ಇದಾಗಬಾರದಿತ್ತು -ದೇವನೂರ ಮಹಾದೇವ

[ಡಾ.ಆನಂದ್ ತೇಲ್ತುಂಬೆ ಅವರ ಬಂಧನವನ್ನು ವಿರೋಧಿಸಿ 16.5.2020ರಂದು ನಡೆದ “ನ್ಯಾಯದ ದಿನ”ಕ್ಕಾಗಿ ದೇವನೂರ ಮಹಾದೇವ ಅವರ ದಿಕ್ಸೂಚಿ ಮಾತು]
                                                           
ಅನುಪಮ್ ಬ್ಯಾನರ್ಜಿ ಮತ್ತು ಅನಿರ್ಬನ್ ಗೋಸ್ವಾಮಿಯವರು ಡಾ ಆನಂದ್ ತೇಲ್ತುಂಬ್ಡೆಯವರ ಒಡನಾಡಿಗಳು. ಇತ್ತೀಚೆಗೆ ತೇಲ್ತುಂಬ್ಡೆಯವರ ಬಗ್ಗೆ ಇವರು ಒಂದು ಲೇಖನವನ್ನು ಬರೆದಿದ್ದಾರೆ. ಆ ಲೇಖನದಲ್ಲಿ,1970ರಲ್ಲಿ ಇಂಡಿಯನ್ ಆಯಿಲ್ ಕಂಪೆನಿಯಲ್ಲಿ ಆನಂದ ತೇಲ್ತುಂಬ್ಡೆಯವರು ಟ್ರೈನೀ ಆಗಿದ್ದಾಗ ನಡೆದ ಒಂದು ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ಆಗ ಕೈಗಾರಿಕಾ ಚಳುವಳಿಗಳು ತೀವ್ರವಾಗಿದ್ದ ಸಮಯ. ಅವರನ್ನು ನಿಯೋಜಿಸಿದ್ದ ಬರೌನಿ ತೈಲ ಶುದ್ಧೀಕರಣ ಘಟಕದ ಕಾರ್ಮಿಕರು ಅಧಿಕಾರಿಗಳನ್ನು ಹೊಡೆಯುವುದು, ಬಡಿಯುವುದು ತೀರಾ ಮಾಮೂಲಿಯಾಗಿತ್ತು. ಕೆಲಸಗಾರರಿಗೆ ಹೆದರಿಕೊಂಡೇ ಅಧಿಕಾರಿಗಳು ಬದುಕುತ್ತಿದ್ದರು. ಇಂತಹ ಪರಿಸ್ಥಿತಿ ಇತ್ತು. ಟ್ರೈನಿಯಾದ ತೇಲ್ತುಂಬ್ಡೆಯವರಿಗೆ ಪಶ್ಚಿಮ ಬಂಗಾಳದ ಬರ್ಧಮಾನ್ ಸಂಸ್ಥೆಯ ಆಡಳಿತ ಮಂಡಲಿಯು ಒಂದು ಜವಾಬ್ದಾರಿಯನ್ನು ವಹಿಸುತ್ತದೆ. ಈ ಸಂದರ್ಭದಲ್ಲಿ ಕಂಪನಿಯ ಚೀಫ್ ಮ್ಯಾನೇಜರ್ ಅವರು “ನಿಮಗೆ ಎಂತಹ ಕೆಲಸಗಾರರು ಬೇಕು” ಎಂದು ತೇಲ್ತುಂಬ್ಡೆಯವರನ್ನು ಕೇಳಿದಾಗ, ತೇಲ್ತುಂಬ್ಡೆ -“ಕನಿಷ್ಠ ಪಕ್ಷ ಒಮ್ಮೆಯಾದರೂ ಮ್ಯಾನೇಜರ್ಗೆ ಹೊಡೆದಿರುವ ಮತ್ತು ಮ್ಯಾನೇಜ್ಮೆಂಟ್ಗೆ ತಲೆನೋವಾಗಿರುವ ಕೆಲಸಗಾರರನ್ನು ನೀಡಿ” ಎಂದು ವಿನಂತಿಸುತ್ತಾರೆ. ಆಗಷ್ಟೇ ವೃತ್ತಿಗೆ ಕಾಲಿಟ್ಟಿದ್ದ ತೇಲ್ತುಂಬ್ಡೆ ಎಂಬ ಯುವಕನಿಂದ ಇಂತಹ ಭಯಂಕರ ಮನವಿ ಕೇಳಿದ ಮುಖ್ಯಸ್ಥರು ಗಾಬರಿಯಾಗುತ್ತಾರೆ. ಕೊನೆಗೆ, ಬೇರೆ ಬೇರೆ ಘಟಕಗಳಿಂದ ಆಯ್ಕೆ ಮಾಡಿ, ದುರ್ವರ್ತನೆಯ ದೊಡ್ಡ ಇತಿಹಾಸವೇ ಇದ್ದ 14 ಜನ ಸಮಸ್ಯಾತ್ಮಕ ಕಾರ್ಮಿಕರನ್ನು ತೇಲ್ತುಂಬ್ಡೆಯವರ ತಂಡಕ್ಕೆ ನೀಡುತ್ತಾರೆ. ಅವರಲ್ಲಿ ಹೆಚ್ಚಿನವರು ಯೂನಿಯನ್ನಿನ ಪದಾಧಿಕಾರಿಗಳು. ಎಂದೂ ಯಾವ ಕೆಲಸವನ್ನೂ ಮಾಡಿದವರೇ ಅಲ್ಲ. ಇಂತಹ ಕಾರ್ಮಿಕರೊಡನೆ ತೇಲ್ತುಂಬ್ಡೆಯವರು ಒಡನಾಡಿದ ರೀತಿಯಿಂದಾಗಿ ಆ ಕಾರ್ಮಿಕರೆಲ್ಲರೂ ತೇಲ್ತುಂಬ್ಡೆಯವರ ತಂಡದಲ್ಲ್ಲಿ ತುಂಬಾ ಸಕ್ರಿಯವಾಗಿ ಭಾಗವಹಿಸಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅಷ್ಟೇ ಅಲ್ಲ ಅವಧಿಗೆ ಮೊದಲೇ ಯೋಜನೆಯನ್ನು ಪೂರ್ಣಗೊಳಿಸುತ್ತಾರೆ. ಅಷ್ಟೇ ಅಲ್ಲ, ಆ ಪ್ರಾಜೆಕ್ಟ್ ಕಡಿಮೆ ಖರ್ಚಿನಲ್ಲಿ ಯಶಸ್ವಿಯಾಗಿ ಮುಗಿಯುತ್ತದೆ.
ಮುಂದೆ, ತೇಲ್ತುಂಬ್ಡೆಯವರು ತಮ್ಮ ಟ್ರೈನಿಂಗನ್ನು ಮುಗಿಸಿಕೊಂಡು ಅಲ್ಲಿಂದ ನಿರ್ಗಮಿಸುವಾಗ ಈ ಹಿರಿಯ ಕಾರ್ಮಿಕರೆಲ್ಲಾ ಅವರ ಸುತ್ತುವರಿದು ಕಣ್ಣೀರು ತುಂಬಿಕೊಳ್ಳುತ್ತಾರೆ. ಅವರೆಲ್ಲರೂ ಹೃದಯ ತುಂಬಿ ಹೇಳುತ್ತಾರೆ- ‘ತೆಲ್ತುಂಬ್ಡೆಯೊಂದಿಗೆ ಕೆಲಸ ಮಾಡಿದ್ದು ತಮ್ಮ ಜೀವಮಾನದ ಅತ್ಯಂತ ಸೊಗಸಾದ ಗಳಿಗೆಗಳು’ ಅಂತ. ಜೊತೆಗೆ ಇಷ್ಟು ಸಣ್ಣ ಹುಡುಗ ತಮ್ಮನ್ನು ಹೋರಿಗಳಂತೆ ದುಡಿಯುವಂತೆ ಮಾಡಿಬಿಟ್ಟನಲ್ಲಾ ಎಂಬುದು ಆ ಕಾರ್ಮಿಕರನ್ನೇ ಬೆರಗಾಗಿಸಿತ್ತು. ಇಂತಹ ಘಟನೆಗಳು ತೆಲ್ತುಂಬ್ಡೆಯವರ ವೃತ್ತಿ ಜೀವನದುದ್ದಕ್ಕೂ ಹೇರಳವಾಗಿವೆ – ಎನ್ನುತ್ತಾರೆ ಅವರ ಒಡನಾಡಿಗಳು.
ಪವಾಡ ಸದೃಶವಾದ ಈ ಘಟನೆ ನನ್ನನ್ನು ಚಕಿತಗೊಳಿಸಿತು. ಇದು ಹೇಗೆ ಸಂಭವಿಸಿತು? ಇದು ಯಾರಿಗೆ ಸಾಧ್ಯವಾಗುತ್ತದೆ? ಬಹುಶಃ ಬುದ್ಧನ ಅಂತಃಕರಣಕ್ಕೆ ಸಾಧ್ಯವಾಗುತ್ತದೆ, ಬುದ್ಧನ ಕಾರುಣ್ಯಕ್ಕೆ ಸಾಧ್ಯವಾಗುತ್ತದೆ. ಇಂತಹ ಅಂತಃಕರಣದ, ಕಾರುಣ್ಯದ ಡಾ ಆನಂದ್ ತೇಲ್ತುಂಬ್ಡೆಯವರನ್ನು ಇಂದಿನ ಹಿಂಸಾತ್ಮಕ ವ್ಯವಸ್ಥೆ ಬಂಧಿಸಿ ಇಟ್ಟಿದೆ. ಇದಾಗಬಾರದಿತ್ತು, ಇದಾಗಬಾರದಿತ್ತು. ಈಗ ನಾವೆಲ್ಲರೂ ಒಕ್ಕೊರೊಲಿನಿಂದ ಹೇಳಬೇಕಾಗಿದೆ- ಇದಾಗಬಾರದಿತ್ತು.