ಇದಕ್ಕೊಂದು ತಲೆಬರಹ ನೀಡುವಿರಾ? -ದೇವನೂರ ಮಹಾದೇವ
[ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ ಮತ್ತು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಸ್ವರಾಜ್ ಇಂಡಿಯಾ, ಜನಾಂದೋಲನಗಳ ಮಹಾಮೈತ್ರಿ, ಜನಚೇತನ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ 5.9.2020ರಂದು ಮೈಸೂರಿನಲ್ಲಿ ನಡೆದ “ನಮ್ಮ ಭೂಮಿ ನಮ್ಮ ಹಕ್ಕು, ಅನ್ಯರಿಗೆ ಮಾರಾಟಕ್ಕಲ್ಲ” – ರಾಜ್ಯ ಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ ನಮ್ಮ ಓದಿಗಾಗಿ]
ನನ್ನ ಮಾತುಗಳನ್ನ ಶೇಕ್ಸ್ ಪಿಯರ್ನ ಜೂಲಿಯಸ್ ಸೀಜರ್ ದುರಂತ ನಾಟಕದಿಂದ ಆರಂಭಿಸುತ್ತೇನೆ. ಸೀಜರ್ ಜಗತ್ತನ್ನೇ ಗೆಲ್ಲುವ ತಾಕತ್ತಿದ್ದ ಯುದ್ಧ ನಿಪುಣ. ರೋಮ್ ಸಾಮ್ರಾಜ್ಯದ ಸೈನ್ಯದ ಮುಖ್ಯಸ್ಥ, ಸೇನಾಧಿಕಾರಿ, ರೋಮ್ ದೇಶವನ್ನು ಶ್ರೀಮಂತಗೊಳಿಸಿದವನು. ಇವನ ಮಹತ್ವಾಕಾಂಕ್ಷೆಗೆ ಅವನ ಸುತ್ತಲಿನ ಗೆಳೆಯರೇ ಭೀತಿಗೊಳಗಾಗುತ್ತಾರೆ. ಸೀಜರ್ನನ್ನು ಮುಗಿಸಲು ತವಕಿಸುತ್ತಾರೆ. ಆದರೆ ಯಾರಿಗೂ ಮುಟ್ಟಲು ಎದೆಗಾರಿಕೆ ಇರಲಿಲ್ಲ. ಕೊನೆಗವರು ಹುಡುಕುವುದು ಸೀಜರ್ನ ಪರಮಾಪ್ತ ನಂಬಿಕಸ್ಥ ಬ್ರೂಟಸ್ನನ್ನು. ಬ್ರೂಟಸ್ ಅಪ್ರತಿಮ ದೇಶಭಕ್ತ ಎಂದೂ ಕೂಡ ಹೆಸರು ಪಡೆದವನು. ಬ್ರೂಟಸ್, ಸೀಜರ್ನ ಹೃದಯಕ್ಕೆ ಚೂರಿ ಹಾಕುತ್ತಾನೆ. ದೇಶಭಕ್ತ ಎಂದು ಬ್ರಾಂಡ್ ಆದವರು ಏನುಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಹುದೆಂದು ಕಾಣುತ್ತದೆ! ಆ ಸೀಜರ್ನ ಹೆಣದ ಮುಂದೆ ಮಾರ್ಕ್ ಆಂಟ್ಯೋನಿ ‘‘The most unkindest cut of all’ ಎಂದು ಉದ್ಗಾರ ಮಾಡುತ್ತಾನೆ. ವ್ಯಾಕರಣದ ಪ್ರಕಾರ, The most ಮತ್ತು Unkindest – ಈ ಎರಡೂ ಅತಿಶಯೋಕ್ತಿಗಳು ಒಂದೇ ವಾಕ್ಯದಲ್ಲಿ ಬರಬಾರದು. ಆದರೆ ಶೇಕ್ಸ್ಪಿಯರ್ ನಂಬಿಕಸ್ಥನೇ ಕೊಲೆ ಮಾಡುವ ಈ ಘಾತುಕ ಕೃತ್ಯವನ್ನು ಹೇಗಿದೆಯೋ ಹಾಗೆಯೇ ಕಟ್ಟಿಕೊಡಲು ವ್ಯಾಕರಣವನ್ನೇ ಮುರಿದು ಕಟ್ಟುತ್ತಾನೆ. ಈ ದುರಂತ ನಾಟಕವನ್ನು ಇಲ್ಲಿಗೇ ಬಿಡೋಣ. ಯಥಾವತ್ತಾಗಿ ಇಂದಿಗೆ ಇಲ್ಲಿಗೆ ಅಳವಡಿಸಿಕೊಳ್ಳಲೂ ಆಗದು. ಆದರೆ ನಂಬಿಕಸ್ಥನೇ ಕೊಲೆ ಮಾಡಿದ್ದಕ್ಕೆ ಅಭಿವ್ಯಕ್ತಿಗೊಂಡ ‘The most …. all’’ ಎಂಬ ಮಾತು? ಇಂದು ಇದು ಭಾರತದಲ್ಲಿ ಜರುಗುತ್ತಿಲ್ಲವೇ? ಹೌದು ಎಂದೆನ್ನಿಸಿಬಿಡುತ್ತದೆ.
ಈಗ ಕರ್ನಾಟಕ ರಾಜ್ಯ ಸರ್ಕಾರ ಜೂನ್ 2020ರಂದು ಭೂಸುಧಾರಣೆ ಕಾಯ್ದೆಗೆ ಹೊರಡಿಸಿರುವ ಸುಗ್ರೀವಾಜ್ಞೆ ಕೂಡ ರೈತರ ಏಳ್ಗೆಗಾಗಿ ಎನ್ನುತ್ತಲೇ ಅವರ ಬದುಕನ್ನೇ ಎತ್ತಂಗಡಿಯಾಗಿಸುತ್ತದೆ. ಇದರ ಮೂಲ ಹುಡುಕಿದರೆ ಇದರ ಕಾರಸ್ಥಾನ ತಮಗೆಲ್ಲಾ ಗೊತ್ತಿರಬಹುದು. ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರದ ಪ್ರಗತಿಪರವಾದ 2013ರ ಭೂಸ್ವಾಧೀನ ಕಾಯ್ದೆಗೆ 2015ರಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಸುಗ್ರೀವಾಜ್ಞೆ ತಂದು ಭೂಸುಧಾರಣೆಯ ಬುಡವನ್ನೇ ಕತ್ತರಿಸಿ ಧ್ವಂಸ ಮಾಡಲು ಹವಣಿಸಿತ್ತು. ಬ್ರಿಟಿಷ್ ಕಾಲದ 1894ರ ಕಾಯ್ದೆಯಲ್ಲಿ ಭೂಮಿಯ ಮಾಲೀಕರಿಗೆ ಆಕ್ಷೇಪ ಎತ್ತಲು ಅವಕಾಶವಾದರೂ ಇತ್ತು. ಆದರೆ ಆ ಬಿಜೆಪಿ ಸುಗ್ರೀವಾಜ್ಞೆ ಅದನ್ನೂ ಕಿತ್ತುಕೊಂಡಿತ್ತು. ಇದನ್ನು ಎಂ.ಲಕ್ಷ್ಮಣ ಅವರು 8 ಪುಟಗಳ ಒಂದು ಫೋಲ್ಡ್ರ್ನಲ್ಲಿ ಬಿಜೆಪಿಯ ಅಮಾನುಷ ಸುಗ್ರೀವಾಜ್ಞೆಯ ವಿವರಗಳನ್ನು ಬಿಚ್ಚಿಡುತ್ತಾರೆ. ಆ ಸುಗ್ರೀವಾಜ್ಞೆಯ ವಿರುದ್ಧ ಆಗ ಭುಗಿಲೆದ್ದ ಪ್ರತಿಭಟನೆಗಳು ಬಿಜೆಪಿ ಸುಗ್ರೀವಾಜ್ಞೆಯನ್ನು ತಡೆಗಟ್ಟುತ್ತವೆ. ಆಗ ಬಿಜೆಪಿ ನೇತೃತ್ವದ ಎನ್ಡಿಎ ಕೇಂದ್ರ ಸರ್ಕಾರ ಆ ಸುಗ್ರೀವಾಜ್ಞೆಯನ್ನೇನೋ ಹಿಂತೆಗೆದುಕೊಳ್ಳುತ್ತದೆ. ನೆನಪಿರಲಿ, ಅದನ್ನು ರದ್ದು ಮಾಡಿಲ್ಲ! ಬಹುಶಃ ಹೊಂಚು ಹಾಕುತ್ತಿದೆ.
ಇದರ ವಾಸನೆ ಹಿಡಿದು ನೋಡುವುದಾದರೆ, ಟೆಸ್ಟಿಂಗ್ ಡೋಸ್ ಎಂಬಂತೆ ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರವು ಈ ತಿದ್ದುಪಡಿ ಸುಗ್ರೀವಾಜ್ಞೆ ತಂದಿರಬಹುದು ಅನ್ನಿಸುತ್ತದೆ. ರೈತಾಪಿ ಹಿತ ಕಾಪಾಡುವ ದೇವರಾಜ್ ಅರಸು ಅವರ 1974ರ ಕಾಯ್ದೆಗಳನ್ನೆಲ್ಲಾ ನಿರ್ದಯವಾಗಿ ಈ ಸುಗ್ರೀವಾಜ್ಞೆ ಕತ್ತರಿಸಿ ಹಾಕಿದೆ. ಈ ಬಗ್ಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಮನಮುಟ್ಟುವಂತೆ ಮಾತಾಡಿದ್ದಾರೆ. ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರು ಗಂಭೀರವಾದ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಹಾಗೆ ಶಿವಸುಂದರ್ ಚಿಕಿತ್ಸಕ ನೋಟ ಬೀರಿದ್ದಾರೆ. ಹೆಚ್ಚು ವಿವರಗಳಿಗೆ ನಾನು ಹೋಗುವುದಿಲ್ಲ. ಎಷ್ಟೂಂತ, ಯಾವು ಯಾವುದು ಅಂತ ಹೇಳುವುದು?
‘ಕೊರೋನಾ ಎಂಬ ದೇವರ ಆಟದಿಂದ ರಾಜ್ಯಗಳ ಬಾಬ್ತು ನೀಡಲು ಆಗುತ್ತಿಲ್ಲ’ ಎನ್ನುವ ಅರ್ಥಸಚಿವರನ್ನು ಭಾರತ ಪಡೆದಿದೆ! ಭಾರತದ ಒಕ್ಕೂಟ ವ್ಯವಸ್ಥೆಯ ಬುಡವನ್ನೇ ಕಡಿದು ಹಾಕಿ, ರಾಜ್ಯಗಳ ಸ್ಥಾನವನ್ನು ದೈನೇಸಿ ಸ್ಥಾನಕ್ಕೆ ತಳ್ಳುವ ಜಿಎಸ್ಟಿ ತಂದು ದೆವ್ವದ ಆಟ ಆಡಿದವರು ಯಾರು? ಜನರಿಗೆ ಕನಸು ಕಾಣಿಸಿ ನೋಟ್ಬ್ಯಾನ್ ತಂದು ಭಾರತದ ಬದುಕನ್ನ ದುಃಸ್ವಪ್ನ ಮಾಡಿದ ಭೂತದ ಆಟ ಆಡಿದವರು ಯಾರು? ದೇವರ ಆಟವೋ ಏನೋ ಗೊತ್ತಿಲ್ಲ, ಆದರೆ ದೆವ್ವ ಭೂತಗಳಂತೂ ಇಂದು ಭಾರತವನ್ನು ಆಳ್ವಿಕೆ ಮಾಡುತ್ತಿವೆ ಎಂದೆನಿಸಿ ಬಿಡುತ್ತದೆ. ಯಾಕೆಂದರೆ ಕೊರೋನಾ ಭೀಕರ ವಾತಾವರಣದಲ್ಲಿ ಜನ ಸಮುದಾಯ ಧ್ವನಿ ತೆಗೆಯಲು ಕಷ್ಟಕರವಾದ ಸನ್ನಿವೇಶವನ್ನೇ ದುರ್ಬಳಕೆ ಮಾಡಿಕೊಂಡು, ಖಾಸಗಿ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಸರ್ವಸ್ವವನ್ನೂ ಧಾರೆ ಎರೆಯುವ ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದನ್ನು ನೋಡುತ್ತಿದ್ದರೆ ಇನ್ನೇನು ಹೇಳಬೇಕು? ‘‘The most unkindest cut of all’ ಎಂದೇ ಅನ್ನಿಸುತ್ತದೆ.
ಇಂತಹ ಧಾರುಣ ಪರಿಸ್ಥಿತಿಯಲ್ಲೂ, ಎಷ್ಟೆಂದರೆ, ಬಾಲಾಕೋಟ್ ವಾಯುದಾಳಿಯ ಸಂದರ್ಭದಲ್ಲಿ “…ಮೋಡಗಳಿವೆ, ಮಳೆ ಬರ್ತಾ ಇದೆ ಅಂದರೆ ನಾವು ರಾಡಾರ್ನಿಂದ ಬಚಾವ್ ಆಗಬಹುದು. ದಾಳಿ ಮಾಡಿ” ಎಂದು ದೇಶದ ಚುಕ್ಕಾಣಿ ಹಿಡಿದ ವ್ಯಕ್ತಿ ಸ್ಪ್ಯಾನಿಷ್ ಲೇಖಕ ಸರ್ವಂಟೀಸ್ನ ಕಾದಂಬರಿಯ ನಾಯಕ ಡಾನ್ಕ್ವಿಕ್ಯಾಟ್ನ ತದ್ರೂಪಿಯಂತೆ ವರ್ತಿಸುತ್ತಿದ್ದರೂ ಇದನ್ನೆಲ್ಲಾ ನೋಡಿಯೂ ಭ್ರಮಾಲೋಕದಲ್ಲಿ ಬದುಕುತ್ತಿರುವುದೇನೋ ಎಂಬಂತಿರುವ ಭಾರತಕ್ಕೆ, ಇಂದು ಸೆಪ್ಟೆಂಬರ್ 5, 2020 ಸುಮಾರು 500 ರಷ್ಟು ಮಹಿಳಾ ಮತ್ತು ಮಾನವ ಹಕ್ಕುಗಳ ಸಂಘಟನೆಗಳು “ನಾವೆದ್ದು ನಿಲ್ಲದಿದ್ದರೆ” ಎಂದು ಒಕ್ಕೊರಲಿನಿಂದ ಕೂಗಿ ಹೇಳುತ್ತಿವೆ. ಅವರು ಮಹಿಳೆಯರ ಸಮಸ್ಯೆಗಳನ್ನು ಮಾತ್ರ ಎತ್ತುತ್ತಿಲ್ಲ; ರೈತ, ದಲಿತ, ಕಾರ್ಮಿಕ, ದಿನಗೂಲಿ, ವಲಸೆ ಕಾರ್ಮಿಕರು, ಪೌರ ಕಾರ್ಮಿಕರು, ಪ್ರಕೃತಿ-ಪರಿಸರ, ಪೌರತ್ವದ ಪ್ರಶ್ನೆ, ರಾಜಕೀಯ ಕೈದು, ಮಾಹಿತಿ ಹಕ್ಕು ಕಾಯ್ದೆ… ಇತ್ಯಾದಿ ಹೀಗೆ ಎಲ್ಲವನ್ನೂ ಕೂಡಿಸಿ ಹೇಳುತ್ತಾ “ನಮ್ಮ ಸಂವಿಧಾನ ಮತ್ತು ಪ್ರಜಾತಂತ್ರವನ್ನು ರಕ್ಷಿಸಿಕೊಳ್ಳಲು ನಾವು ಒಂದುಗೂಡುತ್ತಿದ್ದೇವೆ” ಎಂದು ಕೂಗಿ ಹೇಳುತ್ತಿದ್ದಾರೆ. ಒಂಟಿ ಸಂಘಟನೆಗಳಾದ ನಾವೂ ಕೂಡ ಒಕ್ಕೂಟವಾಗಬೇಕಾಗಿದೆ. ಎಲ್ಲರೂ ಸಮುದಾಯದೊಳಗೆ ಕರಗಿ ಹೋಗಬೇಕಾಗಿದೆ. ಸಮುದಾಯದೊಳಗಿಂದ ಹೊಸ ಮಾತು, ಹೊಸ ನುಡಿಗಟ್ಟು, ಹೊಸ ನಡೆ ಹುಟ್ಟಬೇಕಾಗಿದೆ. ಅದು ಇದೀಗ ಚಿಗುರೊಡೆಯುತ್ತಿದೆ ಎಂದೆನಿಸುತ್ತಿದೆ.