ಕಪ್ಪು ಆರ್ಥಿಕತೆ ಎಂದರೆ ಕೇವಲ ನೋಟುಗಳಲ್ಲ-ವಿಕಾಸ ಆರ್ ಮೌರ್ಯ
ನವೆಂಬರ್ 8, 2016 ಭಾರತದ ಬಡವರು ಮತ್ತು ಮದ್ಯಮವರ್ಗದವರು ಎಂದಿಗೂ ಮರೆಯಲಾರದ ಕರಾಳ ದಿನ. ಇದ್ದಕ್ಕಿದ್ದಂತೆ ಭಾರತದ ಪ್ರದಾನಿಗಳಾದ ನರೇಂದ್ರ ಮೋದಿಯವರು ಟಿ.ವಿ ಮುಂದೆ ಪ್ರತ್ಯಕ್ಷರಾಗಿ 500 ಮತ್ತು 1000 ರೂಪಾಯಿ ನೋಟುಗಳನ್ನು ರದ್ದು ಮಾಡಿಬಿಟ್ಟಿದ್ದರು. ಇದು ಅಂದು ಭಾರತದಲ್ಲಿದ್ದ ನಗದಿನ ಶೇ 86 ರಷ್ಟಾಗಿತ್ತು. ಒಬ್ಬ ಮನುಷ್ಯನಿಂದ ಶೇ. 86 ರಷ್ಟು ರಕ್ತ ತೆಗೆದ ಮೇಲೆ ಕನಿಷ್ಠ ಪಕ್ಷ ಆತನು ಉಳಿಯಲು ಶೇ. 50 ರಷ್ಟು ರಕ್ತವನ್ನಾದರೂ ಶೇಖರಿಸಿಕೊಳ್ಳಬೇಕಿತ್ತು. ಆದರೆ ವಾಸ್ತವದಲ್ಲಿ ಕೊಟ್ಟದ್ದು ಶೇ.5 ಮಾತ್ರ. ಮಿಕ್ಕಿದ್ದನ್ನು ನೀಡಲು ಬೇಕಾದದ್ದು ಬರೋಬ್ಬರಿ 6 ತಿಂಗಳು!
ಇರಲಿ, ಈ ನೋಟು ರದ್ಧತಿಗೆ ಪ್ರದಾನಿ ಮೋದಿಯವರು ನೀಡಿದ ಪ್ರಬಲ ಕಾರಣ ಕಪ್ಪು ಹಣ ಮಟ್ಟಹಾಕುವುದು. ಸುಮಾರು 3 ಲಕ್ಷ ಕೋಟಿಗಳಷ್ಟು ಕಪ್ಪು ಹಣವನ್ನು ಬ್ಯಾಂಕ್ ವ್ಯವಸ್ಥೆಗೆ ಮರಳದಂತೆ ಮಾಡುವುದು. ಆದರೆ ಇದು ಶುದ್ಧ ಸುಳ್ಳಾಗಿ ಹೋಯಿತು. ಶೇ. 99 ರಷ್ಟು ಹಣ ವಾಪಾಸಾಗಿದೆ. ಆರ್‍ಬಿಐ ಘೋಷಿಸಿದಂತೆ ಬ್ಯಾಂಕ್ ವ್ಯವಸ್ಥೆಗೆ ಮರಳದೇ ಇರುವ ಹಣ ಕೇವಲ 16 ಸಾವಿರ ಕೋಟಿ. ಆದರೆ ನೋಟು ಅಮಾನ್ಯೀಕರಣದಿಂದ ದೇಶಕ್ಕಾಗಿರುವ ನಷ್ಟ ಬಹುಪಾಲು ದೊಡ್ಡದು. ಸರಳವಾಗಿ ಹೇಳಬೇಕೆಂದರೆ ಹೊಸ ನೋಟುಗಳನ್ನು ಪ್ರಿಂಟ್ ಮಾಡಿ ಜನರಿಗೆ ತಲುಪಿಸಲು ಖರ್ಚಾಗಿರುವುದು 23 ಸಾವಿರ ಕೋಟಿ. ಇದು ನೋಟು ರದ್ಧತಿಯಿಂದ ವ್ಯವಸ್ಥೆಗೆ ಮರಳದ ಹಣಕ್ಕಿಂತ ಹೆಚ್ಚು. ಇದಕ್ಕೆ ಸಾಮಾನ್ಯ ಜನರೂ ಸಹ ಹೇಳಿದ್ದು ‘ಮೋದಿಯವರು ಗುಡ್ಡ ಅಗೆದು ಇಲಿ ಹಿಡಿದರು’ ಎಂದು. ದೇಶಕ್ಕಾದ ಹಾನಿ ಇಷ್ಟೇ ಅಲ್ಲ. ದೇಶದಲ್ಲಿ ಶೇ. 94 ರಷ್ಟು ಅಸಂಘಟಿತ ಕಾರ್ಮಿಕರಿರುವ ಕಾರಣ 2 ಲಕ್ಷ ಉದ್ಯೋಗಗಳು ಕಡಿತಗೊಂಡವು, ರೈತರು-ವ್ಯಾಪಾರಿಗಳು ನಷ್ಟ ಅನುಭವಿಸಿದರು, ಹಲವು ಕಾರ್ಖಾನೆಗಳು ಕೆಲಸ ನಿಲ್ಲಿಸಿದವು, ಬಹಳ ದುಃಖದ ಸಂಗತಿಯೆಂದರೆ 100 ಕ್ಕೂ ಹೆಚ್ಚು ಭಾರತೀಯರು ಪ್ರಾಣ ಕಳೆದುಕೊಂಡರು. ದೇಶದ ಜಿಡಿಪಿ 5.4 ಕ್ಕೆ ಕುಸಿಯಿತು. 2016 ಆಗಸ್ಟ್ ರಂದು ಹಣಕಾಸು ಸಚಿವರಾದ ಅರುಣ್ ಜೆಟ್ಲಿಯವರು ಊಹಿಸಿದಂತೆ 8.6 ಕ್ಕೆ ಏರಬೇಕಿದ್ದ ಜಿಡಿಪಿ ಪಾತಾಳಕ್ಕಿಳಿಯಿತು. ಇದರಿಂದ ಭಾರತಕ್ಕೆ ಸುಮಾರು 6 ಲಕ್ಷ ಕೋಟಿ ನಷ್ಟವಾಯಿತು. ಆದರೆ ಮತ್ತೊಂದು ಕಡೆ ಉದ್ಯಮಿಗಳಾಗಲಿ, ರಾಜಕಾರಣಿಗಳಾಗಲಿ, ಮೇಲ್ದರ್ಜೆ ನೌಕರರಾಗಲಿ ಬ್ಯಾಂಕಿನ ಮುಂದೆ ಒಂದು ಕ್ಷಣವೂ ಹಣಕ್ಕಾಗಿ ನಿಲ್ಲಲಿಲ್ಲ. ಅವರ ಆದಾಯದಲ್ಲಿ ಇಳಿಮುಖವಾಗಲಿಲ್ಲ ಬದಲಾಗಿ ಇನ್ನೂ ಶ್ರೀಮಂತರಾದರು. ತಮ್ಮ ಮಕ್ಕಳಿಗೆ 500 ಕೋಟಿ ಖರ್ಚು ಮಾಡಿ ಮದುವೆ ಮಾಡಿದರು. ಜನ ಸಾಮಾನ್ಯರು ಮಾತ್ರ ದಿನನಿತ್ಯದ ದಿನಸಿಗಾಗಿ, ಮಕ್ಕಳ ಮದುವೆಗಾಗಿ, ದಶಕಗಳ ಕನಸಾದ ಮನೆಗಾಗಿ-ನಿವೇಶನಕ್ಕಾಗಿ, ಆಸ್ಪತ್ರೆ ಸೇರಿದ ಸಂಬಂಧಿಕರಿಗಾಗಿ, ಗೊಬ್ಬರ-ಔಷಧಿ ಇತ್ಯಾದಿಗಳಿಗಾಗಿ ಗಂಟೆಗಟ್ಟಲೆ ನಿಂತು ನಿತ್ರಾಣರಾಗಿ ಜೀವ ಕಳೆದುಕೊಂಡರು. ಹೀಗಿರುವಾಗ ನೋಟು ರದ್ಧತಿ ಯಾರಿಗೆ ಲಾಭ ತಂದು ಕೊಟ್ಟಿತು? 8/11 ರ ರಾತ್ರಿಯಿಂದ ಬೆಳಗಿನ ಜಾವದವರೆಗೆ ಹಿಂದಿನ ದಿನಾಂಕಕ್ಕೆ 10 ಗ್ರಾಂ ಚಿನ್ನವನ್ನು 50 ಸಾವಿರ ಕೊಟ್ಟು ಕೊಂಡರಲ್ಲ ಅವರಿಗೆ ಲಾಭವಾಯಿತು. ಜನಧನ ಖಾತೆಗಳಿಂದ ಲೇವಾದೇವಿಗಾರರಿಗೆ ಲಾಭವಾಯಿತು. ಬ್ಯಾಂಕ್ ಸಿಬ್ಬಂದಿಗಳ ಸ್ನೇಹಿತರಿಗೆ ಲಾಭವಾಯಿತು. ವಿದೇಶಗಳಲ್ಲಿ ಬಂಡವಾಳ ಹೂಡಿದವರಿಗೆ, ತೆರಿಗೆ ಮುಕ್ತ ದೇಶಗಳ ಸಂಬಂಧ ಹೊಂದಿರುವ ಕಾರ್ಪೋರೇಟ್ ಕುಳಗಳಿಗೆ ಲಾಭವಾಯಿತು. ಪಕ್ಷಭೇದವಿಲ್ಲದೆ ಎಲ್ಲಾ ಭ್ರಷ್ಟ ರಾಜಕಾರಣಿಗಳಿಗೂ ಲಾಭವಾಯಿತು.
ಕಪ್ಪು ಹಣದ ಕಣಜಗಳಾಗಿರುವ ಉಧ್ಯಮಿಗಳನ್ನು, ರಾಜಕಾರಣಿಗಳನ್ನು, ಮೇಲ್ದರ್ಜೆ ನೌಕರರನ್ನು (ಸರ್ಕಾರಿ-ಖಾಸಗಿ), ಖಾಸಗಿ ವಿದ್ಯಾ ಸಂಸ್ಥೆ ಮಾಲೀಕರನ್ನು ನೋಟು ರದ್ಧತಿ ಕೊಂಚವೂ ಅಲ್ಲಾಡಿಸಲೇ ಇಲ್ಲ. ಏಕೆ? ಅವರೆಲ್ಲಾ ಸ್ವಚ್ಚ ಹಸ್ತರೇ? ಇಲ್ಲವೇ ಇಲ್ಲ. ಇದಕ್ಕೆ ಕಾರಣ ಕಪ್ಪು ಹಣ ನಗದಿನಲ್ಲಿರುವುದು ಕೇವಲ ಶೇ.1 ರಷ್ಟು ಮಾತ್ರ.
ಖ್ಯಾತ ಅರ್ಥಶಾಸ್ತ್ರಜ್ಞ ಅರುಣ್‍ಕುಮಾರ್ ಅವರು ಹೇಳುವಂತೆ ಕಪ್ಪು ಆರ್ಥಿಕತೆಯು ನಗದು ಪ್ರಮಾಣದಲ್ಲಿ ಕಡಿಮೆ ಇದ್ದು ಸಂಪತ್ತು ಮತ್ತು ಆದಾಯದಲ್ಲಿಯೇ ಹೆಚ್ಚು ಕ್ರೋಡಿಕೃತವಾಗುತ್ತದೆ. ಅಂದರೆ ಕಪ್ಪು ಹಣ, ಕಪ್ಪು ಆದಾಯ ಮತ್ತು ಕಪ್ಪು ಸಂಪತ್ತು ಇವುಗಳಲ್ಲಿ ದೇಶದ ಕಪ್ಪು ಆರ್ಥಿಕತೆ ಅಡಗಿ ಕೂತಿದೆ. ಈ ಕಪ್ಪು ಆರ್ಥಿಕತೆ ಸೃಷಿಗೂ ರಾಜಕಾರಣಿಗಳು-ಉದ್ಯಮಿಗಳು-ಮೇಲ್ದರ್ಜೆ ನೌಕರರ ಭ್ರಷ್ಟತೆಗೂ ನೇರಾ ನೇರ ಸಂಬಂಧವಿದೆ.
ಕಪ್ಪು ಆರ್ಥಿಕತೆ ಎಲ್ಲಾ ಅಭಿವೃದ್ಧಿಶೀಲ ರಾಷ್ಟ್ರಗಳ ಬಹುದೊಡ್ಡ ಸಮಸ್ಯೆಯಾಗಿದೆ. ಹಾಗೆಂದು ಅಮೇರಿಕ, ಇಂಗ್ಲೆಂಡ್, ಜಪಾನ್ ದೇಶಗಳನ್ನೂ ಇದು ಬಿಟ್ಟಿಲ್ಲ. ಭಾರತದಲ್ಲಿ ಈ ಕಪ್ಪು ಆರ್ಥಿಕತೆಯ ಪ್ರಮುಖ ಕ್ಷೇತ್ರ ಕಾರ್ಪೋರೇಟ್ ಸಂಸ್ಥೆಗಳು, ಬೃಹತ್ ವ್ಯಾಪಾರ, ರಿಯಲ್ ಎಸ್ಟೇಟ್, ಖಾಸಗಿ ವಿದ್ಯಾಸಂಸ್ಥೆಗಳು, ಗುತ್ತಿಗೆ ಪದ್ಧತಿ, ಸಾಗಾಣಿಕೆ, ಬ್ರೋಕರ್ ವ್ಯವಸ್ಥೆ, ಸಿನೆಮಾ ಪ್ರೊಡಕ್ಷನ್ ಇತ್ಯಾದಿ. ಇವರೆಲ್ಲ ತೆರಿಗೆ ಬಚಾವು ಮಾಡಿಕೊಳ್ಳಲು ಸೃಷ್ಟಿಸಿರುವ ಜಾಲ ಕಪ್ಪು ಆರ್ಥಿಕತೆಯ ಬಹುದೊಡ್ಡ ತಾಣವಾಗಿದೆ. ಇವರೊಂದಿಗೆ ಮಾದಕ ದ್ರವ್ಯ ವ್ಯವಹಾರ, ಕಳ್ಳಸಾಗಾಣಿಕೆ, ಗ್ಯಾಂಬ್ಲಿಂಗ್ ಮುಂತಾದವು ಕೈ ಜೋಡಿಸಿ ಕಪ್ಪು ಆರ್ಥಿಕತೆಯನ್ನು ಸಲಹುತ್ತಿವೆ.
ನಾವೆಲ್ಲರೂ ದೇಶದ ಭ್ರಷ್ಟ ನೌಕರರ ಲಂಚಗುಳಿತನದಿಂದ ಕಪ್ಪು ಆರ್ಥಿಕತೆ ಹೆಚ್ಚಿದೆ ಎಂದು ತಿಳಿದಿದ್ದೇವೆ. ಆದರೆ ಲಂಚದಿಂದ ಕೇವಲ ಶೇ 5 ರಿಂದ ಶೇ. 15 ರಷ್ಟು ಮಾತ್ರ ಕಪ್ಪು ಆರ್ಥಿಕತೆ ಸೃಷ್ಟಿಯಾಗುತ್ತಿದೆ. ಇನ್ನು ಉಳಿದ ಶೇ 85 ರಷ್ಟು ಪಾಲು ನಮ್ಮ ದೇಶದ ಭ್ರಷ್ಟ ರಾಜಕಾರಣಿ-ಕಾರ್ಪೋರೇಟ್-ನೌಕರಶಾಹಿಗಳಿಗೆ ಸೇರಿದ್ದು. ಇದನ್ನು ತಿಳಿಯಲು ಕಪ್ಪು ಆರ್ಥಿಕತೆಯ ಮೂಲಕ್ಕೆ ಕೈ ಹಾಕಬೇಕಿದೆ.
ದೇಶಕ್ಕೆ ಜಾಗತೀಕರಣ ತನ್ನ ಕರಾಳ ಕಾಲುಗಳನ್ನಿಡುವ ಮುಂಚೆ ಕೆಲವೇ ಕೆಲವು ಹಗರಣಗಳನ್ನು ಮಾತ್ರ ಈ ದೇಶ ಕಂಡಿತ್ತು. ಉದಾಹರಣೆಗೆ ಬೋಫೋರ್ಸ್ ಹಗರಣ. ಇದು 64 ಕೋಟಿ ರೂಪಾಯಿಗಳದ್ದು. ಜಾಗತೀಕರಣದ ಪ್ರಭಾವದಿಂದ 90 ರ ದಶಕದಲ್ಲಿ ಸುಮಾರು 23 ಹಗರಣಗಳು ಕಾಣಿಸಿಕೊಂಡವು. ಅವೆಲ್ಲವೂ 1000 ಕೋಟಿಯನ್ನು ಮೀರಿದ್ದವು. ಉದಾಹರಣೆಗೆ ಹರ್ಷದ್ ಮೆಹ್ತಾ ಹಗರಣ. ಇದು 3,128 ಕೋಟಿ ರೂಪಾಯಿಗಳದ್ದು. 2005 ರಿಂದ 2008 ರೊಳಗೆ ಹಗರಣಗಳ ಸಂಖ್ಯೆ 150 ಕ್ಕೇರಿತು. ಈ ಬಾರಿ ಹಗರಣಗಳೆಲ್ಲವೂ ಹಲವು ಲಕ್ಷಕೋಟಿಗಳಾಗಿದ್ದವು. ಉದಾಹರಣೆಗೆ 2ಜಿ ಹಗರಣ. ಇದರ ಜೊತೆಗೆ ಕಪ್ಪು ಹಣದಲ್ಲಿನ ಪಾಲು ಸಹ ಏರುತ್ತಾ ಬಂದಿದೆ. 50 ರ ದಶಕದಲ್ಲಿ ಶೇ.5 ರಷ್ಟಿದ್ದ ಕಪ್ಪು ಆರ್ಥಿಕತೆ 90 ರ ದಶಕದಲ್ಲಿ ಶೇ. 30 ಕ್ಕೆ ಬಂದು ಈಗ ಅಂದರೆ 2016-17 ನೇ ಸಾಲಿಗೆ ಶೇ. 62 ರಷ್ಟಕ್ಕೆ ಬಂದು ನಿಂತಿದೆ. ಅರುಣ್‍ಕುಮಾರ್ ಅವರ ಪ್ರಕಾರ ನಮ್ಮ ದೇಶದ ಒಟ್ಟು ಜಿಡಿಪಿ 150 ಲಕ್ಷ ಕೋಟಿ ಎಂದು ಅಂದಾಜಿಸಿದರೆ ನಮ್ಮ ದೇಶದ ಕಪ್ಪು ಆರ್ಥಿಕತೆಯ ಮೊತ್ತ ಬರೋಬ್ಬರಿ 93 ಲಕ್ಷ ಕೋಟಿ. ಅಂದರೆ ನಮ್ಮ ದೇಶ ಕೃಷಿ ಕ್ಷೇತ್ರದಲ್ಲಿ ಉತ್ಪತ್ತಿ ಮಾಡುವ ಆದಾಯಕ್ಕಿಂತ ಮೂರು ಪಟ್ಟು ಹೆಚ್ಚು. ಈ ಕಪ್ಪು ಆರ್ಥಿಕತೆಯಿಂದ ನಮ್ಮ ದೇಶ ಪ್ರತಿ ವರ್ಷ ಶೇ. 5 ರಷ್ಟು ಅಭಿವೃದ್ದಿಯನ್ನು ಕಳೆದುಕೊಂಡು ಬಂದಿದೆ. ಕಪ್ಪು ಆರ್ಥಿಕತೆಯನ್ನು ಮಟ್ಟ ಹಾಕಿದ್ದಿದ್ದರೆ ಇಷ್ಟೊತ್ತಿಗೆ ನಮ್ಮ ದೇಶದ ಆರ್ಥಿಕತೆ 1050 ಲಕ್ಷ ಕೋಟಿ ತಲುಪಿರುತ್ತಿತ್ತು. ಅಂದರೆ ಅಮೇರಿಕದ ನಂತರ ಎರಡನೇ ದೊಡ್ಡ ಶ್ರೀಮಂತ ದೇಶ. ಈಗಿರುವುದಕ್ಕಿಂತ 7 ಪಟ್ಟು ಸಂಪತ್ತನ್ನು ಭಾರತೀಯರು ಹೊಂದುತ್ತಿದ್ದರು.
ಏಪ್ರಿಲ್ 17, 2015 ರಂದು ವಿಶ್ವ ಬ್ಯಾಂಕ್ ನಿರ್ದೇಶಕರಾದ ಮುಲ್ಯಾನ್ ಇಂದ್ರಾವತಿಯವರು ತಮ್ಮ ಭಾಷಣದಲ್ಲಿ ಒಂದು ಅಘಾತಕರ ಸುದ್ಧಿ ಹೇಳಿದರು. ‘UNCTAD (United Nations Conference on Trade and Development) ಪ್ರಕಾರ ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಪ್ರತಿ ವರ್ಷ ಸುಮಾರು 6.5 ಲಕ್ಷ ಕೋಟಿಗಳಷ್ಟು ಆದಾಯ ತೆರಿಗೆ ಮುಕ್ತ ದೇಶಗಳಿಗೆ ಹರಿಯುತ್ತಿದೆ’. ಕಳೆದ ಹತ್ತು ವರ್ಷಗಳಲ್ಲಿ ಅತಿ ಹೆಚ್ಚು ಕಪ್ಪು ಆದಾಯವನ್ನು ತೆರಿಗೆ ಮುಕ್ತ ದೇಶಗಳಿಗೆ ರವಾನಿಸಿರುವ ಅಗ್ರ 5 ದೇಶಗಳೆಂದರೆ ಚೀನ, ರಷ್ಯಾ, ಮೆಕ್ಸಿಕೋ, ಭಾರತ ಮತ್ತು ಮಲೇಷಿಯಾ.
ಇನ್ನೂ ಅಘಾತವಾಗುವುದಿದೆ.ASSOCHAM (Associated Chamber of Commerce and Industry of India) ಸಂಸ್ಥೆ ತಿಳಿಸುವ ಪ್ರಕಾರ 2012 ರವರೆಗೆ ಭಾರತ ದೇಶ ಕಪ್ಪು ಆರ್ಥಿಕತೆಯಿಂದ ನೇರವಾಗಿ ಕಳೆದುಕೊಂಡಿರುವುದು ಬರೋಬ್ಬರಿ 130 ಲಕ್ಷ ಕೋಟಿಗಳು! ಈ ಮಾತುಗಳನ್ನು ಖ್ಯಾತ ಅರ್ಥಶಾಸ್ತ್ರಜ್ಞರಾದ ವೈಧ್ಯನಾಥನ್ ಮತ್ತು ಅರುಣ್‍ಕುಮಾರ್ ಇಬ್ಬರೂ ಅನುಮೋದಿಸುತ್ತಾರೆ. ಹೌದು ತೆರಿಗೆ ಮುಕ್ತ ದೇಶಗಳಲ್ಲಿ ತಮ್ಮ ಆದಾಯವನ್ನು ರವಾನಿಸಿ ಉಂಡ ಮನೆಗೆ ಖನ್ನ ಹಾಕಿ ತಾವು ದುಂಡಗಾಗುತ್ತಿದ್ದಾರೆ ನಮ್ಮ ದೇಶದ ಶ್ರೀಮಂತರು.
ತೆರಿಗೆ ಮುಕ್ತ ದೇಶಗಳ ಪಟ್ಟಿ ದೊಡ್ಡದೇ ಇದೆ. ಮೊದಲನೇ ಮಹಾಯುದ್ಧದ ನಂತರ ಕೆಲವೇ ದೇಶಗಳು ಈ ರೀತಿ ತಮ್ಮ ಅಭಿವೃದ್ಧಿಗಾಗಿ ಹಲವಾರು ತೆರಿಗೆ ವಿನಾಯಿತಿ ಅಥವಾ ತೆರಿಗೆ ಮುಕ್ತಗೊಳಿಸಿ ಇತರ ದೇಶದ ಶ್ರೀಮಂತರನ್ನು ಆಕರ್ಷಿಸಿದವು. ಎರಡನೇ ಮಹಾಯುದ್ಧದ ನಂತರ ತೈಲ ಜಗತ್ತು ಬಡ ದೇಶಗಳ ನೌಕರರನ್ನು ಆಕರ್ಷಿಸಿ ‘ಹವಾಲ’ ಪದ್ಧತಿಗೆ ನಾಂದಿ ಹಾಡಿತು. ಅಭಿವೃದ್ಧಿಶೀಲ ದೇಶಗಳ ಶ್ರೀಮಂತರು ತಮ್ಮ ದೇಶಗಳಿಗೆ ಕಟ್ಟಬೇಕಾದ ತೆರಿಗೆಯನ್ನು ತಪ್ಪಿಸಿಕೊಳ್ಳಲು ಇಂತಹ ತೆರಿಗೆ ಮುಕ್ತ ದೇಶಗಳನ್ನು ಆರಿಸಿಕೊಂಡರು. ಇದರ ಪರಿಣಾಮವಾಗಿ ತೆರಿಗೆ ಮುಕ್ತ ದೇಶಗಳು ಹೆಚ್ಚುತ್ತಾ ಹೋದವು. ರೇಮಂಡ್ ಬೇಕ್ಸ್‍ರವರ ಪ್ರಕಾರ ಇಂತಹ 1,80,000 ತೆರಿಗೆ ಮುಕ್ತ ದೇಶಗಳು ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲೂ, 5 ಲಕ್ಷ ಕೆರೆಬಿಯನ್ ದ್ವೀಪಗಳಲ್ಲೂ ಇವೆ. ಈ ದ್ವೀಪಗಳಲ್ಲಿ ಪ್ರಪಂಚದ ಶ್ರೀಮಂತರು ತಮ್ಮ ಕಪ್ಪು ಆದಾಯವನ್ನು ಬಿಳಿಯಾಗಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ ಮತ್ತು ಸಫಲರಾಗುತ್ತಿದ್ದಾರೆ. ಬೇಕ್ಸ್ ಪ್ರಕಾರ ಪ್ರಪಂಚದ ಸುಮಾರು ಮೂರನೇ ಒಂದರ ಜಿ.ಡಿ.ಪಿಯಷ್ಟು ಕಪ್ಪು ಆದಾಯ ಇಲ್ಲಿ ಬಿಳಿಯಾಗುತ್ತದೆ. ಇದಕ್ಕಾಗಿಯೇ ಲಕ್ಷಾಂತರ ಸುಳ್ಳು ಕಂಪೆನಿಗಳು ತೆರಿಗೆ ಮುಕ್ತ ದೇಶಗಳಲ್ಲಿ ನೋಂದಣಿಯಾಗಿವೆ. ಇವೆಲ್ಲವೂ ತಮ್ಮ ಆಸ್ತಿಯನ್ನು ಕಾಗದದ ಮೇಲೆ ಮಾತ್ರ ಹೊಂದಿದ್ದು ಇತರ ದೇಶದ ಶ್ರೀಮಂತರ ಕಪ್ಪು ಆದಾಯವನ್ನು ಬಿಳಿ ಮಾಡುವುದೇ ಇವುಗಳ ಕೆಲಸ. ಈ ಇಡೀ ವ್ಯವಸ್ಥೆಗೆ ‘ಮನಿ ಲಾಂಡರಿಂಗ್’ ಎಂದೇ ಕರೆಯಲಾಗುತ್ತದೆ. ತೆರಿಗೆ ಮುಕ್ತ ದೇಶಗಳ ಇಂತಹ ಕಂಪೆನಿಗಳಿಗೆ ‘ಶೆಲ್ (ಟೊಳ್ಳು) ಕಂಪೆನಿ’ಗಳೆಂದೇ ಕರೆಯಲಾಗುತ್ತದೆ.
2008 ರಲ್ಲಿ ನಾರ್ವೆ ದೇಶದ ಸರ್ಕಾರ ತೆರಿಗೆ ಮುಕ್ತ ದೇಶಗಳ ಬಗ್ಗೆ ತನಿಖೆಯನ್ನೇ ಮಾಡಿಸಿತ್ತು. ಅದರ ತನಿಖಾ ವರದಿ ಪ್ರಕಾರ ಅಂದಿಗೇ ಪ್ರಪಂಚದ 30 ರಿಂದ 70 ದೇಶಗಳು ತೆರಿಗೆ ಮುಕ್ತವಾಗಿದ್ದವು! ಇಂದು ಅವುಗಳ ಸಂಖ್ಯೆ ಹೆಚ್ಚಾಗಿದೆ. ಮುಖ್ಯವಾಗಿ ಕೈಕೋಸ್ ದ್ವೀಪ, ಮಾರಿಷಸ್, ಬಹಾಮಾಸ್, ಕೇಮನ್ ದ್ವೀಪಗಳು, ಬರ್ಮುಡಾ, ಬ್ರಿಟಿಷ್ ವರ್ಜಿನ್ ದ್ವೀಪಗಳು, ಸೈಪ್ರಸ್, ಆಸ್ಟ್ರೇಲಿಯಾ, ಲೆಚೆಂಸ್ಟೈನ್, ನೆದರ್ ಲ್ಯಾಂಡ್, ಟರ್ಕಿ, ಸ್ವಿಟ್ಜರ್ ಲ್ಯಾಂಡ್, ಲಕ್ಸಂಬರ್ಗ್ ಮುಂತಾದ ದೇಶಗಳು ಅತಿ ಹೆಚ್ಚು ವ್ಯವಹಾರ ನಡೆಸುತ್ತಿವೆ. ಈ ಟೊಳ್ಳು ಕಂಪೆನಿಗಳು ಅಮೆರಿಕಾವನ್ನೂ ಸಹ ಬಿಟ್ಟಿಲ್ಲ. ಪ್ರತಿ ವರ್ಷ 96,000 ಕೋಟಿಗಳಷ್ಟನ್ನು ಸಂಪತ್ತನ್ನು ನಮ್ಮ ದೇಶದಲ್ಲಿ ಮಾರಿಷಸ್ ದೇಶ ಹೂಡುತ್ತದೆ. ಆಶ್ಚರ್ಯವೆಂದರೆ 12 ಲಕ್ಷ ಜನಸಂಖ್ಯೆ ಇರುವ ಆ ದೇಶಕ್ಕೆ ಅಷ್ಟು ಆದಾಯ ಎಲ್ಲಿಂದ ಬರುತ್ತದೆ? ನಮ್ಮ ದೇಶದ ಶ್ರೀಮಂತ ಕುಳಗಳಿಂದ. ಭಾರತ ಸರ್ಕಾರದ DTAA (Double Tax Avoidance Agreement) ಕಾಯ್ದೆ ಮಾರಿಷಸ್, ಮಲೇಷಿಯಾ, ಸಿಂಗಪೂರ್‍ನಂತಹ ತೆರಿಗೆ ಮುಕ್ತ ದೇಶಗಳನ್ನು ಮಟ್ಟ ಹಾಕುವ ಬದಲು ಉದ್ಯಮಿಗಳ ಕಪ್ಪು ಆರ್ಥಿಕತೆಯನ್ನು ಬಿಳಿಯಾಗಿಸಲು ರತ್ನಗಂಬಳಿ ಹಾಸಿದೆ.
ತೆರಿಗೆ ಮುಕ್ತ ದೇಶಗಳ ಸಂಬಂಧದೊಂದಿಗೆ ಕಪ್ಪು ಆದಾಯವನ್ನು ಬಿಳಿಯಾಗಿಸಿಕೊಳ್ಳುವ ಶ್ರೀಮಂತರು ಹವಾಲ ಮಾರ್ಗದಿಂದಲೂ, ಲಾಭ ಅಥವಾ ನಷ್ಟ ತೋರಿಸುವ ಮೂಲಕವೂ, ವಜ್ರ, ಚಿನ್ನಾಭರಣಗಳನ್ನು ಶೇಖರಿಸುವ ಮೂಲಕ, ರಿಯಲ್ ಎಸ್ಟೇಟ್, ಬೇನಾಮಿ ಆಸ್ತಿ, ರೌಂಡ್ ಟ್ರಿಪ್ಪಿಂಗ್, ಮನಿ ಲಾಂಡರಿಂಗ್, ಪಿ-ನೋಟ್ ಮೂಲಕ ಕಪ್ಪು ಆರ್ಥಿಕತೆಯನ್ನು ವೃದ್ಧಿಸುತ್ತಿದೆ. ಇಲ್ಲಿ ಬಿಳಿಯಾಗಿಸಿಕೊಳ್ಳುವ ಕಪ್ಪು ಸಂಪತ್ತನ್ನು ಮುಟ್ಟುವ ಧೈರ್ಯವನ್ನು ಯಾವ ಸರ್ಕಾರಗಳೂ ಮಾಡಿಲ್ಲ.
ಇಲ್ಲಿಯವರೆಗೆ ಕಪ್ಪು ಸಂಪತ್ತನ್ನು ಕಡಿಮೆಗೊಳಿಸಲು ತಂದಿರುವ ಕಾನೂನುಗಳು ಅಷ್ಟು ಪ್ರಭಾವ ಬೀರಿಲ್ಲ. IDS ನಿಂದಾಗಿ 65,250 ಕೋಟಿ ಸರ್ಕಾರದ ಬೊಕ್ಕಸಕ್ಕೆ ಬಂದಿದೆ. ಆದರೆ ಸಿಎಜಿ ಎಚ್ಚರಿಸಿದಂತೆ ಈ ಕಾಯ್ದೆ ಇಷ್ಟು ದಿನ ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಿದ್ದವರನ್ನೂ ಹಾಳು ಮಾಡುವ ಎಲ್ಲಾ ಲಕ್ಷಣಗಳನ್ನೂ ಹೊಂದಿದೆ. ಕಪ್ಪು ಆದಾಯವನ್ನು ಸಂಗ್ರಹಿಸಿ ಆಫರ್‍ಗಾಗಿ ಕಾಯುವಂತೆ ತೆರಿಗೆದಾರರನ್ನು ಪ್ರೇರೇಪಿಸುತ್ತದೆ.UFIA (Black money and Imposition Act) ನಿಂದಾಗಿ 2000 ಕೋಟಿ ಬೊಕ್ಕಸಕ್ಕೆ ಬಂದಿದೆ. ಆದರೆ ಇದೆಲ್ಲವನ್ನೂ ನೋಟು ರದ್ಧತಿ ದೂಳಿಪಟವಾಗಿಸಿದ್ದು ಇತಿಹಾಸ.
ಕಪ್ಪು ಆರ್ಥಿಕತೆಯನ್ನು ಕೇವಲ ಕಪ್ಪು ಹಣಕ್ಕೆ ಸೀಮಿತಗೊಳಿಸಿರುವುದು ಮೊದಲ ದುರಂತ. ಕಪ್ಪು ಆರ್ಥಿಕತೆ ಸೃಷ್ಟಿಯಲ್ಲಿ ಭ್ರಷ್ಟ ಉದ್ಯಮಿಗಳೊಂದಿಗೆ ಜನ ಪ್ರತಿನಿಧಿಗಳು ಹಾಗೂ ನೌಕರಶಾಹಿಗಳು ಕೈ ಜೋಡಿಸಿರುವುದು ಬಹುದೊಡ್ಡ ದುರಂತ. ಕಳೆದ 20 ವರ್ಷಗಳಲ್ಲಿ ರಾಜಕೀಯ ಪಕ್ಷಗಳಿಗೆ ಹರಿದುಬಂದಿರುವ ಬೇನಾಮಿ ದೇಣಿಗೆ ವಿವರ ನೋಡಿದರೆ ಸಾಕು ಎಲ್ಲವೂ ಅರ್ಥವಾಗಿ ಬಿಡುತ್ತದೆ. ಮತ್ತೊಂದು ಗಮನಿಸಲೇಬೇಕಾದ ಅಂಶವೆಂದರೆ ಅತಿ ಹೆಚ್ಚು ಕಪ್ಪು ಆರ್ಥಿಕತೆ ಬೆಳವಣಿಗೆಯಾಗಿರುವುದು ಸಾರ್ವಜನಿಕ-ಖಾಸಗಿ ಸಹಯೋಗ ಉದ್ಯಮಗಳು ಆರಂಭವಾದ ನಂತರ. ಇದು ಬಂಡವಾಳಶಾಹಿ-ಜನಪ್ರತಿನಿಧಿ-ನೌಕರಶಾಹಿಯ ಅನೈತಿಕ ಕೂಡುವಿಕೆಯನ್ನೇ ತಿಳಿಸುತ್ತದೆ.
2014 ರಲ್ಲಿ ಕಪ್ಪು ಹಣದ ಕುರಿತಾಗಿ ರಚಿಸಿದ್ದ SIT ಸಮಿತಿ 5 ವರದಿಗಳನ್ನು ನೀಡಿದೆ. ಇದುವರೆವಿಗೂ ಒಂದನ್ನೂ ಬಹಿರಂಗಪಡಿಸಿಲ್ಲ. RTI ಕಾಯ್ದೆಯಡಿಗೆ ರಾಜಕೀಯ ಪಕ್ಷಗಳನ್ನು ತಂದಿಲ್ಲ. ಬ್ಯಾಂಕ್‍ಗಳು ಕಾಪಾಡುವ ಖಾತೆದಾರರ ಗೌಪ್ಯತೆಗೆ ಕಡಿವಾಣ ಹಾಕಿಲ್ಲ. ‘ಪನಾಮಾ ಪೇಪರ್ಸ್’ನಲ್ಲಿ ಸಿಕ್ಕಿಹಾಕಿಕೊಂಡಿರುವ 500 ತೆರಿಗೆಗಳ್ಳರಲ್ಲಿ 234 ಜನರ ಪಾಸ್‍ಪೋರ್ಟ್ ಮಾಹಿತಿ ಸರ್ಕಾರದ ಬಳಿ ಇದ್ದರೂ ಯಾರನ್ನೂ ಕನಿಷ್ಟ ವಿಚಾರಣೆಗೂ ಒಳಪಡಿಸಿಲ್ಲ. ಈಗ ಬಹಿರಂಗಗೊಂಡ ‘ಪ್ಯಾರಡೈಸ್ ಪೇಪರ್ಸ್’ನಲ್ಲಿ 714 ಭಾರತೀಯ ತೆರಿಗೆಗಳ್ಳರ ಹೆಸರಿದೆಯಂತೆ. ಅಮಿತಾಬ್ ಬಚ್ಚನ್ ಅವರ ಹೆಸರು ಮತ್ತೆ ಕಾಣಿಸಿಕೊಂಡಿದೆ. ದೇಶದ ಆರ್ಥಿಕತೆ ಹಳ್ಳ ಹಿಡಿಯುತ್ತಿದ್ದರೆ ಭಾರತೀಯ ಉದ್ಯಮಿಗಳು ಅಗ್ರ ಶ್ರೀಮಂತರ ಪಟ್ಟಿಗಳಲ್ಲಿ ರಾರಾಜಿಸುತ್ತಿದ್ದಾರೆ. ಹೀಗಿರುವಾಗ ಶ್ರೀಮಂತ ಕುಳಗಳ ಮೇಲೆ ‘ಸರ್ಜಿಕಲ್ ಸ್ಟ್ರೈಕ್’ ಮಾಡುವುದು ಬಿಟ್ಟು ಪ್ರದಾನಿ ಮೋದಿಯವರು ಸಾಮಾನ್ಯ ಜನರ ಮೇಲೆ ಮಾಡಿದ್ದಾರೆ.
ಆದ್ದರಿಂದ ಕಪ್ಪು ಆರ್ಥಿಕತೆಯನ್ನು ಮಟ್ಟ ಹಾಕುವ ಕೆಲಸ ಉದ್ಯಮಿಯ ಹೆಲಿಕಾಪ್ಟರ್ ಬಳಸುವ ಅಥವಾ ಉದ್ಯಮಿಯ ಸಿಮ್ ಜಾಹಿರಾತಿಗೆ ಫೋಸು ಕೊಡುವ ಜನಪ್ರತಿನಿಧಿಯಿಂದ ಖಂಡಿತ ಸಾಧ್ಯವಿಲ್ಲ. ಹಾಗೆಯೇ ಬಂಡವಾಳಶಾಹಿಗಳಿಗೆ ಮಣೆ ಹಾಕುವ ಯಾವುದೇ ಜನಪ್ರತಿನಿಧಿಯಿಂದಲೂ ಸಾಧ್ಯವಿಲ್ಲ. ಕಪ್ಪು ಹಣವನ್ನು ಮಟ್ಟ ಹಾಕುವ ರಾಜಕೀಯ ಬದ್ಧತೆ ಯಾವ ಪಕ್ಷಗಳಲ್ಲೂ ಕಾಣುತ್ತಿಲ್ಲ. ಔಷಧಿ ಹೆಸರಿನಲ್ಲಿ ಟೂತ್ ಪೇಸ್ಟ್ ಮಾರುತ್ತಾ ದೇಶಕ್ಕೆ ತೆರಿಗೆ ವಂಚಿಸುವ ಯಾವ ಬಾಬಾಗಳಿಂದಲೂ ಸಾಧ್ಯವಿಲ್ಲ. ಸಂಕಟ ಬಂದಾಗ ನಿದ್ದೆಗೆ ಜಾರುವ ಯಾವ ಅಣ್ಣಾಗಳಿಂದಲೂ ಸಾಧ್ಯವಿಲ್ಲ. ಈ ಕಪ್ಪು ಆರ್ಥಿಕತೆಯನ್ನು ಮಟ್ಟ ಹಾಕಬೇಕೆಂದರೆ ಬೃಹತ್ ಜನಾಂದೋಲನವೇ ಆಗಬೇಕು. ಕಪ್ಪು ಆರ್ಥಿಕತೆ ದೇಶ ಬಿಟ್ಟು ಓಡಿಹೋಗಲು ಒಂದು ಕ್ರಾಂತಿಗಾಗಿ ಕಾಯುತ್ತಿದೆ. ಸಿದ್ಧರಾಗೋಣ.