಗುವುದುಂಟು. ಆದರೆ, ಅಲಿಖಿತ ಸಂವಿಧಾನದಂತೆ ನಾವಿಬ್ಬರೂ ಎಂದಿಗೂ ರಾಜಕೀಯ ವಿಷಯಗಳನ್ನು ಪ್ರಸ್ತಾಪ ಮಾಡುವುದಿಲ್ಲ ಮತ್ತು ಚರ್ಚಿಸುವುದಿಲ್ಲ. ಇದೀಗ ಅವರು ಮುಂಬೈ ನಗರದಲ್ಲಿ ವಾಸವಾಗಿದ್ದಾರೆ.
ಸರ್. ಕೊನೆಯ ಪ್ರಶ್ನೆ ನಿಮ್ಮ ಭವಿಷ್ಯದ ಯೋಜನೆಗಳೇನು?
ಕೃಷಿ, ಪರಿಸರ, ಗಾಂಧೀಜಿ ಚಿಂತನೆಗಳ ಕುರಿತ ಆಲೋಚನೆಗಳನ್ನು ಹೊರತು ಪಡಿಸಿ ಬೇರೆ ಯಾವ ಯೋಜನೆಗಳಿಲ್ಲ. ಭೂಮಿಯಲ್ಲಿ ವಾಣಿಜ್ಯ ಬೆಳೆಗಳು ಮತ್ತು ಆಹಾರ ಧಾನ್ಯಗಳನ್ನು ಬೆಳೆಯುವುದರ ಬದಲು ಹಣ್ಣಿನ ಗಿಡ ಮತ್ತು ಮರಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಇದು ನನ್ನ ಪ್ರಥಮ ಆದ್ಯತೆ. ಸಮಾಜಕ್ಕೆ ಈ ಕುರಿತು ಉಪನ್ಯಾಸ ನೀಡುವುದರ ಬದಲಾಗಿ ನನ್ನ ತೋಟವನ್ನು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದ್ದೀನಿ. ಹಣ್ಣುಗಳು ಆಹಾರದಲ್ಲಿ ಅತಿ ಮುಖ್ಯವಾದ ಭಾಗ ಎಂಬುದನ್ನು ಮನವರಿಕೆ ಮಾಡಿಕೊಡಬೇಕೆನ್ನುವುದು ನನ್ನ ಆಸೆ. ಈಗಾಗಲೇ ಆಸಕ್ತರಿಗಾಗಿ ನನ್ನ ತೊಟದಲ್ಲಿ ಪ್ರತಿ ವರ್ಷ ನಾಲ್ಕು ಅಥವಾ ಐದು ತರಬೇತಿ ಶಿಬಿರಗಳನ್ನು ಏರ್ಪಡಿಸುತ್ತಿದ್ದೇನೆ. ಸುಮಾರು 25 ರಿಂದ 30 ಅಭ್ಯರ್ಥಿಗಳು ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿನ ವಸತಿ ಹಾಗೂ ಊಟದ ವ್ಯವಸ್ಥೆ ಸರಳವಾಗಿದ್ದು ಮಂಚ, ಹಾಸಿಗೆ, ಪ್ಯಾನ್ ಗಳಿರುವುದಿಲ್ಲ. ಪ್ರತಿ ಅಭ್ಯರ್ಥಿಯು ದಿನಕ್ಕೆ ಎರಡು ಗಂಟೆಗಳ ಕಾಲ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಈ ರೀತಿ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಮುಂದಿನ ಏಪ್ರಿಲ್ ತಿಂಗಳಿನಿಂದ ಮೂರು ತಿಂಗಳ ಕಾಲದ ಡಿಪ್ಲಮೋ ಕೋರ್ಸ್ ಆರಂಭಿಸಲು ಪಠ್ಯವನ್ನು ಸಿದ್ಧ ಪಡಿಸುತ್ತಿದ್ದೇನೆ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ಮೂರು ತಿಂಗಳು ಕಾಲ ತೊಟದಲ್ಲಿದ್ದು ಎಲ್ಲಾ ಬಗೆಯ ನಿಸರ್ಗ ಮತ್ತು ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿರಬೇಕು. ಈ ಕುರಿತು ರೂಪು ರೇಷೆಗಳು ಸಿದ್ಧವಾಗುತ್ತಿವೆ.
(ಚಿತ್ರಗಳು ಸೌಜನ್ಯ- ಡಾ. ಹರ್ಷವರ್ಧನ ಶೀಲವಂತ, ಧಾರವಾಡ ಮತ್ತು ಸಂಪದ ನೆಟ್, ಬೆಂಗಳೂರು)