ಇದೊಂದು ಕಾವ್ಯ ಪುರಾಣ–ಯಶವಂತ ಚಿತ್ತಾಲ,
[ದೇವನೂರರ ‘ಕುಸುಮಬಾಲೆ’ ಕಾದಂಬರಿ ಕುರಿತು ಯಶವಂತ ಚಿತ್ತಾಲರು 10.5.88ರಂದು ಬರೆದ ಪತ್ರ ನಮ್ಮ ಮರು ಓದಿಗಾಗಿ… ]
ಪ್ರೀತಿಯ ಮಹಾದೇವ,
ನಾನು ಉತ್ಸುಕತೆಯಿಂದ ಹಾದಿ ನೋಡುತ್ತಿದ್ದ ನಿಮ್ಮ ಹೊಸಕೃತಿ ‘ಕುಸುಮಬಾಲೆ’ಯನ್ನು ನೋಡಿದೊಡನೆಯೇ ತುಂಬಾ ಖುಷಿಪಟ್ಟೆ. ನಿಮ್ಮ ಕಾದಂಬರಿ ಕೈಗೆ ಬಂದ ಕೂಡಲೇ ನನ್ನ ಉಳಿದೆಲ್ಲಾ ಕೆಲಸಗಳನ್ನು ಬದಿಗಿಟ್ಟು ಓದಲು ಹಿಡಿದೆ. ಮೂರು ದಿನಗಳ ನಂತರ ನನ್ನ ಬಾಯಿಂದ ಹೊರಟ ಉದ್ಗಾರ-ಅದ್ಭುತ!. ನಿಜಕ್ಕೂ ಅದ್ಭುತವಾದುದನ್ನು ಸಾಧಿಸಿದ್ದೀರಿ. ಮಹಾದೇವ, ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇದೊಂದು ಚಿಕ್ಕ ಕಾವ್ಯ-ಪುರಾಣ, ‘ಎ ಪೊಯೆಟಿಕ್ ಮಿಥ್!’ ಆಧುನಿಕ ಕನ್ನಡ ಸಾಹಿತ್ಯಕ್ಕೆ ಹೊಸತು. ಸಮಕಾಲೀನ ಅನುಭವ ದ್ರವ್ಯವನ್ನು ಒಳಗೊಂಡಿದ್ದೂ ಇದು ಧ್ವನಿಸುವ ಸತ್ಯ ಸಾರ್ವಕಾಲಿಕವಾದದ್ದು. ಇದೊಂದು ಪುರಾಣ[ಮಿಥ್] ಆಗಿರುವುದರಿಂದಲೇ ತನ್ನೆಲ್ಲಾ ಅರ್ಥವನ್ನು ಒಂದೇ ಓದಿಗೆ ಬಿಟ್ಟುಕೊಡುವಂಥದ್ದಲ್ಲವೇನೋ!
ಪುರಾಣದ ಗರ್ಭದಲ್ಲೇ ಹುದುಗಿದ ಎರಡು, ಒಂದಕ್ಕೊಂದು ವಿರುದ್ಧವಾದ ಶಕ್ತಿಗಳು ಅದರ ಆಕೃತಿಯನ್ನು ನಿರ್ಧರಿಸುವಲ್ಲಿ ಕೆಲಸ ಮಾಡಿದಂತಿವೆ: ಒಂದು, ಹೆಣ್ಣಿನ ಧಾರಣಶಕ್ತಿಯನ್ನು ಕುರಿತ ಅಚಲವಾದ ವಿನ್ಯಾಸ, ಜೀವನವನ್ನು ಪೋಷಿಸುವ, ಹಸನುಗೊಳಿಸುವ ಶಕ್ತಿ ಹಾಗೂ ಜಾಣ್ಮೆ ಹೆಣ್ಣಿಗಷ್ಟೇ ಇವೆ ಎಂಬ ನಂಬಿಕೆ, ಕಂದನನ್ನು ಬದುಕಿಸಲು ವಿಧಿಯೊಡನೆ ಸೆಣಸಾಡುವ ತೂರಮ್ಮ ನವೆಯುತ್ತಿದ್ದ ಕಂದನನ್ನು ಉಳಿಸಿಕೊಳ್ಳಲು ಹೆಣಗಾಡುವ ಈರಿ ಇದಕ್ಕೆ ನಿದರ್ಶನವಾಗುತ್ತಾರೆ.
ಇನ್ನೊಂದು- ವಿಧ್ವಂಸಕನಾದ ಗಂಡಿನ ಮೌಢ್ಯವನ್ನು ಕುರಿತು ನಿಗ್ರಹಿಸಲ್ಪಟ್ಟ ಕ್ರೋಧ, ಜೊತೆಗೆ ವಿಷಾದ, ಸೃಷ್ಟಿಶೀಲಳಾದ ಹೆಣ್ಣು ಅದೇ ಕಣ್ಣುಬಿಟ್ಟ ಕಂದನನ್ನು ಬದುಕಿಸುವ, ಉಳಿಸಿಕೊಳ್ಳುವ ಕ್ರಿಯೆಯಲ್ಲಿ ತೊಡಗಿರುವಾಗಲೇ ಮೂರ್ಖನೂ, ಕ್ರೂರನೂ ಆದ ಗಂಡು ಚನ್ನನಂಥ ತರುಣನ ಜೀವವನ್ನೇ ಕೊಲೆ ಮಾಡಿದ್ದಾನೆ. ಕೊನೆಗೆ ಅವನು ಹುಟ್ಟಿಸಿದ್ದೇನು?- ಕೊಲೆಯಾದ ಚನ್ನನ ಬಗೆಗಿನ ಅತ್ಯದ್ಭುತವಾದ ದಂತಕತೆ! ಮನುಷ್ಯ ಮನುಷ್ಯರ ನಡುವೆ ಹುಟ್ಟಿಕೊಳ್ಳಬಲ್ಲ ಎಲ್ಲ ಸಂಕುಚಿತ ಗಡಿಗಳನ್ನು ದಾಟಿದ ಒಂದು ನೆಲೆಯಲ್ಲಿ, ಮನುಷ್ಯ ಬದುಕಿಗೆ ಮೂಲಭೂತವೆನ್ನಿಸುವಷ್ಟು ಹದವಾದ ನೆಲಗಟ್ಟಿನ ಮೇಲೆ ಈ ಕೃತಿ ಹಂದರ ಕಟ್ಟಿದೆಯೆನ್ನುವುದು ನನಗೆ ವೈಯಕ್ತಿಕವಾಗಿ ಸಂತೋಷ ಕೊಟ್ಟ ಸಂಗತಿಯಾಗಿದೆ-ಇನ್ನೊಂದು ಸಂತೋಷಕೊಟ್ಟ ಸಂಗತಿ, ಪುಸ್ತಕ ರೂಪದಲ್ಲಿ ಓದಿದಾಗ ಭಾಷೆ ತೊಡಕಾಗದೇ ತನ್ನೆಲ್ಲ ಕಾವ್ಯ ಶಕ್ತಿಯನ್ನು ಪ್ರಕಟಿಸಿತು ಎನ್ನುವುದು.
ಪ್ರೀತಿಯಿಂದ,
-ಯಶವಂತ ಚಿತ್ತಾಲ, ಮುಂಬಯಿ