ಒಡಕಿನಲ್ಲಿ ಲಾಭ ಹುಡುಕುವ ಚಳವಳಿಗಳು-ಪಿ. ಓಂಕಾರ್

 ಹೈದರಾಬಾದ್ ವಿವಿ ವಿದ್ಯಾರ್ಥಿ ವೇಮುಲ ರೋಹಿತ್ ,‘ವಿಜ್ಞಾನ ಲೇಖಕ ಕಾರ್ಲ್ ಸಗಾನಿಯಂತೆ ಬರಹಗಾರನಾಗಬೇಕೆಂದಿದ್ದೆ.ಆದರೆ, ಈ ಪತ್ರದ ಹೊರತು ಏನನ್ನೂ ಬರೆಯಲಾಗಲಿಲ್ಲ. ಪ್ರಕೃತಿಯಿಂದ ಮನುಷ್ಯ ದೂರಾಗಿರುವುದನ್ನು ಅರಿಯದೆ ಮನುಷ್ಯನನ್ನು,ಪ್ರಕೃತಿ,ವಿಜ್ಞಾನ,ನಕ್ಷತ್ರಗಳನ್ನು ಪ್ರೀತಿಸಿದೆ.ನೋವುಣ್ಣದೆ ಪ್ರೀತಿಸುವುದು ನಿಜಕ್ಕೂ ಕಷ್ಟ’ ಎಂದು ಸಾವಿಗೆ ಮುನ್ನ ಬರೆದಿಟ್ಟಿದ್ದ. ‘ರೈತ ಸಂಘಕ್ಕೆ,ರೈತ ಮಿತ್ರರಿಗೆ ಕಡೆಯ ವಂದನೆ. ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ,ರೈತರ ಬದುಕಿಗೆ ಇದುವರೆಗೂ ಆಶಾಕಿರಣವಾಗಿದ್ದಿರಿ. ದುರಾದೃಷ್ಟವಶಾತ್ ಹೋರಾಟದ ಧ್ವನಿ ಕುಗ್ಗಿರುವುದು ರೈತರನ್ನು ನಿರಾಶರನ್ನಾಗಿಸಿದೆ. ಹೀಗಾಗಲು ಬಿಡಬೇಡಿ. ಅನ್ಯಾಯದ ವಿರುದ್ಧ ಹೋರಾಡಿ;ಪುನಃ ಆತ್ಮಶಕ್ತಿ ತುಂಬುತ್ತೀರೆಂದು ನಂಬುವೆ ’-ಇದು ಸಾಲಬಾಧೆಯ ಕಾರಣಕ್ಕೆ ಏಳು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾದ ಶ್ರೀರಂಗಪಟ್ಟಣ ತಾಲೂಕು ಚೆನ್ನೇನಹಳ್ಳಿಯ ರೈತ ಸಿ.ರಾಜೇಂದ್ರ ಬರೆದಿಟ್ಟಿದ್ದ ಸಾವಿನ ಟಿಪ್ಪಣಿ.
ಮತ್ತೊಂದು ವಿದ್ಯಮಾನ;ಮೈಸೂರಿನಲ್ಲಿ ನಡೆದ ದಲಿತ ಸಾಹಿತ್ಯ-ಚಳವಳಿಗೆ ಸಂಬಂಸಿದ ವಿಚಾರ ಸಂಕಿರಣದಲ್ಲಿ ಹಲವು ಹಿರಿಯರು ಕಿರಿಯರಿಂದ ಎದುರಿಸಿದ ತಕರಾರುಗಳು ಹೀಗಿದ್ದವು:‘ಮೀಸಲಾತಿ ಲ ಉಂಡವರು ಅದರ ಲಾಭವನ್ನು ತಳಮಟ್ಟದ ನೊಂದ ಜನರಿಗೆ ವರ್ಗಾಯಿಸುತ್ತಿಲ್ಲ;ನಿಮ್ಮ ನಡೆ-ನುಡಿಯಲ್ಲಿ ಸಾಮ್ಯತೆ ಇಲ್ಲ;ಅಂಬೇಡ್ಕರ್ ಸಾರಿದ ತತ್ತ್ವ ಸಿದ್ಧಾಂತಕ್ಕೆ ಬದ್ಧರಾಗಿಲ್ಲ; ಚಳವಳಿಯನ್ನು ಸಮುದಾಯದ ಕಲ್ಯಾಣಕ್ಕೆ ದುಡಿಸಿಕೊಳ್ಳದೆ ಸ್ವಲಾಭಕ್ಕೆ ಬಳಸಿಕೊಂಡಿದ್ದೀರಿ’. ಫುಲೆ,ಅಂಬೇಡ್ಕರರನ್ನು ಓದಿಕೊಂಡಿದ್ದ;ದಲಿತ ಚಳವಳಿಯ ನೆಲೆ-ಹಿನ್ನೆಲೆ,ಈಗ ಒದಗಿರುವ ಗತಿಯನ್ನು ಬಲ್ಲವರಾಗಿದ್ದ ಈ ಹುಡುಗರು,‘ಹಿರಿಯರಲ್ಲಿ ಹಿಪಾಕ್ರಸಿ ತುಂಬಿದೆ’ಎಂದೇ ಸಿಟ್ಟು ನೆತ್ತಿಗೇರಿಸಿಕೊಂಡಿದ್ದರು.
ಎಂಬತ್ತರ ದಶಕದಲ್ಲಿ ರೈತ-ದಲಿತ ಸಮುದಾಯದ ಬದುಕಿಗೆ ಆತ್ಮಬಲವನ್ನು ತುಂಬಿದ; ಇತಿಮಿತಿಗಳ ಮಧ್ಯೆಯೂ ಸೈದ್ಧಾಂತಿಕ ಬದ್ಧತೆ ಮೆರೆದು ಶಕ್ತಿ ರಾಜಕಾರಣಕ್ಕೆ ಸವಾಲಾಗಿದ್ದ ಎರಡು ಚಳವಳಿಗಳ ಸದ್ಯದ ಸ್ಥಿತಿಗೆ ಮೇಲಿನ ಮೂರು ಘಟನೆಗಳು ನಿದರ್ಶನ. ಮೇಲ್ನೋಟಕ್ಕೆ ಅತಾರ್ಕಿಕ ಎನ್ನಿಸಿದರೂ;ಅನ್ನದಾತ ರೈತರು,ವೇಮುಲನಂತ ಪ್ರತಿಭಾವಂತರ ಅನ್ಯಾಯದ ಸಾವಿನ ಹೊಣೆಯನ್ನು ಈ ಹೊಣೆಗೇಡಿ ಸಂಘಟನೆಗಳೂ ಹೊರಬೇಕೆನ್ನುವುದನ್ನು ಧ್ವನಿಸುವಂತಿವೆ.
*
ರೈತರ ಒಡಲ ಸಿಟ್ಟು ರಟ್ಟೆಗೆ ಬಂದ ಕಾರಣಕ್ಕೆ ‘ನರಗುಂದ ಬಂಡಾಯ’ದ ರೂಪದಲ್ಲಿ ಚಿಗುರೊಡೆದ ರೈತ ಹೋರಾಟ,ಕರ್ನಾಟಕ ರಾಜ್ಯರೈತ ಸಂಘದ ಸ್ವರೂಪ ಪಡೆಯಿತು.ಸಮಾಜವಾದಿ ಸಿದ್ಧಾಂತವನ್ನು ಒಳ ಉಸಿರಾಗಿಸಿಕೊಂಡ ಚಳವಳಿ ಸ್ಥಳೀಯ ಶೋಷಕರ ವಿರುದ್ಧ ಮಾತ್ರವಲ್ಲ ಬಹುರಾಷ್ಟ್ರೀಯ ಕಂಪನಿಗಳ ಷಡ್ಯಂತ್ರ,ಕಲಾಂತರಿ ತಳಿ,ಮಾರಕ ಜಾಗತಿಕ ಒಪ್ಪಂದಗಳ ವಿರುದ್ಧವೂ ಧ್ವನಿ ಎತ್ತಿ ರೈತರ ಆತ್ಮಗೌರವವನ್ನು ಎತ್ತಿ ಹಿಡಿಯಿತು.ಮರುಜಪ್ತಿ,ಲಂಚಕೋರರಿಗೆ
ಕಪಾಳಮೋಕ್ಷ, ಬಾರುಕೋಲು ಚಳವಳಿ,ಬಂಡಿಯಾತ್ರೆಯಂತ ವಿಭಿನ್ನ ಹೋರಾಟಗಳು ನಡೆದದ್ದು; ಒಂದು ಕರೆ ಕೊಟ್ಟರೆ ಸಾವಿರಾರು ರೈತರು ರೊಟ್ಟಿ ಬುತ್ತಿ ಕಟ್ಟಿಕೊಂಡು ಬಂದು ಗಟ್ಟಿ ಧ್ವನಿ ಮೊಳಗಿಸುತ್ತಿದ್ದುದು;ಹೋರಾಟವನ್ನು ಶಾಸನಸಭೆಗೂ ವಿಸ್ತರಿಸಲೆಂದು ಚುನಾವಣೆಗೆ ಸ್ಪರ್ಧಿಸಿದ್ದು; ಗೆದ್ದದ್ದು; ಸೋತಿದ್ದು;ಪ್ರತಿಷ್ಠೆ ಮತ್ತು ಶಕ್ತಿರಾಜಕಾರಣದ ದಾಸ್ಯಕ್ಕೆ ಬಿದ್ದು ಚದುರಿ ಛಿದ್ರವಾಗಿದ್ದು ಎಲ್ಲವೂ ಇತಿಹಾಸ. ರೈತರಲ್ಲಿ ಸ್ವಾಭಿಮಾನದ ಕೆಚ್ಚು ತುಂಬಿದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ವಿಘಟನೆ ಸಂದರ್ಭ ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದರು;‘ಹೌದು ನಾನು ಹಠಮಾರಿ. ಚಳವಳಿಗಾರನಲ್ಲಿರಬೇಕಾದ ಅತ್ಯಂತ ಮುಖ್ಯಗುಣ ಹಠ. ಚಟ ಅಲ್ಲ.ಚಳವಳಿಯಿಂದ ಚಟವಾದಿಗಳು ಆಚೆ ಹೋಗಿದ್ದಾರೆ. ಅವರು ನನ್ನನ್ನು ಹಠವಾದಿ;ಸರ್ವಾಧಿಕಾರಿ ಅಂತಾರೆ. ಹೌದು ಶಿಸ್ತು, ಚಾರಿತ್ರ್ಯದ ವಿಷಯದಲ್ಲಿ ನಾನು ಸರ್ವಾಧಿಕಾರಿ’. ಚಳವಳಿ ಹಲವು ಹೋಳುಗಳಾಗಿ,ರೈತರ ಸ್ವಾಭಿಮಾನದ ಸಂಖೇತವಾಗಿದ್ದ ಹಸಿರು ಶಾಲು ಎಲ್ಲೆಲ್ಲೋ; ಏನೇನಕ್ಕೋ ಹಾರುತ್ತಿರುವ ಈ ಹೊತ್ತಿನಲ್ಲಿ ಎಂಡಿಎನ್ ಕಾಡುತ್ತಾರೆ. ಎಂಡಿಎನ್ ಚಿಂತನಾ ಶಾಲೆಯಲ್ಲೇ ಹೋರಾಟದ ಪಟ್ಟುಗಳನ್ನು ಕಲಿತವರು ಚಳವಳಿಯ ಸಿದ್ಧಾಂತ;ಬದ್ಧತೆ;ಮೌಲ್ಯಗಳನ್ನು ಗಾಳಿಗೆ ತೂರಿ ಗೆಲುವೇ ಅಂತಿಮ ಸತ್ಯಎಂಬ ಶಕ್ತಿ ರಾಜಕಾರಣದ ‘ಚಟ’ಕ್ಕೆ ಬಲಿಬಿದ್ದು ಏನೆಲ್ಲವನ್ನೂ ಮಾಡುತ್ತಿದ್ದಾರೆ.ಇಂಥವರು ಆಗಾಗ ಅನ್ನದಾತರ ಹೆಸರಿನಲ್ಲಿ ಹಸಿರು ಶಾಲನ್ನು ಝಳಪಿಸಿ ‘ಹೋರಾಟ ವೃತ್ತಿ’ಯನ್ನು ನವೀಕರಿಸಿಕೊಳ್ಳುವರು.
ನಿಜ, ರೈತರ ಆತ್ಮಹತ್ಯೆಗೆ ಸರಕಾರದ ನೀತಿ ನಿರೂಪಣೆಗಳೇ ನೇರ ಕಾರಣ. ಜೊತೆಗೆ,ರೈತರ ಪಾಲಿನ ಮಾರಕಗಳೆಲ್ಲವೂ ತಾರಕ ಸ್ಥಿತಿ ತಲುಪಿರುವ ಹೊತ್ತಿನಲ್ಲಿ ಗಂಟಲೆತ್ತರಿಸಿ ಪ್ರಶ್ನಿಸುವ;ಹಠ ಹೋರಾಟ ನಡೆಸಿ ರೈತ ಶಕ್ತಿಯನ್ನು ಗೆಲ್ಲಿಸಿ,ಆತ್ಮವಿಶ್ವಾಸ ತುಂಬುವ ಚಳವಳಿಯ ನಿಯತ್ತು ಮರೆತು ಸಾಂಕೇತಿಕ ಪ್ರತಿಭಟನೆ,ರಸ್ತೆ ತಡೆ,ವರ್ಣರಂಜಿತ ಹೇಳಿಕೆಗೆ ಸೀಮಿತ ಮುಂದಾಳುಗಳೂ ರೈತರ ಸಾವಿನ ಹೊಣೆ ಹೊರಬೇಕಲ್ಲವೇ? ಸಂಘಟನೆಯಲ್ಲಿ ಸಕ್ರೀಯವಾಗಿದ್ದ ಪದವೀಧರ ರೈತ ರಾಜೇಂದ್ರರ ಪತ್ರದ ಒಳದನಿ ಕೂಡ ಇದನ್ನೇ ಸಾರುತ್ತದೆ.
*
ಈ ಎಲ್ಲಾ ವಿಷಯದಲ್ಲೂ ರೈತ ಸಂಘದ ಹಿರಿಯಣ್ಣನಂತಿದೆ ದಲಿತ ಸಂಘರ್ಷ ಸಮಿತಿ. ‘ಬೂಸಾ ಚಳವಳಿ’ಮೂಲಕ ಹುಟ್ಟಿದ ಹೋರಾಟದ ಕಿಡಿ ನಾನಾ ರೂಪ ಪಡೆದು, ಕರ್ನಾಟಕ ದಲಿತ ಸಂಘರ್ಷ ಸಮಿತಿಯಾಗಿದ್ದು;ಶೋಷಿತ ಸಮುದಾಯದ ಸಾಮಾಜಿಕ,ಶೈಕ್ಷಣಿಕ,ಆರ್ಥಿಕ ಏಳಿಗೆ ದಿಸೆಯಲ್ಲಿ ಅರಿವಿನ ಬೆಳಕು ವಿಸ್ತರಿಸಿದ್ದು;ಬೆತ್ತಲೆ ಸೇವೆ,ಅಸ್ಪಶ್ಯತೆ ಮುಂತಾದ ಸಾಮಾಜಿಕ ಅನಿಷ್ಟಗಳು ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ಚಳವಳಿ ಸಂಘಟಿಸಿ ದಲಿತ ಸಂಕುಲದ ಸಾಮಾಜಿಕ ಬದುಕನ್ನು ಎತ್ತಿ ನಿಲ್ಲಿಸಿದ್ದು ಇತಿಹಾಸ. ಅಸಮಾನತೆ,ಶೋಷಣೆ ಹೊಸ ಹೊಸ ಬಗೆಯಲ್ಲಿ ಅವತರಿಸುತ್ತಿರುವ ವರ್ತಮಾನದಲ್ಲಿ ಮತ್ತಷ್ಟು ಶಕ್ತಿಶಾಲಿಯಾಗಿ ಹೋರಾಡಬೇಕಿದ್ದ ಸಂಘಟನೆ ಹಲವು ತುಂಡುಗಳಲ್ಲಿ ಹಂಚಿ ಹೋಗಿದೆ. ಒಂದೊಂದು ಸಂಘಟನೆ ಹಿಂದೆಯೂ ಒಬ್ಬೊಬ್ಬ ರಾಜಕಾರಣಿ ಇಲ್ಲವೇ ಉನ್ನತ ಅಧಿಕಾರಿಗಳಿದ್ದಾರೆ.ವರಮಾನ-ವ್ಯಾಪ್ತಿ ಹಂಚಿಕೆಯಲ್ಲಿ ತುಸು ಭಿನ್ನಾಭಿಪ್ರಾಯ ಬಂದರೂ ಇನ್ನೊಂದು ತುಂಡಿನ ಸೃಷ್ಟಿಗೆ ಕಾರಣವಾಗುತ್ತದೆ. ಸಮುದಾಯದ ನಿಜ ಸಮಸ್ಯೆಗಳಿಗೆ ದನಿಗೂಡಿಸುವುದು ಸಂಘಟನೆಗಳ ನಾಯಕರ ಪಾಲಿಗೆ ‘ಆಯ್ಕೆ’ಯ ಸಂಗತಿಯಷ್ಟೆ.ಅದೇ,ತಮ್ಮ ಕಾವಲು ವ್ಯಾಪ್ತಿಯ ಅಧಿಕಾರ ಸ್ಥಾನಗಳಲ್ಲಿ ಏನೇ ಏರುಪೇರಾದರೂ ಅದು ಇಡೀ ಸಮುದಾಯಕ್ಕೆ ಆದ ಅನ್ಯಾಯವೆಂಬಂತೆ ಹೂಂಕರಿಸುತ್ತಾರೆ; ಇದ್ದಕ್ಕಿದ್ದಂತೆ ಅಂಬೇಡ್ಕರ್ ನೆನಪಾಗುತ್ತಾರೆ;ಸಾಮಾಜಿಕ ನ್ಯಾಯದ ನೆನಪಾಗುತ್ತದೆ. ಘನ ಆಶಯದಿಂದ ಚಳವಳಿಯನ್ನು ಕಟ್ಟಿ ಬೆಳೆಸಿದ ಸೂಕ್ಷ್ಮ ಮನಸ್ಥಿತಿಯ ಜನರು ಇಂಥೆಲ್ಲ ಒಡಲುರಿಯನ್ನು ತೋರಿಸಿಕೊಳ್ಳದೆ;ಒಳಗೂ ಇರಿಸಿಕೊಳ್ಳಲಾಗದೆ ತಲ್ಲಣಿಸುತ್ತಿದ್ದರೆ, ಇತಿಹಾಸ ಮತ್ತು ವರ್ತಮಾನವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಹೊಸ ತಲೆಮಾರಿನ ಹುಡುಗರು ಎಲ್ಲರನ್ನೂ ತಕ್ಕಡಿಯ ಎರಡು ತಟ್ಟೆಗಳಲ್ಲಿಟ್ಟು ಅಳೆದು,ಜವಾಬು ಕೊಡಿ ಎಂದು ಹಕ್ಕಿನ ಧ್ವನಿಯಲ್ಲಿ ಕೇಳುತ್ತಾರೆ. ಅಂಬೇಡ್ಕರರನ್ನು ಗಂಭೀರವಾಗಿ ಓದಿಕೊಂಡು ಹೋರಾಟಕ್ಕೆ ಧುಮುಕಿದ್ದ ಪ್ರತಿಭಾವಂತ ಯುವಕ ವೇಮುಲನಿಗೆ ತಾನು ಮಾಡಿದ್ದೆಲ್ಲ ನಿರರ್ಥಕ;ತಪ್ಪು ಮಾಡಿದೆ ಎನ್ನಿಸಲು ಇಂಥೆಲ್ಲ ಸಂಗತಿಗಳೂ ಕಾರಣವಾಗಿರಬಹುದೇ?ಈಗ ಆತನನನ್ನು ವೀರನ ಸ್ಥಾನದಲ್ಲಿ ನಿಲ್ಲಿಸುವ ಸಂಘಟನೆಗಳು ಆತ ಹಾಸ್ಟೆಲ್‌ನಿಂದ ಹೊರ ದಬ್ಬಿಸಿಕೊಂಡು ಬೀದಿಯಲ್ಲಿದ್ದಾಗ ಯಾಕೆ ಧ್ವನಿ ಎತ್ತಲಿಲ್ಲ? ಆತ ಮನುಷ್ಯರ ಮೇಲಿಟ್ಟ ವಿಶ್ವಾಸ ಕಳೆದುಹೋಗಲು ಇದೂ ಕಾರಣವಿರಬಹುದಲ್ಲವೇ? ಈ ಕಾಲದ ಇಂಥ ಹುಡುಗರ ಕಾಳಜಿ; ಸೈದ್ಧಾಂತಿಕ ಬದ್ಧತೆಯನ್ನು ಅರಿಯದೆ ಒಡಕಿನ ಒಲೆಯಲ್ಲಿ ವೈಯಕ್ತಿಕ ಆಸೆ ಆಕಾಂಕ್ಷೆಗಳ ಬೇಳೆ ಬೇಯಿಸಿಕೊಳ್ಳುತ್ತಿರುವ ಚಳವಳಿಯ ಬಣಗಳು ಈ ವಿಷಯದಲ್ಲಿ ತಮ್ಮ ಹೊಣೆ ಏನೆನ್ನುವುದನ್ನು ನಿಕಷಕ್ಕೆ ಒಡ್ಡಿಕೊಳ್ಳಬೇಕು.
*
ದಲಿತ ಹೋರಾಟಕ್ಕೆ ಮತ್ತೊಮ್ಮೆ ‘ಬಲ’ತುಂಬುವ ಸದಾಶಯದೊಂದಿಗೆ ನಾನಾ ಬಣಗಳನ್ನು ಒಗ್ಗೂಡಿಸಲು ಕೆಲ ವರ್ಷದ ಹಿಂದೆ ರಾಜ್ಯಮಟ್ಟದಲ್ಲಿ ದಲಿತ ಏಕತಾ ಚಾಲನಾ ಸಮಿತಿ ರಚಿಸಲಾಗಿತ್ತು. ಪ್ರಥಮ ಪ್ರಯತ್ನವಾಗಿ ನಾನಾ ಬಣಗಳು ಹಲವು ದಿಕ್ಕುಗಳಿಂದ ಬಂದು ಮೈಸೂರಿನಲ್ಲಿ ಕಲೆತು ;ಭವಿಷ್ಯದಲ್ಲಿ ಏಕಶಕ್ತಿಯಾಗಿ ಹೋರಾಡುವ ಬದ್ಧತೆ ಪ್ರದರ್ಶಿಸಿದವು. ನಂತರ ಬಂದ ದಿಕ್ಕಿನಲ್ಲೇ ಮರಳಿದ ಮುಖಂಡರು ಮತ್ತೆ ಒಂದಾಗಿ ಸೇರುವ ಇಚ್ಛೆ ಪ್ರದರ್ಶಿಸಲಿಲ್ಲ. ಅಂತೆಯೇ,ರಾಜ್ಯದ ಅನೇಕ ರೈತ ಪರ ಸಮಾನ ಮನಸ್ಕರು ರೈತ ಸಂಘಟನೆಯ ನಾನಾ ಬಣಗಳನ್ನು ಒಂದು ವೇದಿಕೆಗೆ ತಂದು ಒಗ್ಗೂಡಿಸುವ ಅಂತಃಕರಣ ಪೂರ್ವಕ ಪ್ರಯತ್ನವನ್ನು ಅನೇಕ ಸಲ ಮಾಡಿದರು.ಒಮ್ಮೆ,ಎಲ್ಲಾ ಬಣಗಳನ್ನು ಒಂದು ಗೂಡಿಸಿ ಅಧ್ಯಕ್ಷೀಯ ಮಂಡಳಿ ರಚಿಸುವುದೆಂದು;ಅದರ ನಿರ್ದೇಶನದಂತೆ ಶಿಸ್ತುಬದ್ಧವಾಗಿ ಚಳವಳಿಯನ್ನು ಮುನ್ನಡೆಸಬೇಕೆಂದು ನಿರ್ಧರಿಸಲಾಯಿತು. ಆದರೆ,ಚಳವಳಿ ಮುಂಚೂಣಿಯಲ್ಲಿದ್ದವರಿಗೆ ರೈತರ ಹಿತಕ್ಕಿಂತ ಪ್ರತ್ಯೇಕ ಐಡೆಂಟಿಟಿಯೇ ಹೆಚ್ಚು ಮುಖ್ಯವಾಗಿತ್ತು. ಆದ್ದರಿಂದ ಮೊದಲು ಒಪ್ಪಿದವರು ನಂತರ ಮೂಗುದಾರ ಹರಿದ ಹೋರಿಗಳಂತೆ ವರ್ತಿಸಿದರು. ಮೊನ್ನೆ ಕೂಡ ಉತ್ತರ ಕರ್ನಾಟಕದಲ್ಲಿ ಅಖಂಡ ಕರ್ನಾಟಕ ರೈತ ಸಂಘಟನೆ ಉದಯಿಸುವ ಮೂಲಕ ಮತ್ತಷ್ಟು ಒಡಕಿನ ಸಾಧ್ಯತೆಗಳನ್ನು ತೆರೆದಿಟ್ಟಿತು.
ಈ ಮಧ್ಯೆ,ಎಲ್ಲ ದಲಿತ ಮತ್ತು ರೈತ ಸಂಘಟನೆಗಳನ್ನು ವಿಶಾಲ ವ್ಯಾಪ್ತಿ;ಸಮಾನ ಆಶಯಗಳ ನೆಲೆಯಲ್ಲಿ ಒಂದು ವೇದಿಕೆಗೆ ತಂದು,‘ಸರ್ವೋದಯ ಕರ್ನಾಟಕ’ಎಂಬ ಪರ‌್ಯಾಯ;ಆದರ್ಶ ರಾಜಕಾರಣದ ಮಾದರಿಯನ್ನು ಕಟ್ಟಲು ಸಾಹಿತಿ ದೇವನೂರ ಮಹದೇವರ ನೇತೃತ್ವದಲ್ಲಿ ಪ್ರಯತ್ನ ನಡೆಯಿತು. ಒಗ್ಗಟ್ಟಾದರೆ ಅದರಲ್ಲಿ ರೈತ;ದಲಿತ ಸಮುದಾಯದ ಬಲವಿದೆ ಎನ್ನುವುದು ಘನ ಆಶಯವಾಗಿತ್ತು.ಆದರೆ,ಒಡಕಿನಲ್ಲಿ ತರಹೇವಾರಿ ಸ್ವರೂಪದ ಸ್ವಲಾಭ ಗಳಿಸುತ್ತಿರುವ ಬಣ ನೇತಾರರಿಗೆ ಸರ್ವೋದಯ ಸಾಧ್ಯಗೊಳ್ಳುವುದು;ಒಟ್ಟಾಗಿ ಹೆಜ್ಜೆ ಹಾಕುವುದು ಬೇಕಿರಲಿಲ್ಲ.ರೈತ ರಾಜೇಂದ್ರ ಮತ್ತು ವೇಮುಲರ ಸಾವಿನ ಟಿಪ್ಪಣಿಗಳಾದರೂ ಇವರ ಒಳಗನ್ನು ಕಾಡುವಂತಾಗಲಿ.