ಆದಿವಾಸಿಗಳಿಗೆ ಅರಣ್ಯದ ಮೇಲಿನ ಹಕ್ಕು ಸಹಜ ಹಕ್ಕಾಗಿದೆ- ದೇವನೂರ ಮಹಾದೇವ
[ದೇವನೂರ ಮಹಾದೇವರವರು ದಿನಾಂಕ 10.03.2024ರ ರ ಭಾನುವಾರ ಮೈಸೂರಿನಲ್ಲಿ ಜರುಗಿದ ಆದಿವಾಸಿ ಮುಖಂಡರ ಸಭೆಯ ಚರ್ಚೆಯಲ್ಲಿ ಭಾಗವಹಿಸಿದ್ದರು. ಅದರ ವಿಸ್ತೃತ ವರದಿಯನ್ನು ಪತ್ರಕರ್ತ ಮುತ್ತುರಾಜು ಅವರು, ನಮ್ಮ ಬನವಾಸಿಗೆ ಕಳಿಸಿಕೊಟ್ಟಿದ್ದು, ನಮ್ಮ ಓದಿಗಾಗಿ ಇಲ್ಲಿದೆ.]
ಆದಿವಾಸಿಗಳ ಮಾತು ಕೇಳಿ ಅವರಿಂದ ಮಾಹಿತಿ ತಿಳಿದುಕೊಂಡ ನಂತರ ದೇವನೂರ ಮಹಾದೇವರವರು ಮಾತನಾಡಿ, “ಈಗ ಎಂತಹ ಪರಿಸ್ಥಿತಿ ಬಂದಿದೆಯೆಂದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡಿದ ಅರಣ್ಯ ಹಕ್ಕು ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ ಅಥವಾ ಭೂ ಸ್ವಾಧೀನ ಕಾಯ್ದೆಯಿರಬಹುದು, ಇಂತಹ ಹಲವು ಕಾಯ್ದೆಗಳು ಮತ್ತೆ ಜಾರಿಯಾಗಬೇಕು ಎಂದು ಕೇಳುತ್ತಿದ್ದೇವೆ. ಇಲ್ಲಿ ಸೇರಿರುವ ನೀವು ಕೂಡ ಇದನ್ನೇ ಕೇಳುತ್ತಿದ್ದೀರಿ. ಏಕೆಂದರೆ ಅಷ್ಟರ ಮಟ್ಟಿಗೆ ಇಂದು ಆಳ್ವಿಕೆ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್ಡಿಎಯ ಕೇಂದ್ರ ಸರ್ಕಾರವು ಈ ಹಿಂದೆ ಕಾಂಗ್ರೆಸ್ ಮಾಡಿದ್ದ ಉತ್ತಮ ಕಾಯ್ದೆಗಳನ್ನು ಧ್ವಂಸ ಮಾಡಿದೆ. ಅದಾನಿ-ಅಂಬಾನಿ ಮತ್ತಿತರ ಬಂಡವಾಳಶಾಹಿಗಳು ಅರಣ್ಯವನ್ನು, ಸಾರ್ವಜನಿಕ ಸಂಪತ್ತನ್ನು ಕೊಳ್ಳೆ ಹೊಡೆಯುವುದಕ್ಕಾಗಿ ಈ ರೀತಿ ಮಾಡಲಾಗಿದೆ. ಇಷ್ಟೆಲ್ಲ ಮಾಡುತ್ತಿರುವ ಈಗಿನ ಕೇಂದ್ರ ಸರ್ಕಾರ ಯಾರ ಪರ ಇದೆ ಯೋಚಿಸಿ” ಎಂದರು.
“ಅರಣ್ಯ ಹಕ್ಕು ಕಾಯ್ದೆಯನ್ನೇ ನೋಡುವುದಾದರೆ ಮೋದಿ ಸರ್ಕಾರ ಅದಕ್ಕೆ ತಿದ್ದುಪಡಿ ತಂದು ಗ್ರಾಮಸಭೆಗಳ ಅಧಿಕಾರ ಕಿತ್ತು ಹಾಕಿದೆ. ಕಾಯ್ದೆಯ ರೆಂಬೆ ಕೊಂಬೆಗಳನ್ನು ಕತ್ತರಿಸಲಾಗುತ್ತಿದೆಯೋ ಅಥವಾ ಇಡೀ ಬೇರಿಗೆ ಕೊಡಲಿ ಇಡುತ್ತಿದೆಯೋ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಿದೆ. ಅರಣ್ಯದ ಜೊತೆಗೆ ಆದಿವಾಸಿಗಳು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಆದರೆ ಗಣಿಗಾರಿಕೆಗಾಗಿ ಅರಣ್ಯವನ್ನೇ ನಾಶ ಮಾಡಿದರೆ ಅದರೊಟ್ಟಿಗೆ ಒಂದಾಗಿ ಬದುಕುತ್ತಿರುವ ಆದಿವಾಸಿಗಳನ್ನು ಧ್ವಂಸ ಮಾಡಿದ ಹಾಗೆ” ಎಂದು ಆತಂಕ ವ್ಯಕ್ತಪಡಿಸಿದರು.
ಮೂಲ ಆದಿವಾಸಿ ವೇದಿಕೆಯ ಅಧ್ಯಕ್ಷರಾದ ವಿಠ್ಠಲ್ ರವರು ಹೇಳಿದ “ನಮ್ಮ ಬೇಸಾಯಕ್ಕೆ ಒಂದೆರಡು ಎಕರೆ ಭೂಮಿ ಸಾಲುವುದಿಲ್ಲ, ಏಕೆಂದರೆ ನಮ್ಮದು ಕೆತ್ತನೆ-ಬಿತ್ತನೆಯ ಅರಣ್ಯ ಕೃಷಿ. ಕಾಡು ಉಳಿಯಬೇಕು, ನಮಗೆ ಆಹಾರ ಸಿಗಬೇಕು ಮತ್ತು ನಮ್ಮ ಜೊತೆ ವಾಸ ಮಾಡುವ ಪ್ರಾಣಿ ಪಕ್ಷಿಗಳಿಗೂ ತೊಂದರೆ ಆಗಬಾರದು” ಎಂಬ ಮಾತಿಗೆ ವಿಸ್ಮಿತರಾಗಿ ಅದನ್ನೆ ವಿಸ್ತರಿಸಿ ಮಾತನಾಡಿದ ದೇವನೂರ ಮಹಾದೇವರವರು, “ಇದು ಎಂತಹ ಮುನ್ನೋಟದ ದೃಷ್ಟಿಕೋನ! ಸ್ವಾರ್ಥವಿಲ್ಲದ ಜೀವಸಂಕುಲದ ದೃಷ್ಟಿಕೋನ ಆದಿವಾಸಿಗಳದು. ಈ ದೃಷ್ಟಿಕೋನ ಇಡೀ ಸಮಾಜಕ್ಕೆ ಮಾದರಿಯಾದರೆ ಮಾತ್ರ ಈ ಭೂಮಿ ಉಳಿಯಬಹುದು” ಅಂದರು. “ಅದೇ ರೀತಿ ಸಿದ್ದಿ ಆದಿವಾಸಿ ಸಮುದಾಯದ ಒಂದು ಕುಟುಂಬದೊಳಗೆ ಹಿಂದೂಗಳಿದ್ದಾರೆ, ಕ್ರಿಶ್ಚಿಯನ್ ಇದ್ದಾರೆ, ಮುಸ್ಲಿಮರೂ ಇದ್ದಾರೆ. ಗಂಡ, ಹೆಂಡತಿಯಾಗಿದ್ದಾರೆ ಮಕ್ಕಳು ಎಲ್ಲರೂ ಒಟ್ಟಿಗೆ ಬದುಕುತ್ತಿದ್ದಾರೆ. ಅವರವರ ದೇವರಿಗೆ ಅವರು ಪೂಜೆ ಮಾಡಿಕೊಳ್ಳುತ್ತಲೇ ಒಟ್ಟಿಗೆ ಇದ್ದಾರೆ. ಇದಲ್ಲವೇ ನಿಜವಾದ ಭಾರತ” ಎಂದು ದೇವನೂರು ತಿಳಿಸಿದರು.
“ಎಂತಹ ದುರಂತ ಎಂದರೆ ನಮ್ಮ ಪೂರ್ವಜರಾದ ಆದಿವಾಸಿಗಳಿಗೆ ಎಲ್ಲ ಕ್ಷೇತ್ರಗಳಲ್ಲೂ ಪ್ರಾತಿನಿಧ್ಯ ನೀಡುವುದು ಸರ್ಕಾರಗಳ ಮೊದಲ ಕರ್ತವ್ಯವಾಗಬೇಕಿತ್ತು. ವಿಧಾನ ಸಭೆಯಲ್ಲಂತೂ ಪ್ರಾತಿನಿಧ್ಯ ಇಲ್ಲ, ಹಾಗಾಗಿ ವಿಧಾನ ಪರಿಷತ್ನಲ್ಲಾದರೂ ನಾಮ ನಿರ್ದೇಶನ ಮಾಡಿ ಪ್ರಾತಿನಿಧ್ಯ ಕೊಡಬೇಕಿತ್ತು. ಮೂಲನಿವಾಸಿ, ಅಲೆಮಾರಿ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಡದಿದ್ದರೆ, ಅವರ ದನಿಗೆ ಅವಕಾಶವಿಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಏನು ಅರ್ಥ” ಎಂದು ಪ್ರಶ್ನಿಸಿದರು. “ಹಾಗೇ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ಗಳು, ಸಿಂಡಿಕೇಟ್ಗಳು ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಆದಿವಾಸಿಗಳನ್ನು, ಅಲೆಮಾರಿಗಳನ್ನು ನಾಮನಿರ್ದೇಶನ ಮಾಡಬೇಕು. ಇದು ಆದಿವಾಸಿ, ಅಲೆಮಾರಿಗಳ ಸಮಸ್ಯೆಯಲ್ಲ. ನ್ಯಾಯ ಸಿಗುವಂತೆ ಮಾಡಬೇಕಾಗಿರುವುದು ಜನಾಂದೋಲನದ, ಎಲ್ಲಾ ಜನಪರ ಸಂಘಟನೆಗಳ ಕರ್ತವ್ಯ” ಎಂದರು.
“ಆದಿವಾಸಿಗಳಿಗೆ ಅರಣ್ಯದ ಮೇಲಿನ ಹಕ್ಕು ಸಹಜ ಹಕ್ಕಾಗಿದೆ. ಮೀಸಲಾತಿಯು ಸಂವಿಧಾನ ನೀಡಿದ ಹಕ್ಕಾಗಿದೆ. ಈ ಎರಡೂ ನಮ್ಮ ಎರಡು ಕಣ್ಣುಗಳು ಇದ್ದ ಹಾಗೆ. ಇವನ್ನು ನಾವು ಹೋರಾಟ ಮಾಡಿಯಾದರೂ ಪಡೆದುಕೊಳ್ಳಬೇಕೆಂಬ ಛಲ ನಮ್ಮ ಆದಿವಾಸಿಗಳಿಗೆ ಬೇಕಾಗಿದೆ. ಸಂಖ್ಯೆ ಇಲ್ಲ ಎಂದು ನೀವು ಹಿಂಜರಿಯಬೇಡಿ, ಆದರೆ ಅಪಾರವಾದ ನೈತಿಕ ಶಕ್ತಿ, ನ್ಯಾಯ ನಿಮ್ಮ ಕಡೆ ಇದೆ. ಇದರ ಮುಂದೆ ಸಂಖ್ಯೆ ನಿಲ್ಲೋಲ್ಲ” ಎಂದರು.
“ನೆನಪಿಟ್ಟುಕೊಳ್ಳೋಣ. ಮೋದಿ ಸರ್ಕಾರ ಅರಣ್ಯ ಕಾಯ್ದೆಯನ್ನೇ ಧ್ವಂಸ ಮಾಡಿ ಕುತ್ತಿಗೆ ಹಿಸುಕಿಹಾಕಿದೆ. ಆರ್ಎಸ್ಎಸ್-ಬಿಜೆಪಿ ಸರ್ಕಾರ ಹೋಗದೇ ನೀವು ಬಯಸುತ್ತಿರುವ ಅರಣ್ಯ ಕಾಯ್ದೆ ಪಡೆದುಕೊಳ್ಳಲು ಸಾಧ್ಯವೇ ಎಂದು ದೇವನೂರ ಮಹಾದೇವ ಪ್ರಶ್ನಿಸಿದರು. ಈ ಪ್ರಶ್ನೆಗೆ ಸುದೀರ್ಘ ಚರ್ಚೆಯಾಯಿತು.