“ಕರ್ನಾಟಕದಲ್ಲಿ ದಲಿತ ಮೀಸಲಾತಿ ವರ್ಗೀಕರಣ, ಹೋರಾಟ –ಒಂದು ಅಧ್ಯಯನ”- ಪ್ರಶ್ನೆಗಳಿಗೆ ದೇವನೂರರ ಉತ್ತರ….
[ಮೈಸೂರು ವಿಶ್ವವಿದ್ಯಾಲಯ, ಇತಿಹಾಸ ಅಧ್ಯಯನ ವಿಭಾಗದ ರಮೇಶ್ ಡಿ. ಈ, ಅವರು “ಕರ್ನಾಟಕದಲ್ಲಿ ದಲಿತ ಮೀಸಲಾತಿ ವರ್ಗೀಕರಣ, ಹೋರಾಟ –ಒಂದು ಅಧ್ಯಯನ” ಎಂಬ ವಿಷಯದ ಕುರಿತು ಮಾಡುತ್ತಿರುವ ಪಿಹೆಚ್‍ಡಿಗಾಗಿ ದೇವನೂರ ಮಹಾದೇವ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದು, ಅವರು ಉತ್ತರ ರೂಪದಲ್ಲಿ ಬರೆದ ಪತ್ರ ನಮ್ಮ ಓದಿಗಾಗಿ ಇಲ್ಲಿದೆ…]
ಪ್ರಿಯ ರಮೇಶ್ ಡಿ. ಈ,
ವಂದನೆಗಳು.
ನೀವು ಕಮ್ಮಿ ಪ್ರಶ್ನೆ ಕೇಳಿ ಅಂದರೆ ಹೆಚ್ಚು ಪ್ರಶ್ನೆ ಕೇಳಿದ್ದೀರಿ! ಪ್ರಶ್ನೆಗಳ ಕ್ರಮಾಂಕದಲ್ಲಿ ನಾನು ಉತ್ತರಿಸುತ್ತಿಲ್ಲ. ಮೊದಲನೆಯದಾಗಿ ಕೊನೆಯ 11ನೇ ಪ್ರಶ್ನೆಯಾದ ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿ ಬಗ್ಗೆ ನನ್ನ ಅಭಿಪ್ರಾಯ: ಈ ವರದಿ ಅಧಿಕೃತವಾಗಿ ಸಾರ್ವಜನಿಕರಿಗೆ ಬಿಡುಗಡೆಯೂ ಆಗಿಲ್ಲ. ಸದನದಲ್ಲಿ ಚರ್ಚೆಯಾಗಿಲ್ಲ. ಆ ವರದಿಯಲ್ಲಿ ದಲಿತ ಒಳ ಪಂಗಡಗಳ ಜನಸಂಖ್ಯಾ ಜನಗಣತಿ ವಿಸ್ತೃತವಾಗಿ ನಡೆದಿರುವ ಬಗ್ಗೆ ಅನುಮಾನವಿದೆ. ಹಾಗೂ ಒಳ ಪಂಗಡಗಳ ಉದ್ಯೋಗಸ್ಥರ ಗಣತಿ ಹಾಗೂ ಶೇಕಡಾವಾರು ಪ್ರಮಾಣವನ್ನು, ವರದಿಯನ್ನು ನೋಡಿ ಖಚಿತ ಪಡಿಸಿಕೊಳ್ಳಬೇಕಾಗಿದೆ. ವರದಿಯು ತನ್ನ ವ್ಯಾಪ್ತಿ ಮೀರಿ ಏನಾದರೂ ಪ್ರಸ್ತಾಪಿಸಿದ್ದರೆ, ಅದನ್ನೂ ನೋಡಬೇಕಿದೆ. ಯಾವುದೇ ಒಂದು ವರದಿ ಅಧಿಕೃತವಾಗಿ ಬಹಿರಂಗವಾಗದಿದ್ದರೆ ಅದು ಇದ್ದರೂ ಒಂದೇ, ಇಲ್ಲದಿದ್ದರೂ ಒಂದೆ. ಅದಕ್ಕಾಗಿ ಮೊದಲು ಅದನ್ನು ಬಹಿರಂಗ ಪಡಿಸಬೇಕು. ಇದಿಷ್ಟನ್ನು ಹೇಳಲು ಬಯಸುತ್ತೇನೆ.
ಪ್ರಶ್ನೆ 8ರಲ್ಲಿ: ‘ಒಳ ಮೀಸಲಾತಿ ಹೋರಾಟ ಸಂವಿಧಾನ ವಿರೋಧಿ ನಡೆಯೋ, ಸಾಮಾಜಿಕ ನ್ಯಾಯಪರ ಚಿಂತನೆಯೋ?’ ಎನ್ನುವುದಕ್ಕೆ – ನಾನು ಒಳ ಮೀಸಲಾತಿ ಹೋರಾಟವನ್ನು ಸಂವಿಧಾನ ವಿರೋಧಿ ಎಂದಾಗಲಿ ಅಥವಾ ಸಾಮಾಜಿಕ ನ್ಯಾಯಪರ ಚಿಂತನೆ ಅಲ್ಲ ಎಂದಾಗಲಿ ಹೇಳಲು ಬಯಸುವುದಿಲ್ಲ. ಆದರೆ ಹೋರಾಟ ಮಾಡಬೇಕಾದ್ದು ಎಲ್ಲಿ? ಒಳ ಮೀಸಲಾತಿಗೆ ಸಂವಿಧಾನ ತಿದ್ದುಪಡಿಯಾಗಬೇಕು. ಸಂಸತ್‍ನ ಬಹುಮತ ಬೇಕು. ಎಲ್ಲಾ ಪಕ್ಷಗಳ ಸಂಸತ್ ಸದಸ್ಯರಿಗೆ ಮನವರಿಕೆ ಮಾಡಿ ಒತ್ತಡ ತರುವ ಹೋರಾಟ ಆಗಬೇಕಿತ್ತು. ಆದರೆ ಆದದ್ದು ಏನು? ಈ ಒಳ ಮೀಸಲಾತಿ ಹೋರಾಟ ದಲಿತ ಪಂಗಡಗಳ ಒಳಗೇನೆ ಕಿಚ್ಚು ಹಚ್ಚಿತು. ದ್ವೇಷದಿಂದ ಕುದಿಯುವಂತೆ ಮಾಡಿಬಿಟ್ಟಿತು. ಪರಿಣಾಮವಾಗಿ ಅಸ್ಪೃಶ್ಯ ಸಮುದಾಯವು ರಾಜಕೀಯವಾಗಿ ಅಸ್ಪೃಶ್ಯ ಆಗುವ ಪ್ರಕ್ರಿಯೆ ಆರಂಭವಾಯ್ತು. ಮೀಸಲಾತಿ ಹೋರಾಟಗಾರರು ವಿವೇಕ, ವಿವೇಚನೆ ಕಳೆದುಕೊಂಡಿದ್ದರಿಂದಾದ ಈ ಆತ್ಮಾಹುತಿ ಬೆಳವಣಿಗೆ ಅವರಿಗೆ ಕಾಣುತ್ತಿಲ್ಲ. ವಿವೇಕ, ವಿವೇಚನೆ ಇದ್ದರೆ ಕಾಣುತ್ತಿತ್ತು; ‘ಅರೆ, ಕೆಟಗರಿ I, II, III, ಯಾವುದರಲ್ಲೂ ಶೇಕಡ 15 ಭರ್ತಿಯೇ ಆಗಿಲ್ಲ. ಜೊತೆಗೆ ನಕಲಿ ಸರ್ಟಿಫಿಕೇಟ್ ಹಾವಳಿ ಬೇರೆ. ಇಂಥದ್ದರಲ್ಲಿ ‘ನಮ್ಮ ಪಾಲನ್ನು ಅವರು ಕಬಳಿಸಿದರು’ ಮಾತಿಗೆ ಅರ್ಥ ಇದೆಯೆ? ಕೆನೆಪದರ ಪ್ರಶ್ನೆ ಯಾಕೆ ಬರುತ್ತಿದೆ? ಎಂದೆಲ್ಲಾ ಅನ್ನಿಸುತ್ತಿತ್ತು. (ಉದ್ಯೋಗ ಪ್ರಮಾಣ ದಾಖಲೆಗಾಗಿ ISEC ಅಧ್ಯಯನದ ವರದಿ ನೀಡಿರುವೆ.)
ಪ್ರಶ್ನೆ 7ರಲ್ಲಿ ಸ್ಪೃಶ್ಯ ಸೇರ್ಪಡೆಯಿಂದ ಅಸ್ಪೃಶ್ಯರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗಿನ ಬಗ್ಗೆ: ಇನ್ನೂ ಶೇ.15 ಮೀಸಲಾತಿ ಭರ್ತಿಯಾಗದಿರುವ ಈ ಸಂದರ್ಭದಲ್ಲಿ ಈ ಮಾತು ಅಪ್ರಸ್ತುತ. ಈ ಬಗ್ಗೆ ನನ್ನ ಅಭಿಪ್ರಾಯವೇನೆಂದರೆ, SC ಗುಂಪಿಗೆ ದಿಕ್ಕುದೆಸೆ ಇಲ್ಲದ ಹಾಗೂ ಸಂಖ್ಯಾ ಬಲವಿಲ್ಲದೆ ಮೂಕವಾಗಿರುವ ಸಣ್ಣಪುಟ್ಟ ಸಮುದಾಯಗಳ ಎಲ್ಲರನ್ನೂ ಸೇರ್ಪಡೆ ಮಾಡಿ ಒಟ್ಟಾಗಬಹುದಾದ ಜನಸಂಖ್ಯೆ ಪ್ರಮಾಣಕ್ಕೆ ತಕ್ಕಂತೆ ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡಿ ನಿಗಧಿಯಾಗಲಿ, ಏನಂತೆ? ಒಳ ಪಂಗಡಗಳ ಪ್ರಾತಿನಿಧ್ಯದ ಅಸಮತೋಲನಕ್ಕೆ ಬ್ಯಾಕ್‍ಲಾಗ್ ಸಮತೋಲನ ಪದ್ಧತಿಯೇ ಪರಿಹಾರ ಎಂದು ಮತ್ತೆಮತ್ತೆ ಹೇಳುತ್ತಿದ್ದೇನೆ. ಇದನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ.
ಕೊನೆಯದಾಗಿ, ಸನ್ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನಾನು ಅವರಿಗೊಂದು ಪತ್ರ ಬರೆದು ಅದನ್ನು ಶ್ರೀ ಕೆಂಪಯ್ಯ IPS ಅವರ ಮೂಲಕ ತಲುಪಿಸಲಾಗಿತ್ತು. ಅದರ ಪೂರ್ಣ ಪಾಠ:
1. ತಾತ್ಕಾಲಿಕವಾಗಿ ತಕ್ಷಣಕ್ಕೆ ಉಪಜಾತಿಗಳಿಗೆ ಪ್ರತ್ಯೇಕ ನಿಗಮ ಮಾಡಿ, ಅವುಗಳ ಅಂದಾಜು ಜನಸಂಖ್ಯೆಗೆ ಅನುಗುಣವಾಗಿ ಆಯಾಯ ನಿಗಮಗಳಿಗೆ ನೇರ ಹಣಕಾಸು ಬಿಡುಗಡೆ ಮಾಡುವುದು. ಇದು ಸ್ವಲ್ಪವಾದರೂ ತಾತ್ಕಾಲಿಕ ಸಮಾಧಾನ ಕೊಡಬಹುದೆ?
2. ಆಯಾಯ ಉಪಜಾತಿಗಳ ಜನಸಂಖ್ಯೆ ಪ್ರಮಾಣ ಹಾಗೂ ಆ ಉಪಜಾತಿಗಳ ಉದ್ಯೋಗಸ್ಥರು- ಈ ಎರಡರ ಅಂಕಿ ಅಂಶಗಳನ್ನು ಪರಿಗಣಿಸಿ ಯಾವ ಯಾವ ಉಪಜಾತಿಗಳಿಗೆ ಉದ್ಯೋಗದ ಕೊರತೆಯಾಗಿದೆಯೋ-ಆ ಕೊರತೆ ಅನುಭವಿಸುತ್ತಿರುವ ಉಪಜಾತಿಗಳಿಗೆ [ಕೆಟಗರಿಯ ಅನ್ವಯ] ನ್ಯಾಯ ಸಲ್ಲುವಂತಾಗಲು ‘ಬ್ಯಾಕ್‍ಲಾಗ್ ಸಮತೋಲನ’ ಎಂದು ಪರಿಗಣಿಸಿ, ಸಮತೋಲನ ಆಗುವವರೆಗೂ ಹುದ್ದೆಗಳು ಕೊರತೆ ಅನುಭವಿಸುತ್ತಿರುವ ಉಪಜಾತಿಗೇನೆ ಉದ್ಯೋಗ ದಕ್ಕುವಂತೆ- ಕಾನೂನು ರಚಿಸಲು ಸಾಧ್ಯವಿಲ್ಲವೇ? ಈ ಕಾನೂನು ರೂಪಿಸುವುದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರಬಹುದೇ?
3. [ಅ] ಪೌರಕಾರ್ಮಿಕರು ಹಾಗೂ ಸಂಖ್ಯೆಯಲ್ಲಿ ಕಮ್ಮಿ ಪ್ರಮಾಣದಲ್ಲಿರುವ ಪಂಗಡಗಳು ಉದಾಹರಣೆಗೆ- ಶಿಶುಮಕ್ಕಳು, ನೆಲೆ ಕಾಣದ ಅಲೆಮಾರಿಗಳು- ಮುಂತಾದ ಸ್ಫರ್ಧಿಸಲಾಗದ, ಧ್ವನಿ ಇಲ್ಲದ ಸಮುದಾಯಗಳನ್ನು ಗುರುತಿಸಿ ಅದನ್ನು ಒಂದು ಪ್ರತ್ಯೇಕ ಗುಂಪಾಗಿ ಪರಿಗಣಿಸಿ ಅವರಿಗೂ ಕಿಂಚಿತ್ ದಕ್ಕುವಂತೆ ಎಚ್ಚರವಹಿಸಬೇಕು.
[ಆ] ಜೊತೆಜೊತೆಗೆ ಸುಳ್ಳು ಜಾತಿ ಸರ್ಟಿಫಿಕೇಟ್ ಗೊಂದಲ [ಬುಡ್ಗಜಂಗಮ ಇತ್ಯಾದಿ] ಸಮಸ್ಯೆ ಮುಂದಾದರೂ ನಿಲ್ಲುವಂತಾಗಲು ಗೊಂದಲದ ಜಾತಿ ಹೆಸರುಗಳಿಗೆ ತಿದ್ದುಪಡಿ ತಂದು ಎಚ್ಚರ ವಹಿಸಬೇಕು.
4. ಮೇಲ್ಕಂಡ ಸಾಧ್ಯತೆಗಳನ್ನು –ಇತ್ತೀಚಿನ ಜಾತಿ ಜನಗಣತಿ ವಿವರಗಳನ್ನು ಬಹಿರಂಗಪಡಿಸಿ ಇದನ್ನು ಆಧಾರವಾಗಿಟ್ಟುಕೊಂಡೇ ಮಾಡಬೇಕು. ಇಲ್ಲದಿದ್ದರೆ ಇರುವ ಗೊಂದಲವನ್ನು ಮತ್ತೂ ಉಲ್ಭಣಗೊಳಿಸಿದಂತಾಗುತ್ತದೆ.
5. ಈ ಒಳಮೀಸಲಾತಿ ಸಮಸ್ಯೆಯು ಸಂಸತ್ ತಿದ್ದುಪಡಿಯ ಮೂಲಕವೇ ಬಗೆಹರಿಯಬೇಕಾಗಿರುವುದರಿಂದ, ಅದು ಯಾವ ಕಾಲಕ್ಕಾಗುತ್ತದೋ ಇದು ಕಾಲಕ್ಕೇ ಬಿಟ್ಟ ವಿಚಾರವಾಗಿಬಿಟ್ಟಿದೆ! ಹಾಗಾಗಿ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲೇ ಇಂದು ವರ್ತಮಾನದಲ್ಲೇ ವಂಚಿತರಲ್ಲೇ ವಂಚಿತರಿಗೂ ಅನುಕೂಲವಾಗುವಂತೆ- ಒಳಉಪಾಯಗಳನ್ನು ನಮ್ಮ ರಾಜ್ಯ ಸರ್ಕಾರ ಹುಡುಕಿದರೆ -ಅದು ಹೆಚ್ಚು ಮಾನವೀಯವಾಗುತ್ತದೆ. ಭಾರತಕ್ಕೂ ಮಾರ್ಗದರ್ಶಿಯಾಗುತ್ತದೆ.
ಇದು ನಿಮ್ಮ ಬಹುತೇಕ ಉಳಿದೆಲ್ಲಾ ಪ್ರಶ್ನೆಗಳಿಗೆ ಉತ್ತರವಾಗಬಹುದು. ಸಿದ್ಧರಾಮಯ್ಯ ಅವರಿಗೆ ಬರೆದ ಈ ಪತ್ರದ ಬಗ್ಗೆ ಕೆಲವೇ ಬೆರಳೆಣಿಕೆ ಸ್ನೇಹಿತರಿಗಷ್ಟೆ ತಿಳಿಸಿದ್ದೆ. ಆಗ ಬಹಿರಂಗಗೊಳಿಸಿದ್ದರೆ ಇದು ಏನೊ ಸಂಚು ಅಂದುಕೊಳ್ಳುವವರೂ ಇದ್ದರು! ಆಗ ವಾತಾವರಣ ಅಷ್ಟು ಕಲುಷಿತವಾಗಿತ್ತು. ಈಗ, ಎಲ್ಲರೂ ಗುದ್ದಾಡಿ ಎದ್ದು ಬಿದ್ದು ಸುಸ್ತಾಗಿ ಸ್ವಲ್ಪ ವಿವೇಕ, ವಿವೇಚನೆಗಳೂ ಬರುತ್ತಿದೆ ಅನ್ನಿಸುತ್ತಿರುವುದರಿಂದ ಈಗ ಬಹಿರಂಗಗೊಳಿಸಿದರೂ ಪರವಾಗಿಲ್ಲ! ಇಂದು ಸರ್ಕಾರ ತನ್ನ ಇಲಾಖೆಯ ಉದ್ಯೋಗಗಳನ್ನು ಭರ್ತಿ ಮಾಡದ ಪರಿಣಾಮವಾಗಿ ದಲಿತರ ಪಾಲಿನ ಬ್ಯಾಕ್‍ಲಾಗ್ ಹುದ್ದೆಗಳು ಅಸಂಖ್ಯವಾಗಿ ಖಾಲಿ ಬಿದ್ದಿವೆ. ಇನ್ನೊಂದು ಕಡೆ ಖಾಸಗಿ ದವಡೆಗೆ ಉದ್ಯೋಗಗಳು ಬೀಳುತ್ತಿವೆ. ‘ಈ ಬ್ಯಾಕ್‍ಲಾಗ್ ಉದ್ಯೋಗಗಳನ್ನು ಭರ್ತಿ ಮಾಡಿ; ದಲಿತ ಪಂಗಡಗಳಲ್ಲಿ ಯಾವುದು ಪ್ರಾತಿನಿಧ್ಯ ಕೊರತೆ ಅನುಭವಿಸುತ್ತಿದೆಯೋ ಆ ಪಂಗಡಕ್ಕೆ ಸಮತೋಲನ ಆಗುವವರೆಗೆ ಈ ಎಲ್ಲಾ ಉದ್ಯೋಗವು ಆ ಪಂಗಡಕ್ಕೇ ಸಿಗಲಿ’ ಎಂಬುದು ಇಂದಿನ ಕೂಗಾಗಬೇಕಾಗಿದೆ.
27-04-2022 (ದೇವನೂರ ಮಹಾದೇವ)