‘ಎದೆಗೆ ಬಿದ್ದ ಅಕ್ಷರ’: ಪುಸ್ತಕ ವಿಮರ್ಶೆ– ಸುಭಾಷ್ ರಾಜಮಾನೆ

[ವರ್ತಮಾನ.ಕಾಂ ಅಂತರ್ಜಾಲ ತಾಣದಲ್ಲಿ 3.7.2015ರಂದು ಪ್ರಕಟವಾಗಿದ್ದ ಬರಹ, ನಮ್ಮ ಮರು ಓದಿಗಾಗಿ…]

“ಒಂದ್ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಹೀಗೆ ಕಟ್ತಾ ಚಾವಣಿಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈಮೇಲೆ ಆ ದೇವತೆ ಮಂಚಮ್ಮ ಆವಾಹಿಸಿಕೊಂಡು ‘ನಿಲ್ಸಿ ನನ್ ಮಕ್ಕಳಾ’ ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರಕ್ಕೆ ಜನ ತಮ್ಮ ಕೆಲ್ಸ ನಿಲ್ಸಿ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಹಾಗೂ ಆ ಜನರ ನಡುವೆ ಮಾತುಕತೆ ನಡೆಯುತ್ತದೆ: ‘ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ?’
‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’
‘ಓಹೋ, ನನಗೇ ಗುಡಿಮನೆ ಕಟ್ತಾ ಇದ್ದೀರೋ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ ಮಕ್ಕಳಾ?’
‘ನನಗಿಲ್ಲ ತಾಯಿ’- ಅಲ್ಲೊಬ್ಬ ಹೇಳ್ತಾನೆ.
‘ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ’
-ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ!

ಛಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ. ಈ ರೀತಿಯಲ್ಲಿ ಛಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ.”1
ದೇವನೂರ ಮಹಾದೇವ ಅವರು ಹೇಳುವ ವೈನೋದಿಕ ಧಾಟಿಯ ಈ ಪುಟ್ಟ ಕತೆಯು ತಮಾಷೆ ಮತ್ತು ವ್ಯಂಗ್ಯದಿಂದ  ಕೂಡಿದ್ದರೂ ಕುತೂಹಲಕರವಾಗಿದೆ. ಸುಮಾರು ಮೂರು ದಶಕಗಳಷ್ಟು ಹಿಂದೆಯೇ ದೇವನೂರ ಅವರು ಕತೆ ಕಾದಂಬರಿಯ ಬರವಣಿಗೆಗೆ ವಿದಾಯ ಹೇಳಿದವರು. ಪತ್ರಿಕೆಗಳ ಸಂಪಾದಕರ ಅಥವಾ ಗೆಳೆಯರ ಒತ್ತಾಯಕ್ಕೆ ಮಣಿದು ಅಪ್ಪಿತಪ್ಪಿ ಕೂಡ ಮತ್ತೇ ಕತೆ-ಕಾದಂಬರಿಯನ್ನು ಬರೆಯಲಿಲ್ಲ. ಆದರೆ ತಮಗೆ ಅನಿಸಿದ್ದನ್ನು ಹೇಳುವ ಅಥವಾ ಹೇಳಲಿಚ್ಚಿಸುವ ಅಭಿವ್ಯಕ್ತಿಯ ವಿಧಾನವಾಗಿ ಕಥನ ಮಾದರಿಗೆ ವಿದಾಯ ಹೇಳಿದವರಲ್ಲ. ಆದ್ದರಿಂದ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಬಹುತೇಕ ಲೇಖನಗಳು ದೇವನೂರರ ಸೃಜನಶೀಲ ಕತೆ-ಕಾದಂಬರಿಗಳ ಕಥನದ ವಿಸ್ತರಣೆಯೇ ಆಗಿವೆ. ಸಾಹಿತ್ಯ ಪ್ರಕಾರಗಳು ಸಂಕರಗೊಳ್ಳುತ್ತ, ತಮ್ಮ ಗಡಿಗೆರೆಗಳನ್ನು ಕಲಸಿಕೊಳ್ಳುತ್ತ, ಹೊಸ ಪ್ರಕಾರದ ಹುಟ್ಟಿಗೆ ಕಾರಣವಾಗುತ್ತಿರುವ ಸಂಕ್ರಮಣ ಅವಸ್ಥೆಯನ್ನು ಇದು ಸೂಚಿಸುತ್ತದೆಯೇ? ಪ್ರಸ್ತುತ ಸಮಾಜದಲ್ಲಿ ಜಾತಿ ಮತ ಧರ್ಮ ಲಿಂಗ- ಇವುಗಳ ನೆಲೆಯಲ್ಲಿ ಮನುಷ್ಯರನ್ನು ವಿಂಗಡಿಸುವ ವಿಚಾರಧಾರೆಗಳು ಬಲಗೊಳ್ಳುತ್ತಿರುವ ಸನ್ನಿವೇಶದಲ್ಲಿ ಕನ್ನಡ ಸಾಹಿತ್ಯ ಪ್ರಕಾರಗಳನ್ನು ವಿಂಗಡಿಸುವ ಗೆರೆಗಳೇ ಅಳಿಸುತ್ತಿರುವುದು ಒಂದು ಸೋಜಿಗ.2

ದೇವನೂರ ಅವರು ಹೇಳುವ ಈ ಕತೆಯಲ್ಲಿ ತಮಗೇ ಸೂರಿಲ್ಲದ ಪ್ರಾಯಶಃ ದಲಿತ ಜನರು ಮಂಚಮ್ಮಳಿಗೆ ಯಾಕೆ ಗುಡಿಯನ್ನು ಕಟ್ಟುತ್ತಿದ್ದಾರೆ? ದಲಿತರು ಈ ದೇಶದ ನೆಲದ ಮಣ್ಣಿಗೆ ಇಂದಿಗೂ ಅನ್ಯರಂತೆಯೇ ದಾರುಣವಾದ ಸ್ಥಿತಿಯಲ್ಲಿ ಬದುಕುತ್ತಿರುವುದು ವಾಸ್ತವ ಸತ್ಯ. ದೇವನೂರ ಮಹಾದೇವ ಅವರು ಈ ಕತೆಯ ಕೊನೆಯಲ್ಲಿ ಮಾಡುವ ವ್ಯಾಖ್ಯಾನ ಕತೆಯ ಸ್ವರೂಪ ಮತ್ತು ಅದರ ತಾತ್ವಿಕತೆಯನ್ನು ಸಂಪೂರ್ಣವಾಗಿ ಬದಲಿಸುತ್ತದೆ. ಛಾವಣಿ ಇಲ್ಲದ ಗುಡಿಯಲ್ಲಿ ಬುದ್ಧನನ್ನು ಇಟ್ಟರೆ ಅದೇ ತಮ್ಮ ದೇವರೆಂದು ದೇವನೂರರು ಹೇಳುತ್ತಿರುವುದು ಸ್ವಾರಸ್ಯಕರ ಸಂಗತಿಯಾಗಿದೆ. ಆದರೆ ಎರಡು ಸಾವಿರದ ಐದುನೂರು ವರ್ಷಗಳ ಹಿಂದೆಯೇ ದೇವರ ಇರುವಿಕೆ ಮತ್ತು ದೇವರ ಕಲ್ಪನೆಯನ್ನೆ ಬುದ್ಧ ಸಂಪೂರ್ಣವಾಗಿ ನಿರಾಕರಿಸಿದ್ದ; ಪುನರ್ ಜನ್ಮ ಹಾಗೂ ಆತ್ಮದ ಕಲ್ಪನೆಯನ್ನೂ ಅಲ್ಲಗಳೆದಿದ್ದ. ದೇವನೂರರಂತಹ ಸಮಾಜವಾದಿ ಚಿಂತಕರು ಇಪ್ಪತ್ತೊಂದನೆಯ ಶತಮಾನದಲ್ಲಿ ಬುದ್ಧನನ್ನು ದೇವರೆಂದು ಒಪ್ಪುವ ಸಾಂಸ್ಕೃತಿಕ ವೈರುಧ್ಯದ ಸ್ವರೂಪ ಯಾವುದು?

ಭಾರತೀಯ ಸಮಾಜವನ್ನು ವರ್ಣ, ಜಾತಿ, ಅಸ್ಪೃಶ್ಯತೆ, ವರ್ಗದ ನೆಲೆಗಳಲ್ಲಿ ಒಡೆದು ಹಾಕಿದ್ದ ಬ್ರಾಹ್ಮಣಶಾಹಿಯನ್ನು ವಿರೋಧಿಸಿದವನು ಬುದ್ಧ. ‘ಮಡದಿ-ಮಗು ಮನೆ-ಮಾರು ರಾಜ್ಯ-ಗೀಜ್ಯ’ಗಳನ್ನೆಲ್ಲ ತೊರೆದು ಮುನ್ನಡೆದ ಬುದ್ಧ, ತನಗೆ ಜ್ಞಾನೋದಯವಾದ ತರುವಾಯ ಹೀಗೆ ಹೇಳುತ್ತಾನೆ: ಎಲ್ಲ ಮನುಷ್ಯರೂ ಸಮಾನರು; ಹುಟ್ಟಿನಿಂದ ಮನುಷ್ಯ ದೊಡ್ಡವನಾಗಲಾರ, ಗುಣದಿಂದ ಆಗುತ್ತಾನೆ; ಹುಟ್ಟಿನ ಆಧಾರದಿಂದ ಶ್ರೇಷ್ಠತೆಯನ್ನು ಅಳೆಯುವುದು ಸರಿಯಲ್ಲ; ಮನುಷ್ಯನಿಗೆ ಉನ್ನತ ಆದರ್ಶಗಳು ಮತ್ತು ತನ್ನ ಸಹಚರರ ಬಗೆಗೆ ಮೈತ್ರಿಯನ್ನು ಹೊಂದುವುದು ಮುಖ್ಯ; ಪ್ರತಿಯೊಬ್ಬನಿಗೂ ಕಲಿಯುವ ಹಕ್ಕಿದೆ; ಜ್ಞಾನವೆನ್ನುವುದು ಉಣ್ಣುವ ಅನ್ನದಷ್ಟೇ ಮುಖ್ಯ; ಆದರೆ ಚಾರಿತ್ರ‍್ಯಹೀನ ಜ್ಞಾನ ಅಪಾಯಕಾರಿ ಆಗುತ್ತದೆ; ಆಸ್ತಿಯ ಖಾಸಗಿ ಒಡೆತನ ಒಂದು ವರ್ಗಕ್ಕೆ ಶಕ್ತಿಯನ್ನೂ, ಇನ್ನೊಂದು ವರ್ಗಕ್ಕೆ ದುಃಖವನ್ನೂ ತರುತ್ತದೆ; ನಿಜವಾದ ಧರ್ಮ ಮನುಷ್ಯನ ಹೃದಯದಲ್ಲಿರುತ್ತದೆಯೇ ಹೊರತು ಶಾಸ್ತçಗಳಲ್ಲಲ್ಲ; ಯಾವುದೂ ಅಂತಿಮವಲ್ಲ, ಪ್ರತಿಯೊಂದೂ ಪರಿವರ್ತನಶೀಲಕ್ಕೆ ಒಳಪಡುತ್ತಿರುತ್ತದೆ.3 ಸರ್ವರ ಸಮಾನತೆಯನ್ನು ಬೋಧಿಸಿದ, ಭೂಮಿಯ ಮೇಲಿನ ಸಕಲ ಜೀವಿಗಳ ಒಳಿತನ್ನು ಬಯಸಿದ, ಮನುಷ್ಯನ ಘನತೆ-ಗೌರವಗಳನ್ನು ಎತ್ತಿಹಿಡಿದ, ಸಮಾಜದಲ್ಲಿರುವ ಅಜ್ಞಾನವನ್ನು ವಿರೋಧಿಸಿ ನಗುತ್ತಿರುವ ಬುದ್ಧನನ್ನು ದೇವನೂರರು ಒಪ್ಪಿಕೊಳ್ಳುತ್ತಾರೆ. ವಾಸ್ತವವಾಗಿ ನಮ್ಮ ಸಮಾಜದಲ್ಲಿ ಜಾತಿ, ವರ್ಣ, ಅಸ್ಪೃಶ್ಯತೆಗಳು ಮನುಷ್ಯರನ್ನು ಮತ್ತು ಮನಸ್ಸುಗಳನ್ನು ಛಿದ್ರಛಿದ್ರ ಮಾಡಿರುವ ಹಿನ್ನೆಲೆಯಲ್ಲಿ ‘ಎದೆಗೆ ಬಿದ್ದ ಅಕ್ಷರ’ ಕೃತಿಯು ಬುದ್ಧ ಪ್ರತಿಪಾದಿಸಿದ ಸಮಾನತೆಯ ಮೌಲ್ಯದೊಂದಿಗೆ ಆರಂಭವಾಗಿರುವುದು ಧ್ವನಿಪೂರ್ಣವಾಗಿದೆ. ಮೊದಲ ಲೇಖನದ ಪೂರ್ವದಲ್ಲಿ ‘ನಾನು ಚಿತ್ರಿಸಿದಂತೆ ನನ್ನ ದೇವರು’ ಶೀರ್ಷಿಕೆಯ ಅಡಿಯಲ್ಲಿ ಎದೆಯ ಭಾಗದಿಂದ ರೇಖಾಚಿತ್ರದಲ್ಲಿ ಮೂಡಿ ನಿಂತಿರುವ ಬುದ್ಧನ ಚಿತ್ರ ಇನ್ನೂ ಸಾಂಕೇತಿಕವಾಗಿದೆ. ಇಂದಿನ ಭ್ರಷ್ಟ ರಾಜಕಾರಣ ಮತ್ತು ವಿಷಮ ಪರಿಸ್ಥಿತಿಗಳ ನಡುವೆ ಸಿಲುಕಿ ಒದ್ದಾಡುತ್ತಿರುವ ತಳ ಸಮುದಾಯಗಳ ನಡೆ ಯಾವ ದಿಶೆಯತ್ತ ಎಂಬುದನ್ನು ಇದು ಸೂಚಿಸುತ್ತಿರಬಹುದೇ?

ಮತ್ತೊಂದು ಮುಖ್ಯ ಸಂಗತಿಯೆಂದರೆ ಅಸ್ಪೃಶ್ಯ ರಾಗಿ ಜನಿಸಿ, ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಬೌದ್ಧರಾಗಿ ನಿಧನರಾದ ಎಂ.ಮರಿಸ್ವಾಮಿ ಅವರ ಬದುಕಿನ ಒಂದು ಕಹಿ ಘಟನೆಯನ್ನು ನಿರೂಪಿಸುವುದರ ಮೂಲಕ ಈ ಕೃತಿಯ ಕೊನೆಯ ಲೇಖನವು ಆರಂಭವಾಗಿ, ಅಂಬೇಡ್ಕರ್ ವಿರಚಿತ ಸಂವಿಧಾನದ ನಿಜವಾದ ಆಶಯಗಳ ತಳಪಾಯದ ಮೇಲಿನ ನಾಳಿನ ಭಾರತವನ್ನು ಕಟ್ಟಬೇಕಾಗಿದೆ ಎನ್ನುವ ಆಶಾಭಾವನೆಯೊಂದಿಗೆ ಮುಗಿಯುತ್ತದೆ. ಭಾರತದ ಚರಿತ್ರೆಯ ಪ್ರಾಚೀನ ಘಟ್ಟದಲ್ಲಿ ಬುದ್ಧ ಯಾವುದರ ವಿರುದ್ಧವಾಗಿ ಹೋರಾಟಗಳನ್ನು ನಡೆಸಿದನೋ ಆಧುನಿಕ ಭಾರತದ ಘಟ್ಟದಲ್ಲಿ ಅಂಬೇಡ್ಕರ್ ಅಂತಹ ಎಲ್ಲ ಅಸಮಾನತೆಯ ವಿರುದ್ಧ ಜೀವಮಾನವೆಲ್ಲ ಸಂಘರ್ಷ ನಡೆಸಿದ್ದನ್ನು ನೆನಪಿಸುತ್ತದೆ. ಅಂಬೇಡ್ಕರ್ ಬಾಲ್ಯದಿಂದಲೇ ಬುದ್ಧನ ಜೀವನ ಮತ್ತು ತತ್ವಗಳಿಂದ ತುಂಬ ಪ್ರಭಾವಿತರಾಗಿದ್ದರು. ಅವರು ಬುದ್ಧ ಮತ್ತು ಬೌದ್ಧ ಧರ್ಮವನ್ನು ಕುರಿತು ಆಳವಾದ ಅಧ್ಯಯನ ನಡೆಸಿದವರು; ಹಿಂದೂ ಧರ್ಮದ ಭಾಗವಾಗಿ ಬೆಳೆದು ಬಂದ ಜಾತಿ ವ್ಯವಸ್ಥೆಯ ಅವಮಾನದಿಂದ ಕುಪಿತರಾಗಿ ಬೌದ್ಧ ಧರ್ಮದ ಮೊರೆ ಹೋದವರು.

ಈ ಹಿನ್ನೆಲೆಯಲ್ಲಿ ಬುದ್ಧನ ಕಾಲದಿಂದ ಹಿಡಿದು ಅಂಬೇಡ್ಕರ್‌ವರೆಗೂ ಭಾರತೀಯ ಸಮಾಜ ಮತ್ತು ದುಡಿಯುವ ಸಮುದಾಯಗಳು ಚಾರಿತ್ರಿಕವಾಗಿ ಅನೇಕ ಬಗೆಯ ಬದಲಾವಣೆಗಳಿಗೆ ಸಾಕ್ಷಿಯಾಗಿವೆ. ಬುದ್ಧ ಉಪದೇಶಿಸಿದ ಸಮಾನತೆಯ ತತ್ವಗಳು ಎಷ್ಟೇ ಪ್ರಭಾವಕಾರಿಯಾಗಿದ್ದರೂ ಅವುಗಳಿಗೆ ಕಾನೂನಿನ ಚೌಕಟ್ಟು ಇರಲಿಲ್ಲ. ಈ ಹಂತದಲ್ಲಿ ದುಡಿಯುವ ವರ್ಗಗಳು ಹೆಚ್ಚು ಶೋಷಿತವಾಗಿದ್ದವು; ಜಾತಿಯ ಕಾರಣಕ್ಕಾಗಿಯೇ ಸಮಾಜದ ಮುಖ್ಯವಾಹಿನಿಯಿಂದ ದೂರವೇ ಇಡಲ್ಪಟ್ಟ ತಳಸಮುದಾಯಗಳು ಕ್ರೌರ್ಯದ ದಳ್ಳುರಿಯಲ್ಲಿ ಬೆಂದು ಹೋಗಿದ್ದವು. ಅಂಬೇಡ್ಕರ್ ಅವರ ದೀರ್ಘಕಾಲಿನ ಸಂಘರ್ಷಗಳ ಫಲವಾಗಿ ಸಂವಿಧಾನದಲ್ಲಿ ಸಮಾನತೆಯ ತತ್ವಗಳು ಸೇರುವಂತಾಗಿ ತಳಸಮುದಾಯಗಳು ಸ್ವಾಭಿಮಾನ ಮತ್ತು ಘನತೆಯಿಂದ ಬಾಳುವಂತಾಯಿತು. ಆದರೆ ಸಂವಿಧಾನೋತ್ತರ ಕಾಲಘಟ್ಟದ ಭಾರತದಲ್ಲಿ ದಲಿತ ಸಮುದಾಯಗಳು, ದುಡಿಯುವ ವರ್ಗಗಳು, ಬುಡಕಟ್ಟು ಜನಾಂಗಗಳು, ಅಲೆಮಾರಿಗಳು, ಕೂಲಿಕಾರರು, ಕಾರ್ಮಿಕರು, ರೈತರು, ಮಹಿಳೆಯರು-ಎಲ್ಲ ಶೋಷಿತ ಸಮುದಾಯಗಳು ವಾಸ್ತವವಾಗಿ ಘನತೆ ಮತ್ತು ಗೌರವಗಳಿಂದ ಬದುಕಲು ಸಾಧ್ಯವಾಗಿದೆಯೇ? ಜಾತಿ ತಾರತಮ್ಯಗಳು, ಮತೀಯ ಶಕ್ತಿಗಳು, ಕಾರ್ಪೋರೇಟ್ ಉದ್ಯಮಗಳು, ಜಾಗತೀಕರಣ-ಇವೆಲ್ಲ ಸೇರಿಕೊಂಡು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಈ ಹಿಂದೆಂದಿಗಿಂತಲೂ ಸಾವಿರಪಟ್ಟು ಹೆಚ್ಚಿಸಿಲ್ಲವೇ? ದೇವನೂರರ ‘ಎದೆಗೆ ಬಿದ್ದ ಅಕ್ಷರ’ ಕೃತಿಯು ಇಂತಹ ಹಲವಾರು ಪ್ರಶ್ನೆಗಳನ್ನು ಮುಖಾಮುಖಿ ಆಗಲು, ಚರ್ಚೆಗೆ ಆಹ್ವಾನಿಸಲು ಪ್ರೇರೆಪಿಸುತ್ತದೆ.4

ದೇವನೂರರು ತಮ್ಮ ತಾತ್ವಿಕತೆಯನ್ನು ಬುದ್ಧ, ಗಾಂಧಿ, ಅಂಬೇಡ್ಕರ್ ಮತ್ತು ಲೋಹಿಯಾ-ಈ ನಾಲ್ಕು ವ್ಯಕ್ತಿಗಳ ಚಿಂತನೆಗಳಿಂದ ರೂಪಿಸಿಕೊಂಡರೆಂದು ಅನಿಸುತ್ತದೆ. ಇವರಲ್ಲಿ ಆಧುನಿಕ ಕಾಲದ ಮೂವರು ಭಾರತೀಯ ಸಮಾಜವನ್ನು ವಿಘಟನೆ ಮಾಡಿರುವ ಜಾತಿ ವ್ಯವಸ್ಥೆಯನ್ನು ಭಿನ್ನವಾದ ನೆಲೆಯಲ್ಲಿಯೇ ಅರ್ಥೈಸಿಕೊಂಡವರು. ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರಿಂದ ರೈಲಿನಿಂದ ದಬ್ಬಿಸಿಕೊಂಡು ಹೊರಬಿದ್ದ ಅವಮಾನದ ಸನ್ನಿವೇಶ ಕುರಿತು ದೇವನೂರರು ಹೀಗೆ ಹೇಳುತ್ತಾರೆ: “ಆತನ ಆತ್ಮಕ್ಕೆ ಆಚೆ ಬಿದ್ದಿರುವ ಅಸ್ಪೃಶ್ಯ ಆತ್ಮಗಳು ಸೇರಿಕೊಂಡು ಅಸ್ಪೃಶ್ಯತನದ ಬೀಜ ಅವನ ಎದೆಗೆ ಬಿದ್ದಂತಾಗಿ ಮಹಾತ್ಮ ಆಗಲು ಆರಂಭಿಸುತ್ತಾನೆ. ಕೇವಲ ಈ ಒಂದು ಅವಮಾನಕ್ಕೆ ಆ ಮೋಹನದಾಸನು ‘ಮಹಾತ್ಮಾಗಾಂಧಿ’ಯಾಗಿ ಪರಿವರ್ತನೆಗೊಳ್ಳುವುದಾದರೆ ದೇಹವಿಡೀ, ಜೀವನವಿಡೀ ಅವಮಾನದಿಂದಲೇ ಮಾಡಲ್ಪಟ್ಟ ಅಸ್ಪೃಶ್ಯ ಬೆಳೆದರೆ ಅದೆಷ್ಟು ಎತ್ತರಕ್ಕೆ ಬೆಳೆಯಬಹುದೆಂಬುದು ನನ್ನ ಊಹೆ ಅಳತೆಗಳಿಗೆ ನಿಲುಕದಷ್ಟು ಎತ್ತರದ್ದಾಗಿಬಿಟ್ಟಿತು.” ಇದಕ್ಕೆ ಅವಮಾನಿತ ಜಗತ್ತಿನಿಂದ ಬಂದ ಅಂಬೇಡ್ಕರ್ ಬೆಳೆದ ಬಗೆ ಒಂದು ಅತ್ಯುತ್ತಮ ನಿದರ್ಶನವಾಗಿದೆ. ಗಾಂಧಿ ತನ್ನ ಹೊರಗಿನ ಶತ್ರುಗಳ ವಿರುದ್ಧ ಪ್ರತಿಭಟನೆ ನಡೆಸಿದವರು; ಆದರೆ ಅಂಬೇಡ್ಕರ್ ತಮ್ಮನ್ನು ಅಸ್ಪೃಶ್ಯನೆಂದು ದೂರೀಕರಿಸಿದ ತನ್ನ ನೆಲದ ಜನರೊಂದಿಗೆ ಸಂಘರ್ಷ ನಡೆಸಬೇಕಾಯಿತು. ಈ ಹಿನ್ನೆಲೆಯಲ್ಲಿ ದೇವನೂರರು ಬುದ್ಧ ಮತ್ತು ಗಾಂಧಿಯಲ್ಲಿನ ಸಂತತನವನ್ನು ಮೆಚ್ಚಿಕೊಳ್ಳುತ್ತಾರೆ. ಇದಕ್ಕೆ ಪೂರಕವಾಗಿ ದೇವನೂರರಲ್ಲಿ ಸಂತನನ್ನು ಹುಡುಕುವ, ಅವರನ್ನು ಸಂತ ಪದವಿಗೇರಿಸುವ ಭಕ್ತಗಣ ಬೆಳೆಯುತ್ತಿದೆ ಎನ್ನುವ ಆಪಾದನೆಗಳು ಕೇಳಿ ಬರುತ್ತಿವೆ.5

ದೇವನೂರರು ಮಹಾತ್ಮ ಗಾಂಧಿ ಅವರ ದಲಿತರನ್ನು ಕುರಿತು ಹೊಂದಿದ್ದ ಧೋರಣೆಗಳ ಮಿತಿಗಳನ್ನು ಗ್ರಹಿಸಿದರೂ ಗಾಂಧಿಯನ್ನು ಸಾರಾಸಗಟಾಗಿ ನಿರಾಕರಿಸುವುದಿಲ್ಲ. ಗಾಂಧಿ ಮತ್ತು ಅಂಬೇಡ್ಕರ್ ಅವರ ದಾರಿಗಳು ಭಿನ್ನವಾಗಿದ್ದರೂ ಗುರಿ ಒಂದೇ ಎಂದು ದೇವನೂರರು ಒಪ್ಪುತ್ತಾರೆ. ಇವರಿಬ್ಬರ ಚಿಂತನೆಗಳು ಪರಸ್ಪರ ಪೂರಕವೆಂದು ಕೌಟುಂಬಿಕ ಜಗಳ ಮತ್ತು ಸಹಬಾಳ್ವೆಯ ನೆಲೆಯಲ್ಲಿ ಪರಿಭಾವಿಸುತ್ತಾರೆ. ಗಾಂಧಿಯನ್ ಐಡಿಯಾಲಾಜಿಯಲ್ಲಿ ಸಾಮಾಜಿಕವಾಗಿ ಅತ್ಯಂತ ಕೆಳಸ್ತರಕ್ಕೆ ಸೇರಿದವನಿಗೂ ನ್ಯಾಯ ಸಿಗಬೇಕೆಂಬ ನಿಲುವಿದೆ. ಗಾಂಧೀಜಿಯವರ ತತ್ವವು ದಲಿತರನ್ನು ಉದಾರ ಮಾನವತಾವಾದಿ ನೆಲೆಯಲ್ಲಿ, ಅಪಾರ ಸಹಾನುಭೂತಿಯಿಂದ ನೋಡುತ್ತದೆ. ಆದರೆ ಅಂಬೇಡ್ಕರ್ ಅವರು ಜಾತಿ ಪದ್ಧತಿಯ ಆಚರಣೆಯಿಂದ ಉದ್ಭವಿಸುವ ಎಲ್ಲ ಬಗೆಯ ಅಸಮಾನತೆಗಳ ವಿರುದ್ಧ ಬಂಡಾಯವೆದ್ದರು; ಜಾತಿ ವಿನಾಶದ ಗುರಿಯನ್ನು ಹೊಂದಿದ್ದರು. ಗಾಂಧಿ ತತ್ವಗಳು ಜಾತಿ, ಅಸ್ಪೃಶ್ಯತೆ, ಬಡತನ, ಅವಮಾನದಂತಹ ಸಮಸ್ಯೆಗಳನ್ನು ತೀವ್ರ ಸಹಾನುಭೂತಿಯಿಂದ ಕಂಡು, ದಲಿತರ ಆರ್ಥಿಕ ಮತ್ತು ರಾಜಕೀಯ ಅಭೀಪ್ಸೆಗಳನ್ನು ನಿರ್ಲಕ್ಷ ಮಾಡುತ್ತವೆ. ಇದು ದಲಿತರ ಸಾಮಾಜಿಕ ಮತ್ತು ಆರ್ಥಿಕ ಸಂರಚನೆಯಲ್ಲಿ ಯಾವುದೇ ಗುರುತರವಾದ ಬದಲಾವಣೆಗಳನ್ನುಂಟು ಮಾಡಲಿಲ್ಲ. ಆದ್ದರಿಂದ ದಲಿತರ ಮೂಲಭೂತ ಸಮಸ್ಯೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತವೆ. ಇದಕ್ಕೆ ವಿರುದ್ಧವಾಗಿ ಅಂಬೇಡ್ಕರ್ ಅಸ್ಪೃಶ್ಯರನ್ನು ಸಂಘಟಿಸುವುದರ ಮೂಲಕ ಅವರನ್ನು ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಸಮಾನತೆಯ ಹಕ್ಕುಗಳಿಗಾಗಿ ಸಂಘರ್ಷ ಮತ್ತು ಹೋರಾಟ ನಡೆಸುವಂತೆ ಮಾಡಿದರು. ಹೀಗೆ ಗಾಂಧಿಗೆ ಲೋಹಿಯಾ, ಲೋಹಿಯಾಗೆ ಅಂಬೇಡ್ಕರ್ ಕೂಡಿಕೊಳ್ಳಬೇಕೆಂದು ದೇವನೂರರು ಆಶಿಸುತ್ತಾರೆ. ಇದು ಸಕಲವನ್ನು ಒಳಗೊಳ್ಳುವ ಪರಿಕಲ್ಪನೆಯಾಗಿದೆ.

ಜಾತಿ ಮತ್ತು ಅಸ್ಪೃಶ್ಯತೆಯ ಇರುವಿಕೆಯನ್ನು ಕುರಿತು ವಿವರಿಸುವ, ವ್ಯಾಖ್ಯಾನಿಸುವ ಸಮಾಜಶಾಸ್ತ್ರೀಯ ಅಧ್ಯಯನಗಳಿಗಿಂತಲೂ ದೇವನೂರರ ಲೇಖನಗಳಲ್ಲಿ ವ್ಯಕ್ತವಾಗಿರುವ ದೃಷ್ಟಿ-ಧೋರಣೆಗಳು ಹೆಚ್ಚು ತೀಕ್ಷ್ಣವಾಗಿವೆ. ಅಕಾಡೆಮಿಕ್ ವಲಯದ ಹೆಚ್ಚಿನ ಸಂಶೋಧನೆ, ಅಧ್ಯಯನಗಳಲ್ಲಿರುವ ತಾತ್ವಿಕತೆಯ ಭಾರವಾಗಲಿ ಮತ್ತು ಭಾಷಿಕ ಜಡತೆಯಾಗಲಿ ಇಲ್ಲಿಲ್ಲ. ದೇವನೂರರು ಮುಖ್ಯವಾಗಿ ರೂಪಕ ನೆಲೆಯ ಒಬ್ಬ ಸೃಜನಶೀಲ ಲೇಖಕರಾಗಿ ಅಸಮಾನತೆಯ ತಳಹದಿಯ ಮೇಲೆ ನಿಂತಿರುವ ನಮ್ಮ ಸಾಮಾಜಿಕ ವ್ಯವಸ್ಥೆಯ ವಸ್ತುಸ್ಥಿತಿಯನ್ನು ತೋರುಗನ್ನಡಿಯಾಗಿ ಬಿಂಬಿಸಿದ್ದಾರೆ. ಜಾಗತೀಕರಣದ ಈ ಆಧುನಿಕ ಕಾಲದಲ್ಲಿ ಜಾತಿ ವ್ಯವಸ್ಥೆ ಎಲ್ಲಿದೆ ಎಂದು ಕೇಳುವ ಹಾಗೂ ಜಾತಿ ಪದ್ಧತಿಯೇ ಮಾಯವಾಗಿ ಹೋಗಿದೆ ಎಂದು ವಾದಿಸುವವರ ಒಂದು ವರ್ಗವೇ ಸೃಷ್ಟಿಯಾಗಿದೆ. ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇರಲಿಲ್ಲವೆಂದು, ಅದು ವಸಾಹತುಶಾಹಿಯ ಹೊಸ ಸೃಷ್ಟಿಯೆಂದು ವಾದಿಸುವ ಒಂದು ನಿರ್ದಿಷ್ಟ ಬ್ರಾಹ್ಮಣ ವರ್ಗವೂ ಹುಟ್ಟಿಕೊಂಡಿದೆ. ಆದರೆ ಜಾತಿಯತೆ ಅಥವಾ ಜಾತಿ ಶ್ರೇಣೀಕರಣದ ವ್ಯವಸ್ಥೆ ಭಾರತೀಯ ಸಮಾಜದ ಕಟು ವಾಸ್ತವತೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಯಜಮಾನಿಕೆಯ ಸ್ಥಾನದಲ್ಲಿರುವ ಮೇಲ್ಜಾತಿಗಳು ಸಣ್ಣಪುಟ್ಟ ಸಂಗತಿಗಳಿಗೂ ದಲಿತರನ್ನು ಬಹಿಷ್ಕರಿಸುತ್ತಿವೆ; ದಲಿತ/ಳು ಎನ್ನುವ ಒಂದೇ ಕಾರಣಕ್ಕಾಗಿ ಅಂತರ್‌ಜಾತಿ ವಿವಾಹಗಳನ್ನು ನಿಷೇಧಿಸಲಾಗುತ್ತಿದೆ; ದಲಿತರು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸರ್ಕಾರದಿಂದ ಪಡೆಯುತ್ತಿರುವ ಮೀಸಲಾತಿಯನ್ನು ನಿಲ್ಲಿಸಬೇಕೆಂದು ಸವರ್ಣೀಯ ಜಾತಿಗಳು ಕೂಗುತ್ತಿವೆ; ಈ ಮೀಸಲಾತಿಯಿಂದಾಗಿಯೇ ಸಮಾಜದಲ್ಲಿ ಜಾತಿ ವ್ಯವಸ್ಥೆ ಪೋಷಣೆಯಾಗುತ್ತಿದೆ ಎನ್ನುವಂತಹ ಪ್ರತಿಗಾಮಿತನ ನಿಲುವುಗಳು ವ್ಯಕ್ತವಾಗುತ್ತಿವೆ. ಸಾಮಾಜಿಕವಾಗಿ ಜಾತಿ ತಾರತಮ್ಯತೆಗಳು ದೈವಿಕವೆಂದು ಸಾರುವುದರ ಮೂಲಕ ಅಸಮಾನತೆ ಸಹಜವೆಂದು ಸಮರ್ಥಿಸಲಾಗುತ್ತಿದೆ. ಸದ್ಯದ ಸ್ಥಿತಿಯಲ್ಲಿ ಶಿಕ್ಷಣ, ಸಂಪತ್ತು, ರಾಜಕೀಯ, ಅಧಿಕಾರಕ್ಕಾಗಿ ಮೇಲ್ಜಾತಿಗಳು ದೊಡ್ಡ ಪ್ರಮಾಣದಲ್ಲಿ ಸಂಘಟಿತವಾಗುತ್ತಿವೆ. ಆದರೆ ಕೆಳಜಾತಿಗಳು ತಮ್ಮತಮ್ಮ ಆಂತರಿಕ ಕಚ್ಚಾಟಗಳಿಂದಾಗಿ ವಿಘಟಿತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ‘ಎದೆಗೆ ಬಿದ್ದ ಅಕ್ಷರ’ ಜಾತಿ, ಅಸ್ಪೃಶ್ಯತೆ, ಹಿಂದುತ್ವ, ಕೋಮುವಾದಗಳನ್ನು ಕುರಿತು ವಾದ ವಾಗ್ವಾದಗಳನ್ನು ಹುಟ್ಟು ಹಾಕಿದೆ. ದಲಿತರ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಹಾಗೂ ನ್ಯಾಯಬದ್ದವಾಗಿ ದಕ್ಕಬೇಕಾಗಿರುವ ಹಕ್ಕುಗಳನ್ನು ಮಂಡಿಸಲೆತ್ನಿಸುತ್ತದೆ.

ದೇವನೂರರ ಕೃತಿಯಲ್ಲಿ ಲೋಕವಿಮರ್ಶೆಯ ಗುಣ ಮುಂದೆ ಬಂದಷ್ಟು ಆತ್ಮವಿಮರ್ಶೆಯ ಗುಣ ಮುನ್ನಡೆಗೆ ಬರುವುದಿಲ್ಲ; ಅವರು ತಮ್ಮನ್ನು ಒಂದು ಮನೋಧರ್ಮದ, ಒಂದು ಸಾಮಾಜಿಕ ಸ್ಥಿತಿಯ ಪ್ರತೀಕವಾಗಿಯೇ ಪರಿಭಾವಿಸಿಕೊಂಡು ಬರೆಯುತ್ತಾರೆ. ದೇವನೂರರು ವ್ಯಕ್ತಿಯಾಗಿ ಹೇಗೆ ಕಾಣುತ್ತಾರೆಂಬುದು ಅವರ ವಕ್ತಾರತನದಾಚೆಗೆ ಕುತೂಹಲಕರವಾಗಿಯೇ ಉಳಿಯುತ್ತದೆ. ಗಾಂಧಿ, ಅಂಬೇಡ್ಕರ್‌ರಷ್ಟು ಬುದ್ಧ ಇನ್ನೂ ದೇವನೂರರ ಪ್ರಜ್ಞೆಯ ಭಾಗವಾಗಿಲ್ಲ; ದಲಿತ ಸಮಾಜದ ತಳದಲ್ಲಿರುವವರ ನೋವು-ನಲಿವುಗಳ ನೆಲೆಗಳನ್ನು ಗ್ರಹಿಸುವ ದೇವನೂರರ ಬರವಣಿಗೆ, ಚಿಂತನೆಯ ಕ್ರಮ ಸಮಕಾಲೀನ ದಲಿತ ಮತ್ತು ಭಾರತೀಯ ಸಮಾಜದ ವೈವಿಧ್ಯಮಯ ಪಲ್ಲಟಗಳನ್ನು ಮತ್ತು ಅದರ ಸೂಕ್ಷ್ಮತೆಗಳನ್ನು ಗ್ರಹಿಸುವುದಿಲ್ಲ; ಆದ್ದರಿಂದ ದೇವನೂರರ ಚಿಂತನೆಯ ಮಾದರಿ ಕಳೆದ ಶತಮಾನದ ಎಪ್ಪತ್ತು-ಎಂಬತ್ತರ ದಶಕಗಳಲ್ಲಿ ರೂಪುಗೊಂಡು ಅದೇ ಚೌಕಟ್ಟುಗಳಲ್ಲಿ ಸ್ಥಗಿತಗೊಂಡಿದೆ.6 ಆಪಾದನೆಯ ರೂಪದಲ್ಲಿರುವ ಈ ನಿಲುವುಗಳು ದೇವನೂರರ ಚಿಂತನೆಯ ಆಳ-ಅಗಲಗಳನ್ನು ತುಂಬ ಸರಳೀಕರಿಸಿ ನೋಡುತ್ತವೆ. ದೇವನೂರರ ಬದುಕು ಮತ್ತು ಬರಹಗಳು ಅವರು ಪ್ರತಿನಿಧಿಸುವ ದಲಿತ ಸಮುದಾಯದಲ್ಲಿ ಕರಗಿ ಒಂದಾಗಿವೆ ಎನ್ನುವುದಕ್ಕೆ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಯಾವ ಪುಟ ತೆರೆದರೂ ಕುರುಹುಗಳು ಕಣ್ಣಿಗೆ ರಾಚುತ್ತವೆ. ನ್ಯಾಯಬದ್ದವಾಗಿ ತಮಗೆ ದಕ್ಕಬೇಕಾಗಿದ್ದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಹಕ್ಕು-ಸವಲತ್ತುಗಳಿಂದ ವಂಚಿತವಾಗಿರುವ ಹಾಗೂ ಪ್ರಸ್ತುತ ಸಂದರ್ಭದಲ್ಲಿ ದನಿಯೆತ್ತಿ ಕೇಳುವ ಬಲವಿಲ್ಲದೆ ಸೊರಗುತ್ತಿರುವ ಎಲ್ಲ ದಮನಿತ ಸಮುದಾಯಗಳ ಸಮಾನತೆಯನ್ನು ಆಶಿಸುವ ದೇವನೂರ ಅವರು ನಿಜವಾದ ಅರ್ಥದಲ್ಲಿ ಸಾಂಸ್ಕೃತಿಕ ನಾಯಕರಾಗಿದ್ದಾರೆ.

ಚರಿತ್ರೆಯುದ್ದಕ್ಕೂ ದಮನಕ್ಕೆ ಒಳಗಾಗುತ್ತ ಬಂದಿರುವ ಎಲ್ಲ ವರ್ಗಗಳ ಸಮಾನತೆಯ ನೆಲೆಯಲ್ಲಿ ಅವರ ಲೇಖನಗಳು ಮಾತನಾಡುತ್ತವೆ. ಮೇಲ್‌ನೋಟಕ್ಕೆ ಈ ಕೃತಿ ಬಿಡಿಬಿಡಿಯಾದ ಲೇಖನಗಳು ಮತ್ತು ಭಾಷಣಗಳ ಸಂಕಲನದಂತೆ ಕಂಡರೂ ಅದು ಏಕಕಾಲಕ್ಕೆ ನಾಲ್ಕು ದಶಕಗಳ ಕರ್ನಾಟಕದ ಸಾಹಿತ್ಯ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ವಿದ್ಯಮಾನಗಳನ್ನು ದಾಖಲಿಸುವ ಸಂಕಥನವಾಗಿದೆ; ಸದ್ಯದ ಕಾಲಮಾನದಲ್ಲಿ ಜಾತಿ ವ್ಯವಸ್ಥೆಯ ವಿಕಾರಗಳು ದಲಿತರನ್ನು ಮತ್ತಷ್ಟು ಅಧೋಗತಿಗೆ ತಳ್ಳುತ್ತಿವೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ದಲಿತರ ಮೇಲೆ ಸವರ್ಣೀಯರಿಂದ ನಡೆಯುವ ಹಿಂಸೆ, ಅತ್ಯಾಚಾರ, ದಬ್ಬಾಳಿಕೆ, ಕ್ರೌರ್ಯಗಳು ನಿಂತಿಲ್ಲ. ಊಳಿಗಮಾನ್ಯ ಮೌಲ್ಯಗಳ ಪಳೆಯುಳಿಕೆಗಳಂತಿರುವ ಹಳ್ಳಿಗಳಲ್ಲಿ ಕ್ಷುಲ್ಲಕ ಸಂಗತಿಗಳಿಗೂ ದಲಿತ ಜನಾಂಗದವರ ಬಹಿಷ್ಕಾರಗಳು ತೀರ ಸಾಮಾನ್ಯವಾಗಿ ಬಿಟ್ಟಿವೆ. ಈ ಹಿನ್ನೆಲೆಯಲ್ಲಿ ದೇವನೂರರ ಲೇಖನಗಳು ಸಾಮಾಜಿಕ ತಲ್ಲಣ ಮತ್ತು ದಲಿತ ಸಮುದಾಯಗಳ ವಸ್ತು ಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾದ ಹಾಗೂ ಸಂಕೀರ್ಣವಾದ ನೆಲೆಯಲ್ಲಿ ವಿಶ್ಲೇಷಿಸುತ್ತವೆ. ಇದರೊಂದಿಗೆ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ, ಅಸ್ಪೃಶ್ಯತೆಯ ಆಚರಣೆ, ಕಂದಾಚಾರ-ಇಂಥವುಗಳು ನಿರ್ನಾಮವಾಗಬೇಕು; ಪ್ರಸ್ತುತ ಸಾಂಪ್ರದಾಯಿಕವಾದ ಜಡ ಸಮಾಜವನ್ನು ಪರಿವರ್ತಿಸಬೇಕೆನ್ನುವ ತುಡಿತಗಳೇ ದೇವನೂರರ ಚಿಂತನೆಯಲ್ಲಿ ಅಂತರ್ಗತವಾಗಿವೆ. ಮಾರ್ಕ್ಸ್‌ ನ ಸಿದ್ಧಾಂತಗಳು ಈ ಜಗತ್ತನ್ನು ಬದಲಿಸುವ ಕಡೆಗೆ ಹೆಚ್ಚಿನ ಆಸಕ್ತಿಯನ್ನು ತೋರುವಂತೆ ದೇವನೂರರ ವಿಚಾರಧಾರೆಯು ಸ್ಥಾಪಿತ ಮೌಲ್ಯಗಳನ್ನು ಬುಡಮೇಲು ಮಾಡಿ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಯ ನೆಲೆಗಟ್ಟಿನ ಮೇಲೆ ‘ಸರ್ವರಿಗೆ ಸಮಬಾಳು; ಸರ್ವರಿಗೆ ಸಮಪಾಲು’ ಎನ್ನುವ ಸರ್ವಸಮಾನತೆಯ ಸಮಾಜವನ್ನು ನಿರ್ಮಿಸುವ ಇಂಗಿತವನ್ನು ಹೊಂದಿವೆ.

ಕೊನೆ ಟಿಪ್ಪಣಿಗಳು
1. ದೇವನೂರ ಮಹಾದೇವ, ‘ನನ್ನ ದೇವರು’, ಎದೆಗೆ ಬಿದ್ದ ಅಕ್ಷರ, ಪು. 5, ಅಭಿನವ ಪ್ರಕಾಶನ, 2012
2. ರಹಮತ್ ತರೀಕೆರೆ, ‘ತೇಜಸ್ವಿಯವರ ಮಾಯಾಲೋಕ’, ಕತ್ತಿಯಂಚಿನ ದಾರಿ, ಪು. 53, ಅಭಿನವ ಪ್ರಕಾಶನ, 2006, 2010
3. ಪ್ರಧಾನ ಗುರುದತ್ತ(ಸಂ), ಅಂಬೇಡ್ಕರ್, ‘ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್’, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು, ಸಂಪುಟ-3, ಪು. 464, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು, 1994-2010
4. ದೇವನೂರ ಮಹಾದೇವ, ಎದೆಗೆ ಬಿದ್ದ ಅಕ್ಷರ, ಪು. 301, ಅಭಿನವ ಪ್ರಕಾಶನ, 2012
5. ಎಚ್.ಎಸ್.ಅನುಪಮಾ, ‘ಎದೆಯ ಮಾತು ಮತ್ತು ಮೆರವಣಿಗೆ’, ಸಂವಾದ, ಪು. 27, ಏಪ್ರಿಲ್ 2013
6. ಹೆಚ್ಚಿನ ವಿವರಗಳಿಗೆ ನೋಡಿ- ಕೆ.ಸತ್ಯನಾರಾಯಣ, ‘ಎದೆಗೆ ಬಿದ್ದ ಪ್ರಚಾರ!’, ಕನ್ನಡ ಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭ, ಪು. 1 ಮತ್ತು 5, ಮಾರ್ಚ್ 10, 2013