ಮತ್ತೆ ಹುಟ್ಟಿ ಬಂದ ಕಾಳಿದಾಸ. ಹೌದು! ನಿಜವಾಗಿಯೂ.. ನಾವು ಅಲ್ಲಿ ಇಲ್ಲಿ ಓದಿದ ಕಾಳಿದಾಸನ ಕಥೆ ಎಷ್ಟು ನಿಜವೋ ಇಲ್ಲವೋ ಗೊತ್ತಿಲ್ಲ. ಆದರೆ ಇಲ್ಲೊಬ್ಬ ಕಾಳಿದಾಸನಿದ್ದಾನೆ. ಈ ಕಾಳಿದಾಸ ಇರುವುದು ಒರಿಸ್ಸಾದಲ್ಲಿ. ಮೊನ್ನೆ ತಾನೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯಿಂದ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ಪಡೆದವ.
ಹೌದು, ನಾನು ಮಾತನಾಡುತ್ತಿರುವುದು ಒರಿಸ್ಸಾದ ಕೋಸ್ಲಿ ಭಾಷೆಯ ಬರಹಗಾರ ಲೋಕ್ ಕಿ ರತ್ನ ನೆಂದೇ ಪರಿಚಿತನಾಗಿರುವ ಹಲ್ದರ್ ನಾಗ್ ನ ಬಗ್ಗೆ.
ಓದಿದ್ದು ಮೂರನೇ ತರಗತಿ ಮಾತ್ರ, ಬರೆದದ್ದು ಆ ಮೂರು ಎಂಬ ಸಂಖ್ಯೆಯನ್ನೂ ಮೀರಿದಷ್ಟು ಪುಸ್ತಕಗಳು. ೧೦ ನೆ ವಯಸ್ಸಿನಲ್ಲೇ ಅಪ್ಪ ಇನ್ನಿಲ್ಲವಾದ. ಹೆಗಲ ಮೇಲೆ ಇಡೀ ಸಂಸಾರ ನಿಭಾಯಿಸಬೇಕಾದ ಭಾರ. ಇಲ್ಲ, ಹಲ್ದರ್ ನಾಗ್ ಎದೆಗೆಡಲೇ ಇಲ್ಲ. ಒಂದೆಡೆ ಮೂಟೆ ಹೊರುತ್ತಾ, ಇನ್ನೊಂದೆಡೆ ಕಳೆ ಕೀಳುತ್ತಾ, ಆತ ಲೇಖನಿಯನ್ನೂ ಹಿಡಿದೇಬಿಟ್ಟ.
ನೇಗಿಲು ಹಿಡಿದು ಕೂಲಿ ಮಾಡೋ ಹುಡುಗ ಲೇಖನಿ ಹಿಡಿದಿದ್ದಾನಂತೆ ಅಂತ ಊರಿಂದೂರಿಂದ ಜನ ಬಂದು ನಕ್ಕು ಹೋದರು. ಮೊದಲ ಪದ್ಯ ಪತ್ರಿಕೆಗೆ ಕಳಿಸಿದಾಗ ಆತನಿಗೆ ೪೦ ವರ್ಷ. ‘ಧೋದೋ ಭರ್ಗಚ್ಚ್’ ಎಂಬ ಕವಿತೆ ಪ್ರಕಟವಾಗಿದ್ದೇ ತಡ ಹಲ್ದರ್ ಕೊಸ್ಲಿ ಭಾಷೆಯ ಮ್ಯಾಜಿಕ್ ಆಗಿ ಹೋದ. ಏನೂ ಕಲಿಯದ ಹುಡುಗ ಕಳೆ ಕಿತ್ತು, ದನ ಕಾದ ಹುಡುಗ, ಬದುಕು ಸಾಗಿಸುವುದು ಹೇಗಪ್ಪಾ ಎನ್ನುತ್ತಿದ್ದ ಹುಡುಗ ೪೦ ನೆ ವಯಸ್ಸಿನಲ್ಲಿ ಕವನ ಬರೆದ ಎಂದರೆ..!!
ಹಲ್ದರ್ ಬರೀ ಬರೆಯಲಿಲ್ಲ. ಬರದೇ ಬರೆದ.. ತನ್ನೊಳಗಿದ್ದ ಹಕ್ಕಿ ಸಾಲು ಹೊರಗೆ ಹಾರುತ್ತಿದೆಯೇನೋ ಎಂಬಂತೆ ಬರೆದ. ಹಗಲಿರುಳೂ ಬರೆದ. ೨೬ ವರ್ಷದಲ್ಲಿ ಆತ ತುಳಸೀದಾಸರ ವ್ಯಕ್ತಿ ಚರಿತೆ ಸೇರಿದಂತೆ ೧೧ ಪುಸ್ತಕ ಬರೆದು ಹಾಕಿದ.
ಇವರ ಕವಿತೆ ಎಂದರೆ ಸಾಕು ಬರೀ ಓದಲು ಮಾತ್ರವಲ್ಲ, ಹಲ್ದರ್ ನಿಂದಲೇ ಓದಿಸಿ ಕೇಳಲು ಜನ ಮನೆಗೆ ಮುತ್ತಿಕ್ಕುತ್ತಾರೆ. ಈತನ ಕವಿತೆಯನ್ನು ಅನುವಾದಿಸುವ ಯುವಕರ ದಂಡೇ ಇದೆ.
ಹಾಗಾಗಿಯೇ ಈತ ನೇರವಾಗಿ ನಡೆದದ್ದು ರಾಷ್ಟ್ರಪತಿ ಭವನಕ್ಕೆ. ದೇಶದ ಹೆಮ್ಮೆಯ ಗೌರವವಾದ ಪದ್ಮಶ್ರೀ ಯನ್ನು ರಾಷ್ಟ್ರಪತಿ ಈತನ ಕೊರಳಿಗೆ ತೊಡಿಸಿದರು.
ಕಳೆ ಕೀಳುತ್ತಿದ್ದ, ದನ ಕಾಯುತ್ತಿದ್ದ ಹುಡುಗನ ಬಗ್ಗೆ ಈಗ ದೇಶದ ಹಲವು ವಿಶ್ವವಿದ್ಯಾಲಯಗಳು ಪ್ರೌಢ ಪ್ರಬಂಧಗಳನ್ನು ಮಂಡಿಸಿವೆ. ಇಲ್ಲಿಯವರೆಗೂ ಈತ ೫ ಪಿ ಎಚ್ ಡಿ ಅಧ್ಯಯನದ ಕೇಂದ್ರ. ಹಲ್ದರ್ ಗೆ ಇನ್ನೂ ಒಂದು ಕನಸಿದೆ. ತಾನು ಹಗಲಿರುಳೂ ಉಸಿರಾಡಿದ, ತನಗೆ ನಾಲಿಗೆ ನೀಡಿದ, ಹಲ್ದರ್ ಎಂಬುವವನೊಬ್ಬ ಇದ್ದಾನೆ ಎನ್ನುವುದನ್ನು ಜಗತ್ತಿಗೆ ಗೊತ್ತು ಮಾಡಿದ ಕೋಸ್ಲಿ ಭಾಷೆಗೆ ಸಂವಿಧಾನದ ಮನ್ನಣೆ ಸಿಗಬೇಕು ಎನ್ನುವುದು..
ಕೋಸ್ಲಿ ಕನಸು ಈಡೇರಲಿ..