ಒಂಟಿ ಕಾಲಿನ ತಪಸ್ವಿ, ರಾಜಶೇಖರ ಕೋಟಿ- ದೇವನೂರ ಮಹಾದೇವ

[ಆಂದೋಲನ ಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿಯವರು ತೀರಿಕೊಂಡು ಇದೇ 2018 ನವೆಂಬರ್ 23ಕ್ಕೆ ಒಂದು ವರ್ಷವಾಗುತ್ತದೆ. ಅವರ ನೆನಪಲ್ಲಿ,  ದೇವನೂರ ಮಹಾದೇವರ ಬರಹ … ]

 

 

ಕೆಲವರು ಸತ್ತಾಗ ನಮ್ಮೊಳಗೇನೆ ಏನೋ ಒಂದಷ್ಟು ಸತ್ತು ಹೋಯಿತು ಅನ್ಸುತ್ತೆ. ಶ್ರೀಕೃಷ್ಣ ಆಲನಹಳ್ಳಿ ತೀರಿಕೊಂಡಾಗ ಆ ರೀತಿ ಅನ್ಸಿತ್ತು. ನನ್ನೊಳಗೊಂದು ಭಾಗವೇ ಸತ್ತು ಹೋಯಿತೇನೊ ಅನ್ನಿಸಿತು. ಯಾವ ಸಂತಾಪ ಸಭೆಗೂ ಹೋಗಲಿಲ್ಲ. ಎಷ್ಟೋ ದಿನಗಳಾದ ಮೇಲೆ ಎಲ್ಲೋ ಒಂದು ಕಡೆ `ನನ್ನ ಫಿಫ್ಟಿ (50) ಇಲ್ಲವಾಯ್ತು’ ಎಂದೆ. ಕೋಟಿಯವರು ತೀರಿಕೊಂಡರು ಎಂದು ಕೇಳಿದಾಗಲಿಂದ ಅದೇ ಭಾವನೆ ನನ್ನೊಳಗಿದೆ.

ಕೋಟಿಯವರನ್ನು ನೆನಪಿಸಿಕೊಳ್ಳುವುದಾದರೆ, ಅದು ಸುಮಾರು 1975ನೇ ಇಸವಿಗೆ ಹೋಗುತ್ತದೆ. ನಾವೆಲ್ಲ ಹುಡುಗರು ಆಗ ಸಮಾಜವಾದಿ ಯುವಜನ ಸಭಾ, ಜೆಪಿ ಚಳವಳಿಯಲ್ಲಿದ್ದೆವು. ಅಲ್ಲಿ ಧಾರವಾಡದಲ್ಲಿ ನಮ್ಮದೇ ವಾರಿಗೆಯ ನಮ್ಮದೇ ರೀತಿ ಕಾರ್ಯಚಟುವಟಿಕೆಯಲ್ಲಿದ್ದ ರಾಜಶೇಖರಕೋಟಿಯವರ ಹೆಸರು ಕೇಳಿ ಬರುತ್ತಿತ್ತು. ಅವರಾಗಲೇ ಅಲ್ಲಿ ಆಂದೋಲನ ಪತ್ರಿಕೆ ಪ್ರಕಟಿಸುತ್ತಿದ್ದರು.

ರಾಜಶೇಖರಕೋಟಿಯವರೊಮ್ಮೆ ಮೈಸೂರಿಗೆ ಬಂದಿದ್ದರು. ಆಗ ತೇಜಸ್ವಿಯವರೂ ಮೈಸೂರಲ್ಲಿ ಇದ್ದರು. ತೇಜಸ್ವಿಯವರು ಮಾತಿನ ನಡುವೆ `ರೀ ಕೋಟಿ, ಮೈಸೂರಲ್ಲೇ ಪತ್ರಿಕೆ ಮಾಡ್ರೀ’ ಅಂಥ ಪ್ರೇರಣೆ ಕೊಟ್ಟರು. ಕೋಟಿ ದುಸರಾ ಮಾತಾಡಲೇ ಇಲ್ಲ, ಆಯ್ತು ಎಂದು ಒಪ್ಪಿಕೊಂಡುಬಿಟ್ಟರು. ಆ ಗಳಿಗೆಯಿಂದ ಕೋಟಿ ಮೈಸೂರಿನವರಾಗಿಬಿಟ್ಟರು. ಆಂದೋಲನ ಮೈಸೂರಿನಿಂದ ಪ್ರಕಟವಾಗತೊಡಗಿತು. ಸಮಾಜವಾದಿ ಯುವಜನ ಸಭಾ, ಜೆಪಿ ಆಂದೋಲನದ ಒಡನಾಡಿಗಳು ಆಂದೋಲನಕ್ಕೆ ಒತ್ತಾಸೆಯಾಗಿ ನಿಂತೆವು.

ಒತ್ತಾಸೆ ಎಲ್ಲರಿಗೂ ಸಿಗಬಹುದು. ಅದಷ್ಟೇ ಯಶಸ್ವಿಗೆ ಕಾರಣವಾಗದು. ಆಂದೋಲನ ಅನೇಕಾನೇಕ ಏಳುಬೀಳುಗಳನ್ನು ಕಂಡಿದೆ. ಕೋಟಿ ಅಲ್ಲಾಡಲಿಲ್ಲ. ಕೋಟಿಯವರ ಆರಂಭದ ದಿನಗಳಲ್ಲಿ ಅವರು ಕೆ ಜಿ ಕೊಪ್ಪಲಿನಲ್ಲಿ ಇರುವವರೆಗೂ ನನಗೆ ಹೆಚ್ಚು ಕಮ್ಮಿ ದಿನನಿತ್ಯ ಒಡನಾಟವಿತ್ತು. ಅವರು ನಿದ್ದೆ ಮಾಡಿದ್ದನ್ನು ನಾನು ಕಂಡಿಲ್ಲ. ಇನ್ನು ಊಟ, ತಿಂಡಿ ದೇವರಿಗೆ ಪ್ರೀತಿ. ಒಂದು ಘಟನೆ, ನನ್ನ ತಮ್ಮ ಶಿವಮಲ್ಲು ಹೇಳಿದ್ದು: ಕೋಟಿಯವರು ಪ್ರಿಂಟಿಂಗ್ ಮಿಷಿನನ್ನು ಕಾಲಲ್ಲಿ ತುಳಿಯುತ್ತಾ ಆಂದೋಲನ ಪ್ರಿಂಟ್ ಮಾಡುತ್ತಿದ್ದರಂತೆ. ಎಂ ಆರ್ ಶಿವಣ್ಣ, ಶಿವಮಲ್ಲು ಕೋಟಿಯ ಕಷ್ಟ ನೋಡಿಯೂ ಸುಮ್ಮನೆ ನೋಡುತ್ತಾ ಕುಳಿತಿದ್ದರಂತೆ. ಶಿವಮಲ್ಲು, ಶಿವಣ್ಣ ಹಿಂದಿನ ರಾತ್ರಿಯಿಂದಲೂ ಊಟ ತಿಂಡಿ ಮಾಡಿರಲಿಲ್ಲವಂತೆ. ಪ್ರಿಂಟಿಂಗ್ ಮಿಷನ್ ತುಳಿಯುತ್ತಿದ್ದ ಕೋಟಿ ಕೊನೆಗೆ ಸುಸ್ತಾಗಿ “ಬರ್ರಿಯಪ್ಪಾ . . . ಸ್ವಲ್ಪ ಮಿಷಿನ್ ತುಳೀರಿ,” ಅಂದರಂತೆ. ಅದಕ್ಕೆ ಇವರು “ನಾವು ಬೆಳಗ್ಗೆಯಿಂದ ತಿಂಡೀನೇ ತಿಂದಿಲ್ಲ, ಫುಲ್ ಮೀಲ್ ಕೊಡಿಸಿದ್ರೆ ಮಾತ್ರ ಮಿಷಿನ್ ತುಳೀತೀವಿ,” ಅಂದರಂತೆ. ಅದಕ್ಕೆ ಕೋಟಿ, “ಎಲ್ರಿಯಪ್ಪಾ ಆಗುತ್ತೆ . . . . ನಾನೂನು ನೆನ್ನೆಯಿಂದಲೂ ನೀರು ಮಾತ್ರ ಕುಡಿದಿರೋದು,” ಅಂದು ಮಿಷಿನನ್ನು ಕಾಲಲ್ಲಿ ತುಳಿಯುತ್ತಾ….. ಆಂದೋಲನ ಪತ್ರಿಕೆ ಪ್ರಿಂಟಾಗಿ ಹೊರಬರುತ್ತಿತ್ತು. ಕೋಟಿಯವರ ನರನಾಡಿಗಳನ್ನು ಹೀರಿಕೊಂಡು ಆಂದೋಲನ ಪತ್ರಿಕೆ ಬೆಳೆಯಿತು ಅನ್ನಬಹುದು. ಅವರೊಳಗೊಬ್ಬ ಹಠಯೋಗಿ ಇದ್ದ. ಅದಕ್ಕಾಗೇ ಆಂದೋಲನ ಪತ್ರಿಕೆ ಇಂದು ಪತ್ರಿಕಾ ಕ್ಷೇತ್ರದಲ್ಲೇ ಒಂದು ‘ಆಂದೋಲನ’ ಅನ್ನುವಂತಾಯ್ತು.

ಆಂದೋಲನ ಒಂದು ಆಂದೋಲನವೇ. ಆರಂಭದಲ್ಲಿ ಈ ಪತ್ರಿಕೆಯನ್ನು ತನ್ನದು ಅಂತ ಕೆಲಸ ಮಾಡಿದವರು ಒಬ್ಬಿಬ್ಬರಲ್ಲ. ದಲಿತರು, ಇಲ್ಲದವರು, ಅಸಹಾಯಕರ ಮೇಲಾದ ದೌರ್ಜನ್ಯಗಳನ್ನು ತನ್ನ ಮೇಲಾದ ದೌರ್ಜನ್ಯ ಎಂದು ಭಾವಿಸಿ ಅದಕ್ಕೆ ಮಾತು ಕೊಟ್ಟ ಪತ್ರಿಕೆ ಆಂದೋಲನವಾಗಿತ್ತು. ಇದು ಸೃಷ್ಟಿಸಿದ ಸಮುದಾಯ ಪ್ರಜ್ಞೆಗೆ ಬೆಲೆ ಕಟ್ಟಲಾಗದು. ಓದುಗ ಸಮುದಾಯವು ಆಂದೋಲನವನ್ನು ತನ್ನದು ಎಂದು ಆತುಕೊಂಡಿತು. ಆಂದೋಲನ ಪತ್ರಿಕೆ ನಂಬಿಕೆಗೆ ಹೆಸರಾಗಿತ್ತು.

ಆಂದೋಲನ ಪತ್ರಿಕೆಯ ಪ್ರಿಂಟಿಂಗ್ ಪ್ರೆಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ನಾನೂ ಒಂದೆರಡು ಮಾತಾಡಿದೆ. ಅಲ್ಲಿ ಹೇಳಿದೆ: `ಕನ್ನಡದ ಪತ್ರಿಕಾ ಕ್ಷೇತ್ರದಲ್ಲಿ ಪಿ.ಲಂಕೇಶ್ ಓರ್ವ ಧ್ಯಾನಿಯಂತೆ. `ಲಂಕೇಶ್ ಪತ್ರಿಕೆ’ ಪ್ರತಿಸಲವೂ ಹೊಚ್ಚ ಹೊಸದೆಂಬಂತೆ, ಹೂ ಅರಳಿದಂತೆ ಮೂಡಿ ಬರುತ್ತಿತ್ತು. ಆದರೆ ರಾಜಶೇಖರ ಕೋಟಿ ಒಂಟಿ ಕಾಲಿನ ತಪಸ್ವಿಯಂತೆ. ತಪಸ್ಸಿಗೆ ಶ್ರಮ, ಅಚಲತೆ, ಹಠ, ನಿಷ್ಠೆ- ಇಂಥಹ ಗುಣಗಳಿರಬೇಕು. ಕೋಟಿಯವರಲ್ಲಿ ಇವೆಲ್ಲವೂ ಮೇಳೈಸಿತ್ತು. ಪತ್ರಿಕಾ ಕ್ಷೇತ್ರದಲ್ಲಿ ಒಬ್ಬರು ಧ್ಯಾನಿಯಂತೆ; ಇನ್ನೊಬ್ಬರು ತಪಸ್ವಿಯಂತೆ. ಇವರನ್ನು ವಿರೋಧಿಸಿ ಪತ್ರಿಕೆ ಆರಂಭಿಸುವವರೂ ಕೂಡ ಇವರುಗಳನ್ನು ಗುರುಗಳೆಂದೇ ಭಾವಿಸಿ ಕಾರ್ಯಪ್ರವೃತ್ತರಾಗಬೇಕು. ಮಹಾಭಾರತದ ರಣರಂಗದಲ್ಲಿ ಅರ್ಜುನ ತನ್ನ ಗುರು ದ್ರೋಣಾಚಾರ್ಯರ ಪಾದಗಳಿಗೆ ಬಾಣ ಬಿಟ್ಟು ನಮಸ್ಕರಿಸಿದಂತೆ.”
ಕೋಟಿಯವರ ಮಹತ್ವಕ್ಕೆ ಇಷ್ಟು ಸಾಕೆನಿಸುತ್ತದೆ. ಇನ್ನು ಅವರ ಪಟ್ಟ ಕಷ್ಟಕ್ಕೆ ಬಂದರೆ, ಅದು ಎಷ್ಟು ಆಳವಾಗಿ ನನ್ನೊಳಗೆ ಉಳಿದಿದೆ ಅಂದರೆ ಅದು ಸ್ಥಾಯಿಭಾವ ಆಗಿ ಬಿಟ್ಟಿದೆಯೇನೊ ಎಂಬಷ್ಟು. ಎದ್ದೂ ಬಿದ್ದೂ ಆಂದೋಲನ ತನ್ನ ಕಾಲಮೇಲೆ ತಾನೇ ನಿಂತು ಹಣಕಾಸು ವಹಿವಾಟು ಅನ್ನುವಷ್ಟಕ್ಕೂ ಬಂತು. ಆದರೂ ನನ್ನ ತಾಪತ್ರಯಗಳಿಗೆ ಕೋಟಿಯವರಲ್ಲಿ ಹಣ ಕೇಳಲು ಬಾಯಿ ಬರುತ್ತಿರಲಿಲ್ಲ. ಅಯ್ಯೋ ಕೋಟಿಗೆ ಏನು ಕಷ್ಟವೋ ಎಷ್ಟು ಕಷ್ಟವೋ ಎಂಬ ಭಾವನೆ ನನಗೆ ಬರುತ್ತಿತ್ತು. ನಾನೂ ಕಷ್ಟಪಟ್ಟಿಲ್ಲ ಅಂತಲ್ಲ. ಆದರೆ ನಾನು ಮರೆತು ಬಿಟ್ಟಿರುತ್ತೇನೆ. ನೆನಪಿಸಿಕೊಂಡರೂ ಆ ವಿವರಗಳು ನನಗೆ ನೆನಪಿಗೆ ಬರುವುದಿಲ್ಲ. ಆದರೆ ಕೋಟಿಗೆ ಹಾಗಲ್ಲ. ಕೋಟಿ ಆ ಸಂದರ್ಭಗಳಿಗೇ ಹೋಗಿ ಬಿಡುತ್ತಿದ್ದರು. ತಮಗೆ ಸಹಾಯ ಮಾಡಿದವರನ್ನು ಕೃತಜ್ಞತೆಗಳಿಂದ ನೆನಸಿಕೊಳ್ಳುತ್ತಿದ್ದರು. ಸಭೆ ಸಮಾರಂಭಗಳಲ್ಲಿ ದೃಶ್ಯ ಕಟ್ಟಿದಂತೆ ಹೇಳುತ್ತಿದ್ದರು. ಒಂದು ಸಲ ಸರಿ, ಎರಡು ಸಲ ಸರಿ, ಯಾಕೋ ಅತಿ ಅನ್ನಿಸುವಷ್ಟು. `ಕೋಟಿ, ಯಾಕೋ ನಿಮ್ದು ಜಾಸ್ತಿ ಆಯ್ತು’ ಅಂದ್ರೆ, ಕೋಟಿ `ನಾ ಹೇಳೋನೆ ಬಿಡ್ರಿ’ ಅನ್ನುತ್ತಿದ್ದರು.

ಕೋಟಿಯವರ ಇನ್ನೊಂದು ಅತಿ ಅಂದರೆ ಅವರ ಕನ್ನಡ ಪ್ರೇಮ. ಅವರಂಥಹ ಅಪ್ಪಟ ಕನ್ನಡ ಪ್ರೇಮಿಯನ್ನು ನಾನು ಕಂಡಿಲ್ಲ. ಭಾಷೆಯ ವಿಷಯದಲ್ಲಿ ನಾನು ಸ್ವಲ್ಪ ವ್ಯಾವಹಾರಿಕವಾಗೂ ಇರುತ್ತೇನೆ, ಉದಾರವಾಗೂ ಇರುತ್ತೇನೆ. ಕನ್ನಡ ಪ್ರೇಮದ ವಿಚಾರದಲ್ಲಿ ಕೋಟಿ ಕಟು ಅನ್ನುವಷ್ಟು ಇದ್ದರು. ಏನಾರು ಹೇಳಲು ಹೊರಟರೆ `ಹೋಗ್ರೀ ಹೋಗ್ರೀ’ ಅನ್ನುತ್ತಿದ್ದರು ಅಷ್ಟೆ. `ಕನ್ನಡದ ಕೋಟಿ’ ಎಂದು ತಮಾಷೆ ಮಾಡುತ್ತಿದ್ದೆ.

ಈ ಕೋಟಿಗೆ ಏನಂತ ಹೇಳಲಿ? ಯಾವುದೊ ಒಂದು ಕವನದ ಸಾಲು: ``ಕಲ್ಲಿನಷ್ಟು ಕಠಿಣ; ಹೂವಿನಷ್ಟೆ ಮೃದು”