ಆಂದೋಲನ ಪತ್ರಿಕೆಯ ಪ್ರಶ್ನೆಗಳಿಗೆ ದೇವನೂರ ಮಹಾದೇವ ಅವರ ಪ್ರತಿಕ್ರಿಯೆ
[ಆಂದೋಲನ ಪತ್ರಿಕೆಯ ಪ್ರಶ್ನೆಗಳಿಗೆ ದೇವನೂರ ಮಹಾದೇವ ಅವರ ಪ್ರತಿಕ್ರಿಯೆ 12.1.2020ರ ಆಂದೋಲನ ಪತ್ರಿಕೆಯಲ್ಲಿ…]
1. ‘ಕಾಂಗ್ರೆಸ್ ನಂತರ ಬಿಜೆಪಿಗೆ ಅಂಟಿದ ಧರ್ಮದ ರೋಗ’ ಎಂಬ ಎಸ್.ಎಲ್.ಭೈರಪ್ಪ ಅವರ ಅಭಿಪ್ರಾಯಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
• ಭೈರಪ್ಪನವರ ಹೇಳಿಕೆ ಸಖೇದಾಶ್ಚರ್ಯ ಉಂಟು ಮಾಡಿತು. ಅವರ ಈ ಮಾತು ದಡ್ಡತನವೋ ಬುದ್ಧಿವಂತಿಕೆಯೋ ಗೊತ್ತಾಗ್ತಾ ಇಲ್ಲ. ಜಾಣನಿಗೆ ಜಾಣಾ ಅಲ್ಲ; ಪೆದ್ದನಿಗೆ ಪೆದ್ದಾ ಅಲ್ಲ ಅನ್ನುವಂತಿದೆ. ಭೈರಪ್ಪನವರು ರಾಷ್ಟ್ರೀಯ ಪ್ರೊಫೆಸರ್ ಆದವರು. ಸಾಮಾನ್ಯವಾಗಿ ಪ್ರೊಫೆಸರ್ಗಳಿಗೆ ಮರೆವು ಇರುತ್ತದಂತೆ. ಹೋಗಲಿ ಬಿಡಿ.
2. ಮೋದಿಶಾರ ಆಳ್ವಿಕೆ ಹೇಗೆ ನಡೆಯುತ್ತಿದೆ?
• ಒಂದು ಜಾನಪದಗೀತೆ ಇದೆ- ‘ಜವರಾಯ ಬಂದರೆ ಬರಿಗೈಲಿ ಬರಲಿಲ್ಲ, ಕುಡುಗೋಲು ಕೈಲಿ ಹಿಡಿದು ಬಂದ, ಒಳ್ಳೊಳ್ಳೆ ಮರವ ಕಡಿತಾ ತಾ ಬಂದ”. ಈ ರೀತಿ ನಡೀತಾ ಇದೆ ಮೋದಿಶಾರ ಆಳ್ವಿಕೆ.
3. ಮೋದಿಯವರ ಆಳ್ವಿಕೆ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳಿ ಎಂದರೆ?
• ಮೋದಿಯವರು ಜನರ ಮನಸ್ಸಿಗೆ ಕೊಟ್ಟಿದ್ದು ಕನಸು; ಜನರ ಬದುಕಿಗೆ ನೀಡಿದ್ದು ದುಃಸ್ವಪ್ನ.
4. ಹೋಲಿಕೆ ಮಾಡುವುದಾದರೆ ಮೋದಿಶಾರ ಆಳ್ವಿಕೆಯನ್ನು ಯಾರಿಗೆ ಹೋಲಿಸಬಹುದು?
• ಹೋಲಿಕೆ ಮಾಡುವುದಾದರೆ ಮೋದಿಶಾರ ಆಳ್ವಿಕೆಯನ್ನು ಸಂಜಯ್ಗಾಂಧಿಗೆ ಮಾತ್ರ ಹೋಲಿಸಬಹುದೇನೋ. ಮೋದಿಶಾ ಗ್ಯಾಂಗ್ ಸಂಜಯ್ಗಾಂಧಿಯ ತುಕ್ಡೆತುಕ್ಡೆ ಪಟಾಲಂನಂತಿದೆ.
5. ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರೋಧಿ ಹೋರಾಟವು ಮೋದಿಯವರನ್ನು ಅಧಿಕಾರದಿಂದ
ಕೆಳಗಿಳಿಸಲು ಕಾಂಗ್ರೆಸ್ ನಡೆಸಿರುವ ಹುನ್ನಾರ ಎನ್ನಲಾಗುತ್ತಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ?
• ಕಾಂಗ್ರೆಸ್ಗೆ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಬಹುದಾದ ಶಕ್ತಿಯಾಗಲಿ, ಸಾಮರ್ಥ್ಯವಾಗಲಿ ಇದೆ ಎಂದು ನನಗೆ ಅನ್ನಿಸುವುದಿಲ್ಲ. ಈ ಸಾಧ್ಯತೆ, ಸಾಮರ್ಥ್ಯ ಒಬ್ಬರಿಗೆ ಮಾತ್ರ ಇದ್ದಂತಿದೆ. ಅವರೇ ಅಮಿತ್ ಷಾ. ಸದ್ಯಕ್ಕೆ ಇವರೊಬ್ಬರಿಗೆ ಮಾತ್ರ ಮೋದಿಯವರನ್ನು ಪದಚ್ಯುತಿಗೊಳಿಸುವ ಶಕ್ತಿ ಸಾಮರ್ಥ್ಯ ಎಲ್ಲವೂ ಇದೆ. ಚರಿತ್ರೆಯಲ್ಲಿ, ಸಿಂಹಾಸನ/ ಕುರ್ಚಿಯ ಗತಿ ಅವಲೋಕಿಸಿದರೆ ಇದು ಸಂಭವಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ.