ಒಡಲಾಳ : ಅಪೂರ್ವ ಶೋಭೆಯ ಕಥನ-

[ಡಾ. ಎಸ್.ಎಂ.ಮುತ್ತಯ್ಯ ಅವರು ತಮ್ಮ ವೈಯಕ್ತಿಕ ಬ್ಲಾಗ್ ಕಿಲಾರಿಸಂಸ್ಕೃತಿಯಲ್ಲಿ ದೇವನೂರ ಮಹಾದೇವ ಅವರ ಒಡಲಾಳ ನೀಳ್ಗತೆಯ ಕುರಿತು 18.7. 2012ರಂದು ಬರೆದ ವಿಮರ್ಶಾತ್ಮಕ ಬರಹ ನಮ್ಮ ಮರು ಓದಿಗಾಗಿ]
http://kilarisamskruthi.blogspot.com/2012/07/blog-post.html?m=1
            ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ ದಲಿತ ಬಂಡಾಯ ಸಾಹಿತ್ಯದ ಪ್ರಮುಖ ಬರಹಗಾರರಲ್ಲಿ ದೇವನೂರು ಒಬ್ಬರು. ತಮ್ಮ ಅಪಾರ ಜೀವನಾನುಭವದೊಂದಿಗೆ ಬರೆದ ದೇವನೂರು ಮಹದೇವ ಅವರು ತಮ್ಮ ಸಾಹಿತ್ಯ ಕೃತಿಗಳಲ್ಲಿ ದಲಿತರ ಬದುಕಿನ ಸಮರ್ಥವಾದ ಅನಾವರಣ ಮಾಡಿದವರು. ಇವರು ಕಥನ ಸಾಹಿತ್ಯವನ್ನು ನಂಬಿ ಮುಖ್ಯವಾದ ಮೂರು ಕೃತಿಗಳನ್ನು ಮಾತ್ರ ರಚಿಸಿದ್ದಾರೆ. ಅವುಗಳೆಂದರೆ ದ್ಯಾವನೂರು (ಕಥಾಸಂಕಲನ); ಒಡಲಾಳ (ಕಿರುಕಾದಂಬರಿ); ಕುಸುಮಬಾಲೆ (ಕಾದಂಬರಿ). ಈ ಮೂರು ಕೃತಿಗಳು ಅನುಕ್ರಮವಾಗಿ 53, 52, 77 ಪುಟಗಳಷ್ಟು ಮಾತ್ರವಾಗುತ್ತದೆ. ಈ ಬಗ್ಗೆ ಡಾ. ಹಾ.ಮಾ.ನಾಯಕರು ತಮ್ಮ ಅಂಕಣ ಬರಹವೊಂದರಲ್ಲಿ ಹೀಗೆ ಹೇಳಿದ್ದಾರೆ: ತರುಣ ಲೇಖಕರಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ನಿಮರ್ಿಸಿಕೊಂಡಿರುವ ದೇವನೂರು ಮಹದೇವ ಅವರು ಬರೆದಿರುವುದು ಬಹಳವಲ್ಲ. ಇವರಷ್ಟು ಸ್ವಲ್ಪವೇ ಬರೆದು, ಇಷ್ಟೊಂದು ಪ್ರಸಿದ್ಧಿ ಪಡೆದ ಇನ್ನೊಬ್ಬರನ್ನು ಕನ್ನಡದಲ್ಲಿ ನಾನು ಕಾಣೆ. ಈ ಮಾತು ದೇವನೂರು ಅವರ ಸಾಹಿತ್ಯ ಗಾತ್ರದಲ್ಲಿ ಕಿರಿದಾದರೂ ಪಾತ್ರದಲ್ಲಿ ಮಹತ್ವದ್ದು ಎಂಬುದನ್ನು ನೆನಪಿಸುತ್ತದೆ. ದಲಿತ ಬಂಡಾಯ ಸಾಹಿತ್ಯ ಚಳವಳಿಯಲ್ಲಿದ್ದ ಇತರೆ ಸಹ ಬರಹಗಾರರಿಗೆ ಸಿಗದಷ್ಟು ಮಾನ್ಯತೆ, ಪ್ರಸಿದ್ಧಿ ಇವರಿಗೇಕೆ ಸಿಕ್ಕಿತು? ಎಂದು ಪ್ರಶ್ನಿಸಿಕೊಂಡರೆ ಸಿಗುವ ಉತ್ತರ ಒಂದೇ: ಅದೆಂದರೆ ದೇವನೂರು ಅವರು ತಮ್ಮದೇ ವಿಶಿಷ್ಟವಾ ದೃಷ್ಟಿಯಲ್ಲಿ ದಲಿತ ಲೋಕವನ್ನು ಗಮನಿಸುವುದರಿಂದ ಹಿಡಿದು ಅದರ ಅಭಿವ್ಯಕ್ತಿಯವರೆಗೂ ಅದನ್ನು ಅನನ್ಯವಾಗಿಯೇ ಧ್ಯಾನಿಸುತ್ತಾರೆ. ಹಾಗಾಗಿಯೇ ಅಗಾಧ ಸಂಖ್ಯೆಯ ಓದುಗರು ಹಾಗೂ ಅಭಿಮಾನಿಗಳನ್ನು ಪಡೆದರು. ಇಂಥ ಜನಪ್ರಿಯತೆಗೆ ಸಾಕ್ಷಿಯೆಂಬಂತೆ ರಾಜ್ಯಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವದಂತಹ ಪ್ರತಿಷ್ಠತೆ ಪ್ರಶಸ್ತಿಗಳು ಬಂದಿವೆ. ಇವೆಲ್ಲವಕ್ಕೂ ಕಳಸವಿಟ್ಟಂತೆ 2011 ರಲ್ಲಿ ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿ ಕೂಡ ಬಂದಿದೆ. ಇವರ ಮೂರು ಕೃತಿಗಳಲ್ಲಿ ಕುಸುಮಬಾಲೆ ಕಾದಂಬರಿ ತನ್ನ ವಸ್ತು, ವಿಶೇಷವಾಗಿ ಅಭಿವ್ಯಕ್ತಿ ವಿಷಯದಲ್ಲಿ ಕನ್ನಡದ ಸಾಂಸ್ಕೃತಿಕ ಲೋಕದೊಳಗೆ ತೀವ್ರವಾದ ಟೀಕೆ ಮತ್ತು ಚರ್ಚೆಗಳಿಗೆ ಕಾರಣವಾಗಿದೆ. ಇನ್ನೂ ಒಡಲಾಳ ಹಾಗೂ ದ್ಯಾವನೂರು ಕೃತಿಗಳು ಎಲ್ಲಾ ರೀತಿಯ ಓದುಗರನ್ನು ತಮ್ಮೆಡೆಗೆ ಆಕರ್ಷಿಸಿವೆ. ಮಹದೇವ ಅವರು ಹೀಗೆ ಸಾಹಿತ್ಯ ಕೃತಿಗಳಿಂದ ಮಾತ್ರವೆ ಗಮನಾರ್ಹವೆನಿಸದೆ ತನ್ನ ಬದುಕಿನ ರೀತಿ-ನೀತಿಗಳ ವಿಷಯದಲ್ಲೂ ಅನನ್ಯವೆನಿಸಿದ್ದಾರೆ. ಅತೀ ಕೆಟ್ಟ ಬಡತನದಿಂದ ಬಂದ ಇವರು ಹಾಸ್ಟೆಲ್ ಸೌಲಭ್ಯಗಳ ಸಹಕಾರದೊಂದಿಗೆ ವಿದ್ಯಾಭ್ಯಾಸ ಆರಂಭಿಸಿ, ಓದು-ಬರಹದ ಕಡೆ ಆಸಕ್ತಿ ತೋರಿದವರು. ಗಾಂಧಿ-ಅಂಬೇಡ್ಕರ್-ಲೋಹಿಯಾ ಅವರಂಥ ಸಾಮಾಜವಾದಿಗಳ ಬರಹಗಳಿಂದ ಆಲೋಚನೆ ಹಾಗೂ ಬದುಕಿನ ಕ್ರಮಗಳನ್ನೇ ಬದಲಾಯಿಸಿಕೊಂಡರು. ಈ ಹಿನ್ನೆಲೆಯೊಳಗೆ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಮತ್ತು ಹೋರಾಟಗಳ ಕಡೆ ಆಸಕ್ತಿ ಬೆಳೆಸಿಕೊಂಡು ಅಂಥ ಕಾರ್ಯಗಳಲ್ಲಿ ಮಗ್ನರಾದರು. ಹೋರಾಟಕ್ಕೆ ಸ್ಪೂರ್ತಿ ಹಾಗೂ ಬೆನ್ನೆಲುಬಾಗಿದ್ದ ಮಾನವ,  ಸುದ್ದಿ ಸಂಗಾತಿ, ಪಂಚಮ ಮುಂತಾದ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಈ ಎಲ್ಲಾ ಅನುಭವಗಳೊಮದಿಗೆ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್.)ಯ ಸಂಸ್ಥಾಪಕರಲ್ಲಿ ಒಬ್ಬರಾದರು. ಇಂಥ ಸಾಮಾಜಿಕ ಚಟುವಟಿಕೆಗಳ ಪರಿಣಾಮವಾಗಿ ಅವರ ವೈಯುಕ್ತಿಕ ಬದುಕಿನಲ್ಲಿಯೂ ಗಮನಿಸಲೇಬೇಕಾದ ಎರಡು ಘಟನೆಗಳು ಜರಗಿವೆ. ಅವುಗಳಲ್ಲಿ ಒಂದು: ಭಾರತೀಯ ಹಿಂದೂ ಸಾಂಪ್ರದಾಯಿಕ ಸಮಾಜದಲ್ಲಿ ಬದುಕನ್ನೇ ಕಳೆದುಕೊಂಡಿದ್ದ ವಿದವೆಯೊಬ್ಬರನ್ನು ವಿವಾಹವಾಗಿದ್ದು. ಎರಡು: ಮೈಸೂರಿನ ಪ್ರತಿಷ್ಠಿತ ಭಾರತೀಯ ಭಾಷಾ ಸಂಸ್ಥಾನ (ಸಿ.ಐ.ಐ.ಎಲ್.)ದಲ್ಲಿ ಸಿಕ್ಕಿದ್ದ ಪ್ರಾಧ್ಯಾಪಕ ಹುದ್ದೆಯನ್ನು ತೊರೆದು ರೈತನಾದುದು. ಹೀಗೆ ಇಡೀ ಕರ್ನಾಟಕದ ದಲಿತರ ಬೌದ್ಧಿಕ ನಾಯಕನಾಗಿ ಬೆಳೆದು ನಿಂತ ದೇವನೂರು ಮಹದೇವ ಅವರಿಗೆ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಮಾನ್ಯತೆ ಮತ್ತು ಅವಕಾಶಗಳು ದೊರೆತವು. ಈ ಅವಕಾಶಗಳ ಗುಂಗಿನಲ್ಲಿ ದೇವನೂರು ಅಪ್ಪಟ ಸ್ವಾರ್ಥ ರಾಜಕಾರಣಿಯಂತೆ ವರ್ತಿಸಿದರು ಎಂಬಂಥಹ ಅಪವಾದಗಳೂ ಇವರ ಮೇಲಿವೆ. ಇವೆಲ್ಲ ಸಂಗತಿಗಳ ನಡುವೆ ಮತ್ತೆ ಮತ್ತೆ ಚರ್ಚೆಗೆ ಬಂದದ್ದು ಗಮನಿಸಲೇಬೇಕಾದ ಸಂಗತಿ. ಇಂಥ ರೋಚಕ ಬೆಳವಣಿಗೆಯನ್ನು ಗಮನಿಸಿದಂತಹ ಎಂತಹವರೂ ದೇವನೂರು ಅವರ ಸಾಹಿತ್ಯವನ್ನು ಓದುವ ಅಭಿಲಾಷೆ ವ್ಯಕ್ತಪಡಿಸುತ್ತಾರೆ. ಇಂಥ ಅಭಿಲಾಷೆಗಳ ಭಾಗವಾಗಿ ಪ್ರಸ್ತುತ ಲೇಖನದಲ್ಲಿ ಒಡಲಾಳ ಕಿರು ಕಾದಂಬರಿಯ ವಿವೇಚನೆಯನ್ನು ನಡೆಸಲಾಗಿದೆ.
         1978ರಲ್ಲಿ ಪ್ರಕಟವಾದ ದೇವನೂರು ಮಹದೇವ ಅವರ 52 ಪುಟಗಳ ಕಿರು ಕಾದಂಬರಿ ಒಡಲಾಳ. ದಲಿತ ಕುಟುಂಬದ ಕಥೆಯೊಂದರ ಮೂಲಕ ಇಡೀ ದಲಿತ ಲೋಕದ ವಾಸ್ತವವನ್ನು ನೈಜವಾಗಿ ದಾಖಲಿಸುತ್ತಲೇ ಅವರ ಬಿಡುಗಡೆಯ ಹಾದಿಗಳ ಬಗ್ಗೆ ಚಿಂತಿಸುವಂತೆ ಮಾಡುವ ಈ ಕೃತಿ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನಗಳಿಸಿದೆ. ಇಡೀ ಈ ಕಿರು ಕಥನವನ್ನು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಿ ಚರ್ಚಿಸಬಹುದಾಗಿದೆ. ಈ ಭಾಗಗಳ ವಿವರಗಳನ್ನು ನೋಡುವಾಗ ಸಾಕವ್ವನ ಕೌಟುಂಬಿಕ ಸ್ಥಿತಿ-ಗತಿ ಹಾಗೂ ಕುಟುಂಬದ ಸದಸ್ಯರ ವೈಯಕ್ತಿಕ ಪರಿಚಯವೂ ಕೃತಿಯ ಅರ್ಥ ಗ್ರಹಿಕೆಗೆ ಅನಿವಾರ್ಯವಾಗುತ್ತದೆ. ಹಾಗೆಯೇ ಈ ಎಲ್ಲಾ ವಿಷಯಗಳನ್ನು ದಾಖಲಿಸುವ ಲೇಖಕರು ತನ್ನ ಅಭಿವ್ಯಕ್ತಿಗೆ ತುಂಬಿರುವ ಅರ್ಥ ಮತ್ತು ಆಶಯಗಳನ್ನು ಗಮನಿಸಬೇಕಾಗುತ್ತದೆ. ಕೊನೆಯಲ್ಲಿ ಕೃತಿಯ ಮತ್ತೊಂದು ಅನನ್ಯ ಸಂಗತಿಯಾಗಿರುವ ಭಾಷೆಯ ಬಗೆಗೆ ವಿಚಾರ ಮಾಡಬೇಕಾಗುತ್ತದೆ. ಆದ್ದರಿಂದ ಮೇಲೆ ಉಲ್ಲೇಖಿಸಿರುವ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಕಾದಂಬರಿಯ ಹಲವಾರು ವಿಚಾರಗಳನ್ನು ವಿವರಿಸಬಹುದಾಗಿದೆ.

 

ಸಾಕವ್ವನ ಕೌಟುಂಬಿಕ ಸ್ಥಿತಿ-ಗತಿ

 

         ನಾಲ್ಕು ಕಂಬದ ತೊಟ್ಟಿ ಹಟ್ಟಿ ಅನ್ನೋದು ಸಾಕವ್ವನ ಹಟ್ಟಿ. ಇದರ ಯಜಮಾನಿ ಸಾಕವ್ವ. ಇವರ ಮನೆಯಲ್ಲಿ ಯಜಮಾನಿಯಾಗಿ ಸಾಕವ್ವ: ಕಾಳಣ್ಣ, ಸಣ್ಣಯ್ಯ, ಗುರುಸಿದ್ಧ ಎನ್ನುವ ಮೂರು ಜನ ಗಂಡುಮಕ್ಕಳು; ಗೌರಮ್ಮ, ಪುಟ್ಟಗೌರಿ ಎಂಬ ಇಬ್ಬರು ಹೆಣ್ಣು ಮಕ್ಕಳು: ಅಷ್ಟೇ ಅಲ್ಲದೆ ಕಾಳಣ್ಣನ ಹೆಂಡತಿ; ಸಣ್ಣಯ್ಯನ ಹೆಂಡತಿ ಚಲುವಮ್ಮ ಹಾಗೂ ಈಕೆಯ ಮಕ್ಕಳಾದ ದುಪ್ಪಟೀಕಮೀಷನರ್ ಮತ್ತು ಶಿವು. ಇಷ್ಟೊಂದು ಸದಸ್ಯರ ಈ ಕುಟುಂಬ ಹೆಂಚು ಹೊದಿಸಿದ ಒಂದು ಮನೆ; ಹುಲ್ಲು ಹೊದಿಸಿದ ಮತ್ತೊಂದು ಮನೆ. ಇವುಗಳ ಜೊತೆಗೆ ಒಂದು ನೆರಕೆಯಲ್ಲಿ ವಾಸಿಸುತ್ತಿದ್ದಾರೆ. ಈ ಕುಟುಂಬಕ್ಕಿರುವ ಆಸ್ತಿ 4 ಎಕರೆ ಜಮೀನು. ಒಂದಿಷ್ಟು ಕೋಳಿಗಳು. ಮನೆಯಲ್ಲಿ  ಆರ್ಥಿಕವಾಗಿ ಯಾವುದೇ ಭದ್ರತೆಯಿಲ್ಲ. ಕುಟುಂಬದ ಸದಸ್ಯರೆಲ್ಲರಿಗೆ ಉದ್ಯೋಗವೂ ಇಲ್ಲ. ಜಮೀನಿದ್ದರೂ ಮಳೆಗಳಿಲ್ಲದ ಕಾರಣ ಯಾವುದೇ ಬೆಳೆಗಳನ್ನು ಬೆಳೆಯಲಾಗುತ್ತಿಲ್ಲ. ಹಾಗಾಗಿ ಒಂದೊತ್ತಿನ ಕೂಳಿಗೂ ಒದ್ದಾಡುವಂತಹ ಸ್ಥಿತಿ. ಅಂದಿನ ಆಹಾರವನ್ನು ಅಂದೇ ಸಂಪಾದಿಸುವ ಒತ್ತಡ ಇಲ್ಲಿದೆ. ಮಂಡಕ್ಕಿ  ಕಾಪಿ ನೀರು ಈ ಕುಟುಂಬದ ಸಾಮಾನ್ಯ ಆಹಾರ. ಮನೆಯಲ್ಲಿ ಎಣ್ಣೆ ಕ್ಯಾನು, ಹಿಟ್ಟಿನ ಡಬ್ಬಿ, ಕಾಳಿನ ಚೀಲಗಳು ಇವೆಯಾದರೂ ಇವೆಲ್ಲವೂ ಖಾಲಿ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹೊಟ್ಟೆಗಿಲ್ಲದ ಈ ಕುಟುಂಬದ ಸದಸ್ಯರಲ್ಲಿ ಕೆಲವರು ಅನಿವಾರ್ಯವಾಗಿ ಕಳವು ಮಾಡುವಂತಹ ಒತ್ತಡಕ್ಕೆ ಒಳಗಾಗಿದ್ದಾರೆ. ಇನ್ನೂ ಕೆಲವರು ಇಂಥ ದುಸ್ಥಿತಿಯಿಂದ ದೂರ ಸರಿಯುವ ಪ್ರಯತ್ನದಲ್ಲಿದ್ದಾರೆ. ಆಧುನಿಕ ಕಾಲದ ಮಹತ್ವದ ಬೆಳವಣಿಗೆಗಳಿಂದಾಗಿ ಈ ಕುಟುಂಬದ ಪ್ರಾಚೀನ ದುಡಿಮೆಯ ಮಾರ್ಗಗಳು ಮೂಲೆಗುಂಪಾಗಿವೆ. ಇದಕ್ಕೆ ಗೋಡೆಯ ದೊಡ್ಡ ಮೊಳೇಲಿ ನೂಲೊ ರಾಟೆಯ ಕತ್ತಿಗೆ ಹಗ್ಗ ಬಿಗಿದು ನೇಣಾಕಿತ್ತು ಎಂಬ ಕಾದಂಬರಿಯ ಮಾತು ಸಮರ್ಥನೆಯನ್ನು ಒದಗಿಸುತ್ತದೆ. ಈ ಎಲ್ಲಾ ವಿವರಗಳು ಸಾಕವ್ವನ ಕುಟುಂಬ   ಆರ್ಥಿಕವಾಗದ  ದುಸ್ಥಿತಿಯನ್ನು ದರ್ಶಿಸುತ್ತವೆ ಕುಟುಂಬದ ಈ ಸ್ಥಿತಿಗೆ ಕಾಲದ ಮಹಿಮೆ ಹಾಗೂ ಆ ಸಮಾಜದಲ್ಲಿದ್ದ ಜಮೀನ್ದಾರಿ ಪದ್ಧತಿ ಮತ್ತು ಬಂಡವಾಳಶಾಹಿ ವ್ಯವಸ್ಥೆಗಳೇ ಕಾರಣ ಎಂಬುದನ್ನು ಮಾರ್ಮಿಕವಾಗಿ ಸೂಚಿಸಲಾಗಿದೆ.

 

ಸಾಕವ್ವನ ಕೋಳಿ ಕಳವು

          ಇಡೀ ಕಾದಂಬರಿಯ ಕೇಂದ್ರ ಸಮಸ್ಯೆಯೆ ಸಾಕವ್ವನ ಕೋಳಿ ಕಳವಿನ ಪ್ರಸಂಗ. ಕಾದಂಬರಿ ಶುರುವಾಗುವುದೇ ಈ ಘಟನೆಯಿಂದ. ಸಾಕವ್ವ ತನ್ನ ಮನೆಯಲ್ಲಿದ್ದ ಕೋಳಿಗಳಲ್ಲಿ ಒಂದು ಕೋಳಿಯನ್ನು ದೇವರಿಗೆಂದು ಬಿಟ್ಟಿದ್ದು, ಅದೇ ಕೋಳಿಯನ್ನು ಯಾರೋ ಕದ್ದೊಯ್ಯುತ್ತಾರೆ. ಇದು ಸಾಕವ್ವನ ಮನಸ್ಸಿನಲ್ಲಿ ಹಲವಾರು ಆತಂಕಗಳನ್ನು ಹುಟ್ಟು ಹಾಕುತ್ತದೆ. ಇದ್ದ ಆಸ್ತಿಯ ಭಾಗವಾಗಿದ್ದ ಕೋಳಿ ಕಳುವಾಯಿತಲ್ಲ ಎಂಬ ಸಂಕಟ. ದೇವರಿಗೆ ಬಿಟ್ಟ ಕೋಳಿಯಾದ್ದರಿಂದ ದೇವರ ಅವಕೃಫೆಯಾಗುವುದೆಂಬ ಭಯ. ಈ ಹಿನ್ನೆಲೆಯ ಒಳಗೆ ಸಾಕವ್ವ ಎರಡು ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಾಳೆ. ಅವುಗಳಲ್ಲಿ ನನ್ನ ಕೋಳಿ ಕದ್ದು ತಿಂದವರ ಮನೆ ಹಾಳಾಗಲಿ ಎಂಬುದು ಒಂದು. ಮತ್ತೊಂದು ದೇವರು ತನ್ನ ಪಾಲನ್ನು ತಾನು ರಕ್ಷಿಸಿಕೊಳ್ಳಲಾಗಲಿಲ್ಲ ಎಂಬ ದೇವರ ಅಸ್ತಿತ್ವವನ್ನು ಪ್ರಶ್ನಿಸುವಂಥ ಭಾವನೆ. ಅನಂತಮೂರ್ತಿ ಅವರು ತಮ್ಮದೊಂದು ಲೇಖನದಲ್ಲಿ ವಿವರಿಸಿರುವಂತೆ ಸಾಕವ್ವನ ಇಲ್ಲಿನ ನೋವು ಹುಂಜ ದೇವರದ್ದು ಎನ್ನುವುದಾಗಲಿ, ಬಾಳ ಬೆಲೆ ಬಾಳುವಂತಹದ್ದು ಎನ್ನುವುದಾಗಲಿ ಮುಖ್ಯವಾಗದೆ ಹುಂಜ ನನ್ನದು ಎನ್ನುವ ಹಕ್ಕುಸ್ವಾಮ್ಯ ಸೂಚಕ ಸಂಬಂಧಿಯಾದುದು.
           ಕಳೆದ ಹುಂಜದ ಬಗ್ಗೆ ಸಾಕವ್ವನನ್ನು ಬಿಟ್ಟರೆ ಕುಟುಂಬದ ಮತ್ಯಾರು ತಲೆಕೆಡಿಸಿಕೊಂಡವರಿಲ್ಲ. ಹುಂಜ ಕಳೆದ ದಿನದಿಂದಲೇ ಸಾಕವ್ವ ತನ್ನ ಮಗನೋ, ಮಗಳೋ ಕಳೆದುಕೊಂಡವಳಂತೆ ವತರ್ಿಸುತ್ತಾಳೆ. ಮೊದಲ ದಿನ ಬರಬಹುದು ಎಂಬ ಆಶಾ ಭಾವನೆ ಸುಳ್ಳಾದ ನಂತರ ಸಾಕವ್ವ ಹುಚ್ಚಳಂತೆ ಕೊ… ಕೊ… ಬಾ… ಬಾ… ಎಂದು ಕೂಗುತ್ತಾ ಊರ ತುಂಬಾ ತಿರುಗುತ್ತಾಳೆ. ಸಿಕ್ಕ ಸಿಕ್ಕವರ ಮೇಲೆ ಅನುಮಾನ ಪಡುತ್ತಾಳೆ. ವಿಶೇಷವಾಗಿ ಸವತಿ ಕೆಂಪಮ್ಮನ ಮೇಲೆ ಬಲವಾದ ಅನುಮಾನ ಪಟ್ಟು ಅವಳ ತಿಪ್ಪೆಯನ್ನು ಕೆದರಿ ನೋಡುತ್ತಾಳೆ. ಮೊಮ್ಮಗ ಶಿವುನನ್ನು ಜೊತೆಗೆ ಕರೆದುಕೊಂಡು ಊರಿನ ಮನೆ ಮನೆಯಲ್ಲಿ ಏನು ಸಾರು ಮಾಡಿದ್ದಾರೆ ಎಂಬುದನ್ನು ಪರೀಕ್ಷಿಸುತ್ತಾಳೆ. ಸದಾ ಹುಂಜದ ಧ್ಯಾನನದಲ್ಲೇ ಇರುವ ಸಾಕವ್ವ ಕಳೆದ ಹುಂಜನನ್ನು ಪಡೆಯುವ ಹಂಬಲದಲ್ಲಿದ್ದಾಳೆ. ಜೊತೆಗೆ ಈ ವಿಷಯದ ಬಗ್ಗೆ ಕುಟುಂಬದ ಯಾವ ಸದಸ್ಯರು ಗಮನ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾಳೆ. ಈ ಪ್ರಸಂಗವನ್ನು ಕೊನೆಗೊಳಿಸುವ ಕಾದಂಬರಿಯ ಕ್ರಮ ವಾಸ್ತವಸ್ಥಿತಿಗತಿಗೆ ಅನುಗುಣವಾಗಿದೆ. ಹುಂಜನನ್ನು ಹುಡುಕಲು ಮಾದರಿಗಾಗಿ ಸಾಕವ್ವನ ಮತ್ತೊಂದು ಕೋಳಿ ಪಡೆದು ಪೊಲೀಸರು ದೂಳೆಬ್ಬಿಸಿಕೊಂಡು ಜೀಪಲ್ಲಿ ತೆರಳುವ ದೃಶ್ಯ ಅತ್ಯಂತ ಧ್ವನಿಪೂರ್ಣವಾಗಿದೆ. ಒಂದು ಹುಂಜ ಕಳೆದುಕೊಂಡ ಸಾಕವ್ವ ಅದನ್ನು ಪಡೆಯುವುದಕ್ಕಾಗಿ ಮತ್ತೊಂದು ಅಂತಹದ್ದೇ ಹುಂಜವನ್ನು ಕಳೆದುಕೊಂಡು ಪಡುವ ಯಾತನೆ ಇಡೀ ದಲಿತ ಲೋಕದ ಅಸಹಾಯಕ ಸ್ಥಿತಿಯನ್ನು ಸೂಚಿಸುತ್ತದೆ.

 

ಸಾಹುಕಾರ್ ಎತ್ತಪ್ಪನ ಕಡ್ಲೆಕಾಯಿ ಮೂಟೆ ಕಳುವು

 

       ಕಾದಂಬರಿಯಲ್ಲಿ ಬರುವ ಮತ್ತೊಂದು ಕಳುವಿನ ಪ್ರಸಂಗ ಸಾಹುಕಾರ್ ಎತ್ತಪ್ಪನ ಕಡ್ಲೆಕಾಯಿ ಕಳವಿನ ಪ್ರಸಂಗ. ಬಂಡವಾಳಶಾಹಿ ಎತ್ತಪ್ಪ, ಸಾಕವ್ವನ ಕುಟುಂಬಕ್ಕೆ ಎಲ್ಲಾ ವಿಷಯಗಳಲ್ಲಿ ವಿರುದ್ಧ. ಬಡತನದ ಭಾಗವಾಗಿ ಸಾಕವ್ವನ ಕುಟುಂಬದ ಹಿರಿಮಗ ಕಾಳಣ್ಣ ಎತ್ತಪ್ಪನ ಮಿಲ್ಲಿನಿಂದ ಒಂದು ಕಡ್ಲೆಕಾಯಿ ಮೂಟೆಯನ್ನು ಹೊತ್ತು ತಂದು ಬೆಂಕಿ ಹಾಕಿ ಅದರ ಸುತ್ತ ತನ್ನ ಕುಟುಂಬದ ಸದಸ್ಯರೆಲ್ಲರನ್ನು ಕೂರಿಸಿಕೊಂಡು ತಿನ್ನುವ ಸಂದರ್ಭದಲ್ಲಿ ಅವರೆಲ್ಲರೂ ಸಾಹುಕಾರ್ ಎತ್ತಪ್ಪನ ಸ್ಥಿತಿಯ ಬಗ್ಗೆ ಮಾತನಾಡುತ್ತಾರೆ. ಇವರ ಮಾತುಗಳಿಂದಲೇ ತಿಳಿದು ಬರುವ ಎತ್ತಪ್ಪನ ಅಂತಸ್ತು ಹೀಗಿದೆ: ಎತ್ತಪ್ಪನ ದನದ ಹಟ್ಟಿ, ಅಲ್ಲಿರೋ ದನ ಹಾಗೂ ಎಮ್ಮೆಗಳು ಉನ್ನತ ಸ್ಥಿತಿಯಲ್ಲಿವೆ. ಅಂದ ಮೇಲೆ ಮನೆ-ಮನುಷ್ಯರ ಬಗ್ಗೆ ಹೇಳುವುದೇ ಬೇಡ. ಇವರ ಮನೆಯ ಮಗಳ ಮದುವೆ ಅಂಥ ಎಲ್ಲಾ ಸೂಚನೆಗಳನ್ನು ನೀಡುತ್ತದೆ. ಇಂತಹವರ ಸ್ವತ್ತು ಕಳುವಾದಾಗ ವ್ಯವಸ್ಥೆಯ ಭಾಗವಾದ ಪೊಲೀಸ್ ವ್ಯವಸ್ಥೆ ಸ್ಪಂಧಿಸುವ ರೀತಿ ಕಾನೂನು ಇದ್ದವರಿಗೊಂದು ಇಲ್ಲದವರಿಗೆ ಇನ್ನೊಂದು ಎಂಬ ನಾಣ್ನುಡಿಯನ್ನು ನೆನಪಿಸುತ್ತದೆ.
        ಈ ಸಂದರ್ಭದಲ್ಲಿ ಬೆಂಕಿಯ ಮುಂದೆ ಕುಳಿತು ಸಾಕವ್ವನ ಕುಟುಂಬದ ಸದಸ್ಯರು ಚರ್ಚಿಸುವ ವಿಷಯಗಳು ಅತ್ಯಂತ ಪ್ರಮುಖವಾಗಿವೆ. ಮುಖ್ಯವಾಗಿ ಸಾಹುಕರ್ ಎತ್ತಪ್ಪನ ಕುಟುಂಬದಂತೆ ಶ್ರೀಮಂತ ಸ್ಥಿತಿಗೆ ತಲುಪುವ ಕನಸು ಕಾಣುತ್ತಾರೆ. ಅಷ್ಟೆ ಅಲ್ಲ ಎತ್ತಪ್ಪನ ದನ-ಎಮ್ಮೆಗಳು ಆನೆಗಳಂತಿದ್ದು ಅವುಗಳಲ್ಲಿ ಒಂದು ಸತ್ತರೆ ಸಾಕು ನಮ್ಮ ಇಡೀ ಹಟ್ಟಿ ಸಂತೃಪ್ತವಾಗುತಿತ್ತು ಎಂಬ ತತ್ಕ್ಷಣದ ಆಸೆಯನ್ನು ವ್ಯಕ್ತಪಡಿಸುತ್ತಾರೆ. ಇಲ್ಲಿನ ಕದ್ದು ತಂದ ಕಡ್ಲೆಕಾಯಿಯಲ್ಲೇ ಸ್ವಲ್ಪ ಭಾಗವನ್ನು ಹಸಿದ ಇತರೆ ವ್ಯಕ್ತಿಗಳಿಗೂ ನೀಡುತ್ತಾರೆ. ಗುರುಸಿದ್ಧ ಅಸ್ಪೃಶ್ಯತೆಯ ವಿರುದ್ಧದ ತನ್ನ ಹೋರಾಟದ ವಿವರಗಳನ್ನು ನೀಡುವುದು ಕೂಡ ಇಲ್ಲಿಯೇ ಎಂಬುದನ್ನು ಗಮನಿಸಬೇಕು. ಹಾಗಾಗಿಯೇ ಕಾದಂಬರಿಯ ಈ ಸಂದರ್ಭ ಓದುಗರಲ್ಲಿ, ವಿಮರ್ಶಕರಲ್ಲಿ ಹಲವು ರೀತಿಯ ವಾಗ್ವಾದಗಳನ್ನು ಎಬ್ಬಿಸಿದೆ. ಮುಖ್ಯವಾದ ಅಂಥ ಒಂದೆರಡು ಅಭಿಪ್ರಾಯಗಳನ್ನು ಗಮನಿಸುವುದಾದರೆ,ಅನಂತಮೂರ್ತಿ  ಅವರು ಬೆಂಕಿ ಮುಂದೆ ಕುಟುಂಬದ ಎಲ್ಲಾ ಸದಸ್ಯರು ಕದ್ದು ತಂದ ಕಡ್ಲೆಕಾಯಿಯನ್ನು ತಿನ್ನುವ ಈ ಸಂದರ್ಭ ಯಜ್ಞ ಕಾರ್ಯದಂತೆ ಕಾಣುತ್ತದೆ ಎನ್ನುತ್ತಾರೆ. ಈ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿರುವ ಮ.ನ.ಜವರಯ್ಯ ಅವರು ಇಂಥ ಅತಿರೇಕದ ಹೋಲಿಕೆಗಳಿಗಿಂತ ವಾಸ್ತವ ನೆಲೆಯಲ್ಲಿ ನೋಡಬೇಕೆಂದು ಅಭಿಪ್ರಾಯ ಪಟ್ಟು ಅಂಥ ವಾಸ್ತವ ನೆಲೆಯಲ್ಲಿ ಮೂರು ರೀತಿಯ ವ್ಯಾಖ್ಯಾನಗಳನ್ನು ಮಾಡುತ್ತಾರೆ. ಅವುಗಳಲ್ಲಿ ಮೊದಲನೆಯದಾಗಿ ಉಳ್ಳವರ ಸಂವೃದ್ಧಿಗಾಗಿ ದುಡಿದು ತಾವು ಮಾತ್ರ ಉಪವಾಸ ಬೀಳಬೇಕೆಂಬ ಅವ್ಯಕ್ತ ಆಕ್ರೋಶ ಒಡಲ ಬಡಬಾಗ್ನಿಯಾಗಿ ಕಡ್ಲೆಕಾಯಿ ನಾಮಾವಶೇಷವಾಯಿತು. ಎರಡನೆಯದಾಗಿ, ಕಡಲೆಯ ಕಾಯಿಯ ಒಂದು ಸಿಪ್ಪೆಯೂ ಸಿಗದಿದ್ದುದು, ದುಡಿದ ಒಡಲಿಂದ ಎದ್ದ ಕಿಚ್ಚಿಗೆ ಉಳ್ಳವರ ಸಿರಿತನ, ಧರ್ಪ, ಅನ್ಯಾಯಗಳೆಲ್ಲವೂ ಕಡಲೆ ಕಾಯಿಯಂತೆ ಸುಟ್ಟು ಬೂದಿಯಾದವು. ಮೂರನೆಯದಾಗಿ, ಕಡ್ಲೆಕಾಯಿಯನ್ನು ಹಸಿದ ಒಡಲುಗಳೆಲ್ಲ ಸುತ್ತುವರೆದು ತಿನ್ನುವ ಚಿತ್ರದಿಂದ ಹಸಿವು ಮನೆ ಮಂದಿಯನ್ನೆಲ್ಲ ಕಿತ್ತು ತಿಂದಿತು ಅಥವಾ ಮನೆಮಂದಿಯೆಲ್ಲ ಸೇರಿ ಹಸಿವನ್ನು ಕಿತ್ತು-ಕಿತ್ತು ತಿಂದರು ಎಂಬ ಧ್ವಂದ್ವಾರ್ಥ ಇರಬಹುದು. ಹೀಗೆ ಹಲವಾರು ಅರ್ಥಗಳನ್ನು ಪ್ರಸ್ತುತ ಪ್ರಸಂಗದಿಂದ ಅರಿಯಬಹುದಾಗಿದೆ.

 

ಕಥನದ ಕೆಲವು ಪ್ರಮುಖ ಪಾತ್ರಗಳು ಮತ್ತು ಘಟನೆಗಳು

 

ಒಡಲಾಳ ಕಾದಂಬರಿಯಲ್ಲಿ ಬರುವ ಪಾತ್ರಗಳಲ್ಲಿ ವಿಶೇಷವಿದೆ. ಇಲ್ಲಿ ಬರುವ ಪಾತ್ರಗಳೆಂದರೆ: ಮನೆಯ ಯಜಮಾನಿ ಸಾಕವ್ವ, ಹಿರಿಮಗ ಕಾಳಣ್ಣ ಮತ್ತು ಆತನ ಮಡದಿ, ಕಿರಿಮಗ ಸಣ್ಣಯ್ಯ ಮತ್ತು ಆತನ ಹೆಂಡತಿ ಚಲುವಮ್ಮ ಹಾಗೂ ಇವರ ಮಕ್ಕಳು, ಮದುವೆಯಾದರೂ ಗಂಡನ ಬೇಜವ್ಬಾರಿ ಕಾರಣಕ್ಕೆ ತವರು ಮನೆ ಸೇರಿರುವ ಗೌರಮ್ಮ ಹಾಗೂ ಆಕೆಯ ಮಗ ಶಿವು, ಮತ್ತೊಬ್ಬ ದುಪ್ಟಿಕಮಿಷನರ್, ಮನೆಯ ಕಿರಿಮಗಳು ಪುಟ್ಟಗೌರಿ, ಕಿರಿಮಗ ಗುರುಸಿದ್ಧ. ಇವರಲ್ಲದೆ ಪೊಲೀಸ್ ರೇವಣ್ಣ, ಸಾಹುಕಾರ್ ಎತ್ತಪ್ಪ ಮೊದಲಾದವರು. ಇಷ್ಟು ಪಾತ್ರಗಳಲ್ಲಿ ನಮ್ಮ ಗಮನ ಸೆಳೆಯುವ ಪಾತ್ರಗಳಾಗಿ ಸಾಕವ್ವ, ಶಿವು, ಪುಟ್ಟಗೌರಿ, ಗುರುಸಿದ್ಧ ಅವರುಗಳು ಕಂಡುಬರುತ್ತಾರೆ.

 

ಸಾಕವ್ವ

 

ಅತ್ಯುತ್ತಮ ಪಾಲಕಿ-ಪೋಷಕಿ. ಈಕೆಯ ಸಿಟ್ಟು-ಸೆಡವು-ದ್ವೇಷಗಳೆಲ್ಲ ಕುಟುಂಬದ ಉದ್ಧಾರ ಸೂತ್ರಗಳು. ವೃದ್ಧಾಪ್ಯದಲ್ಲೂ ಛಲಗಾರ್ತಿ ಸೊಸೆ ಚಲುವಮ್ಮನ ಜೊತೆ ಆಸ್ತಿನೆಪದಲ್ಲಿ ಮಾಡಿದ ಜಗಳದಲ್ಲಿ, ಕಳೆದ ಹುಂಜಕ್ಕಾಗಿ ಪರದಾಡಿದ ಕ್ರಮದಲ್ಲಿ ಸವತಿ ಕೆಂಪಮ್ಮನ ಮೇಲಿನ ದ್ವೇಷದಲ್ಲಿ ಇವೇ ಮೊದಲಾದ ಪ್ರಸಂಗಗಳಲ್ಲಿ ಸಾಕವ್ವನ ಅಂತರಾಳ ಸ್ಪಷ್ಟವಾಗುತ್ತದೆ.

 

ಗುರುಸಿದ್ಧ

 

ಮನೆಯ ಹಕ್ಕುದಾರನಾದರೂ ಕುಟುಂಬಕ್ಕೆ ಅತಿಥಿ, ಗಾರೆ ಕಾಂಟ್ರ್ಯಾಕ್ಟು, ರೇಷ್ಮೆಗೂಡು ವ್ಯಾಪಾರ ವೃತ್ತಿಯನ್ನು ಮಾಡುತ್ತಿದ್ದಾನೆ. ಪಟ್ಟಣದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ಗುರುಸಿದ್ಧ ವ್ಯವಸಾಯದಂತಹ ಸಾಂಪ್ರದಾಯಿಕ ವೃತ್ತಿಗಳಿಂದ ನಿರ್ದಿಷ್ಟ ವರಮಾನವಿಲ್ಲವೆಂದು ತೀರ್ಮಾನಿಸಿದ್ದಾನೆ. ಕೈಗೆ ವಾಚು, ಓಡಾಡಲು ಸೈಕಲ್ ಹೊಂದಿರುವ ಈತ ಪಟ್ಟಣದ ಮೇಲ್ಜಾತಿಗೆ ಸೇರಿದ ಶಿವಪ್ಪನ ಹೋಟೆಲಿನಲ್ಲಿ ಸಮಾನ ಸತ್ಕಾರ ಪಡೆಯಲೆತ್ನಿಸುತ್ತಿದ್ದಾನೆ. ಪೇಟೆಯ ಸಂಪರ್ಕದ ಪರಿಣಾಮ ಬೆಲ್ಲದ ಕಾಪಿಗಿಂತ ಸಕ್ಕರೆ ಟೀಗೆ ಒಗ್ಗಿಹೋಗಿದ್ದಾನೆ. ಇಂಥ ಕೆಲವು ಕಾರಣಗಳಿಗಾಗಿಯೇ ಕುಟುಂಬದಿಂದ ದೂರ. ಇದೇನೆ ಇದ್ದರೂ ಮನೆಯವರಿಗೆ ಈತ ಹೀರೋ ಆಗಿರುವುದಂತೂ ಸತ್ಯ. ಸಾಕವ್ವನ ಮನೆಯನ್ನು ಕಡಲೆ ಕಾಯಿಗಾಗಿ ತಲಾಶ್ ಮಾಡುವ ಸಂದರ್ಭದಲ್ಲಿ ಈತನ ಕೆಂಗಣ್ಣು ಪೊಲೀಸರಲ್ಲಿ ನಡುಕ ಹುಟ್ಟಿಸುತ್ತದೆ. ಗುರುಸಿದ್ಧನ ಈ ಎಲ್ಲಾ ಚಟುವಟಿಕೆಗಳನ್ನು ಗಮನಿಸಿದರೆ ದಲಿತರ ಉದ್ದಾರಕ್ಕಾಗಿ ಉದಯಿಸಲಿದ್ದ ದಲಿತ ಸಂಘರ್ಷ ಸಮಿತಿಯ ತತ್ವಗಳ ಮೊಳಕೆಗಳು ಕಾಣಿಸುತ್ತವೆ.

 

ಪುಟ್ಟಗೌರಿ

 

ಈ ಮನೆಯ ಸಂಕಷ್ಟ ಕೇಳಲಾರದೆ ನಾನು ಎಂದು ಈ ಮನೆಯನ್ನು ಬಿಟ್ಟೇನು ಎಂಬ ಭಾವನೆಯೊಳಗೆ ಈಕೆ ಬದುಕುತ್ತಿದ್ದಾಳೆ. ಮನೆಯ ಗೋಡೆಯ ಮೇಲೆ ಬಣ್ಣದಲ್ಲಿ ನವಿಲು ಬಿಡಿಸುವ ಪುಟ್ಟಗೌರಿ ಶೂನ್ಯದಲ್ಲಿ ಏನನ್ನಾದರೂ ಸೃಷ್ಟಿಸುವ ಭಾಗವಾಗಿ ಕಂಡುಬರುತ್ತಾಳೆ. ಅಷ್ಟೇ ಅಲ್ಲ ಕಡಲೆಕಾಯಿ ತಿನ್ನಲು ಮಾರಿಗುಡಿಯಲ್ಲಿ ನಾಟಕದ ತಾಲೀಮು ಮಾಡುತ್ತಿದ್ದ ಗುರುಸಿದ್ಧನನ್ನು ಕರೆತರಲು ಶಿವೂನ ಜೊತೆಗೂಡಿ ಹೋಗಿ ಬಂದುದು ಇವಳ ಕ್ರಿಯಾ ಶೀಲತೆಯನ್ನು ಸೂಚಿಸುತ್ತದೆ.

 

ಶಿವು

 

ಗೌರಮ್ಮನ ಎರಡನೇ ಮಗನಾದ ಶಿವು ಶಾಲೆಗೆ ಹೋಗುತ್ತಿದ್ದಾನೆ. ಅಕ್ಷರಸ್ಥನಾಗಿ ಮುಂದಿನ ಕುಟುಂಬದ ಬೆಳಕಾಗುವ ಸೂಚನೆಯಿದೆ. ಅದಕ್ಕಾಗಿಯೇ ಸಾಕವ್ವ ತನ್ನ ಕಳೆದುಹೋದ ಹುಂಜವನ್ನು ಹುಡುಕಲು ಶಿವೂನ ಸಹಾಯ ಪಡೆಯುತ್ತಾಳೆ. ಹಾಗೆಯೇ ಅಡವಿಟ್ಟ ಪಾತ್ರೆಗಳ ವ್ಯವಹಾರದ ಲೆಕ್ಕ ಹೇಳುವುದಕ್ಕೂ ಶಿವೂ ಬೇಕಾಗಿದ್ದಾನೆ. ಪುಟ್ಟಗೌರಿಯು ಬಿಡಿಸುವ ನವಿಲುಗಳ ಸಂವೇದನೆಯನ್ನು ಅರ್ಥಮಾಡಿಕೊಳ್ಳಬಲ್ಲಂಥವನು ಆಗಿದ್ದಾನೆ. ಒಟ್ಟಾರೆ ದಲಿತ ಕುಟುಂಬಗಳಿಗೆ ಶಿಕ್ಷಣ ಬೆಳಕಾಗುತ್ತದೆ ಎಂಬ ಆಶಯ ಇಲ್ಲಿದೆ.

 

ಪುಟ್ಟಗೌರಿ ನವಿಲು ಚಿತ್ರ ಬಿಡಿಸುವ ಸಂದರ್ಭ

 

         ಪುಟ್ಟಗೌರಿ ತನ್ನ ಮನೆಯ ಗೋಡೆಯ ಮೇಲೆ ನವಿಲಿನ ಚಿತ್ರ ಬಿಡಿಸುತ್ತಾಳೆ. ಚಿತ್ರ ಬಿಡಿಸಿದ ಕ್ರಮ ಇಲ್ಲಿ ಗಮನಾರ್ಹ. ಪ್ರಸ್ತುತ ವ್ಯವಸ್ಥೆಯೊಳಗೆ ಯಾವುದೇ ಚಿತ್ರಬಿಡಿಸುವಾಗಲೂ ಮೇಲಿನಿಂದ ಕೆಳಕ್ಕೆ ಅಂದರೆ ತಲೆಯಿಂದ ಪಾದಕ್ಕೆ ಬರುವುದು ಸಂಪ್ರದಾಯ. ಈ ಕ್ರಮ ಸಮಾಜದ ಏಣಿ-ಶ್ರೇಣಿ ವ್ಯವಸ್ಥೆಯನ್ನು ಸಮರ್ಥಿಸುವ ಭಾಗವೆನ್ನಬಹುದು. ಒಂದು ವ್ಯವಸ್ಥೆಯ ಪ್ರಕಾರ ಶಿರ ಶ್ರೇಷ್ಟಾಂಗ ಆದ್ದರಿಂದಲೇ ಶಿರಕ್ಕೆ ಮೊದಲ ಸ್ಥಾನ. ಪಾದ ಕನಿಷ್ಟ ಹಾಗಾಗಿಯೇ ಪಾದಗಳಿಗೆ ಕೊನೆಯ ಸ್ಥಾನ. ಆದರೆ ಪುಟ್ಟಗೌರಿ ತನ್ನ ನವಿಲಿನ ಚಿತ್ರವನ್ನು ಪಾದದಿಂದಲೇ ಅರಂಭಿಸುತ್ತಾಳೆ. ವ್ಯವಸ್ಥೆಯ ತಿಳುವಳಿಕೆಯನ್ನು ಒಡೆದುಹಾಕಿ ಪಾದಕ್ಕೆ ಮೊದಲ ಸ್ಥಾನ ಕಲ್ಪಿಸುವ ಆಲೋಚನೆ ಇಲ್ಲಿ ಪ್ರಧಾನವಾಗಿರುವಂತಿದೆ. ಇಡೀ ಶರೀರವನ್ನು ಹೊತ್ತು ತಿರುಗುವ ಪಾದಗಳಿಗೆ ಮೊದಲು ಸ್ಥಾನ ನೀಡಬೇಕೆಂಬ ಇಲ್ಲಿನ ಆಶಯಕ್ಕೆ ಸಾಮಾಜಿಕ ಏಣಿ-ಶ್ರೇಣಿ ತತ್ವವನ್ನು ತಿರುಗ-ಮುರುಗಾಗಿಸುವ ಕಲ್ಪನೆಯಿದೆ. ಹಾಗೆಯೇ ಆ ಮನೆಯನ್ನು ಪೊಲೀಸರು ತಲಾಶ್ ಮಾಡುವ ಸಂದರ್ಭದಲ್ಲಿ ಕುಟುಂಬದ ಸದಸ್ಯರೆಲ್ಲರೂ ಹೆದರಿ ನಿಂತಿರುವಾಗ ಗೋಡೆಯ ಮೇಲಿನ ನವಿಲು ಚಿತ್ರಗಳು ನರ್ತಿಸುತ್ತವೆ. ಈ ನರ್ತನವನ್ನು ವಿಶೇಷವಾಗಿ ಶಿವು ಮಾತ್ರ ಗಮನಿಸುತ್ತಾನೆ. ಇಂಥ ಎಲ್ಲಾ ಸೂಕ್ಷ್ಮಗಳು ಲೇಖಕರ ಸಮಕಾಲೀನ ಸ್ಪಂದನೆಯನ್ನು ಸೂಚಿಸುತ್ತವೆ.

 

ಶಿವು ಮತ್ತು ಸಾಕವ್ವನ ನಡುವಿನ ಒಂದು ಚರ್ಚೆ

 

             ಸಾಕವ್ವ ತನ್ನ ಹುಂಜವನ್ನು ಕಳೆದ ಆ ಹುಂಜವನ್ನು ಹುಡುಕುವ ಹಲವು ಪ್ರಯತ್ನಗಳನ್ನು ನಡೆಸುತ್ತಾಳೆ. ಅಂಥ ಪ್ರಯತ್ನಗಳಲ್ಲಿ ಶಿವುವನ್ನು ಕರೆದುಕೊಂಡು ಈ ಹುಂಜವನ್ನು ಪತ್ತೆಹಚ್ಚಲು ಹೊರಡುತ್ತಾಳೆ. ಆ ಸಂದರ್ಭದಲ್ಲಿ ಶಿವು ಮತ್ತು ಸಾಕವ್ವನ ನಡುವೆ ಯಮಲೋಕ ಕೇಂದ್ರಿತವಾದ ಚರ್ಚೆಯೊಂದು ನಡೆಯುತ್ತದೆ. ಇವರಿಬ್ಬರೂ ಹುಂಜ ಹುಡುಕಲು ಹೊರಟಾಗ ಸಂಜೆಗತ್ತಲು. ಶಿವು ನನಗೆ ಹೆದರಿಕೆಯಾಗುತ್ತದೆ ನಾನು ಬರಲಾರೆ ಎನ್ನುತ್ತಾನೆ. ಅದಕ್ಕೆ ಸಾಕವ್ವ ನಾನಿದ್ದೀನಲ್ಲ ಏತಕ್ಕೆ ಭಯ ಯಮದೂತರು ಬಂದರು ನಾವು ಹೆದರಬೇಕಿಲ್ಲ ಎಂಬ ಧೈರ್ಯವನ್ನು ತುಂಬುತ್ತಾಳೆ. ಹಾಗೆಯೇ ಇವರಿಬ್ಬರ ಮುಂದುವರಿದ ಚರ್ಚೆಯಲ್ಲಿ ಸಾಕವ್ವ, ಯಮದೂತರು ಬಂದು ನಮ್ಮನ್ನು ಎಳೆದೊಯ್ಯುತ್ತೇವೆ ಎಂದರೆ ನನ್ಯಾಕ ಎಳ್ಕಂಡು ವೋದೀರಿ ಮೂದೇವ್ಗಳ ನನೇ ಬರ್ತೀನಿ ನಡೀ ಅಂತೀನಿ. ಅವರಿಗಿಂತ ಮೊದಲು ಯಮಧರ್ಮನ ಮುಂದೆ ನಾನೇ ನಿಲ್ತೀನಿ ಎಂದಾಗ ಶಿವು ಅದ್ಕೂನೂ ನಿಂಗ ಹೆದ್ರಕ ಆಗಲ್ವಾ ಎಂಬ ಮುಗ್ದ ಪ್ರಶ್ನೆಯನ್ನು ಕೇಳುತ್ತಾನೆ. ಆಗ ಸಾಕವ್ವ ಅಯ್ ನರಲೋಕದಲ್ಲಿ ನಾನು ಪಟ್ಟ ಕಷ್ಟಕ್ಕಿಂತ ಆ ಸೀಕ್ಸ ಎಲ್ಲಾದ್ದು ತಗಾ ಅವ್ನ ಜೊತಲೂ ಅದ್ನೆ ಅಂತೀನಿ ಕನಾ ನನ್ನ ಅಂಥ ಮಾತನ್ನು ಕೇಳಿದ ಯಮ ನನ್ನ ಧೈರ್ಯ ಮೆಚ್ಚಿ ಏನುವರ ಬೇಕು ಕೇಳು ಅಂಥಾನೆ ಆಗ ನಾನು ನೋಡು ಸ್ವಾಮಿ ನನ್ನ ಮೊಮ್ಗೂಸು ನರಲೋಕದಲಿ ರಾಜ್ಭಾರ ಮಾಡುವಂಥ ವರ ಕೊಡು ಅಷ್ಟೆ ಸಾಕು ಅಂತೀನಿ ಎನ್ನುತ್ತಾಳೆ. ಈ ಪ್ರಸಂಗದಲ್ಲಿ ಪ್ರಮುಖವಾದ ಎರಡು ಅಂಶಗಳನ್ನು ಗಮನಿಸಿಬೇಕು. ಒಂದು: ನರಲೋಕದ ಕಷ್ಟಗಳಿಗಿಂತ ಯಮ ಲೋಕದ ಕಷ್ಟಗಳು ಏನೇನೂ ಅಲ್ಲ ಎನ್ನುವ ಮಾತು ದಲಿತರ ಬದುಕು ನರಕಕ್ಕಿಂತ ಹೀನಾಯವಾದುದು ಎಂಬ ವಾಸ್ತವ ಸತ್ಯವನ್ನು ಮನವರಿಕೆ ಮಾಡುವ ಪ್ರಯತ್ನ  ಇಲ್ಲಿದೆ. ಎರಡು: ಯಮಧರ್ಮನಲ್ಲಿ ಸಾಕವ್ವ ನನ್ನ ಮೊಮ್ಮಗ ರಾಜ್ಯಭಾರ ಮಾಡಬೇಕೆಂಬ ಬೇಡಿಕೆ ನಿಜ ಜೀವನದಲ್ಲಿ ಬೇಕಾಗಿರುವ ಆದರೆ ಅಸಾಧ್ಯವೆನಿಸುವ ಈ ಕನಸು ದಲಿತರೆಲ್ಲರ ಸ್ವಾಭಾವಿಕ ಕನಸು ಎಂಬುದನ್ನು ತಿಳಿಯಬಹುದಾಗಿದೆ. ಲೇಖಕರು ಪ್ರಜ್ಞಾಪೂರ್ವಕವಾಗಿ ಇಂಥ ಸನ್ನಿವೇಶಗಳನ್ನು ಸೃಷ್ಟಿಸುವುದರ ಮೂಲಕ ದಲಿತರ ವಿಮೋಚನೆಯ ಹಾದಿಗಳನ್ನು ಹುಡುಕುತ್ತಿದ್ದಾರೆ ಎನ್ನಬಹುದು.

 

ಕಥನದ ಭಾಷೆ

 

        ಕನ್ನಡ ಸಾಹಿತ್ಯಕ್ಕೆ ದಲಿತ ಸಾಹಿತ್ಯವು ಒಂದು ಹೊಸ ಆಯಾಮವನ್ನೇ ತಂದುಕೊಟ್ಟಿರುವುದು ನಮೆಲ್ಲರಿಗೂ ತಿಳಿದ ವಿಷಯ. ದಲಿತ ಕುಟುಂಬಗಳ ದಿನ ನಿತ್ಯದ ವಿಷಯಗಳು ಹಾಗೂ ಪ್ರಾದೇಶಿಕ ಭಾಷೆ ಸಾಹಿತ್ಯದಲ್ಲಿ ಸ್ಥಾನವನ್ನು ಪಡೆದಿದ್ದು, ಸಾಹಿತ್ಯವು ಮುಖ್ಯ ವಾಹಿನಿಯ ವಸ್ತು ಮತ್ತು ಭಾಷೆಯ ಮೇಲೆ ಅವಲಂಬಿಸಬೇಕಾಗಿಲ್ಲ ಎಂಬ ಸ್ಪಷ್ಟ ಸಂದೇಶ ಇಲ್ಲಿದೆ. ದೇವನೂರು ಮಹದೇವ ಅವರ ಈ ಕಥನದಲ್ಲಿ ಮೈಸೂರಿನ ಪ್ರಾದೇಶಿಕ ಭಾಷೆಯ ಬಳಕೆಯಾಗಿದ್ದು ಸಂವಹನಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ. ದಿನ ನಿತ್ಯದ ಬಳಕೆಯ ಭಾಷೆ ಇದ್ದಾ ಹಾಗೆಯೇ ಬಳಕೆಗೊಂಡಿದೆ. ತಿಪ್ಗ ಬಂದಿದ್ದಿಕಾ ಕೂಸು ಅಷ್ಮಿಯಾ, ತಗಾ ಅದ್ಯಾರೊ ಒಬ್ಬಳು ಕುಟ್ಟೋ ಬತ್ತ ಬುಟ್ಟು ಹುಟ್ಟೋ ಶ್ಯಾಟ ನೋಡ್ಕತ್ತಿದ್ಲಂತೆ, ನಿಂಗೆ ಹೆದ್ರಕ ಆಗಲ್ವಾ, ಇಂಥ ಭಾಷೆಯ ಮೂಲಕ ದಲಿತರ ಸಮುದಾಯಗಳ ಬಳಕೆಯ ಭಾಷೆ ಕಂಡುಬರುತ್ತದೆ.
             ಒಟ್ಟಾರೆ ದೇವನೂರು ಮಹಾದೇವ ಅವರ ಒಡಲಾಳ ದಲಿತ ಲೋಕದ ಚಿತ್ರಣವನ್ನು ನೀಡುತ್ತಲೆ ಅವರ ಬದುಕಿನ ದುರಂತಗಳನ್ನು ಅನಾವರಣ ಮಾಡಿದ್ದಾರೆ. ದಲಿತರ ದುರಂತ ಸ್ಥಿತಿಯೊಳಗೆ ಇರುವ ಅವರ ಸೃಜನಶೀಲತೆಯ ಕಡೆಗೂ ಬೆರಳು ತೋರಿಸಿದ್ದಾರೆ.