ಆಸ್ಪತ್ರೆಗಳಲ್ಲಿ ಮಾತೆಯರ ಮರಣ ಮೃದಂಗ-ಶಾರದಾ ಗೋಪಾಲ
ಅಂಕಿ ಅಂಶಗಳೇ ತೋರಿಸುವ ಪ್ರಕಾರ ಸಾಂಸ್ಥಿಕ ಹೆರಿಗೆಗೆ ಸಮುದಾಯದಿಂದ ಅತ್ಯುತ್ತಮ ಪ್ರತಿಕ್ರಿಯೆ ಬಂತು. 2011-12ರಲ್ಲಿ ಆದ ಒಟ್ಟು 4.45 ಲಕ್ಷ ಹೆರಿಗೆಗಳಲ್ಲಿ 4.15 ಲಕ್ಷ ಹೆರಿಗೆಗಳು ಆಸ್ಪತ್ರೆಗಳಲ್ಲಿಯೇ ಆಗಿರುವುದು ಜನರು ಸರ್ಕಾರದ ಈ ಯೋಜನೆಯನ್ನು ಸ್ವಾಗತಿಸಿರುವುದನ್ನು, ಸ್ವೀಕರಿಸಿರುವುದನ್ನು ತೋರಿಸುತ್ತದೆ. ‘ಕರ್ನಾಟಕ ಆರೋಗ್ಯ ಸಂಪನ್ಮೂಲ ಕೇಂದ್ರ’ 2010- 11ರಲ್ಲಿ ಮಾಡಿರುವ ಒಂದು ಸರ್ವೆಯು ಜನನಿ ಸುರಕ್ಷಾ, ತಾಯಿ ಭಾಗ್ಯ ಮತ್ತು ಮಡಿಲು ಕಿಟ್ಗಳು ಸಾಕಷ್ಟು ಜನಪ್ರಿಯವಾಗಿರುವುದನ್ನು ಎತ್ತಿ ತೋರಿಸಿದೆ. ಸರಿ, ಯೋಜನೆ ಬಂತು, ಸಮುದಾಯ ಅದನ್ನು ಸ್ವೀಕರಿಸಿದ್ದೂ ಆಯಿತು. ಇಂದು ಸಾಮಾನ್ಯವಾಗಿ ಯಾವುದೇ ಹಳ್ಳಿಗೆ ಹೋಗಲಿ, ಆಶಾ ಕಾರ್ಯಕರ್ತೆಯರು ಗರ್ಭಿಣಿಯರನ್ನು ಆರೋಗ್ಯ ತಪಾಸಣೆಗಾಗಿ ಕರೆದೊಯ್ಯುವುದನ್ನು ನಾವು ನೋಡುತ್ತೇವೆ. ಹಾಗಿದ್ದರೂ ಬೆಳಗಾವಿಯಂಥ ಒಂದು ಜಿಲ್ಲೆಯಲ್ಲಿ ಕಳೆದ ಒಂದೇ ವರ್ಷ 81 ಹೆಣ್ಣು ಮಕ್ಕಳು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆ ಆಗುವಾಗ ತೀರಿಕೊಂಡಿದ್ದೇಕೆ?
ನಮ್ಮ ಕಡೋಲಿಯ ಗಾಯಿತ್ರಿ ಪಾಟೀಲರಂಥ ಹೆಣ್ಣು ಮಕ್ಕಳು ಆರೋಗ್ಯ ತಪಾಸಣೆ ಮಾಡಿಸಿರಲಿಲ್ಲವೇ? ಆ ತಾಯಿ ಸತ್ತದ್ದೇಕೆ? ಒಂದು ಸಾವನ್ನು ಕೆದಕುತ್ತ ಕೆದಕುತ್ತ ಹೋದರೆ ನಮ್ಮ ಆರೋಗ್ಯ ವ್ಯವಸ್ಥೆಯ ಅವ್ಯವಸ್ಥೆಯ ಕತೆಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ದುರ್ಲಕ್ಷ್ಯಗಳೇ ಆರೋಗ್ಯ ಕೇಂದ್ರಗಳನ್ನು ಸುತ್ತುವರೆದಿರುವುದು ಎದ್ದು ಕಾಣುತ್ತದೆ. ಶಿಕ್ಷಿತರು, ಕೈಯಲ್ಲಿ ಕಾಸಿರುವಂಥವರು ಸರ್ಕಾರಿ ಆಸ್ಪತ್ರೆಯ ಕಡೆಗೆ ಹೊರಳದಿರುವುದು, ಸರ್ಕಾರಿ ಆಸ್ಪತ್ರೆಯೆಂದರೆ ಕೇವಲ ಬಡವರ, ಬಿಪಿಎಲ್ನವರ, ಕೂಲಿಕಾರರ, ಹಿಂದುಳಿದವರ ಆರೋಗ್ಯ ಕೇಂದ್ರವಾಗಿರುವುದು, ಆ ಕಾರಣಕ್ಕಾಗಿಯೇ ಉನ್ನತ ಹುದ್ದೆಯಲ್ಲಿರುವ ಯಾರೂ ಅದರ ಸುಧಾರಣೆಗೆ ಮನಸ್ಸು ಮಾಡದಿರುವುದು ಎದ್ದು ಕಾಣುತ್ತದೆ.
ಒಂದೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕನಿಷ್ಠವೆಂದರೂ ಹೆರಿಗೆ ತಜ್ಞರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರ ನೇಮಕ ಆಗಿರಬೇಕು. ‘ವೈದ್ಯಕೀಯ ಓದಿದವರೊಬ್ಬರೂ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಬರುವುದೇ ಇಲ್ಲ’ ಎಂದು ರಾಗ ಎಳೆಯುವ ಉನ್ನತ ಅಧಿಕಾರಿಗಳು ಅಥವಾ ಮಂತ್ರಿಗಳು ಅವರನ್ನು ಆಕರ್ಷಿಸಲು ಏನು ಮಾಡುತ್ತಿದ್ದಾರೆ? ಎಷ್ಟು ಸಂಬಳ ಕೊಡಲೊಪ್ಪುತ್ತದೆ ನಮ್ಮ ಸರ್ಕಾರ? ಲಂಚವಿಲ್ಲದೆಯೇ ನೇಮಕಾತಿ ಸಾಧ್ಯವಿದೆಯೇ? ಖಾಸಗೀಕರಣದತ್ತ ಮುಖ ಮಾಡಿರುವ ನಮ್ಮ ನೀತಿಗಳು ಸೇವೆ ಮಾಡಬಯಸುವ ವೈದ್ಯ ವಿದ್ಯಾರ್ಥಿಗಳನ್ನು ವ್ಯವಸ್ಥೆಯೊಳಗೆ ಬರಗೊಡುವುದಿಲ್ಲ, ಕೆಲಸ ಮಾಡಗೊಡುವುದಿಲ್ಲ. ಸಾಕಷ್ಟು ವೈದ್ಯರಿಲ್ಲದೆ, ತಜ್ಞ ವೈದ್ಯರಿಲ್ಲದೆ ಸರ್ಕಾರಿ ಆಸ್ಪತ್ರೆಗಳು ಬಿಕೋ ಎನ್ನುತ್ತಿರುತ್ತವೆ. ವೈದ್ಯರಷ್ಟೇ ಮುಖ್ಯ ನರ್ಸ್ಗಳು, ಇತರೆ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ.ಸ್ವಚ್ಛತೆ ಇಲ್ಲದಿದ್ದರೆ ಆಸ್ಪತ್ರೆಗಳೇ ರೋಗ ಹುಟ್ಟಿಸುವ ತಾಣಗಳಾಗಿ ಬದಲಾಗುತ್ತವೆ. ಇವರೆಲ್ಲರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದರೆ ಮಾತ್ರ, ಜೊತೆಗೆ ಮೇಲಧಿಕಾರಿಗಳಲ್ಲಿ ತಾಯಿ ಮರಣ, ಶಿಶುಮರಣಗಳನ್ನು ತಡೆಯಲು ತಾವಿದ್ದೇವೆ ಎನ್ನುವ ಮನೋಭಾವ ಇದ್ದರಷ್ಟೇ ಆಸ್ಪತ್ರೆಗಳು ಹೆರಿಗೆಗಳನ್ನು ಪ್ರೋತ್ಸಾಹಿಸುವ, ತಾಯಂದಿರನ್ನು ಉಳಿಸುವ ತಾಣಗಳಾಗುತ್ತವೆ. ಬೆಳಗಾವಿ ಉದಾಹರಣೆಯನ್ನೇ ತೆಗೆದುಕೊಳ್ಳಿ, ಜಿಲ್ಲಾಸ್ಪತ್ರೆ ಅದು.ಅಂದು ಸುಮಾರು 30ಕ್ಕಿಂತ ಹೆಚ್ಚೇ ಹೆರಿಗೆಗಳಾಗುತ್ತಿದ್ದಾಗ ಕೇವಲ ಒಬ್ಬ ಗೈನಕಾಲಜಿಸ್ಟ್ ಇದ್ದರೆಂದರೆ ಅಲ್ಲಿದ್ದ ವೈದ್ಯರ ಕೊರತೆಯನ್ನು ಯಾರಾದರೂ ಊಹಿಸಬಹುದು. ‘ಮಗಳು ಸಾಯುತ್ತಿದ್ದಾಳೆ ಬನ್ನಿ’ ಎಂದು ತಾಯಿ ಕೂಗಿಕೊಂಡಾಗ ಬರಲು ಸಾಕಷ್ಟು ನರ್ಸ್, ಆಯಾಗಳು ಅಲ್ಲಿರಬೇಕಲ್ಲ?
2015ರಲ್ಲಿ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ತಾಯಂದಿರ ಸಾವನ್ನು ಕಂಡಿದ್ದು ಕರ್ನಾಟಕ. 1 ಲಕ್ಷ ಹೆರಿಗೆಯಲ್ಲಿ 133 ಮಹಿಳೆಯರು ಸಾವಿಗೀಡಾಗಿದ್ದರೆ ಪಕ್ಕದ ತಮಿಳುನಾಡಿನಲ್ಲಿ ತಾಯಿ ಮರಣ 68, ಕೇರಳದಲ್ಲಿ 61. ಕೇವಲ ಮಹಿಳೆಯರಲ್ಲಿರುವ/ ಕಿಶೋರಿಯರಲ್ಲಿರುವ ಅನೀಮಿಯಾ, ರಕ್ತಹೀನತೆಯನ್ನು ತುಂಬಿಕೊಟ್ಟಿದ್ದರೆ ಇವರಲ್ಲಿ ಶೇ 60ರಷ್ಟು ತಾಯಂದಿರ ಸಾವನ್ನು ತಡೆಯಬಹುದಾಗಿತ್ತು. ಆದರೇನು, ಮಹಿಳೆಯರ ಪೌಷ್ಟಿಕತೆ, ಆಹಾರ ಎಂದೂ ನಮಗೆ ಮುಖ್ಯ ವಿಷಯವೇ ಅಲ್ಲ. ನಮ್ಮ ಮಹಿಳೆಯರಲ್ಲಿ ಶೇ 85ರಷ್ಟು ಮಂದಿ ರಕ್ತಹೀನತೆಯಲ್ಲೇ ಜೀವಿಸುತ್ತಿದ್ದಾರೆ. ರಕ್ತಹೀನತೆಯಿಂದ ಬಳಲುತ್ತಿರುವ ಹದಿಹರೆಯದ ಹುಡುಗಿಯ ಮದುವೆಯಾಗುತ್ತದೆ. ಒಂದು ವರ್ಷದೊಳಗಡೆಯೇ ಹೊಟ್ಟೆಯಲ್ಲೊಂದು ಮಗು. ಅಂಥ ಹುಡುಗಿಗೆ ಹೆರಿಗೆಯಲ್ಲಿ ರಕ್ತಸ್ರಾವ ಜಾಸ್ತಿಯಾಗುವ ಸಾಧ್ಯತೆ ಬಹಳ ಹೆಚ್ಚು. ಮೊದಲೇ ರಕ್ತಹೀನವಾಗಿದ್ದವಳು ಹೆಚ್ಚು ರಕ್ತ ಸೋರಿ ಹೋಗಿ ಬಲು ಬೇಗ ಸಾವಿನ ಅಂಚಿಗೆ ಬಂದು ನಿಲ್ಲುತ್ತಾಳೆ. ಈಕೆಗೆ ಒಳ್ಳೆಯ ಆಹಾರ ಕೊಟ್ಟು ಮೂರು ತಿಂಗಳು ಕಬ್ಬಿಣಾಂಶದ ಮಾತ್ರೆಗಳನ್ನು ನುಂಗಿಸಿದರೆ ರಕ್ತ ಹೀನತೆಯಿಂದಲೂ, ಸಾವಿನಿಂದಲೂ ಪಾರಾಗುತ್ತಾಳೆ. ಅನೀಮಿಯಾ ತಡೆಗೆ ಸರಿಯಾದ ಕಬ್ಬಿಣಾಂಶದ ಮಾತ್ರೆ ಸಿಗುವುದು ಕೇವಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಅದೂ ಉಚಿತವಾಗಿ.
ಇದರ ಹೊರತಾಗಿ ಹೊರಗಡೆ ಖಾಸಗಿಯಾಗಿ ಸಿಗುವ ಯಾವುದೇ ಕಬ್ಬಿಣಾಂಶದ ಮಾತ್ರೆಗಳಾಗಲಿ, ಟಾನಿಕ್ ಆಗಲಿ ಸರಿಯಾದ ಪ್ರಮಾಣದ್ದಲ್ಲ. ದುರದೃಷ್ಟವೆಂದರೆ ಆಯಾ ಕುಟುಂಬಕ್ಕೆ ಸೊಸೆಯ ಆಹಾರ ಕಟ್ಟಕಡೆಯ ಆದ್ಯತೆಯಾಗಿರುವಂತೆಯೇ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿ ಕಬ್ಬಿಣಾಂಶದ ಮಾತ್ರೆಗಳನ್ನು ಸತತವಾಗಿ ಇಟ್ಟಿರುವುದು ಕೂಡ ಕಟ್ಟ ಕಡೆಯ ಆದ್ಯತೆ. ಕೇವಲ 13 ಪೈಸೆಗೊಂದು ಮಾತ್ರೆ ಉತ್ಪಾದನೆ ಆಗುವುದರಿಂದ ಔಷಧ ತಯಾರಕರಿಗೂ ಆದ್ಯತೆಯ ಔಷಧವಲ್ಲ ಇದು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಬ್ಬಿಣಾಂಶದ ಮಾತ್ರೆಗಳ ಸರಿಯಾದ ಪೂರೈಕೆ ಇರುವುದೇ ಇಲ್ಲ. ಕಬ್ಬಿಣಾಂಶದ ಮಾತ್ರೆಗಳ ಸೇವನೆ ಬಗ್ಗೆ ಗರ್ಭಿಣಿಯರಿಗೆ ಸರಿಯಾದ ಮಾಹಿತಿ ಕೊಡುವುದು, ನಿತ್ಯ ಸೇವಿಸುತ್ತಾಳೆಯೇ ಎಂದು ಪರಿಶೀಲಿಸುವುದು ಕೂಡ ಆಗದೆ ಆಕೆ ಎಷ್ಟೋ ಬಾರಿ ಮಾತ್ರೆಗಳನ್ನು ಹಿತ್ತಲಲ್ಲಿ ಎಸೆದುಬಿಡುವ ಪ್ರಸಂಗಗಳು ಜಾಸ್ತಿ.
‘ಅಕ್ಲಾಂಪ್ಸಿಯಾ’ ತಾಯಂದಿರನ್ನು ಕೊಲ್ಲುವ ಇನ್ನೊಂದು ಪ್ರಮುಖ ರೋಗ. ರಕ್ತದೊತ್ತಡವನ್ನು ನಿಯಂತ್ರಿಸದಿದ್ದರೆ ದೇಹದಲ್ಲಿ ಉಪ್ಪಿನಂಶ ಹೆಚ್ಚಾಗಿ ತಾಯಿಯ ಪ್ರಾಣವನ್ನದು ತೆಗೆದುಕೊಳ್ಳುತ್ತದೆ. ನಿಯಮಿತವಾಗಿ ರಕ್ತದೊತ್ತಡದ ತಪಾಸಣೆ, ಸಾಮಾನ್ಯಕ್ಕಿಂತ ಜಾಸ್ತಿ ರಕ್ತದೊತ್ತಡ ಇದ್ದಲ್ಲಿ ವಿಶೇಷ ಕಾಳಜಿ ತೆಗೆದುಕೊಳ್ಳುವುದರ ಮೂಲಕ ತಾಯಿಯ ಸಾವನ್ನು ತಡೆಯಲು ಸಾಧ್ಯ. ಕೇವಲ ಒಬ್ಬ ಆಶಾ ಕಾರ್ಯಕರ್ತೆ, ಆರೋಗ್ಯ ಕಾರ್ಯಕರ್ತೆ ತಾಯಂದಿರಿಗೆ ಮಾಹಿತಿ ನೀಡುವ ಮೂಲಕ ಹೆಚ್ಚಿನ ತಾಯಿ ಮರಣಗಳನ್ನು ಗೆಲ್ಲಬಹುದು. ಆದರೆ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಆರಂಭವಾದಾಗ ಹಳ್ಳಿ ಹಳ್ಳಿಗಳಲ್ಲಿ ತಾಯಂದಿರ ಆರೋಗ್ಯದ ಸಲುವಾಗಿ ಆಶಾ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಕಂಡುಬಂದ ಉತ್ಸಾಹ ಮುಂದೆ ಅವರನ್ನು ಕೆಲಸದಲ್ಲಿ ಉಳಿಸಿಕೊಳ್ಳುವುದರಲ್ಲಿ ಕಾಣಲಿಲ್ಲ. ಒಂದು ಹೆರಿಗೆಗೆ 650 ಇದ್ದುದು ಬಲು ಬೇಗ ₹ 250ಕ್ಕೆ ಇಳಿದಾಗ ಆ ಆಶಾ ಕಾರ್ಯಕರ್ತೆಯರ ಉತ್ಸಾಹವೂ ಜರ್ರೆಂದು ಇಳಿದಿದ್ದೇನೂ ಆಶ್ಚರ್ಯವಲ್ಲ. ಸರ್ಕಾರದ ಉಚಿತ ಆಂಬುಲೆನ್ಸ್ ಸೇವೆ 108 ಕರೆದಾಗೆಲ್ಲ ಸಿಗುವಂತಿದ್ದರೂ ಸಮೀಪದ ಟ್ಯಾಕ್ಸಿ ಡ್ರೈವರಿಗೆ ಫೋನ್ ಮಾಡಿ ಅವರಿಂದ ಕಮಿಷನ್ ಪಡೆಯುತ್ತಿದ್ದರೆ ಅದಕ್ಕೆ ಅವರ ಪ್ರೋತ್ಸಾಹ ಧನದ ಇಳಿಕೆಯಲ್ಲದೆ ಮತ್ತೇನೂ ಕಾರಣವಲ್ಲ. ಎಷ್ಟೋ ಹಳ್ಳಿಗಳ ಹಿಂದುಳಿದ ವರ್ಗಗಳ ಗರ್ಭಿಣಿ, ಬಾಣಂತಿಯರಿಗೆ ತಮ್ಮ ಸೇವೆಗೂ 108 ಗಾಡಿ ಉಚಿತವಾಗಿ ಬರಬಹುದೆಂಬ ಕಲ್ಪನೆ ಕೂಡ ಇಲ್ಲ.
ತಾಯಿ ಮರಣಕ್ಕೆ ಪರಿಹಾರವಿಲ್ಲ. ಕುಟುಂಬಕ್ಕಾಗಲಿ, ಅನಾಥರಾದ ಮಕ್ಕಳಿಗಾಗಲಿ ಏನೇನೂ ಪರಿಹಾರ ಸಿಗದು. ಕೆಲವು ವರ್ಷಗಳ ಹಿಂದೆ ಬಾಗಲಕೋಟೆಯ ಕೆರೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ತಪ್ಪಿನಿಂದ ತಾಯಿ ಮರಣವೊಂದಾಗಿತ್ತು. ವರ್ಷಾಂತರಗಳ ಕಾಲ ಅಲ್ಲಿನ ಸಂಘಟನೆಗಳು, ಮಾನವ ಹಕ್ಕುಗಳ ಸಂಘಟನೆ ಸೇರಿ ಆ ಕುಟುಂಬಕ್ಕೆ ನ್ಯಾಯ ಒದಗಿಸಲು ಹೋರಾಡಿದರೂ ಏನೇನೂ ಸಿಗಲಿಲ್ಲ. ಜನರ ಆರೋಗ್ಯದ ಹಕ್ಕಿಗೆ ನಮ್ಮ ಆಡಳಿತದಿಂದ ಯಾವುದೇ ಮನ್ನಣೆ ಇಲ್ಲ. ಇರುವ ಅಲ್ಪಸ್ವಲ್ಪ ಜವಾಬ್ದಾರಿಯನ್ನೂ ಎಷ್ಟು ಬೇಗ ಕಳಚಿಕೊಂಡೇನು ಎಂದು ದಾರಿ ಹುಡುಕುತ್ತಿದೆ. ಉತ್ತಮವಾಗಿ ನಡೆಯುತ್ತಿರುವಂಥ ಉಡುಪಿಯ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯನ್ನೇ ಖಾಸಗಿಗೆ ಕೊಡಲು ಸರ್ಕಾರ ಹೊರಟಿದೆ. (ಉಡುಪಿಯ ತಾಯಿ ಮರಣ ಸಂಖ್ಯೆ ಕೇವಲ 2) ಇನ್ನು ಕಳಪೆ ಸೇವೆ, ಸಿಬ್ಬಂದಿ ಕೊರತೆ, ಹೊಲಸು ಆವರಣ ಎಲ್ಲವೂ ಬೇಜಾನಾಗಿ ಇರುವಂಥ ಬೆಳಗಾವಿ ಆಸ್ಪತ್ರೆಯನ್ನು ಖಾಸಗಿಗೆ ಹಸ್ತಾಂತರಿಸಲು ಸರ್ಕಾರಕ್ಕೆ ನೆವ ಬೇಕೆ? ‘ಸಿಬ್ಬಂದಿ ಇಲ್ಲ, ಸೇವೆ ಇಲ್ಲ, ಅದಕ್ಕಾಗಿ ಖಾಸಗಿಗೆ ಕೊಡುತ್ತೇವೆ’ ಎನ್ನಲು ಎಷ್ಟು ಸಮಯ ಬೇಕು?