‘ಒಡಲಾಳ’ದ ಮಹಾದೇವ- ಹಾ.ಮಾ.ನಾಯಕ
(ದೇವನೂರ ಮಹಾದೇವರ ‘ಒಡಲಾಳ’ ನೀಳ್ಗತೆಗೆ ಕಲ್ಕತ್ತಾದ ಭಾರತೀಯ ಭಾಷಾ ಪರಿಷತ್ತಿನಿಂದ ನೀಡುವ ಎಚ್.ಇ.ಜಿ. ಭಿಲ್ವಾರ ಪ್ರಶಸ್ತಿ ಲಭಿಸಿದ (1984) ಸಂದರ್ಭದಲ್ಲಿ, ಡಾ.ಹಾ.ಮಾ.ನಾಯಕರು ಪ್ರಜಾವಾಣಿ ದಿನಪತ್ರಿಕೆಯ ತಮ್ಮ ‘ಸಂಪ್ರತಿ’ ಅಂಕಣದಲ್ಲಿ ಮಾರ್ಚ್ 24, 1985 ಭಾನುವಾರದಂದು ಸಾಪ್ತಾಹಿಕಕ್ಕಾಗಿ ಬರೆದ ಬರಹ, ನಮ್ಮಮರು ಓದಿಗಾಗಿ… ಇದನ್ನು ಹುಡುಕಿ ನಮ್ಮ ಬನವಾಸಿಗೆ ನೀಡಿದ ಶ್ರೀಧರ್ ಆರ್ ಅವರಿಗೆ ಕೃತಜ್ಞತೆಗಳು.)
ವಾರಪತ್ರಿಕೆ ‘ಸುಧಾ’ ತನ್ನ ಈ ವರ್ಷದ ಯುಗಾದಿ ವಿಶೇಷ ಸಂಚಿಕೆಯಲ್ಲಿ ವಿಚಾರ ಸಂಕಿರಣ ಒಂದನ್ನು ಕೊಟ್ಟಿದೆ. ವಿಚಾರ ಸಂಕಿರಣದ ವಿಷಯ ‘ಮನವ ಕಾಡುತಿದೆ’. ಈಗ ನಿಮ್ಮನ್ನು ಕಾಡುತ್ತಿರುವುದೇನು ಎಂಬ ಪ್ರಶ್ನೆಗೆ ಉತ್ತರ ದೊರಕಿಸುವುದು ಅದರ ಉದ್ದೇಶ. ಅನೇಕರು ಪ್ರಶ್ನೆಗೆ ಉತ್ತರಿಸಿದ್ದಾರೆ; ತಕ್ಕಷ್ಟು ದೀರ್ಘವಾಗಿಯೂ ಉತ್ತರಿಸಿದ್ದಾರೆ; ವೈಚಾರಿಕ ಪ್ರಬಂಧವನ್ನೇ ಮಂಡಿಸಿದ್ದಾರೆ. ಅವರಲ್ಲಿ ದೇವನೂರು ಮಹಾದೇವ ಒಬ್ಬರು. ಪ್ರಶ್ನೆಗೆ ಅವರ ಉತ್ತರ ಇಷ್ಟು:
“ದಿನ ಸವೆಯುತ್ತಿದೆ. ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ ಮೇಲೆ ಭಾವನೆ ಮೀರಿದ ಇಥೋಪಿಯಾದ ಮಕ್ಕಳು ಬರುತ್ತವೆ. ಕ್ಷಾಮದ ಬಿಳಿಹಲ್ಲುಗಳು ಅವುಗಳನ್ನು ತಿನ್ನುತ್ತವೆ. ಅವುಗಳು ನನ್ನನ್ನು ತಿನ್ನುತ್ತಿವೆ…”
ಪ್ರಶ್ನೆಗೆ ನೇರವಾದ ಉತ್ತರ, ಸರಳವಾದ ಉತ್ತರ. ನಿಜಕ್ಕೂ ಹೃದಯವನ್ನು ಮಿಡಿಯುವ ಉತ್ತರ. ಯಾರನ್ನೂ ಕಾಡುವ ಸಮಸ್ಯೆಗಳು ವೈಚಾರಿಕ ಲಹರಿಗಳಲ್ಲ; ನಿರ್ದಿಷ್ಟವಾದ ಒಂದು ವಿಚಾರ. ನಾಲ್ಕು ವಾಕ್ಯಗಳಲ್ಲಿ ಮಹಾದೇವ ತಮ್ಮನ್ನು ಕಾಡುವುದೇನು ಎಂದಿದ್ದಾರೆ. ಕಾಡುವಿಕೆಯ ಒಂದು ಕ್ಷಣವನ್ನು ಹಿಡಿದಿರಿಸಿದ್ದಾರೆ. ಕ್ಷಾಮದ ಬಿಳಿಹಲ್ಲು—ಎಷ್ಟು ಸಂದರ್ಭೋಚಿತ, ಎಷ್ಟು ಅರ್ಥಗರ್ಭಿತ! ನಾಲ್ಕು ವಾಕ್ಯಗಳನ್ನು ಐದು ಸಾಲುಗಳಲ್ಲಿ ಬರೆದರೆ ಅದೊಂದು ಕವಿತೆ. ಎಳೆದಷ್ಟೂ ಹಿಗ್ಗಿಸಬಹುದಾದ ಸಂದರ್ಭ. ಗದ್ಯವಾದರೇನು? ಕಾವ್ಯದ ತೀವ್ರತೆ ಅದರಲ್ಲಿ ತುಂಬಿದೆ. ಕ್ಷಾಮದ ಬಿಳಿಹಲ್ಲುಗಳು ಮಕ್ಕಳನ್ನು ತಿನ್ನುವುದಕ್ಕೆ ಇಥಿಯೋಪಿಯಾಕ್ಕೆ ಹೋಗಬೇಕಾಗಿಲ್ಲ. ಆದರೆ ಅದು ಇಂದಿನ ಪ್ರಸ್ತುತತೆ.
ದೇವನೂರು ಮಹಾದೇವರ ನಾಲ್ಕು ವಾಕ್ಯಗಳ ಬಗೆಗೆ ನಾನು ಇಷ್ಟು ಬರೆಯಲು ಕಾರಣ ಇದು ಅವರ ಬರವಣಿಗೆಯ, ಕಲೆಗಾರಿಕೆಯ, ದೈನಂದಿನ ಮಾತುಕತೆಯ ಒಂದು ಸಹಜ ಮಾದರಿ. ತರುಣ ಲೇಖಕರಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ನಿರ್ಮಿಸಿಕೊಂಡಿರುವ ಅವರು ಬರೆದಿರುವುದು ಬಹಳವಲ್ಲ. ಇದುವರೆಗೆ ಪ್ರಕಟವಾಗಿರುವ ಅವರ ಕೃತಿಗಳು ಎರಡೇ ಎರಡು: ಒಂದು ಕತೆಗಳ ಸಂಕಲನ ‘ದ್ಯಾವನೂರು’ ಏಳು ಕತೆಗಳನ್ನೊಳಗೊಂಡ ಅರುವತ್ತು ಪುಟಗಳ ಪುಸ್ತಕ (1973). ಇನ್ನೊಂದು, ಐವತ್ತೆರಡು ಪುಟಗಳ ನೀಳ್ಗತೆ- ‘ಒಡಲಾಳ'(1981). ಮಹಾದೇವರಷ್ಟು ಸ್ವಲ್ಪವೇ ಸ್ವಲ್ಪ ಬರೆದು, ಅವರು ಪಡೆದಷ್ಟು ಪ್ರಸಿದ್ಧಿ ಪಡೆದ ಇನ್ನೊಬ್ಬರನ್ನು ಕನ್ನಡದಲ್ಲಿ ನಾನು ಕಾಣೆ. ಹರಿಜನ ಕುಟುಂಬದಿಂದ ಅವರಂಥ ಇನ್ನೊಬ್ಬ ಪ್ರತಿಭಾವಂತರು ಬಂದಿರುವುದೂ ನನಗೆ ತಿಳಿಯದು. ಬಂಡಾಯ, ದಲಿತ ಎಂಬ ಹಣೆಪಟ್ಟಿಯ ಪ್ರವೃತ್ತಿಗಳು ತೋರಿಸಿಕೊಳ್ಳುತ್ತಿದ್ದಾಗ, ಅದೆಲ್ಲ ಬರಿಯ ಘೋಷಣೆಯ ಸಾಹಿತ್ಯವಾಗಿದ್ದಾಗ ಮಹಾದೇವರ ಕಲೆ ಫಳಕ್ಕನೆ ಮಿಂಚಿತು. ನಿಜವಾದ ಕಲೆ ಎಂದರೆ ಹೀಗೆ ಎಂಬುದನ್ನು ತೋರಿಸಿತು. ಪ್ರವೃತ್ತಿಗಳಿಂದ ಮಹಾದೇವರಿಗೆ ಏನು ಉಪಯೋಗವಾಯಿತೊ ನನಗೆ ತಿಳಿಯದು. ಆದರೆ ಅವರಿಂದ ಪ್ರವೃತ್ತಿಗಳಿಗೆ ಬಲ ಬಂತು.
ಮಹಾದೇವ ಈಗ ಸುದ್ದಿಯಲ್ಲಿದ್ದಾರೆ. ಅವರ ‘ಒಡಲಾಳ’ ಕಲ್ಕತ್ತೆಯ ಭಾರತೀಯ ಭಾಷಾ ಪರಿಷತ್ತಿನ ಹನ್ನೊಂದು ಸಾವಿರ ರೂಪಾಯಿಗಳ ಬಹುಮಾನ ಪಡೆದಿದೆ. ಈ ಬಹುಮಾನ ಕನ್ನಡಕ್ಕೆ ಬರುತ್ತಿರುವುದು ಇದು ಎರಡನೆಯ ಸಲ. ಭಾರತೀಯ ಭಾಷಾ ಪರಿಷತ್ತು ಅನೇಕ ಬಹುಮಾನಗಳನ್ನು ನೀಡುವ ವ್ಯವಸ್ಥೆ ಮಾಡಿದೆ. ದಕ್ಷಿಣ ಭಾರತದ ಭಾಷೆಗಳಿಗೆ ಒಂದು; ಹಿಂದಿ ಭಾಷೆಗೆ ಇನ್ನೊಂದು; ಹಿಂದಿಯೇತರ ಉತ್ತರದ ಭಾಷೆಗಳಿಗೆ ಮತ್ತೊಂದು. ದಕ್ಷಿಣ ಭಾರತದ ಭಾಷೆಗಳಿಗೆ ನೀಡುವ ಬಹುಮಾನ ಎಚ್.ಇ.ಜಿ. ಭಿಲ್ವಾರ ಬಹುಮಾನ. ಇದನ್ನು ಪ್ರತಿವರ್ಷವೂ ದಕ್ಷಿಣ ಭಾರತದ ಒಂದೊಂದು ಭಾಷೆಗೆ ಕೊಡಲಾಗುತ್ತದೆ. ಮೊದಲ ವರ್ಷದ ಬಹುಮಾನ 1980ರಲ್ಲಿ ಕನ್ನಡಕ್ಕೆ ಮೀಸಲಾಗಿತ್ತು. ಆ ವರ್ಷ ಸಿದ್ದಯ್ಯ ಪುರಾಣಿಕರು ತಮ್ಮ ‘ವಚನೋದ್ಯಾನ’ ಗ್ರಂಥಕ್ಕೆ ಈ ಬಹುಮಾನ ಪಡೆದರು. ಮುಂದಿನ ಮೂರು ವರ್ಷ ದಕ್ಷಿಣದ ಇತರ ಮೂರು ಭಾಷೆಗಳಿಗೆ ಬಹುಮಾನ ಸಂದಿತು. 1984ರ ಬಹುಮಾನ ಮತ್ತೆ ಕನ್ನಡದ ಸರದಿ. ಈಗ ಅದು ದೇವನೂರು ಮಹಾದೇವ ಅವರ ‘ಒಡಲಾಳ’ಕ್ಕೆ ಬಂದಿದೆ. ಮೂಲ ಯೋಜನೆಯಂತೆ ಕನ್ನಡ ತನ್ನ ಮುಂದಿನ ಬಹುಮಾನಕ್ಕಾಗಿ ಮತ್ತೆ ಮೂರು ವರ್ಷ ಕಾಯಬೇಕು. ಆದರೆ ಪ್ರತಿವರ್ಷವೂ ಈ ಭಾಷೆಗಳು ಭಿಲ್ವಾರ ಬಹುಮಾನ ಪಡೆಯುವ ಸಾಧ್ಯತೆಗಳೂ ಇವೆ. ಭಾರತೀಯ ಭಾಷಾ ಪರಿಷತ್ತಿನ ಸೂತ್ರಧಾರರಾಗಿರುವ ಡಾ.ಪ್ರಭಾಕರ ಮಾಚ್ವೆ ಅವರು ಕೆಲಕಾಲದ ಹಿಂದೆ, ಈ ಬಹುಮಾನಗಳನ್ನು ಪ್ರತಿವರ್ಷವೂ ವಿತರಿಸುವ ಯೋಜನೆ ಇದೆ ಎಂದು ನನ್ನೊಂದಿಗೆ ಹೇಳಿದ್ದರು. ಅದು ಕಾರ್ಯಗತವಾದರೆ ನಮಗೆ ಮುಂದಿನ ವರ್ಷವೇ ಮತ್ತೊಂದು ಬಹುಮಾನ ಬಂದೀತು! ಈ ಬಹುಮಾನದ ಆಯ್ಕೆಯಲ್ಲಿ ಭಾಷಾ ಪರಿಷತ್ತು ಸರಿಸುಮಾರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಕ್ರಮವನ್ನೇ ಅನುಸರಿಸುತ್ತದೆ. ಕನ್ನಡದಿಂದ ಪುಸ್ತಕಗಳನ್ನು ಸೂಚಿಸುವವರು, ವಿಮರ್ಶಿಸುವವರು ಅಂತಿಮ ಶಿಫಾರಸ್ಸುಗಳಿಗೆ ಕಾರಣರಾಗಿರುತ್ತಾರೆ.
ದೇವನೂರು ಮಹಾದೇವ ಅವರ ಪುಸ್ತಕಗಳು ಎರಡಾದರೂ, ಒಟ್ಟು ಎಂಟು ಕತೆಗಳೆಂದೇ ಪರಿಗಣಿಸಬಹುದು. ‘ಒಡಲಾಳ’ ಮೊದಲು ಪ್ರಕಟವಾದದ್ದು ಪ್ರಜಾವಾಣಿ ದೀಪಾವಳಿ ವಿಶೇಷ ಸಂಚಿಕೆಯಲ್ಲಿ. ಹಿಂದಿನ ಏಳು ಕತೆಗಳಲ್ಲಿ ಕಾಣದ ತೀವ್ರ ಪರಿಣತಿಯೊಂದನ್ನು ‘ಒಡಲಾಳ’ದಲ್ಲಿ ಕಾಣಬಹುದಾದರೂ, ಒಟ್ಟಂದದಲ್ಲಿ ಎಲ್ಲ ಕತೆಗಳಿಗೂ ಸಮಾನವಾದ ಅಂಶಗಳು ಹಲವಿವೆ. ಕತೆ ಹೇಳುವ ವಿಧಿವಿಧಾನಗಳಲ್ಲಿ, ಬಳಸಿದ ಭಾಷೆಯಲ್ಲಿ, ರೂಪುಗೊಳ್ಳುವ ಜೀವನ ದರ್ಶನದಲ್ಲಿ ಮಾಗುತ್ತಿರುವ ಪ್ರಕ್ರಿಯೆಯೊಂದನ್ನುಳಿದರೆ ಬೇರೆ ವ್ಯತ್ಯಾಸಗಳಿಲ್ಲ. ಈ ಪ್ರಕ್ರಿಯೆಯಿಂದಾಗಿ ಅಂಶಗಳಲ್ಲಿ ಏರುಪೇರು ಸಂಭವಿಸಬಹುದು, ಬೆಳೆಯುವ ಕಲೆಯ ಹಾದಿಯೇ ಇದು.
ಮಹಾದೇವರನ್ನು ನಾವು ಒಬ್ಬ ಕಲೆಗಾರನನ್ನಾಗಿ ನೋಡಬೇಕೆ ಹೊರತು ದಲಿತ ಸಾಹಿತಿ ಎಂದಲ್ಲ. ದಲಿತ ಸಾಹಿತ್ಯದ ಸ್ವರೂಪ ನಿರೂಪಣೆಯೇ ಚರ್ಚಾಸ್ಪದವಾದದ್ದು. ದಲಿತರ ಸುಖದುಃಖಗಳನ್ನು ಸ್ವತಃ ಅನುಭವಿಸಿದ ದಲಿತರೇ ಬರೆಯಬೇಕು, ಬೇರೆಯವರಲ್ಲ ಎಂಬುದೊಂದು ಅಭಿಪ್ರಾಯವಿದೆ. ಅಂಥ ಸಾಹಿತ್ಯ ಮಾತ್ರವೇ ಅಥೆಂಟಿಕ್ ಆದದ್ದು ಎಂಬ ಕಲ್ಪನೆಯಿದೆ. ಇದು ಸೃಷ್ಟಿ ಪ್ರಕ್ರಿಯೆಗೆ ವಿರುದ್ಧವಾದ ನಿಲುವು ಎಂದು ತೋರುತ್ತದೆ. ಅನುಭವಿಸಿದ್ದನ್ನಷ್ಟೇ ಬರಿ ಎಂದರೆ ಯಾರಿಗೂ ಬರೆಯಲಾಗದಷ್ಟು ಸೀಮಿತಗಳು ಬರುತ್ತವೆ. ಅನುಭವಗಳನ್ನು ಮೀರಿಯೂ ಅನುಭವಿಯಂತೆ ಬರೆಯಬಲ್ಲವನು ಮಾತ್ರ ದೊಡ್ಡದನ್ನು ಸೃಷ್ಟಿಸಬಲ್ಲ. ಇದು ಸಾಧ್ಯವಾಗುವುದು ಲೇಖಕ ತನ್ನೊಡನೆ ತಾನೇ ಮಾತನಾಡಿಕೊಳ್ಳುವುದರಿಂದ. ಅವನು ಬೇರೆಯವರಿಗಾಗಿ ಮಾತನಾಡತೊಡಗಿದಾಗ ಕಲೆ ಕಳಚುತ್ತದೆ; ಮ್ಯಾನಿಫೆಸ್ಟೋ ಸಿದ್ದವಾಗುತ್ತದೆ. ದೇವನೂರರ ಕತೆಗಳಿಗೂ, ಸಿದ್ದಲಿಂಗಯ್ಯನವರ ಕವಿತೆಗಳಿಗೂ ಇರುವ ವ್ಯತ್ಯಾಸ ಇದರಲ್ಲಿದೆ. ಮಹಾದೇವರಲ್ಲಿ ವ್ಯವಸ್ಥೆಯ ಬಗ್ಗೆ ಕ್ರೋಧವಿದೆ; ಸುಧಾರಣೆಯ ಬಗ್ಗೆ ಅಸಮಾಧಾನವಿದೆ. ಆದರೆ ಅವನ್ನು ಅಭಿವ್ಯಕ್ತಿಸುವಲ್ಲಿ ತಣ್ಣ ಮನಸ್ಸಿದೆ. ಈ ಸಂಯಮದಿಂದಲೇ ಅವರು ತಮ್ಮತನವನ್ನು ಮೆರೆದಿದ್ದಾರೆ. ನಿಜವಾದ ಲೇಖಕನ ಒಡಲಾಳವೇ ಇದು.
ಆಡುನುಡಿ ಎನ್ನುವುದು ಈಚಿನ ವರ್ಷಗಳಲ್ಲಿ ಒಂದು ಫ್ಯಾಷನ್ ಆಗಿದೆ. ದೇವನೂರರಲ್ಲಿ ಅದು ತೀರ ಸಹಜವಾದ ಆಭರಣ ಎನ್ನಿಸುತ್ತದೆ. ‘ದ್ಯಾವನೂರು’ ಎಂಬ ಅವರ ಕತೆಗಳ ಸಂಕಲನದ ಉಪಶೀರ್ಷಿಕೆಯ ‘ದೇವನೂರ ಮಹಾದೇವ ಬರದ ಕಥೆಗಳು’ ಎಂದಿವೆ. ಇನ್ನು ಯಾರಾದರೂ ಆಗಿದ್ದರೆ ‘ಬರದ’ ಎಂಬುದನ್ನು ‘ಬರೆದ’ ಎಂದೇ ಬರೆಯುತ್ತಿದ್ದರು. ದೇವನೂರರ ಆಡುಭಾಷೆಯಲ್ಲಿರುವ ಸಮರೂಪತೆ ನನಗೆ ಅನೇಕ ಸಲ ಆಶ್ಚರ್ಯವನ್ನುಂಟುಮಾಡಿದೆ. ಈ ಆಡುಮಾತಿನಲ್ಲಿಯೆ ಅವರು ಒಂದು ಧ್ವನಿ ಪ್ರಪಂಚವನ್ನೆ ನಿರ್ಮಿಸಿಬಿಡುತ್ತಾರೆ. ಸಾಂಕೇತಿಕತೆಯನ್ನು ಎಷ್ಟು ಶಕ್ತಿಯುತವಾಗಿ ತರಬಲ್ಲರು ಎಂಬುದಕ್ಕೆ “ಗೋಡೆಯ ದೊಡ್ಡ ಮೊಳೇಲಿ ನೂಲೋ ರಾಟೆಯ ಕತ್ತಿಗೆ ಹಗ್ಗ ಬಿಗಿದು ನೇಣಾಕಿತ್ತು” ಎಂಬಂಥ ವರ್ಣನೆಗಳನ್ನು ನೋಡಬಹುದು.
ಒಂದು ಸಲ ಫೋರ್ಡ್ ಫೌಂಡೇಷನ್ನಿನ ಪ್ರತಿನಿಧಿಯೊಬ್ಬರು ನನ್ನ ಬಳಿ ಬಂದಿದ್ದಾಗ, ದೇವನೂರ ಮಹಾದೇವ ಅವರನ್ನು ನೋಡಲು ಅಪೇಕ್ಷಿಸಿದರು. ನಾನು ಅವರಿಗೆ ಹೇಳಿಕಳಿಸಿದೆ. ಸ್ವಲ್ಪ ತಡವಾಗಿ ಅವರು ಬರುವ ಮೊದಲೇ ಆ ಪ್ರತಿನಿಧಿ ಹೊರಟುಹೋಗಬೇಕಾಗಿ ಬಂತು. ಫೌಂಡೇಷನ್ನಿಗೆ- ಮಹಾದೇವರಿಗೆ ಬರವಣಿಗೆ ಕೆಲಸಕ್ಕಾಗಿ ಒಂದು ಫೆಲೋಷಿಪ್ ಕೊಡುವ ಆಲೋಚನೆ ಇತ್ತು. ಅದನ್ನು ಅವರಿಗೆ ಸೂಚಿಸಿದೆ. ಅದಕ್ಕೆ ಅವರು ಹೇಳಿದರು: “ಅವೆಲ್ಲ ನಮಗೇಕೆ ಸಾರ್? ನಮಗೆ ಅನ್ನಿಸಿದ್ದನ್ನು ನಾವು ಮಾಡೋಣ.” ಫೆಲೋಷಿಪ್ಪುಗಳಿಗಾಗಿಯೆ ಹೊಂಚುಹಾಕುತ್ತ ಕುಳಿತಿರುವ ಲೇಖಕರು ಅನೇಕರನ್ನು ನಾ ಬಲ್ಲೆ. ದೇವನೂರರ ಉತ್ತರ ನನಗೆ ಆಶ್ಚರ್ಯವನ್ನುಂಟುಮಾಡಲಿಲ್ಲ; ಒಂದು ಬಗೆಯ ಸಮಾಧಾನವನ್ನು ಕೊಟ್ಟಿತು.
ಮೂರು ಹೊತ್ತೂ ನೂರು ವಿಚಾರಗಳನ್ನು ತಲೆತುಂಬಾ ಹೊತ್ತುಕೊಂಡಿರುವ ಮಹಾದೇವ ಲೇಖಕರಾಗಿ ಇನ್ನೂ ಎತ್ತರಕ್ಕೆ ಬೆಳೆಯಬೇಕು. ಇದನ್ನು ಅವರು ಮರೆಯಬಾರದು.
ಮಾರ್ಚ್ 24, 1985