ಆರ್ ಎಸ್ ಎಸ್ ಆಳ ಮತ್ತು ಅಗಲ: 16 ದಿನಗಳಲ್ಲಿ 84 ಸಾವಿರ ಪ್ರತಿ ಮುದ್ರಣ!
(19.7.2022ರಂದು ಪ್ರಕಟವಾದ ಪ್ರಜಾವಾಣಿ ವರದಿ)
16 ದಿನದ ಹಿಂದೆ ಪ್ರಕಟವಾಗಿ ರಾಜ್ಯವ್ಯಾಪಿ ಸಂಚಲನ ಮೂಡಿಸಿರುವ ದೇವನೂರ ಮಹಾದೇವ ಅವರ ‘ಆರ್ಎಸ್ಎಸ್ ಆಳ ಮತ್ತು ಅಗಲ’ ಕೃತಿಯು 84 ಸಾವಿರ ಪ್ರತಿಗಳ ಮುದ್ರಣ ಕಂಡಿದೆ. ಮಾರಾಟಕ್ಕೆ ಸಿದ್ಧವಾಗುತ್ತಿರುವ ಕೃತಿಗಳನ್ನೂ ಸೇರಿಸಿದರೆ ಒಂದು ಲಕ್ಷ ದಾಟಲಿದೆ. ಪುಟಗಳ ಕೃತಿ ಪ್ರಕಟಣೆಯ ಹಕ್ಕುಸ್ವಾಮ್ಯವನ್ನು ಮುಕ್ತವಾಗಿಟ್ಟಿರುವುದರಿಂದ, ವೃತ್ತಿಪರ ಪ್ರಕಾಶಕರಷ್ಟೇ ಅಲ್ಲದೆ, ವಿವಿಧ ಸಂಘಟನೆಗಳು ಕೂಡ ಪುಸ್ತಕವನ್ನು ಪ್ರಕಟಿಸುತ್ತಿವೆ.
ಮೊದಲಿಗೆ ಅಭಿರುಚಿ ಪ್ರಕಾಶನ, ಗೌರಿ ಮೀಡಿಯಾ ಟ್ರಸ್ಟ್, ಚಿಕ್ಕನಾಯಕನಹಳ್ಳಿಯ ನಡೆ– ನುಡಿ, ತಿಪಟೂರಿನ ಜನಸ್ಪಂದನ ಟ್ರಸ್ಟ್, ಮಾನವ ಬಂಧುತ್ವ ವೇದಿಕೆ ಹಾಗೂ ಭಾರತೀಯ ಪರಿವರ್ತನ ಸಂಘಕ್ಕೆ ಒಟ್ಟು 9 ಸಾವಿರ ಪ್ರತಿಗಳನ್ನು ಮುದ್ರಿಸುವ ಅವಕಾಶ ನೀಡಲಾಗಿತ್ತು. ಗೌರಿ ಮೀಡಿಯಾ ಟ್ರಸ್ಟ್ ಎರಡೇ ದಿನಗಳಲ್ಲಿ 2 ಸಾವಿರ ಪ್ರತಿಗಳನ್ನು ಮಾರಾಟ ಮಾಡಿತ್ತು.ನಂತರದ ದಿನಗಳಲ್ಲಿ ಸಾವಿರಾರು ಪ್ರತಿಗಳನ್ನು ಮುದ್ರಿಸಲಾಗಿದೆ. ಕೃತಿಯ ಮುಖಬೆಲೆ ₹ 40 ಇದ್ದು, ಕೆಲವೆಡೆ ₹ 25ಕ್ಕೂ ಮಾರಾಟ ಮಾಡಲಾಗುತ್ತಿದೆ. ಕೆಲವರು ಕೃತಿಯನ್ನು ಖರೀದಿಸಿ ಉಚಿತವಾಗಿಯೂ ವಿತರಿಸುತ್ತಿದ್ದಾರೆ. ಕೋಲಾರದ ಆದಿಮ ಪ್ರಕಾಶನ 1 ಸಾವಿರ ಪ್ರತಿಗಳನ್ನು ಮುದ್ರಿಸಿ, ₹ 25ಕ್ಕೆ ಮಾರಾಟ ಮಾಡುತ್ತಿದೆ.
ದೇವನೂರರಿಗೆ ಪೊಲೀಸ್ ಭದ್ರತೆ
ಮೈಸೂರು: ದೇವನೂರ ಮಹಾದೇವ ಅವರಿಗೆ ಪೊಲೀಸ್ ಇಲಾಖೆಯು ಭದ್ರತೆ ಕಲ್ಪಿಸಿದೆ. ಕುವೆಂಪುನಗರದಲ್ಲಿರುವ ಅವರ ಮನೆಯ ಬಳಿ ಎರಡು ದಿನಗಳಿಂದ ಪೊಲೀಸರು ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನಿವಾಸದ ಸುತ್ತಮುತ್ತಲಿನ ಚಲನವಲನಗಳ ಬಗ್ಗೆ ಕಣ್ಣಿಟ್ಟಿದ್ದಾರೆ. ‘ಆರ್ಎಸ್ಎಸ್ ಆಳ ಮತ್ತು ಅಗಲ’ ಕೃತಿ ರಚನೆ ನಂತರ ಮಹಾದೇವ ಬಹಳ ಚರ್ಚೆಯಲ್ಲಿದ್ದಾರೆ.