“ಆರ್. ಎಸ್.ಎಸ್.ಆಳ ಮತ್ತು ಅಗಲ” – ಪುಸ್ತಕದ ಬೆನ್ನುಡಿ ಮತ್ತು ಅರ್ಪಣೆ

[“ಆರ್. ಎಸ್.ಎಸ್.ಆಳ ಮತ್ತು ಅಗಲ”- ದೇವನೂರ ಮಹಾದೇವ ಅವರ ನೂತನ ಕೃತಿಯ ಆಂತರ್ಯ ಪುಸ್ತಕದ ಈ ಬೆನ್ನುಡಿಯಲ್ಲಿದೆ ಮತ್ತು ಅರ್ಪಣೆ…..]
“ಆರ್.ಎಸ್.ಎಸ್. ಆಳ ಮತ್ತು ಅಗಲ”
-ಅರ್ಪಣೆ
“ಹುಟ್ಟುತ್ತ ವಿಶ್ವಮಾನವ”ರಾದ ಮಕ್ಕಳಿಗೆ,
ಬೆಳೆಯುತ್ತಲೂ ವಿಶ್ವಮಾನವರಾಗೆ ಉಳಿಯಲಿ…
ಆಶಯದೊಡನೆ
-ದೇವನೂರ ಮಹಾದೇವ
ಹೌದು, ಛಿದ್ರತೆಯೇ ದೆವ್ವ: ಐಕ್ಯತೆಯೇ ದೈವ ಎಂಬ ವಿವೇಕ ನಮ್ಮದೂ ಆಗಬೇಕಾಗಿದೆ. ಇಂದು ಛಿದ್ರತೆ ಮಿತಿಮೀರುತ್ತಿದೆ. ಅಧರ್ಮವು ಧರ್ಮದ ಮುಖವಾಡ ತೊಟ್ಟು ಕುಣಿದು ಕುಪ್ಪಳಿಸುತ್ತಿದೆ. ಅಸಮಾನತೆಯೇ ನೀತಿಯಾಗುತ್ತಿದೆ! ಧರೆಹತ್ತಿ ಉರಿದೊಡೆ ನಿಲ್ಲುವುದೆಂತು ಅಂತಾಗಿಬಿಟ್ಟಿದೆ. ಇಂತಹ ಆಳ್ವಿಕೆ ಎಲ್ಲಿಗೆ ತಲುಪಬಹುದು?
ಕೂಗುಮಾರಿ ಮನೆಮುಂದೆ ಬಂದು ಕೂಗಿದಾಗ ಅದಕ್ಕೆ ಓಗೊಟ್ಟರೆ ಅಥವಾ ‘ಕರೆದವರು ಯಾರು?’ ಅಂತ ಕೂಗುಮಾರಿಗೆ ಸ್ಪಂದಿಸಿದರೆ, ಅವರು ರಕ್ತ ಕಾರಿಕೊಂಡು ಸಾಯುತ್ತಾರೆ ಎನ್ನುವುದು ನಮ್ಮ ಜನಪದರ ನಂಬಿಕೆ. ಅದಕ್ಕಾಗಿ ‘ನಾಳೆ ಬಾ’ ಅಂತ ಬಾಗಿಲ ಮುಂದೆ ಬರೆದಿರುತ್ತಾರೆ.
ಛಿದ್ರತೆಯ, ತಾರತಮ್ಯ ಬಿತ್ತನೆ ಮಾಡುವ ಕೂಗುಮಾರಿಗಳ ಗುಂಪು ನಮ್ಮ ಮನೆ ಮುಂದೆ ಬಂದು ಕೂಗಿದಾಗ, ಅದಕ್ಕೆ ‘ಓ’ಗೊಡದೆ, ‘ನಾಳೆ ಬಾ’ ಎಂದು ನಾವೂ ಕೂಡ ನಮ್ಮ ಜನಪದರಂತೆ ಬಾಗಿಲಲ್ಲಿ ಬರೆದಿಡಬೇಕಾಗಿದೆ. ನಾವು ಓಗೊಟ್ಟರೆ, ಅದರೊಡನೆ ದನಿಗೂಡಿಸಿದರೆ, ಆ ಕ್ಷಣದಿಂದಲೇ ನಮ್ಮ ಪತನವು ಹೆಜ್ಜೆ ಇಡತೊಡಗುತ್ತದೆ. ಹಳ್ಳಿಗಾಡಿನ ಅನುಭವಜನ್ಯವಾದ ‘ಛಿದ್ರತೆಯೇ ದೆವ್ವ; ಐಕ್ಯತೆಯೇ ದೈವ’ ಎಂಬ ವಿವೇಕ ನಮ್ಮದೂ ಆಗಬೇಕಾಗಿದೆ.
-ದೇವನೂರ ಮಹಾದೇವ