ಓ ಹೆಣ್ಣೆ ನೀನೆಂತ ಕರುಣಾಳು ತ್ಯಾಗಿ? -ಕೆ ಎನ್ ಗಣೇಶಯ್ಯ

reproduction

`ಅಪ್ಪಾಜಿ, ನನ್ನನ್ನು ಈ ನಡುವೆ ಒಂದು ಪ್ರಶ್ನೆ ಕಾಡುತ್ತಿದೆ’. ಸುಮಾರು ಇಪ್ಪತ್ತು ವರ್ಷದ ನನ್ನ ಮಗಳು ಬಹಳ ಗಂಭೀರವಾಗಿ ಕೇಳಿದ್ದಳು.
`ಯಾವ ಪ್ರಶ್ನೆ ಮಗಳೆ?’
‘ನನ್ನ ಬಹುಪಾಲು ಸ್ನೇಹಿತೆಯರ ತಾಯಂದಿರ ವರ್ತನೆಯಲ್ಲಿ ಇತ್ತೀಚೆಗೆ ವಿಚಿತ್ರ ಬದಲಾವಣೆ ಕಂಡುಬರುತ್ತಿದೆ. ಅವರ ಸ್ವಾಭಾವಿಕ ವರ್ತನೆ ಕಾಣುತ್ತಿಲ್ಲ.’
‘ಅಂದರೆ?’
‘ಯಾವುದೆ ವಿಷಯಕ್ಕೂ ಬಹಳಷ್ಟೆ ಸೆನ್ಸಿಟೀವ್ ಆಗಿಬಿಟ್ಟಿದ್ದಾರೆ ಅನಿಸುತ್ತೆ. ಅವರಲ್ಲಿ ಮೊದಲಿನ ರೀತಿಯ ತಾಳ್ಮೆ ಕಾಣುತ್ತಿಲ್ಲ. ಕೆಲವರು ಅತಿಯಾಗಿ ಕೋಪಿಸಿಕೊಳ್ಳುತ್ತಿದ್ದಾರೆ. ಯಾವುದೆ ಘಟನೆಗೆ ಸಾವಾಧಾನವಾಗಿ ಸ್ಪಂದಿಸುತ್ತಿಲ್ಲ. ಕೆಲವರಂತೂ ಬಹಳ ಇಲ್ಲಾಜಿಕಲ್ ಆಗಿ ವರ್ತಿಸುತ್ತಿದ್ದಾರೆ ಅನಿಸುತ್ತೆ. ಯಾಕೆ ಹೀಗೆ? ವಿಚಿತ್ರವೆಂದರೆ ನನ್ನ ಸ್ನೇಹಿತೆಯರ ಬಹುಪಾಲು ತಾಯಂದಿರಲ್ಲಿ ಈ ಬದಲಾವಣೆ ಕಾಣುತ್ತಿದೆ.’
ಅಷ್ಟರಲ್ಲಿ ನನಗೆ ಇಂತಹ ಬದಲಾವಣೆಯ ಅನುಭವವಾಗಿತ್ತು- ಪುಣ್ಯಳ ತಾಯಿಯ ವರ್ತನೆಯಲ್ಲಿ. ಅದಕ್ಕೆ ಕಾರಣವೂ ತಿಳಿದಿತ್ತು. ಆದರೆ ಪುಣ್ಯಳ ಬಹುಪಾಲು ಸ್ನೇಹಿತೆಯರ ತಾಯಂದಿರೂ ಹಾಗೆಯೆ ಎಂದಾಗ ನನ್ನಲ್ಲಿ ಆಶ್ಚರ್ಯ ಮೂಡಿ ಯೋಚಿಸತೊಡಗಿದೆ. ಪುಣ್ಯಗೆ ಆಗ ಇಪ್ಪತ್ತು ವರ್ಷ ಹಾಗೂ ಅವಳ ತಾಯಿಗೆ ಸುಮಾರು ಐವತ್ತು ವರ್ಷ. ಪುಣ್ಯಳ ಸ್ನೇಹಿತೆಯರೂ ಇಪ್ಪತ್ತರಿಂದ ಇಪ್ಪತ್ತೈದು ವರ್ಷದವರಾಗಿದ್ದರಿಂದ ಅವರ ತಾಯಂದಿರು ಸಹ ಸುಮಾರು ಐವತ್ತು ವರ್ಷದವರಾಗಿರಲು ಸಾಧ್ಯ. ಹಾಗಾಗಿ ಅವರೆಲ್ಲರಲ್ಲಿ ಪುಣ್ಯ ಗಮನಿಸಿರುವ ಈ ಬದಲಾವಣೆ ಯಾಕಿರಬುಹುದೆಂಬುವುದರ ಬಗ್ಗೆ ನನಗೆ ಸ್ಪಷ್ಟತೆ ಕಾಣತೊಡಗಿತು. ಹಾಗೆಂದೆ ಕೇಳಿದೆ.
`ಅವರೆಲ್ಲರೂ ಸುಮಾರು ನಿಮ್ಮ ತಾಯಿಯ ವಯಸ್ಸಿನವರೆ ಮಗಳೆ?’
ನನ್ನ ಪ್ರಶ್ನೆ ಕೇಳಿ, ಒಂದೆರಡು ಕ್ಷಣ ಯೋಚಿಸಿದ ಪುಣ್ಯ ನಿದಾನವಾಗಿ ಹೌದೆನ್ನುವಂತೆ ತಲೆ ಆಡಿಸುತ್ತ ಹೇಳಿದಳು.
`ಹೌದು. ಅವರೆಲ್ಲರೂ ಸುಮಾರು ಅಮ್ಮನ ವಯಸ್ಸಿನವರು. ಯಾಕೆ? ಅದರಲ್ಲಿ ವಿಶೇಷವೇನು?’
‘ವಿಶೇಷವಿದೆ. ಈ ವಯಸ್ಸಿನಲ್ಲಿ ಅವರೆಲ್ಲರೂ, ತಮ್ಮ ಜೀವನದ ಮತ್ತೊಂದು ರೀತಿಯ ಪುನರಾಭಿವೃದ್ದಿ ಕಾರ್ಯಕ್ಕೆ ಪ್ರವೇಶಿಸುತ್ತಿರುತ್ತಾರೆ’ ಎಂದೆ. ಅದನ್ನು ಕೇಳಿ ಪಿಳಿಪಿಳಿ ಕಣ್ಣು ಬಿಟ್ಟ ಪುಣ್ಯ, ತಿರಸ್ಕಾರ ಭಾವದಲ್ಲಿ ಹೇಳಿದಳು.
`ಏನು ಹೇಳುತ್ತಿದ್ದೀರ ಅಪ್ಪಾಜಿ? ಅವರೆಲ್ಲರೂ ಎಂದೋ ಯುಟೆರೆಕ್ಟಮಿ ಮಾಡಿಸಿಕೊಂಡಿದ್ದಾರೆ. ಅವರು ಹೇಗೆ ತಾನೆ ಮತ್ತೆ ಪುನರಾಭಿವೃದ್ದಿಯಲ್ಲಿ ತೊಡಗಿಕೊಳ್ಳಲು ಸಾಧ್ಯ?’
‘ಮಗಳೆ ನಾನು ಹೇಳಿದ್ದರ ಅರ್ಥ, ಅವರು ಮತ್ತೆ ಮಕ್ಕಳನ್ನು ಹೆರಲು ಮುಂದಾಗಿದ್ದಾರೆ ಎಂದಲ್ಲ. ಬದಲಿಗೆ ಮತ್ತೊಂದು ರೀತಿಯ ಪುನರಾಭಿವೃದ್ದಿಯ ಹಂತಕ್ಕೆ ಹೆಜ್ಜೆ ಇಡುತ್ತಿದ್ದಾರೆ ಎಂದು.’
‘ಮಕ್ಕಳನ್ನು ಹೆರದೆಯೆ ಹೇಗೆ ಪುನರಾಭಿವೃದ್ದಿ ಮಾಡಲು ಸಾಧ್ಯ?’
‘ಹೇಳುತ್ತೇನೆ. ಆದರೆ ಅದಕ್ಕೂ ಮೊದಲು ಅವರಲ್ಲಿ ಕಾಣುವ ಈ ಬದಲಾದ ವರ್ತನೆಗೆ ಕಾರಣ ತಿಳಿಯುವುದು ಅವಶ್ಯಕ. ಅವರೆಲ್ಲರೂ ಸುಮಾರು ಐವತ್ತು ವರ್ಷದವರಾಗಿದ್ದು, ಅವರಲ್ಲಿ ಮುಟ್ಟು ನಿಲ್ಲುವ ಕ್ರಿಯೆ ಪ್ರಾರಂಭವಾಗಿರುತ್ತದೆ. ಆ ಸಮಯದಲ್ಲಿ ಅವರಲ್ಲಿ ಇಂತಹ ಮಾನಸಿಕ ಬದಲಾವಣೆಗಳು ಕಂಡುಬರುವುದು ಸಹಜ.’
`ಯಾಕೆ? ತಾವು ಇನ್ನು ಪುನರಾಭಿವೃದ್ದಿ ಮಾಡಲಾಗದು ಎಂಬ ಹತಾಶ ಭಾವದಿಂದಲೆ?’
‘ಅಲ್ಲ. ಯುಟೆರೆಕ್ಟಮಿ ಮಾಡಿಸಿಕೊಂಡಾಗಲೆ ತಾವು ಇನ್ನು ಪುನರಾಭಿವೃದ್ದಿಯಲ್ಲಿ ತೊಡಗುವ ಸಾಧ್ಯತೆಯಿಲ್ಲ, ಆ ಅವಕಾಶವನ್ನು ಕಳೆದುಕೊಂಡಿದ್ದೇವೆ ಎಂದು ಅವರಿಗೆ ಅರಿವಾಗಿರುತ್ತದೆ. ಹಾಗಾಗಿ ಅಂತಹ ಹತಾಶ ಭಾವದಿಂದಾಗಿ ಅವರಲ್ಲಿ ಈ ಮಾನಸಿಕ ಬದಲಾವಣೆಗಳು ಕಾಣುವುದಿಲ್ಲ.’
‘ಮತ್ತೆ?’
‘ಮುಟ್ಟು ನಿಲ್ಲುವುದೆಂದರೆ ಅವರಲ್ಲಿ ಇನ್ನು ಅಂಡಾಣುಗಳು ಉತ್ಪತ್ತಿಯಾಗವು ಎಂದರ್ಥ. ಅದುವರೆಗೆ ಪ್ರತಿ ತಿಂಗಳೂ ಒಮ್ಮೆ ಅಂಡಾಣು ಉತ್ಪತ್ತಿಯಾಗುತ್ತಿದ್ದು, ಆ ಕ್ರಿಯೆ ಈಗ ಸಂಪೂರ್ಣವಾಗಿ ನಿಂತು ಹೋಗುತ್ತದೆ. ಆ ಸಮಯದಲ್ಲಿ ಅವರ ಶರೀರದಲ್ಲಿ ಗಣನೀಯವಾದ ರಸಾಯನಿಕ ಬದಲಾವಣೆಗಳಾಗುತ್ತವೆ. ಕೆಲವು ಹಾರ್ಮೋನುಗಳ ಉಸುರುವಿಕೆಯೂ ನಿಲ್ಲಬಹುದು. ಸುಮಾರು ಹದಿನೈದು ವರ್ಷದ ಪ್ರಾಯದಲ್ಲಿ ಪ್ರೌಢಾವಸ್ಥೆಗೆ ಬಂದಾಗಿನಿಂದ, ಐವತ್ತು ವರ್ಷದವರೆಗೆ, ಅಂದರೆ ಸುಮಾರು ಮೂವತ್ತೈದು ವರ್ಷಗಳ ಕಾಲ, ಪ್ರತಿ ಮಾಸದಲ್ಲೂ ದೇಹದೊಳಗೆ ಉಸುರುತ್ತಿದ್ದ ಹಾರ್ಮೋನುಗಳಿಗೆ ಹೊಂದಿಕೊಂಡೆ ಬದುಕಿದ ಜೀವಗಳು ಅವು. ಈಗ ಹಟಾತ್ತನೆ ಆ ಹಾರ್ಮೋನುಗಳ ಉತ್ಪಾದನೆ ನಿಂತು ಹೋದಾಗ, ಅಥವ ಏರುಪೇರಾದಾಗ ಶರೀರ ಕ್ರಿಯೆಗಳಲಿ ಮಹತ್ತರ ಪಲ್ಲಟಗಳಾಗುವುದು ಸಹಜ. ಈ ಬದಲಾವಣೆಗಳು ನರಮಂಡಲದ ಮೇಲೂ ಪ್ರಭಾವ ಬೀರುವುದರಿಂದ ಅವರ ಮನೋಸ್ಥಿತಿಯಲ್ಲಿ ಮಹತ್ತರವಾದ ಬದಲಾವಣೆಯಾಗುತ್ತದೆ. ಹಾಗಾಗಿಯೆ, ಸಿಡುಕಿನ ಸ್ವಭಾವ, ಎಲ್ಲರಲ್ಲಿಯೂ, ಎಲ್ಲದರಲ್ಲಿಯೂ ತಪ್ಪು ಹುಡುಕುವ ಗುಣ, ಎಲ್ಲರೂ ತಮಗೆ ಕಷ್ಟ ಕೊಡುತ್ತಿದ್ದಾರೆ ಎನ್ನುವ ಭ್ರಮಾ-ಭಯದ ಭಾವನೆ, .. ಇಂತಹ ಹಲವು ಬದಲಾವಣೆಗಳು ಕಂಡುಬರುತ್ತವೆ. ಇದನ್ನು ಇತರರು ಅರ್ಥ ಮಾಡಿಕೊಂಡು ಅವರೊಡನೆ ಸಹನೆಯಿಂದ ವರ್ತಿಸುವುದು ಬಹಳ ಅವಶ್ಯಕ. ಇಲ್ಲವಾದಲ್ಲಿ ಅವರು ಇನ್ನೂ ಮಾನಸಿಕ ತೊಳಲಾಟಕ್ಕೆ ಈಡಾಗುವ ಸಾಧ್ಯತೆ ಇರುತ್ತದೆ.’
‘ಈ ಬದಲಾವಣೆ ಗಂಡಸರಲ್ಲಿ ಏಕಿಲ್ಲ?’
‘ಗಂಡಸರಲ್ಲಿ ಆಯುಷ್ಯ ಮುಗಿಯುವವರೆಗೂ ವೀರ್ಯಾಣುಗಳ ಉತ್ಪಾದನೆ ನಿಲ್ಲುವುದೆ ಇಲ್ಲ ಎನ್ನಬುಹುದು. ತೊಂಬತ್ತು ವರ್ಷದ ಮುದುಕರೂ ಸಹ ಮಕ್ಕಳಿಗೆ ತಂದೆಯಾಗಿರುವ ಉದಾಹರಣೆಗಳಿವೆ.’
‘ಇದು ವಿಚಿತ್ರವಲ್ಲವೆ ಅಪ್ಪಾಜಿ? ಗಂಡಸರಲ್ಲಿ ಪುನರಾಭಿವೃದ್ದಿಯ ಶಕ್ತಿ ಅವರ ಆಯಸ್ಸು ಮುಗಿಯುವವರೆಗೂ ನಡೆಯಲು ಸಾಧ್ಯವಿರುವಾಗ, ಹೆಣ್ಣಲ್ಲಿ ಮಾತ್ರ ಏಕೆ ಐವತ್ತು ವರ್ಷಕ್ಕೆ ಅಂಡಾಣುಗಳ ಉತ್ಪಾದನೆ ನಿಲ್ಲಬೇಕು? ಇದು ಪ್ರಕೃತಿ ಹೆಣ್ಣಿಗೆ ಮಾಡಿರುವ ಅನ್ಯಾಯವಲ್ಲವೆ?’
`ಮುಟ್ಟು ನಿಲ್ಲುವ ಕ್ರಿಯೆ, ಹೆಣ್ಣಿಗೆ ಪ್ರಕೃತಿ ಮಾಡಿರುವ ಅನ್ಯಾಯ ಎನ್ನುವುದಕ್ಕಿಂತ, ಕುಟುಂಬದ ಒಳಿತಿಗಾಗಿ, ಹೆಣ್ಣಿನಲ್ಲಿ ವಿಕಾಸಗೊಂಡಿರುವ ಒಂದು ಜಾಣ ತಂತ್ರ ಎನ್ನಬಹುದು ಮಗಳೆ. ವಿಕಾಸದಲ್ಲಿ ನಡೆದಿರುವ ಈ ತಿರುವಿನಿಂದಾಗಿಯೇ, ಹೆಣ್ಣು ಕರಣಾಮಯಿಯೂ, ತ್ಯಾಗಿಯೂ ಆಗಿ ಹೊರಹೊಮ್ಮಿರುವುದು.’
‘ವಿಕಾಸದ ತಂತ್ರ? ಯಾವ ಉದ್ದೇಶಕ್ಕಾಗಿ. ಕುಟುಂಬದ ಒಳಿತಿಗಾಗಿ ಹೆಣ್ಣು ಮಾತ್ರವೇ ಏಕೆ ತನ್ನ ಪುನರಾಭಿವೃದ್ದಿಯನ್ನು ತ್ಯಾಗ ಮಾಡಬೇಕು? ಹಾಗೆ ನೋಡಿದರೆ ನನಗಿದು ವಿಕಾಸ-ವಿರೋಧ ಅನಿಸುತ್ತಿದೆ. ಏಕೆಂದರೆ, ನೀವೆ ಹೇಳುವ ಹಾಗೆ ಪುನರಾಭಿವೃದ್ದಿಯನ್ನು ಹೆಚ್ಚಿಸಬಲ್ಲ ಯಾವುದೆ ಗುಣ ಯಾವಾಗಲೂ ಎಲ್ಲ ಜೀವಿಗಳಲ್ಲಿಯೂ ವಿಕಾಸ ಹೊಂದುತ್ತದೆ. ಅದಕ್ಕೆ ವಿರುದ್ದವಾದ ಅಂದರೆ ಪುನರಾಭಿವೃದ್ದಿಯನ್ನು ನಿಲ್ಲಿಸುವ ಅಥವ ತಡೆಯುವ ಯಾವ ಗುಣವನ್ನೇ ಆಗಲಿ ವಿಕಾಸಕ್ರಿಯೆ  ಪ್ರೋತ್ಸಾಹಿಸದು. ಮುಟ್ಟು ನಿಲ್ಲದಿದ್ದರೆ ಪುನರಾಭಿವೃದ್ದಿ ಸತತವಾಗಿ ನಡೆಯುವುದರಿಂದ, ಹೆಚ್ಚು ಮಕ್ಕಳು ಹುಟ್ಟುತ್ತಾರೆ. ಅಂದರೆ ಮುಟ್ಟು ನಿಲ್ಲುವ ಹೆಂಗಸರಿಗಿಂತ ಮುಟ್ಟು ನಿಲ್ಲದವರಿಗೆ ಹೆಚ್ಚು ಮಕ್ಕಳು ಹುಟ್ಟುವುದರಿಂದ, ಮುಟ್ಟು ನಿಲ್ಲುವ ಕ್ರಿಯೆ ವಿಕಾಸವೇ ಹೊಂದಬಾರದಿತ್ತು. ಅಲ್ಲವೆ?’
‘ನಿನ್ನ ವಾದ ಸರಿಯೇ. ಇದೇ ಕಾರಣಕ್ಕೆ ನಮ್ಮ ಹತ್ತಿರದ ಪ್ರಾಣಿಗಳಾದ ಚಿಂಪಾಂಜಿಗಳಲ್ಲೂ ಸಹ ಈ ಮುಟ್ಟು ನಿಲ್ಲುವ ಕ್ರಿಯೆ ಇಲ್ಲ. ಅಲ್ಲದೆ ಮಾನವರ ಆಯಸ್ಸು ಅವೆಲ್ಲವುಗಳಿಗಿಂತ ಎರಡು ಪಟ್ಟು ಹೆಚ್ಚಿದ್ದರೂ ಸಹ, ಬಹುಬೇಗ ಮುಟ್ಟು ನಿಲ್ಲುವುದರಿಂದ, ಹೆಂಗಸರಲ್ಲಿ ಪುನರಾಭಿವೃದ್ದಿಯ ಕಾಲವು ಮಾತ್ರ ಆ ಪ್ರಾಣಿಳಲ್ಲಿರುವಷ್ಟೆ ಇದೆ; ಸುಮಾರು 30-35 ವರ್ಷ. ಹಾಗಾಗಿ ಮುಟ್ಟು ನಿಂತ ಮೇಲೆ ಸುಮಾರು 40-50 ವರ್ಷಗಳ ಕಾಲ ಹೆಂಗಸರು ಪುನರಾಭಿವೃದ್ದಿ ಮಾಡದೆಯೆ ಬದುಕುತ್ತಾರೆ.’
`ಇತರೆ ಪ್ರಾಣಿಗಳಲ್ಲಿಲ್ಲದ ಈ ಕ್ರಿಯೆ ನಮ್ಮಲ್ಲೇಕಿದೆ?’
` ಎರಡು ಕಾರಣಗಳು. ಒಂದು. ನಮ್ಮ ಮೆದುಳಿನ ಗಾತ್ರ. ಮಾನವ ಸುತ್ತಲಿನ ಪ್ರಪಂಚದ ಬಗ್ಗೆ ಹೆಚ್ಚುಹೆಚ್ಚು ಜ್ಞಾನ ಸಂಪಾದಿಸಿ ತನ್ನ ಜ್ಞಾನಭಂಡಾರವನ್ನು, ಭಾಷೆ ಮುಂತಾದುವನ್ನು ಬೆಳೆಸಿಕೊಂಡಂತೆ, ಅವನ್ನು ಶೇಖರಿಸಿಡುವ ಮೆದುಳೂ ಸಹ ದೊಡ್ಡದಾಗುತ್ತಲೆ ಹೋಯಿತು. ಹಾಗಾಗಿ, ಇತರೆ ಪ್ರಾಣಿಗಳಲ್ಲಿ ಹುಟ್ಟುವ ಮಗುವಿನ ತಲೆಯ ಗಾತ್ರವು, ಜನ್ಮದ್ವಾರಕ್ಕಿಂತ ಚಿಕ್ಕದಾಗಿದ್ದರೆ, ಮಾನವರಲಿ ಮಕ್ಕಳ ತಲೆಯ ಗಾತ್ರ ಜನ್ಮದ್ವಾರದ ಗಾತ್ರದತ್ತ ಹಿಗ್ಗುತ್ತ ಹೋಗಿದೆ. ಇದರಿಂದಾಗಿ, ಮಕ್ಕಳ ಹೆರಿಗೆ ತಾಯಂದಿರಿಗೆ ಕಷ್ಟವೂ, ಅಪಾಯಕಾರಿಯೂ ಆಗಿದ್ದು, ಅವರು ಸಾಯುವ ಸಾಧ್ಯತೆಯೂ ಹೆಚ್ಚುತ್ತಿದೆ. ಜೊತೆಗೆ ವಯಸ್ಸಾದಂತೆ ಹೆಣ್ಣಿಗೆ ಇಂತಹ ದುರಂತಗಳನ್ನು ತಡೆದುಕೊಳ್ಳುವ ಶಕ್ತಿಯೂ ಕಡಿಮೆಯಾಗುತ್ತದೆ. ಹಾಗಾಗಿ ವಯಸ್ಸಾದ ಹೆಂಗಸರು ಅಂತಹ ತೊಂದರೆ ಎದುರಿಸಿ ಸಾಯುವ ಬದಲು, ಪುನರಾಭಿವೃದ್ದಿಯನ್ನೇ ನಿಲ್ಲಿಸುವುದು ಉತ್ತಮ ಎಂದೇ ಮುಟ್ಟು ನಿಲ್ಲುವುದು.
‘ಇನ್ನು ಎರಡನೆ ಕಾರಣ, ಮಕ್ಕಳನ್ನು ಸಾಕುವಲ್ಲಿ ಹೆಣ್ಣು ಮತ್ತು ಗಂಡಿನ ನಡುವೆ ಇರುವ ಅಸಮಾನತೆ. ತನ್ನ ಗರ್ಭದೊಳಗೆ ಒಂಬತ್ತು ತಿಂಗಳು ಹೊತ್ತು ಸಾಕುವ ಹೆಣ್ಣು, ಗಂಡಿಗಿಂತ ಹೆಚ್ಚಾಗಿ ತನ್ನ ಶಕ್ತಿ ಮತ್ತು ದೇಹವನ್ನು ಮಗುವಿಗಾಗಿ ವ್ಯಯಿಸುತ್ತಾಳೆ. ಆದರೆ ವಯಸ್ಸಾದಂತೆ ಆಕೆಯ ದೇಹಸ್ಥಿತಿ ಕ್ಷೀಣಗೊಳ್ಳುವುದರಿಂದ ಮಗುವನ್ನು ಸಂಪೂರ್ಣವಾಗಿ ಬೆಳೆಸುವ ಸಾಧ್ಯತೆಯೂ ಕ್ಷೀಣವಾಗುತ್ತದೆ. ಅಂತಹ ಅನಿಶ್ಚಿತತೆಯಲ್ಲಿ ಮಗುವನ್ನು ಬೆಳೆಸುವುದಕ್ಕಿಂತ ಪುನರಾಭಿವೃದ್ದಿಯನ್ನು ನಿಲ್ಲಿಸುವುದೇ ಸೂಕ್ತವಾಗುತ್ತದೆ.’ ಇದರಿಂದ ಪುಣ್ಯ ತೃಪ್ತಳಾದಂತೆ ಕಾಣಲಿಲ್ಲ. ಹಾಗಾಗಿ ಕೇಳಿದಳು:
‘ವಯಸ್ಸಾದಂತೆ ಹೆಣ್ಣು ಪುನರಾಭಿವೃದ್ದಿ ಮಾಡುವ ಸಾಧ್ಯತೆ ಕಡಿಮೆಯಾಗುವುದು ನಿಜವಾದರೂ ಆ ಸಾಧ್ಯತೆ ಸಂಪೂರ್ಣವಾಗಿ ಶೂನ್ಯವಲ್ಲ ಅಲ್ಲವೆ? ಕೆಲವು ಹೆಂಗಸರಾದರೂ, ಕೆಲವೊಮ್ಮೆಯಾದರೂ ಮಕ್ಕಳನ್ನು ಸಂಪೂರ್ಣವಾಗಿ ಬೆಳೆಸುವ ಸಾಧ್ಯತೆ ಇದೆಯಲ್ಲವೆ? ಆದ್ದರಿಂದ ಸಾಯುವ ಸಾಧ್ಯತೆಯನ್ನು ತಪ್ಪಿಸಲು ಪುನರಾಭಿವೃದ್ದಿಯನ್ನೇ ನಿಲ್ಲಿಸುವ ಬದಲು ಅದನ್ನು ಮುಂದುವರಿಸಿ ಎಷ್ಟು ಸಾಧ್ಯವೋ ಅಷ್ಟು ಲಾಭ  ಪಡೆಯಬಹುದಲ್ಲವೆ?’
‘ನಿಜವೆ. ಇದೇ ಫಲವನ್ನು ವಿಕಾಸವು ಮತ್ತೊಂದು ತಂತ್ರಗಾರಿಕೆಯಿಂದ ಸಾಕಾರಗೊಳಿಸಿದೆ. ವಯಸ್ಸಾದ ತಾಯಿ ಆ ಎಲ್ಲ ಅನಿಶ್ಚತೆಗಳ ಜೊತೆಗಿರುವ ಸವಾಲುಗಳನ್ನೂ ಎದುರಿಸಿ, ತಾನೆ ಪುನರಾಭಿವೃದ್ದಿ ಕಾರ್ಯದಲ್ಲಿ ತೊಡಗಿಕೊಳ್ಳುವುದಕ್ಕಿಂತ, ತನ್ನಲ್ಲಿರುವ ಅರೆಬರೆ ಶಕ್ತಿಯನ್ನು ತನ್ನ ಮೊಮ್ಮಕ್ಕಳನ್ನು ಬೆಳೆಸಲು ವ್ಯಯಿಸಿದರೆ? ತಾನೇ ಹೆರುವ ಬದಲು, ತನ್ನ ಮಕ್ಕಳು ಹೆರುವುದಕ್ಕೆ ಸಹಕರಿಸಿ, ಅವರ ಬಾಣಂತನದಲ್ಲಿ ಭಾಗಿಯಾಗಿ, ಅವರಿಗೆ ಬೇಕಿರುವ ಆಹಾರವನ್ನು ಹೆಕ್ಕಿತಂದು, ಮೊಮ್ಮಕ್ಕಳ ಆರೈಕೆಯಲ್ಲಿ ತಾನೂ ಭಾಗಿಯಾದರೆ? ಮಕ್ಕಳನ್ನು ಸಾಕುವಲ್ಲಿ ತಾನು ಗಳಿಸಿರುವ ಅನುಭವವನ್ನು ಮಗಳು ಅಥವ ಸೊಸೆಯೊಂದಿಗೆ ಹಂಚಿಕೊಂಡರೆ? ಈ ಎಲ್ಲದರಿಂದ ತನ್ನದೆ ಧಾತುಗಳನ್ನು ಹೊತ್ತ ತನ್ನ ಮೊಮ್ಮಕ್ಕಳು ಆರೋಗ್ಯವಾಗಿ ಬೆಳೆಯುತ್ತಾರೆ. ಅವರ ಮೂಲಕ ತನ್ನ ಧಾತುಗಳ ಪುನರಾಭಿವೃದ್ದಿಯ ಫಲವನ್ನು ಪಡೆಯಬಹುದು. ಹಾಗಾಗಿ ವಯಸ್ಸಾದ ಹೆಂಗಸರಲ್ಲಿ ಮುಟ್ಟು ನಿಲ್ಲುವುದು ಪುನರಾಭಿವೃದ್ದಿಗೆ ಮಂಗಳ ಹಾಡಿದಂತಲ್ಲ. ಬದಲಿಗೆ, ಮತ್ತೊಂದು ಪುನರಾಭಿವೃದ್ದಿಯ ಹಂತಕ್ಕೆ ಪ್ರವೇಶ ಪಡೆದಂತೆ. ಮುಟ್ಟು ನಿಲ್ಲುವ ಕ್ರಿಯೆ, ತಮ್ಮ ಅನುಭವವನ್ನು ಮುಂದಿನ ಜನಾಂಗಕ್ಕೆ ವರ್ಗಾಯಿಸಲು, ಅವರ ಮೂಲಕ ತನ್ನ ಧಾತುಗಳನ್ನೆ ಆರೋಗ್ಯಕರವಾಗಿ ಬೆಳೆಸಲು ಆ ಕರುಣಾಮಯಿ ಹೆಣ್ಣು ಕೈಗೊಂಡ ತ್ಯಾಗ ಕ್ರಿಯೆ ಎನ್ನಬಹುದು.’
`ಅದನ್ನು ತ್ಯಾಗ ಎನ್ನುವುದಕ್ಕಿಂತ ತನ್ನದೇ ವಂಶ ಬೆಳೆಸಲು ಆಕೆ ಅಳವಡಿಸಿಕೊಂಡಿರುವ, ತ್ಯಾಗದಂತೆ ತೋರುವ ಸ್ವಾರ್ಥ ಅನ್ನಬಹುದೆ?’ ಎಂದಳು ಪುಣ್ಯ. ನಾನು ನಸುನಗುತ್ತ ಒಪ್ಪಿ ತಲೆಯಾಡಿಸಿ,
`ಇಡೀ ವಿಕಾಸದ ಹಾದಿಯಲ್ಲಿ ಸ್ವಾರ್ಥವಲ್ಲದೆ ಶುದ್ದತ್ಯಾಗ ಎಂದೂ ವಿಕಾಸಗೊಂಡಿಲ್ಲ ಮಗಳೆ’ ಎಂದೆ.