ಆಧುನಿಕ ಬದುಕಿನ ಪ್ರತಿಕ್ಷಣವೂ ಗೋ-ಮಯ -ನಾಗೇಶ ಹೆಗಡೆ
ಕಸಾಯಿಖಾನೆಗೆ ಹೋದ ದನದ ಅರ್ಧಪಾಲು ಮಾತ್ರ ಆಹಾರಕ್ಕೆ, ಇನ್ನರ್ಧ ಭಾಗ ನಮ್ಮನಿಮ್ಮೆಲ್ಲರ ಬಳಕೆಗೆ -ಅದು ನಿಮಗೆ ಗೊತ್ತಿತ್ತೆ? ಈ ದಿನ (ಅಂದರೆ ಜೂನ್ 1) ‘ಅಂತರರಾಷ್ಟ್ರೀಯ ಹಾಲಿನ ದಿನ’ ಎಂದು ಆಚರಿಸಲಾಗುತ್ತಿದೆ. ಹಾಲಿನ ಜೊತೆ ಜೊತೆಗೆ ನಾವು ಬೇರೆ ಏನೇನು ವಿಧದಲ್ಲಿ ಗೋವುಗಳನ್ನು ಬಳಸುತ್ತಿದ್ದೇವೆ ಗೊತ್ತೆ? ಇಲ್ಲಿದೆ ವಿವರಗಳು…
ದನಗಳನ್ನು ಕಸಾಯಿಖಾನೆಗೆ ಕಳಿಸಬೇಕೆ ಬೇಡವೆ ಎಂಬ ಬಗ್ಗೆ ದೇಶದಾದ್ಯಂತ ಸುದೀರ್ಘ ಚರ್ಚೆ ನಡೆಯುತ್ತಿದೆ. ಚರ್ಚೆಯ ನಡುವೆ ಆಗಾಗ ಟೀ, ಕಾಫಿ ಅಥವಾ ಪೇಯವೂ ಬಳಕೆಯಾಗಬಹುದು. ಅದಕ್ಕೆ ಬಳಕೆಯಾದ ಸಕ್ಕರೆಯಿಂದಲೇ ಇಂದಿನ ಈ ಲೇಖನವನ್ನು ಆರಂಭಿಸೋಣ: ಸಕ್ಕರೆ ಅಷ್ಟೊಂದು ಬೆಳ್ಳಗೆ ಕಾಣಲು ಕಾರಣವೇನು ಗೊತ್ತೆ? ಪ್ರಾಣಿಗಳ ಮೂಳೆಪುಡಿಯಿಂದ ತಯಾರಿಸಿದ ಬೋನ್ ಚಾರ್ ಎಂಬ ಫಿಲ್ಟರ್ ಮೂಲಕ ಬೆಲ್ಲದ ಪಾಕವನ್ನು ಸೋಸುತ್ತಾರೆ.
ಸಕ್ಕರೆ ಖರೀದಿಸಲೆಂದು ನೀವು ಬಸ್ ಅಥವಾ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರೆ ಮೃತ ದನಗಳ ಮೇಲೆಯೇ ಸವಾರಿ ಮಾಡುತ್ತಿದ್ದೀರೆಂದು ಹೇಳಬಹುದು. ಟಯರ್‍ಗಳಿಗೆ ಸ್ಟೀರಿಕ್ ಆಸಿಡ್ ಎಂಬ ಪ್ರಾಣಿಜನ್ಯ ದ್ರವವನ್ನು ಸೇರಿಸದೆ ಇದ್ದರೆ ಅದು ಯಾವ ಕ್ಷಣದಲ್ಲಾದರೂ ಢಮ್ಮೆನ್ನಬಹುದು. ಬೆದರಿ ಬ್ರೇಕ್ ಹಾಕಲು ಹೊರಟಿರಾ? ಹೈಡ್ರಾಲಿಕ್ ಬ್ರೇಕಿಗೆ ಬಳಸಿದ ಎಣ್ಣೆಯೂ ದನದ ದೇಹದಿಂದ ತೆಗೆದಿದ್ದೇ ಆಗಿರುತ್ತದೆ. ಬ್ರೇಕ್ ಮತ್ತು ಸ್ಟೀರಿಂಗ್ ಎಂದೂ ಮುರಿಯದ ಹಾಗೆ ವಿಶೇಷವಾಗಿ ತಯಾರಿಸಲಾದ ಉಕ್ಕಿನ ಕಂಬಿಗೂ ಮೂಳೆ ಪುಡಿಯನ್ನು ಸೇರಿಸಿರುತ್ತಾರೆ.
ನಿಮ್ಮದು ಭಾರೀ ದುಬಾರಿ ಕಾರ್ ಆಗಿದ್ದರೆ ಸೀಟಿನ ಲೆದರ್ ಹೊದಿಕೆಯಂತೂ ದನದ್ದೇ ಬಿಡಿ. ತೀರ ಅನುಕೂಲಸ್ಥ ಧನಿಕರೂ ಆಢ್ಯ ಸ್ವಾಮೀಜಿಗಳೂ ಬಳಸುವ ಕಾರಿನಲ್ಲಿ ಅಂಥ ಐಷಾರಾಮಿ ಸೀಟುಗಳು ಇರುತ್ತವೆ. ಲೆದರ್ ಆಗಿರಲಿ, ರೆಕ್ಸಿನ್ನಿನದ್ದೇ ಹೊದಿಕೆ ಆಗಿರಲಿ, ಅದರ ಪ್ರತಿಯೊಂದು ಭಾಗವನ್ನೂ ಜೋಡಿಸಲು ಬಳಸಿದ ಅಂಟು ಕೂಡ ದನದ ಪ್ರೊಟೀನಿನಿಂದ ತಯಾರಿಸಿದ್ದೇ ಆಗಿರುತ್ತದೆ. ಸ್ಟೀರಿಂಗ್ ಚಕ್ರ ನಿಮ್ಮ ಮುಷ್ಟಿಯಿಂದ ಜಾರದಂತೆ ಗಪ್ಪಾಗಿ ಕೂರಲೂ ಅದೇ ಅಂಟನ್ನು ಬಳಸಿರುತ್ತಾರೆ. ದುಬಾರಿ ಕಾರುಗಳಲ್ಲಿ ಅಗ್ನಿಶಾಮಕ ಪುಟ್ಟ ಸಿಲಿಂಡರನ್ನು ಜೋಡಿಸಿರುತ್ತಾರೆ. ಅದನ್ನು ಅಮುಕಿದರೆ ಹೊರಬರುವ ನೊರೆಯಲ್ಲಿ ದನದ ರಕ್ತದಿಂದಲೇ ತೆಗೆದ ಬೆಂಕಿನಿರೋಧಕ ರಸಾಯನ ಇರುತ್ತದೆ. ತೀರ ಚಳಿ ಬಿದ್ದಾಗ ಕಾರಿನ ಎಂಜಿನ್ ಸಲೀಸಾಗಿ ಚಾಲೂ ಆಗುವಂತೆ ಇಂಧನಕ್ಕೆ ಹೆಪ್ಪುನಿರೋಧಕವಾಗಿ ಬಳಸುವ ಗ್ಲಿಸರೀನ್ ಎಂಬ ವಸ್ತು ದನಗಳ ಶರೀರದಿಂದಲೇ ಬಂದಿರುತ್ತದೆ. ಪೇಂಟ್‍ನ ಹೊಳಪನ್ನು ಹೆಚ್ಚಿಸಲೆಂದು ಕೂಡ ಗ್ಲಿಸರೀನ್ ಹಚ್ಚಿರುತ್ತಾರೆ.
ರಸ್ತೆಯಿಂದ ನೆತ್ತಿಯವರೆಗೆ…
ಕಾರುಗಳು ಸಲೀಸಾಗಿ ಚಲಿಸಲೆಂದು ರಸ್ತೆಗೆ ಡಾಂಬರು ಹಾಕಿರುತ್ತಾರಲ್ಲ, ಅದು ಅತ್ತಿತ್ತ ಕಿತ್ತು ಹೋಗದಂತೆ ಅದಕ್ಕೂ ದನಗಳ ಕೊಬ್ಬನ್ನೇ ಸೇರಿಸಿರುತ್ತಾರೆ. ರಸ್ತೆ ನಿರ್ಮಾಣಕ್ಕೆ ಮೊದಲು ಬಂಡೆಗಳನ್ನು ಸ್ಫೋಟಿಸಲು ಜಿಲೆಟಿನ್ ಕಡ್ಡಿಗಳನ್ನು ಬಳಸುತ್ತಾರೆ. ಅದರಲ್ಲಿ ಗ್ಲಿಸರೀನ್ ಇಲ್ಲದಿದ್ದರೆ ಸ್ಫೋಟವೇ ಆಗುವುದಿಲ್ಲ. ಹೀಗೆ ರಸ್ತೆ, ರಸ್ತೆಯ ಮೇಲಿನ ಚಕ್ರ, ಚಕ್ರವನ್ನು ನಿಯಂತ್ರಿಸುವ ಬ್ರೇಕ್, ಬ್ರೇಕನ್ನು ಆಗಾಗ ಒತ್ತುವ ನಿಮ್ಮ ಕಾಲಿನ ಪಾದರಕ್ಷೆ, ಡ್ರೈವರ್ ಸೀಟಿನ ಮೆತ್ತೆ ಎಲ್ಲವೂ ಗೋ-ಮಯ.
ಚರ್ಮದ ಸೋಫಾ ಮೇಲೆ ಕೂರುವ ಬದಲು ಸಾದಾ ಕುರ್ಚಿಯ ಮೇಲೆ ಕೂರಲು ಹೊರಟರೆ ಅಲ್ಲೂ ನೀವು ದನಕ್ಕೆ ಅಂಟಿಕೊಳ್ಳುತ್ತೀರಿ. ಏಕೆಂದರೆ ಕುರ್ಚಿಗೆ ಬಳಸಿದ ಕಟ್ಟಿಗೆಪುಡಿಯ ಹಲಗೆಯ ಮೇಲೆ ಹೊಳಪಿನ ಪ್ಲೈವುಡ್ ಹಾಳೆಯನ್ನು ಅಂಟಿಸಿರುತ್ತಾರಲ್ಲ, ಅಲ್ಲಿ ದನಗಳ ರಕ್ತದ ಒಣಪುಡಿಯ ಗೋಂದನ್ನೇ ಬಳಸಿರುತ್ತಾರೆ. ಕುರ್ಚಿ ಬೇಡ, ನೆಲಕ್ಕೆ ಕೂತೇ ಊಟ ಮಾಡುತ್ತೇನೆಂದರೆ ಆಹಾರ ಉತ್ಪಾದನೆಗೆ ಬಳಸಿದ ಬಹುಪಾಲು ರಸಗೊಬ್ಬರದಲ್ಲಿ ದನದ ರಕ್ತದ ಪುಡಿಯನ್ನು ಸಾರಜನಕ ಸಂವರ್ಧನೆಗೆಂದು ಸೇರಿಸಿರುತ್ತಾರೆ. ಇನ್ನು ಕ್ಯಾಲ್ಸಿಯಂ ಮತ್ತು ರಂಜಕದಂಥ ಸಸ್ಯ ಪೋಷಕ ದ್ರವ್ಯಗಳನ್ನು ದನದ ಮೂಳೆಪುಡಿಯಿಂದ ಸಂಗ್ರಹಿಸಲಾಗುತ್ತದೆ. ಕೃಷಿ ಕೆಲಸದಲ್ಲಿ ದುಡಿಮೆ ಮಾಡುವ ಮಹಿಳೆ ರಕ್ತಹೀನತೆಯಿಂದ ಬಳಲುತ್ತಿದ್ದರೆ ಸರಕಾರ ಉಚಿತವಾಗಿ ಆಕೆಗೆ ವಿತರಿಸುವ ಐರನ್ ಮಾತ್ರೆಗಳಲ್ಲೂ ದನದ ರಕ್ತದಿಂದ ತೆಗೆದ ಕಬ್ಬಿಣದ ಅಂಶವೇ ಇರುತ್ತದೆ.
ದನಗಳೆಂದರೆ ಕೇಳಿದ್ದನ್ನು ಕೊಡುವ ಕಾಮಧೇನು. ವೈದ್ಯಕೀಯ ರಂಗಕ್ಕೆ ಬಂದರೆ ದನದ ದೇಹದ ಮೂಗಿನ ತುದಿಯಿಂದ ಹಿಡಿದು ಬಾಲದವರೆಗಿನ ಭಾಗಗಳಿಂದ ಪಡೆದ ಅಸಂಖ್ಯ ಔಷಧ ದ್ರವ್ಯಗಳನ್ನು ಪಟ್ಟಿ ಮಾಡಬಹುದು. ದನದ ಮೂಗಿನ ಹೊರಳೆಗಳ ನಡುವಣ ಮೃದ್ವಸ್ಥಿಯಿಂದ ತೆಗೆದ ‘ಕೊಂಡ್ರಾಯ್ಟಿನ್’ ಎಂಬ ವಸ್ತುವನ್ನು (ಗ್ಲೂಕೊಸಮೈನ್) ಎಲ್ಲ ಬಗೆಯ ಕೀಲುನೋವುಗಳಿಗೂ ಔಷಧವಾಗಿ ಬಳಸುತ್ತಾರೆ. ದನದ ಶ್ವಾಸನಾಳ ಮತ್ತು ಶ್ವಾಸಕೋಶದ ಒಳಪೊರೆಯಿಂದ ತೆಗೆದ ಹೆಪಾರಿನ್ ಎಂಬ ಔಷಧ ದ್ರವ್ಯವನ್ನು ಶಸ್ತ್ರಚಿಕಿತ್ಸೆಗೆ ಮೊದಲು ರೋಗಿಯ ರಕ್ತಕ್ಕೆ ಸೇರಿಸುತ್ತಾರೆ. ಆಗ ರಕ್ತ ಹೆಪ್ಪುಗಟ್ಟುವುದಿಲ್ಲ (ಮಲೆನಾಡಿನಲ್ಲಿ ಮಳೆಗಾಲದಲ್ಲಿ ಕಂಡುಬರುವ ಇಂಬಳಗಳು ಕಚ್ಚಿದಾಗ ಇದೇ ಹೆಪಾರಿನ್ ನಮ್ಮ ರಕ್ತನಾಳಕ್ಕೆ ಸೇರುತ್ತದೆ. ಇಂಬಳವನ್ನು ಕಿತ್ತು ತೆಗೆದ ನಂತರವೂ ರಕ್ತ ಹೆಪ್ಪುಗಟ್ಟದೆ ಹರಿಯುತ್ತಲೇ ಇರುತ್ತದೆ. ಇಂಬಳದ ಕಡಿತ ಮಾರಕವೇನಲ್ಲ; ಆದರೆ ಝೆಕ್ ದೇಶದ ನರ್ಸ್ ಒಬ್ಬಳು ಬೇಕೆಂತಲೇ ಜಾಸ್ತಿ ಹೆಪಾರಿನ್ ಚುಚ್ಚಿ ಏಳು ರೋಗಿಗಳ ಕೊಲೆ ಮಾಡಿದ್ದಳು; ಇನ್ನೂ ಹತ್ತು ಮಂದಿಗೆ ಚುಚ್ಚುವ ಮೊದಲೇ ಸಿಕ್ಕಿಬಿದ್ದಳು).
ಶಿಶುವಿನಿಂದ ಹಿಡಿದು ಕೊನೆಗಾಲದವರೆಗೆ
ಭಾರತದಲ್ಲಿ ಆರು ಕೋಟಿಗೂ ಹೆಚ್ಚಿನ ಸಕ್ಕರೆ ರೋಗಿಗಳಿದ್ದು ಇದನ್ನು ಮಧುಮೇಹಿಗಳ ಸಂತೆಯೆಂದೇ ವರ್ಣಿಸಲಾಗುತ್ತಿದೆ. ಇವರು ಔಷಧ ರೂಪದಲ್ಲಿ ದನಗಳ ಮೇದೋಜೀರಕ ಗ್ರಂಥಿಗಳಿಂದ ತೆಗೆದ ಇನ್ಸೂಲಿನನ್ನೇ ಬಳಸುತ್ತಾರೆ. ರಕ್ತದ ಒತ್ತಡ ತೀರ ಕಡಿಮೆ ಆದರೆ ಅದನ್ನು ಹೆಚ್ಚಿಸಲೆಂದು ದನದ ಆಡ್ರಿನಾಲಿನ್ ಗ್ರಂಥಿಯಿಂದ ತೆಗೆದ ಎಪಿನಾಫ್ರಿನ್ ಎಂಬ ಔಷಧವನ್ನೇ ಡಾಕ್ಟರ್‍ಗಳು ಶಿಫಾರಸು ಮಾಡುತ್ತಾರೆ. ಹೃದ್ರೋಗದ ಶಸ್ತ್ರಚಿಕಿತ್ಸೆಯ ಸಮಯದಲ್ಲೂ ಇದು ಜೀವರಕ್ಷಕ ಔಷಧವಾಗಿ ಬಳಕೆಯಾಗುತ್ತದೆ. ದನಗಳ ಯಕೃತ್ತಿನಿಂದ ತೆಗೆದ ‘ಲಿವರ್ ಎಕ್ಸ್‍ಟ್ರ್ಯಾಕ್ಟ್’ ಎಂಬ ದ್ರವ್ಯವನ್ನು ಬಿ-12 ಜೀವಸತ್ವ ಕೊರತೆ ಇದ್ದವರಿಗೆ ಕೊಡಲಾಗುತ್ತದೆ. ಮಿದುಳಿಗೆ ಏಟು ಬಿದ್ದಾಗ ತಲೆ ಬರುಡೆಯ ಚಿಕಿತ್ಸೆ ಮಾಡಿ ಕೆಲವು ಭಾಗಗಳನ್ನು ತೆಗೆಯಬೇಕಾಗಿ ಬಂದರೆ, ಆ ಖಾಲಿ ಸ್ಥಳದಲ್ಲಿ ದನದ ಮಿದುಳಿನ ನಾರಿನಂಥ ಕವಚದಿಂದ ತಯಾರಿಸಿದ ಡ್ಯೂರಾ ಮೇಟರ್ ಎಂಬ ವಸ್ತುವನ್ನು ತುರುಕಿ ಹೊಲಿಗೆ ಹಾಕುತ್ತಾರೆ. ಗರ್ಭಿಣಿಗೆ ಪ್ರಸವದ ಸಂದರ್ಭದಲ್ಲಿ ತೊಂದರೆ ಎದುರಾಯಿತೆ? ಹುಟ್ಟಿದ ಶಿಶುವಿಗೆ ತಾಯಿಯ ಹಾಲೇ ಜೀರ್ಣ ಆಗುತ್ತಿಲ್ಲವೆ? ಹಿರಿಯರ ರಕ್ತ ನಾಳದಲ್ಲಿ ಗಂಟು ಕಂಡುಬಂತೆ? ಹೊಟ್ಟೆ ತಳಮಳ ಎನ್ನುತ್ತಿದೆಯೆ? ಅಸ್ತಮಾ ಸಮಸ್ಯೆ ಎದುರಾಯಿತೆ? ಎಲ್ಲಕ್ಕೂ ಸ್ಟೀರಾಯ್ಡ್ ಕೊಡಿ; ಎಲ್ಲಕ್ಕೂ ಗೋವಿನ ದೇಹದ ಗಣಿಗಾರಿಕೆ ಮಾಡಿ.
ದನಗಳ ತಾಜಾ ಚರ್ಮವನ್ನು ಯಂತ್ರಗಳ ಮೂಲಕ ಹಿಂಡಿದರೆ ಅದರಿಂದ ‘ಕೊಲಾಜೆನ್’ ಎಂಬ ಅಂಟು ಪದಾರ್ಥ ಸ್ರವಿಸುತ್ತದೆ. ಸ್ನಾಯು ಮತ್ತು ಮೂಳೆಗಳನ್ನು ಬಂಧಿಸುವ ಅಂಗಾಂಶದಿಂದಲೂ ಕೊಲಾಜೆನ್ ಪಡೆಯಬಹುದು. ಅದು ಅನೇಕ ವಿಧಗಳಲ್ಲಿ ನಿತ್ಯವೂ ಬಳಕೆಯಾಗುತ್ತಿದೆ. ಹಿರಿಯ ನಾಗರಿಕರಿಗೆ ಮೂತ್ರ ನಿಯಂತ್ರಣ ಸಮಸ್ಯೆ ಎದುರಾದರೆ ಇದನ್ನೇ ಚುಚ್ಚುಮದ್ದಿನ ರೂಪದಲ್ಲಿ ರಕ್ತಕ್ಕೆ ಸೇರಿಸುತ್ತಾರೆ. ಆಸ್ಪತ್ರೆಗಳಲ್ಲಿ ದಿನವೂ ಬಳಕೆಯಾಗುವ ಬ್ಯಾಂಡೇಜ್ ಪಟ್ಟಿಗೆ ಕೊಲಾಜೆನ್ ಲೇಪನ ಇರುತ್ತದೆ. ಗಾಯ ಒಣಗಿದ ನಂತರವೂ ಉಳಿಯುವ ಕಲೆಯನ್ನು ಹೋಗಲಾಡಿಸಲು ಸುರೂಪ ಚಿಕಿತ್ಸಕರು ಇದನ್ನೇ ಬಳಸುತ್ತಾರೆ. ಇಳಿವಯಸ್ಸಿನ ಸಿನೆಮಾ ಕಲಾವಿದರ ಮುಖದ ಸುಕ್ಕುಗಳನ್ನು ನಿವಾರಿಸುವಲ್ಲಿ ಕೊಲಾಜೆನ್ ಪಾತ್ರ ತುಂಬ ಮಹತ್ವದ್ದಾಗಿದೆ. ಕಣ್ಣಿನ ಪೊರೆಯ ನಿವಾರಣೆಗೂ ಇದು ಬೇಕು. ಅನೇಕ ಬಗೆಯ ಸೌಂದರ್ಯ ಪ್ರಸಾಧನಗಳಲ್ಲಿ, ಮುಲಾಮಿನಲ್ಲಿ ಮತ್ತು ನೋವು ನಿವಾರಕ ತೈಲಗಳಲ್ಲಿ ಕೊಲಾಜೆನ್ ಇದ್ದೇ ಇರುತ್ತದೆ.
ದನದ ಕೊಬ್ಬನ್ನು ಬಿಸಿನೀರಲ್ಲಿ ಕುದಿಸಿ ಸ್ಟೀರಿಕ್ ಆಸಿಡ್ ಪಡೆಯಬಹುದು. ಇದಂತೂ ಎಲ್ಲ ಸಾಬೂನು, ಶೇವಿಂಗ್ ಕ್ರೀಮು, ಟೂಥ್‍ಪೇಸ್ಟ್, ಪರಿಮಳ ದ್ರವ್ಯ, ಮಕ್ಕಳ ಕ್ರೆಯಾನ್ (ಬಣ್ಣದ ಕಡ್ಡಿ), ಮೋಂಬತ್ತಿ, ಕಾಡಿಗೆ ಎಲ್ಲದರಲ್ಲೂ ಇದನ್ನು ಕಾಣಬಹುದು. ಜೆಟ್ ವಿಮಾನಗಳ ಎಲ್ಲ ಬಿಡಿಭಾಗಗಳೂ ಅಚ್ಚುಕಟ್ಟಾಗಿ ಸದಾ ಕಾಲ ಕೆಲಸ ಮಾಡುವಂತೆ ದನದ ಮೂಳೆ ಮತ್ತು ಕೊಬ್ಬಿನಿಂದ ತೆಗೆದ ಟ್ಯಾಲೊ ಎಂಬ ತೈಲವನ್ನೇ ಕೀಲೆಣ್ಣೆಯಾಗಿ ಬಳಸಲಾಗುತ್ತದೆ. ಮೂಳೆ, ಕೊಂಬು, ಗೊರಸು ಇತ್ಯಾದಿ ಬಿಡಿಭಾಗಗಳಿಂದ ತೆಗೆದ ಇದೇ ಟ್ಯಾಲೊವನ್ನು ಶುದ್ಧೀಕರಿಸಿ ಖಾದ್ಯತೈಲಗಳಲ್ಲೂ ಕದ್ದುಮುಚ್ಚಿ ಕಲಬೆರಕೆ ಮಾಡುವವರಿದ್ದಾರೆ. ಗೊತ್ತೇ ಆಗುವುದಿಲ್ಲ. ಬೇಕರಿ ಖಾದ್ಯಗಳಲ್ಲಿ, ಕ್ಯಾಂಡಿಗಳಲ್ಲಿ, ಚಾಕೊಲೇಟ್‍ಗಳಲ್ಲಿ ಟ್ಯಾಲೊ ಇರುತ್ತದೆ. ಬೇಕರಿಯ ಕೆಲವು ತಿನಿಸುಗಳಿಗೆ ಬೆಳ್ಳಿಯ ತೀರ ಸಪೂರ ಪದರವನ್ನು ಹಾಸಿರುತ್ತಾರಲ್ಲ? ಅದರ ಸಮೇತವೇ ನಾವು ಕಾಜೂ ಬರ್ಫಿಯನ್ನೊ ರಸಗುಲ್ಲಾವನ್ನೊ ತಿನ್ನುತ್ತೇವೆ. ಆ ಬೆಳ್ಳಿ ಪದರದ ಉತ್ಪಾದನೆ ಹೇಗೆ ಗೊತ್ತೆ? ದನದ ಕರುಳನ್ನು ಸೀಳಿ ಉದ್ದುದ್ದ ಪಟ್ಟಿಯಂತೆ ಬಿಚ್ಚಿಟ್ಟು, ಅಂಥ ಎರಡು ಪದರಗಳ ನಡುವೆ ಬೆಳ್ಳಿಯ ಸಣ್ಣ ಗೋಲಿಯನ್ನು ಇಟ್ಟು ಕುಟ್ಟುತ್ತಾರೆ. ಸಾಸಿವೆ ಕಾಳಿನ ಬೆಳ್ಳಿಯ ಗೋಲಿಯಿಂದ ಚಾದರದಷ್ಟು ಅಗಲದ ಸಪೂರ ಬೆಳ್ಳಿ ಪದರ ಸಿದ್ಧವಾಗುತ್ತದೆ.
ಚರ್ಮದ ಕಡೆ ಮತ್ತೊಮ್ಮೆ ಬರೋಣ. ಕ್ರಿಕೆಟ್ ಚೆಂಡು, ಫುಟ್‍ಬಾಲ್, ವಾಲಿಬಾಲ್, ಬಾಸ್ಕೆಟ್ ಬಾಲ್, ಬೇಸ್‍ಬಾಲ್ ಮುಂತಾದ ಅನೇಕ ಬಗೆಯ ಕ್ರೀಡಾ ಸಾಧನಗಳು, ಕೈಗವಸು, ಕಾಲ್ಗವಚ ಎಲ್ಲಕ್ಕೂ ದನದ ಚರ್ಮವೇ ಬಳಕೆಯಾಗುತ್ತದೆ. ದನದ ಕರುಳನ್ನು ಸೀಳಿ, ಸಂಸ್ಕರಿಸಿದ ದಾರಗಳೇ ಟೆನಿಸ್ ಮತ್ತು ಬ್ಯಾಡ್ಮಿಂಟನ್ ರ್ಯಾಕೆಟ್‍ಗಳಲ್ಲಿ ಬಳಕೆಯಾಗುತ್ತದೆ.
ಇದೇನು ದನದ ಕತೆ ಹೀಗೆ ಚ್ಯೂಯಿಂಗ್ ಗಮ್ ಥರಾ ಎಳೆದಷ್ಟೂ ಬರುತ್ತದಲ್ಲ? ಹೌದ್ರೀ, ಚ್ಯೂಯಿಂಗ್ ಗಮ್ ಕೂಡ ದನದ ಗೊರಸು, ಕೊಂಬುಗಳಿಂದಲೇ ತೆಗೆದ ಜಿಲೆಟಿನ್ ಎಂಬ ಪದಾರ್ಥದಿಂದ ತಯಾರಾಗಿರುತ್ತದೆ.
ಬದಲೀ ಮೂಲಗಳಿಗಾಗಿ ಇನ್ನೊಂದು ಭಾರತ?
ಇದುವರೆಗೆ ಹೇಳಿದ ಬಹಳಷ್ಟು ದ್ರವ್ಯಗಳನ್ನು ಬದಲೀ ಮೂಲಗಳಿಂದಲೂ ಉತ್ಪಾದಿಸಲು ಸಾಧ್ಯವಿದೆ. ಆದರೆ ಬಹುತೇಕ ಎಲ್ಲಕ್ಕೂ ಬದಲೀ ಪ್ರಾಣಿಗಳನ್ನು ಬೆಳೆಸಬೇಕು. ರೆಕ್ಸಿನ್‍ನಂಥ ಕೆಲವು ಉತ್ಪಾದನೆಗಳಿಗೆ ಪೆಟ್ರೋಲಿಯಂ ದ್ರವ್ಯಗಳನ್ನು ಬಳಸಬಹುದು. ಆದರೆ ಕ್ರಿಕೆಟ್ ಮತ್ತು ಫುಟ್‍ಬಾಲ್‍ಗಳಿಗೆ ಬದಲೀ ಸಾಮಗ್ರಿ ಇಲ್ಲ. ಹಂದಿಗಳ ಅಥವಾ ಕುರಿ, ಒಂಟೆಗಳ ಚರ್ಮದಿಂದ ಪಡೆಯಬಹುದು. ಆದರೆ ಅದೆಷ್ಟು ಕೋಟಿ ಹೊಸ ಪ್ರಾಣಿಗಳ ಸಾಕಣೆ ಮಾಡಬೇಕು. ಅವಕ್ಕೆ ಬೇಕಾದ ತಿಂಡಿ ಮೇವುಗಳಿಗಾಗಿ ಇನ್ನೊಂದು ಭಾರತವನ್ನೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಅವುಗಳ ಕೃಷಿಗೆ ಬೇಕಾದ ರಸಗೊಬ್ಬರಗಳಿಗಾಗಿ ಸಮುದ್ರವನ್ನೇ ಬಗೆಯಬೇಕು. ಅವೆಲ್ಲ ಸಾಧ್ಯವೆ?
ವಧೆ ಮಾಡದೇ, ಮುದಿ ಗೋವು ತಾನಾಗಿ ಪ್ರಾಣ ಬಿಟ್ಟ ನಂತರವೂ ಇವನ್ನೆಲ್ಲ ಪಡೆಯಲು ಸಾಧ್ಯವಿದೆ ಎಂದು ಕೆಲವರು ವಾದಿಸಬಹುದು. ಆದರೆ ಚದುರಿದಂತೆ ಯಾವು ಯಾವುದೋ ಊರುಗಳಲ್ಲಿ ಪ್ರಾಣ ಬಿಡುವ ದನಗಳಿಂದ ಇವನ್ನೆಲ್ಲ ಸಂಗ್ರಹಿಸಲು ಸಾಧ್ಯವಿಲ್ಲ. ಒಂದೇ ಸ್ಥಳದಲ್ಲಿ ದಿನವೂ ಸಾವಿರಾರು ದನಗಳ ಬಿಡಿಭಾಗಗಳು ಸಿಗುವ ಸ್ಥಳಗಳಲ್ಲಿ ಟನ್‍ಗಟ್ಟಲೆ ರಕ್ತವನ್ನು ಸ್ವಯಂಚಾಲಿತ ಬಕೆಟ್‍ಗಳಲ್ಲಿ ಸಂಗ್ರಹಿಸಿ, (ಹಾಲನ್ನು ಪುಡಿ ಮಾಡುವ ವಿಧಾನದಲ್ಲೇ) ಕೆಂಪಗೆ ಕಾದ ಗಾಣದ ಮೇಲೆ ಸಿಂಪಡಿಸಿ ಪುಡಿಯನ್ನು ಡಬ್ಬಿಗಳಲ್ಲಿ ಪ್ಯಾಕ್ ಮಾಡುತ್ತಾರೆ. ವಧೆಗೆಂದು ಬಂದ ಪ್ರತಿ ದನದಿಂದಲೂ ಹೆಚ್ಚೆಂದರೆ ಅರ್ಧ ಭಾಗ ಮಾತ್ರ ಆಹಾರಕ್ಕೆ ಬಳಕೆಯಾಗುತ್ತದೆ. ಇನ್ನರ್ಧ ಭಾಗವನ್ನು ಬೇರೆ ಬೇರೆ ರೂಪಗಳಲ್ಲಿ ನಾವೆಲ್ಲ ಪ್ರತಿ ದಿನವೂ ಬಳಸುತ್ತೇವೆ.
ಭಾರತೀಯ ಪುರಾಣಗಳ ಪ್ರಕಾರ ಹಿಂದೊಮ್ಮೆ ರಾಕ್ಷಸರು ಬಂದು ದೇವತೆಗಳನ್ನು ಹಿಗ್ಗಾ ಮುಗ್ಗಾ ಬಡಿದರಂತೆ. ಸೋತು ಸುಣ್ಣವಾದ ಇಂದ್ರ ಆಗ ದಧೀಚಿ ಮಹರ್ಷಿಯ ಬಳಿ ಓಡಿ ಬಂದು ಸಹಾಯ ಯಾಚಿಸಿದರಂತೆ. ಆ ಸನ್ಯಾಸಿ ಏನು ಕೊಟ್ಟಾನು? ತನ್ನ ಮೂಳೆಗಳಿಂದಲೇ ವಜ್ರಾಯುಧವನ್ನು ಮಾಡಿಕೊಳ್ಳಿ ಎಂದು ಹೇಳಿ ಪ್ರಾಣ ಬಿಟ್ಟನಂತೆ. ಹಾಲು ಹೈನು ಸೇವಿಸಿದ್ದ ದಧೀಚಿಯ ಮೂಳೆಗಳಿಂದಲೇ ರಾಕ್ಷಸರನ್ನು ಬಗ್ಗು ಬಡಿದು ದೇವತೆಗಳು ಗೆದ್ದರಂತೆ. ಸ್ವರ್ಗಸುಖದ ಬೆನ್ನು ಹತ್ತಿದ ಇಂದಿನ ಇಡೀ ಮನುಕುಲವೇ ದನದ ಮೂಳೆ ಮಜ್ಜೆಗಳಿಂದ ತಯಾರಾದ ಸರಕು ಸಾಮಗ್ರಿಗಳ ಮೇಲೆ ನಿಂತಂತಿದೆ.
ದನವೆಂಬ ಮೂಕ ಪ್ರಾಣಿಯನ್ನು ನಾವು ಇಷ್ಟೆಲ್ಲ ದೋಚುತ್ತಿದ್ದೇವೆಯೆ ಎಂದು ಕಣ್ಣೀರು ಸುರಿಸಲು ಹೊರಟಿರೊ, ನಿಮಗೆ ಗ್ಲಿಸರೀನ್ ಬೇಕಾಗಬಹುದು.
ಅದೂ ದನದ ದೇಹದಿಂದಲೇ ಬರುತ್ತದೆ!
———————————————————
ಇದನ್ನು ಯಾರು ಬೇಕಾದರೂ ಪ್ರತಿ ಮಾಡಿ, ಲಾಭದ ಉದ್ದೇಶವಿಲ್ಲದೆ ಸಾರ್ವಜನಿಕ ವಿತರಣೆಗಾಗಿ ಮರುಮುದ್ರಣ ಮಾಡಬಹುದು ಅಥವಾ ಡಿಜಿಟಲ್ ಸ್ಕ್ಯಾನಿಂಗ್ ಮಾಡಬಹುದು. ಹಾಗೆ ಪ್ರತಿ ಮಾಡುವಾಗ ಮೂಲ ಲೇಖಕನ ಮತ್ತು ‘ಪ್ರಜಾವಾಣಿ’ಯ ಹೆಸರುಗಳನ್ನು ಉಳಿಸಿಕೊಂಡರೆ ಅಧಿಕೃತತೆ ಉಳಿಯುತ್ತದೆ.