ಎದೆಯ ಮಾತು ಮತ್ತು ಮೆರವಣಿಗೆ- ಡಾ.ಎಚ್.ಎಸ್.ಅನುಪಮಾ

[2013ರ ಸಂವಾದ ಪತ್ರಿಕೆಗಾಗಿ “ಎದೆಗೆ ಬಿದ್ದ ಅಕ್ಷರ” ಕುರಿತು ಡಾ.ಎಚ್.ಎಸ್.ಅನುಪಮಾ ಅವರು ಬರೆದ ಲೇಖನ ನಮ್ಮ ಮರು ಓದಿಗಾಗಿ…. ]


ಸದಾಶಿವ ಆಯೋಗ ವರದಿ ಬಂದ ನಂತರ ಮೀಸಲಾತಿ ಮತ್ತು ಒಳಮೀಸಲಾತಿ ಕುರಿತು ನಮ್ಮೂರಿನಲ್ಲಿ ಒಂದು ಸಂವಾದ ಗೋಷ್ಠಿ ಏರ್ಪಡಿಸಿದೆವು. ಆಹ್ವಾನಪತ್ರಿಕೆ ನೋಡಿದ ಸ್ನೇಹಿತರೊಬ್ಬರು `ಏನು ಎಲ್ಲ ಒಂದೇ `ಕೈ’ಯವರನ್ನು ಹೆಚ್ಚು ಕರೆದಿದ್ದೀರಲ್ಲ?’ ಎಂದರು. ಕೊನೆಗೆ ಕರೆದವರ ಪಂಗಡ, ಉಪಪಂಗಡಗಳನ್ನು ಮುಜುಗರದಿಂದ ಪತ್ತೆ ಹಚ್ಚಿ ಸಮಬಲಗೊಳಿಸುವ ಪ್ರಯತ್ನ ಮಾಡುವಂತಾಯಿತು.
ಆ ಸಂವಾದ ನಡೆಯುವಾಗ ಪ್ರಶ್ನೋತ್ತರ ಸಮಯದ ವೇಳೆ ನಮ್ಮೂರಿನ ಗಣ್ಯರೊಬ್ಬರು ತಮ್ಮ ಮೇಲೆ ಸುಳ್ಳು ಅಟ್ರಾಸಿಟಿ ಕೇಸು ಹಾಕಿ ಲಕ್ಷಾಂತರ ತೆರುವಂತೆ ಮಾಡಿದ ಸ್ಥಳೀಯ ದಲಿತ ಸಂಘಟನೆಯ ಮುಖಂಡರನ್ನು ಎಲ್ಲರೆದುರೇ ತರಾಟೆಗೆ ತೆಗೆದುಕೊಂಡರು. ಕೈಬೆರಳೆಣಿಕೆಯಷ್ಟು ವಿವೇಕಹೀನ ನಾಯಕರಿಂದ ಸಮುದಾಯಕ್ಕಾಗುವ ನಷ್ಟ ಎಂಥದು? ಮುಜುಗರದ ಸನ್ನಿವೇಶ ತಪ್ಪಿಸಲು ಸಭೆಯ ನಂತರ ಅದೆಲ್ಲ ಚರ್ಚಿಸಿ ಎಂದು ಸುಮ್ಮನಿರಿಸಿದೆವು.

ಕಾರ್ಯಕ್ರಮ ನಡೆದ ವಾರದಲ್ಲಿ ಯುವ ದಲಿತ ಮುಂದಾಳುವೊಬ್ಬರು ತಮ್ಮ ಕೇರಿಯ ಎಂಟ್ಹತ್ತು ಜನರ ಜೊತೆ ಒಂದು ದಿನ ಕ್ಲಿನಿಕ್ಕಿಗೆ ಬಂದರು. `ನಿಮ್ಮ ಪುಸ್ತಕ ಓದಿದೆವು, ಅಂಬೇಡ್ಕರ್ ಬಗೆಗೆ ಎಷ್ಟೋ ವಿಷಯ ನಮಗೆ ಗೊತ್ತಿರಲೇ ಇಲ್ಲ’ ಎಂದರು. ಅವರು ಅಂಬೇಡ್ಕರ್ ಬಗೆಗೆ ಬಹಳಷ್ಟು ಕೇಳಿದ್ದರು, ಆಡಿದ್ದರು. ಆದರೆ ಓದಿರಲಿಲ್ಲ. ಬುದ್ಧನ ಬಗೆಗೆ ಅಸ್ಪಷ್ಟವಾಗಿ ತಿಳಿದಿದ್ದರು. ಹಲವು ವಿಷಯಗಳ ಕುರಿತು ಮಾತನಾಡಿ ನಂತರ ತಾವು ಬಂದ ಉದ್ದೇಶ ಹೇಳಿದರು. ಅವರ ಕೇರಿಯಲ್ಲಿ 3 ಲಕ್ಷ ರೂಪಾಯಿ ವೆಚ್ಚದಲ್ಲಿ ಬ್ರಹ್ಮ, ಜಟಗ, ಚೌಡಿ, ರಾವು, ಮಾಸ್ತಿ ದೇವರುಗಳಿಗೆ ಗುಡಿ ಕಟ್ಟಿಸಿ ಮೂರ್ತಿ ಪ್ರತಿಷ್ಠಾಪನೆಯನ್ನು ಬ್ರಾಹ್ಮಣರಿಂದ ಮಾಡಿಸುತ್ತಿದ್ದು ನಿತ್ಯ ಪೂಜೆ ತಮ್ಮವರದೇ ಎಂದೂ; ನಾನು ನನ್ನ ಗುರುತಿನ ಬಳಗದಿಂದ ಯಥಾಶಕ್ತಿ ಧನಸಹಾಯ ಕೊಡಿಸಬೇಕೆಂದೂ ಕೋರಿದರು. ಕಂಗಾಲಾಗಿ ನಾನು ತಡವರಿಸುತ್ತಿರುವಾಗ ಅದೇ ವಾರದ ಕೊನೆಗೆ ನಡೆಯುತ್ತಿರುವ ಕಲ್ಕಿ ಭಗವಾನರ ಪ್ರಾರ್ಥನಾ ಸಭೆಗೆ ಬರಬೇಕೆಂದೂ ಕರೆದರು!

ಅದರ ಮುಂದಿನ ವಾರ ನಮ್ಮ ಸಂವಾದ ಕಾರ್ಯಕ್ರಮಕ್ಕೆ ಬಂದ ಗ್ರಾಮಪಂಚಾಯ್ತಿಯ ದಲಿತ ಮಹಿಳಾ ಸದಸ್ಯರೊಬ್ಬರು ಮಹಿಳೆಯರಿಗೆ ಒಂದು ಸಂಘ ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿಯೂ, ಅದರ ರೂಪುರೇಷೆ, ಉದ್ಘಾಟನೆ ಇತ್ಯಾದಿ ಚರ್ಚಿಸಲು ಬರುವುದಾಗಿಯೂ, ಯಾವಾಗ ಪುರುಸೊತ್ತಿನಲ್ಲಿರುವಿರೆಂದೂ ಕೇಳಿದರು. ಅವರಿಗೆ ಏನಾದರೂ ಮಾಡಬೇಕೆಂಬ ಉತ್ಸಾಹ ಇತ್ತು. ಆದರೆ ದಲಿತ ಹೆಣ್ಮಕ್ಕಳಿಗಾಗಿಯೇ ಮಾಡಿದರೆ ಪಂಚಾಯ್ತಿ ಪ್ರತಿನಿಧಿಯಾಗಿರುವ ತನಗೆ ಏನೋ, ಹೇಗೋ ಎಂಬ ಗೊಂದಲವಿತ್ತು. ಚರ್ಚಿಸಿ, ಒಂದು ರೂಪುರೇಷೆ ತಯಾರಿಸಿ, ಈಗ ಆ ಮಹಿಳಾಸಂಘ ಉದ್ಘಾಟನೆಯ ದಿನಕ್ಕಾಗಿ ಸಿದ್ಧಗೊಳ್ಳುತ್ತಿದೆ.
ಇದನ್ನೆಲ್ಲ ಹೇಳುತ್ತಿರುವ ಕಾರಣವಿಷ್ಟೆ; ಯಾವ ಗೋಜಲು ತಿಳಿಯಾಗಲೆಂದು ಬಯಸಿ ನಾವು ಕಾಲಿಡುತ್ತೇವೆಯೋ, ಆ ನೆಲ ನಮ್ಮ ಕಾಲೂರುವಿಕೆಯಿಂದಲೇ ಮತ್ತಷ್ಟು ರಾಡಿಯಾಗುತ್ತಿದೆಯೇ ಎಂಬ ಅನುಮಾನ ಬರುವಂತೆ ಕೆಲವೊಮ್ಮೆ ಏನೇನೋ ಸಂಭವಿಸುತ್ತವೆ. ಆಗೆಲ್ಲ ಸ್ಪಷ್ಟವಾಗಿ ಒಂದ್ಹೆಜ್ಜೆ ಮುಂದೆ ಊರಲು `ಎದೆಗೆ ಬಿದ್ದ ಅಕ್ಷರ’ಗಳು ಊರುಗೋಲಾಗಿ ಕಂಡಿವೆ. ಎಷ್ಟೋ ಪ್ರಶ್ನೆಗಳಿಗೆ ಉತ್ತರವಾದಂತೆ ಅನಿಸಿದೆ. ತನ್ನ ಎತ್ತರದ ನಿಲುವಿನ ಹೆಗಲ ಮೇಲೆ ಕೂರಿಸಿಕೊಂಡು ಸುತ್ತಲೂ ಹೀಗೆಹೀಗೆ ಇದೆ ನೋಡು ಎಂದು ತಮ್ಮ ವ್ಯಕ್ತಿತ್ವ, ಮಾತುಗಳ ಮೂಲಕ ತೋರಿಸುತ್ತಿರುವ ಗುರುವಲ್ಲದ ಗುರುವಿನಂತೆ ದೇವನೂರು ಒದಗಿ ಬಂದಿದ್ದಾರೆ. ಅವರು ಬರೆದ ಸಾಲುಗಳನ್ನು ಹಲವು ಬಾರಿ ಓದಿಕೊಂಡಿದ್ದೇನೆ. ಅಲ್ಲಿ ಬೆಳಕಿಂಡಿಗಳಿವೆಯೇ ಎಂದು ಹುಡುಕಿದ್ದೇನೆ. ಈಗ ಎದೆಗೆ ಬಿದ್ದ ಅಕ್ಷರವನ್ನು ಇಡಿಯಾಗಿ ಓದಿದ ಮೇಲೂ `ಎಲ್ಲ ತೋರಿಸಿದ್ದೇನೆ, ನಿನ್ನ ದಾರಿ ನೀನು ಕಂಡುಕೋ’ ಎನ್ನುತ್ತ ಹೆಗಲಿನಿಂದಿಳಿಸುವ ಬುದ್ಧಗುರುವಿನ ಮಂದಸ್ಮಿತ ಸುಳಿದು ಹೋಗುತ್ತಿದೆ.

***

ನಾ ಹುಟ್ಟುವ ಹೊತ್ತಿಗೆ ಕರ್ನಾಟಕದ ದಲಿತ ಚಳುವಳಿಯಲ್ಲಿ ದೇವನೂರು ಮುಂಚೂಣಿಯಲ್ಲಿದ್ದರು. ನನ್ನ ಅನುಭವಕ್ಕೇ ಬರದ ಹಲವು ಜಗತ್ತುಗಳಿರುವುದು ಅರಿವಾಗುತ್ತಿತ್ತಾದರೂ ಅದರ ಒಳಬದುಕು ಅರಿತುಕೊಳ್ಳಲು ಕುಸುಮಬಾಲೆ ಓದುವ ತನಕ ಕಾಯಬೇಕಾಯಿತು. ಕುಸುಮಬಾಲೆ, ಉಚಲ್ಯಾ, ಬಹಿಷ್ಕೃತ, ಅನ್‍ಟಚಬಲ್ – ಪ್ರತಿ ಪುಸ್ತಕವೂ ನನ್ನ ಸುತ್ತಲ ಅನೂಹ್ಯ ಜಗತ್ತನ್ನು ಅನಾವರಣಗೊಳಿಸಿ ಒಳಗೊಂದು ಸಂಕಟವೋ, ಬೆರಗೋ, ತಲ್ಲಣವೋ ಎಂಥದೋ ಒಂದನ್ನು ಉಳಿಸಿ ಹೋದವು. ನನ್ನದಲ್ಲದ ಕಾರಣಗಳಿಂದ ನೇರವಾಗಿ ಚಳುವಳಿಯಲ್ಲಿ ಭಾಗವಹಿಸಲಿಲ್ಲವಾದರೂ ಚಡಪಡಿಕೆ, ತಹತಹ ಬೆಳೆಯುತ್ತಿತ್ತು. ಹಾಗಿರುತ್ತ ಈಗ ಏನಾಗಬೇಕಿದೆ ಎಂದು ಖಚಿತವಾಗಿ ಹೇಳಿದ, ಹೋರಾಡಿದ ಅಂಬೇಡ್ಕರ್ ಬರಹ-ಮಾತುಗಳು ನಡೆಯಬೇಕಾದ ದಾರಿಯ ಗುರುತುಗಳನ್ನು ಹೇಳುತ್ತಿರುವಂತೆನಿಸಿದರೆ; ನೋಡಿರದ, ಕೇಳಿರದ ದೇವನೂರು ತಮ್ಮ ಬರಹಗಳ ಮೂಲಕವೇ ಝೆನ್ ಗುರುವಿನಂತೆ ಕಂಡುಬಂದರು. ಅವರ ಭಾಷಣ-ಬರಹಗಳನ್ನು ಅದು ಪುಸ್ತಕವಾಗುವ ಮೊದಲೇ ಒಟ್ಟು ಹಾಕಿಕೊಂಡು ಓದಿರುವ ನನ್ನಂತಹ ಹಲವರಿಗೆ ತಮ್ಮ ಅಕ್ಷರದಿಂದಲೇ ಎದೆಗೆ ಹತ್ತಿರವಾದವರು ದೇವನೂರು.

ಎಂಡಿಎನ್, ರಾಮದಾಸ್, ಅನಸೂಯಮ್ಮ, ಲಂಕೇಶ್, ದೇವನೂರು, ಸಿದ್ಧಲಿಂಗಯ್ಯ, ಶಾಮಣ್ಣ – ಹೀಗೆ ದಶಕಗಟ್ಟಲೆ ಕ್ರಿಯಾಶೀಲವಾಗಿ ಸಾಮಾಜಿಕ ಆಗುಹೋಗುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಮನಸ್ಸುಗಳ ಮಾತು-ಬರಹಗಳನ್ನು ಸಂಗ್ರಹಿಸಿದರೆ ಅದು ಆ ಕಾಲಘಟ್ಟದ ಚಾರಿತ್ರಿಕ ದಾಖಲೆ ಆಗುತ್ತದೆ. ಈ ದೃಷ್ಟಿಯಿಂದ ಹಲವು ಹೋರಾಟ-ಚಳವಳಿ-ಸಂಘಟನೆ ಕಟ್ಟಿದ, ತಮ್ಮ ಕ್ರಿಯೆ-ಬರವಣಿಗೆಯಿಂದ ಕನ್ನಡ ಸಾಹಿತ್ಯ ಬೆಚ್ಚಿಬಿದ್ದು ಹೊಸ ತಿರುವು ಪಡೆದುಕೊಳ್ಳುವಂತೆ ಮಾಡಿದ ದೇವನೂರು ಬರೆದಿದ್ದು ತುಂಬ ಮುಖ್ಯವಾಗುತ್ತದೆ. ಸೂಕ್ಷ್ಮ ಸಂವೇದನಾಶೀಲ ಮನಸ್ಸು ಅರಿವಿನ ಸ್ಫೋಟಕ್ಕೊಳಗಾಗಿ ಆ ಸಂವೇದನೆಗೆ ಬರಹದ ಮಾಂತ್ರಿಕ ದಂಡವೂ ದೊರೆತರೆ ಎದೆಗೆ ಬಿದ್ದ ಅಕ್ಷರ ಹುಟ್ಟುತ್ತದೆ. ಎಂದೇ ಅವರ ಇಷ್ಟೂ ವರ್ಷಗಳ ಬರಹ-ಭಾಷಣಗಳನ್ನು ಒಂದೆಡೆ ಇಟ್ಟರೆ ಅದು ಹಲವು ಚಳವಳಿ, ಏಳುಬೀಳುಗಳನ್ನು ಕಂಡ ಕರ್ನಾಟಕದ ಸಾಹಿತ್ಯಿಕ ಹಾಗೂ ಸಾಮಾಜಿಕ ಚರಿತ್ರೆಯ ಭಾಗವಾಗಿರುತ್ತದೆ. ದಲಿತ ಹೋರಾಟ, ಅದರ ಕಷ್ಟನಷ್ಟ-ತಾತ್ವಿಕತೆ; ದಲಿತ ಸಂಘರ್ಷ ಸಮಿತಿಯ ಹುಟ್ಟು, ಸಾಧನೆ, ಒಡಕು; ದಲಿತ ಚಳವಳಿಯ ಜೊತೆಗೇ ಹುಟ್ಟಿದ ಇತರ ಚಳವಳಿಗಳು, ತಮ್ಮ ಸಮಕಾಲೀನರು – ಈ ಎಲ್ಲದರ ಕುರಿತ ಆಪ್ತ ಆದರೆ ವಿಮರ್ಶಾತ್ಮಕ ಧಾಟಿಯ ಬರಹಗಳು ಈ ಪುಸ್ತಕದಲ್ಲಿವೆ.

ಭಾರತೀಯ ಸಮಾಜದ ದೃಶ್ಯ, ಅದೃಶ್ಯ ಚಿತ್ರಗಳ ಕೊಲಾಜ್ ಈ ಪುಸ್ತಕ. ಲೋಹಿಯಾ, ಅಂಬೇಡ್ಕರ್, ಗಾಂಧಿ ಹಾಗೂ ಮಾರ್ಕ್ಸ್  ಅವರ ಆನ್ವಯಿಕ ಓದಾಗಿಯೂ ಅಲ್ಲಲ್ಲಿ ಭಾವಿಸಬಹುದು. ಆದರೆ ದೇವನೂರು ತಾತ್ವಿಕತೆಯ ಮಿತಿಯಂತೆ ತೋರುವುದೆಂದರೆ ಅವರು ಅದ್ಯಾವುದನ್ನೂ ವಿಸ್ತರಿಸುವ ಗೋಜಿಗೇ ಹೋಗದೆ ಸಂಕೇತಗಳಲ್ಲಿ, ರೂಪಕಗಳಲ್ಲಿ ಪರಿಹಾರ ಸೂಚಿಸಿ ಬರಹ ಕೊನೆಗೊಳಿಸುವುದು. ಛಂದಸ್ಸಿನಲ್ಲಿ ದೇವತೆಗಳು ಅಡಗುವಂತೆ ದೇವನೂರು ರೂಪಕಗಳಲ್ಲಿ ಅಡಗುತ್ತಾರೆ. ನೈಜ ಕಾಳಜಿಯಿಂದ ವರ್ತಮಾನದ ಸಂಕಷ್ಟಗಳಿಗೆ ಮುಖಾಮುಖಿಯಾದರೂ ಹೀಗೆಯೇ ಇದೇ ದಾರಿಯಲ್ಲಿ ಹೆಜ್ಜೆ ಎತ್ತಿಡು ಎಂದು ಖಚಿತವಾಗಿ ಹೇಳಲು ಹಿಂಜರಿಯುತ್ತಾರೆ.

ಸಮಾಜ ಉತ್ತಮಗೊಳ್ಳಬೇಕು, ಎಲ್ಲರೂ ಒಳ್ಳೆಯದಾಗಿ ಬದುಕಬೇಕು ಎಂಬ ಅಂತರಂಗದ ತುಡಿತ ದೇವನೂರರಿಗಿದೆ. ಸಂಘರ್ಷವಿಲ್ಲದೆ ಬದಲಾವಣೆ ಸಾಧ್ಯವಾದೀತೇ ಎಂದು ಹುಡುಕಾಟವಿದೆ. ಆ ದಾರಿ ಹುಡುಕುತ್ತ ಗಾಂಧಿ, ಅಂಬೇಡ್ಕರ್ ಇಬ್ಬರನ್ನೂ ಜೊತೆಗಿಟ್ಟುಕೊಂಡಿದ್ದಾರೆ. ಆ ಇಬ್ಬರು ನಾಯಕರ ಹೊಯ್‍ಕೈ ಆಟದಲ್ಲಿ ಹೆಚ್ಚುಸಲ ಗಾಂಧಿ ಅಹಿಂಸೆಗೇ ಜಯವಾಗಿದೆ. ಒಂದು ಮಾತನಾಡುವಾಗಲೂ ಎದುರಿದ್ದವರು ನೊಂದುಕೊಂಡಾರೆಯೇ ಎಂದು ಲೆಕ್ಕಾಚಾರದಲ್ಲಿ ಮಾತನಾಡುವ, ಪಾದವಿಟ್ಟರೆ ಹುಲ್ಲು ಗರಿಕೆ ಜರ್ಜರಗೊಳ್ಳುವುದೇ ಎಂದು ತಲ್ಲಣಪಡುವ ದೇವನೂರರು ಒಮ್ಮೆ `ನೀವು ಯಾವುದರ ಪರವಾಗಿ ಹೋರಾಡಬಯಸುತ್ತೀರೋ ಅದು ಸತ್ಯವಾಗಿ ನಮ್ಮ ಮುಂದಿರಬೇಕು, ನಾವು ಸತ್ಯದ ಹಿಂದಿರಬೇಕು’ ಎಂದಿದ್ದರು. ಅಸ್ಪೃಶ್ಯತೆ, ಕೋಮುವಾದ, ಜಾತಿವಾದ, ಭ್ರಷ್ಟತೆ ಈ ಎಲ್ಲ ಸಮಸ್ಯೆಗಳನ್ನು ಮುಂದಿಡುವಾಗಲೂ; ಅವುಗಳ ಜೊತೆ ಮುಖಾಮುಖಿಯಾಗುವಾಗಲೂ ದೇವನೂರು ಎದುರಿರುವವರನ್ನು ಇರಿಯುವುದಿಲ್ಲ. ಬಹುಶಃ ಕಟುಸತ್ಯವನ್ನೂ ನೋವಾಗದಂತೆ ಹೇಳುವ ಗುಣವೇ ಅವರಿಗೆ ಸಂತನ ಪಟ್ಟ ಗಳಿಸಿಕೊಟ್ಟಿರುವುದಲ್ಲದೆ ಅವರ ಮಾತುಗಳು ಎಲ್ಲ ಜಾತಿ/ವರ್ಗ/ಗುಂಪುಗಳಲ್ಲೂ ಸ್ವೀಕೃತವಾಗಿವೆ ಅನಿಸುತ್ತದೆ. ಅಷ್ಟಲ್ಲದೆ ಆ ಅಕ್ಷರಗಳು ಇಷ್ಟೊಂದು ಎದೆಗಳೊಳಗೆ ಪ್ರವೇಶ ಪಡೆಯಲು ಸಾಧ್ಯವಿತ್ತೆ?

***

ಪುಟ್ಟಪುಟ್ಟ ಬರಹ, ಕಡಿಮೆ ಬರವಣಿಗೆ, ಕಡಿಮೆ ಮಾತು, ಕಡಿಮೆ ಪ್ರಚಾರಪ್ರೀತಿ ಇವೆಲ್ಲವೂ `ಮಾಯ್ಕಾರ ಮಾದೇವ’ ಆಗಬಹುದಾಗಿದ್ದ ದೇವನೂರರನ್ನು `ಕನಸುಗಾರ ಮಾದೇವ’ನಾಗುವಂತೆ ಮಾಡಿರಬಹುದೇ ಎಂದುಕೊಳ್ಳುತ್ತಿರುವಾಗಲೇ ಈಗ ಅವರ ಪುಸ್ತಕ ಹೊರಬಂದಿದೆ. ಅದರ ಹೊಸ ಆವೃತ್ತಿ ಒಂದೊಂದು ಊರಿನಲ್ಲಿ ಬಿಡುಗಡೆಯಾಗುತ್ತ, ಚರ್ಚೆಯನ್ನು ಹುಟ್ಟುಹಾಕುತ್ತಿದೆ. ದೇವನೂರರನ್ನು ಕಾಣಲು, ಕೇಳಲು ಮೊನ್ನೆ ಧಾರವಾಡದಲ್ಲೂ ಐದಾರು ನೂರು ಜನ – ಹೆಚ್ಚಿನವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಒಟ್ಟಾಗಿದ್ದರು. ಮೊದಲೆಲ್ಲ ಒಂದು ಸಭೆಗೆ ಅವರನ್ನು ಬರುವಂತೆ ಮಾಡಲು ಹರಸಾಹಸ ಪಡಬೇಕಿತ್ತು. ಈಗವರು ಪುಸ್ತಕದ ನೆಪದಲ್ಲಿ ಸುಲಭದಲ್ಲಿ ಲಭ್ಯವಾಗುತ್ತಿರುವುದು, ಹೊಸತಲೆಮಾರಿನ ಜೊತೆ ಸಂವಾದಕ್ಕೆ ತೆರೆದುಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಚುನಾವಣೆ ಹತ್ತಿರವಿರುವುದರಿಂದ ಸರ್ವೋದಯ ಪಕ್ಷದ ಸಲುವಾಗಿ ಓಡಾಡುತ್ತಿರುವರೆ ಎಂದು ಬಯಲುಸೀಮೆಯ ಕಟ್ಟೆಯಲ್ಲಿ ಪುರಾಣ ಮಾಡುತ್ತಿರುವ ಜುಮ್ಮಿ, ವಾಟಿಸ್ಸೆ, ಕಾಳಮಾವ, ಗಾರಸಿದ್ಮಾವರಿಗೆ ಅನುಮಾನ ಹುಟ್ಟಿ, `ವಯಸ್ಸಿದ್ದಾಗ ಸುಮ್ನಿದ್ಬುಟ್ಟು ಇಳಿವಯಸ್ನಲ್ಲಿ ಮದ್ವೆ ಮಾಡ್ಕಂಡಂಗೆ ಈಗ ರಾಜಕೀಯ ಮಾಡಕ್ಕೆ ಹೊಂಟವ್ನಂತಲ್ಲ? ಯಾರಾರ ಅವ್ನಿಗೆ ಒಂದ್ ಬುದ್ಧಿ ಮಾತ್ ಹೇಳಕ್ಕಾಗಲ್ವೆ?’ ಎನ್ನುತ್ತಿರುವ ಹಾಗಿದೆ.

ಆದರೆ ಕಾಳಮಾವ, ಜುಮ್ಮಿಯರು ಈ ಮಾತು ಹೇಳುವ ಅಧಿಕಾರ ಕಳಕೊಳ್ಳುತ್ತಿದ್ದಾರೆ. ದೇವನೂರರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ, ಬಯಸಿಯೋ ಬಯಸದೆಯೋ ಒಂದು ಬೆಳವಣಿಗೆ ನಡೆಯುತ್ತಿದೆ. ಒಂದು ಕಡೆ ದೇವನೂರರನ್ನು ಕರೆಸಿ, ಅವರ ಪುಸ್ತಕದ ಬಗ್ಗೆ ಮಾತನಾಡಿ, ಅವರ ಬಗ್ಗೆ ಮಾತನಾಡಿ ದಲಿತ ಪರ ಎಂದುಕೊಳ್ಳುವ ಅವಕಾಶ ದೊರೆತು ಕೆಲವರು ಕೃತಾರ್ಥರಾಗುತ್ತಿದ್ದರೆ; ಮತ್ತೊಂದು ಕಡೆ ಅವರ ಭಕ್ತಗಣ ಸೃಷ್ಟಿಯಾಗುತ್ತಿದೆ. ಈ ಗಣದ ಹಲವರು ಅವರ ತಾತ್ವಿಕತೆಯನ್ನು ನಂಬಿ ಅದರಂತೆ ಬದುಕು ತೂಗಿಸುತ್ತಿಲ್ಲ. ಬದಲಾಗಿ ತಮ್ಮ ನೆಚ್ಚಿನ ನಾಯಕನಿಗೆ ಸಂತನ ಪದವಿ ಕೊಟ್ಟು, ಅವರ ಸುತ್ತ ಪಾವಿತ್ರ್ಯತೆಯ ಕೋಟೆ ಕಟ್ಟಿ, ಅದರಲ್ಲಿ ದೇವನೂರು ಎಂಬ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದಾರೆ. ಅವರಿಗೆ ದೇವನೂರು ಬರೆದಿದ್ದು, ಹೇಳಿದ್ದು ವಿಮರ್ಶಾತೀತ. ಅವರ ಕುರಿತ ಸಣ್ಣ ಟೀಕೆಯೂ `ದಲಿತ ವಿರೋಧಿ’ ನಡೆಯಾಗಿ; ಎಡಬಲ ಜಗಳದ ಫಲವಾಗಿ, ಬರೆದವರ ಕುಲಗೋತ್ರ ಜಾಲಾಡುವ ತನಕ, ಟೀಕಿಸಿದವರ ಪ್ರಗತಿಪರತೆ, ಬದ್ಧತೆಗಳನ್ನೇ ಅನುಮಾನಿಸುವ ತನಕ ಮುಂದುವರೆಯುತ್ತದೆ. ಭಕ್ತರು ಪ್ರತಿಷ್ಠಾಪಿಸಿದ್ದ ಕಲ್ಲಿನ ಮೂರ್ತಿ ತಿಕ್ಕಿತಿಕ್ಕಿ ನಯಸುಗೊಂಡು ಅದೀಗ ಥಳಥಳ ಹೊಳೆಯುವ ಗಾಜಿನ ಮೂರ್ತಿಯಂತೆ ಕಾಣಿಸುತ್ತಿದೆ. ತುಂಬ ಸಂಕೋಚ ಸ್ವಭಾವದ ದೇವನೂರು ಏಕೆ ಈ ಬಗ್ಗೆ ಸುಮ್ಮನಿದ್ದಾರೋ? ಇದು ನಮ್ಮ ಪ್ರೀತಿಯ ದೇವನೂರರಿಗೂ, ಅವರು ನಂಬಿಕೊಂಡು ಬಂದ ಸಿದ್ಧಾಂತಕ್ಕೂ, ಅವರ ಭಕ್ತಗಣಕ್ಕೂ ಅಷ್ಟೇನೂ ಒಳ್ಳೆಯದಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ.

ಈ ಎಲ್ಲದರ ನಡುವೆ `ಎದೆಗೆ ಬಿದ್ದ ಅಕ್ಷರ’ದ ಮುಖಪುಟದಲ್ಲಿ ಕೈಲಿ ಸಿಗರೇಟು ಹಿಡಿದು ನಿಂತ ದೇವನೂರರ ಚಿತ್ರ ನೋಡುವಾಗ,

`ಅಲ್ಲೊಂದು ದುಃಖವಿತ್ತು, ಸೇದಿದೆ
ಮೌನವಾಗಿ ಸಿಗರೇಟಿನಂತೆ.
ಕೆಲ ಕವನಗಳಷ್ಟೇ ಉರುಳಿದವು
ತುದಿಬೆರಳು ಉದುರಿಸಿದ ಬೂದಿಯಿಂದ..’

ಎಂಬ ಅಮೃತಾ ಪ್ರೀತಂ ಸಾಲು ನೆನಪಾಗುತ್ತಿದೆ. ಅವರ ತುದಿಬೆರಳ ಬೂದಿ ಉದುರಿಸಿದ ಇನ್ನಷ್ಟು ಅಕ್ಷರಗಳು ನಮ್ಮ ಕೈಸೇರಲಿ ಎಂದು ಆಶಿಸುವೆ.