ಆ ದೇವನೂರೂ ಆ ಕನ್ನಡಮ್ಮನೂ – ಟಿ.ಎಚ್.ಲವಕುಮಾರ್

(2025ರ ಮಾರ್ಚ್ ತಿಂಗಳ ‘ಮಯೂರ’ ಮಾಸಪತ್ರಿಕೆಯಲ್ಲಿ ಪ್ರಕಟಿತ ಕವಿತೆ)
ಆ ರಾತ್ರಿಗಳು ಹೋದವು
ಈ ರಾತ್ರಿಗಳು ಬಂದವು
ಅವು ಹೋಗ್ತಾ ಬರ್ತಾ ಹೋಗ್ತಾ ಬರ್ತಾ
ಇರ್ಬೇಕಾರೆ
ಗಾಂಧಿಮನೆ ಜೋತಮ್ಮದೀರು
ಬಾಬಾ ಮನೆ ಜೋತಮ್ಮದೀರು
ಕೂಡಲ ಸಂಗಮದ ಬಯಲಲ್ಲಿ
ರೂಪುಗೊಂಡರು
ಏನೇ ಭಿನ್ನಾಭಿಪ್ರಾಯ ಬಂದ್ರು
ನಾಲ್ಕು ಮಾತಾಡಿ ಎಲಡಿಕೆ ಹಾಕಿ
ಸಂಬಂಜಗಳನ್ನು ಕೂಡಿಸಬೇಕಾದ
ಜೋತಮ್ಮದೀರು ಈಗಂತೂ ಮಾತು
ನಿಲ್ಲಿಸಿ ಕತ್ತಿ ಮಸೀತಿರಬೇಕಾರೆ
ಮಹಾಮನೆಯ ಜೋತಮ್ಮ
ಅಯ್ ಅದೇನು ಕಯ್ಯ ಅಂಗ ಮಕ್ವ
ಊದುಸ್ಕೊಂಡ್ ಕೂತೀರಿ
ಮನ್ಸ ಅಂದಮ್ಯಾಲೆ ಮಾತುಕತೆ
ಬತ್ತದೆ ಓತದೆ ಅಂಗಂತ ಸಂಬಂಜ-
ಅದುನ್ನ ಅರ್ಕಳಕಾತದ ಅಂದದ್ದು ಕಂಡು
ಮಾದೇವನ ಮನೆ ಜೋತಮ್ಮ
ಅದುಕ್ಕೆ ನೋಡು ನಮ್ಮ ಹೈದ ಏಳದು
‘ಸಂಬಂಜ ಅನ್ನೋದು ದೊಡ್ಡು ಕನ’ ಅಂತಂದ್ಲು
ಅವಳು ಅಂಗಂದಿದ್ದೆ ತಡ ಬಿಎಸ್ಪಿ ಆಪೀಸಿನ
ಜೋತಮ್ಮುಂಗೆ ಮೈಯಲ್ಲಾ ಉರದೋಯ್ತು
ಅದಕ್ಕೆ ದನಿಯಾಗಿ ಡಿಎಸ್ಎಸ್ ಆಫೀಸಿನ
ಜೋತಮ್ಮನೂ ಸೇರ್ಕಂಡು
ಏ ಅವನ ಮಾತು ಇಲ್ ಬ್ಯಾಡ ಕವ್ವ
ಬ್ಯಾಡ ಕವ್ವ ಅವನ ಗಂಡಭೇರುಂಡದ ಮಾತು
ಬ್ಯಾಡ ಬ್ಯಾಡ ಅಂದ್ರು ಗಾಂಧಿ ಪಿಚ್ಚರ್ಗೋಗವ್ನೆ
ಅವುಂದೇನು ಇಲ್ಲಿ ಮಾತು ಅನ್ನುತ್ತಲೇ…
ದೂರದಲ್ಲಿ ಯಾರೋ ಇಬ್ರು ಬೀಡಿ ಸೇದುತ್ತಾ
ಜೋರುಜೋರಾಗಿ ನಡ್ಕಂಬರೋದು ಕಾಣ್ತು
ಇಂಥಾ ಸರಿ ರಾತ್ರೀಲಿ ಈ ಶರೀಳಗಳು ಈ ಕಡೇನೆ
ಬರ್ತಿರೋದು ಕಂಡ ಜೋತಮ್ಮದೀರು
ಸರಕ್ಕಂತ ಸೈಡಿಗೋಗಿ ಮರೆ ಆದ್ರು
ಅತ್ತ ನಡ್ದೂ ನಡ್ದೂ ದಣಿವಾದ ಆ ಶರೀಳಗಳು
ಜೋತಮ್ಮಗಳು ಕೂತ ಜಾಗಕ್ಕೇ ಬಂದು
ಪ್ಯಾಂಟು ಜೋಬನ್ನೆಲ್ಲಾ ಪರೀಕ್ಷೆ ಮಾಡಿ
ಸಿಕ್ಕ ಒಂದು ಮೋಟು ಬೀಡಿಯನ್ನು ಹೊತ್ತಿಸಿದರು
ಗೀರಿದ ಕಡ್ಡಿಯ ಬೆಳಕಿನಲ್ಲಿ ಪಳ ಪಳ ಹೊಳೆವ
ಆ ಮೊಖಗಳ ಕಂಡು ಸ್ಫೂರ್ತಿದಾಮದ ಜೋತಮ್ಮ
ಆವಯ್ ಅಲ್ಲೋಡು ಆ ಚಂದಾವ
ಆ ಮೊಖದ ಒಳಗೆ
ನಮ್ಮ ರಾಮಯ್ಯನೂವೇ ಮಾದೇವನೂವೇ
ಮಂಟೇಸ್ವಾಮಿ ಮಾದೇಶ್ವರರ ಥರಾ
ಕಾಣ್ತಾವರಲ್ಲಾ ಅವಯ್ ಅಂತ ದೃಷ್ಟಿ ತೆಗೆದರು
ಆಗ ಹಟ್ಟಿ ಗುಡಿಸಲ ಜೋತಮ್ಮ
ಅಕ್ಕೋ ಈ ಕತ್ತಲೆಯಲ್ಲಿ ಈ ಪರಿ
ಇಬ್ರೂ ಕೂತವರೆ ಅಂದರೆ ಏನೋ
ಇಸೇಸ ಇದ್ದೇ ಇರ್ತದೆ ಅಂದು
ಆ ಇಬ್ಬರ ಮಾತಿಗೆ ಕಿವಿಯಾದ್ರು
ಎಷ್ಟೊತ್ತು ಕಾದ್ರು ಇಬ್ಬರ ಬಾಯಲ್ಲೂ
ಒಂದು ಮಾತು ಉದುರದೆ
ಬರೀ ಹೊಗೆಯೇ ಬರ್ತಿರಾದು
ನೋಡಿದ ಜೋತಮ್ಮದೀರು ಮತ್ತೊಂದು
ರವುಂಡು ಎಲಡಿಕೆ ಹಾಕಿ ಕೂತರು
ಏನೋ ಹೊಳೆದಂತವನಾಗಿ
ರಾಮಯ್ಯನು ಪೆನ್ನನ್ನು ತಗೊಂಡು
ಬಿಟ್ಟ ಒಗೆಯನ್ನೇ ಇಂಕು ಮಾಡಿಕೊಂಡು
ರಪರಪ ಅಂತ ಗೀಚಿ ಮಾದೇವನಿಗೆ ಕೊಟ್ಟನು
ಆ ಮಾದೇವನು ಅದನ್ನು ಓದ್ತಾ ಓದ್ತಾ ಕಣ್ಣೀರಾದನು
ಆ ಕಣ್ಣೀರು ತನಗೆ ತಾನೆ ದಾರಿ ಮಾಡಿಕೊಂಡು
ಹಟ್ಟಿಯ ಕಡೆ ಹರಿಯತೊಡಗಿತು
ಅವ ಏನು ಬರೆದನೋ ಇವ ಏನು ಓದಿದನೋ
ಅಂತೂ ಈ ಚೋಜಿಗವ ಕಣ್ಣಾರೆ ಕಾಣುತ್ತಾ
ಆ ಕಣ್ಣೀರ ಕೋಡಿಯಲ್ಲಿ ತಾವೂ ಹರಿಯುತ್ತಾ
ಆದಿ ಕಲ್ಯಾಣಕ್ಕೂ ಕಪ್ಪಡಿ ಕೈಲಾಸಕ್ಕೂ
ವ್ಯಾಪಿಸಿ ಬೆಳೆದ ಆ ಕಣ್ಣೀರಿನ ಒರತೆಯನು
ಬಾಚಿ ಹಿಡಿದ ಆ ಕನ್ನಡಮ್ಮನು ಅದನ್ನು
ಕಾಸಿ ಜಳಕ ಮಾಡಿ ನೂರಾರು ವರ್ಷಗಳ
ಕೊಳೆಯನ್ನು ಕಳಕೊಂಡು ನಾಂಟ್ಯವಾಡಿದಳು
‘ಆ ನಾಂಟ್ಯದ ಲಯಕ್ಕೆ ಅವಳೊಳಗೆ ಅಡಗಿದ್ದ
ಅಕ್ಷರಗಳೆಲ್ಲಾ ಉದುರಿ ಎದೆಗಳೊಳಗೆ ಹೊಕ್ಕವು
ಬಿದ್ದ ಬೆವರೆಲ್ಲವೂ ಬೀಜಗಳಾಗಿ ನೆಲಹೊಕ್ಕವು
ಆ ರಾತ್ರಿಗಳು ಹೋದವು ಈ ಹಗಲುಗಳು ಬಂದವು
ಅವು ಹೋಯ್ತಾ ಬರ್ತಾ ಹೋಯ್ತಾ ಬರ್ತಾ
ಇರ್ಬೇಕಾರೆ
ಆ ಬೀಜಗಳೂ ಆ ಅಕ್ಷರಗಳೂ
ಎಂದಾದರು ಫಲಕೊಡುವ ಕನಸು ಕಾಣುತ್ತಾ
ಆ ಜೋತಮ್ಮದೀರ ಮಡಿಲಲ್ಲಿ
ಕನ್ನಡಮ್ಮನು ನಿಸೂರಾಗಿ ನಿದ್ದೆಹೋದಳು…
ಆಗ ಆ ಕನಸಲ್ಲಿ…