‘ಎದೆಗೆ ಬಿದ್ದ ಅಕ್ಷರ’ ಎಂಬ ಸಿದ್ಧಾಂತ-ಹುಲಿಕುಂಟೆ ಮೂರ್ತಿ

[ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಕುರಿತ ಬರಹಗಳ ಸಂಕಲನಕ್ಕೆಂದು   ಡಿಸೆಂಬರ್ 2013ರಂದು ಬರೆದ ಲೇಖನ, ನಮ್ಮ ಬನವಾಸಿಗೆ ನೀಡಿದ್ದಕ್ಕೆ ಲೇಖಕರಿಗೆ ಧನ್ಯವಾದಗಳು]

 

edege

 

ನನ್ನ ತಲೆಮಾರಿನ ಅದೆಷ್ಟೋ ಮನಸ್ಸುಗಳು ಕನಸುಗಳನ್ನು ಅಕ್ಷರದ ಬೆನ್ನಿಗೆ ಕಟ್ಟಿ ಗತ ಹಾಗೂ ವರ್ತಮಾನದ ಚಲನೆಯನ್ನು ಅರ್ಥ ಮಾಡಿಕೊಳ್ಳಲಾರದೆ ಒದ್ದಾಡುತ್ತಿರುವಾಗ ಮಾದೇವರ ‘ಎದೆಗೆ ಬಿದ್ದ ಅಕ್ಷರ’ ಬಂದಿದೆ. ಈ ಕೃತಿ ಬರುವ ಒಂದೆರಡು ತಿಂಗಳು ಮುಂಚೆ ಅಕ್ಷರ ದಲಿತರೊಳಗೆ ಉಂಟುಮಾಡುತ್ತಿರುವ ವೈರುಧ್ಯಗಳನ್ನು ಕುರಿತು ಲೇಖನವೊಂದನ್ನು ಬರೆದಿದ್ದ ನನಗೆ ಆ ವೈರುಧ್ಯಗಳನ್ನು ವಿಭಿನ್ನವಾಗಿ ನೋಡುವ ನೋಟಕ್ರಮವೊಂದು ಈ ಪುಸ್ತಕದಿಂದ ದಕ್ಕಿತು. ಬುದ್ಧಿಯನ್ನು ಜಾತಿ ರಾಜಕಾರಣದ ಭಾಗವಾಗಿಸಿಕೊಂಡ ಸಮಾಜವೊಂದರಲ್ಲಿ ಅಕ್ಷರ ಎದೆಗೆ ಬೀಳುವ ಕಲ್ಪನೆಯೇ ಥ್ರಿಲ್ ನೀಡುವಂಥಾದ್ದು. ಹಾಗೆ ಬಿದ್ದ ಅಕ್ಷರ ಗತ ಹಾಗೂ ವರ್ತಮಾನವನ್ನು ಹೆಣೆಯಲು ನಡೆಸುವ ಹೆಣಗಾಟ ಸಮಕಾಲೀನ ಸಾಮಾಜಿಕ ಚಲನೆಯ ಸೂಚಕವೂ ಹೌದು. ಈ ಗೊಂದಲದಲ್ಲಿಯೇ ಜಗತ್ತಿನ ಕೋಟ್ಯಂತರ ನೋವುಂಡ ಮನಸ್ಸುಗಳು ಅಕ್ಷರ ಸಖ್ಯದ ಗೊಂದಲಕ್ಕೆ ಬೀಳುತ್ತಿದ್ದಾರೆ. ಈ ಅಕ್ಷರ ಶತಮಾನಗಳ ಮಾಯದ ಗಾಯದ ಮುಲಾಮಾಗಿ ಕೆಲಸ ಮಾಡಬಹುದಾದ ಆಸೆ ಎಲ್ಲ ದಮನಿತ ಸಮುದಾಯಗಳಿಗಿದ್ದರೂ ಒಮ್ಮೊಮ್ಮೆ ಆ ಗಾಯಗಳ ಮೇಲೆ ಮತ್ತೆ ಮತ್ತೆ ಬೀಳುವ ಬರೆಗಳ ರೀತಿಯೂ ವರ್ತಿಸಿ ಬೆಚ್ಚಿಬೀಳಿಸಿದೆ. ಈ ಸಂದರ್ಭದಲ್ಲಿ ‘ಅಕ್ಷರ ಎದೆಗೆ ಬೀಳುವ’ ಕ್ರಿಯೆ ಇಡೀ ಜಗತ್ತಿನ ದಮನಿತ ಸಮುದಾಯಗಳ ಮುಂದೆ ಅಕ್ಷರ ಸಖ್ಯದ ಸಾಧ್ಯತೆಯನ್ನು ತೆರೆದಿಡುತ್ತದೆ. ‘ಎದೆಗೆ ಬಿದ್ದ ಅಕ್ಷರ’ ಎಂಬ ನುಡಿಯೇ ಎಲ್ಲಾ ಕಾಲ-ದೇಶಗಳ ಬಿಡುಗಡೆಯ ದನಿಯಾಗಿ ನನ್ನಂಥವರಿಗೆ ಕಂಡಿದೆ. ಈ ನುಡಿಯ ಬೆಳಕಲ್ಲಿ ನಮ್ಮ ತಿಳಿವಳಿಕೆಯನ್ನು ತಿದ್ದಿಕೊಳ್ಳಲು ಯತ್ನಿಸುತ್ತಿದ್ದೇವೆ. ಇದಕ್ಕಾಗಿ ಮಾದೇವರಿಗೆ ಜಗತ್ತಿನ ಎಲ್ಲ ದಮನಿತರ ಪರವಾಗಿ ಥ್ಯಾಂಕ್ಸ್.

‘ಎದೆಗೆ ಬಿದ್ದ ಅಕ್ಷರ’ ಎಂಬ ಸಿದ್ಧಾಂತ

ಈ ಸಂಕಲನದ ತೊಂಬತ್ತು ಶೇಕಡಾ ಬರಹಗಳನ್ನು ಅಲ್ಲಲ್ಲಿ ಓದಿದ್ದರೂ ಅವೆಲ್ಲಾ ಒಟ್ಟಿಗೆ ಸಿಕ್ಕಾಗ ಅದೆಷ್ಟು ಖುಷಿಪಟ್ಟೆವೋ.. ನಮ್ಮ ಸುತ್ತಲಿನ ಎಲ್ಲ ವಿದ್ಯಮಾನಗಳಿಗೆ ಮಾದೇವರ ಅಭಿಪ್ರಾಯಕ್ಕೆ ಕಾಯುತ್ತಿದ್ದ ನನ್ನಂಥವರಿಗೆ ಈ ಸಂಕಲನ ಬೈಬಲ್; ಎಲ್ಲವೂ ಇದೆ ಇಲ್ಲಿ. ಅಂಬೇಡ್ಕರ್, ಗಾಂಧಿ, ಮಾರ್ಕ್ಸ, ಲೋಹಿಯಾ ಸಿದ್ಧಾಂತಗಳನ್ನು ಸರಿಯಾಗಿ ಅರ್ಥಮಾಡಿಸುವ ಒಂದು ಸಿದ್ಧಾಂತ ಸಿಕ್ಕಿಬಿಟ್ಟರೆ..? ನನ್ನಂಥ ನೂರಾರು ಯುವಕರು ಈ ಪುಸ್ತಕ ಬಂದಾಗಿನಿಂದ ಇಂದಿನವರೆಗೂ ತಮ್ಮೊಂದಿಗೆ ದೇಹಕ್ಕಂಟಿದ ಭಾಗದಂತೆ ಹೊತ್ತುಕೊಂಡು ಓಡಾಡುವುದನ್ನು ಕಂಡಿದ್ದೇನೆ. ಕೆಲವು ಹಿರಿಯರು ತಮ್ಮ ಮಾತುಗಳ ಮಧ್ಯೆ ಎದೆಗೆ ಬಿದ್ದ ಅಕ್ಷರಕ್ಕೆ ಮರಳುವುದನ್ನು ನೋಡಿದ್ದೇನೆ. ಮೇಷ್ಟ್ರು ಕೆ.ವೈ.ನಾರಾಯಣಸ್ವಾಮಿ ಅವರು ತಮ್ಮ ಪಿಹೆಚ್‍ಡಿ ವಿದ್ಯಾರ್ಥಿಗಳಿಗೆ ನೀಡಿದ ಮೊದಲ ಅಸೈನ್‍ಮೆಂಟ್ ಎದೆಗೆ ಬಿದ್ದ ಅಕ್ಷರದ ಓದು. ತಮ್ಮನ್ನು ಭೇಟಿ ಮಾಡುವ ವಿಧ್ಯಾರ್ಥಿಗಳಿಗೆ ಅಂಬೇಡ್ಕರರ ಬರಹ-ಬಾಷಣಗಳು, ಗಾಂಧಿ, ಕುಸುಮಬಾಲೆ, ಕುವೆಂಪು ಕುರಿತ ಓದಿನ ಬಗ್ಗೆ ಕೇಳುತ್ತಿದ್ದ ಕೆವೈಎನ್, ಈಗ ‘ಎದೆಗೆ ಬಿದ್ದ ಅಕ್ಷರ’ ಓದಿದ್ದೀರಾ ಎಂದು ಕೇಳುತ್ತಾರೆ. ಇಂಥ ನೂರಾರು ಕಾಲೇಜು ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಗೆ ಈ ಬರಹಗಳ ಬಗ್ಗೆ ಸೆಮಿನಾರನ್ನೋ, ವಿಮರ್ಶೆಯನ್ನೋ ಬರೆಯಲು ನಿರಂತರವಾಗಿ ಸೂಚಿಸುತ್ತಿದ್ದಾರೆ. ನಾಡಿನಾದ್ಯಂತ ಅದೆಷ್ಟೋ ಯುವಜನರು ತಮ್ಮ ಗುಂಪುಗಳಲ್ಲಿ ‘ಎದೆಗೆ ಬಿದ್ದ ಅಕ್ಷರ’ದ ಓದು- ಚರ್ಚೆ ನಡೆಸುತ್ತಿದ್ದಾರೆ. ಹಿರಿಯ ಬರಹಗಾರರಾದ ಎಸ್.ಜಿ.ಸಿದ್ಧರಾಮಯ್ಯ ಅಂಥವರು ಎಳೆಯರೊಟ್ಟಿಗೆ ಈ ಕೃತಿಯ ಸಾಧ್ಯತೆಗಳನ್ನು ಕುರಿತು ಮಾತನಾಡುತ್ತಿದ್ದಾರೆ. ಕವಿ ಸುಬ್ಬು ಹೊಲೆಯಾರರಂತೂ ಒಂದು ‘ಬಯಲು ಬಳಗ’ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂವಾದವೊಂದರಲ್ಲಿ ಈ ಕೃತಿಯ ಎರಡು ಲೇಖನಗಳನ್ನು ಓದಿ ಮತ್ತೇನೂ ಮಾತನಾಡದಿದ್ದು ಅಲ್ಲಿದ್ದ ಯುವಜನರಲ್ಲಿ ದೊಡ್ಡ ಪರಿಣಾಮವನ್ನು ಉಂಟುಮಾಡಿದೆ.

ನನಗೆ ಗೊತ್ತಿರುವ ಹಾಗೆ ಕನ್ನಡದ ತಿಳಿವಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರವೇಶ ಮಾಡಿದ ಇನ್ರ್ನೆಂದು ಕೃತಿಯಿಲ್ಲ- ಈ ಪುಸ್ತಕದ ಪ್ರಚಾರ ಕುರಿತ ಮಾತಲ್ಲ ಇದು.

ಬರಹ ಎಂಬ ಸಾಮಾಜಿಕ ಜವಾಬ್ದಾರಿ; ಓದೂ ಕೂಡ

ಬರಹ ಅಕ್ಷರ ತಿಳಿದ ವ್ಯಕ್ತಿಯ ಸಾಮಾಜಿಕ ಜವಾಬ್ದಾರಿ. ಅಕ್ಷರ ಗೊತ್ತಿಲ್ಲದ ಸಮುದಾಯದ ಜವಾಬ್ದಾರಿಯನ್ನೂ ಬರಹಗಾರರು ತಮ್ಮ ಅಕ್ಷರಮುಖಿ ಆಲೋಚನೆಗಳ ಮೂಲಕ ನಿಭಾಯಿಸುತ್ತಿರುತ್ತಾರೆ. ಆದರೆ, ಒಂದು ಸಮಾಜದ ಓದು ಈ ಜವಾಬ್ದಾರಿಯನ್ನು ನಿಭಾಯಿಸುವ ಪ್ರಕ್ರಿಯೆ ಸೋಜಿಗದ್ದು. ತಾನು ಓದುತ್ತಿರುವ ಬರಹವೇ ಓದುಗರ ಸಾಮಾಜಿಕ ಜವಾಬ್ದಾರಿಯನ್ನು ಸೂಚಿಸುತ್ತಿರುತ್ತದೆ ಅಥವಾ ಓದುಗರು ಆಯಾ ಲೇಖಕರ ಆಲೋಚನಾ ಕ್ರಮಗಳನ್ನು ತಮ್ಮೊಳಗೂ ಮುಂದುವರೆಸುತ್ತಿರುತ್ತಾರೆ. ಆದರೆ, ನವ್ಮ್ಮಂಥ ಶ್ರೇಣೀಕೃತ ಸಮಾಜದಲ್ಲಿ ಈ ಕ್ರಿಯೆ ಕುತೂಹಲಕಾರಿಯಾದದ್ದು. ದಮನಿತ ಸಮುದಾಯದಲ್ಲಿ ಹುಟ್ಟಿದ ಓದುಗರೊಬ್ಬರು ಭೈರಪ್ಪನಂಥವರ ಬರಹವನ್ನು ಸಾಮಾಜಿಕ ರೋಗವೆಂಬಂತೆ ಕಾಣುತ್ತಾರೆ. ಅಥವಾ ಹಾಗೆ ಕಂಡಿಲ್ಲವಾದರೆ ಅದನ್ನು ತನ್ನ ಸಾಮಾಜಿಕ ಜವಾಬುದಾರಿಯಿಂದಲ್ಲದೆ ಕಥನ ತಂತ್ರಕ್ಕೋ, ಭಾಷಾ ಲೋಲುಪತೆಗೋ ಮರುಳಾಗಿರುತ್ತಾರೆ. ಸಾಹಿತ್ಯ ನಿರ್ಮಿತಿಯ ಶುಷ್ಕತೆಯಿಂದ ಹುಟ್ಟುವ ಅಪಾಯವಿದು. ಆದರೆ, ಮಾದೇವರೋ, ಸಿದ್ಧಲಿಂಗಯ್ಯರೋ, ಕುವೆಂಪು, ಲಂಕೇಶ್, ಡಿಆರ್‍ಎನ್, ತೇಜಸ್ವಿಯವರೋ ತಳಸಮುದಾಯದ ಅಕ್ಷರಮುಖಿ ಸಮುದಾಯದ ಹೀರೋಗಳು. ಈ ಬರಹಗಾರರ ಮೂಲಕ ವಚನ ಚಳವಳಿ, ಕನಕದಾಸರು, ಕಬೀರ್, ಸೂಫಿ, ಝೆನ್, ಅಂಬೇಡ್ಕರ್, ಗಾಂಧಿ, ಲೋಹಿಯಾ ಈ ಸಮುದಾಯಗಳೊಳಗೆ ಇಳಿಯುತ್ತಾರೆ. ಇಲ್ಲಿ ಕೇವಲ ಸಾಹಿತ್ಯ ಶುಷ್ಕತೆಯಿಂದ ಹುಟ್ಟುವ ‘ಅಭಿಮಾನದ’ ಅಪಾಯವಿರುವುದಿಲ್ಲ; ಬದಲಾಗಿ ಸಮಾಜವೊಂದರ ಆಲೋಚನಾ ಮಾದರಿಯ ಬೆಳವಣಿಗೆಯ ಸೂಚ್ಯಂಕವಿರುತ್ತದೆ.

‘ಎದೆಗೆ ಬಿದ್ದ ಅಕ್ಷರ’ ಓದುಗರಲ್ಲಿ ಇಚಿಥಾ ಸಾಮಾಜಿಕ ಜವಾಬ್ದಾರಿಯನ್ನು ಹುಟ್ಟುಹಾಕುತ್ತದೆ. ಪೊಲೀಸ್ ಅಧಿಕಾರಿಗಳು, ವಿವಿಧ ಸರ್ಕಾರಿ ಸೇವೆಯ ಮೇಲಧಿಕಾರಿಗಳು, ಇಲಾಖಾ ಉಪನಿರ್ದೇಶಕರು, ಬಸ್ ಕಂಡಕ್ಟರ್‍ಗಳು, ಸಿನಿಮಾ- ಧಾರಾವಾಹಿ ನಟರು..ಇಂತಹ ಎಷ್ಟೋ ಮಂದಿ ತಮ್ಮನ್ನು ಭೇಟಿ ಮಾಡುವವರ ಜತೆ ‘ಎದೆಗೆ ಬಿದ್ದ ಅಕ್ಷರ’ ಕುರಿತು ಮಾತನಾಡುವುದನ್ನು ಕಂಡಿದ್ದೇನೆ. ಪಿಯುಸಿಗೆ ಪಾಠ ಮಾಡುವ ಗೆಳೆಯನೊಬ್ಬ ಈ ಪುಸ್ತಕದ ಕಾರಣಕ್ಕೆ ತನ್ನ ಜಿಲ್ಲೆಯ ಉಪನಿರ್ದೇಶಕರೊಂದಿಗೆ ಸಮಾನವಾಗಿ ಕುಳಿತು ಮಾತನಾಡುವುದನ್ನು ಕಂಡ ಇತರರು ಆ ಮ್ಯಾಜಿಕ್ಕಿಗೆ ಕಾರಣ ಹುಡುಕಲು ‘ಎದೆಗೆ ಬಿದ್ದ ಅಕ್ಷರ’ವನ್ನು ಸಾಲ ತೆಗೆದುಕೊಂಡಿದ್ದು ನಡೆದಿದೆ.

ಈ ಪುಸ್ತಕ ಪ್ರಕಟವಾಗಿ ವರ್ಷವಾದರೂ ಇಂದಿಗೂ ಫೇಸ್‍ಬುಕ್ ಥರದ ಸಾಮಾಜಿಕ ಜಾಲತಾಣಗಳಲ್ಲಿ ಮಾದೇವ ಎಷ್ಟೋ ಯುವಕರ ಪ್ರೊಫೈಲ್ ಫೋಟೋ ಆಗಿದ್ದಾರೆ. ಪ್ರಕಟವಾದ ಐದಾರು ಮುದ್ರಣಗಳನ್ನು ಖರೀದಿಸಿ ತಮ್ಮ ಲೈಬ್ರರಿಯಲ್ಲಿಟ್ಟುಕೊಂಡಿರುವ ಯುವಜನರಿದ್ದಾರೆ. ಪ್ರಥಮ ಮುದ್ರಣದ ಹೊರತಾಗಿ ನಚಿತರದ ಮೂರು ಮುದ್ರಣಗಳನ್ನು ಖರೀದಿಸಿದ ಯುವಕನೊಬ್ಬ ಪ್ರಥಮ ಮುದ್ರಣಕ್ಕಾಗಿ ಹಂಬಲಿಸಿ ಇಡೀ ಬೆಂಗಳೂರು ತಿರುಗಿ ಕೊನೆಗೆ ರಾಜಾಜಿನಗರದ ಪುಸ್ತಕದಂಗಡಿಯೊಂದರಲ್ಲಿ ಪ್ರಚಾರಕ್ಕೆಂದು ಶೋಕೇಸಿನಲ್ಲಿಟ್ಟಿದ್ದ ‘ಎದೆಗೆ ಬಿದ್ದ ಅಕ್ಷರ’ದ ಪ್ರಥಮ ಮುದ್ರಣವನ್ನು ಸಂಪಾದಿಸಿ ಪುಳಕವನ್ನು ಅನುಭವಿಸಿದ್ದನ್ನು ಹೇಗೆ ನೋಡಬೇಕೋ..ಇದನ್ನೆಲ್ಲಾ ಮಾದೇವರಿಗೆ ಹೇಳಿದರೆ ‘ಅದೇನೋ ನಂಗೆ ಗೊತ್ತಾಗ್ತಿಲ್ಲ’ ಅಂದುಬಿಡುತ್ತಾರೆ.

ಮಾದೇವ ನಮ್ಮೊಳಗು

ನಮ್ಮ ತಲೆಮಾರು ಚಳವಳಿ ಹಾಗು ಕನ್ನಡ ಸಾಂಸ್ಕøತಿಕ ರಾಜಕಾರಣದ ಮಾದರಿಗಳನ್ನು ಓದಿನಿಂದ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ‘ಎಪ್ಪತ್ತರ ದಶಕ’ದಲ್ಲಿ ಹೋರಾಟದ ದೊಂದಿ ಹಚ್ಚಿದ ಮಾದೇವ, ರಾಮಯ್ಯರಂಥವರ ಅನುಭವಗಳು ಹೆಚ್ಚು ಕಲಿಸಬಲ್ಲವು. ನೋವನ್ನೂ ಸೈದ್ಧಾಂತಿಕ ಹಿನ್ನೆಲೆಯಲ್ಲಿ ‘ಅನುಭವಿಸುವ’ ನತದೃಷ್ಟ ಸಮಾಜದ ಉದಾಹರಣೆಗಳೆಂಬಂತೆ ಇವತ್ತಿನ ದಲಿತ ಯುವಜನರು ಬದುಕುತ್ತಿದ್ದಾರೆ; ಇಂಥಾ ಹೊತ್ತಿನಲ್ಲಿ ಆ ಸಮಾಜದ ಒಂದು ಕಾಲದ ವರ್ತಮಾನವಾಗಿದ್ದು, ಈಗಲೂ ವರ್ತಮಾನದಲ್ಲಿ ನಮ್ಮ ಜತೆಗಿರುವ ವ್ಯಕ್ತಿಗಳು ಅವರನ್ನು ಹೇಗೆ ಕನೆಕ್ಟ್ ಮಾಡಿಕೊಳ್ಳುತ್ತಾರೆಂಬುದು ಕುತೂಹಲಕಾರಿ.

ಪೂನಾ ಪ್ಯಾಕ್ಟ್ ಸಂದರ್ಭದಲ್ಲಿ ಅಂಬೇಡ್ಕರರಿಗಾದ ಹಿನ್ನೆಡೆಯ ಬಗ್ಗೆ ಚಿಂತಿಸುವ ಒಬ್ಬ ದಲಿತ ಯುವಕ ಅಥವಾ ಯುವತಿ ಬಹುಜನ ಸಮಾಜ  ಪಕ್ಷ ಪ್ರತಿಪಾದಿಸುವ ಗಾಂಧಿ ವಿರೋಧವನ್ನು ತಮ್ಮೊಳಗೆ ಇಳಿಸಿಕೊಂಡಷ್ಟು ಸಲೀಸಾಗಿ ಮಾದೇವರ ಗಾಂಧಿ ಪ್ರೇಮವನ್ನು ಇಳಿಸಿಕೊಳ್ಳಲಾರರು. ಮಾದೇವ ಗಾಂಧಿಯನ್ನು ಅಂಬ್ಭೆಡ್ಕರರಿಗಿಂತ ಹೆಚ್ಚು ಪ್ರೀತಿಸುತ್ತಾರಾದ್ದರಿಂದ ಅವರ ಆಲೋಚನೆಗಳು ದಲಿತ ಸಮುದಾಯವನ್ನು ಮುನ್ನಡೆಸಲಾರವು ಎಂದು ವಾದಿಸುವ ಹುಡುಗರಿದ್ದಾರೆ. ಅದೇ ರೀತಿ ‘ಎದೆಗೆ ಬಿದ್ದ ಅಕ್ಷರ’ವನ್ನು ಓದಿದ ನಂತರ ಮಾದೇವರ ಗಾಂಧಿ ಪ್ರೇಮ ತಮ್ಮೊಳಗೂ ಇಳಿದು ಅದು ಅಂಬೇಡ್ಕರ್ ಹಾಗು ದಲಿತ ಹೋರಾಟ ಕುರಿತು ಹೆಚ್ಚು ಆಲೋಚಿಸುವಂತೆ ಮಾಡಿದ ಸೋಜಿಗಕ್ಕೆ ಒಳಗಾದ ಯುವಜನರಿದ್ದಾರೆ. ಅಂಬೇಡ್ಕರರಂತೆ ಲೋಹಿಯಾ, ವಿನೋಬಾರ ಚಿಂತನೆಗಳೂ ದಲಿತತ್ವದ ಎಚ್ಚರದ ಸ್ಥಿತಿಯನ್ನು ಕಾಯ್ದುಕೊಳ್ಳಲು ಸಹಕಾರಿ ಎಂಬುದನ್ನು ಈ ಪುಸ್ತಕದ ಓದು ನಮಗೆ ಕಾಣಿಸುತ್ತದೆ. ಹಾಗೂ ನೋವು ಪ್ರೇಮವನ್ನು ಬಯಸುವ ಸಹಜಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಇದು ಸಹಕಾರಿಯಾಗಿದೆ. ಈ ಥರದ ಪ್ರಕ್ರಿಯಾತ್ಮಕ ಪರಿಣಾಮವನ್ನು ಒಂದು ಪುಸ್ತಕ ಮಾಡುತ್ತಿರುವುದು ಕುತೂಹಲಕಾರಿ.

‘ಮನವ ಕಾಡುತಿದೆ’ ಎಂಬ ಇಪ್ಪತ್ತೊಂದು ಪದಗಳ ‘ದೊಡ್ಡ’ ಬರಹ ನಮ್ಮ ವೈಯಕ್ತಿಕ ನೋವುಗಳನ್ನು ಮರೆಸಿ ಬದುಕಿನ ಕಾರಣಗಳನ್ನು ಹಿಗ್ಗಿಸುತ್ತದೆ. ಇದು ಕನ್ನಡ ಸಾಹಿತ್ಯ ಪ್ರಜ್ಞೆಯ ನೈಜ ಕಾಳಜಿಯಾಗಬೇಕು; ಅಥವಾ ಆಗಿದೆ. ಇಡೀ ಪುಸ್ತಕದಲ್ಲಿ ನನಗೆ ಯಾವ ಬರಹ ಇಷ್ಟ ಎಂದು ಹೇಳಲೇಬೇಕಾದ ಅನಿವಾರ್ಯತೆ ಎದುರಾದರೆ ನಾನು ಇದನ್ನು ಹೇಳುತ್ತೇನೆ. ಉಳಿದವೆಲ್ಲವೂ ನನ್ನವೇ.. ನಮ್ಮವೇ..ದಲಿತ ಚಳವಳಿ ಕುರಿತ ಬರಹಗಳು, ಸಾಹಿತ್ಯ-ಸಂಸ್ಕøತಿಯ ಬರಹಗಳು, ಕೋಮುವಾದವನ್ನು ಕುರಿತ ಬರಹಗಳು ಓದುಗರಿಗೆ ಆಯಾ ವಿಷಯಗಳಲ್ಲಿ ಹೆಚ್ಚೆಚ್ಚು ಪಕ್ವತೆಯನ್ನು ತಂದುಕೊಡುತ್ತವೆ. ಎಲ್.ಬಸವರಾಜು, ಲಂಕೇಶ್, ಎಂಡಿಎನ್, ಆಲನಹಳ್ಳಿ ಕೃಷ್ಣ, ಖಾಸನೀಸ ಮೊದಲಾದ ವ್ಯಕ್ತಿಗಳ ಕುರಿತ ಬರಹಗಳಂತೂ ಕನ್ನಡಕ್ಕೆ ಅವರ ಮೇಲಿನ ಪ್ರೀತಿಯನ್ನು ಹೆಚ್ಚಿಸುತ್ತವೆ. ಮುಖ್ಯವಾಗಿ ಯುವಜನರಿಗೆ. ಮಾದೇವರ ಕುಸುಮಬಾಲೆ, ಒಡಲಾಳಗಳನ್ನು ಓದಿಕೊಂಡು ಬಂದ ನನ್ನಂಥವರಿಗೆ ‘ಎದೆಗೆ ಬಿದ್ದ ಅಕ್ಷರ’ ಬದುಕಿನ ದಾರಿ. ನಮ್ಮ ಸುತ್ತಲಿನ ಜಗತ್ತನ್ನು  ಕಾಣುವ ನೋಟ ಕ್ರಮ. ಇಡೀ ಬರಹಗಳಲ್ಲಿ ತಣ್ಣಗೆ ಪ್ರವಹಿಸುವ ಹೆಣ್ಣಿನ ಆದ್ರ್ರ ಸ್ಪರ್ಷ ನಮ್ಮನ್ನು ತಬ್ಬಿ ಅನಾಥ ಪ್ರಜ್ಞೆಯನ್ನು ದೂರ ಮಾಡಿ ಹಣೆಮುತ್ತು ನೀಡಿ ಬದುಕಲು ಪ್ರೇರೇಪಿಸುತ್ತದೆ. ಅದರ ಮಾನವಪ್ರೀತಿಯ ವಾಸನೆ ನಮ್ಮ ಜೀವೋದ್ದೀಪನಶಕ್ತಿಯಾಗಿ ಮರುಹುಟ್ಟು ನೀಡುತ್ತದೆ. ಅಕ್ಷರಕ್ಕೆ ಈ ಮಾಯಾಶಕ್ತಿಯನ್ನು ಕೊಟ್ಟ ಮಾದೇವರ ಪ್ರೀತಿಗೆ ಥ್ಯಾಂಕ್ಸ್.

ಜೀವವಿರೋಧಿ ಪೇಜಾವರರನ್ನೂ ಮಾದೇವ ಗುಬ್ಬಚ್ಚಿ ಎಂದದ್ದನ್ನು ಓದಿ ನಗು ಬಂದು ನಾವು ಪೇಜಾವರರನ್ನು ಬೈಯುವುದನ್ನು ಬಿಟ್ಟಿದ್ದೇವೆ. ಸಮಾನತೆಯ ಹುಡುಕಾಟವೆನ್ನುವುದು ನೋವುಂಡ ಜೀವದ ರಕ್ತದಲ್ಲಿ -ಲೋಕದ ಕ್ರೌರ್ಯದ ನಡುವೆಯೂ -ಸಮಾನತೆಯ ತಂಪಿನೊಂದಿಗೆ ಹರಿಯುತ್ತಿರುತ್ತದೆ ಎಂಬುದಕ್ಕೆ ಮಾದೇವ ಸಾಕ್ಷಿ. ಮಾದೇವ ನಮ್ಮೊಳಗಿನ ಒಳಗು ಎನ್ನುವುದನ್ನು ಕಂಡುಕೊಳ್ಳಲಿಕ್ಕಾಗಿ ಕಾರಣಗಳನ್ನು ಹುಡುಕುವುದು ಸರಿಯಲ್ಲವೇನೋ.. ಆದರೆ, ಶೋಷಿತ ಬುದ್ದಿಗೆ, ಸ್ನಾಯುಗಳಿಗೆ, ರಕ್ತಕ್ಕೆ ತನ್ನದೇ ಒಳಗಿನ ಹರಿವಾಗಿರುವ ಮಾನವಪ್ರೇಮವನ್ನು ಅರ್ಥಮಾಡಿಸಬೇಕಲ್ಲಾ… ಅದಕ್ಕಾಗಿ ಈ ಅಕ್ಷರಗಳು ಎದೆಗೆ ಬೀಳಬೇಕು.