“ಎಡವಟ್ರಾಯ”

(ಪ್ರೊ.ಕೆ.ಸುಮಿತ್ರಾಬಾಯಿಯವರ ಬಾಳ ಕಥನ “ಸೂಲಾಡಿ ಬಂದೋ ತಿರುತಿರುಗೀ” ಕೃತಿಯು, 2018ರಲ್ಲಿ ಮೈಸೂರಿನ ಅಭಿರುಚಿ ಪ್ರಕಾಶನದಿಂದ ಮುದ್ರಣಗೊಂಡಿದ್ದು, ಅದರಿಂದ “ಎಡವಟ್ರಾಯ” ಎಂಬ ಅಧ್ಯಾಯದಿಂದ ಆಯ್ದ ಬರಹಗಳ ತುಣುಕು ನಮ್ಮ ಓದಿಗಾಗಿ…)
ಒಂದು ದಿನ ಕೆಲವು ವಿದ್ಯಾರ್ಥಿಗಳು ನನ್ನ ಬಳಿಗೆ ಬಂದು ವಿನಯವಾಗಿ- ‘ಮೇಡಂ ನೀವು ಲೆಕ್ಚರರ್ ಆಗಿದ್ದೀರಿ, ಆ ಡಿಗ್ನಿಟಿಗೆ ತಕ್ಕಂತೆ ದೇವನೂ‌ರು ಸರ್‌ಗೂ ಸೂಟುಬೂಟು ಧರಿಸುವಂತೆ ಉಡುಪನ್ನು ಕೊಡಿಸಿರಿ, ಯಾಕಂದ್ರೆ ಮೊದಲು ಜನ ಗಮನಿಸುವುದು ಧರಿಸಿರುವ ಉಡುಪನ್ನು, ಹಿಂಗೆ ಹೇಳಿದ್ವಿ ಅಂತ ತಪ್ಪು ತಿಳಿಯಬೇಡಿ’ ಎಂದರು. ಅವರ ಮಾತಿನಲ್ಲೂ ನಿಜವಿರುವಂತೆ ಅನ್ನಿಸಿತು. ಆಮೇಲೆ ಇದೂ ಒಂದು ಪ್ರಯತ್ನ ಎಂದು ಒಂದು ದಿನ, ಷರ್ಟ್ ಒಗೆದು ಇಸ್ತ್ರಿ ಮಾಡಿ ಇಟ್ಟಿದ್ದೆ. ಮನೆಯೊಳಗೆ ಬಂದವನೇ, ಮಿತ್ರೀ ನನ್ನ ಅಂಗಿ ಕಾಣ್ತಿಲ್ಲ ಎಲ್ಲಿಟ್ಟಿದ್ದೀಯಾ? ಅಂದನು. ಅದನ್ನು ಸ್ಟ್ಯಾಂಡ್ ಮೇಲೆ ಇಟ್ಟಿದ್ದೆ ಎಂದೆ. ನೋಡಿದ ಮೇಲೆ, ಅರೆ ಏನಿದು? ಎಂದನು. ಇಸ್ತ್ರಿ ಮಾಡಿ ಧರಿಸಿದರೆ ತುಂಬಾ ಚೆನ್ನಾಗಿ ಕಾಣ್ತೀಯ ಅದಕ್ಕೆ ಎಂದು ಪೂಸಿಹೊಡೆದೆ. ಅವನಿಂದ ಪ್ರತ್ಯುತ್ತರ ಬರಲಿಲ್ಲ. ಒಂದೆರಡು ನಿಮಿಷಗಳ ನಂತರ ಮನೆಯಾಚೆಗೆ ಬಂದರೆ, ಆ ಇಸ್ತ್ರಿ ಮಾಡಿದ ಷರ್ಟ್ ಮತ್ತೆ ನೀರಲ್ಲಿ ಮೀಯಿಸಿಕೊಂಡು ಅಡಿಕೆಪಟ್ಟೆ ಬೇಲಿಯ ಮೇಲೆ ನೇತಾಡುತ್ತ ನೀರು ತೊಟ್ಟಿಕ್ಕಿಸುತ್ತ ನನ್ನನ್ನೇ ಅಣಕಿಸಿತು. ನಾನು ಸಪ್ಪಗಾದುದನ್ನು ಕಂಡು ದೇಮಾ- ‘ಇಂದು ಮಾರಾಣಿ ಕಾಲೇಜ್ ಫಂಕ್ಷನ್… ನಾನು ಇಸ್ತ್ರಿ ಶರ್ಟ್ ಹಾಕ್ಕೊಂಡು ಹೋಗಿದ್ದರೆ ಜೀವನ ಪರಂತ ಹಂಗಿಸುತ್ತಿದ್ದೆ’ ಎಂದು ನಗಿಸಲು ನೋಡಿದನು. ನಾನು ನಗದೆ ಸುಮ್ಮನಿದ್ದೆ. ನನ್ನ ಖುಷಿಯೆಲ್ಲ ಆ ಅಂಗಿಯಿಂದ ತೊಟತೊಟನೆ ಸುರಿಯುತ್ತಿದ್ದ ನೀರಿನ ಜೊತೆ ಸೋರಿಹೋಗಿತ್ತು.
ದೇಮಾನ ಈ ವೇಶಭೂಷಣಗಳಿಂದಾಗಿ ಕೆಲವು ಸಲ ಎಡವಟ್ಟುಗಳು ಆಗುತ್ತಿದ್ದುದೂ ಉಂಟು. ಒಂದು ದಿನ ಮೈಸೂರಿನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ದೇಮಾ ಪ್ರಯಾಣಿಸುತ್ತಿರಬೇಕಾದರೆ, ಸಹಪ್ರಯಾಣಿಕನ ಜೇಬಿಂದ ಯಾರೋ ದುಡ್ಡನ್ನು ಎಗರಿಸಿಬಿಟ್ಟನಂತೆ. ಆಗ ಬಸ್ಸಿನಲ್ಲಿದ್ದ ಕೆಲವರು ದೇಮಾನೇ ಪಿಕ್‌ ಪಾಕೆಟ್ ಮಾಡಿದ್ದಾನೆಂದು ಎಗರಾಡುತ್ತಾ ಇವನನ್ನು ಆಚೀಚೆ ಎಳೆದಾಡುವಾಗ, ಇವನು ಬೆಬೆಗರಿಯುವುದ ಕಂಡು ಅಪನಂಬಿಕೆ ಹೆಚ್ಚುತ್ತಿತ್ತಂತೆ. ಅವನು ಹೇಳದಿದ್ದರೂ ಮಾಮೂಲಿ ಬೈಗುಳು, ಒಂದೆರಡು ಏಟುಪಾಟು ಬಿದ್ದಿರಬಹುದೆಂದು ಊಹಿಸಿದೆ. ಇಡೀ ಬಸ್ಸಲ್ಲಿದ್ದವರು ಕೆಳಗಿಳಿದು ಗಲಾಟೆ ಮಾಡುತ್ತಿರಬೇಕಾದರೆ ಯಾರೋ ಒಬ್ಬ ರಕ್ಷಕನಂತೆ ಗುರುತು ಹಿಡಿದು, ಏನ್ ಸಾರ್?… ಯಾಕೆ ಹೀಗೆ? ಎಂದರಂತೆ. “ಯಾರೋ ಜೇಬುಗಳ್ಳ ದುಡ್ಡು ಕದ್ದರೆ ನಾನೇ ಕದ್ದೆ ಎಂದು ಹೇಳುತ್ತಿದ್ದಾರೆ… ಪೊಲೀಸ್‌ಗೆ ತಿಳಿಸಿ ಎಂದರೂ ಕೇಳುತ್ತಿಲ್ಲ” ಎಂದನಂತೆ. ಆಗ ಆ ವ್ಯಕ್ತಿ- ಏಯ್ ಅವರನ್ನು ಯಾರೆಂದು ತಿಳಿದಿದ್ದೀರಿ? ಅವರು ಪೊಲೀಸ್ ಸ್ಟೇಷನ್‌ಗೆ ಹೋದರೆ ನೀವೇ ಕಂಬಿ ಎಣಿಸಬೇಕಾಗುತ್ತೆ ಎಂದು ಗದರಿಸುತ್ತಿರುವಷ್ಟರಲ್ಲಿ, ಯಾರೊ ಇಬ್ಬರು ಒಬ್ಬನ ಕತ್ತಿನ ಪಟ್ಟಿ ಹಿಡಿದು ದರದರನೆ ಎಳೆದುಕೊಂಡು ಬಂದು ಇವನೇ ದುಡ್ಡು ಕದ್ದ ಕಳ್ಳ ಎಂದಾಗ ಅವರೆಲ್ಲ ದೇಮಾ ಬಗ್ಗೆ ತುಂಬಾನೆ ಪರಿತಾಪಪಟ್ಟರಂತೆ. ‘ನಿಂಗೆ ಸರ್ಯಾಗಾಯ್ತು ಬಿಡು, ಅವರು ಆರೋಪಿಸುವುದನ್ನು ಕೇಳಿ ಬೆವರುತ್ತಾ ಗಾಬರಿಯಿಂದ ತೊದಲುತ್ತಿದ್ದರೆ ಯಾವೋನು ತಾನೇ ನಿನ್ ಮಾತ್ ನಂಬ್ತಾನೆ ಹೇಳು’ ಎಂದು ಅವನ ಸ್ವಭಾವವನ್ನು ಹಂಗಿಸಿದೆ. ನಾನಲ್ಲಿದ್ದರೆ ಕಥೆಯೇ ಬೇರೆಯಿರುತ್ತಿತ್ತು ಎಂದು ಬೀಗಿದೆ. ಸಾಮಾನ್ಯವಾಗಿ ದೇಮಾ ತಪ್ಪು ಮಾಡದಿದ್ದರೂ ಕೂಡ ಆರೋಪಕ್ಕೆ ಒಳಗಾದಾಗ ಸಮರ್ಥಿಸಿಕೊಳ್ಳದೆ ಬೆಬೆಗರಿಯುತ್ತಾನೆ. ಏನು ಹೇಳಬೇಕೆಂದು ತಿಳಿಯದೆ ಕಸಿವಿಸಿಗೊಳ್ಳುತ್ತಾನೆ. ಅಷ್ಟು ಜನರ ಮುಂದೆ ಇವನು ವರ್ತಿಸಿರಬಹುದಾದ ದೃಶ್ಯ ಕಣ್ಮುಂದೆ ಬಂದಂತಾಗಿ ಮಜ ಅನ್ನಿಸಿತು.
***********
ಒಂದು ಸಲ ನನ್ನ ಸೋದರತ್ತೆಯ ಮೊಮ್ಮಗಳ ಮದುವೆಗೆಂದು ಒಂದು ಜೊತೆ ಓಲೆಯನ್ನು ಮುಯ್ಯಿ ಹಾಕೋಣವೆಂದು ಯೋಚಿಸಿ, ಶಂಕರಶೆಟ್ಟಿ ಆಭರಣದ ಅಂಗಡಿಗೆ ದೇಮಾನನ್ನೂ ಕರೆದುಕೊಂಡು ಹೋದೆ. ಅಂಗಡಿಯಲ್ಲಿ ಜನ ದಟ್ಟಣೆ ಜಾಸ್ತಿ ಇತ್ತು. ಮಕ್ಕಳಿಗೆ ತಾನೂ ಏನಾದ್ರೂ ತರೀನಿ ಎಂದು ದೇಮಾ ಅಂಗಡಿ ಒಳಕ್ಕೆ ಬರಲಿಲ್ಲ. ಹಾಗಾಗಿ ಅಂಗಡಿಯೊಳಕ್ಕೆ ನಾನೊಬ್ಬಳೇ ಹೋದೆ. ಚೆನ್ನಾಗಿ ಕಂಡ ಒಂದು ಜೊತೆ ಓಲೆಯನ್ನು ಆಯ್ಕೆ ಮಾಡಿ ಅದರ ಬಿಲ್ ಬರೆಯುತ್ತಿರಬೇಕಾದರೆ, ಅಂಗಡಿಯ ಬಾಗಿಲಲ್ಲಿ “ಯಾರೊ ನೀನು? ಯಾಕೆ ಒಳಗೆ ಬರ್ತಿದ್ದೀಯಾ?” ಎಂದು ಯಾರನ್ನೋ ಗಾಬರಿಯಿಂದ ಗದರಿಸುವುದು ಕೇಳಿಸಿತು. ಆಗ ಮಾಲೀಕನ ಗಮನ ಬಾಗಿಲ ಕಡೆ ಹರಿಯಿತು. ಸಹಜವಾಗಿ ನಾನು ಕೂಡ ಆ ಕಡೆ ನೋಡಿದೆ. ಅಲ್ಲಿ ದೇಮಾನನ್ನು ತಡೆಹಿಡಿದಿದ್ದರು! ಕೂಡಲೇ ನಾನು ‘ಅವರು ನಮ್ಮ ಕಡೆಯವರೇನೇ ಒಳಗೆ ಬರಲು ಬಿಡಿ’ ಎಂದೆನು. ಆದರೂ ಅವರಿಗೆ ನನ್ನ ಮಾತಿನ ಮೇಲೆ ನಂಬಿಕೆ ಬರದೆ ಅನುಮಾನದಿಂದ ದೇಮಾನನ್ನು ಮೇಲಿಂದ ಕೆಳಕ್ಕೆ ಗಮನಿಸುತ್ತಿದ್ದರು. ಯಾಕೆ ಇವರೆಲ್ಲರೂ – ಹೀಗೆ ಸಂಶಯಿಸುತ್ತಿದ್ದಾರೆ ಎಂದುಕೊಂಡು ದೇಮಾನನ್ನು ದೃಷ್ಟಿಸಿ ನೋಡಿದರೆ, ಥೇಟ್ ರಾಮನಂಜುಡಮ್ ಥರವಾಗಿ ಎರಡು ದೊಡ್ಡ ನವಿಲುಗರಿಗಳನ್ನು ತನ್ನ ಹಿಂದಕ್ಕೆ ಇರುವಂತೆ ತನ್ನ ಜೋಳಿಗೆ ಚೀಲದಲ್ಲಿ ಇಟ್ಟು, ಎರಡೂ ಕೈಗಳಲ್ಲಿ ಮಕ್ಕಳ ಆಟದ ಸಾಮಾನುಗಳನ್ನು ಹಿಡಿದು ನಿಂತಿದ್ದನು. ಉಳಿದಂತೆ ಡ್ರೆಸ್ ಬಗ್ಗೆ ಹೇಳಬೇಕಾಗಿಲ್ಲ ತಾನೆ? ಥೇಟ್ ರಾಮನಂಜುಡಂ.. ರಾಮ ನಂಜುಡಂನಂತೆ ಕಾಣುತ್ತಿದ್ದನು. ಅಂಗಡಿಯವರಿಗೆ ಒಡವೆ ದೋಚಲು ಬಂದ ಮಾಂತ್ರಿಕನಂತೆ ಕಂಡಿದ್ದರೆ ಅದರಲ್ಲಿ ಆಶ್ಚರ್ಯವೇನು?
********
ಇನ್ನೊಮ್ಮೆ ಅಪರೂಪಕ್ಕೆ ಮಹಾರಾಜ ಕಾಲೇಜಿನ ಅಧ್ಯಾಪಕಿಯೊಬ್ಬರ ಮದುವೆಗೆ ದೇಮಾನನ್ನು ಕರೆದುಕೊಂಡು ಹೋಗಿದ್ದೆ. ಆ ಸಮಾರಂಭಕ್ಕೆ ತಕ್ಕಂತೆ ಉಡುಪು ಧರಿಸಿ ನಾನು ರೆಡಿಯಾದರೂ, ಇವನು ಮಾತ್ರ ಮಾಮೂಲಿಯಾಗಿ ಬಣ್ಣಗೆಟ್ಟಿರುವ ಹಳೆಯ ಷರ್ಟ್ ಮತ್ತು ಅದೇ ರೀತಿಯ ಮಾಸಲು ಪ್ಯಾಂಟನ್ನು ಧರಿಸಿ ಒಲ್ಲದ ಮನಸ್ಸಿಂದ ಸಿದ್ಧವಾದನು. ಷರ್ಟ್‌ನ್ನಾದರೂ ಬದಲಾಯಿಸು ಎಂದು ರಾಗವೆಳೆದೆ. ಅದಕ್ಕೆ ಕಟುವಾಗಿ- ಆಗಲ್ಲ. ಇಂತಹ ಸಮಾರಂಭವೆಂದರೇನೆ ನನಗಾಗದು, ನೀನು ಒಬ್ಬಳೇ ಅಷ್ಟು ದೂರ ಕತ್ತಲೆಯಲ್ಲಿ ಹೋಗಲು ಕಷ್ಟ ಎಂದಿದ್ದಕ್ಕೆ ಬರ್ತಿದ್ದೀನಿ ಅಷ್ಟೆ ಅಂದನು. ಜೊತೆಗೆ ಈ ಡ್ರೆಸ್ ನಿನಗಿಷ್ಟವಿಲ್ಲದಿದ್ದರೆ ಏನೂ ಮಾಡಕ್ಕಾಗಲ್ಲ, ನಾನು ಹೊರಗಡೆಯೇ ನಿಂತಿರ್ತಿನಿ ಎಂದು ಕಂಡಿಷನ್ ಬೇರೆ ಹಾಕಿದನು. ಸದ್ಯ ಈ ಗೂಬೆ ಜೊತೆಯಲ್ಲಿ ಬಂದ್ರೆ ಸಾಕು, ಆಮೇಲೆ ಉಪಾಯವಾಗಿ ಒಳಗೆ ಕರೆದುಕೊಂಡು ಹೋದರಾಯ್ತು ಎಂದು ಮನಸ್ಸಲ್ಲೇ ಗುಣಾಕಾರ ಹಾಕಿ ಅದಕ್ಕೂ ಆಯಿತು ಎಂದೆ. ಆಮೇಲೆ ಛತ್ರ ಸಿಕ್ಕಾಗ ಒಳಬರದೆ ಅಲ್ಲೆ ನಿಂತು ಸಿಗರೇಟ್ ಸೇದಿಕೊಂಡು ಆಮೇಲೆ ಬರುತ್ತೇನೆಂದಾಗ ಅದಕ್ಕೂ ಸೈ ಎಂದು ತಲೆಯಾಡಿಸಿ ನನ್ನ ಸ್ನೇಹಿತೆಯರ ಮುಖಗಳನ್ನರಸುತ್ತಾ ಒಳನಡೆದೆ. ಆಮೇಲೆ ವಧೂವರರಿಗೆ ಉಡುಗೊರೆ ನೀಡಿ ಆನಂತರ ಒಂದು ಕುರ್ಚಿಯಲ್ಲಿ ಕೂತು ದೇಮಾನಿಗಾಗಿ ಕಾಯ ತೊಡಗಿದೆ. ಎಷ್ಟು ಹೊತ್ತಾದರೂ ದೇಮಾನ ಸುಳಿವಿಲ್ಲದೆ ಕಾದೂ ಕಾದು ಕೊನೆಗೆ ಮುಂಬಾಗಿಲಿನ ಕಡೆ ಹೆಜ್ಜೆ ಹಾಕಿದಾಗ- ಮೇಡಂ ಊಟ ಮುಗಿಸಿಕೊಂಡೇ ಹೋಗಬೇಕು ಎಂದು ಒತ್ತಾಯಿಸಿದರು. ಈಗೇನು ಮಾಡುವುದೆಂದು ಚಿಂತಿಸಿ ಊಟದ ಶಾಸ್ತ್ರ ಮುಗಿಸಿ ಹೊರಡೋಣವೆಂದು ಡೈನಿಂಗ್ ಹಾಲ್ ಕಡೆ ಹೋದರೆ ಇವನು ಅಲ್ಲಿ!
ನನ್ನ ಕಂಡ ಕೂಡಲೇ ದೇಮಾ ತನ್ನ ಉದ್ದನೆಯ ಕರಿಕೈಯನ್ನೆತ್ತಿ ತನ್ನ ಇರುವಿಕೆಯನ್ನು ಸೂಚಿಸಿದನು. ದೇಮಾಗೆ ಅತ್ತ-ಇತ್ತ ಮಿಸುಕಾಡಲೂ ಬಿಡದೆ ಸುತ್ತ ಮುತ್ತ ಮೂರಾಲ್ಕು ಜನ ಯುವಕರು, ವಿವಿಧ ಭಕ್ಷ್ಯಗಳನ್ನು ತಿನ್ನುವಂತೆ ಪುಸಲಾಯಿಸುತ್ತಿದ್ದರು! ಇದಪ್ಪ ಮಜಾ ಅಂದ್ರೆ ಅಂದುಕೊಂಡು ಅವನು ಊಟ ಮಾಡುತ್ತಿರುವಲ್ಲಿಗೆ ಹೋಗಿ, ನನ್ನನ್ನು ಬಿಟ್ಟು ನೀನೊಬ್ಬನೇ ಊಟಕ್ಕೆ ಬಂದೀ? ಎಂದು ಕೇಳಿದೆ. ನನ್ನ ಪ್ರಶ್ನೆಗೆ ಉತ್ತರ ಕೊಡದೆ ಅಲ್ಲಿದ್ದವರಿಗೆ ನನ್ನನ್ನು ಪರಿಚಯಿಸಿದನು. ಕೂಡಲೆ ಅವರೆಲ್ಲರೂ ಚೆದುರಿಹೋದರು. ಲೇಖಕನಾದ್ದರಿಂದ, ಯಾರೊ ಅಭಿಮಾನಿಗಳಿರಬೇಕೆಂದು ಭಾವಿಸಿದೆ. “ಮೇಡಂ ಹಸ್ಟೆಂಡಂತೆ, ರೈಟರಂತೆ, ಅದೇನೆ ಶ್ಯಾಬಿಶ್ಯಾಬಿಯಾಗಿದ್ದಾನೆ” ಎಂದು ಯಾರೊ ಯಾರಿಗೋ ಹೇಳುತಿದ್ದುದು ಕಿವಿಗೆ ಬಿತ್ತು. ನನಗೆ ಒಳಗೊಳಗೆ ಜಂಭವಾಗುತ್ತಿತ್ತು. ದೇಮಾನನ್ನು ವಧು ಕಡೆಯವರಿಗೆ ಪರಿಚಯಿಸಿದಾಗ, ಓ… ಹೋ…. ಗೊತ್ತು…. ಮೇಡಂ ಎಂದರು. ಆದರೆ ಮಹಾದೇವನ ಮುಖ ತಿಳಿಯಾಗಿರಲಿಲ್ಲ.
ಮನೆಯ ಕಡೆ ಹೊರಟಾಗ ಯಾಕಪ್ಪಾ ಛತ್ರದೊಳಗೆ ಬರಲು ತಡವಾಯ್ತು? ಎಂದೆ. ಏನಿಲ್ಲ ಬಿಡು, ಆಮೇಲೆಳ್ತಿನಿ ಎಂದಾಗಲೇ ಏನೋ ಇದೆ ಎಂದಂತೆನ್ನಿಸಿ ಅದೇನಾಯಿತು ಹೇಳು ಎಂದೆ. ಬಾಗ್ಲಲ್ಲಿ ಒಳಬಿಡದೆ- ಯಾರು ನೀನು? ಯಾಕೆ ಬಂದಿದೀಯ? ಯಾರ ಕಡೆಯವನು? ಎಂದು ಜಪ್ಪಿಸಿ ಕೇಳುತ್ತಾ ಉತ್ತರಕ್ಕೂ ಕಾಯದೆ ನಡೀ ಆಚೆಗೆ ಎಂದರಂತೆ. ಇವನು- ಆಯ್ತು ಹೋಗ್ತಿನಿ, ನನ್ನ ಹೆಂಡತಿ ಒಳಗಿದ್ದಾಳೆ ಕರೆಯಿರಿ ಎಂದನಂತೆ. ಆಗೊಬ್ಬನು ಒಳಬಂದು ನಮ್ಮ ಕಾಲೇಜಿನ ಅಧ್ಯಾಪಕರಿಗೆ ದೇಮಾನನ್ನು ತೋರಿಸಿ ವಿಚಾರಿಸಿದಾಗ ನಿಜ ತಿಳಿದು ತಮ್ಮ ತಪ್ಪಿನ ಅರಿವಾಗಿ ಪದೇ ಪದೇ ಸಾರಿ ಹೇಳುತ್ತ ಬಾಳ ವಿನಯವಾಗಿ ರಾಜಮಾರ್ಯದೆ ಮಾಡತೊಡಗಿದರಂತೆ. ಇದನ್ನೆಲ್ಲ ಇವನು ತಣ್ಣಗೆ ಹೇಳುತ್ತಿದ್ದರೆ ನನ್ನ ಕೋಪತಾಪಗಳ ಬಿಸಿ ಏರುತ್ತಾ ಹೋಗುತ್ತಿತ್ತು. ನೀನು ಕೂಡಲೆ ತಿಳಿಸಿದ್ದರೆ, ಒಂದು ಲೋಟ ನೀರನ್ನೂ ಕುಡಿಯದೆ ವಾಪಸ್ ಮನೆಗೆ ಬಂದು ಬಿಡುತ್ತಿದ್ದೆ ಎಂದೆ. ಹಿಂದೊಂದು ದಿನ ನನ್ನ ಅಜ್ಜಿ ಯಾವುದೊ ಮಾತಿಗೆ “ಎಲ್ಲಾ ಬಟ್ಟೆ ಬೆಳಕುಕನವ್ವಾ” ಅನ್ನುತ್ತಿದ್ದುದು ನೆನಪಾಯ್ತು.
*******
ಇವನು ನಿಜವಾಗಿ ಹೇಗಿರುತ್ತಾನೆಂದರೆ, ಊಟ ಮಾಡುವ ಕೈಯಾವುದೆಂದು ತಿಳಿದಿದೆಯೇ ಹೊರತು, ಅದೇ ಕೈಗೆ ಬಲಗೈ ಎಂದು ಹೆಸರಿರುವುದು ಮರೆತು ಹೋಗಿರುತ್ತದೆ. ಇಬ್ಬರೂ ಒಟ್ಟಿಗೆ ರಿಕ್ಷಾದಲ್ಲಿ ಮನೆಗೆ ಬರುತ್ತಿರುವಾಗ ಡ್ರೈವರ್‌ಗೆ ಯಾವ ಕಡೆ ತಿರುಗಿಸಬೇಕೆಂದು ಹೇಳವುದಕ್ಕೆ ಗೊಂದಲದಲ್ಲಿರುತ್ತಾನೆ. ಬಲಗಡೆ ಎಂದು ಹೇಳುವ ಬದಲು ಎಡಗಡೆ ಎಂದೂ ಎಡಗಡೆಗೆ ಎನ್ನುವ ಬದಲು ಬಲಗಡೆ ಅಂತಾನೆ. ಅಲ್ಲ. ಅಲ್ಲ… ಎಂದು ನಾನು ಸರಿಯಾದ ತಿರುವಿಗೆ ಗಾಡಿ ತಿರುಗಿಸಲು ಹೇಳಿದ ಪ್ರಸಂಗಗಳೆಷ್ಟೋ ಸಲ ಘಟಿಸಿವೆ. ಇದೇನಿದು ಈಯಪ್ಪನಿಗೆ ತಮ್ಮ ಮನೆಗೆ ಹೋಗುವ ದಾರಿ ತಿಳಿಯದೆ ಎಂಬ ಭಾವದಿಂದ ಡ್ರೈವರ್ ದೇಮಾನನ್ನೇ ತನ್ನೆದುರಿನ ಕನ್ನಡಿಯಲ್ಲಿ ಚೂಪಾಗಿ ನೋಡಿದ್ದನ್ನು ಗಮನಿಸಿದ್ದೇನೆ. ದಿಕ್ಕುಗಳ ಗೊಂದಲದ ಜೊತೆಗೆ ಕಾಲದ ಬಗ್ಗೆಯೂ ಇವನು ಹೀಗೆಯೇ, ಇಸವಿಗೆ ಮತ್ಯಾವುದೋ ಹೇಳುತ್ತಾನೆ. ತಾರೀಖು, ವಾರ ಯಾವಯಾವುದೋ ಆಗಿರುತ್ತದೆ. ಆಮೇಲೆ ಒಂದು ಸಲ ರುಜು ಮಾಡಿದಂತೆ ಇನ್ನೊಂದು ಸಲ ಅದೇ ರೀತಿ ರುಜು ಮಾಡಲು ಕಷ್ಟ ಪಡುತ್ತಾನೆ. ಒಟ್ಟಿನಲ್ಲಿ ಇವನಿಗೆ ದಿಕ್ಕೂ ಇಲ್ಲ, ಕಾಲವೂ ಇಲ್ಲ ಎಂಬಂತಿರುತ್ತಾನೆ.