ಎದೆಯಿಂದ ಬಿದ್ದ ಅಕ್ಷರ -ಲಕ್ಷ್ಮೀಶ ತೋಳ್ವಾಡಿ
[ ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕುರಿತು ವಿದ್ವಾಂಸರಾದ ಲಕ್ಷ್ಮೀಶ ತೋಳ್ವಾಡಿಯವರು ಮಾರ್ಚ್ 2013ರ ‘ಸಂವಾದ’ ಪತ್ರಿಕೆಗೆ ಬರೆದ ಬರಹ ನಮ್ಮ ಮರು ಓದಿಗಾಗಿ]
‘ಎದೆಯಿಂದ ಬಿದ್ದ ಅಕ್ಷರ’
ದೇವನೂರ ಮಹಾದೇವರ ‘ಎದೆಯಿಂದ ಬಿದ್ದ ಅಕ್ಷರ’-ಅದು ಎದೆಯಾಳದಿಂದ ಬಂದ ಅಕ್ಷರಗಳಾಗಿವೆ. ಎದೆಮುಟ್ಟಿ ಹೇಳಿ ಅನ್ನುತ್ತೇವಲ್ಲ; ಮಹಾದೇವ ಎದೆಮುಟ್ಟದೆ ಏನನ್ನೂ ಹೇಳಲಾರರು. ಕೆಲವೊಮ್ಮೆ ಎದೆಮುಟ್ಟಿಯೂ ಕೈ ಅಲ್ಲೇ ನಿಂತುಬಿಟ್ಟಿದೆಯೇನೋ- ಪೂರ್ತಿ ಹೇಳಲಿಲ್ಲವೇನೋ ಎನಿಸುತ್ತದೆ ಕೂಡಾ.
ಕನ್ನಡದಲ್ಲಿ ನನ್ನ ಕಾಲದ ಅದ್ಭುತ ಕೃತಿಗಳನ್ನು ಕೆಲವಾದರೂ ಓದಿರುವೆ. ಆದರೆ ಮಹಾದೇವರ ಕೃತಿ ಓದುವಾಗ ಇದು ನನ್ನ ತಾಯ್ಕಡಿ ಎಂಬ ಭಾವ ಉಕ್ಕುತ್ತಿದೆ. “ಎದೆಗೆ ಬಿದ್ದ ಅಕ್ಷರ’ ಓದುತ್ತಿದ್ದಂತೆ ಕುಮಾರವ್ಯಾಸ ತನ್ನನ್ನು ಲಿಪಿಕಾರ ಎನ್ನುವುದೇಕೆಂದು ಹೊಳೆಯುತ್ತಿತ್ತು. ಪಂಪ ತನ್ನ ಅದ್ಭುತ ವೃತ್ತವೊಂದರಲ್ಲಿ ಶರಶಯ್ಯೆಯಲ್ಲಿ ಕ್ಷತವಿಕ್ಷತಕನಾಗಿ ಬಿದ್ದಿದ್ದ ಭೀಷ್ಮನ ಮೈಯ ಹುಣ್ಣುಗಳನ್ನು ಹೊಳೆಯುವ ಅಕ್ಷರಗಳೆಂದು ‘ಮೈಯೊಳ್ ಅತ್ತಮಿತ್ತಂ ತೆರೆದಿರ್ದ ಪುಣ್ಗಳ್ ಎಸೆವಕ್ಕರದಂತಿರೆ ವೀರ ಸಿದ್ಧಾಂತದ ಶಾಸನಂ ಬರೆದ ಪೊತ್ತಗೆಯಂತೆ’ ಎಂದು ಏಕೆ ವರ್ಣಿಸುತ್ತಾನೆಂದು ಅರಿವಿಗೆ ಬರುತ್ತಿತ್ತು. ಇಲ್ಲಿರುವುದು ಪ್ರೀತಿ ಸಿದ್ದಾಂತವೆಂದು ಓದಿಕೊಳ್ಳಬೇಕು-ಅಷ್ಟೇ ಬದಲಾವಣೆ, ಮೈಮನಗಳಿಗಾದ ಗಾಯ ಬೇರೆ ದೇವನೂರು ನುಡಿವ ಅಕ್ಷರ ಬೇರೆ ಅಲ್ಲ.
ಬದುಕಿನ ಸತ್ಯ ಇರುವುದು ಮೇಲೆ ಮೇಲೆ ಅಲ್ಲ. ಅದಿರುವುದು ತಳದಲ್ಲಿ; ಆಳದಲ್ಲಿ, ಹರಿವ ನೀರನ್ನು ಜೀವನಕ್ಕೆ ರೂಪಕವಾಗಿ ಬಳಸುತ್ತೇವೆ. ನೀರು ಸಮುದ್ರದ ಕಡೆಗೆ ಹರಿಯುತ್ತಿದೆ. ಏಕೆಂದರೆ ಸಮುದ್ರಮಟ್ಟಕ್ಕಿಂತ ಕೆಳಗಿನ ಮಟ್ಟವೇ ಇಲ್ಲ. ಆದುದರಿಂದಲೇ ಈ ಭೂಮಿಯ ಎಲ್ಲ ಎತ್ತರಗಳನ್ನೂ ಸಮುದ್ರಮಟ್ಟಕ್ಕಿಂತ ಎಷ್ಟು ಎತ್ತರ ಎಂದೇ ನಾವು ಗ್ರಹಿಸುವುದು! ಮತ್ತು ಅದು ಕೆಳಗಿದೆ ಎಂದೇ ನೀರು ಅಲ್ಲಿಗೆ ಧಾವಿಸುವುದು. ದೇವನೂರರ ಎದೆಯಲ್ಲಿ ಒಂದು ಭಾವ ಸಮುದ್ರವೇ ಇದೆ. ಬರಿಯ ಭಾವತರಂಗವಲ್ಲ. ಆ ಸಮುದ್ರದಲ್ಲಿ ಎಲ್ಲರ ಎತ್ತರಗಳೂ ಪ್ರತಿಫಲನವಾಗುತ್ತಿವೆ.
ಕಾಳಿದಾಸನ ಮಾತು ನೆನಪಾಗುತ್ತಿದೆ. ದಯವಿಟ್ಟು ಪಾಂಡಿತ್ಯವೆಂದು ಇದನ್ನು ತಿಳಿಯಬಾರದು. ಪೂರ್ವ-ಪಶ್ಚಿಮ ಎರಡು ಕಡಲುಗಳನ್ನು ಸೀಳಿ ಅದರೊಡಲೊಳಗಿಂದ ಮೇಲೆದ್ದು ಬಂದಿದೆ ಹಿಮಾಲಯ ಎನ್ನುತ್ತಾನೆ ಕಾಳಿದಾಸ. ಹಾಗೆ ಎದ್ದು ನಿಂತು ಈ ಹಿಮಾಲಯ ಪೃಥ್ವಿಯ ಮಾನದಂಡವಾಗಿದೆ ಎನ್ನುತ್ತಾನೆ. ಅದ್ಭುತ ರಸ! ಅಲ್ಲದೆ ಮಾನದಂಡ, ಕಡಲಿನ ಒಳಗೂ ಇತ್ತು. ಇದೆ. ದೇವನೂರರ ಎದೆಕಡಲಿನಲ್ಲಿ ಲೋಕದ ಮಾನದಂಡವಾಗಿದೆ.
ತಳದಲ್ಲಿ ಇರುವವನಿಗೆ ಗೊತ್ತಿರುವ ಸತ್ಯವೇ ಸತ್ಯ. ಅವನು ಹೇಳಲಿ; ಹೇಳದೇ ಇರಲಿ. ಆ ಹೇಳದೇ ಇರುವ ಸತ್ಯವನ್ನು ‘ಸತ್ಯಸ್ಯ ಸತ್ಯ’ ಎಂದು ದೇವನೂರು ಹೇಳುತ್ತಾರೆ. `ಸತ್ಯಸ್ಯ ಸತ್ಯ’ ಎಂಬ ನುಡಿಕಟ್ಟು ತನಗೆ ಪ್ರಿಯ ಎಂದು ದೇವನೂರು ಬರೆದಿದ್ದಾರೆ. ಹೇಳಿದ ಸತ್ಯವೇ ತಿಳಿಯುವುದು ಕಷ್ಟವಾದ ಇಂದಿನ ಸಂದರ್ಭದಲ್ಲಿ ಹೇಳದೇ ಇರುವ ಸತ್ಯ ತಿಳಿಯುವುದಾದರೂ ಹೇಗೆ? ದೇವನೂರು ಸತ್ಯ ಹೇಳುವುದು ಅನಿವಾರ್ಯವೇ ಆದರೂ ಅದನ್ನು ಹೇಳದೇ ಅದು ತಿಳಿಯುವಂತಿದ್ದರೆ ಬಹಳ ಒಳ್ಳೆಯದಿತ್ತು ಎಂಬ ಭಾವವೊಂದು ಅವರ ಪ್ರತಿವಾಕ್ಯದಲ್ಲೂ ಇದೆ: ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಮತ್ತು ಸಾಮಾಜಿಕ ಸತ್ಯಕ್ಕೆ ಸಂಬಂಧಪಟ್ಟಂತೆ ಈ ನಿಲುವು ನನ್ನ ಮನಸ್ಸಿಗೆ ಹತ್ತಿರವಾದ್ದು. ಏಕೆಂದರೆ ಬದುಕಿನ ತಳದಲ್ಲಿ ಮಡುಗಟ್ಟಿರುವ ಮೌನದ ಅರ್ಥ ಇದೇ ಆಗಿದೆ.
‘ದ್ವಿಜ’ದ ಬದಲಿಗೆ ‘ತ್ರಿಜ’ ಎಂಬ ಮಾತನ್ನು ದೇವನೂರು ಮಾತ್ರ ಹೇಳಬಲ್ಲರು. ಗಾಯತ್ರೀ ಮಂತ್ರ ಬುದ್ಧಿ ಪ್ರಚೋದನೆಯ ಮಂತ್ರವೆಂದಾದರೆ, ನಿಜಕ್ಕೂ ಆಗಬೇಕಾದುದು ಹೃದಯ ಪ್ರಚೋದನೆಯಲ್ಲವೆ?-ಎಂದು ದೇವನೂರು ಮಾತ್ರ ಕೇಳಬಲ್ಲರು. ಆದಿಮ ಜನಾಂಗಕ್ಕೆ ಪಿತೃಭಾವ ಸಹಜವಾದುದರಿಂದ ಅವರ ಅನುಭವದ ವಾರಸಿಕೆಯಿಂದಲೇ ಈ ನಾಗರಿಕತೆ ಬೆಳೆದುದರಿಂದ, ಅವರನ್ನು ಹಾಗೆ ನೋಡುವುದೇ ಅಲ್ಲವೆ ಸಂಸ್ಕೃತಿ ಎಂದರೆ ಎಂದು ದೇವನೂರು ಮಾತ್ರ ಕೇಳಬಲ್ಲರು.
ನನಗೆ ಅನಿಸುತ್ತೆ. 1850ರ ಸುಮಾರಿಗೆ ಅಮೆರಿಕದ ರೆಡ್ ಇಂಡಿಯನ್ ಜನಾಂಗದ ನಾಯಕ ಚೀಫ್ ಸಿಯಾಟ್ಲ್ ಆಗಿನ ಅಮೆರಿಕಾಧ್ಯಕ್ಷನಿಗೆ ಒಂದು ಹೃದಯಸ್ಪರ್ಶಿಯಾದ, ನಾಗರಿಕತೆಗೇ ಹೊಸ ದಿಕ್ಕನ್ನು ತೋರಿಸಬಲ್ಲ ಪತ್ರವನ್ನು ಬರೆಯುತ್ತಾನೆ. ಅದು ಎಲ್ಲರ ಎದೆಗೆ ಬೀಳಬೇಕಾದ ಅಕ್ಷರ.
‘ನಮ್ಮೆಲ್ಲರನ್ನೂ ಪೊರೆಯುವ ಪ್ರಕೃತಿ ಒಂದೇ ಅಲ್ಲವೆ? ಇಲ್ಲಿರುವ ಸಸ್ಯರಾಶಿ, ಕ್ರಿಮಿಕೀಟ, ಪ್ರಾಣಿ ಪಕ್ಷಿ ಸಮೂಹ-ಇವೆಲ್ಲ ನಮ್ಮ ಸೋದರರಲ್ಲವೆ? ನಮ್ಮೆಲ್ಲರ ದೇವರೂ ಒಂದೇ ಅಲ್ಲವೆ? ಆದುದರಿಂದ ನಮ್ಮ ‘ಅದೃಷ್ಟ’ ಕೂಡ ಒಂದೇ ಅಲ್ಲವೆ?-ಹೀಗೆಂದು ತಾವು ಬಾಳಿ ಬದುಕುತ್ತಿರುವ ಭೂಮಿಯನ್ನು ಬಿಳಿಯರಿಗೆ ಮಾರಬೇಕೆಂದು ಒತ್ತಡ ಹೇರುತ್ತಿರುವ ಅಧ್ಯಕ್ಷನಿಗೆ ಕೇಳುತ್ತಾನೆ ಚೀಫ್ ಸಿಯಾಟ್ಲ್. ಈ ಪತ್ರದಲ್ಲಿ ಪಿತೃಭಾವ ಆವರಿಸಿಕೊಂಡಿದೆ. ಕನ್ನಡದಲ್ಲಿ ಇಂಥದೊಂದು ಪತ್ರವನ್ನು -ಪತ್ರವೇಕೆ? ಇಂಥದೊಂದು ಭಾವವನ್ನು ಜಾಗರಿಸಬಲ್ಲವರು-ದೇವನೂರು.
ದೇವನೂರು ಕನ್ನಡದ ಕುಟುಂಬ ವತ್ಸಲ. ಅವರಿಗೆ ನಮಸ್ಕಾರ.