ಆತ್ಮಹತ್ಯೆಗಳು ಮತ್ತು ಭಾರತದ ಕೃಷಿ ಸಂಕಷ್ಟ- ಎ.ಆರ್.ವಾಸವಿ [ಅನುವಾದ: ಎಚ್.ಡಿ.ಪ್ರಶಾಂತ್]

A.R.Vasavi

ಮೂಲ: ಎ.ಆರ್.ವಾಸವಿ
ಅನುವಾದ: ಎಚ್.ಡಿ.ಪ್ರಶಾಂತ್

ಇಸವಿ 1998 ಮತ್ತು 2000ರ ನಡುವೆ ‘ರೈತರ ಆತ್ಮಹತ್ಯೆ’ಯ ಸುದ್ದಿ ಕೆಲವು ದಿನಪತ್ರಿಕೆ ಮತ್ತು ದೂರದರ್ಶನ ವಾಹಿನಿಗಳ ಮೂಲಕ ನಿಧಾನವಾಗಿ ಹರಡಲಾರಂಭಿಸಿತು. 2004ರ ವೇಳೆಗೆ ಈ ಆತ್ಮಹತ್ಯೆಗಳು ಭಾರತದ ಕೃಷಿ ಬಿಕ್ಕಟ್ಟಿನ ಒಂದು ಸೂಚಕವಾಗಿ, ವ್ಯಾಪಕ ಚರ್ಚೆ ಮತ್ತು ಬರಹಗಳಿಗೆ ಕಾರಣವಾಯಿತು. 2005-2006 ನಡುವೆ ಮಹಾರಾಷ್ಟ್ರದಲ್ಲಿ ಈ ಆತ್ಮಹತ್ಯೆಗಳು ತೀವ್ರಗತಿಯನ್ನು ಪಡೆದು, ಸ್ವತಃ ಪ್ರಧಾನಮಂತ್ರಿಗಳು ಆ ಪ್ರದೇಶಕ್ಕೆ ಭೇಟಿ ನೀಡಿ ‘ಹಣಕಾಸು ನೆರವು’ ಘೋಷಿಸುವುದು ಅನಿವಾರ್ಯವಾಯಿತು. ಆ ಸಮಯದಲ್ಲಿ ರೈತರ ಆತ್ಮಹತ್ಯೆ ಸ್ವರೂಪವು ಇನ್ನೊಂದು ಆಯಾಮವನ್ನು ಪಡೆದುಕೊಂಡಿತು. ಮೈಸೂರಿನಲ್ಲಿ ನಾಲ್ವರು ಕೃಷಿಕರು ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದರು. ಅಲ್ಲದೆ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಅನೇಕರು ಸರಕಾರವನ್ನು ಉದ್ದೇಶಿಸಿ ಆತ್ಮಹತ್ಯಾ ಪತ್ರ ಬರೆದಿಟ್ಟರು. *1 ಹತಾಶೆಯ ವ್ಯಕ್ತಿಗತ ಕೃತ್ಯಗಳಾದ ಆತ್ಮಹತ್ಯೆಗಳು ಮೌನವಾಗಿ ಉಳಿಯುವ ಸ್ಥಿತಿಯಿಂದ ಹೊರಬಂದು, ಒಂದು ತೆರನ ರಾಜಕೀಯ ಕೃತ್ಯಗಳಾಗುವ ಮೂಲಕ ತಮ್ಮ ದಯನೀಯ ಪರಿಸ್ಥಿತಿಯನ್ನು ಕಾಣುವಂತೆ ಮಾಡುವುದು ಮತ್ತು ಪ್ರತಿಭಟಿಸುವುದು ಈ ಹತಾಶ ರೈತರ ಉದ್ದೇಶವಾಗಿತ್ತು.

ರೈತರ ಆತ್ಮಹತ್ಯೆಗಳು *2 ಮೇಲಿಂದ ಮೇಲೆ ನಡೆಯುತ್ತಿರುವ ಮತ್ತು ವ್ಯಾಪಿಸಿ ಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನ ಈ ಕೃಷಿ ಸಂಕಟ ಪರಿಸ್ಥಿತಿಯನ್ನು ‘ಆತ್ಮಹತ್ಯೆಗಳ ಸಾಂಕ್ರಾಮಿಕತೆ’(epidemice) ಎಂದು ಗುರುತಿಸುವುದೇನೋ ಬಹಳ ಸುಲಭ. ಆದರೂ ಈ ಆತ್ಮಹತ್ಯೆಗಳನ್ನು ‘ಸಾಂಕ್ರಾಮಿಕ’ ಎಂದು ಉಪೇಕ್ಷಿಸುವುದು ಎಂದರೆ, ಇಂತಹ ಘಟನೆಗಳನ್ನು ತಟಸ್ಥಗೊಳಿಸುವುದು ಎಂದರೆ ಬಹುತೇಕ ಸರಕಾರಗಳು ಹೆಚ್ಚಿನ ಕಾನೂನು ನಿರ್ಮಾಪಕರು ಮತ್ತು ಮಾಧ್ಯಮಗಳು ಮಾಡುತ್ತಿರುವಂತೆ ಆತ್ಮಹತ್ಯೆಗಳು ನಡೆದೇ ಇಲ್ಲ ಎಂದು ತಳ್ಳಿಹಾಕುವುದು ಅಷ್ಟೆ. ಸರಕಾರ ನೇಮಿಸಿದ ಹೆಚ್ಚಿನ ಸಮಿತಿಗಳು ಮಾಡಿರುವ ತಳ್ಳಿಹಾಕುವಂತಹ ಸರಳೀಕೃತ ಸಂಗತಿಗಳ ಆಚೆಗೆ ಹೋಗಬೇಕಾದರೆ, ಇಂತಹ ಪ್ರತಿಕ್ರಿಯೆಗೆ ಕಾರಣವಾಗಿರುವ ಸಮಸ್ಯೆಗಳು ವ್ಯಾಪಕವಾಗಿವೆ ಮತ್ತು ಅವು ಬಹುದೊಡ್ಡ ಪ್ರಮಾಣದ ಗ್ರಾಮೀಣ ಜನತೆಯನ್ನು ಬಾಧಿಸುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಜೊತೆಗೆ ರೈತರು ಮಾಡಿಕೊಳ್ಳುತ್ತಿರುವ ಆತ್ಮಹತ್ಯೆಗಳ ಘಟನೆಗಳನ್ನು ‘ಸಂಕಷ್ಟ ಪರಿಸ್ಥಿತಿಯೊಂದರ ಸೂಚಕ’ ಎಂದು ಗುರುತಿಸುವುದು ಅನಿವಾರ್ಯವಾಗಬೇಕು. *3 ಈ ಆತ್ಮಹತ್ಯೆಗಳನ್ನು ವಿಸ್ತೃತ ಕ್ಷೇತ್ರದಲ್ಲಿ ಸಾಂದರ್ಭೀಕರಿಸುತ್ತಾ ನಾವು ಈ ಆತ್ಮಹತ್ಯೆಗಳ ಪ್ರವಾಹವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದೂ ಅಗತ್ಯವಾಗುತ್ತದೆ. ಈ ಪ್ರಕರಣಗಳನ್ನು ರಾಜಕೀಯ ಲೋಪಗಳ ದೃಷ್ಟಿಯಿಂದಲೂ ಪರಿಶೀಲಿಸಬೇಕಾಗುತ್ತದೆ(ಹಡ್ಸನ್, 2002:26).

ಆತ್ಮಹತ್ಯೆಗಳನ್ನು ಕುರಿತ ಅನೇಕ ಅಧ್ಯಯನಗಳು ಮತ್ತು ಸರ್ಕಾರೇತರ ವರದಿಗಳು, ಇಂಥ ಸಂಕಷ್ಟ ಪರಿಸ್ಥಿತಿ ತಲೆದೋರಲು ಕಾರಣವಾದ ಬೃಹತ್ ಮತ್ತು ವಿಸ್ತೃತ ಅಂಶಗಳನ್ನು ಗುರುತಿಸಿವೆ. ಹೀಗೆ ಗುರುತಿಸಿದವುಗಳ ಪೈಕಿ ಕೆಲವು ಮುಖ್ಯ ರಾಚನಿಕ ಅಂಶಗಳೆಂದರೆ ಭಾರತೀಯ ಕೃಷಿಯನ್ನು ಜಾಗತಿಕ ಮಾರುಕಟ್ಟೆಗೆ ಜೋಡಿಸಿದ್ದೂ ಸೇರಿದಂತೆ, ನವ ಉದಾರವಾದಿ ಆರ್ಥಿಕ ಕಾರ್ಯನೀತಿಗಳ ಪರಿಣಾಮ(ಶಿವ ಮತ್ತು ಜಾಫ್ರಿ, 1998; ಪಟ್ನಾಯಕ್, 2004; 2006), ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು(ವ್ಯಾಸ್, 2004; ಮೊಹಂತಿ ಮತ್ತು ಶ್ರಾಫ್, 2004), ಸಾಲ ಲಭ್ಯತೆಯ ಅಭಾವ, ಗ್ರಾಮೀಣ ಬೆಳವಣಿಗೆಯಲ್ಲಿ ಇಳಿಗತಿ ಸೇರಿದಂತೆ, ಸಾಕಷ್ಟು ಸಾಂಸ್ಥಿಕ ಬೆಂಬಲ ಇಲ್ಲದಿರುವುದು(ದೇವ್, 2004; ರಾವ್ ಮತ್ತು ಗೋಪಾಲಪ್ಪ, 2004; ಘೋಷ್, 2004), ವೇತನದಲ್ಲಿ ಇಳಿಕೆ, ಹೆಚ್ಚುತ್ತಿರುವ ಸಾಲ ಮತ್ತು ನಿರುದ್ಯೋಗ (ಪಟ್ನಾಯಕ್, 2004; ದೇವ್, 2004; ಶರ್ಮಾ, 2004), ಪದೇ ಪದೇ ಆಗುವ ಉತ್ಪಾದನಾ ನಷ್ಟ, ಆರ್ಥಿಕ, ಸಾಮಾಜಿಕ ಮತ್ತು ಜೀವಿಪರಿಸರದ ತ್ರಿವಿಧ ಬಿಕ್ಕಟ್ಟಿನ ಪರಿಣಾಮಗಳು(ವಾಸವಿ, 1999) ಎಲ್ಲವನ್ನು ಕಾರಣಗಳಾಗಿ ಗುರುತಿಸಲಾಗಿದೆ. ಮೇಲೆ ಕಾಣಿಸಿದ ವರದಿಗಳು ಮತ್ತು ಅಧ್ಯಯನಗಳೆಲ್ಲವೂ ವ್ಯಾಪಕ ಶ್ರೇಣಿಯ ವಿಷಯಗಳನ್ನು ಗುರುತಿಸಿವೆಯಾದರೆ, ಸದರಿ ಬಿಕ್ಕಟ್ಟಿಗೆ ಸಮಾಜಶಾಸ್ತ್ರೀಯ ವಿವರಣೆಯೊಂದನ್ನು ಒದಗಿಸಲು ಈ ಪ್ರಬಂಧದಲ್ಲಿ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯಗಳ(ಈ ರಾಜ್ಯಗಳಲ್ಲಿ 1998 ಮತ್ತು 2006 ರ ಅವಧಿಯ ನಡುವೆ ಹೆಚ್ಚಿನ ಆತ್ಮಹತ್ಯೆಗಳು ಸಂಭವಿಸಿದವು) ರೈತ ಆತ್ಮಹತ್ಯೆಗಳ ವಿವರ ಒದಗಿಸುವ ವರದಿಗಳು ಮತ್ತು ಅಧ್ಯಯನಗಳನ್ನು ಆಧಾರವಾಗಿರಿಸಿಕೊಂಡಿದ್ದೇನೆ. *4 ಆತ್ಮಹತ್ಯಾ ಸಂತ್ರಸ್ತರ ಬದುಕಿನಿಂದ ವಿವರಗಳನ್ನು ಚಿತ್ರಿಸುವ ಮೂಲಕ ಇಂತಹ ಸಂಕಷ್ಟದ ಪರಿಸ್ಥಿತಿ ನಿರ್ಮಾಣಗೊಳ್ಳಲು ಕಾರಣವಾದ ಪರಿಸ್ಥಿತಿಗಳು ಮತ್ತು ಅಂಶಗಳನ್ನು ನಾನು ಪುನಾರಚಿಸುತ್ತೇನೆ ಮತ್ತು ಸದ್ಯದ ರಾಷ್ಟ್ರದ ನವ ಉದಾರೀಕೃತ ಸಂದರ್ಭದಲ್ಲಿ ಕೃಷಿಕರ ಸಮಕಾಲೀನ ಕಷ್ಟಕರ ಪರಿಸ್ಥಿತಿಗಳನ್ನು *5 ಸಾಂದರ್ಭೀಕರಿಸುತ್ತೇನೆ. ರೈತ ಆತ್ಮಹತ್ಯೆಗಳು ಹೊಸದಾಗಿ ಕಂಡುಕೊಳ್ಳಲಾದ ಸಾಂಸ್ಕೃತಿಕ ಸಿಂಧುತ್ವವನ್ನು ಪಡೆದಿರುವಂತೆಯೇ-ಭಾರತೀಯ ಇತಿಹಾಸದಲ್ಲಿ ಇದುವರೆಗೆ ದಾಖಲಾಗಿಲ್ಲ. *6 ರೈತರ ಆತ್ಮಹತ್ಯೆ ತಮ್ಮ ಸ್ವಂತದ ದಯನೀಯ ಸ್ಥಿತಿಯ ಬಗ್ಗೆ ಸೂಚನೆ ನೀಡುವುದಲ್ಲದೇ ಕೃಷಿಯ ಪರಿಸ್ಥಿತಿ ಮತ್ತು ರೈತರ ಬದಲಾಗುತ್ತಿರುವ ಜೀವನದ ಬಗ್ಗೆ ತಿಳಿಸುತ್ತವೆ.

ಸಂತ್ರಸ್ತರ ಸ್ವರೂಪ
ಐದು ರಾಜ್ಯಗಳ ಎಲ್ಲಾ ವರದಿಗಳು ಸೂಚಿಸುವ ಪ್ರಕಾರ, ಸದರಿ ಬಿಕ್ಕಟ್ಟಿನ ಪರಿಸ್ಥಿತಿ ತಲೆದೋರಲು ಕಾರಣವೆಂದು ಗುರುತಿಸಲಾದ ಹೆಚ್ಚಿನ ಆರ್ಥಿಕ ಕಾರಣಗಳಲ್ಲಿ, ಬಹುತೇಕ ಸಂತ್ರಸ್ತರು ವಾಣಿಜ್ಯ ಕೃಷಿ ನಡೆಸುತ್ತಿದ್ದವರು. *7 ಹಾಗೂ ವಾಣಿಜ್ಯ ಕೃಷಿಗೆ ಸಂಬಂಧಿಸಿದ ನಾನಾ ಹೊಸ ಅಪಾಯಗಳನ್ನು(ಉತ್ಪಾದನೆ, ಸಾಲ, ಮಾರಾಟ ವ್ಯವಸ್ಥೆ, ತಿಳುವಳಿಕೆ ಮತ್ತು ಹವಾಗುಣ) ಮೈಮೇಲೆ ಎಳೆದುಕೊಂಡಿದ್ದವರು. ದೇಶದ ಕೃಷಿಕರಲ್ಲಿ ಅತಿಸಣ್ಣ ಕೃಷಿಕರದ್ದೇ(ಒಂದು ಹೆಕ್ಟೇರ್‍ಗಿಂತ ಕಡಿಮೆ ಜಮೀನು ಹೊಂದಿರುವವರು) ದೊಡ್ಡ ಪಾಲು. *8 ‘ಹಸಿರುಕ್ರಾಂತಿ ಕೃಷಿ’ಗೆ ಇಂತಹ ಕೃಷಿಕರ ಪ್ರವೇಶ ಮತ್ತು ಅದರ ಅನುಸರಣೆಯೇ ಅವರನ್ನು ನಾನಾ ಅಪಾಯದ ಪರಿಧಿಯೊಳಗೆ ತಂದುಬಿಡುತ್ತದೆ. ಈ ವಾಣಿಜ್ಯ ಬೆಳೆಗಳನ್ನು ಬೆಳೆಯುವಲ್ಲಿ ಹೆಚ್ಚಿನ ಸಂತ್ರಸ್ತರಿಗೆ ಹಸಿರುಕ್ರಾಂತಿಯ ಆಟದಲ್ಲಿ ಬಲಿಷ್ಠ ಪಾತ್ರಧಾರಿಗಳಾಗಲು ಅಗತ್ಯವಿರುವ ಆರ್ಥಿಕ ಮತ್ತು ಸಾಮಾಜಿಕ ಸಂಪನ್ಮೂಲಗಳ ಕೊರತೆಯಿತ್ತು. ಎಲ್ಲಾ ವರದಿಗಳು ಸೂಚಿಸುವ ಪ್ರಕಾರ ಬೇರೆ ಬೇರೆ ರಾಜ್ಯಗಳ ಹೆಚ್ಚಿನ ಸಂತ್ರಸ್ತರು ಅತಿಸಣ್ಣ ರೈತರಾಗಿದ್ದರು *9 ಮತ್ತು ಸಣ್ಣ(1ರಿಂದ 2 ಹೆಕ್ಟೇರ್) ವ್ಯವಸಾಯಗಾರರಾಗಿದ್ದರು. ಬಳಿಕದ ಸ್ಥಾನ ಅರೆ ಮಧ್ಯಮ(2ರಿಂದ 4 ಹೆಕ್ಟೇರ್) ಕೃಷಿಕರದ್ದು. ಬಹಳ ದೊಡ್ಡ ಪ್ರಮಾಣದ ಸಂತ್ರಸ್ತರು ಹಿಂದುಳಿದ ಜಾತಿಗಳಿಗೆ *10 ಸೇರಿದವರು ಅಥವಾ ಕೆಳ ಶ್ರೇಣಿಯ ಜಾತಿ ಗುಂಪುಗಳಿಗೆ ಸೇರಿದವರು ಎಂಬ ಅಂಶ ಇಂತಹ ‘ಆರ್ಥಿಕ ಉಪೇಕ್ಷಿತ ಸ್ಥಿತಿ’ಯನ್ನು ಮುಪ್ಪುರಿಗೊಳಿಸುತ್ತದೆ. ಆಂಧ್ರದ ವಾರಂಗಲ್‍ನಲ್ಲಿ ಮೂರನೇ ಎರಡರಷ್ಟು ಸಂತ್ರಸ್ತರು ಯಾದವ, ಚಕಾಲಿ, ತೆಲಗ, ವಾಡ್ಲಾ, ಮಂಗಲಿ, ಪದ್ಮಶಾಲಿ ಮತ್ತು ಲಂಬಾಡ ಇನ್ನೂ ಮುಂತಾದ ಹಿಂದುಳಿದ ಜಾತಿ ಗುಂಪುಗಳಿಗೆ ಸೇರಿದವರು(ಸಿಟಿಝನ್ಸ್ ರಿಪೋರ್ಟ್, 1998). ಅನಂತಪುರ ಜಿಲ್ಲೆಯ ಹೆಚ್ಚಿನ ಸಂತ್ರಸ್ತರು ಸಾಲೆ, ಬೆಸ್ತ, ಉಪ್ಪಾರ ಮೊದಲಾದ ಕೃಷಿಯೇತರ ಜಾತಿಗಳಿಗೆ ಸೇರಿದವರು. ಆದರೆ ರೆಡ್ಡಿ, ಬಲಿಗ ಮೊದಲಾದ ಸಾಂಪ್ರದಾಯಿಕ ಕೃಷಿಕ ಜಾತಿಗಳಿಗೆ ಸೇರಿದ ಕೆಲವರೂ ಇದ್ದರು. ಅಮರಾವತಿ ಮತ್ತು ಯವತ್ಮಾಲ್ ಜಿಲ್ಲೆಗಳಲ್ಲಿ ಹೆಚ್ಚಿನವರು ತೆಲಿ, ಬೆಲ್ಡಾರ ಮತ್ತು ಬಂಜಾರಾ ಅಥವಾ ಮಹಾರ್, ನವಬುದ್ಧ, ಮಾತಂಗ, ಚಮಾರ ಮತ್ತು ಧಂಗರ್‍ದಂತಹ ಜಾತಿಗಳಿಗೆ ಸೇರಿದ ಮಧ್ಯಮ ಅಥವಾ ‘ಕೃಷಿಕರಲ್ಲದ’ ಜಾತಿಗಳವರು(ಮೊಹಂತಿ, 2005). ವಿದರ್ಭ ಮತ್ತು ಮರಾಠವಾಡ ಪ್ರದೇಶದ ಬಗ್ಗೆ ಟಿ.ಐ.ಎಸ್.ಎಸ್(T.I.S.S) ವರದಿ(2005) ಗುರುತಿಸುವ ಪ್ರಕಾರ, ಎಲ್ಲ ಬಗೆಯ ಜಾತಿ ಗುಂಪುಗಳ ಉದ್ದಗಲಕ್ಕೂ ಇದು ಹರಡಿಕೊಂಡಿದೆ. ಆದರೆ ಇದರಲ್ಲಿ ‘ಇತರ ಹಿಂದುಳಿದ ಜಾತಿಗಳಿಗೆ’ *11 (ಒಬಿಸಿ) ಶೇಕಡ 27 ಮತ್ತು ಇತರ ‘ಪರಿಶಿಷ್ಟಯೇತರ’ ಜಾತಿಗಳಿಗೆ ಶೇಕಡ 36 ಹೆಚ್ಚಾಗಿ ಸೇರಿರುತ್ತಾರೆ.

ಪಾರಂಪರಿಕವಾಗಿ ‘ಕೃಷಿಯಲ್ಲಿ ತೊಡಗಿಕೊಂಡಿರದ’ ಜಾತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ರೈತ ಆತ್ಮಹತ್ಯಾ ಪ್ರಕರಣಗಳಲ್ಲಿ ಪ್ರತಿನಿಧಿತವಾಗಿರುವುದನ್ನು ಗಮನಿಸಬೇಕು. ‘ಕೃಷಿಯಲ್ಲಿ ತೊಡಗಿಕೊಂಡಿರದ’ ಅಂತಹ ಸದಸ್ಯರ ಗುಂಪುಗಳು ಕೃಷಿಯಲ್ಲಿ ನೆಲೆಯೂರಲು ಯತ್ನಿಸುತ್ತಿರುವುದನ್ನು ಈ ಪ್ರಕರಣಗಳು ಬೆಟ್ಟುಮಾಡುತ್ತವೆ. ಕೃಷಿಯನ್ನು ಮಾರುಕಟ್ಟೆ ಆರ್ಥಿಕತೆಗೆ ಜೋಡಿಸಿರುವುದು, ಅವರ ಪಾರಂಪರಿಕ ವೃತ್ತಿಯನ್ನು ಕೈಗಾರಿಕಾ ಉತ್ಪನ್ನಗಳು ಸ್ಥಾನ ಪಲ್ಲಟಗೊಳಿಸಿರುವುದರಿಂದ ನಷ್ಟ ಉಂಟಾಗಿ ಇಂತಹ ಜೀವನೋಪಾಯ ಕಾರ್ಯತಂತ್ರಗಳು ಅವರ ಪಾಲಿಗೆ ಅನಿವಾರ್ಯವಾಗಿಬಿಟ್ಟಿವೆ. ನಿರ್ದಿಷ್ಟವಾಗಿ ಕುಂಬಾರರು, ಗಾಲಿ ತಯಾರಕರು, ಕಮ್ಮಾರರು, ಬುಟ್ಟಿ ಹೆಣೆಯುವವರು ಮತ್ತಿತರರಂತಹ ಕುಶಲಕರ್ಮಿ ಗುಂಪುಗಳು, ಸೇವೆ ಮತ್ತು ಶಿಲ್ಪಕಾರ ಸದಸ್ಯರು ಇಂತಹ ಪ್ರವೃತ್ತಿಗಳಿಂದ ತೊಂದರೆಗೊಳಗಾಗಿದ್ದಾರೆ. ತೀರಾ ಇತ್ತೀಚಿನವರೆಗೆ ಅಂತಹ ಗುಂಪುಗಳು ಕೃಷಿ ಕೂಲಿಕಾರರಾಗುವ ಅಥವಾ ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುವ ಯತ್ನಕ್ಕೆ ಕೈ ಹಾಕದೆ ಬೇರೆ ಮಾರ್ಗವಿಲ್ಲವಾಯಿತು. ಈ ಕಸುಬುದಾರ ಜಾತಿ ಗುಂಪುಗಳ ಸದಸ್ಯರು ಕೃಷಿಯಿಂದ ಸಮಸ್ಯೆಗಳನ್ನು ಎದುರಿಸುವಂತಾಯಿತು. ವಿಪರೀತ ನಷ್ಟ ಅನುಭವಿಸದೆ ಅವರು ಕೃಷಿಯಲ್ಲಿ ತೊಡಗಿಕೊಳ್ಳುವುದು ಅಸಾಧ್ಯವಾಯಿತು. ಹೆಚ್ಚು ಹೆಚ್ಚು ದಿವಾಳಿಯಾಗುವುದು ಮತ್ತು ಕೃಷಿಯು ಆರ್ಥಿಕವಾಗಿ ಪ್ರತಿಫಲದಾಯಕ ವಾಗಿಲ್ಲದಿರುವ ಹಿನ್ನೆಲೆಯಲ್ಲಿ ಕೃಷಿಗೆ ವಿದಾಯ ಹೇಳುವ ಪ್ರಕ್ರಿಯೆಯಿಂದಾಗಿ, ಸಣ್ಣ ಮತ್ತು ಮಧ್ಯಮ ಕೃಷಿಕರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿರುವುದನ್ನು ಅನೇಕ ಅಧ್ಯಯನಗಳು ತೋರಿಸಿಕೊಟ್ಟಿವೆ. *12 ಆದರೂ ಈ ಆತ್ಮಹತ್ಯೆಯ ಪ್ರಕರಣಗಳು, ಸಾಮಾಜಿಕ ತಳಶ್ರೇಣಿಯ ಜಾತಿ ಪದರದ ಕುಟುಂಬಗಳು ತಾವು ಬಡತನಕ್ಕೆ ಜಾರುವ ಪರಿಸ್ಥಿತಿಗಳನ್ನು ತಡೆ ಹಿಡಿಯಲು ಅಥವಾ ಮೀರಿ ನಿಲ್ಲಲು ಯತ್ನಿಸುತ್ತಿರುವ, ಅಥವಾ ತಮ್ಮ ಆದಾಯ ಮತ್ತು ಜೀವನ ಮಟ್ಟವನ್ನು ಉತ್ತಮಪಡಿಸಲು ಯತ್ನಿಸುತ್ತಿರುವ ರೀತಿಗಳನ್ನು ಒತ್ತಿ ಹೇಳುತ್ತವೆ. ಜೀವನೋಪಾಯಗಳನ್ನು ಉಳಿಸಿಕೊಳ್ಳುವ ಅಥವಾ ಉತ್ತಮಪಡಿಸುವ ತಮ್ಮ ಯತ್ನಗಳಲ್ಲಿ ಅನೇಕ ಅತಿಸಣ್ಣ ಕೃಷಿಕರು ಪ್ರಧಾನವಾಗಿ ವಾಣಿಜ್ಯೇತರ ಕೃಷಿಯಿಂದ ದೂರ ಸರಿಯಲು ಯತ್ನಿಸಿ, ತಮ್ಮ ಉತ್ಪನ್ನಗಳ ಮಾರಾಟವನ್ನು ಪ್ರಧಾನವಾಗಿ ಗಮನದಲ್ಲಿರಿಸಿಕೊಂಡು ವಾಣಿಜ್ಯ ಉತ್ಪಾದನೆಯ ಕ್ಷೇತ್ರವನ್ನು ಪ್ರವೇಶಿಸುತ್ತಾರೆ.

ಕೃಷಿಕರಲ್ಲಿನ ವ್ಯಾಪಕ ಮತ್ತು ವಿಪರೀತ ಋಣಭಾರವೇ ಅವರನ್ನು ಬಲಿಪಶುಗಳಾಗಿಸಿ ಆತ್ಮಹತ್ಯೆಯ ದಾರಿ ಹಿಡಿಯುವಂತಹ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಲು ಪ್ರಧಾನ ಕಾರಣವೆಂಬುದು ಹೆಚ್ಚಿನ ಕುಟುಂಬಗಳ ಅಭಿಪ್ರಾಯ. *13 ಹೀಗೆಂದು ಎಲ್ಲ ವರದಿಗಳಲ್ಲಿ ಹೇಳಲಾಗಿದೆಯಾದರೂ ಅಂತಹ ಋಣಭಾರ ಮತ್ತು ಅದರ ಪರಿಣಾಮಗಳ ಸಾಮಾಜಿಕ ನೆಲೆಗಳನ್ನು ಅವು ಗುರುತಿಸಿಲ್ಲ. ಕೃಷಿ-ಉದ್ಯಮ ಏಜನ್ಸಿಗಳು(ತಕ್ಷಣ ಹಣ ಪಾವತಿಸ ಬೇಕಾಗಿಲ್ಲ ಎಂಬ ನೆಲೆಯಲ್ಲಿ ಇವರು ಕೃಷಿಕರಿಗೆ ನೆರವು ಒದಗಿಸುತ್ತಾರೆ, ಸಾಲವನ್ನೂ ಒದಗಿಸುತ್ತಾರೆ) ಮತ್ತು ಸಂಬಂಧಿಕರು ಹಾಗೂ ವೇತನ ಪಡೆಯುವ ಪಟ್ಟಣದ ಗೆಳೆಯರು ಸೇರಿದಂತೆ ಹೊಸ ಸಾಲ ನೀಡುವವರು ಅಸಾಂಸ್ಥಿಕ ಸಾಲದ ಪ್ರಧಾನ ಮೂಲಗಳಾಗಿರುವುದರಿಂದ *14 ಈ ಋಣಭಾರವು ಕೃಷಿಕರ ಮೇಲೆ ದುಪ್ಪಟ್ಟು ಹೊರೆಯನ್ನು ಹೊರಿಸುತ್ತದೆ. ಯಾಕೆಂದರೆ ಅಲ್ಲಿ ಬಡ್ಡಿ ದರಗಳು ವಿಪರೀತವಿರುತ್ತವೆ (ವಾರ್ಷಿಕ ಶೇಕಡ 24ರಿಂದ ಶೇಕಡ 45). ಎರಡನೆಯದಾಗಿ, ಸಾಲಗಳನ್ನು ಅವರ ವೈಯಕ್ತಿಕ ಮತ್ತು ಸಾಮಾಜಿಕ ಜಾಲಗಳಿಗೆ ಜೋಡಿಸಲಾಗಿರುತ್ತದೆ. ಸಾಲ ಮರುಪಾವತಿ ಮಾಡಲು ಅಸಮರ್ಥರಾದರೆ ತುಚ್ಛೀಕಾರಕ್ಕೆ, ಬಹಿಷ್ಕಾರಕ್ಕೆ ಈಡಾಗಬೇಕಾಗುತ್ತದೆ ಅಥವಾ ಸಾರ್ವಜನಿಕವಾಗಿ ಅವಮಾನವನ್ನು ಅನುಭವಿಸಬೇಕಾಗುತ್ತದೆ. ಅನೇಕರು ಇಂತಹ ಅವಮಾನ ಅನುಭವಿಸಿದ ಅಥವಾ ತಮ್ಮ ಆಸ್ತಿ ಸೊತ್ತುಗಳನ್ನು ಜಪ್ತಿಯಲ್ಲಿ ಕಳೆದುಕೊಳ್ಳುವ ಬೆದರಿಕೆ ಎದುರಾದಾಗ ಆತ್ಮಹತ್ಯೆ ಮಾಡಿಕೊಂಡರು ಎಂಬ ಸಂಗತಿ ಯನ್ನು ಅನೇಕ ವರದಿಗಳು ಮತ್ತು ಪ್ರಕರಣ ಅಧ್ಯಯನಗಳು ಎತ್ತಿ ತೋರಿಸಿವೆ.

ಕೃಷಿಜ್ಞಾನದಲ್ಲಿ ಗೊಂದಲ
ಸಂಪನ್ಮೂಲ ಮತ್ತು ಸಾಲ ಲಭ್ಯತೆಯ ವಿಷಯದಲ್ಲಿ ನಾನಾ ಅಪಾಯ ಸಾಧ್ಯತೆ, ವಿಶ್ವಾಸಾರ್ಹವಾಗಿಲ್ಲದ ಬಿತ್ತನೆ ಬೀಜಗಳ ಗುಣಮಟ್ಟ ಇತ್ಯಾದಿಗಳ ನಡುವೆ ಅವರಲ್ಲಿ ಕೃಷಿ ತಿಳುವಳಿಕೆಯ ಸಮಸ್ಯೆಯೂ ಇದೆ ಮತ್ತು ತಮ್ಮ ಜಮೀನಿನಲ್ಲಿ ಬೆಳೆಯಲು ಯಾವ ಜ್ಞಾನವನ್ನು ಆಧರಿಸಬೇಕೆಂಬ ವಿಚಾರದಲ್ಲಿ ಗೊಂದಲವೂ ಅವರಲ್ಲಿ ಹೆಚ್ಚುತ್ತಿದೆ. ಸ್ಥಳೀಯ ಕೃಷಿ ಪದ್ಧತಿಗಳು ಮತ್ತು ನಮೂನೆಗಳು ‘ಪರಸ್ಪರ ಹಂಚಿಕೊಂಡ’ ಜ್ಞಾನ ಕಣಜವೊಂದನ್ನು ಬಳಸಿಕೊಳ್ಳುತ್ತವೆ. ಇವುಗಳಲ್ಲಿ ಹೆಚ್ಚಿನವನ್ನು ಕೃಷಿ ವ್ಯವಹಾರಗಳು ಮತ್ತು ಪದ್ಧತಿಗಳ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂರಚನೆಗಳ ಮೂಲಕ ವರ್ಗಾಯಿಸಲಾಗುತ್ತದೆ ಮತ್ತು ಪುನರುತ್ಪತ್ತಿ ಮಾಡಲಾಗುತ್ತದೆ. ಆದಾಗ್ಯೂ ಹಸಿರುಕ್ರಾಂತಿ ಮಾದರಿಯು ಬಳಸುವ ಹೈಬ್ರೀಡ್ ಬೀಜಗಳು ಮತ್ತು ಬಾಹ್ಯ ಒಳಸುರಿಗಳಿಂದ (ಇನ್‍ಪುಟ್) ಹಿಡಿದು ‘ವಂಶವಾಹಿ ರೀತ್ಯಾ ಪರಿವರ್ತಿತ’ (ಜಿ.ಎಮ್) *15 ಬೀಜಗಳ ಬಳಕೆಯ ಹೊಸ ವ್ಯವಸ್ಥೆಯವರೆಗೆ ಹೊಸ ಕೃಷಿ ವ್ಯವಸ್ಥೆಗಳ ಜ್ಞಾನ ಹಾಗೂ ತಜ್ಞತೆಯನ್ನು ಹೇಗೆ ಪಡೆಯಬೇಕು ಎಂಬ ತಿಳುವಳಿಕೆಯ ವಿಷಯಗಳು ಹೆಚ್ಚು ಹೆಚ್ಚು ಗೊಂದಲಕ್ಕೆ ಕಾರಣವಾಗುತ್ತಿವೆ. ಅಂತಹ ಒಂದು ಗೊಂದಲವು ಸ್ಥಳೀಯ ಕೇಂದ್ರೀಕೃತ ಜ್ಞಾನ ವ್ಯವಸ್ಥೆಗಳು ಅಥವಾ ಸ್ಥಳೀಯ ಮತ್ತು ಆಧುನಿಕ ಪದ್ಧತಿಗಳನ್ನು(ಗುಪ್ತ,1999) ಸಂಯೋಗಗೊಳಿಸುವಲ್ಲಿಂದ ಮಾತ್ರ ಮಹತ್ವದ ಪಲ್ಲಟವನ್ನು ಸೂಚಿಸುವುದಲ್ಲಿ, ಹಸಿರುಕ್ರಾಂತಿ ಮಾದರಿಯಿಂದಲೂ ಪಲ್ಲಟಗೊಳ್ಳುತ್ತಿರುವುದನ್ನು ಸೂಚಿಸುತ್ತದೆ. ಹೆಚ್ಚುತ್ತಿರುವ ಕೃಷಿ ವಾಣಿಜ್ಯೀಕರಣದ ಸಂದರ್ಭದಲ್ಲಿ ಕೃಷಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡಿರುವವರಲ್ಲಿನ ಸ್ಪರ್ಧೆಯ ತೀವ್ರತೆ ಮತ್ತು ಸರಕಾರಿ ಕೃಷಿ ವಿಸ್ತರಣಾ ಸೇವೆಯಲ್ಲಿ ಹೆಚ್ಚುತ್ತಿರುವ ಅಂತರವು ಕೃಷಿ ಪದ್ಧತಿಗಳು ಮಾರುಕಟ್ಟೆ ಪ್ರೇರಿತ ಗೀಳನ್ನು ಹೆಚ್ಚು ಹೆಚ್ಚು ಆಧರಿಸುವಂತೆ ಮಾಡಿದೆ. ಇದರ ಪರಿಣಾಮವೇ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಹೊಸ ವಾಣಿಜ್ಯ ವೈವಿಧ್ಯಗಳನ್ನು ಬಳಸಿಕೊಂಡು ಇತರರನ್ನು ಹಿಂದಿಕ್ಕಲು ಕೃಷಿಕರಲ್ಲಿ ನಡೆಯುವ ತೀವ್ರ ಸ್ವರೂಪದ ಸ್ಪರ್ಧೆಗಳು ಹೆಚ್ಚು ಹೆಚ್ಚಾಗಿ ಕೃಷಿ ಕೌಶಲ್ಯ ಕಳೆದುಕೊಳ್ಳಲೂ ದಾರಿ ಮಾಡಿಕೊಡುತ್ತದೆ(ಸ್ಟೋನ್ 2007:84).

ಹೊಸ ಕೃಷಿ ಮಾದರಿಯ ಪ್ರವರ್ಧನೆಯು ಮಾಹಿತಿ, ಜ್ಞಾನ ಮತ್ತು ಕೃಷಿಕರ ತರಬೇತಿಯ ಜೊತೆಗಿನ ವ್ಯವಸ್ಥೆಗೆ ಸಂಬಂಧಿಸಿ ತಾಳೆಯಾಗುವಂತೆ ನಡೆದಿಲ್ಲ. ಎನ್‍ಎಸ್ ಎಸ್‍ಒ(NSSO) ಸಮೀಕ್ಷೆ ಸಂಖ್ಯೆ. 499(2005)ರ ದತ್ತಾಂಶವು, ಗ್ರಾಮೀಣ ಭಾರತದಲ್ಲಿ ಸಾರ್ವಜನಿಕ ಏಜನ್ಸಿಗಳು ಇಲ್ಲದಿರುವುದನ್ನು ಮತ್ತು ಬಹುದೊಡ್ಡ ಸಂಖ್ಯೆಯ ಜನತೆಗೆ ಕೊಡಬೇಕಾದ ಜ್ಞಾನ ಪ್ರಸರಣದ ಅಭಾವವನ್ನು ಸೂಚಿಸುತ್ತದೆ. ಕೇವಲ ಶೇಕಡ 8.4 ಕೃಷಿಕರು ಕೃಷಿ ವಿಜ್ಞಾನ ಕೇಂದ್ರಗಳಿಂದ ಮಾಹಿತಿ ಪಡೆದುಕೊಂಡಿದ್ದರು; ಶೇಕಡ 17 ಮಂದಿ ಇತರ ಕೃಷಿಕರಿಂದ, ಶೇಕಡ 13 ಮಂದಿ ಮಾಹಿತಿ ಒದಗಣೆದಾರರಿಂದ ಮಾಹಿತಿ ಪಡೆದುಕೊಂಡಿದ್ದರು. ಹೊಸ ವಾಣಿಜ್ಯ ಮಾಹಿತಿಗಳಿಗೆ ಸಂಬಂಧಿಸಿದ ಸೂಕ್ತ ಜ್ಞಾನ ಮತ್ತು ಕೌಶಲಗಳನ್ನು ವಿಶೇಷವಾಗಿ ಕೀಟನಾಶಕವನ್ನು ಬಳಸಲು ವ್ಯವಸಾಯಗಾರರಿಗೆ ಸಾಧ್ಯವಾಗದಿರುವುದು ಕೃಷಿಯಲ್ಲಿನ ಅವರ ಸಮಸ್ಯೆಗೆ ಒಂದು ಕಾರಣ ಎಂದು ಹೆಚ್ಚಿನ ವರದಿಗಳು (ಸಿಟಿಝನ್ಸ್ ರಿಪೋರ್ಟ್, 1998; ವಾಸವಿ, 1999; ಮೊಹಂತಿ, 2005) ಉಲ್ಲೇಖಿಸಿವೆ. ಕೀಟನಾಶಕಗಳಿಗೆ ತೆರೆದುಕೊಳ್ಳುತ್ತಿರುವುದರಿಂದ ಆಗುವ ಸಾವನ್ನು ಕುರಿತ ‘ಟಾಕ್ಸಿಕ್ಸ್ ಲಿಂಕ್ಸ್’ ವರದಿಯು (2002), ಕೀಟನಾಶಕಗಳನ್ನು ಪ್ರಯೋಗಿಸುವ ನಾನಾ ಅಸುರಕ್ಷಿತ ವಿಧಾನಗಳು ಮತ್ತು ಕೀಟನಾಶಕ ಗಳ ಪಾತ್ರೆಗಳನ್ನು ಮನೆಯ ಹಾಗೂ ಅಡುಗೆ ಉದ್ದೇಶಗಳಿಗೆ ಬಳಸುವ ವಿಧಾನಗಳು, ಆ ಮೂಲಕ ಕೀಟನಾಶಕ ಸಂಬಂಧಿತ ನಾನಾ ಆರೋಗ್ಯ ಅಪಾಯಗಳು ಮತ್ತು ಸಾವುಗಳಿಗೆ ದಾರಿಯಾಗುವುದನ್ನು ವಿವರಿಸುತ್ತದೆ. ಅಲ್ಲದೆ ಕೀಟನಾಶಕವನ್ನು ಸೂಕ್ತ ಪ್ರಮಾಣದಲ್ಲಿ ಬಳಸುವ ಬಗ್ಗೆ ಸಾಕಷ್ಟು ತಿಳುವಳಿಕೆ ಇಲ್ಲದಿರುವುದು ಋಣಭಾರ ಹೆಚ್ಚಾಗಲು ಪ್ರಧಾನ ಕಾರಣವಾಗಿತ್ತು. ಯಾಕೆಂದರೆ, ಕೃಷಿಕರು ಭಾರೀ ಪ್ರಮಾಣದ ಕೀಟನಾಶಕ ಖರೀದಿಸಿ ತಮ್ಮ ಹೊಲಗಳಿಗೆ ಸಿಂಪಡಣೆ ಮಾಡಿದ್ದರು.

ಸಾರಾಂಶ ರೂಪದಲ್ಲಿ ಹೇಳಬೇಕೆಂದರೆ, ಕೃಷಿಯ ವಾಣಿಜ್ಯೀಕರಣ ಹೆಚ್ಚುತ್ತಿರುವುದು, ಪ್ರಭಾವಿ ಹಸಿರುಕ್ರಾಂತಿ ಮಾದರಿಯನ್ನು ಅನುಸರಿಸುವುದು, ವ್ಯಾಪಕ ಶ್ರೇಣಿಯಅಪಾಯಗಳು ಮತ್ತು ಜ್ಞಾನದಲ್ಲಿನ ಗೊಂದಲ ಇವು ಅಂಚಿನ ಪ್ರದೇಶಗಳು ಮತ್ತು ಅಂಚಿಗೆ ತಳ್ಳಲ್ಪಟ್ಟ ಕೃಷಿಕರ ಮೇಲೆ ಹಸಿರುಕ್ರಾಂತಿಯು ಉಂಟುಮಾಡಿರುವ ಪರಿಣಾಮವನ್ನು ಸೂಚಿಸುತ್ತದೆ. ಈ ಪ್ರಭಾವಿ ಮಾದರಿಯೊಳಗೆ ಉಳಿದುಕೊಳ್ಳಲು ಯತ್ನಿಸುವವರ ಬದುಕಿನಲ್ಲಿ ಹೆಚ್ಚುತ್ತಿರುವ ಋಣಭಾರ, ಮಾರುಕಟ್ಟೆ ವ್ಯವಸ್ಥೆಯ ಬೆಂಬಲದ ಅಭಾವ, ಪ್ರತಿಫಲದಾಯಕವಲ್ಲದ ಜಮೀನು ಮತ್ತು ಕುಟುಂಬದ ಅಗತ್ಯಗಳನ್ನು ಪೂರೈಸುವಲ್ಲಿ ಅಶಕ್ತತೆ ಇವೆಲ್ಲವನ್ನೂ ನೋಡಬಹುದಾಗಿದೆ. ವಿಶೇಷವಾಗಿ ಯಾರಲ್ಲಿ ಸಾಕಷ್ಟು ಬಂಡವಾಳ, ತಿಳುವಳಿಕೆ ಮತ್ತು ಬೆಂಬಲ ಇಲ್ಲವೋ ಇದನ್ನು ತಮ್ಮ ಜೀವನೋಪಾಯ, ಆರ್ಥಿಕ ಚಲನೆ ಮತ್ತು ಸಾಮಾಜಿಕ ಸ್ಥಾನಮಾನ ಉತ್ತಮ ಪಡಿಸಿಕೊಳ್ಳಲು ಇರುವ ಏಕೈಕ ಮಾರ್ಗ ಎಂದು ಯಾರು ಪರಿಗಣಿಸುತ್ತಾರೋ ಅವರ ವಿಷಯದಲ್ಲಿ ಇಂತಹ ಪರಿಸ್ಥಿತಿಯಿದೆ. ಅಪಾಯದ ಜಗತ್ತಿನಲ್ಲಿ ಪ್ರತಿಯೊಬ್ಬ ಕೃಷಿಕನ ಸ್ಥಾನವು ಸಾಮಾಜಿಕ ಸಂದರ್ಭಗಳು, ಒತ್ತಡಗಳು ಮತ್ತು ಆತ/ಆಕೆ ಸಾಲದ ಹೊರೆಗಳೊಂದಿಗೆ ಹೊಂದಿರುವ ಸಂಬಂಧ, ಕೃಷಿಕ ಜಗತ್ತಿನ ಸಾಮಾಜಿಕ ಮತ್ತು ಸಾಂಸ್ಕೃತಿಕ  ಸಂದರ್ಭಗಳು ಮುಂತಾದವು ರೈತರ ಮೇಲೆ ಒತ್ತಡವನ್ನು ಹೇರುತ್ತವೆ.

ಕೃಷಿಯ ವೈಯಕ್ತೀಕರಣ
ಭಾರತೀಯ ಕೃಷಿಕರನ್ನು ಹೆಚ್ಚು ಹೆಚ್ಚಾಗಿ ಮಾರುಕಟ್ಟೆ ಆರ್ಥಿಕತೆಯೊಂದಿಗೆ ಬೆಸೆಯುತ್ತಿರುವುದರಿಂದ ಭಾರತೀಯ ಕೃಷಿಯ ಸಾಂಸ್ಕೃತಿಕ ನೆಲೆಯು ಪುನರ್ ನಿರೂಪಣೆಗೊಳ್ಳುವಂತಾಗಿದೆ. *16 ಭೂಮಿ ಮತ್ತು ಅದರ ಸಂಪನ್ಮೂಲಗಳ ಮೇಲಣ ಹಕ್ಕುಗಳು ಜಾತಿ ಆಧಾರಿತವಾಗಿ ಹಂಚಿಕೆಯಾಗುವುರಿಂದ, ಕೃಷಿ ವ್ಯವಸ್ಥೆಯು ವಿಸ್ತೃತವಾಗಿ ಶ್ರೇಣೀಕೃತವಾದುದು ಎನ್ನುವುದು ಎಲ್ಲರಿಗೂ ಗೊತ್ತಿರುವಂಥದ್ದು ಮತ್ತು ಈಗಾಗಲೇ ಸ್ಥಾಪಿತವಾಗಿರುವಂಥದ್ದು. ಹೀಗಿದ್ದರೂ ಕೃಷಿಯನ್ನು ‘ಕೃಷಿ ಜ್ಞಾನ’ ನಮೂನೆಗಳನ್ನು ಹಂಚಿಕೊಂಡ ಲಯಗಳನ್ನು ಆಧರಿಸಿದ ಒಂದು ರೀತಿಯಲ್ಲಿ ನಿರ್ವಹಿಸಲಾಗುತ್ತಿತ್ತು. ಇದರಿಂದ ಒಂದು ಪ್ರದೇಶಕ್ಕೆ ನಿರ್ದಿಷ್ಟವೆನಿಸುವ ಪದ್ಧತಿಯಲ್ಲಿ ಕೃಷಿಯನ್ನು ಕೈಗೊಳ್ಳಲಾಗುವ ಮತ್ತು ಅನುಸರಿಸುವ ಪದ್ಧತಿಯನ್ನು ನಾವು ನೋಡಬಹುದು. ಇದರಲ್ಲಿ ವರ್ಗ ಮತ್ತು ಜಾತಿ ವ್ಯತ್ಯಾಸಗಳು ಯಾವುದೇ ಇರಲಿ, ಗಾತ್ರ ಮತ್ತು ಹಿಡುವಳಿಯ ವ್ಯತ್ಯಾಸ ಯಾವುದೇ ಇರಲಿ ಎಲ್ಲಾ ಕೃಷಿಕರು ಸ್ಥಳೀಯ ಜೀವಿ ಪರಿಸರ ಪರಿಸ್ಥಿತಿಗಳಿಗೆ ಹೊಂದಿಕೆಯಾಗುವಂತೆ ಕೃಷಿ ಮಾಡುತ್ತಿದ್ದರು. ಅಂತಹ ಕೃಷಿ ಪದ್ಧತಿಗಳನ್ನು ‘ಸಾಮೂಹಿಕ ಜ್ಞಾನ ರೂಪಗಳು’ ಪ್ರಭಾವಿಸಿದ್ದವು ಮತ್ತು ಸ್ಥಳೀಯ ಸಾಂಸ್ಕøತಿಕ ನಮೂನೆಯೊಂದಿಗೆ ಅವು ಸಂಬಂಧ ಹೊಂದಿದ್ದವು. ಇತರ ಅಧ್ಯಯನಗಳು ವಿಸ್ತರಿಸಿ ಹೇಳಿರುವ ಹಾಗೆ, ಪಾಶ್ಚಿಮಾತ್ಯವಲ್ಲದ ಹಾಗೂ ವಾಣಿಜ್ಯಾತ್ಮಕವಲ್ಲದ ಸಂದರ್ಭದಲ್ಲಿ ಕೃಷಿಯನ್ನು ನಿರ್ವಹಿಸ ಲಾಗುತ್ತಿತ್ತು. ಹಳೆಯ ಹಾಗೂ ಹೊಸ ಕೃಷಿ ತಿಳುವಳಿಕೆಗಳೊಂದಿಗೆ ಹೊಂದಾಣಿಕೆ ನಡೆಸುವುದು ಬಂಧು ಮತ್ತು ಸಹ ಕಾರ್ಮಿಕರ ಜ್ಞಾನ ವ್ಯವಸ್ಥೆಗಳನ್ನು ಆಧರಿಸುವುದು ಸೇರಿದಂತೆ ‘ಸಾಮೂಹಿಕ ಜ್ಞಾನವ್ಯವಸ್ಥೆ’ಯ ಮೇಲೆ ನಿರ್ವಹಿಸಲಾಗುತ್ತಿತ್ತು ಮತ್ತು ಸಾಂಸ್ಕೃತಿಕ ಮಹತ್ತ್ವವಿರುವ ಅಂಶಗಳೊಂದಿಗೆ ಅದು ಸಂಬಂಧವನ್ನು ಹೊಂದಿತ್ತು (ಬೂಮ್, 2003).

ಅನೇಕ ಅಧ್ಯಯನಗಳು *17 ವಿವರಿಸಿ ಹೇಳಿರುವ ಹಾಗೆ ಹಸಿರುಕ್ರಾಂತಿ ಹಾಗೂ ವಾಣಿಜ್ಯ ರೀತಿಯ ಕೃಷಿಯನ್ನು ಮಾನ್ಯ ಮಾಡಿದ ತರುವಾಯ ಉತ್ಪಾದನೆಯ ಜಾತ್ಯಾಧಾರಿತ ಸಾಮಾಜಿಕ ನೆಲೆಗಳನ್ನು ಬಹುವಾಗಿ ಉಳಿಸಿಕೊಳ್ಳಲಾಗಿದೆ. ಆದರೆ, ಸಂಕಷ್ಟದ ಸಮಯದಲ್ಲಿ ಆಶ್ರಯದಾತ–ಗ್ರಾಹಕ ವ್ಯವಸ್ಥೆಯ ಅಡಿಯಲ್ಲಿ ಒದಗಬಹುದಾಗಿದ್ದ ಬೆಂಬಲ ಮತ್ತು ಜೀವನಾಧಾರ ಛಿದ್ರಗೊಂಡಿದೆ. ಸಾಂಪ್ರದಾಯಿಕ ಸಂರಚನೆಗಳನ್ನು ಆಧರಿಸಿದ ಅಂತರ್ ಅವಲಂಬನೆ ಕಡಿಮೆಯಾಗುತ್ತಿದ್ದಂತೆ ಬಾಹ್ಯ ಸಂರಚನೆಗಳು ಮತ್ತು ಏಜನ್ಸಿಗಳ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಸಾಂಪ್ರದಾಯಿಕ ರೂಪದ ಬೆಂಬಲ ವ್ಯವಸ್ಥೆಗಳು ವಿಘಟನೆಗೊಂಡದ್ದರಿಂದ ಶ್ರಮಿಕ, ಕೆಳಶ್ರೇಣಿಯ ಜಾತಿ ಗುಂಪು ಗಳಿಗೆ ವಿಮೋಚನೆ ಸಿಗುವಂತಾಗಿದೆ. ಜಾತಿ ನಿಗದಿಪಡಿಸಿದ ದಾಸ್ಯದಿಂದ ಮತ್ತು ಜೀತದಿಂದ ಅವರು ತಪ್ಪಿಸಿಕೊಳ್ಳುವಂತೆ ಮಾಡಿದೆ. ಆದರೆ ನೈತಿಕ ಆರ್ಥಿಕತೆಯನ್ನು ಒದಗಿಸುವ ವ್ಯವಸ್ಥೆಗಳಿಗೆ ಸರಕಾರಿ ಒದಗಣೆ ವ್ಯವಸ್ಥೆಗಳು ಸೂಕ್ತ ರೀತಿಯ ಬದಲಿ ವ್ಯವಸ್ಥೆಯನ್ನು ಮಾಡಿಕೊಟ್ಟಿಲ್ಲ(ಅರೋರಾ, 2004; ವಾಸವಿ, 1999). ದೇವ್ (2004) ಮತ್ತು ಶರ್ಮಾ(2004) ಅವರು ಎತ್ತಿ ತೋರಿಸಿರುವ ಹಾಗೆ ಬಡವರಿಗೆ ಆಹಾರ ಧಾನ್ಯಗಳನ್ನೋ, ವಸತಿಯನ್ನೋ ಅಥವಾ ಉದ್ಯೋಗವನ್ನೋ ಒದಗಿಸುವ ಉದ್ದೇಶ ಹೊಂದಿರುವ ಹೆಚ್ಚಿನ ಸರಕಾರಿ ಕಾರ್ಯಕ್ರಮಗಳು ಫಲಾನುಭವಿಗಳಿಂದ ‘ಹಣ ವಸೂಲು ಮಾಡುವ’ ಕೆಟ್ಟ ಚಾಳಿ ಬೆಳೆಸಿಕೊಂಡಿವೆ.

ಕಮಿಷನ್, ಲಂಚ ಮತ್ತು ತೆಗೆದಿರಿಸುವಿಕೆಯಲ್ಲಿನ ದೋಷಗಳು
ಅಲ್ಲದೆ ಜೋಧ್ಕಾ ವಿವರಿಸುವ ಹಾಗೆ ‘ಪಾರಂಪರಿಕ’ ಗ್ರಾಮೀಣ ಆರ್ಥಿಕತೆ ಮತ್ತು ಆಶ್ರಯ ನೀಡಿಕೆ(ಪೇಟ್ರನೇಜ್) ಮತ್ತು ವಿಧೇಯತೆಯ(ಲಾಯಲ್ಟಿ) ಸಂರಚನೆ ಗಳನ್ನು ಸ್ವಾಯತ್ತಗೊಳಿಸಿದ್ದು(2005:22) ಮತ್ತು ಹಿಂದಣ ಅಸ್ಪೃಶ್ಯ ಗುಂಪುಗಳ ವಿರುದ್ಧ ಮೇಲ್ಜಾತಿಯವರ ನಿರಂತರ ಪೂರ್ವಾಗ್ರಹ ಪೀಡಿತ ಭಾವನೆಯು ಕೆಳಶ್ರೇಣಿಯ ಹೊಸ ಕೃಷಿಕರಲ್ಲಿ ಪ್ರತ್ಯೇಕತೆಯನ್ನು ಹೆಚ್ಚಿಸುತ್ತದೆ. ಹೊಸ ಕೃಷಿಯಲ್ಲಿ ತೊಡಗಿಕೊಂಡದ್ದು ಜ್ಞಾನದಲ್ಲಿನ ಗೊಂದಲಕ್ಕೆ ಕಾರಣವಾದರೆ, ಕೃಷಿಯನ್ನು ಹೊಸ ವೃತ್ತಿಯಾಗಿ ತೆಗೆದುಕೊಂಡವರಿಗೆ ಅದುದರಿಂದ ದುಪ್ಪಟ್ಟು ಹಾನಿಕರವಾಯಿತು. ಮಹಾರಾಷ್ಟ್ರದ ಯವತ್ಮಾಲ್ ಮತ್ತು ಅಮರಾವತಿಯಲ್ಲಿ ನಡೆಸಿದ ಅಧ್ಯಯನದಲ್ಲಿ ಮೊಹಂತಿ(2005) ಎತ್ತಿ ತೋರಿಸಿರುವ ಪ್ರಕಾರ ಕೃಷಿಯಲ್ಲಿ ಹೊಸದಾಗಿ ತೊಡಗಿಕೊಂಡವರು ತಳಶ್ರೇಣಿಯ ಸಮುದಾಯಗಳ ಸದಸ್ಯರು ಅಂಚಿಗೆ ಸರಿಸಲ್ಪಟ್ಟರು ಮತ್ತು ಪ್ರಭಾವಿ ಜಮೀನ್ದಾರ ಜಾತಿಗಳ ವಿರೋಧವನ್ನು ಎದುರಿಸಿದರು. ಮೇಲ್ಜಾತಿಯವರು ಹೊಸ ಕೃಷಿಕರೊಂದಿಗೆ  ಜ್ಞಾನವನ್ನು ಹಂಚಿಕೊಳ್ಳಲಿಲ್ಲ. ಅಷ್ಟು ಮಾತ್ರವಲ್ಲ, ಕೃಷಿಕರ ನಡುವೆ ತೀವ್ರ ಸ್ವರೂಪದ ಸ್ಫರ್ಧೆಯೂ ಇತ್ತು. ಅವರ ನಡುವಿನ ಈ ಸ್ಪರ್ಧೆ ಮತ್ತು ಮಾರುಕಟ್ಟೆ ಏಜನ್ಸಿಗಳು ಸಂಗ್ರಹಿಸಿದ ಪರ್ಯಾಪ್ತ ತಿಳುವಳಿಕೆ ಕೃಷಿಕರ ಬಳಿ ಇಲ್ಲದಿದ್ದುದು ಅನಾಹುತಕಾರಿ ಪರಿಣಾಮಗಳಿಗೆ ದಾರಿ ಮಾಡಿಕೊಟ್ಟಿತು. ಕೃಷಿಕರು ತಮ್ಮ ಹೊಲಗಳಲ್ಲಿ ಅಗತ್ಯ ಮೀರಿ ರಸಗೊಬ್ಬರ ಮತ್ತು ಕೀಟನಾಶಕ ಬಳಸಿದ್ದು ಮತ್ತು ಕೀಟಬಾಧೆಯ ಆಸ್ಫೋಟವನ್ನು ಹೇಗೆ ನಿಭಾಯಿಸುವುದು ಎಂಬುದನ್ನು ತಿಳಿಯದಿದ್ದುದು ಇತ್ಯಾದಿ ವಿವರಗಳು ಇದನ್ನು ಸೂಚಿಸುತ್ತವೆ(ಫಾರ್ಮರ್ಸ್ ಕಮಿಷನ್ ಆಫ್ ಎಕ್ಸ್‍ಪಟ್ರ್ಸ್ ರಿಪೋರ್ಟ್, 2002; ಮೊಹಂತಿ ಮತ್ತು ಶ್ರಾಫ್, 2004; ಸ್ಟೋನ್, 2007).

ಕೃಷಿಯ ‘ವೈಯಕ್ತೀಕರಣ’ವನ್ನು ಮುಪ್ಪುರಿಗೊಳಿಸುವ ಇನ್ನೊಂದು ಸಾಮಾಜಿಕ ಆಯಾಮವೆಂದರೆ ಕೂಡುಕುಟುಂಬಗಳು ಪುಟ್ಟ ಪುಟ್ಟ ಪ್ರತ್ಯೇಕ ಕುಟುಂಬಗಳಾಗಿ ವಿಘಟನೆಯಾಗುತ್ತಿರುವುದು. ಅಂತಹ ಸಂದರ್ಭಗಳಲ್ಲಿ ತೃಪ್ತಿಕರ ಜೀವನೋಪಾಯ ಮಾಡಬೇಕಿರುವ ಜವಾಬ್ದಾರಿಯನ್ನು ಕುಟುಂಬದ ಮುಖ್ಯಸ್ಥರು ಹೊರಬೇಕಾಗುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಏಕೈಕ ವ್ಯಕ್ತಿಯೇ ಹೊರಬೇಕಾಗುತ್ತದೆ. ಋಣಬಾಧೆಯಿಂದ ಎದುರಾಗುವ ಅಪಾಯಗಳನ್ನು ತಾಳಿಕೊಳ್ಳುವುದು, ಹೊಸ ಬೆಳೆಗಳನ್ನು ಬೆಳೆಯುವುದು ಅಥವಾ ಲಾಭದಾಯಕ ಧಾರಣೆಗಳನ್ನು ಖಾತ್ರಿಪಡಿಸುವುದು ಹೀಗೆ ಎಲ್ಲ ಜವಾಬ್ದಾರಿಯೂ ಒಬ್ಬ ವ್ಯಕ್ತಿಯ ಮೇಲೆ ಬೀಳುತ್ತದೆ. ಅನೇಕ ವರದಿಗಳು ಇದನ್ನು ಎತ್ತಿ ತೋರಿಸುತ್ತವೆ. ಮನೆಯ ಯಜಮಾನಿಕೆ ವಹಿಸಿಕೊಳ್ಳುವ ತರುಣರು ತಾವೇ ಆರ್ಥಿಕ ಕಾರ್ಯತಂತ್ರಗಳಲ್ಲಿ ತೊಡಗಿಕೊಳ್ಳುತ್ತಾರೆ. ಸಾಮಾನ್ಯವಾಗಿ ಕಡಿಮೆ ಬೆಂಬಲದೊಂದಿಗೆ ಅಥವಾ ಇಲ್ಲವೇ ಇಲ್ಲ ಎಂಬಂತಹ ಬೆಂಬಲದೊಂದಿಗೆ ಮಾರುಕಟ್ಟೆ ಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಏಗುತ್ತಾರೆ. ಇತ್ತೀಚಿನ ವಿಘಟಿತ ಕುಟುಂಬಗಳ ಸಂದರ್ಭದಲ್ಲಿ ತೆಗೆದುಕೊಳ್ಳುವ ವ್ಯಕ್ತಿಗತ ನಿರ್ಧಾರಗಳು ವ್ಯಕ್ತಿಗಳ ಮೇಲೆ ಅನಗತ್ಯ ಹೊರೆ ಹೇರುತ್ತವೆ. ಇದು ವಿಪರೀತ ಋಣಬಾಧೆ, ಬೆಳೆನಾಶ ಮತ್ತು ಅವಮಾನದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ದೂಡುತ್ತದೆ. ಇವೆಲ್ಲವೂ, ಅಂದರೆ ಕೃಷಿಕರು ಪರಸ್ಪರರಿಂದ ಪ್ರತ್ಯೇಕವಾಗಿರುವುದು, ಜ್ಞಾನ ಮತ್ತು ಪದ್ಧತಿಗಳನ್ನು ಹಂಚಿಕೊಳ್ಳದಿರುವುದು, ಸಂಸ್ಥೆಗಳು ಮತ್ತು ಪ್ರಭುತ್ವದಿಂದ ಸೂಕ್ತ ನೆರವು ಇಲ್ಲದೆ ಕೃಷಿಕರು ಅನುಭವಿಸುವ ಅಪಾಯಗಳ ಭಾರೀ ಹೊರೆಗಳು, ಕುಟುಂಬದ ಯಜಮಾನರು ಮತ್ತು ಉದ್ಯಮಶೀಲ ವ್ಯಕ್ತಿಗಳು ಹೊತ್ತುಕೊಳ್ಳುವ ಅಪಾಯಗಳು ಮತ್ತು ತಳಶ್ರೇಣಿಯ, ಹೊಸ ಕೃಷಿಕರು ಅನುಭವಿಸುವ ದುಪ್ಪಟ್ಟು ಹೊರೆ ಇತ್ಯಾದಿಗಳು ಕೃಷಿಯ ‘ವೈಯಕ್ತೀಕರಣ’ಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಗುರುತಿಸಬಹುದು. *18 ‘ಸಾಮೂಹಿಕ’ ಕೃಷಿಯ ಸಾಮಾಜಿಕ ಮತ್ತು  ಸಾಂಸ್ಕೃತಿಕ ನೆಲೆ ಶಿಥಿಲಗೊಳ್ಳುವುದು ಮತ್ತು ಓರ್ವ ಪ್ರತ್ಯೇಕ ಪಾತ್ರಧಾರಿಯಾಗಿ ಪ್ರತ್ಯೇಕ ಕೃಷಿಕರನ್ನು ಮಾರುಕಟ್ಟೆ ಆರ್ಥಿಕತೆಗೆ ಬೆಸೆಯುವುದು ಇವೆಲ್ಲ ಕೃಷಿಯ ವೈಯಕ್ತೀಕರಣದಲ್ಲಿಯೇ ಇದೆ.

ಪಶ್ಚಿಮದಲ್ಲಿ ಹೆಚ್ಚುತ್ತಿರುವ ವೈಯಕ್ತೀಕರಣದ ಹಿನ್ನೆಲೆಯಲ್ಲಿ ಬೆಕ್ ಮತ್ತು ಬೆಕ್–ಗರ್ನ್‍ಶೈಮ್ ಏನನ್ನು ವಿಸ್ತರಿಸಿ ಹೇಳುತ್ತಾರೋ ಅದು ಇದೀಗ ‘ಸ್ವತಃ ನೀನೇ ಮಾಡು’ ಎಂಬ ಸೂತ್ರ. ಇದು ಈಗ ನಮ್ಮಲ್ಲಿಯೂ ಪ್ರಸ್ತುತವೆನಿಸಿದೆ. ಇದು ಅಪಾಯಕಾರಿಯೂ ಆಗಬಲ್ಲುದು. ಅಂತಹ ಒಂದು ‘ಹಗ್ಗದ ಮೇಲಿನ’ ಬದುಕು ಒಂದು ರೀತಿಯ ಶಾಶ್ವತ ಅಪಾಯಕ್ಕೆ ಆಹ್ವಾನವಾಗುತ್ತದೆ(ಭಾಗಶಃ ಗೋಚರ, ಭಾಗಶಃ ಅಗೋಚರ) (2001:3) ಮತ್ತು ಅವರು ಎತ್ತಿ ತೋರಿಸಿರುವಂತೆ, ‘ಸ್ವತಃ ನೀನೇ ಮಾಡು’ ಎಂಬ ಜೀವನವು ಕೆಲವೊಮ್ಮೆ ಸ್ಥಗಿತಗೊಳ್ಳುವ ಜೀವನವೂ ಆಗಿರುತ್ತದೆ. ವೈಯಕ್ತೀಕರಣಗೊಂಡ ಕೃಷಿಕರಿಗೆ ಹೇಗೆ ಹೊಸ ಕೃಷಿಯ ಜಗತ್ತು(ಪ್ರಭುತ್ವದ ಪರ್ಯಾಯ ಬೆಂಬಲವಿಲ್ಲದೆ ಹೊಸ ದುಬಾರಿ ಮತ್ತು ವಾಣಿಜ್ಯೀಕೃತ ಒಳಸುರಿ, ಸ್ಥಿರತೆ ಇಲ್ಲದ ಮಾರುಕಟ್ಟೆ ಮತ್ತು ಸ್ಥಿರತೆ ಇಲ್ಲದ ಹವಾಮಾನ ಪರಿಸ್ಥಿತಿಗಳೊಂದಿಗೆ) ಈ ಶತಸ್ಸಿದ್ಧವಾದ ‘ಸ್ಥಗಿತತೆ’ಯ ಗರಿಷ್ಠ ಅಪಾಯವೊಂದನ್ನು ತನ್ನೊಂದಿಗೆ ತರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಇವೆಲ್ಲವೂ ಪ್ರಸ್ತುತವೆನಿಸುತ್ತವೆ. ಕೃಷಿಕರು ತಮ್ಮ ಪ್ರತ್ಯೇಕೀಕರಣಗೊಂಡ ಮನೆ ಮತ್ತು ಕುಟುಂಬಗಳೊಳಗೆ ಸೇರಿಕೊಂಡು ಕೆಲವೊಮ್ಮೆ ಊಹಿಸಲಾಗದ ಮಾರುಕಟ್ಟೆ, ಪದೇ ಪದೇ ಬದಲಾಗುವ ಮತ್ತು ವಿಶ್ವಾಸಾರ್ಹವಲ್ಲದ ಹವಾಮಾನ ಪರಿಸ್ಥಿತಿಗಳು, ವಿಶ್ವಾಸಾರ್ಹವಲ್ಲದ ಬೀಜಗಳ ಗುಣಮಟ್ಟ, ರಸಗೊಬ್ಬರ ಮತ್ತು ಕೀಟನಾಶಕಗಳು ಹಾಗೂ ಖಾತ್ರಿಯಿಲ್ಲದ ಮತ್ತು ಪರೀಕ್ಷೆಯನ್ನು ಗೆದ್ದಿರದ ಹೊಸ ಕೃಷಿ ಪದ್ಧತಿಗಳನ್ನು ಅನುಸರಿಸುವಲ್ಲಿ ಎದುರಾಗುವ ಅಪಾಯಗಳು ಇವನ್ನೆಲ್ಲ ಅಂದಾಜಿಸುವಲ್ಲಿ ಸೋಲುತ್ತಾರೆ. ವೈಯಕ್ತೀಕರಣಗೊಂಡ ಕೃಷಿಕರಿಗೆ ಇಂತಹ ತೃಣೀಕರಿಸಿದ ಕೃಷಿ ಪದ್ಧತಿಗಳೊಂದಿಗೆ ಬರುವ ಅಪಾಯಗಳನ್ನು ಸಾರ್ವಜನಿಕವಾಗಿ ಮತ್ತು ಮಾನಸಿಕವಾಗಿ ತಾಳಿಕೊಳ್ಳುವಲ್ಲಿ ಸಾಧ್ಯವಾಗದೇ ಹೋಗುವುದು ಇದರ ಒಂದು ಎದ್ದು ಕಾಣುವ ಪರಿಣಾಮ. ಉತ್ಪಾದನಾ ನಷ್ಟ(ಅದರಲ್ಲೂ ವಿಶೇಷವಾಗಿ ಅಪಾಯ ಸಾಧ್ಯತೆಗಳು ಅಥವಾ ಸಾಲದ ಹೊರೆ ಒಳಗೊಂಡಿರುವ ಸಂದರ್ಭಗಳಲ್ಲಿ) ಎನ್ನುವುದು ತನ್ನ ತೀರಾ ವೈಯಕ್ತಿಕ ನಷ್ಟ ಎನಿಸಿಕೊಂಡು ಬಿಡುತ್ತದೆ. ಅನೇಕ ರಾಜ್ಯಗಳಲ್ಲಿ ನಡೆಸಲಾದ ಇಂತಹ ಬಲಿಪಶುಗಳ ಪ್ರಕರಣ ಅಧ್ಯಯನಗಳು ಇದನ್ನು ಸಾಬೀತುಪಡಿಸಿವೆ. ಅತಿಸಣ್ಣ ಹಿಡುವಳಿ ಹೊಂದಿರುವ ಕೃಷಿಕರು ಪಂಪ್‍ಸೆಟ್ ಖರೀದಿಸಲು, ಕೊಳವೆ ಬಾವಿ ತೋಡಲು ಅಥವಾ ಬೀಜ, ರಸಗೊಬ್ಬರ, ಕೀಟನಾಶಕ ಖರೀದಿಸಲು ದುಬಾರಿ ಬಡ್ಡಿ ದರದಲ್ಲಿ ದೊಡ್ಡ ಮೊತ್ತವನ್ನು ಸಾಲವಾಗಿ ಪಡೆದಿದ್ದರು. ಕೀಟಗಳಿಂದ ಅಥವಾ ರೋಗಬಾಧೆಗಳಿಂದ ಅಥವಾ ಲಾಭದಾಯಕ ಬೆಲೆಗಳ ಅಭಾವದಿಂದ ಉಂಟಾಗುವ ಬೆಳೆನಷ್ಟ ಮತ್ತು ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ಹೋದಾಗ ಅವರ ಹತಾಶೆಯ ಪರಿಸ್ಥಿತಿ ಉಲ್ಬಣಗೊಳ್ಳುತ್ತದೆ. ಅನೇಕ ಸಂದರ್ಭಗಳಲ್ಲಿ ಸಾಲ ತೀರಿಸಲು ಅಸಾಧ್ಯವಾದಾಗ ಇತರರ ಮುಂದೆ ಆಗುವ ಅವಮಾನವು ಆತ್ಮಹತ್ಯೆಯ ದಾರಿ ಹಿಡಿಯಲು ಅಂತಿಮ ಪ್ರೇರಣೆಯಾಗಿಬಿಡುತ್ತದೆ. ಅನೇಕ ವರದಿಗಳು ಅಂತಹ ಪರಿಸ್ಥಿತಿಗಳ ಮನಕಲಕುವ ಚಿತ್ರಣಗಳನ್ನು ಮುಂದಿಟ್ಟಿವೆ. ಪಂಜಾಬ್‍ನ ವಿಷಯಕ್ಕೆ ಬಂದರೆ, ಹೇಗೆ ಓರ್ವ ಜಾಟ್ ಸಿಖ್ ಬಲವೀಂದರ್ ಸಿಂಗ್ ತನ್ನ ಮೂರುವರೆ ಎಕರೆ *19 ಜಮೀನಿನಲ್ಲಿ ಕೊಳವೆ ಬಾವಿಯೊಂದನ್ನು ತೋಡಲು ಹಾಗೂ ಪಂಪ್‍ಸೆಟ್ ಹಾಕಿಸಲು ಕೃಷಿ ಕಮಿಷನ್ ದಲ್ಲಾಳಿ ಮತ್ತು ಬಟ್ಟೆ ವ್ಯಾಪಾರಿಯಿಂದ ಹಣ ಸಾಲ ತಂದ ಎನ್ನುವುದನ್ನು ಅಯ್ಯರ್ ಮತ್ತು ಮಾಣಿಕ್(2000) ವಿವರಿಸುತ್ತಾರೆ. ಬೆಳೆಗೆ ಮಾರುಕಟ್ಟೆ ಧಾರಣೆ ಲಾಭದಾಯಕವಾಗಿರಲಿಲ್ಲ. ಆದ್ದರಿಂದ ಸಕಾಲದಲ್ಲಿ ಆತನಿಗೆ ಸಾಲ ತೀರಿಸಲು ಆಗಲಿಲ್ಲ. ಇತರರ ಮುಂದೆ ಅವಮಾನದಿಂದ ತಲೆ ತಗ್ಗಿಸುವಂತಾಯಿತು. ಒಂದಷ್ಟು ಸಮಯದ ತೊಳಲಾಟ ಮತ್ತು ತಳಮಳದ ತರುವಾಯ ಆತ ಕೀಟನಾಶಕ ಸೇವಿಸಿ ತನ್ನನ್ನು ತಾನು ಕೊಂದು ಕೊಂಡ. ಹಾಗೆಯೇ ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಮಧ್ಯವಯಸ್ಸಿನ ಉದ್ಯಮಶೀಲ ಕೃಷಿಕನೊಬ್ಬನ ಆತ್ಮಹತ್ಯೆಯನ್ನು ನಾನು ದಾಖಲಿಸಿದ್ದೆ. ಆ ಕೃಷಿಕ ತನ್ನ ಕುಲಕಸುಬಾದ ಭಟ್ಟಿ ಇಳಿಸುವಿಕೆಯನ್ನು ಕೈಬಿಡುವ ಯತ್ನದಲ್ಲಿ ಕೃಷಿ ಕೈಗೆತ್ತಿಕೊಂಡಿದ್ದ. ಇಳಿಯುತ್ತಿರುವ ಅಂತರ್ಜಲ ಮಟ್ಟ ಮತ್ತು 2003ರ ಬರಗಾಲದಿಂದಾಗಿ ಆತನ ಜಮೀನು ಬಂಜರು ಬೀಳುವಂತಾಯಿತು. ತನ್ನ ಜಮೀನಿನಲ್ಲಿ ಬಾವಿ ತೋಡಲು ಆತ ಪಡೆದಿದ್ದ ಸಾಲ ಚಕ್ರಬಡ್ಡಿ ದರದಲ್ಲಿ ಬೆಳೆದುನಿಂತಿತ್ತು. ತನ್ನ ಗ್ರಾಮಕ್ಕೆ ಮತ್ತು ಮನೆಗೆ ಆಗಾಗ ಭೇಟಿ ನೀಡುವ ಸಾಲದಾತರು, ಅವರ ಚುಚ್ಚುನುಡಿಗಳು ಮತ್ತು ಆಗ್ರಹಗಳು ಇವನ್ನೆಲ್ಲ ಸಹಿಸಲಾಗದೆ ಅಂತಿಮವಾಗಿ ಆತ ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡ. *20 ವೈಯಕ್ತೀಕರಣಗೊಂಡು ಇತರರಿಂದ ಪ್ರತ್ಯೇಕಗೊಂಡು ನಡೆಯುವ ಕೃಷಿ ಪದ್ಧತಿಯು, ಸಾಮಾಜಿಕ ಸಂಬಂಧಗಳು ಮತ್ತು ಕಾರ್ಯಜಾಲಗಳನ್ನು ಆಧರಿಸಿ ನಡೆಸುವ ಒಂದು ಸಾಮಾಜಿಕ ನಿರ್ವಹಣೆಯಾಗಿ ಉಳಿಯಲಿಲ್ಲ(ರಿಚಡ್ರ್ಸ್, 1993:61) ಅಥವಾ ಕೃಷಿಕರು ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳುವ, ಆಯ್ಕೆ ಮಾಡಿಕೊಳ್ಳುವ ಮತ್ತು ಚಟುವಟಿಕೆಗಳನ್ನು ನಿರ್ವಹಿಸುವ *21 ಒಂದಷ್ಟು ಯೋಜಿತ ಕಾರ್ಯತಂತ್ರಗಳಾಗಿ (ಬ್ಯಾಟರ್‍ಬರಿ, 1996) ಉಳಿಯಲಿಲ್ಲ. ಸ್ವತಂತ್ರ ವ್ಯಕ್ತಿಗಳಾಗಿ ಕೃಷಿಕರು ಮಾಹಿತಿ, ಸಾಲ ಪಡೆಯುವುದು ಮತ್ತು ನಾನಾ ಒಳಸುರಿಗಳಿಗಾಗಿ ಮಾರುಕಟ್ಟೆಯ ಮೊರೆಹೋಗು ವುದು ಇವನ್ನೆಲ್ಲ ವೈಯಕ್ತಿಕ ನೆಲೆಯಲ್ಲಿಯೇ ಮಾಡಬೇಕಾಗುತ್ತದೆ. ಆ ಮೂಲಕ ಸಾಮಾಜಿಕವಾಗಿ ಭದ್ರ ನೆಲೆಯುಳ್ಳ ರೀತಿಯ ಕೃಷಿಯ ಸಂದರ್ಭದಲ್ಲಿ ಇರುತ್ತಿದ್ದುದಕ್ಕಿಂತ ಭಿನ್ನವಾಗಿ, ಅಪಾಯಗಳ ಭಾರೀ ಹೊರೆಯನ್ನು ವ್ಯಕ್ತಿಗತವಾಗಿಯೇ ತಾಳಿಕೊಳ್ಳಬೇಕಾಗುತ್ತದೆ. ಆದರೆ ಕೃಷಿಯ ವೈಯಕ್ತೀಕರಣಕ್ಕೆ ಜತೆಜತೆಯಾಗಿ ಖಾಸಗಿ, ಸಾಮಾಜಿಕ ವಲಯದಲ್ಲಿ ವೈಯಕ್ತೀಕರಣವಾಗಲಿಲ್ಲ. ಗ್ರಾಹಕ ವ್ಯಾಖ್ಯಾನಿಸಿದ ಜೀವನ ಶೈಲಿಗಳನ್ನು ಅನುಸರಿಸುವ ಹೊಸ ಬೇಡಿಕೆಗಳು ಸೇರಿದಂತೆ ಸಾಮಾಜಿಕ ಬಂಧಕಗಳು ಮತ್ತು ಜೀವನಾವರ್ತದ ಆಚರಣಾ ವಿಧಿಗಳು ಸೇರಿದಂತೆ ಸಾಮಾಜಿಕ ಬದುಕು ಹೆಚ್ಚು ಹೆಚ್ಚು ವಾಣಿಜ್ಯೀಕರಣಗೊಳ್ಳುತ್ತಿದೆ. ಇದರಿಂದ ಅನೇಕ ಕೃಷಿಕರ ಮೇಲೆ ಹೆಚ್ಚುವರಿ ಹೊರೆ ಬೀಳುವಂತಾಗುತ್ತದೆ. ವರದಿಯಲ್ಲಿನ ಹೆಚ್ಚಿನ ಪ್ರಕರಣಗಳು ಎತ್ತಿ ತೋರಿಸಿರುವಂತೆ, ಹೊಸ ಆರ್ಥಿಕ ಒತ್ತಡಗಳು ಮತ್ತು ಅಪಾಯ ಸಾಧ್ಯತೆಗಳ ಈ ಎರಡೆರಡು ಹೊರೆಯ ಸಂದರ್ಭದಲ್ಲಿ ಪ್ರತಿಯೋರ್ವ ವ್ಯಕ್ತಿಯೂ, ಮೊದಲೇ ಅಸ್ತಿತ್ವದಲ್ಲಿರುವ ಮತ್ತು ಸಾಮೂಹಿಕ ಕಟ್ಟುಪಾಡುಗಳು ಹಾಗೂ ಹೊಣೆಗಾರಿಕೆಗಳನ್ನು ಒಪ್ಪಿಕೊಳ್ಳುವ ಸಾಮಾಜಿಕ ಹೊರೆಗಳನ್ನು ಸಹಿಸಿಕೊಳ್ಳುತ್ತಾನೆ. ಕೊಳ್ಳುಬಾಕತನವೂ ಸೇರಿದಂತೆ ಇಂತಹ ಸಾಮಾಜಿಕ ಬೇಡಿಕೆಗಳು ವ್ಯಾಪಕವಾಗಿರುವ ‘ಸಾಂಸ್ಕೃತಿಕರಣ’ದ ಪರಿಣಾಮ *22 ಮತ್ತು ಬಡತನದಿಂದ ಕೂಡಿದ ಗ್ರಾಮೀಣ ಸಮಾಜಗಳಲ್ಲಿ ಕೂಡ ಜೀವನ ಶೈಲಿಯಾಗಿ ಬಲವರ್ಧನೆಗೊಳ್ಳುತ್ತಿರುವ ಆಚರಣಾ ವಿಧಿಗಳೊಂದಿಗೆ(ರಿಚುವಲ್) ಸಂಬಂಧವನ್ನು ಹೊಂದಿರುತ್ತವೆ. ಏಕಕಾಲಕ್ಕೆ ‘ಜೀವನ ನಿರ್ವಹಣೆಯ ವೈಯಕ್ತೀಕರಣ ಮತ್ತು ಜೀವನ ವಿಧಾನಗಳ ಬಹುಳತೆ’ ಇರುತ್ತವೆ ಎಂದು ಬರ್ಕಿಂಗ್ ಯಾವ ವಿರೋಧಾಭಾಸವನ್ನು ಗಮನಿಸಿರುವನೋ(1996: 191) ಅದು ಇಲ್ಲಿ ಅನುಸಾಂಸ್ಕೃತಿಕರಣಿಸಿದೆ. ಆರ್ಥಿಕ ಆಧುನೀಕರಣವನ್ನು, ಪಾರಂಪರೀಕರಣದ ತೀವ್ರಗೊಳಿಸುವಿಕೆಯ ಒಳಗಡೆ ಉಳಿಸಿಕೊಳ್ಳಲಾಗುವ ವಿಸ್ತೃತ ಸಾಂಸ್ಕೃತಿಕ ಚೌಕಟ್ಟಿನಲ್ಲಿ, ವ್ಯಕ್ತಿಯು ಎರಡು ಜಗತ್ತಿನ ಹೊರೆಗಳೊಂದಿಗೆ ಏಗಬೇಕಾಗುತ್ತದೆ. ಆರ್ಥಿಕ ಮಟ್ಟದಲ್ಲಿ ಗಂಡಾಂತರ ಮತ್ತು ವೈಯಕ್ತೀಕರಣ ಎರಡನ್ನೂ ಎದುರಿಸಬೇಕಾಗುತ್ತದೆ. ಇಲ್ಲಿ ಆತ/ಅಕೆ ವ್ಯಕ್ತಿಗತವಾಗಿ ಕಾರ್ಯಾಚರಿಸಬೇಕಾಗುತ್ತದೆ. ಆದರೂ ಸಾಮಾಜಿಕ ಮತ್ತು  ಸಾಂಸ್ಕೃತಿಕ  ಸ್ತರದಲ್ಲಿ ಸಾಮಾಜಿಕ ಒತ್ತಡ ಮತ್ತು ಕಳಂಕವನ್ನು ಸಾಮೂಹಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಇದೆಲ್ಲದರ ಫಲವೇ ತೀವ್ರತರದ ಖಿನ್ನತೆ. ಆಗ ಆತ್ಮಹತ್ಯೆಯೇ ಬಿಡುಗಡೆಯ ದಾರಿ ಎಂಬಂತೆ ಕಾಣುತ್ತದೆ.
ಗ್ರಾಮೀಣ ಪ್ರದೇಶದ ಉಪೇಕ್ಷೆ
20ನೇ ಶತಮಾನದ ಕೊನೆಯಲ್ಲಿ ಮತ್ತು ಹೊಸ ಶತಮಾನದ ಆರಂಭವನ್ನು ಸಂಕೇತಿಸುತ್ತಾ ಸಂಭವಿಸಿರುವ ಭಾರತೀಯ ಕೃಷಿ ಬಿಕ್ಕಟ್ಟು, ಕೃಷಿಕರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಯನ್ನು ಬಿಂಬಿಸುತ್ತದೆ. ಅದರಲ್ಲಿ ಅವರು ಒಂದು ರೀತಿಯ ದುಸ್ಥರದಲ್ಲಿ ಉಳಿದುಕೊಳ್ಳುತ್ತಾರೆ. ನಾಗರಿಕರಾಗಿ ಅವರ ಸ್ಥಾನ ಮತ್ತು ಹಕ್ಕುಗಳನ್ನು ಚುನಾವಣೆಯ ಸಮಯದಲ್ಲಿ ಮಾತ್ರ ಗುರುತಿಸಲಾಗುತ್ತದೆ ಮತ್ತು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. 1991ರ ತರುವಾಯದ ಅವಧಿಯಲ್ಲಿ *23 ಕೃಷಿಕರ ಮತ್ತು ರಾಷ್ಟ್ರದ ಸಾರ್ವಜನಿಕ ವಲಯದಲ್ಲಿ ಕೃಷಿ ವಿಷಯಗಳು ಹೆಚ್ಚು ಹೆಚ್ಚು ಉಪೇಕ್ಷೆಗೆ ಒಳಗಾಗಿವೆ. ರೈತರು ಆರ್ಥಿಕತೆಯ ಬೆನ್ನೆಲುಬು ಅಥವಾ ಹಳ್ಳಿಗಳೆಂದರೆ ಒಂದು ಪುಟ್ಟ ಭಾರತ ಎಂಬ ಬಾಯಿಚಪಲದ ಮಾತುಗಳನ್ನು ಕೂಡ ಆಡುತ್ತಿಲ್ಲ. ಈ ಪರಿಸ್ಥಿತಿಯನ್ನು ಒಂದು ಸಮಗ್ರ ರೀತಿಯಲ್ಲಿ ಪರಾಮರ್ಶಿಸುವಲ್ಲಿ, ಮರುಕಳಿಸುತ್ತಿರುವ ಆತ್ಮಹತ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ, ಒಂದೊಮ್ಮೆ ಅಭಿವೃದ್ಧಿಯ ಒಂದು ಮೂರ್ತರೂಪ’ ಮತ್ತು ಕೃಷಿ ಪ್ರಗತಿಯ ಒಂದು ಎಂಜಿನ್’(ಲಡ್ಡೆನ್, 1992:273) ಎಂದು ಪರಿಗಣಿಸಲಾಗಿದ್ದ ಕೇಂದ್ರ ಮತ್ತು ರಾಜ್ಯ ಸರಕಾರಗಳ ವೈಫಲ್ಯವು, ಸದ್ಯ ರಾಷ್ಟ್ರದ ಸಾಮಾಜಿಕ ಸಂವೇದನಾಶೀಲತೆಗಳು ಮತ್ತು ರಾಜಕೀಯ ಆರ್ಥಿಕತೆಗಳಲ್ಲಿ ಕೃಷಿಕರ ಸ್ಥಾನವು ಯಾವ ರೀತಿಯಲ್ಲಿ ಉಪೇಕ್ಷೆಗೆ ಒಳಗಾಗಿದೆ ಎಂಬುದಕ್ಕೆ ಪುರಾವೆಯಾಗಿದೆ. *24
ಸಂಪನ್ಮೂಲಗಳ ಮರು ಹಂಚಿಕೆ, ಮೂಲಶಿಕ್ಷಣ, ಆರೋಗ್ಯಪಾಲನೆ ಹಾಗೂ ವಸತಿಯ ಹಕ್ಕುಗಳು, ಲಾಭದಾಯಕ ಬೆಲೆಗಳನ್ನು ಒದಗಿಸಬಲ್ಲ ಕಾರ್ಯನೀತಿಗಳು ಮತ್ತು ಸಂಕಷ್ಟದ ಸಮಯದಲ್ಲಿ ಪ್ರಭುತ್ವದ ಬೆಂಬಲ ಇತ್ಯಾದಿ ಕೃಷಿಕರಿಗೆ ಸಂಬಂಧಿಸಿದ ಪ್ರಧಾನ ವಿಷಯಗಳು, ಯೋಜನಾ ತಯಾರಿ ಮತ್ತು ಆಯವ್ಯಯ ನಿಗದಿ ಕಾರ್ಯಸೂಚಿಗಳ ಕೇಂದ್ರ ವಿಷಯವಾಗಿ ಉಳಿದಿಲ್ಲ; ಬಡತನ ರೇಖೆಯನ್ನು ಬಹುವಾಗಿ ರಾಜಕೀಯ ರೀತ್ಯಾ ನಿರ್ಧರಿಸಲಾಗುತ್ತದೆ(ಹ್ಯಾರಿಸ್-ವೈಟ್, 2004). ಕೆಲವು ಪ್ರಕರಣ ಗಳಲ್ಲಿ ಇಂತಹ ಅಲಕ್ಷ್ಯ ಮತ್ತು ಮರೆವಿನ ಫಲವೋ ಎಂಬಂತೆ ಪಂಜಾಬಿನ ಹತಾಶ ಗ್ರಾಮವಾಸಿಗಳು ತಮ್ಮ ಇಡಿ ಗ್ರಾಮವನ್ನೇ ಮಾರಾಟಕ್ಕಿಡುವವರೆಗೂ ಹೋಗುವಂತಾಗಿದೆ. ಮಾತ್ರವಲ್ಲ ತಮ್ಮ ಕಿಡ್ನಿಗಳನ್ನು ಮಾರಾಟ ಮಾಡಲು ಮಾನವ ಮಾರುಕಟ್ಟೆ ಸ್ಥಾಪಿಸುವಂತೆ ಪ್ರಧಾನಿ ಮತ್ತು ರಾಷ್ಟ್ರಪತಿಗಳನ್ನು ಅವರು ಆಹ್ವಾನಿಸಿದ್ದಾರೆ(ಶರ್ಮಾ, 2006:1). ‘ವಿಶೇಷ ಆರ್ಥಿಕ ವಲಯ’(SEZ)ಗಳ ಅಭಿವೃದ್ಧಿ ಮತ್ತು ಅವುಗಳಿಗೆ ಸಿಂಧುತ್ವ ನೀಡುವುದು(ಪಶ್ಚಿಮ ಬಂಗಾಳದ ನಂದಿ ಗ್ರಾಮ ಮತ್ತು ಸಿಂಗೂರ್‍ನಲ್ಲಿನ ತಕರಾರುಗಳು ಅಂತಹ ಕ್ರಮದ ದ್ಯೋತಕವಾಗಿದೆ *25 ಇವು ಕೃಷಿ ವಿಷಯಗಳನ್ನು ನಿರಂತರವಾಗಿ ಬದಿಗೆ ಸರಿಸಲಾಗುತ್ತಿರುವ ಕೆಲವು ಪ್ರಕರಣಗಳು. ಇದರಲ್ಲಿ ಹೊಸ ತಯಾರಿಕಾ ವಲಯಗಳಿಗೆ ಅಥವಾ ಇದೀಗ ಭಾರತದ ಕೈಗಾರಿಕೀಕರಣದ ‘ಎರಡನೆ ಅಲೆ’ ಎಂದು ಆಕರ್ಷಕವಾಗಿ ಕರೆಯಲಾಗುವ ಸಂಗತಿಗಳಿಗೆ ಹಳ್ಳಿಗಳು ಹಾದಿ ಮಾಡಿಕೊಡಬೇಕೆಂದು ನಿರೀಕ್ಷಿಸಲಾಗುತ್ತದೆ. ಇವೆಲ್ಲವೂ ಕೂಡ ಕೃಷಿಕರನ್ನು ಇದೀಗ ಎಷ್ಟರಮಟ್ಟಿಗೆ ಕಡೆಗಣಿಸಲಾಗುತ್ತಿದೆ ಎನ್ನುವುದನ್ನು ಸೂಚಿಸುತ್ತವೆ. ಇದನ್ನು ‘ಒಂದು ಗುಂಪನ್ನುವಿಸ್ತೃತ  ಸಮಾಜದಿಂದ ಪ್ರತ್ಯೇಕಿಸುವುದು ಪ್ರಭುತ್ವ ಹಾಗೂ ಪ್ರಧಾನ ಆರ್ಥಿಕ ಪಾತ್ರಧಾರಿಗಳು ಆ ಗುಂಪಿನ ಅಗತ್ಯಗಳು ಮತ್ತು ಹಕ್ಕುಗಳನ್ನು ಮರೆಯುವುದು’ ಎಂದು ವಾಕಾಂಟ್(1996:111) ಗುರುತಿಸಿದ್ದಾರೆ.

ವಾಸ್ತವದಲ್ಲಿ ಅನೇಕ ಸರಕಾರಗಳು ಸದರಿ ಬಿಕ್ಕಟ್ಟನ್ನು ಕೃಷಿಕರ ವ್ಯಕ್ತಿಗತ ದೌರ್ಬಲ್ಯದ ಸಂಕೇತ ಅಥವಾ ಅವರ ಪರಾವಲಂಬನೆಯ ಸೂಚಕ ಎಂದು ಅರ್ಥೈಸಲು ಯತ್ನಿಸಿವೆ. ಅಂತಹ ಒಂದು ದೃಷ್ಟಿಕೋನದ ಪುರಾವೆಯು, ಕೃಷಿಕರ ದೊಡ್ಡ ಸಂಖ್ಯೆಯ ಆತ್ಮಹತ್ಯೆಗಳ ಪ್ರಕರಣಗಳನ್ನು ತನಿಖೆಗೊಳಪಡಿಸಲು ಮಾತ್ರವಲ್ಲ, ರೈತರಲ್ಲಿ ಸ್ವಾಭಿಮಾನ ಮತ್ತು ಸ್ವಾವಲಂಬನೆ ಮೂಡಿಸಲು ಕ್ರಮಗಳನ್ನು ಅಥವಾ ಕಾರ್ಯಕ್ರಮಗಳನ್ನು ಗುರುತಿಸಲು ಮತ್ತು ಶಿಫಾರಸ್ಸು ಮಾಡಲು ರಚಿಸಲಾದ ತಜ್ಞರ ಸಮಿತಿಗೆ ಕರ್ನಾಟಕ ಸರಕಾರವು ನಿಗದಿಪಡಿಸಿದ ‘ವಿಚಾರವ್ಯಾಪ್ತಿ’ಯಲ್ಲಿ ಸಿಗುತ್ತದೆ(2002:2). ತೀರಾ ಇತ್ತೀಚೆಗೆ ಮಹಾರಾಷ್ಟ್ರ ಸರಕಾರವು ವಿದರ್ಭ ಪ್ರದೇಶದ ಸಂಕಷ್ಟವನ್ನು ನಿಭಾಯಿಸಲು ಮತ್ತು ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು ಹೆಸರಾಂತ ‘ಆಲಿಂಗನ ಗುರು’ ಅಮೃತಾನಂದಮಯಿ ಮತ್ತಿತರ ಆಧ್ಯಾತ್ಮಿಕ ಮುಖಂಡರ ನೆರವನ್ನು ಬಳಸಿಕೊಂಡಿದೆ. *26 ವಿತರಣೆ, ಸುಸ್ಥಿರ ಕೃಷಿ ಮತ್ತು ಸಮನ್ಯಾಯದ ಬದಲಿಗೆ ಉದ್ಯಮಶೀಲತೆ ಮತ್ತು ಉತ್ಪಾದಕತೆಯ ಮೇಲೆ ಒತ್ತು ನೀಡುತ್ತಾ ಇಂತಹ ಕಾರ್ಯಕ್ರಮಗಳು ಮತ್ತು ಸಂವಾದಗಳು ಮಾರುಕಟ್ಟೆಯ ಪಾತ್ರವನ್ನು ಇನ್ನಷ್ಟು ಸಿಂಧುಗೊಳಿಸಿವೆ. ಇದರ ಮುಂದುವರಿಕೆಯಾಗಿ ಮಾರುಕಟ್ಟೆ ಮತ್ತು ವ್ಯಕ್ತಿಯ ಮೇಲಣ ಕೇಂದ್ರೀಕೃತ ಗಮನವು, ವೈಫಲ್ಯಕ್ಕೆ ವ್ಯಕ್ತಿಗಳನ್ನು ಹೊಣೆ ಮಾಡುವುದನ್ನು ಸಿಂಧುಗೊಳಿಸುತ್ತದೆ. ಬಳಿಕ ಈ ಎಲ್ಲಾ ಬಲಗಳು ಹಾಗೂ ಪ್ರಕ್ರಿಯೆಗಳು ಸಣ್ಣ ಮತ್ತು ಅತಿಸಣ್ಣ ಕೃಷಿಕರ ವಿರುದ್ಧ ಕೈಜೋಡಿಸುತ್ತವೆ. *27

ಪ್ರಭುತ್ವವು ಕೃಷಿ ಸಂಬಂಧಿತ ವಿಷಯಗಳನ್ನು ಮರೆಯುತ್ತದೆ ಮತ್ತು ಉಪೇಕ್ಷಿ ಸುತ್ತದೆ. *28 ಜನಪ್ರಿಯ ಸಮೂಹ ಮಾಧ್ಯಮಗಳು ಕೃಷಿ ವಿಷಯಗಳು ಗೋಚರವಾಗದಂತೆ ಮಾಡುವುದರಿಂದ ಈ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳುತ್ತದೆ. ಸದರಿ ವಿಷಯಗಳ ಹರವು, ಮರುಕಳಿಸುವಿಕೆ ಮತ್ತು ತೀವ್ರತೆಯ ಹೊರತಾಗಿಯೂ ಆತ್ಮಹತ್ಯೆಗಳಿಗೆ ಸಂಬಂಧಿಸಿದ ವಿವರವಾದ ಮತ್ತು ಪ್ರಚಲಿತ ವಾರ್ತೆಗಳನ್ನು ಒದಗಿಸುವ ಕಾರ್ಯದಿಂದ ಮುಖ್ಯವಾಹಿನಿ ಮಾಧ್ಯಮಗಳು ದೂರ ಉಳಿಯಲೆತ್ನಿಸುತ್ತವೆ. ವಿಮರ್ಶಕರೋರ್ವರು (ಅರವಿಂದ, 2001) ವಿವರಿಸಿರುವ ಹಾಗೆ ಏಪ್ರಿಲ್ 2006ರಲ್ಲಿ ವಿದರ್ಭ ಪ್ರದೇಶದಲ್ಲಿ ಆತ್ಮಹತ್ಯೆಗಳ ಸಾಂಕ್ರಾಮಿಕತೆ ಗರಿಷ್ಠ ಪ್ರಮಾಣ ತಲುಪಿದ್ದಾಗ ಹೆಚ್ಚಿನ ಮಾಧ್ಯಮಗಳು ‘ಲ್ಯಾಕ್ಮೆ ಫ್ಯಾಶನ್ ವೀಕ್’ನಲ್ಲಿ ಹಾಜರಿರುವುದನ್ನು ತಮ್ಮ ಆದ್ಯತೆಯಾಗಿ ಪರಿಗಣಿಸಿದವು! ಇಂಡಿಯಾವನ್ನು ಹೊಸ ಜಾಗತಿಕ ಶಕ್ತಿ ಎಂದು ಸಂಭ್ರಮಿಸುವ, ಮಾರಾಟ ಮಾಡುವ ಹೊತ್ತಿನಲ್ಲಿ ಸೌಂದರ್ಯ ರಾಣಿಯರ ಪರೇಡಿನ ಹಿಂದೆ ಈ ಆತ್ಮಹತ್ಯೆಗಳ ಆಸ್ಫೋಟದ ವರದಿಗಳನ್ನು ಮರೆಮಾಡುವುದು ಹೆಚ್ಚು ಮುಖ್ಯ ಎಂದು ಕಾಣುತ್ತದೆ. ಈ ವಿಷಯಗಳ ಸುತ್ತ ಸಂಘಟಿತರಾಗುವುದು ಮತ್ತು ತಮ್ಮ ಜೀವನಾಧಾರ ಮತ್ತು ಬದುಕುಳಿಯುವಿಕೆಯನ್ನು ಖಾತರಿಪಡಿಸುವ ಕಾರ್ಯನೀತಿಗಳನ್ನು ಆಗ್ರಹಿಸುವುದು ಹಾಗೂ ಪಡೆಯುವುದು ಇತ್ಯಾದಿಗಳಲ್ಲಿ ಕೃಷಿಕರು ಕಂಡಿರುವ ಸೋಲು ಅವರಲ್ಲಿ ಇರುವ ರಾಜಕೀಯ ಸಂಘಟನೆಯ ಸಮಸ್ಯೆಯನ್ನು ಸೂಚಿಸುತ್ತದೆ. ಕರ್ನಾಟಕ ರಾಜ್ಯ ರೈತ ಸಂಘ, ಶೇಠ್ಕಾರಿ ಸಂಘಟನ್ ಅಥವಾ ಭಾರತೀಯ ಕಿಸಾನ್ ಯೂನಿಯನ್(ಗಿಲ್, 2004; ಮಡ್ಸೆನ್, 2001; ಸೂರಿ, 2006) ನಂತಹ ಜನಪ್ರಿಯ ಮತ್ತು ಪ್ರಚಾರ ತಂದುಕೊಡುವ ರೈತ ಚಳುವಳಿಗಳು ಕೂಡ ಇಂತಹ ಅಳಲುಗಳನ್ನು ನಿಭಾಯಿಸಲು, ಕೃಷಿ ಕಾರ್ಯನೀತಿಗಳಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮುಂದಿಡಲು ಮತ್ತು ಜಾರಿಗೊಳಿಸುವಂತೆ ಬಲವಂತಪಡಿಸಲು ಸಾಧ್ಯವಾಗಿಲ್ಲ. ಹೆಚ್ಚಿನ ಗ್ರಾಮೀಣ ಪ್ರದೇಶಗಳಲ್ಲಿ ಒಂದು ವೇಳೆ ಸಂಘಟನೆ ಇದ್ದರೂ ಅದು ಬಲಾಢ್ಯ ಜಾತಿ ಅಥವಾ ಶ್ರೀಮಂತ ರೈತರ ಸುತ್ತ ಗಿರಕಿ ಹೊಡೆಯುತ್ತಿರುತ್ತದೆ. ಅವರು ಕೃಷಿಕರಲ್ಲಿನ ಬಹುರೂಪತೆಯನ್ನು ಮಾನ್ಯ ಮಾಡುವುದಿಲ್ಲ. ಹಾಗಾಗಿ ಸಣ್ಣ ಮತ್ತು ಮಧ್ಯಮ ಕೃಷಿಕರ ಹಿತಾಸಕ್ತಿಯನ್ನು ಸಾಮಾನ್ಯವಾಗಿ ಪ್ರತಿನಿಧಿಸುವುದಿಲ್ಲ. ಇತ್ತೀಚೆಗೆ ‘ಭಾರತೀಯ ಕಮ್ಯುನಿಸ್ಟ್ ಪಾರ್ಟಿ’ಯ(ಮಾಕ್ರ್ಸಿಸ್ಟ್) ಜತೆ ಸಂಬಂಧ ಇರುವ ‘ಅಖಿಲ ಭಾರತ ಕಿಸಾನ್ ಸಭಾ’ ಈ ಸಂಕಷ್ಟವನ್ನು ಬಗೆ ಹರಿಸಲು ರ್ಯಾಲಿಗಳ ನೇತೃತ್ವ ವಹಿಸಿದೆ. ಇಂತಹ ಪಕ್ಷಗಳು ಗ್ರಾಮಾಂತರ ಪ್ರದೇಶಗಳಲ್ಲಿ ಇರುವುದು ಕಡಿಮೆ. ಬ್ರಾಸ್(1995) ಸ್ಪಷ್ಟವಾಗಿ ಗುರುತಿಸಿರುವ ಮತ್ತು ವಿಮರ್ಶಿಸಿರುವ ಹಾಗೆ, ಕೃಷಿಕರ ದುಸ್ಥಿತಿಯನ್ನು ನಿಭಾಯಿಸಬೇಕಾದ ಅಥವಾ ಪರಿಗಣಿಸಬೇಕಾದ ಎಡ ರಾಜಕೀಯ ಪಕ್ಷಗಳು ಕೃಷಿಕರಲ್ಲಿರುವ ವಿಘಟಿತ ಮತ್ತು ಪ್ರಶ್ನಾರ್ಹ ವರ್ಗ ಅಸ್ಮಿತೆಗೆ ಅವರನ್ನೇ ಟೀಕಿಸುತ್ತಾ, ಕಡೆಗಣಿಸುವುದು ಮತ್ತು ಆ ಮೂಲಕ ಪ್ರಧಾನ ರಾಜಕೀಯ ಪಾತ್ರಧಾರಿಗಳೆಂದು ಅವರನ್ನು ಪರಿಗಣಿಸದಿರುವುದು ಇವೆಲ್ಲ ಮುಂದುವರಿದೇ ಇದೆ.

ಇಂತಹ ನಿರ್ಲಕ್ಷ್ಯದ ಫಲಿತಾಂಶವೇ ಜೀವನೋಪಾಯವಾಗಿ ಮತ್ತು ಒಂದು ಜೀವನ ವಿಧಾನವಾಗಿ ಕೃಷಿಯನ್ನು ಅವಲಂಬಿಸಬಹುದು ಎನ್ನುವ ಬಗ್ಗೆ ವ್ಯಾಪಕವಾದ ಭ್ರಮನಿರಸನವನ್ನು ಉಂಟುಮಾಡಿದೆ. ಕೃಷಿಕರು ಮತ್ತು ಭೂಮಿ ಹಾಗೂ ಒಂದು ಜೀವನ ವಿಧಾನವಾಗಿ ಹಳ್ಳಿಯ ನಡುವಣ ನಿಕಟ ಸಂಬಂಧದ ಇತ್ತೀಚಿನ ಅಭಿವ್ಯಕ್ತಿಗಳಿಗೆ ಭಿನ್ನವಾಗಿ, ಅನೇಕ ಗ್ರಾಮಾಂತರವಾಸಿಗಳು ಕೃಷಿಯಿಂದ ಬಹುದೂರದ ಪರ್ಯಾಯ ಜೀವನೋಪಾಯಗಳನ್ನು ಅರಸುತ್ತಾರೆ(ಗುಪ್ತಾ, 2004).ಕೃಷಿಯಿಂದ ಹೊರಗುಳಿಯುವುದು ಮತ್ತು ಜಾತಿ ಆಧಾರಿತ ವೃತ್ತಿ ಇತ್ಯಾದಿಗಳ ಅಗತ್ಯವು ಬಹುವಾಗಿ ಲಾಭದಾಯಕವಲ್ಲದ ಕೃಷಿ ನೆಲೆಗಳು, ಅದು ತರುತ್ತದೆಂದು ಕಾಣುವ ತೀವ್ರ ವಿಫಲತೆ ಹಾಗೂ ಹತಾಶೆಯ ಭಾವನೆ ಈ ಎರಡೂ ಅಂಶಗಳೊಂದಿಗೆ ಸಂಬಂಧವನ್ನು ಹೊಂದಿದೆ. ಇತರರನ್ನು ಅನುಸರಿಸುವ ಮೂಲಕ ಅಥವಾ ತಮ್ಮ ಭ್ರಮನಿರಸನ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸುವಲ್ಲಿ ಆತ್ಮಹತ್ಯೆಗಳು ಕೃಷಿಯ ಬಗೆಗಿನ ಭ್ರಮನಿರಸನವನ್ನು ತಿಳಿಸುತ್ತವೆ.

ಆತ್ಮಹತ್ಯೆಗಳ ಸಾರ್ಥಕತೆ
ರೈತರ ಆತ್ಮಹತ್ಯೆಗಳು, ಕೃಷಿಯ ಆರ್ಥಿಕ ಹಾಗೂ ಸಾಮಾಜಿಕ ಜಗತ್ತಿನಲ್ಲಿನ ಬದಲಾವಣೆಗಳಿಗೆ ಒಂದು ಪ್ರತಿಕ್ರಿಯೆ ಮಾತ್ರ ಅಲ್ಲ. ಬದಲಿಗೆ ತೀವ್ರ ಅನ್ಯಾಯದಿಂದ ಕೂಡಿರುವ ಮತ್ತು ಅಂಚಿಗೆ ಸರಿಸಲ್ಪಟ್ಟ ಮಂದಿ ಎದುರಿಸುವ ಬಹುವಿಧ ಗಂಡಾಂತರಗಳಿಂದ ಈಗ ಮುಪ್ಪುರಿಗೊಂಡಿರುವ ಕೃಷಿಯ ಪಟ್ಟಭದ್ರ ಸಂರಚನೆಯೇ ಈ ದುರಂತದ ಸಂಕೀರ್ಣ ಸ್ಥಿತಿಗೆ ಕಾರಣ. ಜಾತಿ ವ್ಯವಸ್ಥೆಯೊಳಗಡೆ ಹುದುಗಿ ಕೊಂಡಿರುವ ಮತ್ತು ಅದರ ಸಾಮಾಜಿಕ ಪುನರುತ್ಪತ್ತಿಯ ಪ್ರಧಾನ ಮೂಲವಾಗಿರುವ ಕೃಷಿಯು ತನ್ನೊಂದಿಗೆ, ಪಾತ್ರಧಾರಿಗಳ ವೈಯಕ್ತೀಕರಣ, ಹೊಸ ತಂತ್ರಜ್ಞಾನಗಳ ಅಳವಡಿಕೆ, ವ್ಯಾಪಾರೀಕರಣ ಮತ್ತು ಪರಿಚಿತವಲ್ಲದ ಜ್ಞಾನವನ್ನು ತಂದುಕೊಳ್ಳುತ್ತಾ ಇದೀಗ ಆರ್ಥಿಕ ಆಧುನಿಕತೆಯ ತಾಣವಾಗಿದೆ. ವ್ಯವಸ್ಥೆಯಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮೂಲೆಗುಂಪಾಗಿರು ವವರನ್ನು ಈ ಹೊಸ ಕೃಷಿಯ ಆಧುನಿಕತೆಯ ಆಟಗಳು ಹೊಸ ಅಪಾಯಗಳಿಗೆ ಒಡ್ಡುತ್ತವೆ. ಆದರೆ ವೈಯಕ್ತೀಕರಣಗೊಂಡ ಆರ್ಥಿಕ ಪಾತ್ರಧಾರಿಯು ತನ್ನ ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಯ್ಗೆಯೊಳಗಡೆ ಹುದುಗಿಕೊಂಡಿರುತ್ತಾನೆ/ಳೆ. ಹಾಗಾಗಿ ಸಮಾಜದ ಗೌರವದ ಕಟ್ಟುಪಾಡುಗಳು ಮತ್ತು ಮೌಲ್ಯಗಳು, ಲಜ್ಜೆ ಮತ್ತು ಹೊಣೆಗಾರಿಕೆ ಗಳು ಆತನನ್ನು/ಆಕೆಯನ್ನು ಸುತ್ತುವರಿದಿರುತ್ತವೆ. ಇದರ ಫಲವಾಗಿ ಎರಡು ವಿಭಿನ್ನ ಮಾದರಿಯ ಸಾಂಸ್ಕೃತಿಕ ತರ್ಕಗಳು ಕೆಲಸ ಮಾಡುತ್ತಿರುತ್ತವೆ. ಒಂದು ಸ್ವಂತದ ಆರ್ಥಿಕ ಪ್ರಯೋಜನಕ್ಕೆ ವೈಯಕ್ತಿಕ ನೆಲೆಯಲ್ಲಿ ಕಾರ್ಯಾಚರಿಸುವ ಭಾಗ್ಯವನ್ನು ಒದಗಿಸಿಕೊಡುವ ಹೊಸ ಆರ್ಥಿಕ ವ್ಯವಸ್ಥೆ. ಎರಡನೆಯದು ತನ್ನ ಆದೇಶಗಳಿಗೆ ಹಾಗೂ ಆದ್ಯತೆಗಳಿಗೆ ವಿಧೇಯವಾಗಿ ನಡೆದು ಕೊಳ್ಳುವಂತೆ ಅವರನ್ನು ಬಲವಂತ ಪಡಿಸುವ ಸಾಮಾಜಿಕ ಜಗತ್ತಿನ ಸಾಂಸ್ಕೃತಿಕ ಒತ್ತಡ.

ಜಾನ್ ಬರ್ಗರ್ ತನ್ನ ಉತ್ಕøಷ್ಟ ಕೃತಿ ‘ಪಿಗ್ ಅರ್ತ್’ನ ಮೂಲ ಪ್ರಸ್ತಾವನೆಯಲ್ಲಿ ಜಗತ್ತಿನ ರೈತಾಪಿ ಜನಗಳ ವಿನಾಶವನ್ನು ತೀವ್ರವಾಗಿ ವಿಮರ್ಶೆಗೊಳಪಡಿಸುತ್ತಾನೆ. ಹೇಗೆ ‘ಆತನ(ರೈತನ) ಜೀವನ ಪರಿಸ್ಥಿತಿ, ಆತನ ಶೋಷಣೆಯ ಪ್ರಮಾಣ, ಆತನ ಕೊರಗು ಇತ್ಯಾದಿಗಳು ಹತಾಶೆಯಿಂದ ಕೂಡಿರಬಹುದು, ಆದರೆ ತಿಳಿದುಕೊಂಡಿರುವ ಎಲ್ಲದಕ್ಕೂ ಅರ್ಥ ಕೊಡುವ, ಅಂದರೆ ಬದುಕುಳಿಯುವಲ್ಲಿನ ತನ್ನ ಇಚ್ಛಾಶಕ್ತಿಯು ಕಣ್ಮರೆಯಾಗುವುದನ್ನು ಆತ ಯೋಚಿಸಲಾರ(1979/ 1992)’ ಎಂಬುದನ್ನು ಎತ್ತಿ ತೋರಿಸುತ್ತಾನೆ. ಹೆಚ್ಚಿನ ಭಾರತೀಯ ಕೃಷಿಕರು ಸದ್ಯ ಎದುರಿಸುತ್ತಿರುವ ಬಿಕ್ಕಟ್ಟು ಖಚಿತವಾಗಿ ಇದುವೇ ಎಂದು ಕಾಣುತ್ತದೆ. ಅಂದರೆ ಅವರು ತಿಳಿದುಕೊಂಡಿರುವ ‘ಎಲ್ಲದಕ್ಕೂ ಯಾವುದು ಅರ್ಥ ಕೊಡುವುದೋ ಅದು ಕಣ್ಮರೆಯಾಗುತ್ತಿರುವುದು’. ಸದ್ಯದ ಸಂಕಟ ಆಳವಾದ ಅರಾಜಕತೆಗಳಲ್ಲೊಂದು. ಹೆಚ್ಚಿನ ಸಂತ್ರಸ್ತರು ಕೀಟನಾಶಕ ಸೇವಿಸಿ ಬದುಕು ಅಂತ್ಯಗೊಳಿಸಿಕೊಳ್ಳುವ ದಾರಿ ಹಿಡಿಯುತ್ತಿರುವುದು ಸಂಕಷ್ಟ ಪರಿಸ್ಥಿತಿಯ ಪ್ರಧಾನ ಮೂಲಗಳನ್ನು ಸಂಕೇತಿಸುತ್ತದೆ. ಅದುವೇ ಸ್ವತಃ ಕೃಷಿ ಮತ್ತು ಅದರ ಹೊಸ ಒಳಸುರಿಗಳು. ಇವುಗಳೊಂದಿಗೆ ತೊಡಗಿರುವುದೇ ಅವರ ವಿನಾಶಕ್ಕೂ ದಾರಿ ಯಾಗಿದೆ. ಸಂಪಾದಿಸುವ ಏಕೈಕ ಸದಸ್ಯನನ್ನು ಆತ್ಮಹತ್ಯೆಯಲ್ಲಿ ಕಳೆದುಕೊಂಡ ಕುಟುಂಬದ ಮಹಿಳೆಯೊಬ್ಬರು ನನಗೆ ಹೇಳಿದ್ದು ಹೀಗೆ-‘ಕೃಷಿ ನಮ್ಮ ಕತ್ತಿನ ಸುತ್ತಲಿನ ಉರುಳು’.

ವಿಸ್ತೃತವಾಗಿ ತಮ್ಮ ಕುಟುಂಬಗಳ ಅನಾಮಿಕತೆಯೊಳಗಡೆ ನಡೆಸುವ ವ್ಯಕ್ತಿಗತ ಕೃತ್ಯದಿಂದ ಹಿಡಿದು, ನೆರವು ಹಾಗೂ ಸೂಕ್ತ ಬೆಲೆಗಳನ್ನು ಬೇಡುತ್ತಾ ಸರಕಾರದ ಹೆಸರಿಗೆ ಬರೆದ ಆತ್ಮಹತ್ಯಾ ಪತ್ರದ ಚಾಲ್ತಿಯ ಪ್ರವೃತ್ತಿಯವರೆಗೆ, ಆತ್ಮಹತ್ಯೆಗಳ ಸ್ವರೂಪದಲ್ಲಿ ಉಂಟಾದ ಪಲ್ಲಟವು, ಸದರಿ ಪ್ರವೃತ್ತಿಯಲ್ಲಿನ ಹೊಸ ತಿರುವನ್ನು ಸೂಚಿಸುತ್ತದೆ. ರಾಜಕೀಯ ದನಿಯಲ್ಲಿ ಮಾತನಾಡುವ ಅಂತಿಮ ಹೆಜ್ಜೆಯಾಗಿ ಹತಾಶ ವ್ಯಕ್ತಿಯು ಆತ್ಮಹತ್ಯೆಯ ಮೊರೆಹೋಗುವಂತೆ ಮಾಡಿದೆ ಈ ಪ್ರವೃತ್ತಿ. ರೈತರ ಆತ್ಮಹತ್ಯೆಗಳು ಸಾಂಕ್ರಾಮಿಕ ಸ್ವರೂಪವನ್ನು ಪಡೆದುಕೊಳ್ಳುವ ಮೂಲಕ ಅತಿಸಣ್ಣ ಮತ್ತು ಉಪೇಕ್ಷಿತ ಕೃಷಿಕರಲ್ಲಿ ಇರುವ ತೀವ್ರ ಸಂಕಷ್ಟವನ್ನು ತೊರಿಸುತ್ತದೆ. ಇಂತಹ ಪ್ರವೃತ್ತಿಗಳು ಮುಂದುವರಿಯುತ್ತಾ ಹೋದರೆ ಭವಿಷ್ಯದಲ್ಲಿ ಭಾರತವು ಕೃಷಿಯೋತ್ತರ ರಾಷ್ಟ್ರವಾಗಲು ಒತ್ತಡ ಹೆಚ್ಚಾಗುತ್ತದೆ. ಇದನ್ನು ಅನಿವಾರ್ಯ ‘ಮಹಾ ಪರಿವರ್ತನೆ’ ಎಂದು ನೋಡಿದ್ದರೆ, ಪ್ರಾಯಶಃ ಎರಿಕ್ ಹಾಬ್ಸ್‍ಬಾಮ್(1994) ವಿವರಿಸಿರುವ ಹಾಗೆ ರೈತರ ನಿರ್ಗಮನ 20ನೇ ಶತಮಾನದ ಅತ್ಯಂತ ನಿರ್ಣಾಯಕ ಬದಲಾವಣೆ ಆದಹಾಗೆ ಭಾರತದಲ್ಲಿ ವಿವಿಧ ರೀತಿಯ ಕೃಷಿಯ ಸಾವು 21ನೇ ಶತಮಾನದಲ್ಲಿ ನಡೆಯುತ್ತಿದೆ ವಿಸ್ತೃತ ಗ್ರಾಮೀಣ ಜನರು ಅಂಚಿಗೆ ಸರಿಸಲ್ಪಟ್ಟು, ಲೆಕ್ಕಕ್ಕೇ ಇಲ್ಲದಂತಾಗಿ, ಸುಸ್ಥಿರವಲ್ಲದ ಕೃಷಿಯಲ್ಲಿ ಜಮೀನಿನ ಮಹತ್ತ್ವದ ಸಂಕೇತಗಳನ್ನು ಮತ್ತು ಅದರ ಅರ್ಥಗಳನ್ನು ಕಳೆದುಕೊಂಡು ಅನೇಕ ಪಲ್ಲಟಗಳನ್ನು ಅನುಭವಿಸುತ್ತಿದ್ದಾರೆ. ಈ ಪ್ರಕ್ರಿಯೆಯು ಪ್ರಾಯಶಃ, ಗ್ರಾಮೀಣ ಜನರನ್ನು ನಗರದ ಕಡೆಗೆ ಪಥಸಂಚಲನೆ ಮಾಡುವಂತೆ ಒತ್ತಾಹಿಸುತ್ತದೆ. ಇದರಲ್ಲಿ ರಾಷ್ಟ್ರದ ಬಹುತೇಕ ಗ್ರಾಮೀಣ ಜನರು ಯಾವುದೇ ಪ್ರತಿಫಲವಿಲ್ಲದೇ ಮತ್ತು ಯಾವುದೇ ಗುರುತು ಇಲ್ಲದಂತಾಗುತ್ತಾರೆ.

ಟಿಪ್ಪಣಿಗಳು
1. ಈ ಪ್ರಬಂಧವನ್ನು ಮೂಲತಃ ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ(2005ರ ಫೆsಬ್ರವರಿ 24ರಿಂದ 26) ಹೈದ್ರಾಬಾದ್‍ನ ‘ಆರ್ಥಿಕ ಮತ್ತು ಸಾಮಾಜಿಕ ಅಧ್ಯಯನಗಳ ಕೇಂದ್ರ’ದ ‘ಗವರ್ನೆನ್ಸ್ ಆಂಡ್ ಪಾಲಿಸಿ ಸ್ಪೇಸಸ್ ಪ್ರೊಜೆಕ್ಟ್’ ಸಂಯೋಜಿಸಿದ ‘ಭಾರತದಲ್ಲಿ ಕೃಷಿ ಸಂಕಷ್ಟ ಮತ್ತು ರೈತರ ಆತ್ಮಹತ್ಯೆ’ ಎಂಬ ವಿಚಾರ ಸಂಕಿರಣಕ್ಕಾಗಿ ಬರೆಯಲಾಗಿದೆ. ಸದರಿ ಸಮಾವೇಶವನ್ನು ಏರ್ಪಡಿಸಿದ್ದಕ್ಕೆ ಮತ್ತು ಈ ಪ್ರಬಂಧವನ್ನು ರಚಿಸುವಲ್ಲಿ ತುಂಬಾ ವಿಳಂಬವಾದುದನ್ನು ಸಹಿಸಿಕೊಂಡದ್ದಕ್ಕೆ ಪ್ರೊ. ಕೆ.ಸೂರಿ ಮತ್ತು ಪ್ರೊ. ಕೆ.ಶ್ರೀನಿವಾಸಲು ಇವರಿಗೆ ಧನ್ಯವಾದಗಳು. ನಾನು ಎರಡು ವರ್ಷಗಳ ಕಾಲ ಆತ್ಮಹತ್ಯೆಗೆ ಸಂಬಂಧಿಸಿದ ಎಲ್ಲಾ ವರದಿ ಮತ್ತು ಚರ್ಚೆಗಳನ್ನು ನಿಕಟವಾಗಿ ಅನುಸರಿಸಿ, ಸದರಿ ಪ್ರವೃತ್ತಿಯ ಇತ್ತೀಚಿನ ಮೇಲುನೋಟವನ್ನು ಒದಗಿಸುವ ಪ್ರಯತ್ನ ಮಾಡಿದ್ದೇನೆ. ಲೀ ಶೆಲೆಸಿಂಗರ್, ರೆಚಲ್ ಶರ್ಮಾನ್, ಕ್ಯಾರಲ್ ಉಪಾಧ್ಯಾಯ ಮತ್ತು ಪುಲಪುರೆ ಬಾಲಕೃಷ್ಣನ್ ಮೊದಲಾದವರು ವಿವರವಾದ ಟಿಪ್ಪಣಿಗಳನ್ನು ಮತ್ತು ಸಲಹೆಗಳನ್ನು ನೀಡಿದ್ದಾರೆ ಅದಕ್ಕಾಗಿ ಅವರೆಲ್ಲರಿಗೆ ನನ್ನ ಧನ್ಯವಾದಗಳು. ಪ್ರಗತಿಯಲ್ಲಿರುವ ಹಸ್ತಪ್ರತಿಯನ್ನು ಆಧಾರವಾಗಿರಿಸಿಕೊಂಡು ಈ ಪ್ರಬಂಧವನ್ನು ರಚಿಸಲಾಗಿದೆ.
ಮೈಸೂರಿನ ವರದಿಗಾಗಿ ‘ದ ಹಿಂದೂ’(ಆಗಸ್ಟ್ 18.2006) ಮತ್ತು ‘ವಿಜಯ ಟೈಮ್ಸ್’ (ಆಗಸ್ಟ್ 18.2006), ವಿದರ್ಭದ ವಿವರಗಳಿಗಾಗಿ ದ ಹಿಂದೂ (ಜನವರಿ 27.2007) ಪತ್ರಿಕೆಯಲ್ಲಿ ಪಿ. ಸಾಯಿನಾಥ್‍ರವರ ‘ಸ್ಟ್ರೈಕಿಂಗ್ ನೋಟ್ ಆಫ್ ಡಿಸ್ಸೆಂಟ್’ ನೋಡಿ.
2. ಅಂಕಿಸಂಖ್ಯಾ ದೃಷ್ಟಿಯಿಂದ ಸದರಿ ಆತ್ಮಹತ್ಯೆಗಳು ಎಷ್ಟರಮಟ್ಟಿಗೆ ಮಹತ್ತ್ವದ್ದು ಮತ್ತು ಎಷ್ಟರಮಟ್ಟಿಗೆ ‘ಸಾಮಾನ್ಯ’ ಅಲ್ಲ ಹಾಗೂ ಎಷ್ಟರಮಟ್ಟಿಗೆ ಇತರ ಅವಧಿಗಳಲ್ಲಿ ತೀವ್ರ ಹೆಚ್ಚಳವನ್ನು ಬಿಂಬಿಸುತ್ತದೆ ಎಂಬ ಪ್ರಶ್ನೆಯನ್ನು ಪದೇ ಪದೇ ಎತ್ತಲಾಗಿದೆ. ಈ ಆತ್ಮಹತ್ಯೆಗಳು ಸಂಭವಿಸಿದ ಹೆಚ್ಚಿನ ಪ್ರದೇಶಗಳ/ ರಾಜ್ಯಗಳ ದತ್ತಾಂಶವು, ಇವು ಸಂಭವಿಸಿದ ಪ್ರತೀ ಜಿಲ್ಲೆಗಳ ಕೃಷಿಕರ ಆತ್ಮಹತ್ಯೆಗಳ ಸರಾಸರಿ ಸಂಖ್ಯೆಗಿಂತ ಅಧಿಕವಿರುವುದನ್ನು ಸೂಚಿಸುತ್ತದೆ. 2007 ರ ‘ರಾಷ್ಟ್ರೀಯ ಅಪರಾಧ ದಾಖಲಾತಿಗಳ ಬ್ಯೂರೋ’ (ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೊ) ದತ್ತಾಂಶವು ಕೃಷಿಕರ ಆತ್ಮಹತ್ಯೆಯು ಸಾಮಾನ್ಯ ಸಂಖ್ಯೆಗಿಂತ ಅಧಿಕವಿರುವುದನ್ನು ಸೂಚಿಸುತ್ತದೆ; ಆದರೆ ಈ ದತ್ತಾಂಶದ ವಿಶ್ವಾಸಾರ್ಹತೆಯನ್ನು ಆಕ್ಷೇಪಿಸಲಾಗಿದೆ.
3. ಸದ್ಯದ ಆತ್ಮಹತ್ಯೆಗಳನ್ನು ಬರೇ ಒಂದು ‘ಬಿಕ್ಕಟ್ಟು’ ಎಂದು ಪರಿಗಣಿಸುವುದು ಸೂಕ್ತವಲ್ಲ ಎಂಬುದು ಕೆಲವು ವಿದ್ವಾಂಸರ ಅಭಿಮತ. ಭಾರತೀಯ ಕೃಷಿಯಲ್ಲಿ ಸಂಭವಿಸುತ್ತಿರುವ ವಿಸ್ತೃತ ರಾಚನಿಕ ಬದಲಾವಣೆಗಳಿಗೆ ಅದನ್ನು ಜೋಡಿಸಬೇಕು ಎಂದು ಅವರು ವಾದಿಸುತ್ತಾರೆ(ಜೋಧ್ಕಾ 2005 ನೋಡಿ). ಸದರಿ ಆತ್ಮಹತ್ಯೆಗಳನ್ನು ನಾನು ಸಂಕಷ್ಟಕ್ಕೆ ಜೋಡಿಸುತ್ತೇನೆ. ಯಾಕೆಂದರೆ ಅನೇಕ ಕೃಷಿಕರು ಮೀರಿ ನಿಲ್ಲಲಾಗದ ತೀವ್ರ ಸ್ವರೂಪದ ಕಷ್ಟಗಳನ್ನು ಅನುಭವಿಸುತ್ತಿರುವುದನ್ನು ಅದು ಬಿಂಬಿಸುತ್ತದೆ ಮತ್ತು ಕೃಷಿ ಜಗತ್ತಿನ ಸಾಮಾಜಿಕ ಪುನರುತ್ಪತ್ತಿಗೆ ಬೆದರಿಕೆ ಒಡ್ಡುತ್ತದೆ.
4. ಅಧಿಕೃತ ಅಥವಾ ಸರ್ಕಾರದಿಂದ ನೇಮಕವಾದ ಸಮಿತಿ ಆಧಾರಿತವಾದ ವರದಿಗಳು ಪಂಜಾಬ್(ಐ.ಡಿ.ಸಿ 1998), ಕರ್ನಾಟಕ(ಕರ್ನಾಟಕ ಸರ್ಕಾರ 2002), ಆಂಧ್ರ ಪ್ರದೇಶ(ರೈತರ ಕಲ್ಯಾಣ ಆಯೋಗ 2005), ಮತ್ತು ಮಹಾರಾಷ್ಟ್ರದ ಟಿಐಎಸ್‍ಎಸ್ (2005)ಗಳಲ್ಲಿ ಲಭ್ಯವಿರುತ್ತವೆ. ಉಳಿದವು ಸ್ವತಂತ್ರ ಕೃಷಿಕ ಗುಂಪುಗಳು ಸ್ಥಾಪಿಸಿದ ನಾನಾ ಆಯೋಗಗಳು ನಡೆಸಿದ ಅಧ್ಯಯನಗಳು(ಉದಾ: ಆಂಧ್ರಪ್ರದೇಶಕ್ಕೆ ಸಿಟಿಝನ್ಸ್ ರಿಪೋರ್ಟ್ 1998 ಮತ್ತು ಫಾರ್ಮರ್ಸ್ ಕಮಿಷನ್ ಆಫ್ ಎಕ್ಸ್‍ಪಟ್ರ್ಸ್ 2002) ಮತ್ತು ಸ್ವತಂತ್ರ ವಿದ್ವಾಂಸರು(ಉದಾ: ಮಿಶ್ರಾ 2006). ಆಂಧ್ರವನ್ನು ಗಮನದಲ್ಲಿರಿಸಿ ಕೊಂಡು ಸಮಗ್ರ ಅಧ್ಯಯನವೊಂದನ್ನು ಕ್ರಿಶ್ಚಿಯನ್ ಏಡ್(ಕ್ರಿಶ್ಚಿಯನ್ ಏಡ್ 2005) ನಡೆಸಿದೆ.
5. ನಾನು ಉಲ್ಲೇಖಿಸಿರುವ ಪ್ರಕಾರದ ‘ಕೃಷಿಕರು’(ಅಗ್ರಿಕಲ್ಚರಿಸ್ಟ್ಸ್) ಎಂದರೆ ಎಲ್ಲ ಸಾಗುವಳಿದಾರರು(ಕಲ್ಟಿವೇಟರ್); ಇಲ್ಲಿ ಅವರು ಎಷ್ಟು ಗಾತ್ರದ ಹಿಡುವಳಿ ಹೊಂದಿದ್ದಾರೆ ಅಥವಾ ಜಮೀನಿನೊಂದಿಗೆ ಅಥವಾ ಮಾರುಕಟ್ಟೆಯೊಂದಿಗೆ ಅವರ ಸಂಬಂಧ ಯಾವ ಥರದ್ದು ಎಂಬುದನ್ನು ಪರಿಗಣಿಸಿಲ್ಲ. ವಿಶೇಷವೆಂದರೆ ಕೃಷಿಯ ವಿಷಯಗಳನ್ನು ಕುರಿತ ಬರಹಗಳು ‘ರೈತರು’(ಪೆಸೆಂಟ್ಸ್) ಎಂದರೆ ಪ್ರಧಾನವಾಗಿ ಜೀವನ ನಿರ್ವಹಣೆಗಾಗಿ ಸಾಗುವಳಿ ಮಾಡುವವರು ಮತ್ತು ‘ವ್ಯವಸಾಯಗಾರರು’(ಫಾರ್ಮರ್ಸ್) ಎಂದರೆ ಮಾರುಕಟ್ಟೆಯೊಂದಿಗೆ ಸಂಪರ್ಕ ಹೊಂದಿರುವವರು ಹಾಗೂ ವಾಣಿಜ್ಯ ಉದ್ದೇಶದಿಂದ ಕೃಷಿ ಮಾಡುವವರು ಎಂದು ಉಲ್ಲೇಖಿಸುತ್ತದೆ. ಜೀವನ ನಿರ್ವಹಣೆಗಾಗಿ ಮತ್ತು ಅಥವಾ ಮಾರುಕಟ್ಟೆಗಾಗಿ ಉತ್ಪಾದನೆಯಲ್ಲಿ ತೊಡಗಿಕೊಂಡಿರುವವರು ಆಗಿರಬಹುದು ಮತ್ತು ಭೂಮಾಲೀಕರಾಗಿರಬಹುದು, ಗೇಣಿದಾರರಾಗಿರಬಹುದು ಅಥವಾ ಇವೆರಡೂ ಆಗಿರಬಹುದು ಈ ಎಲ್ಲ ಸಾಗುವಳಿದಾರರನ್ನು ಆವರಿಸುವುದು ಮತ್ತು ಪ್ರತಿನಿಧಿಸುವುದು ‘ಕೃಷಿಕರು’ ಎಂಬ ಪದಕ್ಕೆ ಆದ್ಯತೆ ನೀಡುವಲ್ಲಿನ ನನ್ನ ಉದ್ದೇಶವಾಗಿದೆ.
6. ವಸಾಹತುಪೂರ್ವ ಮತ್ತು ವಸಾಹತುಶಾಹಿ ಭಾರತದಲ್ಲಿ ಪದೇ ಪದೇ ಕೃಷಿ ಸಂಕಷ್ಟ ಸಂಭವಿಸಿದ ಚರಿತ್ರೆಯ ಹೊರತಾಗಿಯೂ 1998ರ ತರುವಾಯ ಸಂಭವಿಸಿದ ವ್ಯಾಪಕ ಆತ್ಮಹತ್ಯೆಗಳಿಗೆ ಹೋಲಿಸಬಹುದಾದ ರೀತಿಯ ದಾಖಲೆಗಳು ಲಭ್ಯವಿಲ್ಲ. ಹಾಗೆ ಸಿಗುವ ಏಕೈಕ ದಾಖಲೆಯೆಂದರೆ ಉತ್ತರ ಪ್ರದೇಶದ ಬುಂದೇಲ್‍ಖಂಡದ ಕೃಷಿ ಸಂಕಷ್ಟಕ್ಕೆ ಸಂಬಂಧಿಸಿದ ಆತ್ಮಹತ್ಯೆಗಳು. ಅವನ್ನು ಸದ್ಯ ಚಾಲ್ತಿಯಲ್ಲಿರುವ ಋಣಭಾರ ಮತ್ತು ಬೆಳೆ ನಷ್ಟದ ಬಿಕ್ಕಟ್ಟಿಗೆ ಜೋಡಿಸಲಾಗಿತ್ತು(ಸಿದ್ಧಿಕ್ 1973 ನೋಡಿ). ರಾಣಾ ಅವರ ಇತ್ತೀಚಿನ ಪ್ರಬಂಧ(2006) ಸೂಚಿಸುವ ಪ್ರಕಾರ ಉತ್ತರ ಭಾರತದಲ್ಲಿ 17 ನೇ ಮತ್ತು 18 ನೇ ಶತಮಾನಗಳಲ್ಲಿ ಉಂಟಾದ ಕೃಷಿ ಬಿಕ್ಕಟ್ಟಿನಿಂದಾಗಿ ಕೃಷಿಯನ್ನು ಕೈಬಿಡುವಂತಾಯಿತು. ಮಾತ್ರವಲ್ಲ ಗ್ರಾಮಕ್ಕೆ ಗ್ರಾಮವೇ ಗುಳೆ ಹೋಗುವಂತಾಯಿತು. ಆದರೆ ಕೃಷಿಕರು ಆತ್ಮಹತ್ಯೆಯ ಹಾದಿಹಿಡಿದ ಉಲ್ಲೇಖ ಅದರಲ್ಲಿಲ್ಲ.
7. ದೇಶದಲ್ಲಿ ಉತ್ತೇಜನ ಪಡೆದ ಹಸಿರುಕ್ರಾಂತಿಯ ಮೊರೆಹೋದುದೇ ಈ ಬಹುತೇಕ ಸಂಕಷ್ಟಗಳಿಗೆ ಕಾರಣ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ನನ್ನ ಕೃತಿಯಲ್ಲಿದೆ (ವಾಸವಿ 1999 ಎ).
8. 2003ರ ಸಮೀಕ್ಷೆಯ ದತ್ತಾಂಶಗಳು ಸೂಚಿಸುವ ಪ್ರಕಾರ, ಸರಾಸರಿ ಭೂ ಹಿಡುವಳಿಯ ಗಾತ್ರ 1.06 ಹೆಕ್ಟೇರ್ ಆಗಿದ್ದು, ಬಹುತೇಕರು ಅತಿಸಣ್ಣ ಸಾಗುವಳಿದಾರರಾಗಿದ್ದಾರೆ. ಪ್ರಸ್ತುತ ಸಣ್ಣ ಮತ್ತು ಅತಿಸಣ್ಣ ಸಾಗುವಳಿದಾರರು ಒಟ್ಟು ಗ್ರಾಮೀಣ ಜನಸಂಖ್ಯೆಯ ಶೇಕಡ 80ರಷ್ಟಿದ್ದು, ಶೇಕಡ 40ರಷ್ಟು ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ(ಭಲ್ಲಾ 2007).
9. ಪ್ರತಿಯೊಂದು ವರದಿಯೂ ವಿವಿಧ ಮಾನದಂಡಗಳನ್ನು ಬಳಸಿದೆ ಮತ್ತು ಸಾಮಾನ್ಯವಾಗಿ ಅಳತೆಯು ಎಕರೆಗಳಲ್ಲಿದೆ. ಎಕರೆಗಳನ್ನು ಹೆಕ್ಟೇರುಗಳಿಗೆ ಪರಿವರ್ತಿಸಿ(2.50 ಎಕರೆ=1 ಹೆಕ್ಟೇರ್) ಎಲ್ಲಾ ವರದಿಗಳಲ್ಲಿನ ಹಿಡುವಳಿ ನಮೂನೆಗಳನ್ನು ಏಕರೂಪಕ್ಕಿಳಿಸಿ ನಾನು ತುಲನಾತ್ಮಕ ಚಿತ್ರವನ್ನು ಒದಗಿಸಿದ್ದೇನೆ.
10. ‘ಹಿಂದುಳಿದ ವರ್ಗಗಳು’[Backward Classes) ಎಂದರೆ ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರದ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಅನಾನುಕೂಲತೆಗಳನ್ನು ಅನುಭವಿಸುವ ಜಾತಿಯ ಗುಂಪುಗಳ ಅಧಿಕೃತ ಗುರುತಿಸುವಿಕೆಯಾಗಿದೆ. ಇಂತಹ ಗುಂಪುಗಳನ್ನು ವಿವಿಧ ರಾಜ್ಯಗಳು ನೇಮಿಸಿದ ಆಯೋಗಗಳಿಂದ ಗುರುತಿಸಲಾಗುತ್ತದೆ. ಆದರೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಅನಾನುಕೂಲತೆಗಳನ್ನು ಮುಖ್ಯವಾಗಿ ಪರಿಗಣಿಸಲಾಗುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಹಿಂದುಳಿದ ವರ್ಗಗಳೆಂದು ಯಾವುವನ್ನು ಗುರುತಿಸಲಾಗಿದೆಯೋ ಅವು ಕೃಷಿಯಲ್ಲಿ ತೊಡಗಿರದ ಜಾತಿಯ ಗುಂಪುಗಳಿಗೆ ಸೇರಿವೆ. ಹೆಚ್ಚಾಗಿ ಅವರು ಹಿಂದಿನ ಕುರಿಗಾಹಿಗಳು ಮತ್ತು ನಾನಾ ಕರಕುಶಲ ಮತ್ತು ಸೇವಾ ಗುಂಪುಗಳಿಗೆ ಸೇರಿದವರು.
11. ‘ಇತರ ಹಿಂದುಳಿದ ವರ್ಗಗಳು’(ಒಬಿಸಿ) ಎಂದರೆ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಾಗಲಿ ಅಥವಾ ಹಿಂದುಳಿದ ವರ್ಗಗಳ ಪಟ್ಟಿಯಲ್ಲಾಗಲಿ ಗುರುತಿಸಿರದವನ್ನು ಸೇರಿಸಿಕೊಳ್ಳಲು, ಅನಾನುಕೂಲ ಜಾತಿ ಗುಂಪುಗಳ ಇನ್ನಷ್ಟು ಅಧಿಕೃತ ಗುರುತಿಸುವಿಕೆಯಾಗಿದೆ. ಗುರುತಿಸುವಿಕೆ ಮತ್ತು ಅಧಿಕೃತ ಮಾನ್ಯತೆಗಳು ವಿವಾದಾತ್ಮಕ ಸಂಗತಿಗಳಾಗಿದ್ದರೂ ಹೆಚ್ಚಿನ ಪ್ರಕರಣಗಳಲ್ಲಿ ಅಲೆಮಾರಿಗಳು, ವಿಶೇಷ ಸೇವಾ ಜಾತಿಯ ಗುಂಪು ಮತ್ತು ಬ್ರಿಟಿಷ್ ಆಡಳಿತವು ಒಂದೊಮ್ಮೆ ‘ದರೋಡೆಕೋರರು’ ಎಂದು ಪಟ್ಟಿ ಮಾಡಿದವರು ಮುಂತಾದ ಗುಂಪುಗಳು ಒಬಿಸಿ ಪಟ್ಟಿಯಲ್ಲಿ ಬರುತ್ತವೆ.
12. ದಿವಾಳಿಯಾಗುವಿಕೆಯ ಹೆಚ್ಚಳ ಮತ್ತು ಸಣ್ಣ ಹಾಗೂ ಮಧ್ಯಮ ಸಾಗುವಳಿದಾರರ ಸ್ಥಳಾಂತರಗಳನ್ನು ಅನೇಕ ಅಧ್ಯಯನಗಳು ತಿಳಿಸುತ್ತವೆ. ಇತ್ತೀಚಿನ ಕೆಲವು ಅಧ್ಯಯನಗಳಿಗಾಗಿ ರಾವ್(2001), ಪಟ್ನಾಯಕ್(2003, 2004) ನೋಡಿ.
13. ಋಣ ಮುಖ್ಯವಾಗಿ ಎರಡು ಕಾರಣಗಳಿಗಾಗಿ ಸಂಭವಿಸುತ್ತವೆ; ಪ್ರಧಾನವಾಗಿ ಕೃಷಿ ಉತ್ಪಾದನಾ ವೆಚ್ಚಕ್ಕೆ ನೆರವು ಮತ್ತು ಕೆಲವು ಪ್ರಕರಣಗಳಲ್ಲಿ ಸಾಮಾಜಿಕ ಉದ್ದೇಶಗಳು ಅಥವಾ ಕೆಲವು ವರದಿಗಳು ಗುರುತಿಸಿದಂತೆ ‘ಅನುತ್ಪಾದಕ’ ವೆಚ್ಚಗಳು ಇನ್ನೊಂದು ಕಾರಣ. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚಿನ ಸಾಲಗಳನ್ನು ಉತ್ಪಾದಕ ಉದ್ದೇಶಗಳಿಗಾಗಿ ತೆಗೆದುಕೊಳ್ಳಲಾಗಿದೆ. ಕರ್ನಾಟಕ ಮತ್ತು ಪಂಜಾಬಿನಲ್ಲಿ ಸಾಲಗಳು ಮದುವೆಯ ವೈಯಕ್ತಿಕ ಸಾಲ ಮತ್ತು ಗೃಹನಿರ್ಮಾಣ ಸಾಲಗಳನ್ನೊಳಗೊಂಡಂತೆ ಉತ್ಪಾದಕ ಮತ್ತು ಸಾಮಾಜಿಕ ಉದ್ದೇಶದ ಸಂಯುಕ್ತ ಸಾಲಗಳಾಗಿರುತ್ತವೆ(ವಾಸವಿ 2003, ಪರಿಣತರ ಸಮಿತಿ ವರದಿ 2002). ಪಂಜಾಬಿನ ಐ.ಡಿ.ಸಿ ವರದಿಯು ಅನುತ್ಪಾದಕ ಸಾಲಗಳನ್ನು ಮಹತ್ವದ್ದೆಂದು ಪರಿಗಣಿಸಿದೆ ಮತ್ತು ಅಂತಹ ಸಾಲ ಮತ್ತು ಕೊಳ್ಳುಬಾಕತನದ ನಡುವೆ ಸಂಬಂಧ ಕಲ್ಪಿಸುತ್ತದೆ. ವಿವಾಹ, ಮನೆ ಮತ್ತು ಗ್ರಾಹಕ ಸರಕುಗಳ ಸಾಲಗಳು ಋಣಭಾರ ಹೆಚ್ಚಾಗಲು ಕಾರಣವಾಗುತ್ತವೆ.
14. ಗ್ರಾಮಾಂತರ ಪ್ರದೇಶಗಳಲ್ಲಿ ¸ಅಲ್ಲಿ ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬ ಅಂಶದೊಂದಿಗೆ ಸಂಬಂಧ ಹೊಂದಿದೆ. ಗ್ರಾಮದ ನಿವಾಸಿಗಳಾಗಿರುವ ಆದರೆ ಕೃಷಿ, ವಿದ್ಯುತ್, ಶಿಕ್ಷಣ ಇತ್ಯಾದಿ ಇಲಾಖೆಗಳಲ್ಲಿ ಉದ್ಯೋಗಿಗಳಾಗಿರುವವರು ಹೊಂದಿರುವ ಆದಾಯದ ಮೂಲಗಳು ಮತ್ತು ಮಟ್ಟಗಳು ಖಾಯಂ ಆಗಿರುವುದು ಮಾತ್ರವಲ್ಲ, ಗ್ರಾಮೀಣ ಸರಾಸರಿ ಆದಾಯಕ್ಕೆ ತುಲನೆ ಮಾಡಿದರೆ ಅಧಿಕವೂ ಆಗಿದೆ. ಪಟ್ಟಣ ಪ್ರದೇಶಗಳಿಂದ ಬರುವ ಹಣವೂ ಸೇರಿದಂತೆ ಅಂತಹ ಆದಾಯವು ಗ್ರಾಮಾಂತರ ಪ್ರದೇಶಗಳಲ್ಲಿ ದುಬಾರಿ ಬಡ್ಡಿ ದರದ ಸಾಲದ ಹೊಸ ಮೂಲವಾಗಿದೆ.
15. ಭಾರತದಲ್ಲಿ ವಂಶವಾಹಿ ರೀತ್ಯಾ ಪರಿವರ್ತಿತ(ಜಿಎಂ) ಬೀಜಗಳನ್ನು ಪರಿಚಯಿಸಿದ್ದು ಮತ್ತು ಅದನ್ನು ಬಳಸಿದ್ದು ಮುಖ್ಯವಾಗಿ ಬಿ.ಟಿ. ಹತ್ತಿ ಮಾದರಿಯಲ್ಲಿ. ತೀರಾ ಇತ್ತೀಚೆಗಷ್ಟೇ ಜಿಎಂ ತರಕಾರಿ ಬೀಜಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ.
16. ಗ್ರಾಮಾಂತರದ ಕೃಷಿ ಸಂರಚನೆಗಳಲ್ಲಿ ಸಾಮಾಜಿಕ ರಾಚನಿಕ ಬದಲಾವಣೆಯನ್ನು ಬಿಟ್ಟು, ಸಾಂಸ್ಕೃತಿಕ ರಾಚನಿಕ ಬದಲಾವಣೆಗಳಿಗೆ ಒತ್ತು ನೀಡುವ ಮೂಲಕ, ನಾನು ಸಾಮಾಜಿಕ ರಾಚನಿಕ ನೆಲೆಯ ಪ್ರಮಾಣವು(ಜಾತಿ ಆಧಾರಿತವಾಗಿ ಸಂಪನ್ಮೂಲ ಕಾದಿರಿಸುವಿಕೆ ಆಧರಿಸಿ) ಹಿಂದೆ ಹೇಗಿತ್ತೋ ಹಾಗೆಯೇ ಇರುವುದನ್ನು ಎತ್ತಿತೋರಿಸಲು ಬಯಸುತ್ತೇನೆ.ಸಾಂಸ್ಕೃತಿಕ ಬದಲಾವಣೆಗಳು ಆಗಿರುವುದು ಪ್ರಧಾನವಾಗಿ ಕೃಷಿ ಪದ್ಧತಿಗಳ ಸ್ವರೂಪದ ಕ್ಷೇತ್ರದಲ್ಲಿ ಮತ್ತು ಕೃಷಿ ಚಟುವಟಿಕೆಗಳ ಅರ್ಥ ಮತ್ತು ಮಹತ್ತ್ವದಲ್ಲಿ.
17. ಸಮಾಜಶಾಸ್ತ್ರೀಯ ಮತ್ತು ಇತ್ತೀಚೆಗೆ ಆರ್ಥಿಕ ಬರಹಗಳು ಕೂಡ ಗ್ರಾಮೀಣ ಭಾರತದಲ್ಲಿ ಜಾತಿ ಮತ್ತು ವರ್ಗ ಸಂರಚನೆಗಳಿಗೆ ದಾರಿ ಮಾಡಿಕೊಡುವ ಕೃಷಿ ಸಂರಚನೆಗಳು ಇನ್ನೂ ಉಳಿದುಕೊಂಡಿವೆ ಎಂಬ ಅಂಶವನ್ನು ಒತ್ತಿ ಹೇಳಿವೆ. (ನೋಡಿ ಹ್ಯಾರಿಸ್-ವೈಟ್ 2004).
18. ಬೀದರ್‍ನಲ್ಲಿ ಕೃಷಿಕರ ಆತ್ಮಹತ್ಯೆಗಳನ್ನು(ನೋಡಿ ವಾಸವಿ 1999 ಬಿ) ಪರಿಶೀಲಿಸಿದ ನಂತರ 1999ರಲ್ಲಿ, ‘ಕೃಷಿಯ ವೈಯಕ್ತೀಕರಣ’ ಎಂಬ ಪದವನ್ನು ನಾನು ಮೊದಲ ಬಾರಿಗೆ ಬಳಸಿದೆ. ಅಲ್‍ರಿಕ್ ಬೆಕ್ ಮತ್ತು ಎಲಿಜಬೆತ್ ಬೆಕ್-ಜೆರ್ನ್‍ಶೀಂ ಬಳಸಿದ ‘ವೈಯಕ್ತೀಕರಣ’ ಪದದ ನಿರ್ದಿಷ್ಟ ಬಳಕೆ ನನಗೆ ಗೊತ್ತಿರಲಿಲ್ಲ ಮತ್ತು ಅದನ್ನು 2002ರಲ್ಲಿ ಬಳಸಲಾಯಿತು ಎಂಬುದನ್ನು ಈಗ ಗಮನಿಸಿದ್ದೇನೆ(ಮೊದಲು 2001ನೇ ಇಸವಿಯಲ್ಲಿ [ಜರ್ಮನ್‍ನಲ್ಲಿ] ಮತ್ತು 2002ರಲ್ಲಿ ಇಂಗ್ಲಿಷ್ ಆವೃತ್ತಿ ಯಲ್ಲಿ). ಅದೇ ಪುಸ್ತಕವೊಂದರ ಸಂದರ್ಶನದಲ್ಲಿ ‘ವೈಯಕ್ತೀಕರಣ’ವು ‘ಕೆಲಸದ ಪರಿವರ್ತನೆ; ಸಾರ್ವಜನಿಕ ಪ್ರಾಧಿಕಾರದ ಇಳಿಕೆ ಮತ್ತು ವೈಯಕ್ತಿಕ ಪ್ರತ್ಯೇಕೀಕರಣದ ಹೆಚ್ಚಳ; ವೈಯಕ್ತಿಕತೆ ಮತ್ತು ಸ್ವಾವಲಂಬನೆಗೆ ಒತ್ತು…’(ಪುಟ.202) ಎಂದು ಅದರ ಅರ್ಥವನ್ನು ಅಲ್ರಿಕ್ ಬೆಕ್ ಸ್ಪಷ್ಟಪಡಿಸುತ್ತಾನೆ. ಮುಂದುವರಿದು ‘ವೈಯಕ್ತೀಕರಣ’ ಎನ್ನುವುದು ‘ಸಾಮಾಜಿಕ ಸಂಸ್ಥೆಗಳ ಸಮಾಜಶಾಸ್ತ್ರೀಯ ಪರಿವರ್ತನೆ ಮತ್ತು ಸಮಾಜದೊಂದಿಗೆ ವ್ಯಕ್ತಿಯ ಸಂಬಂಧ’ವನ್ನು ಆವರಿಸುತ್ತದೆ ಎನ್ನುತ್ತಾನೆ. ಈ ಹೆಚ್ಚಿನವು ಪಶ್ಚಿಮ ಮತ್ತು ಅದರ ದ್ವಿತೀಯ ಆಧುನಿಕತೆಗೆ ಸಂಬಂಧಿಸಿದಂತೆ ಇದ್ದರೂ ಕೃಷಿಯ ವಾಣಿಜ್ಯೀಕರಣ ಮತ್ತು ಗ್ರಾಮೀಣ ಭಾರತದಲ್ಲಿ ನವ ಉದಾರವಾದಿ ಮಾರುಕಟ್ಟೆಯ ಪ್ರವೇಶದ ಸಂದರ್ಭದಲ್ಲಿ ಇದರ ಪ್ರಸ್ತುತತೆಯನ್ನು ನಾನು ಗುರುತಿಸುತ್ತೇನೆ.
19. ಪಂಪ್‍ಸೆಟ್ ಸಹಿತ ಕೊಳವೆ ಬಾವಿಗಳು ಇದೀಗ ಜಮೀನಿಗೆ ನೀರುಣಿಸುವ ಒಂದು ಪ್ರಧಾನ ವಿಧಾನವಾಗಿದೆ ಮತ್ತು ಅದಕ್ಕೆ ಗಣನೀಯ ಪ್ರಮಾಣದ ವೆಚ್ಚ ಮತ್ತು ಬಾಹ್ಯ ಪರಿಣತಿ ಬೇಕಾಗುತ್ತದೆ.
20. ಕರ್ನಾಟಕದ ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ 2004ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕ್ಷೇತ್ರಕಾರ್ಯ ನಡೆಸಿ 2004ರಲ್ಲಿ ಆತ್ಮಹತ್ಯೆ ಮಾಡಿಕೊಂಡ 17 ಕೃಷಿ ಕುಟುಂಬಗಳನ್ನು ಸಂದರ್ಶಿಸಲಾಗಿದೆ.
21. ಸ್ಟೋನ್(2007) ಗುರುತಿಸುವಂತೆ ಹೊಸ ವಾಣಿಜ್ಯ ಏಜನ್ಸಿಗಳೊಂದಿಗೆ ಕೃಷಿ ಮಾರುಕಟ್ಟೆಯ ಪ್ರವಾಹ ಹಾಗೂ ಹೊಸ ಖರೀದಿದಾರರು ಮತ್ತು ಪಾತ್ರಧಾರಿಗಳ ತೀವ್ರ ಸ್ಪರ್ಧೆಯು ಕೃಷಿಕರ ನಡುವೆ ತೀವ್ರ ಪೈಪೋಟಿಗೆ ದಾರಿ ಮಾಡಿಕೊಟ್ಟಿದೆ; ಸಾಮಾಜಿಕ ಹಾಗೂ ಸಾಂಕೇತಿಕ ನಿರ್ವಹಣೆ ಮತ್ತು ಇವೆಲ್ಲದರ ಮಿಶ್ರಣವು ಸವಕಳಿಗೆ ಕಾರಣವಾಗಿದೆ(ಹಿಂದಿನ ಅಧ್ಯಯನಗಳಲ್ಲಿ ಅವುಗಳನ್ನು ವಿವರಿಸಲಾಗಿದೆ; ನೋಡಿ ವಾಸವಿ 1999, ಗುಪ್ತಾ 1999).
22. ‘ಸಂಸ್ಕೃತೀಕರಣ’ವೆಂದರೆ ಕೆಳ ಜಾತಿಯವರು ಮೇಲ್ಜಾತಿಯವರ ಪದ್ಧತಿ ಮತ್ತು ಆಚರಣೆಗಳನ್ನು ಅನುಕರಿಸುವ ಪ್ರಕ್ರಿಯೆ. ಈ ಪದವನ್ನು ಟಂಕಿಸಿದ್ದು ಎಂ.ಎನ್. ಶ್ರೀನಿವಾಸ. ಇದೀಗ ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಯ ಅಧ್ಯಯನಗಳ ಸಾಹಿತ್ಯಗಳಲ್ಲಿ ವ್ಯಾಪಕವಾಗಿ ಈ ಪದವನ್ನು ಬಳಸಲಾಗುತ್ತಿದೆ.
23. ರಾಚನಿಕ ಹೊಂದಾಣಿಕೆಯ ಘಟ್ಟವು 1991ರಲ್ಲಿ ಆರಂಭವಾಗಿದ್ದರೂ ಕೃಷಿ ಸಬ್ಸಿಡಿಗಳ ಮೇಲಣ ವೆಚ್ಚವನ್ನು ಕಡಿಮೆಗೊಳಿಸುವ ಉದ್ದೇಶದ ತರುವಾಯದ ಆರ್ಥಿಕ ಉದಾರೀಕರಣವನ್ನು 1997ರ ಬಳಿಕ ತೀವ್ರವಾಗಿ ಅನುಷ್ಠಾನಗೊಳಿಸಲಾಯಿತು ಮತ್ತು ಪ್ರಸ್ತುತ ಬಿಕ್ಕಟ್ಟು 1998ರ ತರುವಾಯ ಯಾಕೆ ಶುರುವಾಯಿತು ಎನ್ನುವುದರಲ್ಲಿ ಇದರ ಪಾತ್ರವೇ ದೊಡ್ಡದು.
24. ತೀರಾ ಇತ್ತೀಚೆಗಷ್ಟೇ(2008) ಮತ್ತು 2009ರ ಲೋಕಸಭೆ ಚುನಾವಣೆಯ ತಯಾರಿ ಸಂದರ್ಭದಲ್ಲಿ ಕೃಷಿಕರ ಸಾಲ ಮರುಪಾವತಿ ಮುಂದೂಡುವಂತಹ ದೊಡ್ಡ ಮಟ್ಟದ ಪ್ಯಾಕೇಜನ್ನು ಕೇಂದ್ರ ಸರ್ಕಾರ ಚಾಲನೆಗೊಳಿಸಿದೆ.
25. ಪಶ್ಚಿಮ ಬಂಗಾಳದ ಎಡಪಕ್ಷ ಸರ್ಕಾರವು ನಂದಿ ಗ್ರಾಮ ಮತ್ತು ಸಿಂಗೂರ್‍ಗಳಲ್ಲಿ ಟಾಟಾ ಉದ್ಯಮ ಸಮೂಹದ
ಕೈಗಾರಿಕೆಯೊಂದನ್ನು ಸ್ಥಾಪಿಸಲು ಉದ್ದೇಶಿಸಿತು. ಕೆಲವು ಗ್ರಾಮಸ್ಥರು ಅಧಿಕೃತ ಪರಿಹಾರ ಮೊತ್ತವನ್ನು ಪಡೆದುಕೊಳ್ಳಲು
ತಿರಸ್ಕರಿಸಿದರು ಕಾಲದ ಎರಡನೆ ಮೂಲವು-ಇದನ್ನು ಇತ್ತೀಚಿನ ಸಮೀಕ್ಷೆಗಳಲ್ಲಿ ಮತ್ತು ಅಧ್ಯಯನಗಳಲ್ಲಿ ದಾಖಲಿಸಿಲ್ಲ-
ಪಟ್ಟಣದ ಉದ್ಯೋಗಿಗಳು ಮತ್ತು ತಮ್ಮ ಬಲವಂತದ ಎತ್ತಂಗಡಿಯನ್ನು ಪ್ರತಿರೋಧಿಸಿದರು. ಸುದೀರ್ಘ ಚರ್ಚೆಗಳು ಮತ್ತು ಹಿಂಸಾಚಾರದ ಬಳಿಕ ಟಾಟಾ ಸಂಸ್ಥೆಯವರು ಸಿಂಗೂರಿನಿಂದ ಹಿಂದೆ ಸರಿದರೂ ಪ್ರಸ್ತುತ ವಿಷಯದ ಸುತ್ತಲಿನ ನಿರಂತರ ಹಿಂಸಾಚಾರ ಮತ್ತು ಚರ್ಚೆಗಳು ಕಮ್ಯುನಿಸ್ಟ್ ಸರಕಾರವೂ(ಮಾರ್ಕಿಸ್ಟ್) ಕೃಷಿಕರ ಹಕ್ಕುಗಳನ್ನು ಕಡೆಗಣಿಸಿ ದ್ದನ್ನು ಎತ್ತಿತೋರಿಸಿದೆ.
26. ಡೆಕ್ಕನ್ ಹೆರಾಲ್ಡ್, ಭಾನುವಾರ, ಮಾರ್ಚ್ 18. 2007.
27. ಈ ವಿವರಣೆಗಳು ರಾಶೆಲ್ ಶರ್ಮನ್ ಅವರದು. ಪ್ರಸ್ತುತ ಸಂವಾದ ಹಾಗೂ ಅತಿಸಣ್ಣ ಕೃಷಿಕರ ಮೇಲಣ ಪರಿಣಾಮದ ನಡುವೆ ಸಂಬಂಧವನ್ನು ಅವರು ಗುರುತಿಸಿದ್ದಾರೆ ಮತ್ತು ಅಂತಹ ಸಂಬಂಧವನ್ನು ಕಲ್ಪಿಸಿದ್ದಾರೆ.
28. ಪ್ರಭುತ್ವವು ವಿಶೇಷವಾಗಿ ಆರ್ಥಿಕ ಉದಾರೀಕರಣದ ತರುವಾಯ ಕೃಷಿ ವಿಷಯಗಳತ್ತ ನಿರ್ಲಕ್ಷ್ಯ ತಾಳಿರುವುದನ್ನು ಅನೇಕ ವಿದ್ವಾಂಸರು ಎತ್ತಿ ತೋರಿಸಿದ್ದಾರೆ(ನೋಡಿ: ಪಟ್ನಾಯಕ್ 2004, ಶರ್ಮಾ 2006, ಹ್ಯಾರಿಸ್ – ವೈಟ್ 2004).