ಎತ್ತಣ ಕುಸುಮಬಾಲೆ, ಎತ್ತಣ ನಾನು, ಎತ್ತಣಿಂದೆತ್ತ ಸಂಬಂಧವಯ್ಯ?-ಜೆ.ಶಶಿಕುಮಾರ್ 

[ದೇವನೂರು ಮಹಾದೇವರ ಕುಸುಮಬಾಲೆ ಕನ್ನಡದಿಂದ ಬೇರೆ ಭಾಷೆಗೆ ಅನುವಾದಗೊಂಡಾಗಿನ ಪ್ರಕ್ರಿಯೆ , ಮೂಲ ಕೃತಿಯ ಸಂಪಾದನೆ ಮತ್ತು ಕುಸುಮಬಾಲೆ ಮುರಿದು ಕಟ್ಟಿದ ಕನ್ನಡದ ಎಸ್ತೆಟಿಕ್ಸ್ ಕುರಿತು, ಜೆ. ಶಶಿಕುಮಾರ್ ಅವರು ‘ಋತುಮಾನ’ ಅಂತರ್ಜಾಲ ತಾಣದಲ್ಲಿ ಬರೆಯುತ್ತಿರುವ ಅಂಕಣ “ಅನುವಾದ” ದಲ್ಲಿ 7.9.2019 ರಂದು ಬರೆದ ಬರಹ ನಮ್ಮ ಮರು ಓದಿಗಾಗಿ… ]

 

“ಸಂಬಂಜ ಅನ್ನೋದು ದೊಡ್ಡದುಕನಾ…” ಅನ್ನುವ ಮಾತಿನೊಂದಿಗೆ ಕುಸುಮಬಾಲೆ ಕೊನೆಗೊಳ್ಳುತ್ತದೆ. ಆದರೆ, ಆ ಕೊನೆಯೊಂದಿಗೆ ಮೊದಲಾಯಿತು ನನ್ನ ಕುಸುಮಬಾಲೆಯ ಸಂಬಂಧ.

ಮಹಾದೇವರು ನನ್ನೊಂದಿಗೆ ತಾವೇ ಒಮ್ಮೆ ಹೇಳಿದ್ದ ಹಾಗೆ, ಕುಸುಮಬಾಲೆಗೂ ನನಗೂ ಏನೋ ನಂಟು. ಈ ನಂಟು ಒಂದೆರಡು ವರುಶಗಳದ್ದಲ್ಲ, ಒಂದು ದಶಕಕ್ಕೂ ಮಿಗಿಲಾದುದು. ನನಗೊಮ್ಮೆ ಅನ್ನಿಸಿದ್ದೂ ಉಂಟು ಕುಸುಮಬಾಲೆಯ ಚೆನ್ನ ನಾನೇ ಎಂದು!

ಕುಸುಮಬಾಲೆಯೊಂದಿಗಿನ ನನ್ನ ನಂಟಿನ ಕತೆ ಹೇಳುತ್ತ ಹೇಳುತ್ತ ಆ ನಂಟಿನಿಂದಾಚೆ ‘ಕುಸುಮಬಾಲೆ’ ಏನು ಎಂಬುದನ್ನು ಕಾಣಿಸುವ ಪ್ರಯತ್ನವೇ ಈ ಬರೆಹ. ಈ ಕತೆ ಹೇಳಲು ನನಗಿರುವ ಯೋಗ್ಯತೆ: ಅನುವಾದಗಳ ಸಂಪಾದಕನಾಗಿ, ಪ್ರಕಾಶಕನಾಗಿ ಹಾಗೂ ಅನುವಾದ ಅಧ್ಯಯನ ವಿದ್ವಾಂಸನಾಗಿ ಕುಸುಮಬಾಲೆಯ ಇಂಗ್ಲಿಶ್ ಅನುವಾದದ ಹುಟ್ಟು ಮತ್ತು ಬೆಳವಣಿಗೆಯ ಒಳಹೊರಗುಗಳನ್ನು ತುಂಬ ಹತ್ತಿರದಿಂದ ಕಂಡ ಅನುಭವ.

ಅದಾಗಿದ್ದು ಹೀಗೆ…

ಸುಮಾರು 11-12 ವರುಶಗಳ ಹಿಂದೆ, ಅಂದರೆ 2004-05ರಲ್ಲಿ-ಅದೇ ತಾನೇ ಇಂಗ್ಲಿಶ್ ಸಾಹಿತ್ಯದಲ್ಲಿ ಎಂಎ ಮುಗಿಸಿದ್ದ ನನಗೆ-ಮೈಸೂರಿನ ಭಾರತೀಯ ಭಾಶೆಗಳ ಕೇಂದ್ರೀಯ ಸಂಸ್ಥೆ(ಭಾಭಾಕೇಂಸಂ)ಯು ಸಾಹಿತ್ಯ ಅಕಾಡೆಮಿಯೊಂದಿಗೆ ಕೈಗೊಂಡಿದ್ದ ಮಹತ್ವಾಕಾಂಕ್ಷಿ ಕಥಾಭಾರತಿ ಯೋಜನೆಯಡಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉದ್ಯೋಗ ದೊರೆಯಿತು. ಈ ಯೋಜನೆಯ ಉದ್ದೇಶ ಭಾರತೀಯ ಭಾಶೆಗಳಲ್ಲಿ ರಚಿಸಲಾಗಿರುವ ನೂರು ಕ್ಲಾಸಿಕ್ ಕೃತಿಗಳನ್ನು ಮುಖ್ಯವಾಗಿ ಇಂಗ್ಲಿಶ್ ಹಾಗೂ ಜರ್ಮನ್, ಫ್ರೆಂಚ್, ಸ್ಪ್ಯಾನಿಶ್ ಹಾಗೂ ಇತಾಲಿಯನ್ ಭಾಶೆಗಳಿಗೆ ಅನುವಾದಿಸುವುದಾಗಿತ್ತು. ಕನ್ನಡದಿಂದ ಐದು ಕೃತಿಗಳು ಆಯ್ಕೆಗೊಂಡಿದ್ದವು. ಮಲೆಗಳಲ್ಲಿ ಮದುಮಗಳು, ಸರಸಮ್ಮನ ಸಮಾಧಿ, ಬೆಕ್ಕಿನ ಕಣ್ಣು, ಕುಸುಮಬಾಲೆ ಹಾಗೂ ವೈದೇಹಿಯವರ ಆಯ್ದ ಸಣ್ಣಕತೆಗಳು.

ಕೃತಿಗಳ ಅನುವಾದದ ಹಕ್ಕಿಗಾಗಿ ಲೇಖಕರನ್ನು ಸಂಪರ್ಕಿಸಲು ಆರಂಭಿಸುತ್ತಿದ್ದಂತೆ, ಯೋಜನೆಯ ಮುಖ್ಯಸ್ಥರಾದ ಡಾ. ಕೆ. ರಾಮಸಾಮಿಯವರು ಕುಸುಮಬಾಲೆಯ ಅನುವಾದದ ಹಕ್ಕಿಗೆಂದು ಮಹಾದೇವರೊಡನೆ ಮಾತಾಡಿದರು. ಆ ವಿಷಯವಾಗಿ ಚರ್ಚೆಗೆಂದು ಮಹಾದೇವರು ಸಂಸ್ಥೆಗೆ ಬಂದಾಗಲೇ ಅವರನ್ನು ಮೊದಲ ಬಾರಿ ಕಂಡು ಮಾತನಾಡಿಸಿದ್ದು. ಅದಾದ ನಂತರ ಮಹಾದೇವರು ಹಕ್ಕನ್ನು ನೀಡಿದ್ದೂ ಆಯಿತು. ಇಂಗ್ಲಿಶ್ ಅನುವಾದಕ್ಕೆ ಯು ಆರ್ ಅನಂತಮೂರ್ತಿಯವರ ಮೂಲಕ ರೊವೆನಾ ಹಿಲ್‍ರನ್ನು ಸಂಪರ್ಕಿಸಲಾಗಿ ಅಕಾಡೆಮಿಗಾದರೆ ನಾನು ಅನುವಾದಿಸುವುದಿಲ್ಲವೆಂದು ಉತ್ತರಿಸಿದರು. ಆನಂತರ ಹಿಂದಿಯ ಅನುವಾದಕ್ಕೆ ಚಂದ್ರಕಾಂತ ಕುಸನೂರರನ್ನು ಮಾತನಾಡಿಸಿದ್ದೂ ಆಯಿತು, ಅವರು ಒಪ್ಪಿಕೊಂಡಿದ್ದೂ ಆಯಿತು. ಇವೆಲ್ಲದರ ನಡುವೆ ನಾನು ಹಾಲಿ ಕೆಲಸವನ್ನು ಬಿಟ್ಟು ಚೆನ್ನೈಗೆ ಹೋಗಿದ್ದಾಯಿತು.

ಮೈಸೂರು ಬಿಟ್ಟ ನಾನು ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದಲ್ಲಿ ಕೆಲಸ ಮಾಡಿ 2009ರಲ್ಲಿ ಮೈಸೂರಿಗೆ ಮರಳಿ ದುಡಿಯಲಾರಂಭಿಸಿದ್ದು ಅದೇ ಭಾಭಾಕೇಂಸಂ 2012ರಲ್ಲಿ ಹೊಸದೆಹಲಿಯಲ್ಲಿರುವ ಆಕ್ಸ್‍ಫರ್ಡ್ ಯೂನಿವರ್ಸಿಟಿ ಪ್ರೆಸ್‍ನ ಭಾರತೀಯ ಶಾಖೆಯ ಮುಖ್ಯ ಕಚೇರಿಗೆ ಕಮಿಶನಿಂಗ್ ಎಡಿಟರ್ ಆಗಿ ಸೇರಿಕೊಂಡೆ. ಅಲ್ಲಿ ದ್ವಿಭಾಶಾ ನಿಘಂಟು ವಿಭಾಗದಿಂದ 2013ರ ಕೊನೆಯಲ್ಲಿ ಪ್ರತಿಷ್ಠಿತ ಅಕಡೆಮಿಕ್ ವಿಭಾಗದಲ್ಲಿ ಭಾರತೀಯ ಭಾಶೆಗಳಿಂದ ಇಂಗ್ಲಿಶ್‍ಗೆ ಅನುವಾದ ಮಾಡಿಸುವ ಕೆಲಸಕ್ಕೆ, ಅಂದರೆ ಕಮಿಶನಿಂಗ್ ಎಡಿಟರ್ ಆಗಿ ಸೇರಿಕೊಂಡೆ. ಇಷ್ಟರಲ್ಲಾಗಲೇ ಒಂದು ದಶಕ ಕಳೆದಿತ್ತು. ಅಲ್ಲಿ ಮರಳಿ ಬಳಿಬಂದಳು ಕುಸುಮಬಾಲೆ. ಕುಸುಮಬಾಲೆಯ ಆರಂಭದಲ್ಲಿ ಬರುವ ಅಲ್ಲಮನ ವಚನ, “ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯ?” ದಂತೆ, “ಎತ್ತಣ ಕುಸುಮಬಾಲೆ, ಎತ್ತಣ ನಾನು, ಎತ್ತಣ ಂದೆತ್ತ ಸಂಬಂಧವಯ್ಯ?”

ಕುಸುಮಬಾಲೆಯೂ, ಅದರ ಅನುವಾದದ ಹುಟ್ಟೂ…

ಕುಸುಮಬಾಲೆ ಮೊತ್ತಮೊದಲನೆಯದಾಗಿ 1985ರಲಿ ಸುದ್ದಿಸಂಗಾತಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಅದು ಪುಸ್ತಕ ರೂಪದಲ್ಲಿ ಹೊರಬಂದಿದ್ದು 1988ರಲ್ಲಿ. ಅದಾದ ಮಾರನೆಯ ವರುಶದಲ್ಲಿಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆಯುವ ಮೂಲಕ ಕೃತಿಕಾರ ದೇವನೂರ ಮಹಾದೇವರಿಗೆ ಕನ್ನಡದಲ್ಲಿ ಆ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಲೇಖಕ ಅನ್ನುವ ಗರಿಯನ್ನು ಮೂಡಿಸಿತು. ಇದು ಸಂಭ್ರಮದ ವಿಷಯವಾದರೆ, ಸಂಕಷ್ಟದ ವಿಷಯವೆಂದರೆ ಇದಾದ ನಂತರ ಸುಮಾರು ಮೂವತ್ತು ವಸಂತಗಳೇ ಕಳೆದರೂ ಮಹಾದೇವರು ಏನನ್ನೂ ಬರೆಯಲಾಗದೇ ಹೋದದ್ದು. ಏನನ್ನೂ ಅಂದರೆ, ಕತೆ ಕಾದಂಬರಿಗಳು. ಕಳೆದ ಕೆಲವರುಶಗಳಲ್ಲಿ ಅವರು ಸಾರ್ವಜನಿಕ ಬುದ್ಧಿಜೀವಿಯಾಗಿ, ತಮ್ಮ ಭಾಷಣ ಮತ್ತು ಬರೆಹಗಳ ಮೂಲಕ ಸಕ್ರಿಯರಾಗಿಯಂತೂ ಇದ್ದಾರೆ. ಅಭಿನವ ಪ್ರಕಾಶನ ಹೊರತಂದ ಅವರ ಭಾಷಣ ಮತ್ತು ಬರೆಹಗಳ ಸಂಗ್ರಹ ‘ಎದೆಗೆ ಬಿದ್ದ ಅಕ್ಷರ’ ನನಗಂತೂ ಮಹಾದೇವರು ಕುಸುಮಬಾಲೆಯ ನಂತರ ಬರೆಯದೇ ಹೋದ ಕತೆಕಾದಂಬರಿಗಳ ವಸ್ತುಗಳಾಗಿಯೇ ಕಾಣುತ್ತವೆ. ಪತ್ರಿಕೆಗಳಲ್ಲಿ ಕಾಣ ಸಿಕೊಂಡಿರುವ ಅವರ ಇತ್ತೀಚಿನ ಬರೆಹಗಳಲ್ಲಿ ಒಬ್ಬ ಸಮಾಜವಿಜ್ಞಾನಿಯನ್ನು ಕೂಡ ನಾವು ಕಾಣಬಹುದಾಗಿದೆ. ಅವೆಲ್ಲವನ್ನು ಚರ್ಚಿಸುವುದು ಈ ಲೇಖನದ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಕುಸುಮಬಾಲೆಗಷ್ಟೆ ಈ ಬರೆಹವನ್ನು ಸೀಮಿತಗೊಳಿಸುವುದು ಸರಿಯೆಂದು ಕಾಣುತ್ತದೆ.

ಕುಸುಮಬಾಲೆಯ ಇಂಗ್ಲಿಶ್ ಅನುವಾದ ಆಕ್ಸ್‍ಫರ್ಡ್ ಯೂನಿವರ್ಸಿಟಿ ಪ್ರೆಸ್ ಮೂಲಕ ಹೊರಬಂದಿದ್ದು 2015ರಲ್ಲಾದರೂ, ಅದರ ಅನುವಾದಕ್ಕೆ ಮೂಲ ಕನ್ನಡ ಕೃತಿಗಿರುವಷ್ಟೇ ಸುಧೀರ್ಘವಾದ ಇತಿಹಾಸವಿದೆ. ಇಂಗ್ಲಿಶ್ ಅನುವಾದವನ್ನು ಮೊದಮೊದಲು ಆರಂಭಿಸಿದವರು ಪೋಲಂಕಿ ರಾಮಮೂರ್ತಿ ಹಾಗೂ ಜ್ಯೂಡಿತ್ ಕ್ರೋಲ್(ಇವರು ಯು ಆರ್ ಅನಂತಮೂರ್ತಿಯವರ ‘ಭವ’ ಕಾದಂಬರಿಯನ್ನು ಇಂಗ್ಲಿಶ್‍ಗೆ ಅನುವಾದಿಸಿದ್ದಾರೆ). ರಾಮಮೂರ್ತಿಯವರ ನಿಧನದ ನಂತರ ಜ್ಯೂಡಿತ್ ಸಂಪೂರ್ಣವಾಗಿ ಅನುವಾದದ ಹೊಣೆ ಹೊತ್ತು ಪೂರ್ಣಗೊಳಿಸಿದರಾದರೂ, ತಾಂತ್ರಿಕ ಕಾರಣಗಳಿಂದಾಗಿ ಅದು ಪ್ರಕಟವಾಗಲಿಲ್ಲ. ಆನಂತರ, ಎ ಕೆ ರಾಮಾನುಜನ್ ಮನುಶೆಟ್ಟಿಯವರೊಂದಿಗೆ ಸೇರಿ ಕುಸುಮಬಾಲೆಯನ್ನು ಇಂಗ್ಲಿಶ್‍ಗೆ ಅನುವಾದಿಸಿ ಪೆಂಗ್ವಿನ್ ಇಂಡಿಯ ಮೂಲಕ ಹೊರತರಬೇಕೆಂದು ಒಪ್ಪಂದಕ್ಕೂ ಕಾಲಿಟ್ಟಿದ್ದರು. ಅವರಿಬ್ಬರ ಜೋಡಿ ಅದಾಗಲೇ ಮಹಾದೇವರ ಪ್ರಮುಖ ಸಣ್ಣಕತೆ ‘ಡಾಂಬರು ಬಂದುದು’ ಇಂಗ್ಲಿಶ್ ಅನುವಾದವನ್ನು ಮಾಡಿತ್ತು. ರಾಮಾನುಜನ್ 1993ರಲ್ಲಿ ನಿಧನರಾದ ನಂತರ ಆ ಯೋಜನೆಯೂ ನಿಂತುಹೋಯಿತು. ಹೀಗೆ ಕುಸುಮಬಾಲೆಯ ಇಂಗ್ಲಿಶ್ ಅನುವಾದ ಪ್ರಕಟಣೆಯ ಭಾಗ್ಯವನ್ನು ಪಡೆಯಲೇ ಇಲ್ಲ.

ಕುಸುಮಬಾಲೆಯ ಇಂಗ್ಲಿಶ್ ಅನುವಾದದ ಮರುಹುಟ್ಟಿಗೆ ಚಾಲನೆ ದೊರೆತಿದ್ದು 2011-12ರಲ್ಲಿ ಸೂಸನ್ ಡೇನಿಯಲ್‍ರ ಮೂಲಕ. ಹೈದರಾಬಾದ್ ಮೂಲದ ದಲಿತ ಅಧ್ಯಯನದ ಪ್ರಮುಖ ವಿದ್ವಾಂಸರಾದ ಸೂಸಿ ಥಾರೂ ಹಾಗೂ ಕೆ ಸತ್ಯನಾರಾಯಣ ಸಂಪಾದಿಸಿದ Steel Nibs Are Sprouting : New Dalit Writing From South India Dossier 2 (2013) ಕೃತಿಯಲ್ಲಿ ಇಂಗ್ಲಿಶ್ ಅನುವಾದದ ತುಣುಕೊಂದು ಕಾಣ ಸಿಕೊಂಡಿತು. ಇದಾದ ನಂತರ ಸೂಸನ್‍ರ ಸತತ ಪರಿಶ್ರಮದಿಂದಾಗಿ, 20ಕ್ಕೂ ಹೆಚ್ಚು ಕರಡುಗಳಲ್ಲಿ ತಿದ್ದಿ ತೀಡಿದ ಅನುವಾದದ ಸಂಪೂರ್ಣ ಹಸ್ತಪ್ರತಿ ಅದಾಗಲೇ ಚೆನ್ನೈನಲ್ಲಿರುವ ಪ್ರೆಸ್‍ನ ಅನುವಾದಗಳ ಸಂಪಾದಕರಾದ ಮಿನಿ ಕೃಷ್ಣನ್‍ರಿಗೆ ಹೋಗಿತ್ತು. ಅಲ್ಲಿಂದ ನನ್ನ ಕೈಸೇರಿದ್ದು 2014ರಲ್ಲಿ. ಕಮಿಶನಿಂಗ್ ಎಡಿಟರ್ ಆಗಿ ಪ್ರತಿಯೊಂದು ಹಸ್ತಪ್ರತಿಯನ್ನು ಓದಲೇಬೇಕಾದುದು ನನ್ನ ಕರ್ತವ್ಯ. ಹಾಗೆ ಓದಿ ಅದನ್ನು ಮತ್ತಷ್ಟು ಹರಿತಗೊಳಿಸುವ ಸಾಧ್ಯತೆ ಬಗ್ಗೆ ಮಹಾದೇವರಿಗೆ ಹೇಳಿದಾಗ ಅವರು ಅಷ್ಟು ಉತ್ಸಾಹವನ್ನು ತೋರಿರಲಿಲ್ಲ. ಕಾರಣ, ಅದಾಗಲೇ ಇಂಗ್ಲಿಶ್ ಅನುವಾದವನ್ನು ಹತ್ತಿಪ್ಪತ್ತು ಮಂದಿ ಗಣ್ಯರು ನೋಡಿಯಾಗಿತ್ತು. ಎಲ್ಲರೂ ಅದನ್ನು ಹಾಡಿಹೊಗಳಿದ್ದರೇ ಹೊರತು, ಅದನ್ನು ಉತ್ತಮಗೊಳಿಸುವುದಕ್ಕೆ ಏನು ಮಾಡಬೇಕು ಎಂಬುದರ ಬಗ್ಗೆ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿರಲಿಲ್ಲ. ಆಗ ನನ್ನ ಒತ್ತಾಯದ ಮೇರೆಗೆ ಮಹಾದೇವರು ಕಡೆಗೂ ಯೇಲ್ ಪದವೀಧರರೂ, ಫುಲ್‍ಬ್ರೈಟ್ ಸ್ಕಾಲರ್ ಆದ ಚಿತ್ರನಟ ಚೇತನ್‍ಗೆ ಕಳುಹಿಸಲು ಒಪ್ಪಿಕೊಂಡರು. ತಮಗಿದ್ದ ಎಲ್ಲ ಕೆಲಸದೊತ್ತಡದ ನಡುವೆಯೇ, ನಾವು ನೀಡಿದ್ದ ತುಂಬ ಕಡಿಮೆ ಅವಧಿಯಲ್ಲಿ ಹಸ್ತಪ್ರತಿಯಲ್ಲಿ ಎಲ್ಲರ ಕಣ್ತಪ್ಪಿ ಉಳಿದುಹೋಗಿದ್ದ ಓರೆಕೋರೆಗಳನ್ನು ಅಚ್ಚುಕಟ್ಟಾಗಿ ತಿದ್ದಿತೀಡಿ ನೇರ್ಪುಗೊಳಿಸಿಕೊಟ್ಟರು ಚೇತನ್.

ಇಂಗ್ಲಿಶ್ ಅನುವಾದಗಳ ಮುಖಪುಟಕ್ಕೆ ಪೇಂಟಿಂಗ್‍ಗಳನ್ನು ಬಳಸಿಕೊಳ್ಳುವುದು ಪ್ರೆಸ್‍ನ ಸಂಪ್ರದಾಯ. ಮಹಾದೇವರು ಇಂತಹ ವಿಷಯಗಳಲ್ಲಿ ತಮ್ಮದೇ ಆದ ಖಚಿತ ನಿಲುವು ಹೊಂದಿರುತ್ತಾರಾದ್ದರಿಂದ ಅವರ ಸಲಹೆ ಕೇಳಲಾಯಿತು. ಪಿ ಲಂಕೇಶ್‍ರು ಮಹಾದೇವರ ಸಮಗ್ರ ಕೃತಿಗಳನ್ನು ತಮ್ಮ ಪುಸ್ತಕ ಪ್ರಕಾಶನದ ಮೂಲಕ ಹೊರತಂದಾಗ ಮುಖಪುಟಕ್ಕೆ ಖ್ಯಾತ ಕಲಾವಿದರಾದ ಯೂಸಫ್ ಆರಕ್ಕಲ್‍ರ ಪೇಂಟಿಂಗನ್ನು ಬಳಸಿಕೊಂಡಿದ್ದರು. ಲಂಕೇಶ್‍ರ ಮೇಲೆ ಅಪಾರ ಅಭೀಮಾನವಿರಿಸಿಕೊಂಡಿರುವ ಮಹಾದೇವರಿಗೆ ಆ ಕಾರಣಕ್ಕೇ ಯೂಸಫ್‍ರ ಪೇಂಟಿಂಗ್‍ನ ಮೇಲೆ ಸೆಂಟಿಮೆಂಟ್ ಇದ್ದುದರಿಂದ ಅದನ್ನೇ ಬಳಸಿಕೊಳ್ಳಲು ಹೇಳಿದರು. ಅಲ್ಲಿಗೆ ಮುಖಪುಟ ಕೂಡ ತಯಾರಾಯಿತು.

ಆದರೆ, ಎಲ್ಲದಕ್ಕಿಂತ ದೊಡ್ಡ ಸಮಸ್ಯೆ ಎದುರಾದುದು ಕುಸುಮಬಾಲೆಯನ್ನು ಯಾವ ಸಾಹಿತ್ಯ ಪ್ರಕಾರದಡಿ ಸೇರಿಸಬೇಕೆಂಬುದು. ಪ್ರೆಸ್‍ನಲ್ಲಿ ಈ ಕುರಿತ ಚರ್ಚೆ ದೊಡ್ಡಮಟ್ಟದಲ್ಲಿಯೇ ನಡೆಯಿತು. ಕಾರಣ, ಪುಸ್ತಕದ ಗಾತ್ರ. ಆಗ ನನ್ನ ಅಭಿಪ್ರಾಯವನ್ನು ಕೇಳಲಾಗಿ ನಾನು ಕನ್ನಡದಲ್ಲಿ ಈಗಾಗಲೇ ‘ನೊವೆಲ್’ ಎಂದೇ ಪರಿಗಣ ಸಲಾಗಿರುವುದರಿಂದ ಇಂಗ್ಲಿಶ್‍ನಲ್ಲಿಯೂ ಹಾಗೇ ಮಾಡುವುದು ಉಚಿತ ಎಂಬ ಸಲಹೆಯನ್ನು ಕೊಟ್ಟೆನಾದರೂ, ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗಗಳೊಂದಿಗೆ ಚರ್ಚಿಸಿದ ನಂತರ ಕಡೆಗಿದನ್ನು ‘ನೊವೆಲ್’ ಎಂದೇ ಪರಿಗಣಿಸಿ ಪ್ರಕಟಿಸಲಾಯಿತು. (ಇದರ ಬಗ್ಗೆ ಮುಂದಿನ ಭಾಗದಲ್ಲಿ ವಿವರವಾಗಿ ಚರ್ಚಿಸುತ್ತೇನೆ). ಹಾಗೆ ಹೇಳುವುದಾದರೆ, ಪ್ರೆಸ್‍ನಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗಿರುವ ಎ ಕೆ ರಾಮಾನುಜನ್‍ರ ಸಂಸ್ಕಾರದ ಇಂಗ್ಲಿಶ್ ಅನುವಾದ ಕೂಡ ಗಾತ್ರದ ದೃಷ್ಟಿಯಿಂದ ನೀಳ್ಗತೆಯೇ ಆಗಿತ್ತು. ಯು ಆರ್ ಅನಂತಮೂರ್ತಿಯವರ ಮತ್ತೊಂದು ಕಾದಂಬರಿ ‘ಭಾರತೀಪುರ’ದ ಸುಶೀಲಾ ಪುನೀತಾರ ಇಂಗ್ಲಿಶ್ ಅನುವಾದ ಕೂಡ ಪ್ರೆಸ್‍ನ ಮೂಲಕವೇ ಹೊರಬಂದಿದ್ದು. ಸಂಸ್ಕಾರಕ್ಕೂ ಮೊದಲು ಪ್ರೆಸ್ ಹೊರತಂದ ಕನ್ನಡದಿಂದ ಇಂಗ್ಲಿಶ್ ಅನುವಾದವಾದ ಕೃತಿಯೆಂದರೆ, ಗಿರೀಶ್ ಕಾರ್ನಾಡರ ನಾಟಕ ತುಘಲಕ್. ಅದು ಈಗಲೂ ಪ್ರೆಸ್‍ನ ಮೊದಲ ಹತ್ತು ಬೆಸ್ಟ್ ಸೆಲ್ಲರ್‍ಗಳಲ್ಲಿ ಒಂದಾಗಿದೆ. ಪ್ರೆಸ್ ಪ್ರಕಟಿಸಿರುವ ಕನ್ನಡದ ಮತ್ತೊಬ್ಬ ಲೇಖಕರೆಂದರೆ ಎಸ್ ಎಲ್ ಭೈರಪ್ಪ. ಕುಸುಮಬಾಲೆಯ ಇಂಗ್ಲಿಶ್ ಅನುವಾದದೊಂದಿಗೆ ಮಹಾದೇವರು ಕೂಡ ಪ್ರೆಸ್ ಪ್ರಕಟಿಸಿದ ಗಣ್ಯ ಲೇಖಕರ ಸಾಲಿಗೆ ಸೇರಿಕೊಂಡರು. ಅಲ್ಲದೆ, ಮಾರಾಟಕ್ಕೂ ಮುನ್ನವೇ 1000 ಪ್ರತಿಗಳ ಆರ್ಡರ್ ಪಡೆಯುವುದರೊಂದಿಗೆ ಕುಸುಮಬಾಲೆ ಪ್ರೆಸ್‍ನ ಇತಿಹಾಸದಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿತು.

ಕುಸುಮಬಾಲೆ ಸೃಷ್ಟಿಸಿದ ‘ತೊಡಕು’

ಮಹಾದೇವರು ಕನ್ನಡ ಲಿಖಿತ ಕಾವ್ಯ ಪರಂಪರೆಯಲ್ಲಿದ್ದಂತೆ ಕುಸುಮಬಾಲೆಯನ್ನು ಬರೆಯುವಾಗ ಯಾವ ಪಂಕ್ಚುಯೇಶನ್ ಮಾರ್ಕ್ ಉಪಯೋಗಿಸದೆ ಒಂದೇ ಓಟದಲ್ಲಿ ಬರೆದಿದ್ದರೆಂದು ತೋರುತ್ತದೆ. ಆದರೆ, ಆ ಸಾಲುಗಳು ಮಾತ್ರ ಪರಂಪರಾನುಗತ ಕಾವ್ಯ ಪರಂಪರೆಗೆ ಸೇರಿದ್ದಲ್ಲ. ಅದು ನಮ್ಮ ಜಾನಪದ ಮಹಾಕಾವ್ಯ ಪರಂಪರೆಗೆ ಸೇರಿದ್ದು. ಆ ಸಾಲುಗಳ ಲಯ ಮಲೆಮಾದೇಶ್ವರ ಕಾವ್ಯದ ಸಾಲುಗಳನ್ನು ನೆನಪಿಗೆ ತರದೆ ಇರವು. ಅಂತಿಪ್ಪ ಬರೆಹವನ್ನು ಶಿಷ್ಟಲಿಖಿತ ಕಾವ್ಯಮಾದರಿಗೊಗ್ಗಿಸಿದ್ದು ಮಾತ್ರ ಕನ್ನಡದ ಪ್ರಮುಖ ವಿದ್ವಾಂಸರೂ, ಸಂಪಾದಕರೂ ಆಗಿದ್ದ ಎಲ್ ಬಸವರಾಜುರವರು. ಅವರು ತಮ್ಮ ಲಯಾಕಾರ ವಿನ್ಯಾಸ ನುಡಿಯಲ್ಲಿ ಕುಸುಮಬಾಲೆಯ ಬನಿಯನ್ನು ಹಿಡಿದಿಟ್ಟಿರುವ ರೀತಿಯೇ ಬಲುಸೊಬಗು. ಒಂದು ಕಡೆ ಅದರ ಸಾಮಾಜಿಕ ತತ್ವವನ್ನು, ಮತ್ತೊಂದು ಕಡೆ ಅದರ ನುಡಿವೈಶಿಷ್ಟ್ಯವನ್ನು ಕೊಂಡಾಡುತ್ತ ಅದನ್ನು ಕಾದಂಬರಿಯೆಂದು ಕರೆಯದೆ ಮಹಾಕಾವ್ಯ ಎಂದು ಕರೆಯಬೇಕೆಂಬ ನಿಲುವಿಗೆ ಬರುತ್ತಾರೆ.

‘ಕುಸುಮಬಾಲೆಯಲ್ಲಿ ದೇವನೂರ ಮಹಾದೇವರು ಅನಿರ್ಬಂಧಿತ ಪ್ರೇಮ ಸಂಬಂಧವೆಂಬ ದಾಳಿಯ ಮೂಲಕ ಜಾತಿವ್ಯವಸ್ಥೆಯನ್ನು ಗೇಲಿ ಮಾಡುತ್ತಾ, ಮಾನ್ಯತೆ ಇರುವುದು ಬದುಕುವ ಬದುಕಿನಿಂದಾಗಿಯೇ ಹೊರತು, ಹುಟ್ಟಿದ ಜಾತಿಯಿಂದಲ್ಲವೆನ್ನುತ್ತಾ ಜಾತೀಯತೆಯನ್ನು ಅನುಭಾವಿಕವಾಗಿ ಗೇಲಿ ಮಾಡುತ್ತ, ಅಕ್ಕ ಮಹಾದೇವಮ್ಮನನ್ನಾಗಲಿ ಕುಸುಮಬಾಲೆಯನ್ನಾಗಲೀ ವ್ಯಭಿಚಾರಿಗಳೆಂದು ಪರಿಗಣ ಸದೆ ಅವರನ್ನು ಕಾವ್ಯನಾಯಿಕೆಯರನ್ನಾಗಿ ಮಾಡಿ ಮಹಾಕಾವ್ಯದ ಕಥಾ ವಿಸ್ತಾರವನ್ನು ಬೆಳೆಸಿರುವ ಈ ಕಾವ್ಯದ ಶರೀರ ಶಾರೀರ ಎರಡನ್ನೂ ಗಮನಿಸಿದರೆ, ರೂಢಿಗತವಾಗಿ ಇದನ್ನೊಂದು ಕಾದಂಬರಿಯೆಂಬಂತೆ ಕರೆಯುವುದು ಅಜ್ಞಾನ. ವಾಸ್ತವವಾಗಿ ಶಿಷ್ಟ ಪರಿಸರವಿಲ್ಲದೆ ಕೇವಲ ಹಳ್ಳಿಗಾಡಿನವರಾಗಿ ಪ್ರಾಕೃತ ಕನ್ನಡವನ್ನೇ ಮಾತಾಡುತ್ತಿರುವ ಈ ತಾಯಂದಿರನ್ನು ಕುರಿತಂತೆ ಅದೇ ಜಾನಪದ ರೂಪದ ಧಾಟಿಯಲ್ಲೇ ಹರಡಿಕೊಂಡಿರುವ ಈ ಕೃತಿಯನ್ನು ಒಂದು ಅಭಿನವ ಜಾನಪದ ಕಾವ್ಯವೆಂದು ಮಾತ್ರವಲ್ಲ, ಮಹಾಕಾವ್ಯವೆಂದೇ ನಿರ್ಧರಿಸುವುದು ಒಳ್ಳೆಯದು’.

ಆ ಕಾರಣಕ್ಕಾಗಿಯೇ ಏನೋ ಆಕ್ಸ್‍ಫರ್ಡ್‍ನಲ್ಲಿ ಕುಸುಮಬಾಲೆಯನ್ನು ಯಾವ ಸಾಹಿತ್ಯಕ ಪ್ರಕಾರಕ್ಕೆ ಸೇರಿಸಬೇಕೆಂಬುದು ಪ್ರಶ್ನೆಯಾದಾಗ ಮಹಾದೇವರು ಎಲ್‍ಬಿಯವರ ನಿಲುವನ್ನೇ ಸಮರ್ಥಿಸಿದ್ದು.

ಕುಸುಮಬಾಲೆಯನ್ನು ಸೂಸನ್ ಡೇನಿಯಲ್ ಇಂಗ್ಲಿಷ್‍ಗೆ ಅನುವಾದಿಸಿ ಆಕ್ಸ್‍ಫರ್ಡ್ ಯೂನಿವರ್ಸಿಟಿ ಪ್ರೆಸ್(ಓಯುಪಿ)ಗೆ ಕಳಿಸಿಕೊಟ್ಟಾಗ ಆ ಕೃತಿ ಯಾವ ಸಾಹಿತ್ಯ ಪ್ರಕಾರಕ್ಕೆ ಸೇರುತ್ತದೆಯೆಂದು ನಿರ್ಧರಿಸುವ ಜವಾಬ್ದಾರಿ ಕಮಿಶನಿಂಗ್ ಎಡಿಟರ್ ಆಗಿ ನನ್ನ ಹೆಗಲ ಮೇಲೆ ಬಿತ್ತು. ಓಯುಪಿಯಂತಹ ಅಂತಾರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳಲ್ಲಿ ಇಂತಹ ನಿರ್ಧಾರಗಳನ್ನು ಒಬ್ಬರೇ ನಿರ್ಧರಿಸುವಂತೆಯೂ ಇಲ್ಲ. ಹಾಗಾಗಿ, ಪಬ್ಲಿಶಿಂಗ್ ಎಡಿಟರ್, ಮ್ಯಾನೇಜರ್, ಸೇಲ್ಸ್ ಮತ್ತು ಮಾರ್ಕೆಟಿಂಗ್‍ನ ಮುಖ್ಯಸ್ಥರೆಲ್ಲ ಸೇರಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗಿತ್ತಾದರೂ, ಅಲ್ಲಿ ಕನ್ನಡ ಗೊತ್ತಿದ್ದದ್ದು ಹಾಗಾಗಿ ಮೂಲದಲ್ಲಿ ಕೃತಿಯನ್ನು ಓದುವ ಅವಕಾಶ ಇದ್ದದ್ದು ನನಗೊಬ್ಬನಿಗೆ ಮಾತ್ರ. ನಾನು ಮೂಲದಲ್ಲಿ ಈಗಾಗಲೇ ಕಾದಂಬರಿಯೆಂದು ಸ್ವೀಕರಿಸಲಾಗಿದೆಯಾದ್ದರಿಂದ ಇಂಗ್ಲಿಷ್‍ನಲ್ಲಿ ಹಾಗೆಯೇ ಮಾಡುವುದು ಉಚಿತ ಎಂಬ ಸಲಹೆಯನ್ನು ಮ್ಯಾನೇಜರ್‍ಗೆ ನೀಡಿದೆ. ಅದಕ್ಕವರು ಒಂದು ಕೃತಿ ಯಾವ ಪ್ರಕಾರಕ್ಕೆ ಸೇರಿದ್ದು ಎಂದು ನಿರ್ಧರಿಸುವವರು ಯಾರು ಎಂಬ ಸವಾಲನ್ನು ಹಾಕಿದರು. ಇದನ್ನವರು ತತ್‍ಕ್ಷಣಕ್ಕೆ ಕೇಳಿದರಾದರೂ, ಅದು ಗಹನವಾದ ವಿಷಯವಾಗಿತ್ತು. ನಾನು ‘ವಿಮರ್ಶಕರು’ ಎಂಬ ಉತ್ತರವನ್ನು ಕೊಟ್ಟೆನಾದರೂ, ಸಾಹಿತ್ಯದ ವಿದ್ಯಾರ್ಥಿಯಾದ ಅದರಲ್ಲೂ ವಿಮರ್ಶೆಯ ಬಗ್ಗೆ ಹೆಚ್ಚಿನ ಆಸಕ್ತಿಯಿರಿಸಿಕೊಂಡಿದ್ದ ನನಗೆ, ನನ್ನ ಉತ್ತರ ಸಮಾಧಾನವನ್ನೇನೂ ತಂದುಕೊಟ್ಟಿರಲಿಲ್ಲ. ನನ್ನ ಆಳದ ಪ್ರಶ್ನೆ ಇಲ್ಲಿ ಓದುಗರ ಪಾತ್ರವೇನು ಎಂಬುದು!

ಮಹಾದೇವರಿಗೆ ಎಲ್‍ಬಿಯವರು ಹೇಳಿದ ಹಾಗೆ, ಕುಸುಮಬಾಲೆಯನ್ನು ಮಹಾಕಾವ್ಯವೆಂದು ಕರೆಯುವುದು ಉಚಿತವೇನೋ ಎಂದೆನಿಸಿತಾದರೂ, ಪ್ರಕಾಶಕರ ದೃಷ್ಟಿಯಿಂದ ನಾವು ಹಾಗೆ ಯೋಚಿಸುವಂತಿರಲಿಲ್ಲ. ಕಾರಣ, ‘ಮಹಾಕಾವ್ಯ’ ಎಂಬ ಸಾಹಿತ್ಯ ಪ್ರಕಾರ ಇಂದು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. ಇಂದು ಅತ್ಯಂತ ಬೇಡಿಕೆಯಲ್ಲಿರುವ ಸಾಹಿತ್ಯ ಪ್ರಕಾರವೆಂದರೆ, ಗದ್ಯ. ಅದು ಸೃಜನಶೀಲ ಆಗಿರಬಹುದು, ಅಥವಾ ಸೃಜನೇತರ ಆಗಿರಬಹುದು. ಮಾರುಕಟ್ಟೆಯಲ್ಲಿ ಮಹಾಕಾವ್ಯವಿರಲಿ, ಕಾವ್ಯಕ್ಕಾಗಲಿ, ನಾಟಕಕ್ಕಾಗಿಲಿ ಬೇಡಿಕೆಯಿಲ್ಲ ಎಂಬುದು ಪ್ರಕಾಶಕರ ವಾದ. ಆದರೆ, ಮಾರುಕಟ್ಟೆಯನ್ನು ಸೃಷ್ಟಿಸುವ ಪ್ರಯತ್ನವನ್ನಂತೂ ಯಾವ ಪ್ರಮುಖ ಪ್ರಕಾಶಕರೂ ಮಾಡುತ್ತಿಲ್ಲ. ಇಂತಹ ತಾಂತ್ರಿಕ ಕಾರಣಗಳಿಂದಾಗಿಯೇ ಜ್ಞಾನಪೀಠ ಚಂದ್ರಶೇಖರ ಕಂಬಾರರ ಮಹಾಕಾವ್ಯ ಚಕೋರಿಯ ಇಂಗ್ಲಿಶ್ ಅನುವಾದವಾದವನ್ನು ಪೆಂಗ್ವಿನ್ ಹೊರತಂದಾಗ ನೊವೆಲ್ ಎಂದು ಕರೆದರು. ಇದಲ್ಲದೆ, ಇಂದು ನೀಡಲಾಗುವ ಬಹುಪಾಲು ಸಾಹಿತ್ಯ ಪ್ರಶಸ್ತಿಗಳು ಗದ್ಯ ಪ್ರಕಾರ, ಅದರಲ್ಲೂ ನೊವೆಲ್‍ಗೆ ಮೀಸಲಾಗಿವೆ. ಹಾಗಾಗಿ, ಕೃತಿಯೊಂದನ್ನು ನೊವೆಲ್ ಎಂದು ಗುರುತಿಸದೇ ಹೋದಲ್ಲಿ ಅಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಳ್ಳುತ್ತದೆ. ಈ ತಾಂತ್ರಿಕ ಅಂಶದ ಬಗ್ಗೆ ಇಂಗ್ಲಿಶ್ ಪ್ರಕಾಶನ ಪ್ರಪಂಚದಲ್ಲಿರುವಷ್ಟು ಕಾಳಜಿ ಭಾರತೀಯ ಭಾಷೆಗಳಲ್ಲಿ ಇದ್ದಂತಿಲ್ಲ!

ಸಾಹಿತ್ಯದ ಮಟ್ಟದಲ್ಲಿ ಹೇಳುವುದಾದರೆ, ಕುಸುಮಬಾಲೆ “ಸಾಮಾನ್ಯಾರ್ಥದಲ್ಲಿ ಅದೊಂದು ಕತೆಯೋ ನೀಳ್ಗತೆಯೋ ಕಡೆಗೆ ಕಾದಂಬರಿಯೋ ಆಗದೆ ಮತ್ತು ಪಾತ್ರಗಳು ವಾಚಾಳಿಯಾಗಿರದೆ ಸ್ವಗತಲಹರಿಯಲ್ಲಿ ವಿರಮಿಸಿ, ಆಂತರಂಗಿಕ ಐಕ್ಯಸ್ಥಿತಿಯನ್ನೇ ಬಿಂಬಿಸುವುದರಿಂದ ಅದು ಒಂದು ನಾಟಕವೂ ಆಗದೆ-ಆಡುವ ಉಸುರಿನಂತೆ ಸಹಜ ಸರಾಗ ಸುಲಭವೇ ಆದ ಆಡುಭಾಷೆಯ ಉತ್ತಮ ಕವಿತೆಗಳು ಮೆರವಣ ಗೆ ಹೊರಟ ಒಂದು ಕಾವ್ಯವೋ ಮಹಾಕಾವ್ಯವೋ ಆಗುತ್ತದೆ”, ಎಂಬ ಎಲ್‍ಬಿಯವರ ಮಾತುಗಳನ್ನು ಅಲ್ಲಗೆಳೆಯುವುದ ಕಷ್ಟ. ಸಾಹಿತ್ಯಿಕ ಪ್ರಭೇದದ ಬಗ್ಗೆ ಇಂಗ್ಲಿಶ್‍ನಲ್ಲಿ ಕಾಲಕಾಲಕ್ಕೆ ದೊಡ್ಡ ಚರ್ಚೆಯೇ ನಡೆಯುತ್ತಾ ಬಂದಿದೆ. ಆದರೆ, ಕನ್ನಡದಲ್ಲಿ ಅಂತಹ ಚರ್ಚೆ ಕಾಣಸಿಗುವುದಿಲ್ಲ.

ಇಟಾಲಿಯನ್ ಮಾಕ್ರ್ಸಿಸ್ಟ್ ಸಾಹಿತ್ಯ ಚಿಂತಕ ಫ್ರಾಂಕೊ ಮೊರೆಟ್ಟಿ, ನೊವೆಲ್‍ನ ಸಿದ್ಧಾಂತದ ಬಗ್ಗೆ ಚರ್ಚಿಸುತ್ತ, ತನ್ನ History of the Novel, Theory of the Novel (2010) ಪ್ರಬಂಧದಲ್ಲಿ ‘Why novels are in prose’. ‘Prose nowadays so ubiquitous in novels that we tend to forget that it wasn’t inevitable ‘ (ಕಾದಂಬರಿಗಳು ಗದ್ಯದಲ್ಲಿ ಏಕೆ ಇರುತ್ತವೆ? ಗದ್ಯ. ಈ ದಿನಗಳಲ್ಲಿ ಕಾದಂಬರಿಗಳಲ್ಲಿ ಹಾಸುಹೊಕ್ಕಾಗಿರುವುದು ಅನಿವಾರ್ಯವೇನೂ ಅಲ್ಲ ಎಂಬುದನ್ನು ನಾವು ಮರೆಯುತ್ತೇವೆ) ಎಂದು ಹೇಳುತ್ತಾನೆ. ಈತ 2010ರಲ್ಲಿ ಎತ್ತಿದ ಪ್ರಶ್ನೆಗೆ ಕುಸುಮಬಾಲೆ 20 ವರುಶಗಳ ಹಿಂದೆಯೇ ಉತ್ತರ ನೀಡಿದಂತೆ ತೋರುತ್ತದೆ. ಈ ವಿಷಯವನ್ನು ಆತನ ಗಮನಕ್ಕೆ ತಂದಾಗ ಆತ ಅಚ್ಚರಿ ವ್ಯಕ್ತಪಡಿಸಿದ್ದೂ ಉಂಟು.

ಜಿ ಎಚ್ ನಾಯಕರು ಸಂಪಾದಿಸಿರುವ “ಶತಮಾನದ ಕನ್ನಡ ಸಾಹಿತ್ಯ” ಪುಸ್ತಕದಲ್ಲಿ ಕನ್ನಡ ಕಾದಂಬರಿ ಬಗ್ಗೆ ಡಾ. ಸಿ. ಎನ್. ರಾಮಚಂದ್ರನ್ ಹಾಗೂ ಡಾ. ಪುರುಷೋತ್ತಮ ಬಿಳಿಮಲೆಯವರು ಬರೆದಿರುವ ಎರಡು ಪ್ರಬಂಧಗಳಲ್ಲಿ ಕನ್ನಡದಲ್ಲಿ ಕಾದಂಬರಿಯ ಹುಟ್ಟು ಹಾಗೂ ಬೆಳೆವಣ ಗೆಯ ಬಗ್ಗೆ ಉತ್ತಮವಾದ ರೀತಿಯಲ್ಲಿ ಚರ್ಚಿಸಿದ್ದಾರೆ. ಆದರೆ. ಈ ಪುಸ್ತಕ ಪ್ರಕಟವಾಗಿ 15 ವರುಶಗಳೇ ಕಳೆದಿವೆ. ಈ 15 ವರುಶಗಳಲ್ಲಿ ಸಾಹಿತ್ಯಿಕ ಪ್ರಭೇದ ಸಿದ್ಧಾಂತಗಳು ಸಾಕಷ್ಟು ಬೆಳೆದಿವೆ.

1900-1925ರ ಕನ್ನಡ ಕಾದಂಬರಿ ಘಟ್ಟವನ್ನು ಗುರುತಿಸುವ ಡಾ. ಸಿ. ಎನ್. ರಾಮಚಂದ್ರನ್, ಅಲನ್ ರಾಡ್‍ವೆ ಎಂಬ ವಿಮರ್ಶಕ ‘ಅರ್ಥಮೀಮಾಂಸೆಯ ಇಕ್ಕಟ್ಟು'(Hermeneutic Dilemma) ಎಂದು ಗುರುತಿಸುವ ಸಮಸ್ಯೆಯ ಬಗ್ಗೆ ಮಾತನಾಡುತ್ತ, ಆತನ ಮಾತುಗಳನ್ನು ಸಾರರೂಪದಲ್ಲಿ ಹೀಗೆ ಅನುವಾದಿಸುತ್ತಾರೆ: ಒಂದು ಕೃತಿಯ ಸ್ವರೂಪವನ್ನು ಗುರುತಿಸಲು ಆ ಕೃತಿಯನ್ನೊಳಗೊಂಡಿರುವ ಸಾಹಿತ್ಯಿಕ ಪ್ರಭೇದದ-genre-ಅರಿವಿರಬೇಕು. ಆದರೆ ಆ ಪ್ರಭೇದದ ಅಥವಾ ವರ್ಗದ ಅರಿವು ಅದು ಒಳಗೊಳ್ಳುವ ಕೃತಿಗಳಿಂದಲೇ ರೂಪಿಸಲ್ಪಟ್ಟಿರುತ್ತದೆ.

ಅದೇ ಪುಸ್ತಕದಲ್ಲಿ ಡಾ. ಪುರುಷೋತ್ತಮ ಬಿಳಿಮಲೆಯವರು 1929-1950ರ ಕನ್ನಡ ಕಾದಂಬರಿ ಘಟ್ಟದ ಬಗ್ಗೆ ಬರೆಯುತ್ತ, ಸಾಮಾಜಿಕ ಕಾದಂಬರಿಗಳನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಿಕೊಂಡು ಚರ್ಚಿಸಿದ್ದಾರೆ: ಅ. ರಾಷ್ಟ್ರೀಯ ಸಮಸ್ಯೆಗಳ ಕುರಿತಾದ ಕಾದಂಬರಿಗಳು, ಆ. ಸಾಮಾಜಿಕ ಸಮಸ್ಯೆಗಳ ಕುರಿತಾದ ಕಾದಂಬರಿಗಳು, ಇ. ಕೌಟುಂಬಿಕ ಸಮಸ್ಯೆಗಳ ಕುರಿತಾದ ಕಾದಂಬರಿಗಳು ಹಾಗೂ ಈ. ಜನಪ್ರಿಯ ಕಾದಂಬರಿಗಳು. ಆದರೆ, 1950ರ ನಂತರ ನವ್ಯ ಚಳವಳಿಯ ಪ್ರಭಾವದಿಂದ ಬಂದ ಕಾದಂಬರಿಗಳು ಹಾಗೂ ದಲಿತ-ಬಂಡಾಯ ಕಾದಂಬರಿಗಳು ಇವಾವುದಕ್ಕೂ ಸೇರದೆ, ಹೊಸದೊಂದು ಬಗೆಯನ್ನೇ ಸೃಷ್ಟಿಸಿದವು. ಆದರೆ, ಮಾದರಿ ಪಲ್ಲಟ ಮಾಡಿದ್ದು ಮಾತ್ರ ಕುಸುಮಬಾಲೆ ಎಂದೇ ಹೇಳಬಲ್ಲದು.

ಹಾಗಾಗಿಯೇ, “ಅನೇಕ ಭಾಷೆಗಳ, ಅನೇಕ ಸಂಪ್ರದಾಯಗಳ ಛಾಯೆಯಲ್ಲಿ ಹುಟ್ಟಿ ಬಾಲುತ್ತಿರುವ ಕನ್ನಡ ಕಾದಂಬರಿಗೆ ಯಾವುದೇ ಒಂದು ಪರಂಪರೆ ಮಾತ್ರ ಸಂಗತ ಎನ್ನುವ ಹಾಗಿಲ್ಲ”, ಎನ್ನುವ ಬಿ. ದಾಮೋದರರಾವ್ ಅವರ ನಿರ್ಣಯದಂತೆ ಕುಸುಮಬಾಲೆಯು ಕನ್ನಡ ಕಾದಂಬರಿ ಪರಂಪರೆಯ ನಿರಾಕರಣೆಯನ್ನು ಮಾಡುತ್ತಲೇ ಭಾರತೀಯ ಕಾದಂಬರಿ ಪರಂಪರೆಯ ನಿರಾಕರಣೆಯನ್ನೂ ಮಾಡುತ್ತದೆ ಎಂದೇ ನನಗೆ ತೋರುತ್ತದೆ.

ಇಲ್ಲಿ ಸಾಹಿತ್ಯಿಕ ಪ್ರಭೇದದ ಬಗ್ಗೆ ಮಾತನಾಡುವುದಕ್ಕೆ ಮುಖ್ಯವಾದ ಕಾರಣ, ಕೃತಿಯೊಂದರ ಅನುವಾದಕ್ಕೆ ಅದು ಅತ್ಯಂತ ಮುಖ್ಯವಾದುದು ಎಂಬ ನಿಲುವೇ ಆಗಿದೆ. ಹಾಗೆ ಹೇಳುವಾಗ, ಒಂದು ಸಾಹಿತ್ಯಕ ಕೃತಿಯನ್ನು ಅದು ರಚಿತವಾಗಿರುವ ಪ್ರಭೇದದಿಂದ ಮತ್ತೊಂದು ಪ್ರಭೇದಕ್ಕೆ ಅನುವಾದಿಸುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಉದಾಹರಣೆಗೆ, ನಮ್ಮ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ. ಇವು ಕೇವಲ ಒಂದು ಸಾಹಿತ್ಯಿಕ ಪ್ರಭೇದದಿಂದ ಮತ್ತೊಂದಕ್ಕೆ ಅನುವಾದವಾಗಿರುವುದು ಮಾತ್ರವಲ್ಲ, ಒಂದು ಮಾಧ್ಯಮದಿಂದ ಮತ್ತೊಂದಕ್ಕೂ ಅನುವಾದಗೊಂಡಿವೆ. ಅದು ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳಿರಬಹುದು, ಚಲನಚಿತ್ರಗಳಿರಬಹುದು, ನಾಟಕಗಳಿರಬಹುದು, ಕಾರ್ಟೂನ್‍ಗಳಾಗಿರಬಹುದು ಅಥವಾ ಕಾಮಿಕ್ ಪುಸ್ತಕಗಳಾಗಿರಬಹುದು.

ಕುಸುಮಬಾಲೆಯನ್ನು ಒಂದು ಭಾಷೆಯಿಂದ ಮತ್ತೊಂದಕ್ಕೆ ಮಾತ್ರವಲ್ಲ, ಒಂದು ಮಾಧ್ಯಮದಿಂದ ಮತ್ತೊಂದಕ್ಕೂ ಅನುವಾದಿಸಲಾಗಿದೆ. ಕನ್ನಡ ಲಿಖಿತ ಪಠ್ಯವನ್ನು ಹಾಡುವುದು ಒಂದೆಡೆಯಾದರೆ, ಅದನ್ನು ರಂಗಕ್ಕೆ ಅಳವಡಿಸಿರುವುದು ಮತ್ತೊಂದು. ಈ ಬರೆಹದಲ್ಲಿ ಕುಸುಮಬಾಲೆಯನ್ನು ಕನ್ನಡದಿಂದ ಇಂಗ್ಲಿಶ್‍ಗೆ ಅನುವಾದಿಸಿರುವುದರ ಬಗ್ಗೆ ಚರ್ಚಿಸುವ ಪ್ರಯತ್ನ ಮಾಡಲಾಗಿದೆ.

ನಮ್ಮ ಭಾಷೆಯ ಮಿತಿ ಜ್ಞಾನದ ಮಿತಿ!

ಪಶ್ಚಿಮದ ಹೆಸರಾಂತ ತತ್ವಶಾಸ್ತ್ರಜ್ಞ ವಿಟ್‍ಗನ್‍ಸ್ಟೈನ್ “ನನ್ನ ಭಾಷೆಯ ಮಿತಿ ನನ್ನ ಜ್ಞಾನದ ಮಿತಿ” ಎಂದು ಹೇಳುತ್ತಾನೆ.

ಅಭಿನವ ರವಿಕುಮಾರ್‍ರವರು ಕುಸುಮಬಾಲೆಯ ಹನ್ನೆರಡನೆಯ ಮುದ್ರಣದಲ್ಲಿ(2012) ಬರೆದಿರುವ ಹಾಗೆ, “ಕುಸುಮಬಾಲೆಯ ಭಾಶೆಯ ಕುರಿತು ಹಲವು ಮಾತುಗಳು ಕೇಳಿಬಂದಿವೆ. ‘ಅದನ್ನು ಕನ್ನಡಕ್ಕೆ ಅನುವಾದಿಸಬೇಕು’ ಎಂಬುದೂ ಒಂದು. ಹಾಗಾದರೆ ಚಾಮರಾಜನಗರದ ಸುತ್ತಮುತ್ತಲ ಹಳ್ಳಿಗಳ ಜನರಾಡುವ ಭಾಶೆಯನ್ನೂ ಅನುವಾದಿಸಬೇಕೆ? ಕುಸುಮಬಾಲೆಯ ಜೀವತಂತು ಇರುವುದೇ ಭಾಶೆ ಮತ್ತು ಅದನ್ನು ಕಟ್ಟಿರುವ ಶೈಲಿಯಲ್ಲಿ. ಹಿಂದೊಮ್ಮೆ ಶ್ರೀ ಕಾರ್ಲೋಸ್ ಅವರ ಸಂದರ್ಶನವನ್ನು ಬಿ. ಯು. ಸುಮಾ ಮತ್ತು ನಾನು ಕನ್ನಡಕ್ಕೆ ತರುವಾಗ ಕುಸುಮಬಾಲೆಯ ಭಾಶೆ ‘ಕೂಟ ಭಾಶೆ’ ಎಂದು ಕರೆದಿದ್ದೆವು. ಅಂದರೆ ಇದು ಕೇವಲ ಉಪಭಾಶೆಯಲ್ಲ. ಉಪಭಾಶೆ, ಆಧುನಿಕ ಭಾಶೆ, ಗ್ರಾಮ್ಯ, ನಗರಭಾಶೆಯನ್ನೂ ಒಳಗೊಂಡದ್ದು. ಹೀಗಾಗಿ ಏಕಕಾಲಕ್ಕೆ ಭಾಶೆ, ಶೈಲಿ, ಕಥೆ ಮತ್ತು ಪಾತ್ರಗಳನ್ನು ಒಳಗೊಂಡಿರುವಂಥದು. ಇಂಥ ಭಾಶೆಯನ್ನೇ ನಾವು ಕೂಟಭಾಶೆ ಎಂದು ಕರೆದದ್ದು.”

ನಿಜ. ಯಾವುದೇ ಒಂದು ನುಡಿಯಲ್ಲಿ ಮಹಾನ್ ಕೃತಿಯೊಂದರ ರಚನೆಯಾದಾಗ ಅದು ತನ್ನ ಹುಟ್ಟಿನೊಂದಿಗೆ ಹಲವು ಸಂಭ್ರಮಗಳನ್ನು ಹಲವು ಸಂಕಷ್ಟಗಳನ್ನು ತರುತ್ತದೆ. ಆ ಕಾರಣಕ್ಕಾಗಿಯೇ ಆ ಕೃತಿ ವಿಶಿಷ್ಟವೂ, ವಿಶೇಷವೂ ಆಗಿ ನಿಲ್ಲುತ್ತದೆ. ಆ ಒಂದು ಕೃತಿಯ ಕಾರಣದಿಂದಾಗಿಯೇ ಆ ಕೃತಿ ರಚಿತವಾಗಿರುವ ಭಾಷೆಯಲ್ಲಿ ಅಲ್ಲಿಯವರೆಗೆ ಜಾರಿಯಲ್ಲಿದ್ದ ಸಾಹಿತ್ಯ ಮೀಮಾಂಸೆ ತನ್ನ ವ್ಯಾಕರಣವನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಹಾಗೆ ಬದಲಾಯಿಸಿಕೊಳ್ಳಲಾಗದಿದ್ದಲ್ಲಿ ಅದು ಆ ನುಡಿಯಲ್ಲಿ ಕೃತಿಯೊಂದರ ಬೆಲೆಕಟ್ಟುವ ಕೆಲಸ ಮಾಡುವವರ ಜ್ಞಾನದ ಮಿತಿಯನ್ನು ತೋರಿಸುತ್ತದೆ. ಹಾಗೆ ಹೇಳುವುದನ್ನು ಖಂಡಿತ ಬೌದ್ಧಿಕ ಅಹಂಕಾರವೆಂದು ಭಾವಿಸಬಾರದು. ಕನ್ನಡದಲ್ಲಿ ಪಂಪನಿಂದ ಆರಂಭಗೊಂಡು ಕುಸುಮಬಾಲೆಯವರೆಗೆ ಹಲವು ಕೃತಿಕಾರರು ಕನ್ನಡ ಭಾಶೆಯ ಉದ್ದಗಲಗಳನ್ನು ವಿಸ್ತರಿಸುತ್ತಾ ಬಂದಿದ್ದಾರೆ, ಆ ಮೂಲಕ ಕನ್ನಡ ನುಡಿಭಂಡಾರವನ್ನು ಬೆಳೆಸಿದ್ದಾರೆ. ಆದರೆ, ಒಂದು ಸಾವಿರ ವರುಶಕ್ಕೂ ಮಿಗಿಲಾದ ಸಾಹಿತ್ಯ ಇತಿಹಾಸವನ್ನು ಹೊಂದಿರುವ ಜಗತ್ತಿನ ಅತ್ಯಂತ ಶ್ರೇಷ್ಠ ಭಾಶಾ ಹಾಗೂ ಸಾಹಿತ್ಯ ಪರಂಪರೆಯನ್ನು ಹೊಂದಿರುವ ಕನ್ನಡದಲ್ಲಿ ಅದರ ಅತ್ಯಂತ ಸೃಜನಶೀಲ ಮನಸ್ಸುಗಳು ಭಾಶೆಯನ್ನು ದುಡಿಸಿಕೊಂಡಿರುವ ಕುರಿತು ಒಂದೇ ಒಂದು ವಿದ್ವತ್ಪೂರ್ಣ ಕೃತಿಯ ರಚನೆಯಾಗಿಲ್ಲ!

ಕುಸುಮಬಾಲೆ ಕೃತಿಯ ಕುರಿತು ಸುಮಾರು 400 ಪುಟಗಳಷ್ಟು ಲೇಖನಗಳು ಮೂಡಿಬಂದೆವೆಯಾದರೂ, ಅದು ಕನ್ನಡ ಭಾಶೆಯನ್ನು ದುಡಿಸಿಕೊಂಡಿರುವ ರೀತಿಯ ಕುರಿತು ಇಲ್ಲಿಯವರೆಗೆ ಒಂದೇ ಒಂದು ವಿದ್ವತ್ಪೂರ್ಣ ಪ್ರಬಂಧ ಬಂದಿಲ್ಲ. ನನಗಂತೂ ಒಂದು ಉದ್ಘ್ರಂಥವೇ ಬರಬೇಕೆಂದು ಅನ್ನಿಸುತ್ತದೆ.

ಈ ಬಗ್ಗೆ ಕುಸುಮಬಾಲೆಯ ಮೂಲಕೃತಿಯನ್ನು ಸಂಪಾದಿಸಿ ಲಯಾಕಾರ ವಿನ್ಯಾಸ ನೀಡಿದ ಎಲ್ ಬಸವರಾಜುರವರ ವಿದ್ವತ್ಪೂರ್ಣ ಒಳನೋಟಗಳನ್ನಿಟ್ಟುಕೊಂಡೇ ಒಂದು ಸುಧೀರ್ಘ ಪ್ರಬಂಧ ಅಥವಾ ಪುಸ್ತಕವನ್ನು ಬರೆಯಬಹುದೇನೋ. “ಮಹಾದೇವ ಅನುಸರಿಸಿರುವ ಕಥನ ರೀತಿಯು ಜಾನಪದೀಯವಾಗಿ ಕಂಡರೂ ಅದು ಸಂಪೂರ್ಣ ಜಾನಪದೀಯವಲ್ಲ. ಪಂಪನು ದೇಸೀ-ಮಾರ್ಗಗಳನ್ನು ಮಿಶ್ರ ರೂಪಮಾಡಿ ಹೊಸ ತಿರುಳ್ಗನ್ನಡವನ್ನು ಕಂಡುಕೊಂಡಂತೆ ಮಹಾದೇವ ಕೂಡ ಜಾನಪದೀಯ ಮತ್ತು ಚಾಲ್ತಿಯ ರೀತಿಗಳನ್ನು ಮಿಶ್ರಮಾಡಿ ಭಾಷೆಯನ್ನು ಹೇಗೋ ಹಾಗೆ ಕಥನ ರೀತಿಯನ್ನೂ ಒಂದು ವಿಶಿಷ್ಟ ಮಿಶ್ರಣದಲ್ಲಿ ಪಂಚಲೋಹಪಾಕದಲ್ಲಿ ಮಾಡಿದ್ದಾರೆ.”

“ಆ ಬೆಳಕು ತನ್ನ ಶಕ್ತಿ ಮೀರಿ ಹಬ್ಬಿಯೂ ಕಣ್ಗಳ ಓಡಿಸಿದಷ್ಟೂ ಇನ್ನೂವಿ ಕಂಡುಬರುತ್ತಿದ್ದ ಆ ಒಂದೂರಷ್ಟಿದ್ದ ಹಟ್ಟಿಯ ಒಕ್ಕಡ ಮೂಲೇನಾದರು ತಲುಪಲು ಅದಕ್ಕಾಗದೆ ಏದುಸಿರಾಗಿ ನಿಂತಿತು”- ಇಂಥ ಅನೇಕ ಸಂದರ್ಭಗಳಲ್ಲಿ ಮಹಾದೇವ ಶೂನ್ಯ ಪದಾರ್ಥಗಳನ್ನು ಸಮಾನ ಕುತೂಹಲದಿಂದ ಗಣನೆಮಾಡುತ್ತಾ ಇಲ್ಲೆಲ್ಲ ಭಾಷೆ-ಅದು ಗ್ರಾಮ್ಯವೇ ಆದರೂ-ಅಲ್ಲಿಯೂ ಯಥಾರೂಪದಲ್ಲಿರದೆ ಕಾವ್ಯದ ಆವೇಶದಲ್ಲಿ ಕಾಮರೂಪಿಯಾಗಿಬಿಡುತ್ತದೆ.

ಕುಸುಮಬಾಲೆಯ ಬಗ್ಗೆ ಇಲ್ಲಿಯವರೆಗೆ ಬಂದಿರುವ ವಿಮರ್ಶೆಯನ್ನು ಗಮನದಲ್ಲಿರಿಸಿಕೊಂಡೇ ಈ ಮಾತನ್ನು ಹೇಳಲಾಗಿದೆಯೆಂಬುದನ್ನು ತಿಳಿಯಬೇಕು. ಹಾಗೆಯೇ, ಕೃತಿಯೊಂದನ್ನು ಮಹಾನ್ ಕೃತಿಯೆಂದು ಕರೆಯಲು ಅದು ಹಲವಾರು ‘ಓದು’ಗಳಿಗೆ ಅವಕಾಶ ಮಾಡಿಕೊಡುವ ಗುಣದಿಂದಾಗಿಯೂ ಹೌದು. ಅಂತಹ ಓದಿನಲ್ಲಿ ‘ಅನುವಾದ’ ಪ್ರಮುಖವಾದುದು. ಯಾವ ಲೇಖಕ ಕೂಡ ಅನುವಾದದಕ್ಕೆ ಸುಲಭವಾಗಲೆಂದು ಮೂಲಕೃತಿಯನ್ನು ರಚಿಸುವುದಿಲ್ಲವೆನ್ನುವುದು ಸರಿಯಷ್ಟೆ. ಒಂದು ಕೃತಿಯನ್ನು ಅನುವಾದ ಮಾಡಲಾಗುವ ಭಾಶೆಯ ಜಾಯಮಾನಕ್ಕನುಗುಣವಾಗಿ ಹೊಂದಿಸುವುದು ಅನುವಾದಕರ ಜವಾಬ್ದಾರಿ. ಒಬ್ಬ ಉತ್ತಮ ಅನುವಾದಕಿ ಮುಖ್ಯವಾಗಿ ಒಬ್ಬ ಉತ್ತಮ ಓದುಗಳು. ಅಂತಹ ಓದಿಗೆ ಭಾಶೆಯ ಕಲೆ ಸಿದ್ಧಿಸದ ಹೊರತು ಅನುವಾದಕ್ಕೆ ನ್ಯಾಯ ಸಲ್ಲಿಸುವುದು ಸುಲಭವಲ್ಲ.

ಕುಸುಮಬಾಲೆ ಮುರಿದುಕಟ್ಟಿದ ಕನ್ನಡದ ಎಸ್ತೆಟಿಕ್ಸ್!

ಕನ್ನಡದ ಎಸ್ತೆಟಿಕ್ಸ್ ಎಂದಾಕ್ಷಣ ಕನ್ನಡಕ್ಕೆ ಅದರದ್ದೇ ಆದ ಒಂದು ಎಸ್ತೆಟಿಕ್ಸ್ ಇದೆಯೇ? ಹಾಗಿದ್ದಲ್ಲಿ ಅದು ಎಂತಹದ್ದು ಎಂಬ ಪ್ರಶ್ನೆಗೆ ತಾತ್ವಿಕವಾಗಿ, ಸೈದ್ಧಾಂತಿಕವಾಗಿ ಅಥವಾ ಪ್ರಾಯೋಗಿಕವಾಗಿ ಉತ್ತರಿಸಲು ಒಂದು ಉದ್ಘ್ರಂಥವೋ, ಮಹಾಪ್ರಬಂಧವೋ ಬೇಕಾಗುತ್ತದೆ. ಅದು ಈ ಬರೆಹದ ಪ್ರಮುಖ ಕಾಳಜಿಯಲ್ಲದ್ದರಿಂದ ನೇರವಾಗಿ ವಿಷಯಕ್ಕೆ ಧುಮುಕುತ್ತೇನೆ.

ಎಸ್ತೆಟಿಕ್ಸ್ ಎಂಬುದನ್ನು ರಾಜಕೀಯಗೊಳಿಸಿ ನೋಡುವುದಾದರೆ, ಭಾರತದಲ್ಲಿ, ಆಧುನಿಕ ಸಂಕಥನಗಳಲ್ಲಿ ಅದರಲ್ಲೂ ಮುಖ್ಯವಾಗಿ ಸಾಹಿತ್ಯದಲ್ಲಿ ಈ ಎಸ್ತೆಟಿಕ್ಸ್ ಎಂಬುದು ಮೇಲ್ಜಾತಿಯ, ಮೇಲ್ವರ್ಗದವರಿಂದ ಕಟ್ಟಲ್ಪಟ್ಟ ಒಂದು ರಚನೆ. ಹಾಗಾಗಿ, ಒಂದು ನುಡಿಯಲ್ಲಿ ರಚಿತವಾಗುವ ಕೃತಿ ಅಂತಹ ಎಸ್ತೆಟಿಕ್ಸ್ ಹೊಂದಿರದಿದ್ದಲ್ಲಿ ಅದು ಪ್ರಧಾನ ಧಾರೆಯ ಸಾಹಿತ್ಯ ವ್ಯಾಪ್ತಿಯೊಳಗೆ ಬಾರದೇ ಹೋಗುವ ಸಾಧ್ಯತೆಯೇ ಹೆಚ್ಚು. ದಲಿತ ಮತ್ತು ಸ್ತ್ರೀವಾದಿ ಸಂಕಥನಗಳು ಇಂತಹ ರಾಜಕೀಯ ತಾರತಮ್ಯಕ್ಕೊಳಕ್ಕಾಗಿರುವುದನ್ನು ನಾವು ಕಾಣಬಹುದು. ಹಾಗಾಗಿಯೇ, ಈ ಸಂಕಥನಗಳಿಗೊಳಪಡುವ ಪಠ್ಯಗಳು ಕೂಡ ‘ಸವರ್ಣ’ ಎಸ್ತೆಟಿಕ್ಸ್‍ನ ರಾಜಕೀಯವನ್ನೇ ಅನುಸರಿಸುತ್ತವೆ. ಕಾರಣ, ಇಂತಹ ಪಠ್ಯಗಳ ಬೆಲೆಕಟ್ಟುವವರು ಬಹುಸಂಖ್ಯಾತ ಸವರ್ಣರು. ದಲಿತ ಮತ್ತು ಸ್ರ್ತೀವಾದಿ ಸಂಕಥನಗಳು ಮೂಲಭೂತವಾಗಿ ಅಸ್ಮಿತೆಯ ಯಾ ಗುರುತು ರಾಜಕೀಯದ ನೆಲೆಗಟ್ಟನ್ನು ಹೊಂದಿರುವುದರಿಂದಾಗಿ ಸವರ್ಣ ಎಸ್ತೆಟಿಕ್ಸ್‍ಗೆ ಸಹಜವಾಗಿಯೇ ಪ್ರತಿರೋಧ ಒಡ್ಡುತ್ತವೆ. ಆ ಪ್ರಕ್ರಿಯೆಯಲ್ಲಿಯೇ ತಮ್ಮದೇ ಆದ ಎಸ್ತೆಟಿಕ್ಸ್ ಒಂದನ್ನು ಕಟ್ಟಿಕೊಳ್ಳುವ ಮೂಲಕ ಅಸ್ತಿತ್ವವನ್ನು, ಗುರುತನ್ನು ಪಡೆದುಕೊಳ್ಳಲು ಹೋರಾಡುತ್ತವೆ.

ಕುಸುಮಬಾಲೆ ಬಂದಂತಹ ಕಾಲಕ್ಕಾಗಲೇ ಸಿದ್ಧಲಿಂಗಯ್ಯನವರು ತಮ್ಮ ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು, ಮುಂತಾದ ಕೃತಿಗಳಿಂದ ದಲಿತ ಎಸ್ತೆಟಿಕ್ಸ್ ಒಂದನ್ನು ಗಟ್ಟಿಯಾಗಿ ರೂಪಿಸಿಬಿಟ್ಟಿದ್ದರು. ಮತ್ತೊಂದು ಕಡೆ, ಸ್ವತಃ ಮಹಾದೇವರು ಅದಕ್ಕೆ ಭಿನ್ನವಾದ ದಲಿತ ಎಸ್ತೆಟಿಕ್ಸ್ ಒಂದನ್ನು ರೂಪಿಸಿದ್ದರು. ಮಹಾದೇವರ ಅತ್ಯಂತ ಮಹತ್ವಾಕಾಂಕ್ಷಿ ಕೃತಿಯಾದ ಕುಸುಮಬಾಲೆಯಲ್ಲಿ ಅವರು ತೆರೆದಿಟ್ಟ ಎಸ್ತೆಟಿಕ್ಸ್ ದಲಿತ ಸಂವೇದನೆಯನ್ನು ಹೊಂದಿಲ್ಲ ಎಂಬ ಆಪಾದನೆಯನ್ನೂ ಎದುರಿಸಬೇಕಾಯಿತು.

ಮಿಖೈಲ್ ಬಕ್ತಿನ್ ಎಂಬ ರಶ್ಯನ್ ವಿಮರ್ಶಕ 1929ರಷ್ಟು ಹಿಂದೆಯೇ ಬರೆದ “Problems of Dostoyevsky’s
Poetics” ವಾದಿಸುವಂತೆ, “ಒಂದು ಸಫಲ ಕೃತಿಯಲ್ಲಿರುವ ‘ಬಹುಧ್ವನಿತ್ವ’ ಒಂದು ಮೂಲ ಆಕೃತಿಯು ಅನೇಕ ರಚನೆಯನ್ನು ಒಂದೆಡೆ ತರುವುದರಲ್ಲಿರುತ್ತದೆ”. ಆ ‘ಬಹುಧ್ವನಿತ್ವ’ವೇ ಕುಸುಮಬಾಲೆಯ ವೈಶಿಷ್ಟ್ಯ. ಕನ್ನಡ ಜನಪದೀಯ ನೆಲದಿಂದ ಹೊರಟರೂ, ಕನ್ನಡ ಕಾದಂಬರಿ ಪರಂಪರೆಯ ಅಲ್ಲಿಯವರೆಗಿನ ಸಿದ್ಧಮಾದರಿಗಳಿಂದ ವಿಮುಖವಾಗಿ ನವ್ಯ-ಬಂಡಾಯ-ದಲಿತ ಚಳವಳಿಗಳ ಪ್ರಭಾವ, ಪ್ರೇರಣೆಯಲ್ಲಿ ಹುಟ್ಟಿಬಂದ ಕಾದಂಬರಿಗಳ ಭಾಷೆ, ವ್ಯಾಕರಣ ಮತ್ತು ಸ್ವರೂಪವನ್ನು ಮುರಿದುಕಟ್ಟುತ್ತ ಕನ್ನಡದಲ್ಲಿ, ಕನ್ನಡಕ್ಕೆ ಹೊಚ್ಚಹೊಸತಾದ ಎಸ್ತೆಟಿಕ್ಸ್ ಒಂದನ್ನು ಹುಟ್ಟುಹಾಕುತ್ತದೆ.

ಇದರಿಂದಾಗಿಯೇ ಅನುವಾದಕ್ಕೆ ದೊಡ್ಡ ತೊಡಕಾಗಿ ನಿಲ್ಲುತ್ತದೆ. ತನ್ನ ಬಹುಧ್ವನಿತ್ವದಿಂದಾಗಿಯೇ ಕೇವಲ ಒಂದು ಅನುವಾದಕ್ಕೆ ಮಾತ್ರವಲ್ಲ, ಹಲವಾರು ಅನುವಾದ ಸಾಧ್ಯತೆಗಳಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತದೆ.

ಮಹಾದೇವರ ಸಾಹಿತ್ಯದ ಎಸ್ತೆಟಿಕ್ಸ್ ಬಗ್ಗೆ ಮಾತನಾಡುವುದಾದರೆ, ಅದು ಫಿಲೊಸಾಫಿಕಲ್ ಆದುದು-ಏಕೆಂದರೆ, ವಿಜ್ಞಾನ ಪ್ರಾಯೋಗಿಕವಾದುದು-ಸಾಹಿತ್ಯವಲ್ಲ. ಫಿಲೊಸಫಿಯಂತೆ ‘ನಿಜವಾದುದು ಏನು?’ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದರಿಂದಾಗಿಯೇ ಸಾಹಿತ್ಯ ಅದರೊಂದಿಗೆ ನೇರವಾದ ಸಂಬಂಧವನ್ನು ಹೊಂದಿದೆ. ವಾಸ್ತವದೊಂದಿಗೆ ಮಾನವನ ಸಂಬಂಧ, ಮಾನವನ ಮನಸ್ಸು ವಾಸ್ತವದೊಂದಿಗೆ ಸಂಪರ್ಕ ಹೊಂದಲು ಸಾಧ್ಯವೇ? ಸಾಧ್ಯವಿದ್ದಲ್ಲಿ ಅದು ಮಾನವನ ಜೀವನಕ್ಕೆ ಯಾವ ರೀತಿಯ ವ್ಯತ್ಯಾಸವನ್ನು ತರಬಲ್ಲದು. ಇಂತಹ ಪ್ರಶ್ನೆಗಳು ಎಂಪಿರಿಕಲ್ ಅಲ್ಲವೇ ಅಲ್ಲ, ಅವು ಪರಿಕಲ್ಪನಾತ್ಮಕವಾದವು.

ಸಾಹಿತ್ಯ ಮೀಮಾಂಸೆ-ಕಾದಂಬರಿ ಮೀಮಾಂಸೆ-ಅನುವಾದ ಮೀಮಾಂಸೆ!

ಇನ್ನು ಸಾಹಿತ್ಯ ಮೀಮಾಂಸೆಯ ವಿಷಯಕ್ಕೆ ಬಂದಾಗ, ಕನ್ನಡ ಸಾಹಿತ್ಯದ ಅಗಾಧತೆಗೆ ಹೋಲಿಸಿದಾಗ ಮೀಮಾಂಸೆಯ ಎತ್ತರ ಹಿಮಾಲಯದ ಮುಂದೆ ಚಾಮುಂಡಿ ಬೆಟ್ಟವನ್ನು ನಿಲ್ಲಿಸಿದ ಹಾಗೆ ಎಂದು ಹೇಳಿದಲ್ಲಿ ಉತ್ಪ್ರೇಕ್ಷೆಯೆನಿಸುವುದಿಲ್ಲವೇನೋ.

ನವ್ಯ ಚಳವಳಿ ಹಾಕಿಕೊಟ್ಟಂತಹ ಮೀಮಾಂಸೆಯ ತಳಹದಿಯನ್ನು ಒಡೆದು ನಂತರ ಬಂದ ದಲಿತ ಬಂಡಾಯ ಸ್ತ್ರೀವಾದಿ ಸಂಕಥನವನ್ನು ಅಧ್ಯಯನ ಮಾಡಲು ಕನ್ನಡ ಸಾಹಿತ್ಯ ಮೀಮಾಂಸೆ ಹೊಸ ಮೀಮಾಂಸೆಗಳನ್ನು ರೂಪಿಸಿಕೊಳ್ಳಬೇಕಾಗಿತ್ತು. ಆದರೆ, ಹಾಗಾಗಲಿಲ್ಲ. 70ರ ದಶಕದಿಂದ ಇಲ್ಲಿಯವರೆಗೆ ಹರಡಿಕೊಂಡಿರುವ ದಲಿತ ಸಾಹಿತ್ಯದ ಬಗ್ಗೆ ಅಭ್ಯಾಸಪೂರ್ಣ ವಿಮರ್ಶಾತ್ಮಕ/ಮೀಮಾಂಸ ಕೃತಿ ಇನ್ನೂ ಬಂದಿಲ್ಲ. ಈ ಮಾತು ದಲಿತ ಸಂವೇದನೆಯನ್ನು ಹೊಂದಿಲ್ಲ ಎಂದು ಹೇಳಲಾಗುವ ಕುಸುಮಬಾಲೆಯ ಸಂದರ್ಭದಲ್ಲೂ ಹೇಳಬಹುದು. ಕುಸುಮಬಾಲೆಯ ದೊಡ್ಡ ಸಾಧನೆಯೆಂದರೆ, ಅದು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಆಳವಾಗಿ ಬೇರೂರಿದ್ದ ನವ್ಯಪ್ರಭಾವವನ್ನು ಹಾಗೂ ಬಂಡಾಯ/ದಲಿತದ ಪ್ರತಿಕ್ರಿಯಾತ್ಮಕ ಎನ್ನುವಂತಹ ಭಾಷೆಯಿಂದ ಬಿಡಿಸಿಕೊಂಡು ತನ್ನೆಲ್ಲ ಕಲಾತ್ಮಕತೆಯೊಂದಿಗೆ ಅದನ್ನು ಹೊಡೆದುಹಾಕಿದ್ದು. ಆದರೆ, ಅಂತಹ ಕಲಾತ್ಮಕತೆಯನ್ನು ನಂತರದ ಬರೆಹಗಾರರು ಸೃಷ್ಟಿಸಲಾಗದ್ದು ಮಾತ್ರ ವಿಪರ್ಯಾಸ!

ಹೊಸದೊಂದು ಎಸ್ತೆಟಿಕ್ಸ್ ಅಧ್ಯಯನ ಮಾಡಲು ಹೊಸದೊಂದು ಮೀಮಾಂಸೆಯ ಜರೂರು ಇದ್ದೇ ಇರುತ್ತದೆ. ಕುಸುಮಬಾಲೆ ಬಂದು 30 ವರುಶಗಳು ಕಳೆದಿರುವ ಸಂದರ್ಭದಲ್ಲಿ ಹಾಗೂ ಅದರ ಮೊದಲ ಇಂಗ್ಲಿಶ್ ಅನುವಾದ ಬಂದಿರುವ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಮೀಮಾಂಸೆ ಹೊಸದೊಂದು ಮೀಮಾಂಸೆಯನ್ನು ಬೇಡುತ್ತದೆ. ಅದು ಅನುವಾದ ಮೀಮಾಂಸೆಯನ್ನು ಕೂಡ ಗಮನಿಸಬೇಕಾಗುತ್ತದೆ. ಯಾಕೆಂದರೆ, ಕುಸುಮಬಾಲೆ ಸೃಷ್ಟಿಸಿರುವ ‘ತೊಡಕು’ ಮೂಲಭೂತವಾಗಿ ಅನುವಾದದ್ದು. ಹಾಗೆಂದಾಕ್ಷಣ ಅದು ಕೇವಲ ಭಾಷೆಗಳ ನಡುವಣ ನಡೆವ ಅನುವಾದ ಎಂದು ಭಾವಿಸಬೇಕಿಲ್ಲ. ಅದು ಭಾಷೆಯೊಂದರೊಳಗಡೆ ನಡೆವ ಅನುವಾದವೆಂದೂ ತಿಳಿಯಬೇಕಾಗುತ್ತದೆ. ಹಾಗಾಗಿ, ಕುಸುಮಬಾಲೆಯ ಇಂಗ್ಲಿಶ್ ಅನುವಾದದ ಬಗ್ಗೆ ಬಂದಿರುವ ರಿವ್ಯೂಗಳನ್ನು ಗಮನಿಸುವ ಮೂಲಕ ಹೊಸ ಅನುವಾದ ಮೀಮಾಂಸೆಯ ಅಗತ್ಯವನ್ನು ಚರ್ಚಿಸಬಹುದೇನೋ.

ಕುಸುಮಬಾಲೆ, ಹಾಗೆ ಹೇಳುವುದಾದರೆ, ಮಹಾದೇವರು ಬರೆಯಬಹುದಾಗಿದ್ದ ದೊಡ್ಡ ಕಾದಂಬರಿಯ ಸಂಕ್ಷಿಪ್ತ ರೂಪವೆಂದೇ ನನಗೆ ತೋರುತ್ತದೆ. ಹಾಗನ್ನಲು ಕಾರಣ, ನಾಲ್ಕು ತಲೆಮಾರುಗಳ ಕತೆ ಕೇವಲ ನೂರು ಪುಟಗಳಲ್ಲಿ ಮುಗಿದುಹೋಗುವುದು. ಮಹಾದೇವರ ಒಟ್ಟು ಸಾಹಿತ್ಯದ ಬೆಳೆವಣ ಗೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ, ಕುಸುಮಬಾಲೆ ಗಾತ್ರದ ದೃಷ್ಟಿಯಿಂದಲೂ ಮಹಾಕಾದಂಬರಿಯಾಗಬಹುದ್ದಾಗಿದ್ದರೂ, ಹಾಗಾಗದಿರುವುದಕ್ಕೆ ಕಾರಣವೇನೆಂಬುದು ಸ್ಪಷ್ಟವಾಗದೇ ಇರದು. ಅವರ ‘ಎದೆಗೆ ಬಿದ್ದ ಅಕ್ಷರ’ದ ಕೆಲಭಾಗಗಳು ಮುಲಾಜಿಲ್ಲದೆ ಕುಸುಮಬಾಲೆಯ ಭಾಗವಾಗಬಹುದಿತ್ತು. ಅಥವಾ ಅವೇ ಬಿಡಿ ಕತೆಗಳು ಕೂಡ ಆಗಬಹುದಿತ್ತು. ಒಟ್ಟಾರೆಯಾಗಿ, ಕುಸುಮಬಾಲೆಯನ್ನು ಕೇಂದ್ರವನ್ನಾಗಿರಿಸಿಕೊಂಡು ಮಹಾದೇವರ ಸಾಹಿತ್ಯ ಮೀಮಾಂಸೆಯನ್ನು ಶೋಧಿಸುವ ಕೆಲಸವಾಗಬೇಕು.

ಕುಸುಮಬಾಲೆ ಅನುವಾದಗಳ ರಿವ್ಯೂನಲ್ಲಿ ಕಂಡಿದ್ದು…

ಪ್ರಕಟವಾದ ನಂತರ ಬಹುಮುಖ್ಯವಾದ ಕೆಲಸವೆಂದರೆ, ರಿವ್ಯೂ. ಮೊದಲ ರಿವ್ಯೂ ಪ್ರಕಟವಾಗಿದ್ದು ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್‍ನಲ್ಲಿ. ಕನ್ನಡದ ಇಂದಿನ ಪ್ರಮುಖ ವಿದ್ವಾಂಸರಲ್ಲೊಬ್ಬರಾದ ಪೃಥ್ವಿ ದತ್ತ ಚಂದ್ರ ಶೋಭಿ, ಅನುವಾದದ ಬಗ್ಗೆ ಹೀಗೆ ಬರೆದರು: ‘ಈಗ ಮೂರು ದಶಕಗಳ ನಂತರ, ಕುಸುಮಬಾಲೆ ಇಂಗ್ಲಿಶ್‍ನಲ್ಲಿ ಕಾಣ ಸಿಕೊಂಡಿರುವಾಗ, ಮಹಾದೇವರ ಎಸ್ತೆಟಿಕ್ ಕಾರ್ಯತಂತ್ರಗಳು ಅನುವಾದಕರನ್ನು ಕಾಡಲು ತೊಡಗುತ್ತವೆ. ಈ ಹೊಸ ಕಾದಂಬರಿ ಇಂಗ್ಲಿಶ್‍ನಲ್ಲಿ ಹೊಸ ಸಾಹಿತ್ಯಕ ಭಾಷೆಯನ್ನು ಬೇಡುತ್ತದೆ… ಸೂಸನ್ ಡೇನಿಯಲ್‍ರ ಅನುವಾದ ಈ ಕಾದಂಬರಿಯ ಸಾಹಿತ್ಯಕ ಚಾರಿತ್ರಿಕ ಆಯಾಮಗಳನ್ನು ಹಿಡಿದಿಡಲಾಗಿಲ್ಲವೆಂದರೆ, ಅದಕ್ಕೆ ಕಾರಣ, ಅವರು ಠಿಡಿಚಿgmಚಿಣiಛಿ ಅವರು ಆಗಿರುವ ಆಯ್ಕೆಯನ್ನು ಮಾಡಿಕೊಂಡಿದ್ದಾರೆ ಹಾಗೂ ಇಂಗ್ಲಿಶ್‍ನ ಓದಿಸಿಕೊಂಡು ಹೋಗುವುದಕ್ಕೆ ಒತ್ತುಕೊಟ್ಟಿದ್ದಾರೆನ್ನುವುದು.’
ಪೃಥ್ವಿಯವರು ಮಹಾದೇವರ ಎಸ್ತೆಟಿಕ್ ಕಾರ್ಯತಂತ್ರದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಇದರ ಬಗ್ಗೆ ಈಗಾಗಲೇ ಪ್ರಸ್ತಾಪಿಸಲಾಗಿದೆ. ಈ ಬರೆಹದ ಕೊನೆಯಲ್ಲಿ ಸೂಸನ್ ತಮ್ಮ ಅನುವಾದದ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳುವಾಗ ಈ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಬಹುದೇನೋ.
ಎಕ್ಸ್‍ಪ್ರೆಸ್‍ಗೆಂದು ಎಸ್ ಆರ್ ರಾಮಕೃಷ್ಣರವರು ಮಾಡಿದ ರಿವ್ಯೂನಲ್ಲಿ, ‘ಅನುವಾದದದಲ್ಲಿ ಮೂಲದ ಭಾಷಿಕ ಚಾತುರ್ಯ ಕಾಣೆಯಾಗಿದೆಯಾದರೂ, ಓದುಗರು ಮೂಲದ ತಾತ್ಪರ್ಯವನ್ನಂತೂ ಪಡೆಯುತ್ತಾರೆ’ ಎಂದು ಹೇಳುತ್ತಾರೆ.

ಪ್ರೆಸ್‍ಗೆ ಇಂಗ್ಲಿಶ್ ಅನುವಾದದ ರಿವ್ಯೂ ಮಾಡಿಕೊಟ್ಟಿದ್ದ ಬಾಗೇಶ್ರೀಯವರು ದಿ ಹಿಂದೂವಿನಲ್ಲಿ, ‘ಇಂತಹ ಕಾದಂಬರಿಯನ್ನು ಅನುವಾದಿಸುವ ಆಲೋಚನೆಯೇ ನಡುಕ ಹುಟ್ಟಿಸುವಂತಹದ್ದು. ಅನುವಾದಕರ ಮಾತಿನಲ್ಲಿ ಸೂಸನ್ ಅರಿಕೆ ಮಾಡಿಕೊಳ್ಳುವಂತೆ, “ಮಾಡಬೇಡ” ಎಂಬುದು ಅವರ ಸ್ನೇಹಿತರು ಹಾಗೂ ಸಹೋದ್ಯೋಗಿಗಳು ಹೇಳಿದ ಕಿವಿಮಾತು. ಇಂಗ್ಲಿಶ್ ಓದುಗರ ಅದೃಷ್ಟವೋ ಏನೋ ಅವರು ಅಂತಹ ಮಾತುಗಳಿಗೆ ಕಿವಿಗೊಡಲಿಲ್ಲ. ಆಕ್ಸ್‍ಫರ್ಡ್ ಯೂನಿವರ್ಸಿಟಿ ಪ್ರೆಸ್ ಹೊರತಂದಿರುವ ಅವರ ಇಂಗ್ಲಿಶ್ ಅನುವಾದ, ಓದುಗರನ್ನು ಸಾಧ್ಯವಾದಷ್ಟು ಮಟ್ಟಿಗೆ ಮಹಾದೇವರ ಬಳಿ ಕೊಂಡೊಯುತ್ತದೆ” ಎಂದು ಅನುವಾದದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರು.
ಆರ್ಶಿಯಾ ಸತ್ತರ್‍ರವರು ಮಹಾಭಾರತದ ಇಂಗ್ಲಿಶ್ ಅನುವಾದವನ್ನು ಮಾಡುವ ಹೆಸರುವಾಸಿಯಾದವರು. ಅಲ್ಲದೆ, ಇಂಗ್ಲಿಶ್ ಭಾಶೆಯ ಪ್ರಮುಖ ಸುದ್ದಿಪತ್ರಿಕೆಗಳು, ಮ್ಯಾಗಜೀನ್‍ಗಳಲ್ಲಿ ಭಾರತೀಯ ಭಾಶೆಗಳ ಇಂಗ್ಲಿಶ್ ಅನುವಾದಗಳ ರಿವ್ಯೂ ಮಾಡುವ ಆರ್ಶಿಯಾರವರು ಬೆಂಗಳೂರಿಗರಾಗಿರುವುದರಿಂದ, ಆಗ ಸಾಹಿತ್ಯ ವಲಯದೆಲ್ಲಿ ಎಲ್ಲ್ಲೆಡೆ ಹರಿದಾಡಿದ್ದ ಪೋಲಂಕಿ ರಾಮಮೂರ್ತಿ ಹಾಗೂ ಜ್ಯೂಡಿತ್ ಕ್ರೋಲ್‍ರ ಇಂಗ್ಲಿಶ್ ಅನುವಾದವನ್ನು ಕೂಡ ಓದಿಕೊಂಡಿದ್ದರು. ಓಪೆನ್ ಮ್ಯಾಗಜೀನ್‍ಗೆ ತಾವು ಮಾಡಿದ ರಿವ್ಯೂನಲ್ಲಿ ಅವರು ಹೀಗೆ ಹೇಳಿದರು: ‘ಸೂಸನ್ ಡೇನಿಯಲ್‍ರ ಅನುವಾದ ಓದಲು ಸುಲಭವಾಗಿದೆ ಎಂದು ಹೇಳುವಂತಿಲ್ಲ. ಆದರೆ, ಮೂಲ ಕೂಡ ಇದಕ್ಕೆ ಹೊರತಾಗಿಯೇನೂ ಇಲ್ಲ. ಹಾಗಾದರೆ, ಅವರ ಅನುವಾದ ಮೂಲದ ಸಂಕೀರ್ಣತೆಯ ಅನುಭವವನ್ನು ತಂದುಕೊಡುತ್ತದೆಯೇ? ಹೌದು. ಆದರದು ಹೇಗೋ infelicitous, ಆಗಿ ಉಳಿದುಬಿಡುತ್ತದೆ. ಒಂದು ಸಣ್ಣ ಉದಾಹರಣೆಯೆಂದರೆ, ಟರ್ಕಿಶ್ ಟವೆಲ್ ಎಂದು ಎಲ್ಲರೂ ಸಾಮಾನ್ಯವಾಗಿ ಕರೆಯುವುದನ್ನು ‘ಟರ್ಕಿ ಟವೆಲ್’ ಎಂದು ಕರೆದಿರುವುದು.

ಮಲಯಾಳಂನ ಪ್ರಮುಖ ಕವಿ, ವಿಮರ್ಶಕರಾದ ಕೆ ಸಚ್ಚಿದಾನಂದನ್ Frontlineನಲ್ಲಿ ‘…ಯು ಆರ್ ಅನಂತಮೂರ್ತಿ, ಶೆಲ್ಡನ್ ಪೊಲಾಕ್ ಹಾಗೂ ರಾಮಾನುಜನ್’ರಂತಹವರು ಮೆಚ್ಚಿಕೊಂಡಿದ್ದ, ಕಾಲು ಶತಮಾನಕ್ಕೂ ಮೀರಿ ಕನ್ನಡದಲ್ಲಿ ಶ್ರೇಷ್ಠ ಕೃತಿ ಎಂದು ಗುರುತಿಸಲಾಗಿರುವ ಈ ಕೃತಿಯನ್ನು ಕಡೆಗೂ ಇಡಿಯಾಗಿ ಅನುವಾದಿಸಿರುವ ಸೂಸನ್ ಡೇನಿಯಲ್, ಮೂಲದ ಸೂಕ್ಷ್ಮಾತಿಸೂಕ್ಷ್ಮ ಅಂಶಗಳನ್ನು ಹಿಡಿದಿಡುವಲ್ಲಿ ಸಫಲರಾಗಿದ್ದಾರೆ’ ಎಂದು ಬರೆಯುತ್ತಾರೆ.

ಹೆಚ್ಚಿನ ರಿವ್ಯೂಗಳು ಸಾಹಿತ್ಯಕ್ಕೆ ಅಷ್ಟೊಂದು ಅವಕಾಶವಿಲ್ಲದ ಸುದ್ದಿಪತ್ರಿಕೆಯಲ್ಲಿ, ಮ್ಯಾಗಜೀನ್‍ಗಳಲ್ಲಿ ಬಂದ ಕಾರಣಗಳಿಂದಾಗಿ, ಅವುಗಳದೇ ಮಿತಿಯನ್ನೊಳಗೊಂಡಿದ್ದವು. ಆದರೆ, ರಿವ್ಯೂಗೆಂದೇ ಮೀಸಲಾದ The Book Reviewನಲ್ಲಿ ವಿ ಎಸ್ ಶ್ರೀಧರ್ ಅವರಿಗೆ ಸುಧೀರ್ಘವಾದ ರಿವ್ಯೂ ಬರೆಯುವ ಅವಕಾಶ ದೊರೆಯಿತು: ‘ಅನುವಾದ ಪ್ರಕ್ರಿಯೆಯು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಒಂದು ಪಾಶ್ಚಿಮಾತ್ಯªಲ್ಲದ ಪಠ್ಯವೊಂದನ್ನು ಅನುವಾದಿಸುವಾಗ ಅದು ಸ್ವಯಂಪ್ರಜ್ಞೆಯ ಕ್ರಿಯೆಯಾಗಿ ಮಾಡಬೇಕಾಗುತ್ತದೆ ಎಂದು ಇಂದು ವಾದಿಸಲಾಗುತ್ತಿದೆ. ಅಂದರೆ, ಅವರು ಅನುವಾದ ಕೃತಿಯೊಂದನ್ನೇ ಓದುತ್ತಿದ್ದಾರೆ ಎಂಬ ಅರಿವನ್ನು ನೀಡುವುದು. ಕುಸುಮಬಾಲೆಯ ಇಂಗ್ಲಿಶ್ ಆವೃತ್ತಿ ಈ ಕೆಲಸವನ್ನು ಪ್ರತಿ ಪುಟದಲ್ಲೂ ಪರಿಣಾಮಕಾರಿಯಾಗಿ ಮಾಡುತ್ತದೆ. ಅಡಿಟಿಪ್ಪಣ ಗಳು ಮತ್ತು ಪದಕೋಶವನ್ನು ಕೊಟ್ಟಿಲ್ಲ ಹಾಗೂ ಅನೇಕ ಮೂಲ ಮಾತುಗಳನ್ನು ಕಥನದ ಹರಿವು ಕೆಡದ ಹಾಗೆ ನೋಡಿಕೊಳ್ಳುವುದರಲ್ಲಿದೆ, ಮೂಲದ ಸೊಗಡನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.’ ಅನುವಾದ ಪಠ್ಯವೊಂದು ಮೂಲದ ಹಾಗೆ ಓದಿಸಿಕೊಳ್ಳಬೇಕೆ ಅಥವಾ ಅನುವಾದದಂತೆಯೇ ಓದಿಸಿಕೊಳ್ಳಬೇಕೆ ಎಂಬ ಪ್ರಶ್ನೆಗೆ ಸುದೀರ್ಘವಾದ ಉತ್ತರ ಕೊಡಬೇಕಾಗಿ ಬರಬಹುದು!

ಇಲ್ಲಿಯವರೆಗೆ ಕುಸುಮಬಾಲೆಯ ಇಂಗ್ಲಿಶ್ ಅನುವಾದ ಬಗ್ಗೆಯಷ್ಟೇ ಹೇಳಿದ್ದಾಯಿತು. ಕುಸುಮಬಾಲೆ ಕೆಲವು ಭಾರತೀಯ ಭಾಷೆಗಳಿಗೂ–ಬಂಗಾಳಿ, ಮರಾಠಿ ಹಾಗೂ ತಮಿಳು–ಅನುವಾದವಾಗಿರುವುದು ಹಲವರಿಗೆ ತಿಳಿದಿರಲಾರದು. ಸಮೃದ್ಧವಾದ ದಲಿತ ಸಾಹಿತ್ಯವನ್ನು ಹೊಂದಿರುವ ಮರಾಠಿ ಭಾಷೆಯ ಅನುವಾದಕ್ಕೆ ಬರೆದ ಮುನ್ನುಡಿಯಲ್ಲಿ ಜ್ಞಾನಪೀಠ ಪುರಸ್ಕøತರಾದ ಭಾಲಚಂದ್ರ ನೆಮಾಡೆಯವರು, ‘ಮರಾಠಿಯಲ್ಲಿ ಅಂಬೇಡ್ಕರ್‍ವಾದಿ-ಮಾಕ್ರ್ಸ್‍ವಾದಿ ಪರಂಪರೆಯಿಂದ ಪ್ರೇರಣೆಗೊಳಗಾದ ಮರಾಠಿಯಲ್ಲಿರುವ ಬೇರೆಬೇರೆ ವಿಧಾನಗಳಿಗಿಂತ ಮಹಾದೇವರ ಈ ಲಿರಿಕಲ್ ಕಾದಂಬರಿಯಲ್ಲಿರುವ ಹೋರಾಟದ ಸ್ವರೂಪ ಭಿನ್ನವಾದುದು. ಈ ಕಾದಂಬರಿಯು ಜಾನಪದೀಯ ಪರಂಪರೆಯಲ್ಲಿ ಬೇರೂರಿದ್ದರೂ, ಸ್ವರೂಪದಲ್ಲಿ ದೇಸಿವಾದಿಯಾಗಿದ್ದು, ಕರ್ನಾಟಕದ 12ನೇ ಶತಮಾನದ ವಚನ ಚಳವಳಿಯಿಂದ ಸ್ಫೂರ್ತಿಹೊಂದಿದೆ. ಮರಾಠಿ ಅನುವಾದದದಲ್ಲಿ ಬಳಸಲಾಗಿರುವ ಕೊಲ್ಹಾಪುರಿ ಉಪಭಾಷೆ ಮೂಲದಲ್ಲಿರುವ ಚಾಮರಾಜನಗರ ಜಿಲ್ಲೆಯ ಉಪಭಾಷೆಯ ಸೂಕ್ಷ್ಮಗಳನ್ನು ಸಮಾನಾಂತರವಾಗಿ ಧ್ವನಿಸಬಲ್ಲುದೇ’ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ.

‘Typically the great theories of novel have been theories of modernity’ ಎಂದ ಮೊರೆಟ್ಟಿಯ ಮಾತನ್ನು ಪರಿಗಣ ಸಿದಲ್ಲಿ ಕುಸುಮಬಾಲೆ ಎಷ್ಟು ಆಧುನಿಕವಾದ ಕಾದಂಬರಿ ಎಂಬ ಪ್ರಶ್ನೆಯೊಂದನ್ನು ಹಾಕಿಕೊಂಡು ಅದಕ್ಕೆ ಉತ್ತರ ಹುಡುಕಬೇಕಾಗುತ್ತದೆ. ಹಾಗೆ ಬರುವ ಉತ್ತರ, ನಾವು ಯಾವುದನ್ನು ‘ಆಧುನಿಕ’ ಎಂದು ಭಾವಿಸಿದ್ದೇವೆ ಅಂತಹದನ್ನು ಮರುವ್ಯಾಖ್ಯಾನಿಸುತ್ತದೆ. ಮೊರೆಟ್ಟಿಯ ಮಾತನ್ನು ಅನುವಾದಕ್ಕೆ ಅನ್ವಯಿಸುವುದಾದರೆ, ಮೇಲೆ ಉಲ್ಲೇಖಿಸಲಾದ, ಮುಖ್ಯವಾಗಿ ಕುಸುಮಬಾಲೆಯ ಇಂಗ್ಲಿಶ್ ಅನುವಾದಕ್ಕೆ ಇಲ್ಲಿಯವರೆಗೆ ಬಂದಿರುವ ಪ್ರತಿಕ್ರಿಯೆಗಳು ಆಧುನಿಕ ಅನುವಾದ ಸಿದ್ಧಾಂತಗಳನ್ನು ಗಮನದಲ್ಲಿಟ್ಟುಕೊಂಡು ಬಂದಿರುವಂತಹವೇನಲ್ಲ. ಅನುವಾದವೊಂದನ್ನು ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಹೇಳುವುದು ಅಷ್ಟು ಕಷ್ಟದ ಕೆಲಸವೇನಲ್ಲ. ಅದು ಏಕೆ ಚೆನ್ನಾಗಿದೆ, ಏಕೆ ಚೆನ್ನಾಗಿಲ್ಲ ಎಂದು ಕೂಡ ಹೇಳಬೇಕಾಗುತ್ತದೆ. ಹಾಗೆ ಮಾಡಲಾಗುವ ವಿಮರ್ಶೆ ಕೇವಲ ಸಾಹಿತ್ಯ ವಿಮರ್ಶೆಯಾಗದೆ, ಅನುವಾದ ವಿಮರ್ಶೆಯಾಗಿಬಿಡುತ್ತದೆ. ‘ಅನುವಾದ ಅಧ್ಯಯನ’ವೇ ಒಂದು ಅಕಡೆಮಿಕ್ ಶಿಸ್ತಾಗಿ ರೂಪುಗೊಂಡಿರುವ ಕಾಲದಲ್ಲಿ, ಮೂಲಕೃತಿ ಪ್ರಕಟವಾದ ಮೂವತ್ತು ವರುಶಗಳ ನಂತರ ಬಂದಿರುವ ಅದರ ಇಂಗ್ಲಿಶ್ ಅನುವಾದವನ್ನು ಈ ಮೂವತ್ತು ವರುಶಗಳಲ್ಲಿ ಬದಲಾಗಿರುವ ಸಾಹಿತ್ಯ ಅಧ್ಯಯನದ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ನೋಡುವ ಕೆಲಸವಾಗಬೇಕಿದೆ. ಹಾಗೆ ಹೇಳುವುದಾದರೆ, ಕಳೆದ ಮೂವತ್ತು ವರುಶಗಳಲ್ಲೇ ‘ಅನುವಾದ ಅಧ್ಯಯನ’ ಒಂದು ಪ್ರತ್ಯೇಕವಾದ ಹೊರಹೊಮ್ಮಿದ್ದು.

ಅನುವಾದವನ್ನು ದ್ವಿತೀಯ ದರ್ಜೆಯ ಕೆಲಸವೆಂದೇ ಇಲ್ಲಿಯವರೆಗೂ ಪರಿಗಣ ಸಲಾಗಿತ್ತು. ಈಗ ಅನುವಾದ ಒಂದು ಸೃಜನಶೀಲ ಕೆಲಸ ಎಂಬ ವಾದಗಳು ಹುಟ್ಟಿಕೊಂಡಿವೆ. ಅದು ನಿಜ ಕೂಡ ಹೌದು. ಕಾರಣ, ಅನುವಾದ ಒಂದರಲ್ಲಿ ಗಮನಿಸಬೇಕಾಗಿರುವುದು ಕೇವಲ ಭಾಷಿಕ ಅಂಶವನ್ನು ಮಾತ್ರವಲ್ಲ, ಸಾಂಸ್ಕøತಿಕ ಅಂಶಗಳು, ರಾಜಕೀಯ ಅಂಶಗಳು ಕೂಡ ಸೇರಿಕೊಂಡಿರುತ್ತವೆ. ಹೋಮಿ ಭಾಭಾ ಎಂಬ ವಿದ್ವಾಂಸ ತನ್ನ The Location of Culture, ಕೃತಿಯಲ್ಲಿ ಹೇಳಿರುವ ಹಾಗೆ, ಅನುವಾದ ಸಂಸ್ಕøತಿಗಳು ಹೇಗೆ ರೂಪುಗೊಳ್ಳುತ್ತವೆ ಹಾಗೂ ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ತುಂಬ ಸಹಕಾರಿ. ಹಾಗೆಯೇ. ತೇಜಸ್ವಿನಿ ನಿರಂಜನ ತನ್ನ Siting Translation: History, Poststructuralism and the Colonial Context ವಾದಿಸುವ ಹಾಗೆ, ಅನುವಾದವೆನ್ನುವುದು ಕೇವಲ “ಅಂತರ್‍ಭಾಷಿಕ ಪ್ರಕ್ರಿಯೆ’ ಅಲ್ಲ, ಅದೊಂದು ಪ್ರಾತಿನಿಧಾತ್ಮಕ ಅಭ್ಯಾಸಗಳ ಸ್ವರೂಪವನ್ನು ನಿರ್ಧರಿಸುವಂತಹ ಒಂದು ಇಡೀ “ತೊಡಕು”. ಮಿಶೆಲ್ ಫುಕೋ ಅಧಿಕಾರ ಮತ್ತು ಜ್ಞಾನ ಹಾಗೂ ಸಂಕಥನಗಳ ಸಂಬಂಧವನ್ನು ಕೂಡ ಅನುವಾದದ ಸಂದರ್ಭಗಳು ಹಾಗೂ ಪರಿಸ್ಥಿತಿಗಳನ್ನು ಮರುವ್ಯಾಖ್ಯಾನಿಸಲು ಬಳಸಲಾಗುತ್ತದೆ. ಇವೆಲ್ಲದರ ಜೊತೆಗೆ, ‘ಸಮಾಜಶಾಸ್ತ್ರೀಯ ತಿರುವು’ ಅನುವಾದದ ಎಥಿಕ್ಸ್‍ನ ಕಡೆಗೆ ಗಮನವನ್ನು ಸೆಳೆದಿದ್ದು, ಪಠ್ಯಗಳನ್ನು ಅರ್ಥೈಸಲು ಅಥವಾ ವ್ಯಾಖ್ಯಾನಿಸುವಲ್ಲಿ ಅನುವಾದಕರ ಪಾತ್ರ ಎಷ್ಟು ಮುಖ್ಯ ಎಂದು ತೋರಿಸಿಕೊಟ್ಟಿದೆ. ಕುಸುಮಬಾಲೆಯಲ್ಲಿ ಓದಿಲ್ಲದ ಕುಸುಮ ‘I want to be in my home’ ಎಂದು ಹೇಳಿದ್ದು, ಇಂಗ್ಲಿಶ್‍ನಲ್ಲಿ ಫ್ರೆಂಚ್ ವಾಕ್ಯವಾಗಿ Je veux etre dans ma maison ಆಗಿದೆಯೆಂಬುದನ್ನು ನಾವು ಹೀಗಲ್ಲದೆ ಹೇಗೆ ತಾನೇ ಅರ್ಥಮಾಡಿಕೊಳ್ಳಲು ಸಾಧ್ಯ? ಕುಸುಮಬಾಲೆಯ ಇಂಗ್ಲಿಶ್ ಅನುವಾದದಲ್ಲಿ ಸೂಸನ್ ಮಾಡಿಕೊಂಡಿರುವ ಆಯ್ಕೆಗಳು, ಅವುಗಳ ಔಚಿತ್ಯ, ಇತ್ಯಾದಿಗಳನ್ನು ಚರ್ಚಿಸುವ ಅಭ್ಯಾಸಪೂರ್ಣ ಪ್ರಬಂಧ ಕೇವಲ ಕನ್ನಡ ಸಾಹಿತ್ಯದ ವಿಮರ್ಶಾತ್ಮಕ ಸಂಕಥನಕ್ಕೆ ಕೊಡುಗೆಯಾಗುವುದು ಮಾತ್ರವಲ್ಲ, ಕನ್ನಡದಲ್ಲಿ ಅನುವಾದ ಅಧ್ಯಯನವನ್ನು ಬೆಳೆಸುವಲ್ಲಿ ಕೂಡ ಪ್ರಮುಖ ಪಾತ್ರವಹಿಸಬಲ್ಲದು.

ಕಡೆಯದಾಗಿ, ಕುಸುಮಬಾಲೆಯ ಇಂಗ್ಲಿಶ್ ಅನುವಾದಕಿಯಾದ ಸೂಸನ್ ಡೇನಿಯಲ್ ಅನುವಾದ ಪ್ರಕ್ರಿಯೆ ಹಾಗೂ ಕಾರ್ಯತಂತ್ರದ ಬಗ್ಗೆ ಹೇಳಿರುವುದನ್ನು ಚರ್ಚಿಸುವ ಮೂಲಕ ಈ ಬರೆಹವನ್ನು ಮುಗಿಸಬಹುದು.

“ನಂಜನಗೂಡು ಉಪಭಾಷೆಯ ಯಾವ ಜ್ಞಾನವೂ ಇರದ ನಾನು ಓದುವ ಗೋಷ್ಠಿಯನ್ನೇರ್ಪಡಿಸಬೇಕೆಂದು ಲೇಖಕರಲ್ಲಿ ಅರಿಕೆ ಮಾಡಿಕೊಂಡೆ. ಮೈಸೂರಲ್ಲಿ ನನಗೆ ಸಿಕ್ಕಿದ್ದು ಭೂರೀ ಭೋಜನ. ತನ್ನ ಕಂಚಿನ ಕಂಠದ ಮೂಲಕ ದಲಿತ ಗೀತೆಗಳನ್ನಾಡುತ್ತ ಕನ್ನಡ ನಾಡಲ್ಲಿ ಮನೆಮಾತಾಗಿರುವ ಎಚ್. ಜನಾರ್ಧನ್ ಕೂಡ ಅಲ್ಲಿದ್ದರು. ಹಾಗೆಯೇ ಬಸವಲಿಂಗಯ್ಯನವರ ಕುಸುಮಬಾಲೆಯ ರಂಗರೂಪದಲ್ಲಿ ತೂರಮ್ಮನ ಪಾತ್ರ ನಿರ್ವಹಿಸಿದ್ದ ಪ್ರಮೀಳಾ ಬೇಂಗ್ರೆ ಕೂಡ. ಇಡೀ ಕುಸುಮಬಾಲೆಯನ್ನು ತನ್ನ ನಾಲಿಗೆಲ್ಲಿರಿಸಿಕೊಂಡಿದ್ದ ಶಿವಸ್ವಾಮಿಯವರು ನಾನೇನೂ ಮಿಸ್ ಮಾಡಿಕೊಳ್ಳುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಎದುರಿಗೇ ಕೂತಿದ್ದರು.”

ನಾರ್ತ್ರೋಪ್ ಫ್ರೈ ಎಂಬ ವಿದ್ವಾಂಸ ಮಂಡನೆಯ ಮೂಲಭೂತವನ್ನಾಧರಿಸಿ ನಾಲ್ಕು ಸಾಹಿತ್ಯಕ ಪ್ರಭೇದಗಳನ್ನು ಹೆಸರಿಸುತ್ತ, ಅವು ರೆಟರಿಕಲ್ ಎಂಬ ವಿಚಾರಕ್ಕೆ ವಾಪಸ್ಸಾಗುತ್ತಾನೆ. “ಸಾಹಿತ್ಯಕ ಪ್ರಭೇದಗಳು ಕವಿ ಮತ್ತು ಸಾರ್ವಜನಿಕರ ನಡುವೆ ಸ್ಥಾಪಿಸಲಾದ ಪರಿಸ್ಥಿತಿಗಳನ್ನಾಧರಿಸಿವೆ. “ಮಂಡನೆಯ ಮೂಲಭೂತ”ವು ಸಾಹಿತ್ಯಕ ಪ್ರಭೇದದ ಗುರುತಾಗಿದೆ. “ಶಬ್ದಗಳನ್ನು ನೋಡುಗನ ಮುಂದೆ ಅಭಿನಯಿಸಬಹುದು; ಕೇಳುಗನ ಮುಂದೆ ಹೇಳಬಹುದು; ಅವುಗಳನ್ನು ಹಾಡಬಹುದು; ಅಥವಾ ಓದುಗನಿಗಾಗಿ ಬರೆಯಬಹುದು”.

ಇವೆಲ್ಲವನ್ನು ಮೇಲೆ ಕಾಣಬಹುದು. ಪಠ್ಯವೊಂದು ಯಾವೆಲ್ಲ ರೀತಿಯಲ್ಲಿ ಅನುವಾದಗೊಳ್ಳುತ್ತದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ?

(ಈ ಲೇಖನವನ್ನು ಅಭಿನವ ಪ್ರಕಾಶನದವರು ಪ್ರಕಟಿಸಬೇಕೆಂದಿದ್ದ ಕುಸುಮಬಾಲೆ ಕುರಿತ ಲೇಖನಗಳ ಸಂಗ್ರಹಕ್ಕೆಂದು 2016ರಲ್ಲಿ ಸಿದ್ದಪಡಿಸಲಾಗಿತ್ತು. ಹಾಗಾಗಿ, ಈ ಮೂರು ವರ್ಷಗಳಲ್ಲಿ ಬದಲಾಗಿರುವ ಲೇಖಕರ ಕೆಲ ಅಭಿಪ್ರಾಯಗಳನ್ನು ಇಲ್ಲಿ ಸೇರಿಸಲಾಗಿಲ್ಲ)

[ಶಶಿಕುಮಾರ್ ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಮೈಸೂರಿನಲ್ಲಿ. ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಕೆಲಕಾಲ ಇಂಗ್ಲಿಶ್ ಅನುವಾದಗಳ ಸಂಪಾದಕರಾಗಿದ್ದರು. ಸದ್ಯ ಕನ್ನಡ ಕಾದಂಬರಿಯ ಇಂಗ್ಲಿಶ್ ಅನುವಾದ ಹಾಗೂ ಕನ್ನಡ ವಿಮರ್ಶಾತ್ಮಕ ಸಂಕಥನದ ಸಂಪಾದನೆಯಲ್ಲಿ ತೊಡಗಿಕೊಂಡಿದ್ದಾರೆ. ಅನುವಾದ ಅಧ್ಯಯನ ಇವರ ಸಂಶೋಧನಾ ಕ್ಷೇತ್ರ.]